close logo

ಹನುಮಂತ – ರಾವಣರ ಮುಖಾಮುಖಿ – ಸುಂದರ ಕಾಂಡದ ಪ್ರಸಂಗ

ಆದಿಕವಿ ವಾಲ್ಮೀಕಿ ವಿರಚಿತ ರಾಮಾಯಣವು ಸನಾತನ ಧರ್ಮದ ಅತ್ಯಂತ ಪವಿತ್ರ, ಸಮ್ಮಾನಿತ ಗ್ರಂಥಗಳಲ್ಲೊಂದು. ಶ್ರೀರಾಮನ ಜೀವನಗಾಥೆಯಾದ ಈ ಮಹಾಕಾವ್ಯಕ್ಕೆ ಜನರ ಮನೆ – ಮನಗಳಲ್ಲಿ ವಿಶೇಷ ಸ್ಥಾನವಿದೆ. ೭ ಕಾಂಡಗಳಷ್ಟು ವಿಸ್ತಾರವಾದ ಇದರ ಹರಹಿನಲ್ಲಿ, ಹುಟ್ಟಿನಿಂದ ಮೊದಲುಗೊಂಡು ಮೂಲ ಸ್ವರೂಪದದೊಂದಿಗೆ ಐಕ್ಯವಾಗುವವರೆಗೆ, ಶ್ರೀರಾಮನ ಜೀವನದ ಸೂಕ್ಷ್ಮ ವಿವರಗಳನ್ನು ಸಾರವತ್ತಾಗಿ ನಿರೂಪಿಸಲಾಗಿದೆ .

ನಮ್ಮ ಶ್ರೀಮಂತ ಪರಂಪರೆಯಲ್ಲಿನ ಮಹಾಪುರುಷರಲ್ಲಿ ಅಧ್ಯಯನಕ್ಕೆ  ಅತ್ಯಂತ ಯೋಗ್ಯವೆನಿಸಿರುವ, ಬಹುಪೂಜನೀಯವೆನಿಸಿರುವ ಪಾತ್ರವೆಂದರೆ ಶ್ರೀರಾಮನದ್ದೇ.  ಈ ಮಹಾಕಾವ್ಯದ ಕಥಾನಾಯಕ ರಾಮನೇ ಆದರೂ ಅವನೊಂದಿಗೆ ಒಡನಾಡಿದ ಹಲವಾರು ಪಾತ್ರಗಳ ಪರಸ್ಪರ ಸಂವಹನ-ಸಂವಾದಗಳು ಕೂಡ ನಮ್ಮಲ್ಲಿ ಹೆಚ್ಚು ಆಸಕ್ತಿ ಹುಟ್ಟಿಸುತ್ತವೆ.

ತನ್ನವರೆಲ್ಲರ ಜೊತೆಗೆ ಶ್ರೀರಾಮನು ಹೊಂದಿದ್ದ ವಿಶೇಷ ಬಾಂಧವ್ಯದ ಭಾವಸೂಕ್ಷ್ಮಗಳನ್ನು ರಾಮಾಯಣದಲ್ಲಿ ಸವಿಸ್ತಾರವಾಗಿ ವರ್ಣಿಸಲಾಗಿದೆ. ಮೇಲ್ನೋಟಕ್ಕೆ ಕಾಣಸಿಗುವ ಸಂಬಂಧಗಳ ಹೊರತಾಗಿ, ತೆರೆಮರೆಯಲ್ಲಿದ್ದೂ ಕುತೂಹಲ ಕೆರಳಿಸಬಲ್ಲ ಸಂಬಂಧಗಳೆಡೆಗೆ ಜಿಜ್ಞಾಸುವಿನ ಮನಸ್ಸು ಸಹಜವಾಗಿ ಆಕರ್ಷಿತವಾಗುತ್ತದೆ.

ಸುಂದರಕಾಂಡವು ರಾಮಾಯಣದ ಇತರ ಕಾಂಡಗಳಿಗೆ ಹೋಲಿಸದರೆ, ಅತ್ಯಂತ ದಿವ್ಯ, ಪಠನಯೋಗ್ಯ, ಸುದೀರ್ಘವಾದದ್ದೆನಿಸಿದೆ.  ಹನುಮಂತನು ಲಂಕೆಗೆ ಹಾರಿ, ಸೀತೆಯನ್ನು ಭೇಟಿಯಾಗಿ, ಲಂಕೆಯನ್ನು ದಹಿಸಿ,  ರಾಮನಲ್ಲಿಗೆ ಮರಳಿ, ಸೀತೆಯ ಸಂದೇಶವನ್ನು ನಿವೇದಿಸಿದ ಕಥಾಭಾಗವನ್ನು ಒಳಗೊಂಡಿರುವ ಕಾಂಡವಿದು. ತ್ರಿಜಟೆಯ ಸ್ವಪ್ನದಂತಹ ಇನ್ನಿತರ ಕೌತುಕಮಯ ಸಂದರ್ಭಗಳ ವಿವರವೂ ಇದರಲ್ಲಿದೆ.

ಇಲ್ಲಿನ ಪ್ರಸಂಗಗಳಲ್ಲಿ ಬಹಳ ವೈಶಿಷ್ಟ್ಯಪೂರ್ಣವಾದ, ಚೇತೋಹಾರಿ ಎನಿಸುವ ಭಾಗವೆಂದರೆ ಹನುಮಂತ-ರಾವಣರು ಮೊದಲ ಬಾರಿಗೆ ಮುಖಾಮುಖಿಯಾದದ್ದು.

ಈ ಭೇಟಿಗೆ ಮುನ್ನ ಹನುಮಂತನು ಲಂಕಾನಗರಿಯ ವೈಭವೋಪೇತ ಹೆದ್ದಾರಿ, ಕಿರುದಾರಿಗಳಲ್ಲೆಲ್ಲಾ ಸಂಚರಿಸುತ್ತಾ ಆ ಸುಂದರ ದ್ವೀಪದ ಭವ್ಯತೆಯನ್ನು ಸವಿದಿರುತ್ತಾನೆ.

ಲಂಕೆಯಲ್ಲಿ ಹನುಮಂತನ ಆಟಾಟೋಪ, ತದನಂತರದ ರಾವಣನ ಭೇಟಿಯನ್ನು ಮೊದಲುಗೊಂಡು  ಸುಂದರ ಕಾಂಡದ ಬಹುಮುಖ್ಯವಾದ, ಆದರೆ ಅಷ್ಟೇನೂ  ಪ್ರಸಿದ್ಧವಲ್ಲದ, ಕೆಲವು ಸ್ವಾರಸ್ಯಕರ ಉಪಾಖ್ಯಾನಗಳನ್ನು ಪ್ರಚುರಪಡಿಸುವುದು ಈ ಲೇಖನದ ಉದ್ದೇಶ.  ಕಥೆಯ ಒಳಹೊಕ್ಕು ನೋಡಿದಾಗ, ಸಾಮಾನ್ಯಾಂಶಗಳನ್ನು ಮೀರಿ, ನಮ್ಮ ನಿತ್ಯಜೀವನಕ್ಕೆ ಪ್ರಸ್ತುತವೆನಿಸುವ ಹಲವಾರು ಅಮೂಲ್ಯ ನೀತಿಪಾಠಗಳು  ಹುದುಗಿರುವುದನ್ನು ಕಾಣುತ್ತೇವೆ.

ಆತ್ಮ, ಶರೀರ, ಬುದ್ಧಿ, ಮನಸ್ಸುಗಳ ಪರಸ್ಪರ ಸಂಬಂಧದ ಕಾಲಾತೀತ ಜ್ಞಾನದ ಸ್ವರೂಪವನ್ನು ಕಠೋಪನಿಷತ್ತು ಈ ರೀತಿಯಲ್ಲಿ ಸಾರುತ್ತದೆ –

ಆತ್ಮಾನಂ ರಥಿನಂ ವಿದ್ಧಿ ಶರೀರಂ ರಥಮೇವ ತು

ಬುದ್ಧಿಂ ತು ಸಾರಥಿಂ ವಿದ್ಧಿ ಮನಃ ಪ್ರಗ್ರಹಮೇವ

ಆತ್ಮನನ್ನು ರಥಿಯಾಗಿ, ಶರೀರವನ್ನು ರಥವಾಗಿ , ಬುದ್ಧಿಯನ್ನು ಸಾರಥಿಯಾಗಿ, ಮನಸ್ಸನ್ನು ಲಗಾಮು ಎಂಬುದಾಗಿ ತಿಳಿ.

ಹನುಮಂತನು, ಬುದ್ಧಿ ಹಾಗೂ ಶಾರೀರಿಕ ಸಂಪತ್ತನ್ನು ಸಮರ್ಪಕವಾಗಿ ಬಳಸುವುದರಿಂದ ದೊರೆಯುವ  ಪ್ರತಿಫಲಕ್ಕೆ ಅಪ್ರತಿಮವೂ ಆಪ್ಯಾಯಮಾನವೂ ಆದ ನಿದರ್ಶನವಾಗಿದ್ದಾನೆ.

ಸೀತೆಯನ್ನು ಭೇಟಿಯಾದ ನಂತರ, ಹಿನ್ನೋಟದಲ್ಲಿ,  ಹನುಮಂತನು ಹೀಗೆ ಆತ್ಮವಿಮರ್ಶೆ ನಡೆಸುತ್ತಾನೆ.

 ಲ್ಪಶೇಷಮಿದಂ ಕಾರ್ಯಂ ದೃಷ್ಟೇಯಮಸಿತೇಕ್ಷಣಾ

ತ್ರೀನುಪಾಯಾನತಿಕ್ರಮ್ಯ ಚತುರ್ಥ ಇಹ ದೃಶ್ಯತೇ .೪೧.

 ಸೀತಾದೇವಿಯನ್ನು ನೋಡುವ ಒಂದು ಕೆಲಸವು ಮುಗಿಯಿತು. ಇನ್ನು ಮಾಡಬೇಕಾದ ಕೆಲಸವು ಸ್ವಲ್ಪ ಉಳಿದಿದೆ. ಅದು ರಾವಣನ ಬಲಾಬಲಗಳನ್ನು ಪರೀಕ್ಷಿಸುವುದು. ಸಾಮ, ದಾನ, ಭೇದವೆಂಬ ಮೊದಲ ಮೂರು ಉಪಾಯಗಳನ್ನು ಬದಿಗಿಟ್ಟು ನಾಲ್ಕನೆಯ ದಂಡೋಪಾಯವನ್ನು ಆಶ್ರಯಿಸುವುದು ಯುಕ್ತವೆನಿಸುತ್ತದೆ.

ಸೀತೆಯನ್ನು ಭೇಟಿಯಾಗಿ, ಶ್ರೀರಾಮನ ಸಂದೇಶವನ್ನು ತಲುಪಿಸಿ , ಗುರುತಿನ ವಸ್ತುವನ್ನು ಕೊಂಡೊಯ್ಯುವುದು ಹನುಮಂತನ ನಿಯೋಜಿತ ಕೆಲಸವಾಗಿತ್ತು. ರಾವಣನ ಲಂಕೆಯ  ವೈಭವಾಡಂಬರಗಳು ಹನುಮಂತನನ್ನು ಗಾಢವಾಗಿ ಆಕರ್ಷಿಸಿ, ಬಹುಶಃ ಮಂತ್ರಮುಗ್ಧನನ್ನಾಗಿ ಮಾಡಿದ್ದವು. ತನ್ನ ಉದ್ದೇಶಸಾಧನೆಯ ನಂತರ ನೇರವಾಗಿ ಸಮುದ್ರವನ್ನು ದಾಟಿ ತನಗಾಗಿ ಕಾಯುತ್ತಿದ್ದ ತನ್ನ ಮಿತ್ರರನ್ನು ಕೂಡಿಕೊಳ್ಳಬಹುದಿತ್ತು. ಆದರೆ ಹನುಮಂತ ಬೇರೆಯದೇ ಯೋಜನೆ ಹೂಡಿದ್ದನು.

ಈ ಹಠಾತ್ ಮನಃಪರಿವರ್ತನೆಗೆ ಕಾರಣವೇನಿರಬಹುದು ಎಂಬ ಕುತೂಹಲ ಸಹಜವೇ.  ಈ ಸಾಹಸವನ್ನು ತಾನು ಕೈಗೊಂಡದ್ದೇಕೆ ಎಂಬುದನ್ನು ಸ್ಪಷ್ಟವಾಗಿ ಸ್ವತಃ ಹನುಮಂತನೇ ಹೀಗೆ ವಿವರಿಸಿದ್ದಾನೆ –

ಕಾರ್ಯೇ ಕರ್ಮಣಿ ನಿರ್ದಿಷ್ಟೇ ಯೋ ಬಹೂನ್ಯಪಿ ಸಾಧಯೇತ್

ಪೂರ್ವಕಾರ್ಯಾವಿರೋಧೇನ ಕಾರ್ಯಂ ಕರ್ತುಮರ್ಹತಿ।। .೪೧.

 ಒಪ್ಪಿಸಿದ ಕಾರ್ಯವನ್ನು ಸಾಧಿಸಿ, ಅದಕ್ಕೆ ಭಂಗವಾಗದಂತೆ ಅದಕ್ಕೆ ಪೂರಕವಾಗಿ ಮತ್ತೊಂದು ಕಾರ್ಯವನ್ನು ಸಾಧಿಸುವವನೇ ಕಾರ್ಯದಕ್ಷನು.

ತೀಕ್ಷ್ಣಮತಿ ಹನುಮ ಇಂತಹ ಅಪ್ರತಿಮ ಜ್ಞಾನವನ್ನು ಚುರುಕಾದ ಮಾತಿನಲ್ಲಿ ಅನೂಹ್ಯವಾಗಿ ತಿಳಿಸಿದ್ದಾನೆ! ಸಾಧಿಸಬೇಕಾದ ಮೂಲ ಉದ್ದೇಶವನ್ನು ಸಾಧಿಸಿಯಾದ ನಂತರ ಇನ್ನಿತರ ಪೂರಕ ಕೆಲಸಗಳತ್ತ ಗಮನ ಹರಿಸುವುದು ಸಮಂಜಸವೇ. ತುಲನಾತ್ಮಕ ದೃಷ್ಟಿಯಲ್ಲಿ ನೋಡಿದಾಗ, ನಮ್ಮ ಇಂದಿನ ಔದ್ಯೋಗಿಕ ಕ್ಷೇತ್ರಗಳಲ್ಲಿಯೂ ಇದರ ಪ್ರಸ್ತುತತೆ ಹಾಗು ಮಹತ್ವವಿರುವುದು ಸ್ಪಷ್ಟವಾಗುತ್ತದೆ. ಇದರ ಪರಿಚಯ ಈ ಕ್ಷೇತ್ರದಲ್ಲಿನ ಹಲವರಿಗೆ ಇದ್ದೇ ಇರುತ್ತದೆ.

ಮುಂದೆ, ಹನುಮಂತನು ತನ್ನ ಉದ್ದೇಶಿತ ಕಾರ್ಯಸಾಧನೆಯ ಬಗೆಯನ್ನು ವಿವರಿಸಲು ಮುಂದಾಗುತ್ತಾನೆ.  ಅಲ್ಪವೆಂದು  ಪರಿಗಣಿಸಲಾಗುವ  ಕೆಲಸವನ್ನು ಕಡೆಗಣಿಸಬೇಕೇ? ಎಂಬ ಪ್ರಶ್ನೆಗೆ ಉತ್ತರವಾಗಿ –

ಹ್ಯೇಕಃ ಸಾಧಕೋ ಹೇತುಃ ಸ್ವಲ್ಪಸ್ಯಾಪೀಹ ಕರ್ಮಣಃ

ಯೋ ಹ್ಯರ್ಥಂ ಬಹುಧಾ ವೇದ ಸಮರ್ಥೋರ್ಥಸಾಧನೇ .೪೧.

 ಸಣ್ಣಪುಟ್ಟ ಕಾರ್ಯಗಳ ಸಿದ್ಧಿಗೆ ಒಂದೇ ಉಪಾಯವು ಸಾಕಾಗುವುದಿಲ್ಲ. ತನ್ನ ಕಾರ್ಯಸಿದ್ಧಿಗಾಗಿ ವಿವಿಧೋಪಾಯಗಳನ್ನು ತಿಳಿದಿರುವವನೇ ಕಾರ್ಯಸಾಧನೆಗೆ ಸಮರ್ಥನು.

ಸೂಕ್ಷ್ಮ ವಿವರಗಳಿಗೂ ವಿಶೇಷ ಗಮನ ನೀಡುವ ಮೂಲಕ ಯಾವುದೇ ಕುಂದಿಲ್ಲದಂತೆ ಕೈಗೆತ್ತಿಕೊಂಡ ಕೆಲಸವನ್ನು ಹನುಮಂತ ಸಮರ್ಪಕವಾಗಿ ನಿರ್ವಹಿಸುತ್ತಾನೆ. ಬದುಕಿನ ಯಾವುದೇ ಸವಾಲನ್ನು ಸಮರ್ಥವಾಗಿ ಎದುರಿಸವಲ್ಲಿ ನಮ್ಮೆಲ್ಲರಿಗೆ ಶ್ರೇಷ್ಠ ಮಾದರಿಯಾಗಿ ನಿಲ್ಲುತ್ತಾನೆ.

ಇದೇ ಚಿಂತನೆಯಲ್ಲಿ ಹನುಮಂತ ತನ್ನ ಮೂಲ ಉದ್ದೇಶಕ್ಕೆ  ಪೂರಕವಾದ ಕಾರ್ಯವನ್ನು ಮಾಡಲನುವಾಗುತ್ತಾನೆ. ಈ ಪೂರಕವಾದ ಕೆಲಸ ಯಾವುದು, ಅದನ್ನು ಮಾಡಲು ಹೊರಟಿರುವುದಾದರೂ ಏಕೆ ? ಪರಮ ರಾಮಭಕ್ತನ ಇಂಗಿತ ಏನೆಂಬುದಕ್ಕೆ ಉತ್ತರ ಇಲ್ಲಿದೆ   –

ಇಹೈವ ತಾವತ್ ಕೃತ ನಿಶ್ಚಯೋ ಹ್ಯಹಮ್

ಯದಿ ವ್ರಜೇಯಂ ಪ್ಲವಗೇಶ್ವರಾಲಯಮ್

ಪರಾತ್ಮ ಸಂಮರ್ದವಿಶೇಷ ತತ್ತ್ವವಿತ್

ತತಃ ಕೃತಂ ಸ್ಯಾನ್ಮಮ ಭರ್ತೃ ಶಾಸನಮ್  ।। .೪೧.

ನಾನು ಇಲ್ಲಿಯೇ ಶತ್ರುಬಲವನ್ನು, ನಮ್ಮವರ ಬಲವನ್ನು, ಯುದ್ಧನೈಪುಣ್ಯವನ್ನು, ಅದರಲ್ಲಿನ ತಾರತಮ್ಯವನ್ನು ತಿಳಿದುಕೊಳ್ಳುವುದು ಯುಕ್ತವು. ಬಳಿಕ ಕೃತನಿಶ್ಚಯನಾದ ಸುಗ್ರೀವನ ಬಳಿಗೆ ಹೋದರೆ ಆಗ ಒಡೆಯನ ಆಜ್ಞೆಯನ್ನು ಪೂರ್ಣಗೊಳಿಸಿದಂತಾಗುತ್ತದೆ.

ಈ ಸಂದರ್ಭದ ಮುಖಾಂತರ ಹನುಮಂತನು  ತೀಕ್ಷ್ಣ ಸಮಯಪ್ರಜ್ಞೆಯ ಪರಮೋಚ್ಚ ಉದಾಹರಣೆಯಾಗಿ ಮೆರೆದಿದ್ದಾನೆ. ಶತ್ರುನೆಲೆಯಲ್ಲಿದ್ದುಕೊಂಡು, ಎದುರಾಗಲಿರುವ ಸಮರದ ಹಿನ್ನೆಲೆಯಲ್ಲಿ ಶತ್ರುಸಾಮರ್ಥ್ಯದ ಪೂರ್ವೇಕ್ಷಣೆಗೆ ಮುಂದಾಗಿದ್ದಾನೆ. ಯುದ್ಧದ ತಯಾರಿಗಾಗಿ ಅಗತ್ಯವಿರುವ ಅತಿಮುಖ್ಯ ಮಾಹಿತಿಯನ್ನು ಒದಗಿಸಬಲ್ಲ ಕಾರ್ಯವನ್ನು ಹನುಮಂತನು ಕೈಗೊಂಡಿದ್ದು , ಈ ಒಂದು ಪ್ರಸಂಗ ಸುಗ್ರೀವನ ಆಪ್ತಬಂಟನ ಹರಿತವಾದ ಧೀಶಕ್ತಿಗೆ ಸಾಕ್ಷಿಯಾಗಿದೆ.

ಅಂತಿಮವಾಗಿ, ಹನುಮಂತ ತನ್ನ ಧ್ಯೇಯವನ್ನು ಸ್ಪಷ್ಟಪಡಿಸುತ್ತಾನೆ, ಅದುವೇ ಪರಾಕ್ರಮಿ ರಾವಣನ ಭೇಟಿ.

ತತಃ ಸಮಾಸಾದ್ಯ ರಣೇ ದಶಾನನಂ

ಸಮಂತ್ರಿವರ್ಗಂ ಸಬಲಪ್ರಯಾಯಿನಮ್

ಹೃದಿಸ್ಥಿತಂ ತಸ್ಯ ಮತಂ ಬಲಂ ವೈ

ಸುಖೇನ ಮತ್ತ್ವಾಹಮಿತಃ ಪುನರ್ವ್ರಜೇ ।। .೪೧.

 ಆದರೆ ರಾವಣನನ್ನು, ಅವನ ಮಂತ್ರಿಗಳನ್ನು, ಸೈನ್ಯವನ್ನು, ಅನುಚರರನ್ನು ಯುದ್ಧದಲ್ಲಿ ಇದಿರಿಸಿ, ಅವರ ಶಕ್ತಿಸಾಮರ್ಥ್ಯವನ್ನೂ ಮನಸ್ಸಿನ ಅಭಿಪ್ರಾಯವನ್ನೂ ಚೆನ್ನಾಗಿ ತಿಳಿದುಕೊಂಡು ನಾನು ಇಲ್ಲಿಂದ ಹೋಗುವೆನು.

ತನ್ನ ಧ್ಯೇಯ ಸಾಧಿಸಿದ ನಂತರ ಲಂಕೆಯಿಂದ ತೆರಳುವ ಮುನ್ನ ಧೀರ ರಾವಣನನ್ನು ಸಂಧಿಸಿ ಅವನ ಶೌರ್ಯ, ಬಲಾಬಲಗಳನ್ನು ಪರೀಕ್ಷಿಸಬೇಕೆಂದು ಬಯಸುತ್ತಾನೆ.

ರಾವಣಸೇನೆಯ ಗಮನಸೆಳಯಲು ಮತಿವಂತನಾದ ಹನುಮಂತನು ಉಪಾಯವೊಂದನ್ನು ಹೂಡುತ್ತಾನೆ. ಕಲ್ಪನಾಲೋಕದಂತೆ ತೋರುವ, ಇಂದ್ರನ ನಂದನವಂದಂತೆ ಕಂಗೊಳಿಸುವ ಉದ್ಯಾನವನ್ನು ಸಂಪೂರ್ಣವಾಗಿ ವಿನಾಶಗೊಳಿಸಲು ನಿರ್ಧರಿಸುತ್ತಾನೆ.

ವಿಧ್ವಂಸದ ಸುದ್ದಿ ಬಹುಬೇಗ ರಾವಣನನ್ನು ತಲುಪುತ್ತದೆ. ದುಷ್ಕೃತ್ಯವೆಸಗಿದ ವಾನರನನ್ನು ಸದೆಬಡಿಯಲು ಒಬ್ಬರ ಹಿಂದೊಬ್ಬರು ಅಸುರನಾಯಕರನ್ನು ಕಳುಹಿಸಲಾಗುತ್ತದೆ. ದುರದೃಷ್ಟವಶಾತ್ ಹನುಮಂತನಿಂದ ಆ ದುರ್ದೈವಿಗಳ ವಧೆಯಾಗುತ್ತದೆ. ಆಶ್ಚರ್ಯಕರ ಸಂಗತಿಯೆಂದರೆ ಇಡೀ ಉದ್ಯಾನವೇ ಸಂಪೂರ್ಣವಾಗಿ ನಾಶವಾದರೂ ಹನುಮಂತನೊಂದಿಗೆ ಸಂಭಾಷಿಸುತ್ತಿದ್ದ ಸೀತೆ ಇದ್ದ ಸ್ಥಳ ಮಾತ್ರ ಹಾನಿಯಾಗದೇ ಉಳಿಯುತ್ತದೆ.

ಹನುಮಂತ ತನ್ನ ಆಗಮನವನ್ನು ಅದ್ದೂರಿಯಾಗಿ ಹೀಗೆ ಸಾರುತ್ತಾನೆ –

ದಾಸೋಹಂ ಕೋಸಲೇಂದ್ರಸ್ಯ ರಾಮಸ್ಯಾಕ್ಲಿಷ್ಟಕರ್ಮಣಃ

ಹನುಮಾನ್ ಶತ್ರುಸೈನ್ಯಾನಾಂ ನಿಹಂತಾ ಮಾರುತಾತ್ಮಜಃ।।.೪೨.೩೪

 ಅಸಹಾಯಶೂರನೂ, ಕೋಸಲದೇಶಕ್ಕೆ ಪ್ರಭುವೂ ಆದ ಶ್ರೀರಾಮನಿಗೆ ನಾನು ದಾಸನು. ವಾಯುಪುತ್ರನಾದ ಹನುಮಂತನೆಂಬ ನಾಮಧೇಯವುಳ್ಳ ನಾನು ಶತ್ರು ಸೈನ್ಯವನ್ನೆಲ್ಲಾ ಪೂರ್ಣವಾಗಿ ಧ್ವಂಸಮಾಡುತ್ತೇನೆ.

ಲೋಕವಿಖ್ಯಾತ ಲಂಕಾಧಿಪತಿ ರಾವಣನಿಗೆ ಹೀಗೆ ಮೊದಲನೆಯ ಸವಾಲನ್ನೊಡ್ಡುತ್ತಾನೆ –

ರಾವಣ ಸಹಸ್ರಂ ಮೇ ಯುದ್ಧೇ ಪ್ರತಿಬಲಂ ಭವೇತ್

ಶಿಲಾಭಿಸ್ತು ಪ್ರಹರತಃ ಪಾದಪೈಶ್ಚ ಸಹಸ್ರಶಃ ।। .೪೨.೩೫

 ಬಂಡೆಗಳಿಂದಲೂ, ವೃಕ್ಷಗಳಿಂದಲೂ ಸಾವಿರಾರು ಬಾರಿ ಅನವರತ ಪ್ರಹರಿಸುವ ನನಗೆ ಯುದ್ಧದಲ್ಲಿ ಸಾವಿರಾರು ರಾವಣರೂ ಸಾಟಿಯಾಗಲಾರರು.

ಸ್ವಸಾಮರ್ಥ್ಯದ ಮೇಲಿರುವ ಆತನ ಅಮಿತ  ಭರವಸೆಗೆ ಸಾಕ್ಷಿಯಾಗಿರುವುದರ  ಜೊತೆಗೆ ಎದುರಾಳಿಯನ್ನು ಕೆರಳಿಸುವಂತೆ ಮಾಡುತ್ತದೆ  ಹನುಮಂತನ ಈ ನುಡಿ.

ಆ ದಿವ್ಯವಾದ ವನವೊಂದನ್ನೇ ಅಲ್ಲ,  ಅಸುರದೇವತೆಯ ಪವಿತ್ರ ಸನ್ನಿಧಿಯಾದ ‘ಉತ್ತಮ ಚೈತ್ಯ ಪ್ರಾಸಾದ’ವನ್ನೂ ಧ್ವಂಸಗೊಳಿಸುತ್ತಾನೆ ಹನುಮಂತ.

ರಾವಣಸೇನೆಯ ಯೋಧರನ್ನು ಒಬ್ಬರ ಹಿಂದೊಬ್ಬರಂತೆ ಸುಲಭವಾಗಿ ಬಗ್ಗಿಬಡಿಯುತ್ತಾನೆ. ಅವಮಾನಿತನಾದ ರಾವಣ ವಿರೂಪಾಕ್ಷ, ಯುಪಪಾಕ್ಷ, ದುರ್ಧರ, ಪ್ರಘಾಸ ಮತ್ತು ಭಾಸ್ಕರಣರೆಂಬ ತನ್ನ ಐದು ಉಗ್ರಸ್ವರೂಪಿ ಸೇನಾಧಿಪತಿಗಳನ್ನು ಕಳುಹಿಸುತ್ತಾನೆ.

ನಡೆಯುತ್ತಿರುವ ವಿಧ್ವಂಸಕ್ಕೆ ನಿಜವಾದ ಕಾರಣವೇನು ಎನ್ನುವುದನ್ನು ರಾವಣನು ತಿಳಿದುಕೊಳ್ಳಲು ಅಸಮರ್ಥನಾಗುತ್ತಾನೆ. ಇದೆಲ್ಲವೂ ಇಂದ್ರನ ತಂತ್ರಗಾರಿಕೆ ಎಂಬುದೇ ಆತನ ಊಹೆಯಾಗಿರುತ್ತದೆ.

ಭವೇದಿಂದ್ರೇಣ ವಾ ಸೃಷ್ಟಮಸ್ಮದರ್ಥಂ ತಪೋಬಲಾತ್

ನಾಗಯಕ್ಷಗಂಧರ್ವಾ ದೇವಾಸುರ ಮಹರ್ಷಯಹಃ .೪೬.   

ಯುಷ್ಮಾಭಿಃ ಸಹಿತೈಃ ಸರ್ವೈರ್ಮಯಾ ಸಹ ವಿನಿರ್ಜಿತಾಃ

ತೈರವಶ್ಯಂ ವಿಧಾತವ್ಯಂ ವ್ಯಲೀಕಂ ಕಿಂಚಿದೇವ ನಃ .೪೬.

 ದೇವೇಂದ್ರನೇನಾದರೂ ತನ್ನ ತಪೋಬಲದಿಂದ ಇಂತಹ ಮಾಹಾಪ್ರಾಣಿಯೊಂದನ್ನು ಸೃಷ್ಟಿಸಿ ನನ್ನ ವಿನಾಶಕ್ಕಾಗಿ ಕಳಿಸಿರಬಹುದೇ? ಹಿಂದೆ ನಾನು ನಿಮ್ಮೆಲ್ಲರ ಜೊತೆಗೂಡಿ ಅನೇಕಸಲ  ದೇವತೆಗಳೊಡನೆ ಯುದ್ಧಕ್ಕೆ ಹೋಗಿ , ಗಂಧರ್ವ, ನಾಗ, ಯಕ್ಷ, ದೇವಾಸುರ ಮಹರ್ಷಿಗಳು ಮುಂತಾದವರನ್ನು ಪರಾಜಯಗೊಳಿಸಿರುವೆನು.

ಎಲ್ಲ ಸೇನಾಧಿಪತಿಗಳನ್ನೂ ಘೋರಯುದ್ಧದಲ್ಲಿ ಕೊಂದ ಹನುಮಂತನೊಂದಿಗೆ ಸೆಣಸಲು ಪುತ್ರನಾದ ಅಕ್ಷನನ್ನು ಕಳುಹಿಸಬೇಕಾಗುತ್ತದೆ. ಆದರೆ ದುರದೃಷ್ಟವಶಾತ್ ಅಕ್ಷನ ವಧೆಯೂ ಹನುಮಂತನಿಂದ ನಡೆದುಹೋಗುತ್ತದೆ.

ಇಂತಹ ದುರ್ಭರ ಪರಾಜಯಗಳ ಬಳಿಕ ರಾವಣ ತನ್ನ ಮತ್ತೊಬ್ಬ ಪುತ್ರ ಇಂದ್ರಜಿತುವನ್ನು ರಣಾಂಗಣಕ್ಕೆ ತೆರಳುವಂತೆ ಆದೇಶಿಸುತ್ತಾನೆ. ಈರ್ವರು ಅಪ್ರತಿಮ ಸೇನಾನಿಗಳ ಹಣಾಹಣಿಯಲ್ಲಿ ಅವರಿಗೆ ಅವರೇ ಸಾಟಿ ಎಂಬಂತೆ ಯುದ್ಧ ನಡೆಯುತ್ತದೆ. ಹೀಗಿದ್ದೂ ಇಂದ್ರಜಿತುವಿನ ಯುದ್ಧಕೌಶಲ್ಯವೆಲ್ಲ ವಾಯುಪುತ್ರನ ಎದುರು ವಿಫಲವಾಗುತ್ತದೆ.

ಅಂತಿಮವಾಗಿ, ಇಂದ್ರಜಿತುವು ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿ ಹನುಮಂತನನ್ನು ಬಂಧಿಸುತ್ತಾನೆ

ತತಃ ಪೈತಾಮಹಂ ವೀರಃ ಸೋಸ್ತ್ರಮಸ್ತ್ರವಿದಾಂ ವರಃ

ಸಂದಧೇ ಸುಮಹಾತೇಜಾಸ್ತಂ ಹರಿಪ್ರವರಂ ಪ್ರತಿ .೪೮.೩೬

ಸ್ವಲ್ಪಹೊತ್ತು ವಿಚಾರ ಮಾಡಿದ ಬಳಿಕ  ಅಸ್ತ್ರವಿದರಲ್ಲಿ ಶ್ರೇಷ್ಠನಾದ ಮಹಾತೇಜಸ್ವಿಯಾದ, ವೀರನಾದ ಇಂದ್ರಜಿತುವು ಹನುಮಂತನನ್ನು ಅನುಲಕ್ಷಿಸಿ ಬ್ರಹ್ಮಾಸ್ತ್ರವನ್ನು ಅನುಸಂಧಾನ ಮಾಡಿದನು.

 ಸ್ವಯಂ ಬ್ರಹ್ಮನೇ ಅಧಿದೇವತೆಯಾಗಿರುವ ಅಸ್ತ್ರದ ಮೂಲಕ ತಾನು ನಿಶ್ಚಲನಾಗಿ ಸೆರೆಯಾಗಿದ್ದೇನೆ ಎಂಬುದನ್ನು ಮನಗಂಡ ಹನುಮಂತ ಬ್ರಹ್ಮನೇ ದಯಪಾಲಿಸಿದ್ದ ವರವನ್ನು ನೆನೆದು ಬ್ರಹ್ಮಾಸ್ತ್ರಕ್ಕೆ ಶರಣಾಗಲು ನಿರ್ಧರಿಸುತ್ತಾನೆ. ವಾಯು, ಬ್ರಹ್ಮ ಹಾಗು ಇಂದ್ರರು ತನ್ನನ್ನು ಸದಾ ಸಂರಕ್ಷಿಸುತ್ತಿರುವುದರಿಂದ ತನಗೆ ಯಾವುದೇ ತೊಂದರೆ ಉಂಟಾಗದು ಎಂಬ ಅಚಲ ವಿಶ್ವಾಸ ಹನುಮಂತನಿಗಿರುತ್ತದೆ. ಹೀಗಿದ್ದರೂ, ತನ್ನ ಕ್ಷಿಪ್ರಬುದ್ಧಿಯನ್ನು ಪ್ರಯೋಗಿಸಿ ಒದಗಿದ ಸನ್ನಿವೇಶವನ್ನು ಸದವಕಾಶವನ್ನಾಗಿ ಪರಿವರ್ತಿಸುತ್ತಾನೆ.

ಗ್ರಹಣೇ ಚಾಪಿ ರಕ್ಷೋಭಿರ್ಮಹನ್ಮೇ ಗುಣದರ್ಶನಮ್

ರಾಕ್ಷಸೇಂದ್ರೇಣ ಸಂವಾದಸ್ತಸ್ಮಾದ್ಗೃಹ್ಣಂತು ಮಾಮ್ ಪರೇ .೪೮.೪೪

 ನಾನು ರಾಕ್ಷಸರಿಂದ ಬಂಧಿಸಲ್ಪಟ್ಟರೂ ಇದರಲ್ಲಿ ಪ್ರಯೋಜನವೇ ಇದೆ. ರಾವಣನೊಂದಿಗೆ ಸಂವಾದ ನಡೆಸುವ ಅವಕಾಶ ಇರುವುದರಿಂದ, ಶತ್ರುಗಳು ನನ್ನನ್ನು ಬಂಧಿಸಲಿ.

 ಹನುಮಂತನ ನಿದರ್ಶನದಲ್ಲರುವಂತೆ,  ಸರಿಯಾದ ದೃಷ್ಟಿಕೋನದಿಂದ ಅವಲೋಕಿಸಿದಾಗ ನಮ್ಮ ಬದುಕಿನಲ್ಲಿ ಎದುರಾಗುವ ವಿಪತ್ತುಗಳಲ್ಲೂ ಸಹ ಸದವಕಾಶವೊಂದು ಇದ್ದೇ ಇರುವುದು ಕಾಣುತ್ತದೆ.

ಹನುಮಂತನನ್ನು ಸದೆಬಡಿದು, ಬಂಧಿಸಿ, ರಾವಣನ ಎದುರು ಅಸುರರು ಎಳೆದು ತರುತ್ತಾರೆ. ಅಗ ನಡೆಯುವ ರಾವಣ-ಹನುಮರ ಮುಖಾಮುಖಿಯು ಸ್ವಾರಸ್ಯಕರವೂ ಚಿಂತನಯೋಗ್ಯವೂ ಆಗಿದೆ.

ರಾವಣನನ್ನು ಕಂಡು ಅವನ ಶೋಭಾಯಮಾನ ವ್ಯಕ್ತಿತ್ವಕ್ಕೆ ಹನುಮಂತನು ಬೆರಗಾಗುತ್ತಾನೆ.

ರಾಕ್ಷಸಾಧಿಪತಿಂ ಚಾಪಿ ದದರ್ಶ ಕಪಿಸತ್ತಮಃ

ತೆಜೋಬಲಸಮಾಯುಕ್ತಂ ತಪಂತ ಇವ ಭಾಸ್ಕರಮ್ .೪೮.೫೯

 ತೇಜಬಲಸಂಪನ್ನನಾಗಿದ್ದ ಸೂರ್ಯನಂತೆ ವಿರಾಜಿಸುತ್ತಿದ್ದ ರಾಕ್ಷಸೇಶ್ವರನನ್ನು ಕಪಿಸತ್ತಮನು ನೋಡಿದನು.

ಕೆಂಡಾಮಂಡಲವಾಗಿದ್ದ ರಾವಣ ಈ ಉದ್ಧಟತನಕ್ಕೆ ಕಾರಣ ತಿಳಿಯಲು ಹನುಮಂತನನ್ನು ವಿಚಾರಣೆಗೆ ಒಳಪಡಿಸಬೇಕೆಂದು ತನ್ನ ಮಂತ್ರಿವರ್ಗಕ್ಕೆ ಆದೇಶ ನೀಡುತ್ತಾನೆ.  ಮುಂದಿನ ಎರಡು ಅಧ್ಯಾಯಗಳು, ರಾಮಾಯಣದ ಪ್ರಮುಖ ಪಾತ್ರಗಳೆರಡರ ಒಳಮನಸ್ಸುಗಳು ಪರಸ್ಪರ ಬೀರಿದ ಪರಿಣಾಮದ ಹಿನ್ನೆಲೆಯಲ್ಲಿ ಬಹಳ ಸ್ವಾರಸ್ಯಕರವೆನಿಸುತ್ತವೆ.

ಹನುಮಂತನು ಪ್ರಪ್ರಥಮವಾಗಿ ರಾವಣನನ್ನು ಕಂಡಾಗ, ಆತನ ಹತ್ತು ಮುಖಗಳು, ಕಡಗಗಳಿಂದ ಶೋಭಿಸುತ್ತಿದ್ದ

ಶ್ರೀಗಂಧಲೇಪಿತ ಇಪ್ಪತ್ತು ಕೈಗಳು, ತೇಜೋಮಯವಾಗಿದ್ದ ಆತನ ವರ್ಚಸ್ಸು – ಈ ಎಲ್ಲವನ್ನು ಕಂಡು ಚಕಿತನಾಗುತ್ತಾನೆ.

ಭ್ರಾಜಮಾನಂ ಮಹಾರ್ಹೇಣ ಕಾಂಚನೇನ ವಿರಾಜತಾ

ಮುಕ್ತಾಜಾಲಾವೃತೇನಾಥ ಮುಕುಟೇನ ಮಹಾದ್ಯುತಿಮ್ .೪೯.

 ಆಗ ರಾವಣನು ಅತಿಶಯವಾದ ಕಾಂತಿಯಿಂದ ಬೆಳಗುತ್ತಿದ್ದನು. ಮಹಾಮೌಲ್ಯದ ಸುವರ್ಣಮಯವಾದ ಮುತ್ತುಗಳ ಗೊಂಚಲಿನಿಂದ ಸಮಾವೃತವಾಗಿದ್ದ ಕಿರೀಟವನ್ನು ಧರಿಸಿದ್ದನು.

ಮಂತ್ರಿಗಣದಿಂದ ಸುತ್ತುವರೆದ ರಾವಣನು ಗರ್ವದಿಂದ ಮೆರೆಯುತ್ತಿದ್ದುದನ್ನು ಕಂಡು ಹನುಮಂತನು, ಮೇರುಪರ್ವತದ ಶಿಖರದಲ್ಲಿ ವಿಜೃಂಭಿಸುವ ಮೋಡಕ್ಕೆ ಆತನನ್ನು ಹೋಲಿಸುತ್ತಾನೆ.

ಅಪಶ್ಯತ್ದ್ರಾಕ್ಷಸಪತಿಂ ಹನೂಮಾನತಿತೇಜಸಮ್

ವಿಷ್ಠಿತಂ ಮೇರುಶಿಖರೇ ಸತೋಯಮಿವ ತೋಯದಮ್ .೪೯.೧೪

 ಮೇರುಪರ್ವತದ ಶಿಖರದ ಮೇಲೆ ದಟ್ಟವಾಗಿ ಕವಿದಿರುವ, ನೀರಿನಿಂದ ಪೂರ್ಣವಾದ ಕಾರ್ಮುಗಿಲಿನಂತೆ ಕಾಣುತ್ತಿದ್ದ ಮಹಾತೇಜಸ್ವಿಯಾದ  ರಾಕ್ಷಸೇಶ್ವರನನ್ನು ಹನುಮಂತನು ನೋಡಿದನು.

ತನ್ನನ್ನು ಕಂಡ ರಾವಣನ ಪ್ರತಿಕ್ರಿಯೆ ಹೇಗಿರಬಹುದೆಂಬ ಕುತೂಹಲದಲ್ಲಿ ತದೇಕಚಿತ್ತನಾಗಿ ಅವನನ್ನೇ ಗಮನಿಸುತ್ತಿದ್ದು ದಾನವೇಂದ್ರನ ಶಕ್ತಿಸಾಮರ್ಥ್ಯಗಳನ್ನ, ಆತನ ಉಜ್ವಲ ಶಾರೀರವನ್ನು ಬಹುವಾಗಿ ಮೆಚ್ಚಿಕೊಳ್ಳುತ್ತಾನೆ.

ರಾವಣನೇನಾದರೂ ಅಧರ್ಮದ ಹಾದಿಯಲ್ಲಿರದಿದ್ದರೆ ಇಂದ್ರನ ಸುರಲೋಕಕ್ಕೆ ಅಧಿನಾಯಕನಾಗಬಹುದಿತ್ತು ಎಂಬುದಾಗಿ ಹನುಮಂತ ಕಲ್ಪಿಸಿಕೊಳ್ಳುತ್ತಾನೆ

ಯದ್ಯಧರ್ಮೋ ಬಲವಾನ್ ಸ್ಯಾದಯಂ ರಾಕ್ಷಸೇಶ್ವರಃ

ಸ್ಯಾದಯಂ ಸುರಲೋಕಸ್ಯ ಸಶಕ್ರಸ್ಯಾಪಿ ರಕ್ಷಿತಾ .೪೯.೧೮

  ರಾಕ್ಷಸೇಶ್ವರನಲ್ಲಿ ಅಧರ್ಮಾಚರಣೆಯು ಪ್ರಬಲವಾಗಿರದಿದ್ದರೆ ಇವನು ನಿಜವಾಗಿ ದೇವೇಂದ್ರನಿಂದೊಡಗೂಡಿದ ಸುರಲೋಕವನ್ನು ರಕ್ಷಿಸುವ ಸಾಮರ್ಥ್ಯವನ್ನು ಹೊಂದಿರುವನು.

ಈ ಉಕ್ತಿಯು ರಾವಣನ ಬಗೆಗೆ ಹನುಮಂತನಲ್ಲಿ ಮೂಡಿದ ಗೌರವಭಾವನೆಯನ್ನು ಅರ್ಥಪೂರ್ಣವಾಗಿ ತಿಳಿಸುತ್ತದೆ –

ಅಯಂ ಹ್ಯುತ್ಸಹತೇ ಕ್ರುದ್ಧಃ ಕರ್ತುಮೇಕಾರ್ಣವಂ ಜಗತ್

 ಇವನು ಕ್ರುದ್ಧನಾದರೆ ಸಮಸ್ತ ಜಗತ್ತನ್ನು ಸಮುದ್ರದಲ್ಲಿ ಮುಳುಗಿಸಿ ಪ್ರಳಯವನ್ನು ಸೃಷ್ಟಿಸಲು ಸಮರ್ಥನಾಗಿದ್ದಾನಲ್ಲಾ!

ಕ್ರೋಧಾವಿಷ್ಟನಾದ ರಾವಣನಾದರೋ  ತನ್ನ ಬಂಧಿಯ  ವಿಚಾರಣೆ ನಡೆಸಲು ಮುಂದಾಗಿ ಆತ ವಾನರನೆಂಬುದನ್ನು ಮನಗಂಡು ಹಿಂದೆ ಶಿವಗಣನಾದ ನಂದಿಯು ತನಗಿತ್ತ ಶಾಪವನ್ನು ನೆನೆಯುತ್ತಾನೆ.

ತನ್ನೆದುರುಗಿರುವ ಕಪಿಯು ನಂದಿಯ ಶಾಪದ ಮೂರ್ತರೂಪವೋ, ಇಲ್ಲವೇ ವಾನರರೂಪದಲ್ಲಿ ಬಂದ ಮಹಾಬಲಿಯ ಪುತ್ರನಾದ ಬಾಣಾಸುರನೋ ಎಂದು ಅನುಮಾನಿಸುತ್ತಾನೆ.

ಕಿಮೇಷ ಭಗವಾನ್ನಂದೀ ಭವೇತ್ಸಾಕ್ಷಾದಿಹಾಗತಃ .೫೦.

ಯೇನ ಶಪ್ತೋಸ್ಮಿ ಕೈಲಾಸೇ ಮಯಾ ಸಂಚಾಲಿತೇ ಪುರಾ

ಸೋಯಂ ವಾನರಮೂರ್ತಿಃ ಸ್ಯಾದ್ಕಿಂಸ್ವಿದ್ಬಾಣೋ ಮಹಾಸುರಃ .೫೦.

 

ಹಿಂದೊಮ್ಮೆ ನಾನು ಕೈಲಾಸಪರ್ವತವನ್ನು ಕದಲಿಸಿದಾಗ ನಂದಿಯನ್ನು ಕಪಿಯೆಂದು ಹಾಸ್ಯ ಮಾಡಿದ್ದೆನು. ಆಗ ಕುಪಿತನಾದ ನಂದೀಶ್ವರನುಕಪಿಯಿಂದಲೇ ನೀನು ವಿನಾಶ ಹೊಂದುವೆಎಂದು ಶಾಪವನ್ನಿತ್ತಿದ್ದನು. ಈಗ ನಂದಿಯೇ ರೂಪದಲ್ಲಿ ಬಂದಿರುವನೇ? ಅಥವಾ ಬಾಣಾಸುರನೇನಾದರೂ ಕಪಿರೂಪವನ್ನು ಧರಿಸಿ ಬಂದಿರುವನೇ?

ಈ ವೀರಕಪಿಯು ಇಂದ್ರನೋ, ಕುಬೇರನ ಗುಪ್ತಚರನೋ, ಯಮನೋ ಅಥವಾ ವರುಣನೋ ಎಂಬುದಾಗಿ ರಾವಣನ ಚಾರರೂ ಚಕಿತರಾಗುತ್ತಾರೆ.

ಈ ಸಂದರ್ಭದಲ್ಲಿನ ಸ್ವಾರಸ್ಯವೆಂದರೆ, ತಾನು ಇತ್ತೀಚೆಗಷ್ಟೇ ಎಸಗಿರುವ ಪಾಪಕೃತ್ಯಗಳ ಫಲವಾಗಿ ಈ ದಿವ್ಯ ವಾನರಮೂರ್ತಿಯ ಆಗಮನವಾಗಿರಬಹುದೆಂಬುದನ್ನು ರಾವಣನು ಪರಿಗಣಿಸುವುದೇ ಇಲ್ಲ!

ಪ್ರತ್ಯುತ್ತರವಾಗಿ ಹನುಮಂತನು ತನ್ನ ಪರಿಚಯವನ್ನು ನೀಡಿ, ತಾನು ಮಾಡಿದ ಧ್ವಂಸಕಾರ್ಯದ ಏಕಮಾತ್ರ ಉದ್ದೇಶವೇ ಅಸುರಾಗ್ರೇಸರನನ್ನು ಮುಖಾಮುಖಿ ಭೇಟಿಮಾಡುವ ಅವಕಾಶ ಎಂಬುದಾಗಿ ಸ್ಪಷ್ಟಪಡಿಸುತ್ತಾನೆ. ಶ್ರೀರಾಮನ ದೂತನಾಗಿ ತಾನು ಬಂದಿರುವುದಾಗಿ ತಿಳಿಸಿ, ರಾಮನ ಜೀವನದ ದಿವ್ಯಚಿತ್ರಣವನ್ನು ರಾವಣಸಭೆಯಲ್ಲಿ ಸಾರಿಹೇಳುತ್ತಾನೆ.

ಸುಜ್ಞಾನಾಧಿಪತಿ ಹನುಮನು ರಾವಣನಿಗೆ ಸಲಹೆ ನೀಡುತ್ತಾನೆ –

ಭ್ರಮತಾ ಮಯಾ ದೃಷ್ಟಾ ಗೃಹೇ ತೇ ಜನಕಾತ್ಮಜಾ.೫೧.೧೬

ತದ್ಭವಾನ್ ದೃಷ್ಟಧರ್ಮಾರ್ಥಸ್ತಪಃ ಕೃತಪರಿಗ್ರಹಃ

ಪರದಾರಾನ್ ಮಾಹಾಪ್ರಾಜ್ಞ ನೋಪರೋದ್ಧುಂ ತ್ವಮರ್ಹಸಿ .೫೧.೧೭

ಸೀತೆಯನ್ನು ಹುಡುಕುತ್ತಾ ಸಂಚರಿಸುತ್ತಿರುವಾಗ ನನಗೆ ಅವಳು ಇಲ್ಲಿ ಕಂಡುಬಂದಳು. ಎಲೈ ಮಹಾಪ್ರಾಜ್ಞನೇ, ನೀನು ಧರ್ಮಾರ್ಥಗಳನ್ನು ಚೆನ್ನಾಗಿ ತಿಳಿದವನು, ತೀವ್ರವಾದ ತಪಸ್ಸನ್ನಾಚರಿಸಿ ಅನೇಕ ವರಗಳನ್ನು ಪಡೆದಿರುವೆ. ಅಂತಹ ನಿನಗೆ ಪರಸತಿಯನ್ನು ಬಂಧಿಸಿಡುವುದು ಯೋಗ್ಯವೆನಿಸುವುದಿಲ್ಲ.

ಗೌರವಯುತವಾಗಿಯೇ ರಾವಣನ ಕುಕೃತ್ಯವನ್ನು ಖಂಡಿಸುತ್ತಾ ಸೀತೆಯನ್ನು ರಾಮನಿಗೆ ಒಪ್ಪಿಸಬೇಕೆಂದು ಆಗ್ರಹಿಸುತ್ತಾನೆ.

ಈ ವಿಚಾರವಾಗಿ ಹನುಮಂತನು ರಾವಣನಿಗೆ ನೀಡಿದ ಸಲಹೆಯು ಈ ಯುಗಕ್ಕೂ ಸಲ್ಲುವಂತಿದೆ.

ತು ಧರ್ಮೋಪಸಂಹಾರಮಧರ್ಮಫಲಸಂಹಿತಮ್ .೫೧.೨೮

ತದೇವ ಫಲಮನ್ವೇತಿ ಧರ್ಮಶ್ಚಾಧರ್ಮನಾಶನಃ

ಧರ್ಮಫಲಗಳು ಅಧರ್ಮಫಲಗಳು ಎಂದಿಗೂ ಕೂಡಿರುವುದಿಲ್ಲ. ಧರ್ಮಕಾರ್ಯಕ್ಕೆ ಶುಭಪಲಗಳು, ಅಧರ್ಮಕಾರ್ಯಕ್ಕೆ ಅಶುಭಫಲಗಳು  ದೊರಕುವವು. ಧರ್ಮಕಾರ್ಯಾಚರಣೆಯಿಂದ ಅಧರ್ಮಕಾರ್ಯಫಲವು ನಶಿಸಲಾರದು.

ಹನುಮಂತನ ಮಾತಿನಿಂದ ಕುಪಿತನಾದ ರಾವಣ ಹನುಮಂತನ ವಧೆಗೆ ಆದೇಶ ಹೊರಡಿಸುತ್ತಾನೆ. ಇದರ ಫಲವಾಗಿ ಲಂಕಾದಹನವೇ ನಡೆದುಹೋಗುತ್ತದೆ.

ಹನುಮಂತನ-ರಾವಣರ ವ್ಯಕ್ತಿತ್ವಗಳ ಹಲವಾರು ಸೂಕ್ಷ್ಮವಿವರಗಳು ಈ ಆಖ್ಯಾನದ ಮೂಲಕ ನಮಗೆ ವಿದಿತವಾಗುತ್ತವೆ. ತಾನು ಮಾಡಿದ ದುಷ್ಕೃತ್ಯಗಳ ಪರಿವೆಯೇ ಇಲ್ಲದ ರಾವಣ ಒಂದೆಡೆಯಾದರೆ, ವಿನಯವಂತ, ಮತಿವಂತನಾದ ಕಾರಣ ರಾವಣನ ಅಧರ್ಮದ ಹೊರತಾಗಿ, ಅವನನ್ನು ಇಂದ್ರನಿಗೆ ಹೋಲಿಸಬಲ್ಲ ಹನುಮಂತ ಇನ್ನೊಂದೆಡೆ.

ಪರರ ಬಗೆಗೆ ನಾವು ಗ್ರಹಿಸುವ ಅಂಶಗಳು ಹೇಗೆ ಕಾಲಕ್ರಮೇಣ ವಿಕಾಸಗೊಂಡು ಮಾರ್ಪಾಡಾಗುತ್ತವೆ ಎಂಬುದನ್ನು ಈ ಪ್ರಸಂಗ ವಿಶದಪಡಿಸುತ್ತದೆ. ನಮ್ಮ ಎದುರಾಳಿಗಳಲ್ಲಿಯೂ ನಾವು ಮೆಚ್ಚಿಕೊಳ್ಳುವಂತಹ ಗುಣಗಳಿದ್ದು ಅವುಗಳನ್ನು ನಾವೂ ಅಳವಡಿಸಿಕೊಳ್ಳಬಹುದಾದರೆ ಸಮಂಜಸವಷ್ಟೇ?

ಸುಂದರಕಾಂಡದಲ್ಲಿ ಇಂತಹುದೇ ಹಲವಾರು ಕೌತುಕಮಯ ಗಂಭೀರ ಸನ್ನಿವೇಶಗಳಿದ್ದು ಅವುಗಳ ಅಧ್ಯಯನದಿಂದ ನಮ್ಮ ದೈನಂದಿನ ಬದುಕಿಗೆ ಅಗತ್ಯವಿರುವ ವಿವೇಕ ನಮಗೆ ಲಭಿಸುವುದು ನಿಸ್ಸಂಶಯ. ಅದರಲ್ಲೂ ಮೇಲಿನ ಪ್ರಸಂಗದ ಅಂತಿಮ ಸಂದೇಶವಂತೂ ಜೀವನದುದ್ದಕ್ಕೂ ಜೀವಿಯ ನಿತ್ಯವ್ಯವಹಾರದ ಅಳತೆಗೋಲಾಗಿರಬೇಕು.

ಗ್ರಂಥಸೂಚಿ :

ಶ್ಲೋಕಾರ್ಥ – ಶ್ರೀಮದ್ವಾಲ್ಮೀಕಿರಾಮಾಯಣ, ಗೀತಾ ಪ್ರೆಸ್, ಗೋರಖ್ಪುರ

(This is a translation of original post by GunduHuduga)

Featured Image credits: Pinterest (lakshmy)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply