ಮಾನವರಿಗೆ ಇಹಯಾತ್ರೆಯಲ್ಲಿ ಅನೇಕ ವಿಚಾರಾರ್ಹ ಪ್ರಶ್ನೆಗಳು ಎದುರಾಗುತ್ತವೆ – ಕೆಲವು ಆತ್ಮವಿಮರ್ಶೆಗೆ ಎಡೆಮಾಡಿಕೊಡುವಂಥವು, ಇನ್ನು ಕೆಲವು ಹಿನ್ನೋಟದಲ್ಲಿ ಜೀವನವನ್ನು ವಿಶ್ಲೇಷಿಸುವಂತೆ ಮಾಡುವಂಥವು. ಯಾವುದೇ ರೀತಿಯಲ್ಲಾದರೂ ಸರಿ, ಸದಾ ನೆನಪಿಡುವಂತೆ ಬೋಧಪ್ರದವಾಗಿರುತ್ತವೆ. ಅನೇಕ ಸಂದರ್ಭಗಳಲ್ಲಿ ಅಹಂಭಾವ , ಅಂಧ ಆತ್ಮವಿಶ್ವಾಸ ಮುಂತಾದವುಗಳ ಫಲವಾಗಿ ಮಾನವರಿಗೆ ಈ ಶಿಕ್ಷಣವು ಸಮರ್ಪಕವಾಗಿ ಅರಿವಿಗೆ ಬರದೇ ಉಳಿಯಬಹುದು.
ಈ ಶಿಕ್ಷಣದ ಉದ್ದೇಶವಾದರೂ ಏನು? ನಮಗೆ ಅರಿವಿನ, ವಿದ್ಯೆಯ ಅವಶ್ಯಕತೆ ಏಕಿದೆ? ಜೀವನಪಥದಲ್ಲಿ ವಿದ್ಯೆಯ ಮಹತ್ವವನ್ನು ತಿಳಿಸುವ ಅನೇಕ ಕಥಾನಕಗಳು ಪುರಾಣ-ಶಾಸ್ತ್ರಗಳಲ್ಲಿ ಕಾಣಸಿಗುತ್ತವೆ.
ಈಶ/ಈಶಾವಾಸ್ಯ ಉಪನಿಶತ್ತಿನ ೧೦ನೇ ಶ್ಲೋಕವು ವಿದ್ಯೆ ಹಾಗು ಅವಿದ್ಯೆಯ ಮಹತ್ವವನ್ನು ನಿಖರವಾಗಿ ಸಾರುತ್ತದೆ
ಅನ್ಯದೇವಾಹುರ್ವಿದ್ಯಯಾsನ್ಯದಾಹುರವಿದ್ಯಯಾ ।
ಇತಿ ಶುಶ್ರುಮ ಧೀರಾಣಾಂ ಯೇನಸ್ತದ್ವಿಚಚಕ್ಷಿರೇ ॥ ೧೦ ॥
ವಿದ್ಯೆಯಿಂದ ನಿರ್ದಿಷ್ಟವಾದ ಫಲಪ್ರಾಪ್ತಿಯಾಗುತ್ತದೆ. ಹಾಗೆಯೇ ಅವಿದ್ಯೆಯಿಂದಲೂ ಬೇರೊಂದು ನಿರ್ದಿಷ್ಟ ಫಲ ದೊರೆಯುತ್ತದೆ ಎಂಬುದನ್ನು ಜ್ಞಾನಿಗಳಿಂದ ಕೇಳಿ ತಿಳಿದಿದ್ದೇವೆ.
ಈ ಶ್ಲೋಕದ ದ್ವೈತಾದ್ವೈತ ಸಂಪ್ರದಾಯಗಳ ಅರ್ಥ-ವ್ಯಾಖ್ಯಾನಗಳು ಸಂಗತವಾಗಿ ತೋರುತ್ತವೆ. ಮಧ್ವಾಚಾರ್ಯರ ಭಾಷ್ಯದಲ್ಲಿ ದುಃಖ/ಅಜ್ಞಾನದ ನಾಶ ಮತ್ತು ಜ್ಞಾನಾರ್ಜನೆಯಿಂದ ಆನಂದದ ಸಾಕ್ಷಾತ್ಕಾರ – ಇವುಗಳನ್ನು ಮೋಕ್ಷಪದದ ಅಂಶಗಳನ್ನಾಗಿ ವಿಶ್ಲೇಷಿಸಲಾಗಿದೆ. ಶಂಕರಾಚಾರ್ಯರ ಭಾಷ್ಯವು ಜ್ಞಾನಿಗಳ ಪಾರಂಪರಿಕವಾದ ಉಪದೇಶ ಸಾರದಲ್ಲಿ ಕೇಂದ್ರೀಕೃತವಾಗಿದೆ.
ಬದುಕಿನ ಸಮಸ್ಯೆಗಳನ್ನು ಬಿಡಿಸುವಲ್ಲಿ ‘ಗುರು’ ಎಂಬುವರ ಪಾತ್ರವು ಅತ್ಯಂತ ಮಹತ್ವವುಳ್ಳದ್ದಾಗಿರುತ್ತದೆ. ಅಜ್ಞಾನವನ್ನು ಹೋಗಲಾಡಿಸುವವರೇ ಗುರು. ನನ್ನ ಬದುಕಿನಲ್ಲಿ ಗುರು ಎನಿಸುವವರು ಯಾರು? ಅವರನ್ನು ಸಂಧಿಸುವ ಅವಕಾಶವಾದರೂ ಇದೆಯೇ? ಗುರುವು ದಯಪಾಲಿಸುವ ರಹಸ್ಯ ಬೋಧನೆಯನ್ನು ಗ್ರಹಿಸುವುದಾದರೂ ಹೇಗೆ? ಎಂಬ ಪ್ರಶ್ನೆಗಳು ಎದುರಾಗುತ್ತವೆ.
ಶ್ರೀಮದ್ಭಾಗವತ ಮಹಾಪುರಾಣದಲ್ಲಿ ತನ್ನ ಪ್ರಿಯ ಮಿತ್ರನಾದ ಉದ್ಧವನಿಗೆ ಭಗವಂತನು ವಿವರಣೆ ನೀಡುತ್ತಾನೆ. ಭಗವಾನ್ ಶ್ರೀಕೃಷ್ಣ ಮತ್ತು ಉದ್ಧವನ ನಡುವೆ ನಡೆದ ಸಂವಾದವು ಎರಡು ಪ್ರಮುಖ ಗೀತಾ ರೂಪದ ಉಪದೇಶಗಳಾಗಿ ಮೂಡಿಬಂದಿದೆ – ಅವಧೂತ ಗೀತಾ ಹಾಗು ಉದ್ಧವ ಗೀತಾ.
ಈ ಸರಣಿಯ ಹಿಂದಿನ ಲೇಖನಗಳಲ್ಲಿ ಒಂದು ಗೀತಾಭಾಗದ ವಿಸ್ತೃತ ವಿವರಣೆಯನ್ನು ಕಂಡಿದ್ದೇವೆ. ಅವಧೂತಗೀತಾ ಎಂಬುದು ಅನೇಕ ಗಹನ ವ್ಯಾಖ್ಯಾನಗಳಿರುವ ಸುದೀರ್ಘ ಭಾಗವಾಗಿದೆ. ಇದರ ಹರಹು ಶೀಮದ್ಭಾಗವತ ಮಹಾಪುರಾಣದಲ್ಲಿ ಮೂರು ಅಧ್ಯಾಯಗಳಿಗೂ ಮೀರಿದೆ. ಅಂತೆಯೇ ಅವಧೂತಗೀತೆಯ ಸಾರವನ್ನು ಈ ಸರಣಿಯ ೩ ಲೇಖನಗಳಲ್ಲಿ ನೋಡೋಣ.
ಶ್ರೀ ಕೃಷ್ಣ ಮತ್ತು ಉದ್ಧವ
ಅವಧೂತಗೀತೆಯ ಆಳಕ್ಕಿಳಿಯುವ ಮುನ್ನ ಭಗವಂತ ಮತ್ತವನ ಭಕ್ತ-ಮಿತ್ರನ ಸಂವಾದದ ಪ್ರಮೇಯವನ್ನು ಗಮನಿಸೋಣ. ಈ ಘಟನಾವಿಶೇಷವು ಶ್ರೀಮದ್ಭಾಗವತ ಮಹಾಪುರಾಣದ ೧೧ನೇ ಸ್ಕಂಧದ ೭-೯ ಅಧ್ಯಾಯಗಳಲ್ಲಿದೆ. ಈ ಸಂವಾದದ ಪ್ರಮೇಯ ಅದೇ ಸ್ಕಂಧದ ೬ನೇ ಅಧ್ಯಾಯದಲ್ಲಿದೆ.
ದ್ವಾಪರವೆಂಬ ಸ್ವರ್ಣಯುಗದ ಅಂತಿಮಭಾಗದಲ್ಲಿ ಈ ಘಟನೆ ಸಂಭವಿಸಿದೆ. ಬ್ರಹ್ಮಾದಿ ದೇವತೆಗಳು ಶ್ರೀ ಕೃಷ್ಣಾವತಾರದಲ್ಲಿ ಭಗವಂತನ ಹಾಗು ಅವನ ಮಾಯಾ ಲೀಲೆಯ ದರ್ಶನಕ್ಕೆಂದು ದ್ವಾರಕೆಗೆ ಆಗಮಿಸುತ್ತಾರೆ. ಭಗವದವತಾರದ ಉದ್ದೇಶಸಾಫಲ್ಯವಾಗಿದ್ದು, ಯದುಕುಲವು ವಿನಾಶದ ಅಂಚಿನಲ್ಲಿದ್ದು, ಭಗವಂತನು ತನ್ನ ನಿಜನಿವಾಸವಾದ ವೈಕುಂಠಕ್ಕೆ ತೆರಳಬೇಕಾಗಿ ಎಲ್ಲರೂ ನಿವೇದಿಸುತ್ತಾರೆ.
ಶ್ರೀಕೃಷ್ಣನು ಪ್ರಭಾಸತೀರ್ಥದ ಪವಿತ್ರಸ್ನಾನದಿಂದಾದ ಚಂದ್ರನ ಶಾಪವಿಮೋಚನೆಯ ಕಥೆಯನ್ನು ವಿವರಿಸುತ್ತಾ ಎಲ್ಲರನ್ನೂ ಆ ತೀರ್ಥದೆಡೆಗೆ ಕರೆದೊಯ್ಯುತ್ತಾನೆ.
ಯತ್ರ ಸ್ನಾತ್ವಾ ದಕ್ಷಶಾಪಾದ್ಗೃಹೀತೋ ಯಕ್ಷ್ಮಣೋಡುರಾಟ್ ।
ವಿಮುಕ್ತಃ ಕಿಲ್ಬಿಷಾತ್ ಸದ್ಯೋ ಭೇಜೇ ಭೂಯಃ ಕಲೋದಯಮ್ ॥ ಶ್ರೀ.ಭಾ ೧೧.೬.೩೬ ॥
ಪ್ರಭಾಸ ಕ್ಷೇತ್ರದ ಮಹಿಮೆ ಬಹಳ ಪ್ರಸಿದ್ಧವಾಗಿದೆ. ದಕ್ಷ ಪ್ರಜಾಪತಿಯ ಶಾಪದಿಂದ ಚಂದ್ರನಿಗೆ ಕ್ಷಯರೋಗವು ಆವರಿಸಿದ್ದಾಗ ಚಂದ್ರನು ಪ್ರಭಾಸ ಕ್ಷೇತ್ರಕ್ಕೆ ಹೋಗಿ ಹಸ್ನಾನ ಮಾಡಿದನು. ಆಗಲೇ ಆ ಪಾಪಜನ್ಯ ರೋಗದಿಂದ ಬಿಡುಗಡೆ ಹೊಂದಿದನು. ಜೊತೆಗೆ ಅವನಿಗೆ ಕಲೆಗಳ ಅಭಿವೃದ್ಧಿಯು ಪ್ರಾಪ್ತವಾಯಿತು.
ಆ ಪರಿವಾರವು ಭಗವಂತನ ನಿರ್ಗಮನಕ್ಕೆ ಸಿದ್ಧವಾಗುತ್ತಿದ್ದ ಸಂದರ್ಭದಲ್ಲಿ ಉದ್ಧವನು ಶ್ರೀಕೃಷ್ಣನನ್ನು ಏಕಾಂತದಲ್ಲಿ ಸಂಧಿಸಿ, ಬಾಗಿ ನಮಸ್ಕರಿಸಿ ಹೀಗೆ ನುಡಿಯುತ್ತಾನೆ –
ಶ್ರೀ ಉದ್ಧವ ಉವಾಚ
ದೇವದೇವೇಶ ಯೊಗೇಶ ಪುಣ್ಯಶ್ರವಣಕೀರ್ತನ।
ಸಂಹೃತ್ಯೈತತ್ ಕುಲಂ ನೂನಂ ಲೋಕಂ ಸನ್ತ್ಯಕ್ಷ್ಯತೇ ಭವಾನ್।
ವಿಪ್ರಶಾಪಂ ಸಮರ್ಥೋऽಪಿ ಪ್ರತ್ಯಹನ್ನ ಯದೀಶ್ವರಃ ॥ ಶ್ರೀ. ಭಾ. ೧೧.೬.೪೨ ॥
ಯೋಗೇಶ್ವರನೇ! ದೇವಾಧಿ ದೇವನೇ! ನಿನ್ನ ಲೀಲೆಗಳ ಶ್ರವಣ ಕೀರ್ತನದಿಂದ ಜಗತ್ತು ಪವಿತ್ರವಾಗುತ್ತದೆ. ನೀನು ಸರ್ವಶಕ್ತ ಪರಮೇಶ್ವರನಾಗಿರುವೆ. ಬ್ರಾಹ್ಮಣರ ಶಾಪವನ್ನು ತೊಡೆದು ಹಾಕುವಲ್ಲಿ ನೇನು ಸಮರ್ಥನಾಗಿದ್ದರೂ ಹಾಗೆ ಮಾಡಲಿಲ್ಲ. ಈಗ ನೀನು ಯದುವಂಶವನ್ನು ಸಂಹರಿಸಿ ಇದನ್ನು ಕೊನೆಗಾಣಿಸಿ ನೀನು ಅವಶ್ಯವಾಗಿಈ ಲೋಕವನ್ನು ಪರಿತ್ಯಜಿಸುವೆ ಎಂದು ನಾನು ತಿಳಿದುಕೊಂಡೆ.
ಉದ್ಧವನ ಭವ್ಯ ಜ್ಞಾನಸಂಪದ , ಸಮತೆ, ಸಮಯ ಪ್ರಜ್ಞೆಗಳು ಇಲ್ಲಿ ವಿದಿತವಾಗಿವೆ. ಬ್ರಾಹ್ಮಣರ ಶಾಪವನ್ನು ತಾನು ದಮನಗೊಳಿಸಬಹುದಾದರೂ ಹಾಗೆ ಮಾಡದಿರುವ ಶ್ರೀ ಕೃಷ್ಣನ ದೈವತ್ವದ ಅಂಗೀಕಾರಭಾವವು ಉದ್ಧವ ಮತ್ತು ಭಗವಾನ್ ಕೃಷ್ಣನ ವಿಶಿಷ್ಟ ಬಾಂಧವ್ಯದ ದ್ಯೋತಕವಾಗಿದೆ. ಭಗವಂತನ ಭೂಲೀಲೆಗಳ ಅಂತ್ಯ ಸನ್ನಿಹಿತವಾಗಿದೆಯೆಂಬ ಅರಿವಿನಲ್ಲೂ ಸಮಾಧಾನವನ್ನು ತಾಳಬಲ್ಲವನಾಗಿರುತ್ತಾನೆ. ಉದ್ಧವನಲ್ಲಿ ಪ್ರಿಯ ಮಿತ್ರನ ವಿಯೋಗದ ನೋವು ವ್ಯಕ್ತವಾಗಿದೆಯಾದರೂ ಅದಕ್ಕೂ ಮಿಗಿಲಾಗಿ ಭಕ್ತನೊಬ್ಬನ ಹಂಬಲಿಕೆಯೇ ತೀವ್ರವಾದ ಭಾವವಾಗಿ ತೋರಿಬರುತ್ತದೆ.
ಮಾಯೆಯೆಂಬ ಭ್ರಮಾಲೋಕದಿಂದ ಶಾಶ್ವತವಾಗಿ ಮುಕ್ತಿಯನ್ನು ಹೊಂದುವ ಮಾರ್ಗವನ್ನು ಅಸ್ಖಲಿತ ವಿಶ್ವಾಸದಿಂದ ಆತನು ನಿರೂಪಿಸುವಲ್ಲಿ ಉದ್ಧವನ ಭಕ್ತಿಭಾವದ ಔನ್ನತ್ಯವನ್ನು ಕಾಣಬಹುದು –
ತ್ವಯೋಪಭುಕ್ತಸ್ರಗ್ಗಂಧವಾಸೋऽಲಂಕಾರಚರ್ಚಿತಾಃ।
ಉಚ್ಛಿಷ್ಟಭೋಜಿನೋ ದಾಸಾಸ್ತವ ಮಾಯಾಂ ಜಯೇಮಹಿ ॥ ಶ್ರೀ.ಭಾ.೧೧.೭.೪೬ ॥
ನೀನು ಧರಿಸಿದ ವನಮಾಲೆಯನ್ನು ನಾವು ಪ್ರಸಾದರೂಪವಾಗಿ ಧರಿಸಿದೆವು. ನೀನು ಧರಿಸಿದ ಚಂದನಾದಿ ಅಲಂಕಾರಗಳನ್ನು ನಿನ್ನ ಪ್ರಸಾದವೆಂದು ಪಡೆದುಕೊಂಡೆವು. ನಾವು ನಿನ್ನ ಪ್ರಸಾದವನ್ನು ಪಡೆಯುವ ಸೇವಕರಾಗಿದ್ದೇವೆ. ಅದಕ್ಕಾಗಿ ನಾವು ನಿನ್ನ ಮಾಯೆಯ ಮೇಲೆ ಅವಶ್ಯವಾಗಿ ವಿಜಯವನ್ನು ಪಡೆದುಕೊಂಡೆವು.
ಆಧುನಿಕ ಯುಗದಲ್ಲಿ ಭಗವಂತನ ದಿವ್ಯ ಪ್ರಸಾದವಾಗಿ ಯಾವುದನ್ನು ಪರಿಗಣಿಸುತ್ತೇವೆಂಬುದನ್ನು ಉದ್ಧವನು ಸ್ಪಷ್ಟವಾಗಿಸಿದ್ದಾನೆ. ಆತಂಕದ ಪರಿಸ್ಥಿತಿಗಳಲ್ಲಿ ಭಗವತ್ಪ್ರಸಾದವಾದ ಶ್ರೀಗಂಧ-ಮಾಲೆಗಳು ಅತ್ಯಂತ ಮಂಗಳಪ್ರದವೂ ಮಹಿಮಾಪೂರ್ಣವೂ ಆಗಿ ಒದಗಿಬರುತ್ತವೆ. ಮಾಯೆಯ ಜಾಲವನ್ನು ಭೇದಿಸುವ ವಿಧಾನಗಳನ್ನು ತಿಳಿದವನಾದರೂ, ನಾನು, ನನ್ನದೆಂಬ ಮೋಹದಿಂದ ಬಿಡಿಸಿಕೊಳ್ಳುವ ಮಾರ್ಗವನ್ನು ಸೂಚಿಸುವಂತೆ ಉದ್ಧವನು ಶ್ರೀ ಕೃಷ್ಣನನ್ನು ಪ್ರಾರ್ಥಿಸುತ್ತಾನೆ.
ತನ್ನ ಅವತಾರದ ಉದ್ದೇಶವನ್ನು ತಿಳಿಸುತ್ತಾ ಶ್ರೀ ಕೃಷ್ಣನು ಹೀಗೆ ಉತ್ತರಿಸುತ್ತಾನೆ –
ಮಯಾ ನಿಷ್ಪಾದಿತಂ ಹ್ಯತ್ರ ದೇವಕಾರ್ಯಮಶೇಷತಃ ।
ಯದರ್ಥಮವತೀರ್ಣೋऽಹಮಂಶೇನ ಬ್ರಹ್ಮಣಾರ್ಥಿತಃ ॥ ೧೧.೭.೨ ॥
ಬ್ರಹ್ಮನ ಪ್ರಾರ್ಥನೆಯಂತೆ ನಾನು ನನ್ನ ಅಂಶ ಬಲರಾಮನೊಂದಿಗೆ ಭೂತಲದಲ್ಲಿ ಅವತರಿಸಿದ್ದೆ. ದೇವತೆಗಳ ಸಲುವಾಗಿ ಇದ್ದ ಎಲ್ಲ ಕಾರ್ಯಗಳನ್ನು ಮಾಡಿ ಮುಗಿಸಿದೆ.
ಮುಂದೆ ತನ್ನ ಆತ್ಮೀಯ ಮಿತ್ರ ಹಾಗು ಭಕ್ತನಾದ ಉದ್ಧವನನ್ನುದ್ದೇಶಿಸಿ ಈ ಲೋಕದಲ್ಲಿ ನೀನೂ ಇನ್ನು ಮುಂದೆ ವಾಸಿಸುವುದು ಸಲ್ಲ ಎಂದು ಹೇಳುತ್ತಾನೆ.
ನ ವಸ್ತವ್ಯಂ ತ್ವಯೈವೇಹ ಮಯಾ ತ್ಯಕ್ತೇ ಮಹೀತಲೇ
ಜನೋऽಭದ್ರರುಚಿರ್ಭದ್ರ ಭವಿಷ್ಯತಿ ಕಲೌ ಯುಗೇ ॥ ೧೧.೭.೫ ॥
ಹೇ ಉದ್ಧವನೇ! ನಾನು ಪೃಥ್ವಿಯನ್ನು ತ್ಯಜಿಸಿದ ಬಳಿಕ ನೀನೂ ಇಲ್ಲಿರಬಾರದು. ಏಕೆಂದರೆ ಕಲಿಯುಗದಲ್ಲಿ ಜನರು ಅಧರ್ಮದಲ್ಲಿಯೇ ಹೆಚ್ಚುಅಭಿರುಚಿಯುಳ್ಳವರಾಗಿರುತ್ತಾರೆ. ಆಮ್ತಹವರ ಮಧ್ಯದಲ್ಲಿ ನೀನು ಇರಬಾರದು.
ಶ್ರೀ ಕೃಷ್ಣನು ಮುಂಬರುವ ಯುಗದ ದುರಿತಗಳ ಮುನ್ಸೂಚನೆಯನ್ನು ನೀಡುತ್ತಾ ಇನ್ನು ಈ ಇಹಲೋಕವನ್ನು ತ್ಯಜಿಸಿಬಿಡುವಂತೆ ಸ್ನೇಹಿತನಿಗೆ ತಿಳಿಸುತ್ತಾನೆ. ಉದ್ಧವನಾದರೋ ಈ ಬಾಹ್ಯವಿಕಾರಗಳ ಪ್ರಭಾವದಿಂದ ವಿಮೋಚನೆಗಾಗಿ ಉಪದೇಶಿಸಲು ಕೋರುತ್ತಾನೆ.
ನಮ್ಮ ಸುತ್ತಮುತ್ತಲಿನ ಪರಿಸರವೇ ನಮಗೆ ಶಾಶ್ವತ ಜ್ಞಾನವನ್ನು ದಯಪಾಲಿಸಬಹುದು ಎಂಬುದಾಗಿ ಶ್ರೀ ಕೃಷ್ಣನು ಹೇಳುತ್ತಾನೆ –
ಶ್ರೀ ಭಗವಾನುವಾಚ
ಪ್ರಾಯೇಣ ಮನುಜಾ ಲೋಕೇ ಲೋಕತತ್ತ್ವವಿಚಕ್ಷಣಾಃ ।
ಸಮುದ್ಧರಂತಿ ಹ್ಯಾತ್ಮಾನಮಾತ್ಮನೈವಾಶುಭಾಶಯಾತ್ ॥ ಶ್ರೀ.ಭಾ. ೧೧.೭.೧೯ ॥
ಭಗವಂತನೆಂದನು – ಪ್ರಿಯ ಉದ್ಧವ! ಪ್ರಾಯಶಃ ಈ ಪ್ರಪಂಚದ ವಾಸ್ತವಿಕ ಸ್ವರೂಪವನ್ನು ತಿಳಿಯಲು ಈ ಲೋಕವು ಅನಿತ್ಯವಾಗಿದೆ ಎಂದು ತಿಳಿದ ವಿದ್ವಾಂಸರಾದವರುತಾವೇ ತಮ್ಮನ್ನು ಅಮಂಗಳಕರವಾದ ವಿಷಯವಾಸನೆಗಳಿಂದ ಉದ್ಧರಿಸಿಕೊಳ್ಳುತ್ತಾರೆ.
ನಿತ್ಯವ್ಯವಹಾರಗಳಲ್ಲಿನ ಅನುಭವಗಳನ್ನು ವಿಶ್ಲೇಷಿಸಿ, ಅರ್ಥೈಸಿ, ಅಂತರ್ಗತವಾಗಿಸಿಕೊಂಡು ಅದರಿಂದ ಬದುಕನ್ನು ನಿರ್ವಹಿಸುವ ಅತ್ಯಂತ ಮುಖ್ಯವೆನಿಸುವ ಬಗೆಯನ್ನು ಭಗವಂತನು ನಿರೂಪಿಸುತ್ತಾನೆ.
ಮುಂದಿನ ಶ್ಲೋಕದಲ್ಲಿ ಇದೇ ಭಾವದ ಪುನರುಕ್ತಿಯಿದೆ –
ಆತ್ಮನೋ ಗುರುರಾತ್ಮೈವ ಪುರುಷಸ್ಯ ವಿಶೇಷತಃ
ಯತ್ ಪ್ರತ್ಯಕ್ಷಾನುಮಾನಾಭ್ಯಾಂ ಶ್ರೇಯೋऽಸಾವನುವಿಂದತೇ ॥ ಶ್ರೀ.ಭಾ. ೧೧.೭.೨೦ ॥
ವಿಶೇಷವಾಗಿ ಮನುಷ್ಯನಿಗೆ ಅವನ ಆತ್ಮವೇ ಗುರುವಾಗಿದ್ದಾನೆ. ಅವನು ಪ್ರತ್ಯಕ್ಷಪ್ರಮಾಣದ ಮೂಲಕ ಹಾಗು ಅನುಮಾನ ಪ್ರಮಾಣದ ಮೂಲಕ ಸ್ವತಃ ತನ್ನ ಶ್ರೇಯಸ್ಸನ್ನು ಪಡೆಯಲು ಸಮರ್ಥನಾಗಿರುವನು.
ತನ್ನ ಆತ್ಮವೇ ಗುರುವಿನ ಸ್ವರೂಪದಲ್ಲಿ ಮುಕ್ತಿಮಾರ್ಗದೆಡೆಗೆ ಮಾನವನನ್ನು ಕರೆದೊಯ್ಯಬಹುದು ಎಂಬ ಸ್ಪಷ್ಟ ಉಪದೇಶವನ್ನು ಭಗವಂತನು ನೀಡುತ್ತಾನೆ. ಶ್ರೀಮದ್ಭಗವದ್ಗೀತೆಯಲ್ಲೂ ಅರ್ಜುನನಿಗೆ ಇದೇ ಉಪದೇಶವನ್ನು ಶ್ರೀಕೃಷ್ಣನು ನೀಡಿದ್ದಾನೆಂಬುದು ಇಲ್ಲಿ ಗಮನಾರ್ಹ
ಆತ್ಮೈವ ಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ ॥ ಶ್ರೀ.ಭ.ಗೀ ೬ .೫॥
ಆತ್ಮವು ತನಗೆ ತಾನೇ ಮಿತ್ರನೂ ಶತ್ರುವೂ ಆಗಿರುತ್ತದೆ
ಪಾರಮಾರ್ಥಿಕ ವಿಷಯಗಳಲ್ಲಿ ಮಾರ್ಗದರ್ಶನ ನೀಡಬಲ್ಲ ಆತ್ಮದ ಸಾಮರ್ಥ್ಯವನ್ನು ಭಗವಂತನು ಅನೇಕ ವಿಧಗಳಲ್ಲಿ ಸಂದರ್ಭೋಚಿತವಾಗಿ ವಿವರಿಸಿದ್ದಾನ
ಯಾವುದೇ ವಿಷಯವನ್ನಾದರೂ ಕಥಾನಕಗಳ ಮೂಲಕ ರಸವತ್ತಾಗಿ ಮನಮುಟ್ಟುವಂತೆ ನಿರೂಪಿಸಬಹುದು. ಸುತ್ತಲಿರುವ ಪರಿಸರದಿಂದ ದೊರೆಯುವ ಬೋಧನೆಯ ವಿಷಯವನ್ನು ತನ್ನ ಪೂರ್ವಜನಾದ ಯದುವಿನ ಕಥೆಯೊಂದರ ಮೂಲಕ ಶ್ರೀಕೃಷ್ಣನು ಪ್ರಚುರಪಡಿಸುತ್ತಾನೆ.
ಅತ್ಯಾಪ್ಯುದಾಹರಂತೀಮಮಿತಿಹಾಸಂ ಪುರಾತನಂ ।
ಅವಧೂತಸ್ಯ ಸಂವಾದಂ ಯದೋರಮಿತತೇಜಸಃ ॥ ಶ್ರೀ.ಭಾ ೧೧.೭.೨೪॥
ಈ ವಿಷಯದಲ್ಲಿ ಮಹಾತ್ಮರು ಒಂದು ಪ್ರಾಚೀನ ಇತಿಹಾಸವನ್ನು ಹೇಳುತ್ತಿರುತ್ತಾರೆ. ಆ ಇತಿಹಾಸವು ಪರಮ ತೇಜಸ್ವೀ ಅವಧೂತ ದತ್ತಾತ್ರೇಯ ಮತ್ತು ಯದುರಾಜನ ಸಂವಾದರೂಪದಲ್ಲಿದೆ.
ಅವಧೂತ ಗೀತಾ ಎಂಬುದು ಅವಧೂತ ದತ್ತಾತ್ರೇಯ ಮತ್ತು ಮಹಾರಾಜ ಯದುವಿನ ನಡುವೆ ನಡೆದ ಸಂವಾದ. ಇದರಲ್ಲಿ ಭಗವಾನ್ ದತ್ತಾತ್ರೇಯರು ೨೪ ಗುರುಗಳಿಂದ ತಮಗೆ ದೊರೆತ ಬೋಧನೆಯನ್ನು ವಿವರಿಸಿದ್ದಾರೆ.
ಈ ಸರಣಿಯ ಮೊದಲ ಭಾಗದಲ್ಲಿ ಯದುವಿನ ಪ್ರಶ್ನೆಗಳಿಗೆ ಉತ್ತರ ರೂಪದಲ್ಲಿ ಭಗವಾನ್ ದತ್ತಾತ್ರೇಯರು ತಮ್ಮ ಮೊದಲ ೮ ಗುರುಸ್ವರೂಪಿಗಳ ವರ್ಣನೆಯನ್ನು ನೀಡಿದ್ದಾರೆ. ಅವಧೂತ ಗೀತೆಯ ಈ ಭಾಗದ ವಿವರವು ಶ್ರೀಮದ್ಭಾಗವತ ಮಹಾಪುರಾಣದ ಸ್ಕಂಧ ೧೧ ಅಧ್ಯಾಯ ೭ರಲ್ಲಿ ಅಂತರ್ಗತವಾಗಿದೆ.
ಅವಧೂತ ಗೀತಾ – ಭಾಗ ೧
ಯದು ಮಹಾರಾಜನು ಜ್ಞಾನವಂತರಾದ ತರುಣ ಬ್ರಾಹ್ಮಣರೊಬ್ಬರು ಅಮಿತ ತೇಜಸ್ಸು ಹಾಗು ಶಾಂತಿಯಿಂದ ಕೂಡಿದ ಮುಖಭಾವವುಳ್ಳವರಾಗಿ ನಿರ್ಭೀತಿಯಿಂದ ಅಡ್ಡಾಡುವುದನ್ನು ಕಾಣುತ್ತಾನೆ. ಸ್ವಯಂ ವಿದ್ವತ್ಪೂರ್ಣನಾದ ರಾಜನು ಆ ಬ್ರಾಹ್ಮಣರನ್ನು ಮಾತನಾಡಿಸಿ ಕೆಲವು ಪ್ರಶ್ನೆಗಳನ್ನು ಕೇಳುತ್ತಾನೆ
ತ್ವಂ ಹಿ ನಃ ಪೃಚ್ಛತಾಂ ಬ್ರಃಹ್ಮನ್ನಾತ್ಮನ್ಯಾನಂದಕಾರಣಮ್।
ಬ್ರೂಹಿ ಸ್ಪರ್ಶವಿಹೀನಸ್ಯ ಭವತಃ ಕೇವಲಾತ್ಮನಃ ॥ ಶ್ರೀ.ಭಾ. ೧೧.೭.೩೦ ॥
ಬ್ರಾಹ್ಮಣೋತ್ತಮ! ನಿಮಗೆ ಈ ಪ್ರಪಂಚದಲ್ಲಿ ಯಾರ ಕುರಿತು ಕಿಂಚಿತ್ತಾದರೂ ಆಸಕ್ತಿಯಿಲ್ಲ. ನೀವು ನಿಮ್ಮ ಶುದ್ಧ ಸ್ವರೂಪದಲ್ಲಿಯೇ ಸದಾ ಸ್ಥಿತರಾಗಿರುವಿರಿ. ನಿಮ್ಮ ಈ ಅನಿರ್ವಚನೀಯ ಆನಂದದ ಕಾರಣವೇನು? ಇದನ್ನು ತಾವು ನನಗೆ ತಿಳಿಸುವ ಕೃಪೆ ಮಾಡಬೇಕು.
ಈ ಸಂದರ್ಭದಲ್ಲಿ ಲೋಕಕ್ಕೆ ಆದರ್ಶಪ್ರಾಯವಾದ ಯದುವಿನ ಅಪ್ರತಿಮ ಗುಣವೊಂದರ ಪರಿಚಯ ನಮಗಾಗುತ್ತದೆ – ವೇದ ಶಾಸ್ತ್ರಗಳಲ್ಲಿ ಎಷ್ಟೇ ಪರಿಣತಿಯನ್ನು ಹೊಂದಿದ್ದರೂ ಕಲಿಕೆಯ ಅವಕಾಶ ಒದಗಿಬಂದಾಗ ಕಲಿಯಲು ಮುಂದಾಗಬೇಕು.
ಯದುವಿನ ಪ್ರಶ್ನೆಗಳಿಗೆ ಉತ್ತರಿಸುತ್ತಾ ತನ್ನ ಮನೋಧರ್ಮವನ್ನು ರೂಪಿಸಿದ ಗುರುಗಳ ವಿಚಾರವಾಗಿ ಅ ಬ್ರಾಹ್ಮಣರು ಹೀಗೆ ಹೇಳುತ್ತಾರೆ
ಶ್ರೀ ಬ್ರಾಹ್ಮಣ ಉವಾಚ
ಸಂತಿ ಮೇ ಗುರವೋ ರಾಜನ್ ಬಹವೋ ಬುದ್ಧ್ಯುಪಾಶ್ರಿತಾಃ ।
ಯತೋ ಬುದ್ಧಿಮುಪಾದಾಯ ಮುಕ್ತೋ ಟಾಮೀಹ ತಾನ್ ಶ್ರುಣು ॥ ಶ್ರೀ.ಭಾ. ೧೧.೭.೩೨ ॥
ಶ್ರೀ ದತ್ತಾತ್ರೇಯರೂಪೀ ಬ್ರಾಹ್ಮಣರು ಇಂತೆಂದರು – ರಾಜನೇ ನಾನು ನನ್ನ ಬುದ್ಧಿಯಿಂದ ಹಲವಾರು ಗುರುಗಳನ್ನು ಆಶ್ರಯಿಸಿದ್ದೇನೆ. ಅವರಿಂದ ಶಿಕ್ಷಣವನ್ನು ಪಡೆದು ನಾನು ಈ ಜಗತ್ತಿನಲ್ಲಿ ಮುಕ್ತಭಾವದಿಂದ ಸಂಚರಿಸುತ್ತಿದ್ದೇನೆ. ಆ ನನ್ನ ಗುರುಗಳ ಹೆಸರುಗಳನ್ನು ಹಾಗೂ ಅವರಿಂದ ಪಡೆದ ಶಿಕ್ಷಣವನ್ನು ಹೇಳುವೆನು ಕೇಳು.
ಈ ಕೆಳಗಿನ ಶ್ಲೋಕಗಳು ಆ ೨೪ ಗುರುಸ್ವರೂಪಿಗಳನ್ನು ಹೆಸರಿಸುತ್ತದೆ
ಪೃಥಿವೀ ವಾಯುರಾಕಾಶಮಾಪೋ ಗ್ನಿಶ್ಚಂದ್ರಮಾ ರವಿಃ ।
ಕಪೋತೋ ಜಗರಃ ಸಿಂಧುಃ ಪತಂಗೋ ಮಧುಕೃದ್ ಗಜಃ ॥ ೩೩ ॥
ಮಧುಹಾ ಹರಿಣೋ ಮೀನಃ ಪಿಂಗಲಾ ಕುರುರೋ ರ್ಭಕಃ ।
ಕುಮಾರೀ ಶರಕೃತ್ ಸರ್ಪ ಊರ್ಣನಾಭಿಃ ಸುಪೇಶಕೃತ್ ॥ ೩೪ ॥
ಏತೇ ಮೇ ಗುರವೋ ರಾಜನ್ ಚತುರ್ವಿಂಶತಿರಾಶ್ರಿತಾಃ ।
ಶಿಕ್ಷಾ ವ್ರಿತ್ತಿಭಿರೇತೇಶಾಮನ್ವಶಿಕ್ಷಮಿಹಾತ್ಮನಃ ॥ ೩೫ ॥
ಭೂಮಿ, ವಾಯು, ಆಕಾಶ, ಜಲ, ಅಗ್ನಿ, ಚಂದ್ರ, ಸೂರ್ಯ, ಪಾರಿವಾಳ, ಹೆಬ್ಬಾವು, ಸಮುದ್ರ, ಪತಂಗ, ದುಂಬಿ, ಆನೆ, ಜೇನು ತೆಗೆಯುವವನು, ಜಿಂಕೆ, ಮೀನು, ಪಿಂಗಳಾವೇಶ್ಯೆ, ಕುರರ ಪಕ್ಷಿ, ಮಗು, ಕುಮಾರೀ, ಬಾಣವನ್ನು ತಯಾರಿಸುವವನು, ಸರ್ಪ, ಜೇಡರಹುಳು, ಭೃಂಗಕೀಟ – ಇವರೇ ನನ್ನ ಇಪ್ಪತ್ನಾಲ್ಕು ಮಂದಿ ಗುರುಗಳು.
ಈ ಗುರುಸ್ವರೂಪಿಗಳನ್ನು ಹೆಸರಿಸಿದ ನಂತರ ಭಗವಾನ್ ದತ್ತಾತ್ರೇಯನು ಪ್ರತಿಯೊಬ್ಬ ಗುರುವಿನ ವೈಶಿಷ್ಟ್ಯ ಹಾಗು ಅವರಿಂದ ಪಡೆದ ಜ್ಞಾನದ ಬಗೆಗೆ ವಿವರಿಸುತ್ತಾನೆ
೧. ಭೂಮಿ
ಭೂತೈರಾಕ್ರಮ್ಯಮಾಣೋ ಪಿ ಧೀರಾ ದೈವವಶಾನುಗೈಃ ।
ತದ್ವಿದ್ವಾನ್ನ ಚಲೇನ್ಮಾರ್ಗಾದನ್ವಶಿಕ್ಷಂ ಕ್ಷಿತೇರ್ವ್ರತಮ್ ॥ ಶ್ರೀ.ಭಾ. ೧೧.೭.೩೭ ॥
- ಪರರು ತಮ್ಮ ಮೇಲೆ ಎಷ್ಟೇ ಕಷ್ಟಗಳನ್ನು ಹೊರಿಸಿದರೂ ಅದು ತಮ್ಮ ಪ್ರಾರಬ್ಧಕರ್ಮವೆಂದು ಮನಗಾಣುವವನೇ ನಿಜವಾದ ಜ್ಞಾನಿಯು.
- ಪರಮ ಜ್ಞಾನಿಯು ತನ್ನ ನಿಯೋಜಿತ ಪಥದಿಂದ ಎಂದೂ ವಿಚಲಿತನಾಗಬಾರದು.
- ಭೂಮಿಯನ್ನು ಅವಲಂಬಿಸಿರುವ ತರು-ಪರ್ವತಗಳಂತೆ ಪರಹಿತಕ್ಕಾಗಿ ಆತ್ಮಸಮರ್ಪಣೆಗೈಯುವುದನ್ನು ಕಲಿಯಬೇಕು. ಪರ್ವತದಂತೆ ದೃಢ-ನಿಶ್ಚಲವಾಗಿರಬೇಕು.
೨. ವಾಯು
ಪ್ರಾಣವೃತ್ಯೈವ ಸಂತುಷ್ಯೇನ್ಮುನಿರ್ನೈವೇಂದ್ರಿಯಪ್ರಿಯೈಃ ।
ಜ್ಞಾನಂ ಯಥಾ ನ ನಶ್ಯೇತ ನಾವಕೀರ್ಯೇತ ವಾಙಮನಃ ।। ಶ್ರೀ.ಭಾ. ೧೧.೭.೩೯ ॥
- ಮುನಿಯು ಭಗವಂತನ ಧ್ಯಾನದಲ್ಲಿ ನಿರತನಾಗಿ ಸರಳಜೀವನವನ್ನು ಸಂತೃಪ್ತಿಯಿಂದ ನಡೆಸಬೇಕು.
- ಲೌಕಿಕ ಪ್ರಲೋಭನೆಗಳ ನಡುವೆಯೂ ಅವುಗಳ ಮೋಹಕ್ಕೆ ಸಿಲುಕದೇ ಇಂದ್ರಿಯಗಳ ನಿಗ್ರಹವನ್ನು ಸಾಧಿಸಬೇಕು.
- ಎಲ್ಲೆಡೆಯಿದ್ದೂ ಯಾವುದರ ಹಂಗಿಲ್ಲದೇ ಇರುವುದು ವಾಯು. ಶ್ರೀಗಂಧದ ಪರಿಮಳವನ್ನು ಒಯ್ದರೂ ಅದರೊಳಗೆ ಬೆರೆಯದೇ ಕಾಲಕ್ರಮೇಣ ಪರಿಮಳವಿಹೀನವಾಗುತ್ತದೆ.
- ಅಂತೆಯೇ ಜ್ಞಾನಾತ್ಮನು ಲೌಕಿಕ ಜಗತ್ತಿನ ಗುಣಾವಗುಣಗಳ ಪ್ರಭಾವಕ್ಕೊಳಗಾಗದೇ ಗಾಳಿಯಂತೆ ನಿಸ್ಪೃಹನಾಗಿರಬೇಕು.
೩. ಆಕಾಶ
ತೇಜೋ ಬನ್ನಮಯೈರ್ಭಾವೈರ್ಮೇಘಾದ್ಯೈರ್ವಾಯುನೇರಿತೈಃ।
ನ ಸ್ಪೃಶ್ಯತೇ ನಭಸ್ತದ್ವತ್ ಕಾಲಸೃಷ್ಟೈರ್ಗುಣೈಃ ಪುಮಾನ್ ॥ ಶ್ರೀ.ಭಾ. ೧೧.೭.೪೩ ॥
- ಆಕಾಶ ತತ್ತ್ವವು ಚಿರಂತನವಾದದ್ದು. ದೃಗ್ಗೋಚರವಾಗಿರುವಲ್ಲೆಲ್ಲಾ ಅದರ ವ್ಯಾಪ್ತಿಯಿದೆ.
- ಅಂತೆಯೇ ಪರಬ್ರಹ್ಮತತ್ತ್ವವು ಎಲ್ಲ ಜೀವಿಗಳಲ್ಲೂ ಸಮಾನವಾಗಿದ್ದು ಅಖಿಲ ಬ್ರಹ್ಮಾಂಡವನ್ನು ವ್ಯಾಪಿಸಿದೆ.
- ಅಕಾಶ ತತ್ವದ ವ್ಯಾಪ್ತಿಯಂತೆ ಪರಬ್ರಹ್ಮತತ್ತ್ವದ ವ್ಯಾಪ್ತಿಯನ್ನೂ ಜ್ಞಾನಿಯಾದವನು ಗಮನಿಸಬೇಕು.
- ವಾಯುಪ್ರಭಾವದಿಂದ ಆಕಾಶವು ಮೇಘಗಳಿಂದ ಆವೃತವಾಗುತ್ತದೆ. ಹೀಗೆ ಆವರಿಸಲ್ಪಟ್ಟಂತೆ ತೋರಿದರೂ ಆಕಾಶವು ಮೇಘಗಳಿಗಿಂತ ಬೇರೆಯಾಗಿದೆ.
- ಪಂಚಭೂತಗಳಿಂದಾದ ದೇಹವು ಕಾಲಾನುಗುಣವಾಗಿ ಗುಣತ್ರಯದ ಪ್ರಭಾವಕ್ಕೆ ಒಳಗಾಗುತ್ತದೆ, ಆದರೆ ಜ್ಞಾನಿಯ ಅಂತಃಸತ್ತ್ವವು ಈ ಪ್ರಭಾವಗಳಿಂದ ಮುಕ್ತವಾಗಿದೆ.
೪. ಜಲ
ಸ್ವಚ್ಛಃ ಪ್ರಕೃತಿತಃ ಸ್ನಿಗ್ಧೋ ಮಾಧುರ್ಯಸ್ತೀರ್ಥಭೂರ್ನೃಣಾಮ್ ।
ಮುನಿಃ ಪುನಾತ್ಯಪಾಂ ಮಿತ್ರ್ಮೀಕ್ಷೋಪಸ್ಪರ್ಶಕೀರ್ತನೈಃ ॥ಶ್ರೀ.ಭಾ. ೧೧.೭.೪೪ ॥
- ಜಲವು ಸ್ವಾಭಾವಿಕವಾಗಿ ಸ್ವಚ್ಛವಾಗಿದ್ದು ತನ್ನ ನೈರ್ಮಲ್ಯ ಹಾಗು ಮಾನವಕುಲದ ಬಗೆಗಿರುವ ತನ್ನ ಅಮಿತ ಸ್ನೇಹಭಾವದಿಂದ ಮಾನವನನ್ನು ಪಾವನಗೊಳಿಸುತ್ತದೆ.
- ಅಂತೆಯೇ ತತ್ತ್ವಜ್ಞಾನಿಯ ಸ್ವಭಾವವೂ ನಿರ್ಮಲವಾಗಿರಬೇಕು.
- ತಮ್ಮ ದೃಷ್ಟಿ, ಸ್ಪರ್ಶ ಹಾಗು ಹಿತನುಡಿಗಳಿಂದ ಜ್ಞಾನಿಗಳು ತಮ್ಮ ಸಂಪರ್ಕಕ್ಕೆ ಬರುವ ಮಾನವರನ್ನು ಪುನೀತರಾಗಿಸಬೇಕು.
೫. ಅಗ್ನಿ
ತೇಜಸ್ವೀ ತಪಸಾ ದೀಪ್ತೋ ದುರ್ಢರ್ಷೋದರಭಾಜನಃ ।
ಸರ್ವಭಕ್ಷ್ಯೋ ಪಿ ಯುಕ್ತಾತ್ಮಾ ನಾದತ್ತೇ ಮಲಮಗ್ನಿವತ್ ॥ ಶ್ರೀ.ಭಾ. ೧೧.೭.೪೫ ॥
- ಸ್ವಪ್ರಾಕಾಶದಿಂದ ಶೋಭಿಸುತ್ತಾ ಅಗ್ನಿಯು ಎಲ್ಲವನ್ನು ಆಹುತಿ ತೆಗೆದುಕೊಳ್ಳುತ್ತಾದರೂ ಯಾವುದರಿಂದಲೂ ಅದು ಕಲುಷಿತಗೊಳುವುದಿಲ್ಲ.
- ಅಗ್ನಿಯ ತಾಪ ತಾನು ಸ್ವೀಕರಿಸಿದ್ದೆಲ್ಲವನ್ನೂ ಪರಿಶುದ್ಧಗೊಳಿಸುತ್ತದೆ.
- ನಿಜವಾದ ಜ್ಞಾನಿಯು ತಪಸ್ವಿಯಾಗಿ ತೇಜಸ್ವಿಯಾಗಿ ತ್ರಿಗುಣಗಳ ಪರಿಣಾಮದಿಂದ ಮುಕ್ತನಾಗಿರಬೇಕು.
- ಅಗ್ನಿಯು ಕೆಲವೊಮ್ಮೆ ಗೋಚರಿಸಿವುದು, ಕೆಲವೊಮ್ಮೆ ದಾರುವಿನೊಳಗೆ ಗೌಪ್ಯವಾಗಿರುವುದು.
- ತತ್ತ್ವಜ್ಞಾನಿಯು ಕೆಲವೊಮ್ಮೆ ತನ್ನ ನಿಜರೂಪವನ್ನು ತೋರುತ್ತಾನೆ, ಕೆಲವೊಮ್ಮೆ ಮರೆಯಾಗಿಸುತ್ತಾನೆ.
- ಅಗ್ನಿಯಂತೆ ಜ್ಞಾನಿಯು ಭಕ್ತರು ತನಗೆ ಸಮರ್ಪಿಸಿದ್ದನ್ನು ಸ್ವೀಕರಿಸಿ ಪಾವನಗೊಳಿಸುತ್ತಾನಾದರೂ ಅವುಗಳಿಂದ ಯಾವುದೇ ಪ್ರಭಾವಕ್ಕೊಳಗಾಗುವುದಿಲ್ಲ.
- ಕಾಷ್ಠದೊಳಗೆ ಗೂಢವಾಗಿದ್ದು ಆ ಸ್ವರೂಪಕ್ಕೆ ತಕ್ಕಂತೆ ತೋರಿಕೊಳ್ಳುವ ಅಗ್ನಿಯಂತೆ ಪರಬ್ರಹ್ಮ ತತ್ತ್ವವೂ ದೃಗ್ಗೋಚರವಾಗಿರದೇ ಎಲ್ಲ ಜೀವಿಗಳಲ್ಲೂ ಅಂತರ್ಗತವಾಗಿರುತ್ತದೆ.
೬. ಚಂದ್ರ
ವಿಸರ್ಗಾದ್ಯಾಃ ಶ್ಮಶಾನಾಂತಾ ಭಾವಾ ದೇಹಸ್ಯ ನಾತ್ಮನಃ ।
ಕಲಾನಾಮಿವ ಚಂದ್ರಸ್ಯ ಕಾಲೇನಾವ್ಯಕ್ತವರ್ತ್ಮನಾ ॥ ಶ್ರೀ.ಭಾ. ೧೧.೭.೪೮ ॥
- ಕಾಲಚಕ್ರದ ಚಲನೆಗನುಗುಣವಾಗಿ ಚಂದ್ರನ ವೃದ್ಧಿ-ಕ್ಷಯಗಳು ಸಂಭವಿಸುತ್ತವೆ. ಅಮಾವಾಸ್ಯೆಯ ಶೂನ್ಯದಿಂದ ಮೊದಲುಗೊಂಡು ರಜತದ ಎಳೆಯಾಗಿ ಹೊಮ್ಮಿ ಪೂರ್ಣಿಮೆಯ ಪೂರ್ಣಚಂದ್ರನಾಗಿ ಮತ್ತೆ ಕ್ಷೀಣಿಸುತ್ತಾ ಶೂನ್ಯವಾಗುವುದು.
- ಇದೇ ರೀತಿಯಾಗಿ ನಮ್ಮ ಸ್ಥೂಲ ಶರೀರವು ಕಾಲಾನುಗುಣವಾಗಿ ಪರಿವರ್ತನೆಯಾಗುತ್ತದೆ.
- ಆದರೆ ನಮ್ಮೊಳಗಿರುವ ಆತ್ಮಕ್ಕೆ ಯಾವುದೇ ಬಾಧೆಯಿರದು.
- ಅಗ್ನಿಯ ಶಿಖೆಗಳು ಹೊಮ್ಮುವಾಗ ಅದರ ಜನ್ಮ-ಅವಸಾನಗಳನ್ನು ಯಾರೂ ತಿಳಿಯಲಾರರು.
- ಪ್ರತಿಯೊಂದು ಕಣವೂ ಅಲ್ಪಕಾಲ ಉರಿದು ನಶಿಸಿಹೋಗುತ್ತದೆ.
- ಅಂತೆಯೇ ಜನ್ಮ, ಬಾಲ್ಯಾವಸ್ಥೆ, ಯೌವ್ವನ, ಪ್ರೌಢಾವಸ್ಥೆ, ಮುಪ್ಪು, ಮರಣ – ಇವುಗಳು ನಿಖರವಾಗಿ ಪುನರಾವರ್ತನೆಗೊಳ್ಳುತ್ತಿರುತ್ತವೆ.
- ಈ ಚಕ್ರದ ಚಲನೆಯ ನಡುವೆಯೂ ಆತ್ಮ ತನ್ನ ಪ್ರಯಾಣವನ್ನು ನಿರಂತರವಾಗಿ ನಡೆಸುತ್ತಿರುತ್ತದೆ.
೭. ಸೂರ್ಯ
ಬುಧ್ಯತೇ ಸ್ವೇ ನ ಭೇದೇನ ವ್ಯಕ್ತಿಸ್ಥ ಇವ ತದ್ಗತಃ ।
ಲಕ್ಷ್ಯತೇ ಸ್ಥೂಲಮತಿಭಿರಾತ್ಮಾ ಚಾವಸ್ಥಿತೋ ರ್ಕವತ್ ॥ ಶ್ರ .ಭಾ. ೧೧.೭.೫೧ ॥
- ತನ್ನ ಕಿರಣಗಳಿಂದ ಸೂರ್ಯನು ಜಲವನ್ನು ಸೇವಿಸಿ, ಮೇಘಗಳಾಗಿ ಪರಿವರ್ತಿಸಿ ಮತ್ತೆ ವರ್ಷಧಾರೆಯ ಮೂಲಕ ಜಲವನ್ನು ಮರಳಿ ನೀಡುತ್ತಾನೆ.
- ಈ ರೀತಿಯಾಗಿ ಜ್ಞಾನಿಯಾದವನು ಯಾವುದನ್ನು ಸ್ವೀಕರಿಸಿದರೂ ಅನ್ಯಸ್ವರೂಪದಲ್ಲಿ ಇತರರಿಗೆ ಅದನ್ನು ನೀಡುತ್ತಾನೆ.
- ಆತ ಎಂದೂ ತನ್ನ ಸ್ವಾರ್ಥಕ್ಕಾಗಿ ಧನ-ಧಾನ್ಯಗಳನ್ನು ಸ್ವೀಕರಿಸುವುದಿಲ್ಲ.
- ವಿವಿಧ ಪಾತ್ರಗಳಲ್ಲಿ ನೀರನ್ನು ಸಂಗ್ರಹಿಸಿಟ್ಟಾಗ, ಗೋವಿನ ಗೊರಸಿನಿಂದ ಉಂಟಾದ ನೆಗ್ಗಿನಲ್ಲಿ ನೀರು ತುಂಬಿದಾಗ ಅವುಗಳಲ್ಲಿ ಸೂರ್ಯನು ಪ್ರತಿಫಲಿತನಾಗುತ್ತಾನೆ.
- ಆದರೆ ಅವು ಬಿಂಬಗಳಷ್ಟೇ, ವಾಸ್ತವದಲ್ಲಿ ಇರುವ ಸೂರ್ಯನು ಒಬ್ಬನೇ.
- ಅಂತೆಯೇ, ಜೀವಿಗಳ ಆಂತರ್ಯದಲ್ಲಿರುವ ಆತ್ಮಸ್ವರೂಪವು ಹಲವು ಬಗೆಯಲ್ಲಿ ತೋರಿದರೂ, ಅವುಗಳಲ್ಲಿನ ಪರಮಾತ್ಮತತ್ತ್ವವು ಒಂದೇ ಎಂಬುದು ಸತ್ಯ
೮. ಪಾರಿವಾಳ
ಯಾರ ಬಗೆಗಾದರೂ ಅತಿಯಾದ ವ್ಯಾಮೋಹ, ಕಾಳಜಿಯನ್ನು ಇರಿಸಿಕೊಂಡಾಗ ಆಗುವ ಪರಿಣಾಮವನ್ನು ಅವಧೂತನು ಪಾರಿವಾಳದ ಕಥೆಯ ಮೂಲಕ ನಿರೂಪಿಸುತ್ತಾನೆ.
ನಾತಿಸ್ನೇಹಃ ಪ್ರಸಂಗೋ ವಾ ಕರ್ತವ್ಯಃ ಕ್ವಾಪಿ ಕೇನಚಿತ್ ।
ಕುರ್ವನ್ ವಿಂದೇತ ಸಂತಾಪಂ ಕಪೋತ ಇವ ದೀನಧೀಃ ॥ ಶ್ರೀ.ಭಾ. ೧೧.೭.೫೨ ॥
ಒಮ್ಮೆ ಅರಣ್ಯದಲ್ಲಿ ಪಾರಿವಾಳದ ಜೋಡಿಯೊಂದು ವೃಕ್ಷವೊಂದರ ಮೇಲೆ ವಾಸವಿತ್ತು. ಒಂದನ್ನೊಂದು ಅನ್ಯೋನ್ಯವಾಗಿ ಕೂಡಿ ಎಲ್ಲದರಲ್ಲೂ ಸಮಪಾಲು ವಹಿಸಿತ್ತು. ಹೆಣ್ಣು ಪಾರಿವಾಳದ ಬಯಕೆಗಳನ್ನು ಈಡೇರಿಸಲು ಗಂಡು ಹೆಣಗಲು ಸಿದ್ಧವಿತ್ತು. ಹೀಗಿ ಸಂತೋಷದ ಜೀವನ ಸಾಗಿತ್ತು.
ಕಾಲಾಂತರದಲ್ಲಿ ಹೆಣ್ಣು ಹಕ್ಕಿಯು ಗೂಡಿನಲ್ಲಿ ಮೊಟ್ಟೆ ಇಟ್ಟು ಮರಿಗಳಾದವು. ದಂಪತಿಯ ಸಂತಸಕ್ಕೆ ಪಾರವೇ ಇಲ್ಲದಾಯಿತು.
ಒಮ್ಮೆ ತಂದೆ-ತಾಯಿ ಹಕ್ಕಿಗಳು ಆಹಾರಕ್ಕೆಂದು ತೆರಳಿದ್ದಾಗ ಬೇಡನೊಬ್ಬ ಮರಿಗಳನ್ನು ಸುಲಭವಾಗಿ ತನ್ನ ಬಲೆಯಲ್ಲಿ ಸೆರೆ ಹಿಡಿದನು.
ಮರಳಿಬಂದ ಪಾರಿವಾಳದ ಜೋಡಿ ಬಲೆಯಲ್ಲಿ ಸಿಕ್ಕ ಮರಿಗಳನ್ನು ಕಂಡು ವ್ಯಥೆಯಿಂದ ಕಂಗಾಲಯಿತು. ತಾಯಿ ಹಕ್ಕಿ ತಾನೂ ಬಲೆಯೊಳಗೆ ಸಿಲುಕಿ ಸೆರೆಯಾಯಿತು.
ಗಂಡು ಹಕ್ಕಿಯು ದುಃಖದಿಂದ ಪ್ರಲಾಪಿಸುತ್ತಾ ತನ್ನ ಪ್ರಿಯ ಪತ್ನಿ, ಸಂತಾನದ ದುರವಸ್ಥೆಯನ್ನು ಕಂಡು ತನ್ನ ಭಾಗ್ಯವನ್ನು ಹಳಿಯತೊಡಗಿತು. ತನ್ನ ಬದುಕಿಗೆ ಇನ್ನೇನು ಅರ್ಥವೆಂದು ನೆನೆದು ತಾನೂ ಬಲೆಯೊಳಗೆ ಸಿಲುಕಲು ಮುಂದಾಯಿತು. ಬೇಡನಾದರೋ ತನ್ನ ಸೌಭಾಗ್ಯದಿಂದ ಅತ್ಯಂತ ಸಂತುಷ್ಟನಾಗಿ ಮನೆಗೆ ತೆರಳಿದನು.
ಲೌಕಿಕ ಭೋಗಗಳಿಂದ ಅತಿಯಾಗಿ ಮೋಹಗೊಳ್ಳುವುದರ ಪರಿಣಾಮವನ್ನು ಈ ಕಥೆ ನಿರೂಪಿಸುತ್ತದೆ. ಮಾನವನು ಬಂಧನಗಳಲ್ಲಿ ಸಿಲುಕಿಹೋದರೆ ಅವನದ್ದೂ ಪಾರಿವಾಳ ದಂಪತಿಯ ದುಃಸ್ಥಿತಿಯೇ ಆಗುತ್ತದೆ.
ಯಃ ಪ್ರಾಪ್ಯ ಮಾನುಷಂ ಲೋಕಂ ಮುಕ್ತಿದ್ವಾರಮಪಾವೃತಮ್ ।
ಗೃಹೇಷು ಖಗವತ್ಸಕ್ತಸ್ತಮಾರೂಢಚ್ಯುತಂವಿದುಃ ॥ ಶ್ರೀ. ಭಾ. ೧೧.೭.೭೪ ॥
ಮನುಷ್ಯಜನ್ಮವೇ ಮೋಕ್ಷದ ಹಾದಿ ಎಂಬುದು ಪುರಾಣ – ಶಾಸ್ತ್ರಾದಿಗಳಲ್ಲಿ ಮತ್ತೆ ಮತ್ತೆ ಕಾಣಸಿಗುವ ವಿಷಯವಸ್ತು. ಮೋಕ್ಷಸಾಧನೆಯ ಪರಮ ಧ್ಯೇಯದ ಸಿದ್ಧಿಗಾಗಿ ಮಾನವ ತನ್ನನ್ನು ತಾನು ಸಮರ್ಪಿಸಿಕೊಳ್ಳಬೇಕು. ಸಂಸಾರ ಕ್ಲೇಶಗಳೊಳಗೆ ಬಂಧಿತನಾದರೆ, ಔನ್ನತ್ಯದ ಪರಾಕಾಷ್ಠೆಯಿಂದ ಜಾರಿ ಅಧೋಗತಿ ಹೊಂದುವಂತಾದೀತು.
ಸಂಕ್ಷೇಪ
ಈ ಲೇಖನದಲ್ಲಿ ಅವಧೂತ ಗೀತೆಯ ಪ್ರಮೇಯ ಮತ್ತು ಭಗವಾನ್ ದತ್ತಾತ್ರೇಯನು ಅನುಗ್ರಹಿಸಿದ ಮೊದಲ ಎಂಟು ಗುರು ಸ್ವರೂಪಿಗಳಿಂದ ವಿದಿತವಾದ ಬೋಧನೆಗಳನ್ನು ಕಂಡಿರುತ್ತೇವೆ. ಮುಂದಿನ ಲೇಖನದಲ್ಲಿ ಶ್ರೀಮದ್ಭಾಗವತ ಮಹಪುರಾಣದ ೧೧ನೇ ಸ್ಕಂಧದ ೮ನೇ ಅಧ್ಯಾಯದಲ್ಲಿ ವಿವರಿಸಿರುವ ಮುಂದಿನ ೯ ಗುರುಗಳ ಶಿಕ್ಷಣವನ್ನು ಗಮನಿಸೋಣ.
ಗ್ರಂಥಸೂಚಿ –
- Śrīmad Bhāgavata Mahāpurāṇa – Gita Press
- Śrīmad Bhāgavatam – Kamala Subramaniam
- Eight Upanishads with commentary of Sankaracharya – Swami Gambhirananda
- The Principal Upanishads with Sri Madhvacharya Bhasya – Prof. K.T. Pandurangi
- The Principal Upanishads – Prof. S. Radhakrishnan
- Understanding Isavasya Upanishad – Prof. Harish C. Gaur
- Isavasya Upanishad shlokas – https://sanskritdocuments.org/doc_upanishhat/iisha.html
- Śrīmad Bhāgavatam shlokas & translations – https://vedabase.io/en/
- Śrīmad Bhagavadgītā shlokas & translations – https://www.holy-bhagavad-gita.org/
(This is a Kannada translation of an English article by Ganesh Vijayan)
Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.