close logo

ಪುರಾಣಗಳಲ್ಲಿ ಗೀತೋಪದೇಶ – ಭಾಗ ೩

gitopadesa

ಬದುಕಿನ ಸಂಕೀರ್ಣಗಳು ಒಮ್ಮೊಮ್ಮೆ ಮನಸ್ಸಿನ  ಮೇಲೆ ಅಪಾರವಾದ ಒತ್ತಡ ಹೇರಿ ಮನುಷ್ಯ ತನ್ನ ಚಿತ್ತಸ್ವಾಸ್ಥ್ಯವನ್ನೇ ಕಳೆದುಕೊಳ್ಳುವಂತೆ ಮಾಡಬಲ್ಲವು. ವಿಪರ್ಯಾಸವೆಂದರೆ, ಇಂತಹ ಸಂದರ್ಭಗಳಲ್ಲಿಯೇ ಆತ ಅಧ್ಯಾತ್ಮದ ಮೊರೆ ಹೊಕ್ಕು ಮರೀಚಿಕೆಯಂತಾಗಿರುವ ನೆಮ್ಮದಿಯನ್ನು ಕಂಡುಕೊಳ್ಳಲು ಹಾತೊರೆಯುತ್ತಾನೆ. ಈ ನಿಟ್ಟಿನ ಸಾಧನೆಗಾಗಿಯೇ ನಮ್ಮ ಸನಾತನ ಧರ್ಮದ ಅಸಂಖ್ಯ ಪುಟಗಳಲ್ಲಿನ ಅಪಾರ ಶ್ಲೋಕ ಸಂಪತ್ತು ಚಿರಂತನ ಬೋಧದ  ಗಣಿಯಾಗಬಲ್ಲದು.

ಭಗವಂತನು ಲೋಕಕ್ಕೆ ಮಾರ್ಗದರ್ಶಿಯಾಗಿ, ಅತ್ಯುತ್ತಮ ನಿದರ್ಶನವಾಗಿ ತನ್ನ ಜಗದ್ರಕ್ಷಕ/ ಜಗತ್ಪಾಲಕನ ಪಾತ್ರ ನಿರ್ವಹಿಸುತ್ತಾನೆ.  ಹಿಂದಿನ ಲೇಖನಗಳಲ್ಲಿ ಎರಡು ವಿಭಿನ್ನ ಸಂದರ್ಭಗಳಲ್ಲಿ ಯಮಗೀತದ ಮೂಲಕ ದೊರೆತ ಜ್ಞಾನವನ್ನು ವಿಶ್ಲೇಷಿಸಿದ್ದೆವು.

ನಮ್ಮ ಪುರಾಣಗಳಲ್ಲಿ  ಜಿಜ್ಞಾಸುಗಳಿಗೆ ಕಾಲಾತೀತ ಜ್ಞಾನವನ್ನು ಬೋಧಿಸುವ ಗುರುವಾಗಿ ಯಮನನ್ನು ಮತ್ತೆ ಮತ್ತೆ ಕಾಣುತ್ತೇವೆ. ಕಠೋಪನಿಷತ್ತಿಗೆ ಯಮ ಹಾಗು ನಚಿಕೇತನ ಸಂವಾದವೇ ಆಧಾರ. ಈ ಅತ್ಯಮೂಲ್ಯ ಸಾರವು ಸುದೀರ್ಘ ವ್ಯಾಖ್ಯಾನವನ್ನು ಅಪೇಕ್ಷಿಸುತ್ತಾದರೂ ಇದರೊಳಗೆ ಹಲವಾರು ಜ್ಞಾನಮೌಕ್ತಿಕಗಳು ಹುದುಗಿವೆ.

ಕಠೋಪನಿಷತ್ತಿನ ದ್ವಿತೀಯ ವಲ್ಲಿಯಲ್ಲಿ ನಚಿಕೇತನ ದೃಢ ಸಂಕಲ್ಪವನ್ನು ಪರೀಕ್ಷಿಸಿದ ಯಮನು ನಚಿಕೇತನು  ಅಪೇಕ್ಷಿಸಿದ ದಿವ್ಯ ಜ್ಞಾನವನ್ನು ಬೋಧಿಸಲು ಮುಂದಾಗುತ್ತಾನೆ. ಈ ವಲ್ಲಿಯ ಪ್ರಥಮ ಶ್ಲೋಕವು ಅತಿಮುಖ್ಯವಾದದ್ದು –

ಅನ್ಯಚ್ಛ್ರೇಯೋನ್ಯದುತೈವ ಪ್ರೇಯ

ಸ್ತೇ ಉಭೇ ನಾನಾರ್ಥೇ ಪುರುಷಂ ಸಿನೀತಃ

ತಯೋ ಶ್ರೇಯ ಆದದಾನಸ್ಯ ಸಾಧು

ಭವತಿ ಹ್ರೀಯತೇರ್ಥಾದ್ಯೋ ಪ್ರೇಯೋ ವೃಣೀತೇ ।।

ಶ್ರೇಯಸ್ಕರವಾದದ್ದು(ಶ್ರೇಯ) ಹಾಗು ಮನಸ್ಸಿಗೆ ಪ್ರಿಯವೆನಿಸುವುದು (ಪ್ರೇಯ), ಎರಡರದ್ದು ವಿಭಿನ್ನ ಪಥಗಳು. ಶ್ರೇಯಸ್ಸಿನ ಪಥವನ್ನು ಆಯ್ಕೆಮಾಡಿದವನಿಗೆ ಒಳ್ಳೆಯದೇ ಆಗುತ್ತದೆ. ಆದರೆ, ಪ್ರಿಯವೆನಿಸುವುದನ್ನು ಆಯ್ಕೆಮಾಡಿದ್ದೇ ಆದರೆಮಾನವ ಜನ್ಮದ ಉದ್ದೇಶವನ್ನೇ ಕಳೆದುಕೊಂಡಂತಾಗುತ್ತದೆ

ಹಾಗಿದ್ದಲ್ಲಿ, ಮಾನವ ಜನ್ಮದ ಉದ್ದೇಶವೇನು? ಜೀವಾತ್ಮನ ಪರಮೋದ್ದೇಶವಾದ ಮೋಕ್ಷಸಾಧನೆಗೆ ಪಥವನ್ನು ಕಲ್ಪಿಸುವುದೇ ಭರತವರ್ಷದಲ್ಲಿನ ಮಾನವಜನ್ಮದ ಧ್ಯೇಯ ಎಂದು ವಿಷ್ಣುಪುರಾಣದಲ್ಲಿನ ಅನೇಕ ಆಖ್ಯಾಯಿಕೆಗಳಲ್ಲಿ ಸ್ವಾರಸ್ಯಮಯವಾಗಿ ನಿರೂಪಿಸಲಾಗಿದೆ. ಮೇಲಿನ ಶ್ಲೋಕದ ಸಂದರ್ಭದಲ್ಲಿ ಪ್ರೇಯ ಎಂದರೆ ಪರಿವಾರ, ಧನಸಂಪತ್ತು, ಏಳಿಗೆ ಮುಂತಾದ ಐಹಿಕಾಸಕ್ತಿಗಳು. ಹಾಗಿದ್ದರೆ, ಶ್ರೇಯಸ್ಕರವಾದದ್ದು ಯಾವುದು ಎಂಬ ಪ್ರಶ್ನೆ ಮೂಡುತ್ತದೆ.

ಕಠೋಪನಿಷತ್ತಿನ ವ್ಯಾಖ್ಯಾನಗಳಲ್ಲಿ ಶ್ರೇಯ ಹಾಗು ಪ್ರೇಯಗಳ ಹಲವು ಬಗೆಯ ನಿರೂಪಣೆಗಳಿವೆ. ಆದರೆ, ಅವೆಲ್ಲವೂ ಸಮ್ಮತಿಸುವ ಅಭಿಪ್ರಾವಯವೆಂದರೆ – ಸಂಸಾರದಲ್ಲಿನ ಶೋಕಕ್ಕೆ ಅವಿದ್ಯೆಯೇ ಕಾರಣ. ಆದ್ದರಿಂದ ಶ್ರೇಯಾನ್ವೇಷಣೆಯ ಆರಂಭವಾಗುವುದೇ ವಿದ್ಯೆಯಿಂದ, ಪ್ರಸ್ತುತ ಸನ್ನಿವೇಶದಲ್ಲಿ ಈ ವಿದ್ಯೆಯೇ ಬ್ರಹ್ಮಜ್ಞಾನ.

ಈ ಲೇಖನದಲ್ಲಿ ಭಗವಾನ್ ಮಹಾವಿಷ್ಣುವು ಕಪಿಲಮಹರ್ಷಿಯ ಅವತಾರದಲ್ಲಿ ತನ್ನ ತಾಯಿಯಾದ ದೇವಹೂತಿಗೆ ಬ್ರಹ್ಮಜ್ಞಾನವನ್ನು ದಯಪಾಲಿಸಿದ ಶ್ರೀಮದ್ಭಾಗವತ ಮಹಾಪುರಾಣದ ಭಾಗವನ್ನು ಅವಲೋಕಿಸೋಣ.

ಕಪಿಲಮಹರ್ಷಿಯ ಜನನ

ಸೃಷ್ಟಿಕರ್ತನಾದ ಬ್ರಹ್ಮನು ತನ್ನ ಸುತರಿಗೆ ಜನ್ಮ ನೀಡಿ , ಜಗತ್ತನ್ನು ಜೀವರಾಶಿಯಿಂದ ಸಮೃದ್ಧಗೊಳಿಸುವ ಸಲುವಾಗಿ ಸೃಷ್ಟಿಕಾರ್ಯವನ್ನು ಮುಂದುವರೆಸುವಂತೆ ಅವರಿಗೆ ಆದೇಶ ನೀಡಿದನು.  ಬ್ರಹ್ಮನ ಸುತರಲ್ಲೊಬ್ಬನಾದ ಕರ್ದಮನು ಸರಸ್ವತೀ ತೀರದಲ್ಲಿ ಹಲವು ಸಂವತ್ಸರಗಳನ್ನು ಕಠಿಣ ತಪಸ್ಸಿನಲ್ಲಿ ಕಳೆದನು.  ಶ್ರೀಮನ್ನಾರಾಯಣನು ತಪಸ್ಸಿಗೆ ಮೆಚ್ಚಿ ವರವನ್ನು ದಯಪಾಲಿಸಲು ಪ್ರತ್ಯಕ್ಷನಾದನು. ಭಗವಂತನ ದರ್ಶನದಿಂದ ಹರ್ಷಭರಿತನಾಗಿ, ಮನಸ್ಸು ತುಂಬಿ ಬಂದು, ಕೆಲಕಾಲ ಕರ್ದಮನು ಮೂಕನಾದನು. ನಂತರ ವಿಧವಿಧವಾಗಿ ಭಗವಂತನ್ನು ಕೊಂಡಾಡುತ್ತ ತನ್ನ ತಂದೆಯ ಆಜ್ಞೆಯನ್ನು ಪಾಲಿಸುವ ಸಲುವಾಗಿ ಉತ್ತಮಳಾದ ಪತ್ನಿಯನ್ನು ವರವಾಗಿ ಕೋರಿದನು. ಜೊತೆಗೆ ಲೌಕಿಕ ವಿಷಯಗಳಲ್ಲಿ ಅನಾಸಕ್ತಿ ಹಾಗು ನಿಸ್ಪೃಹವಾಗಿ ಇಹಜೀವನವನ್ನು ಅನುಭವಿಸುವ ಸಾಮರ್ಥ್ಯವನ್ನೂ ಬೇಡಿದನು.

ಕರ್ದಮನ ಭಕ್ತಿಗೆ ಪ್ರಸನ್ನನಾಗಿ ನಾರಾಯಣನು, ‘ನಿನ್ನ ಮನಸ್ಸಿನ ಆಕಾಂಕ್ಷೆ ನನಗೆ ತಿಳಿದಿದೆ. ಇನ್ನೆರಡು ದಿನದಲ್ಲಿ ನಾನು ಆಯ್ಕೆಮಾಡಿರುವ ನಿನ್ನ ಪತ್ನಿಯನ್ನು ನೀನು ಭೇಟಿ ಮಾಡುವೆ. ಅವಳು ನಿನಗೆ ಎಲ್ಲ ರೀತಿಯಲ್ಲೂ ಯೋಗ್ಯಳಾಗಿ ನೀವಿಬ್ಬರೂ ೯ ಪುತ್ರಿಯರಿಗೆ ಜನ್ಮ ನೀಡುವಿರಿ. ಅವರು ಮುಂದೆ ಮರೀಚಿ ಮುಂತಾದ ಋಷಿಗಳನ್ನು ವಿವಾಹವಾಗುವರು. ಈ ರೀತಿಯಾಗಿ ನಿನ್ನ ತಂದೆಯ ಉದ್ದೇಶ ಪೂರ್ಣವಾಗುವುದು. ನಂತರ ನಾನು ನಿನ್ನ ಮೂಲಕ ಜನ್ಮ ತಾಳಿ ಸಾಂಖ್ಯದರ್ಶನವನ್ನು ಲೋಕಕ್ಕೆ ಸಾರುತ್ತೇನೆ ‘

ಈ ಪ್ರಸಂಗದಲ್ಲಿ ಕೌತುಕಮಯವಾದ ಮತ್ತೊಂದು ಘಟನೆಯ ಉಲ್ಲೇಖವಿದೆ. ತನ್ನ ಭಕ್ತನ ಭಕ್ತಿಪರವಶತೆಯಿಂದ ಅತ್ಯಂತ ಸಂತೋಷಗೊಂಡ ನಾರಾಯಣನು ಸುರಿಸಿದ ಆನಂದಬಾಷ್ಪವು ಸರಸ್ವತೀ ತೀರದ ಕರ್ದಮನ ಆಶ್ರಮದ ಬಳಿ ಬಿಂದುಸರಸ್ ಎಂಬ ಸರೋವರವಾಯಿತು.

ನಿಯತಿಯಂತೆ, ಸ್ವಾಯಂಭುವ ಮನುವು ತನ್ನ ಪತ್ನಿಯಾದ ಶತರೂಪಳೊಂದಿಗೆ ಕರ್ದಮ ಮುನಿಯ ಆಶ್ರಮಕ್ಕೆ ಆಗಮಿಸಿ ತಮ್ಮ ಮಗಳಾದ ದೇವಹೂತಿಯನ್ನು ಕರ್ದಮನಿಗೆ ವಿವಾಹಮಾಡಿಕೊಡಲು ಮುಂದಾದರು.

ಕಾಲಾಂತರದಲ್ಲಿ ದೇವಹೂತಿಯು ನಾರಾಯಣನ ಕೃಪೆಯನ್ನು ಕೃತಜ್ಞತೆಯಿಂದ ಸ್ಮರಿಸುತ್ತಾ ತಾಯಿಯಾಗುವ ಅಪೇಕ್ಷೆಯನ್ನು ತನ್ನ ಪತಿಯಲ್ಲಿ ನಿವೇದಿಸಿದಳು. ಕರ್ದಮನು ಪತ್ನಿಯ ಅಭಿಲಾಷೆಯನ್ನರಿತು ತನ್ನ ಯೋಗಶಕ್ತಿಯಿಂದ ವಾಯುವೇಗದಲ್ಲಿ ಸಂಚರಿಸಬಲ್ಲ ವಿಮಾನವೊಂದನ್ನು ನಿರ್ಮಿಸಿ ಅದರಲ್ಲಿ ತನ್ನ ಪತ್ನಿಯ ಜೊತೆಗೆ ಬಹುಕಾಲ ಕಳೆದನು.

ದೇವಹೂತಿಯು ೯ ಹೆಣ್ಣುಮಕ್ಕಳಿಗೆ ಜನ್ಮ ನೀಡಿದ ನಂತರ ಭೂಮಿಗೆ ಮರಳಿ ಬರಬೇಕೆಂದು ಕರ್ದಮನು ನಿರ್ಣಯಿಸಿದನು. ತಾನು ತಾಯಿಯಾದ ನಂತರ ಕರ್ದಮನು ಗೃಹಸ್ಥಾಶ್ರಮವನ್ನು ತೊರೆಯುವನೆಂದು ಅರಿತ ದೇವಹೂತಿಯು ಖಿನ್ನಳಾಗಿ ಕರ್ದಮನಿಂದ ಭವಭಯವನ್ನು ಕಳೆಯುವ ರಹಸ್ಯವನ್ನು ತಿಳಿಯಬಯಸಿದಳು. ದುಃಖತಪ್ತಳಾದ ದೇವಹೂತಿಯನ್ನು ಸಮಾಧಾನಿಸುತ್ತಾ ಕರ್ದಮನು , ‘ ನೀನು ದುರ್ಭಾಗ್ಯಳೆಂದು ತಿಳಿಯದಿರು. ಸ್ವಯಂ ಶ್ರೀಮನ್ನಾರಾಯಣನೇ ನಿನ್ನ ಮಗನಾಗಿ ಜನಿಸಿ ಬರುವನೆಂದು ಭರವಸೆ ನೀಡಿದ್ದಾನೆ. ಇದಕ್ಕೆ ಮಿಗಿಲಾದೆ ಭಾಗ್ಯವುಂಟೇ? ಅತ್ಯಂತ ಕಠಿಣ ವ್ರತವನ್ನು ಕೈಗೊಳ್ಳಲು ಸಿದ್ಧಳಾಗು. ಭಗವಂತನೇ ನಿನಗೆ ಬ್ರಹ್ಮವಿದ್ಯೆಯನ್ನು ಬೋಧಿಸಿ ಇಹಬಂಧನದಿಂದ ನಿನ್ನನ್ನು ಮುಕ್ತಗೊಳಿಸುವನು.  ನಿನ್ನ ಮೂಲಕ ನರಲೋಕಕ್ಕೆ ಪ್ರಮುಖ ಸಂದೇಶವನ್ನು ಉಪದೇಶಿಸುವನು.’

ದೇವಹೂತಿಯು ಕರ್ದಮನ ಅನುಜ್ಞೆಯಂತೆ ವ್ರತಾಚರಣೆ ನಡೆಸಿ ಕಾಲಾಂತರದಲ್ಲಿ ಗರ್ಭವತಿಯಾದಳು.

ತಸ್ಯಾಂ ಬಹುತಿಥೇ ಕಾಲೇ ಭಗವಾನ್ ಮಧುಸೂದನಃ

ಕಾರ್ದಮವೀರ್ಯಮಾಪನ್ನೋ ಜಜ್ಞೇSಗ್ನಿರಿವ ದಾರುಣಿ ಶ್ರೀ.ಭಾ. .೨೪.

ನಂತರ ಭಗವಂತನು ದೇವಹೂತಿಯ ಗರ್ಭವನ್ನು ಪ್ರವೇಶಿಸಿ ಅರ್ಣಿಯಂತೆ  ಸುಪ್ತವಾಗಿದ್ದನು

ಅರ್ಣಿ ಅಥವಾ ಭಸ್ಮದಿಂದ ಆವೃತವಾದ ಕೆಂಡದ ರೂಪಕವು ನಮ್ಮ ಪುರಾಣಗಳಲ್ಲಿನ ಸ್ವಾರಸ್ಯಕರ ಪುನರುಕ್ತಿಯಾಗಿದೆ. ಪ್ರಶ್ನೋಪನಿಶತ್ತಿನ ೪ನೇ ಪ್ರಶ್ನೆಯ ೩ನೇ ಶ್ಲೋಕದಲ್ಲಿ ಅವಸ್ಥಾತ್ರಯಗಳ ಮೂಲಕ ಅರ್ಣಿಯ ಬಗೆಗೆ ಸವಿಸ್ತಾರವಾಗಿ ವರ್ಣಿಸಲಾಗಿದೆ.

ತನ್ನ ಹೆಣ್ಣುಮಕ್ಕಳ ವಿವಾಹದ ನಂತರ ಕರ್ದಮನು ಸನ್ಯಾಸವನ್ನು ಕೈಗೊಳ್ಳಲು ನಿರ್ಧರಿಸಿದನು. ದೇವಹೂತಿಯ ಗರ್ಭದಲ್ಲಿರುವ ನಾರಾಯಣನ್ನು ಆರಾಧಿಸುತ್ತಾ ಸಂಸಾರಬಂಧನದಿಂದ ಮುಕ್ತಿ ಹೊಂದುವ ಇಚ್ಛೆಯನ್ನು ನಿವೇದಿಸಿದನು. ಭಗವಂತನು ಆತನ ಭಕ್ತಿಗೆ ಮೆಚ್ಚಿ ಹೀಗೆ ನುಡಿದನು –

ಏತನ್ಮೇ ಜನ್ಮ ಲೋಕೇಸ್ಮಿನ್ ಮುಮುಕ್ಷೂಣಾಂ ದುರಾಶಯಾತ್

ಪ್ರಸಂಖ್ಯಾನಾಯ ತತ್ತ್ವಾನಾಂ ಸಮ್ಮತಾಯಾತ್ಮದರ್ಶನೇ ಶ್ರೀ.ಭಾ. .೨೪.೩೬ ।।

 ಇಹಲೋಕದ ಇಷ್ಟಾರ್ಥಗಳ ಸಂಕೋಲೆಯಿಂದ  ಮುಕ್ತಿಯನ್ನು ಅಪೇಕ್ಷಿಸುವವರಿಗೆ  ಆತ್ಮಜ್ಞಾನಕ್ಕೆ ಅತ್ಯುತ್ತಮವೆನಿಸಿರುವ ಸಾಂಖ್ಯತತ್ತ್ವವನ್ನು ಲೋಕಕ್ಕೆ ವಿವರಿಸುವ ಸಲುವಾಗಿಯೇ ಜನ್ಮತಾಳಲಿದ್ದೇನೆ.

 ಸಂನ್ಯಾಸಿಯಾಗಿ ಭವಬಂಧನಗಳನ್ನು ದಾಟಿ ಮುಕ್ತಿ ಪಥದಲ್ಲಿ ಸಾಗುವಂತೆ ಭಗವಂತನು ಕರ್ದಮನನ್ನು ಅನುಗ್ರಹಿಸಿದನು.  ತನ್ನನ್ನು ಹೊಂದುವ ಸಲುವಾಗಿ ತನ್ನ ತಾಯಿಗೆ ಆತ್ಮವಿದ್ಯೆಯನ್ನು ಬೋಧಿಸುವೆನೆಂದು ಭರವಸೆ ನೀಡಿದನು.

ಭಗವಂತನ ಅನುಗ್ರಹದಿಂದ ಕರ್ದಮನು ಸಂನ್ಯಾಸಾಶ್ರಮವನ್ನು ಸ್ವೀಕರಿಸಿ ಅರಣ್ಯದಲ್ಲಿ ಕೆಲ ಕಾಲ ಕಳೆದು ಭಗವಂತನ ಚರಣಕಮಲಗಳನ್ನು ಹೊಂದಿದನು. ಬಾಲಕನಾದ ಕಪಿಲ ತನ್ನ ತಾಯಿಯೊಂದಿಗೆ ಬಿಂದುಸರಸ್ ಸರೋವರ ತೀರದ  ಆಶ್ರಮದಲ್ಲಿ ವಾಸಿವಾಗಿದ್ದನು.

ಕಪಿಲ ಗೀತ

ಶ್ರೀಮದ್ಭಗವದ್ಗೀತೆಯ ೧೫ನೇ ಅಧ್ಯಾಯದಲ್ಲಿ  ಶ್ರೀ ಕೃಷ್ಣನು ಹೇಳುತ್ತಾನೆ –

ರೂಪಮಸ್ಯೇಹ ತಥೋಪಲಭ್ಯತೇ ನಾಂತೋ ಚಾದಿರ್ನಚ ಸಂಪ್ರತಿಷ್ಠಾ

ಅಶ್ವತ್ಥಮೇನಂ ಸುವಿರೂಢಮೂಲಮಸಂಗಶಸ್ತ್ರೇಣ ದೃಢೇನ ಛಿತ್ವಾ

ತತಃ ಪದಂ ತತ್ಪರಿಮಾರ್ಗಿತವ್ಯಂ ಯಸ್ಮಿನ್ ಗತಾ ನಿವರ್ತಂತಿ ಭೂಯಃ

ತಮೇವ ಚಾದ್ಯಂ ಪುರುಷಂ ಪ್ರಪದ್ಯೇ ಯತಃ ಪ್ರವೃತ್ತಿಃ ಪ್ರಸೃತಾ ಪುರಾಣೀ

ವೃಕ್ಷದ ಮೂಲವನ್ನಾಗಲಿ, ಅಂತ್ಯವನ್ನಾಗಲಿ, ಅದರ ಇರುವಿಕೆಯನ್ನಾಗಲಿ ಅರ್ಥೈಸಿಕೊಳ್ಳುವುದು ಸಾಧ್ಯವಿಲ್ಲ. ಆದರೆ ದೃಢವಾಗಿ ಬೇರೂರಿದ   ಅಶ್ವತ್ಥ ವೃಕ್ಷವನ್ನು ನಿರ್ಲಿಪ್ತತೆ ಎಂಬ ಕೊಡಲಿಯಿಂದ ಕಡಿಯಬೇಕು. ನಂತರಯಾವುದರಿಂದ ವಿಶ್ವದ ಚೈತನ್ಯವೆಲ್ಲ ಅನಾದಿಕಾಲದಿಂದ ಹೊಮ್ಮಿ ಬಂದಿದೆಯೋ, ವೃಕ್ಷದ ಮೂಲವಾದ ಪರಮಾತ್ಮನನ್ನು ಹೊಂದಬೇಕು. ಪರಮಾತ್ಮನ ಐಕ್ಯ ದೊರೆತ ನಂತರ ಮತ್ತೆ ಜಗತ್ತಿನ ಹಂಗು ಇರುವುದಿಲ್ಲ.

ಶ್ರೀ ಕೃಷ್ಣನು ಕೆಳಗುಮೇಲಾದ ಅಶ್ವತ್ಥ ವೃಕ್ಷವನ್ನು  ನಿರ್ಲಿಪ್ತತೆಯ ಅಸ್ತ್ರದಿಂದ ಭಿನ್ನಗೊಳಿಸಬೇಕು ಎನ್ನುವುದನ್ನು ತಿಳಿಸಿದ್ದಾನೆ. ಈ ಶ್ಲೋಕವನ್ನು ಅಧ್ಯಾತ್ಮಿಕ ಲೇಖನಗಳಲ್ಲಿ, ವ್ಯಾಖ್ಯಾನಗಳಲ್ಲಿ ಸಾಮಾನ್ಯವಾಗಿ ಉದಾಹರಿಸಲಾಗುತ್ತದೆ.

ಈ ಕಾಲಾತೀತವಾದ ಜ್ಞಾನವು ಹಿಂದೆ ದೇವಹೂತಿಯಿಂದ ಉದ್ಘೋಷಿತವಾಗಿತ್ತು.  ಆತ್ಮವಿದ್ಯೆಯನ್ನು ಪಡೆಯುವ ಉದ್ದೇಶದಿಂದ ತನ್ನ ಸುತನಾದ ಕಪಿಲನನ್ನು ಈ ರೀತಿಯಾಗಿ ಪ್ರಶ್ನಿಸುತ್ತಾಳೆ –

ತಂ ತ್ವಾಗತಾಹಂ ಶರಣಂ ಶರಣ್ಯಂ ಸ್ವಭೃತ್ಯಸಂಸಾರತರೋಃ ಕುಠಾರಮ್

ಜಿಜ್ಞಾಸಯಾಹಂ ಪ್ರಕೃತೇಃ ಪುರುಷಸ್ಯ ನಮಾಮಿ ಸದ್ಧರ್ಮವಿದಾಂ ವರಿಷ್ಠಮ್ ಶ್ರೀ.ಭಾ. .೨೫.೧೧

 ನಾನು ನಿನಗೆ ಶರಣಾಗಿದ್ದೇನೆ, ಏಕೆಂದರೆ ನೀನೊಬ್ಬನೇ ಶರಣ್ಯನು. ಭವದ ವೃಕ್ಷವನ್ನು ಕಡಿದುಬಿಡಬಲ್ಲ ಅಸ್ತ್ರವೇ ನೀನು. ಸಿದ್ಧರಲ್ಲಿ ಪರಮನಾದ ನಿನಗಿದೋ ನನ್ನ ನಮಸ್ಕಾರಗಳು. ಪುರುಷ ಪ್ರಕೃತಿ, ಜಡಚೇತನಗಳ ನಡುವಿನ ಸಂಬಂಧವನ್ನು ನನಗೆ ಬೋಧಿಸು.

ದೇವಹೂತಿಯು ಮುಕ್ತಿಮಾರ್ಗವನ್ನು ಯಾಚಿಸುತ್ತಾಳೆ. ಆ ಪರಮ ತತ್ತ್ವದ ಸ್ವರೂಪಗಳೇ ಆದ ಪುರುಷ – ಪ್ರಕೃತಿಯ ನಡುವಿನ ಸಂಬಂಧವನ್ನು ವಿವರಿಸುವಂತೆ ಪ್ರಾರ್ಥಿಸುತ್ತಾಳೆ. ಜನನ- ಮರಣಗಳ ಬಂಧನದಿಂದ ಬಿಡುಗಡೆ ನೀಡಿ ಕೈವಲ್ಯಪದದೆಡೆಗೆ ತನ್ನ ಉತ್ಕರ್ಷಕ್ಕೆ ಕಾರಣವಾಗುವ ಈ ಜ್ಞಾನವನ್ನು ತಿಳಿಯ ಬಯಸುತ್ತಾಳೆ.

ಕಪಿಲ ವಾಸುದೇವನೆಂದು ನಾಮಾಂಕಿತನಾದ ಕಪಿಲನು ಮುಗುಳ್ನಕ್ಕು ಸಂಸಾರದ ಸುಖ -ದುಃಖಗಳನ್ನು ನಾಶಗೊಳಿಸಬಲ್ಲ ಯೋಗವೊಂದರ ರಹಸ್ಯಗಳನ್ನು ದೇವಹೂತಿಗೆ ವಿವರಿಸುತ್ತಾನೆ. ಇದುವೇ ಸಾಂಖ್ಯಯೋಗ.

ಕಪಿಲ ಮಹರ್ಷಿಯು ತನ್ನ ತಾಯಿಗೆ ನೀಡಿದ ಮೊಟ್ಟಮೊದಲ ಬೋಧನೆ ಎಲ್ಲರೂ ಗ್ರಹಿಸಿ ಅಳವಡಿಸಿಕೊಳ್ಳಬೇಕಾದದ್ದು. ಮನಸ್ಸು ಅಥವಾ ಚಿತ್ತ ಎಂಬುದು ನಮ್ಮನ್ನು ದಾಸ್ಯದಲ್ಲಿ ಬಂಧಿಸಿ ಮುಕ್ತಿಯ ಅನುಭವಕ್ಕೆ ತಡೆಯೊಡ್ಡುತ್ತದೆ. ಮನಸ್ಸಿನ ಮೇಲೆ ಸತ್ವ-ರಜ-ತಮ ಗುಣಗಳ ಪ್ರಭಾವ ಉಂಟಾದಾಗ ಅವುಗಳಲ್ಲಿ ಒಂದು ಗುಣದ ಪ್ರಾಬಲ್ಯವಿರುತ್ತದೆ.

ಚೇತಃ ಖಲ್ವಸ್ಯ ಬಂಧಾಯ ಮುಕ್ತಯೇ ಚಾತ್ಮನೋ ಮತಮ್

ಗುಣೇಷು ಸಕ್ತಂ ಬಂಧಾಯ ರತಂ ವಾ ಪುಂಸಿ ಮುಕ್ತಯೇ ಶ್ರೀ. ಭಾ. .೨೫.೧೫

ಜೀವಾತ್ಮನ ಪ್ರಜ್ಞೆಯು ಭೌತಿಕ ಜಗತ್ತಿನ ತ್ರಿಗುಣಾತ್ಮಿಕತೆಯಿಂದ ಸೆಳೆಯಲ್ಪಟ್ಟಾಗ  ಸ್ಥಿತಿಯು ಬದ್ಧವೆನಿಸುತ್ತದೆಆದರೆ ಅದೇ ಪ್ರಜ್ಞೆಯು ಪರಮಾತ್ಮನಲ್ಲಿ ಯೋಜಿತವಾದಾಗ , ಮುಕ್ತಿಯ ಅನುಭವದಲ್ಲಿ ಲೀನವಾಗುತ್ತದೆ

ಈ ಎರಡು ಮಾರ್ಗವನ್ನು ಅನುಸರಿಸುವುದರಿಂದ ಚಿತ್ತದ ಮೇಲೆ ಉಂಟಾಗುವ ಪರಿಣಾಮವನ್ನು ಕಪಿಲ ಮಹರ್ಷಿಯು ಸ್ಪಷ್ಟಪಡಿಸುತ್ತಾನೆ.  ಒಂದೆಡೆ ತ್ರಿಗುಣಗಳಿಂದ ಚಿತ್ತವು ಪ್ರಭಾವಿತವಾದರೆ, ಲೌಕಿಕ ಬಂಧನಗಳಲ್ಲಿ, ಭಾವಾವೇಷಗಳಲ್ಲಿ ಸಿಲುಕಬೇಕಾಗುತ್ತದೆ. ಮತ್ತೊಂದೆಡೆ ಅದೇ ಚಿತ್ತವು ಭಗವಂತನನ್ನು ಕೂಡಿದಾಗ, ಆತ್ಮವು ದುರ್ಲಭವಾದ ಭವಬಂಧನಮುಕ್ತಿಯನ್ನು ಹೊಂದಬಲ್ಲದು.

ಚಿತ್ತದ ಬಗ್ಗೆ ವಿವರಿಸಿದ ನಂತರ ಕಪಿಲನು ಅಹಂಕಾರ, ಮಮಕಾರ ಭಾವನೆಗಳನ್ನು ಮೀರಿದಾಗ ಹೊಂದಬಹುದಾದ ಸುಖ-ದುಃಖಾತೀತ ಸ್ಥಿತಿಯ ಬಗ್ಗೆ ತಿಳಿಸುತ್ತಾನೆ.

ಜ್ಞಾನವೈರಾಗ್ಯಯುಕ್ತೇನ ಭಕ್ತಿಯುಕ್ತೇನ ಚಾತ್ಮನಾ

ಪರಿಪಶ್ಯತ್ಯುದಾಸೀನಂ ಪ್ರಕೃತಿಂ ಹತೌಜಸಮ್ ಶ್ರೀ.ಭಾ. .೨೫.೧೮

ಆತ್ಮಸಾಕ್ಷಾತ್ಕಾರದ ಸ್ಥಿತಿಯಲ್ಲಿ , ಜ್ಞಾನ,ಭಕ್ತಿ,ವಿರಕ್ತಿಯ ಅಭ್ಯಾಸದಿಂದ ಸರಿಯಾದ ದೃಷ್ಟಿಕೋನವು ಪ್ರಾಪ್ತವಾಗಿ, ಜೀವಿಯು ಇಹಲೋಕದ ಅಸ್ತಿತ್ವಕ್ಕೆ ಉದಾಸೀನತೆ ತಾಳುತ್ತಾನೆ, ಭೌತಿಕಾನುಭವಗಳು ಅವನ ಮೇಲೆ ಅತ್ಯಲ್ಪಪ್ರಭಾವ ಬೀರುತ್ತವೆ.

ಮೋಕ್ಷಪ್ರದವಾದ ಜ್ಞಾನ-ವೈರಾಗ್ಯ-ಭಕ್ತಿಯೆಂಬ ತ್ರಿಪುಟಿಯು ಸನಾತನ ಧರ್ಮದ ಪುರಾಣಗಳಲ್ಲಿ, ಶಾಸ್ತ್ರಗ್ರಂಥಗಳಲ್ಲಿ ಹಲವಾರು ಬಾರಿ ಉಲ್ಲೇಖಿತಗೊಂಡಿರುವ ವಿಷಯವಸ್ತು ಎನಿಸಿದೆ. ಆದಿಶಂಕರರೂ ತಮ್ಮ ಸುಪ್ರಸಿದ್ಧ ಅನ್ನಪೂರ್ಣಾ ಸ್ತೋತ್ರದಲ್ಲಿ ಕಾಶಿಯ ಅಧಿದೇವತೆ ಮಾತೆ ಅನ್ನಪೂರ್ಣೇಶ್ವರಿಯಲ್ಲಿ ಜ್ಞಾನ- ವೈರಾಗ್ಯವನ್ನೇ ಬೇಡುತ್ತಾರೆ.

ಅನ್ನಪೂರ್ಣೇ ಸದಾ ಪೂರ್ಣೇ ಶಂಕರಪ್ರಾಣವಲ್ಲಭೇ

ಜ್ಞಾನ ವೈರಾಗ್ಯ ಸಿದ್ಧ್ಯರ್ಥಂ ಭಿಕ್ಷಾಂ ದೇಹಿ ಪಾರ್ವತೀ

ತಾಯಿ ಅನ್ನಪೂರ್ಣೆಯೇ, ನೀನು ಸದಾ (ಅನ್ನ, ಆಶೀರ್ವಾದಗಳಿಂದ) ಸಂಪೂರ್ಣಳುಶಂಕರನ ಪ್ರೀತಿಪಾತ್ರಳಾದ ಪಾರ್ವತಿಯೇ, ನನಗೆ  ಅನುಗ್ರಹಭಿಕ್ಷೆಯನ್ನು ನೀಡಿ , ನನ್ನಲ್ಲಿ ಸುಪ್ತವಾಗಿರುವ ಅಧ್ಯಾತ್ಮ ಜ್ಞಾನವನ್ನು, ಐಹಿಕ ಭೋಗದಲ್ಲಿ ವಿರಕ್ತಿಯನ್ನು ಎಚ್ಚರಗೊಳ್ಳುವಂತೆ ಮಾಡು.

ಧರ್ಮಗ್ರಂಥಗಳು ಸಾರಿಹೇಳುವ, ಮುಕ್ತಿಗೆ ಅತಿಸುಲಭ ಮಾರ್ಗವಾದ ಭಕ್ತಿಯನ್ನು ಮುಂದೆ ಕಪಿಲ ಮಹರ್ಷಿಯು ವಿವರಿಸುತ್ತಾನೆ.

ಸಂಗ ಅಥವಾ ಅನುರಕ್ತಿಯೆಂಬುದು ಮಾನವನಲ್ಲಿ ಅದಮ್ಯವೆನಿಸುವ ಗುಣ. ಇದೇ ಅನುರಕ್ತಿಯನ್ನು ಭಕ್ತಿಯ ಸ್ವರೂಪದಲ್ಲಿ ಭಗವಂತನಲ್ಲಿ ಕೇಂದ್ರೀಕರಿಸಿದರೆ ಮೋಕ್ಷದ್ವಾರವು ತೆರೆಯುವುದರಲ್ಲಿ ಸಂದೇಹವಿಲ್ಲ.

ಪ್ರಸಂಗಮಜರಂ ಪಾಶಮಾತ್ಮನಃ ಕವಯೋ ವಿದುಃ

ಏವ ಸಾಧುಷು ಕೃತೋ ಮೋಕ್ಷದ್ವಾರಮಪಾವೃತಮ್ ಶ್ರೀ.ಭಾ. .೨೫.೨೦

ಲೌಕಿಕ ವಿಷಯಗಳಲ್ಲಿ ಆಸಕ್ತಿ ಹೊಂದಿರುವುದೇ ಜೀವಾತ್ಮನನ್ನು ಹಿಡಿದಿರುವ ಅತ್ಯಂತ ಬಿಗಿಯಾದ ಪಾಶಇದೇ ಅನುರಕ್ತಿಯು ಆತ್ಮಜ್ಞಾನಿಗಳಾದವರಿಗೆ ಮೋಕ್ಷದ್ವಾರವನ್ನು ತೆರೆಸುತ್ತದೆ.

ನಾರಾಯಣನಲ್ಲಿ ಅನುರಕ್ತನಾದವನು  ಅನ್ಯವಿಷಯಗಳಲ್ಲಿ ವಿರಕ್ತಿ ಹೊಂದುತ್ತಾನೆ. ಇದುವೇ ಮುಕ್ತಿಗೆ  ಸುಲಭೋಪಾಯ.

ಇದನ್ನು ವಿವರುಸುವ ಸಲುವಾಗಿ ಕಪಿಲ ಮಹರ್ಷಿಯು ಲೌಕಿಕದ ಸಂಗವನ್ನು ತೊರೆದು ಭಗವಂತನಲ್ಲಿ ಪರಮಭಕ್ತಿಯನ್ನು ಹೊಂದಿರುವ ಸಾಧು-ಸಂನ್ಯಾಸಿಗಳ ಗುಣವಿಶೇಷಗಳನ್ನು ಉದಾಹರಿಸುತ್ತಾನೆ. ವಿಷಯವಸ್ತುಗಳ ಮೇಲಿನ ಅನುರಕ್ತಿಯಿಂದ ಚಿತ್ತವನ್ನು ಬಿಡಿಸಬಲ್ಲ ಸಾಧುಜನರ ಸಂಗವನ್ನು ಸಂಪಾದಿಸುವಂತೆ ಉಪದೇಶಿಸುತ್ತಾನೆ.

ಏತೇ ಸಾಧವಃ ಸಾಧ್ವೀ ಸರ್ವಸಂಗವಿವರ್ಜಿತಾಃ

ಸಂಗಸ್ತೇಷ್ವಥ ತೇ ಪ್ರಾರ್ಥ್ಯಃ  ಸಂಗದೋಷಹರಾ ಹಿ ತೇ  ॥ ಶ್ರೀ.ಭಾ. .೨೫.೨೪

ತಾಯಿ, ಸಾಧ್ವಿಯೇ, ಎಲ್ಲ ರೀತಿಯ ಸಂಗದಿಂದ ಮುಕ್ತರಾದ ಸಾಧು ಜನರ ಗುಣಗಳಿವು. ಅಂತಹ ಸಾಧು ಜನರ ಸತ್ಸಂಗವು ಪ್ರಾಪಂಚಿಕ ಬಂಧನಗಳ ವಿನಾಶಕಾರೀ ಪ್ರಭಾವಗಳನ್ನು ನಿಷ್ಫಲಗೊಳಿಸಿವುದು.

ಸತ್ಸಂಗವು ಆಧುನಿಕ ಯುಗಕ್ಕೂ ಅನ್ವಯಿಸಬಹುದಾದ ಅದ್ಭುತವಾದ ಪರಿಕಲ್ಪನೆ. ಸಜ್ಜನರ ಒಡನಾಟದಿಂದ ಆತ್ಮೋತ್ಕರ್ಷವನ್ನು ಸಾಧಿಸಬಹುದು. ಆದಿಶಂಕರರು ತಮ್ಮ ಜ್ಞಾನಮೌಕ್ತಿಕಗಳಲ್ಲೊಂದಾದ ‘ಭಜ ಗೋವಿಂದಮ್ ‘ ನಲ್ಲಿಯೂ ಈ ವಸ್ತುವಿನ ಕುರಿತಾಗಿ ಹೀಗೆ ಹೇಳಿದ್ದಾರೆ –

ಸತ್ಸಂಗತ್ವೇ ನಿಸ್ಸಂಗತ್ವಂ ನಿಸ್ಸಂಗತ್ವೇ ನಿರ್ಮೋಹತ್ವಮ್

ನಿರ್ಮೋಹತ್ವೇ ನಿಶ್ಚಲತತ್ವಂ ನಿಶ್ಚಲತತ್ವೇ ಜೀವನ್ಮುಕ್ತಿಃ

ಸಜ್ಜನರ ಸಂಗದಿಂದ ಸಂಗರಾಹಿತ್ಯ, ಸಂಗರಾಹಿತ್ಯದಿಂದ ಮೋಹದ ವಿನಾಶ, ಮೋಹನಾಶದಿಂದ ಸ್ಥಿರತೆ, ಸ್ಥಿರತೆಯಿಂದ ಮೋಕ್ಷ.

ಸಾಧುಜನರ ಸಂಗದಿಂದ ಭಗವಂತನ ಲೀಲೆಗಳ ಪರಿಚಯವಾಗಿ, ಮನಸ್ಸಿನಲ್ಲಿ ಸಂತೋಷವುಂಟಾಗಿ, ಕೇವಲ ಭಗವಂತನಲ್ಲಿ ಮಾತ್ರ ಆಸಕ್ತಿಯುಂಟಾಗುತ್ತದೆ. ಭಗವಚ್ಚಿಂತನೆಯಿಂದ ಉಂಟಾಗುವ ಸಂತೋಷವೇ ಭಕ್ತಿಯಾಗಿ ಪರಿಣಮಿಸುವುದು ಎಂಬುದಾಗಿ ಕಪಿಲನು ವಿವರಿಸಿದ್ದಾನೆ.

ಸತ್ಸಂಗದಿಂದ  ಶ್ರದ್ಧೆ, ಶ್ರದ್ಧೆಯ ಮೂಲಕ ರತಿ, ತನ್ಮೂಲಕ ಭಕ್ತಿಯುಂಟಾಗುವುದು. ಭಗವಂತನಲ್ಲಿ ಅಪಾರ ಭಕ್ತಿಯಿದ್ದಾಗ  ಬೇರೆಲ್ಲವೂ ಗೌಣವಾಗುವುದು. ತದೇಕಚಿತ್ತನಾಗಿ ಭಗವಂತನಲ್ಲಿ ಸ್ಠಿತನಾದವನು  ಬಾಹ್ಯಪ್ರಪಂಚದ ಲೇಪವಿಲ್ಲದ ಮನಸ್ಸುಳ್ಳವನಾಗಿ ಸೂಕ್ಷ್ಮಮತಿಯೆನಿಸುವನು.

ದೇವಹೂತಿಯು  ಹೀಗೆಂದು ನಿವೇದಿಸುತ್ತಾಳೆ – ‘ಸುತನೇ, ನಾನು ಸಾಧುಗಳು ಅರಿತಿರುವ ವೇದಗಳನ್ನು, ಸತ್ಯವನ್ನು ಅರಿಯದ ಅವಿದ್ಯಾವಂತಳು. ನನ್ನಂತಹ ಸಾಮಾನ್ಯಳು ನಿನ್ನನ್ನು ಹೊಂದುವುದು ಹೇಗೆ? ಅತ್ಯಂತ ಸುಲಭವಾದ ಮಾರ್ಗ ಯಾವುದು?

ಕಪಿಲನು ಉತ್ತರಿಸುತ್ತಾನೆ –

ದೇವಾನಾಂ ಗುಣಲಿಂಗಾನಾಮಾನುಶ್ರವಿಕಕರ್ಮಣಾಂ

ಸತ್ತ್ವ ಏವೈಕಮನಸೋ  ವೃತ್ತಿಃ ಸ್ವಾಭಾವಿಕೀ ತು ಯಾ

ಅನಿಮಿತ್ತಾ ಭಗವತೀ ಭಕ್ತಿಃ ಸಿದ್ಧೇರ್ಗರೀಯಸೀ  ॥ ಶ್ರೀ.ಭಾ. .೨೫.೩೨

ಇಂದ್ರಿಯಗಳು ದೇವತೆಗಳ ಪ್ರತೀಕವಾಗಿದ್ದು ಸ್ವಾಭಾವಿಕವಾಗಿ ವೇದೋಕ್ತಿಗಳ ನಿರ್ಬಂಧಕ್ಕನುಗುಣವಾಗಿ ಕಾರ್ಯ ನಿರ್ವಹಿಸುತ್ತವೆ. ಇಂದ್ರಿಯಗಳು ದೇವತೆಗಳ ಪ್ರತೀಕವಾಗಿರುವಂತೆ ಮನಸ್ಸು ಪರಮಾತ್ಮನ ಪ್ರತೀಕವಾಗಿದೆ. ಮನಸ್ಸಿನ ಪ್ರಾಕೃತಿಕ ಗುಣ, ಸೇವಾಭಾವಯಾವುದೇ ಉದ್ದೇಶಸಾಧನೆಯ ಪ್ರೇರಣೆಯಿಲ್ಲದೇ ಸೇವಾಭಾವವು ಪರಮಾತ್ಮನ ಭಕ್ತಿಯಲ್ಲಿ ವ್ಯಕ್ತವಾದರೆ, ಅದು ಮುಕ್ತಿಗೂ ಮಿಗಿಲಾದದ್ದು.

ಭಗವಂತನೆಡೆಗಿನ ನಿಃಸ್ವಾರ್ಥ ಭಕ್ತಿಭಾವವು ಅವನನ್ನು ಹೊಂದುವ ಅತ್ಯಂತ ಶ್ರೇಷ್ಠ ಮಾರ್ಗ  ಹಾಗು ಮುಕ್ತಿಗಿಂತ ಮೇಲಾದುದು. ಭಕ್ತಿಯು ಭವಬಂಧನದಿಂದ ಬಿಡಿಸಿ ಪರಮಾತ್ಮೈಕ್ಯವನ್ನು ಸಾಧ್ಯವಾಗಿಸುವುದು. ಭಕ್ತಿಮಾರ್ಗದಲ್ಲಿ ದೃಢವಾಗಿ ಸಾಗಿದರೆ  ಮುಕ್ತಿಯು ತಾನಾಗಿ ಸಿದ್ಧಿಸುವುದು.

ಶ್ರೀಮನ್ನಾರಾಯಣನ ಭಕ್ತರು ತನ್ನನ್ನು ಸುತನಾಗಿ, ಮಿತ್ರನಾಗಿ, ಹಿತೈಷಿಯಾಗಿ, ಪ್ರೀತಿಪಾತ್ರನಾಗಿ ಕಾಣುತ್ತಾರೆ ಎಂದು ಕಪಿಲನು ತಿಳಿಸುತ್ತಾನೆ. ನಿಜಭಕ್ತರಿಗೆ ನಾರಾಯಣನೇ ಸರ್ವಸ್ವ. ಅವರನ್ನು ಈ ಲೋಕದ ಭಯ ಕಾಡದು.

ಜ್ಞಾನವೈರಾಗ್ಯ ಯುಕ್ತೇನ ಭಕ್ತಿಯೋಗೇನ ಯೋಗಿನಃ

ಕ್ಷೇಮಾಯ ಪಾದಮೂಲಂ ಮೇ ಪ್ರವಿಶಂತ್ಯಕುತೋ ಭಯಮ್ ಶ್ರೀ.ಭಾ. .೨೫.೪೩

ಪಾರಮಜ್ಞಾನಿಗಳಾಗಿ ವರಾಗ್ಯದಿಂದ ಕೂಡಿ , ಭಕ್ತಿ ಮಾರ್ಗದಲ್ಲಿ ನಡೆದು ನನ್ನ ಪದಕಮಲಗಳಲ್ಲಿ ಶರಣಾಗುವ ಯೋಗಿಗಳೇ ನಿರ್ಭೀತರಾಗಿ ನನ್ನ ಪರಂಧಾಮವನ್ನು ಹೊಂದಲು ಅರ್ಹರು.

ಇಂದ್ರಿಯಗಳನ್ನು ಜಯಿಸಿರುವ ಯೋಗಿಗಳನ್ನು ಯಾವುದೇ ಭಯವು ಕಾಡದು.  ಅವರು ನಿಸ್ಸಂಶಯದಿಂದ ಪರಮಾತ್ಮನನ್ನು ಹೊಂದುವರು.

ನಂತರ ಕಪಿಲನು ಪುರುಷ-ಪ್ರಕೃತಿ ವಿಚಾರದ ಸೂಕ್ಷ್ಮತೆಗಳನ್ನು, ಅವುಗಳ ನಡುವಿನ ಸಂಬಂಧವನ್ನು, ಅವುಗಳ  ಒಳರಹಸ್ಯಗಳನ್ನು ತನ್ನ ತಾಯಿಗೆ ತಿಳಿಸುತ್ತಾನೆ.

ಪುರುಷನೆಂದರೆ  ಯಾರು ?

 • ಎಲ್ಲರೊಳಗಿರುವ ಆತ್ಮನೇ ಪುರುಷ.
 • ಅವನು ಅನಾದಿ, ಅನಂತ.
 • ಎಲ್ಲವನ್ನೂ ಆವರಿಸಿ ಸನಾತನವಾಗಿರುವುದೇ ಪುರುಷ , ಪುರುಷನಿಲ್ಲದ ವಸ್ತುವಿಲ್ಲ. ಕಾಲ ಪುರುಷನ ಮತ್ತೊಂದು ರೂಪ.
 • ಪುರುಷ ತ್ರಿಗುಣಾತೀತನು.
 • ಆತ್ಮನ ವಿಕಲ್ಪಕ್ಕೆ ಪ್ರಕೃತಿಯೇ ಕಾರಣ.
 • ಮೂರು ಗುಣಗಳೂ ಸಮತೋಲ ಸ್ಠಿತಿಯಲ್ಲಿದ್ದಾಗ ನಿರ್ಗುಣತ್ವ.
 • ಪುರುಷನ ಎರಡು ರೂಪಗಳು ಜೀವಾತ್ಮ ಮತ್ತು ಪರಮಾತ್ಮ.

ಪ್ರಕೃತಿಯೆಂದರೆ ಯಾವುದು?

 • ಪ್ರಕೃತಿಯು ಎರಡು ಅಂಶಗಳಿಂದ ಕೂಡಿದೆ – ಆವರಣ ಶಕ್ತಿ ಹಾಗು ವಿಕ್ಷೇಪ ಶಕ್ತಿ.
 • ಕಾಲಕ್ರಮೇಣ ತ್ರಿಗುಣಗಳ ಸಮತೋಲದಲ್ಲಿ ವ್ಯತ್ಯಾಸವುಂಟಾಗಿ , ಪ್ರಮುಖವಾಗಿ ರಜೋಗುಣವು ವ್ಯಕ್ತಗೊಂಡು , ಅದನ್ನು ಅನುಸರಿಸಿ ಉಳಿದೆರಡು ಗುಣಗಳು ವ್ಯಕ್ತವಾಗುತ್ತವೆ.
 • ಗುಣಗಳ ಕ್ರಿಯೆಯಿಂದ ಆವರಣ-ವಿಕ್ಷೇಪಗಳು ಅನಾವರಣಗೊಳ್ಳುತ್ತವೆ.
 • ಗುಣಗಳು ಜೀವಾತ್ಮನ ಮೇಲೆ ಪರಿಣಾಮ ಬೀರುತ್ತವೆ.
 • ಆವರಣ ಶಕ್ತಿಯು ಜೀವಾತ್ಮನು ತನ್ನ ನಿಜಸ್ವರೂಪವನ್ನು ಮರೆಯುವಂತೆ ಮಾಡುತ್ತದೆ – ಇದುವೇ ಅವಿದ್ಯೆ.
 • ಅವಿದ್ಯೆಯೆಂಬುದು ಜೀವಿಯು ಆತ್ಮಾಜ್ಞಾನದಿಂದ ವಂಚಿತನಾದ ಸ್ಥಿತಿ.
 • ಅವಿದ್ಯೆಯ ಮೂಲಕ ವಿಕ್ಷೇಪ ಪ್ರಭಾವ ಬೀರುತ್ತದೆ.
 • ವಿಕ್ಷೇಪವೆಂದರೆ ಭ್ರಮೆ, ಮಾಯೆ. ಯಾವುದು ಸತ್ಯವಲ್ಲವೋ ಅದನ್ನು ಸತ್ಯವೆಂದು ತಿಳಿದು ತಲ್ಲಣಗೊಳ್ಳುವ ಸ್ಥಿತಿ.
 • ಆವರಣ – ವಿಕ್ಷೇಪಗಳ ಪ್ರಭಾವದಿಂದ ಅವಿದ್ಯೆ ಹಾಗು ಮಾಯೆ.

ಯಾವ ಪುರುಷಸ್ವರೂಪವು ಪ್ರಕೃತಿಶಕ್ತಿಯ ಪ್ರಭಾವಕ್ಕೆ ಒಳಪಡುವುದಿಲ್ಲವೋ ಅದು ಪರಮಾತ್ಮವೆನಿಸುತ್ತದೆ.

ತಸ್ಮಾತ್ತ್ವಂ ಸರ್ವಭಾವೇನ ಭಜಸ್ವ ಪರಮೇಷ್ಠಿನಂ

ತದ್ಗುಣಾಶ್ರಯಯಾ ಭಕ್ತ್ಯಾ ಭಜನೀಯಪದಾಂಬುಜಮ್ ಶ್ರೀ.ಭಾ. .೩೨.೨೨

ತಾಯೇ, ಆದ್ದರಿಂದ ಪೂಜನೀಯವಾದ ಭಗವಂತನ ಪದಕಮಲಗಳಿಗೆ ಶರಣಾಗು ಎಂದು ನಿನಗೆ ಉಪದೇಶಿಸುತ್ತೇನೆ. ಇದನ್ನು ಹೃತ್ಪೂರ್ವಕವಾಗಿ ಭಕ್ತಿಯಿಂದ ಅನುಷ್ಠಾನಗೊಳಿಸು. ಇದರಿಂದಾಗಿ ಸದಾ ಭಕ್ತಿಯ ಪರಮಪಥದಲ್ಲಿ ನೆಲೆಯೂರುವೆ.

ಮಾಯಾ ವಿಭ್ರಮಣೆಯಿಂದ ಬಿಡುಗಡೆ ಹೊಂದಿ, ಪ್ರಕೃತಿಶಕ್ತಿಗಳು ಜೀವಾತ್ಮನ ಮೇಲೆ ಯಾವ ಪ್ರಭಾವವನ್ನೂ ಬೀರದ ಸ್ಥಿತಿಯನ್ನು ತಲುಪಲು ಭಕ್ತಿಮಾರ್ಗವನ್ನು ಅನುಸರಿಸಬೇಕೆಂದು ಕಪಿಲನು ತನ್ನ ತಾಯಿಗೆ ವಿವರಿಸುತ್ತಾನೆ.  ಭಗವಂತನ ಪರಂಧಾಮವನ್ನು ಹೊಂದಲು ಬೇಕಾದ ಜ್ಞಾನವೈರಾಗ್ಯಗಳನ್ನು ಭಕ್ತಿಯೊಂದೇ  ನೀಡಬಲ್ಲದು.

ನಾರಾಯಣನ ಪದಕಮಲವನ್ನು ಹೊಂದುವುದೇ ತನ್ನ ಪರಮಧ್ಯೇಯವೆಂದು ಭಕ್ತನು ಆ ನಿಟ್ಟಿನಲ್ಲಿ ತನ್ನೆಲ್ಲ ಪ್ರಯತ್ನವನ್ನು ಕೇಂದ್ರೀಕರಿಸಿದಾಗ ಅವಿದ್ಯೆಯೆಂಬ ಆಚ್ಛಾದಿತ ತೆರೆಯು ಕಳಚುತ್ತದೆ. ಶ್ರೀಮನ್ನಾರಾಯಣನೇ ಪರಮ ಸತ್ಯ, ಅವನಲ್ಲದೇ ಬೇರಾವುದೂ ಇರದು ಎಂಬುದರ ಅರಿವಾಗುತ್ತದೆ.

ಬ್ರಹ್ಮ, ಪುರುಷ, ಈಶ್ವರ, ಭಗವಂತ – ಇದನ್ನು ಯಾರು ಅರಸುತ್ತಾನೋ ಅವನೇ ಸ್ವತಃ ಬ್ರಹ್ಮನೆನಿಸುತ್ತಾನೆ.  ಈ ಪರಮ ತತ್ತ್ವದ ಜ್ಞಾನವಿರುವವನೇ ಬ್ರಹ್ಮನು. ಬ್ರಹ್ಮಜ್ಞಾನವು ಜ್ಞಾನವಷ್ಟೇ ಅಲ್ಲ, ಅದು ಬ್ರಹ್ಮತ್ವ.

ಜ್ಞಾನಯೋಗಶ್ಚ ಮನ್ನಿಷ್ಠೋ ನಿರ್ಗುಣ್ಯೋ ಭಕ್ತಿ ಲಕ್ಷಣಃ

ದ್ವಯೋರಪ್ಯೇಕಏವಾರ್ಥೊ ಭಗವಚ್ಛಬ್ದಲಕ್ಷಣಃ ಶ್ರೀ.ಭಾ. .೩೨.೩೨

ತತ್ತ್ವವಿಚಾರವು ಭಗವಂತನನ್ನು ಅರ್ಥೈಸಿಕೊಳ್ಳುವುದರಲ್ಲಿ ಸಾರ್ಥಕಗೊಳ್ಳುತ್ತದೆ. ಇದಾದ ನಂತರ ಜೀವಿಯು ಐಹಿಕಾಸಕ್ತಿಗಳಿಂದ ಮುಕ್ತನಾಗಿ ಪರಮಭಕ್ತಿಯ ಸ್ಥಿತಿಯನ್ನು ಹೊಂದುತ್ತಾನೆ. ಭಕ್ತಿಯಿಂದಾಗಲಿ ತತ್ತ್ವವಿಚಾರದಿಂದಾಗಲಿ ಹೊಂದುವ ಪರಮಧ್ಯೇಯವು ಒಂದೇಭಗವಂತನ ಸಾನ್ನಿಧ್ಯ.

ಪರಮಸತ್ಯದ ಅರಿವಾದಾಗ ನೀನೇ ಬ್ರಹ್ಮನು ಎಂಬುದು ವೇದ್ಯವಾಗುತ್ತದೆ. ಜೀವಾತ್ಮನು ತಾನೇ ಈಶ್ವರ,ಪರಮಾತ್ಮ,ಪರಮಪುರುಷನೆಂದು ಮನಗಾಣುತ್ತಾನೆ.

ವಸ್ತುತಃ ಜ್ಞಾನಯೋಗ ಹಾಗು ಭಕ್ತಿಯೋಗಗಳಲ್ಲಿ ಯಾವ ಭಿನ್ನತೆಯೂ ಇಲ್ಲ, ಅವೆರಡೂ ಒಂದೇ.

ತನ್ನ ತಾಯಿಯ ಮೂಲಕ ಲೋಕಕ್ಕೆ ಸಾಂಖ್ಯಯೋಗವನ್ನು ಪ್ರತಿಪಾದಿಸುವ ತನ್ನ ಜೀವನೋದ್ದೇಶವು ಪೂರ್ಣಗೊಂಡಾಗ ಕಪಿಲವಾಸುದೇವನು ತನ್ನ ನಿಜನಿವಾಸವನ್ನು ಹೊಂದುತ್ತಾನೆ.

ಸುತನಿಂದ ದಿವ್ಯಜ್ಞಾನವನ್ನು ಪಡೆದ ದೇವಹೂತಿಯು ಅಷ್ಟಾಂಗಯೋಗವನ್ನು ಅನುಸಂಧಾನ ಮಾಡುತ್ತಾ ಬ್ರಹ್ಮನಲ್ಲಿ ಮನಸ್ಸನ್ನಿರಿಸುತ್ತಾಳೆ. ಅಲ್ಪಕಾಲದಲ್ಲಿಯೇ ಅವಳ ಅವಿದ್ಯೆಯು ದಹಿಸಿ ಬ್ರಾಹ್ಮೀ ಸ್ಥಿತಿಯನ್ನು ಹೊಂದುತ್ತಾಳೆ.

ಉಪಸಂಹಾರ

ಸಾಂಖ್ಯಯೋಗಸ್ವರೂಪದ ಭಗವಾನ್ ಕಪಿಲವಾಸುದೇವನ ದಿವ್ಯೋಕ್ತಿಗಳಲ್ಲಿ ಮುಕ್ತಿಯನ್ನು ಹೊಂದುವ ವಿವಿಧ ಪಥಗಳನ್ನು ಈ ಲೇಖನದಲ್ಲಿ ಅವಲೋಕಿಸಿದ್ದೇವೆ.  ಈ ಗೀತೆ (ದಿವ್ಯ ವಾಣಿ) ಯ ಮೂಲಕ ಭಗವಂತನು  ಮಾನವ ತನ್ನ ನಿತ್ಯಜೀವನದಲ್ಲಿ ಸಾಗಬೇಕಾದ ಮಾರ್ಗವನ್ನು ಪ್ರಚುರಪಡಿಸಿದ್ದಾನೆ.

ಶ್ರೀಮದ್ಭಗವದ್ಗೀತೆ, ಆದಿಶಂಕರರ ಕೃತಿಗಳು ಮುಂತಾದ ಅನೇಕ ಪ್ರಕರಣಗಳು ಚಿರಂತನವಾಗಿ ಉಳಿದು ಬಂದಿರುವ ಸಾಂಖ್ಯಯೋಗದ ದಿವ್ಯ ಸಿದ್ಧಾಂತಗಳನ್ನೇ ಆಧರಿಸಿವೆ.

ಗ್ರಂಥಸೂಚಿ

Śrīmad Bhāgavata Purāṇa – Gita Press (Kannada version)

Śrīmad Bhāgavata Purāṇa – Kamala Subramaniam

Eight Upanishads (with Sankara Commentary) – Swami Gambhirananda

The Principal Upanishads (with Madhava Bhasya) – Prof. K.T.Pandurangi

Katha Upanishad commentary – http://www.srimatham.com/

Srimad Bhagwatha Purana shlokas & verses : https://vedabase.io/en/library/sb

Srimad Bhagwad Gita shlokas and verses : https://www.holy-bhagavad-gita.org/

(This is a Kannada translation of an English article by Ganesh Vijayan)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply