ಭಾರತ ದೇಶದ ಪುರಾಣ, ಜ್ಞಾನ, ಭೂಗೋಳ, ಸಸ್ಯ ಮತ್ತು ಜೀವ ಜಂತುಗಳ ವಿವರಣೆಯನ್ನು ರಸವತ್ತಾಗಿ ಮತ್ತು ನಿಖರವಾಗಿ ಕಣ್ಣಿಗೆ ಕಟ್ಟಿದಂತೆ ಬರೆದಿರುವವರಲ್ಲಿ ಕಾಳಿದಾಸನನ್ನು ಮೀರಿಸುವವರಿಲ್ಲ. ಸಂಸ್ಕೃತ ಸಾಹಿತ್ಯದಲ್ಲಷ್ಟೇ ಅಲ್ಲ ಇನ್ನಾವುದೇ ಭಾರತೀಯ ಭಾಷೆಗಳಲ್ಲೂ ಈ ನಿಟ್ಟಿನಲ್ಲಿ ಇವನಿಗೆ ಹೋಲಿಸಬಹುದಾದ ಕವಿಯಿಲ್ಲ. ಆದ್ದರಿಂದ ಕಾಳಿದಾಸನನ್ನು ನಮ್ಮ ರಾಷ್ಟ್ರೀಯ ಕವಿ ಎಂದು ಗುರುತಿಸುವುದು ಬಹಳ ಮುಖ್ಯವಾಗುತ್ತದೆ. ಇವನಿಗೆ ಇಲ್ಲಿನ ಜಾಗಗಳು ಕೇವಲ ಒಂದು ಭೂಪ್ರದೇಶವಾಗಿರಲಿಲ್ಲ, ಇಲ್ಲಿನ ನದಿಗಳು ಜಲರಾಶಿಯಷ್ಟೇ ಅಲ್ಲ, ಈ ದೇಶದ ನಗರಗಳು ಜನಸಮೂಹ ಮಾತ್ರವಲ್ಲ ಮತ್ತು ಮುಖ್ಯವಾಗಿ ಇವನಿಗೆ ಭಾರತೀಯ ಮೌಲ್ಯಗಳು ಕೇವಲ ಆಲೋಚನೆಗಳಷ್ಟೇ ಆಗಿರಲಿಲ್ಲ. ಈತನ ಕೃತಿಗಳು ಇವನ ಈ ಮನೋಭಾವವನ್ನು ಸ್ಪಷ್ಟವಾಗಿ ಪ್ರತಿಧ್ವನಿಸುತ್ತವೆ. ಅವಗಳಲ್ಲಿ ಕೆಲವನ್ನು ಆಸ್ವಾದಿಸೋಣ ಬನ್ನಿ.
ಮೊದಲಿಗೆ ಮೇಘದೂತವನ್ನು ಗಮನಿಸೋಣ. ಇಲ್ಲಿ ಕಾಳಿದಾಸನು ಮೋಡದ ಹಾದಿಯಲ್ಲಿ ಇರುವುದೆಲ್ಲವನ್ನು ದೈವಿಕ ಅಥವಾ ಭವ್ಯವಾದ ಗುಣಗಳಿಂದ ವರ್ಣಿಸಿದ್ದಾನೆ. ಈ ಕೃತಿಯಲ್ಲಿ ಯಕ್ಷನ ದೂತನ ಪಾತ್ರವಹಿಸಿದ ಮೋಡವು ಪುಷ್ಕರ ಮತ್ತು ಆವರ್ತಕ ಎಂಬ ಪೌರಾಣಿಕ ವಂಶಗಳಿಗೆ ಸೇರಿರುವಂತದ್ದು. ಇನ್ನು ಯಕ್ಷನು ವಾಸಿಸುತ್ತಿದ್ದ ರಾಮಗಿರಿಯೇನು ಸಾಧಾರಣ ಪರ್ವತವಲ್ಲ, ಏಕೆಂದರೆ ಅದರ ಇಳಿಜಾರುಗಳಲ್ಲಿ ಸ್ವಯಂ ಶ್ರೀ ರಾಮನ ಪಾದ ಚಿಹ್ನೆಗಳಿವೆ. ಇದು ಸೀತಾದೇವಿಯೇ ಮಿಂದಿದ್ದ ಜಲಸಮೂಹವಿರುವ ರಮ್ಯತಾಣ. ರಾಮಗಿರಿಯಿದ್ದ ಉಜ್ಜೈನಿ ನಗರವು ಸ್ವರ್ಗದ ಒಂದು ಭಾಗವೇ ಭೂಮಿಗೆ ಇಳಿದಿದೆಯೋ ಎನ್ನುವಂತಿದ್ದರೆ ಅದರ ನಿವಾಸಿಗಳು ಸಾಮಾನ್ಯರಲ್ಲ. ಅವರು ತಮ್ಮ ರಾಜ ಉದಯನವತ್ಸ-ನ ದಕ್ಷ ಆಳ್ವಿಕೆಯ ಬಗ್ಗೆ ಹೆಮ್ಮೆಪಡುತಿದ್ದ ಸತ್ಪ್ರಜೆಗಳು. ಗಂಗೆ ಕೇವಲ ಜಲಧಾರೆಯಲ್ಲ , ಸಗರ ರಾಜನ ಪುತ್ರರನ್ನು ಸ್ವರ್ಗಕ್ಕೆ ಕರೆದೊಯ್ದ ಪರಮ ಪಾವನೆ.
ಈಗ ಕಾಳಿದಾಸನ ಉತ್ಕೃಷ್ಟ ಕೃತಿಗಳಲ್ಲೊಂದು, ರಘುವಂಶಕ್ಕೆ ಬರೋಣ. ಕಾಳಿದಾಸನು ಈ ಕೃತಿಯನ್ನು ಶಿವ ಪಾರ್ವತಿಯರ ಅರ್ಧನಾರೀಶ್ವರ ರೂಪದಿಂದ ಪ್ರಾರಂಭಿಸುತ್ತಾನೆ. ಇದೊಂದು ಮನಮೋಹಕವಾದ ಕಲ್ಪನೆ. ಹೇಗೆ ಶಬ್ದ ಮತ್ತು ಅರ್ಥವು ಒಂದರೊಳಗೊಂದು ಅಂತರ್ಗತವಾಗಿರುತ್ತವೆಯೋ ಹಾಗೆಯೇ ಶಿವ ಮತ್ತು ಪಾರ್ವತಿಯರನ್ನೂ ಸಹ ಬೇರ್ಪಡಿಸಲಾಗದು ಎಂದು ಸ್ವಾರಸ್ಯಮಯವಾಗಿ ಹೇಳಿದ್ದಾನೆ. ಇಲ್ಲಿ ರಾಜ ದಿಲೀಪನನ್ನು ರಾಜ್ಯಾಶ್ರಮ-ಮುನಿಯಾಗಿ ಚಿತ್ರಿಸಲಾಗಿದೆ, ಅಂತೆಯೇ ಆತನಿಗೆ ತನ್ನ ರಾಜ್ಯವೇ ಆಶ್ರಮವಾಗುತ್ತದೆ. ವಿವಾಹದ ಬೆಸುಗೆಯನ್ನು ಸರ್ವೋಪಕಾರ-ಕ್ಷಮಾಶ್ರಮ ವೆಂದು ವರ್ಣಿಸಲಾಗಿದೆ, ಎಂದರೆ ತನ್ನ ಸುತ್ತಮುತ್ತ ಇರುವುದೆಲ್ಲದಕ್ಕೂ ಆಧಾರವನ್ನು ಕಲ್ಪಿಸಿಕೊಡುವಂತಹ ಜೀವನದ ಒಂದು ಹಂತ ಎಂದು. ಹೀಗೆ ಮುಂದುವರೆಯುತ್ತ, ರಾಜ ರಘು ಗೆದ್ದುಕೊಂಡ ರಾಜ್ಯಗಳ ಬಗ್ಗೆ ವಿವರಿಸುವಾಗ ಕಾಳಿದಾಸನು ಭಾರತದಾದ್ಯಂತ ವಿವಿಧ ಸಾಮ್ರಾಜ್ಯಗಳ ವಿವರವಾದ ವರ್ಣಮಯ ಚಿತ್ರವನ್ನು ಚಿತ್ರಿಸಿದ್ದಾನೆ. ರಘುವಿನ ಮಗ ಅಜನನ್ನು ವರಿಸಿದ ಇಂದುಮತಿಯ ಸ್ವಯಂವರ ಪ್ರಸಂಗದಲ್ಲಿ ಪುನಃ ಭಾರತದ ವಿವಿಧ ಪ್ರಾಂತ್ಯಗಳ ವೈಶಿಷ್ಟ್ಯತೆಯನ್ನು ಭವ್ಯವಾಗಿ ವರ್ಣಿಸಿದ್ದಾನೆ .
ಸಾಲು ಸಾಲಾಗಿ ತಾಳೆ ಮರಗಳಿಂದ ಸುಶೋಭಿತವಾದ ಕಡಲತೀರಗಳು, ಕಳಿಂಗ ರಾಜ್ಯದ (ಒಡಿಶಾ) ಆನೆಗಳು, ಬೃಂದಾವನ ಮತ್ತು ಉಜ್ಜೈನಿ ನಗರಗಳ ಉದ್ಯಾನಗಳು, ಪಶ್ಚಿಮ ಘಟ್ಟದಿಂದ ತಣ್ಣಗೆ ಹಾರಿ ಬರುವ ತಂಗಾಳಿ, ಮಾಹಿಷ್ಮತಿಯಲ್ಲಿನ ನರ್ಮದಾ ನದಿಯ ಮನಮೋಹಕ ಅಲೆಗಳು, ಮಥುರಾದಲ್ಲಿನ ಯಮುನೆಯ ಕೃಷ್ಣವರ್ಣದ ನೀರು – ಇವೆಲ್ಲವೂ ಈತನ ಕಾವ್ಯದಲ್ಲಿ ಕಣ್ಣಿಗೆ ಕಟ್ಟಿದಂತೆ ವಿಜೃಂಭಿಸುತ್ತವೆ.
ಇದಲ್ಲದೆ, ರಾಮಾಯಣವನ್ನು ನಿರೂಪಿಸುವಾಗ, ವಾಲ್ಮೀಕಿ ಮಹರ್ಷಿಯನ್ನು ಕಾಳಿದಾಸ ‘ಕವಿ’ ಎಂದು ಪರಿಚಯಿಸುತ್ತಾನೆ . ಅಂತೆಯೇ ನಮ್ಮ ಸಂಪ್ರದಾಯದಲ್ಲಿ ವಾಲ್ಮೀಕಿ ಋಷಿಗಳನ್ನು ‘ಆದಿಕವಿ’ ಎಂದು ಗೌರವಿಸಲಾಗುತ್ತದೆ. ಅತಿಥಿ ರಾಜನ ಸಾಮರ್ಥ್ಯವನ್ನು ವಿವರಿಸುವಾಗ, ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಹುದುಗಿರುವ ಅನೇಕ ಪರಿಕಲ್ಪನೆಗಳನ್ನು ಸಹ ಕಾಳಿದಾಸ ವಿವರಿಸಿದ್ದಾನೆ.
ಈಗ ಕುಮಾರಸಂಭವನ್ನು ನೋಡೋಣ. ಈ ಕೃತಿಯ ಪ್ರಾರಂಭದಲ್ಲಿ ಕಾಳಿದಾಸ ಹಿಮಾಲಯ ಪರ್ವತವನ್ನು ದೇವರ ಆತ್ಮ ಎಂದು ಕರೆದಿದ್ದಾನೆ. ‘ದೇವತಾತ್ಮ’ ಎಂದು ಅದಕ್ಕೆ ಅದರಷ್ಟೇ ಎತ್ತರವಾದ ಹೆಸರಿನಿಂದ ನಾಮಕರಣ ಮಾಡಿದ್ದಾನೆ. ‘ಅಭಿಜ್ಞಾನಶಾಕುಂತಲಾ’ ದಲ್ಲಿ ಈತ ಇದೇ ಹಿಮಾಲಯವನ್ನು ‘ಗೌರಿಗುರು’ ಎಂದು ಕರೆಯುತ್ತಾನೆ – ಗೌರಿ (ಪಾರ್ವತಿ) ಯ ತಂದೆ ಎಂದು. ಯಾವ ಮರದಡಿಯಲ್ಲಿ ಕುಳಿತು ಶಿವನು ತಪಸ್ಸನ್ನು ಆಚರಿಸುತ್ತಾನೆಯೋ ಆ ಮರವನ್ನು ಗಂಗೆ ತನ್ನ ಎತ್ತರವಾದ ಅಲೆಗಳಿಂದ ಸ್ವಚ್ಛಗೊಳಿಸಿದರೆ, ಪಾರ್ವತಿ ತಾನು ಶಿವನಿಗೆ ಅರ್ಪಿಸುವ ಜಪಮಾಲೆಯನ್ನು ಮಂದಾಕಿನಿ ಎಂಬ ದೈವಿಕ ನದಿಯಲ್ಲಿ ಅರಳುವ ಕಮಲದ ಬೀಜಗಳಿಂದ ತಯಾರಿಸುತ್ತಾಳೆ. ಶಿವ ಮತ್ತು ಪಾರ್ವತಿ ಕಲ್ಯಾಣದಲ್ಲಿ ಬ್ರಹ್ಮನೇ ಪೌರೋಹಿತ್ಯವನ್ನು ವಹಿಸಿಕೊಳ್ಳುತ್ತಾನೆ. ಈ ಮೂಲಕ ನಮ್ಮ ಸಂಪ್ರದಾಯದ ಸಮಸ್ತ ಪರಿಣಯ ಪದ್ಧತಿಗಳನ್ನು ಇಲ್ಲಿ ವಿವರವಾಗಿ ವರ್ಣಿಸಲಾಗಿದೆ. ಮದುವೆಯ ಕೊನೆಯಲ್ಲಿ, ಸರಸ್ವತಿ ದೇವಿಯು ಸೂಕ್ತವಾದ ವೈದಿಕ ಸ್ತೋತ್ರಗಳಿಂದ ಶಿವನನ್ನು ಆಶೀರ್ವದಿಸುತ್ತಾಳೆ. ತನಗೆ ಹತ್ತಿರದ ಗೆಳತಿಯಂತಿದ್ದ ಪಾರ್ವತಿಯನ್ನು ಜಾನಪದ ಹಾಡುಗಳನ್ನು ಹಾಡುತ್ತಾ ಆಶೀರ್ವದಿಸುತ್ತಾಳೆ. ಈ ರೀತಿ ಕಾಳಿದಾಸ, ನಮ್ಮ ಸಂಸ್ಕೃತಿಯಲ್ಲಿ ವೈದಿಕ ಮತ್ತು ಜಾನಪದ ಸಂಪ್ರದಾಯಗಳ ನಡುವೆ ಇರುವ ಬೆಸುಗೆ ಮತ್ತು ಪರಸ್ಪರ ಗೌರವವನ್ನು ಪ್ರತಿಬಿಂಬಿಸುತ್ತಾನೆ. ಈ ಸೂಕ್ಷ್ಮಗಳು ಕಾವ್ಯ-ವೈಶಿಷ್ಟ್ಯ ತೆಗಳಷ್ಟೇ ಅಲ್ಲ ಶಿಕ್ಷಣವೂ ಹೌದು.
ಹೀಗೆ ಭಾರತದ ಉತ್ಕೃಷ್ಟತೆಯನ್ನು ಕಾವ್ಯಮಯವಾಗಿ ಪ್ರತಿಬಿಂಬಿಸುವ ಅದೆಷ್ಟೋ ಉದಾಹರಣೆಗಳು ಇವನ ನಾಟಕಗಳಲ್ಲಿಯೂ ದೊರಕುತ್ತವೆ. ಆದರೆ ಸಧ್ಯಕ್ಕೆ ಇಲ್ಲಿಗೆ ನಿಲ್ಲಿಸೋಣ. ಈ ಮೇಲ್ಕಂಡ ಎಲ್ಲ ಉದಾಹರಣೆಗಳು ಕಾಳಿದಾಸನು ನಮ್ಮ ಸಂಸ್ಕೃತಿಯ ಶ್ರೇಷ್ಠ ಮೌಲ್ಯಗಳನ್ನು ಹೇಗೆ ಭವ್ಯವಾಗಿ ಮತ್ತು ಘನವಾಗಿ ಪ್ರಸ್ತುತ ಪಡಿಸಿದ್ದಾನೆ ಎಂಬುದನ್ನು ತೋರಿಸುತ್ತವೆ.
ಮುಂದುವರೆಯುತ್ತದೆ …..
(This is a translation of an article written in English by Vasuki HA.)
Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.