close logo

ಇಂಡಿಕಾ ಟುಡೇ ಲೇಖಕರ ಕಮ್ಮಟ – ಆಗಸ್ಟ್ 12-14 , 2022

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ವಸತಿ ಸಮುಚ್ಚಯವೊಂದರಲ್ಲಿ , ಇಂಡಿಕಾ ಟುಡೇ ಸಂಸ್ಥೆಯು ಲೇಖಕರ ಕಮ್ಮಟವನ್ನು ಆಯೋಜಿಸಿತು. ಗುಜರಾತ್, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ತಮಿಳುನಾಡು, ಗೋವಾ ಮತ್ತು ಕರ್ನಾಟಕದಿಂದ ಸುಮಾರು 35 ಜನ ಲೇಖಕರು ಕಮ್ಮಟದಲ್ಲಿ ಪಾಲ್ಗೊಂಡರು. ಸಾಂಸ್ಕೃತಿಕ, ಸಾಹಿತ್ಯಕ , ಐತಿಹಾಸಿಕ, ಶಾಸ್ತ್ರೀಯ ಮತ್ತಿತರ ಬಗೆಯ ಭಾರತೀಯ ಚಿಂತನೆ ಮತ್ತು ಬರವಣಿಗೆಯನ್ನು ಪ್ರೋತ್ಸಾಹಿಸುವುದೇ ಇಂಡಿಕಾ ಟುಡೇ ಸಂಸ್ಥೆಯ ಮೂಲ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಆಯೋಜಕ ತಂಡದವರಾದ ಡಾ.ಯೋಗಿನಿ ದೇಶಪಾಂಡೆ, ಶ್ರೀಮತಿ ರೇಖಾ ಧರ್ ಮತ್ತು ಶ್ರೀಯುತ ಶಿವಕುಮಾರ್ ಜಿ.ವಿ, ದೇಶದ ಶ್ರೇಷ್ಠ ತಜ್ಞರನ್ನು ಆಹ್ವಾನಿಸಿದ್ದರು.  ಮೂರು ದಿನಗಳ  ಕಾರ್ಯಾಗಾರಗಳಲ್ಲಿ ಪಾಲ್ಗೊಂಡ ಎಲ್ಲ ಲೇಖಕರಿಗೆ ಉನ್ನತ ಮಟ್ಟದ ಸೃಜನಶೀಲ ಬರವಣಿಗೆಯ ಬಗ್ಗೆ ತರಬೇತಿ ನೀಡಲಾಯಿತು. 

ತಂತ್ರಯುಕ್ತಿ  – ಡಾ. ಜಯರಾಮನ್ ಮಹಾದೇವನ್ 

ಪ್ರಾಚೀನ ಭಾರತದ ವೈಜ್ಞಾನಿಕ / ಶಾಸ್ತ್ರೀಯ ಗ್ರಂಥಗಳಲ್ಲಿ  ಸಾಮಾನ್ಯವಾಗಿ ಕಂಡು ಬರುವ ಸುಸಂಬದ್ಧ ಮತ್ತು ವ್ಯವಸ್ಥಿತ ಪಠ್ಯ ನಿರೂಪಣೆಗೆ ‘ತಂತ್ರಯುಕ್ತಿ’ ಎಂದು ಕರೆಯುತ್ತಾರೆ. ‘ತಂತ್ರಯುಕ್ತಿ’,  ಡಾ. ಜಯರಾಮನ್ ಮಹಾದೇವನ್ ಅವರ ಶೈಕ್ಷಣಿಕ ಅನುಸಂಧಾನದ ವಿಷಯವೂ ಹೌದು. ಇಂಡಿಕಾ ಟುಡೇಯ ಲೇಖಕ ವೃಂದಕ್ಕೆ,  ಶ್ರೀಯುತ ಜಯರಾಮನ್, ಮೊದಲಿಗೆ ತಂತ್ರಯುಕ್ತಿಯ ಸ್ಥೂಲ ಪರಿಚಯ ನೀಡಿ , ನಂತರ ಅರ್ಥಶಾಸ್ತ್ರ ಮತ್ತು ಆಯುರ್ವೇದ ಇತ್ಯಾದಿ ಗ್ರಂಥಗಳಲ್ಲಿನ ತಂತ್ರಯುಕ್ತಿಯ ಬಳಕೆಯನ್ನು  ತಿಳಿಸಿಕೊಟ್ಟರು. ಯಾವುದೇ ಗ್ರಂಥವಾಗಲಿ, ಒಟ್ಟಾರೆ ಸಾಹಿತ್ಯದಲ್ಲಿ,  ವಿಷಯ, ಭಾಷೆ ಮತ್ತು ರಚನಾಕ್ರಮಗಳು ಬಹಳ ಪ್ರಮುಖವಾದ ಪಾತ್ರವಹಿಸುತ್ತವೆ. ಉದಾಹರಣೆಗೆ, ಒಂದು ಗ್ರಂಥ ಅಥವಾ ಪಠ್ಯರಚನೆ (ಅಥವಾ ಯಾವುದೇ ಬರವಣಿಗೆ)ಯ  ಉಗಮಕ್ಕೆ ‘ಸಂಶಯ’ವೇ ಮೂಲ. ನಾವು ಏನನ್ನು ಹೇಳಲಿದ್ದೇವೆ ಎನ್ನುವುದಕ್ಕಿಂತ ಏಕೆ ಹೇಳಲಿದ್ದೇವೆ ಎನ್ನುವುದು ಬಹಳ ಮುಖ್ಯವಾಗುತ್ತದೆ. ಪಠ್ಯದ ಪ್ರಸ್ತಾವನೆಯಲ್ಲಿ  ಇದನ್ನು ಉಲ್ಲೇಖಿಸಿದಾಗ ಓದುಗ/ಅಧ್ಯಯನಕಾರನಿಗೆ ಸಂದರ್ಭ ಮತ್ತು ಔಚಿತ್ಯದ ಮನನ ಪಠ್ಯದ  ಪ್ರಾರಂಭದಲ್ಲಿಯೇ ಆಗುತ್ತದೆ. ಇಲ್ಲಿ ಅಧಿಕರಣ, ವಿಧಾನ, ಉದ್ದೇಶ, ನಿರ್ದೇಶ ಇತ್ಯಾದಿ ತಂತ್ರಯುಕ್ತಿಯ ಬಳಕೆ ಮಾಡಿಕೊಳ್ಳಬಹುದು ಎಂದು ತೋರಿಸಿಕೊಟ್ಟರು. ಪೂರ್ವ ಸಾಮಾನ್ಯಯುಗದ ಆರನೇ ಶತಮಾನಕ್ಕೂ ಹಿಂದಿನಿಂದ ನಮ್ಮ ಶಾಸ್ತ್ರ ಗ್ರಂಥಗಳಲ್ಲಿ ತಂತ್ರಯುಕ್ತಿಯ ಬಳಕೆ ಕಾಣಸಿಗುತ್ತದೆ. ಯಾವುದೇ ಪ್ರದೇಶಕ್ಕೆ ಸೀಮಿತವಾಗಿರದೆ, ಭಾರತದಾದ್ಯಂತ ಇದನ್ನು ಗ್ರಂಥ ರಚನಕಾರರು ಅಳವಡಿಸಿಕೊಳ್ಳುತ್ತಿದ್ದರು ಎಂದು ಸಹ ಕಂಡು ಬರುತ್ತದೆ. ಕೇವಲ ಸಂಸ್ಕೃತದಲ್ಲಷ್ಟೇ ಅಲ್ಲ, ತಮಿಳು, ಪ್ರಾಕೃತ, ಪಾಲಿ  ಮತ್ತಿತರ ಭಾಷೆಗಳಲ್ಲೂ ತಂತ್ರಯುಕ್ತಿ ಬಳಸಲಾಗುತ್ತಿತ್ತು. ಇಷ್ಟು ಪುರಾತನವಾದ  ಅಂತರ್ಭಾಷಾ ಪದ್ಧತಿ ಇಂದಿಗೂ ಪ್ರಸ್ತುತವಾಗಿದೆ ಎನ್ನುವುದು ತಂತ್ರಯುಕ್ತಿ ವಿಧಾನದ ವೈಶಿಷ್ಟ್ಯ. ಗ್ರಂಥ ಅಥವಾ ಪಠ್ಯವೊಂದು ಸಮರ್ಪಕವಾಗಿ ಓದುಗರ ಮನಮುಟ್ಟಬೇಕಾದರೆ ತಂತ್ರಯುಕ್ತಿಯ ಬಳಕೆ ಅತ್ಯವಶ್ಯಕ ಎಂದು   ಡಾ. ಜಯರಾಮನ್ ತಿಳಿಸಿಕೊಟ್ಟರು. 

ಸಾಂಸ್ಕೃತಿಕ ಮತ್ತು ಕಲಾ ಕ್ಷೇತ್ರದಲ್ಲಿ ಸಂಶೋಧನಾ ವಿಧಾನ – ಡಾ. ಸ್ವರೂಪ್ ರಾವಲ್ 

ಚಿಕ್ಕಮಕ್ಕಳಿಗೆ ರಂಗತರಬೇತಿಯ ಮೂಲಕ ಜೀವನ ಕೌಶಲ ಮತ್ತು ಮೌಲ್ಯಗಳನ್ನು ಕಲಿಸುವುದರಲ್ಲಿ ತಜ್ಞರಾದ ಶ್ರೀಮತಿ ಸ್ವರೂಪ್, ತಾವು ಇಂಗ್ಲೆಡಿನ ವಿಶ್ವವಿದ್ಯಾಲಯವೊಂದರಲ್ಲಿ  ಪಿಎಚ್-ಡಿ ಪ್ರಬಂಧವನ್ನು ಬರೆದ ಅನುಭವವನ್ನು ಹಂಚಿಕೊಂಡರು. ಶೈಕ್ಷಣಿಕ ಅನುಸಂಧಾನ ವಿಷಯವಾದ ಪಿಎಚ್ ಡಿ ಪ್ರಬಂಧದಲ್ಲಿ ಭಾವನಾತ್ಮಕ ಅಂಶಗಳು ಬರುವುದು ತಪ್ಪು ಎಂಬ ನಂಬಿಕೆ ಸಾಧಾರಣವಾದರೂ,  ಶ್ರೀಮತಿ ಸ್ವರೂಪ್ ಇದನ್ನು ಒಪ್ಪುವುದಿಲ್ಲ. ತಮ್ಮ ಸ್ವಭಾವ ಮತ್ತು ಸ್ವಧರ್ಮಗಳಿಗೆ ಅನುಗುಣವಾದ  ಕ್ಷೇತ್ರದಲ್ಲಿ ಕೆಲಸ ಮಾಡುವ ಯಾವುದೇ ವ್ಯಕ್ತಿಗೂ ಭಾವನಾತ್ಮಕವಲ್ಲದ ಪ್ರಬಂಧವನ್ನು ಬರೆಯುವುದು ಸಾಧ್ಯವಿಲ್ಲ ಎಂದು ಅವರು ವಾದಿಸುತ್ತಾರೆ. ಯಾವುದೇ ರೀತಿಯ ಬರವಣಿಗೆಗೆ ಸ್ವಾವಲೋಕನ ಬಹಳ ಮುಖ್ಯವಾಗುತ್ತದೆ. ಸ್ವಾವಲೋಕನ ಹೇಗೆ ಮಾಡಬೇಕು? ಈ ಪ್ರಕ್ರಿಯೆಗೆ ಏನು ಅವಶ್ಯಕ ಇತ್ಯಾದಿ ವಿಷಯಗಳನ್ನು ಚಟುವಟಿಕೆಗಳ ಮೂಲಕ ಲೇಖಕ ವೃಂದಕ್ಕೆ ಸ್ವರೂಪ್ ಮನದಟ್ಟು ಮಾಡಿಕೊಟ್ಟರು.

ಸೃಜನಶೀಲ ಬರವಣಿಗೆಯ ವಿಷಯದಲ್ಲಿ, ಮಹಾದೇವನ್ ರವರ ತಂತ್ರಯುಕ್ತಿಯ ಸಿದ್ದಾಂತಕ್ಕೂ  ಸ್ವರೂಪ್ ರವರ ಪ್ರಾಯೋಗಿಕ ಚಟುವಟಿಕೆಗಳಿಗೂ ತೀರಾ ಹತ್ತಿರದ ಸಂಬಂಧವಿದೆ ಎಂದು ಎಲ್ಲ ಲೇಖಕರೂ ಒಪ್ಪಿದರು. 

ರಿಸರ್ಚ್ ಮೆಥಡಾಲಜಿ  (ಸಂಶೋಧನಾ ವಿಧಾನ) – ಏನು ? ಅಲ್ಲ?  – ಡಾ. ನಾಗರಾಜ ಪಾತುರಿ 

ಡಾ. ನಾಗರಾಜ ಪಾತುರಿಯವರು ತಮ್ಮ  ‘ರಿಸರ್ಚ್ ಮೆಥಡಾಲಜಿ (ಸಂಶೋಧನಾ ವಿಧಾನ) – ಏನು ? ಅಲ್ಲ?’ ಕಾರ್ಯಾಗಾರದಲ್ಲಿ ,  ಇಂದು ಶೈಕ್ಷಣಿಕ ವಲಯಗಳನ್ನು ಕಾಡುತ್ತಿರುವ ಬುಡವಿಲ್ಲದ   ಬಲಪಂಥೀಯ, ಮಾರ್ಕ್ಸ್ ವಾದಿ ವಿಚಾರಧಾರೆಗಳ ಪರಿಚಯ ನೀಡಿ ಅವುಗಳನ್ನು ಹೇಗೆ ಸಮಪರ್ಕವಾಗಿ ನೆಲಸಮ ಮಾಡಬಹುದೆಂದು  ತಿಳಿಸಿದರು. ಆಧುನಿಕ ಭಾರತದಲ್ಲಿ  ಚರಿತ್ರೆಯನ್ನು ಹೇಗೆ ತಿರುಚಲಾಯಿತು, ಇದನ್ನು ಸರಿಪಡಿಸುವ ಹೊಣೆ ಯಾರದ್ದು ? ಶೈಕ್ಷಣಿಕ ವೃಂದಗಳಲ್ಲಿ   ‘ಸಂಶೋಧನೆಯ’ ಹೆಸರಿನಲ್ಲಿ ಪಟ್ಟಭಧ್ರ ಹಿತಾಸಕ್ತಿಗಳು ನಡೆಸುವ  ಕಿತಾಪತಿ ಇತ್ಯಾದಿ ವಿಷಯಗಳನ್ನು ಬಹಳ ಸ್ವಾರಸ್ಯವಾಗಿ ತಿಳಿಹೇಳಿದರು. 

ಭಾರತೀಯ ಪರಂಪರೆಯಲ್ಲಿ ಸಾಹಿತ್ಯದ ಹಿನ್ನೆಲೆ ಮತ್ತು ಪರಂಪರೆಯನ್ನು ವಿವರಿಸುತ್ತಾ , ಸಾಹಿತ್ಯದ ಮೂಲಕ ಸೇವೆ ಸಲ್ಲಿಸುವ ಸಾಂಸ್ಕೃತಿಕ ಉದ್ದೇಶ ಮತ್ತು ಅಂತಹ ಸಾಹಿತ್ಯಕ್ಕೆ  ಬೆನ್ನೆಲುಬಾದ ಚಿಂತನೆ-ವ್ಯವಸ್ಥೆಗಳ ಬಗ್ಗೆ ಬೆಳಕು ಚೆಲ್ಲಿದರು. ಲೇಖಕನೊಬ್ಬನ  ಬರವಣಿಗೆಯಲ್ಲಿ ಆತನ ಜೀವನ ದೃಷ್ಟಿಕೋನ ಮತ್ತು ದಾರ್ಶನಿಕ ನಿಲುವುಗಳು ಸಹಜವಾಗಿಯೇ ಎದ್ದು ನಿಲ್ಲುತ್ತವೆ. ಈ ನಿಟ್ಟಿನಲ್ಲಿ ಉತ್ತಮ ಸಂಸ್ಕಾರವಿರುವ ಲೇಖಕರು ಇಂದು ಬೇಕಾಗಿದ್ದಾರೆ ಎಂದು ಒತ್ತಿ ಹೇಳಿದರು. 

ಸೃಜನಶೀಲ ಬರವಣಿಗೆ ಮತ್ತು ಸಂಪಾದನೆ (ಶ್ರೀಮತಿ. ಸಾಯಿಸ್ವರೂಪಾ ಅಯ್ಯರ್)

ಸಂಸ್ಕಾರ ಮತ್ತು ಸಹೃದಯತೆಯ ಚಿಲುಮೆ ಶ್ರೀಮತಿ ಸಾಯಿಸ್ವರೂಪಾ. ಇವರು ಟ್ವಿಟ್ಟರ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಯಶಸ್ವಿ ಬರಹಗಾರ್ತಿ.  ಓದುಗರೊಂದಿಗೆ ಮನಬಿಚ್ಚಿ ಹಂಚಿಕೊಳ್ಳುವ ಸ್ವಭಾವ ಎಲ್ಲರಿಗೂ ಇಷ್ಟವಾಗುತ್ತದೆ. ಸೃಜನಶೀಲ ಅದರಲ್ಲೂ ಕಥಾಲೇಖನ ಮತ್ತು ಕಥಾಸಂಪಾದನೆಯ ಬಗ್ಗೆ ಸುಮಾರು ಎರಡು ಗಂಟೆಗಳ ಕಾಲ ನಿರರ್ಗಳವಾಗಿ ಮಾತಾನಾಡಿದ ಸಾಯಿಸ್ವರೂಪಾ, ತಮ್ಮ ಬರವಣಿಗೆಯ ದಿನಚರಿಯನ್ನು ಹಂಚಿಕೊಂಡರು. ಯಾವುದೋ ಒಂದು ವಿಷಯವನ್ನು ಬರವಣಿಗೆಯ ಮೂಲಕ ವ್ಯಕ್ತಪಡಿಸಬೇಕು ಎಂಬ ಆಲೋಚನೆ, ಭಗವದ್ಪ್ರೇರಣೆಯೇ ಹೊರತು ಬೇರೇನೂ ಅಲ್ಲ ಎಂದು  ಸಾಯಿ ಬಲವಾಗಿ ನಂಬುತ್ತಾರೆ. ಇಂತಹ  ಭಗವದ್ಪ್ರೇರಣೆಗೆ ಕಟಿಬದ್ಧವಾಗಿ ನಡೆದುಕೊಳ್ಳುವುದು ಬರಹಗಾರರ ಕರ್ತವ್ಯ ಎಂದು ಅವರು ಹೇಳಿದ ಮಾತು ನಿಜಕ್ಕೂ ಎಲ್ಲರನ್ನು ಬಡಿದೆಬ್ಬಿಸುವಂತಿತ್ತು. ಬರವಣಿಗೆಯ ಶಿಸ್ತು ಅದಕ್ಕೆ ಬೇಕಾದ ಸಾಧನ-ಸಲಕರಣೆಗಳ ಬಗ್ಗೆ ಸವಿವರವಾಗಿ ಚರ್ಚೆ ನಡೆಸಿದ ನಂತರ ಇಡೀ ಲೇಖಕ ವೃಂದದಲ್ಲಿ ಉತ್ಸಾಹದ ಚಿಲುಮೆ ಹರಿದಿದ್ದು ಸುಳ್ಳಲ್ಲ. 

ಸರಣಿ ಲೇಖನ  (ಶ್ರೀ. ಶಿವಕುಮಾರ್ ಜಿ.ವಿ )

ಶ್ರೀಯುತ ಶಿವಕುಮಾರ್ ಜಿ. ವಿ. ಇಂಡಿಕಾ ಬಳಗಕ್ಕೆ ಚಿರಪರಿಚಿತರು. ಹಲವು ಹೊಸ ಲೇಖಕರಿಗೆ  ಸೂಕ್ತ ಮಾರ್ಗದರ್ಶನ ನೀಡುವ ಇವರು ಇಂಡಿಕಾ ಜಾಲತಾಣದಲ್ಲಿ ಪ್ರಕಟವಾದ ತಮ್ಮ ಮಹಾಭಾರತ ಲೇಖನ ಸರಣಿಯ ಬಗ್ಗೆ ಮಾತನಾಡಿದರು. 

ಮಹಾಬಾರತದ ಪ್ರತಿ ಸನ್ನಿವೇಶದಲ್ಲಿ ಪುರುಷಾರ್ಥದ ಒಂದೊಂದು ಆಯಾಮವನ್ನು ಕೂಲಂಕಷವಾಗಿ ಅಧ್ಯಯನ ಮಾಡಬಹುದು.  ಸರಣಿ ಲೇಖನ ಹೇಗಿರಬೇಕು? ಹೇಗೆ ಬರೆಯಬೇಕು ಇತ್ಯಾದಿ ವಿಷಯಗಳನ್ನು ತಮ್ಮ ಸ್ವಂತ ಅನುಭವದ ಮೂಲಕ ವಿವರಿಸಿದರು. ಇಂಡಿಕಾ ಟುಡೇ ಲೇಖಕ ವೃಂದವನ್ನು ಹೆಚ್ಚು ಹೆಚ್ಚು ಸರಣಿ ಲೇಖನಗಳನ್ನು ಬರೆಯಲು ಆಹ್ವಾನಿಸಿದರು. 

ಇಂಡಿಕಾ ಟುಡೇ ಪುಸ್ತಕ ವಿಮರ್ಶೆ (ಡಾ.ಯೋಗಿನಿ ದೇಶಪಾಂಡೆ, ಶ್ರೀಮತಿ ರೇಖಾ ಧರ್ ಮತ್ತು ಶ್ರೀ ಶಿವಕುಮಾರ್ ಜಿ.ವಿ)

ಪುಸ್ತಕ ವಿರ್ಮರ್ಶೆಯೆಂದರೆ ಕೇವಲ ಪುಸ್ತಕ ಪರಿಚಯವಲ್ಲ. ಪುಸ್ತಕದ ಒಳನೋಟದ ಜೊತೆಗೆ ಸಾಹಿತ್ಯವಸ್ತುವಿನ ಹಿನ್ನೆಲೆ, ಇತರ ವಿಮರ್ಶಕರ ದೃಷ್ಟಿಕೋನಗಳು, ಲೇಖಕರ ಇತರ ಪುಸ್ತಕಗಳ ತುಲನಾತ್ಮಕ ಅಧ್ಯಯನಗಳಿಗೂ  ಅವಕಾಶವಿದೆ ಎಂದು ಡಾ.ಯೋಗಿನಿ ಹೇಳಿದರು. ಇಂಡಿಕಾ ಜಾಲತಾಣದಲ್ಲಿ ಈಗಾಗಲೇ ಪ್ರಕಟವಾದ ಕೆಲವು ವಿಮರ್ಶೆಗಳ ಉದಾಹರಣೆಗಳನ್ನು ನೀಡುತ್ತಾ, ಸಂಪಾದಕೀಯ ತಂಡದ ನಿರೀಕ್ಷೆಗಳನ್ನು ಸ್ಪಷ್ಟಪಡಿಸಿದರು. 

ಕಮ್ಮಟದ ಕೊನೆಯ ದಿನ,  ಇಂಡಿಕಾ ಗುಂಪಿನ  ಮುಖ್ಯಸ್ಥರಾದ ಹರಿಕಿರಣ್ ವಡ್ಲಮನಿ ಬೆಂಗಳೂರಿಗೆ ಆಗಮಿಸಿ ತಮ್ಮ ಅಮೂಲ್ಯ ಕೆಲಕ್ಷಣಗಳನ್ನು  ಲೇಖಕರೊಂದಿಗೆ ಹಂಚಿಕೊಂಡರು. ಪ್ರಸಕ್ತ ಸಾಮಾಜಿಕ ಮತ್ತು ರಾಜಕೀಯ ವಾತಾವರಣದಲ್ಲಿ ಇಂಡಿಕಾ ಸಂಸ್ಥೆಯ ಸ್ಥಾನ-ಮಾನವೇನು? ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದಾಗವಂತೆ ಹೇಗೆ ಪ್ರಭಾವ ಬೀರಬಹುದು ಎಂದು ಲೇಖಕರನ್ನು ಹುರಿದುಂಬಿಸಿದರು. 

ಕಾರ್ಯಾಗಾರಗಳ ಜೊತೆಗೆ ಊಟ-ವಸತಿಗಳ ವ್ಯವಸ್ಥೆಯನ್ನು ಅತ್ಯುತ್ತಮ ರೀತಿಯಲ್ಲಿ ನಡೆಸಿಕೊಟ್ಟ ಇಂಡಿಕಾ ಟುಡೇ ನಿರ್ವಹಣಾ ತಂಡಕ್ಕೆ ಎಲ್ಲ ಲೇಖಕರು ವಂದನೆಗಳನ್ನು ಸಲ್ಲಿಸಿದರು. ಕಮ್ಮಟದ ಪ್ರಾರಂಭದಿಂದ ಕೊನೆಯವರೆಗೂ ಪರಸ್ಪರ ಸ್ಪಂದಿಸಿ, ವಿಷಯಗಳನ್ನು ಮುಕ್ತವಾಗಿ ಚರ್ಚಿಸಿ ಎಲ್ಲ ಲೇಖಕರು ತುಂಬು ಹೃದಯದಿಂದ ಒಬ್ಬರನೊಬ್ಬರು ಬೀಳ್ಕೊಟ್ಟರು. ಮುಂದಿನ ದಿನಗಳಲ್ಲಿ ಉನ್ನತ  ಮಟ್ಟದ ಲೇಖನಗಳನ್ನು ಇಂಡಿಕಾ ಟುಡೇ ಜಾಲತಾಣದ ಮೂಲಕ ಹೊರತರಬೇಕೆಂಬ ಸಾಮೂಹಿಕ ಆಕಾಂಕ್ಷೆಯೊಂದಿಗೆ ಕಮ್ಮಟ ಸಂಪನ್ನವಾಯಿತು. 

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.