close logo

ಶ್ರೀಮನ್ನಾರಾಯಣೀಯಂ ಎಂಬ ರಮಣೀಯ ಕೃಷ್ಣಕಥೆ

ನವನೀತ ಕೃಷ್ಣ – ಗುರುವಾಯೂರಿನ ದೇವಾಲಯದ ಗೋಡೆಗಳ ಮೇಲಿನ ಭಿತ್ತಿಚಿತ್ರಕಲೆ. 

(ಛಾಯಾಚಿತ್ರ – ಲೇಖಕಿ )

॥ಶ್ರೀ ಕೃಷ್ಣಾಯ ಪರಬ್ರಹ್ಮಣೇ ನಮಃ ॥

ಕೇರಳದ  ಗುರುವಾಯೂರಿನಲ್ಲಿ ಶ್ರೀ ಮೇಲ್ಪುತ್ತೂರು ನಾರಾಯಣ ಭಟ್ಟಾದ್ರಿಗಳು ರಚಿಸಿದ ಶ್ರೀಮನ್ನಾರಾಯಣೀಯಮ್  ಎಂಬ ಸಂಸ್ಕೃತ ಕೃತಿ, ಅತ್ಯಂತ ರಮಣೀಯವಾದದ್ದು.   ಹದಿನಾರನೇ ಶತಮಾನದಲ್ಲಿ ರಚಿಸಲ್ಪಟ್ಟ ಈ  ಕೃತಿಯು ಕೃಷ್ಣಕ್ಷೇತ್ರ, ಕೃಷ್ಣಭಕ್ತಿ  ಮತ್ತು  ಕೃಷ್ಣಭಕ್ತಶ್ರೇಷ್ಠರ  ಅಪೂರ್ವ ಸಂಗಮ. ಶ್ರೀಮನ್ನಾರಾಯಣೀಯಮ್ ಅಥವಾ ನಾರಾಯಣೀಯದ ಆರಾಧ್ಯದೈವವೇ  ಗುರುವಾಯೂರಪ್ಪನ್ ಅಥವಾ ಗುರುವಾಯೂರಪ್ಪ. ಶ್ರೀಕೃಷ್ಣನ ಕಿಶೋರಪೂರ್ಣಾವತಾರದ ಮೂಲ ವಿಗ್ರಹವನ್ನು ಇಲ್ಲಿ ಪೂಜಿಸಲಾಗುತ್ತದೆ. ಶ್ರೀಕೃಷ್ಣನ ಈ ಸ್ವರೂಪವನ್ನು ಭಟ್ಟಾದ್ರಿಗಳು  ‘ದಿವ್ಯಕೈಶೋರವೇಷ’ ವೆಂದೂ , ‘ಕರವಿರಾಜಿತಶಂಖಚಕ್ರಕೌಮೋದಕೀಸರಸಿಜ’ ವೆಂದೂ ಬಣ್ಣಿಸಿದ್ದಾರೆ. ನಾರಾಯಣೀಯದ ಧ್ಯಾನಶ್ಲೋಕದಲ್ಲಿ ಗುರುವಾಯೂರಪ್ಪನ ಈ ಮನಮೋಹಕ ರೂಪವನ್ನು ಹೀಗೆ ಚಿತ್ರಿಸಲಾಗಿದೆ. 

ಪೀತಾಂಬರಂ  ಕರವಿರಾಜಿತಶಂಖಚಕ್ರಕೌಮೋದಕೀಸರಸಿಜಂ ಕರುಣಾಸಮುದ್ರಂ । 

ರಾಧಾಸಹಾಯಮತಿಸುಂದರಮಂದಹಾಸಂ ವಾತಾಲಯೇಶಮನಿಶಂ ಹೃದಿ ಭಾವಯಾಮಿ ॥

ಪೀತಾಂಬರಧಾರಿಯಾಗಿ ತನ್ನ  ಕರಗಳಲ್ಲಿ ಶಂಖ-ಚಕ್ರ-ಕೌಮೋದಕೀ (ಗಧೆ)-ಕಮಲಗಳನ್ನು ಪಿಡಿದಿರುವವನೂ, ಸದಾ ರಾಧೆಯ ಸೇವೆ ಸ್ವೀಕರಿಸುತ್ತಿರುವವನೂ ,   ಕರುಣಾಸಾಗರನೂ  ಆದ  ವಾತಾಲಯೇಶ (ವಾತಾಲಯದ/ಗುರುವಾಯೂರಿನ ಸ್ವಾಮಿ) ಮತ್ತವನ ಅತಿಸುಂದರ ಮಂದಹಾಸವನ್ನು ನನ್ನ ಮನದಲ್ಲಿ ನೆನೆಯುತ್ತೇನೆ. 

ಶ್ರೀಕೃಷ್ಣ  ಪುಣ್ಯ ಕ್ಷೇತ್ರ ಗುರುವಾಯೂರು 

ಇಂದಿನ ತ್ರಿಶೂರ್ ಜಿಲ್ಲಾಕೇಂದ್ರದಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಗುರುವಾಯೂರು ಬಹಳ ಪುರಾತನವಾದ ನಗರ.   ನಾರದೀಯ ಪುರಾಣದಲ್ಲಿ, ಬ್ರಹ್ಮನಿಂದ ಮೊದಲುಗೊಂಡು ಸುತಪಸನೆಂಬ ಪ್ರಜಾಪತಿ , ಕಶ್ಯಪ ಋಷಿ ಮತ್ತು ಕೊನೆಯಲ್ಲಿ ಶ್ರೀಕೃಷ್ಣನ ತಂದೆಯಾದ ವಸುದೇವನಿಂದ ಅವಿಚ್ಛಿನ್ನ ಪರಂಪರೆಯಲ್ಲಿ ಪೂಜಿಸಲ್ಪಟ್ಟ ಮೂಲವಿಗ್ರಹವೊಂದರ ಉಲ್ಲೇಖವಿದೆ.  

ಮಹಾವಿಷ್ಣುವಿನ ಆದಿಕೇಶವರೂಪವಾದ ಈ ಮೂಲವಿಗ್ರಹವನ್ನು  ಯಾದವರು ತಮ್ಮ  ಕುಲದೈವವಾಗಿ ಆರಾಧಿಸುತ್ತಿದ್ದರು ಎಂಬ ಪ್ರತೀತಿಯುಂಟು. ಪುರಾಣಕಥೆಗಳ  ಪ್ರಕಾರ ,  ಕೃಷ್ಣಾವತಾರದ ಅಂತ್ಯದಲ್ಲಿ  ದ್ವಾರಕೆಯು ಸಮುದ್ರದಲ್ಲಿ ಮುಳುಗಿಹೋಗುವಾಗ ಈ ಮೂಲವಿಗ್ರಹವು ಸಮುದ್ರದಲ್ಲಿ ತೇಲಾಡುತ್ತಿತ್ತಂತೆ. ಆಗ ಸ್ವತಃ ಮಹಾವಿಷ್ಣುವೇ ಈ ವಿಗ್ರಹವನ್ನು ಬೇರೆಡೆ ಸುರಕ್ಷಿತವಾಗಿ ಸಾಗಿಸುವಂತೆ ದೇವಗುರು ಬೃಹಸ್ಪತಿಗಳಿಗೆ ತಿಳಿಸಿದನಂತೆ. ಆನಂತರ ದೇವಗುರುಗಳು ತಮ್ಮ ಶಿಷ್ಯನಾದ ವಾಯುದೇವನಿಗೆ ಅಲೆಗಳನ್ನು ನಿಯಂತ್ರಿಸುವಂತೆ ಆಜ್ಞಾಪಿಸಿ ವಿಗ್ರಹವನ್ನು ಸಮುದ್ರದಿಂದ ಹಿಂಪಡೆದರಂತೆ. ಹೀಗೆ ಗುರು-ವಾಯು ಇಬ್ಬರೂ ವಿಗ್ರಹವನ್ನು ಹಿಡಿದು ಸೂಕ್ತಸ್ಥಳವನ್ನು ಹುಡುಕುತ್ತಾ ಲೋಕಸಂಚಾರ ಮಾಡುತ್ತಿರುವಾಗ , ಪರಶುರಾಮರು ಎದುರಾದರಂತೆ.  ಆಗಷ್ಟೇ ತಮ್ಮ ಕೊಡಲಿ ಬೀಸಿ,  ಗೋಕರ್ಣದಿಂದ ಕನ್ಯಾಕುಮಾರಿಯವರೆಗಿನ ಭೂ-ಪ್ರದೇಶವನ್ನು  ಸಮುದ್ರದಿಂದ ಹಿಂಪಡೆದಿದ್ದ ಭಾರ್ಗವರು, ಗುರು  ಮತ್ತು ವಾಯುದೇವರನ್ನು  ಈ ಭೂ-ಪ್ರದೇಶ(ಕೇರಳ)ಕ್ಕೆ ಆಹ್ವಾನಿಸಿದರಂತೆ. ಹೀಗೆ ಬಂದವರಿಗೆ ಸಾಕ್ಷಾತ್ ಮಹದೇವನೇ ತನ್ನ ಕ್ಷೇತ್ರವನ್ನು ತೆರವುಮಾಡಿಕೊಟ್ಟು ಮೂಲವಿಗ್ರಹವನ್ನು ಇಲ್ಲಿಯೇ ಪ್ರತಿಷ್ಠಾಪಿಸುವಂತೆಯೂ ಮತ್ತು ಇನ್ನುಮುಂದೆ ಈ ಸ್ಟಳಕ್ಕೆ ದೇವಗುರು ಬೃಹಸ್ಪತಿ ಮತ್ತು ವಾಯುದೇವರ ಜ್ಞಾಪಕಾರ್ಥವಾಗಿ ಗುರು-ಪವನ-ಪುರ (ಗುರುವಾಯೂರು)  ಎಂದು ಕರೆಯಬೇಕೆಂದೂ  ಆದೇಶಿಸಿದನಂತೆ.  ಇದನ್ನು ಸೂಚಿಸುವ  ಪುರಾಣಶ್ಲೋಕ  ಹೀಗಿದೆ  :

“ಸುರಾಚಾರ್ಯ ತ್ವಯಾನೇನ ವಾಯುನಾ ಚ ನಿಮಿತ್ತತಃ । ಆರಬ್ಧಮೇತತ್ಕ್ಷೇತ್ರಂ ಸ್ಯಾತ್ ಗುರುವಾಯುಪುರಾಭಿಧಮ್॥”  

ಸ್ವಾರಸ್ಯವೇನೆಂದರೆ , ತನ್ನ ಸ್ಥಾನವನ್ನು ಶ್ರೀ ಕೃಷ್ಣನ ಮೂಲವಿಗ್ರಹಕ್ಕೆ ತೆರವು ಮಾಡಿಕೊಟ್ಟ ಮಹಾದೇವನು , ಇಲ್ಲಿಂದ ಅನತಿ ದೂರದಲ್ಲಿರುವ ಮಮ್ಮಿಯೂರಿನಲ್ಲಿ ನೆಲೆಸಿದ್ದಾನೆ. ಆದರೆ, ಮಹಾದೇವ ಶಂಕರನ ಸಹಧರ್ಮಿಣಿಯಾದ ಭಗವತಿ ಮಾತ್ರ ಗುರುವಾಯೂರಪ್ಪನ ಗರ್ಭಗುಡಿಯ ಎಡಬಾಗಕ್ಕೆ ತನ್ನದೇ ಗುಡಿಯಲ್ಲಿ ಪೂಜಿಸಲ್ಪಡುತ್ತಾಳೆ. ವನದುರ್ಗೆಯೆಂದೂ ಆರಾಧಿಸಲ್ಪಡುವ ಈ ದೇವಿಯ ಗುಡಿಗೆ ‘ಎಡತ್ತರಿಕತ್ತು ಕಾವು’ ಎಂಬ ಹೆಸರಿದೆ. ಭಗವತಿ ಗುರುವಾಯೂರು ಕೃಷ್ಣದೇವಾಲಯದ ಉಪದೇವತೆ. ಭಗವತಿಯನ್ನು ವಂದಿಸಿ ಪ್ರದಕ್ಷಿಣೆ ಹಾಕುವ ಭಕ್ತರು, ಮಮ್ಮಿಯೂರಿನ ದಿಕ್ಕಿನಲ್ಲಿ ನಿಂತು ಮಹಾದೇವನನ್ನು ನಮಸ್ಕರಿಸುವ ಪದ್ಧತಿ ಇಲ್ಲಿಯ ವೈಶಿಷ್ಟ್ಯ. ಗುರುವಾಯೂರಿಗೆ ಆಗಮಿಸುವ ಭಕ್ತರ ಯಾತ್ರೆ ಮಮ್ಮಿಯೂರಿಗೆ ಹೋಗದೆ ಸಂಪೂರ್ಣವಾಗುವುದಿಲ್ಲ ಎನ್ನುವ ನಂಬಿಕೆ ಇದೆ. ಒಂದೇ ತೀರ್ಥಕ್ಷೇತ್ರದಲ್ಲಿ ಹರಿ-ಹರ (ವಿಷ್ಣು-ಶಿವ)ರಿಬ್ಬರನ್ನು ಆರಾಧಿಸುವ ಪದ್ಧತಿ ಭಾರತೀಯ ಪರಂಪರೆಯಲ್ಲಿ ಸರ್ವೇಸಾಮಾನ್ಯ. ಗುರುವಾಯೂರಿಗೆ ಬಂದ ಪ್ರತಿಯೊಬ್ಬ ಭಕ್ತನೂ ಅಲ್ಲಿಯ ಪ್ರಸಿದ್ಧ ಕೃಷ್ಣಭಕ್ತರ ಕಥೆಗಳನ್ನು ಕೇಳದೇ ಇರುವುದು ಅಸಾಧ್ಯ. ಗುರುವಾಯೂರಿನ ಸ್ಥಳಪುರಾಣಗಳಲ್ಲಿ ನೂರಾರು ವರ್ಷಗಳ ಹಿಂದಿನ ಕುರೂರಮ್ಮ, ಪೂಂತಾನಂ  ನಂಬೂದಿರಿ , ನಾರಾಯಣ ಭಟ್ಟಾದ್ರಿ ಮತ್ತು ಇತ್ತೀಚಿನ ಚೆಂಬೈ ವೈದ್ಯನಾಥ ಭಾಗವತರ ಹೆಸರು ಕೇಳಿಬರುತ್ತವೆ.ಈ ಭಕ್ತಶ್ರೇಷ್ಠರ ಸಾಲಿನಲ್ಲಿ ಮೇಲ್ಪುತ್ತೂರ್ ನಾರಾಯಣ ಭಟ್ಟಾದ್ರಿಗಳು ಅಗ್ರಗಣ್ಯರು.  ಭಟ್ಟಾದ್ರಿಗಳು ಗುರುವಾಯೂರನ್ನು ಹತ್ತು ಹಲವು ಹೆಸರುಗಳಿಂದ ಬಣ್ಣಿಸಿದ್ದಾರೆ.  ಗುರುಪವನಪುರ ಅಥವಾ ಕೇವಲ ಪವನಪುರ , ವಾತಾಲಯ , ಮರುತಪುರ , ಮರುದಾಲಯ, ವಾತಗೇಹ ಇತ್ಯಾದಿ ನಾಮಗಳಿಂದ ಕರೆಯಲ್ಪಡುವ  ಗುರುವಾಯೂರಿನಲ್ಲಿ, ವಾತ/ಪವನ /ಮಾರುತ ಎಂದೆಲ್ಲಾ ಕರೆಯಲಾಗುವ ವಾಯುದೇವನ ವರ್ಚಸ್ಸು ಬಹಳ ಪ್ರಬಲವಾದದ್ದು ಎಂದು ಅರಿತುಕೊಳ್ಳಬಹುದು. ಈ ಕಾರಣಗಳಿಂದ , ಆಯುರ್ವೇದದಲ್ಲಿ ವಾಯು ಅಥವಾ ವಾತವ್ಯಾಧಿ ಎಂಬ ರೋಗಗಳಿಂದ  ಬಳಲುತ್ತಿರುವವರಿಗೆ  ಗುರುವಾಯೂರಿನಲ್ಲಿ ರೋಗ ಶಮನವಾಗುತ್ತದೆ ಎಂಬ ನಂಬಿಕೆಯೂ ಬಹಳ ಕಾಲದಿಂದ ಪ್ರಚಲಿತವಾಗಿದೆ. ವಾಸ್ತವವಾಗಿ, ಈ ವಾತವ್ಯಾಧಿಯ  ಕಾರಣದಿಂದಲೇ ನಾರಾಯಣ ಭಟ್ಟಾದ್ರಿಗಳು ಗುರುವಾಯೂರಿಗೆ ಆಗಮಿಸಿದ್ದು. 

ಭಕ್ತಶ್ರೇಷ್ಠ  ಶ್ರೀ  ಮೇಲ್ಪುತ್ತೂರ್ ನಾರಾಯಣ ಭಟ್ಟಾದ್ರಿ

ಶ್ರೀ ಕೃಷ್ಣನ ಪರಮಭಕ್ತರಾದ ನಾರಾಯಣ ಭಟ್ಟಾದ್ರಿಗಳು ಮೂಲತಃ ಗುರುವಾಯೂರಿನಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಮೇಲ್ಪುತ್ತೂರಿನವರು. ಪ್ರತಿಷ್ಠಿತ ನಂಬೂದಿರಿ ಬ್ರಾಹ್ಮಣರ ಕುಟುಂಬದಲ್ಲಿ ಜನಿಸಿದ ಇವರು ಸಣ್ಣ ವಯಸ್ಸಿನಲ್ಲಿಯೇ ಅಚ್ಯುತ ಪಿಶೋರಡಿ ಎಂಬ ಹೆಸರಿನ ಪ್ರಕಾಂಡ ಪಂಡಿತರ ಶಿಷ್ಯರಾದರು. ಹಲವಾರು ವಿದ್ಯೆಗಳಲ್ಲಿ ಪರಿಣಿತಿ ಹೊಂದಿದ್ದ  ಪಿಶೋರಡಿಗಳು ಪ್ರಸಿದ್ಧ ವೈಯ್ಯಾಕರಣಿಗಳಾಗಿದ್ದರು. ಇಂತಹ ಗುರುಗಳ ಬಳಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ನಾರಾಯಣ ಭಟ್ಟಾದ್ರಿಗಳು ಹಲವು ಶಾಸ್ತ್ರಗಂಥಗಳನ್ನು ಮತ್ತು ಸ್ತುತಿಗಳನ್ನು ರಚಿಸಿದರು. ತಮ್ಮ ಇಪ್ಪತ್ತೈದು ವಯಸ್ಸಿನಲ್ಲಿ  ಯುವ  ಭಟ್ಟಾದ್ರಿಗಳು ವಾತವ್ಯಾಧಿಯಿಂದ ಪೀಡಿತರಾದರು. ಆದರೆ, ಭಟ್ಟಾದ್ರಿಗಳು ರೋಗಗ್ರಸ್ತರಾಗುವ ಸ್ವಲ್ಪ ಮುಂಚೆಯೇ, ಅವರ ವೃದ್ಧ ಗುರುಗಳಾದ ಪಿಶೋರಡಿಗಳು  ಹಲವು ವರ್ಷ ಸಂಧಿವಾತದಿಂದ  ನರಳಿ ತಮ್ಮ ಇಳಿವಯಸ್ಸಿನಲ್ಲಿ ಉಪಶಮನಗೊಂಡಿದ್ದು ವಿಧಿಯ ವೈಚಿತ್ರವಲ್ಲದೆ ಬೇರೇನು? ದೇಹದಲ್ಲಿ ವಾಯುವಿನ ಸಮತೋಲನ ತಪ್ಪಿ ಶರೀರದ ಕೀಲುಗಳಿಗೆ ಹಾನಿಯುಂಟಾಗುವ ಈ ಖಾಯಿಲೆಗೆ ಆಯುರ್ವೇದದಲ್ಲಿ ವಾತದೋಷವೆಂದು ಗುರುತಿಸಲಾಗಿದೆ. ಈ ವಾತದೋಷದ ಪರಿಹಾರಾರ್ಥವಾಗಿ ಗುರುವಾಯೂರನ್ನು ಭೇಟಿಯಾಗುವುದೇ ಸೂಕ್ತವೆಂದು ಭಟ್ಟಾದ್ರಿಗಳಿಗೆ ಹಲವರು ತಿಳಿಹೇಳಿದರು. 

ಹೀಗೆ ಹೇಳಲಾರದ ನೋವಿನಿಂದ ಬಳಲುತ್ತಲೇ ನಾರಾಯಣ ಭಟ್ಟಾದ್ರಿಗಳು ಕಾಲ್ನಡಿಗೆಯಲ್ಲಿ ಗುರುವಾಯೂರನ್ನು ತಲುಪಿದರು. ಅಲ್ಲಿನ ಪವಿತ್ರ ಪರಿಸರ ಅವರಿಗೆ ಎಲ್ಲಿಲ್ಲದ ಆನಂದ ತಂದಿತು. ಅನಾದಿಕಾಲದಿಂದಲೋ  ಗುರುವಾಯೂರಿನಲ್ಲಿ ನೆಲೆಸಿರುವ ಪೂರ್ಣಾವತಾರರೂಪನಾದ  ಶ್ರೀ ಕೃಷ್ಣನ ಈ ಮೂಲ ವಿಗ್ರಹವನ್ನು  ನೋಡಿ ಮನಸೋತ ಭಟ್ಟಾದ್ರಿಗಳು ನಿಂತಲ್ಲೇ ನಾರಾಯಣೀಯವನ್ನು ರಚಿಸಲು ಆರಂಭಿಸಿದರು. ಹೀಗೆ ದಿನರಾತ್ರಿಯೆನ್ನದೆ ನೂರು ದಶಕಗಳನ್ನು ಸೃಷ್ಟಿಸಿದ ಕೃತಿಯೇ ಶ್ರೀಮನ್ನಾರಾಯಣೀಯಂ. ನೂರನೇ ದಶಕವನ್ನು  ರಚಿಸುವ ದಿನ ಅವರಿಗೆ ಶ್ರೀ ಕೃಷ್ಣನ ದಿವ್ಯದರ್ಶನವಾಯಿತು. ನಾರಾಯಣೀಯದ ಅಂತಿಮ ದಶಕದ ಶ್ಲೋಕಗಳಲ್ಲಿ ಗುರುವಾಯೂರಪ್ಪನ ‘ಕೇಶಾದಿಪಾದಾಂತರೂಪ’ದ ವರ್ಣನೆಯಿದೆ.  ಗುರುವಾಯೂರಪ್ಪನು,  ಭಟ್ಟಾದ್ರಿಗಳು ಕೋರಿದಂತೆಯೇ ಅವರಿಗೆ ‘ಆಯುರಾರೋಗ್ಯಸೌಖ್ಯ’ ವನ್ನು ದಯಪಾಲಿಸಿದನು. ನಾರಾಯಣ ಭಟ್ಟಾದ್ರಿಗಳು ತದನಂತರ ನೂರ್ಕಾಲ ಬಾಳಿ ಬದುಕಿದರು ಎಂಬ ದಂತಕತೆಯಿದೆ. ನೂರಿಲ್ಲದಿದ್ದರೂ ಎಂಬತ್ತರ ತುಂಬು ವಯಸ್ಸಿನಲ್ಲಿ ದೇಹತ್ಯಾಗ ಮಾಡಿದರು ಎನ್ನುವುದೇ ಸತ್ಯ. ನೂರನೇ ದಶಕದ ಅಂತಿಮ ಶ್ಲೋಕದ ಕೊನೆಯ ಪದ ‘ಆಯುರಾರೋಗ್ಯಸೌಖ್ಯಂ’ ಅರ್ಥಾತ್  ಅರೋಗ್ಯ ಮತ್ತು ಸೌಖ್ಯದಿಂದ ಕೂಡಿದ ದೀರ್ಘ ಆಯುಸ್ಸು. ಭಗವಂತನಿಂದ  ಭಟ್ಟಾದ್ರಿಗಳು  ಇದನ್ನೇ ಬೇಡಿದ್ದು.  ಸಂಖ್ಯೆಗಳನ್ನು ಅಕ್ಷರ/ಪದಗಳಿಂದ ಸೂಚಿಸುವ ಭಾರತೀಯ ಶಾಸ್ತ್ರೀಯ ಪದ್ಧತಿಯಾದ ಕಟಪಯಾದಿ ಸೂತ್ರದ ಪ್ರಕಾರ ಆಯುರಾರೋಗ್ಯಸೌಖ್ಯಂ ಎಂದರೆ 1712210.  ಮಲಯಾಳ ಪಂಚಾಂಗದ ಪ್ರಕಾರ,  ಕಲಿಯುಗದ ಪ್ರಾರಂಭದಿಂದ 1712210 ನೆೇ ದಿನದಂದು  (763 ನೇ ಕೊಲ್ಲವರ್ಷದ ವೃಶ್ಚಿಕ ಮಾಸದ ಇಪ್ಪತೆಂಟನೇ ದಿನ /27 ನವೆಂಬರ್ 1587)  ಭಟ್ಟಾದ್ರಿಗಳು ನಾರಾಯಣೀಯದ ಕೊನೆಯ ಶ್ಲೋಕವನ್ನು ರಚಿಸಿದರೆಂದು ತಿಳಿದು ಬರುತ್ತದೆ. ಭಟ್ಟಾದ್ರಿಗಳ ವಿದ್ವತ್ತು ಯಾವ ಮಟ್ಟಿನದ್ದಿರ ಬಹುದು ಎಂದು ಇದರಿಂದ ತಿಳಿಯಬಹುದು. ಭಟ್ಟಾದ್ರಿಗಳ ಪಾಂಡಿತ್ಯದ ಆಳ-ಅಗಲಗಳನ್ನು ಸಮರ್ಪಕವಾಗಿ ಅರಿತುಕೊಳ್ಳಬೇಕಾದರೆ ನಾರಾಯಣೀಯವನ್ನು ಓದಬೇಕು.  ಶ್ರೀಮದ್ಭಾಗವತದ ಹದಿನೆಂಟು ಸಾವಿರ ಶ್ಲೋಕಗಳನ್ನು  ಕೇವಲ ಸಾವಿರ ಶ್ಲೋಕಗಳಲ್ಲಿ ಭಟ್ಟಿ ಇಳಿಸುವುದು ಅತಿಶಯವೇ ಸರಿ. ನಾರಾಯಣೀಯಂ ಭಾಗವತ ಪುರಾಣದ ಕೇವಲ ಸಾರಾಂಶ ಅಥವಾ  ಸಂಕ್ಷಿಪ್ತ ರೂಪವಲ್ಲ. ಮಲೆನಾಡಿನ ಆಲೆಮನೆಗಳಲ್ಲಿ ಕಬ್ಬಿನ ಜಲ್ಲೆಗಳನ್ನು ಗಾಣದಲ್ಲಿ ಜಜ್ಜಿ ಯಾವುದೇ ಬೆರಕೆಯಿಲ್ಲದ , ಸಿಹಿಯಾದ ತಾಜಾ ಕಬ್ಬಿನ ರಸದಂತೆ ಭಾಗವತದ ಸಾರವನ್ನು ನಾರಾಯಣೀಯದ ರೂಪದಲ್ಲಿ ಭಟ್ಟಾದ್ರಿಗಳು ಉಣಬಡಿಸಿದ್ದಾರೆ. 

ಶ್ರೀಮನ್ನಾರಾಯಣೀಯಂ ಎಂಬ ರಮಣೀಯ ಕೃಷ್ಣಕಥೆ 

ಕೇರಳ ಮತ್ತು ತಮಿಳುನಾಡಿನ ಮನೆಮನೆಗಳಲ್ಲಿ  ನಾರಾಯಣೀಯದ ಪಾರಾಯಣ ನಡೆಯುತ್ತಲೇ ಇರುತ್ತದೆ. ಆದರೆ, ಈ ಎರಡು ರಾಜ್ಯಗಳ ಹೊರಗಡೆ ಈ ಸಂಸ್ಕೃತ ಕೃತಿಯ ಪರಿಚಯ ಸ್ವಲ್ಪ ಕಡಿಮೆಯೇ ಎಂದು ಹೇಳಬಹುದು. ಆದರೆ ತಾವು ವಲಸೆ ಹೋದಲೆಲ್ಲಾ ಈ ಪ್ರದೇಶಗಳ ಜನರು ತಮ್ಮೊಡನೆ ನಾರಾಯಣೀಯಂ ಮತ್ತು ಅದರ ಪಾರಾಯಣ ಸಂಪ್ರದಾಯವನ್ನು ಕೊಂಡೊಯ್ಯದಿದ್ದಾರೆ. ಇತ್ತೀಚಿನ ದಶಕಗಳಲ್ಲಿ ವಿಶ್ವದ ಉಳಿದ ಕೃಷ್ಣ ಭಕ್ತರಿಗೆ ನಾರಾಯಣೀಯದ ಪರಿಚಯವಾಗಿದೆ. ತಮ್ಮ ಈ ಮಹತ್ಕೃತಿಯನ್ನು ಭಟ್ಟಾದ್ರಿಗಳು ‘ದ್ವೇಧಾ ನಾರಾಯಣೀಯಂ’ (ನಾ.100.11) ಎಂದು ಉಲ್ಲೇಖಿಸುತ್ತಾರೆ. ದ್ವೇಧಾ ಎಂದರೆ ‘ಎರಡು ಬಗೆಯದ್ದು’. ನಾರಾಯಣೀಯಂ – ನಾರಾಯಣನನ್ನು ಕುರಿತದ್ದು ಮತ್ತು ನಾರಾಯಣ (ಸ್ವತಃ ಭಟಾದ್ರಿಗಳು) ರಚಿಸಿದ್ದು ಎಂಬರ್ಥ. ಈ ಕೃತಿಯಲ್ಲಿ ಒಟ್ಟು 1034 ಶ್ಲೋಕಗಳನ್ನು ನೂರು ದಶಕಗಳಾಗಿ ವಿಂಗಡಿಸಲಾಗಿದೆ. ಸಂಸ್ಕೃತದ ಉತ್ಕೃಷ್ಟ ಕೃತಿಗಳಲ್ಲಿ ನಾರಾಯಣೀಯವೂ ಒಂದು ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಇದರಲ್ಲಿನ ಪ್ರತಿ ಶ್ಲೋಕವೂ ದೇವರನ್ನು ಸಂಬೋಧಿಸಿದೆ. ದೇವ ಮತ್ತವನ ಭಕ್ತನ ನಡುವಿನ ಆತ್ಮೀಯ ಸಂಭಂದದ ಪ್ರತೀಕವೇ ನಾರಾಯಣೀಯಂ. ಇಲ್ಲಿ ಮೂರನೆಯವರಿಗೆ ಅವಕಾಶವಿಲ್ಲ. ಇದನ್ನು ಪಠಿಸುವವರಿಗೆ ತಾವೇ ದೇವರೊಡನೆ ಸಂಭಾಷಿಸುವ ಭಾವ ಮೂಡುತ್ತದೆ. ಕೇವಲ ಭಕ್ತಿಯ ದೃಷ್ಟಿಯಿಂದ ಮಾತ್ರವಲ್ಲ ಸಾಹಿತ್ಯದ ದೃಷ್ಟಿಯಿಂದಲೂ ನಾರಾಯಣೀಯಂ ಬಹಳ ಅಪರೂಪದ ಕೃತಿ. ಎಲ್ಲಕ್ಕಿಂತ ಮಿಗಿಲಾಗಿ ತನ್ನ ರೋಗಪರಿಹಾರಕಶಕ್ತಿಯಿಂದಾಗಿ ನಾರಾಯಣೀಯವು ಹೆಚ್ಚು ಸುಪ್ರಸಿದ್ಧವಾಗಿದೆ. ನಾರಾಯಣೀಯವನ್ನು ಓದುವ  ಕಾರಣ ಏನೇ ಇರಲಿ,   ಓದುಗನು ಶ್ರೀಕೃಷ್ಣ ಭಗವಂತನಿಗೆ ಇನ್ನಷ್ಟು ಹತ್ತಿರವಾಗಿತ್ತಾನೆ ಎನ್ನುವುದು ನಿಜ.  ಶ್ರೀಮನ್ನಾರಾಯಣೀಯಲ್ಲಿ ಕೃಷ್ಣನ ಸ್ತುತಿಯೂ ಇದೆ, ಕಥೆಯೂ ಇದೆ.  

ಸ್ತುತಿರೂಪದಲ್ಲಿ ಭಟ್ಟಾದ್ರಿಗಳು ತಮ್ಮ ‘ಆಯುರಾರೋಗ್ಯಸೌಖ್ಯ’ದ ಜೊತೆಗೆ ‘ವಿಶ್ವಪೀಡಾಪಹತ್ಯೆೈ’ ಗಾಗಿಯೂ ಪ್ರಾರ್ಥಿಸುತ್ತಾರೆ. ಪ್ರತಿ ದಶಕದ ಕೊನೆಯ ಶ್ಲೋಕದಲ್ಲಿ ‘ಮಾಂ ತ್ರಾಯಸ್ವ’, ‘ಸರ್ವಾಮಯಾತ್’, ‘ನಿರುಂಧಿ ರೋಗಾನ್ ಮಮ’ , ‘ರೋಗರಾಶಿಂ  ನಿರುಂಧಿ’, ‘ರೋಗೌಘಮ್ ಪ್ರಶಾಮಯ’, ‘ತಪಾನ್ ಮಮಾಪಾಕುರು’,’ಪಾಹಿ ಮಾಮಾಮಯೇಭ್ಯಃ’ ಇತ್ಯಾದಿ ಹತ್ತು ಹಲವು ವಿಧದಲ್ಲಿ ತಮ್ಮನ್ನು ವಾತದೋಷದಿಂದ ಮುಕ್ತಗೊಳಿಸುವಂತೆ ಕೇಳಿಕೊಳ್ಳುತ್ತಾರೆ. ನಾರಾಯಣೀಯದ ಪ್ರಾರಂಭದ ಕೆಲವು ದಶಕಗಳು ಸ್ತುತಿರೂಪದಲ್ಲಿವೆ. ತನ್ನ ನೆಚ್ಚಿನ ಗುರುವಾಯೂರಪ್ಪನ ಮೇಲೆ ಭಟ್ಟಾದ್ರಿಗಳು ಹೊಗಳಿಕೆಯ ಹೂಮಳೆಯೇ  ಸುರಿಸುತ್ತಾರೆ. ನಾರಾಯಣೀಯದ ಮೊದಲನೆಯ ಶ್ಲೋಕ ಹೀಗಿದೆ, 

ಸಾಂದ್ರಾನಂದಾವಬೋಧಾತ್ಮಕಮನುಪಮಿತಂ ಕಾಲದೇಶಾವಧಿಭ್ಯಾಂ   

ನಿರ್ಮುಕ್ತಂ ನಿತ್ಯಮುಕ್ತಂ ನಿಗಮಶತಸಹಸ್ರೇಣ ನಿರ್ಭಾಸ್ಯಮಾನಮ್ ।

ಅಸ್ಪಷ್ಟಂ ದೃಷ್ಟಮಾತ್ರೇ ಪುನರುರುಪುರುಷಾರ್ಥಾತ್ಮಕಂ ಬ್ರಹ್ಮ ತತ್ವಮ್

ತತ್ತಾವದ್ಭಾತಿ ಸಾಕ್ಷಾದ್ಗುರುಪವನಪುರೇ ಹಂತ ಭಾಗ್ಯಂ ಜನಾನಾಮ್ ॥ನಾ  1.1॥

ಸಚ್ಚಿದಾನಂದ ಸ್ವರೂಪನಾದ (ಸಾಂದ್ರಾನಂದ) ಅವಬೋಧಾತ್ಮಕನೂ ಮತ್ತು ಅನುಪಮನೂ (ಅನುಪಮಿತಂ) ಕಾಲ-ದೇಶ-ಅವಧಿಗಳ ಪರಿಮಿತಿಯಿಂದ ಮುಕ್ತನಾದವನೂ , ನಿತ್ಯಮುಕ್ತನೂ ಆದ ನಿನ್ನನ್ನು ತಿಳಿಯಲು  ಸಹಸ್ರಾರು ವರ್ಷಗಳ ಕಾಲ ತಪಸ್ಸು ಮಾಡಿ ಎಲ್ಲೋ ಒಂದು ಗಳಿಗೆ ಅಸ್ಪಷ್ಟವಾಗಿ ಕಂಡರೂ ಪರಮ ಪುರುಷಾರ್ಥವನ್ನು ಅರ್ಥೈಸುವ ಬ್ರಹ್ಮತತ್ತ್ವವು ಮನದಟ್ಟಾಗುತ್ತದೆಯೋ ಅಂತಹ ನೀನು ಸಾಕ್ಷಾತ್ ಗುರುಪವನಪುರದಲ್ಲಿ ತನ್ನ ಭಾಗ್ಯವಂತ ಭಕ್ತರಿಗೆ ಸದಾ ದರ್ಶನ ನೀಡುತ್ತಿದ್ದೀಯೆ. 

ಹೀಗೆ ಮೊದಲನೆಯ ಶ್ಲೋಕದಿಂದಲೇ ರಭಸದಿಂದ ಹರಿಯುವ ಭಕ್ತಿಪ್ರವಾಹವೇ ಸಹಸ್ರಶ್ಲೋಕೀ ನಾರಾಯಣೀಯಂ. ಮೊದಲನೇ ದಶಕದ ಎಲ್ಲ ಶ್ಲೋಕಗಳು ಸ್ರಗ್ಧರಾ  ವೃತ್ತದಲ್ಲಿ ರಚಿಸಲಾಗಿದೆ.  “ಮರಭನಯಯಯ”  ಎಂಬ ರೀತಿಯಲ್ಲಿ ಗಣವಿನ್ಯಾಸವಿರುವ ಸ್ರಗ್ಧರಾ  ವೃತ್ತದಲ್ಲಿ ರಚಿಸಲಾದ ಶ್ಲೋಕಗಳಿಗೆ ಭಕ್ತಿರಸವೇ ಪ್ರಧಾನ. ಇದನ್ನು ಪಠಿಸುವುದರಿಂದ ಪರಿಸರದಲ್ಲಿ ಅಧ್ಯಾತ್ಮ ಮತ್ತು ಭಕ್ತಿಯ ಮನಸ್ಥಿತಿ ಸಹಜವಾಗಿಯೇ ಏರ್ಪಡುತ್ತದೆ ಎಂದು ಡಾ. ಸಂಪದಾನಂದ ಮಿಶ್ರರ ‘ಛಂದೋವಲ್ಲರಿ’ ಪುಸ್ತಕದಲ್ಲಿ ಹೇಳಲಾಗಿದೆ. ಮುಂದಿನ ಎರಡು ದಶಕಗಳಲ್ಲಿ  ಭಗವದ್ರೂಪ ಮತ್ತು ಭಕ್ತಿಸ್ವರೂಪವನ್ನು ಕ್ರಮವಾಗಿ ಶಾರ್ದೂಲವಿಕ್ರೀಡಿತ ಮತ್ತು ಸ್ರಗ್ವಿಣೀ ಛಂದಸ್ಸಿನಲ್ಲಿ ವರ್ಣಿಸಲಾಗಿದೆ. 

ಐದನೇ ದಶಕದಿಂದ ನಾರಾಯಣೀಯದ ಕಥಾರೂಪ ಪ್ರಾರಂಭವಾಗುತ್ತದೆ. ಈ ಕಥೆಯಲ್ಲಿ  ಕೃಷ್ಣನೇ ನಾಯಕ.  ನಾರಾಯಣೀಯವನ್ನು ರಚಿಸುವ ಮುನ್ನ ಭಟ್ಟಾದ್ರಿಗಳು ಬಹಳ ಗೊಂದಲದಲ್ಲಿದ್ದಾಗ  ತುಞ್ಚತ್ತ್ ಎಳುತ್ತಚ್ಛನ್ ಎಂಬ ಕೇರಳದ ಪ್ರಸಿದ್ಧ ಕವಿ, ‘ಮೀನಿನಿಂದ ತೊಡಗು’ ಎಂಬ ನಿಗೂಢ ಸಂದೇಶವನ್ನು ಕಳಿಸಿದರು ಎಂಬ ಪ್ರತೀತಿಯಿದೆ. ಮತ್ಸ್ಯಾವತಾರದಿಂದ ಮೊದಲುಗೊಂಡು ಮಹಾವಿಷ್ಣುವಿನ ದಶಾವತಾರವನ್ನು ವರ್ಣಿಸು ಎನ್ನುವುದೇ ಈ ಸಂದೇಶದ ಅರ್ಥವೆಂದು ಅರಿತುಕೊಂಡ ನಾರಾಯಣ ಭಟ್ಟಾದ್ರಿಗಳು ಭಾಗವತದ ಸಾರವನ್ನು ಮರುಸೃಷ್ಟಿ ಮಾಡುವುದೇ ಉತ್ತಮವೆಂದು ನಿರ್ಧರಿಸಿದರಂತೆ. 

ಶ್ರೀಮದ್ಭಾಗವತದಂತೆಯೇ ನಾರಾಯಣೀಯದ ಕೇಂದ್ರಬಿಂದು,  ಭಕ್ತಿರಸ. ಅಂತೆಯೇ ಮೂಲಭಾಗವತದಲ್ಲಿ ಕಂಡುಬರುವ ಅಧ್ಯಾತ್ಮವಿಚಾರವೂ ನಾರಾಯಣೀಯದಲ್ಲಿದೆ. ಅಷ್ಟಾಂಗ ಯೋಗ (5ನೇ ದಶಕ) , ಕರ್ಮಮಾರ್ಗ (92ನೇ ದಶಕ), ತತ್ತ್ವಜ್ಞಾನ (94ನೇ ದಶಕ) , ಸಾಂಖ್ಯ(94ನೇ ದಶಕ) ಮತ್ತು ಭಕ್ತಿಯೋಗ (96ನೇ ದಶಕ) ವನ್ನು ತಿಳಿಹೇಳಲಾಗಿದೆ. ವಾತವ್ಯಾಧಿಯಿಂದ ನರಳುತ್ತಲ್ಲೇ ತಮ್ಮ ಪ್ರೀತಿಯ ಭಾಗವತದ ಯಾವುದೇ ಲೋಪ,ದೋಷಗಳಿಲ್ಲದೆ , ದಿನರಾತ್ರಿಯೆನ್ನದೆ ಛಂದೋಬದ್ಧವಾಗಿ ಭಟ್ಟಾದ್ರಿಗಳು ಹೇಗೆ ರಚಿಸಿರಬಹುದು ಎಂದು ಆಲೋಚಿಸಿದರೆ ಮೈನವಿರೇಳುತ್ತದೆ. ವ್ಯಾಸಮಹರ್ಷಿಗಳು  ಬೃಹತ್ ಭಾಗವತದ  ಒಟ್ಟು 18,000 ಶ್ಲೋಕಗಳಲ್ಲಿ ( 300 ಅಧ್ಯಾಯಗಳು, 12 ಸ್ಕಂದಗಳು) ನಿರೂಪಿಸಿರುವ ವಿಷಯವಸ್ತುವನ್ನು ಕೇವಲ  1000 ಶ್ಲೋಕಗಳಲ್ಲಿ ಭಟ್ಟಿ ಇಳಿಸಿರುವುದು ಭಗವದ್ಪ್ರೇರಣೆಯಲ್ಲದೆ ಬೇರೇನು?

ನಾರಾಯಣೀಯದ ಸ್ವಾರಸ್ಯಕರ ಕಥಾಭಾಗವು ಸುಮಾರು 85 ದಶಕಗಳಲ್ಲಿ  ನಿರೂಪಿಸಲಾಗಿದೆ. ಕಥೆ ಹೇಳುವಾಗಲೂ ಭಟ್ಟಾದ್ರಿಗಳು ಭಗವಂತನನ್ನೇ ಸಂಭೋದಿಸುತ್ತಾರೆ. ಭಕ್ತನೊಬ್ಬ ಭಗವಂತನಿಗೆ ಅವನದ್ದೇ ಕಥೆಯನ್ನು ಮೊದಲ ಬಾರಿಗೆ ಹೇಳುತ್ತಿರುವಂತೆ ಭಟ್ಟಾದ್ರಿಗಳು ರಚಿಸಿರುವ ಪರಿ ಬಹಳ ಸೊಗಸಾಗಿದೆ.

ನಾರಾಯಣ ಭಟ್ಟಾದ್ರಿಗಳು,  ಸಾತ್ವಿಕ,ರಾಜಸ ಮತ್ತು ತಾಮಸವೆಂಬ ತ್ರಿಗುಣಗಳು ಸಮನ್ವಯದಲ್ಲಿದ್ದಲ್ಲಿಂದ  ವರಾಹಾವತಾರ, ಹಿರಣ್ಯಾಕ್ಷವಧೆಯವರೆಗೆ 5ರಿಂದ 13ನೇ ದಶಕದವರೆಗೆ ಸೃಷ್ಟಿಯ ಕಥೆ ಹೇಳುತ್ತಾರೆ. ನಾರಾಯಣನ ಅಂಶವೆಂದು ಪ್ರಸಿದ್ಧವಾದ ಕಪಿಲಮುನಿ ಮತ್ತು ಅವರ ವೃದ್ಧ ಮಾತೆದೇವಹೂತಿಯ ಸಂವಾದವನ್ನು  (ಸಾಂಖ್ಯಯೋಗ) ದಶಕ 14-15ರಲ್ಲಿ  ವರ್ಣಿಸುತ್ತಾರೆ.  ಮಹಾವಿಷ್ಣುವಿನ ಮತ್ಸ್ಯಾವತಾರ (ದಶಕ 32), ರಾಮಾವತಾರ (34-35) ಮತ್ತು ಉಳಿದೆಲ್ಲಾ ಅವತಾರಗಳ ವರ್ಣನೆ ನಾರಾಯಣೀಯದ ಶ್ಲೋಕಗಳಲ್ಲಿ  ಕಂಡು ಬಂದರೂ, ಅಲ್ಲಿ  ಕೃಷ್ಣಾವತಾರದ್ದೇ ಸಿಂಹಪಾಲು. 37ರಿಂದ -89ನೇ ದಶಕದವರೆಗೆ ವರ್ಣಿಸಿರುವ ಕೃಷ್ಣಾವತಾರದಲ್ಲಿ ಮಹಾಭಾರತದ ಸನ್ನಿವೇಶಗಳನ್ನು ಬಹಳ ಸಂಕ್ಷಿಪ್ತವಾಗಿ ಹೇಳಿದ್ದಾರೆ. ಹದಿನೆಂಟು ಅಧ್ಯಾಯಗಳ ಭಾಗವದ್ಗೀತೆಯನ್ನಂತೂ ಒಂದೇ ಶ್ಲೋಕದಲ್ಲಿ ಬಹಳ ಸಮರ್ಥವಾಗಿ ಹೀಗೆ ಚುಟುಕುಗೊಳಿಸಿದ್ದಾರೆ :

ಜಿಷ್ಣೋಸ್ತ್ವಂ ಕೃಷ್ಣ ಸೂತ: ಖಲು ಸಮರಮುಖೇ ಬಂಧುಘಾತೇ ದಯಾಲುಂ

ಖಿನ್ನಂ ತಂ ವೀಕ್ಷ್ಯ ವೀರಂ ಕಿಮಿದಮಯಿ ಸಖೇ ನಿತ್ಯ ಏಕೋಽಯಮಾತ್ಮಾ ।

ಕೋ ವಧ್ಯಃ  ಕೋಽತ್ರ ಹಂತಾ  ತದಿಹ ವಧಭಿಯಂ ಪ್ರೋಜ್ಝ್ಯ ಮಯ್ಯರ್ಪಿತಾತ್ಮಾ

ಧರ್ಮ್ಯಂ ಯುದ್ಧಂ ಚರೇತಿ ಪ್ರಕೃತಿಮನಯಥಾ ದರ್ಶಯನ್ ವಿಶ್ವರೂಪಮ್ ॥ನಾ 86-6॥

ಅರ್ಜುನನ ಸಾರಥಿಯಾಗಿ ನೀನು, ಅವನು ತನ್ನ ಬಂಧುಗಳನ್ನು ಕೊಲ್ಲುವುದು ಸರಿಯೇ ಎಂದು ಗೊಂದಲಕ್ಕೀಡಾದಾಗ , ಅವನಿಗೆ ಸಲಹೆ ನೀಡುತ್ತಾ ಆತ್ಮದ ನಿತ್ಯಸ್ವರೂಪವನ್ನು  (ನಿತ್ಯ ಏಕೋಽಯಮಾತ್ಮಾ ) ತಿಳಿಹೇಳಿ, ‘ವಾಸ್ತವವಾಗಿ ಯಾರು ಕೊಂದವರು (ಕೋಽತ್ರ ಹಂತಾ ) ಮತ್ತು ಯಾರು ಕೊಲ್ಲಲ್ಪಟ್ಟವರು? (ಕೋ ವಧ್ಯಃ ) ಎಂದು ಅವನಿಗೆ ಮರುಪ್ರಶ್ನೆ ಹಾಕಿ , ಅಂತಿಮವಾಗಿ ಭಯವನ್ನು ಕಿತ್ತೆಸೆದು ಯುದ್ಧ ಮಾಡಿ ಧರ್ಮ ಮಾರ್ಗದಲ್ಲಿ ನಡೆಯುವಂತೆ  (ಧರ್ಮ್ಯಂ ಯುದ್ಧಂ ಚರೇತಿ) ನಿನ್ನ ವಿಶ್ವರೂಪದ ದರ್ಶನ ಮಾಡಿದ್ದೀಯೆ (ದರ್ಶಯನ್ ವಿಶ್ವರೂಪಮ್ )   

37ನೇ ದಶಕದಲ್ಲಿ ನಾರಾಯಣನು ತನ್ನಲ್ಲಿ ರಕ್ಷಣೆ ಕೋರಿಬಂದ ದೇವತೆಗಳು ಮತ್ತು ಋಷಿಮುನಿಗಳಿಗೆ , ತಾನು ವೃಷ್ಣಿ (ಯಾದವ) ಕುಲದಲ್ಲಿ ಹುಟ್ಟಿಬರುತ್ತೇನೆಂದು  ಆಶ್ವಾಸನೆ ನೀಡುತ್ತಾನೆ (ಶ್ಲೋಕ-ನಾ 37.5) .   ಇಲ್ಲಿಂದ ಕೃಷ್ಣಾವತಾರದ ಕಥೆ ಮೊದಲಾಗಿ 64ನೇ ದಶಕದಲ್ಲಿ ಗೋಪಾಲಕರು ಗೋವರ್ಧನಗಿರಿ ಸನ್ನಿವೇಶದ ನಂತರ ಬಾಲಗೋಪಾಲನನ್ನು ತಮ್ಮ ನಾಯಕನಾಗಿ ಪೂಜಿಸುವವವರೆಗೆ , ನಾರಾಯಣ ಭಟ್ಟಾದ್ರಿಗಳು ಶ್ರೀಕೃಷ್ಣನ ಬಾಲಲೀಲೆಯ ಪ್ರತೀ ಪ್ರಸಂಗವನ್ನು ಹೃದಯಂಗಮವಾಗಿ   ಚಿತ್ರಿಸಿದ್ದಾರೆ. ಶೃಂಗಾರಪ್ರಧಾನವಾದ ರಾಸಕ್ರೀಡೆಯೂ ಭಟ್ಟಾದ್ರಿಗಳ ವಿವರಣೆಯಲ್ಲಿ ಅತೀಂದ್ರಿಯವಾದ ಅಧ್ಯಾತ್ಮಿಕ ರೂಪದಲ್ಲಿ ಕಾಣಸಿಗುತ್ತದೆ. ರಾಸಕ್ರೀಡೆಯನ್ನು ಚಿತ್ರಿಸುವ  69ನೇ ದಶಕದ ಈ ಶ್ಲೋಕವೇ ಒಂದು ಉದಾಹರಣೆ :

ಸ್ವಿನ್ನಸನ್ನತನುವಲ್ಲರೀ ತದನು ಕಾಪಿ ನಾಮ ಪಶುಪಾಂಗಾನಾ 

ಕಾಂತಮಂಸಮವಲಮ್ಬತೇ ಸ್ಮ ತವ ತಾಂತಿಭಾರಮುಕುಲೇಕ್ಷಣಾ ॥

ಕಾಚಿದಾಚಲಿತಕುಂತಲಾ ನವಪಟೀರಸಾರಘನಸೌರಭಂ

ವಂಚನೇನ ತವ ಸಂಚುಚುಂಬ ಭುಜಮಂಜಿತೋರುಪುಲಕಾಂಕುರಾ ॥ನಾ 69-6  ॥

ಬಳ್ಳಿಯಂತೆ ಬಳುಕುವ ಗೋಪಿಕೆಯೊಬ್ಬಳು , ಮೈಸೋತು ಬೆವರಿ ತನ್ನ ಕಣ್ಣುಗಳನ್ನು ತೇಲಾಡಿಸುತ್ತಾ ನಿನ್ನ ಸುಂದರ ಭುಜಗಳನ್ನು ಆಶ್ರಯಿಸಿದ್ದಾಳೆ. ಮೊತ್ತೊಬ್ಬ ತಲೆಗೆದರಿದ ಗೋಪಿಕೆ ನೀನು ಪೂಸಿರುವ ಹಸಿಚಂದನದ ಘಮವನ್ನು ಸವಿಯಲೆಂದೇ ತೋಳುಗಳಿಗೆ ಚುಂಬಿಸುತ್ತಾ ರೋಮಾಂಚನಕ್ಕೊಳಗಾಗುತ್ತಿದ್ದಾಳೆ.   

ಮಲಯಾಳ ಕಾವ್ಯಗಳಲ್ಲಿ ಹೆಚ್ಚು ಕಾಣಬರುವ ಕುಸುಮಮಂಜರಿ ವೃತ್ತ (ರ-ನ-ರ-ನ-ರ-ನ-ರ) ದಲ್ಲಿ ರಚಿಸಲಾದ 69ನೇ ದಶಕದ ಹತ್ತೂ ಶ್ಲೋಕಗಳನ್ನು , ಲಘು-ಗುರುಮಾತ್ರೆಗಳನ್ನು ಒಂದರ ಪಕ್ಕ ಇನ್ನೊಂದು ಜೋಡಿಸಿ ರಚಿಸಲಾಗಿದೆ. ಇವುಗಳನ್ನು ಸ್ಪಷ್ಟವಾಗಿ ಉಚ್ಚಾರಣೆ ಮಾಡಿದಾಗ ಲಯಬದ್ಧವಾದ ಶೃಂಗಾರ ನರ್ತನದ ಭಾವ ಸಹಜವಾಗಿಯೇ ಏರ್ಪಡುತ್ತದೆ. ಒಮ್ಮೆಲೆ ಅತೀಂದ್ರಿಯವಾದ ಆನಂದವೂ ಉಂಟಾಗುತ್ತದೆ. ಹಲವು ಶಾಸ್ತ್ರೀಯ ಸಂಗೀತಗಾರರು ಮತ್ತು ಭಜನ ಕಲಾವಿದರು , ನಾರಾಯಣೀಯದ ಈ ರಾಸಕ್ರೀಡಾ ಪ್ರಸಂಗವನ್ನು ಬಹಳ ರಸವತ್ತಾಗಿ ಪ್ರಸ್ತುತಪಡಿಸುತ್ತಾರೆ. 

ರಾಸಕ್ರೀಡೆಯ ನಂತರ 75ನೇ ದಶಕದಲ್ಲಿ ಶ್ರೀ ಕೃಷ್ಣನು ಮಥುರೆಗೆ ತೆರಳಿ ಕಂಸನನ್ನು ವಧಿಸುವ ಸನ್ನಿವೇಶ, 79ನೇ ದಶಕದಲ್ಲಿ ರುಕ್ಮಿಣಿ ಸ್ವಯಂವರ , 87ನೇ ದಶಕದಲ್ಲಿ ಕುಚೇಲೋಪಾಖ್ಯಾನ.. ಹೀಗೆ ಭಟ್ಟಾದ್ರಿಗಳು ಶ್ರೀಕೃಷ್ಣಾವತಾರದ ಎಲ್ಲ ಪ್ರಸಂಗಗಳನ್ನು ತೊಂಬತ್ತನೇ ದಶಕದವರೆಗೆ ಬಹಳ ವೈವಿಧ್ಯಮಯವಾಗಿ ಬಣ್ಣಿಸುತ್ತಾರೆ. ನಂತರದ ದಶಕಗಳು ಮತ್ತೆ ಕಥೆಯಿಂದ ಸ್ತುತಿರೂಪಕ್ಕೆ ಬದಲಾಗುತ್ತವೆ. ಆದರೆ ರಚನಕಾರನ ಸಂಭೋದನಾ ಶೈಲಿ ಕೃತಿಯುದ್ದಕ್ಕೂ ಸ್ಥಿರವಾಗಿರುತ್ತದೆ.   

ಭಕ್ತಿಯ ಪರಾಕಾಷ್ಠೆಗೆ ತಂದು ನಿಲ್ಲಿಸುವ ನೂರನೇ ದಶಕ ಅತ್ಯಂತ ರಮಣೀಯವಾದದ್ದು. ನೂರನೇ ದಶಕವನ್ನು ರಚಿಸುವ ದಿನ ನಾರಾಯಣ ಭಟ್ಟಾದ್ರಿಗಳಿಗೆ ಗುರುವಾಯೂರಪ್ಪನ ದಿವ್ಯ ದರ್ಶನವಾಗುತ್ತದೆ. ‘ಅಗ್ರೇ ಪಶ್ಯಾಮಿ’ ಎಂದು ಶುರುವಾಗುವ ಈ ದಶಕವಂತೂ ಬಹಳ ಸುಪ್ರಸಿದ್ಧ. ಪ್ರಾಯಶಃ ಶ್ರೀಮನ್ನಾರಾಯಣೀಯಂ ಬಗ್ಗೆ ಗೊತ್ತಿಲ್ಲದವರಿಗೂ ಸಹ   ‘ಅಗ್ರೇ ಪಶ್ಯಾಮಿ’ಯ ಪರಿಚಯವಿದ್ದರೆ ಆಶ್ಚರ್ಯವೇನಿಲ್ಲ. 

ಅಗ್ರೇ ಪಶ್ಯಾಮಿ ತೇಜೋ ನಿಬಿಡತರಕಲಾಯಾವಲೀಲೋಭನೀಯಂ

ಪೀಯೂಷಾಪ್ಲಾವಿತೋಽಹಂ ತದನು ತದುದರೇ ದಿವ್ಯಕೈಶೋರವೇಷಮ್ ।

ತಾರುಣ್ಯಾರಂಭರಮ್ಯಂ ಪರಮಸುಖರಸಾಸ್ವಾದರೋಮಾಂಚಿತಾಂಗೈ-

ರಾವೀತಂ ನಾರದಾದ್ಯೈರ್ವಿಲಸದುಪನಿಷತ್ಸುನ್ದರೀಮಂಡಲೈಶ್ಚ ॥ನಾ  100-1॥

ನನ್ನ  ಕಣ್ಮುಂದೆ ನೀಲಕಮಲಗಳ ಪ್ರಭಾವಲಯ, ಉಪನಿಷದ್ಸುಂದರಿಯರು, ನಾರದ ಇತ್ಯಾದಿ ಮುನಿಗಳಿಂದ ಸುತ್ತುವರೆದ  ಭಗವಂತನ ಕಿಶೋರಾವಸ್ಥೆಯ ದಿವ್ಯವೇಷ ರಾರಾಜಿಸುತ್ತಿದೆ.

ಮೊದಲನೇ ದಶಕದಲ್ಲಿ ಕಂಡುಬರುವ ಸ್ರಗ್ಧರಾ ವೃತ್ತದಲ್ಲಿಯೇ ಕೊನೆಯ ದಶಕದ ಶ್ಲೋಕಗಳನ್ನು ರಚಿಸಲಾಗಿದೆ. ಈ ದಶಕದ ಉಳಿದ ಒಂಬತ್ತು ಶ್ಲೋಕಗಳಲ್ಲಿ ಗುರುವಾಯೂರಪ್ಪನ  ದಿವ್ಯ ಕೈಶೋರ ವೇಷದ  ಕೇಶಾದಿಪಾದಾಂತ (ಮುಡಿಯಿಂದ ಅಡಿವರೆಗಿನ) ಸ್ವರೂಪವನ್ನು ಸೂಕ್ಷ್ಮವಾಗಿ  ವರ್ಣಿಸಲಾಗಿದೆ.   ನೀಲ ಕಮಲಗಳ ಪ್ರಭಾವಲಯದ (ತೇಜೋ ನಿಬಿಡತರಕಲಾಯಾ) ಮಧ್ಯೆ,  ಹಣೆಯಲ್ಲಿ ರಾರಾಜಿಸುವ  ಬಾಲಚಂದ್ರಾಕಾರದ ಚಂದನ (ಸುಲಲಿತಾಂ ಫಾಲಬಾಲೇಂದುವೀಥೀಮ್ ) ಎಂದರೆ ಊರ್ಧ್ವ ಪುಂಡ್ರ , ಕಡುನೀಲಿ ರೆಪ್ಪೆಗಳ ಸಾಲು (ನೀಲಸ್ನಿಗ್ಧಪಕ್ಷ್ಮಾವಲಿ) , ಎದ್ದು ಕಾಣುವ ಸುಂದರ ನಾಸಿಕ  (ಉತ್ತುಂಗೋಲ್ಲಾಸಿನಾಸಂ), ಸ್ಫುರದ್ರೂಪಿಯಾದ ತರುಣನಿಗೆ ತಕ್ಕ ಅದರುವ ತುಟಿಗಳು (ಸ್ಫುರದರುಣತರಚ್ಛಾಯಬಿಂಬಾಧರಾಂತ ), ರತ್ನಖಚಿತ ಕಂಕಣಗಳನ್ನು ತೊಟ್ಟ ಕೈಗಳು (ರತ್ನೋಜ್ಜ್ವಲವಲಯಭೃತಾ), ಸಪೂರವಾದ ನಡು ( ಬಿಭ್ರತಂ ಮಧ್ಯವಲ್ಲೀಮ್), ಅದಕ್ಕೆ ಸುತ್ತಿದ ಹಳದಿಯ ರೇಷ್ಮೆವಸ್ತ್ರ (ಪೀತಚೇಲಂ), ಸದೃಢವಾದ ಮತ್ತು ಮೋಹಕವಾದ ತೊಡೆಭಾಗದ್ವಯವು  (ಘನಮಸೃಣರುಚೌ ಊರೂ), ಘಲ್ಲು ಘಲ್ಲೆನುವ ಗೆಜ್ಜೆಗಳು (ಮಂಜೀರಂ ಮಂಜುನಾದೈರಿವ ) – ಹೀಗೆ ನಾರಾಯಣ ಭಟ್ಟಾದ್ರಿಗಳು ತಮ್ಮ ಕಣ್ಣೆದುರಿನಲ್ಲಿ ಕಾಣುವ ಭಗವಂತನ ದಿವ್ಯಸ್ವರೂಪವನ್ನು ಒಂದಂಶವೂ ಲೋಪವಿಲ್ಲದಂತೆ ವರ್ಣಿಸುತ್ತಾರೆ. 

ನಾರಾಯಣೀಯದ ಮಂಗಳಶ್ಲೋಕದಲ್ಲಿ ಕೊನೆಯ ಬಾರಿಗೆ ಆಯುರಾರೋಗ್ಯಸೌಖ್ಯವನ್ನು ಕೇಳುವ ಭಟ್ಟಾದ್ರಿಗಳು, ಭಗವಂತನ ಈ ದಿವ್ಯರೂಪದಲ್ಲಿ ಎಲ್ಲಕ್ಕಿಂತ ಅವನ ಪಾದವೇ ಹೆಚ್ಚು ಆಕರ್ಷಕವೆನ್ನುತ್ತಾರೆ. ಏಕೆಂದರೆ ಈ ಪಾದಾರವಿಂದವೇ  ‘ಯೋಗೀಂದ್ರಾಣಾಂ ಮುಕ್ತಿಭಾಜಾಂ ನಿವಾಸ’ ಎಂದರೆ ಇಲ್ಲಿಯೇ ಶ್ರೇಷ್ಠರಾದ ಯೋಗಿಗಳು, ಜೀವನ್ಮುಕ್ತರು ನೆಲೆಸುವುದು ಎಂದು ಹೇಳುತ್ತಾ,  ತಮ್ಮ ನಾರಾಯಣೀಯಂ ಗ್ರಂಥವನ್ನು ಭಗವಂತನ ಪಾದಕಮಲಗಳಿಗೆ ಅರ್ಪಿಸುತ್ತಾರೆ. ಜೊತೆಯಲ್ಲಿಯೇ, ಭಗವಂತನ ಸ್ವರೂಪವನ್ನು ತಿಳಿಯುವಲ್ಲಿ  ತಮ್ಮ ಅಜ್ಞಾನ ಮತ್ತು ಇತಿ-ಮಿತಿಗಳಲ್ಲಿ  ಯಾವುದೇ ಲೋಪ-ದೋಷಗಳು ಉಂಟಾಗಿದ್ದರೆ ತಮ್ಮನ್ನು ಕ್ಷಮಿಸಬೇಕೆಂದು ಯಾಚಿಸುತ್ತಾರೆ.  ಭಕ್ತಶ್ರೇಷ್ಠರ ಈ ವಿನಯ ಎಲ್ಲರಿಗೂ ಆದರ್ಶಪ್ರಾಯ. 

॥  ಶ್ರೀ ಕೃಷ್ಣಾರ್ಪಣಮಸ್ತು ॥ 

ಗ್ರಂಥಸೂಚಿ

  1. Narayaneeyam 1932 P N Menon : eGangotri : Free Download, Borrow, and Streaming : Internet Archive Narayaneeyam 1932 P N Menon 
  2. Narayaneeyam full text – Narayaniyam
  3. Narayaneeyam
  4. • Chandojñānam • Identify from Verse •
  5. Chandovallari – Dr. Sampadananda Mishra
  6. Bhagavatam & Narayaneeyam audio lectures of KS Narayanacharya in Kannada
  7. Bhagavatam & Narayaneeyam audio lectures of Kalamvalli Jayan Namoodiri in Malayalam

(Editor’s Note:

मर्त्यस्तयानुसवमेधितया मुकुन्द-
श्रीमत्कथाश्रवणकीर्तनचिन्तयैति ।
तद्धाम दुस्तरकृतान्तजवापवर्गं
ग्रामाद् वनं क्षितिभुजोऽपि ययुर्यदर्था: ॥

“By regularly hearing, chanting and meditating on the beautiful topics of Lord Mukunda with ever-increasing sincerity, man attains the divine kingdom of the Lord, beyond the realm of death. For this purpose, many persons, including great kings, abandoned their mundane homes and took to the forest” – Srimad-Bhagavatam

The essay competition on the occasion of Janmashtami is our sincere endeavor to harness the Kirtana and Sravana forms of Bhakti by encouraging authors to pen articles exuding Bhakti and thereby affording the highest spiritual bliss to our readers.)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.