close logo

ಶ್ಲೋಕಚತುಷ್ಟಯ – ಅಭಿಜ್ಞಾನಶಾಕುಂತಲದ ನಾಲ್ಕು ಅನರ್ಘ್ಯ ರತ್ನಗಳು

(ಚಿತ್ರಕೃಪೆ : Dolls of India – shakuntala-and-sage-kanva-print-on-cloth)

‘ಶ್ಲೋಕಚತುಷ್ಟಯಮ್’ ಎಂದೇ ಹೆಸರುವಾಸಿಯಾಗಿರುವ  ಮಹಾಕವಿ ಕಾಳಿದಾಸನ ಅಭಿಜ್ಞಾನ ಶಾಕುಂತಲಂ ನಾಟಕದ ನಾಲ್ಕು ಶ್ಲೋಕಗಳು ಸಾಹಿತ್ಯರಸಿಕರ ಎದೆಯಂಗಳದಲ್ಲಿ ಸದಾ ನಲಿಯುತ್ತಿರುತ್ತವೆ ಎಂದರೆ ಅತಿಶಯವೇನಲ್ಲ. ತಾವೇ ನೀಡಿದ  ಶಾಪವನ್ನು ಶಮನಗೊಳಿಸಲು ಸ್ವಯಂ ದೂರ್ವಾಸರೇ ನೀಡುವ ಪರಿಹಾರ – ಅಭಿಜ್ಞಾನಾಭರಣದರ್ಶನ !  

ಎಂದರೆ “ನೀನು (ಶಕುಂತಲೆ) ಯಾರನ್ನು ಕುರಿತು ಯೋಚನೆ ಮಾಡುತ್ತಾ ನನ್ನ ಸೇವೆ ಮಾಡುವಲ್ಲಿ ನಿರ್ಲಕ್ಷ್ಯ ಮಾಡಿದೆಯೋ ಅವರು ನಿನ್ನನು ಮರೆತು ಹೋಗಲಿ! ” ಎನ್ನುವುದು ದೂರ್ವಾಸರ ಶಾಪ. ಇನ್ನು , “ಅಭಿಜ್ಞಾನಾಭರಣದರ್ಶನೇನ ಶಾಪಃ  ನಿವರ್ತಿಷ್ಯತ” ಎನ್ನುವುದು ಕೂಡ  ಅವರೇ ನೀಡುವ  ಪರಿಹಾರ. ಇದರ ಅರ್ಥ “ನೀನು ಧರಿಸಿರುವ ಗುರುತಿನ ಚಿಹ್ನೆ (ಅಭಿಜ್ಞಾನಾಭರಣ)ಯಿಂದ ಅವರು ನಿನ್ನನ್ನು ಗುರುತಿಸುವಂತಾಗಿ ನಿನ್ನ ಶಾಪ ವಿಮೋಚನೆಯಾಗುತ್ತದೆ” ಎಂದು. ಇವೆಲ್ಲವೂ ಸಾಧಾರಣವಾಗಿ ದುಷ್ಯಂತ-ಶಕುಂತಲೆಯರ ವೃತ್ತಾಂತವನ್ನು ಬಲ್ಲವರಿಗೆ  ತಿಳಿದಿರುವ ವಿಷಯ,  ಅಲ್ಲವೇ? 

ಕಾಳಿದಾಸನ ಅಭಿಜ್ಞಾನ ಶಾಕುಂತಲ ನಾಟಕದಲ್ಲಿ ಕಂಡುಬರುವ ಈ ಶ್ಲೋಕಚತುಷ್ಟಯದ ಸ್ವಾರಸ್ಯವೇನೆಂದರೆ , ನಾಟಕವನ್ನು ಹಿಂದೆಂದೋ ಒಮ್ಮೆ  ಓದಿರುವವರಿಗೂ ಸಹ,  ತಮ್ಮ ಜೀವನದ ಯಾವುದೋ ಒಂದು ಸನ್ನಿವೇಶ ಥೇಟ್ ‘ಅಭಿಜ್ಞಾನಾಭರಣದರ್ಶನ’ ದಂತೆಯೇ ಕಾಳಿದಾಸನನ್ನು ನೆನಪಿಗೆ ತಂದು ಬಿಡುತ್ತವೆ. ಆ ಹೊತ್ತಿನಲ್ಲಿ ಕಾಳಿದಾಸನೆಂಬ ಮಹಾನುಭಾವ ನಮಗೆ ಬಡಿಸಿರುವ  ಕಾವ್ಯರಸದೌತಣವನ್ನು ಮತ್ತೆ ಮತ್ತೆ ಸವಿಯುವ ಸೌಭಾಗ್ಯ ನಮ್ಮದಾಗುತ್ತದೆ. ಕಾಳಿದಾಸನಿಗೆ ಕಾಳಿದಾಸನೇ ಉಪಮೆ ಎನ್ನುವುದಕ್ಕೆ ಬೇರೆ ಸಾಕ್ಷಿ ಬೇಕೇ?

‘ಮೇಘಧೂತಂ’, ‘ರಘುವಂಶಂ’, ‘ಅಭಿಜ್ಞಾನಶಾಕುಂತಲಂ’  ಇತ್ಯಾದಿ ಹೆಸರು ಮಾತ್ರ ಕೇಳಿದವರಿಗೆ ಕಾಳಿದಾಸನ ಕಾವ್ಯ ಪ್ರಪಂಚವನ್ನು ಈ  ಶ್ಲೋಕಚತುಷ್ಟಯದ ಮೂಲಕ ಪರಿಚಯ ಮಾಡಿಕೊಡುವ ಲೇಖನ ಇದು. ಬನ್ನಿ, ರಸದೂಟವನ್ನು ಒಟ್ಟಿಗೆ ಸವಿಯೋಣ ! 

 ಕಾವ್ಯೇಷು ನಾಟಕಂ ರಮ್ಯಂ ತತ್ರ ರಮ್ಯಾ ಶಕುಂತಲಾ । ತತ್ರಾಪಿ ಚ ಚತುರ್ಥೋಽಂಕಸ್ತತ್ರ ಶ್ಲೋಕಚತುಷ್ಟಯಃ ॥

ಕಾವ್ಯಮೀಮಾಂಸಕಾರನೊಬ್ಬನ ಈ ಮಾತು ಸಾರ್ವಕಾಲಿಕ ಸತ್ಯವೇನೋ ಎನ್ನುವಂತೆ  ಶ್ಲೋಕಚತುಷ್ಟಯದ ಪರಿಚಯಕ್ಕೆ ಮುನ್ನ ಎಲ್ಲರೂ  ಈ ಸಾಲುಗಳನ್ನು ಉಲ್ಲೇಖಿಸುವುದು  ಒಂದು ಸಂಪ್ರದಾಯವಾಗಿಬಿಟ್ಟಿದೆ. ಮಹಾಕವಿ ಕಾಳಿದಾಸನ ಅಭಿಜ್ಞಾನಶಾಕುಂತಲಂ ನಾಟಕದ ನಾಲ್ಕನೇ ಅಂಕದಲ್ಲಿ ಬರುವ ಈ ನಾಲ್ಕು ಶ್ಲೋಕಗಳಿಗೆ ಈ ಅಗ್ರಪಟ್ಟ ಏಕೆ? ಅಗ್ರಪಟ್ಟ ಅಂದ ಮಾತ್ರಕ್ಕೆ ಉಳಿದ ಅಂಕಗಳ ಉಳಿದ ಶ್ಲೋಕಗಳು ಸಪ್ಪೆ ಎಂದು ಖಂಡಿತಾ ತಿಳಿಯಬಾರದು. ಕಾಳಿದಾಸನ ಪ್ರತಿ ಪದಪ್ರಯೋಗವೂ ಅರ್ಥಗರ್ಭಿತ ಮತ್ತು ರಸಪೂರ್ಣವಾಗಿರುತ್ತದೆ. ಪಾತ್ರ ಮತ್ತು ಸನ್ನಿವೇಶಗಳ ಚಿತ್ರಣದಲ್ಲಿ ಅವನನ್ನು ಮೀರಿಸಿದವರಿಲ್ಲ. ವ್ಯಾಸ-ವಾಲ್ಮೀಕಿಯಂತಹ ದಿಗ್ಗಜರು  ರಚಿಸಿದ ಮಹಾಭಾರತ-ರಾಮಾಯಣಗಳ ಕಥಾವಸ್ತುಗಳನ್ನೇ ಬೆನ್ನೆಲುಬಾಗಿಸಿ ಮಹಾಕವಿ ಕಾಳಿದಾಸ ತನ್ನ ಕಾವ್ಯಪ್ರಪಂಚವನ್ನು ಸೃಷ್ಟಿಸಿದ್ದಾನೆ . ಕಥೆಯ ಮೂಲದೃಷ್ಟಿಗೆ ಧಕ್ಕೆ ಬರದಂತೆ ಮತ್ತು ಕಾವ್ಯ ,ನಾಟಕ ಇತ್ಯಾದಿ ಸಾಹಿತ್ಯ ಪ್ರಕಾರಗಳಿಗೆ  ಒಪ್ಪುವಂತೆ ‘ಅಲಂಕಾರ’ ಮಾಡುವ ಕಾಳಿದಾಸನ ವಿವೇಕ ಮತ್ತು ಜಾಣ್ಮೆ , ಅಪೂರ್ವ ಹಾಗು ಅನನ್ಯ. ಈ ಕಾರಣಕ್ಕಾಗಿಯೇ ಇಂದು ಜನಮಾನಸದಲ್ಲಿ ದುಷ್ಯಂತ-ಶಕುಂತಲೆಯರ ಬಗ್ಗೆ  ವ್ಯಾಸರ ಚಿತ್ರಣಕ್ಕಿಂತ ಹೆಚ್ಚಾಗಿ ಕಾಳಿದಾಸನ ವರ್ಣನೆ ಪ್ರಭಾವ ಬೀರಿದೆ.    

ಮಹಾಭಾರತದ ಆದಿಪರ್ವದಲ್ಲಿ ಕಂಡು ಬರುವ ಹಸ್ತಿನಾಪುರದ ರಾಜ ದುಷ್ಯಂತನೇ ಅಭಿಜ್ಞಾನ ಶಾಕುಂತಲಂ ನಾಟಕದ ನಾಯಕ. ನಾಟಕದ ಮೊದಲನೆಯ ಮೂರು ಅಂಕಗಳಲ್ಲಿ ಕಥೆ ಸಾಕಷ್ಟು ಮುಂದೆಹೋಗುತ್ತದೆ. ನಾಟಕವು ನಾಲ್ಕನೇ ಅಂಕಕ್ಕೆ ಬರುವಷ್ಟರಲ್ಲಿ  ದುಷ್ಯಂತ ಬೇಟೆಯಾಡಲೆಂದು ಕಾಡಿಗೆ ಬರುವುದು, ಅಲ್ಲಿ ಅಕಸ್ಮಾತ್ ಕಣ್ವರ ಅನುಪಸ್ಥಿತಿಯಲ್ಲಿ ಅವರ ಆಶ್ರಮಕ್ಕೆ ಭೇಟಿ ನೀಡುವುದು, ಅಲ್ಲೇ ಶಕುಂತಲೆಯಲ್ಲಿ ಪ್ರೇಮಾಂಕುರವಾಗುವುದು , ಆಕೆಯ ಸಖಿಯರಾದ ಅನಸೂಯಾ-ಪ್ರಿಯಂವದೆಯರ  ಕಣ್ಗಾವಲಿನಲ್ಲೆಯೇ ದುಷ್ಯಂತ-ಶಕುಂತಲೆಯರ ಪ್ರೇಮ ಸಲ್ಲಾಪ-ವಿರಹ-ಗಂಧರ್ವ ವಿವಾಹ ಮತ್ತು ಬಂದಷ್ಟೇ ಅಕಸ್ಮಾತಾಗಿ ದುಷ್ಯಂತನ ಆಶ್ರಮ ನಿರ್ಗಮನ, ದೂರ್ವಾಸರ ಶಾಪ ಎಲ್ಲವೂ ನಡೆದುಹೋಗಿರುತ್ತದೆ. ತಮ್ಮ ಮಗಳ ಜಾತಕ ಪರಿಹಾರಕ್ಕೆಂದು ಸೋಮತೀರ್ಥದಿಂದ ತಿರುಗಿ ಬಂದ ಕಣ್ವರಿಗೆ ಮೊದಲು ಕಾಣುವುದೇ ಮಗಳು ಶಕುಂತಲೆಯ ಉಬ್ಬಿದ ಹೊಟ್ಟೆ.  ತತ್ತಕ್ಷಣವೇ ಅವಳನ್ನು ಅವಳ ಗಂಡನ ಬಳಿಗೆ ಕಳಿಸಬೇಕೆಂಬ ಗಡಿಬಿಡಿ ಅವರಿಗೆ. ಆಶ್ರಮದ ಹಿರೀಕರನ್ನು ಗೊತ್ತುಮಾಡಿ ನಾಳೆಯೇ ಹಸ್ತಿನಾಪುರದ ಕಡೆಗೆ ಪ್ರಯಾಣ ಬೆಳೆಸಬೇಕೆಂದು  ಆದೇಶ ಹೊರಡಿಸುತ್ತಾರೆ.  ಈ ಸನ್ನಿವೇಶದಿಂದ ನಾಟಕದ  ನಾಲ್ಕನೇ ಅಂಕವನ್ನು ರಂಗದ ಮೇಲೆ ಪ್ರದರ್ಶಿಸಲಾಗುತ್ತದೆ. ಆಶ್ರಮದ ಹೆಣ್ಣುಮಕ್ಕಳೆಲ್ಲಾ ಸೇರಿ ಶಕುಂತಲೆಗೆ ಸುಖಮಜ್ಜನ ಮಾಡಿಸಿ ಅವಳನ್ನು ಸಿಂಗರಿಸಿದ್ದಾರೆ. ಅವಳೊಂದಿಗೆ ಹೊರಡಬೇಕಾದ ಗೌತಮಿ, ಶಾರ್ಙ್ಗರವ ಮತ್ತಿತರ ಋಷಿಗಳು ರಂಗದ ಒಂದು ಮೂಲೆಯಲ್ಲಿ ನಿಂತಿದ್ದಾರೆ. ಶಕುಂತಲೆಯನ್ನು ಬೀಳ್ಕೊಡಲು ಅವಳ ಸಖಿಯರಾದ ಪ್ರಿಯಂವದೆ, ಅನಸೂಯೆಯರು ಮತ್ತು ಇತರ ಆಶ್ರಮವಾಸಿಗಳು ಮತ್ತೊಂದು ಮೂಲೆಯಲ್ಲಿ ನಿಂತಿದ್ದಾರೆ. ರಂಗದ ಮಧ್ಯಭಾಗದಲ್ಲಿ ದುಃಖ, ನಾಚಿಕೆ, ಸಂಭ್ರಮ ಎಲ್ಲವನ್ನೂ ಮೈವೆತ್ತ ಶಕುಂತಲೆ ಕಣ್ವರ ಕಾಲಿಗೆ ಬಿದ್ದು ‘ತಾತಾ ವಂದೇ’ ಎಂದು ಹೇಳುತ್ತಾಳೆ. ಹೊರಡುವ ಮುನ್ನ ಪವಿತ್ರ ಅಗ್ನಿಯ ಪ್ರದಕ್ಷಿಣೆ ಮಾಡಿ ಹೊರಡು ಎಂದು ಕಣ್ವರು ಹೇಳುತ್ತಾರೆ. ಆದರೆ , ಮಾತು ಮುಗಿಯುವ ಮುನ್ನವೇ ಅವರ ಗಂಟಲು ಕಟ್ಟಿಬರುತ್ತದೆ.  ಗದ್ಗದಿತರಾದ ಕಣ್ವರು ಈ ಸಂದರ್ಭದಲ್ಲಿ ಹೇಳುವ ಶ್ಲೋಕಗಳ ಪೈಕಿ  ನಾಲ್ಕು ಪ್ರಮುಖ ಶ್ಲೋಕಗಳೇ ಶ್ಲೋಕಚತುಷ್ಟಯ ಎಂದು ಹೆಸರುವಾಸಿಯಾಗಿವೆ.

ನಮ್ಮ ದೇಶದ ಇತಿಹಾಸ, ಪುರಾಣ, ಕಥೆ , ಕಾವ್ಯ, ಕಾದಂಬರಿ ಇತ್ಯಾದಿ ಸಾಹಿತ್ಯಪ್ರಕಾರಗಳಲ್ಲಿ ತಂದೆಯೊಬ್ಬನು ಮಗಳನ್ನು ಬೀಳ್ಕೊಡುವ ಹೃದಯವಿದ್ರಾವಕ ಸನ್ನಿವೇಶದ ವರ್ಣನೆ ಅತಿವಿರಳ ಎಂದು ಹೇಳಬಹುದು. ಶ್ಲೋಕಚತುಷ್ಟಯದ ಪ್ರಸಿದ್ಧಿಗೆ ಇದೂ ಒಂದು ಕಾರಣವಿರಬಹುದು. ಆದರೆ, ಒಬ್ಬ  ತಂದೆಯ ಕರುಳಿನ ಕೂಗಿನ ಜೊತೆಜೊತೆಗೆ ಪ್ರಾಚೀನ ಭಾರತದ ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನಶೈಲಿಯ ಚಿತ್ರಣವನ್ನೂ ಕಾಳಿದಾಸ ನಮಗೆ ಈ ನಾಲ್ಕು ಶ್ಲೋಕಗಳ ಮೂಲಕ ತಿಳಿಪಡಿಸುತ್ತಾನೆ ಎನ್ನುವುದು ಇಲ್ಲಿನ ವಿಶೇಷ. ಸಂಸ್ಕೃತವನ್ನು ಸರಳವಾಗಿ ತಿಳಿಯಲು ನಾಲ್ಕು ಶ್ಲೋಕಗಳ ಪದಚ್ಛೇದ ಮಾಡಿ ಕನ್ನಡದಲ್ಲಿ ಸ್ಥೂಲಾರ್ಥಗಳನ್ನು ಈ ಲೇಖನದ ಕೊನೆಯಲ್ಲಿ   ನೀಡಲಾಗಿದೆ.

ಮೊದಲನೆಯ ಶ್ಲೋಕ ಹೀಗಿದೆ 

ಯಾಸ್ಯತ್ಯದ್ಯ ಶಕುಂತಲೇತಿ ಹೃದಯಂ ಸಂಸೃಷ್ಟಮುತ್ಕಂಠಯಾ,

ಕಂಠಃ  ಸ್ತಂಭಿತಬಾಷ್ಪವೃತ್ತಿಕಲುಷಶ್ಚಿಂತಾಜಡಂದರ್ಶನಮ್ । 

ವೈಕ್ಲವ್ಯಂ ಮಮ ತಾವದೀದೃಶಮಿದಂ ಸ್ನೇಹಾದರಣ್ಯೌಕಸಃ,

ಪೀಡ್ಯಂತೇ  ಗೃಹಿಣಃ  ಕಥಂ ನ ತನಯಾವಿಶ್ಲೇಷದುಃಖೈರ್ನವೈಃ ॥ 1॥

ಭಾವಾರ್ಥ :

ಶಕುಂತಲಾ ತನ್ನ ಪತಿಗೃಹಕ್ಕೆ  (ಹಸ್ತಿನಾಪುರಕ್ಕೆ) ಹೊರಡುತ್ತಿದ್ದಾಳೆ ಎಂದು ನನ್ನ ವ್ಯಾಕುಲತೆ ಹೆಚ್ಚಾಗಿ ಏನೂ ತೋಚುತ್ತಿಲ್ಲ. ನನ್ನ ಕಣ್ಣುಗಳು, ಮನಸ್ಸು, ಗಂಟಲು ಎಲ್ಲವೂ ತುಂಬಿಬಂದಿವೆ. ತಪೋನಿರತನಾದ ನನ್ನಂತವನಿಗೆ ಈ ದುಃಖ ಹೀಗೆ ಕಾಡುತ್ತಿರಬೇಕಾದರೆ , ಇನ್ನು ಒಬ್ಬ ಸಾಧಾರಣ ಗೃಹಸ್ಥ ಮೊದಲಬಾರಿಗೆ ತನ್ನ  ಮಗಳನ್ನು ಗಂಡನ ಮನೆಗೆ ಕಳಿಸಿಕೊಡಬೇಕಾದರೆ ಅವನನ್ನು ಹೇಗೆ ಕಾಡಬಹುದು? 

ಈ ಶ್ಲೋಕದಲ್ಲಿ ಕಣ್ವರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಕಣ್ವರೋ ಮಹಾತಪಸ್ವಿಗಳು! ತ್ರಿಕಾಲಜ್ಞಾನಿಗಳು!! ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಹೇಳುವ ವಿಶ್ವವಿಖ್ಯಾತ ಗುರುಕುಲದ ಕುಲಪತಿಗಳು!! ಅವರಿಗಿಂತ  ಪ್ರಾಜ್ಞರು ಬೇರಾರು? ಆದರೆ ಇವೆಲ್ಲದರ ಜೊತೆಗೆ ಅವರೊಬ್ಬ ತಂದೆ. ಪಾಲಿತಪುತ್ರಿಯಾದರೂ ಶಕುಂತಲೆ ಅವರಿಗೆ ಪಂಚಪ್ರಾಣ. ಮುಂದೊಂದು ದಿನ ಮಗಳು ಗಂಡನ ಮನೆಗೆ ಹೋಗಿಯೇ ಹೋಗುತ್ತಾಳೆ ಎಂದೂ ಅವರಿಗೆ ಗೊತ್ತು.  ಅವಳಿಗೊಬ್ಬ  ಸೂಕ್ತ ವರನನ್ನು ಹುಡುಕುವುದು ತಮ್ಮ ಜೀವನದ ಪರಮಧ್ಯೇಯ ಎಂದು ಬದುಕಿದವರು. ತಮ್ಮ  ಅನುಪಸ್ಥಿತಿಯಲ್ಲಿ  ಏನೋ ಒಂದು ಅಚಾತುರ್ಯ ನಡೆದು ಹೋಗಿದೆ ಎಂದು ಅವರಿಗೆ ತಿಳಿದಿದೆ. ಮುಂದೆ ಶಕುಂತಲೆಯ ಗತಿ ಏನು ಎನ್ನುವ ಚಿಂತೆಯೂ ಅವರಲ್ಲಿದೆ. ಈಗ ಗರ್ಭಿಣಿಯಾದ ಶಕುಂತಲೆಯನ್ನು ಕಳಿಸಿಕೊಡಲೇಬೇಕಾದ ಅನಿವಾರ್ಯ ಬೇರೆ. ಕಾಡಿನ ಮಧ್ಯೆ  ಧ್ಯಾನ ಮತ್ತು ಯಜ್ಞಗಳಲ್ಲಿ ಮಗ್ನನಾಗಿ ರಾಗದ್ವೇಷಾದಿಗಳಲ್ಲಿ ವಿರಕ್ತನಾದ ನನ್ನಂತಹ ಅರಣ್ಯವಾಸಿಯ ಗತಿಯೇ ಹೀಗಾದರೆ  ಇನ್ನು ಸಾಮಾನ್ಯ ಗೃಹಸ್ಥರು ತಮ್ಮ ಮನೆಮಗಳನ್ನು  ಕಳಿಸಿಕೊಡುವ ಹೊತ್ತಿನಲ್ಲಿ ಎಷ್ಟು ಸಂಕಟ ಪಡಬಹುದು ಎಂದು ಕಣ್ವರು ಈ ಸಂದರ್ಭದಲ್ಲಿ ಹೇಳುತ್ತಾರೆ. ಇಂತಹ ತಂದೆಯ ಪಾತ್ರವನ್ನು  ಕಾಳಿದಾಸ ಬಹಳ ಮನೋಜ್ಞವಾಗಿ ಚಿತ್ರಿಸಿದ್ದಾನೆ. ಓದುವವರ ಕಣ್ಣು ತೇವವಾಗಿ ಗಂಟಲು ತುಂಬಿಬಂದರೆ ಇನ್ನು ಈ ನಾಟಕವನ್ನು ರಂಗದ ಮೇಲೆ ವೀಕ್ಷಿಸುವ ರಸಿಕರು ಹೇಗೆ ಸವಿಯಬಹುದು? 

ಎರಡನೆಯ ಶ್ಲೋಕ ಹೀಗಿದೆ 

ಪಾತುಂ ನ ಪ್ರಥಮಂ ವ್ಯವಸ್ಯತಿ ಜಲಂ ಯುಷ್ಮಾಸ್ವಸಿಕ್ತೇಷು ಯಾ

ನಾ ದತ್ತೆ ಪ್ರಿಯಮಂಡನಾಪಿ ಭವತಾಂ ಸ್ನೇಹೇನ ಯಾ ಪಲ್ಲವಮ್ ।

ಆದೌ  ವಃ  ಕುಸುಮಪ್ರಸೂತಿ ಸಮಯೇ  ಯಸ್ಯಾ ಭವತ್ಯುತ್ಸವಃ  

ಸೇಯಂ ಯಾತಿ ಶಕುಂತಲಾ ಪತಿಗೃಹಂ ಸರ್ವೈರನುಜ್ಞಾಯತಾಮ್ ॥2॥

ಭಾವಾರ್ಥ: 

ಯಾರು ನಿಮಗೆ ನೀರುಣಿಸದ ಹೊರತು ತಾನು ನೀರು ಕುಡಿಯುತಿರಲಿಲ್ಲವೋ , ಅಲಂಕಾರ ಪ್ರಿಯಳಾದರೂ ತನ್ನನ್ನು ಸಿಂಗರಿಸಿಕೊಳ್ಳಲು  ನಿಮ್ಮ ಎಲೆಗಳನ್ನು ಯಾರು ಕೀಳುತ್ತಿರಲಿಲ್ಲವೋ , ನಿಮ್ಮ ಮೊಗ್ಗು ಮೂಡುವುದನ್ನು ನೋಡಿ ಯಾರು ಸಂಭ್ರಮಿಸುತ್ತಿದ್ದಳೋ , ಆ ಶಕುಂತಲೆ ಇಂದು  ಗಂಡನ ಮನೆಗೆ ಹೊರಟಿದ್ದಾಳೆ. ನಿಮ್ಮ ಅಪ್ಪಣೆಯಾಗಲಿ. 

ಕಾಶ್ಯಪರು ಎಂದರೆ ಕಣ್ವ ಮಹರ್ಷಿಗಳು,  ಆಶ್ರಮದ ತರುಲತೆಗಳನ್ನು ಉದ್ದೇಶಿಸಿ ಹೇಳುವ ಶ್ಲೋಕವಿದು. ಆಶ್ರಮದ ತರುಲತೆಗಳೆಂದರೆ ಶಕುಂತಲೆಗೆ ಪಂಚಪ್ರಾಣ. ಸೋದರಸ್ನೇಹಭಾವದಿಂದ ಅವುಗಳಿಗೆ ನೀರೆರೆಯದೆ  ಶಕುಂತಲಾ ತಾನು ನೀರು ಕುಡಿದವಳಲ್ಲ.  ಒಂದೊಂದು ಗಿಡ ಬಳ್ಳಿಗೂ ಅಕ್ಕರೆಯ ಪ್ರೀತಿ ಸುರಿಸುತ್ತಾ ಸಿಂಗರಿಸಿಕೊಳ್ಳಲ್ಲು ಆಸೆಯಾದರೂ ಒಂದು ಚಿಗುರು, ಎಲೆ ಕಿತ್ತವಳಲ್ಲ. ಅಕ್ಕರೆಯ ಪ್ರೀತಿ ಸುರಿಸುತ್ತಾ ಗಿಡಬಳ್ಳಿಗಳಿಗೆ ಹೆಸರಿಟ್ಟು ಕರೆಯುವ ಅವಳ ಸಾಂಗತ್ಯ ಇನ್ನು ಈ ಆಶ್ರಮದ ಗಿಡಬಳ್ಳಿಗಳಿಗೆ ಇಲ್ಲವಲ್ಲಾ  ಎಂಬ ಕೊರಗು ಕಣ್ವರಿಗೆ. ಒಂದೊಂದು ಮೊಗ್ಗು ಬಿಟ್ಟಾಗಲೂ ಅವಳ ಸಂಭ್ರಮ ಸಡಗರ ಹೇಳತೀರದು.  “ನಿಮ್ಮನ್ನು ಇಷ್ಟು ಆಸ್ಥೆಯಿಂದ ಜೋಪಾನ ಮಾಡಿದ ಶಕುಂತಲೆ ಇಂದು ತನ್ನ ಪತಿಗೃಹಕ್ಕೆ ಹೊರಟಿದ್ದಾಳೆ. ನೀವೆಲ್ಲಾ  ಅವಳನ್ನು ಕಳಿಸಿಕೊಡಬೇಕು” ಎಂದು ಕಳಕಳಿಯಿಂದ ಕಣ್ವರು ಕೇಳಿಕೊಳ್ಳುತ್ತಿದ್ದಾರೆ. 

ನಿಜಕ್ಕೂ ಕಣ್ವರ ಈ ಕಳಕಳಿ ಎಂಥಹ ಕಲ್ಲುಹೃದಯವನ್ನೂ ಕರಗಿಸಿಬಿಡುತ್ತದೆ ಅಲ್ಲವೇ? ಆಶ್ರಮ ಪರಿಸರದಲ್ಲಿ ಹುಟ್ಟಿಬೆಳೆದ ಒಂದು  ಹೆಣ್ಣುಮಗುವಿಗೆ ಗಿಡ ಬಳ್ಳಿಗಳ ಸಾಂಗತ್ಯ ಎಷ್ಟು ಅನ್ಯೋನ್ಯವಾದದ್ದು ಎಂದು ಕಾಳಿದಾಸ ವರ್ಣಿಸುತ್ತಿದ್ದಾನೆ. ಆಶ್ರಮದ ಗಿಡಗಳಿಗೆ ನೀರೆರೆಯುವುದು ಶಕುಂತಲೆಯ ದಿನಚರಿಯ ಪ್ರಮುಖ ನಿತ್ಯಕ್ರಮ. ಒಂದೊಂದು ಗಿಡಬಳ್ಳಿಗೂ  ಪ್ರೀತಿಯಿಂದ  ಹೆಸರಿಟ್ಟು ಕರೆದು ಅದರಲ್ಲಿ  ಹೊಸ ಮೊಗ್ಗು ಮೂಡಿದಾಗ ಸಂಭ್ರಮಿಸುವ ಅವಳ ಪರಿಸರ ಪ್ರೇಮ ನಿಜಕ್ಕೂ ಅಪೂರ್ವವಾದದ್ದು. ಹೀಗೊಂದು  ದಿನ “ಪಾದಪಸೇಚನ” ಮಾಡುತ್ತಾ  ಸಖಿಯರೊಂದಿಗೆ ಹರಟೆ ಹೊಡೆಯುತ್ತಿದ್ದಾಗಲೇ  ಶಕುಂತಲೆ ದುಷ್ಯಂತನ ಕಣ್ಣಿಗೆ ಬಿದ್ದದ್ದು. ಅವರಿಬ್ಬರಲ್ಲಿ ಪ್ರೇಮಾಂಕುರವಾದದ್ದು ಇತ್ಯಾದಿ. ದುಷ್ಯಂತ ಮತ್ತು ಶಕುಂತಲೆಯ ಗಂಧರ್ವ ವಿವಾಹಕ್ಕೆ ಸಾಕ್ಷಿಯಾಗಿ ನಿಂತವರೇ ಈ ಆಶ್ರಮದ ತರುಲತೆಗಳು. ದುಷ್ಯಂತ ಹಠಾತ್ ಹಸ್ತಿನಾಪುರಕ್ಕೆ ಹೊರಟುಹೋದಾಗ ಉಂಟಾದ  ಶಕುಂತಲೆಯ ವಿರಹಕ್ಕೂ ಇವೇ ಮೂಕ ಸಾಕ್ಷಿಗಳು! ಅಷ್ಟೇ ಏಕೆ, ಇನ್ನೇನು ಶಕುಂತಲೆಯನ್ನು ಗಂಡನ ಮನೆಗೆ ಕಳಿಸಿಕೊಡಬೇಕು ಎಂದು ತಿಳಿದಾಗ ಅವಳಿಗೆ ಈ ತರುಲತೆಗಳೇ ವಿಶೇಷ ಅಭಾರಣಗಳನ್ನು ನೀಡಿದ ಚಮತ್ಕಾರವನ್ನು ನಾಟಕದಲ್ಲಿ ಕಾಳಿದಾಸ ಸೃಷ್ಟಿಸಿದ್ದಾನೆ. ಪ್ರಾಚೀನ ಭಾರತದ ನರನಾಡಿಗಳಲ್ಲಿ ಪ್ರಕೃತಿಪ್ರೇಮ ಹೇಗೆ ಹಾಸುಹೊಕ್ಕಿತ್ತು ಎಂದು ಇದರಿಂದ ತಿಳಿಯಬಹುದು. ಈ ಸೂಕ್ಷ್ಮವನ್ನು ಚೆನ್ನಾಗಿ ಬಲ್ಲ ಕಣ್ವರು ಮೊದಲಿಗೆ ಆಶ್ರಮದ ತರುಲತೆಗಳಿಗೆ ಶಕುಂತಲೆಯನ್ನು ಕಳಿಸಿಕೊಡಬೇಕೆಂದು ಕೇಳಿಕೊಳ್ಳುತ್ತಿದ್ದಾರೆ. ಕಾಳಿದಾಸನ ಕಲ್ಪನೆ ಎಷ್ಟು ಮನೋಹರವಾಗಿದೆ ಅಲ್ಲವೇ?  

ಕಣ್ವರು ಹೀಗೆ ಹೇಳಿದಾಗಲೇ,   ಕೋಗಿಲೆಯೊಂದು ಶಕುಂತಲೆಯನ್ನು ಬೀಳ್ಕೊಡುತ್ತಿದೆಯೇನೋ ಎಂಬಂತೆ , ಹಾಡುವ  ಶಬ್ದ ಕೇಳಿಸುತ್ತದೆ.  ಕೇವಲ ಗಿಡಬಳ್ಳಿಗಷ್ಟೇ ಅಲ್ಲ, ತಪೋವನದ ಮೃಗಪಕ್ಷಿಗಳೂ ಶಕುಂತಲೆ ಹೊರಟಳೆಂಬ ಬೇಸರದಲ್ಲಿವೆ. ಶಕುಂತಲೆ ತನ್ನ ಲತಾಭಗಿನಿ (ತಂಗಿಯಂತಿರುವ ಹೂಬಳ್ಳಿ) ವನಜ್ಯೋತ್ಸ್ನಾಳನ್ನು ಮಾತಾಡಿಸಿ , ತನ್ನ ಮುದ್ದಿನ ಜಿಂಕೆಮರಿ ದೀರ್ಘಾಪಾಂಗನನ್ನು ತಬ್ಬಿ  ತನ್ನ ಸಖಿಯರಿಗೆ ಇವರೆಲ್ಲರ ಆರೈಕೆಯನ್ನು ಮುಂದುವರೆಸುವಂತೆ ಬೇಡುತ್ತಾಳೆ. ನಾಟಕದ ಒಂದೊಂದು ಸಾಲಿನಲ್ಲೂ ಕಾಳಿದಾಸನ ರಮ್ಯ ವರ್ಣನೆ, ಉಪಮೆಗಳು ಅದ್ಭುತವಾಗಿ  ಕಂಗೊಳಿಸುತ್ತವೆ.

ಇನ್ನು ಮೂರನೇ ಶ್ಲೋಕ ಹೀಗಿದೆ 

ಅಸ್ಮಾನ್ಸಾಧು ವಿಚಿಂತ್ಯ  ಸಂಯಮಧನಾನುಚ್ಚೈ ಕುಲಂ ಚಾತ್ಮನಃ

ತ್ವಯ್ಯಸ್ಯಾಃ ಕಥಮಪ್ಯಅಬಾಂಧವಕೃತಾಂ ಸ್ನೇಹಪ್ರವೃತ್ತಿಂ ಚ ತಾಮ್ ।

ಸಾಮಾನ್ಯಪ್ರತಿಪತ್ತಿಪೂರ್ವಕಮಿಯಂ ದಾರೇಷು ದೃಶ್ಯಾತ್ವಯಾ

ಭಾಗ್ಯಾಯತ್ತಮತಃ ಪರಂ ನ ಖಲು ತದ್ವಾಚ್ಯಂ ವಧೂಬಂಧುಭಿಃ ॥3॥

ಭಾವಾರ್ಥ   

ನಾವು  (ಆಶ್ರಮವಾಸಿಗಳು)  ಸಂಯಮವೇ ಧನವೆಂದು ನಂಬುವ ಜನ. ನೀನೋ ಉಚ್ಚಕುಲದಲ್ಲಿ ಹುಟ್ಟಿದವನು. ನೀನು ಅದು ಹೇಗೋ ಬಂಧು-ಬಾಂಧವರು ಇಲ್ಲದ ಹೊತ್ತಿನಲ್ಲಿ  ನಮ್ಮ ಶಕುಂತಲೆಯ ಜೊತೆ ಪ್ರೇಮಸಂಬಂಧವನ್ನು ಕಟ್ಟಿಕೊಂಡಿದ್ದೀಯೆ.ಇದರ ಸರಿ ತಪ್ಪುಗಳು ನಿನಗೆ ಚೆನ್ನಾಗಿ ತಿಳಿದಿದೆ. ನಿನ್ನ ಅಂತಃಪುರದಲ್ಲಿ ನಿನಗೆ ಬೇಕಾದಷ್ಟು ಪತ್ನಿಯರಿದ್ದಾರೆ.  ಅವರ ಮಧ್ಯೆ ಇವಳನ್ನು “ಸಾಮಾನ್ಯ” ಗೌರವ-ಪ್ರೀತ್ಯಾದರಗಳಿಂದ ನೋಡಿಕೊಳ್ಳಬೇಕು. ಭಾಗ್ಯಕ್ಕೆ ಅಧೀನರಾದ ಹೆಣ್ಣಿನ ಕಡೆಯವರು ಇದಕ್ಕಿಂತ ಹೆಚ್ಚು  ಬೇರೆ ಎನು ತಾನೇ ಕೇಳಿಯಾರು? 

ಈ ಶ್ಲೋಕದಲ್ಲಿ ಮಹರ್ಷಿ ಕಣ್ವರು ತಮ್ಮ ಶಿಷ್ಯನಾದ ಶಾರ್ಙ್ಗರವನ ಮೂಲಕ ರಾಜಾ ದುಷ್ಯಂತನಿಗೆ ಸಂದೇಶ ಕಳಿಸುತ್ತಿದ್ದಾರೆ. ಕ್ರೋಧ, ಹತಾಶೆಗಳಿಂದ ತುಂಬಿದ ಅವರ ಮಾತುಗಳಲ್ಲಿ  ಸಾಕಷ್ಟು ಸೂಕ್ಷ್ಮ ಅಡಗಿದೆ. ಮೊದಲಿಗೆ ಆಶ್ರಮವಾಸಿಗಳ ಸ್ವಭಾವವನ್ನು ಹೇಳುತ್ತಿದ್ದಾರೆ. ತಪೋವನವಾಸಿಗಳಿಗೆ  ಸಂಯಮವೇ  ಶ್ರೀಮಂತಿಕೆ. ಉಚ್ಚ ಕುಲದ ರಾಜನೊಬ್ಬ ಯಾರೂ ಇಲ್ಲದ ಹೊತ್ತಿನಲ್ಲಿ ತಪೋವನಕ್ಕೆ ಬಂದು ಅಲ್ಲಿನ ಕನ್ಯೆಯೊಬ್ಬಳಲ್ಲಿ ಅನುರಕ್ತನಾಗಿ ಗಂಧರ್ವ ವಿವಾಹ ಮಾಡಿಕೊಳ್ಳುವುದು ಎಷ್ಟು  ಉಚಿತ ಎಂದೂ ಕಣ್ವರು ಇಲ್ಲಿ ಕೇಳುತ್ತಿರಬಹುದು. ಯಾವುದೊ ಒಂದು ದುರ್ಬಲ ಕ್ಷಣದಲ್ಲಿ ಅನುರಕ್ತನಾಗಿ ತಪಸ್ವಿನಿ ಕನ್ಯೆಯನ್ನು ವಿವಾಹ ಮಾಡಿಕೊಂಡ ದುಷ್ಯಂತ ಈಗ ಬಹಿರಂಗವಾಗಿ ಶಕುಂತಲೆಯನ್ನು ಒಪ್ಪಿಕೊಳ್ಳದಿರಬಹುದು ಎಂಬ ಸಂಶಯವನ್ನೂ ಕಣ್ವರು ಇಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ನೀನು ಉಚ್ಚಕುಲದವನು ಹಾಗಾಗಿ ಅನುಚಿತವಾಗಿ ವರ್ತಿಸಬಾರದು ಎಂಬ ಎಚ್ಚರಿಕೆಯೂ ಅವರ ಮಾತಿನಲ್ಲಿ ಅಡಗಿದೆ. ಇರಲಿ ಆಗಿದ್ದು ಆಯಿತು. ಅದರ ಧರ್ಮಾಧರ್ಮಗಳು ರಾಜನಾದ ನಿನಗೇ  ಹೆಚ್ಚು ಗೊತ್ತು ಎನ್ನುವ ಅರ್ಥವೂ ಇಲ್ಲಿದೆ. “ಅಂತೂ ಇಂತೂ ಅರಮನೆಗೂ ಆಶ್ರಮಕ್ಕೂ ನಂಟು ಬೆಳೆದಿದೆ. ಆಗಿದ್ದಾಯಿತು. ಇನ್ನು ಇವಳನ್ನು ನಿನ್ನ ಅರಮನೆಗೆ ಕಳಿಸಿಕೊಡುತ್ತಿದ್ದೇವೆ. ನಿನ್ನ ಪತ್ನಿಯರಲ್ಲಿ ಸಾಮಾನ್ಯಪ್ರತಿಪತ್ತಿಪೂರ್ವಕವಾಗಿ ಇವಳನ್ನು ಕಾಣು” ಎಂದು ಕಾಶ್ಯಪರು ಸಂದೇಶ ಕಳಿಸುತ್ತಿದ್ದಾರೆ. 

“ಸಾಮಾನ್ಯಪ್ರತಿಪತ್ತಿಪೂರ್ವಕ” ಎನ್ನುವ ಕಾಳಿದಾಸನ  ಪದಪ್ರಯೋಗ ನಿಜಕ್ಕೂ ಅತ್ಯಂತ ವಿಹಿತವೂ ಔಚಿತ್ಯಪೂರ್ಣವೂ ಆಗಿದೆ. ಪ್ರತಿಪತ್ತಿಪೂರ್ವಕ ಎಂದರೆ ಮರ್ಯಾದೆಯಿಂದ ಅಥವಾ ಗೌರವಪೂರ್ವಕವಾಗಿ ಎಂದರ್ಥ. ಸಾಮಾನ್ಯ ಪ್ರತಿಪತ್ತಿಪೂರ್ವಕವಾಗಿ ಕಾಣು ಎಂದು ಕಣ್ವರು ಹೇಳುವಾಗ, ಶಕುಂತಲೆಯನ್ನು ನಿನ್ನ ನೂರು ಹೆಂಡಿರಲ್ಲಿ ಒಬ್ಬಳಾಗಿ ನೋಡು ಎಂದಿರಬಹುದೇ? ಇರಬಹುದು. ಅವರ ಮುಂದಿನ ಸಾಲು “ಇದಕ್ಕಿಂತ ಹೆಚ್ಚು ಹೆಣ್ಣು ಹೆತ್ತವರಿಗೆ ಬೇರೇನೂ ಬೇಡ” ಎಂಬಲ್ಲಿ ಅಸಹಾಯಕ ಭಾವವಿದೆ. ಆದರೆ, ವಿದ್ವಾಂಸರು ಈ “ಸಾಮಾನ್ಯ” ಎಂಬ ವಿಶೇಷಣಕ್ಕೆ ಹಲವು ಅರ್ಥಗಳನ್ನು ನೀಡಿದ್ದಾರೆ.  ಅವು ಹೀಗಿವೆ 

– ಸಾಮಾನ್ಯ = ಸಾಧಾರಣ ಎಂದರೆ ಸಾಧಾರಣವಾಗಿ ನೀಡಬೇಕಾದ ಗೌರವ

– ಸಾ ಮಾನ್ಯಾ = ಅವಳು ಮಾನ್ಯಳು ಎಂದು ವಿಶೇಷವಾಗಿ ನೀಡಬೇಕಾದ ಗೌರವ 

– ಸಾ ಮಾ ಅನ್ಯ – ಅವಳು ಬೇರೆಯವಳಲ್ಲ (ನನ್ನವಳೇ) ಎಂಬ ಗೌರವ

– ಮಾ ಎಂದರೆ  ಲಕ್ಷ್ಮೀ. ಸಾ ಮಾ ಎಂದರೆ “ಇವಳು ಲಕ್ಷ್ಮೀ”  ಎಂಬ ಗೌರವದಿಂದ ಕಾಣು ಎನ್ನುವ ಅರ್ಥವೂ ಬರುತ್ತದೆ. 

ಕಣ್ವರ ಸಂದೇಶವನ್ನು ಗಮನವಿಟ್ಟು ಕೇಳಿದವರಿಗೆ ಇನ್ನೂ ಹತ್ತು, ಹಲವು ಅರ್ಥಗಳು ಹೊಳೆಯಬಹುದು !

ಏನೇ ಆಗಲಿ,  ಕಣ್ವರು ಹೆಣ್ಣು ಹೆತ್ತವರ ಅಳಲನ್ನು ಇಲ್ಲಿ ಅದ್ಭುತವಾಗಿ  ವ್ಯಕ್ತಪಡಿಸುತ್ತಿದ್ದಾರೆ. ರಾಜನೊಬ್ಬನಿಗೆ ಮಹರ್ಷಿಯು ಧರ್ಮ-ಅಧರ್ಮಗಳ ವಿವೇಕವನ್ನು ತಿಳಿಹೇಳುವ ರೀತಿಯಲ್ಲಿಯೂ ಈ ಶ್ಲೋಕವನ್ನು ಅರ್ಥೈಸಬಹುದು. ರಾಜನಿಗೆ ಬುದ್ಧಿ ಹೇಳಿದ್ದಾಯಿತು. ಇನ್ನು ಶ್ಲೋಕಚತುಷ್ಟಯದ ಅಂತಿಮ ಎಂದರೆ ನಾಲ್ಕನೇ ಶ್ಲೋಕದಲ್ಲಿ ಮಗಳಿಗೆ ಬುದ್ಧಿ ಹೇಳುತ್ತಾರೆ. ಅದು ಹೀಗಿದೆ : 

ಶುಶ್ರೂಷಸ್ವ ಗುರೂನ್ಕುರು ಪ್ರಿಯಸಖೀವೃತ್ತಿಂ ಸಪತ್ನೀಜನೇ

ಭರ್ತುರ್ವಿಪ್ರಕೃತಾಽಪಿ ರೋಷಣತಯಾ ಮಾ ಸ್ಮ ಪ್ರತೀಪಂ ಗಮಃ ।

ಭೂಯಿಷ್ಠಂ ಭವ ದಕ್ಷಿಣಾ ಪರಿಜನೇ ಭಾಗ್ಯೇಷ್ವನುತ್ಸೇಕಿನೀ

ಯಾಂತ್ಯೇವಂ ಗೃಹಿಣೀಪದಂ ಯುವತಯೋ ವಾಮಾಃ ಕುಲಸ್ಯಾಧಯಃ ॥4॥  

ಭಾವಾರ್ಥ 

ಗುರುಹಿರಿಯರನ್ನು ಗೌರವದಿಂದ ಉಪಚರಿಸು, ನಿನ್ನ ಸಪತ್ನಿ (ಸವತಿ) ಯರೊಂದಿಗೆ ಸ್ನೇಹ-ಪ್ರೀತಿಯಿಂದಿರು,ಗಂಡ ಮುನಿಸಿಕೊಂಡು ತಿರಸ್ಕರಿಸಿದರೂ ವಿಪರೀತವಾಗಿ ಕೋಪಗೊಳ್ಳಬೇಡ, ಅರಮನೆಯ ಸೇವಕ-ಸೇವಕಿಯರೊಂದಿಗೆ ಉದಾರತೆಯಿಂದ ವರ್ತಿಸು, ಭಾಗ್ಯ(ಐಶ್ವರ್ಯ) ದಿಂದ ಬೀಗಬೇಡ , ಯುವತಿಯರು ಗೃಹಿಣೀಪದಕ್ಕೆ ಕಾಲಿಡಬೇಕಾದರೆ ಈ ಎಲ್ಲವನ್ನೂ ಪಾಲಿಸಬೇಕು . ಹಾಗೆ ಮಾಡದೆ ಅಡ್ಡ ದಾರಿಹಿಡಿಯುವವರು ಕುಲಕ್ಕೆ ಕೆಟ್ಟ ಹೆಸರು ತರುತ್ತಾರೆ.

ಕಾಡಿನಿಂದ ಅರಮನೆಗೆ ಹೋಗುವ ಶಕುಂತಲೆಗೆ ಅಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ  ಔಚಿತ್ಯ ಇಲ್ಲಿ ಮಹರ್ಷಿಗಳು  ತಿಳಿಹೇಳುತ್ತಿದ್ದಾರೆ. ಮೊದಲಿಗೆ ಅರಮನೆಯ  ಗುರುಹಿರಿಯರನ್ನು ಗೌರವದಿಂದ ಕಾಣುವಲ್ಲಿ ಯಾವ ಲೋಪವೂ ಆಗಬಾರದು ಎನ್ನುತ್ತಾರೆ. ಈಗಾಗಲೇ ಶಕುಂತಲೆಯಿಂದ  ಈ ಅಚಾತುರ್ಯ ನಡೆದು ಹೋಗಿ ಆಕೆ  ದೂರ್ವಾಸರ ಶಾಪಕ್ಕೆ ತುತ್ತಾಗಿಬಿಟ್ಟಿದ್ದಾಳೆ. ಗುರುಹಿರಿಯರಿಗೆ ಶುಶ್ರೂಷೆ ಮಾಡಿ ಅವರ ಪ್ರೀತಿಗೆ ಪಾತ್ರಳಾಗಿ ಅರಮನೆಯಲ್ಲಿಯೂ ಮುದ್ದು ಮಗಳಾಗಿರಲಿ ಎನ್ನುವುದು ಕಣ್ವರ ಆಶಯ. ಇನ್ನು ಅಂತಃಪುರದ ಉಳಿದ ರಾಣಿಯರ ಜೊತೆಗೆ ಸ್ನೇಹಭಾವದಿಂದ ವರ್ತಿಸುವುದೂ ಅಷ್ಟೇ ಮುಖ್ಯ. ಸವತಿ ಮತ್ಸರ ಶಕುಂತಲೆಯಲ್ಲಿ ಅಥವಾ ದುಷ್ಯಂತನ ಇತರ ಪತ್ನಿಯರಲ್ಲಿ ಉಂಟಾಗದಿರಲಿ, ಎಲ್ಲರೂ ಸಹಬಾಳ್ವೆ ನಡೆಸಬೇಕು ಎಂದು ಕಣ್ವರು ಉಪದೇಶಿಸುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಶಕುಂತಲೆ ಬಾಳ್ವೆ ನಡೆಸಬೇಕಾದದ್ದು ದುಷ್ಯಂತನೊಂದಿಗೆ. ಜೀವನಪರ್ಯಂತ ಅವನ ಸಹಧರ್ಮಿಣಿಯಾಗಿರಬೇಕು. ಅವನಿಗೆ ವಿಶ್ವವನ್ನೇ ಆಳುವ ಚಕ್ರವರ್ತಿಯಂತಹ ಪುತ್ರನನ್ನು ನೀಡಬೇಕು. ಕ್ಷುಲ್ಲಕ ಕಾರಣಗಳಿಗೆ ಅವನೊಂದಿಗೆ ಮನಸ್ತಾಪ ಮಾಡಿಕೊಳ್ಳಬಾರದು. ಏನಾದರೂ ಅವನು ಕೋಪಗೊಂಡರೆ ಇವಳು ದ್ವೇಷ  ಸಾಧಿಸಬಾರದು. ತನ್ನ ಕೋಪವನ್ನು ನಿಯಂತ್ರಿಸಲು ಕಲಿಯಬೇಕು. ಒಂದು ದಾಂಪತ್ಯದಲ್ಲಿ ಸಾಮರಸ್ಯವನ್ನು ಕಾಪಾಡುವ ಜವಾಬ್ದಾರಿ ಹೆಣ್ಣಿನ ಮೇಲೆ ಎಂದು ಕಣ್ವರು ಇಲ್ಲಿ ಸೂಕ್ಷ್ಮವಾಗಿ ಹೇಳುತ್ತಿದ್ದಾರೆ. ಕೇವಲ ಅಂತಃಪುರದ ಒಳಗೆ ಸುಖವಾಗಿದ್ದಾರೆ ಸಾಕೆ?  ಅರಮನೆಯ ಪರಿಚಾರಕರನ್ನು ತನ್ನ ಬಿಗಿಮುಷ್ಟಿಯಿಂದ ಮೇಲುಸ್ತುವಾರಿ ಮಾಡದೆ, ಬಿಚ್ಚುಗೈಯಿಂದ ಅವರಲ್ಲಿ ಉದಾರತೆ ತೋರಿದರೆ , ಕಷ್ಟಕಾಲದಲ್ಲಿ ಅವರೇ ಆಸರೆಯಾಗುತ್ತಾರೆ. ನಾಳೆ ಶಕುಂತಲೆಯನ್ನು ಚೆನ್ನಾಗಿ ಕಾಪಾಡುತ್ತಾರೆ ಎನ್ನುವುದು ಕಣ್ವರ ಆಶಯ. ನಿನ್ನ ಭಾಗ್ಯವನ್ನು ಬೇರೆಯವರ  ಎದುರು ಬೀಗಬೇಡ ಎಂದು ಬೇರೆ ಕಣ್ವರು ಹೇಳುತ್ತಾರೆ. ಏನಿದರರ್ಥ? ಶಕುಂತಲೆಯೋ ಕಾಡಿನಲ್ಲಿ ನಾರುಬಟ್ಟೆಯುಟ್ಟು ಹೂವಿನ ಅಲಂಕಾರ ಮಾಡಿಕೊಂಡು ಬೆಳೆದವಳು. ಇದಕ್ಕಿದ್ದಂತೆ ಅರಮನೆಯ ಸಂಪತ್ತು, ಐಶ್ವರ್ಯಗಳು ಅವಳ ತಲೆಗೇರಬಹುದು. ತನ್ನ ಹೊಟ್ಟೆಯಲ್ಲಿ ಹುಟ್ಟುವ ಮಗು ಚಕ್ರವರ್ತಿಯಾಗುತ್ತಾನೆ ಎಂದು ಉಳಿದವರ ಮುಂದೆ ಜಂಭದಿಂದ ಮೆರೆಯಬಹುದು. ಹೀಗಾಗಿಯೇ ಭಾಗ್ಯದ ಮದ ನಿನಗೆ ಸೋಂಕದಿರಲಿ ಎಂದು ಕಣ್ವರು ಉಪದೇಶಿಸುತ್ತಿದ್ದಾರೆ. ಕೊನೆಯಲ್ಲಿ “ಯುವತಿಯರು ವಿವಾಹದ ನಂತರ ಈ ರೀತಿಯಲ್ಲಿ ನಡೆದುಕೊಳ್ಳುವುದೇ ನಮ್ಮ ಸಂಪ್ರದಾಯ. ಇದನ್ನು ಬಿಟ್ಟು ಅಡ್ಡಹಾದಿ ಹಿಡಿಯುವ ಹೆಣ್ಣು ಕುಲಕ್ಕೆ ಕಂಟಕ,  ಜೋಕೆ !” ಎಂದು ಬೇರೆ ಹೇಳುತ್ತಿದ್ದಾರೆ.  

ಅಬ್ಬಾ! ಪ್ರೀತಿಯ ಪುತ್ರಿಗೆ ವಿದಾಯ ಹೇಳುತ್ತಾ  ಗಂಟಲು ತುಂಬಿಬರುತ್ತಿದ್ದರೂ  ಕಣ್ವರ  ಸಂಯಮ, ವಿವೇಕ ಮತ್ತು ಸಮಚಿತ್ತ ಯಾವ ಬಗೆಯದ್ದು ಎಂದು ಯಾರಿಗಾದರೂ ಬೆರಗಾಗುತ್ತದೆ. ಈ ಶ್ಲೋಕದಲ್ಲಿ  ಯುವತಿಯೊಬ್ಬಳು ಹೇಗೆ ಉತ್ತಮ ಗೃಹಿಣಿಯಾಗಿ ಸಂಸಾರದ ಬೆಳಕಾಗಬೇಕು ಎಂಬ ವಿವರಣೆಯಿದೆ. ಹೀಗೆ ನಡೆದುಕೊಳ್ಳದಿದ್ದರೆ  ಏನು ಅನಾಹುತವಾಗಬಹುದು ಎಂಬ ಎಚ್ಚರಿಕೆಯೂ ಇದೆ. ಕೇವಲ ಹೆಣ್ಣಿಗೇ ಏಕಿಷ್ಟು ಕಟ್ಟಳೆ ಎಂದು ಕೇಳುವವರು , ಕಣ್ವರು ಹಿಂದಿನ ಶ್ಲೋಕದಲ್ಲಿಯೇ ದುಷ್ಯಂತನಿಗೆ ಬುದ್ಧಿ ಹೇಳಿದ್ದಾರೆ ಎಂದು ಗಮನಿಸಬೇಕು.       

ಹೀಗೆ ನಾಟಕದ ನಾಲ್ಕನೇ ಅಂಕದಲ್ಲಿ ಮಾತ್ರ ರಂಗದ ಮೇಲೆ ಕಾಣಿಸಿಕೊಳ್ಳುವ ಕಣ್ವರು ವೀಕ್ಷಕರ ಮನಗೆದ್ದಿದ್ದಾರೆ. ಲೋಕವಿಖ್ಯಾತವಾದ ಶ್ಲೋಕಚತುಷ್ಟಯ ಇಂದಿಗೂ ಎಷ್ಟು ಪ್ರಸ್ತುತ ಅಲ್ಲವೇ? ರಚಿಸದ ಶತಮಾನಗಳ ನಂತರವೂ ರಸಿಕರು ಕೊಂಡಾಡುವ ಕಾಳಿದಾಸನ ಈ ಕಾವ್ಯ ಪ್ರಜ್ಞೆಗೆ ತಲೆದೂಗದೆ ಇರಲಾದೀತೇ ? 

ನೀವೇ ಹೇಳಿ. 

— ನಾಲ್ಕು ಶ್ಲೋಕಗಳ ಪದಚ್ಛೇದ ಮತ್ತು ಪ್ರತ್ಯೇಕ ಅರ್ಥ 

ಯಾಸ್ಯತ್ಯದ್ಯ ಶಕುಂತಲೇತಿ ಹೃದಯಂ ಸಂಸೃಷ್ಟಮುತ್ಕಂಠಯಾ,

ಕಂಠಃ  ಸ್ತಂಭಿತಬಾಷ್ಪವೃತ್ತಿಕಲುಷಶ್ಚಿಂತಾಜಡಂದರ್ಶನಮ್ । 

ವೈಕ್ಲವ್ಯಂ ಮಮ ತಾವದೀದೃಶಮಿದಂ ಸ್ನೇಹಾದರಣ್ಯೌಕಸಃ,

ಪೀಡ್ಯಂತೇ  ಗೃಹಿಣಃ  ಕಥಂ ನ ತನಯಾವಿಶ್ಲೇಷದುಃಖೈರ್ನವೈಃ ॥ 1॥

ಯಾಸ್ಯತಿ (ಹೊರಡುತ್ತಾಳೆ) ಅದ್ಯ (ಇಂದು) ಶಕುಂತಲೇತಿ (ಶಕುಂತಲಾ ಎಂದು) ಹೃದಯಂ (ಹೃದಯವು) ಸಂಸೃಷ್ಟಮ್ (ತುಂಬಿಹೋಗಿದೆ) ಉತ್ಕಂಠಯಾ (ವ್ಯಾಕುಲತೆಯಿಂದ) ಕಂಠಃ (ಗಂಟಲು) ಸ್ತಂಭಿತ (ಕಟ್ಟಿಹೋಗಿ /ನಿಂತು) ಬಾಷ್ಪವೃತ್ತಿಕಲುಷಃ (ಗದ್ಗದಿತವಾಗಿದೆ)  ಚಿಂತಾಜಡಂ (ಏನೂ ತೋಚದಂತಾಗಿದೆ) ದರ್ಶನಮ್ (ದೃಷ್ಟಿಗೆ) ವೈಕ್ಲವ್ಯಂ (ವೈಕಲ್ಯ )  ಮಮ (ನನ್ನ ) ತಾವದೀದೃಶಮಿದಂ (ಈ ಪರಿಯಾಗಿ)   ಸ್ನೇಹಾತ್ (ಪ್ರೀತಿಯಿಂದಾದ ) ಅರಣ್ಯೌಕಸಃ (ವನವಾಸಿಯೊಬ್ಬನಿಗೆ) ಪೀಡ್ಯಂತೇ  (ಪೀಡಿಸುತ್ತಿರಬಹುದು)  ಗೃಹಿಣಃ  (ಗೃಹಸ್ಥನಿಗೆ)  ಕಥಂ ನ  (ಹೇಗೆ ತಾನೇ) ತನಯಾವಿಶ್ಲೇಷದುಃಖೈಹ್  (ಮಗಳ ವಿಯೋಗ ದುಃಖ) ನವೈಃ (ಮೊದಲಬಾರಿಗೆ) ॥ 1॥

ಪಾತುಂ ನ ಪ್ರಥಮಂ ವ್ಯವಸ್ಯತಿ ಜಲಂ ಯುಷ್ಮಾಸ್ವಸಿಕ್ತೇಷು ಯಾ

ನಾ ದತ್ತೆ ಪ್ರಿಯಮಂಡನಾಪಿ ಭವತಾಂ ಸ್ನೇಹೇನ ಯಾ ಪಲ್ಲವಮ್ ।

ಆದೌ  ವಃ  ಕುಸುಮಪ್ರಸೂತಿ ಸಮಯೇ  ಯಸ್ಯಾ ಭವತ್ಯುತ್ಸವಃ  

ಸೇಯಂ ಯಾತಿ ಶಕುಂತಲಾ ಪತಿಗೃಹಂ ಸರ್ವೈರನುಜ್ಞಾಯತಾಮ್ ॥2॥

ಪಾತುಂ (ಕುಡಿಯುವುದು) ನ (ಇಲ್ಲವೋ)  ಪ್ರಥಮಂ (ಮೊದಲು) ಜಲಂ (ನೀರನ್ನು) ಯುಷ್ಮಾಸು(ನಿಮಗಳಿಗೆ)   ಆಸಿಕ್ತೇಷು (ನೀರುಣಿಸದೆ)  ಯಾ (ಯಾವಳು) ನಾ (ಇಲ್ಲವೋ) ದತ್ತೆ (ಕೀಳುವುದು) ಪ್ರಿಯಮಂಡನಾಪಿ (ಪ್ರಸಾದನ ಪ್ರಿಯೆ ಯಾದರೂ) ಭವತಾಂ (ನಿಮ್ಮ)  ಸ್ನೇಹೇನ (ಪ್ರೀತಿಯಿಂದಾಗಿ) ಯಾ  (ಯಾವಳು) ಪಲ್ಲವಮ್ (ಎಲೆಯನ್ನು) ।  ಆದೌ (ಮೊದಲ ಬಾರಿಗೆ)  ವಃ (ನಿಮ್ಮಗಳ) ಕುಸುಮಪ್ರಸೂತಿ (ಹೂವುಹುಟ್ಟುವ ) ಸಮಯೇ (ಹೊತ್ತಿನಲ್ಲಿ) ಯಸ್ಯಾ (ಯಾರ) ಭವತಿ (ಆಗುತ್ತಿತ್ತೋ) ಉತ್ಸವಃ (ಸಂಭ್ರಮ)   ಸಾ (ಇವಳು) ಇಯಂ (ಈ)  ಯಾತಿ (ಹೊರಟಿದ್ದಾಳೆ)  ಶಕುಂತಲಾ (ಶಕುಂತಲೆ ) ಪತಿಗೃಹಂ (ಗಂಡನ ಮನೆಗೆ )  ಸರ್ವೈಃ (ಎಲ್ಲರೂ) ಅನುಜ್ಞಾಯತಾಮ್  (ಅಪ್ಪಣೆ ನೀಡಬೇಕು )॥2॥

ಅಸ್ಮಾನ್ಸಾಧು ವಿಚಿಂತ್ಯ  ಸಂಯಮಧನಾನುಚ್ಚೈ ಕುಲಂ ಚಾತ್ಮನಃ

ತ್ವಯ್ಯಸ್ಯಾಃ ಕಥಮಪ್ಯಅಬಾಂಧವಕೃತಾಂ ಸ್ನೇಹಪ್ರವೃತ್ತಿಂ ಚ ತಾಮ್ ।

ಸಾಮಾನ್ಯಪ್ರತಿಪತ್ತಿಪೂರ್ವಕಮಿಯಂ ದಾರೇಷು ದೃಶ್ಯಾತ್ವಯಾ

ಭಾಗ್ಯಾಯತ್ತಮತಃ ಪರಂ ನ ಖಲು ತದ್ವಾಚ್ಯಂ ವಧೂಬಂಧುಭಿಃ ॥3॥

ಅಸ್ಮಾನ್ (ನಮಗೆ) ಸಾಧು (ಸೂಕ್ತ)  ವಿಚಿಂತ್ಯ (ಯೋಚಿಸಿ )  ಸಂಯಮಧನಾನ್ (ಸಂಯಮವೇ ಧನ) ಉಚ್ಚೈ  (ಉಚ್ಚ ) ಕುಲಂ (ಕುಲದ)  ಚ (ಮತ್ತು)  ಆತ್ಮನಃ (ನಿನ್ನ) ತ್ವಯಿ (ನಿನ್ನ ಮೂಲಕ) ಅಸ್ಯಾಃ  (ಅವಳ) ಕಥಮ್ ಅಪಿ (ಹೇಗೋ)  ಅಬಾಂಧವಕೃತಾಂ (ಯಾವ ಬಾಂಧವರೂ ಇಲ್ಲದೆಯೇ/ಸಹಜವಾಗಿಯೇ )  ಸ್ನೇಹಪ್ರವೃತ್ತಿಂ (ಪ್ರೇಮವ್ಯಾಪಾರ) ಚ (ಮತ್ತು) ತಾಮ್ (ಅವಳನ್ನು) । ಸಾಮಾನ್ಯಪ್ರತಿಪತ್ತಿಪೂರ್ವಕಂ (ಸಾಧಾರಣ ಸಮ್ಮಾನಪೂರ್ವಕವಾಗಿ) ಇಯಂ (ಇವಳನ್ನು) ದಾರೇಷು (ನಿನ್ನ ಪತ್ನಿಯರಲ್ಲಿ) ದೃಶ್ಯಾ(ನೋಡಬೇಕು)  ತ್ವಯಾ (ನಿನ್ನಿಂದ) ಭಾಗ್ಯಾಯತ್ತಂ (ಭಾಗ್ಯಾಧೀನರಾದವರು) ಅತಃ (ಇದಕ್ಕಿಂತ)  ಪರಂ (ಹೆಚ್ಚು) ನ  (ಇಲ್ಲ) ಖಲು (ವಸ್ತುತಃ) ತದ್ (ಇದನ್ನು) ವಾಚ್ಯಂ  (ಹೇಳಬಹುದು)  ವಧೂಬಂಧುಭಿಃ (ಹೆಣ್ಣಿನ ಕಡೆಯವರು)॥3॥

ಶುಶ್ರೂಷಸ್ವ ಗುರೂನ್ಕುರು ಪ್ರಿಯಸಖೀವೃತ್ತಿಂ ಸಪತ್ನೀಜನೇ

ಭರ್ತುರ್ವಿಪ್ರಕೃತಾಽಪಿ ರೋಷಣತಯಾ ಮಾ ಸ್ಮ ಪ್ರತೀಪಂ ಗಮಃ ।

ಭೂಯಿಷ್ಠಂ ಭವ ದಕ್ಷಿಣಾ ಪರಿಜನೇ ಭಾಗ್ಯೇಷ್ವನುತ್ಸೇಕಿನೀ

ಯಾಂತ್ಯೇವಂ ಗೃಹಿಣೀಪದಂ ಯುವತಯೋ ವಾಮಾಃ ಕುಲಸ್ಯಾಧಯಃ ॥4॥  

ಶುಶ್ರೂಷಸ್ವ (ಶುಶ್ರೂಷೆ ಮಾಡುವುದು )  ಗುರೂನ್ (ಗುರುಗಳಿಗೆ) ಕುರು (ಮಾಡು) ಪ್ರಿಯಸಖೀವೃತ್ತಿಂ (ಪ್ರೀತಿಯ ಸಖಿಯರಂತೆ ವರ್ತನೆ)  ಸಪತ್ನೀಜನೇ (ಅವನ ಹೆಂಡತಿಯರಲ್ಲಿ) ಭರ್ತುಃ (ಗಂಡನ)  ವಿಪ್ರಕೃತಾ(ತಿರಸ್ಕಾರ) ಅಪಿ (ಆದರೂ) ರೋಷಣತಯಾ(ಕ್ರೋಧವಶಳಾಗಿ) ಮಾ(ಬೇಡ) ಸ್ಮ (ಇರಬೇಕು)  ಪ್ರತೀಪಂ (ವಿಪರೀತ) ಗಮಃ (ಹೋಗಬೇಡ) । ಭೂಯಿಷ್ಠಂ (ಬೇಕಾದಷ್ಟು) ಭವ (ಇರು) ದಕ್ಷಿಣಾ (ಉದಾರತೆದಿಂದ) ಪರಿಜನೇ(ಸೇವಕಜನರಲ್ಲಿ) ಭಾಗ್ಯೇಷು (ಐಶ್ವರ್ಯ ದಿಂದ) ಅನುತ್ಸೇಕಿನೀ (ಬೀಗಬೇಡ) ಯಾಂತಿ (ನಡೆದುಕೊಳ್ಳುವ) ಏವಂ (ಹೀಗೆ) ಗೃಹಿಣೀಪದಂ (ಗೃಹಿಣಿಯ ಹಾದಿಯಲ್ಲಿ ) ಯುವತಯಃ (ಯುವತಿಯರು) ವಾಮಾಃ (ಅಡ್ಡ ಹಾದಿ ಹಿಡಿಯುವವರು) ಕುಲಸ್ಯ (ಕುಲಕ್ಕೆ) ಆಧಯಃ (ಶಾಪ/ರೋಗ) ॥4॥

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.