close logo

ಮನುವಿನ ಮಾತೆಲ್ಲವೂ ಮನುಕುಲಕ್ಕೆ ಮದ್ದಂತೆ

“ಮನುರವದತ್ತದ್ಭೇಷಜಂ ।”

(ಮನುರ್-ಅವದತ್-ತತ್-ಭೇಷಜಂ- ಮನುವಿನ ಮಾತೆಲ್ಲವೂ ಮನುಕುಲಕ್ಕೆ ಮದ್ದಂತೆ, ಕೃಷ್ಣ ಯಜುರ್ವೇದ ತೈತ್ತಿರೀಯ ಸಂಹಿತೆ 2-2-10)

“ಮನು ಹೇಳಿದ ಮಾತೆಲ್ಲ ಮಾನವರಿಗೆ ಮದ್ದಂತೆ. ಅದು ಸಮಾಜಕ್ಕೆಂದೂ ಪೀಡೆಯಾಗುವುದಿಲ್ಲ.”

ಸಮಾಜದಲ್ಲಿ ಕೇಳಿಬರುವ ಎಲ್ಲಾ ಮಾತುಗಳನ್ನು ಸಂದರ್ಭ, ಔಚಿತ್ಯಗಳ ಹಿನ್ನೆಲೆಯಲ್ಲಿಯೇ ಅರ್ಥೈಸಿಕೊಳ್ಳಬೇಕು ಮತ್ತು ಪರಿಶೀಲಿಸಬೇಕು. ಇತ್ತೀಚಿಗೆ  ಮಾನವಧರ್ಮಶಾಸ್ತ್ರದ  (ಮನುಸ್ಮೃತಿಯ)  ಕೆಲವು ಆಯ್ದ ಭಾಗಗಳನ್ನು  ವಿವಾದಕ್ಕೆ ಎಳೆದು ಸುಸಂಸ್ಕೃತ ಸಮಾಜಕ್ಕೆ ರುಚಿಸದ ರೀತಿಯಲ್ಲಿ ವ್ಯಾಖ್ಯಾನಿಸಲಾಗಿದೆ.

ಪ್ರಸಕ್ತ  ಲೇಖನದ ಪ್ರಯತ್ನವೇನೆಂದರೆ  ಈ ವಿವಾದದಲ್ಲಿ  ಸಂಪೂರ್ಣವಾಗಿ ಮರೆಯಾಗಿರುವ  ಒಂದು ಮುಖ್ಯ ಅಂಶದ ಕಡೆಗೆ ಕಡೆಗೆ ಓದುಗರ ಗಮನ ಸೆಳೆಯುವುದು. ಅದೇನೆಂದರೆ ಮನುಸ್ಮೃತಿಯನ್ನು ರಚಿಸಿದ ಹಿನ್ನೆಲೆ ಮತ್ತು ಆ ಕಾಲದ ಸಂದರ್ಭ ಮತ್ತು ಔಚಿತ್ಯ. ಮನುವನ್ನು ಸಮರ್ಥಿಸಿಕೊಳ್ಳುವುದಾಗಲಿ ಅಥವಾ ಖಂಡಿಸುವುದಾಗಲಿ ಇದರ ಉದ್ದೇಶವಲ್ಲ. ಲೇಖನದ ಗುರಿಯೆಂದರೆ-

  • ಸಮಾಜದಲ್ಲಿ ಧರ್ಮಶಾಸ್ತ್ರಗಳ  ಸ್ಥಾನ
  • ಮನುಸ್ಮೃತಿಯನ್ನು ರಚಿಸಿದ ಕಾಲಘಟ್ಟದಲ್ಲಿನ (ಸುಮಾರು ಎರಡು ಸಾವಿರ ವರ್ಷಗಳ ಹಿಂದಿನ)  ಸಮಾಜದ ಸ್ಥಿತಿ-ಗತಿ
  • ಧರ್ಮಶಾಸ್ತ್ರಗಳಲ್ಲಿ ಸ್ತ್ರೀ-ಪುರುಷ ಪಾತ್ರಗಳ ಸಮಗ್ರ ಚಿತ್ರಣ
  • ವಿವಾದಕ್ಕೊಳಗಾದ ಮನುಸ್ಮೃತಿಯ ಸಾಲುಗಳ ಸಂದರ್ಭ ಮತ್ತು  ಔಚಿತ್ಯದ ವಿಶ್ಲೇಷಣೆ

ಮನುವಿನ ವ್ಯಾಖ್ಯಾನಕಾರರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಪೂರ್ವಭಾವಿ ಅಭಿಪ್ರಾಯಗಳೊಂದಿಗೆ  ಧಾರ್ಮಿಕ ಸಮಾಜದಲ್ಲಿನ  ವೈಯುಕ್ತಿಕ ಮತ್ತು ಸಾಮೂಹಿಕ ಹಕ್ಕುಗಳನ್ನು ವಿಶ್ಲೇಷಿಸಿದ್ದಾರೆ. ನಮ್ಮ ನೈತಿಕ ದೃಷ್ಟಿಕೋನ ಎಷ್ಟು ಮುಖ್ಯವೋ ಮನುಸ್ಮೃತಿಯ ಸರಿ-ತಪ್ಪುಗಳನ್ನು ಅದರ ಐತಿಹಾಸಿಕ ಹಿನ್ನೆಲೆಯಲ್ಲಿ ಅಂಗೀಕರಿಸುವುದು ಅಷ್ಟೇ ಮುಖ್ಯ ಎನ್ನುವುದು ನಮ್ಮ ವಾದ.

‘ವ್ಯಾಸ’ರಂತೆ ‘ಮನು’ ಯಾವುದೇ ಒಬ್ಬ ವ್ಯಕ್ತಿಯಲ್ಲ. ಪ್ರತಿ ಮನ್ವಂತರದಲ್ಲಿ ಒಬ್ಬ ವ್ಯಕ್ತಿಯು  ‘ವ್ಯಾಸ’  ಅಥವಾ ‘ಮನು’  ವಿನ ಸ್ಥಾನಕ್ಕೇರುತ್ತಾನೆ. ನಮ್ಮ ಗ್ರಂಥಗಳಲ್ಲಿ ಏಳು ಮನುಗಳ ಉಲ್ಲೇಖ ಕಂಡುಬರುತ್ತದೆ. ಸ್ವಯಂಭುವ, ಸ್ವಾರೋಚಿಷ, ಉತ್ತಮ, ತಾಮಸ, ರೈವತ, ಚಾಕ್ಷುಷ ಮತ್ತು ಸದ್ಯದ  ವೈವಸ್ವತ ಸೇರಿದಂತೆ ಏಳು ಮನುಗಳು ಪ್ರತಿ ಯುಗಾಂತರಗಳಲ್ಲಿ  ಇದ್ದರೆನ್ನುತ್ತಾರೆ.

ಸನಾತನ ಧರ್ಮದಲ್ಲಿ ಕೇವಲ ಮನುಸ್ಮೃತಿಯೊಂದೆ ಅಲ್ಲ  ಯಾಜ್ಞವಲ್ಕ್ಯ, ಅತ್ರಿ, ಪರಾಶರ ಇತ್ಯಾದಿ ಮತ್ತೂ ಹಲವಾರು ಸ್ಮೃತಿಗಳಿವೆ. ಹಿಂದಿನ ಕಾಲದ ರಾಜರುಗಳು ಸಮಾಜದ ಸಮಸ್ಯೆಗಳನ್ನು ಪರಿಹರಿಸಲು ವಿವಿಧ ಶಾಸ್ತ್ರಗಳಲ್ಲಿ ನುರಿತ ವಿದ್ವಾಂಸರನ್ನು  ಬರಮಾಡಿಕೊಂಡು ಧರ್ಮಪರಿಷತ್ತು ಗಳನ್ನು ಏರ್ಪಡಿಸುತ್ತಿದ್ದರು. ಧರ್ಮಪರಿಷತ್ತುಗಳ ಅಡಿಪಾಯವೇ ಧರ್ಮಶಾಸ್ತ್ರ.

ವಿದ್ವಾಂಸರು ಸಮಸ್ಯೆಗಳಿಗೆ  ತಕ್ಕಂತೆ ಧರ್ಮಶಾಸ್ತ್ರದಲ್ಲಿನ  ಸೂಕ್ತ ಸಂದರ್ಭಗಳನ್ನು ಹುಡುಕಿ  ಅದರ ಸಾರಾಂಶವನ್ನು ತಿಳಿಯುತ್ತಿದರು. ತದನಂತರ ಸಮಸ್ಯೆಯ ಸನ್ನಿವೇಶಕ್ಕೆ  ಸರಿಹೊಂದುವ ಪರಿಹಾರಗಳ ಮೌಲ್ಯಮಾಪನವನ್ನು ಇತಿಹಾಸ, ಪುರಾಣ  ಮತ್ತು ವೇದಸಂಗ್ರಹಗಳಿಂದ ನ್ಯಾಯ, ವೈಶೇಷಿಕ ಮತ್ತು ವ್ಯಾಕರಣಾದಿ ಉಪಕರಣಗಳ ಮೂಲಕ ಮಾಡುತ್ತಿದ್ದರು.

ಸ್ತ್ರೀಯರನ್ನು ಕುರಿತ ಮನುಸ್ಮೃತಿಯ ಈ  ಶ್ಲೋಕಗಳನ್ನು ನೋಡೋಣ-

न कन्यायाः पिता विद्वान् गृह्णीयात् शुल्कमण्वपि ।
गृह्णंशुल्कं हि लोभेन स्यान्नरोऽपत्यविक्रयी 3-51

(ನ ಕನ್ಯಾಯಾಃ ಪಿತಾ ವಿದ್ವಾನ್ ಗೃಹ್ಣೀಯಾತ್ ಶುಲ್ಕಮಣ್ವಪಿ ।
ಗೃಹ್ಣಮ್ಶುಲ್ಕಮ್ ಹಿ ಲೋಭೇನ ಸ್ಯಾನ್ನರೋऽಪತ್ಯವಿಕ್ರಯೀ ॥ 3-51 ॥ )

स्त्रीधनानि तु ये मोहादुपजीवन्ति बान्धवाः ।
नारीयानानि वस्त्रं वा ते पापा यान्त्यधोगतिम् ॥ 3-52  

(ಸ್ತ್ರೀಧನಾನಿ ತು ಯೇ ಮೋಹದುಪಜೀವಂತಿ ಬಾಂಧವಾಹ ।
ನಾರಿ ಯಾನಾನಿ ವಸ್ತ್ರಂ ವಾ ತೇ ಪಾಪಾ ಯಾಂತ್ಯದೋಗತೀಮ್ ॥ 3-52 ॥ )

ಮೇಲಿನ ಎರಡು ಶ್ಲೋಕಗಳಲ್ಲಿ (ಮನುಸ್ಮೃತಿ : 3-51,3-52) ವರದಕ್ಷಿಣೆಯ ಪದ್ಧತಿಯನ್ನು  ಅತ್ಯಂತ ಹೀನಾಯ ಶಬ್ದಗಳಲ್ಲಿ ಖಂಡಿಸಿ ಅದು ಹಣ ವಿನಿಮಯ ಮಾಡಿಕೊಳ್ಳುವಂತಹ  ಸರಕೇನಲ್ಲ ಎಂದು ಹೇಳಿದೆ.  ಒಂಭತ್ತನೇ ಅಧ್ಯಾಯದಲ್ಲಿ ಗಂಡಂದಿರು ಸ್ವಪತ್ನಿಯ ಅಂಗೀಕಾರವಿಲ್ಲದೆ ಪರಸ್ತ್ರೀಯರೊಡನೆ ಸಂಭೋಗ ಮಾಡಬಾರದು ಎಂದು ಹೇಳಲಾಗಿದೆ.

सुवासिनीः कुमारीश्च रोगिणो गर्भिणीः स्त्रियः ।
अतिथिभ्योऽग्र एवैतान् भोजयेदविचारयन् 3-114 ॥

(ಸುವಾಸಿನಿ:  ಕುಮಾರೀಶ್ಚ ರೋಗಿಣೋ ಗರ್ಭಿಣೀಹಿ ಸ್ರೀಯಃ 
ಅತಿಭ್ಯೋऽಗ್ರಯೇವ ಯೇವೈತಾನ್ ಭೋಜಯೇದವಿಚಾರಯನ್  ॥ 3-114 ॥ )

 

3-114 ರಲ್ಲಿ ಎಲ್ಲಾ ಕುಟುಂಬಗಳಲ್ಲಿ ಅತಿಥಿಯರಿಗೂ ಮೇಲಾಗಿ ಎಲ್ಲ ವಯಸ್ಸಿನ ಸ್ತ್ರೀಯರಿಗೆ ಅದರಲ್ಲೂ ಗರ್ಭಿಣಿಯರಿಗೆ ಮೊದಲು ಉಣಬಡಿಸಬೇಕು ಎಂದು ಹೇಳಲಾಗಿದೆ.

ಇನ್ನು ಮನುಸ್ಮೃತಿಯ ವ್ಯಾಖ್ಯಾನಕಾರರು ಮತ್ತು ವಿಮರ್ಶಕರು ವಿವಾದಕ್ಕೆ ಎಳೆದಿರುವ ಒಂಭತ್ತನೇ ಅಧ್ಯಾಯದ ಶ್ಲೋಕಗಳ ಕಡೆಗೆ ಗಮನ ಹರಿಸೋಣ. ಒಂಭತ್ತನೇ ಅಧ್ಯಾಯದ ವಿಷಯ ದಾಂಪತ್ಯಧರ್ಮ. ಧಾರ್ಮಿಕ ದೃಷ್ಟಿಕೋನದಲ್ಲಿ ದಾಂಪತ್ಯವೆಂದರೆ  ಮಾನವಸಹಜ  ಅಗತ್ಯಗಳಾದ – ಸಾಂಗತ್ಯ, ಸಂತಾನ ಮತ್ತು ಸಂಭೋಗಸುಖಗಳ ಪೂರೈಕೆಗಾಗೆಂದು ಮಾಡಿರುವ ಒಂದು ಸಾಮಾಜಿಕ ವ್ಯವಸ್ಥೆ. ಧರ್ಮಶಾಸ್ತ್ರದಲ್ಲಿ ಮಾಡಿರುವ ಸಮಾಜದ ಸ್ತ್ರೀ-ಪುರುಷರ ಪಾತ್ರಗಳ ಚಿತ್ರಣ,  ಇತ್ತೀಚಿನ ಸಮಾಜದ ಸ್ಥಿತಿಗೂ  ಅತ್ಯಂತ ಪ್ರಸ್ತುತವಾಗಿದೆ.

ಒಂಭತ್ತನೇ ಅಧ್ಯಾಯದ ಮೊದಲ ಒಂಭತ್ತು ಶ್ಲೋಕಗಳಲ್ಲಿ ಒಂದು ಕುಟುಂಬದಲ್ಲಿ ಹೆಣ್ಣಿನ ಸ್ಥಾನ  ಮತ್ತು ಧರ್ಮಸಂರಕ್ಷಣೆಯಲ್ಲಿ ಆಕೆಯ ರಚನಾತ್ಮಕ ಪಾತ್ರವನ್ನು ಬಿಡಿಸಿ ಹೇಳಲಾಗಿದೆ.

न कश्चिद् योषितः शक्तः प्रसह्य परिरक्षितुम् ।
एतैरुपाययोगैस्तु शक्यास्ताः परिरक्षितुम् ॥ 9-10  

ನ ಕಶ್ಚಿದ್ ಯೋಷಿತಃ ಶಕ್ತಹ್ ಪ್ರಸಹ್ಯಾ ಪರಿರಕ್ಷಿತುಂ ।
ಏತೈರೂಪಾಯಯೋಗೈಸ್ತು ಶಕ್ಯಾಸ್ತಾಃ  ಪರಿರಕ್ಷಿತುಂ ॥ 9-10

अर्थस्य सङ्ग्रहे चैनां व्यये चैव नियोजयेत् ।
शौचे धर्मेऽन्नपक्त्यां च पारिणाह्यस्य वेक्षणे ॥ 9-11

ಅರ್ಥಸ್ಯ ಸಂಗ್ರಹೇ ಚೈನಾಮ್ ವ್ಯಯೇ ಚೈವ ನಿಯೋಜಯೇತ್ ।
ಶೌಚೇ ಧರ್ಮೋsನ್ನಪಕ್ತ್ಯಾಮ್ ಚ ಪಾರಿಣಾಹ್ಯಾಸ್ಯ  ವೇಕ್ಷಣೇ ॥ 9-11

अरक्षिता गृहे रुद्धाः पुरुषैराप्तकारिभिः ।
आत्मानमात्मना यास्तु रक्षेयुस्ताः सुरक्षिताः ॥ 9-12॥ 

ಅರಕ್ಷಿತಾ ಗೃಹೇ ರುದ್ಧಾಹ್  ಪುರುಷಯ್ರಾಪ್ತ ಕರಿಭಿಹಿ ।
ಆತ್ಮಾನಮಾತ್ಮನಾ ಯಾಸ್ತು ರಕ್ಷೇಯುಸ್ತಾಹ  ಸುರಕ್ಷಿತಾಃ ॥ 9-12॥

  • ಶ್ಲೋಕ ೧೦ ಮತ್ತು ೧೧ ರಲ್ಲಿ ಪತ್ನಿಯನ್ನು ಸಬಲೀಕರಿಸುವ ಮತ್ತು ಆಕೆಗೆ  ಕುಟುಂಬದ ಒಡೆತನವನ್ನು ಒಪ್ಪಿಸುವ ರೀತಿಗಳನ್ನು ಉಲ್ಲೇಖಿಸಲಾಗಿದೆ. ಇದು ಅವಳ ಪ್ರೀತಿ ಮತ್ತು ನಿಷ್ಠೆಯನ್ನು ಬಲಗೂಡಿಸುವ ಸೂಕ್ತಮಾರ್ಗವೆಂದು ಹೇಳಲಾಗಿದೆ.
  • ಹನ್ನೆರಡನೆಯ ಶ್ಲೋಕದಲ್ಲಿ ಹೆಣ್ಣಿಗೆ ಕುಟುಂಬದ ಕರ್ತೃತ್ವವನ್ನು ನೇಮಿಸಿ ಬಾಂಧವ್ಯವನ್ನು ಕಾಪಾಡುವಂತೆ ಮಾಡಬೇಕು ಎಂದು ಸೂಚಿಸಲಾಗಿದೆ. ಕುಟುಂಬದ ಒಡೆತನವೇ ಬೇರೆಲ್ಲ ನಿರ್ಬಂಧಗಳಿಗಿಂತ ಕುಟುಂಬದ ಬಾಂಧವ್ಯವನ್ನು ಕಾಪಾಡುವುದರಲ್ಲಿ ಯಶಸ್ವಿಯಾಗುತ್ತದೆಂದು ಹೇಳಲಾಗಿದೆ.

ಹೀಗಾಗಿ ಶ್ಲೋಕ 10,11 ಮತ್ತು  12 ರಲ್ಲಿ ನಾವು ಮನುಸ್ಮೃತಿಯ  ಆದರ್ಶ ದಾಂಪತ್ಯಸಾರವನ್ನು ಅರಿತುಕೊಳ್ಳಬಹುದು.

पानं दुर्जनसंसर्गः पत्या च विरहोऽटनम् ।
स्वप्नोऽन्यगेहवासश्च नारीसन्दूषणानि षट् ॥ 9-13

(ಪಾನಂ ದುರ್ಜನಸಂಸರ್ಗಹ್ ಪತ್ಯಾ ಚ ವಿರಹೋऽಟನಂ ।
ಸ್ವಪ್ನೋऽನ್ಯಗೇಹವಾಸಶ್ಚ ನಾರೀಸಂದೂಷಾನಿ ಷಟ್  9-13 ॥)

ಹದಿಮೂರನೇ ಶ್ಲೋಕದಲ್ಲಿ ದಾಂಪತ್ಯದಲ್ಲಿ ವಿರಸವನ್ನುಂಟು ಮಾಡುವ ಹಲವು ಕಾರಣಗಳ ಪಟ್ಟಿಮಾಡಲಾಗಿದೆ. ಮದ್ಯಪಾನ, ಅಧಮರ ಗೆಳೆತನ, ಪತಿಯನ್ನು ತೊರೆದು ಒಬ್ಬಳೇ ಹೊರಗೆ (ಮನೋರಂಜನೆಗೆಂದು) ಹೋಗುವುದು, ಪತಿಗೆ ತಿಳಿಯದಂತೆ ಹೊರಹೋಗುವುದು , ಅನ್ಯರ ಮನೆಯಲ್ಲಿ (ದೀರ್ಘಕಾಲ) ಪತಿಯನ್ನು ಬಿಟ್ಟು ಇರುವುದು ಮತ್ತು ಕುಟುಂಬದ ಅಗತ್ಯಗಳನ್ನು ಪೂರೈಸುವ ಬದಲಿಗೆ ಹೊತ್ತಲ್ಲದ ಹೊತ್ತಿನಲ್ಲಿ ಮಲಗುವುದು ಇತ್ಯಾದಿ.

नैता रूपं परीक्षन्ते नासां वयसि संस्थितिः ।
सुरूपं वा विरूपं वा पुमानित्येव भुञ्जते ॥ 9-14

(ನೈತಾ ರೂಪಂ ಪರೀಕ್ಷನ್ತೆ ನಾಸಾಂ ವಯಸಿ ಸಂಸ್ಥಿತಿಹಿ ।
ಸರೂಪಂ ವಾ ವಿರೂಪಂ ಪುಮಾನಿತ್ಯೇವ ಭುಂಜತೇ ॥ 9-14 ॥ )

ಹದಿನಾಲ್ಕನೇ ಶ್ಲೋಕದಲ್ಲಿ ಕೆಲವು ಪ್ರತ್ಯೇಕ ಸ್ತ್ರೀಯರ ಸ್ವಭಾವವನ್ನು ವಿವರಿಸುತ್ತಾ, ಲಕ್ಷಣ ಮತ್ತು ವಯಸ್ಸಿನ ಪರಿವೆಯೇ ಇಲ್ಲದೆ ಪರಪುರುಷರ ಗಮನ ಸೆಳೆಯುವಂತಹ ವರ್ತನೆಯನ್ನು ವಿವರಿಸಲಾಗಿದೆ. ಮನುವಿನ ಮಾತಿನಂತೆ – ಇಂತಹ ಸಸ್ವಭಾವದ ಸ್ತ್ರೀಯರು ಗೃಹಿಣಿಯಾಗಲು ಸಮರ್ಥರಲ್ಲ ಮತ್ತು ಅವರು ಕೊನೆಯಲ್ಲಿ ತಮ್ಮ ಪತಿಯರಿಗೆ ವಿಶ್ವಾಸದ್ರೋಹ ಮಾಡುವುದು ನಿಶ್ಚಿತ ಎಂದು ಹೇಳಲಾಗಿದೆ. ಇದಕ್ಕೆ ಕಾರಣ  ಪ್ರಾರಬ್ಧ ಕರ್ಮವಾಗಿದ್ದು ಸ್ತ್ರೀಯರಲ್ಲಿ ಇಂತಹ ಸ್ವಭಾವವನ್ನು ಸೃಷ್ಟಿಕರ್ತನಾದ ಬ್ರಹ್ಮನೇ ನಿಯೋಜಿಸಿದ್ದಾನೆ ಎಂದು ಬರೆಯಲಾಗಿದೆ.

पौंश्चल्याच्चलचित्ताच्च नैस्नेह्याच्च स्वभावतः ।
रक्षिता यत्नतोऽपीह भर्तृष्वेता विकुर्वते ॥ 9-15

(ಪೌನ್ಶ್ಚಲ್ಯಾಚ್ಚಲಚಿತ್ತಾಚ್ಚ ನೈಸ್ನೆಹ್ಯಾಚ್ಚ ಸ್ವಭಾವತಃ ।
ರಕ್ಷಿತಾ ಯತ್ನತೋऽಪಿಹ ಭರ್ತೃಷ್ವೆತಾ ವಿಕುರ್ವತೆ  9-15 ॥ )

एवं स्वभावं ज्ञात्वाऽसां प्रजापतिनिसर्गजम् ।
परमं यत्नमातिष्ठेत् पुरुषो रक्षणं प्रति ॥ 9-16॥  

ಏವಂ ಸ್ವಭಾವಂ ಜ್ಞಾತ್ವಾऽಸಾಂ ಪ್ರಜಾಪತಿನಿಸರ್ಗಜಂ ।
ಪರಮಂ ಯತ್ನಮಾತಿಷ್ಠೆತ್ ಪುರುಷೋ ರಕ್ಷಣಂ ಪ್ರತಿ ॥ 9-16॥

ಮೇಲಿನ ಶ್ಲೋಕಗಳ ಹಿನ್ನೆಲೆಯಲ್ಲಿ ನಾವು ಈಗ ಹದಿನೈದನೇ ಶ್ಲೋಕವನ್ನು ನೋಡಿದಾಗ ಇಷ್ಟು ಸ್ಪಷ್ಟವಾಗುತ್ತದೆ-

ತಮ್ಮ  ಸುತ್ತಮುತ್ತಲಿನ  ಸಾಮಾಜಿಕ ಸಂಪ್ರದಾಯಗಳನ್ನು  ಮತ್ತು ಕೌಟುಂಬಿಕ ಅಪೇಕ್ಷೆಗಳನ್ನು ಕಡೆಗಾಣಿಸಿ ಕೇವಲ ತಮ್ಮ  ಆಸೆ-ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವ ವ್ಯಕ್ತಿಗಳು ನಮಗೆ ಎಲ್ಲೆಲ್ಲೂ  ಕಾಣಸಿಗುತ್ತಾರೆ. ಇಂತಹ ಪ್ರವೃತ್ತಿಗಳನ್ನು ಹದ್ದುಬಸ್ತಿನಲ್ಲಿರಿಸಿಕೊಳ್ಳುವ ಹಲವು ರೀತಿಗಳನ್ನು ಮನುಸ್ಮೃತಿಯಲ್ಲಿ ಹೇಳಲಾಗಿದೆ.

ಸಮಾಜಕ್ಕೆ ಕಡಿಮೆ ಹಾನಿಯಾಗುವ ರೀತಿಯಲ್ಲಿ ಇಂತಹ ವ್ಯಕ್ತಿಗಳನ್ನು ನಿರ್ವಹಿಸುವುದು ಮತ್ತು ವೈಯುಕ್ತಿಕವಾಗಿ ಸರಿಯಾದ ಮಾರ್ಗದಲ್ಲಿ ನಡೆಯಲು ಹಲವು ವಿಧಾನಗಳನ್ನು ಮನುಸ್ಮೃತಿಯಲ್ಲಿ ತಿಳಿಪಡಿಸಲಾಗಿದೆ.

ಮನುವಿನ ಈ ಮಾತುಗಳು ಇಂದಿಗೂ ದಾಂಪತ್ಯ ಮತ್ತು ಕುಟುಂಬ ಧರ್ಮದ ಸಂರಕ್ಷಣೆಯ ದೃಷ್ಟಿಕೋನದಿಂದ ಅತ್ಯಂತ ಪ್ರಸ್ತುತ ಮತ್ತು ಸಮಂಜಸವಾಗಿದೆ ಎಂದು ಹೇಳಬಹುದು.

ನಮ್ಮ ಭಾರತ ರಾಷ್ಟ್ರದ ಸುಸಂಸ್ಕೃತ  ಚಾರಿತ್ರ್ಯವನ್ನು ಉಳಿಸಿಕೊಳ್ಳಬೇಕಾದರೆ ಮನುವಿನ ಮಾತೇ ನಮಗೆ ಮದ್ದಾಗಬೇಕು. 

(ಈ ಲೇಖನ ಪ್ರೊ॥ ವೇಣುಗೋಪಾಲನ್ ಅವರ ಆಂಗ್ಲ ಲೇಖನದ ಕನ್ನಡಾನುವಾದವಾಗಿದೆ.)

(This is a Kannada translation of an English article by Prof. Venugoplan)

(Image credit: Amar Chitra Katha)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply