ಕಾಳಿದಾಸನು ಈ ಮಹಾಕಾವ್ಯವನ್ನು ಹಿಮವಂತನ ಶ್ರೇಷ್ಠತೆ ಮತ್ತು ಸೌಂದರ್ಯದ ವರ್ಣನೆಗಳಿಂದ ಪ್ರಾರಂಭಿಸುತ್ತಾನೆ.
ಸ್ಥಿತಃ ಪೃಥಿವ್ಯಾ ಇವ ಮಾನದಂಡಃ ।
‘ಇಳೆಯ ಅಳತೆಗೋಲು’ ಎಂಬ ಉತ್ಪ್ರೇಕ್ಷೆಯಿಂದ ಹಿಮವಂತನನ್ನು ಹಲವಾರು ಅತಿಶಯೋಕ್ತಿಗಳಿಂದ ವರ್ಣಿಸಿದ ನಂತರ ಆತನ ಮಗಳು ಪಾರ್ವತಿಯಿಂದಾಗಿ ಹಿಮಾಲಯ ಪರ್ವತವು ಶೋಭಾಯಮಾನವಾಗಿತ್ತಲ್ಲದೆ ಹಿಮಾಲಯದೆಲ್ಲೆಡೆ ಪಾವಿತ್ರತೆಯು ಉಕ್ಕಿ ಹರಿಯುತ್ತಿತ್ತು ಎಂದು ಪಾರ್ವತಿಯ ಪರಿಚಯ ನೀಡುತ್ತಾನೆ.
ಪ್ರಭಾಮಹತ್ಯಾ ಶಿಖಯೇವದೀಪಸ್ತ್ರಿಮಾರ್ಗಯೇವ ತ್ರಿದಿವಸ್ಯಮಾರ್ಗಃ ।
ಸಂಸ್ಕಾರಾವತ್ಯೇವಗಿರಾಮನೀಷೀತಯಾಸಪೂತಶ್ಚವಿಭೂಷಿತಶ್ಚ ।।
ಮಗಳು ಪಾರ್ವತಿ ಎಂದರೆ ತಂದೆ ಹಿಮಾಲಯನಿಗೆ , ದೀಪಕ್ಕೆ ತನ್ನಲ್ಲಿರುವ ಜ್ಯೋತಿಯ ಪ್ರಕಾಶದಂತೆ, ಸ್ವರ್ಗ ಮಾರ್ಗಕ್ಕೆ ತನ್ನಲ್ಲಿ ನಿರ್ಮಲವಾಗಿ ಹರಿಯುವ ಗಂಗೆಯಂತೆ, ವಿದ್ವತ್ತಿಗೆ ತನಗೆ ಪೂರಕವಾಗಿ ಸಂಸ್ಕರಿಸಿದ ಭಾಷೆಯಂತೆ, ಎಂದು ಕವಿ ಅವರ ಬಾಂಧವ್ಯವನ್ನು ಭವ್ಯವಾದ ಉಪಮಾಲಂಕಾರಗಳ ಮೂಲಕ ವರ್ಣಿಸಿದ್ದಾನೆ.
ಸರ್ವೋಪಮಾದ್ರವ್ಯಸಮುಚ್ಚಯೇನಯಥಾಪ್ರದೇಶಂವಿನಿವೇಶಿತೇನ। ಸಾನಿರ್ಮಿತಾವಿಶ್ವಸೃಜಾಪ್ರಯತ್ನಾದೇಕಸ್ಥಸೌಂದರ್ಯದಿದೃಕ್ಷಯೇವ ।।
ಸಾಮಾನ್ಯರ ಕಲ್ಪನೆಗೆ ಸಿಲುಕಬಹುದಾದ ಸಮಸ್ತ ಸೌಂದರ್ಯಕ್ಕೂ ಅಳತೆಗೋಲಿನಂತಿದ್ದ ಪಾರ್ವತಿಯು, ಸೃಷ್ಟಿಕರ್ತನು ಬ್ರಹ್ಮಾಂಡದ ಸೌಂದರ್ಯವನ್ನೆಲ್ಲಾ ಒಂದೇ ಕಡೆ ಕಾಣಬೇಕಂಬ ಆಸೆಯಿಂದ ಸೃಷ್ಟಿಸಿದ ಸುಂದರಿಯೋ, ಎನ್ನುವಂತಿದ್ದಳು.
ಹೀಗೆ, ಹಿಮಾಲಯದಲ್ಲಿ ಒಂದು ರೀತಿಯ ಶಾಂತ ವಾತಾವರಣವಿದ್ದರೆ ಬ್ರಹ್ಮಾಂಡದ ಮತ್ತೊಂದು ಕಡೆ ತಾರಕಾಸುರನ ಅಬ್ಬರವನ್ನು ತಾಳಲಾರದೆ, ಅವನನ್ನು ಜಯಿಸಲು ಸಹಾಯ ಯಾಚಿಸುತ್ತ ದೇವತೆಗಳು ಬ್ರಹ್ಮದೇವನಿಗೆ ಮೊರೆಹೋಗುತ್ತಾರೆ. ಆಗ ಇಂದ್ರನು ತನ್ನ ಹಿತೈಷಿಯಾದ ಬೃಹಸ್ಪತಿಯನ್ನು ಬ್ರಹ್ಮನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲು ಕೇಳಿಕೊಳ್ಳುತ್ತಾನೆ.
ತತೊಮಂದಾನಿಲೋಧ್ಧೂತಕಮಲಾಕರಶೋಭಿನಾ ।
ಗುರೂಮ್ನೇತ್ರ ತ್ರಸಹಸ್ರೇಣನೋದಯಾಮಸವಾಸವಃ ।।
‘ಸರೋವರದ ಮೇಲೆ ಬೀಸುವ ತಂಗಾಳಿಯ ಆಹ್ಲಾದಕ್ಕೆ ತಲೆದೂಗುವ ಕಮಲ ಪುಷ್ಪಗಳ ರಾಶಿಯಂತೆ ಕಾಣುತ್ತಿದ್ದ ಇಂದ್ರನ ಕಣ್ಣುಗಳು, ಬೃಹಸ್ಪತಿಯನ್ನು ಬಿನ್ನಹ ಮಾಡುತ್ತಾ ಸಾವಿರ ಕಣ್ಣುಗಳಿಂದ ದಿಟ್ಟಿಸಿ ನೋಡುತ್ತಿವೆಯೋ ಎನ್ನುವಂತಿತ್ತು’ ಎಂದು, ಇಂದ್ರನು ಬೃಹಸ್ಪತಿಯ ಮೇಲೆ ತನ್ನ ನೋಟದ ಮೂಲಕವೇ ಒತ್ತಡವೇರಿಸುತ್ತಿದ್ದುದನ್ನು ಕಾಳಿದಾಸ ಬಹಳ ಸ್ವಾರಸ್ಯಕರವಾಗಿ ವರ್ಣಿಸಿದ್ದಾನೆ.
ಉಚ್ಚೈರುಚ್ಚೈಃಶ್ರವಾಸ್ತೇನಹಯರತ್ನಮಹಾರಿಚ।
ದೇಹಬದ್ಧಮಿವೇಂದ್ರಸ್ಯಚಿರಕಾಲಾರ್ಜಿತಂ ಯಶಃ ॥
ಇಂದ್ರನ ಯಶಸ್ಸೇ ಶ್ವೇತಾಶ್ವವಾಗಿ ಮೈದಾಳಿದೆಯೋ ಎನ್ನುವಂತಿದ್ದ ಉಚ್ಚೈಶ್ರವಸ್ ಅನ್ನು ತರಕಾಸುರನು ಇಂದ್ರನಿಂದ ಕಸಿದುಕೊಂಡಿದ್ದನು.
ಗೊಪ್ತಾರಂಸುರಸೈನ್ಯಾನಾಮ್ಯಂಪುರಸ್ಕೃತ್ಯಗೋತ್ರಭಿತ್। ಪ್ರತ್ಯಾನೆಶ್ಯತಿಶತೃಭ್ಯೋಬಂದೀಮಿವಜಯಶ್ರಿಯಮ್॥
ಒಬ್ಬ ದಿಟ್ಟ ಸೇನಾಧಿಪತಿಯ ನೇತೃತ್ವದಲ್ಲಿ , ಇಂದ್ರ ತನ್ನ ಜಯ ಮತ್ತು ಸಿರಿಸಂಪತ್ತುಗಳನ್ನು ಶತ್ರುವಿನ ಬಂಧನದಿಂದ ಮುಕ್ತವಾಗಿಸಿ ಮರಳಿ ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಬೇಕು ಎಂದು ದೇವತೆಗಳು ಆಲೋಚಿಸಿದರು.
ಧ್ಯಾನದಲ್ಲಿ ಲೀನವಾಗಿದ್ದ ಶಿವನನ್ನು ಎಚ್ಚರಿಸಿ ಪಾರ್ವತಿಯಲ್ಲಿ ಒಲವು ಮೂಡುವಂತೆ ಮಾಡದ ಹೊರತು ಇಂದ್ರನ ರಾಜ್ಯಲಕ್ಷ್ಮಿ ಅವನಿಗೆ ದಕ್ಕದು ಎಂದು ತಿಳಿದ ದೇವತೆಗಳು ಕಾಮದೇವನನ್ನು ಈ ಕೆಲಸಕ್ಕೆ ನಿಯೋಜಿಸುತ್ತಾರೆ. ಕಾಮ ದೇವ, ಎಂದರೆ ಮನ್ಮಥನು ತನ್ನ ಜೊತೆಗಾರ ವಸಂತನ ಸಹಾಯ ಪಡೆದು ದೇವತಗಳಿಗೆ ಉಪಕಾರ ಮಾಡುವ ಸಂಕಲ್ಪ ತೊಟ್ಟು ಶಿವನನ್ನು ಪ್ರಚೋದಿಸಲು ಸಿದ್ಧನಾಗುತ್ತಾನೆ.
ಸಧ್ಯಃಪ್ರವಾಲೋದ್ಗಮಚಾರುಪತ್ತ್ರೆನೀತೆಸಮಾಪ್ತಿಂನವಚೂತಬಾಣೆ।
ನಿವೇಶಯಾಮಾಸ ಮಧುರ್ದ್ವಿರೇಫಾನ್ನಾಮಾಕ್ಷರಾಣೀವ ಮನೋಭವಸ್ಯ ।।
ಮಾವಿನ ಚಿಗುರೆಲೆಗಳಿಂದ ಮಾಡಿದ ಬಿಲ್ಲಿನಲ್ಲಿ ತನ್ನ ಹೆಸರಿನ ಅಕ್ಷರಗಳಂತೆ ಕಾಣುತ್ತಿದ್ದ ದುಂಬಿಗಳ ಸಾಲನ್ನು ಬಾಣವಾಗಿ ಹೂಡಿಕೊಂಡು ಮನ್ಮಥನು ಸಜ್ಜಾಗುತ್ತಾನೆ. (ಪುರಾತನ ಕಾಲದಲ್ಲಿ ಯೋಧರು ತಮ್ಮ ಬಾಣಗಳ ಮೇಲೆ ತಮ್ಮ ಹೆಸರನ್ನು ಕೆತ್ತಿಸುವ ಪದ್ದತಿಯನ್ನು, ಕಾಳಿದಾಸ ಇಲ್ಲಿ ಬಹಳ ರೋಚಕವಗಿ ನಿರೂಪಿಸಿದ್ದಾನೆ .)
ಶಿವನಿಗೆ ಹತ್ತಿರವಾದಷ್ಟೂ ಮನ್ಮಥನಲ್ಲಿ ಆತಂಕ ಹೆಚ್ಚಾಗ ತೊಡಗುತ್ತದೆ. ಕುಗ್ಗಿತ್ತಿದ್ದ ಆತ್ಮವಿಶ್ವಾಸದಿಂದ ತಳಮಳಗೊಂಡ ಮನ್ಮಥನಿಗೆ ಪಾರ್ವತಿಯ ದರ್ಶನವಾಗುತ್ತದೆ.
ಪರ್ಯಾಪ್ತಪುಷ್ಪಸ್ತಬಕಾವನಮ್ರಾ ಸಂಚಾರಿಣೀಪಲ್ಲವಿನೀಲತೇವ ।।
ಸುಂದರವಾಗಿ ಅರಳಿ ಹಬ್ಬಿರುವ ಬಳ್ಳಿಯಂತೆ, ನಿಧಾನವಾಗಿ ಅತ್ತಿತ್ತ ಓಡಾಡುತ್ತಿದ್ದ ಪಾರ್ವತಿಯ ರೂಪವನ್ನು ಕಂಡ ಕಾಮ ದೇವನಲ್ಲಿ ಚೇತನವು ಮರುಕಳಿಸುತ್ತದೆ.
ಕಾಮಸ್ತುಬಾಣಾವಸರಂಪ್ರತೀಕ್ಷ್ಯಪತಂಗವದ್ವಹ್ನಿಮುಖಂವಿವಿಕ್ಷುಃ। ಉಮಾಸಮಕ್ಷಂಹರಬದ್ಧ ಲಕ್ಷ್ಯಃ ಶರಸನಜ್ಯಂಮುಹುರಾಮಮರ್ಶ ।।
ಧೈರ್ಯ ತಂದುಕೊಂಡ ಮನ್ಮಥನು ಶಿವನಲ್ಲಿ ತನ್ನ ಹೂಬಾಣವನ್ನು ಹೂಡಲು ಉಚಿತವಾದ ಸಮಯವನ್ನು ಕಾಯುತ್ತಾ ನಿಲ್ಲುತ್ತಾನೆ. ಪುನಃ ಪುನಃ ತನ್ನ ಬಿಲ್ಲನ್ನು ಪರೀಕ್ಷಿಸುತ್ತಾ ಕಾಯುತ್ತಿರುವ ಕಾಮನನ್ನು ಕವಿ ಕಾಳಿದಾಸ, ತನ್ನ ವಿನಾಶದ ಅರಿವಿಲ್ಲದೆಯೇ ಬೆಂಕಿಯೆಡೆಗೆ ಹಾರಲು ಕಾಯುತ್ತಿರುವ ಹುಳುವಿಗೆ ಹೋಲಿಸುತ್ತಾನೆ. ಸೂಕ್ತವಾದ ಸಮಯಕ್ಕೆ ಮನ್ಮಥನು ಮಹಾದೇವನ ದೇಹಕ್ಕೆ ಹೂವಿನ ಬಾಣವನ್ನು ಹೂಡಿದಾಗ ಶಂಕರನ ಮನಸ್ಸು ಕ್ಷಣಕಾಲ ವಿಚಲಿತವಾಗುತ್ತದೆ.
ಹರಸ್ತುಕಿಂಚಿತ್ಪರಿಲುಪ್ತ ಧೈರ್ಯಃಚಂದ್ರೋದಯಾರಾಂಭ ಇವಾಂಭುರಾಶಿಃ |
ಹುಣ್ಣಿಮೆಯ ರಾತ್ರಿಯಂದು ಅಲೆಯಬ್ಬರಕ್ಕೆ ಸಮುದ್ರವು ತಳಮಳಗೊಳ್ಳುವಂತೆ ಬಾಣದ ಪ್ರಭಾವದಿಂದಾಗಿ ಕ್ಷಣಕಾಲ ಶಿವನ ಮನಸ್ಸು ಸಂಯಮ ಕಳೆದುಕೊಳ್ಳುತ್ತದೆ. ಶಂಕರನು ಬಿರುಸಾಗಿ ತನ್ನ ಮನಸ್ಸನ್ನು ನಿಯಂತ್ರಣಕ್ಕೆ ತಂದುಕೊಂಡು ಕಾಮನನ್ನು ತನ್ನ ಕ್ರೋಧಾಗ್ನಿಯಿಂದ ಸುಟ್ಟು ಭಸ್ಮ ಮಾಡಿಬಿಡುತ್ತಾನೆ.
ತಮಾಶುವಿಜ್ಞಂತಪಸಸ್ತಪಸ್ವೀವನಸ್ಪತಿಂವಜ್ರಇವಾವಭಜ್ಯ।
ಸ್ತ್ರೀಸನ್ನಿಕರ್ಷಾಂ ಪರಿಹರ್ತುಮಿಚ್ಛನ್ನಂತರ್ದದೇ ಭೂತಪತಿಃ ಸಭೂತಃ ||
ಹೇಗೆ ಸಿಡಿಲು ಮರವನ್ನು ಸುಟ್ಟು ಬೂದಿ ಮಾಡಿಬಿಡುತ್ತದೆಯೋ ಹಾಗೆಯೇ ಶಿವನು ತನ್ನ ಧ್ಯಾನಕ್ಕೆ ಧಕ್ಕೆ ತಂದ ಕಾಮನನ್ನು ನಿರ್ನಾಮ ಮಾಡಿಬಿಡುತ್ತಾನೆ. ತದನಂತರ ಶಂಕರನು ಮತ್ತು ಅವನ ಗಣಪರಿವಾರವು, ಚಿತ್ತ ಚಾಂಚಲ್ಯಕ್ಕೆ ಆಸ್ಪದವೇ ಇಲ್ಲದ ಸ್ತ್ರೀರಹಿತವಾದ ಜಾಗಕ್ಕೆ ಹೊರಟುಹೋಗುತ್ತಾರೆ. (ಇಲ್ಲಿ ಕಾಳಿದಾಸ ಬಳಸಿರುವ ಉಪಮಾಲಂಕಾರದ ವೈಶಿಷ್ಟ್ಯವನ್ನು ನೋಡಿ, ಸಿಡಿಲನ್ನು ಶಿವನ ಕ್ರೋಧಾಗ್ನಿಗೆ ಮತ್ತು ಸುಟ್ಟು ಹೋಗುವ ಮರವನ್ನು ಕಾಮ ಅಥವಾ ಮನ್ಮಥನಿಗೆ ಹೋಲಿಸುವುದು ಬಹಳ ಸೂಕ್ತವಾಗಿದೆ.) ಕಾಮನ ಪತ್ನಿ ರತೀ ದೇವಿಯು ಕ್ಷಣಮಾತ್ರದಲ್ಲಿ ಭಸ್ಮವಾಗಿರುವ ತನ್ನ ಪತಿಯನ್ನು ಕಂಡು ವಿಷಾದಿಸತೊಡುಗುತ್ತಾಳೆ.
ಅಥಸಾಪುನರೇವವಿಹ್ನಲಾವಸುಧಾಲಿಂಗನಧುಸರಸ್ತನೀ। ವಿಲಲಾಪವಿಕೀರ್ಣಮೂರ್ಧಜಾಸಮದುಃಖಾಮಿವಕುರ್ವತೀಸ್ಥಲೀಮ್ ।।
ಅವಳು ದುಃಖವನ್ನು ತಡೆಯಲಾರದೆ ಉಮ್ಮಳಿಸುತ್ತ ನೆಲದ ಮೇಲೆ ಉರುಳಾಡುತ್ತಾಳೆ. ಅವಳ ವಸ್ತ್ರವೇಶಗಳು ಮಲಿನವಾಗುತ್ತದೆ, ಕೂದಲು ಕೆದರುತ್ತದೆ. ಆಕೆಯ ವೇದನೆ ದಿಕ್ಕು ದಿಕ್ಕುಗಳಿಗೂ ಪಸರಿಸಿತ್ತಿದ್ದು, ಅಲ್ಲಿ ಶೋಕತಪ್ತವಾದ ವಾತಾವರಣ ಮೂಡುತ್ತದೆ. ಈ ಸಂದರ್ಭವನ್ನು ಕವಿ ಮನ ಕರಗುವಂತೆ ವರ್ಣಿಸಿರುವ ಬಗೆಯನ್ನು ಗಮನಿಸೋಣ,
ಗತಏವನತೇನಿವರ್ತತೇಸಸಖಾದೀಪಇವಾನಿಲಾಹತಃ।
ಅಹಮಸ್ಯ ದಶೇವಪಶ್ಯ ಮಾಮವಿಷಹ್ಯವ್ಯಸನೇನ ಧೂಮಿತಾಂ ।।
‘ಹಣತೆಯಲ್ಲಿ ಪ್ರಜ್ವಲಿಸುವ ಜ್ಯೋತಿಯು ಗಾಳಿಗೆ ಸಿಲುಕಿ ನಂದಿಸಿರುವಂತೆ, ತಿರುಗಿ ಬಾರದಂತೆ (ನನ್ನನ್ನು ಅಗಲಿ ) ಹೊರಟುಹೋಗಿರುವಿರಿ, ನಾನು ಆ ದೀಪದ ಬತ್ತಿಯಂತೆ, ಹತಾಷೆಯಷ್ಟೇ ನನ್ನನ್ನು ಉರಿಸುತ್ತದೆ’.
ವಿಧಿನಾಕೃತಮರ್ಧವೈಶಸಂನನುಮಾಂಕಾಮವಧೇವಿಮುಚ್ಛತಾ। ಅನಪಾಯಿನಿಸಂಶ್ರಯದ್ರುಮೇಗಜಭಜ್ಞೇಪತನಾಯವಲ್ಲರೀ ।।
‘ಆನೆಯಿಂದ ಮರವು ಧ್ವಂಸವಾದಲ್ಲಿ, ಮರವನ್ನೇ ಆಶ್ರಯಿಸಿ, ಅದನ್ನೇ ತಬ್ಬಿ ಹಬ್ಬಿದ್ದ ಬಳ್ಳಿಯು ಸಹ (ನಿರಾಶ್ರಿತವಾಗಿ) ನಿಧಾನವಾಗಿ ನಾಶ ಹೊಂದುವಂತೆ ಕಾಮದೇವನನ್ನು ನನ್ನಿಂದ ದೂರ ಮಾಡಿರುವ ವಿಧಿಯು ನನ್ನ ಅರೆಮರಣವನ್ನು ತಂದೊಡ್ಡಿದ್ದಾನೆ’.
ಹೀಗೆ ವಿಷಾದಿಸುತ್ತಿದ್ದ ರತಿಯ ದುಃಖ ಹೇಳತೀರದು. ತಾನು ತನ್ನ ಪತಿಯಿಲ್ಲದೆ ಜೀವಿಸಲು ಸಾಧ್ಯವಿಲ್ಲವೆಂದು ತೀರ್ಮಾನಿಸಿ ತನ್ನ ದೇಹತ್ಯಾಗ ಮಾಡಲು ನಿರ್ಧರಿಸುತ್ತಾಳೆ. ಆಗ ಆಕಾಶವಾಣಿಯಾಗುತ್ತದೆ, ‘ಅವಳು ಸಂಯಮದಿಂದಿರಬೇಕು, ಕಾಮನು ದೈವಕೃಪೆಗೆ ಪಾತ್ರನಾಗಿ ಪುನಃ ಜೀವಿಸುತ್ತಾನೆ’ ಎಂದು ಅವಳಿಗೆ ಆಶ್ವಾಸನೆ ನೀಡುತ್ತದೆ.
ಶಫರೀಂ ಹೃದಶೋಷವಿಕ್ಲವಾಂ ಪ್ರಥಮಾ ವೃಷ್ಟಿರಿವಾನ್ವಕಂಪಯತ್ ।
ಕನಿಷ್ಠ ನೀರಿರುವ ಕೊಳದಲ್ಲಿನ ಮೀನುಗಳು ಮೊದಲ ಮಳೆಯ ಹನಿಮುತ್ತುಗಳು ಸುರಿದಾಗ ಸಂತೋಷದಿಂದ ಕಂಪಿಸುವಂತೆ ರತೀ ದೇವಿಯೂ ಸಂತೋಷದಿಂದ ಕಂಪಿಸ ತೊಡಗುತ್ತಾಳೆ.
ಹೀಗೆ , ರತಿ-ಮನ್ಮಥರ ಪ್ರಸಂಗವು ಶುಭಾಂತವಾಗುತ್ತದೆ.
ಇತ್ತ, ಶಿವ ಹಿಮಾಲಯವನ್ನು ತ್ಯಜಿಸಿ ಹೊರಟುಹೋದಾಗ, ಹತಾಶಳಾದ ಪಾರ್ವತಿಗೆ ಶಿವನನ್ನು ಕುರಿತು ತಪಸ್ಸನ್ನಾಚರಿಸುವುದೊಂದೇ ಯೋಗ್ಯವಾದ ಮಾರ್ಗ ಎಂದು ಮನದಟ್ಟಾಗುತ್ತದೆ. ಆದರೆ ಪಾರ್ವತಿಯ ತಾಯಿಗೆ ತನ್ನ ಮಗಳು ಕಠಿಣವಾದ ತಪಸ್ಸನ್ನಾಚರಿಸುವುದು ಅನವರತಾ ಇಷ್ಟವಿರುವುದಿಲ್ಲ. ಈ ಸನ್ನಿವೇಷದ ಕೆಲವು ಭಾಗಗಳಲ್ಲಿ ಕಾಳಿದಾಸನು ಬಹಳ ಸುಂದರವಾದ ದೃಷ್ಟಾಂತವನ್ನು (ಸಾಮ್ಯವನ್ನು ತೋರಿಸುವಂತಹ ಅಲಂಕಾರ) ಬಳಸಿದ್ದಾನೆ . ಉದಾಹರಣೆಗೆ ಪಾರ್ವತಿಯ ತಾಯಿ ಮಗಳಿಗೆ ತಿಳಿ ಹೇಳುವ ಈ ಶ್ಲೋಕವನ್ನು ನೋಡೋಣ :
ಮನೀಷಿತಾಃಸಂತಿಗೃಹೇಷುದೇವತಾಸ್ತಪಃಕ್ವವತ್ಸೇ!ಕ್ವಚತಾವಕಂವಪುಃ। ಪದಂಸಹೇತಭ್ರಮರಸ್ಯಪೇಲವಂಶಿರೀಷಪುಷ್ಪಂನಪುನಃಪತತ್ರೀಣಃ ।।
‘ದೇವಾದಿದೇವತೆಗಳೆಲ್ಲರೂ ಇಲ್ಲಿಯೇ (ಹಿಮಾಲಯದಲ್ಲಿಯೇ) ವಾಸವಾಗಿದ್ದಾರೆ, ಹಾಗಿದ್ದಲ್ಲಿ ನನ್ನ ಮುದ್ದಿನ ಮಗಳು, ಸುಕೋಮಲೆ, ನೀನೆಕೆ ಕಠಿಣವಾದ ತಪಸ್ಸನ್ನಾಚರಿಸಬೇಕು? ಹೂವು ದುಂಬಿಯ ಬಾರವನ್ನು ತಡೆಯಬಲ್ಲದೇ ಹೊರೆತು ಪಕ್ಷಿಯ ಬಾರವನ್ನಲ್ಲ’, ಎಂದು ಹೇಳುತ್ತಾ ತಾಯಿ ಮಗಳ ಮನಪರಿವರ್ತಿಸಲು ಪ್ರಯತ್ನಿಸುತ್ತಾಳೆ.
ಯಾರ ಮಾತಿಗೂ ಬಾಗದ ಪಾರ್ವತಿಯು ಕಠೋರವಾದ ತಪಸ್ಸನ್ನು ಆಚರಿಸುತ್ತಾಳೆ. ಕೊನೆಗೆ ಶಿವನು ಪಾರ್ವತಿಯ ತಪಸ್ಸನ್ನು ಮೆಚ್ಚಿ ಒಬ್ಬ ಬ್ರಾಹ್ಮಣ ವಟುವಿನ ವೇಷ ಧರಿಸಿ ಅವಳೆದುರು ಬಂದು ನಿಲ್ಲುತ್ತಾನೆ. ಪಾರ್ವತಿಯ ಇಂಗಿತವನ್ನು ಅರಿತಿದ್ದ ಶಿವನು ಅವಳನ್ನು ವಿಧ ವಿಧವಾಗಿ ಪರೀಕ್ಷಿಸುತ್ತಾನೆ. ಆದರೆ ಪಾರ್ವತಿಗೆ ಶಿವನಲ್ಲಿದ್ದ ನಿರ್ಮಲವಾದ ಪ್ರೀತಿಯು ಗೋಚರವಾಗದೆ ಇರುವುದೇ. ಪಾರ್ವತಿಯ ಪ್ರೀತಿಗೆ ಸೋತು ಶಂಕರನು ತನ್ನ ನಿಜರೂಪವನ್ನು ತಾಳಿ ಅವಳ ಕೈ ಹಿಡಿದು ನಿಲ್ಲುತ್ತಾನೆ.
ತಂವೀಕ್ಷ್ಯವೆಪತುಮತೀಸರಸಾಂಗ್ಯಷ್ಟಿರ್ನಿಕ್ಷೇಪಣಾಯಪದಮುದ್ಧೃತಮುದ್ಧಹಂತೀ। ಮಾರ್ಗಾಚಲವ್ಯತಿಕರಾಕುಲಿತೇ ವ ಸಿಂಧುಃಶೈಲಾಧಿರಾಜತನಯಾನಯಯೌನತಸ್ಥೌ ।।
ಸಾಕ್ಷಾತ್ ಶಂಕರನನ್ನು ಅನಪೇಕ್ಷಿತವಾಗಿ ಕಂಡ ಪಾರ್ವತಿಗೆ ನಿಂತಲ್ಲೇ ನಿಲ್ಲಲೂ ಆಗದು ಅವನಿಂದ ದೂರವಾಗಲೂ ಆಗದು. ಆಕೆ ತಬ್ಬಿಬ್ಬಾಗುತ್ತಾಳೆ. ಹರಿಯುವ ನದಿಯು ಪರ್ವತವನ್ನು ಎದುರಾದಾಗ ಅದನ್ನು ಸುತ್ತುತ್ತಾ, ಬಳಸುತ್ತ ಮುಂದೆ ಸಾಗುವ ಬಗೆಯನ್ನು ಉಡುಕುವ ಕಸಿವಿಸಿ ಪಾರ್ವತಿಯ ಮನಸ್ಥಿತಿ ಎಂದು ಕವಿ ಅವಳ ಭಾವನೆಗಳನ್ನು ನವಿರಾಗಿ ವರ್ಣಿಸಿದ್ದಾನೆ.
ಈ ಮುಖಾ ಮುಖಿಯ ನಂತರ, ಶಂಕರನು ತನ್ನ ಮಾತಾಪಿತುಗಳನ್ನು ಬೇಟಿ ಮಾಡಿ ಅವರಲ್ಲಿ ಗಿರಿಜೆಯನ್ನು ತನಗೆ ಧಾರೆಯೆರೆದು ಕೊಡಲು ಕೇಳಬೇಕಾಗಿ ಸೂಚಿಸುತ್ತಾ ಪಾರ್ವತಿಯು ಶಿವನಿಗೆ ತನ್ನ ಸ್ನೇಹಿತೆಯ ಮುಖಾಂತರ ಸಂದೇಶವನ್ನು ಕಳಿಸುತ್ತಾಳೆ.
ತಯಾವ್ಯಾಹೃತಸಂದೇಶಾಸಾಬಭೌನಿಭೃತಾಪ್ರಿಯೇ।
ಚೂತಯಷ್ಟಿ ರಿವಾಭ್ಯಾ ಶೇಮಧೌಪರಭೃತೋನ್ಮುಖೀ ।।
ಪಾರ್ವತಿಯು ಸ್ವಯಂ ಮೌನ ಧರಿಸಿ ಶಿವನಿಗೆ ತನ್ನ ಸಖಿಯ ಮುಖಾಂತರ ಸಂದೇಶ ಕಳುಹಿಸುವುದನ್ನು ಕವಿ ಮಾವಿನ ಮರವು ಕೋಗಿಲೆಗಳ ಹಿಂಚರದ ಮೂಲಕ ವಸಂತನಿಗೆ ಪ್ರೇಮದ ಸಂದೇಶವನ್ನು ಕಳುಹಿಸುವ ರಮ್ಯವಾದ ಪ್ರಸಂಗಕ್ಕೆ ಹೋಲಿಸಿದ್ದಾನೆ.
ಈ ಪ್ರಸ್ತಾಪವನ್ನು ಹಿಮವಂತನ ಮುಂದಿಡಲು ಶಂಕರನು ಸಪ್ತ ಋಷಿಗಳನ್ನು ಕೇಳಿಕೊಳ್ಳುತ್ತಾನೆ. ಶಿವನ ಬಂಧು ಬಾಂಧವರ ಜವಾಬ್ದಾರಿ ಹೊತ್ತ ಸಪ್ತಋಷಿಗಳ ಜೊತೆ ಅರುಂಧತಿ ದೇವಿಯೂ ಹೊರಡಲು ಸಜ್ಜಾಗುತ್ತಾಳೆ.
ತೇಷಾಂಮಧ್ಯಗತಾಸಾಧ್ವೀಪತ್ಯುಃಪಾದಾರ್ಪಿತೇಕ್ಷಣಾ। ಸಾಕ್ಷಾದಿವತಪಸ್ಸಿದ್ದಿರ್ಬಭಾಸೆಬಹ್ವರುಂಧತೀ ।।
ವಸಿಷ್ಠರ ಧರ್ಮಪತ್ನಿ, ಅರುಂಧತಿ ದೇವಿಯು ಅವರೆಲ್ಲರ ನಡುವೆ ತಪಸ್ಸಿದ್ಧಿಯ ಫಲದಂತೆ ಶೋಭಿಸುತ್ತಿರುತ್ತಾಳೆ. ಹಿಮವಂತನು ಅವರೆಲ್ಲರನ್ನು ಬಹಳ ಧೈನ್ಯದಿಂದ ಬರಮಾಡಿಕೊಳ್ಳುತ್ತಾನೆ.
ಮೂಡಂಬುದ್ಧಮಿವಾತ್ಮಾನಂಹೈಮೀಭೂತಮಿವಾಯಸಂ।
ಭೂಮೇರ್ದಿವಮಿವಾರೂಢಂಮನ್ಯೆ ಭಾವದನುಗ್ರಹಾತ್ ।।
ಅವರೆಲ್ಲರ ಆಗಮನದಿಂದಾಗಿ ‘ಬುದ್ಧಿಹೀನನು ಪಂಡಿತನಾದಂತೆ, ಕಬ್ಬಿಣವು ಬಂಗಾರವಾದಂತೆ, ಸಾಮಾನ್ಯನನ್ನು ಸ್ವರ್ಗಕ್ಕೇರಿಸಿದಂತೆ, ತನ್ನ ಸಾಧಾರಣ ಸ್ಥಾನಮಾನಗಳು ಉತ್ತುಂಗಕ್ಕೇರುರಿವುದಾಗಿ’, ವಿನಯ ಪೂರ್ವಕವಾದ ಮಾತುಗಳನ್ನಾಡುತ್ತಾ ಹಿಮವಂತನು ಅವರನ್ನು ಹೃದ್ಪೂರ್ವಕವಾಗಿ ಸ್ವಾಗತಿಸುತ್ತಾನೆ. ಆಗ ಸಪ್ತಋಷಿಗಳು ಹಿಮವಂತನಲ್ಲಿ ಔದಾರ್ಯವನ್ನು ತೋರಿಸುತ್ತ ,
ಮನಸಃ ಶಿಖರಾಣಾಂಚಸದೃಶೀತೆ ಸಮುನ್ನತಿಃ |
‘ಹೇ ಹಿಮವಂತನೇ, ನಿನ್ನ ಚಿಂತನೆಗಳು ನಿನ್ನ ಶಿಖರಗಳಷ್ಟೇ ಎತ್ತರವಾಗಿವೆ’ ಎಂದು ಹೊಗಳುತ್ತಾ ತಾವು ಬಂದ ವಿಷಯವನ್ನು ಪ್ರಸ್ತಾಪಿಸುತ್ತಾರೆ.
ತಮರ್ಥಮಿವ ಭಾರತ್ಯಾಸುತಯಾಯೋಕ್ತುಮರ್ಹಸಿ ।
ಪದ ಮತ್ತು ಅರ್ಥಗಳು ಹೇಗೆ ಒಂದರೊಳಗೊಂದು ಅಂತರ್ಗತವಾಗಿವೆಯೋ ಅಂತೆಯೇ ಶಿವಾ-ಪಾರ್ವತಿಯು ಒಂದಾಗಲು ಸಮ್ಮತಿಸಬೇಕಾಗಿ ಹಿಮವಂತನಲ್ಲಿ ಕೇಳಿಕೊಳ್ಳುತ್ತಾರೆ.
ಗಿರಿಜಾ ಕಲ್ಯಾಣ ವೈಭವೋಪೇತವಾಗಿ ನಡೆಯುತ್ತದೆ. ಪಾರ್ವತಿ ಗರ್ಭವತಿಯಾದಳೆಂದು ತಿಳಿಸುತ್ತಾ ಕಾಳಿದಾಸ ಈ ಮಹಾಕಾವ್ಯದ ಮಂಗಳವಾಡುತ್ತಾನೆ.
ಟಿಪ್ಪಣಿ : ಶಿವ ತತ್ವವನ್ನು ಉತ್ಕೃಷ್ಟವಾಗಿ ಅರ್ಥೈಸುವ ಕುಮಾರಸಂಭವ ಕೃತಿಯ ಕೆಲವು ಆಯ್ದ ಮಾದರಿ ಶ್ಲೋಕಗಳನ್ನು ಮಾತ್ರ ಇಲ್ಲಿ ಆಹ್ಲಾದಿಸಿದ್ದೇವೆ. ಈ ಕೃತಿಯ ಮೂಲಕ ಕಾಳಿದಾಸ ಶಂಕರನನ್ನು ನಮ್ಮಂತಹ ಸಾಮಾನ್ಯರಿಗೆ ಸಾಕ್ಷಾತ್ಕಾರ ಮಾಡಿಸಿದ್ದಾನೆ.
ಕಾಳಿದಾಸನ ಇತರೇ ಕಾವ್ಯ ಮತ್ತು ನಾಟಕಗಳಲ್ಲಿ ಮನಮೋಹಕವಾದ ಉಪಮಾಲಂಕಾರಗಳು ಹೇರಳವಾಗಿ ಕಾಣಸಿಗುತ್ತವೆ. ಆಸಕ್ತರು ಆತನ ಮೂಲ ಕೃತಿಗಳನ್ನೊ ಅಥವಾ ಅದಕ್ಕೆ ಹತ್ತಿರದ ಭಾಷಾಂತರವನ್ನೊ ಓದಿ ಆಸ್ವಾದಿಸಬಹುದು.
ಮುಂದುವರೆಯುತ್ತದೆ …….
#ಕಾಳಿದಾಸ # ಶಿವತತ್ವ #ಗಿರಿಜಾಕಲ್ಯಾಣ #ಉಪಮಾಲಂಕಾರ
(This is a translation of an article written in English by Vasuki HA.)
Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.