close logo

ಪುರಾಣಕಥೆಗಳ ನರ-ನಾರಾಯಣ : ದ್ವಾಪರಯುಗದಲ್ಲಿ ಕೃಷ್ಣಾರ್ಜುನರಾಗಿ ಜನ್ಮ ತಾಳಿದ ಮುನಿದ್ವಯರು

ನಾರಾಯಣಮ್ ನಮಸ್ಕೃತ್ಯ ನರಮ್ ಚೈವ ನರೋತ್ತಮಮ್
ದೇವೀಮ್ ಸರಸ್ವತೀಮ್ ಚೈವ ತತೋ ಜಯಮುದೀರಯೇತ್
(ಮಹಾಭಾರತ ನಾಂದಿ ಶ್ಲೋಕ)

ಜಯ (ಮಹಾಭಾರತ )“ ಪ್ರವಚನಕ್ಕೆ ಮುನ್ನವಾಗಿ ನಾರಾಯಣನನ್ನು, ಮನುಷ್ಯರಲ್ಲಿ ಶ್ರೇಷ್ಠನಾದ ನರನನ್ನು ಹಾಗು ಸರಸ್ವತೀ ದೇವಿಯನ್ನು ನಮಸ್ಕರಿಸಿಸಬೇಕು.

ಮಹಾಕಾವ್ಯದ ಪ್ರಾರಂಭದಲ್ಲಿ ದೇವೋತ್ತಮನಾದ ನಾರಾಯಣ ಮತ್ತು ಪುರುಷಶ್ರೇಷ್ಠನಾದ ನರ, ಇವರಿಬ್ಬರಿಗೆ ಸರಸ್ವತಿದೇವಿಯ ಜೊತೆಗೂಡಿ ನಮಸ್ಕರಿಸಲಾಗುತ್ತದೆ. ಶ್ಲೋಕದಲ್ಲಿ ಉಲ್ಲೇಖವಾಗುವ ನರ, ಅರ್ಜುನನ ಪೂರ್ವಜನ್ಮದ ರೂಪ. ಮಹಾಭಾರತದಲ್ಲಿ ಹಲವೆಡೆ ಅರ್ಜುನ ಬೇರಾರು ಅಲ್ಲ ಅವನು ನರನೇ ಎಂದು ಹೇಳಲಾಗಿದೆ. ಮಹಾಭಾರತದ ಕಥೆಯುದ್ದಕ್ಕೂ ಕೃಷ್ಣಾರ್ಜುನರ ಅದಮ್ಯ ಸ್ನೇಹ ಮತ್ತು ಬಿಡಿಸಲಾಗದ ನಂಟನ್ನು ಕಾಣುತ್ತೇವೆ. ಬಾಂಧವ್ಯ ದ್ವಾಪರಯುಗಕ್ಕೆ ಸೀಮಿತವಲ್ಲ. ಬದರೀವನದ ಆಶ್ರಮವೊಂದರಲ್ಲಿ ತಪೋನಿರತರಾದ ಮುನಿಗಳಾಗಿದ್ದ ನರ ನಾರಾಯಣರ ಸಾಂಗತ್ಯ ಜನ್ಮಾಂತರಗಳದ್ದು.

ನರ ನಾರಾಯಣರ ಜನ್ಮ

ನರ ನಾರಾಯಣರು ದೈವಾಂಶಸಂಭೂತರಾದ ಮುನಿದ್ವಯರು. ‘ಧರ್ಮದಕ್ಷಪುತ್ರಿಯಾದ ಮೂರ್ತಿಯೊಡನೆ ಪಡೆದ ನಾಲ್ಕು ಪುತ್ರರೆಂದರೆ ನರ, ನಾರಾಯಣ, ಹರಿ ಮತ್ತು ಕೃಷ್ಣ. ಇವರಲ್ಲಿ ನರ ನಾರಾಯಣರಿಬ್ಬರು ಚಿನ್ನದ ರಥವನ್ನೇರಿ ಬದರೀವನದ ಆಶ್ರಮವೊಂದಕ್ಕೆ ಪ್ರಯಾಣ ಬೆಳೆಸಿ ಘೋರ ತಪಸ್ಸನ್ನು ಕೈಗೊಂಡರು. ತದನಂತರ ಇವರಿಬ್ಬರೇ ದ್ವಾಪರಯುಗದಲ್ಲಿ ಕೃಷ್ಣ ಮತ್ತು ಅರ್ಜುನರ ಜನ್ಮ ತಳೆದು ಮತ್ತಷ್ಟು ವಿಖ್ಯಾತರಾಗುತ್ತಾರೆ. ಮಹಾಭಾರತದ ಹಲವಾರು ಸನ್ನಿವೇಶಗಳಲ್ಲಿ ಪುರಾತನ ಮುನಿದ್ವಯರ ವ್ಯಕ್ತಿತ್ವವನ್ನು ನಾವು ಧರ್ಮವನ್ನು ಸಂರಕ್ಷಿಸಲು ಅಸುರರೊಡನೆ ಕಾದಾಡುವ ಕೃಷ್ಣಾರ್ಜುನರ ರೂಪದಲ್ಲಿ ಕಾಣಬಹುದು. ಭಾಗವತಪುರಾಣದ ಪ್ರಕಾರ ನರ ನಾರಾಯಣರು ಮಹಾವಿಷ್ಣುವಿನ ನಾಲ್ಕನೆ ಅವತಾರರೂಪ.

ಅರ್ಜುನ ಯಾರು?

ಮಹಾಭಾರತದಲ್ಲಿ ಅರ್ಜುನನ ಕಥಾಪಾತ್ರ ನರನಲ್ಲದೆ ಬೇರಾರೂ ಅಲ್ಲ ಎಂದು ಹೇಳುವುದು ಅಷ್ಟು ಸುಲಭವಲ್ಲ. ಗೊಂದಲ ಸಹಜವೇ. ಕುಂತೀದೇವಿ ದೇವೇಂದ್ರನಿಂದ ಪಡೆದ ಪುತ್ರನೇ ಅರ್ಜುನ. ವ್ಯಾಸಮಹರ್ಷಿಗಳೇ ಹೇಳಿದಂತೆ ಅರ್ಜುನ, ಶಕ್ರ ಎಂಬ ಇಂದ್ರನ ಮಗ. ಐದು ಜನ ಪಾಂಡವರು ಐದು ಇಂದ್ರರ ಸ್ವರೂಪ ಎಂದೂ ಉಲ್ಲೇಖಿಸಲಾಗಿದೆ. ಮುಂದೆ ಮಹಾಭಾರತದಲ್ಲೇ ಸ್ಪಷ್ಟವಾಗಿ ನರ ಮುನಿಯು ಇಂದ್ರನ ಮಗ ಅರ್ಜುನನಾಗಿ ಜನ್ಮ ತಳೆದನು ಎಂದು ಹೇಳಲಾಗಿದೆ. ದೇವತೆಗಳು ಚಂದ್ರನ ಬಳಿಗೆ ಬಂದು ಅವನ ಮಗ ವರ್ಚಸ್ಸನನ್ನು ಅಭಿಮನ್ಯುವಾಗಿ ಜನ್ಮ ತಳೆಯಲು ಬೇಡಿಕೊಂಡಾಗ. ಚಂದ್ರದೇವ ಹೀಗೆ ಹೇಳುತ್ತಾನೆ :

ಐಂದ್ರಿರ್ನರಸ್ತು ಭವಿತಾ ಯಸ್ಯ ನಾರಾಯಣಃ ಸಖಾ।
ಸೋರ್ಜುನೇತ್ಯಭಿವಿಖ್ಯಾತಃ ಪಾಂಡೋಃ ಪುತ್ರಃ ಪ್ರತಾಪವಾನ್॥ 1-68-116

ತಸ್ಯಾಯಂ ಭವಿತಾ ಪುತ್ರೋ ಬಾಲೋ ಭುವಿ ಮಹಾರಥಃ।
ತತಃ ಷೋಡಶವರ್ಷಾಣಿ ಸ್ಥಾಸ್ಯತ್ಯಮರಸತ್ತಮಾಃ॥ 1-68-117
(ಮಹಾಭಾರತ ಕುಂಭಕೋಣಂ ಆವೃತ್ತಿ)

(ನಾರಾಯಣನ ಪರಮಸಖನಾದ ನರನು ಇಂದ್ರನ ಮಗನಾಗಿ ಜನ್ಮತಳೆದು ಪಾಂಡು ಪುತ್ರ ಅರ್ಜುನ ಎಂದು ಕರೆಯಲ್ಪಡುತ್ತಾನಷ್ಟೆ. ನನ್ನ ಮಗನಿವನು ಆತನ (ಅರ್ಜುನ) ಪುತ್ರನಾಗಿ ಬಾಲ್ಯದಲ್ಲಿಯೇ ಮಹಾರಥಿಯಾಗಲಿ.)

ಮಹಾಭಾರತದಲ್ಲಿ ನಾವು ಇದನ್ನೇ ಕಾಣುತ್ತೇವೆ. ಒಂದೆಡೆ ನರ ಮುನಿಯು ಸ್ವಯಂ ನಾರಾಯಣನೊಡನೆ ಜನ್ಮವೆತ್ತಬೇಕಾದರೆ ಮತ್ತೊಂದೆಡೆ ಶಕ್ರ (ಇಂದ್ರ) ಅಂಶವು ಮಹಾದೇವನ ಶಾಪವನ್ನು ಅನುಭವಿಸಲು ಭೂಮಿಯ ಮೇಲೆ ಜನ್ಮ ತಳೆಯಬೇಕು. ಎರಡೂ ಅನಿವಾರ್ಯಗಳ ಫಲಿತಾಂಶವೇ ಅರ್ಜುನನ ಹುಟ್ಟು.

ಸನ್ನಿವೇಶವನ್ನು ವೇದವ್ಯಾಸರು ಮಹಾಭಾಗವತದಲ್ಲಿಯೂ ಸ್ಪಷ್ಟವಾಗಿ ಪ್ರತಿಪಾದಿಸುತ್ತಾರೆ. ಕೃಷ್ಣಾರ್ಜುನರು ಬ್ರಾಹ್ಮಣಪುತ್ರರನ್ನು ಹಿಂದಿರುಗಿ ಕರೆತರಲು ವೈಕುಂಠಕ್ಕೆ ತಲುಪಿದಾಗ, ಭಗವಾನ್ ವಿಷ್ಣು ಅವರನ್ನು ಹರುಷದಿಂದ ಹೀಗೆ ಸಂಬೋಧಿಸುತ್ತಾನೆ :

ದ್ವಿಜಾತ್ಮಜಾ ಮೇ ಯುವಯೋರ್ದಿ ದೃಕ್ಷುಣಾ
ಮಯೋಪನಿತಾ ಭುವಿ ಧರ್ಮಗುಪ್ತಯೇ
ಕಾಲಾವತೀರ್ಣಾವವನೇರ್ಭರಾಸುರಾನ್
ಹತ್ವೇಹ ಭೂಯಸ್ತ್ವರಯೇತಮಂತಿ ಮೇ 59

(ಕೃಷ್ಣಾರ್ಜುನರೆ, ನಿಮ್ಮನ್ನು ನೋಡಬೇಕೆಂಬ ಕುತೂಹಲದಿಂದ ಬ್ರಾಹ್ಮಣಪುತ್ರರನ್ನು ನಾನು ಇಲ್ಲಿಗೆ ಕರೆತಂದಿದ್ದೇನೆ. ಧರ್ಮರಕ್ಷಣೆಗಾಗಿ ನೀವಿಬ್ಬರೂ ನನ್ನ ಅಂಶದಿಂದ ಭೂಲೋಕದಲ್ಲಿ ಅವತರಿಸಿದ್ದೀರಿ. ಭೂ ಭಾರವಾಗಿರುವ ಅಸುರರನ್ನು ಸಂಹರಿಸಿ ಆದಷ್ಟು ಬೇಗನೆ ನನ್ನ ಬಳಿಗೆ ಬನ್ನಿರಿ.)

ಪೂರ್ಣಕಾಮಾವಪಿ ಯುವಾಂ ನರನಾರಾಯಣವೃಶಿ
ಧರ್ಮಮಾಚರತಾಂ ಸ್ಥಿತ್ಯಯ್ ಋಷಭ್ಹೌ ಲೋಕಸಂಗ್ರಹಮ್  60
(ಭಾಗವತ ಪುರಾಣ ಸ್ಕಂದ 10 – ಅಧ್ಯಾಯ 89 – ಶ್ಲೋಕ 59-60)

(ಪುರುಷಶ್ರೇಷ್ಠರಾದ ನೀವು ನರ, ನಾರಾಯಣ ಎಂಬ ಋಷಿಗಳು. ನೀವೂ ಪೂರ್ಣಕಾಮರಾದರೂ ಲೋಕಸ್ಥಿತಿಯನ್ನು ಕಾಪಾಡುವುದಕ್ಕಾಗಿ, ಲೋಕಸಂಗ್ರಹಾರ್ಥವಾದ ಧರ್ಮವನ್ನು ಆಚರಿಸುತ್ತೀರಿ)

ನಾರಾಯಣನಿಗೆ ಸತ್ಯದ ಅರಿವಿದ್ದರೂ ನರನಿಗೆ ಇದರ ಪರಿಜ್ಞಾನವಿರಲಿಲ್ಲ. ನಾರಾಯಣ ಸಾಕ್ಷಾತ್ ಭಗವದ್ಸ್ವರೂಪಿ ಶ್ರೀಕೃಷ್ಣನಾಗಿ ಧರ್ಮ ಸಂಸ್ಥಾಪನೆಗೆಂದು ದ್ವಾಪರಯುಗದಲ್ಲಿ ಜನ್ಮವೆತ್ತಿದ. ದಿವ್ಯಪ್ರಭೆ ಮತ್ತು ತೇಜಸ್ಸಿನಿಂದ ಕೂಡಿದ ನಾರಾಯಣ ಮುನಿಯು ದೈವಸ್ವರೂಪದಲ್ಲಿಯೇ ಭೂಲೋಕದಲ್ಲಿ ಜನ್ಮ ತಳೆದರೆ ಅವನ ಪರಮ ಸ್ನೇಹಿತನಾಗಿ ನರ ಮುನಿಯು ಅರ್ಜುನನಾಗಿ ಜನ್ಮ ತಳೆಯುತ್ತಾನೆ. ಸೋಜಿಗವೇನೆಂದರೆ ತನ್ನ ಪೂರ್ವಜನ್ಮದ ವೃತ್ತಾಂತವನ್ನು ಹಲವು ಬಾರಿ ದೇವತಗಳ ಮೂಲಕವೇ ಕೇಳಿದರೂ ಅರ್ಜುನನಿಗೆ ನೆನಪಿನಲ್ಲಿ ಉಳಿಯುವುದಿಲ್ಲ.

ಖಾಂಡವದಹನದ ಸನ್ನಿವೇಶದಲ್ಲಿ ಅಗ್ನಿದೇವ ಬ್ರಹ್ಮಾಜ್ಞೆಯಂತೆ ತಾನು ನರನಾರಾಯಣರ ಸಹಾಯದಿಂದ ಖಾಂಡವವನವನ್ನು ಭುಂಜಿಸಬೇಕೆಂದು ತಿಳಿಸುತ್ತಾನೆ.

ನರಸ್ತ್ವಮಸಿ ದುರ್ಧರ್ಷ ಹರಿರ್ನಾರಾಯಣೋ ಹ್ಯಹಂ
ಲೋಕಾಲ್ಲೋಕಮಿಮಂ ಪ್ರಾಪ್ತೌ ನರನಾರಾಯಣಾವೃಷೀ॥ 39
ಅನನ್ಯಃ ಪಾರ್ಥ ಮತ್ತಸ್ತ್ವಮಹಂ ತ್ವತ್ತಶ್ಚ ಭಾರತ
ನಾವಯೋರಂತರಂ ಶಕ್ಯಂ ವೇದಿತುಂ ಭರತರ್ಷಭ॥ 40
(ಮಹಾಭಾರತ, ವನಪರ್ವ, ಅಧ್ಯಾಯ ೧೩ ಕೈರಾತ ಪರ್ವ, ಶ್ಲೋಕ 39-40)

(ದುರ್ಧರ್ಷ! ನೀನು ನರ ಮತ್ತು ನಾನೇ ಹರಿ ನಾರಾಯಣ. ನರನಾರಯಣ ಋಷಿಗಳು ತಮ್ಮ ಲೋಕದಿಂದ ಲೋಕಕ್ಕೆ ಬಂದಿದ್ದಾರೆ. ಪಾರ್ಥ! ನೀನು ನನಗಿಂಥ ಬೇರೆಯವನಲ್ಲ ಮತ್ತು ನಾನು ನಿನಗಿಂತ ಬೇರೆಯವನಲ್ಲ. ಭಾರತ! ಭರತರ್ಷಭ! ನಮ್ಮಿಬ್ಬರಲ್ಲಿ ವ್ಯತ್ಯಾಸವಿರಲು ಸಾಧ್ಯವೇ ಇಲ್ಲ )

ವನಪರ್ವದಲ್ಲಿ ಕೃಷ್ಣನೂ ಅರ್ಜುನನೊಂದಿಗೆ ತನ್ನ ಬಿಡಿಸಲಾರದ ನಂಟನ್ನು ಹೇಳುತ್ತಾನೆ.

ಕೇವಲ ದೇವತೆಗಳೇ ಅಲ್ಲದೆ ಮುನಿವರ್ಯರಾದ ನಾರದ, ಪರಶುರಾಮ, ಕಣ್ವ ಮತ್ತು ಕುರು ಹಿರಿಯನಾದ ಭೀಷ್ಮರೂ ಮಹಾಭಾರತದಲ್ಲಿ ಹಲವು ಕಡೆ ನರನಾರಾಯಣ ಮತ್ತು ಕೃಷ್ಣಾರ್ಜುನರ ಜನ್ಮಾಂತರದ ಬಾಂಧವ್ಯದ ಬಗ್ಗೆ ಹೇಳುತ್ತಾರೆ. ಸ್ವತಃ ವೇದವ್ಯಾಸರೇ ಆಶ್ರಮವಾಸ ಪರ್ವದಲ್ಲಿ ಹೀಗೆ ಹೇಳುತ್ತಾರೆ

ಅರಿಕಂಟಕನಾದ ಭೀಮಸೇನನು ಮರುತಪುತ್ರನು ಹಾಗೂ ಧನಂಜಯ ಪಾರ್ಥ ಋಷಿವರ್ಯನಾದ ನರನು. ಹೃಷಿಕೇಷನೇ ನಾರಾಯಣನು.(15.48)”

ಅರ್ಜುನನಿಗೆ ತನ್ನ ಅಸ್ತಿತ್ವದ ಸತ್ಯ ಅರಿವಿಲ್ಲದ ಕಾರಣದಿಂದಲೇ ಇರಬೇಕು, ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೀಗೆ ಹೇಳುತ್ತಾನೆ :

ಶ್ರೀ ಭಗವಾನುವಾಚ

ಬಹೂನಿ ಮೇ ವ್ಯತೀತಾನಿ ಜನ್ಮಾನಿ ತವ ಚಾರ್ಜುನ
ತಾನ್ಯಹಂ ವೇದ ಸರ್ವಾಣಿ ತ್ವಂ ವೇತ್ಥ ಪರಂತಪ
(ಭಗವದ್ಗೀತೆ ಅಧ್ಯಾಯ 4 , ಶ್ಲೋಕ 5)

( ಅರ್ಜುನ, ನನಗೆ ಹಲವಾರು ಹುಟ್ಟುಗಳು ಆಗಿ ಹೋದವು. ನಿನಗೆ ಕೂಡಾ. ಅರಿಗಳನ್ನು ತರಿದವನೆ, ಅವನ್ನೆಲ್ಲ ನಾನು ಬಲ್ಲೆಆದರೆ ನಿನಗೆ ಗೊತ್ತಿಲ್ಲ. ಕನ್ನಡಾನುವಾದ ಶ್ರೀ ಬನ್ನಂಜೆ ಗೋವಿಂದಾಚಾರ್ಯರು)

ಮಹಾಭಾರತದ ಉದ್ದಕ್ಕೂ ಅರ್ಜುನನನ್ನು ನಾವು ಒಬ್ಬ ಪುರುಷಶ್ರೇಷ್ಠನಾಗಿ, ತನ್ನವರ ಹೆಮ್ಮೆಯ ಬಂಧುವಾಗಿ, ಶತ್ರುಗಳ ಅಸೂಯೆಗೆ ಕಾರಣನಾಗುವ ನಾಯಕನಾಗಿ ನೋಡುತ್ತೇವೆ. ಆತನ ಪರಾಕ್ರಮ ಕೀರ್ತಿಗಳ ಏಳಿಗೆಯನ್ನು ನಾವು ಕೇವಲ ಒಬ್ಬ ಮನುಷ್ಯನ ಶ್ರೇಷ್ಠತೆಯಾಗಿಯೇ ಕಾಣುತ್ತೇವೆಯೇ ಹೊರತು ಆತನ ದೈವಿಕ ಗುಣಗಳನ್ನು ಪರಿಗಣಿಸುವುದಿಲ್ಲ. ಒಬ್ಬ ಶಿಷ್ಯನಾಗಿ ಮತ್ತು ಮಗನಾಗಿ ಅರ್ಜುನ ತನ್ನ ಪರಿಶ್ರಮ ಮತ್ತು ಏಕಾಗ್ರತೆಯಿಂದ ತನ್ನನ್ನು ಒಬ್ಬ ಪುರುಷಶ್ರೇಷ್ಠನಾಗಿ ಸಾಬೀತುಪಡಿಸುತ್ತಾನೆ. ವೀರಾಗ್ರಣಿಯಾಗಿ ಅನೇಕ ಬಾರಿ ವಿಜಯಭೇರಿ ಹೊಡೆದು ಅತ್ಯುನ್ನತ ಯಶಸ್ಸನ್ನು ಗಳಿಸುತ್ತಾನೆ.

ಹೀಗಾಗಿಯೇ ನಮಗೆ ಅರ್ಜುನ ವ್ಯಕ್ತಿತ್ವವನ್ನು ವಿಷ್ಣುವಿನ ಅಂಶವಾಗಿ ಅದರಲ್ಲೂ ಅನಾದಿಕಾಲದಿಂದ ನಾರಾಯಣನ ಜೊತೆಗೂಡಿ ಅಧರ್ಮವನ್ನು ನಶಿಸುವ ನರನಾಗಿ ಕಲ್ಪಿಸಿಕೊಳ್ಳುವುದು ಕಷ್ಟವಾಗುತ್ತದೆ. ಮನುಷ್ಯರೂಪದ ಅರ್ಜುನ ಮೂರನೆಯ ಪಾಂಡವನಾಗಿ ತನ್ನ ನಿರಂತರ ಪರಿಶ್ರಮ ಶ್ರದ್ಧೆಗಳಿಂದ ಪುರುಷಶ್ರೇಷ್ಠನಾಗಿ ಆತ್ಮೀಯನಾಗುತ್ತಾನೆ. ಆದರೆ, ಅರ್ಜುನ ನರನೇ ಎಂಬುದು ಸತ್ಯ.

ಧರ್ಮಸಂಸ್ಥಾಪಕರಾದ ನರ ನಾರಾಯಣ

ಮಹಾಭಾರತಕಾವ್ಯದಲ್ಲಿ ಹಲವು ಕಡೆ ನರ ನಾರಾಯಣರು ಅಧರ್ಮದ ವಿರುದ್ಧ ಕಾದಾಡುವ ಸನ್ನಿವೇಶಗಳಿವೆ. ಸಮುದ್ರಮಂಥನದ ವೇಳೆಯಲ್ಲಿ ನಾರಾಯಣನು ಮೋಹಿನಿಯ ಅವತಾರ ತಾಳಿ ದೇವತೆಗಳಿಗೆ ಅಮೃತ ಉಣಬಡಿಸುತ್ತಿದ್ದಾಗ, ನರ ಮತ್ತು ದಾನವರ ನಡುವೆ ಭೀಕರ ಕಾಳಗ ನಡೆಯುತ್ತದೆ.

ಸೂತ ಉವಾಚ।
ಅಥಾವರಣಮುಖ್ಯಾನಿ ನಾನಾಪ್ರಹರಣಾನಿ
ಪ್ರಗೃಹ್ಯಾಭ್ಯದ್ರವನ್ದೇವಾನ್ಸಹಿತಾ ದೈತ್ಯದಾನವಾಃ॥ 1

ತತಸ್ತದಮೃತಂ ದೇವೋ ವಿಷ್ಣುರಾದಾಯ ವೀರ್ಯವಾನ್
ಜಹಾರ ದಾನವೇಂದ್ರೇಭ್ಯೋ ನರೇಣ ಸಹಿತಃ ಪ್ರಭುಃ॥ 2
(ಮಹಾಭಾರತ ಆದಿ ಪರ್ವ ಆಸ್ತೀಕ ಪರ್ವ ಸಮುದ್ರಮಂಥನಸಮಾಪ್ತಿ ಶ್ಲೋಕ 1-2 )

(ಸೂತನು ಹೇಳಿದನು: “ಆಗ ಪ್ರಮುಖ ದೈತ್ಯದಾನವರು ಕವಚ ಮತ್ತು ನಾನಾ ಆಯುಧಗಳನ್ನು ಹಿಡಿದು ದೇವತೆಗಳನ್ನು ಬೆನ್ನಟ್ಟಿದರು. ಮಧ್ಯದಲ್ಲಿ ವೀರ್ಯವಾನ್ ಪ್ರಭು ವಿಷ್ಣುದೇವನು ನರನ ಜೊತೆಗೂಡಿ ದಾನವೇಂದ್ರರಿಂದ ಅಮೃತವನ್ನು ಕೊಂಡೊಯ್ದನು.”)

ನರಸ್ತತೋ ವರಕನಕಾಗ್ರಭೂಷಣೈಃ।
ಮಹೇಷುಭಿರ್ಗಗನಪಥಂ ಸಮಾವೃಣೋತ್
ವಿದಾರಯನ್ಗಿರಿಶಿಖರಾಣಿ ಪತ್ರಿಭಿಃ
ಮಹಾಭಯೇಽಸುರಗಣವಿಗ್ರಹೇ ತದಾ॥ 27

ತತೋ ಮಹೀಂ ಲವಣಜಲಂ ಸಾಗರಂ
ಮಹಾಸುರಾಃ ಪ್ರವಿವಿಶುರರ್ದಿತಾಃ ಸುರೈಃ
ವಿಯದ್ಗತಂ ಜ್ವಲಿತಹುತಾಶನಪ್ರಭಂ
ಸುದರ್ಶನಂ ಪರಿಕುಪಿತಂ ನಿಶಾಮ್ಯ ಚ॥ 28

(ಮಹಾಭಾರತ ಆದಿ ಪರ್ವ ಆಸ್ತೀಕ ಪರ್ವ ಸಮುದ್ರಮಂಥನಸಮಾಪ್ತಿ ಶ್ಲೋಕ 27 )

ಆಗ ನರನು ಸುರಾಸುರರಲ್ಲಿ ನಡೆಯುತ್ತಿದ್ದ ಮಹಾಭಯಂಕರ ಯುದ್ಧವನ್ನು ಪ್ರವೇಶಿಸಿ, ಶ್ರೇಷ್ಠ ಕನಕಾಗ್ರದಿಂದ ಅಲಂಕೃತ ಶರಗಳಿಂದ ಪರ್ವತಗಳನ್ನು ಪುಡಿಪುಡಿಮಾಡಿ ಅಂತರಿಕ್ಷವನ್ನು ಧೂಳಿನಿಂದ ತುಂಬಿಸಿದನು. ರಣಭೂಮಿಯಲ್ಲಿ ತಿರುಗುತ್ತಾ, ಪ್ರಜ್ವಲಿಸುತ್ತಿರುವ ಬೆಂಕಿಯಂತೆ ಉರಿಯುತ್ತಿದ್ದ, ಪರಿಕುಪಿತ ಸುದರ್ಶನವನ್ನು ನೋಡಿ ಸುರರಿಂದ ಪರಾಭವಗೊಂಡ ಮಹಾ ಅಸುರರು ಭೂಮಿ ಮತ್ತು ಉಪ್ಪುನೀರಿನ ಸಮುದ್ರವನ್ನು ಪ್ರವೇಶಿಸಿದರು.

ಶಕ್ರ (ಇಂದ್ರ) ಪಟ್ಟಾಭಿಷೇಕದ ಸನ್ನಿವೇಶದಲ್ಲಿ ಮತ್ತೊಮ್ಮೆ ನರನಾರಾಯಣರ ಮತ್ತು ದಾನವರ ನಡುವಿನ ಕಾಳಗದ ಉಲ್ಲೇಖವಿದೆ. ಕೈರಾತ ಪರ್ವದಲ್ಲಿ ಸಾಕ್ಷಾತ್ ಸದಾಶಿವನೇ ಹೇಳುವಂತೆ ನರನು ತನ್ನ ಗಾಂಡೀವ ಧನುಸ್ಸಿನಿಂದ ಕಾದಾಡುತ್ತಾನೆ.

ಶಕ್ರಾಭಿಷೇಕೇ ಸುಮಹದ್ಧನುರ್ಜಲದನಿಸ್ವನಂ
ಪ್ರಗೃಹ್ಯ ದಾನವಾಃ ಶಸ್ತಾಸ್ತ್ವಯಾ ಕೃಷ್ಣೇನ ಪ್ರಭೋ॥ 3
ಏತತ್ತದೇವ ಗಾಂಡೀವಂ ತವ ಪಾರ್ಥ ಕರೋಚಿತಂ
ಮಾಯಾಮಾಸ್ಥಾಯ ಯದ್ಗ್ರಸ್ತಂ ಮಯಾ ಪುರುಷಸತ್ತಮ
ತೂಣೌ ಚಾಪ್ಯಕ್ಷಯೌ ಭೂಯಸ್ತವ ಪಾರ್ಥ ಯಥೋಚಿತೌ॥ 4

(ಪ್ರಭೋ! ಶಕ್ರನ ಅಭಿಷೇಕದಲ್ಲಿ ನೀನು ಮತ್ತು ಕೃಷ್ಣನು ಮೋಡಗಳಂತೆ ಧ್ವನಿಸುವ ಮಹಾ ಧನುಸ್ಸನ್ನು ಹಿಡಿದು ದಾನವರನ್ನು ನಿಯಂತ್ರಿಸಿದ್ದಿರಿ.ಪುರುಷಸತ್ತಮ! ಪಾರ್ಥ! ಅದೇ ಗಾಂಡೀವವನ್ನು ನಿನ್ನ ಕೈಯಿಂದ ನನ್ನ ಮಾಯೆಯನ್ನು ಬಳಸಿ ನಾನು ಕಸಿದುಕೊಂಡೆ. ಪಾರ್ಥ! ನಿನಗೆ ಉಚಿತವಾದ ಎರಡು ಅಕ್ಷಯ ಭತ್ತಳಿಕೆಗಳನ್ನು ಹಿಂದೆ ಪಡೆದುಕೋ.)

(ಮಹಾಭಾರತ ವನ ಪರ್ವ (3. 41) – ಶ್ಲೋಕ 27,28 )

ಮತ್ತೊಮ್ಮೆ ಉದ್ಯೋಗಪರ್ವದಲ್ಲಿ ಪರಶುರಾಮರು ಮುನಿದ್ವಯರ ಕಾಳಗದ ಬಗ್ಗೆ ಪ್ರಸ್ತಾಪಿಸುತ್ತಾರೆ. ದಂಭೋಧ್ಭವ ಎಂದೊಬ್ಬ ಅಹಂಕಾರಿ ರಾಜನನ್ನು ನರನು ಕೇವಲ ಹುಲ್ಲುಕಡ್ಡಿಯಿಂದ ಪರಾಭವಗೊಳಿಸಿದ ಪ್ರಸಂಗವಿದು. ಭೂಮಂಡಲವನ್ನೇ ಗೆದ್ದ ದಂಭೋಧ್ಭವ ನರನಾರಾಯಣರನ್ನು ಯುದ್ಧಕ್ಕೆ ಆಹ್ವಾನಿಸುತ್ತಾನೆ. ಮುನಿಗಳು ಎಷ್ಟೇ ಉಪೇಕ್ಷಿಸಿದರೂ ದಂಭೋಧ್ಭವ ಪಟ್ಟು ಹಿಡಿಯುತ್ತಾನೆ.

ತಸ್ಯ ತಾನಸ್ಯತೋ ಘೋರಾನಿಷೂನ್ಪರತನುಚ್ಚಿದಃ।
ಕದರ್ಥೀಕೃತ್ಯ ಮುನಿರಿಷೀಕಾಭಿರಪಾನುದತ್॥ 27

ತತೋಽಸ್ಮೈ ಪ್ರಾಸೃಜದ್ಘೋರಮೈಷೀಕಮಪರಾಜಿತಃ।
ಅಸ್ತ್ರಮಪ್ರತಿಸಂಧೇಯಂ ತದದ್ಭುತಮಿವಾಭವತ್॥ 28

ತೇಷಾಮಕ್ಷೀಣಿ ಕರ್ಣಾಂಶ್ಚ ನಸ್ತಕಾಂಶ್ಚೈವ ಮಾಯಯಾ।
ನಿಮಿತ್ತವೇಧೀ ಮುನಿರಿಷೀಕಾಭಿಃ ಸಮರ್ಪಯತ್॥ 29

ದೃಷ್ಟ್ವಾ ಶ್ವೇತಮಾಕಾಶಮಿಷೀಕಾಭಿಃ ಸಮಾಚಿತಂ
ಪಾದಯೋರ್ನ್ಯಪತದ್ರಾಜಾ ಸ್ವಸ್ತಿ ಮೇಽಸ್ತ್ವಿತಿ ಚಾಬ್ರವೀತ್॥ 30
(ಮಹಾಭಾರತ ಉದ್ಯೋಗಪರ್ವ ಭಗವದ್ಯಾನ ಪರ್ವದಂಭೋಧ್ಭವ ಶ್ಲೋಕ 27-30)

(ಶತ್ರುಗಳ ಶರೀರವನ್ನು ಕತ್ತರಿಸಬಲ್ಲ ಘೋರ ಬಾಣಗಳನ್ನು ಮುನಿಯು ತನ್ನ ಹುಲ್ಲುಕಡ್ಡಿಗಳಿಂದ ತಡೆದು ನಿಷ್ಪ್ರಯೋಜಕಗಳನ್ನಾಗಿ ಮಾಡಿದನು. ಆಗ ಅಪರಾಜಿತನು ಎದುರಿಸಲಸಾಧ್ಯವಾದ ಘೋರ ಹುಲ್ಲುಗಳನ್ನು ಅವನ ಮೇಲೆ ಪ್ರಯೋಗಿಸಲು ಅದ್ಭುತವು ನಡೆಯಿತು. ಮುನಿಯು ಮಾಯೆಯಿಂದ ಹುಲ್ಲುಕಡ್ಡಿಗಳು ಅವರ ಕಣ್ಣು, ಕಿವಿ, ಮೂಗುಗಳನ್ನು ಹೊಡೆಯುವಂತೆ ಮಾಡಿದನು. ಹುಲ್ಲುಕಡ್ಡಿಗಳು ತುಂಬಿ ಬಿಳಿಯಾದ ಆಕಾಶವನ್ನು ನೋಡಿದ ರಾಜನು ನರನ ಪಾದಗಳ ಮೇಲೆ ಬಿದ್ದುನನ್ನನ್ನು ಆಶೀರ್ವದಿಸು!” ಎಂದು ಕೇಳಿದನು.)

ಹಲವಾರು ಪುರಾಣಪ್ರಸಂಗಗಳಲ್ಲಿ ನರ ನಾರಾಯಾಣರ ದುಷ್ಟಸಂಹಾರಕರಾಗಿ ಕಾದಾಡುವ ಉಲ್ಲೇಖಗಳಿವೆ. ಮಹಾಭಾಗವತದಲ್ಲಿ ಅಸುರರ ರಾಜ ಪ್ರಹ್ಲಾದ ಇವರಿಬ್ಬರಿಗೆ ಸೋಲೊಪ್ಪಿಕೊಳ್ಳುವುದನ್ನು ನೋಡಬಹುದು. ಸ್ಕಂದಪುರಾಣ, ಗರುಡ ಪುರಾಣ, ವಾಮನ ಪುರಾಣ ಮತ್ತು ವಾಯು ಪುರಾಣಗಳಲ್ಲಿಯೂ ನರನಾರಾಯಣರ ಪ್ರಸ್ತಾಪವನ್ನು ಅಲ್ಲಲ್ಲಿ ಕಾಣುತ್ತೇವೆ. ಶಿವಪುರಾಣದ ವೃತ್ತಾಂತದಂತೆ ಕೇದಾರನಾಥದಲ್ಲಿ ನರನಾರಾಯಣರೇ ಸದಾಶಿವನ ಕೃಪೆಯಿಂದ ಜ್ಯೋತಿರ್ಲಿಂಗವನ್ನು ಪ್ರತಿಷ್ಠಾಪಿಸಿರುತ್ತಾರೆ. ಬದರೀಧಾಮ , ಕೇದಾರಧಾಮ ಮತ್ತು ನರನಾರಾಯಣ ಎಂಬ ಎರಡು ಪರ್ವತಗಳು ಇಂದಿಗೂ ನಮಗೆ ದಿವ್ಯಸಾಕ್ಷಿಗಳಾಗಿ ಕಂಡುಬರುತ್ತವೆ. ಮುನಿದ್ವಯರೇ ಭಗವದ್ಗೀತೆಯನ್ನು ಕರುಣಿಸಿ ಮೋಕ್ಷದ ಹಾದಿ ತೋರಿದ್ದಾರೆ.

ಕೃಷ್ಣಾರ್ಜುನರಾಗಿ ದ್ವಾಪರಯುಗದಲ್ಲಿ ನರನಾರಾಯಣರ ಮಹತ್ವ

ನಾರಾಯಣನು ನಾರದರಿಗೆ ತನ್ನ ಸಂಗಾತಿ ನರನ ಜೊತೆಗೂಡಿ ಲೋಕದಿಂದ ಅಧರ್ಮವನ್ನು ಅಳಿಸಿ ಧರ್ಮದ ನಿಯಮವನ್ನು ಕಾಪಾಡುವುದಾಗಿ ಹೀಗೆ ಹೇಳುತ್ತಾನೆ:

ಧರ್ಮಪುತ್ರನಾದ ಯುಧಿಷ್ಠಿರನ ಯಾಗಕ್ಕೆ ಭೂಲೋಕದ ರಾಜರೆಲ್ಲರೂ ಗೌರವದಿಂದ ಕಪ್ಪ ಕಾಣಿಕೆಗಳನ್ನು ಅರ್ಪಿಸುವಾಗ ನಾನು ಶಿಶುಪಾಲನನ್ನು ವಧಿಸುವೆ. ಕೆಲವು ಕಾರ್ಯಗಳಲ್ಲಿ ವಸವನ ಪುತ್ರನಾದ ಅರ್ಜುನನು ನನ್ನ ಸಂಗಾತಿಯಾಗಿರುತ್ತಾನೆ. ನಾನು ಯುಧಿಷ್ಠಿರನನ್ನು ಅವನ ಎಲ್ಲ ಸೋದರರ ಜೊತೆಗೆ ಅವರ ಪೂರ್ವಿಕರ ರಾಜ್ಯಸೊತ್ತನ್ನು ಆಳುವಂತೆ ಮಾಡುತ್ತೇನೆ. ಜನರು ನನ್ನನು ಹಾಗು ಅರ್ಜುನನನ್ನು ನರ ಮತ್ತು ನಾರಾಯಣ ಎಂದು ಕರೆಯುತ್ತಾರೆ. ಸಂರ್ಭ ಕೂಡಿಬಂದಾಗ ನಾವಿಬ್ಬರೂ ಒಟ್ಟಾಗಿ ನಮ್ಮ ಬಲದಿಂದ ಹಲವಾರು ಕ್ಷತ್ರಿಯರನ್ನು ಜಗತ್ತಿನ ಉದ್ಧಾರಕ್ಕಾಗಿ ಸಂಹರಿಸುತ್ತೇವೆ.” (ಮಹಾಭಾರತ ಶಾಂತಿ ಪರ್ವ 12. 640)

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಭಗವಂತನೇ ಹೇಳುವಂತೆ ವಾಸವನ ಮಗನೇ ನರನು ಮತ್ತು ಆತನೇ ಅರ್ಜುನ. ಸ್ವಯಂ ನಾರಾಯಣನು ಕೃಷ್ಣನಾಗಿ ಕಂಸಾದಿ ಅಸುರರನ್ನು ಕೊಂದರೂ, ದುಷ್ಟಶಕ್ತಿ ಸಂಹಾರಕ್ಕೆ ಅವನು ಬಲಶಾಲಿ ಭೀಮನ ಜೊತೆಗೂಡಿ ಹೋರಾಡಲು ನರನು ಅರ್ಜುನನಾಗಿ ಹುಟ್ಟಿಬರುವಂತೆ ಮಾಡುತ್ತಾನೆ. ಕುರುಕ್ಷೇತ್ರದ ರಣರಂಗದಲ್ಲಿ ಧರ್ಮರಥದ ಸಾರಥ್ಯವನ್ನು ನಾರಾಯಣನೇ ವಹಿಸಿದರೂ ಅದರಲ್ಲಿದ್ದು ಎದುರಾಳಿಗಳೊಡನೆ ಕಾಳಗ ಮಾಡುವುದು ನರನೇ. ಇದನ್ನು ವಿ.ಎಸ್. ಸುಕ್ತನ್ಕರ್ ಬಹಳ ಸ್ವಾರಸ್ಯಪೂರ್ಣವಾಗಿ ಕ್ರಷ್ಣಾರ್ಜುನರು ಅದ್ವೈತಸ್ವರೂಪವೆಂದುಗುರುತಿಸುತ್ತಾರೆ. ಅವರೇ ಹೇಳುವಂತೆ

ಅರ್ಜುನನನ್ನು ಪಾಂಡವವೀರನಾಗಿ ಮತ್ತು ಶ್ರೀ ಕೃಷ್ಣನನ್ನು ಕೇವಲ ಯಾದವರ ಮುಖಂಡನಾಗಿ ಕಂಡರೆ ಸಾಲದು. ಇವರು ಪುರುಷಶ್ರೇಷ್ಠನಾದ ನರ ಮತ್ತು ಸಾಕ್ಷಾತ್ ಭಗವದ್ ಸ್ವರೂಪಿ ನಾರಾಯಣರು. ಇವರಿಬ್ಬರನ್ನು ಜೀವಾತ್ಮಪರಮಾತ್ಮ ಎಂದು ಗುರುತಿಸುವುದೇ ಲೇಸು. ವಾಸ್ತವವಾಗಿ ಇವರಿಬ್ಬರಲ್ಲೂ ದ್ವೈತವಿಲ್ಲ. ಹೀಗಾಗಿಯೇ ಅರ್ಜುನನ ಮತ್ತೊಂದು ಹೆಸರು ಕೃಷ್ಣ. ಕೃಷ್ಣನಾಗಿ ಆತ ರಥವನ್ನು ನಡೆಸಿದ, ಅರ್ಜುನನಾಗಿ ರಣರಂಗದಲ್ಲಿ ಯುದ್ಧ ಮಾಡಿದ.”

ಹೀಗಾಗಿ ಮಹಾಭಾರತ ಕಾವ್ಯದಲ್ಲಿ ಕೃಷ್ಣಾರ್ಜುನರ ಅನನ್ಯ ಭಾಂಧವ್ಯವನ್ನು ತಿಳಿದುಕೊಳ್ಳಬೇಕಾದರೆ ಮೊದಲು ನಾವು ನರ ನಾರಾಯಣ ತತ್ತ್ವನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು.

References (of the original):

1. Bori Critical Edition Of Mahabharat ,Sanskrit version.
2. Kisari Mohan Ganguli English Translation of The Mahabharata
3. Mahabharat Southern Recension Kumbakonam Edition
4. Maha Bhagavata ( Bhagavata Purana) Veda Base
5. All Eighteen Puranas in one pdf
6. On The Meaning Of Mahabharata by V.S. Sukthankar

Additional:

1. Srimadbhagavatham – Kannada translation by Bannanje Govindacharya , Vidwan Ranganatha Sharma
2. http://www.vyasaonline.com

(ಈ ಲೇಖನ ಲಕ್ಷ್ಮೀ ತೆಲಿದೇವರ ಅವರ ಆಂಗ್ಲ ಲೇಖನದ ಕನ್ನಡಾನುವಾದವಾಗಿದೆ.)

(This is a Kannada translation of an article written in English by Dr. Lakshmi Telidevara)

(Image credit: hindupedia.com)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply