close logo

ಮನುಸ್ಮೃತಿಯ ಪರಿಚಯ – ಭಾಗ ೨ ಸ್ತ್ರೀ ಪ್ರಕೃತಿ

ಭಾಗ ೧:  https://www.indictoday.com/bharatiya-languages/manusmriti-kannada-i-women

ನಮ್ಮ ಹಿಂದಿನ ಲೇಖನದಲ್ಲಿ   “ನ ಸ್ತ್ರೀ ಸ್ವಾತಂತ್ರ್ಯಮರ್ಹತಿ ” ಎಂಬ ಸಾಲನ್ನು  ತಪ್ಪಾಗಿ ಗ್ರಹಿಸಿ  ಮನು ಒಬ್ಬ ಸ್ತ್ರೀದ್ವೇಷವಾದಿ ಎಂದು ಬಹಳ ಕಾಲದಿಂದ  ಪ್ರತಿಪಾದಿಸುವ ಪ್ರಯತ್ನ ಹೇಗೆ ನಡೆಯುತ್ತಿದೆ ಎಂದು ತಿಳಿದೆವು.   ಮನುಸ್ಮೃತಿಯ ಈ ಶ್ಲೋಕದ  ಸೂಚ್ಯ ಅರ್ಥ ತಿಳಿದುಕೊಂಡವರಿಗೆ, ಇದರ ಸಂದರ್ಭ ಮತ್ತು ಔಚಿತ್ಯ ಎರಡೂ ಸ್ಪಷ್ಟವಾಗುತ್ತದೆ.

ಒಂದು ಧರ್ಮಬದ್ಧ  ಸಮಾಜದಲ್ಲಿ ಸ್ತ್ರೀ-ಪುರುಷರ ಪಾತ್ರಗಳ ಮೌಲ್ಯವಿಶ್ಲೇಷಣೆಯನ್ನು ತಿಳಿಹೇಳುವ ಮನುವಿನ ಮಾತುಗಳಲ್ಲಿ  ಯಾವ ಬಗೆಯ ಸ್ತ್ರೀನಿಂದನೆಯೂ ಕಂಡುಬರುವುದಿಲ್ಲ. ಇಂದಿನ ಲೇಖನದಲ್ಲಿ “ನ ಸ್ತ್ರೀ ಸ್ವಾತಂತ್ರ್ಯಮರ್ಹತಿ” ಯಷ್ಟೇ ಅಪಾರ್ಥಕ್ಕೊಳಗಾದ ಇನ್ನೊಂದು ಶ್ಲೋಕವನ್ನು ನೋಡೋಣ.

स्वभाव एष नारीणां नराणामिह दूषणम्।

अतोऽर्थान्न प्रमाद्यन्ति प्रमदासु विपश्चितः॥

(मनुस्मृति 2-213)

ಸ್ವಭಾವ ಏಷ ನಾರೀಣಾಂ ನರಾಣಾಮಿಹ ದೂಷಣಂ

ಅತೋऽರ್ಥಾನ್ನ  ಪ್ರಮಾದ್ಯಂತಿ ಪ್ರಮದಾಸು ವಿಪಶ್ಚಿತಃ

(ಮನುಸ್ಮೃತಿ 2-213)

ಈ ಶ್ಲೋಕದ ಭಾವಾರ್ಥವನ್ನು ಸಾಮಾನ್ಯವಾಗಿ ಹೀಗೆ ತಿರುಚಿ ಹೇಳಲಾಗುತ್ತದೆ:

“ಮಹಿಳೆಯರ ಪ್ರಕೃತಿಯೇ ಪುರುಷರನ್ನು ಉದ್ರೇಕಗೊಳಿಸುವುದು ; ಹೀಗಾಗಿ ವಿದ್ಯಾವಂತ ಪುರುಷರು ಸ್ತ್ರೀಯರ ಸಂಗವಿರುವಲ್ಲಿ ಕಟ್ಟೆಚ್ಚರ ವಹಿಸಬೇಕು”.

ಮಹಿಳೆಯರೆಂದರೆ   ಪಿತೂರಿಯಿಂದ  ಪುರುಷರನ್ನು ಉದ್ರೇಕಗೊಳಿಸಿ ಬುಟ್ಟಿಗೆ ಹಾಕಿಕೊಳ್ಳುವ ಜನವೆಂದು ಹೀನವಾಗಿ  ಈ ಸಾಲುಗಳು ತೋರಿಸುತ್ತವೆ ಎಂದು  ಅಪಪ್ರಚಾರ ಮಾಡಲಾಗಿದೆ.

ಬನ್ನಿ ಈ  ಶ್ಲೋಕವನ್ನು ಮತ್ತೊಮ್ಮೆ ಗಮನವಿಟ್ಟು ಓದಿಕೊಳ್ಳೋಣ. ವಾಸ್ತವವಾಗಿ  ಸ್ತ್ರೀಯರನ್ನು ಹೀನವಾಗಿ ತೋರಿಸುತ್ತಿದೆಯೇ ಇಲ್ಲವೇ ಎಂದು ತಿಳಿದುಕೊಳ್ಳೋಣ.

ಶ್ಲೋಕದ ಪದಕ್ರಮ ಹೀಗಿದೆ – ಇಹ ನರಾಣಾಂ ದೂಷಣಂ ಏಷಃ ನಾರೀಣಾಮ್ ಸ್ವಭಾವಃ । ಅತಃ ಅರ್ಥಾತ್ ವಿಪಶ್ಚಿತಃ ಪ್ರಮದಾಸು ನ ಪ್ರಮಾದ್ಯಂತಿ । (इह नराणां दूषणम् एषः नारीणां स्वभावः। अतः अर्थात् विपश्चितः प्रमदासु न प्रमाद्यन्ति)

ಎಂದರೆ,

ಇಲ್ಲಿ ನಾರಿಯರ ಸ್ವಭಾವವೇ ಪುರುಷರನ್ನು ಹಾಳು  ಮಾಡುವುದು. ಹೀಗಾಗಿ (ಈ ಕಾರಣಕ್ಕಾಗಿ) ಪಂಡಿತರು (ವಿಪಶ್ಚಿತಃ) ಅವರ ನಡುವೆ ಇದ್ದಾಗ  ಮೈ ಮರೆಯಬಾರದು (ಪ್ರಮದ)”

ಮೊದಲಿಗೆ ಈ ಶ್ಲೋಕವನ್ನು ವ್ಯಾಖ್ಯಾನಕಾರರು ಹೇಗೆ ಅರ್ಥೈಸಿದ್ದಾರೆ ಎಂದು ತಿಳಿದುಕೊಳ್ಳೋಣ.

ಮನುಸ್ಮೃತಿಯ ಪ್ರಸಿದ್ಧ ವ್ಯಾಖ್ಯಾನಕಾರರಲ್ಲಿ ಒಬ್ಬನಾದ ಮೇಧಾತಿಥಿ  ಹೀಗೆ ಹೇಳುತ್ತಾನೆ

ಏಷಾ ಪ್ರಕೃತಿಃ ಸ್ತ್ರೀಣಾಂ ಯತ್ ನಾರಾಣಾಮ ಧೈರ್ಯವ್ಯಾವರ್ತಸಂಗಾನ್ ಹಿ ಸ್ರೀಯಃ ಪುರುಷಾನ್ ವ್ರತಾಚ್ಚ ಅವಯೇಯುಃ ಅತಃ ಅರ್ಥಾತ್ ಅಸ್ಮಾತ್ ಹೇತೋಃ ಪ್ರಮಾದ್ಯಂತಿ = ದೂರತಃ ಏವ ಸ್ರೀಯಃ ಪರಿಹರಂತಿ ಪ್ರಮಾದಃ ಸ್ಪರ್ಶಾದಿಕಾರಣಂ ವಸ್ತುಸ್ವಭಾವಃ ಅಯಂ ಯತ್  ತರುಣೀ  ಸ್ಪೃಷ್ಟಾ ಕಾಮಕೃತಂ ಚಿತ್ತಸಂಕ್ಷೋಭಃ ಅಪಿ ಪ್ರತಿಷಿದ್ಧಃ, ತಿಷ್ಠತು ತಾವತ್ ಅಪರೋ ಗ್ರಾಮ್ಯಧರ್ಮಸಂಭ್ರಮಃ ಪ್ರಮದಾಃ = ಸ್ರೀಯಃ ”     

(एषा प्रकृतिः स्त्रीणां यत् नराणाम धैर्यव्यावर्तसङ्गान् हि स्त्रियः पुरुषान् व्रताच्च अवयेयुः। अतः अर्थात् अस्मात् हेतोः प्रमाद्यन्ति = दूरतः एव स्त्रियः परिहरन्ति। प्रमादः स्पर्शादिकरणं वस्तुस्वभावः अयं यत् तरुणी स्पृष्टा कामकृतं चित्तसंक्षोभं जनयति। यत्र चित्तसंक्षोभः अपि प्रतिषिद्धः, तिष्ठतु तावत् अपरो ग्राम्यधर्मसम्भ्रमः। प्रमदाः=स्त्रियः)

ಈ ವಾಕ್ಯಗಳ ಅರ್ಥ ಹೀಗಿದೆ –

ಸ್ತ್ರೀಯರ ಪ್ರಕೃತಿ ಯಾವ ಬಗೆಯದ್ದು ಎಂದರೆ,  ಧೃಡ ಸಂಕಲ್ಪದ ನಡೆ ನುಡಿಯ ಪುರುಷರ ಚಿತ್ತವನ್ನೂ ಸಹ ಕೆಡಿಸಬಲ್ಲದು. ಹೀಗಾಗಿ, ಪಂಡಿತ ಪುರುಷರು ಸ್ತ್ರೀಯರ ಸಾಂಗತ್ಯದಲ್ಲಿ ಎಚ್ಚರ ವಹಿಸಬೇಕು ಎಂದರೆ ಅಂತರವನ್ನು ಕಾಪಾಡಿಕೊಳ್ಳಬೇಕು (ಮುಟ್ಟಿಸಿಕೊಳ್ಳುವುದು ಇತ್ಯಾದಿ).  (प्रमादः/ಪ್ರಮದಃ  – ಅಚಾತುರ್ಯ , ಮತ್ತೇರಿಸುವುದು ಇತ್ಯಾದಿ. प्रमदाः/ಪ್ರಮದಾಃ – ಸ್ತ್ರೀಯರು )

ಕಾಮೋದ್ವೇಗದಲ್ಲಿ ಸ್ತ್ರೀಯರನ್ನು (प्रमदाः – ಪ್ರಮದಾಃ  -ಮಹಿಳೆಯರು) ಮುಟ್ಟಿದಾಗ ಚಿತ್ತ ಕೆಡುವುದು ಪುರುಷರ ಸಹಜ ಪ್ರಕೃತಿ ಎನ್ನುವುದು ಲೋಕಸತ್ಯ. ಅಧ್ಯಯನ ನಿರತರಾದ ಪಂಡಿತರಿಗೆ  ಲೈಂಗಿಕ ಕ್ರಿಯೆಯಂತೂ (ग्राम्यधर्मः – ಗ್ರಾಮ್ಯಧರ್ಮಃ – ಲೈಂಗಿಕ ಕ್ರಿಯೆ/ಸಂಭೋಗ) ದೂರದ ಮಾತು. ಅವರಿಗೆ ಚಿತ್ತಚಾಂಚಲ್ಯವೂ  ನಿಷೇಧವೇ. ವಾಸ್ತವವಾಗಿ,  ಮನುಸ್ಮೃತಿಯ ಈ ಶ್ಲೋಕವು ಪುರುಷರಿಗೆ ಆದೇಶಸೂಚಕವೇ ಆಗಿದೆ. ಪುರುಷನು ಸ್ತ್ರೀಯೊಬ್ಬಳನ್ನು ಕಂಡಾಗ ಆಕರ್ಷಿತನಾಗುವುದು ಪ್ರಕೃತಿ ಸಹಜವಾದ ಪ್ರಕ್ರಿಯೆ. ಇಂತಹ ಸನ್ನಿವೇಶದಲ್ಲಿ ಸಮೀಪದ ಸಾಂಗತ್ಯ ಮತ್ತು  ಸ್ಪರ್ಶ ಸಹಜವಾಗಿಯೇ ಕಾಮೋದ್ರೇಕವನ್ನುಂಟು ಮಾಡುತ್ತದೆ. ಹೀಗಾಗಿಯೇ ಪುರುಷರು ಸ್ತ್ರೀಯರ ನಡುವೆ ಇದ್ದಾಗ ಎಚ್ಚರದಿಂದ ವರ್ತಿಸಬೇಕು.

ಅದರಲ್ಲೂ , ಸದಾಕಾಲ ಮಹಿಳೆಯರ ಸಂಪರ್ಕದಲ್ಲಿರುವಾಗಲಂತೂ ಪುರುಷರು ಕಟ್ಟೆಚ್ಚರ ವಹಿಸಬೇಕಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ, ಸ್ವಯಂ ಹಾನಿಗೊಳಗಾಗುವ ಅಥವಾ ಮಹಿಳೆಯರಿಗೆ ಹಾನಿ, ತೊಂದರೆಗಳನ್ನುಂಟು ಮಾಡುವ ಸಾಧ್ಯತೆಯಿರುತ್ತದೆ.

ಇದು ಶ್ಲೋಕದ ಭಾವಾರ್ಥ. ನಾರಿಯರ ಸ್ವಭಾವ ಎನ್ನುವ ಶ್ಲೋಕದ ಸಾಲು ಸ್ತ್ರೀ-ನಿಂದನೆ ಎಂದರೆ ತಪ್ಪಾಗುತ್ತದೆ. ಇಲ್ಲಿ  ‘ಸ್ವಭಾವ’ ಎನ್ನುವುದು, ಲೋಕಸತ್ಯವಾಗಿ ಎಲ್ಲರೂ ಬಲ್ಲ ಸ್ತ್ರೀ-ಪುರುಷರ ನಡುವಿನ ಪರಸ್ಪರ ಪ್ರಕೃತಿ ಸಹಜವಾದ ಆಕರ್ಷಣೆಯ ಸ್ವರೂಪ.

ಸರ್ವಜ್ಞನಾರಾಯಣ ಎನ್ನುವ ಮತ್ತೊಬ್ಬ ವ್ಯಾಖ್ಯಾನಕಾರ ಮೇಧಾತಿಥಿಯ ಈ ಮಾತನ್ನು ಹೀಗೆ ಸಮರ್ಥಿಸಿದ್ದಾನೆ –

“ಸ್ವಭಾವ ಏಷ ಸ್ತ್ರೀಣಾಮ್ ಅನಿಚ್ಛಂತೀನಾಮಪಿ ದರ್ಶನೇನರಾಗೇಣ  ದುಷ್ಯಂತೀತಿ ನರಾಣಾಂ ದೂಷಣಂ ಪುರುಷೇಷು ದೋಷಾಪಾದಕತ್ವಂ ನಾರೀಣಾಂ ಸ್ವಭಾವಃ । ನ ಪ್ರಮಾದ್ಯಂತಿ ತದನೀಕ್ಷಣಾದೌ ಕಾರ್ಯೇಣ ಅಪ್ರಮತ್ತಾ ಭವಂತಿ ”

(स्वभाव एष स्त्रीणाम् अनिच्छन्तीनामपि दर्शनेन रागेण दुष्यन्तीति नराणां दूषणं पुरुषेषु दोषापादकत्वं नारीणां स्वभावः। न प्रमाद्यन्ति तदनीक्षणादौ कार्येण अप्रमत्ता भवन्ति)

ಆಕರ್ಷಿಸುವ ಯಾವ ಉದ್ದೇಶವಿಲ್ಲದಿದ್ದರೂ ಸ್ತ್ರೀಯರು ತಮಗೆ ಅರಿವಿಲ್ಲದಂತೆಯೇ  ಪುರುಷರನ್ನು ಆಕರ್ಷಿಸುವ ಸಾಧ್ಯತೆಯಿದೆ.  ಇದರಿಂದ ಅಚಾತುರ್ಯ (ಪ್ರಮಾದ) ಉಂಟಾಗಬಹುದು. ಸ್ತ್ರೀಯರ ಈ ಸ್ವಭಾವದಿಂದ ಪುರುಷರು ತಪ್ಪು ಮಾಡುತ್ತಾರೆ. ಎಚ್ಚರದಿಂದ ಇರಬೇಕು ಎಂದರೆ ಸ್ತ್ರೀಯರ ಸಾಂಗತ್ಯ ಮತ್ತು ಸಾಮೀಪ್ಯದಲ್ಲಿ ಎಚ್ಚರ ವಹಿಸಬೇಕು ಎಂದರ್ಥ.

ಹೀಗೆ ವಿಶ್ಲೇಷಿಸಿದಾಗ, ಮನುಸ್ಮೃತಿಯ ಸಾಲುಗಳು ಯಾವುದೇ ಬಗೆಯ ಸ್ತ್ರೀ-ನಿಂದನೆ ಮಾಡಿಲ್ಲ ಮತ್ತು ಯಾವುದೇ ಬಗೆಯ ಅಪವಾದವನ್ನು ಸಹ  ಸ್ತ್ರೀಯರ ಮೇಲೆ ಹೊರಿಸಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.

ಈ ಸಾಲುಗಳು ಏನಿದ್ದರೂ ಪುರುಷರು ಸ್ತ್ರೀಯರ ಕಡೆಗೆ ಆಕರ್ಷಿತವಾಗುವುದರ ಬಗ್ಗೆಯೇ ಹೊರತು ಮಹಿಳೆಯರ ಸ್ವಭಾವದಲ್ಲಿ ಯಾವುದೇ ಕುಂದುಗಳನ್ನು  ಎತ್ತು ತೋರಿಸುವ ಬಗ್ಗೆ ಅಲ್ಲ ಎಂದು ವ್ಯಾಖ್ಯಾನಕಾರರು ಮತ್ತೆ ಮತ್ತೆ ಹೇಳಿದ್ದಾರೆ. ಹೆಣ್ಣಿನಲ್ಲಿ ಆಕರ್ಷಿತವಾಗುವುದು ಪುರುಷರ ಪ್ರಕೃತಿ ಸಹಜ ಸ್ವಭಾವ.  ಹೀಗಾಗಿ ಸ್ತ್ರೀ-ಪುರುಷರ ಪ್ರಕೃತಿ ಸಹಜ ಸ್ವರೂಪದ ಕುಂದು ಕೊರತೆಗಳೇನು ಎಂದು ತಿಳಿಯಬೇಕಾಗುತ್ತದೆ.  ಮನುವಿನ ಮಾತುಗಳೇನಿದ್ದರೂ ಕಾಮೋದ್ವೇಗದಿಂದ ಅಜಾಗರೂಕರಾಗಿ  ದುಡುಕುವ ಪುರುಷರನ್ನು ಎಚ್ಚರಿಸುವುದಕ್ಕಾಗಿಯೇ ಹೊರತು ಬೇರಾವುದಕ್ಕೂ ಅಲ್ಲ.

ಮಹಿಳೆಯರೊಂದಿಗೆ ಗೌರವ ಮತ್ತು ಸಂಯಮದಿಂದ ವರ್ತಿಸಿಬೇಕು ಎನ್ನುವುದು ಮನುಸ್ಮೃತಿಯ ಈ ಸಾಲುಗಳ ಉದ್ದೇಶ ಎಂದು ನಾವು ತಿಳಿದುಕೊಳ್ಳಬೇಕು. ಇದಕ್ಕೆಂದೇ  ವಿಪಶ್ಚಿತಃ ನ ಪ್ರಮಾದ್ಯಂತಿ   (विपश्चितः न प्रमाद्यन्ति)  ಪಂಡಿತರು ಎಂದೂ ತಪ್ಪು ಮಾಡುವುದಿಲ್ಲ ಎಂದರೆ, ಅನುಚಿತವಾಗಿ ವರ್ತಿಸುವುದಿಲ್ಲ ಮತ್ತು ಮಹಿಳೆಯರಿಗೆ ಅಗೌರವ ತೋರುವುದಿಲ್ಲ ಎಂದು ಹೇಳಿದೆ.

ಈ ಶ್ಲೋಕದಲ್ಲಿ ಅಪಾರ್ಥ ಮತ್ತು ಅಪವಾದಕ್ಕೆಡೆ ಮಾಡಿಕೊಡುವ ಇನ್ನೊಂದು ಪದವೆಂದರೆ  ದೂಷಣಂ (दूषणम्).

ಈ ಪದವಿರುವ ಮೊದಲನೇ ಸಾಲು – ಸ್ವಭಾವ ಏಷ ನಾರೀಣಾಮಿಹ ದೂಷಣಂ ( स्वभाव एष नारीणां नराणामिह दूषणम् ) ಎಂದಿದೆ. ಈ ಸಾಲನ್ನು “ಮಹಿಳೆಯರ ಸ್ವಭಾವವೇ ಪುರುಷನ್ನು ಕೆಡಿಸುವುದು (ಮಾಲಿನ್ಯಗೊಳಿಸುವುದು) ಎಂದು ಭಾಷಾಂತರ ಮಾಡಲಾಗಿದೆ. ಇದು ನಿಜಕ್ಕೊ  ತಪ್ಪು.

ದೂಷಣಂ (दूषणम्) ಪದದ  ವ್ಯುತ್ಪತ್ತಿ ತಿಳಿದವರು ಈ ತಪ್ಪನ್ನು ಮಾಡುವುದಿಲ್ಲ. दुष ದುಷ್ ಧಾತುವಿನಿಂದ ವ್ಯುತ್ಪನ್ನವಾಗಿದೆ. दुष वैकृत्ये ದುಷ ವೈಕೃತ್ಯೆ (ದುಷ್ ಎಂದರೆ ಬದಲಾವಣೆ ಅಥವಾ ಹಾಳಾಗುವುದು/ಕೆಟ್ಟುಹೋಗುವುದು)

ಸಂಸ್ಕೃತ ವ್ಯಾಕರಣದಲ್ಲಿ  दूषणम् ದೂಷಣಂ ಶಬ್ದರೂಪಕ್ಕೆ ವಿಶೇಷ ಅರ್ಥವಿದೆ. ಪಾಣಿನಿ ಮಹರ್ಷಿಗಳ ಅಷ್ಟಾಧ್ಯಾಯಿಯಲ್ಲಿ 6-4-91 ಸೂತ್ರದ ಪ್ರಕಾರ –

ವಾ (ಅವ್ಯಯ) ಚಿತ್ತವಿರೋಗೇ (ಸಪ್ತಮೀ ವಿಭಕ್ತಿ-ಏಕವಚನ)  ಎಂದರೆ ಮನಸ್ಸಿನಲ್ಲಿ ವಿಕೃತಿಯನ್ನುಂಟು ಮಾಡುವುದು  ಅಥವಾ ಮಾಡಬೇಕಾದ ಕಾರ್ಯ ಅಥವಾ ಕರ್ತವ್ಯದ ಬಗ್ಗೆ ಮನಸ್ಸಿನಲ್ಲಿ ಅಸಹ್ಯ ಮೂಡಿಸುವುದು ಅಥವಾ ಮಾಡಬಾರದ ಕೆಲಸವನ್ನು ಮಾಡುವಂತೆ ಮನಸ್ಸಿನಲ್ಲಿ ಮೂಡುವುದು ಇತ್ಯಾದಿ ಅರ್ಥಗಳಿವೆ . वा चित्तविरागे (6-4-91)

ದೂಷಣಂ ಎಂಬ ಶಬ್ದವು ಮನಸ್ಥಿತಿಯನ್ನು ಸೂಚಿಸುತ್ತದೆ. ಯಾವ ಬಗೆಯ ಮನಸ್ಥಿತಿ ಎಂದರೆ, ಧರ್ಮಬದ್ಧ ಕರ್ತವ್ಯಗಳಿಗೆ ಅಭಿಮುಖವಾಗುವ ಮನಸ್ಥಿತಿ. ಅಧರ್ಮ ಮಾರ್ಗಕ್ಕೆ ತಿರುಗಿ ತಪ್ಪಾಗಿ ವರ್ತಿಸುವುದು – ಅಗೌರವವಾಗಿ ನಡೆದುಕೊಳ್ಳುವುದು, ಅನುಚಿತವಾಗಿ ವರ್ತಿಸುವುದು, ಕೀಟಲೆ ಮಾಡುವುದು, ಚುಡಾಯಿಸುವುದು, ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಎಸಗುವುದು ಇತ್ಯಾದಿ ಎಂದು ನಾವು ಅರ್ಥೈಸಿಕೊಳ್ಳಬೇಕು.

ಈ ಕಾರಣಗಳಿಂದ ಸ್ವಭಾವ ಏಷ ನಾರೀಣಾಂ ನರಾಣಾಮಿಹ ದೂಷಣಂ (स्वभाव एष नारीणां नराणामिह दूषणम्)  ಎನ್ನುವ ಸಾಲುಗಳು ಯಾವ ಬಗೆಯಲ್ಲೂ ಸ್ತ್ರೀಯರನ್ನು ನಿಂದಿಸುವುದಿಲ್ಲ ಎಂದು ಸ್ಪಷ್ಟವಾಗುತ್ತದೆ.

ಈ ಸಾಲುಗಳ ನಿಜ ಭಾವಾರ್ಥ ಹೀಗಿದೆ “ಪುರುಷರ ಮತ್ತು ಸ್ತ್ರೀಯರ (ಜೈವಿಕ) ಪ್ರಕೃತಿ ಅಥವಾ ಸ್ವಭಾವದಿಂದ ಇಬ್ಬರ ನಡುವೆ ಪರಸ್ಪರ ಆಕರ್ಷಣೆ ಮತ್ತು ಬಯಕೆಗಳು ಮನಸ್ಸಿನಲ್ಲಿ ಮೂಡುವುದು ಸಹಜವಾದ ಪ್ರಕ್ರಿಯೆ.  ಅದರಲ್ಲೂ ಪುರುಷರಲ್ಲಿ  ಪ್ರವೃತ್ತಿ ಹೆಚ್ಚು ಬಲವಾಗಿರುತ್ತದೆ. ಇದರಿಂದಾಗಿ ಧರ್ಮನಿಷ್ಠತೆಯಿಲ್ಲದೆ ಮಾಡಬಾರದ ಕಾರ್ಯಗಳನ್ನು ಮಾಡುವ ಸಾಧ್ಯತೆಯಿರುತ್ತದೆ.”

ಹೀಗಾಗಿ ಈ ಸಾಲುಗಳು ಪುರುಷರನ್ನು ಉದ್ದೇಶಿಸಿ ಹೇಳುವ ಮನುವಿನ ಮಾತುಗಳು. ಮಾಡಬೇಕಾದ  ಕೆಲಸಗಳನ್ನು ಕೈ-ಬಿಟ್ಟು, ಎಂದರೆ ಧರ್ಮಕ್ಕೆ ಅಭಿಮುಖವಾಗಿ ಮಾಡಬಾರದ ಕಾರ್ಯಗಳಿಗೆ, ಮನಸ್ಸನ್ನು ಹರಿಬಿಡದಂತೆ  ಎಂದರೆ ಅಧರ್ಮಿಗಳಾಗದಂತೆ  ಎಚ್ಚರಿಸುವ  ಆದೇಶ ಸೂಚಕಗಳು  ಎಂದು ತಿಳಿದುಕೊಳ್ಳಬೇಕು. ಹೇಗೆ ಎಚ್ಚರ ವಹಿಸಬೇಕು ಎಂದು ಎರಡನೇ ಸಾಲಿನಲ್ಲಿ ಹೇಳಲಾಗಿದೆ – ಅತೋऽರ್ಥಾನ್ನ  ಪ್ರಮಾದ್ಯಂತಿ ಪ್ರಮದಾಸು ವಿಪಶ್ಚಿತಃ (अतोऽर्थान्न प्रमाद्यन्ति प्रमदासु विपश्चितः)  ಸ್ತ್ರೀಯರ ಸಾಂಗತ್ಯದಲ್ಲಿ ತಿಳಿದವರು (ಪಂಡಿತರು/ಜ್ಞಾನಿಗಳು) ಕಟ್ಟೆಚ್ಚರ ವಹಿಸಬೇಕು.

ಮುಂದುವರೆಯುತ್ತದೆ…..

ಮೂಲ ಲೇಖನ:  Understanding Manu Smriti Part II: Nature of Women

Featured Image Credits: artzolo

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply