ನಮ್ಮ ಹಿಂದಿನ ಲೇಖನದಲ್ಲಿ ಮನುಸ್ಮೃತಿಯ ಎರಡನೇ ಅಧ್ಯಾಯದ 213ನೇ ಶ್ಲೋಕದ “ನ ಸ್ತ್ರೀ ಸ್ವಾತಂತ್ರ್ಯಮರ್ಹತಿ ” ಎಂಬ ಸಾಲು ಯಾವ ಬಗೆಯಲ್ಲಿ ಅಪಾರ್ಥಕ್ಕೊಳಗಾಗಿದೆ ಎಂದು ಅರಿತೆವು. ವಾಸ್ತವವಾಗಿ ಈ ಶ್ಲೋಕವು ಸ್ತ್ರೀದ್ವೇಷಿ ಆಗಿರದೆ ಪುರುಷರಿಗೆ ಅವರ ಕರ್ತವ್ಯ ನಿಷ್ಠೆಯನ್ನು ನೆನಪುಮಾಡಿಕೊಡುತ್ತದೆ ಎಂದೂ ಸಹ ತಿಳಿದುಕೊಂಡೆವು.
ಈಗ ಇದರ ಮುಂದಿನ ಎಂದರೆ ಮನುಸ್ಮೃತಿಯ 214ನೇ ಶ್ಲೋಕವನ್ನು ಗಮನಿಸೋಣ ಬನ್ನಿ. ಇದಕ್ಕೂ ಸ್ತ್ರೀದ್ವೇಷದ ಹಣೆಪಟ್ಟಿ ಕಟ್ಟಲಾಗಿದೆ.
अविद्वांसमलं लोके विद्वांसमपि वा पुनः।
प्रमदा ह्युत्पथं नेतुं कामक्रोधवशानुगम्॥ (2-214)
ಅವಿದ್ವಾಂಸಮಲಂ ಲೋಕೇ ವಿದ್ವಾಂಸಮಪಿ ವಾ ಪುನಃ।
ಪ್ರಮದಾ ಹ್ಯುತ್ಪಥಂ ನೇತುಂ ಕಾಮಕ್ರೋಧವಶಾನುಗಮ್॥ (2-214)
ಈ ಶ್ಲೋಕದ ಸ್ಥೂಲ ಭಾವಾರ್ಥ ಹೀಗಿದೆ : “ಪ್ರಮದೆಯರು (ಸ್ತ್ರೀಯರು) ತಮ್ಮ ಕುಲಕ್ಕೆ ಸಹಜವೆನ್ನಬಹುದಾದ ಸಾಮರ್ಥ್ಯದಿಂದ ಪಾಮರರನ್ನೇನು ಪಂಡಿತರನ್ನೂ ಮಾರ್ಗಭ್ರಷ್ಟರನ್ನಾಗಿಸಿ, ಅವರುಗಳು ಕಾಮಕ್ರೋಧಗಳ ಅಡಿಯಾಳುಗುವಂತೆ ಮಾಡಿಬಿಡುತ್ತಾರೆ.”
ಮೇಲ್ನೋಟಕ್ಕೆ ಈ ಭಾವಾರ್ಥವು ಸ್ತ್ರೀಯರು ಪುರುಷರನ್ನು ಕಾಮಕ್ಕೆ ಎಳೆಯುತ್ತಾರೆ ಎನ್ನುವ ಅಪಾರ್ಥಕ್ಕೆ ದೂಡುವ ಸಾಧ್ಯತೆಯಿದೆ. ಹಾಗೆ ಮಾಡಿದ್ದಲ್ಲಿ ತಪ್ಪಾಗುವುದಲ್ಲದೆ ಮನುಸ್ಮೃತಿಯ ಮೂಲದೃಷ್ಟಿಗೆ ಸರಿಹೊಂದುವುದಿಲ್ಲ ಎಂದು ನಾವು ಗಮನಿಸಬೇಕು. ಈ ಶ್ಲೋಕದ ನಿಜಾರ್ಥವನ್ನು ಅರಿಯಬೇಕಾದರೆ ಪ್ರಸಿದ್ಧ ವ್ಯಾಖ್ಯಾನಕಾರರು ಇದನ್ನು ಹೇಗೆ ವಿಶ್ಲೇಷಿಸಿದ್ದಾರೆ ಎಂದು ತಿಳಿದುಕೊಳ್ಳಬೇಕು.
ಮೇಧಾತಿಥಿ ಹೀಗೆ ಹೇಳುತ್ತಾನೆ :
“न चैतन्मन्तव्यं नियमितानि येन चिरम् इन्द्रियाणि अतिगुरुपातकं गुरुदारेषु दुष्टेन भावेन प्रेक्षणमपि इति य एवं वेद तस्य न दोषः पादस्पर्शादौ इति। यतः एवंविधान् अपि दोषान्यो जानीते, यो न किञ्चिज्जानीते तौ स्त्रीविषये समानौ, यतः नात्र विद्वत्ता प्रभवति। शक्नुवन्ति स्त्रियः सर्वं मुख्यम् अमार्गं लोकशास्त्रविरुद्धं विषयं नेतुं=प्रापयितुं, कामक्रोधवशानुगं सन्तम्। कामक्रोधाभ्यां यः सम्बद्ध्यते इत्यर्थः। अवस्थाविशेषोपलक्षणार्थं च एतत्। अत्यन्तबालम् अत्यन्तवृद्धं च प्राप्तयोगप्रकर्षणं च वर्जयित्वा येन निरन्वयमुत्थिताः संसारपुरुषधर्माः तद्व्यतिरेकेण न कश्चित्पुरुषः अस्ति यः स्त्रीभिः नाकॄष्यते।अयःकान्तेन इव अवलेहः। नचात्र स्त्रीणां प्रभविष्णुता वस्तुस्वाभाव्यात्तरुणीजनदर्शने पुंसाम् उन्मथ्यते चित्तं विशेषतो ब्रह्मचारिणाम्”।
“ನ ಚೈತನ್ಮಂತವ್ಯಮ್ ನಿಯಮಿತಾನಿ ಯೇನ ಚಿರಮ್ ಇಂದ್ರಿಯಾಣಿ ಅತಿಗುರುಪಾತಕಂ ಗುರುದಾರೇಷು ದುಷ್ಟೇನ ಭಾವೇನ ಪ್ರೇಕ್ಷಣಮಪಿ ಇತಿ ಯ ಏವಂ ವೇದ ತಸ್ಯ ನ ದೋಷಃ ಪಾದಸ್ಪರ್ಶಾದೌ ಇತಿ। ಯತಃ ಏವಂವಿಧಾನ್ ಅಪಿ ದೋಷಾನ್ಯೋ ಜಾನೀತೇ, ಯೋ ನ ಕಿಂಚಿಜ್ಜಾನೀತೆ ತೌ ಸ್ತ್ರೀವಿಷಯೇ ಸಮಾನೌ, ಯತಃ ನಾತ್ರ ವಿದ್ವತ್ತಾ ಪ್ರಭವತಿ। ಶಕ್ನುವಂತಿ ಸ್ತ್ರಿಯಃ ಸರ್ವಂ ಮುಖ್ಯಮ್ ಅಮಾರ್ಗಂ ಲೋಕಶಾಸ್ತ್ರವಿರುದ್ಧಂ ವಿಷಯಂ ನೇತುಂ=ಪ್ರಾಪಯಿತುಂ, ಕಾಮಕ್ರೋಧವಶಾನುಗಂ ಸಂತಂ । ಕಾಮಕ್ರೋಧಾಭ್ಯಾಂ ಯಃ ಸಂಬದ್ಧ್ಯತೇ ಇತ್ಯರ್ಥಃ। ಅವಸ್ಥಾವಿಶೇಷೋಪಲಕ್ಷಣಾರ್ಥಂ ಚ ಏತತ್। ಅತ್ಯಂತಬಾಲಂ ಅತ್ಯಂತವೃದ್ಧಂ ಚ ಪ್ರಾಪ್ತಯೋಗಪ್ರಕರ್ಷಣಂ ಚ ವರ್ಜಯಿತ್ವಾ ಯೇನ ನಿರನ್ವಯಮುತ್ಥಿತಾಃ ಸಂಸಾರಪುರುಷಧರ್ಮಾಃ ತದ್ವ್ಯತಿರೇಕೇಣ ನ ಕಶ್ಚಿತ್ಪುರುಷಃ ಅಸ್ತಿ ಯಃ ಸ್ತ್ರೀಭಿಃ ನಾಕೄಷ್ಯತೇ।ಅಯಃಕಾನ್ತೇನ ಇವ ಅವಲೇಹಃ। ನಚಾತ್ರ ಸ್ತ್ರೀಣಾಂ ಪ್ರಭವಿಷ್ಣುತಾ ವಸ್ತುಸ್ವಾಭಾವ್ಯಾತ್ತರುಣೀಜನದರ್ಶನೇ ಪುಂಸಾಮ್ ಉನ್ಮಥ್ಯತೇ ಚಿತ್ತಂ ವಿಶೇಷತೋ ಬ್ರಹ್ಮಚಾರಿಣಾಮ್”।
ಈ ವ್ಯಾಖ್ಯಾನವನ್ನು ಯಥಾರ್ಥವಾಗಿ ಕನ್ನಡದಲ್ಲಿ ಹೀಗೆ ಹೇಳಬಹುದು : “ಗುರುಪತ್ನಿಯನ್ನು ಸಲ್ಲದ ಭಾವನೆಗಳಿಂದ ಕಾಣುವುದು/ಮುಟ್ಟುವುದು ಘೋರಪಾಪ. ಆದರೆ ದೀರ್ಘಕಾಲ ಇಂದ್ರಿಯ ನಿಗ್ರಹವನ್ನು ಸಾಧಿಸಿದ ಬ್ರಹ್ಮಚಾರಿಗಳು ಗುರುಪತ್ನಿಯ ಪಾದಸ್ಪರ್ಶ ಮಾಡುವುದರಲ್ಲಿ ದೋಷವಿಲ್ಲ. ಇಂದ್ರಿಯ ನಿಗ್ರಹದ ಅಭ್ಯಾಸವಿರದ ಪುರುಷರಲ್ಲಿ ಈ ಬಗೆಯ ಸರಿ-ತಪ್ಪುಗಳ ಗ್ರಹಿಕೆ ಇರಲಿ ಇಲ್ಲದಿರಲಿ, ಅವರುಗಳು ಸ್ತ್ರೀಯರ ಮುಂದೆ ಸಮಾನರೇ ಆಗಿರುತ್ತಾರೆ. ಇಲ್ಲಿ ಶಾಸ್ತ್ರಗಳ ಗ್ರಹಿಕೆಗೆ ಯಾವುದೇ ಅವಕಾಶವಿಲ್ಲ. ಏಕೆಂದರೆ ಹೆಣ್ಣಿನ ಮೋಹಕ್ಕೊಳಗಾದ ಯಾವ ಪುರುಷನಾದರೂ, ಪಂಡಿತನಾಗಲಿ ಪಾಮರನಾಗಲಿ ತನ್ನ ಇಂದ್ರಿಯಗಳ ಬಯಕೆಗೆ ಬಲಿಯಾಗುತ್ತಾನೆ. ಕಾಮ(ಹೆಣ್ಣಿನ ಸಹವಾಸ)ವನ್ನು ಅಥವಾ ಕ್ರೋಧವನ್ನು ಹತೋಟಿಯಲ್ಲಿ ಇಟ್ಟುಕೊಂಡಿರುವ ಪುರುಷರನ್ನು ಅಡ್ಡದಾರಿಗೆ ಎಳೆಯುವ ಸಾಮರ್ಥ್ಯ ಸ್ತ್ರೀಯರಿಗಿದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಹಾಗೆಯೇ ಕಾಮ-ಕ್ರೋಧಗಳ ದಾಸನಾಗುವುದು ಕೇವಲ ಶಾಸ್ತ್ರಕ್ಕೆ ವಿರುದ್ಧವಷ್ಟೇ ಅಲ್ಲ, ಪ್ರಕೃತಿ ನಿಯಮಕ್ಕೂ ಅಸಹಜ ಎಂಬ ಅರ್ಥ ಇಲ್ಲಿದೆ. ಈ ಕಾಮ-ಕ್ರೋಧ ಎಂಬ ಪದಗಳು ಬೇರೇನೂ ಅಲ್ಲ. ಮನುಷ್ಯನೊಬ್ಬನ ಜೀವನದ ವಿವಿಧ ಹಂತಗಳಷ್ಟೆ. ಅತ್ಯಂತ ಚಿಕ್ಕ ಬಾಲಕರು, ಅತ್ಯಂತ ವೃದ್ಧರು ಅಥವಾ ಯೋಗಿಗಳನ್ನು ಬಿಟ್ಟು ಉಳಿದೆಲ್ಲ ಪುರುಷರಿಗೆ ಸ್ತ್ರೀಯರಲ್ಲಿ ಆಕರ್ಷಣೆ ಉಂಟಾಗುವುದು ಸಹಜ. ಈ ಆಕರ್ಷಣೆಯು ಕಬ್ಬಿಣವು ಅಯಸ್ಕಾಂತವನ್ನು ಆಕರ್ಷಿಸುವಷ್ಟೇ ಸಹಜ ಪ್ರಕ್ರಿಯೆ ಎಂದು ಹೇಳಬಹುದು.ಇದಕ್ಕೆ ಕಾರಣ ಸ್ತ್ರೀಯರ ಮೇಲ್ಗೈ ಎಂದು ಹೇಳಬಹುದೇ? ಖಂಡಿತಾ ಅಲ್ಲ. ಪ್ರಕೃತಿ ಸಹಜವಾಗಿ ಯುವತಿಯನ್ನು ನೋಡಿದಾಗ ಪುರುಷನ ಮೈಮನಗಳು ಅದರಲ್ಲೂ ಬ್ರಹ್ಮಚಾರಿಗಳ ಏಕಾಗ್ರತೆ ಕ್ಷಣಮಾತ್ರಕ್ಕಾದರೂ ಚಂಚಲವಾಗುತ್ತದೆ ಎಂದರೆ ಸುಳ್ಳಾಗದು.”
ಹೀಗೆ ಮೇಧಾತಿಥಿಯ ವ್ಯಾಖ್ಯಾನದಿಂದ ಮನುಸ್ಮೃತಿಯ ಸಾಲುಗಳು ಸ್ತ್ರೀಯರ ಮೇಲೆ ಯಾವ ಬಗೆಯ ಅಪವಾದಗಳನ್ನೂ ಹೇರುತ್ತಿಲ್ಲ ಎಂದು ಸ್ಪಷ್ಟವಾಗುತ್ತದೆ. ಈ ಶ್ಲೋಕದಲ್ಲಿ ಅಪಾರ್ಥಕ್ಕೆ ಎಡೆಮಾಡಿಕೊಡಬಹುದಾದ ಮೂರು ಪದಗಳು ” प्रमदा ह्युत्पथं नेतुं” (ಪ್ರಮದಾ ಹ್ಯುತ್ಪಥಂ ನೇತುಂ). ಈ ಮೂರು ಪದಗಳನ್ನಷ್ಟೇ ಪ್ರತ್ಯೇಕವಾಗಿ ಓದಿಕೊಂಡರೆ ಖಂಡಿತವಾಗಿಯೂ ಅಪಾರ್ಥಮಾಡಿಕೊಳ್ಳುವವರು ಯಶಸ್ವಿಯಾಗುತ್ತಾರೆ !
ಆದರೆ ಹೀಗೆ ಒಂದು ಶ್ಲೋಕದ ಮೂರೇ ಪದಗಳನ್ನು ಮೇಲೆತ್ತಿ ಇಡೀ ಶ್ಲೋಕವನ್ನು ಅಪಾರ್ಥ ಮಾಡಿಕೊಳ್ಳುವುದು ಸರಿಯೇ? ಆಮೂಲಾಗ್ರವಾಗಿ ಒಂದು ಶ್ಲೋಕದ ಭಾವಾರ್ಥವನ್ನು ಅರಿತುಕೊಳ್ಳುವುದೇ ಸರಿಯಲ್ಲವೇ? ಈ ಕಾರಣಕ್ಕಾಗಿಯೇ ನಾವು ಮನುಸ್ಮೃತಿಯನ್ನು ಅಧ್ಯಯನ ಮಾಡುವಾಗ ವಿವಿಧ ಅಧಿಕೃತ ವ್ಯಾಖ್ಯಾನಕಾರರ ಮೊರೆಹೋಗಬೇಕಾಗುತ್ತದೆ.
ಮನುಸ್ಮೃತಿಯ ಈ ಶ್ಲೋಕವು ಸ್ತ್ರೀಯರ ಮೇಲೆ ಅಪವಾದ ಹೊರಿಸುವ ಕೆಲಸ ಮಾಡುತ್ತಿಲ್ಲ. ಬದಲಿಗೆ ಇದು ಪುರಷರಿಗೆ ಆತ್ಮಸಂಯಮದ ಪ್ರಾಮುಖ್ಯತೆಯನ್ನು ತಿಳಿಹೇಳುತ್ತದೆ ಎಂದು ಮೇಧಾತಿಥಿ ತನ್ನ ವ್ಯಾಖ್ಯಾನದಲ್ಲಿ ನಿಚ್ಚಳವಾಗಿ ಹೇಳಿಬಿಟ್ಟಿದ್ದಾನೆ.
ಕಾಮ-ಕ್ರೋಧಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವುದನ್ನು ಅಭ್ಯಸಿಸದ ಪುರುಷರು ತಮ್ಮ ದೈಹಿಕ ವಾಸನೆಗಳನ್ನು ತೀರಿಸಿಕೊಳ್ಳಲು ಹೆಣ್ಣಿನ ಸಂಗವನ್ನು ಬಯಸುತ್ತಾರೆ. ಹೀಗೆ ಬಯಸಿದಾಗ ಹೆಣ್ಣೊಂದನ್ನು ಕಂಡೊಡನೆಯೇ ತಮ್ಮ ಆತ್ಮಸಂಯಮವನ್ನು ಕಳೆದುಕೊಳ್ಳುತ್ತಾರೆ ಎಂದು ವ್ಯಖ್ಯಾನಕಾರ ಖಡಾಖಂಡಿತವಾಗಿ ಹೇಳಿದ್ದಾನೆ. ಹೀಗಾಗಿಯೇ ಇಂದ್ರಿಯನಿಗ್ರಹದ ಅಭ್ಯಾಸ ಮಾಡಿಕೊಳ್ಳುವುದು ಸೂಕ್ತ ಮಾರ್ಗ ಎಂದು ಸಹ ತಿಳಿಹೇಳಿದ್ದಾನೆ.
ಹೀಗಾಗಿ ಈ ಶ್ಲೋಕವು, ಸ್ತ್ರೀಯರ ಗಾಂಭೀರ್ಯ ಅಥವಾ ಅವರ ಪಾವಿತ್ರ್ಯತೆಗೆ ಯಾವ ರೀತಿಯ ಧಕ್ಕೆಯೂ ಉಂಟುಮಾಡಿಲ್ಲ. ಹೆಚ್ಚೆಂದರೆ ಹಿಂದಿನ ಲೇಖನದಲ್ಲಿ ಹೇಳಿದಂತೆ ಸಮಾಜದಲ್ಲಿ ವಾಸ್ತವಾಗಿ ಕಂಡುಬರುವ ಲೈಂಗಿಕ ಶೋಷಣೆಯಂತಹ ಪಿಡುಗನ್ನು ಎದುರಿಸಲು ಅತ್ಯಂತ ಸಹಜ ಮತ್ತು ಪ್ರಾಯೋಗಿಕ ಸಲಹೆ ನೀಡುವಲ್ಲಿ ಮನುಸ್ಮೃತಿಯ ಈ ಶ್ಲೋಕವನ್ನು ಅರ್ಥೈಸಬಹುದು.
ಈ ಸಂದರ್ಭದಲ್ಲಿ ರಾಘವಾನಂದನೆಂಬ ಮತ್ತೋರ್ವ ವ್ಯಾಖ್ಯಾನಕಾರ ಹೀಗೆ ಹೇಳುತ್ತಾನೆ –
“तत्र हेतुः कामक्रोधवशानुगमिति, क्रोधेन वशीभूतमिव जनाः कामेन वशीभूतं प्रमदाः इति वार्थः।”
“ತತ್ರ ಹೇತುಃ ಕಾಮಕ್ರೋಧವಶಾನುಗಮಿತಿ, ಕ್ರೋಧೇನ ವಶೀಭೂತಮಿವ ಜನಾಃ ಕಾಮೇನ ವಶೀಭೂತಂ ಪ್ರಮದಾಃ ಇತಿ ವಾರ್ಥಃ”।
ಭಾವಾರ್ಥ – “ಕ್ರೋಧಭರಿತರಂತೆಯೇ ಕಾಮವಶರಾದ ಪುರುಷರೂ ಸಹ ಸ್ತ್ರೀಯರಿಂದ (ಸ್ತ್ರೀಯರನ್ನು ಕಂಡೊಡನೆಯೇ) ತಪ್ಪುದಾರಿ ಹಿಡಿಯುತ್ತಾರೆ. ಇಲ್ಲಿ ವ್ಯಾಖ್ಯಾನಕಾರನು ಯೋಗಾವಾಸಿಷ್ಠವನ್ನು ಉಲ್ಲೇಖಿಸಿದ್ದಾನೆ –
रोगार्त्तिरङ्गना तृष्णा गम्भीरमपि मानवम्। उत्तानतां नयत्याशु सूर्यांशव इवाम्बुजम्॥
ರೋಗಾರ್ತ್ತಿರಂಗನಾ ತೃಷ್ಣಾ ಗಂಭೀರಮಪಿ ಮಾನವಂ । ಉತ್ತಾನತಾಂ ನಯತ್ಯಾಶು ಸೂರ್ಯಾಂಶವ ಇವಾಮ್ಬುಜಮ್॥
ಭಾವಾರ್ಥ – “ಹೆಣ್ಣಿನ ಸಂಗದ ಬಯಕೆಯು ಒಂದು ಕೆಟ್ಟ ಪಿಡುಗಿನಂತೆ (ರೋಗದಂತೆ) ಎಂತಹ ಗಂಭೀರ ಪುರುಷನನ್ನಾದರೂ ಸೂರ್ಯನಕಿರಣಗಳ ಶಾಖದಿಂದ ಮಾಸುವ ತಾವರೆಯಂತೆ ವಿಕಾರನನ್ನಾಗಿಸುತ್ತದೆ.”
ಇದು ಕಾಮಾತುರರಾಗಿ ಹೆಣ್ಣಿನ ಸಂಗ ಬಯಸುವ ಪುರುಷರ ಸ್ವಭಾವಕ್ಕೆ ಸಂಬಂಧಿಸಿದಂತೆ ಹೇಳಿದ ವ್ಯಾಖ್ಯಾನ. ಪುರುಷರಿಂದ ಉಂಟಾಗಬಹುದಾದ ಅನವಶ್ಯಕ ಆಕರ್ಷಣೆ ಮತ್ತು ಶೋಷಣೆಗಳಿಂದ ಸ್ತ್ರೀಯರನ್ನು ರಕ್ಷಿಸುವ ಉದ್ದೇಶದಿಂದ ಪುರುಷರಿಗೆ ತಮ್ಮ ಸಹಜ ಸ್ವಭಾವಗಳ ಬಗ್ಗೆ ಎಚ್ಚರ ನೀಡಿ ಆತ್ಮಸಂಯಮದ ಪಾಠ ಹೇಳುವುದೊಂದೇ ಈ ಮನುವಿನ ಉದ್ದೇಶ ಎಂದು ತಿಳಿದುಬರುತ್ತದೆ.
ಕುಲ್ಲುಕ ಭಟ್ಟನೆಂಬ ಮತ್ತೋರ್ವ ವ್ಯಖ್ಯಾನಕಾರ ಹೀಗೆ ಬರೆದಿದ್ದಾನೆ –
“पुरुषं=देहधर्मात्कामक्रोधवशानुयायिनं स्त्रियः उत्पथं नेतुं समर्थाः”
“ಪುರುಷಂ-ದೇಹಧರ್ಮಾತ್ಕಾಮಕ್ರೋಧವಶಾನುಯಾಯಿನಂ ಸ್ತ್ರಿಯಃ ಉತ್ಪಥಂ ನೇತುಂ ಸಮರ್ಥಾಃ”
ಭಾವಾರ್ಥ – “ಕಾಮ-ಕ್ರೋಧವಶರಾದ ಪುರಷರನ್ನು ಅಧರ್ಮ ಮಾರ್ಗದಲ್ಲಿ ಎಳೆತರುವ ಸಾಮಾರ್ಥ್ಯ ಸ್ತ್ರೀಯರಿಗಿದೆ. “
ಹೀಗಾಗಿ ಪುರುಷರು ಮಾರ್ಗಭ್ರಷ್ಟರಾಗುವುದರಲ್ಲಿ ಮುಖ್ಯವಾಗಿ ತಾವೇ ಮೂಲ ಕಾರಣ ಮತ್ತು ಸಾಧನವಾಗಿರುತ್ತಾರೆ. ಇದರಲ್ಲಿ ಸ್ತ್ರೀಯರದ್ದೇನಿದ್ದರೂ ಎರಡನೆಯ ಪಾತ್ರ.
ಮನುಸ್ಮೃತಿಯ”ಪ್ರಮದಾ ಹ್ಯುತ್ಪಥಂ ನೇತುಂ..” ಸಾಲು ಭಾರತೀಯ ಶಾಸ್ತ್ರಗಂಥಳನ್ನು ಯಾವ ರೀತಿಯಲ್ಲಿ ಅಪಾರ್ಥ ಮಾಡಿಕೊಳ್ಳಬಾರದು ಎನ್ನುವದಕ್ಕೆ ಉತ್ತಮ ಉದಾಹರಣೆ ಎಂದು ಹೇಳಬಹುದು. ಭಾರತೀಯ ಗ್ರಂಥದ ಶ್ಲೋಕಗಳನ್ನು ತಿಳಿದುಕೊಳ್ಳಬೇಕಾದರೆ ವಾಕ್ಯಾರ್ಥಶಾಸ್ತ್ರದ ನಿಯಮಗಳನ್ನು ಅರಿತಿರಬೇಕು. (ಸೂಕ್ತ ರೀತಿಯಲ್ಲಿ ಅರ್ಥ ಮೂಡುವಂತೆ ‘ವಾಕ್ಯ’ ವನ್ನು ಹೇಗೆ ರಚಿಸಬೇಕೆಂದು ಮೀಮಾಂಸಶಾಸ್ತ್ರದಲ್ಲಿ ವಿಧಿಸಲಾಗಿದೆ )
ಯಾವುದೇ ವಾಕ್ಯವಾಗಲಿ ಅದನ್ನು ಸಮಗ್ರವಾಗಿ ಅರ್ಥೈಸಿಕೊಳ್ಳಬೇಕೇ ಹೊರತು ವಾಕ್ಯದ ಮೂರ್ನಾಲ್ಕು ಪದಗಳನ್ನು ಪ್ರತ್ಯೇಕ ಮಾಡಿ ಅರ್ಥವನ್ನು ತಿರುಚುವುದಲ್ಲ. ಹೀಗೆ ತಿರುಚುವುದರಿಂದ ಕೇವಲ ಅಪಾರ್ಥ ಮತ್ತು ಅಪವಾದವಾಗುತ್ತದೆ. ಮನುಸ್ಮೃತಿಯ ತಪ್ಪು ವ್ಯಾಖ್ಯಾನ ಮತ್ತು ಅಪಾರ್ಥಗಳ ಮೂಲ ಕಾರಣವೇ ವಾಕ್ಯಾರ್ಥ ಶಾಸ್ತ್ರಗಳ ಜ್ಞಾನವಿಲ್ಲದಿರುವುದು.
ಮೂಲ ಲೇಖನ :https://www.indica.today/quick-reads/understanding-manu-smriti-part-iii-need-men-learn-self-control/
Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.