close logo

ರಾಮೋತ್ಸವದ ಸಂಭ್ರಮದಲ್ಲಿ ಭವ್ಯಭಾರತ

“-ದಿವ್ಯಶ್ರೀ  ಹೆಗಡೆ..”

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ 
ನಿನ್ನಷ್ಟು ನೆಮ್ಮದಿಯು ಎಲ್ಲಿಹುದು ರಾಮ
ಕಷ್ಟಗಳ ಕೊಡಬೇಡ ಎನಲಾರೆ ರಾಮ 
ಕಷ್ಟ ಸಹಿಸುವ ಶಕ್ತಿ ಕೊಡು ನನಗೆ ರಾಮ

ರಾಮನಲ್ಲಿಹುದು ನೆಮ್ಮದಿ, ರಾಮನೆಲ್ಲಿರುವನಯ್ಯಾ ಎಂದರೆ ಜನರ ಹೃದಯಂಗಳದಲ್ಲಿ ಇರುವನಯ್ಯಾ ಎಂಬ ಉತ್ತರ ಹೆಚ್ಚು ಪ್ರಸಕ್ತವಾಗಿದೆ. ಇದೀಗ ಅಯೋಧ್ಯೆಯಲ್ಲಿ ರಾಮ ಮತ್ತೆ ಮರಳಿ ನೆಲೆಸಿದ್ದಾನೆ.

ಭಾರತದ ಸಹಸ್ರಾರು ಜನರ ಕನಸು ನನಸಾಗಿದೆ. ಹಲವಾರು ದಶಕಗಳ ನಂತರ ಭವ್ಯ ಭಾರತದಲ್ಲಿ ರಾಮ ಮಂದಿರ ಮತ್ತೆ ಎದ್ದು ನಿಂತಿದೆ. ತ್ರೇತಾಯುಗದಲ್ಲಿ ಕರುಣಾಮೂರ್ತಿ ರಾಮನು ಹದಿನಾಲ್ಕು ವರ್ಷ ವನವಾಸ ಅನುಭವಿಸಿ ಮರಳಿ ಬಂದ ಮೇಲೆ ಅವನಿಗೆ ಅಯೋಧ್ಯೆಯಲ್ಲಿ ಪಟ್ಟಾಭಿಷೇಕವಾಗಿತ್ತು.   ಹದಿನೈದು ಹದಿನಾರನೇ ಶತಮಾನದ ಸಮಯದಲ್ಲಿ  ಮುಸ್ಲಿಮರು ಹಾಗೂ ಅನೇಕರಿಂದ ದಾಳಿಗೊಳಗಾಗಿ ರಾಮಮಂದಿರ ಸಂಪೂರ್ಣ ನಾಶವಾಗಿತ್ತು.  ಹೊರಗಿನ ಆಕ್ರಮಣ ಇಲ್ಲಿನ ಜನರ  ಸಂಸ್ಕೃತಿ, ಸಂಸ್ಕಾರ, ಯೊಜನೆ, ಯೋಚನೆಗಳನ್ನು ನಾಶ ಮಾಡಲು ನಡೆದ ಈ ಕೃತ್ಯಗಳು ಭೌತಿಕವಾದ ವಸ್ತುಗಳ ಮೇಲೆ ಮಾತ್ರ ಪರಿಣಾಮ ಬೀರಿವೆಯೇ ಹೊರತು ಆಂತರಿಕವಾಗಿಯಲ್ಲ.  ಮಂದಿರ ಇಷ್ಟು ದಿನವಿಲ್ಲದಿದ್ದರೂ ರಾಮ ಜನರ ಹೃದಯಾಂತರಾಳದಲ್ಲಿ ಸ್ಥಾಪಿತವಾಗಿದ್ದ.  ಅಂದು ವನವಾಸಕ್ಕೆ ಹೋದ ರಾಮ ಈಗ ಮತ್ತೆ ಮರಳಿ ಅಯೋಧ್ಯೆಗೆ  ಬಂದಿದ್ದಾನೆ. ಶ್ರೀರಾಮನ ಪ್ರಾಣ  ಪ್ರತಿಷ್ಠೆಯನ್ನು ಇಡೀ ದೇಶವೇ  ವಿಜೃಂಭಣೆಯಿಂದ ನಲಿದಿದೆ.  ರಾಮನ ಬರುವಿಕೆಗಾಗಿ ಉತ್ತರ ಪ್ರದೇಶದ ಅಯೋಧ್ಯೆ ಸಕಲ ರೀತಿಯಿಂದಲೂ  ಶೃಂಗಾರಗೊಂಡು. ಪುರೋಹಿತ ಮಹಾಶಯರು, ಸಂನ್ಯಾಸಿಗಳು, ಯತಿ ಸಂತರು, ಪಂಡಿತರುಗಳಿಂದ ಪ್ರಾಣ ಪ್ರತಿಷ್ಠಾಪನೆ ನಡೆದಿದೆ. ಈಗ ಅಲ್ಲಿಗೆ  ದೇಶ ವಿದೇಶದಿಂದ ಜನಸಾಗರ ಹರಿದು ಬರುತ್ತದೆ. 

ರಾಮ ಬರಿಯ ನಾಮವಲ್ಲ ಅದು ಭಾರತೀಯರ ಶಕ್ತಿ, ಭಾರತೀಯರ ನಾಡಿಮಿಡಿತವೇ ರಾಮ. ರಾಮಾಯಣ ಎಂದರೆ ರಾಮ ನಡೆದ ಹಾದಿ. ಅದನ್ನು ಭಾರತವಷ್ಟೇ ಅಲ್ಲಾ ದೇಶ, ವಿದೇಶದ ಜನರೂ ನಂಬುತ್ತಾರೆ. ಹಾಗೂ  ರಾಮನನ್ನು ಆದರ್ಶವಾಗಿಟ್ಟುಕೊಂಡು ಪೂಜಿಸುತ್ತಾರೆ. ಕರುಣಾಸಾಗರ ರಾಮ ಆದರ್ಶ ಪತಿ, ಆದರ್ಶ ಮಗ, ಆದರ್ಶ ರಾಜ,ಆದರ್ಶ ಅಣ್ಣನಾಗಿ ಇಂದು ಜನಮಾನಸದಲ್ಲಿ ನಮ್ಮ ನಿಮ್ಮ ಮುಂದಿದ್ದಾನೆ. ರಾಮಾಯಣದಲ್ಲಿನ ಆದರ್ಶಗಳ ನೆನೆದು ಮುಂದೆ ಸಾಗಬೇಕಿದೆ. ಯಾವ ಮನುಷ್ಯ ಆದರ್ಶನಾಗಿರುತ್ತಾನೊ ಆತ ಪೂಜೆಗೆ ವಂದ್ಯನಾಗುತ್ತಾನೆ.  ಪ್ರತಿಯೊಂದು ಹಂತದಲ್ಲಿಯೂ ರಾಮ ಆದರ್ಶವಾಗಿದ್ದಾನೆ.    ಸಾಮಾನ್ಯ ಜನರ ಜೀವನದಂತೆ ಸುಖ, ದುಃಖ, ಕಷ್ಟ, ನೋವು, ನಲಿವುಗಳ ಮಿಶ್ರಣವೇ ಈತನ ಜೀವನ. ಇದು ರಾಮ ಬದುಕಿದ ರೀತಿ. ಇದರಲ್ಲಿ ಪುರುಷರು ಮತ್ತು ಮಹಿಳೆಯರೂ ಪಾಲಿಸಬೇಕಾದ ಅಂಶಗಳು ಇವೆ  ಸಹೋದರತ್ವ, ಸಹಿಷ್ಣುತೆ, ಸರಳತೆ, ಪತ್ನಿ ಅಥವಾ ಪತಿಗೆ ನಿಷ್ಠೆ. ಇವು ಸರ್ವಕಾಲದಲ್ಲೂ ಪ್ರತಿಯೊಬ್ಬರ ಜೀವನದಲ್ಲಿ ಪಾಲಿಸಬೇಕಾದ ನಿಯಮಗಳು ಇವುಗಳನ್ನು ರಾಮ ಪಾಲಿಸಿದ ರೀತಿ ಇವುಗಳಿಂದ ಇಂದು ರಾಮ ಆದರ್ಶ. 

ರಾಮಾಯಣದಲ್ಲಿ  ಬರುವ ಕಥೆ ಹಲವಾರು. ಅದರಲ್ಲಿ  ರಾಮ ವನವಾಸಕ್ಕೆ ಹೊಗುವ ಕಾಲವನ್ನು ನೆನೆದರೆ ಎಲ್ಲರ ಕಣ್ಣಲ್ಲಿಯೂ ನೀರು ಬರುವುದು. ಪಟ್ಟಾಭೀಷೆಕದ ಸುಸಂದರ್ಭದಲ್ಲಿ ಕೈಕೇಯಿಯ ಆಸೆಯನ್ನು ಈಡೆರಸಲು ಆ ಸಮಯದ ಎಲ್ಲ ಸಂತೋಷವನ್ನು ಬಿಟ್ಟು ಕಾಡಿಗೆ ಹೊರಡುವ ರಾಮನ ಬಾಯಲ್ಲಿ ಒಂದೇ ಒಂದು ಬೇಸರದ ಮಾತು ಅಥವಾ ಕೈಕೇಯಿಗೆ ಬೈದಿದ್ದಾಗಲಿ ಇಲ್ಲಾ. ಅಮ್ಮನ ಆಸೆ ಅಪ್ಪನ ಸಂದಿಗ್ಧತೆಯ ಸಮಯದಲ್ಲೂ ಏನೂ ಮಾತಾಡದೆ ಕಾಡಿಗೆ ತೆರಳುತ್ತಾನೆ. ಅಲ್ಲಿ ಸಣ್ಣ ಮಾತಾಗುತ್ತದೆ ಅದೇನೆಂದರೆ ಕಾಡಿಗೆ ಹೋಗು ಎಂದು ತಂದೆಯೇ ಹೇಳಬೇಕಿತ್ತು. ಅಪ್ಪನ ಪರವಾಗಿ ಕೈಕೇಯಿ ಹೇಳಿದ್ದಾಳೆ. “ಅಪ್ಪನಿಗೆ ತಮ್ಮ ಮಗನ ಮೇಲೆ ಅಷ್ಟು ಅನುಮಾನವೇ?. ನಾನು ಪಟ್ಟ ಬಿಡುವುದಿಲ್ಲವೆಂದು.? ಖಂಡಿತಾ ರಾಮನಾದವನು ಹೀಗೆ ಯೊಚಿಸುವನು ಎಂದು ಯಾಕೆ ತಿಳಿದರು. ನಾನು ಎಂದಿಗೂ ಪಟ್ಟಕ್ಕೆ ಆಸೆ ಪಡುವವನಲ್ಲ. ಕಾಡಿಗೆ ಹೋಗು ಎಂದು  ಅಪ್ಪನೇ ಹೇಳಿದ್ದರೂ ನಾನೆ ಮುಂದೆ ನಿಂತು ಪಟ್ಟವನ್ನು   ಭರತನಿಗೆ  ಕಟ್ಟುತ್ತಿದ್ದೆ. ಯಾಕೆ ಈ ಪರಿಯ ಅನುಮಾನ ಬಂದಿತ್ತು. ನಾನು ಖಂಡಿತ ಈ ಪಟ್ಟಕ್ಕೆ, ದುಡ್ಡಿಗೆ ಆಸೆ ಪಟ್ಟವನಲ್ಲಾ. ಅಮ್ಮಾ ಈಗ ನಾನು ಅರಣ್ಯಕ್ಕೆ ಹೊರಡುವೆ. ಅದಾವುದಕ್ಕೂ ನನ್ನಲ್ಲಿ ಬೇಸರವಿಲ್ಲ” ಎಂದು ಪ್ರತಿಕ್ರಯಿಸುವ ರಾಮನ ಗುಣ ದೊಡ್ಡದು.  ರಾಮನದು ಸೌಮ್ಯ ಸ್ವಭಾವ ಆದರೆ ತಮ್ಮ ಲಕ್ಷ್ಮಣ ಹಾಗಲ್ಲಾ ಆತನು ಸ್ವಭಾವತಃ ಶಾಂತಿ ಪ್ರಿಯನಲ್ಲಾ. ಅವನು ಬೈದದ್ದು ಸಿಟ್ಟಾಗಿದ್ದು ಕಾಣಬಹುದು. ಅರಣ್ಯಕ್ಕೆ ಪ್ರವೇಶಿಸುವ ಮೊದಲು ಮಂತ್ರಿಯಾದ ಸುಮಂತ್ರನಲ್ಲಿ ರಾಮ ಹೇಳಿದ್ದು ಇಷ್ಟೇ ಕೈಕೇಯಿಯನ್ನು ಸರಿಯಾಗಿ ನೋಡಿಕೊಳ್ಳಿ ಹೀಯಾಳಿಸಬೇಡಿ ಅಪಮಾನಮಾಡಬೇಡಿ ಎಂದು. ನಮ್ಮಂತಹವರಾಗಿದ್ದರೆ  ಕೈಕೇಯಿಗೆ ಎಷ್ಟು ಬೈದು ಶಾಪ  ಹಾಕಬಹುದಿತ್ತು ಎಂದು ಯೋಚಿಸಿಬೇಕು. ಆಗ ಖಂಡಿತಾ  ರಾಮ ಯಾಕೆ  ಚಿನ್ನದಂತಹವನು  ಮತ್ತು ಗುಣದಲ್ಲಿ ಶ್ರೇಷ್ಟನೆಂದು ಕರೆಯುತ್ತಾರೆ ಎಂಬುದಕ್ಕೆ ಕಾರಣ ದೊರೆಯುತ್ತದೆ. ಅದಾದ ನಂತರ ಬಂದ ಭರತ ತನ್ನಣ್ಣನನ್ನು ಮತ್ತೆ ಅಯೋಧ್ಯೆಗೆ ಕರೆದಾಗ ಬರಲೊಪ್ಪದ ರಾಮ ಎತ್ತರದ ಸ್ಥಾನಕ್ಕೆ ಹೊಗುತ್ತಾನೆ. ಮಾತು ಕೊಟ್ಟಾಗಿದೆ ಅದನ್ನು ಸಂಪೂರ್ಣ ಮಾಡಿಯೇ ಬರುವೆನು ಎಂದು ಪಿತೃವಾಕ್ಯ ಪರಿಪಾಲನಾ ಗುಣವನ್ನು ಹೇಳುವ ರಾಮ ಕಾಣಸಿಗುತ್ತಾನೆ. ನಂತರ ಭರತನಲ್ಲಿ ಬಿನ್ನವಿಹಿಸಿಕೊಳ್ಳುವುದೆನೆಂದರೆ ರಾಜ್ಯ ನಡೆಸು ತಾಯಿಗೆ ಯಾವ ರೀತಿಯಲ್ಲಿಯೂ ಬೇಸರಿಸಬೇಡ ಎಂಬ ಮಾತುಗಳು ಇಂದಿನ ಯಾರ ಮನಸ್ಸಿನಿಂದ ಬರಬಹುದು ಅಲ್ಲವೇ. ಇಂತಹ ಹಲವು ಘಟನೆಗಳು ರಾಮನನ್ನು  ಮಾದರಿಯನ್ನಾಗಿಸಿ ನಮ್ಮ ಮುಂದೆ ನಿಲ್ಲುತ್ತದೆ.

ರಾಮ ಯಾವಾಗಲೂ ಆದರ್ಶವಾಗೋದು ಮತ್ತೊಂದು ವಿಷಯಕ್ಕೆ ಅದು ಸಮಚಿತ್ತ ಮನಸ್ಥಿತಿ. ಸುಖ, ದುಃಖಗಳನ್ನು ಜೀವನದಲ್ಲಿ ತೆಗೆದುಕೊಂಡ ರೀತಿ. ಯಾವಾಗ ನಿರೀಕ್ಷೆಗಳು ಹೆಚ್ಚಾಗುತ್ತಾ ಹೋಗುತ್ತದೆಯೋ ಅದು ದುಃಖಕ್ಕೆ ದಾರಿ. ಸುಖ ಎನ್ನುವುದು ಎಲ್ಲಿದೆ ?  ಹಿಂದಿನ ದಿನದ ಆಲೊಚನೆಯಲ್ಲಿ ಮುಂದಿನ ದಿನಗಳ ಚಿಂತೆಯಲ್ಲಿ ಇಂದು ನಾವೆಲ್ಲರೂ ಜೀವನದ ಏರಿಳಿತಗಳನ್ನು ದಾಟುತ್ತಾ ಸಾಗುತ್ತಿದ್ದೇವೆ. ಅದಕ್ಕಾಗಿ ನಾವು ಆಸೆಯೆಂಬ ಮೋಹಜಾಲದಲ್ಲಿ ಸಿಲುಕಿ ಒದ್ದಾಡುತ್ತಾ ನಿಂತ ನೀರಲ್ಲೇ ಕಾಲ ಕಳೆಯುತ್ತಿದ್ದೇವೆ . ಆದರೆ ರಾಮನಿಗೆ ಮುಂದಿನ ನಿರೀಕ್ಷೆಯಿರಲಿಲ್ಲಾ ಆಸೆ ಇರಲಿಲ್ಲಾ. ಒದಗಿ ಬಂದ ಕ್ಷಣವನ್ನು ಬಂದಂತೆ ಸ್ವೀಕರಿಸಿ ಮುಂದೆ ಸಾಗುವ ಗುಣವಿತ್ತು.  ಅದಕ್ಕಾಗಿಯೆ ಆತನಿಗೆ ಪಟ್ಟಾಭಿಷೇಕವೆಂದಾಗ ಖುಷಿಯಲ್ಲಿ ಎದ್ದು ಸಂಭ್ರಮಿಸಲಿಲ್ಲಾ ಅಥವಾ ಪಟ್ಟಬಿಟ್ಟು ಹೋಗು ಎಂದಾಗ ದುಃಖವಾಗಲಿಲ್ಲಾ. ಸಮಚಿತ್ತದಿಂದ  ಅಂದಿನ ದಿನವನ್ನು ಅಂದು ಕಳೆದ ರಾಮ ದೇವರಾಗಿದ್ದು. ಇಂದು ಪಟ್ಟಕ್ಕಾಗಿ, ದುಡ್ಡಿಗಾಗಿ, ಸುಖಕ್ಕಾಗಿ ಆಸೆ ಪಟ್ಟು ದುಃಖದಲ್ಲಿ ಜೀವನ ನಡೆಸುವಂತಹವರಾಗಿದ್ದೇವೆ. ದೃಢ ಮತ್ತು ಸಮ ಚಿತ್ತತೆಗೆ ಸಾಕ್ಷಿಯಾಗಿರುವವನು ನಮ್ಮೆಲ್ಲರಿಗೂ ಆದರ್ಶ. ಬಂದದನ್ನು ಬಂದ ಹಾಗೆ ಸ್ವೀಕರಿಸು ಅದರಲ್ಲಿ ತಾರತಮ್ಯವಿಲ್ಲದೆ  ಬದುಕಬೇಕು. ರಾಮನ ತತ್ವ ಇಂತಹ ಮಾತುಗಳು, ವಿಚಾರ ಧಾರೆಗಳೇ ರಾಮನ ಬದುಕು. ಇಂತಹ ವಿಚಾರಧಾರೆಯಲ್ಲಿ ರಾಮ ಬದುಕಿ ಎಲ್ಲರಿಗೂ ಆದರ್ಶನಾಗಿದ್ದಾನೆ. ಎಲ್ಲವನ್ನು ಕಳೆದುಕೊಂಡು ಕಾಡಿನಲ್ಲಿದ್ದರೂ ಎಂದು ಯಾರಿಗೂ ಕೇಡನ್ನು ಬಯಸದ ರಾಮ ಜನಮಾನಸದಲ್ಲಿ ಪೂಜೆಗೊಳಗಾಗುತ್ತಾನೆ. 

ಶ್ರೀಮನ್ನಾರಾಯಣನ ದಶಾವತಾರಗಳಲ್ಲಿ ಒಂದಾದ ರಾಮಾವತಾರಕ್ಕೆ ಏನು ಬೇಕಿದ್ದರೂ ಕುಳಿತಲ್ಲಿ ಮಾಡಿ ಮುಗಿಸುವ ಸಾಮರ್ಥ್ಯ ಇದ್ದರೂ ಮನುಷ್ಯ ರೂಪದಲ್ಲಿಯೇ ಭೂಲೊಕಕ್ಕೆ ಬಂದು ಅಲ್ಲಿಯ ಕಷ್ಟ ನೋವು ನಲಿವುಗಳನ್ನು ಸ್ವೀಕರಿಸಿ ಇಂದು ಜಗತ್ತಿನಾದ್ಯಂತ ಪೂಜೆಗೆ ಒಳಪಡುತ್ತಾನೆ. ರಾಮನಿಗೆ ರಾವಣನ ಸಂಹಾರವನ್ನು  ಲಂಕೆಗೆ ಹೊಗಿ ಮಾಡಬೇಕೆಂಬುದಿರಲಿಲ್ಲ! ಆತನಿಗೆ ಕುಳಿತಲ್ಲಿಯೆ ರಾವಣನ ಸಂಹಾರ ಮಾಡುವ ತಾಕತ್ತು ಇತ್ತು. ಆದರೆ ಸೀತೆಯನ್ನು ಹುಡುಕಿ ವಾನರ ಸೈನ್ಯದ ಜೊತೆ ಲಂಕೆಗೆ ಹೊಗುತ್ತಾನೆ. ಸಹಸ್ರಾರು ಮಂದಿ ಹೆಚ್ಚು ಇರುವ ರಾವಣನ ಸೈನ್ಯದ ಮುಂದೆ ರಾಮನ ಕೈ ಎಣಿಕೆಯ ವಾನರ ಸೈನ್ಯವು ಹೆದರಿ ಹಿಂದೆ ಸರಿಯುತ್ತದೆ. ಅದೇ ಹೊತ್ತಲ್ಲಿ  ರಾಮನ ಧೈರ್ಯದ ಮಾತುಗಳು ನಾನು ನಿಮ್ಮಲ್ಲಿದ್ದೆನೆ ಹೆದರಬೇಡಿ ಎಂದು ಹೇಳಿದ್ದರಿಂದ  ವಾನರರು  ರಾವಣನ ಸೈನ್ಯವನ್ನು  ಹಿಮ್ಮೆಟ್ಟಿಸಿದರು. ಅಷ್ಟು ಸಣ್ಣ ವಾನರ ಸೈನ್ಯ ಯುಧ್ಧದಲ್ಲಿ ಗೆದಿದ್ದು ಕಲ್ಪನೆಗೂ ನಿಲುಕದ್ದು. ರಾವಣನ ದುಷ್ಟತನದಿಂದ ಪ್ರಾಣ ಕಳೆದುಕೊಂಡಿದ್ದರೂ ರಾಮ ಆತನ ಶವ ಸಂಸ್ಕಾರ ಮಾಡಲು ತಾನಾಗಿಯೆ ಮುಂದೆ ಬರುತ್ತಾನೆ. ವಿಭೀಷಣ ತನ್ನ ಅಣ್ಣನ ಸಂಸ್ಕಾರ ಮಾಡಲಾರೆ ಎಂದು ಹಿಂದೆ ಸರಿದಾಗ ತನ್ನ  ಶತ್ರುವಾದರೂ ರಾವಣನ  ಶವ ಸಂಸ್ಕಾರಕ್ಕೆ ಮುಂದೆ ಬರುವನಲ್ಲಾ. ಇಂತಹ  ರಾಮನ ಗುಣಗಳು ಜನರನ್ನು ಆಕರ್ಷಿಸಿದ್ದು. 

ರಾಮ ಜನ್ಮಭೂಮಿ ಅಂದು ದಾಳಿಗಳಿಂದ  ಧ್ವಂಸಗೊಂಡಿರಬಹುದು ಆದರೆ ಆತನ ಆದರ್ಶ, ಆತನ ಮೇಳಿನ ಪ್ರೀತಿ ಕಿಂಚಿತ್ತು ಕಡಿಮೆಯಾಗದೇ ಜನರ ಹೃದಯದಲ್ಲಿ ರಾಮ ಎಂದೆಂದಿಗೂ ರಾಮ ರಾಮನಾಗಿಯೆ ಜನಮಾನಸ ಸಿಂಹಾಸನದಲ್ಲಿ ವಿರಾಜಮಾನನಾಗಿದ್ದಾನೆ. ಭಾರತಿಯರಲ್ಲಿ ಯಾವಾಗಲೂ ರಾಮನ ಸ್ಥಾನವೇ ಅಂತಹದು ಯಾವುದೋ ಹೊರಗಿನ ದುಷ್ಟರಿಂದ ಆತನ ಮೇಲಿನ ಪ್ರೀತಿಯನ್ನು ಸ್ವಲ್ಪವೂ ಕಡಿಮೆ ಮಾಡಲು ಸಾಧ್ಯವಿಲ್ಲಾ ಇದು ಭಾರತೀಯ ಪರಂಪರೆ. ಅಲ್ಲಿ ಯಾವಾಗಲೂ ರಾಮನಿಗೆ ವಿಶೇಷ ಆಸ್ಥಾನವೇ ಇರುತ್ತದೆ.  

ರಾಮನಿಗೆ ಅಂದು ಹದಿನಾಲ್ಕು ವರ್ಷ ವನವಾಸ.  ರಾಮ ಭಕ್ತರಿಗೆ ಹದಿನೈದನೇಯ ಶತಮಾನದಿಂದ ವನವಾಸ ಪ್ರಾರಂಭವಾಗಿ ಈ ಇಪ್ಪತ್ತೊಂದನೇಯ ಶತಮಾನದ ಈ ವರ್ಷ  ಭಕ್ತರ ವನವಾಸ ಮುಕ್ತಾಯಗೊಳ್ಳುತ್ತಿದೆ. ಕೊಟಿ ಕೊಟಿ ರಾಮ ಭಕ್ತರು   ಕಾದು ಅಂತು  ಸುದಿನ ಬಂದೊದಗಿದೆ. ರಾಮ ಭಕ್ತರ ವನವಾಸ ಪೂರ್ಣಗೊಂಡು ಈಗ ಅಯೋಧ್ಯೆಯಲ್ಲಿ ರಾಮ ವಿರಾಜಮಾನನಾಗಿದ್ದಾನೆ. ಈಗ ಸಂದರ್ಭದಲ್ಲಿ ಭಕ್ತ ಕೋಟಿ ಸಾಗರೋಪಾದಿಯಲ್ಲಿ ರಾಮನನ್ನು ಕಾಣಲು ಜನರು ಅಯೋಧ್ಯೆಯತ್ತ ಸಾಗುತ್ತಿದ್ದಾರೆ. ಸಹಸ್ರಾರು ಜನರ ಬಲಿದಾನದ, ಶತಮಾನಗಳ ಹೋರಾಟದ ನಂತರ ಭವ್ಯ ರಾಮ ಮಂದಿರ ಎದ್ದು ನಿಂತಿದೆ.

ಈಗ ಭವ್ಯವಾಗಿ ಎದ್ದು ನಿಂತಿರುವ ರಾಮ ಮಂದಿರವು 8.64 ಎಕರೆ ಜಾಗದಲ್ಲಿದೆ.ಗುಜರಾತಿನ ಸೋಮನಾಥ ದೇವಾಲಯವನ್ನು ನಿರ್ಮಿಸಿದವರ ಕುಟುಂಬವೇ ಇದನ್ನು ರಾಮ ಮಂದಿರವನ್ನು ನಿರ್ಮಾಣ ಮಾಡುತ್ತಿದ್ದಾರೆ. ನಾಗರ ಶೈಲಿಯ ವಾಸ್ತು ಶಿಲ್ಪವನ್ನು ಈ ಮಂದಿರ ಹೊಂದಿದೆ. 380 ಅಡಿ ಉದ್ದ ಮತ್ತು 280 ಅಡಿ ಅಗಲ 161 ಅಡಿ ಎತ್ತರವನ್ನು ಹೊಂದಿದೆ. ವಿಶೇಷವೇನೆಂದರೆ ಇಲ್ಲಿ ರಾಮನವಮಿಯ ದಿನ ಸೂರ್ಯನ ಕಿರಣವು ರಾಮನ ವಿಗ್ರಹದ ಹಣೆಗೆ ತಿಲಕವಿಡುವ ತಂತ್ರಜ್ಞಾನವನ್ನು ಕೂಡಾ ಇಲ್ಲಿ ಅಳವಡಿಸಲಾಗಿದೆ. ಇಲ್ಲಿ ಅದ್ಭುತವಾಗಿ ರಾಮ ಮಂದಿರ ಲೋಕಾರ್ಪಣೆ ನಡೆದಿದೆ. ಜನವರಿ 22 ಇಡೀ ಭಾರತವಷ್ಟೇ ಅಲ್ಲದೇ ವಿದೇಶಿಗರೂ ಕೂಡಾ ಸಂತೋಷ ಪಡೆಯುವ ದಿನವಾಗಿ ಹೊರಹೊಮ್ಮಿದೆ. ಭಾರತದ ಇತಿಹಾಸ ಪುಟಗಳಲ್ಲಿ ಸ್ವರ್ಣಾಕ್ಷರದಲ್ಲಿ ಕೆತ್ತಿಡುವಂತಹ ದಿನವಾಗಿ ಉಳಿಯಲಿದೆ. ಇದೇ ಹಂತದಲ್ಲಿ ಆ ಪ್ರದೇಶದಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ವಿಮಾನ ನಿಲ್ದಾಣ, ಸುವ್ಯವಸ್ಥಿತ ರೈಲು ಮತ್ತು ಬಸ್ಸುಗಳ ವ್ಯವಸ್ಥೆಯಾಗಿರುವುದು ಅಲ್ಲಿನ ಅಭಿವೃದ್ಧಿಯ ಮತ್ತೊಂದು ಸೂಚಕವಾಗಿದೆ. ಇದರಿಂದಾಗಿ ಪ್ರವಾಸೋಧ್ಯಮಕ್ಕೂ ಈ ಕ್ಷೇತ್ರ ಒಳ್ಳೆಯ ಪುಷ್ಠಿಯನ್ನು ನೀಡುತ್ತದೆ. ಇಂತಹ ಬೆಳವಣಿಗೆಗಳು ಭಾರತವು ಅಭಿವೃದ್ಧಿಯನ್ನು ಹೊಂದುತ್ತಿದೆ ಎಂದು ತಿಳಿಸುತ್ತದೆ. ಇದು ಜಾಗತಿಕ ಮಟ್ಟದಲ್ಲಿಯೂ ಕೂಡಾ ಒಳ್ಳೆಯ ಹೆಸರನ್ನು ಮಾಡುತ್ತದೆ. ರಾಮ ವಿಶ್ವವಿಖ್ಯಾತನಾಗುವ ಸಂದರ್ಭದಲ್ಲಿ ಆತನ ಆದರ್ಶಗಳು ತತ್ವ, ಚಿಂತನೆಗಳು ಜಗತ್ತನ್ನು ಪಸರಿಸಲಿ.     

ಅಲ್ಲಿ ನೋಡಲು ರಾಮ
ಇಲ್ಲಿ ನೋಡಲು ರಾಮ 
ಎಲ್ಲೆಲ್ಲಿ   ನೋಡಿದರಲ್ಲಿ ಶ್ರೀರಾಮ…

ಎಲ್ಲೆಲ್ಲಿ ನೋಡಿದರೂ ಅಲ್ಲಿ ಶ್ರೀರಾಮಚಂದ್ರನು ನಮಗೆ ಎಂದೆಂದೂ ಕಾಣುತ್ತಿದ್ದ. ಎಂದೆಂದೂ ಮನದಲ್ಲಿ ಕಾಣುವ ರಾಮ ಈಗ ಅಯೋಧ್ಯೆಯಲ್ಲಿ ನಮ್ಮ ಕಣ್ಣಿಗೆ ಗೊಚರಿಸುವ ಸಮಯಕ್ಕೆ ನಾವು ಸಾಕ್ಷಿಯಾಗುತ್ತಿದ್ದೇವೆ. 

ನೂರಾಮುವತ್ತನಾಲ್ಕು ವರ್ಷಗಳ ಕಾನೂನು ವಿವಾದದ ನಂತರ ಈಗ ವಿಜಯಶಾಲಿಯಾಗಿ ಭವ್ಯ ರಾಮಮಂದಿರದ ನಿರ್ಮಾಣವಾಗಿದೆ. ಈಗ ವೈಭವವಾಗಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯನ್ನು  ಕೋಟಿ ಕೋಟಿ ಹಿಂದುಗಳು ಕಣ್ತುಂಬಿಕೊಂಡರು. ಮನೆ ಮನೆಗಳಲ್ಲೂ ಆ ದಿನ ಹಬ್ಬದ ವಾತಾವರಣವನ್ನುಂಟುಮಾಡಿತು. ರಾಮ, ಲಕ್ಷ್ಮಣ, ಸೀತೆ, ಹನುಮಂತರು ಅಯೋಧ್ಯೆಯ ಸ್ವರ್ಣ  ಸಿಂಹಾಸನದಲ್ಲಿ ರಾರಾಜಿಸುವ  ಆ ಶುಭಗಳಿಗೆಗ ನಾವೂ ಸಾಕ್ಷಿಯಾಗಿದ್ದು ನಮ್ಮೆಲ್ಲರ ಪುಣ್ಯ.  ರಾಮ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ.

ಜೈ ಶ್ರೀರಾಮ

ಶ್ರೀರಾಮ ಜಯ ರಾಮ ಜಯ ಜಯ ರಾಮ….                     

Feature Image Credit: istockphoto.com

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.