close logo

ಸತ್ಯಗಳ ಅನಾವರಣ – ‘ನನ್’ಗಳ ಕಥೆ ‘ನನ್ನಿ’

ಕ್ರಿಶ್ಚಿಯನ್ ಮಿಷನರಿಗಳ ಅತಿರೇಕದ ಕಾಲವದು. ಎಲ್ಲೆಲ್ಲೂ ಏಸುವಿನ ಜಪನಾಮ, ಎದೆಯ ಮುಂಬಾಗದಲ್ಲಿ ಶಿಲುಬೆ, ಚರ್ಚು, ಬಿಳಿ ಮತ್ತು ಕಂದು ಬಣ್ಣ ಬಟ್ಟೆ ಧರಿಸಿದ ಸಿಸ್ಟರ್ ಗಳು  ಮತ್ತು ಫಾದರ್, ಅಲ್ಲಿ ಶಾಂತಿಯ ದೂತ ಬರುವನೆಂಬ ನಂಬಿಕೆ.  ಭಾರತದಲ್ಲಿ ಒಂದು ಹಂತದಲ್ಲಿನ ಕಾಲವಿದು. ಎಲ್ಲಾ  ಜನರೂ ಬಡ ಬಗ್ಗರೂ ಕಿರಿಸ್ತಾನರಾಗುತ್ತಿದ್ದ ಸಮಯವದು. ಶ್ರದ್ಧೆ, ನಂಬಿಕೆಗಳಿಗಿಂತ  ನಯವಾದ ಮಾತುಗಳಿಗೆ ಜನ ಮರುಳಾಗಿ ಒಂದು ಧರ್ಮದ ಹಿಂದೆ ಓಡಿದ್ದು ಎಂದರೆ ಅದು ಕ್ರಿಶ್ಚಿಯನ್ ಧರ್ಮ. ಒತ್ತಾಸೆಯಿಂದಲ್ಲ, ಕ್ರೌರ್ಯದಿಂದಲ್ಲ ಬರೀ ಬಣ್ಣದ ಮಾತುಗಳಿಂದ ಮರುಳಾಗಿ. ಅಶಾಂತಿ, ನಿಸ್ವಾರ್ಥ, ಪರೋಪಕಾರಿ ಎಂಬ ಬಿರುದು ಹೊತ್ತು ಸದಾ ನಿಶ್ಚಲ ಮನಸ್ಸಿನಿಂದಲೇ ಇರುವ ಜನರಿದ್ದಾರೆ ಎಂದು ಸಾರುತ್ತಿದ್ದ ಕಾಲ. ಇಂತಹ ಎಲ್ಲಾ ಮುಖವಾಡಗಳ ಹಿಂದೆ ಇದ್ದ ಸತ್ಯದ ಅನಾವರಣಕ್ಕೆ ತೆರೆ ಎಳೆದ ಹಲವಾರು ಪುಸ್ತಕಗಳಿವೆ. ಅದರಲ್ಲಿ ಪ್ರಮುಖವಾಗಿ ‘ನನ್ನಿ’ ಕೂಡ ಒಂದು.  ವಸ್ತು ಸ್ಥಿತಿಯನ್ನು ಸಹಜವಾಗಿ ಓದುಗರಿಗೆ ನೀಡುವ ಕಾದಂಬರಿ.  ನನ್ ಆದವಳ ಕರಾಳ ದಿನಗಳ ಸತ್ಯದ ಕಥನವನ್ನು  ಸರಳವಾಗಿ ನಮ್ಮ ಮುಂದಿಟ್ಟಿದ್ದಾರೆ ಲೇಖಕ ಕರಣಂ ಪವನ್ ಪ್ರಸಾದ್.

ಇವರದೇ ಪುಸ್ತಕವಾದ ‘ಕರ್ಮ’ ಓದಿದ ನಂತರ ‘ನನ್ನಿ’ ಓದು ಬಹಳ ಸೂಕ್ತ ಎಂದೆನಿಸುತ್ತದೆ. ಹಲವಾರು ಮಜಲುಗಳ ಮೂಲಕ ಸತ್ಯದ ಅನಾವರಣವಾಗುತ್ತದೆ.  ಮಧ್ಯವರ್ತಿಗಳಿಂದ ಪ್ರತೀ ಧರ್ಮವೂ ತನ್ನ ಮೂಲ ಸತ್ವವನ್ನು ಕಳೆದುಕೊಂಡಿದೆ. ದೇವರು ಹೀಗೆ ಹೇಳಿದ್ದಾನೆ ಎಂಬ ಒಂದು ಮಾತು ಜನರನ್ನು ನಂಬಿಸಿ ತಮ್ಮ ಹೇಳಿಕೆಗಳನ್ನು ಇತರರ ಮೇಲೆ ಹೇರಿದ್ದನೆ. ಅದು ಸ್ವಾರ್ಥಕ್ಕೆ ತಿರುಗಿ ಮೂಲ ಉದ್ದೇಶಗಳು ನೆಲಸಮವಾಗಿದೆ. ಇದೆಲ್ಲದರ ಮದ್ಯೆ ಭಾರತದಲ್ಲಿ ನಿಜಕ್ಕೂ ನಡೆದಿದ್ದು ಏನು ಎಂಬ ಪ್ರಶ್ನೆಗೆ ಸುದೀರ್ಘವಾಗಿ ಸುಂದರವಾಗಿ ಒಳ-ಹೊರ ಹರಿವನ್ನು ನಮ್ಮ ಮುಂದೆ ಬಿಚ್ಚಿಟ್ಟ ಪುಸ್ತಕ ನನ್ನಿ.

ಹಿಂದೂ ಧರ್ಮದ ಆಚರಣೆಗಳನ್ನು ಬಿಟ್ಟು  ದುರ್ಗಾ ಎನ್ನುವವಳು ಸಿ.ರೋಣಾ (ಸಿ=ಸಿಸ್ಟರ್ ) ಆಗಿ ಮತಾಂತರವಾಗುತ್ತಾಳೆ. ಅಲ್ಲಿಂದ ಆರಂಭವಾಗುವುದು ರೋಣಾಳ ಕಥೆ. ಸಿ.ಎಂಸಿ. ಸಂಸ್ಥೆ ಇದು ಕೋಲ್ಕತ್ತಾದಲ್ಲಿರುವ  ಕ್ರಿಶ್ಚಿಯನ್ನರ ಸಂಸ್ಥೆಯಾಗಿದೆ. ಒಂದು ಕ್ರಿಶ್ಚಿಯನ್ನರ ಸಂಸ್ಥೆಯನ್ನು ನಡೆಸುವ ಉದ್ದೇಶ ಹಾಗೂ ಅದರ ತಂತ್ರಗಳನ್ನು ತಿಳಿಸಲಾಗಿದೆ. ಈ ಪುಸ್ತಕದಲ್ಲಿ ಸಿ.ಎಂ.ಸಿ ಸಂಸ್ಥೆಯ    ಒಳ ಹೊರ ಹರಿವುಗಳ ಚಿಂತನೆ. ರೋಣಳ ಗೊಂದಲಗಳು,  ಅದರಲ್ಲಿ ಅವಳ ಪಾತ್ರವೇನು? ಎಂಬೆಲ್ಲಾ ಪ್ರಶ್ನೆಗಳಿಗೆ ಪುಸ್ತಕ ಉತ್ತರ ಕೊಡುತ್ತದೆ. ಇಲ್ಲಿಯೂ ಸಹಜವಾದ ಒಂದು ಪ್ರಶ್ನೆ ಕಾಣಸಿಗುತ್ತದೆ ಅದೇನೆಂದರೆ ಈ ದುರ್ಗಾ ಮತಾಂತರವಾಗಿದ್ದಾದರೂ ಏಕೆ ಎಂದು ತಲೆದೋರುತ್ತದೆ. ಹೌದು ಅವಳು ಸಹ ಚಿಕ್ಕಂದಿನಿಂದ  ಬೆಳೆದ ರೀತಿ ಹಾಗೂ ಜೀವನದಲ್ಲಿ ನಡೆದ ಘಟನೆಗಳಿಂದ ಅಸಹ್ಯವಾಗಿ ಶಾಂತಿ ಬೇಕು ಎಂದು  ತನ್ನ ಧರ್ಮವನ್ನು ಬಿಟ್ಟು ಹೊರ ನಡೆಯುತ್ತಾಳೆ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎನ್ನುವ ಗಾದೆಯ ಅನ್ವಯ ಅವಳು ಸ್ವೀಕರಿಸಿದ ಮತ ದೂರದಿಂದಷ್ಟೇ ಸುಂದರವಾಗಿತ್ತು ಎಂದು ಅರಿವಿಗೆ ಬಂದದ್ದು ನನ್ ಆಗಿ ಸಿಎಂಸಿ ಸಂಸ್ಥೆಗೆ ಸೇರಿದಾಗ .  ಅಲ್ಲಿ ಅವಳ ಬದುಕು ಮತ್ತೆ ಹಾಯಿ ಇಲ್ಲದ ದೋಣಿಯಾಗಿ ದಿಕ್ಕು ತಪ್ಪಿ ತೂರಾಡುತ್ತಾ ಸಾಗುತ್ತದೆ.

ನಿಸ್ಚಾರ್ಥ ಸೇವೆಯೇ ಜೀವನದ ಮೂಲ ಎಂದು ಸೋಗುಹಾಕಿಕೊಂಡಿದ್ದ ಸಂಸ್ಥೆಯಲ್ಲಿ ಅದೆಷ್ಟೋ ಸಾವಿನ ಪ್ರಕರಣಗಳು ದಾಖಲಾಗದೇ ದೂರ ಉಳಿದಿವೆ . ಅನಾಥ ಮಕ್ಕಳೆಲ್ಲಾ ಚಿಕಿತ್ಸೆ, ಆರೈಕೆಯಿಲ್ಲದೆ ಸೊರಗಿಹೊಗಿದ್ದಾರೆ. ಕೋಟಿ ಕೋಟಿ ಹಣಗಳು ಎಲ್ಲಿಂದಲೋ ದಾನವಾಗಿ ಬಂದು ಯಾರಿಗೂ ಕಾಣದಂತೆ ಮಾಯವಾಗಿದೆ. ಆದರೆ ಈ ಎಲ್ಲಾ ಹಗರಣಗಳ ಹಿಂದಿರುವ ಸಿ.ಎಲಿಸಾ ಮಾತ್ರ ಅದೇ ನಿಶ್ಚಲ, ನಿರ್ಮಲವಾಗಿ, ನಗು ಮುಖದಿಂದ ಇದ್ದು ಸದಾ ಒಳಿತನ್ನೇ ಬಯಸುವ ಮುಖವಾಡದಿಂದ ಜನರನ್ನು ಆಕರ್ಷಿಸುತ್ತಿದ್ದಾರೆ. ಅದೇ ಜಾಣ್ಮೆಯಿಂದ ನೂರಾರು ಜನರನ್ನು ತನ್ನತ್ತ ಸೆಳೆದುಕೊಂಡು ಮುಂದೆ ಸಾಗುತ್ತಿದ್ದಾರೆ. ಇಂತಹ ಎಲ್ಲಾ ಘಟನೆಗಳ ಮಧ್ಯೆ ಜೀವನ ಸಾಗಿಸುವವಳು ರೋಣ.

ಪ್ರತೀ ಮನುಷ್ಯನು ತನ್ನೆಲ್ಲಾ ಆಸೆಗಳನ್ನು ತಡೆಹಿಡಿದರೂ ದೈಹಿಕ ಮೋಹದ ಬಿಡುಗಡೆ ಕಷ್ಟ. ಕಾಮವೆಂಬುದು ಎಂತಹವರನ್ನೂ ಬಂಧಿಸಿಬಿಡುತ್ತದೆ. ಈ ಕಾದಂಬರಿಯ ಫಾಬ್ರಿಗಾಸನೆಂಬ ಪಾತ್ರ ಇದಕ್ಕೆ  ಹೊರತಾಗಿ ಇಲ್ಲಾ. ಅವ  ರೋಣಾಳ ಗೆಳೆಯ. ಅವನಿಂದ ಪಡೆದ  ಮಗುವು ಸಾವನ್ನೊಪ್ಪುತ್ತದೆ. ಅಂತಹ ನರಕಯಾತನೆಯನ್ನು ಇಂಚಿಂಚೂ  ಅನುಭವಿಸಿ ಹೊರಬರುವ ರೋಣಾಳಿಗೆ ಅಲ್ಲಿಯ ಬದುಕು ಸಾಕಾಗಿಹೋಗುತ್ತದೆ. ಅಲ್ಲಿ ನೀತಿ ನಿಯಮಗಳ ವಿರುದ್ಧ ದ್ವನಿ ಎತ್ತರಿಸುವ ಇವಳಿಗೆ ಎಲ್ಲಿಯೂ ನ್ಯಾಯ ಸಿಗದೇ ಹೋಗುತ್ತದೆ. ಅದೆಷ್ಟೇ ಗಟ್ಟಿಯಿದ್ದರೂ ಭಾವನಾತ್ಮಕವಾಗಿ ಮನುಷ್ಯ ಸೋಲೋದು ಸಹಜ.  ಭಾವನಾತ್ಮಕವಾಗಿ ಭಾರತೀಯರು ದುರ್ಬಲರು. ಈ ಅಂಶವನ್ನು ಹೊರಗಿನ ಜನರು ಸುಲಭವಾದ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ. ಇಂತಹವೆಲ್ಲವೂ  ಕಲ್ಕತ್ತಾದಲ್ಲಿ ನಡೆಯುವ ಕಥನ. ನಂತರದಲ್ಲಿ ಇವೆಲ್ಲವನ್ನೂ ಬಿಟ್ಟು ರೋಣ ಬೆಂಗಳೂರಿಗೆ ಬಂದು ಅಲ್ಲಿ ಒಂದು ಕ್ರಿಶ್ಚಿಯನ್ ಸ್ಕೂಲಿನಲ್ಲಿ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ಅವಳ ಬದುಕಿನ ತೀರಾ ಸಾಮಾನ್ಯವಾಗಿ ಸಾಗಿದರೂ ಅವಳೊಳಗಿನ ಕೆಲವು ತಳಮಳಗಳಿಗೆ ಅವಳ ಪ್ರಶ್ನೆಗಳಿಗೆ ಉತ್ತರ ಕೊಡೋರು ಯಾರು ಇದು ಅವಳ ಸುತ್ತಾ ಸುತ್ತುತ್ತಾ ಮತ್ತೊಂದು ಪುಟ್ಟ ಕುಟುಂಬದೊಟ್ಟಿಗೆ ಬೆಸೆದು ಕೊಳುತ್ತದೆ ಅದು ಹೇಗೆಂದರೆ ಅವಲ ಟ್ಯೂಷನ್ ಕ್ಲಾಸಿಗೆ ಬರುವ ಅವಳ  ವಿದ್ಯಾರ್ಥಿ ಕ್ಯಾಥರಿನಾ ಅವಳ ದುರಂತ ಅಧ್ಯಾಯ  ಎಲ್ಲರಿಗೂ ಬೇಸರ ತರಿಸಿದ್ದು ಸುಳ್ಳಲ್ಲ. ಕೇವಲ  ಹಣದಾಸೆಗೆ ಜೀವನದ ಮೌಲ್ಯಗಳನ್ನು ಬಲಿ ಕೊಡುವ ಸಮಾಜದ ಮಧ್ಯೆ ಬದುಕೋದು ತುಂಬಾ ಕಷ್ಟ. ಅದರಲ್ಲೂ ಮುಖವಾಡದ ಬದುಕು ಹಿಂಸೆಯೇ ಸರಿ. ಜೀವನದಲ್ಲಿ ಪ್ರೀತಿಯಿರಬೇಕು ಜೀವನದಲ್ಲಿ ಕೇವಲ ಕಾಮವೇ ತುಂಬಿ ಹೊದರೆ ಬರಿ ದುರಂತಗಳೇ ಸಂಭವಿಸುತ್ತದೆ. ಮನುಷ್ಯನನಿಗೆ ಕಾಮವೆಂಬುದು  ಮೂಲಭೂತ ಅವಶ್ಯಕತೆಯೇ ಹೊರತು ಅದೇ ಜೀವನವಲ್ಲ ಅನ್ನುವ ಸತ್ಯ ಅರಿವಾಗಲೇ ಬೇಕು.

ಕಾದಂಬರಿಯಲ್ಲಿ ಸತ್ಯಗಳು ಸರಿಯಾಗಿ ಗೋಚರಿಸಿ ಜನರ ಕಣ್ಣುಗಳು ತೆರೆಯುವಂತೆ ಆಗಿದೆ. ಮತಾಂತರದ ಪ್ರಕ್ರಿಯೆ ಆಗಿರಬಹುದು ಹಾಗೂ ಅವರೇಬಂದು ಮಕ್ಕಳನ್ನು ಚರ್ಚ್ಗಳಿಗೆ ಒಪ್ಪಿಸುವಂತೆ ಮಾಡುವ ವಿಧಾನವಾಗಿರಬಹುದು. ಅದೆಲ್ಲಾ ಸರಿಯಾದ ಬಲೆಯನ್ನು ಹೆಣೆದು ಅವರನ್ನು ಆ ಬಲೆಯಲ್ಲಿ ಬಂಧಿಸಿ ಬಿಟ್ಟರೆ ಅವರಿಗೆ ಹೊರಗೆ ಬರುವ ಪ್ರಮೇಯವೇ ಇರದು ಅಷ್ಟು ವ್ಯವಸ್ಥಿತವಾದ ಕೂಪಕ್ಕೆ ಜನರನ್ನು ಸುಲಭವಾಗಿ ತಳ್ಳುವ ವಿಧಾನ. ಕ್ಯಾಥರಿನಾಳ ಬದುಕು ಹಳಿಯಿಲ್ಲದೇ ಸಾಗಿ ಕೊನೆಯಲ್ಲಿ ಅವಳ ಸಾವಿನಲ್ಲಿ ಅಂತ್ಯವಾಗುತ್ತದೆ.  ಕ್ಯಾಥರಿನಾಳ ಜೀವನವನ್ನು ಬಳಸಿಕೊಂಡ ಚರ್ಚಿನ ಸಿಸ್ಟರ್. ಹೆಣ್ಣೇ ಹೆಣ್ಣಿಗೆ ಶತ್ರು ಎನ್ನುವ ಹಾಗೆ ಕ್ಯಾತರಿನಾಳ ಅಮಾನುಷವಾದ ಸಾವಿಗೆ ಕಾರಣವಾಗುವ ಜನರು. ಅವರ ನಡುವಳಿಕೆಯೆ ಓದುಗರಿಗೇ ನೋವನ್ನು ನೀಡುತ್ತದೆ.    ಅಲ್ಲಿಯ ಸನ್ನಿವೇಶವೆಲ್ಲದರ ಕಲ್ಪನೆಯೂ ಕಷ್ಟವಾಗುತ್ತದೆ. ಆದರೆ ಇದೆ ಸತ್ಯವಾಗಿ ಅದೆಷ್ಟೋ ಜನರ ಜೀವನದಲ್ಲಿ ನಡೆದಿದ್ದು ವಿಷಾದನೀಯ.

ಅಂಗವಿಕಲ ಮಗಳು ಸರಿಯಾಗುವ ಬಯಕೆ ಹೊತ್ತ ತಂದೆ. ಮಗಳನ್ನು ಎಲ್ಲಿ ಬೇಕಾದರೂ ಅಲ್ಲಿ ಅವಳ ಆರೋಗ್ಯದ ಸಲುವಾಗಿ ಕರೆದುಕೊಂಡು ಹೆಗಲ ಮೇಲೆ ಕೂರಿಸಿಕೊಂಡು ಹೋಗುವ ಪ್ರೀತಿಗೆ ಯಾರು ತಾನೇ ಸೊಲದಿರುವವರು. ಆದರೆ ಮತ್ತೆ ನಿಜವಾಗಿಯೂ ಮತ್ತೆ ಏಳದಂತೆ ಸೋತಿದ್ದು ತಂದೆ ಅವನ ಮೂಢನಂಬಿಕೆಗೆ, ಮಗಳನ್ನು ಚರ್ಚಿಗೆ  ಸೇರಿಸುತ್ತೇನೆ ಎಂದು ಕೊಟ್ಟಿದ್ದ ಮಾತಿಗೆ, ಹೆಂಡತಿಯ ಹಠಕ್ಕೆ ಮಗಳು ಅದೆಲ್ಲೋ ಸರಿಯಾಗಿ ನೀರೂ ಇಲ್ಲದ ಬಾವಿಯಲ್ಲಿ ಬೋರಲಾಗಿ ಬಿದ್ದು ಸತ್ತಾಗ ಸೋತು ಹೋದ ತಂದೆ.  ಬೂಸಿ ಎಂಬ ಬೆಕ್ಕನ್ನು ಪ್ರೀತಿಯಿಂದ ಕ್ಯಾತರಿನಾ ಸಾಕಿರುತ್ತಾಳೆ. ಒಮ್ಮೆ ಅದರ ಅನಾರೊಗ್ಯದ ಕಾರಣದಿಂದ ಆಸ್ಪತ್ರೆಗೆ ತೆಗೆದುಕೊಂಡು ಹೋದಾಗ ಬೆಕ್ಕು ತಪ್ಪಿಸಿಕೊಂಡು ಹೋಗಿದ್ದು ಕ್ಯಾತರಿನಾಳನ್ನು ಬಹಳ ದುಃಖಕ್ಕೆ ದೂಡುತ್ತದೆ. ಈ ಘಟನೆಯ ನಂತರ ಅವಳು ಮತ್ತೂ ಜೀವನದಲ್ಲಿ ಕುಗ್ಗಿಹೊಗುತ್ತಾಳೆ.

ಒಟ್ಟಿನಲ್ಲಿ ಜೀವನದ ಹಲವಾರು ತಿರುವುಗಳು ಯಾವ ಯಾವುದೋ ಹಾದಿಯನ್ನು ತಲುಪಿಸಿ ಯಾವುದೋ ತಿಳಿಯದ ಜಾಗಕ್ಕೆ ಕೊಂಡೊಯ್ಯುತ್ತದೆ ಮತ್ತೆ ಸಾಗುವ ಪಯಣ ಕೆಲವೊಮ್ಮೆ ದುರಂತ ಅಂತ್ಯವನ್ನು ಕಾಣುತ್ತದೆ. ಕೆಲವೊಂದು ತಟಸ್ಥ ಬದುಕು ಮತ್ತೂ ಕೆಲವೊಂದು ಏನೂ ತಿಳಿಯದೆ ಏನೂ ಅರಿಯದೆ ಹಾಗೇ ಜೀವನ ಕಳೆದು ಹೋಗುತ್ತದೆ. ಒಟ್ಟಿನಲ್ಲಿ ತಿರುವುಗಳ ಮಧ್ಯೆ ಜೀವನ ನಡೆಯುತ್ತದೆ ಅಷ್ಟೆ. ಸತ್ಯಗಳ ಅನ್ವೇಷಿಸಿ ಅದರ ಜೊತೆ ಸಾಗುವ ಜೀವನದಲ್ಲಿ ಭಯಾನಕ ತಿರುವುಗಳು ಇದ್ದೇ ಇದೆ ಅದನರಿತು ಎದುರಿಸಿ ಮುಂದೆ ಸಾಗಬೇಕು.

ಸತ್ಯಗಳು ಸೂರ್ಯನಿದ್ದಂತೆ ದೂರದಿಂದ ಬೆಳಕನ್ನು ನೀಡುತ್ತಾನೆ ಹತ್ತಿರ ಹೋದರೆ ಸುಟ್ಟು ಬಿಡುತ್ತಾನೆ“.

ಹಾಗೆಯೇ ಸತ್ಯದ ಹಾದಿ ಕಷ್ಟವಿದೆ ಹುಡುಕ ಹೊರಟರೇ ಹಾದಿ ಮಧ್ಯದಲ್ಲಿಯೇ ಸುಟ್ಟು ಹೋಗುತ್ತೇವೆ ದಾರುಣವಾದ  ಸ್ಥಿತಿ ತಲುಪುತ್ತೇವೆ. ಇದೇ ಜೀವನದ ಸತ್ಯ. ನಾವೆಲ್ಲಿದ್ದೇವೆ ಎಂಬುದನ್ನು ನಾವು ಅವಲೋಕಿಸಿ ಮುನ್ನಡೆಯಬೇಕು. ಇದು ಕೇವಲ ಒಂದು ಬಾರಿಯ ಅಥವಾ ಕೆಲವು ಬಾರಿಯ ಜೀವನವಲ್ಲ ನಾವೆಲ್ಲರೂ ಬದುಕುತ್ತಿರುವ ಈ ಜೀವನದಲ್ಲಿ ನಾವು ಹೇಗೆ. ಎಲ್ಲಿ, ಯಾವಾಗ ಎಂಬುದನ್ನು ನಾವು ತಿಳಿದು ಬದುಕಬೇಕು ನಾವೆಲ್ಲಿದ್ದೇವೆ ಎಂಬುದನ್ನು ನಾವು ಅವಲೋಕಿಸಬೇಕಿದೆ ಇದು ಓದುಗರ ಹಾಗೂ ನಮ್ಮ ನಿಮ್ಮ ಮೇಲೆ ನಿಂತಿದೆ.

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.