close logo

ಸನಾತನ ಧರ್ಮದಲ್ಲಿ ಕಥೆಗಳ ಮಹತ್ವ: ವ್ರತ ಕಥೆಗಳು

ಹಿನ್ನೆಲೆ 

ಭಾರತೀಯ ಸಂಪ್ರದಾಯದಲ್ಲಿ ಪುರಾಣ- ಪುಣ್ಯಕಥೆಗಳನ್ನು ಕೇಳುವ ಅಥವಾ ಓದುವ ಪದ್ದತಿಗಳು  ಅನಾದಿಕಾಲದಿಂದಲೂ ನಡೆದು ಬಂದಿದೆ. ನಮ್ಮ  ಸಂಸ್ಕೃತಿಯ ಅಡಿಪಾಯವೆಂದೇ ಗುರುತಿಸಲ್ಪಡುವ ಶೃತಿ-ಸ್ಮೃತಿ ಸಂಪ್ರದಾಯದ ಬಹಳ ಮುಖ್ಯವಾದ ಭಾಗ, ಈ ಕಥೆಗಳು. ಒಂದು ಕಡೆ, ಕಥೆಗಳಾಗಿ ಇವು ನಮ್ಮ ಸಂಸ್ಕೃತಿ ಮತ್ತು ಚರಿತ್ರೆಯನ್ನು ಪ್ರತಿಬಿಂಬಿಸುವ ಕೈಗನ್ನಡಿಯಾದರೆ, ಮತ್ತೊಂದು ಕಡೆ, ಮಾನವರಲ್ಲಿ ಉತ್ತರೋತ್ತರ ವಿಚಾರಗಳನ್ನು ಅರಿತುಕೊಳ್ಳುವ ತವಕ ಮತ್ತು ಕುತೂಹಲಗಳನ್ನು ಹೆಚ್ಚಿಸುವ ಕಡುಗೋಲಿನ ಪಾತ್ರ ವಹಿಸುತ್ತವೆ. ಮುಖ್ಯವಾಗಿ ಈ ಎರೆಡೂ ಕಾರಣಗಳಿಂದಾಗಿಯೇ ಕಥೆ ಹೇಳುವುದೂ ಮತ್ತು ಕೇಳುವುದು ಸಂಪ್ರದಾಯವಾಗಿ ರೂಪುಗೊಂಡು, ನಮ್ಮ ಸಂಸ್ಕೃತಿಯ ಪ್ರಮುಖ ಲಾಂಛನಗಳಲ್ಲಿ ಒಂದಾದ ಪೂಜಾ ವಿಧಾನಗಳ ಭಾಗವಾಗಿದೆ. ಇಂತಹ ಕಥೆಗಳು, ಕೇವಲ ಆಧ್ಯಾತ್ಮ ಅಥವ ಇತಿಹಾಸದ ಆಸಕ್ತರನ್ನು ಮಾತ್ರ ಮುಟ್ಟುತ್ತದೆ ಎನ್ನುವಂತಿಲ್ಲ. ಆಸ್ತಿಕರಿಗೆ ತತ್ವ, ಸಾಮಾನ್ಯರಿಗೆ ಸಾಮಾನ್ಯ ಧರ್ಮ  ಮತ್ತು ಸಾಧಕರಿಗೆ ಮಾರ್ಗದರ್ಶಕವಾಗಿ ಕೆಲಸಮಾಡುವ ಪುರಾಣ ಪುಣ್ಯಕಥೆಗಳ ಪಾತ್ರವನ್ನು ನಿರ್ದಿಷ್ಟವಾಗಿ ವರ್ಣಿಸಲಾಗದು. ಇವು, ನಾಲ್ಕು ಆಶ್ರಮದಲ್ಲಿನವರಿಗೂ  ಅನ್ವಯಿಸುವಂತೆ ಜೀವನ ತತ್ವಗಳನ್ನು ತಿಳಿಸಿಕೊಡುತ್ತವೆ. ಅದೆಷ್ಟೋ ಕಥೆಗಳು ಅರಿಷಡ್ವರ್ಗದ ಸುತ್ತಲೇ ಎಣೆದಿರಲ್ಪಟ್ಟಿವೆ. ಭಗವಂತನಿಗೆ ಶರಣು ಹೋದಲ್ಲಿ ಇವುಗಳನ್ನು ಗೆಲ್ಲಬಹುದು ಎಂಬ ದೃಷ್ಟಿಕೋನ, ಜನರಲ್ಲಿ ಪ್ರಧಾನವಾಗಿದೆ. ಈ  ಕಾರಣದಿಂದಾಗಿಯೇ  ಈ ರೀತಿಯ ಕಥೆಗಳನ್ನು ಆಧ್ಯಾತ್ಮ ಎಂದು ಪರಿಗಣಿಸಲಾಗಿದೆಯಾದರೂ ಮೂಲತಃ  ಇವೆಲ್ಲವೂ ಜನರು ತಮ್ಮ ಪೂರ್ವಿಕರು ನಡೆದು, ಜಿಗಿದು, ಎದ್ದು-ಬಿದ್ದು, ಗೆದ್ದು ಬಂದ ಹಾದಿಯನ್ನು ನೆನೆಸಿಕೊಳ್ಳುವ ಮೂಲವೇ ಆದ ಕಾರಣ ಇವುಗಳನ್ನು ಕೇವಲ ಆಧ್ಯಾತ್ಮದ ಕಥೆಗಳೆಂದು ಪರಿಗಣಿಸುವುದು ಸೂಕ್ತವಲ್ಲ. ಇವೆಲ್ಲವು ನಮ್ಮ ಚರಿತ್ರೆ, ಇತಿಹಾಸ ಮತ್ತು ಸಾಂಸ್ಕೃತಿಕ ಸಂಪತ್ತು. ಭಾರತದ ಎಷ್ಟೋ ಕಥೆಗಳಲ್ಲಿ, ಮೌಲ್ಯಗಳು ಏಕಾಏಕಿ ಕಣ್ಣಿಗೆ ಕಾಣುವಂತೆ ನೇರವಾಗಿ ಕಥೆಯ ಕೊನೆಯಲ್ಲಿನ  ಒಂದೆರೆಡು  ಸಾಲುಗಳಲ್ಲಿ ಸಿಗುವುದಿಲ್ಲ. ಇವು ಕೇಳುಗರ ಮನಸ್ಸಿನಲ್ಲಿ ಕುತೂಹಲವನ್ನು ಹುಟ್ಟಿಸುತ್ತವೆ.  ಶ್ರೋತೃಗಳು ಸೂಕ್ಷ್ಮಗ್ರಾಹಿಗಳಾಗಿ, ಸ್ವಯಂ ಈ ತತ್ವಗಳನ್ನು ಹುಡುಕಿಕೊಂಡು, ಅರಿತುಕೊಳ್ಳುವ ಪ್ರಯಾಸ ಮಾಡಲು ದಾರಿದೀಪವಾಗಿ ಕಾಯುವುದಲ್ಲದೆ ನೆರಳಿನಂತೆ ಹಿಂಬಾಲಿಸುತ್ತವೆ. ದಶಾವತಾರದ ಮೊದಲನೇ ಕಥೆಯಾದ ಮತ್ಸ್ಯಾವತಾರದಲ್ಲಿ  ಕಾಣದ, ತಿಳಿಯದ, ಅರಿವಾಗದ  ತತ್ವಗಳು ಕೃಷ್ಣಾವತಾರದ ಕಥೆಗಳನ್ನು ತಲುಪಿದಾಗ  ಖಂಡಿತವಾಗಿಯೂ ಗೋಚರವಾಗುತ್ತದೆ ಎನ್ನುವುದೊಂದು ಸಣ್ಣ ಉದಾಹರಣೆ.  ನಾವು ಮಕ್ಕಳಿಗೆ ಕಥೆ ಹೇಳಬೇಕಾದರೆ ಅವರು ‘ಆಮೇಲೆ’ ಎಂದು ಕೇಳುವುದಿಲ್ಲವೇ, ಹಾಗೆ. 

ಭಾರತೀಯ ತತ್ತ್ವ ಶಾಸ್ತ್ರವು ಮೂಲತಹ  ‘ಸ್ವ-ಭಾವ’ ಕ್ಕೆ ಪ್ರಾಧಾನ್ಯ ನೀಡುತ್ತದೆ. ‘ಸ್ವಭಾವ’ ಎನ್ನುವುದು ಸ್ವ-ಧರ್ಮ’ ಕ್ಕೆ ಆಧಾರಸ್ಥಂಭ. ಇಲ್ಲಿ ಈ ‘ಸ್ವಭಾವ’ ದ ವಿಷಯವನ್ನು ಪ್ರಸ್ತಾಪ ಮಾಡಲು ಪ್ರಚೋದಿಸಿರುವುದು ಒಂದು ಮುಖ್ಯವಾದ ಚಿಂತನೆ : ‘ಯಥೋ ಭಾವ ತಥೋ ಭವತಿ’ ಎಂಬ ಸೂಕ್ಷ್ಮ. ಕಥೆಗಳು ಭಾವನೆಗಳನ್ನು ಸೆರೆ ಹಿಡಿಯುತ್ತವೆ. ಅವುಗಳಲ್ಲಿ ಪಾತ್ರಗಳ ಮೂಲಕ ಪ್ರಧಾನವಾಗಿ ಮೆರೆದು, ಸರಾಗವಾಗಿ ಹರಿದು, ಪೆರದೆ ಸರಿಸಿ, ಓದುಗರನ್ನು/ಶ್ರೋತೃಗಳನ್ನು ತಲುಪುವುದು ಕಥೆಯೊಳಗಿನ ‘ರಸ’. ಯಾವ ರಸ ನಮ್ಮನ್ನು ಮುಟ್ಟುತ್ತವೆಯೋ ನಮ್ಮ ಭಾವನೆ ಆಗೆಯೇ ರೂಪಗೊಳ್ಳುತ್ತವೆ. ಕೊಂಚ ಇದನ್ನು ವಿಸ್ತರಿಸಿ ಅರಿಯಲು ಪ್ರಯತ್ನಿಸಿದಾಗ, ನಮ್ಮ ಭಾವನೆಗಳು ನಮ್ಮ ವ್ಯಕ್ತಿತ್ವದ ಪ್ರತಿನಿಧಿಗಳು ಎಂದು ತಿಳಿದು ಬರುತ್ತದೆ. ಈ ಕಾರಣದಿಂದಲೇ, ಹಿಂದೆ, ಜನರು ಪೂಜೆ ಪುನಸ್ಕಾರಗಳ ಮೂಲಕ ಭಕ್ತಿ ಮತ್ತು ಶಾಂತ ರಸಗಳಿರುವ ಕಥೆಗಳನ್ನು ನೆನೆದು ಆ ರೀತಿಯ ಭಾವನೆಗಳನ್ನೇ ಆಹ್ವಾನ ಮಾಡಿಕೊಂಡು ಸುಖ ಮತ್ತು ನೆಮ್ಮದಿಗಳನ್ನು ಅನುಭವಿಸುತ್ತಿದ್ದರು ಮತ್ತು ತನ್ಮೂಲಕ ಉಂಟಾದ ಕುತೂಹಲ, ಆಸಕ್ತಿ ಮತ್ತು ಜಿಜ್ಞಾಸೆಗಳು ಆಧ್ಯಾತ್ಮಕ್ಕೆ ತಿರುಗಿ ಕೆಲವರು ಸಾಧನಾ ಮಾರ್ಗವನ್ನು ಸಹ ಆಯ್ದುಕೊಳ್ಳುತ್ತಿದ್ದರು. 

ಪುರಾಣ ಮತ್ತು ಪುಣ್ಯಕಥೆಗಳನ್ನು  ಓದಿದರೆ ಇಲ್ಲವೇ ಕೇಳಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಮತ್ತು ದೇವರ ಕೃಪೆ ಲಭಿಸುತ್ತದೆ ಎಂಬ ನಂಬಿಕೆ ಜನರ ಮನಸ್ಸಿನಲ್ಲಿ ಮೂಡಲು ಅವರಿಗಾದ ಅನುಭವಗಳೇ ಸಾಕ್ಷಿಯಾದವು . ಕಥಾ ಶ್ರವಣದಿಂದಾಗಿ   ಜೀವನದಲ್ಲಿ ನೆಮ್ಮದಿ ಮತ್ತು  ಸಂತೋಷ  ಚಿರಸ್ಥಾಯಿಗಳಾಗುತ್ತವೆ  ಎಂದು ಅನೇಕ ಕೃತಿಗಳ ಆರಂಭದಲ್ಲಿಯೇ  ಹೇಳಿದೆಯಾದರು ಮುಖ್ಯವಾಗಿ ಇವುಗಳ ಪಾರಾಯಣದಿಂದ ಮನಸ್ಸು  ಪರಿಪಕ್ವವಾಗುತ್ತದೆ.  ಆಧ್ಯಾತ್ಮ ಮತ್ತು ಉತ್ತರೋತ್ತರ ಚಿಂತನೆಗಳ ಮಂಥನಕ್ಕೆ ಕಥಾ ಶ್ರವಣ ನಾಂದಿಯಾಗುತ್ತದೆ. ‘ಬ್ರಹ್ಮ ಸತ್ಯ ಜಗನ್ ಮಿಥ್ಯ’ ಎಂಬ ಅರಿವು ಬಲವಾಗುತ್ತಾ ಹೋಗುತ್ತದೆ.  ಇಂತಹ ಆಂತರಿಕ ಪರಿಷ್ಕರಣವನ್ನು  ಸಮರ್ಥಿಸುವಂತ ಒಂದು ಶ್ಲೋಕವನ್ನು ಗಮನಿಸೋಣ. ಇದು  ಭಾಗವತ ಪುರಾಣದ ಆರಂಭದಲ್ಲಿಯೇ ಬರುವಂತಹ ಒಂದು ಶ್ಲೋಕ. 

ಧರ್ಮಃ ಪ್ರೋಜ್ಝಿತಕೈತವೋಽತ್ರ ಪರಮೋ ನಿರ್ಮತ್ಸರಾಣಾಂ ಸತಾಂ 

ವೇದ್ಯಂ  ವಾಸ್ತವಮತ್ರ ವಸ್ತು ಶಿವದಂ ತಾಪತ್ರಯೊನ್ಮೂಲನಮ್।

ಶ್ರೀಮದ್ ಭಾಗವತೇ ಮಹಾಮುನಿಕೃತೇ ಕಿಂ ವಾ ಪರೈರೀಶ್ವರಃ 

ಸಾದ್ಯೋ ಹೃದ್ಯವರುಧ್ಯತೇಽತ್ರ ಕೃತಿಭಿಃ ಶುಶ್ರೂಷುಭಿಸ್ತತ್ಕ್ಷಣಾತ್ ।। 

ಶ್ರಿಮದ್ಭಾಗವತ ಪುರಾಣ ೧.೧.೨

 ಶ್ರೀ ವೇದವ್ಯಾಸರು ರಚಿಸಿರುವ ಈ ಸುಂದರವಾದ ಭಾಗವತ ಪುರಾಣವನ್ನು ಕೇಳುವವರ ಮನಸ್ಸಿನಲ್ಲಿ, ಧರ್ಮಾತ್ಮನಾದ, ಸತ್ಯಮೂರ್ತಿಯಾದ ಮತ್ತು ತಾಪತ್ರಯ ನಿವಾರಕನಾದ ನಾರಾಯಣನು ನೆಲಸುತ್ತಾನೆ. ಹೀಗಿರುವಾಗ ಇಂತಹ ಪುಣ್ಯಾತ್ಮರು ಇನ್ನಾವ ಕೃತಿಯನ್ನು ಓದಿದರೂ ಏನು ಪ್ರಯಾಯೋಜನ? 

ಭಾಗವತ ಪುರಾಣದ ಶ್ರವಣ ಎಲ್ಲದ್ದಕ್ಕಿಂತ ಶ್ರೇಷ್ಠ ಎಂದು ಹೇಳುವುದು ಈ ಶ್ಲೋಕದ ಉದ್ದೇಶವಲ್ಲ. ಬದಲಿಗೆ, ಪರಮಾತ್ಮನ ಕೃಪೆಯನ್ನು ಪಡೆಯುವುದಷ್ಟೇ ಅಲ್ಲ, ಅವನು ನಮ್ಮ ಹೃದಯ ನಿವಾಸಿಯಾಗಲು ಈ ಒಂದು ಕೃತಿಯನ್ನು ಮಾತ್ರ ಓದಿದರೂ ಸಾಕು ಎಂದು ಪರಮಾತ್ಮನ ಉಧಾರ ಭಾವಕ್ಕೆ ಒತ್ತುಕೊಡುವುದು ಈ ಶ್ಲೋಕಾ ಮುಖ್ಯೋದ್ದೇಶ.  ಹಿಂದೆ, ಮಾತನಾಡುತ್ತಿದ್ದ ಶೈಲಿ ಇದು. ನಮ್ಮ ಪೂರ್ವಿಕರಿಗೆ, ನಮ್ಮ ಸಂಸ್ಕೃತಿಯಲ್ಲಿ ಲಭ್ಯವಿರುವ ಜ್ಞಾನ ಭಂಡಾರದ ಪ್ರಮಾಣದ ಅರಿವು ಮತ್ತು ಅವುಗಳನ್ನು ಅರ್ಥೈಸಿಕೊಳ್ಳಲು ಬೇಕಾದ ಸಾಧನೆಯ ಅಳತೆ ತಿಳಿದಿತ್ತು. ಹೀಗಿರುವಾಗ ಇಂತಹ ಕೃತಿಗಳನ್ನು ಓದುವುದು/ಕೇಳುವುದು ಭಗವಂತನ ಪ್ರೀತಿಪಾತ್ರರಾಗಲು ಸುಲಭೋಪಾಯವೇ ಸರಿ ಎನ್ನುವಂತೆ ಹೇಳುವ ಪರಿ. ಇಂತಹ ಸಾಲುಗಳು, ಚಿಂತನೆಗಳು ಮತ್ತು ಅವುಗಳಲ್ಲಿನ ಆಚಾರ-ವಿಚಾರಗಳು ಇಂದು ವಿನಾಕಾರಣ ವಿಕೃತ ಭಾವದಿಂದ ಮಂಡಿಸುವ ವಾದಕ್ಕೆ ಸಿಲುಕಿಕೊಂಡಿರುವುದು ದುರಾದೃಷ್ಟವೇ ಸರಿ. 

ವ್ರತ 

‘ವ್ರತ’ ಎಂದರೆ  ದೃಢಚಿತ್ತದಿಂದ ಮಾಡಿದ ಸಂಕಲ್ಪವನ್ನು ಸಾಧಿಸಲು ಕೈಗೊಳ್ಳುವ ಆಚರಣೆ, ಎಂದು. ಕೆಲವು ಪ್ರಸಿದ್ದವಾದ ವ್ರತಗಳು ಗೃಹಸ್ಥಾಶ್ರಮದಲ್ಲಿರುವವರು ಮಾಡುವಂತದ್ದು. ಕೆಲವನ್ನು ಕೇವಲ ಗೃಹಿಣಿಯರು ಮಾಡಿದರೆ, ಕೆಲವನ್ನು ಪತಿ-ಪತ್ನಿಯರಿಬ್ಬರೂ ಕೂಡಿ ಮಾಡುತ್ತಾರೆ. ಗೃಹಸ್ಥರು ಸದಾ ತಮ್ಮ ತಮ್ಮ ಸಂಸಾರ, ಅದರ ತಾಪತ್ರಯ, ತೊಂದರೆಯಲ್ಲೇ ನಿರತಿರಿರುತ್ತಾರೆ. ಅವರಿಗೆ ವ್ರತಗಳ ಪಾಲನೆ, ಆಚರಣೆ ಮತ್ತು ವಿಧಿಗಳು ಮನಸ್ಸಿಗೆ ಮುದ, ಬುದ್ದಿಯ ಪರಿಪಕ್ವತೆ ಮತ್ತು ಜೀವನದಲ್ಲಿ ಗೆಲ್ಲುವ ಚೈತನ್ಯ ನೀಡುತ್ತದೆ . ಕೊಂಚ ನಿತ್ಯಕ್ರಮ ಬದಲಾದರೆ, ಸಡಗರ ಮೈದಾಳುತ್ತದೆ. ಗೃಹಿಣಿಯರಲ್ಲಿ, ವ್ರತದ ಕೆಲವು ವಿಧಿಗಳು ಎಂದರೆ ನೆರೆ ಹೊರೆಯ ಹೆಂಗಸರಿಗೆ ಅರಿಸಿನ ಕುಂಕುಮ ಕೊಡುವುದು,ಅಕ್ಕ ಪಕ್ಕದ ಮನೆಯವರಿಗೆ ಪ್ರಸಾದ ವಿತರಣೆ ಮಾಡುವುದು, ರಂಗೋಲಿ ಹಾಕುವುದು, ಹೂವು ಕಟ್ಟುವುದು, ಅಲಂಕಾರ ಮಾಡಿಕೊಳ್ಳುವುದು, ಬಗೆಬಗೆಯ  ಭಕ್ಷ್ಯ ಭೋಜ್ಯಗಳನ್ನು ಮಾಡುವುದು ಸಂತೋಷದಾಯಕವು ಮತ್ತು ಅಭಿವೃದ್ಧಿದಾಯಕವಾದ  ಕಾರಣದಿಂದಲೇ ಹಲವಾರು ತಲೆಮಾರುಗಳಿಂದಲೂ ಮಹಿಳೆಯರು ಈ ಮಾರ್ಗವನ್ನು ಹಮ್ಮಿಕೊಂಡು, ಇಂದಿಗೂ ಇವು ವಾಡಿಕೆಯಲ್ಲಿವೆ. ಕೇವಲ ಮಹಿಳೆಯರಷ್ಟೇ ಅಲ್ಲ, ಪುರುಷರಷ್ಟೇ ಆಚರಿಸಬಹುದಾದ ವ್ರತಗಳಿವೆ. ವ್ರತಗಳನ್ನು ಕೈಗೊಳ್ಳಲು ವರ್ಣಭೇದವಿಲ್ಲ. ವ್ರತ ನಿಬಂಧನೆಗಳನ್ನು ಆನುಸರಿಸಿ ಯಾರಾದರೂ ವ್ರತವನ್ನಾಚರಿಸಬಹುದು. ಆದರೆ, ವ್ರತಗಳಲ್ಲಿ ನಾಲ್ಕು ಆಶ್ರಮದ ಬೇಧವಿರುವುದು ಸಾಮಾನ್ಯವಾಗಿ ಕಾಣಸಿಗುತ್ತದೆ. ಬ್ರಹ್ಮಚರ್ಯ ಮತ್ತು ಸನ್ಯಾಸಾಶ್ರಮನ್ನು ಆಯ್ದುಕೊಂಡವರಿಗೆ ಆ ಆಶ್ರಮವೇ ವ್ರತಾಚರಣೆಯಂತೆ. ಅವುಗಳಲ್ಲಿ ನಿಯಂತ್ರಣವೇ ನಿಬಂಧನೆ. ನಿರ್ಲಿಪ್ತತೆಯೇ ವ್ರತ ಸಂಕಲ್ಪ. ಗೃಹಸ್ಥ ಮತ್ತು ವಾನಪ್ರಸ್ಥಾಶ್ರಮದಲ್ಲಿರುವವರಿಗೆ ಅನೇಕಾನೇಕ ವ್ರತಗಳಿದ್ದರು, ಸತ್ಯ-ಧರ್ಮಗಳು, ನೇಮ-ನಿಷ್ಠೆಗಳು ಮತ್ತು ಶ್ರದ್ಧಾ-ಭಕ್ತಿಗಳು ಇವುಗಳ ಆಧಾರ. ಸಮಗ್ರವಾಗಿ ಹೇಳುವುದಾದರೆ ಸನಾತನ ಧರ್ಮದ ಅನುಸಾರ ಜೀವನವೇ ವ್ರತಕ್ಕೆ ಸಮಾನ. ಜನರು ಮಕ್ಕಳಿಗೆ ಸತ್ಯವ್ರತ, ಪ್ರಿಯವ್ರತ ಮತ್ತು  ಧರ್ಮವ್ರತ ಎಂದೆಲ್ಲ ಹೆಸರಿಡುವುದು ಈ ಕಾರಣದಿಂದಲೇ.

 ವ್ರತ ಮತ್ತು ಕಥೆಗಳ ಬೆಸುಗೆ 

ಇಂದು, ಆಧ್ಯಾತ್ಮ ಪುಸ್ತಕಗಳು ಎಂದು ಪರಿಗಣಿಸಲ್ಪಟ್ಟಿರುವಂತಹ  ಭಾಗವತ, ಹರಿವಂಶ, ದೇವಿ ಮಹಾತ್ಮೆ, ಮಾಘ ಪುರಾಣ, ಕಾರ್ತೀಕ ಪುರಾಣ ಇತ್ಯಾದಿಗಳು ಮೂಲತಃ ಮುಖ್ಯವಾದ ಹದಿನೆಂಟು ಪುರಾಣಗಳ ಭಾಗವೋ, ಇಲ್ಲವೇ ಉಪನಿಷತ್ತುಗಳೋ ಅಥವಾ ಮಹಾಕಾವ್ಯಗಳ ಭಾಗವೋ ಆಗಿವೆ. ಅದೆಷ್ಟೋ ವ್ರತ ಕಥೆಗಳು, ‘ಇಂತಹ  ಪುರಾಣದಲ್ಲಿ, ಸೂತ ಮಹರ್ಷಿಗಳು ಹೀಗೆ ಹೇಳಿದರು ಅಥವಾ ಸನತ್ಕುಮಾರರು ನಾರದರನ್ನು ಕೇಳಿದಾಗ ನಾರದರು ಹೇಳಿದ ಕಥೆ ಇದು’, ಎಂದು ಶುರುವಾಗುತ್ತವೆ. 

ಕಾಲ ಬದಲಾದಂತೆಲ್ಲ ನಮ್ಮ ಸ್ವಭಾವವೂ ಬದಲಾಗ ತೊಡಗಿತು. ಎಲ್ಲವೂ ನಿಮಿಷಮಾತ್ರದಲ್ಲಿ ಕೈಗೂಡಬೇಕೆಂಬ ಆತುರ, ಸಹನೆ ಮತ್ತು ಸಮಯದ ಅಭಾವಗಳು, ಬೃಹತ್ ಪ್ರಮಾಣದ ಈ ಪುರಾಣ ಪುಣ್ಯಕಥೆಗಳನ್ನು ಸಮಗ್ರವಾಗಿ ಓದಲು ಅಡ್ಡಿಯಂತೆ ಕಂಡವು. ಆದ್ದರಿಂದ, ಇವುಗಳಿಂದ ಆಯ್ದ ಕೆಲವು ವಿಶೇಷವಾದ, ಮಹತ್ವಪೂರ್ಣವಾದ ಮತ್ತು ಸುಲಭವಾಗಿ ಆಚರಿಸಬಹುದಾದ ವಿಧಿಗಳು ಮತ್ತು ಅವುಗಳಿಗೆ ಸಂಬಂಧ ಪಟ್ಟ ಕಥೆಗಳು ವ್ರತಕಥೆಗಳ ಭಾಗವಾದವು. ಅದರಲ್ಲೂ ಮುಖ್ಯವಾಗಿ ಹಬ್ಬ ಹರಿದಿನಗಳಂದು, ಇಲ್ಲವೇ ಷಷ್ಠಿ, ಏಕಾದಶಿ, ತ್ರಯೋದಶಿಗಳಂತಹ ವಿಶೇಷ ದಿನಗಳಂದು ವ್ರತದ ಆಚರಣೆ, ವ್ರತ ಕಥಾ ಪಠಣ ಅಥವ ಶ್ರವಣ, ಪುಣ್ಯ ಪ್ರದಾಯಕ ಎಂದು ಹೇಳಲಾಯಿತು. ಒಂದು ರೀತಿ ನೋಡಿದಾಗ ಮನಸ್ಸನ್ನು ನಿಯಂತ್ರಣಕ್ಕೆ ತಂದುಕೊಳ್ಳುವ ಒಂದು ಉಪಾಯವಾಯಿತೆಂದರೆ ತಪ್ಪಾಗದು.   

ಭಾರತದ ಹಬ್ಬಗಳಲ್ಲಿ ವ್ರತ ಕಥೆಗಳ ಪಾತ್ರ  

ಒಂದು ಪಂಚಾಗವನ್ನು  ಹಿಡಿದು ಕೂತರೆ ಸಾಕು, ಪ್ರತಿನಿತ್ಯವೂ ಒಂದು ವಿಶೇಷ ದಿನವೆಂದು ತಿಳಿಯುತ್ತದೆ. ಭಾರತದ ಯಾವುದೋ ಒಂದು ಪ್ರದೇಶದಲ್ಲಿ ಒಂದು ಉತ್ಸವವೋ, ಆರಾಧನೆಯೋ ಅಥವ ಉಪಾಸನೆಯೋ ನಡೆಯುತ್ತಲೇ ಇರುತ್ತದೆ ಎಂದು ಕಾಣಸಿಗುತ್ತದೆ. ಅಲ್ಲಿಗೆ, ಪ್ರತೀ ದಿನವೂ ಶುಭದಿನವೇ ಅಲ್ಲವೇ? ಅಂತೆಯೇ ಈ ಎಲ್ಲ ಆಚರಣೆ, ಹಬ್ಬ ಹರಿದಿನಗಳ ಹಿಂದೊಂದು ಕಥೆಯಿರುತ್ತದೆ. ಅದೆಷ್ಟೋ ಬಾರಿ, ಮಕ್ಕಳು, ‘ಈ ದಿನವೇ ಏಕೆ ನಾವು ಹಬ್ಬವನ್ನು  ಆಚರಿಸಬೇಕು, ಭಾನುವಾರ ಮಾಡಿದರಾಯಿತಲ್ಲ?’ ಎಂದು ಪ್ರಶ್ನಿಸಿದಾಗ ನಾವು ನಮಗೆ ಅರಿವಿಲ್ಲದೆಯೇ ಥಟ್ ಎಂದು ಆ ಹಬ್ಬಕ್ಕೆ ಸಂಬಂಧಿಸಿದ ಕಥೆಯನ್ನು ಹೇಳಿಬಿಡುತ್ತೇವೆ. ಅನೇಕಾನೇಕ ಹಬ್ಬಗಳ ಆಚರಣೆ  ಮತ್ತು ವ್ರತಗಳ ಹಿನ್ನಲೆ ವ್ರತಕಥೆಗಳಲ್ಲಿಯೇ ದೊರಕುತ್ತವೆ. ಜೊತೆಗೆ, ಕೆಲವು ಪ್ರಾಂತ್ಯಕ್ಕೆ ಸೀಮಿತವಾದ ಹಬ್ಬ ಮತ್ತು ವ್ರತಗಳ ಮಾಹಿತಿ ಅಲ್ಲಿನ ಸ್ಥಳಪುರಾಣಗಳಲ್ಲಿಯೂ ದೊರಕುತ್ತವೆ. ಈ ಎಲ್ಲಾ ಕಥೆಗಳೂ, ಕಥೆಯ ರೂಪದಲ್ಲೇ ಇರತ್ತವೆ ಎನ್ನುವ ಆಗಿಲ್ಲ.  ಅವುಗಳನ್ನು ಜನರು ಹಾಡು, ನೃತ್ಯ, ಜನಪದ ಗೀತೆ ಮತ್ತು ಚಿತ್ರಗಳ ಮೂಲಕ ನೆನೆದು ಆಸ್ವಾದಿಸುತ್ತಾರೆ. ಇಲ್ಲಿ ಮತ್ತೊಂದು ವೈಶಿಷ್ಟ್ಯವನ್ನು ಗಮನಿಸಬೇಕು. ಬಹುತೇಕ ಆಚರಣೆಗಳು, ಅವುಗಳ ಹಿಂದಿರುವ ಕಥೆಯನ್ನು ನೆನೆಯದಿದ್ದರೆ ಸಂಪೂರ್ಣವಾಗದು ಎಂಬ ಪ್ರತೀತಿ ಯುಗ ಯುಗಗಳಿಂದಲೂ ಹರಿದುಬಂದಿದೆ. ಉದಾಹರಣೆಗೆ, ದ್ವಾಪರಯುಗದಲ್ಲಿ ಶ್ರೀ ಕೃಷ್ಣನು ಭಾದ್ರಪದ ಶುಕ್ಲ ಚೌತಿಯಂದು ಆಚರಿಸುವ ಗಣೇಶಚತುರ್ತಿಯಂದು ವ್ರತಕಥೆಯನ್ನು ಕೇಳದೆ ಚಂದ್ರ ದರ್ಶನ ಮಾಡಿದನಂತೆ. ಆ  ಸಲುವಾಗಿ ಸ್ಯಮಂತಕ ಮಣಿಯನ್ನು ಕದ್ದ ಅಪವಾದಕ್ಕೆ ಒಳಗಾದನೆಂಬುದು ಪ್ರಖ್ಯಾತವಾದ ಕಥೆ. ಹೀಗೆ ವ್ರತ ಕೆಥೆಗಳು ಹಬ್ಬ ಹರಿದಿನದ ಆಚರಣೆಯಲ್ಲಿ ಪ್ರಮುಖವಾದ ಪಾತ್ರವಹಿಸಿವೆ. 

ಕಥಾ ಪಾರಾಯಣ 

ಒಂದಷ್ಟು  ಆಚರಣೆಗಳಲ್ಲಿ, ಕೆಲವು ಪುರಾಣ-ಪುಣ್ಯ ಕಥೆಗಳನ್ನು ನಿಗದಿತ ಅವಧಿಯಲ್ಲಿ ಓದಿ ಅಥವ ಕೇಳಿ ಮುಗಿಸುವುದೇ ವ್ರತ. ಹೀಗೆ ನಿತ್ಯ ಓದುವ ಕ್ರಮವನ್ನು ಪಾರಾಯಣ ಎಂದು ಕರೆಯಲಾಗುತ್ತದೆ. ಪಾರಾಯಣ ಎಂದರೆ ಮುಂದೆ ಸಾಗುವುದು ಎಂಬ ಅರ್ಥವೂ ಇದೆ. ಪಾರಾಯಣ ಮಾಡಿದರೆ ಜ್ಞಾನ ಮಾರ್ಗದಲ್ಲಿ ಮುಂದೆ ಮುಂದೆ ಸಾಗುತ್ತೇವೆ ಎಂಬ ಸೂಕ್ಷಮಾರ್ಥವಿದು. ಭಾರತದ ಉದ್ದಗಲಕ್ಕೂ ಪಾರಾಯಣ ಸಂಪ್ರದಾಯ ಬೇರೂರಿದೆ.  ಚೈತ್ರಮಾಸದ ಶುಕ್ಲ ಪಾಡ್ಯಮಿ, ಎಂದರೆ ದಕ್ಷಿಣ ಭಾರತದ ಯುಗಾದಿ.  ಈ ದಿನಾರಭ್ಯ, ಉತ್ತರ ಭಾರತದಲ್ಲಿ ಜನರು ‘ವಸಂತ ನವರಾತ್ರಿ’ (ವಸಂತ ಋತುವಿನಲ್ಲಿ ಬರುವ ನವರಾತ್ರಿ) ಎಂದು, ಉಪವಾಸ ಮಾಡಿಯೋ ಇಲ್ಲವೇ ಒಪ್ಪತ್ತು ಮಾಡಿಯೋ (ದಿನದಲ್ಲಿ ಕೇವಲ ಒಂದು ಬಾರಿ ಊಟ ಮಾಡುವುದು) ದೇವಿ ಪುರಾಣ, ದುರ್ಗಾ ಸಪ್ತಶತಿ (ಇದನ್ನು ದೇವಿ ಮಹಾತ್ಮೆ  ಅಥವಾ ಚಂಡಿ ಪಾಠ್ ಎಂದೂ ಕರೆಯಲಾಗುತ್ತದೆ ) ಅಥವಾ ಸುಲಭವಾಗಿ ಓದಬಹುದಾದ ದೇವಿಯ ನವ ರೂಪಗಳ ಮೇಲಿನ ಕಥೆಗಳ ಪಾರಾಯಣ  ಮಾಡುತ್ತಾರೆ. ನವಮಿಯ ದಿನದಂದು ಉದ್ಯಾಪನೆ ಮಾಡುತ್ತಾರೆ. ಚೈತ್ರ ಶುಕ್ಲ ನವಮಿಯಂದು ರಾಮನ ಜನ್ಮ ದಿನವೂ ಸಹ. ಆದ್ದರಿಂದ ಅಂದು ದೇವಿಯ ಜೊತೆಗೆ  ರಾಮನ ಆರಾಧನೆಯೂ ಮಾಡಲಾಗುತ್ತದೆ. ಈ ವ್ರತವನ್ನು ಪುನಃ ಶರನ್ನವರಾತ್ರಿಯಲ್ಲೂ ಆಚರಿಸಲಾಗುತ್ತದೆ. ರಾಮ ನವಮಿಯಂದು ಈಗಲೂ ಕೆಲವರು ರಾಮಾಯಣದ ಪಾರಾಯಣವನ್ನು  ಬ್ರಹ್ಮ ಮುಹೂರ್ತದಲ್ಲಿ ಆರಂಭಿಸಿ ಅಪರಾಹ್ನದ ವೇಳೆಗೆ ಮುಗಿಸಿ ರಾಮನಿಗೆ ಪುನಃ ಪೂಜೆ ಮಾಡಿ ಪ್ರಸಾದ ಸ್ವೀಕರಿಸುವ ಪದ್ದತಿಯಿದೆ . ಕೃಷ್ಣ ಜನ್ಮಾಷ್ಟಮಿಯಂದು ಸಹ ಜನರು ಭಾಗವತದ ಕಥೆಗಳ ಪಠಣ ಮಾಡುವುದು, ಸಂಗೀತ, ನಾಟಕ ಮತ್ತು ನೃತ್ಯ ರೂಪಗಳಲ್ಲಿ ಕೃಷ್ಣನ ಜನನ, ಬಾಲ್ಯ ಮತ್ತು ಲೀಲೆಗಳಿರುವ ಕಥೆಗಳನ್ನು ನಿರೂಪಿಸುವುದು ಮತ್ತು ಪುಟ್ಟ ಪುಟ್ಟ ಮಕ್ಕಳನ್ನು ಕೃಷ್ಣಾ ರಾಧೆಯರಂತೆ ಅಲಂಕರಿಸಿ ಅವರಿಂದಲೇ ಕೃಷ್ಣನ ಬಾಲ ಲೀಲೆಗಳ ನಾಟಕವಾಡಿಸುವುದು ವಾಡಿಕೆ. ಕಥೆಗಳನ್ನು ಪುನಃ ಪುನಃ ನೆನೆಯುವುದು ಮತ್ತು ಓದುವುದರ ಮೂಲಕ ನಮ್ಮಲ್ಲಿ ನಾವು ಭಗವಂತನಿಗೆ ಹತ್ತಿರವಾಗುತ್ತಿರುವ ಭಾವನೆ ಹುಟ್ಟುತ್ತದೆ.  ಅವನು ಇಲ್ಲೇ, ನಮ್ಮ ಮನೆಯ ಹತ್ತಿರವೋ, ಅಥವಾ ಪಕ್ಕದ ಊರಿನಲ್ಲೋ ಇದ್ದಾನೆ ಎಂಬ ಕಲ್ಪನೆ ಮೂಡುತ್ತದೆ. ಕಥೆಗಳಲ್ಲಿ ಬರುವ ಪುರಿ, ನಗರ, ನದಿ, ಕಾಡು, ಜಲಾಶಯಗಳನ್ನು ನೋಡಬೇಕು, ನಮ್ಮ ಪ್ರಪಂಚ ಅದೆಷ್ಟು ಸುಂದರವಾಗಿದೆ, ಅದನ್ನು ಸವಿಯಬೇಕು, ಅಲ್ಲಿ ಪರಮಾತ್ಮನ ಅಂಶವನ್ನು ಕಾಣಬೇಕೆಂಬ ಉತ್ಸಾಹ ಮೈಗೂಡಿ ಜೀವನಾಭಿಲಾಷಿಗಳಾಗುತ್ತೇವೆ. ಇವು ಈ ಕಥೆಗಳ ಬಾಹ್ಯ ಪರಿಣಾಮವಾದರೆ, ಆಂತರಿಕವಾಗಿ ಸತ್ಯ, ಧರ್ಮ, ಸತ್ಚಾರಿತ್ರ್ಯ , ತಾತ್ವಿಕ ಮೌಲ್ಯ ಮತ್ತು ಶಿಸ್ತುಬದ್ದವಾದ ಜೀವನದ  ಬಗ್ಗೆ ಪಕ್ವವಾದ ಪರಿಕಲ್ಪನೆ ಗಟ್ಟಿಯಾಗುವುದು ಆಂತರಿಕ ಬದಲಾವಣೆ.  

ಹಿಂದೆ, ವ್ರತದ ಆಚಾರಣೆಗೆ ಡೋರ ಬಂಧನ ಕಡ್ಡಾಯವಾಗಿರುತ್ತಿತ್ತು. ಹಿರಿಯರು ಕಿರಿಯರ ಕೈಗೆ ದಾರವನ್ನು (ಡೋರ) ಕಟ್ಟುವುದರ ಮೂಲಕ ಮುಂದಿನ ವರ್ಷದ ವ್ರತಾಚರಣೆಗೆ ಅಪ್ಪಣೆ ನೀಡಿ, ಆಶೀರ್ವದಿಸಿ, ವ್ರತ ನಿಯಮಗಳನ್ನು,ಭಕ್ಷ್ಯ-ಭೋಜ್ಯಗಳ ಮಾಹಿತಿಯನ್ನು ಮತ್ತು  ವ್ರತ ಕಥೆಗಳನ್ನು ಹೇಳಿಕೊಡುವುದರ ಮೂಲಕ ಸಂಪ್ರದಾಯವನ್ನು ಮುಂದುವರಿಸುತ್ತಿದ್ದರು. ಹಿರಿಯರಿಂದ ಅಪ್ಪಣೆ  ಪಡೆದ ನಂತರವಷ್ಟೇ, ಕಿರಿಯರು ತಮ್ಮ ತಮ್ಮ ಮನೆಗಳಲ್ಲಿ ಪ್ರತ್ಯೇಕವಾಗಿ ವ್ರತಗಳನ್ನು ಆಚರಿಸಬಹುದಾಗಿತ್ತು .  ಅಂಗಡಿಗಳಲ್ಲಿ ವ್ರತಕಥಾ ಪುಸ್ತಕಗಳು ಸುಲಭವಾಗಿ ದೊರೆಯಲು ಪ್ರಾರಂಭಿಸಿದ ನಂತರ ಜನರು ವ್ರತಪುಸ್ತಕಗಳನ್ನು ಹಂಚುವುದರ ಮೂಲಕ ವ್ರತಾಚರಣೆಗೆ ಅಪ್ಪಣೆ ಸೂಚಿಸುತ್ತಿದ್ದರು. ಈ ಪುಸ್ತಕಗಳಲ್ಲಿ ಪೂಜಾ ವಿಧಿ, ಉಪವಾಸ, ಭೋಜನ-ಭಕ್ಷ್ಯಗಳ ಮಾಹಿತಿ ಮತ್ತು ವ್ರತಕಥೆಗಳೂ ಸಹ  ದೊರಕುತ್ತದೆ. ಹಿಂದೆ, ಪೂಜೆ ಮುಗಿದ ನಂತರ ಮನೆಯ ಸದಸ್ಯರೆಲ್ಲರೂ ಒಂದುಗೂಡಿರುವ ಸಮಯದಲ್ಲಿ ಮನೆಯ ಮುಖ್ಯಸ್ಥರು, ತಮ್ಮ ಹಿರಿಯರಿಂದ ಕೇಳಿ ಕೇಳಿ ಮನದಟ್ಟಾಗಿರುವ ವ್ರತಕಥೆಗಳನ್ನು, ಅವುಗಳ ಮೂಲ ತತ್ವಕ್ಕೆ ಒತ್ತು ಕೊಡುತ್ತಾ ರಸವತ್ತಾಗಿ ಹೇಳುತ್ತಿದ್ದರು. ಇಂದು, ಈ ವಾಡಿಕೆ ಅಷ್ಟಾಗಿ ಕಾಣಸಿಗುವುದಿಲ್ಲ. ಕೆಲವರು ಸಾಮಾನ್ಯವಾಗಿ ಮಾಡುವ ಸತ್ಯನಾರಾಯಣ ಸ್ವಾಮಿಯ ವ್ರತಕಥೆಗಳನ್ನು, ಗಣೇಶ ಚತುರ್ಥಿಯ ಕಥೆಗಳನ್ನು ನೆನೆಪಿಟ್ಟುಕೊಂಡು ಪೂಜೆ ಮುಗಿದ ಕೂಡಲೆ ಸಂಕ್ಷಿಪ್ತವಾಗಿ ಹೇಳುಬಿಡುವ ಅಭ್ಯಾಸ ಮಾಡಿಕೊಂಡಿದ್ದಾರೆ. ಇನ್ನು ಅದೇಷ್ಟೋ ವ್ರತಕಥೆಗಳು ಆರತಿ ಮಾಡುವಾಗ ಹಾಡುವ ಹಾಡುಗಳ ರೂಪ ತಾಳಿವೆ. 

ಕೇವಲ ಹಬ್ಬಗಳಲ್ಲಿ ಮಾತ್ರವಲ್ಲ, ಮನೆಯಲ್ಲಿ ವೈದಿಕ (ತಿಥಿ) ಮಾಡುವಾಗಲೂ ಮನೆಗೆ ಬಂದ ಹಿರಿಯರು, ಭಾಗವತವನ್ನು ಓದುವುದು ಅದರಲ್ಲೂ ಗಜೇಂದ್ರ ಮೋಕ್ಷದ ಕಥೆಯನ್ನು ಓದುವ ಪದ್ದತಿಯಿರುತ್ತಿತ್ತು. ವೈದಿಕವಾದ ನಂತರ, ಮನೆಯವರಿಗೆ ಶಾಂತಿ ನೆಮ್ಮದಿ ದೊರಕಲೆಂದು ಸಂಜೆಯ ವೇಳೆಗೆ ದಶಾವತಾರದ ಕಥೆಗಳನ್ನು ಅಥವಾ ಶಿವ ಪುರಾಣದ ಕಥೆಗಳನ್ನು ಓದಲಾಗುತ್ತಿತ್ತು. ಈಗ ಈ ಪ್ರತೀತಿ ವಿರಳ. ಆದರೆ, ಮನೆಯಲ್ಲಿ  ಯಾರಾದರೋ ದೈವಾಧೀನರಾದರೆ, ಮೂರನೇ ದಿನದಿಂದ ಹಿಡಿದು ಹತ್ತನೇ ದಿನದ ಒಳಗೆ ಗರುಡ ಪುರಾಣವನ್ನು ಮನೆಯ ಹೊರಗೆ ಕುಳಿತು ಓದುವುದು ಇಲ್ಲವೇ ಓದಿಸುವುದು ಈಗಲೂ ಆಚರಣೆಯಲ್ಲಿರುವುದನ್ನು ಗಮನಿಸಬಹುದು. 

ಮಾಘ ಮಾಸ, ಧನುರ್ ಮಾಸ ಮತ್ತು ಕಾರ್ತಿಕ ಮಾಸಗಳಲ್ಲಿ ಒಂದು ತಿಂಗಳು ಪರ್ಯಂತ  ಆ ಮಾಸದ ಹೆಸರಿನ ಪುರಾಣಗಳ ಪಾರಾಯಣವನ್ನು ಮಾಡಲಾಗುತ್ತದೆ. ಮಾಘಮಾಸ, ಸ್ನಾನಕ್ಕೆ ಪ್ರಾಮುಖ್ಯತೆ ಕೊಟ್ಟರೆ, ಧನುರ್ ಮಾಸ ದೇವಾರಾಧನೆಗೆ ಒತ್ತು ಕೊಡುತ್ತದೆ ಮತ್ತು ಕಾರ್ತಿಕ ಮಾಸ ಧಾನಕ್ಕೆ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ. ಹಲವಾರು ಪುರಾಣಗಳಿಂದ ಆಯ್ದ ಕಥೆಗಳನ್ನು ಒಗ್ಗೂಡಿಸಿ ಮಾಘ ಪುರಾಣ, ಧನುರ್ಮಾಸ ಪುರಾಣ ಮತ್ತು ಕಾರ್ತಿಕ ಪುರಾಣಗಳು ತಯಾರಾಗಿವೆ. ಮಾಘ ಪುರಾಣದಲ್ಲಿ ಬ್ರಹ್ಮ ವೈವರ್ತ ಪುರಾಣದಿಂದಲೂ ಮತ್ತು ಮತ್ಸ್ಯ ಪುರಾಣದಿಂದಲೂ ಆಯ್ದ ಕಥೆಗಳ ಜೊತೆ ಇನ್ನು ಹತ್ತು ಹಲವು ವಿಷಯಗಳ ಮಾಹಿತಿಯಿದೆ. ಕಾರ್ತಿಕ ಪುರಾಣವು ಸ್ಕಂದ ಪುರಾಣ ಮತ್ತು ಶಿವ ಪುರಾಣಗಳ ಪ್ರಕರಣಗಳಿಂದ ಸಜ್ಜಾಗಿದೆ. ಧನುರ್ಮಾಸದಲ್ಲಿ ಇಷ್ಟ ದೇವತೆಗಳ ಕಥೆ-ಪುರಾಣಗಳ ಪಾರಾಯಣ ಮಾಡಲಾಗುತ್ತದೆ. ದಕ್ಷಿಣ ಭಾರತದ ವೈಷ್ಣವ ಸಂಪ್ರದಾಯವನ್ನು ಪಾಲಿಸುವವರು ಆಂಡಾಳ್ ನ ತಿರುಪ್ಪಾವೈ ಅನ್ನು  ಹಾಡುವುದು ಬಹಳ ಪ್ರಸಿದ್ದವಾದ ಸಂಪ್ರದಾಯ. 

ಮನೆಯಲ್ಲಿ ಮದುವೆಯ ವಯಸ್ಸಿನ ಮಕ್ಕಳಿದ್ದರೆ ಅವರಿಗೆ ಹೊಳ್ಳೆಯ ಜೀವನ ಸಂಗಾತಿ ದೊರೆಯಲೆಂದು ಶ್ರೀನಿವಾಸ ಕಲ್ಯಾಣದ ಅಥವಾ ಸೀತಾ-ರಾಮ ಕಲ್ಯಾಣ ಇಲ್ಲವೇ ಗಿರಿಜಾ ಕಲ್ಯಾಣದ ಪಾರಾಯಣ ಮಾಡುವುದು ಅಥವಾ ದೇವಸ್ಥಾನಗಳಲ್ಲಿ ಇಷ್ಟ ದೇವತೆಗಳ ಕಲ್ಯಾಣೋತ್ಸವವನ್ನು ಆಯೋಜಿಸಿ, ಅದಕ್ಕೆ ಸಂಬಂಧಪಟ್ಟ  ಕಥೆಗಳನ್ನು ಪುರೋಹಿತರಿಂದ, ನೆರೆದ ಜನರಿಗೆ ಹೇಳಿಸುವ ಸಂಪ್ರದಾಯವನ್ನು ಇಂದೂ ಸಹ ಹಲವಾರು ಕುಟುಂಬಗಳು ಪಾಲಿಸುತ್ತವೆ.  ಈ ಕಥೆಗಳಿರುವ ಹರಿಕಥೆ ಯನ್ನು  ಆಯೋಜಿಸುವ ಸಂಪ್ರದಾಯವೂ ನಿಧಾನವಾಗಿ ಮರೆಯಾಗುತ್ತಿದೆಯಾದರು ಕೆಲವು ಗ್ರಾಮಗಳಲ್ಲಿ ಇಂದಿಗೂ ಜೀವಂತವಾಗಿದೆ. (ಒಬ್ಬ ವಾಚಕರು ತಂಬೂರಿ ಹಿಡಿದು, ರಸವತ್ತಾಗಿ ಒಳ್ಳೆಯ ಸಂಗೀತ ಮತ್ತು ವ್ಯಾಖ್ಯಾನ ಸೇರಿಸಿ ಈ ಕಥೆಗಳನ್ನು ಹಾಡುತ್ತಾ-ಹೇಳುತ್ತಾರೆ ). ಮದುವೆ ಎಂದ ತಕ್ಷಣ ನಮ್ಮ ಮನಸ್ಸಿಗೆ ಬರುವುದು ಕಾರ್ತಿಕ ಮಾಸದ ಶುಕ್ಲ ದ್ವಾದಶಿಯಂದು ಆಚರಿಸಲಾಗುವ ತುಳಸಿ ಹಬ್ಬ. ಅಂದು, ಕೃಷ್ಣನ ಜೊತೆಗೆ ತುಳಸಿಯ ವಿವಾಹ ಮಾಡಲಾಗುತ್ತದೆ. ಉತ್ತರ ಭಾರತದಲ್ಲಿ ಕೃಷ್ಣನ ಪ್ರತಿಮೆಯನ್ನು ತುಳಸಿ ಕಟ್ಟೆಯಲ್ಲಿ ಸ್ಥಾಪಿಸಿ, ಅವರಿಬ್ಬರಿಗೆ ಮದುವೆ ಮಾಡಿಸಿ, ಆರತಿಯಾದ ನಂತರ ತುಳಸಿ ವಿವಾಹದ ಕಥೆಯನ್ನು ಓಡುವುದುರ ಮೂಲಕ ವಿವಾಹ ಸಂಪನ್ನವಾಯಿತೆಂದು ತಿಳಿಯುತ್ತಾರೆ. ದಕ್ಷಿಣ ಭಾರತದಲ್ಲಿ ನೆಲ್ಲಿಕಾಯಿಯ ತೊಗಟೆಯನ್ನು ಕೃಷ್ಣನೆಂದು ಭಾವಿಸಿ, ನೆಲ್ಲಿಕಾಯಿಯ ಆರತಿಯನ್ನು ಮಾಡುತ್ತ ತುಳಸಿ ವಿವಾಹದ ಕಥೆಯಿರುವ ಆರತಿ ಹಾಡುಗಳನ್ನು ಹಾಡುತ್ತಾರೆ. ಎಷ್ಟೋ ಮನೆಗಳಲ್ಲಿ ಕಷ್ಟ ನಿವಾರಣೆಯ ಉದ್ದೇಶದಿಂದ ರಾಮಾಯಣದ ಸುಂದರ ಖಾಂಡ, ಸಂಪೂರ್ಣ ರಾಮಾಯಣ, ಭಾಗವತ, ಭಗವದ್ಗೀತೆ  ಮತ್ತು ಹರಿ ವಂಶದ ಕಥೆಗಳನ್ನು ಓದುವ ಹರಿಕೆ ಮಾಡಿಕೊಂಡು ಆದಷ್ಟೂ  ಮನೆ ಮಂದಿಯೆಲ್ಲ ಇವುಗಳ ಪಾರಾಯಣದಲ್ಲಿ ಭಾಗವಹಿಸುತ್ತಾರೆ.  ಕರ್ನಾಟಕದಲ್ಲಿ ಲಕ್ಷ್ಮಿ ಶೋಭಾನೆ ಎಂಬ ಹಾಡನ್ನು ಶ್ರಾವಣ ಮಾಸದಲ್ ಶುಕ್ರವಾರದಂದು ತಪ್ಪದೆ ಹಾಡುವ ಸಂಪ್ರದಾಯ ಅನೇಕ ಮನೆಗಳಲ್ಲಿವೆ. ಈ ಹಾಡಿನಲ್ಲಿ, ಸಮುದ್ರ ಮಂಥನವಾದಾಗ ಹೊರಹೊಮ್ಮಿದ ಶ್ರೀ ಲಕ್ಷ್ಮಿಯು ಶ್ರೀ ಹರಿಯನ್ನು ವರಿಸಿದ ಕಥೆಯಿದೆ.  ಕರ್ನಾಟಕದ ಶ್ರಾವಣ ಮಾಸದ ಸ್ವಲ್ಪ ಹಿಂದು-ಮುಂದಾಗಿ ಶುರುವಾಗುವ ಕೇರಳದ ‘ಕರ್ಕಿಡಕಮ್’ ಮಾಸವು ‘ರಾಮಾಯಣ ಮಾಸ’ ಎಂದೇ ಪ್ರಸಿದ್ದಿ ಪಡೆದು ತಿಂಗಳು ಪರ್ಯಂತ ಜನರು ರಾಮಾಯಣದ ಪಾರಾಯಣ ಮಾಡುತ್ತಾರೆ.

  ಕಡೆನುಡಿ 

ಭಾರತದಲ್ಲಿ ಪುರಾಣ, ಪುಣ್ಯ ಕಥೆಗಳು, ನಾವು ಜನ್ಮ ಪಡೆದಾಗಿನಿಂದಲೂ ಒಂದಲ್ಲ ಒಂದು ರೀತಿ ಜೀವನದುದ್ದಕ್ಕೂ ನಮ್ಮ ಹಿಂದೆಯೇ ಬರುತ್ತವೆ. ಇವುಗಳು ಹಲವಾರು ಕಲೆಗಳಲ್ಲಿ ಕಲೆತುಹೋಗಿವೆ. ನೃತ್ಯ, ಗಾಯನ, ನಾಟಕ, ಚಿತ್ರ ರಚನೆ, ಕೆತ್ತನೆ, ಕಸೂತಿ, ಗೊಂಬೆ ಮಾಡುವಿಕೆ ಮತ್ತು ಜಾನಪದ ಲೋಕದ ಹೇಳತೀರದ ಅದೆಷ್ಟೋ ಸೃಜನಾತ್ಮಕ ಕಲೆಗಳ ಅವಿಭಾಜ್ಯವಾಗಿ ಅಂಗವಾಗಿದೆ. ಭಾರತದ ಕಥಾ ಸಂಪ್ರದಾಯವು ಸಾಮಾನ್ಯ ಪ್ರಜ್ಞೆಯನ್ನು ಮುಟ್ಟುತ್ತ, ತಾತ್ವಿಕ ಚಿಂತನೆಗಳನ್ನು ಬೆಳಗಿಸುತ್ತ ಆಂತರಿಕ ತರ್ಕಕ್ಕೆ ದಾರಿ ದೀಪವಾಗುತ್ತ, ಆಂತರಿಕ ದೃಷ್ಟಿಯನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತವೆ. 

ವಿಷಯ ಸಂಗ್ರಹ :

೧. ವ್ರತ ಪರಿಚಯ (ಹಿಂದಿ) – ಗೀತಾ ಪ್ರೆಸ್ : ಪಂ. ಹನುಮಾನ್ ಶರ್ಮ 

Feature Image Credit: wikimedia.org

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply