close logo

ಅಪ್ಸರೆಯರು – ಭಾಗ 7 : ಕಾಮದ ಅನುಭೂತಿ ಪ್ರಧಾನಿಗಳು

ವೇದಗಳಲ್ಲಿನ ಅಪ್ಸರೆಯರ ಉಲ್ಲೇಖಗಳು ಅವರ ಕಲಾತ್ಮಕ ಶ್ರೀಮಂತಿಕೆ, ಆಧ್ಯಾತ್ಮಿಕ ದೃಷ್ಟಿಕೋನವಿರವ ವಾಕ್ಚಾತುರ್ಯ ಮತ್ತು ಕಾಮಪ್ರಚೋದಕ ಆಕಾಂಕ್ಷೆಗಳಂತಹ ಹತ್ತು ಹಲವು ನಿಗೂಢ ವಿಚಾರಗಳಿಂದ ಆಕರ್ಷಕವಾಗಿದೆ.  ಮಾನವರು ದೈವೀ ಭಾವಕ್ಕೆ  ತಮ್ಮನ್ನು ತಾವು ಸಮರ್ಪಿಸಿಕೊಳ್ಳಲು ನೆರವಾಗಲು ನರಸಾಮಾನ್ಯರ ಭಾವನೆಗಳನ್ನೇ ಪ್ರತಿಬಿಂಬಿಸವ ಬ್ರಹ್ಮನ ಬಹು ಮುಖ್ಯವಾದ ಮತ್ತು ನಿಗೂಢವಾದ ಸೃಷ್ಟಿ ಈ ಆಕಾಶ ಸುಂದರಿಯರು.

ಭರತ ಮುನಿಯ ನಾಟ್ಯ ಶಾಸ್ತ್ರದ ನವರಸಗಳ ಪರಮಸತ್ತ್ವಗಳನ್ನು ಮೈಗೂಡಿಸಿಕೊಂಡಿರುವ ಈ ಆಕಾಶ ಸುಂದರಿಯರು ತಮ್ಮ ವರ್ಚಸ್ಸು, ಭಂಗಿ ಮತ್ತು ಚಲನ-ವಲನಗಳಿಂದ ಭಾವೋತ್ಕರ್ಶಗಳನ್ನು ಪ್ರಚೋದಿಸುತ್ತಾರೆ. ವೇದ ಸಾಹಿತ್ಯವು ಅಪ್ಸರೆಯರಲ್ಲಿನ ಕಾಮ ಪ್ರಚೋದಕ ಪ್ರವೃತ್ತಿಯನ್ನು ಸಹಜವೆಂದು ಪರಿಗಣಿಸಿ, ಈ ಪ್ರವೃತ್ತಿಯೇ ಅವರ ಸೃಜನಾತ್ಮಕ ತೇಜಸ್ಸಿಗೆ ಎಡೆಮಾಡಿಕೊಡುತ್ತದೆ ಎಂದು ಹೇಳುತ್ತದೆ.

ಶೃಂಗಾರ ರಸದಲ್ಲಿ ಇಂದ್ರಿಯ ಸುಖ ಸಂಬಂಧಿತವಾದ  ಕಾಮದ ಪ್ರತಿನಿಧಿಗಳು ಅಪ್ಸರೆಯರು ಆದ್ದರಿಂದಲೇ ಕಲ್ಲಿನಲ್ಲಿ ಶಿಲ್ಪಗಳಾಗಿ ಜೀವತಾಳಿದ್ದಾರೆ, ಪುರಾಣ ಮತ್ತು ಸಾಹಿತ್ಯದ ಅನೇಕಾನೇಕ ಪುಟಗಳು ಇವರ ಮೋಹಕತೆಯನ್ನು ಪದಗಳಲ್ಲಿ ಬಂಧಿಸಿಟ್ಟಿವೆ, ಲೆಕ್ಕವಿಲ್ಲದಷ್ಟು ಬಣ್ಣಗಳು ಚಿತ್ರಗಳಲ್ಲಿ ಇವರ ಸೌಂದರ್ಯವನ್ನು ಸೆರೆಹಿಡಿದಿವೆ. ಕೇವಲ ಇಂದ್ರಿಯ ತೃಪ್ತಿಯಷ್ಟೇ ಅಲ್ಲ ಕಾಮದಲ್ಲಿನ ಆನಂದದ ಅನುಭೂತಿಯಾಗುವ ಕೌಶಲ್ಯವನ್ನು ಪ್ರತಿಬಿಂಬಿಸುವ ಕುಶಲಿಗಳು ಈ ಮೋಹಕ ಮಾನಿನಿಯರು.

ಇವರ ಭವ್ಯವಾದ ಸ್ತ್ರೀ ವಿಶೇಷಣಗಳ ವರ್ಣನೆಗಳು ಮೊದಲಿಗೆ ಋಗ್ ವೇದದಲ್ಲಿ ಸಿಗುತ್ತವೆ. ಹಾಗೇ ಮುಂದುವರೆದು ಪುರಾಣ ಸಾಹಿತ್ಯದಲ್ಲಿ ಸುವಿಸ್ತಾರವಾಗಿ ಕಾಣ ಸಿಗುತ್ತವೆ. ಉದಾಹರಣೆಗೆ, ಗರುಡ ಪುರಾಣದ ಅರವತ್ತುನಾಲ್ಕನೇ ಅಧ್ಯಾಯದಲ್ಲಿ ಪುರುಷನ ದೇಹಲಕ್ಷಣಗಳ ವರ್ಣನೆಯಿದ್ದರೆ ಅರವತ್ತೈದನೇ ಅಧ್ಯಾಯದಲ್ಲಿ ಸ್ತ್ರೀ ಸೌಂದರ್ಯದ ವಿಷಯಗಳು ದೊರಕುತ್ತವೆ. ಅಗ್ನಿಪುರಾಣವು ಆದರ್ಶಪ್ರಾಯವಾದ ಸ್ತ್ರೀ ಲಾವಣ್ಯದ ಲಕ್ಷಣಗಳನ್ನು ವಿವರಿಸುತ್ತದೆ. ಕೃಷ್ಣನೊಂದಿಗೆ ರಾಸಲೀಲೆಯಾಡುತ್ತಿದ್ದ ಗೋಪಿಕೆಯರ ಸೌಂದರ್ಯ ಮತ್ತು ಕೃಷ್ಣನ ರೂಪವನ್ನು ನೂರಾರು ಗ್ರಂಥಗಳಲ್ಲಿ ಓದಬಹುದು. ವೇದ ಸಾಹಿತ್ಯ ಮತ್ತು ಪುರಾಣಗಳಲ್ಲಿ ದೇಹಲಕ್ಷಣಗಳಿಗೆ ಪ್ರಾಧಾನ್ಯವಿದೆ. ಅಂತೆಯೇ ಬ್ರಹ್ಮ ದೇವನು ಅತ್ಯಂತ ಅಪೇಕ್ಷಣೀಯವಾದ ಗುಣಲಕ್ಷಣಗಳೊಂದಿಗೆ ಅಪ್ಸರೆಯರನ್ನು ಸೃಷ್ಟಿಸಿ ಭರತ ಮುನಿಗೆ ಒಪ್ಪಿಸಿದನು. ನಂತರ ಭರತ ಮುನಿಯು ಅಪ್ಸರೆಯರಿಗೆ ನಾಟ್ಯಶಾಸ್ತ್ರಕ್ಕೆ ಅವಶ್ಯಕವಾದ ನವರಸಗಳ ಸಮಸ್ತ ಸೂಕ್ಷ್ಮಗಳ ಜ್ಞಾನವನ್ನು ಇವರಿಗೆ ಧಾರೆಯೆರೆದನು.  ಹೀಗೆ ಅಪ್ಸರೆಯರು ಭಾವ ಮತ್ತು ಮುದ್ರೆಗಳ ಮೂಲಕ ಪಂಚೇಂದ್ರಿಯಗಳನ್ನು ಪ್ರಚೋದಿಸಿ ಭಾವಪರವಶತೆಯ ಅನುಭೂತಿಯಾಗಿಸುವಲ್ಲಿ ಸಮರ್ಥರಾದ ರೂಪಸಿಯರು.

ಹಿಂದೂ ಧರ್ಮದ ಪ್ರಕಾರ ಮಾನವ ಜನ್ಮದ ಉದ್ದೇಶವು, ಧರ್ಮ, ಅರ್ಥ, ಕಾಮ ಮತ್ತು ಅಂತಿಮವಾಗಿ ಮೋಕ್ಷ ಸಾಧನೆಯಾಗಿದೆ. ಧರ್ಮಗ್ರಂಥಗಳು ಕಾಮವನ್ನು ಸಾಂಪ್ರದಾಯಿಕ ಮತ್ತು ಪವಿತ್ರ ಕರ್ತವ್ಯವೆಂದು ಪರಿಗಣಿಸುತ್ತದೆ. ಪುರುಷ ಮತ್ತು ಪ್ರಕೃತಿ ಸ್ವರೂಪವಾದ ಶಿವ ಮತ್ತು ಶಕ್ತಿಯ ಪವಿತ್ರವಾದ ಸಮ್ಮಿಲನದ ಪ್ರತೀಕವೆಂದು ವಿವರಿಸುತ್ತದೆ. ಹೀಗೆ, ಪ್ರಕೃತಿಪುರುಷರ ಸಂಗಮವು ಜಗತ್ತಿನ ಸೃಷ್ಟಿ, ಜೀವಿಗಳ ಬೆಳವಣಿಗೆ ಮತ್ತು ಜೀವನದ ಅಸ್ತಿತ್ವಕ್ಕೆ ಕಾರಣವಾಗಿದೆ.

ಕಾಮಶಾಸ್ತ್ರದ ಸೂತ್ರಗಳ ಕರ್ತೃ ವಾತ್ಸಾಯನ. ಇವನು ಕಾಮಸೂತ್ರದಲ್ಲಿ ಕಾಮ ಸಾಧನೆ ಮತ್ತು ಆಚರಣೆಯ ತಂತ್ರಗಳನ್ನು ವೈಜ್ಞಾನಿಕವಾಗಿ ವಿವರಿಸಿದ್ದಾನೆ. ಕಾಮಸೂತ್ರದ ಮುನ್ನುಡಿಯಲ್ಲಿ ವಾತ್ಸಾಯನನು ಪ್ರಜಾಪತಿಗೆ ಗೌರವ ಸಲ್ಲಿಸುತ್ತಾನೆ. ಪ್ರಜಾಪತಿಯು ಎಲ್ಲ ಜೀವಿಗಳಿಗೆ ಅಧಿಪತಿಯಾದವನು,  ಧರ್ಮ, ಅರ್ಥ ಮತ್ತು ಕಾಮದ ಆಚರಣೆ ಕುರಿತು ಹತ್ತು ಲಕ್ಷ ಅಧ್ಯಾಯಗಳನ್ನು ಉಪದೇಶಿಸಿದವನು. ನಂತರ ಮನು ಧರ್ಮದ ಬಗ್ಗೆ, ಬೃಹಸ್ಪತಿ ಅರ್ಥವನ್ನು ಕುರಿತು ಮತ್ತು ಶಿವನ ಬಂಟನಾದ ನಂದಿಯು ಕಾಮವನ್ನು ಕುರಿತು ಚರ್ಚಿಸಿದರು. ಮೋಕ್ಷ ಸಾಧನೆಯ ಮಾರ್ಗದಲ್ಲಿ ಪುರುಷಾರ್ಥಗಳನ್ನು  ಪಾಲಿಸುವವರು ಕಾಮಕ್ಕೆ ಸಂಬಂದಿಸಿದ ವಿಷಯಗಳನ್ನು ಅರ್ಥಮಾಡಿಕೊಂಡು ಆಚರಿಸುವಲ್ಲಿ ನೆರವಾಗಲು ಅಪ್ಸರೆಯರು ಮುಂದಾದರು.

ಪುರಾಣಗಳಲ್ಲಿ ಇಂದ್ರಪುರಿಯನ್ನು ಅಲಂಕರಿಸಿದ ಹದಿನಾಲ್ಕು ಪ್ರಣಯಾಸಕ್ತ ಅಪ್ಸರೆಯರ ಉಲ್ಲೇಖವಿದೆ. ಧನುರೂಪ, ಮಹಾಭಾಗ, ತಿಲೋತ್ತಮ ಎಂಬ ನಾಮಧೇಯವಿರುವ ಇಂದ್ರ ಸಭೆಯ ಈ ಸುರ ನಾರಿಯರು ಸುಂದರವಾದ ದೇಹ ಮತ್ತು ಚಿರ ಯೌವ್ವನವನ್ನು ಹೊಂದಿರುತ್ತಾರೆ ಎಂದು ತಿಳಿಸುತ್ತದೆ. ವಾಯು ಪುರಾಣವು ಕಾಮಪ್ರಚೋದಕ ಅಪ್ಸರೆಯರ ಚಿತ್ರಣ ಮತ್ತು ಅವರ ದೈಹಿಕ ಗುಣಲಕ್ಷಣಗಳ ವಿವರಗಳನ್ನು ನೀಡುತ್ತದೆ. ಸ್ವಯಂ ಸುಗಂಧವೇ ಇವರಲ್ಲಿ ಮುಳುಗೆದ್ದಿದೆಯೋ ಎನ್ನುವಂತಹ ಪರಿಮಳ ಸೂಸುವ ಇವರ ಸುವರ್ಣಮಯ ದೇಹವು ನೋಡುಗರ ಅಮಲೇರಿಸುತ್ತದೆ ಎಂದು ಈ ಆಕಾಶ ಸುಂದರಿಯರನ್ನು ವರ್ಣಿಸುತ್ತದೆ. ಇವರ ಸ್ಪರ್ಶ ಮಾತ್ರವೇ ಬಯಕೆಗಳನ್ನು ಕೆರಳಿಸುತ್ತದೆ ಮತ್ತು ಆಹ್ಲಾದವನ್ನು ಹೆಚ್ಚಿಸುತ್ತದೆ ಎಂದು ಸೂಚಿಸುತ್ತದೆ. ಈ ಪುರಾಣದಲ್ಲಿ ಮೂವತ್ತ್ನಾಲ್ಕು ಅಪ್ಸರೆಯರ ಉಲ್ಲೇಖವಿದೆ, ಈ ಗುಂಪಿನಲ್ಲಿ ಸುರೋತ್ತಮ ಎನ್ನುವವಳು ವಿಶೇಷವಾದವಳು. ಉಳಿದವರು, ಮಿಶ್ರಕೇಶಿ, ಚಸಿ, ವರ್ಣಿನಿ, ಅಲಂಬುಷಾ, ಮರೀಚಿ, ಪುತ್ರಿಕಾ, ವಿದ್ಯುತ್ಪರ್ಣ, ತಿಲೋತ್ತಮಾ, ಅದ್ರಿಕಾ, ಲಕ್ಷಣಾ, ದೇವಿ, ರಂಭಾ, ಮನೋರಮಾ, ಸುವರ, ಸುಬಾಹು, ಪೂರ್ಣಿತಾ, ಸುಪ್ರತಿಷ್ಠಾ, ಪುಂಡರೀಕ, ಸುಗಂಧ, ಸುದಂತ, ಸುರಸ, ಹೇಮ, ಶರದ್ವತಿ, ಸುಭುಜ ಮತ್ತು ಹಂಸಪಾದ.

ಬ್ರಹ್ಮಾಂಡ ಪುರಾಣವು  ಇಪ್ಪತ್ತುನಾಲ್ಕು ಅಪ್ಸರೆಯರ ಹೆಸರುಗಳನ್ನು  ಸೂಚಿಸುತ್ತದೆ. ಅವರು, ಮಿಶ್ರಕೇಶಿ, ಚಸಿ, ಪರ್ಣಿನಿ, ಅಲಂಬುಷಾ, ಮರೀಚಿ, ಸುಚಿಭಾ, ವಿದ್ಯುತ್ಪರ್ಣ, ತಿಲೋತ್ತಮ, ಅದ್ರಿಕ, ಲಕ್ಷ್ಮಣ, ಸೇತ್ನ, ದಿವ್ಯ, ರಂಭಾ, ಮನೋಭಾವ, ಅಸಿತ, ಸುಪ್ರಿಯ, ಸುಭುಜ, ಪುಂಡರೀಕ, ಜಗಂಧಾ, ಸುದಲಿ, ಸುರಸ ಮತ್ತು ಸುಬಾಹು.

ಋಷಿಗಳು ಮತ್ತು ತಪಸ್ವಿಗಳು ತಮ್ಮ ತಪಃಶಕ್ತಿಯಿಂದ ತನ್ನ ಇಂದ್ರ ಪದವಿಗೆ ಧಕ್ಕೆ ತರಬಹುದೆಂದು ಆಗಾಗ್ಗೆ ಆತಂಕಗೊಳ್ಳುತ್ತಿದ್ದ ಇಂದ್ರನು ಅವರನ್ನು ಪ್ರಚೋದಿಸಲು ತನ್ನ ಆಸ್ಥಾನದ ಅಪ್ಸರೆಯರನ್ನು ನೇಮಿಸುತ್ತಿದ್ದನು. ಉದಾಹರಣೆಗೆ, ವಿಶ್ವಾಮಿತ್ರರು ಮೇನಕಾ ಎಂಬ  ಅಪ್ಸರೆಯ ಅಂದ-ಚೆಂದವನ್ನು ಕಂಡೊಡನೆಯೇ ಅವಳಲ್ಲಿ ಕಾಮಪರವಶರಾದರು. ಅವರೀರ್ವರ ಮಗಳೇ ಶಕುಂತಲೆ.

ವಾಲ್ಮೀಕಿ ರಾಮಾಯಣದಲ್ಲಿ ವಿಶ್ವಾಮಿತ್ರ ಮತ್ತು ಅಪ್ಸರೆ ಮೇನಕೆಯ ಕೆಲವು ಶ್ಲೋಕಗಳನ್ನು ಗಮನಿಸೋಣ.

तां ददर्श महातेजा मेनकां कुशिकात्मज:।

रूपेणाप्रतिमां तत्र विद्युतं जलदे यथा॥१.६३.५॥

ತಾಂ ದದರ್ಶ ಮಹಾತೇಜಾ ಮೇನಕಾಂ ಕುಶಿಕಾತ್ಮಜ😐

ರೂಪೇಣಾಪ್ರತಿಮಾಂ ತತ್ರ ವಿದ್ಯುತಂ ಜಲದೇ ಯಥಾ||1.63.5||

ಅರ್ಥಕುಶಿಕನ ಪುತ್ರ, ಅತ್ಯಂತ ತೇಜಸ್ವಿಯಾದ ವಿಶ್ವಾಮಿತ್ರನು ಮೇನಕೆಯನ್ನು ನೋಡಿದನು, ಅವಳ ಸೌಂದರ್ಯ ಅಪ್ರತಿಮವಾದದ್ದು. ಅವಳ ತೇಜಸ್ಸು ಮೋಡಗಳಲ್ಲಿರುವ ಮಿಂಚಿನಂತೆ ಪ್ರಕಾಶಮಾನವಾಗಿತ್ತು .

दृष्ट्वा कन्दर्पवशगो मुनिस्तामिदमब्रवीत्।

अप्सरस्स्वागतं तेऽस्तु वस चेह ममाश्रमे।।1.63.6।।

अनुगृह्णीष्व भद्रं ते मदनेन सुमोहितम्।

ದೃಷ್ಟ್ವಾ ಕಂದರ್ಪವಶಗೋ ಮುನಿಸ್ತಮಿದಮಬ್ರವೀತ್|

ಅಪ್ಸರಸ್ಸ್ವಾಗತಂ ತೇಸ್ತು ವಸ ಚೇಹ ಮಮಾಶ್ರಮೇ||1.63.6||

ಅನುಗೃಹೀಷ್ವ ಭದ್ರಂ ತೇ ಮದನೇನ ಸುಮೋಹಿತಮ್|

ಅರ್ಥಅವಳನ್ನು ಕಂಡೊಡನೆ ವಿಶ್ವಾಮಿತ್ರರು  ಮದನ ಪೀಡಿತನಾಗಿ ಅವಳಲ್ಲಿ  ಅನುರಕ್ತರಾದರು. ಅಪ್ಸರೆ! ನನ್ನ ಆಶ್ರಮಕ್ಕೆ ಸ್ವಾಗತ. ನಾನು ನಿನ್ನಲ್ಲಿ ವ್ಯಾಮೋಹಗೊಂಡಿದ್ದೇನೆ, ನನ್ನನ್ನು ಒಪ್ಪಿಕೋ.

बुद्धिर्मुनेस्समुत्पन्ना सामर्षा रघुनन्दन।

सर्वं सुराणां कर्मैतत्तपोपहरणं महत्।।1.63.10।।

ಬುದ್ಧಿರ್ಮುನೆಸ್ಸಮುತ್ಪನ್ನಾ ಸಾಮರ್ಷಾ ರಘುನಂದನ|

ಸರ್ವಂ ಸುರಾಣಾಂ ಕರ್ಮೈತತ್ತಪೋಪಹರಣಂ ಮಹತ್||1.63.10||

ಅರ್ಥಎಲೈ ರಘುನಂದನನೇ , ತಪಸ್ವಿಯ ಮನಸ್ಸು ಕ್ರೋಧದಿಂದ  ತುಂಬಿಹೋಗಿತ್ತುತನ್ನ ತಪಸ್ಸು ಮತ್ತು  ಉದ್ದೇಶಗಳು ಗುರಿಮುಟ್ಟದಿರಲೆಂದು ದೇವತೆಗಳು ನಡೆಸಿರುವ ಷಡ್ಯಂತರವಿದು ಎಂದು ಅರ್ಥಮಾಡಿಕೊಂಡನು.

अहोरात्रापदेशेन गतास्संवत्सरा दश।

काममोहाभिभूतस्य विघ्नोऽयं समुपस्थित:।।1.63.11।।

ಅಹೋರಾತ್ರಾಪದೇಶೇನ ಗತಸ್ಸಂವತ್ಸರಾ ದಶ|

ಕಾಮಮೋಹಾಭಿಭೂತಸ್ಯ ವಿಘ್ನೋಯಂ ಸಮುಪಸ್ಥಿತ:||1.63.11||

ಅರ್ಥಹತ್ತು ವರ್ಷಗಳನ್ನು ಕಾಮದ ಭ್ರಮೆಯಲ್ಲಿ ವ್ಯರ್ಥಮಾಡಿದೆನು. ನನ್ನ ತಪಸ್ಸಿಗೆ ಅಡಚಣೆಯುಂಟಾಗಿದೆ, ಎಂದು ಆಲೋಚಿಸಿದನು.

–   ವಾಲ್ಮೀಕಿ ರಾಮಾಯಣ

ಇದೇ ನಿಟ್ಟಿನಲ್ಲಿ ಹತ್ತು ಹಲವು ಕಥೆಗಳಿವೆ, ಅವುಗಳನ್ನು ಗಮನಿಸೋಣ. ಜನಪದಿ ಎಂಬ ಅಪ್ಸರೆಯನ್ನು ಅರೆವಸ್ತ್ರದಲ್ಲಿ ನೋಡಿ ಮೋಹಗೊಂಡ ಶಾರ್ದ್ವಂತನ ಬೀಜದಿಂದ ಕೃಪಾ ಮತ್ತು ಕೃಪಿಯ ಜನನವಾಯಿತು. ಇದಕ್ಕೆ ಹೋಲುವ ಕಥೆಯೇ ಪಾಂಡವರು ಮತ್ತು ಕೌರವರ ಗುರುಗಳಾದ ದ್ರೋಣಾಚಾರ್ಯರದ್ದು. ಘೃತಾಚಿ ಎಂಬ ಅಪ್ಸರೆಯನ್ನು ನಿರ್ವಸ್ತ್ರವಾಗಿ ನೋಡಿ ಕಾಮಪರವಶರಾದ ಭರದ್ವಾಜರು ತಮ್ಮ ವೀರ್ಯವನ್ನು ಒಂದು ಮಡಿಕೆಯಲ್ಲಿ ಬಿತ್ತುವುದರ ಮೂಲಕ  ದ್ರೋಣಾಚಾರ್ಯರನ್ನು ಪಡೆದರು. ವ್ಯಾಸ ಮಹರ್ಷಿಗಳು ಅಪ್ಸರ ಘೃತಾಚಿಯನ್ನು ನೋಡಿದ ಮೇಲೆ ಸ್ವಯಂಪ್ರೇರಣೆಯಿಂದ ತನ್ನ ಬೀಜವನ್ನು ಹೊರಹಾಕುವ ಮೂಲಕ ಶುಕ ಎಂಬ ಮಗನನ್ನು ಪಡೆದರು. ನಿರ್ವಸ್ತ್ರವಾಗಿ ಮೀಯ್ಯುತ್ತಿದ್ದ ಅಪ್ಸರೆಯನ್ನು ಕಂಡ ಮಂಕಣಕ ಎಂಬ ಋಷಿಯ ವೀರ್ಯವು ನೀರಿನಲ್ಲಿ ವಿಸರ್ಜನೆಗೊಂಡು ತನ್ಮೂಲಕ ಸಪ್ತಋಷಿಗಳ ಜನನವಾಯಿತು. ವಿಭಾಂಡಕ ಎಂಬ ಋಷಿಯು ಅಪ್ಸರಾ ಊರ್ವಶಿಯಲ್ಲಿ ಕಾಮಪರವಶರಾದಾಗ ಋಷ್ಯಶೃಂಗನ ಜನನವಾಯಿತು.

ವರುಣ ಮತ್ತು ಮಿತ್ರ rರುರ ಯಾಗದಿಂದ ಹೊರಬಂದ ಅಪ್ಸರೆ ಊರ್ವಶಿಯನ್ನು ಕಂಡೊಡನೆ ಅನುದ್ದಿಷ್ಟವಾಗಿ ಹೊರಹೊಮ್ಮಿದ ಅವರ ವೀರ್ಯದಿಂದ ದೃಪದ ಮಹಾರಾಜ, ಅಗಸ್ತ್ಯ ಮತ್ತು ವಸಿಷ್ಠರ ಜನನವಾಯಿತು. ಇವರ  ವೀರ್ಯವು ಒಂದು ಮಡಿಕೆಯಲ್ಲಿ ಬಿದ್ದ ಕಾರಣ ಅಗಸ್ತ್ಯ ಮತ್ತು ಅವನ ಅವಳಿ ವಸಿಷ್ಠನ ಭ್ರೂಣಗಳು ಒಂದೇ ಮಡಿಕೆಯಲ್ಲಿ ಬೆಳೆದವು.

ಶೃಂಗಾರ ರಸಕ್ಕಾಗಿ ಅಪ್ಸರೆಯರನ್ನು ಸೃಜನಾತ್ಮಕವಾಗಿ ಬಳಸಿಕೊಂಡಾಗಲೆಲ್ಲಾ ಅವರನ್ನು ಕಾಮಪ್ರಚೋದಕರಾಗಿ ಚಿತ್ರಿಸಲಾಗಿದೆ. ಶೃಂಗಾರ ರಸವನ್ನು ನಾಟ್ಯ ಶಾಸ್ತ್ರದಲ್ಲಿ ಮುಖ್ಯವಾಗಿ ಮೂರು ರೀತಿಯಾಗಿ ವಿಭಜಿಸಲಾಗಿದೆ. ಅವು, ಆಯೋಗ ನಿರೀಕ್ಷಣೆ, ವಿಪ್ರಯೋಗ –  ಭೇಟಿಯಾಗಲು ಕೊಟ್ಟ ಮಾತನ್ನು ಮರೆತಾಗಲೋ ಇಲ್ಲವೇ ಅಸಮ್ಮತ ಉಂಟಾದಾಗಲೋ ಆಗುವ ಅಹಿತಕರ ಹಿತವಿಹೀನವಾದ ವಿರಹ, ಸಂಭೋಗ – ದೈಹಿಕ ಸಮಾಗಮ. ಆಯೋಗದ ಸ್ಥಿತಿಯಲ್ಲಿರುವ ಅಪ್ಸರೆಯರ ಶಿಲ್ಪಾಕೃತಿಗಳನ್ನು ದೇವಲಾಯಗಳಲ್ಲಿ ನೋಡಬಹುದು. ತನ್ನ ಪ್ರಿಯತಮನನ್ನು ಭೇಟಿಯಾಗಲು, ಅವನನ್ನು ಕಣ್ತುಂಬ ನೋಡಲು ಕಾಯುತ್ತಿರುವ ಅವಳ ಅಂತರ್ಭಾವವನ್ನು ಶಿಲ್ಪದ ದೇಹಭಂಗಿ ಮತ್ತು ದೃಷ್ಟಿಭಾವದ ಮೂಲಕ ಶಿಲ್ಪಿ ಹೊರತರುತ್ತಾನೆ. ವಿಪ್ರಯೋಗಾವಸ್ಥೆಯಲ್ಲಿರುವ ಅಪ್ಸರೆಯರು ಹೆಚ್ಚಾಗಿ ವರ್ಣ ಚಿತ್ರಗಳಲ್ಲಿಯೂ ಮತ್ತು ಸಾಹಿತ್ಯದ ಪುಟಗಳಲ್ಲಿಯೂ ಕಾಣ ಸಿಗುತ್ತಾರೆ. ತನ್ನ ಪ್ರಿಯನೊಡನೆ ಜಗಳವಾಡಿ ದೂರವಾದ ಮೇಲೆ ಏಕಾಕಿಯಂತೆ ಪರಿತಪಿಸುತ್ತಿರುವ ಅಪ್ಸರೆಯರ ಹೇಳತೀರದಷ್ಟು ದುಃಖವನ್ನು ಹಲವಾರು ಕಡೆ ಮನಮುಟ್ಟುವಂತೆ  ವರ್ಣಿಸಲಾಗಿದೆ. ಕಾಮ ಪರವಶವಾಗಿ ಸಂಭೋಗ ಸ್ಥಿತಯಲ್ಲಿರುವ ಅಪ್ಸರೆಯರ ಶಿಲ್ಪಕೃತಿಗಳು ಖಜುರಾಹೋ, ಕೋನಾರ್ಕ್ ಮತ್ತು ಮೊದೆರಾ ದ ಸೂರ್ಯ ಮಂದಿರಗಳು, ವಿರೂಪಾಕ್ಷ ದೇವಾಲಯ, ಬೇಲೂರು, ಹೀಗೆ ಇನ್ನು ಹತ್ತು ಹಲವು ದೇವಲಾಯಗಳಲ್ಲಿ ಕಂಡುಬರುತ್ತವೆ.

ನವರಸಗಳು ಮತ್ತು ಅವುಗಳ ಒಂದು ಅಂಶವಾಗಿರುವ ಕಾಮಕ್ಕೆ ಪ್ರೀತಿ, ಬಯಕೆ ಮತ್ತು ವ್ಯಾಮೋಹ ಸೇರಿದಂತೆ ಹಲವು ನವಿರಾದ ಭಾವನೆಗಳೊಂದಿಗೆ ಅವಿನಾಭಾವ ಸಂಬಂಧವಿದೆ. ಅಪ್ಸರೆಯರು ತಮ್ಮ ಸೃಜನಾತ್ಮಕ ಪ್ರಚೋದಕ ಭಂಗಿ ಮತ್ತು ಮುಖಭಾವದ  ಮೂಲಕ ಕಾಮದ ಚಟುವಟಿಕೆಗಳಲ್ಲಿನ ಭೋಗಕ್ಕಿಂತ ಹೆಚ್ಚಾಗಿ ಆಧ್ಯಾತ್ಮಿಕ ಆಯಾಮವನ್ನು ಪ್ರತಿಬಿಂಬಿಸುವ ಉದ್ದೇಶವನ್ನು ಹೊಂದಿರುತ್ತಾರೆ. ನಾಟ್ಯವಾಡುವಂತೆ, ವಸ್ತ್ರವೇಷಗಳನ್ನು  ಧರಿಸುತ್ತಿರುವಂತೆ, ವಿವಸ್ತ್ರರಾಗುತ್ತಿರುವಂತೆ, ತಾಯ್ತನದಲ್ಲಿ ಸುಖವನ್ನು ಅನುಭವಿಸುತ್ತಿರುವಂತೆ, ಕಾಮದ ಹಲವು ಲಹರಿಗಳಲ್ಲಿ  ಇವರನ್ನು ತೋರಿಸಲಾಗಿದೆ.

ಕಾಮವನ್ನು ಪ್ರತಿಬಿಂಬಿಸುತ್ತ ಶೃಂಗಾರ ರಸದಲ್ಲಿ ನಿರತರಾಗಿರುವ ಅದೆಷ್ಟೋ ಮೋಹಕ ಅಪ್ಸರೆಯರು, ಕೀಚಕರು, ನಾಯಿಕೆಯರು ಮತ್ತು ಮದನಿಕೆಯರನ್ನು ಹಿಂದೂ ದೇವಾಲಯಗಳಲ್ಲಿ ವೈಭವೋಪೇತವಾಗಿ ಚಿತ್ರಿಸಲಾಗಿದೆ. ಸನಾತನ ಧರ್ಮದ ಸಾಹಿತ್ಯ ಪ್ರಪಂಚದಲ್ಲಿ ಮದನಕ್ರಿಯೆಗೆ ಮಾಯಾಜಾಲ ಬೀಸುವ ಮಾನಿನಿಯರನ್ನಾಗಿ ಅಪ್ಸರೆಯರನ್ನು ಬಳಸಲಾಗಿದೆ. ಒಟ್ಟಿನಲ್ಲಿ ಅಪ್ಸರೆಯರು ತಮ್ಮ ರೂಪರಾಶಿ ಮತ್ತು ಸೃಜನಾತ್ಮಕ ಕೌಶಲ್ಯವನ್ನು ಬಳಸುತ್ತ ಕಾಮದಲ್ಲಿ ಆಧ್ಯಾತ್ಮದ ಅಂಶವನ್ನು ಬೆಳಕಿಗೆ ತರುವ ಪಾತ್ರವನ್ನೂ ವಹಿಸುತ್ತಾರೆ.

(This is a translation of  an article written in English by Shalini Mahapatra.)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply