close logo

“ಕರ್ಮ”ದ ವಿಷಯ ವಿಶ್ಲೇಷಣೆ

ಬದಲಾವಣೆ ಜಗದ ನಿಯಮ. ಒಳಿತು ಕೆಡಕುಗಳೊಟ್ಟಿಗೆ ಬದಲಾವಣೆಯ ದಿಕ್ಕು  ಮಾನವರ ಕೈಯಲ್ಲಿದೆ.  ಆಧುನಿಕತೆಯತ್ತ ತಿರುಗಿಕೊಳ್ಳುತ್ತಿರುವ ಜನರಿಗೆ ಹಳೆಯ ಸಂಪ್ರದಾಯ, ಶಾಸ್ತ್ರ , ನಂಬಿಕೆ ಹಾಗೂ ಶ್ರದ್ಧೆಯ ಆಧಾರವನ್ನು ಬದಿಗಿಟ್ಟು ಈಗ ಮೂಢನಂಬಿಕೆ, ಹಾಸ್ಯ, ಗೊಡ್ಡು ಸಂಪ್ರದಾಯ, ಇನ್ನೂ ಕೆಲವರು ವೈಜ್ಞಾನಿಕತೆಯ ತಳಹದಿಯಲ್ಲಿ ಕೂಡಾ ಆಚರಣೆಗಳನ್ನು ಪರಿಕಿಸುವಂತಾಗಿದೆ. ಇಂತಹ ಎಲ್ಲಾ ನೆಲೆಗಟ್ಟುಗಳನ್ನು ಒಗ್ಗೂಡಿಸಿದ ಹೂರಣವನ್ನು ಕರಣಂ ಪವನ್ ಪ್ರಸಾದ್ ಅವರು ‘ಕರ್ಮ’ ಎಂಬ ಕಾದಂಬರಿಯನ್ನಾಗಿ ಬರೆದು ಓದುಗರಿಗೆ ನೀಡಿದ್ದಾರೆ.

“ನ ವಿಶೇಷೋಸ್ತಿ ವರ್ಣಾನಾಂ ಸರ್ವಂ ಬ್ರಾಹ್ಮಮಿದಮ್ ಜಗತ್ |
ಬ್ರಹ್ಮಣಾ ಪೂರ್ವಸೃಷ್ಟಂ ಹಿ ಕರ್ಮಭಿರ್ವರ್ಣತಾಂ ಗತಮ್ ||

ಯುಗಾಂತರ ಕಳೆದ ನಂತರ ಎಲ್ಲರೂ ಬ್ರಾಹ್ಮಣರಾಗುತ್ತಾರೆ. ಮಹಾಭಾರತದ ಶಾಂತಿ ಪರ್ವವು ಈ ಮಾತನ್ನು ಹೇಳುತ್ತೆ. ಅಂದರೆ ಸತ್ಯಯುಗದಲ್ಲಿ ಎಲ್ಲರೂ ಬ್ರಾಹ್ಮಣರೇ. ತನ್ನ ಇಚ್ಛೆ, ಶಕ್ತಿ, ಬುದ್ಧಿ, ವ್ಯಕ್ತಿತ್ವದ ಅನುಸಾರವಾಗಿ ಎಲ್ಲರೂ ಬ್ರಾಹ್ಮಣತ್ವದಿಂದ ಬೇರ್ಪಟ್ಟರು ಅವು ಜಾತಿಗಳಾದವು.  ಬ್ರಾಹ್ಮಣ ಎಂಬುದು ಜಾತಿಯಲ್ಲ ಪಂಗಡವಲ್ಲ ಅದು ಸತ್ವಗುಣ.  ಇಂತಹ ಬ್ರಾಹ್ಮಣ ಸಮಾಜದಲ್ಲಿ ಆಚಾರ ವಿಚಾರಗಳು ಶಾಸ್ತ್ರ ಸಂಪ್ರದಾಯಗಳು ಹೆಚ್ಚು ಅದರ ಮೇಲಿನ ನಂಬಿಕೆ ಶ್ರದ್ಧೆ ಮತ್ತು ಅವಲಂಬನೆಯೂ ಅಧಿಕ. ಇಂದಿನ  ಕಾಲಘಟ್ಟದಲ್ಲಿ ಆಧುನಿಕತೆಯ ಸ್ವರೂಪ ಯಾವ ಬಗೆಯಲ್ಲಿ ಸಾಗುತ್ತಿದೆ ಎಂಬುದನ್ನು ತಿಳಿಸುತ್ತದೆ.

ಭಾರತ ಎಂಬುದು ಹಲವು  ಆಚರಣೆ ನಂಬಿಕೆಗಳ ನೆಲೆಬೀಡು. ಜೀವನದ ಮಜಲುಗಳಲ್ಲಿ ಪ್ರತೀ ಹಂತದಲ್ಲಿಯೂ ಒಂದಷ್ಟು ಚೌಕಟ್ಟು ಹಾಗೂ ನೀತಿ ನಿಯಮಗಳ ಮೇಲೆ ಸಾಗುವುದು. ಅದೇ ತೆರನಾಗಿ ಸತ್ತ ನಂತರದಲ್ಲಿಯೂ ಹಲವಾರು ಆಚರಣೆ ಪದ್ದತಿಗಳು ಹಿಂದೂ ಧರ್ಮದಲ್ಲಿದೆ  ಅದರಲ್ಲೂ ಬ್ರಾಹ್ಮಣ ಸಂಪ್ರದಾಯದಲ್ಲಿದೆ. ಇಂತಹ ಕಾರ್ಯವನ್ನು ಹಿರಿಯ ಗಂಡು ಮಕ್ಕಳೇ ಮಾಡಬೇಕು ಇಲ್ಲವಾದರೆ ಸತ್ತ ಪಿತೃಗಳಿಗೆ ಮುಕ್ತಿ ದೊರಕದು ಎಂಬ ನಂಬಿಕೆ ಬಹುವಾಗಿದೆ.

‘ಅಂಗೀರಸ ಗೋತ್ರಸ್ಯ ಶ್ರೀಕಂಠ ಶರ್ಮಣಃ ಮಮ ಪಿತುಃ ಪ್ರೇತಸ್ಯ ಅದ್ಯ ಪ್ರಥಮೇಹನಿ ಅಂಗೀರಸ ಗೋತ್ರಸ್ಯ ಶ್ರೀಕಂಠ ಶರ್ಮಣಃ ಮಮ ಪಿತ್ರೇ ಪ್ರೇತಾಯ ಅಧ್ವನಃ ದ್ವಿತೀಯ ಭಾಗೇ ಶ್ಮಶಾನವಾಸಿಭ್ಯಃ ಭೂತೇಭ್ಯಃ ಏತತ್ ಬಲಿಂ ದದಾಮಿ. ‘

ಈ ಪುಸ್ತಕದಲ್ಲಿ ಶ್ರೀಕಂಠ ಜೋಯಿಸರು ಇಹಲೋಕವನ್ನು ತ್ಯಜಿಸಿ ಪರಲೋಕವನ್ನು ಸೇರುವ ಘಳಿಗೆಯ ಒಟ್ಟು ಹನ್ನೆರಡು ದಿನಗಳ ಕಾಲ ನಡೆಯುವ ವಿಧಿವಿಧಾನಗಳು ಸವಿವರವಾಗಿದೆ. ಇಂದಿನ ಜನರ ಮನಸ್ಥಿತಿಗೆ ಹೊಂದಿಕೆಯಾಗುವಂತೆ ಇಂದಿನ ಕಾಲಘಟ್ಟದಲ್ಲಿ ನಡೆಯುವ ಮನೆಮನೆಯ ಕಥೆಯನ್ನು ಇಲ್ಲಿ ಸಹಜವಾಗಿ ಚಿತ್ರಿಸಿದ್ದಾರೆ. ದೂರದ ಬೆಂಗಳೂರಿನಲ್ಲಿರುವ ಹಿರಿಯ ಮಗ ಹಳೇಯ ಆಚರಣೆ ನಂಬಿಕೆಗಳನ್ನು ಸಂಪೂರ್ಣವಾಗಿ ತ್ಯಜಿಸಿ ಆಧುನಿಕತೆಗೆ ಪೂರ್ಣ ಪ್ರಮಾಣದಲ್ಲಿ ಒಗ್ಗಿಕೊಂಡಿರುತ್ತಾನೆ. ಬೆಳೆದ ಹಾಗೂ ಬೆಳೆಸಿದ ಆಚಾರ ವಿಚಾರಗಳು ಸಂಪೂರ್ಣವಾಗಿ ಬಿಟ್ಟು, ಆಧುನಿಕತೆಯ ಸೋಗಿನಲ್ಲಿ ಮನೆಯನ್ನು ಮರೆತು ಕಾಲಕ್ಕೆ ತಕ್ಕಂತೆ ಲೀವಿಂಗ್ ಇನ ರಿಲೇಷನ್‌ಷಿಪ್‌ನಲ್ಲಿ ಇರುವ ಈತ ನಂತರ ಕಾರಣಾಂತರಗಳಿಂದ ಲಾಭಕ್ಕೆ, ಸ್ವಾರ್ಥಕ್ಕೆ ಅದೇ ನೇಹಾ ಎಂಬ  ಹುಡುಗಿಯನ್ನು ಮದುವೆಯಾಗಿರುವ ಹಿರಿಯ ಮಗ ಸುರೇಂದ್ರ. ಅಲ್ಲಿ ತಂದೆಯ ಕಾರ್ಯವನ್ನು ಮಾಡುವ ದಿನಗಳಲ್ಲಿ ಹಿರಿಯ ಮಗನ ಮನಸ್ಥಿತಿ. ಹಳ್ಳಿಯಲ್ಲಿ ಪುರೋಹಿತ ವರ್ಗದಲ್ಲಿ ಇರುವ ಮದುವೆಯಾಗದ ತಮ್ಮ ನರಹರಿ. ಇವರಿಬ್ಬರ ಆಚಾರ ವಿಚಾರ ಹಾಗೂ ಶ್ರದ್ಧೆಯ ಮೇಲಿನ ಅವಲಂಬನೆಗಳು ಇವೆಲ್ಲವೂ ಅದರದೇ ಆದ ಕವಲುಗಳೊಟ್ಟಿಗೆ ಸಮಗ್ರವಾಗಿ ಓದುಗರ ಮುಂದೆ ತೆರದಿಟ್ಟಿದ್ದಾರೆ.

ಹನ್ನೆರಡು ದಿನದ ಸಾವಿನ ಮನೆಯ ಯಾತ್ರೆಯನ್ನು ಅಚ್ಚುಕಟ್ಟಾಗಿ ವಿವರಿಸಿದ್ದಾರೆ. ಅಂತೂ ನಗರದಿಂದ ಬರುವ ಸೂರಿಯ ತೊಳಲಾಟ ಒಮ್ಮೆ ತಂದೆ ಎದ್ದು ಬಿಡಲಿ ಎಂಬ ಭ್ರಮೆಯಲ್ಲಿಯೂ ಮಡುಗಟ್ಟುವ ದಃಖವೆಂಬುದಿಲ್ಲ. ಬೆಳೆಸಿದ ತಂದೆ ಎಂಬ  ಪ್ರೇಮ, ವಾತ್ಸಲ್ಯ  ಕಿಂಚ್ಚಿತ್ತೂ ಇಲ್ಲದೇ ತಂದೆಯ ಕಾರ್ಯ ಮಾಡಲು ಪತ್ನಿ ಸಹಿತ ಬರುವ ಸೂರಿಗೆ ಕಾರ‍್ಯಗಳೆಲ್ಲವೂ ಹೊಸತು.

ಮೇರು ಮಂದರ ತುಲ್ಯಾನಿ ಪಾಪಾನಿ ವಿವಿಧಾನಿ ಚ |
ಕೇಶಾನ್ ಅಶ್ರಿತ್ಯ ತಿಷ್ಠಂತಿ ತಸ್ಮಾನ್ ಕೇಶಾನ್ ವಪಾಮ್ಯಹಮ್ ||

ಮೇರು ಮಂದರ ಪರ್ವತದಷ್ಟು ಪಾಪವನ್ನು ಹೊತ್ತಿರುವ ತಲೆಗೂದಲೇ ಇಂತಹ ತಲೆಗೂದಲನ್ನು ತೆಗೆಯಬೇಕು ಎಂಬುದು ಶಾಸ್ತ್ರಗಳಲ್ಲಿ ವಪನ ಮಾಡಿಕೊಳ್ಳುವ ಪ್ರಕ್ರಿಯೆ ಇದೆ. ಅದನ್ನು ನಾಡಿದ್ದು ಮತ್ತೆ ಆಫೀಸಿಗೆ ಹೋಗಬೇಕು ಎಂಬ ನೆಪವೊಡ್ಡಿ ತಪ್ಪಿಸಿಕೊಳ್ಳುವ ಸೂರಿಯ ವರ್ತನೆ  ಇಂತಹದೇ ಪ್ರತೀ ಹಂತದಲ್ಲಿಯೂ ಇವನ ನಡುವಳಿಗೆ ಅಲ್ಲಿಯ ಜನರಿಗೆ ಬೇಸರವನ್ನು ತಂದೊಡ್ಡುತ್ತದೆ. ಸೂರಿಯು ಈಗ ಮೊದಲಿನ ಸೂರಿಯಲ್ಲ ಸಿಟಿಯ ಬದುಕು ಆತನನ್ನು ಸಂಪೂರ್ಣ ಬದಲಾಯಿಸಿದೆ. ಅವನ ನಡುವಳಿಕೆಯನ್ನು ಗಮನಿಸಿಯೇ ಆತನನ್ನು ಪರ ಊರಿಗೆ ಕಳುಹಿಸಿದ ಜೋಯಿಸರಿಗೆ ಮಗ ಪೂರ್ಣವಾಗಿಯೂ ಬದಲಾಗುವ ಎಂಬ ಕಲ್ಪನೆ ಇರಲಿಲ್ಲವೆನೋ ಒಟ್ಟಿನಲ್ಲಿ ಕಾಲ ಬದಲಾದಂತೆ ಸುತ್ತಲೂ ಇರುವ ಪರಿಸರ ಬದಲಾದಂತೆ ಸೂರಿಯೂ ಸಂಪೂರ್ಣವಾಗಿ ಒಗ್ಗಿಕೊಂಡಿದ್ದ. ಈ ಸಂದರ್ಭದಲ್ಲಿ ತಂದೆಯ ಸಾವು ಯಾವ ಬಗೆಯಲ್ಲಿ ಪರಿಣಾಮ ಬೀರಬಹುದು ಎಂಬುದರ ಸಂಪೂರ್ಣ ವಿವರ ಪುಸ್ತಕದಲ್ಲಿದೆ.

ಯಾದವಸ್ಥಿ ಮನುಷ್ಯಾಣಾಂ ಗಂಗಾತೋಯೇಷು ತಿಷ್ಠತಿ |
ತಾವತ್ ವರ್ಷ ಸಹಸ್ರಾಣಿ ಸ್ವರ್ಗೇ ಲೋಕೇ ಮಹೀಯತೇ ||

ಪೃಷ್ಠದ ಮೇಲೆ ಹಿಂಬದಿಯಲ್ಲಿ ಹಿಡಿದಿದ್ದ ಅಸ್ಥಿ ಇರುವ ಮಣ್ಣಿನ ಉಂಡೆಯನ್ನು ನೀರಲ್ಲಿ ಬಿಟ್ಟ ನಂತರ ಆ ನೀರು ಎಲ್ಲವನ್ನೂ ತನ್ನೊಟ್ಟಿಗೆ ಸೇರಿಸಿ ಮುಂದೆ ಸಾಗಿಬಿಡುತ್ತದೆ. ಆದರೆ ಹೋದವರ ನೆನಪು ಅಷ್ಟು ಸುಲಭವಾಗಿ ನಮ್ಮನ್ನು ಬಿಟ್ಟು ಸಾಗದು. ಅವರ ನೆನಪುಗಳು ಹಾಗೆ ನಿಂತಲ್ಲೆ ನಿಲ್ಲುತ್ತದೆ.  ಇಷ್ಟು ದಿನ ಬಾಳಿ ಬದುಕಿದ್ದ ಜೀವದ ಕೊನೆಯ ಬಾಗವು ಅದೇ ನೀರಿನಲ್ಲಿ ಎಲ್ಲರಿಂದ ದೂರ ಸಾಗುತ್ತದೆ. ಭೂಲೋಕದ ಎಲ್ಲಾ ಬಂಧನವನ್ನು ಕಳಚಿ  ಅಸ್ಥಿಯು ಸಾಗುತ್ತದೆ. ಕೊನೆಗೆ ಹೋದವರ ಆಸ್ಥಿಯಾಗಿ ಉಳಿಯುವುದು ಬರಿಯ ನೆನಪುಗಳು ಮತ್ತು ಅವರ ಒಳ್ಳೆಯ ತನ ಮಾತ್ರ ಅದರ ಹೊರತು ಮತ್ತೇನಿಲ್ಲಾ. ಆತನ ಒಳ್ಳೆಯ ಕೆಲಸದ ಮೇಲೆ ಮುಂದಿನ ಪಯಣ ನಿರ್ಧಾರಿತವಾಗಿ ಇಹಲೋಕವನ್ನು ಬಿಟ್ಟು ಹೊರಡುತ್ತಾರೆ. ಭೂ ಲೋಕದ ಆಗುಹೋಗುಗಳೇ ಪರಲೋಕದಲ್ಲಿ ಆತನ ಮರಣಾನಂತರದ ಜೀವನದ ದಾರಿಯಾಗಿರುತ್ತದೆ. ಇದು ಆಧ್ಯಾತ್ಮಿಕ ಸತ್ಯ.

ಆಧಾತ್ಮ ಎಂಬುದನ್ನು ಸಾಮಾನ್ಯ ಜನರಿಗೆ ಅರ್ಥೈಸಿಕೊಳ್ಳುವುದು ಸುಲಭವಲ್ಲ. ಯಾವುದು ಹುಟ್ಟುವುದಕ್ಕಿಂತ ಮೊದಲು ಹಾಗೂ ಸತ್ತ ನಂತರ ಅನಂತದವರೆಗೂ ಇರುವ ಒಂದು ಸತ್ಯ ಎಂದಷ್ಟೆ ನಾವುಗಳು ಅರ್ಥೈಸಿಕೊಳ್ಳಬಹುದು. ಅದರ ಹರಿವು ಹಾಗೂ ಆಳ ಅದರ ವಿಸ್ತಾರವನ್ನು ತಿಳಿಯುವುದು ಸುಲಭದ ಮಾತಲ್ಲ.  ಇದೆಲ್ಲವನ್ನು ತಿಳಿದವನು ಜ್ಞಾನಿಯಾಗುತ್ತಾನೆ. ಉಳಿದವರು ನಮ್ಮಂತೆ ಸಾಮಾನ್ಯರಾಗಿ ಉಳಿದು ಇಹದ ಎಲ್ಲವನ್ನು ಅನುಭವಿಸಿ ಪರಲೋಕವೋ ಮತ್ತೋಂದು ಜನ್ಮವೋ ಎಂದು ಈ  ಭವ ಸಾಗರದ ತೊಳಲಾಟದಲ್ಲಿ ಸಾಗುತ್ತೇವೆ .

ಶಾಸ್ತ್ರದ ವಿಚಾರವನ್ನೇ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಹೇಳಿದರೆ ಇಂದಿನ ಜನರು ಸುಲಭದಲ್ಲಿ ನಂಬುತ್ತಾರೆ. ಅದರ ಉದಾಹರಣೆಯೂ ಈ ಪುಸ್ತಕದಲ್ಲಿದೆ.  ಸತ್ತ ನಂತರ ಹೇಗೆ ಮುಕ್ತಿ ದೊರಕುತ್ತದೆ ಎಂಬುದನ್ನು ಅಪ್ಲೈಡ್ ಸೈನ್ಸನ ಮೂಲಕ ಸಮೀಕರಿಸಿ ಹೇಳುವ ಪರಿ ಮತ್ತು ಆ ಮಾಹಿತಿ ಹಾಸ್ಯಾಸ್ಪದವಾಗಿ ತೋರುತ್ತದೆ. ಡಿಜಿಟಲ್ ಎಲೆಕ್ಟ್ರಾನಿಕ್ಸ್ ನ   ಸ್ಟಾಕ್ ಆಂಡ್ ಕ್ಯೂವ್ ಲಾಜಿಕ್ ಅನ್ನು ವಸುಲೋಕ, ರುದ್ರಲೋಕ ಹಾಗೂ ಆನಂದಲೋಕ ಎಂಬುದಾಗಿ ವಿಭಾಗವಾಗಿರುವ ಶಾಸ್ತ್ರಕ್ಕೆ ವೈಜ್ಞಾನಿಕತೆಯನ್ನು ಹಚ್ಚಿ ಹೇಳಿದರೆ ಮಾತ್ರ ಇಂದಿನ ಕಾಲದಲ್ಲಿ ಜನರು ನಂಬುತ್ತಾರೆ.  ಎಂದರೆ ಬಹುವಾಗಿ ಅಪ್ಲೈಡ್ ಸೈನ್ಸ ಓದಿದವರಿಗೆ ಬೇಗ ಅರ್ಥವಾಗುವುದು.  ಅದನ್ನು ವಿಜ್ಞಾನದ ಹೆಸರಿನಲ್ಲಿ ಕಲಿತರೆ ಅದು ಸತ್ಯ ಅದನ್ನೆ ಶಾಸ್ತ್ರದ ಹೆಸರು ಹೇಳಿದರೆ ಅದು ಮೂಢನಂಬಿಕೆ ಹಾಗೂ ದೆ ಆರ್ ಬ್ಲಡಿ ಆರ್ಥಡಾಕ್ಸಿ ಎಂದು ಕೇಳಬೇಕಾಗುತ್ತದೆ ಎಂಬುದೇ ಸತ್ಯ.

“ಜ್ಞಾನಂ ವಿಜ್ಞಾನ ಸಹಿತಂ ಯಜ್ಞಾತ್ವಾ ಮೋಕ್ಷಸೇ ಶುಭಾತ್”.

ಈ ಭಗವದ್ಗೀತೆಯ ಸಾಲು  ಸೂಕ್ತವಾಗಿ ಹೊಂದಾಣಿಕೆಯಾಗುತ್ತದೆ. ಶಾಸ್ತ್ರೋಕ್ತವಾದ ಜ್ಞಾನದ ಜೊತೆ ಜೊತೆಗೆ ಅನುಭವಾತ್ಮಕ ಜ್ಞಾನವೂ ಅಷ್ಟೇ ಮುಖ್ಯ. ವಿಜ್ಞಾನದ ತಳಹದಿಯಲ್ಲಿ ಪ್ರಶ್ನೆ ತಪ್ಪಲ್ಲಾ ಆದರೆ ಅದರ ಅತಿರೇಕವಾದ ಪ್ರಶ್ನೆಗಳು ಹಾಸ್ಯಾತ್ಮಕವಾಗಿ ಜನರೆದುರು ನಿಲ್ಲುತ್ತದೆ. ಇಂತಹ ವೈಜ್ಞಾನಿಕ ಪ್ರಶ್ನೆಗಳು ಕೆಲವೊಂದು ಬಾರಿ ಒಳಿತನ್ನು ಮಾಡಿದ್ದೂ ಇದೆ. ಆದರೆ ಅಸಂಬದ್ಧ ಪ್ರಶ್ನೆಗಳು ಮತ್ತು ವಿಚಾರಗಳು ಇದರಿಂದ ಹೊರಗಿದ್ದಾಗ ಮಾತ್ರ ಇವು ಒಳ್ಳೆಯದು. ಎಲ್ಲಿ ಬೇಕೊ ಅಲ್ಲಿ ಮಾತ್ರ ವಿಜ್ಞಾನದ ಬಳಕೆ ಸೂಕ್ತ. ಹಾಗೂ ಸರಿಯಾದ  ರೀತಿಯಲ್ಲಿರಬೇಕು. ಅದು ಯಾವುದೆ ಆಚಾರ, ಪದ್ದತಿ ಹಾಗೂ ನಂಬಿಕೆಯಲ್ಲಿಯೇ ಆಗಿರಲಿ ಅದು ತಿಳುವಳಿಕೆಗೋ, ಅನುಭವಕ್ಕೋ, ನಂಬಿಕೆಗೋ ಎಂಬ ಆಲೋಚನೆ ನಮ್ಮ ವಿಚಾರಧಾರೆಯಲ್ಲಿ ಪ್ರವಹಿಸುತ್ತಿರಬೇಕು.

ಸೂತಕದ ಮನೆಯಲ್ಲಿ ಗರುಡ ಪುರಾಣವನ್ನು ಓದುವುದು ರೂಢಿ ಎಲ್ಲರ ಮನೆಯಲ್ಲೂ ಇದು ಕಡ್ಡಾಯ ಎಂದಲ್ಲ ಓದಿಸಬೇಕು ಎಂದುಕೋಡವರು ಓದಿಸುತ್ತಾರೆ. ಕೆಲವರು ಇಂತಹ ಪದ್ದತಿಯನ್ನು ನಿರಾಕರಿಸಲೂಬಹುದು. ಇದರಲ್ಲಿ ಮರಣಾನಂತರ ಪ್ರೇತಾತ್ಮವು ಹೇಗೆ ಸಾಗುತ್ತದೆ. ಪಾಪ ಕರ್ಮದ ಅದರ ಪ್ರತಿಫಲ ಸಹಿತ  ಹಾದಿಯನ್ನು ವಿವರಿಸುತ್ತದೆ. ವೈತರಣಿ ನದಿಯನ್ನು ದಾಟುವಾಗ ಸಿಗುವ ರಕ್ತಸಿಕ್ತ ಮೂಳೆಗಳ ಹಾದಿ ಅವರ ಕರ್ಮದ ಫಲವಾಗಿ ಆ ಸಾವಿರಾರು ಮೈಲಿ ನದಿಯನ್ನು ದಾಟಿ ಮುಂದೆಸಾಗಬೇಕು. ಇಂತಹ ಅಷ್ಟು ಘಟನೆಯನ್ನು ಇಟ್ಟುಕ್ಕೊಂಡು ಈ ಕಾದಂಬರಿಯ ಭಾಗ ಮುಂದುವರಿಯುತ್ತದೆ. ಗಂಭೀರ ಆಲೊಚನೆಗಳನ್ನು ಹಾಸ್ಯಭರಿತ ನಾಟಕದ ರೂಪದಲ್ಲಿ ಹೇಳುತ್ತಾ ಈ ಕಾದಂಬರಿಯ ಕಥನವು ಸಾಗುತ್ತದೆ. ಇಂದಿನ ಕಾಲದಲ್ಲಿ ಜನರಿಗೆ ಅವರದೇ ರೀತಿಯ ಪ್ರಶ್ನೆ ಮತ್ತು ಉತ್ತರಗಳು ಓದುಗರನ್ನು ಹಿಡಿದಿಡುತ್ತದೆ. ಅವರ ಸಂಭಾಷಣೆಯೂ ಸಹಿತ ಅಷ್ಟೇ ಅಳೆದು ತೂಗಿ ಕೊಂಡೊಯ್ಯುತ್ತದೆ.

ಸರಾಗವಾಗಿ ಸಾಗುವ ಕಾದಂಬರಿಯಲ್ಲಿ ಕೊನೆಯಲ್ಲಿ ಬರುವ ತಿರುವು ಊಹಿಸಲೂ ಅಸಾಧ್ಯವಾಗಿ  ಹೋಗುತ್ತದೆ ನಂತರದಲ್ಲಿ ಮೊದಮೊದಲು ಕಾಡುತ್ತಿದ್ದ ಪ್ರಶ್ನೆಗಳಿಗೆ ಎಲ್ಲೊ ಒಂದು ಮೂಲೆಯಲ್ಲಿ ಅದು ಉತ್ತರವಾಗುತ್ತದೆ. ಒಬ್ಬ ಮನುಷ್ಯನ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಆತನ ಪರಿಸರವೆಷ್ಟು ಕಾರಣವೋ ಹಾಗೆ ಜೈವಿಕ ಅಂಶವೂ ಮುಖ್ಯವಾಗುತ್ತದೆ. ಆದರೂ ಹುಟ್ಟಿಸಿದವರಿಗಿಂತ ಬೆಳೆಸಿದವರಿಗೆ ನಿಜವಾಗಿಯೂ ಋಣಿಯಾಗಿರಬೇಕು.

ಹಾಗೆಯೇ ಅದರೊಟ್ಟಿಗೆ ಅಲ್ಲಿ ನಮ್ಮನ್ನು ಪ್ರಶ್ನೆಗೆ ದೂಡುವುದು ನಂಬಿಕೆ ಮತ್ತು ಶ್ರದ್ಧೆಯ ಮೇಲಿನ ಅವಲಂಬನೆ. ನಾವು ಅವಲಂಬಿಸಿರುವುದು ಏನನ್ನು ಎನ್ನುವಾಗ ಬಹು ದೊಡ್ಡ ಉತ್ತರದ ಹುಡುಕಾಟದಲ್ಲಿ ತೊಡಗಬೇಕು. ಇಲ್ಲಿ ಹಲವರಿಗೆ ನಿರಾಸೆ ಖಂಡಿತ ನಾವೆಲ್ಲರೂ ಅವಲಂಬಿಸಿರುವುದು ಬೇರೆಯವರನ್ನು ಸ್ವಾರ್ಥಕ್ಕಾಗಿ ಹಾಗೂ ಲಾಭಕ್ಕಾಗಿ. ಯಾವಾಗ ಮನುಜ ಇದನ್ನು ಅರಿಯುವನೋ ಆಗ ಆತನಿಗೆ ದುಃಖವೆಂಬುದು ಸಹಜವಾಗುತ್ತದೆ.

ಬೇರೆಯವರ ಮೇಲಿನ
ನಿನ್ನ ಅವಲಂಬನೆ ನಂಬಿಕೆ
ನಿನ್ನ ಮೇಲಿನ ನಿನ್ನ
ಅವಲಂಬನೆ ಶ್ರದ್ಧೆ
ನಂಬಿಕೆ ಚಂಚಲ
ಶ್ರದ್ಧೆ ಅಚಲ

ಸೂರಿಗೆ  ಜೀವನದಲ್ಲಿ ಇದಿದ್ದು ನಂಬಿಕೆ. ಆದ್ದರಿಂದಲೇ ಅವನಿಗೆ ಕೊನೆಯಲ್ಲಿ ತಾನಾರಿಗೂ ಅಲ್ಲ ತನ್ನವರಾರೂ ಇಲ್ಲ ಎಂದೆನಿಸಿ ನಂಬಿಕೆಯ ಮೇಲೆ ಸರಿಯಾದ ಪೆಟ್ಟು ಬಿದ್ದು ಜೀವನದ ಮತ್ತು ಯೋಚನೆಯ ಪಥವೇ ಬದಲಾಗಿ ಹೋಗುತ್ತದೆ. ಹೆಂಡತಿ, ತಮ್ಮ, ಅಪ್ಪ, ವಾಣಿ, ತಾಯಿ ಎಲ್ಲರೂ ತನ್ನವರಲ್ಲ ಎಂಬ ಬದಲಾವಣೆ ಮತ್ತೆ ಓದುಗರನ್ನು ವಿಚಾರ ಮಾಡುವಂತೆ ಮಾಡಿಬಿಡುತ್ತದೆ.

ಈ ಕಾದಂಬರಿಯಲ್ಲಿ ಹಲವಾರು ಪಾತ್ರಗಳು ಅವರದೇ ಆದ ಸ್ಥಾನದಲ್ಲಿ ಒಳ್ಳೆಯ ರೀತಿಯಲ್ಲಿ ಇದೆ. ಸೂರಿ, ನರಹರಿ, ಅತ್ತೆಯ ಮಗಳು ವಾಣಿ, ಅತ್ತೆ ಚಂದ್ರಮತಿ, ಭಟ್ಟರು, ತಾಯಿ ಹೀಗೆ ಹಲವಾರು ಪಾತ್ರಗಳು ಓದುಗರ ಮನದಲ್ಲಿ ಯಾವಾಗಲೂ ಉಳಿದುಬಿಡುತ್ತದೆ. ಈ ಪುಸ್ತಕದಲ್ಲಿ ಎಲ್ಲವೂ ಇದೆ ಕಾಮ, ಪ್ರೀತಿ, ಭಾಂದವ್ಯ, ತ್ಯಾಗ, ಆಧುನಿಕತೆಯ ಸೋಗು, ಹೊಸತನದ ಮೆರಗು, ಅಪರಕ್ರಿಯೆಯ ಆಚರಣೆಗಳು,  ಎಲ್ಲವೂ ಇದೆ.

ಒಟ್ಟಿನಲ್ಲಿ ಈ ಪುಸ್ತಕವು ಮತ್ತೆ ಮತ್ತೆ ವಿಚಾರ ಮಾಡುವಂತೆ ಮಾಡುತ್ತದೆ. ನಾವೆಲ್ಲಿದ್ದೇವೆ, ಆಧುನಿಕತೆಯ ಕಾಲದಲ್ಲಿ ನಮ್ಮ ನಿಲುವೇನು ಮತ್ತು ನಮ್ಮ ನಡೆಯೇನು ಎಂಬೆಲ್ಲಾ ಪ್ರಶ್ನೆಗಳು ನಮ್ಮ ಜೊತೆಗೆ ಉಳಿದು ಬಿಡುತ್ತದೆ. ಇಂದಿನ ದಿನಮಾನದಲ್ಲಿ  ಪ್ರತಿಯೊಬ್ಬರೂ ತಮ್ಮನ್ನು ತಾವು ಪರೀಕ್ಷಿಸಿಕೊಳ್ಳುವ ಪುಸ್ತಕವಾಗಿದೆ. ಕೇವಲ ನೂರಾಅರವತ್ತ ಮೂರು ಪುಟವಿರುವ ಅಗಾಧ ಭಾವವಿರುವ ಹೊತ್ತಿಗೆ ಇದು. ಈ ಹೊತ್ತಿನಲ್ಲಿ ಪ್ರತಿಯೊಬ್ಬರೂ ಓದಬೇಕಾದ ಪುಸ್ತಕ.

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.