close logo

ಕಾಶ್ಮೀರದ ಮಾತೃಗುಪ್ತನ ರೋಮಾಂಚಕ ಚರಿತ್ರೆ – ಮುಕ್ತಾಯ

ಮೊದಲನೇ ಭಾಗದಲ್ಲಿ ನೋಡಿದಂತೆ ವಿಕ್ರಮಾದಿತ್ಯನ ಇಚ್ಛೆಯಂತೆ ಮಾತೃಗುಪ್ತನು ಕಾಶ್ಮೀರದ ರಾಜನಾದನು. ಮತ್ತೊಂದೆಡೆ ಪ್ರವರಸೇನನೆಂಬ ರಾಜನು ಆಗ ತಾನೇ ಹಲವು ಪುಣ್ಯಕ್ಷೇತ್ರಗಳ ತೀರ್ಥದಿಂದ ತನ್ನ ಪಿತೃ ಕಾರ್ಯಗಳನ್ನು ಮುಗಿಸಿದ್ದನು. ಮುಗಿಸುತ್ತಿದ್ದಂತೆಯೇ ಯಾರೋ ಅಪರಿಚಿತ ವ್ಯಕ್ತಿಯೊಬ್ಬ ತನ್ನ ಪೂರ್ವಜರ ಸಿಂಹಾಸನವನ್ನು ಕಬಳಿಸಿ ಕಾಶ್ಮೀರವನ್ನು ಆಳುತ್ತಿದ್ದಾನೆಂದು ಗೊತ್ತಾಯಿತು. ಇದನ್ನು ಕೇಳುತ್ತಿದ್ದಂತೆಯೇ  ಅವನಿಗೆ ತನ್ನ  ತಂದೆಯನ್ನು ಕಳೆದುಕೊಂಡ ಶೋಕವು ಮರೆತೇ ಹೋಗುವಂತಹ ಕೋಪ ನೆತ್ತಿಗೇರಿತು. ಅವನು ಕಾಶ್ಮೀರಕ್ಕೆ ಕಾಲಿಡುತ್ತಿದ್ದಂತೆಯೇ ಮಂತ್ರಿಗಳೆಲ್ಲ ಅವನ ಬಳಿ ಬಂದರು. ಅಷ್ಟಲ್ಲದೇ ಅವರೆಲ್ಲರೂ ದಂಗೆ ಏಳಲು ಸಹ ತಯಾರಿದ್ದರು. ಆದರೆ ಪ್ರವರಸೇನನೇ ಅದಕ್ಕೆ ಒಪ್ಪಲಿಲ್ಲ.

“ನಾನು ಅವನನ್ನು ಸರ್ವಥಾ ನಾಶ ಮಾಡುವೆ” ಪ್ರವರಸೇನನೆಂದನು. “ಆದರೆ ಮಾತೃಗುಪ್ತನನ್ನಲ್ಲ, ವಿಕ್ರಮಾದಿತ್ಯನನ್ನು. ಮಾತ್ತೃಗುಪ್ತನ ಮೇಲೆ ನನಗೇನೂ ಕೋಪವಿಲ್ಲ. ಪಾಪ ದುರ್ಬಲರನ್ನು, ನೋವು ಸಹಿಸಲಾರದವರನ್ನು ಶೋಷಿಸಿ ಏನು ಪ್ರಯೋಜನ? ಬಲಶಾಲಿಯಾದವರ ಬೆನ್ನು ಮೂಳೆ ಮುರಿಯುವುದರಲ್ಲಿ ವೈಭವವಿದೆ, ಘನತೆಯಿಂದ ಮೆರೆಯಬಹುದು. ಆದರೆ ಕಮಲದಂತೆ ಸೌಮ್ಯವಾದವರನ್ನು ಆನೆಯ ದಂತದಿಂದ ಹೊಸಕಿ ಹಾಕುವುದರಲ್ಲಿ ಯಾವ ಸಾರ್ಥಕ್ಯವಿದೆ? ಬಲ ಪ್ರದರ್ಶನವು ಯಾವತ್ತೂ ಸಮಾನರ ನಡುವೆ ಇರಬೇಕು.” ಹೀಗೆ ತೀರ್ಮಾನಿಸಿ ತ್ರಿಗರ್ತ ದೇಶದೆಡೆಗೆ ತೆರಳುತ್ತ ಆ ಪ್ರದೇಶವನ್ನು ಆಕ್ರಮಿಸಿದನು. ಇದಾದ ನಂತರ ವಿಕ್ರಮಾದಿತ್ಯನನ್ನು ಪರಾಜಯಗೊಳಿಸಲು ಉದ್ಯುಕ್ತನಾದನು.

ತನ್ನ ಸೈನ್ಯದೊಂದಿಗೆ ತೆರಳುತ್ತಿರುವಾಗ ದಾರಿಯಲ್ಲಿ ವಿಕ್ರಮಾದಿತ್ಯನು ಅಸ್ತಂಗತನಾದನೆಂದು ತಿಳಿಯಿತು. ಈ ಸುದ್ದಿಯನ್ನು ತಿಳಿದ ಪ್ರವರಸೇನನು ಬಹಳ ನೊಂದನು. ಏನೂ ಮಾಡಲು ತೋಚದೆ ಊಟ ನಿದ್ದೆ ಸ್ನಾನ ಇವ್ಯಾವುದನ್ನೂ ಲೆಕ್ಕಿಸದೇ ತನ್ನ ಮೃತ ಶತ್ರುವಿಗೋಸ್ಕರ ಶೋಕಿಸಿದನು. ಅದರ ಮಾರನೆಯ ದಿನವೇ ಮಾತೃಗುಪ್ತನು ತನ್ನ ರಾಜ್ಯವನ್ನು ತ್ಯಜಿಸಿ ಕಾಶ್ಮೀರದಿಂದ ಹೊರಗೆ ನಿರ್ಗಮಿಸಿದ್ದಾನೆ ಎಂಬ ವಿಷಯವು  ಇವನಿಗೆ ತಿಳಿಯಿತು. ಕಾಕತಾಳೀಯವೆಂಬಂತೆ ಪ್ರವರಸೇನನು ಆಗ ಇದ್ದ ಸ್ಥಳದ ಹತ್ತಿರವೇ ಬರುತ್ತಿದ್ದನು. ಯಾರೋ ತನ್ನ ಪಕ್ಷದವರೇ ಮಾತೃಗುಪ್ತನನ್ನು ಹೊರಗಟ್ಟಿರಬೇಕೆಂಬ ಸಂಶಯ ಇವನಲ್ಲಿ ಮೂಡಿತು. ರಾಜನ ವೇಷ ಭೂಷಣಗಳನ್ನೆಲ್ಲ ತ್ಯಜಿಸಿ ಸಾಧಾರಣ ವಸ್ತ್ರಾಲಂಕೃತ ಮಾತೃಗುಪ್ತನನ್ನು ಭೇಟಿಯಾಗಿ ಅವನು ರಾಜ್ಯವನ್ನು ತ್ಯಜಿಸಿದ ಕಾರಣವೇನೆಂದು ಮೃದುವಾಗಿ ಕೇಳಿದನು.

ಮಾತೃಗುಪ್ತನು ನಿಟ್ಟುಸಿರು ಬಿಟ್ಟು ಸಂತೋಷ ಹೀನವಾಗಿ ನಗುತ್ತ ಹೀಗೆ ಹೇಳಿದನು – “ರಾಜನೆ, ನನ್ನನ್ನು ಸಿಂಹಾಸನವೇರಿಸಿದ ಚಕ್ರವರ್ತಿಯು ಇನ್ನಿಲ್ಲ. ನಾನೊಬ್ಬ ಸೂರ್ಯ ಕಿರಣದಾಸರೆಯಿಂದ ಹೊಳೆಯುವ ರತ್ನದಂತೆ. ಎಲ್ಲಿಯವರೆಗೂ ರಶ್ಮಿಯಿರುವುದೋ ಅಲ್ಲಿಯತನಕ ಹೊಳಪು, ಸೂರ್ಯಾಸ್ತವಾದ ನಂತರ ಸಾಧಾರಣ ಕಲ್ಲಿನಂತೆ, ಯಾವ ವೈಶಿಷ್ಟ್ಯವೂ ಇಲ್ಲ.”

ಪ್ರವರಸೇನನು ಕೇಳಿದನು – “ವಿಕ್ರಮಾದಿತ್ಯನಿಗೋಸ್ಕರ ಇಷ್ಟೊಂದು ಏಕೆ ನೊಂದಿದ್ದೀಯೆ? ನಿನಗೆ ಹಾನಿ ಮಾಡಿದವರ ಮೇಲೆ ಸೇಡು (ವಿಕ್ರಮಾದಿತ್ಯನು) ತೀರಿಸಲು ಆಗದೆ ಹೀಗೆ ಶೋಕಿಸುತ್ತಿದ್ದೀಯೇನು?”

ಮಾತೃಗುಪ್ತನು ಉತ್ತರಿಸಿದನು – “ನನಗೆ ಹಾನಿಯುಂಟುಮಾಡುವಷ್ಟು ಶಕ್ತಿ ಯಾರಿಗಿದೆ? ವಿಕ್ರಮಾದಿತ್ಯನು ಭೂದಿಯ ಮೇಲೆ ತುಪ್ಪ ಸುರಿಯಲಿಲ್ಲ ಅಥವಾ ಬರಡು ಭೂಮಿಯಲ್ಲಿ ಬೀಜ ಬಿತ್ತಲಿಲ್ಲ (ಪ್ರವರಸೇನನ ಪ್ರಶ್ನೆಯ ಧಾಟಿ ಹೇಗಿತ್ತೆಂದರೆ, ಮಾತೃಗುಪ್ತನು ವಿಕ್ರಮಾದಿತ್ಯನ ಆಪ್ತನೆಂಬ ಕಾರಣಕ್ಕೆ ಮಾತ್ರವೇ ಇವನಿಗೆ ರಾಜ್ಯವನ್ನು ಕರುಣಿಸಿರುವನು ಎಂಬರ್ಥದಲ್ಲಿತ್ತು). ಚೈತನ್ಯಹೀನ ವಸ್ತುಗಳಿಗೂ ಸಹ ತಮಗೆ ಅನುಗ್ರಹಿಸಿದವರ ಮೇಲೆ ಕೃತಜ್ಞ ಭಾವವಿರುತ್ತದೆ (ರತ್ನದಂತೆ). ಆದ್ದರಿಂದ ಈಗ ನಾನು ಪವಿತ್ರ ಕ್ಷೇತ್ರವಾದ ವಾರಣಾಸಿಗೆ ತೆರಳಿ ಪರಿವ್ರಾಜಕ ಜೀವನದ ಆಭಾದಿತ ಆನಂದವನ್ನು ಅನುಭವಿಸುವೆ. ಯಾಕೆಂದರೆ ವಿಕ್ರಮಾದಿತ್ಯನಿಲ್ಲದ ಲೋಕವು ನನಗೆ ಅಂಧಕಾರಯುತ. ಕಣ್ಣೆತ್ತಿ ನೋಡಲೂ ಸಹ ಭಯ. ಇನ್ನು ಆನಂದವೆಲ್ಲಿ ಬಂತು?”

ಈ ಮಾತುಗಳನ್ನು ಕೇಳಿ ಅತ್ಯಾಶ್ಚರ್ಯಗೊಂಡ ಪ್ರವರಸೇನನು ಹೀಗೆಂದನು – “ನಿಜ, ರಾಜ., ಈ ಲೋಕದಲ್ಲಿ ರತ್ನಗಳಿರುವುದು ಖಚಿತ, ಯಾಕೆಂದರೆ ನಿಮ್ಮಂತಹ ಶ್ರೇಷ್ಠ ವ್ಯಕ್ತಿಗಳಿಂದ ಈ ಭೂಮಿಯು ಅಲಂಕೃತವಾಗಿದೆ. ಉತ್ಕೃಷ್ಟರನ್ನು ಗುರುತಿಸುವಲ್ಲಿ ವಿಕ್ರಮಾದಿತ್ಯನನ್ನು ಯಾರು ಮೀರಿಸಲು ಸಾಧ್ಯ? ಕೃತಜ್ಞತೆಗಳನ್ನು ನೀವು ಅರ್ಪಿಸಿಯಾಯಿತು, ಇನ್ನು ಯಾವುದೇ ಋಣದಲ್ಲೂ ನೀವಿಲ್ಲ. ಹಾಗಿದ್ದಮೇಲೆ ಆಗ್ರಹವಿಲ್ಲದ ಈ ಕಠೋರವಾದ ಯಾನವೇಕೆ? ನೀವು ಯಾವುದೇ ಲೋಪವಿಲ್ಲದ ರತ್ನದಂತೆ, ಶಿಷ್ಟಜನಪ್ರಿಯರು. ಆದ್ದರಿಂದ ನನಗೊಂದು ಉಪಕಾರವನ್ನು ಮಾಡಿ – ನೀವು ರಾಜ್ಯವನ್ನು ತ್ಯಜಿಸಬೇಡಿ. ಎಲ್ಲರಿಗೂ ಗೊತ್ತಾಗಲಿ, ನಾನು ಸಹ ಯೋಗ್ಯರ ಪಕ್ಷದವನೆಂದು. ವಿಕ್ರಮಾದಿತ್ಯನು ನಿಮಗೀ ರಾಜ್ಯವನ್ನು ಕೊಟ್ಟಿದ್ದನು, ಈಗ ನಾನು ಪುನಃ ಕೊಡುತ್ತಿರುವೆ, ದಯವಿಟ್ಟು ಸ್ವೀಕರಿಸಿ.”

ಮಾತೃಗುಪ್ತನು ಮುಗುಳುನಗುತ್ತ ಹೇಳಿದನು – “ನನ್ನ ಒರಟು ಭಾವನೆಗಳಿಗೆ ರೂಪ ಕೊಡಲು ಮನಸ್ಸಿಲ್ಲದಿದ್ದರೂ ನಾನು ಹೇಳಲೇಬೇಕು, ನಾನು ಈ ನಿನ್ನ ದಾನವನ್ನು ಸ್ವೀಕರಿಸಲು ಸಾಧ್ಯವಿಲ್ಲ. ಕ್ಷಾತ್ರ ಧರ್ಮವನ್ನು ಅನುಸರಿಸುತ್ತಿರುವ ನಾನು ಈಗ ದಾನಾದಿಗಳನ್ನು ಹೇಗೆ ಸ್ವೀಕರಿಸಲಿ? ಅಥವಾ ಒಂದು ವೇಳೆ ನನಗೆ ರಾಜ್ಯವನ್ನು ಅನುಭವಿಸುವ ಇಚ್ಛೆ ಇದ್ದಿದ್ದರೆ ನಾನು ಇದನ್ನು ತ್ಯಜಿಸುತ್ತಲೇ ಇರಲಿಲ್ಲ. ನನ್ನ ವಯಕ್ತಿಕ ಉಪಭೋಗಕ್ಕೋಸ್ಕರ ನನಗೆ ಕೊಟ್ಟಿದ್ದ ಪದವಿಯನ್ನು ಮತ್ತು ನನ್ನ ಕರ್ತವ್ಯವನ್ನು ವರ್ಜಿಸಿ ಹೊರಟು ಹೋಗುವುದು ವೇದ್ಯವೇ? ವಿಕ್ರಮಾದಿತ್ಯನು ನನಗೆ ಮಡಿದ ಉಪಕಾರಕ್ಕೆ ನಾನು ಪ್ರತ್ಯುಪಕಾರ ಎಂದೂ ಮಾಡಲಾಗುವುದಿಲ್ಲ. ಅದಕ್ಕೋಸ್ಕರ ಅವನನ್ನೇ ಅನುಸರಿಸಿ ನಾನು ಈಗ ಈ ವೃತ್ತಿಯಲ್ಲಿ ತೊಡಗುವೆ. ಇದಿಷ್ಟೇ  ಮಾಡಲು ಉಳಿದಿರುವುದಿನ್ನು ಈ ಲೋಕದಲ್ಲಿ ನನಗೆ.”

ಹಾಗಾದರೆ ಮಾತೃಗುಪ್ತನು ಜೀವಂತವಿರುವರೆಗೂ ಅವನ ಸ್ವತ್ತನ್ನು ಮುಟ್ಟುವುದಿಲ್ಲ ಎಂದನು ಪ್ರವರಸೇನ. ಇದರಂತೆಯೇ ಮಾತೃಗುಪ್ತನು ವಾರಣಾಸಿಯಲ್ಲಿರುವರೆಗೂ ಕಾಶ್ಮೀರದ ಆದಾಯವೇನಿತ್ತೋ ಅವೆಲ್ಲವನ್ನು ಅವನಿಗೇ ಕಲಿಸುತ್ತಿದ್ದನು ಪ್ರವರಸೇನ. ಮಾತೃಗುಪ್ತನು ‘ದೇನಮ್ ದೀನ ಜನಾಯ ಚ ವಿತ್ತಂ’ ಎಂಬಂತೆ ಅದನ್ನು ಬಡವರಿಗೆ ಕೊಡುತ್ತಿದ್ದನು. ಇದೇ ರೀತಿ ಹತ್ತು ವರ್ಷಗಳ ಕಾಲ ಮಾತೃಗುಪ್ತನು ವಾರಾಣಸಿಯಲ್ಲಿ ಇದ್ದನು. ಹೀಗೆ ಈ ಮೂವರು – ವಿಕ್ರಮಾದಿತ್ಯ, ಮಾತೃಗುಪ್ತ ಹಾಗು ಪ್ರವರಸೇನ – ಧರ್ಮತತ್ಪರತೆಯಲ್ಲಿ ತಮಲ್ಲೇ ಸೆಣೆಸುತ್ತಿದ್ದರು ಎನ್ನುತ್ತಾನೆ ಕಲ್ಹಣ.

ಕಷ್ಟಪ್ರಯತ್ನಗಳಿಂದಲೇ ಬರವಣಿಗೆಯಲ್ಲಿ ತೊಡಗುವುದು  ನನ್ನ ಪಾಲು. ಆದರೆ ಮಾತೃಗುಪ್ತನ ಈ ಚರಿತ್ರೆಯನ್ನು ಕನ್ನಡದಲ್ಲಿ ಆಖ್ಯಾನಿಸಿ ಬರೆಯುವಾಗ ಒಮ್ಮೆಯೂ ಸಹ ಯಾವ ಅಡಚಣೆಯೂ ಇಲ್ಲದೆ ಒಂದೇ ಸಮನೆ ಬರೆಯುತ್ತಾ ಹೋದೆ. ಇದು ಮಾತೃಗುಪ್ತನಿಗೆ ನನ್ನ ಒಂದು ಕಿರು ಅರ್ಪಣೆ. ಇವನ ಚರಿತ್ರೆಯನ್ನು ಓದುತ್ತ ನನಗೆ ಅತ್ಯಂತ ಆನಂದವೂ ಆಯಿತು ಆದರೆ ತತ್ಕ್ಷಣವೇ ಬಹಳ ಖೇದವೂ ಆಯಿತು.

ಮಾತೃಗುಪ್ತನಂತೆ ಅದೆಷ್ಟೋ ಜನ ಭಾರತದ ಇತಿಹಾಸದಲ್ಲಿದಲ್ಲಿ ಮುಕುಟಮಣಿಗಳಂತಹ ಭೂಷಣರನ್ನು ನಾವು ಮರೆತಿದ್ದೇವೆ. ಕರ್ಣನು ತನ್ನ ಪ್ರಾಬಲ್ಯದ ಬಗ್ಗೆ ಹೇಳಿಕೊಳ್ಳುತ್ತಿದ್ದಾಗ ಅಶ್ವತ್ಥಾಮನು ಹೀಗೆಂದು ಹೇಳುತ್ತಾನೆ – “ಸೂರ್ಯನು ಎಂದಿಗೂ ಮೌನವಾಗಿ ಪ್ರಕಾಶಿಸುತ್ತಿರುತ್ತಾನೆ, ಮೌನವಾಗಿಯೇ ಈ ಭೂಮಿಯು ಸಹಿಸುತ್ತಾಳೆ, ಸಂಭಾವಿತ ವ್ಯಕ್ತಿಯು ಯಾವತ್ತೂ ತನ್ನ ಬಗ್ಗೆ ತಾನೇ ಹೊಗಳಿಕೊಳ್ಳುವುದಿಲ್ಲ”. ಹಾಗೆಯೆ ನಮ್ಮ ಪೂರ್ವಜರು ಮಾಡಿದ ಶ್ರೇಷ್ಠಾತಿ ಶ್ರೇಷ್ಠ ಕಾರ್ಯಗಳೂ ಸಹ. ಇವತ್ತು ನಾವು ಅವರನ್ನೆಲ್ಲಾ ಮರೆತಿದ್ದೇವೆ, ಅವರು ಇದ್ದರು ಎಂದೂ ನಮಗೆ ಅರಿವಿಲ್ಲ! ಅದೆಷ್ಟು ಪೂರ್ವಜರ ಶ್ರೇಷ್ಠ ಚರಿತ್ರೆಯು ಅಳಿಸಿಹೋಗಿರುವುದೋ, ಅಷ್ಟೂ ಜನರಿಗೆ ನಾನು ಈ ಲೇಖನವನ್ನು ಅರ್ಪಿಸುತ್ತೇನೆ.

(ಈ ಲೇಖನದ ಮೊದಲ ಭಾಗ ಇಲ್ಲಿ ಓದಬಹುದು)

(Image credit: outlookindia.com)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply