close logo

ಅಪ್ಸರೆಯರು : ಭಾಗ 3 – ಸಾಹಿತ್ಯ ಪ್ರಪಂಚದ ಸ್ಫೂರ್ತಿಚಿಲುಮೆಯರಾದ ವಿಸ್ಮಯ ವಿನೋದಿನಿಯರು

ವೇದ ಸಾಹಿತ್ಯದಲ್ಲಿ, ಕಾವ್ಯಗಳಲ್ಲಿ, ನಾಟಕಗಳಲ್ಲಿ, ಕಥೆಗಳಲ್ಲಿ  ಮತ್ತು ಕಲೆಯ  ಹಲವಾರು ಹರವುಗಳಲ್ಲಿ ಅಪ್ಸರೆಯರ ವಿಭಿನ್ನವಾದ ವೈವಿದ್ಯಮಯ ಚಿತ್ರಣವನ್ನು ಕಾಣಬಹುದು. ಸಾಹಿತ್ಯದಲ್ಲಂತೂ ಇವರ ವರ್ಣನೆಯನ್ನು ಅದೆಷ್ಟೋ ಅಲಂಕಾರಗಳಿಂದ ಮಾಡಲಾಗಿದೆ. ಸಾಮಾನ್ಯವಾಗಿ ಅಪ್ಸರೆಯರೆಂದರೆ ನಮ್ಮ ಕಣ್ಣ ಮುಂದೆ ಮೂಡುವುದು, ನಿಗೂಢ ಸುಂದರಿಯರಾದ ಲಾವಣ್ಯವತಿಯರ ಚಿತ್ರ. ಇವರ ಅಂಗ, ಭಂಗಿ, ವೈಯಾರ, ಅಭಿನಯ, ಮನೋವೃತ್ತಿ ಮತ್ತು ನಿರ್ಬಂಧಗಳನ್ನು ಪ್ರಕೃತಿಯ ಅನೇಕಾನೇಕ ವೈಶಿಷ್ಟ್ಯಕ್ಕೆ ಹೋಲಿಸುವ ಉಪಮಾ ಮತ್ತು ರೂಪಕಾಲಂಕಾರಗಳು  ವೇದ ಸಾಹಿತ್ಯವಷ್ಟೇ ಅಲ್ಲದೇ ಸಂಸ್ಕೃತ ಮತ್ತು ಪ್ರಾಕೃತ ಭಾಷೆಗಳಲ್ಲಿನ ರಚನೆಗಳಲ್ಲಿ ಹೇರಳವಾಗಿ ಸಿಗುತ್ತವೆ.

ಮಹಾಭಾರತ ಮತ್ತು ರಾಮಾಯಣದಂತಹ ಮಹಾಕಾವ್ಯಗಳಲ್ಲಿ, ಪ್ರಧಾನ ಪಾತ್ರಗಳಲ್ಲಿಯೇ ಮೆರೆದ  ಅನೇಕ ಅಪ್ಸರೆಯರ ಪರಿಚಯ ಸಿಗುತ್ತದೆ. ಅಪ್ಸರೆಯರು ಅದೆಷ್ಟೋ ಕಥೆಗಳಲ್ಲಿ ಕೇವಲ ಸಣ್ಣ ಪಾತ್ರಧಾರಿಗಳಾಗಿದ್ದರಷ್ಟೇ ಆದರೂ ಕಥೆಯ ಬೆಳವಣಿಗೆಗೂ ಮತ್ತು ತಿರುವಿಗೂ ಕಾರಣರಾಗಿದ್ದಾರೆ. ಅಪ್ಸರೆಯರೊಡನೆ ಪರಸ್ಪರ ಸಂಬಂಧವಿರುವ ಸಾಕಷ್ಟು ಪಾತ್ರಗಳನ್ನು ಮಹಾಕಾವ್ಯಗಳಲ್ಲಿ ನೋಡಬಹುದು.

ಅಪ್ಸರೆ   ತಿಲೋತ್ತಮಾ 

ಮಹಾಭಾರತದಲ್ಲಿ, ನಾರದರು ತಿಲೋತ್ತಮಾ  ಎಂಬ ಅಪ್ಸರೆಯ ಕಥೆಯನ್ನು, ಪಾಂಡವರಿಗೆ ಹೇಳುತ್ತಾರೆ. ದೇವಲೋಕದ ವಾಸ್ತುಶಿಲ್ಪಿಯಾದ ವಿಶ್ವಕರ್ಮ, ಸುಂದ ಮತ್ತು ಉಪಸುಂದ ಎಂಬ ರಾಕ್ಷಸರನ್ನು ವಧಿಸಲೆಂದೇ ಇವಳನ್ನು ಸೃಷ್ಟಿಸಿದನಂತೆ. ಭೂಲೋಕದ ಎಲ್ಲ ಚರಾಚರ ತತ್ವಗಳನ್ನು ಒಟ್ಟುಗೂಡಿಸುವುದರ ಮೂಲಕ ಇವಳ ಸೃಷ್ಟಿಯಾಯಿತು. ಮಹಾಭಾರತದಲ್ಲಿ ಇಂದ್ರಪುರಿಯ ಅಮೋಘ ನರ್ತಕಿಯಾದ ಊರ್ವಶಿಯ ಉಲ್ಲೇಖವೂ ಇದೆ. ಅರ್ಜುನನು ದಿವ್ಯಾಸ್ತ್ರಗಳನ್ನು ಪಡೆಯಲು ತನ್ನ ತಂದೆ, ಇಂದ್ರನ ಇಂದ್ರಲೋಕಕ್ಕೆ ಬಂದಾಗ, ಆತ ಊರ್ವಶಿಯನ್ನು ಕಂಡು ಆಕರ್ಷಿತನಾದುದ್ದನ್ನು ಇಂದ್ರನು ಗಮನಿಸುತ್ತಾನೆ. ಸ್ವಯಂ ಇಂದ್ರನೇ  ಊರ್ವಶಿಯನ್ನು ಅರ್ಜುನನ ಬಳಿಗೆ ಕಳುಹಿಸುತ್ತಾನೆಯಾದರು, ಊರ್ವಶಿಯು ಅರ್ಜುನನನ್ನು ಕಂಡು ಕಾಮಪರವಶಳಾಗುತ್ತಾಳೆ. ಆದರೆ, ಇಂದ್ರಿಯ ನಿಯಂತ್ರಣಗಳನ್ನು ಸಾಧಿಸಿದ್ದ ಅರ್ಜುನನು ಇವಳನ್ನು ನಿರಾಕರಿಸುತ್ತಾನೆ. ಆಗ, ಕೋಪಗೊಂಡ ಊರ್ವಶಿಯು ಅರ್ಜುನನಿಗೆ, ಒಂದು ವರ್ಷದ ಅವಧಿ ನಪುಂಸಕನಾಗಿರುವಂತೆ ಶಾಪವೆಸಗುತ್ತಾಳೆ.         

ರಾಮಾಯಣದಲ್ಲಿ ಮೇನಕಾ ಎಂಬ ಅತಿಲೋಕ ಸುಂದರಿಯ ಉಲ್ಲೇಖವಿದೆ. ಋಷಿ ವಿಶ್ವಾಮಿತ್ರರ ತಪೋಭಂಗ ಮಾಡಲೆಂದು ಇಂದ್ರನು ಇವಳನ್ನು ಭೂಮಿಗೆ ಕಳಿಸುತ್ತಾನೆ. ಆದರೆ, ಇವಳನ್ನು ಕಂಡ ವಿಶ್ವಾಮಿತ್ರರು ಇವಳಲ್ಲಿ ಅನುರಕ್ತರಾಗುತ್ತಾರೆ. ಈ ಬಗ್ಗೆ ರಾಮಾಯಣದ ಒಂದು ಶ್ಲೋಕ ಹೀಗಿದೆ :

 ಮೇನಕಾ 

“दृष्ट्वा कन्दर्पवशगो मुनिस्तामिदमब्रवीत्।

अप्सरस्स्वागतं तेऽस्तु वस चेह ममाश्रमे।।1.।।

अनुगृह्णीष्व भद्रं ते मदनेन सुमोहितम्।

      – ಬಾಲ ಖಾಂಡ ಸರ್ಗ 63

ಮೇನಕೆಯನ್ನು ನೋಡಿದ ಕೂಡಲೆ ಕಾಮ ಪರವಶನಾದ ವಿಶ್ವಾಮಿತ್ರನಿಗೆ ಅವಳಲ್ಲಿ ಪ್ರೀತಿಯುಟ್ಟುತ್ತದೆ ಆಗ ಅವರು – ‘ಓ ಅಪ್ಸರೆ! ನಾನು ನಿನ್ನಲ್ಲಿ ಅನುರಕ್ತನಾಗಿದ್ದೇನೆ, ನನ್ನ ಕುಟೀರಕ್ಕೆ ಬಾ, ನನ್ನನ್ನು ಸಂತೈಸು.’ ಎಂದು ಅವಳನ್ನು ಕೇಳಿಕೊಳ್ಳುತ್ತಾರೆ. 

ಅಂಧಕ ಎಂಬ ರಾಕ್ಷಸರ ರಕ್ತಪಾನ ಮಾಡಲೆಂದೇ ಮೇನಕೆಯ ಸೃಷ್ಟಿಯಾಯಿತೆಂದು ವಿಷ್ಣುಪುರಾಣದಲ್ಲಿದೆ.

 ರಂಭಾ 

ಪುರಾಣಗಳ ಪ್ರಕಾರ, ರಂಭಾ ಅಪ್ಸರೆಯರ ಅರಸಿ. ಇವಳ ಕಥೆಗಳು ರಾಮಾಯಣದಲ್ಲಿ ಕಾಣ ಸಿಗುತ್ತವೆ. ಇಂದ್ರನು ಇವಳನ್ನು  ವಿಶ್ವಾಮಿತ್ರರ ತಪೋಭಂಗ ಮಾಡಲು ಕಳುಹಿಸುತ್ತಾನೆ. ಆದರೆ, ಇವಳ ಪ್ರಚೋದನೆಗಳಿಂದ ಕುಪಿತರಾದ ವಿಶ್ವಾಮಿತ್ರರು ಇವಳಿಗೆ ಶಾಪವಿತ್ತ ರಾಮಾಯಣದ ಒಂದು ಶ್ಲೋಕ ಹೀಗಿದೆ:

“यन्मां लोभयसे रम्भे कामक्रोधजयैषिणम्।

दशवर्षसहस्राणि शैली स्थास्यसि दुर्भगे” ।।

ರಾಮಾಯಣ, ಬಾಲ ಖಾಂಡ, ಸರ್ಗ 64

ಕಾಮ ಕ್ರೋಧಗಳನ್ನು ಗೆಲ್ಲಲು ಪ್ರಯತ್ನಿಸುತ್ತಿರುವ ನನ್ನನ್ನು ಪ್ರಚೋದಿಸಿದ್ದೀಯೆ, ರಂಭಾ ನೀನು ಹತ್ತು ಸಾವಿರ ವರ್ಷಗಳ ಕಾಲ ಕಲ್ಲಾಗಿರುವಂತಾಗಲಿ . 

ಕೊನೆಗೆ, ಒಬ್ಬ ಬ್ರಾಹ್ಮಣನಿಂದಾಗಿ ಇವಳ ಶಾಪ ವಿಮೋಚನೆಯಾಯಿತು. ಇದಲ್ಲದೆ, ತನ್ನ ಬಳಿ ಅಸಭ್ಯವಾಗಿ ನಡೆದುಕೊಂಡ ರಾವಣನಿಗೆ ರಂಭಾ ಶಾಪವಿಯ್ಯುವು ಪ್ರಾಂಸಂಗವೂ ರಾಮಾಯಣದಲ್ಲಿ ಕಾಣಸಿಗುತ್ತದೆ.

 ಮೋಹಿನಿ 

ವಿಷ್ಣು ಪುರಾಣದಲ್ಲಿ ಶ್ರೀಮನ್ನಾರಾಯಣನೇ ಮೋಹಿನಿ ಎಂಬ ಅಪ್ಸರೆಯ ರೂಪ ತಾಳಿದ  ಕಥಯಂತು, ಬಹಳ ಜನರಿಗೆ ತಿಳಿದೇ ಇದೆ. ಅಮೃತ ಮಂಥನದ ಸಮಯದಲ್ಲಿ ತನ್ನ ರೂಪ ಸೌಂದರ್ಯಗಳಿಂದ ಅಸುರರನ್ನು ತಬ್ಬಿಬ್ಬುಗೊಳಿಸಿ ಅವರ ಕಣ್ತಪ್ಪಿಸಿ ದೇವತೆಗಳಿಗೆ ಅಮೃತವನ್ನು ದಕ್ಕಿಸಿದವಳು ಮೋಹಿನಿ. ಪರಮ ಸುಂದರಿಯಾದ ಮೋಹಿನಿ, ವಿಷ್ಣುವಿನ ಸ್ತ್ರೀ ಅವತಾರ. ಭಾಗವತ ಪುರಾಣದಲ್ಲಿ, ಶಿವನು ಮೋಹಿನಿಯಲ್ಲಿ ಅನುರಕ್ತನಾದ ಕಥೆಯಿದೆ. ಅದು ದಕ್ಷಿಣ ಭಾರತದಲ್ಲಿ ಜನಪ್ರಿಯವಾಗಿದೆ.

 ಊರ್ವಶಿ 

ನಾಟ್ಯ ಮತ್ತು ಕಾವ್ಯಗಳ ಪೈಕಿ, ಆಕಾಶ ಸುಂದರಿಯರಾದ ಅಪ್ಸರೆಯರ ಸೌಂದರ್ಯದ ಬಗ್ಗೆ ವಿಶೇಷವಾದ  ವರ್ಣನೆ ಸಿಗುವುದು ಕಾಳಿದಾಸನ ರಚನೆಗಳಲ್ಲಿಯೇ. ಇವನು ಸಾ.ಶ ೪ನೇ ಶತಮಾನದಲ್ಲಿ ಬರೆದಂತ  ಮೊಟ್ಟ ಮೊದಲ ನಾಟಕ  “ವಿಕ್ರಮೋರ್ವಶೀಯಂ”. ಇದು, ಪುರಾಣಗಳಲ್ಲಿನ ಹೆಸರಾಂತ ರಾಜ ಪುರೂರವಸ್ ಮತ್ತು ಊರ್ವಶಿ ಎಂಬ ಅಪ್ಸರೆಯ ಪ್ರೇಮಕಥೆ ಆಧಾರಿತ ರಚನೆ. ಇವರ ಕಥೆಯಲ್ಲಿ, ಇಂದ್ರಪುರಿಯ ಅಪ್ಸರೆ ಊರ್ವಶಿ, ಶಾಪಗ್ರಸ್ತಳಾಗಿ ಸಾಧಾರಣ ಮನುಷ್ಯಳಂತೆ ಬದುಕಲು ಭೂಮಿಗೆ ಬರಬೇಕಾಗುತ್ತದೆ. ಇಲ್ಲಿ ಇವಳಿಗೆ ರಾಜ ಪುರೂರವಸ್ ನಲ್ಲಿ ಅನುರಾಗ ಹುಟ್ಟುತ್ತದೆ, ನಾಲ್ಕು ವರ್ಷಗಳ ಕಾಲ ಅವನ ಬಳಿಯೇ ಇದ್ದು ಒಬ್ಬ ಗಂಡು ಮಗುವಿಗೆ ಜನ್ಮ ನೀಡಿ ಪುನಃ ಇಂದ್ರಲೋಕಕ್ಕೆ ತೆರಳುತ್ತಾಳೆ. 

ಈ ನಾಟಕದ ಬಳಿಕ ಕಾಳಿದಾಸನು “ಅಭಿಜ್ಞಾನ ಶಾಕುಂತಲಂ” ಎಂಬ ನಾಟಕವನ್ನು ರಚಿಸಿದ್ದಾನೆ. ಇದರ ನಾಯಕಿ, ಶಕುಂತಲೆ, ಋಷಿ ವಿಶ್ವಾಮಿತ್ರ ಮತ್ತು ಮೇನಕೆ ಎಂಬ ಅಪ್ಸರೆಯ ಮಗಳು. ಶಕುಂತಲೆಯ ಮಗ ಭರತ, ಭರತ-ಸಾಮ್ರಾಜ್ಯವನ್ನು ಸ್ಥಾಪಿಸಿದವನು. ಕುರುಕ್ಷೇತ್ರ ಯುದ್ಧದಲ್ಲಿ ಕದನಕ್ಕಿಳಿದ ಕೌರವರು ಮತ್ತು ಪಾಂಡವರು ಭರತನ ವಂಶಕ್ಕೆ ಸೇರಿದವರೇ.   

ಭರತ ಭೂಮಿಯ ಅನೇಕಾನೇಕ ಪೌರಾಣಿಕ ಕಥೆ, ದಂತ ಕಥೆ ಮತ್ತು ಜಾನಪದ ಕಥೆಗಳ ಒಂದು ಅದ್ಭುತ ಸಂಕಲನ “ಕಥಾಸರಿತ್ಸಾಗರ”. ಹನ್ನೊಂದನೇ ಶತಮಾನದಲ್ಲಿ  ಕಾಶ್ಮೀರ ಪ್ರದೇಶಕ್ಕೆ ಸೇರಿದ ಸಂಸ್ಕೃತ ಪಂಡಿತ, ಸೋಮದೇವ ಇದರ ಕರ್ತ. ಈ ಕಥಾ ಸಂಕಲನದಲ್ಲಿ, ಪುರಾಣಗಳಿಂದ ಆಯ್ದ ಹಲವಾರು ಅಪ್ಸರೆಯರ ಕಥೆಗಳಿವೆ. ಅವುಗಳ ಪೈಕಿ, ಅಲಂಬುಷಾ ಎಂಬ ಅಪ್ಸರೆ ಮತ್ತು ವಿಧುಮ ಎಂಬ ವಸು-ವಿನ ಪ್ರೇಮ ಕಥೆ ಹೀಗಿದೆ :  ಬ್ರಹ್ಮ ಸಭೆಯಲ್ಲಿ ಅಲಂಬುಷಾ ಮತ್ತು ವಿಧುಮಾ ಪರಸ್ಪರ ಆಕರ್ಷಿತರಾಗುತ್ತಾರೆ. ಇದನ್ನು ಗಮನಿಸಿದ ಇಂದ್ರನು ಕಸಿವಿಸಿಗೊಂಡು,  ಅವರಿಬ್ಬರು  ಮದುವೆಯಾಗಿ ಸತಿ-ಪತಿಯರಂತೆಯೇ ತಮ್ಮ ಆಕಾಂಕ್ಷೆಗಳನ್ನು ಪೊರೊಯಿಸಿಕೊಳ್ಳುವಂತಾಗಲಿ ಎಂದು  ಅವರಿಗೆ  ಭೂಲೋಕದಲ್ಲಿ ಜನ್ಮ ತಾಳುವಂತೆ ಶಾಪ ಕೊಟ್ಟುಬಿಡುತ್ತಾನೆ. ಅದರಂತೆಯೇ ಅಪ್ಸರೆ ಅಲಂಬುಷಾ ಮೃಗವತಿಯಾಗಿ ಜನ್ಮವೆತ್ತುತ್ತಾಳೆ. ವಸು ವಿಧುಮ ಚಂದ್ರವಂಶದ ಪ್ರಖ್ಯಾತ ರಾಜರುಗಳಲ್ಲಿ ಒಬ್ಬನಾದ ಸಹಸ್ರಾಣಿಕನಾಗಿ ಜನ್ಮ ಪಡೆಯುತ್ತಾನೆ. ಅವರು ಸಂಸಾರ ಸುಖವನ್ನು ಅನುಭವಿಸುತ್ತ ಮಕ್ಕಳನ್ನೂ ಪಡೆಯುತ್ತಾರೆ.     

ಶ್ರೀ ಆರೊಬಿಂದೊ ರವರು ತಮ್ಮ ಪೂರ್ವ ಸಾಂಸ್ಕೃತಿಕ ಬರಹಗಳಲ್ಲಿ (1890-1910), ಒಂದು ಸಂಪೂರ್ಣ ಅಧ್ಯಾಯವನ್ನೇ ಕಾಳಿದಾಸ ಮತ್ತು ಅವನ ಕೃತಿಗಳಲ್ಲಿ ಕಾಣ ಸಿಗುವ ಮೋಹಕ ರೂಪದ ಅಪ್ಸರೆಯರ ಚಿತ್ರಣಕ್ಕೆ ಮುಡುಪಾಗಿಟ್ಟಿದ್ದಾರೆ. ಅವರು ಅಪ್ಸರೆಯರ ಬಗ್ಗೆ ಹೀಗೆ ಬರೆದಿದ್ದಾರೆ, “ಒಂದು ಮಟ್ಟಕ್ಕೆ ಅಪ್ಸರೆಯರು ಹಿಂದೂ ಸಂಸ್ಕೃತಿಯ ಸೌಂದರ್ಯ ಮತ್ತು ಪ್ರಣಯಕ್ಕೆ ಸಂಬಂದಿತ ವಿಷಯಗಳ ಬಗೆಗಿನ ಮೋಹಕ ಪರಿಕಲ್ಪನೆ. ಕ್ಷೀರ ಸಾಗರದ ನೀರಿನಿಂದ ಹೊರಹೊಮ್ಮಿದ ಈ ಅಲೌಕಿಕ ಸುಂದರಿಯರ ಅಲಂಕಾರ ಮತ್ತು ವಸ್ತ್ರ ವೇಷಗಳು, ಅದೆಷ್ಟೋ ತಂತಿವಾದ್ಯಗಳ ತಂತಿ ಮೀಟಿದಾಗ  ಹೊರಹೊಮ್ಮುವ ಸವಿಗಾನದ ಮಾಧುರ್ಯದಂತೆ. ಇವರ ಸೌಂದರ್ಯ ಮತ್ತು ತೇಜಸ್ಸು ಜಗತ್ತನ್ನೇ ಪರಿವರ್ತಿಸಿದೆ. ಇವರು, ಸೂರ್ಯರಶ್ಮಿಗಳ ಸಮೂಹ, ಸ್ವರ್ಗಪುರಿಯಲ್ಲಿ ಮಿನುಗುವ ನಭೆಯ ಮಿಂಚಿನ  ಹೊಳಪು, ಆಕಾಶದ ಹಸನಾದ ಚಿತ್ತಾರಕದ  ವರ್ಣಾಲಂಕಾರ;  ಸೂರ್ಯೋದಯ ಮತ್ತು ಸೂರ್ಯಾಸ್ತದ ಹೊಂಬೆಳಕು, ದಟ್ಟ ಕಾನನಗಳಲ್ಲಿಯೂ,  ವಿಶಾಲವಾದ  ಬಯಲುಗಳಲ್ಲಿಯೂ  ಗುಂಗಿಡಿಸುವ ಪಿಸುಮಾತಿನ ಸ್ವರಪ್ರಸ್ತಾರ ಇವರದೇ. ಇವರು ಆತ್ಮನಿವಾಸಿಗಳೂ ಹೌದು.  ಏಕೆಂದರೆ, ಇವರೇ ಒಬ್ಬ ಕವಿ ತನ್ನ ಸಾಲುಗಳಲ್ಲಿ ಉದುಗಿಸುವ ಉತ್ಕೃಷ್ಟವಾದ  ಪರಿಕಲ್ಪನೆ, ಒಬ್ಬ ಕಲಾವಿದ ತನ್ನ ಕುಂಚದಿಂದ ಹೊರ ಹಾಕುವ ತನ್ನ ಆತ್ಮ ಸ್ವರೂಪ, ಒಬ್ಬ ಶಿಲ್ಪಿ ಅಮೃತಶಿಲೆಯಲ್ಲಿ ಹುಡುಕುವ ಮೋಹಕ ರೂಪ, ಒಬ್ಬ ನಾಯಕ ಒಂದು ಆಲಿಂಗನವನ್ನು ಬಯುಸುತ್ತಾ ಯುದ್ಧದಲ್ಲಿ ಮಡಿಯುವ ಸುಖದ ಅನುಭವ, ಒಬ್ಬ ಋಷಿ ತನ್ನ ದೈವವನ್ನು ಮರೆತು ತನ್ನ ಆದರ್ಶಗಳನ್ನು ಬದಿಗಿಟ್ಟು ದೇಹ ಸೌಂದರ್ಯಕ್ಕೆ ಸೋಲುವ ಮೋಹಕ ರೂಪ. ಜೀವಿತದಲ್ಲಿನ ಆನಂದದ ಮೂರ್ತ ಸ್ವರೂಪ, ವಸ್ತು ಸೌಂದರ್ಯ, ದೇಹ ಚಾಪಲ್ಯ ಮತ್ತು ಇಂದ್ರಿಯ ಆಕರ್ಷಣೆಗಳೆಂಬ ವಿಸ್ಮಯ ಮತ್ತು ಕಾಮ ಪರವಶಕ್ಕೆ ಸಂಬಂದಿಸಿದ ವಿಷಯಗಳನ್ನು ಇವರುಗಳ ಮೂಲಕವೇ ಭಾರತ ಸಂಸ್ಕೃತಿಯು ವರ್ಣಿಸುತ್ತದೆ. ಈ ವಿಷಯಗಳ ಮೂಲ ತತ್ವವು, ಹಿನ್ನೆಲೆ ಸಂಗೀತದಂತೆ ಎಲ್ಲೆಲ್ಲೂ ಅನುಭವಕ್ಕೆ ಸಿಗುತ್ತದೆಯಾದರು, ಪುರಾಣಗಳಲ್ಲಿ, ಅದರಲ್ಲೂ ಪುರೂರವನ ವಿಸ್ಮಯವಾದ ಪ್ರೇಮಕಥೆಯ ಮೂಲಕ ವಿಷ್ಣು ಪುರಾಣ ಮತ್ತು ಬ್ರಾಹ್ಮಣ ದಲ್ಲಿ ಎದ್ದು ಕಾಣುತ್ತದೆ.”   

ಈ ನಿಗೂಢ ಆಕಾಶ ಸುಂದರಿಯರ ವರ್ಚಸ್ಸು ಎಂದಿನಿಂದಲೂ ಕವಿಗಳ, ಸಾಹಿತಿಗಳ, ಶಿಲ್ಪಿಗಳ, ಹತ್ತು ಹಲವು ಬಗೆಯ ಕಲೆಗಾರರ ಮನ ಸೆಳೆದಿದೆ. ಸಂಸ್ಕೃತ ಸಾಹಿತ್ಯ ಮತ್ತು  ಪುರಾಣ ಪುಣ್ಯಕಥೆಗಳಲ್ಲಿ ಕಾಣ ಸಿಗುವ ಮಾಯಾ ಮೋಹಿನಿಯರಾದ  ಲೆಕ್ಕವಿಲ್ಲದಷ್ಟು ಅಪ್ಸರೆಯರ ಪ್ರಸಂಗಗಳ ಪೈಕಿ ಇಲ್ಲಿ ಕೆಲವನ್ನು ಮಾತ್ರ ಹಂಚಿಕೊಳ್ಳಲಾಗಿದೆ.  

(This is a translation of  an article written in English by Shalini Mahapatra.)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply