close logo

ಅಪ್ಸರೆಯರು ಭಾಗ 6 : ಬೌದ್ಧ ಧರ್ಮದ ಕಥೆಗಳಲ್ಲಿ ಅಪ್ಸರೆಯರ ಪಾತ್ರ

ಬೌದ್ಧ ಧರ್ಮದ ಜೀವನಾಡಿಯಲ್ಲಿ ವೇದಗಳ ಪರಮಾಣು ರೂಪವಿದೆ. ಹಿಂದೂ ಧರ್ಮದ ಪ್ರಾಚೀನ ತತ್ವಗಳು ಮತ್ತು ಶಾಸ್ತ್ರ-ಸಂಪ್ರದಾಯಗಳು ಬೌದ್ಧ ಧರ್ಮವನ್ನು ಕೈ ಹಿಡಿದು ಬೆಳೆಸಿರುವ ಕಾರಣ ಬೌದ್ಧ ಧರ್ಮ ಮತ್ತು ಸನಾತನ ಧರ್ಮದ ಬಾಂಧವ್ಯ ಸ್ಥಿರವಾಗಿದೆ. ಬೌದ್ಧ ಧರ್ಮದ ನಾಲ್ಕು ಮೂಲಭೂತ ನಿರ್ದೇಶನಗಳಾದ ಅನಾದಿ, ಕರ್ಮ, ಸಂಸಾರ ಮತ್ತು ಮೋಕ್ಷ,  ವೇದಗಳಿಂದಲೇ ವ್ಯುತ್ಪನ್ನವಾಗಿವೆ. ಕಾಲ ಕ್ರಮೇಣ ಈ ನಿರ್ದೇಶನಗಳು ಬೌದ್ಧ ಧರ್ಮದ ನಿರ್ವಾಣ ಎಂಬ ಪರಿಕಲ್ಪನೆಗೆ ದಾರಿ ಮಾಡಿಕೊಟ್ಟಿತು. 

ಗಣೇಶ, ಶಿವ, ವರುಣ, ಯಮ ಮತ್ತು ದುರ್ಗಾ ಸೇರಿದಂತೆ ಇನ್ನು ಹತ್ತು ಹಲವು ಹಿಂದೂ ದೇವ-ದೇವತೆಗಳು ಹಾಗು  ಯಕ್ಷರು ಬೌದ್ಧ ಧರ್ಮದ ಭಾಗವಾಗಿರುವುದು ಹಿಂದೂ ಮತ್ತು ಬೌದ್ಧ ಧರ್ಮಗಳ ನಡುವಿನ ವೈದಿಕ ಸಂಬಂಧವನ್ನು ದೃಢವಾಗಿ ಬೆಂಬಲಿಸುತ್ತದೆ. ಮಹಾವಿಷ್ಣುವಿನ ಹಲವು ಅವತಾರಗಳನ್ನು ಬೌದ್ಧ ಧರ್ಮದಲ್ಲಿ  ‘ಲೋಕೇಶ್ವರ’ ನ ಅವತಾರಗಳೆಂದು ಪ್ರತಿಬಿಂಬಿಸಲಾಗಿದೆ.  ಹಸಿರು ಮತ್ತು ಶ್ವೇತ ವರ್ಣದ ‘ತಾರಾ’ ಎಂಬ ದೇವತೆಯು ಸನಾತನ ಧರ್ಮದ ದೇವತೆಗಳನ್ನು ಹೋಲುತ್ತಾಳೆ.  ದೇವತೆಗಳು, ರಾಕ್ಷಸರು, ಯೋಗಿಣಿಯರು, ಯಕ್ಷಿಣಿಯರು, ಡಾಕಿಣಿಯರು, ಗಂಧರ್ವರು ಮತ್ತು ಅಪ್ಸರೆಯರ ಉಪಸ್ಥಿತಿಯು ಬೌದ್ಧ ಧರ್ಮದಲ್ಲೂ ಕಾಣ ಸಿಗುತ್ತದೆ.  

ಬೌದ್ಧ ಧರ್ಮ ಕಾಲಿಟ್ಟ ಕಡೆಗೆಲ್ಲ ಅಪ್ಸರೆಯರೂ ಹೋದರು  

ಪೂ.ಸಾ.ಶ  2ನೇ ಶತಮಾನದೊತ್ತಿಗೆ ಬೌದ್ಧ ಧರ್ಮದ ಪ್ರಚಾರ ಮೊದಲುಗೊಂಡಿತ್ತು. ಭಾರತವಷ್ಟೇ ಅಲ್ಲದೆ  ನೆರೆ ಹೊರೆಯ  ದೇಶಗಳಲ್ಲಿಯೂ  ಹಬ್ಬಿದ ಬೌದ್ಧ ಧರ್ಮವು ಸಮಸ್ತ ಏಷ್ಯಾ ಖಂಡದಲ್ಲೂ ತನ್ನ ಛಾಪನ್ನು ಬಿಡಲಾರಂಭಿಸಿತು. ‘ಥೆರವಾದ’ ಎಂಬ ಅತೀವ ಹಳೆಯದಾದ ಬೌದ್ಧ ಸಂಪ್ರದಾಯವನ್ನು “ಹಿರಿಯರ ಪಂಥ” ಎಂದು ಗುರುತಿಸಲಾಗಿದ್ದು, ಇದು ಸಾಕ್ಷಾತ್ ಬುದ್ಧನ ಬೋಧನೆಗಳಿಗೆ ಹತ್ತಿರವಾದದ್ದು ಎಂದು ಹೇಳಲಾಗುತ್ತದೆ.  

ಥೆರವಾದ ಪಂಥವು ಇಂದಿನ ಪಾಕಿಸ್ತಾನ್, ಅಫ್ಘಾನಿಸ್ಥಾನ್, ಇರಾನ್ ನ ಪೂರ್ವ ಮತ್ತು ಕರಾವಳಿ ಪ್ರದೇಶಗಳು ಮತ್ತು ಮಧ್ಯ ಏಷ್ಯಾದ  ಕೆಲವು ದೇಶಗಳಿಗೆ ಹಬ್ಬಿತು. ಕ್ರಮೇಣ ಸಾ.ಶ 2ನೇ ಶತಮಾನದಲ್ಲಿ ಚೀನಾ ತಲುಪಿ, ಶ್ರೀಲಂಕಾ ಮತ್ತು ಮಿಯಾನ್ಮಾರ್ ದೇಶಗಳನ್ನೂ ಸೇರಿತು. ಅಲ್ಲಿಂದ ಆಗ್ನೇಯ ಏಷ್ಯಾದ ಥೈಲ್ಯಾಂಡ್, ಕಾಂಬೋಡಿಯಾ ಮತ್ತು ಲಾವೋಸ್ ದೇಶಗಳನ್ನು ಮುಟ್ಟಿತು. 

ಭಾರತೀಯ ಬೌದ್ಧ ಧರ್ಮದ ಪಂಥವಾದ ಮಹಾಯಾನ ಪಂಥವು  ಪೂ.ಸಾ.ಶ 2ನೇ ಶತಮಾನದಲ್ಲಿ ಗಮನಾರ್ಹವಾಗಿ ಬೆಳೆದು ವಿಯೆಟ್ನಾಂ, ಕಾಂಬೋಡಿಯಾ, ಮಲೇಷ್ಯಾ, ಸುಮಾತ್ರ ಮತ್ತು ಜಾವ ದೇಶಗಳಿಗೆ ವಿಸ್ತರಿಸಿತು. ಬೌದ್ಧ ಧರ್ಮದ ಐತಿಹಾಸಿಕ ವಿಚಾರಧಾರೆ ಮತ್ತು ದೃಷ್ಟಿಕೋನಗಳಿಂದ ಪರಿಪಕ್ವಾವಾದ ಟಿಬೆಟ್ ಮೂಲದ ಮಹಾಯಾನ ಪಂಥವು ಸಾ.ಶ. 7ನೇ ಶತಮಾನದಲ್ಲಿ ಪ್ರಗತಿ ಪಥವನ್ನೇರಿತು. ಈ ಪಂಥವು ಟಿಬೆಟ್ ನಿಂದ ಮೊದಲುಗೊಂಡು ಹಿಮಾಲಯ ಪ್ರದೇಶಗಳ ಉದ್ದಗಲಕ್ಕೂ ಹಬ್ಬಿದ್ದಲ್ಲದೆ ಮಂಗೋಲಿಯಾ, ಮಧ್ಯ ಏಷ್ಯಾ, ಬರ್ಯಾತಿಯ, ಕಾಲ್ಮೀಕಿಯಾ ಮತ್ತು ತುವಾದ ಕೆಲವು ಪ್ರದೇಶಗಳನ್ನೂ ತಲುಪಿತು. 

ಸಮಸ್ತ ಏಷ್ಯಾ ಖಾಂಡವನ್ನು ವ್ಯಾಪಿಸ ತೊಡಗಿದ ಬೌದ್ಧ ಧರ್ಮದ ನೆರಳಿನಂತೆ ದೇವಕನ್ಯೆಯರಾದ ಅಪ್ಸರೆಯರ ಪರಿಕಲ್ಪನೆಯೂ ಸಹ ಹತ್ತು ಹಲವು ದೇಶಗಳನ್ನು ಸೇರಿತು. ಸನಾತನ ಧರ್ಮದ ಸೌಂದರ್ಯ ಮತ್ತು  ಬೌದ್ಧ ಧರ್ಮದ ವೈಶಿಷ್ಟ್ಯ ಈ ಎರಡೂ ಅಪ್ಸರೆಯರಲ್ಲಿ ಸಹಜವಾಗಿ ಬೆರೆತುಕೊಂಡಿತು. ಕ್ರಮೇಣ ಇವರ ಶಿಲ್ಪಕೃತಿಗಳು ಮತ್ತು ವರ್ಣ ಚಿತ್ರಗಳು ಬೌದ್ಧ ಮಠ ಮತ್ತು ದೇವಾಲಯಗಳ ಭಿತ್ತಿಗಳನ್ನು ಅಲಂಕರಿಸಿ ತೊಡಗಿದರು. ಬ್ರಹ್ಮನ ನಿಗೂಢ ಸೃಷ್ಟಿಗಳಾದ ಅಪ್ಸರೆಯರನ್ನು ಬೌದ್ಧ ಕಲೆಯು, ನಿರ್ಲಿಪ್ತವಾಗಿ ಗಾಳಿಯಲ್ಲಿ ತೇಲಾಡುವ ದಿವ್ಯ ಸ್ತ್ರೀಯರಂತೆ ಚಿತ್ರಿಸಿದವು. ಈ ಚಿತ್ರಗಳಲ್ಲಿನ ಅಪ್ಸರೆಯರ ವಸ್ತ್ರವಿನ್ಯಾಸಗಳು ಮೋಹಕವಾಗಿವೆ. ಬೌದ್ಧ ಕಲೆಯಲ್ಲಿ ಅಪ್ಸರೆಯರು ಸರಾಗವಾಗಿ ಗಾಳಿಯಲ್ಲಿ ಹಾರಾಡುವ ವಸ್ತ್ರಗಳ ಹಲವು ಪದರಗಳನ್ನು ತೊಟ್ಟಿರುತ್ತಾರೆ ಮತ್ತು ಇವರನ್ನು ಬುದ್ಧನ ಉಪಾಸಕರಂತೆ ಚಿತ್ರಿಸಲಾಗಿದೆ.  ಈ ಚಿತ್ರಗಳಲ್ಲಿನ ಅಪ್ಸರೆಯರು ಬುದ್ಧನ ಮೇಲೆ ಪುಷ್ಪ ವೃಷ್ಟಿ ಮಾಡುತ್ತಿರುತ್ತಾರೆ, ಅವನಿಗೆ ಸಂಗೀತ ಸೇವೆಯನ್ನು ಅರ್ಪಿಸುತ್ತಿರುತ್ತಾರೆ, ಧೂಪವನ್ನು ಅರ್ಪಿಸುತ್ತ ಅಲ್ಲಿನ ಪರಿಸರವನ್ನು ಅಪ್ಯಾಯಮಾನವಾಗಿರಿಸುವಲ್ಲಿ ನಿರತರಾಗಿರುತ್ತಾರೆ  ಮತ್ತು ಕೆಲವರು ಅವನ ಸುತ್ತಲು ನಿರ್ಲಿಪ್ತವಾಗಿ ಗಾಳಿಯಲ್ಲಿ ತೇಲಾಡುತ್ತಿರುತ್ತಾರೆ. ಭಾರತ, ಟಿಬೆಟ್, ಚೀನಾ, ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಹಲವಾರು ಬೌದ್ಧ ಮತ್ತು ಹಿಂದೂ ದೇವಾಲಯಗಳು ಜಲಕನ್ಯೆಯರಾದ ಅಪ್ಸರೆಯರಿಂದ ಅಲಂಕೃತವಾಗಿದೆ.  

ಪಾಲಿ ಸಿದ್ಧಾಂತದಲ್ಲಿ ಅಪ್ಸರೆಯರು 

ಥೆರವಾದ ಬೌದ್ಧ ಪಂಥದ ಅತೀವ ಪುರಾತನವಾದ ಸಿದ್ಧಾಂತ, “ಪಾಲಿ ಸಿದ್ಧಾಂತ”.  ಬೌದ್ಧ ಧರ್ಮದ ಆರಂಭದ ದಿನಗಳಿಂದಲೂ ಅಪ್ಸರೆಯರ ಉಪಸ್ಥಿತಯನ್ನು ಸೂಚಿಸುವ ಬೌದ್ಧ ಬರಹಗಳನ್ನು ಪಾಲಿ ಸಿದ್ಧಾಂತದ ಒಂದು ದಂತಕಥೆಯು ದೃಢಪಡಿಸುತ್ತದೆ. ಈ ಕಥೆಯಲ್ಲಿ ಹೇಳಿರುವಂತೆ, ಬುದ್ಧನು ತನ್ನ ಮಲ್ಲ ತಮ್ಮ ನಂದ ಎಂದರೆ  ಮಹಾಪ್ರಜಾಪತಿ ಮತ್ತು ರಾಜ ಶುದ್ಧೋಧನನ ಪುತ್ರನನ್ನು ಆಶೀರ್ವದಿಸಲು ಕಪಿಲವಸ್ತುವಿಗೆ ಭೇಟಿ ನೀಡುತ್ತಾನೆ. ಯುವರಾಜ ನಂದನಾದರೋ ಪಟ್ಟವನ್ನೇರಿ ಉತ್ತರದಾಯಿತ್ವವನ್ನು ಸ್ವೀಕರಿಸಲು ಸಿದ್ಧನಾಗಿರುವಂತ ರಾಜಕುಮಾರ, ಶುದ್ಧೋಧನನ ಸಮಸ್ತ ಆಸ್ತಿಗೂ ವಾರಸುದಾರ. ಪಟ್ಟಾಭಿಷೇಕದ ನಂತರ ಜನಪದಕಲ್ಯಾಣಿ ಎಂಬ ಸುಂದರಿಯೊಡನೆ ಅವನ ಮದುವೆಯನ್ನೂ ಆಯೋಜಿಸಲಾಗಿರುತ್ತದೆ. 

ತನ್ನ ತಮ್ಮ ನಂದನನ್ನು ಭೇಟಿಯಾದ  ಬುದ್ಧನು ಅವನ ಕೈಯಲ್ಲೊಂದು ಬಿಕ್ಷಾ ಪಾತ್ರೆಯನ್ನು ಇಟ್ಟು ತನನ್ನು ಹಿಂಬಾಲಿಸಲು ಸೂಚಿಸಿ ನ್ಯಗ್ರೋಧವನದ ಕಡೆ ಪ್ರಯಾಣ ಬೆಳೆಸಿದನು. ನಂದನು ಬುದ್ಧನನ್ನೇ ಅನುಸರಿಸುತ್ತ ಕಾಡನ್ನು ತಲುಪಿದನು.  ಕಾಡನ್ನು ತಲುಪಿದ ನಂತರ, ತಾನು ಸನ್ಯಾಸ ದೀಕ್ಷೆಯನ್ನು ಪಡೆದು ತನ್ನ  ಸಂಘವನ್ನು ಸೇರಲು ಬಯಸುವನೇ? ಎಂದು ಕೇಳಿದ ಬುದ್ಧನಿಗೆ  ನಂದನು ಮೌನವಾಗಿಯೇ ಉತ್ತರ ಸೂಚಿಸಿ ಬಿಕ್ಕು ಸಂಘವನ್ನು ಸೇರಿಕೊಂಡನು. 

ಇದಾದ ಕೆಲವು ವರ್ಷಗಳ ನಂತರ ನಂದನಿಗೆ, ತಾನು ಮದುವೆಯಾಗಲು ಹೊರಟಿದ್ದ ರಾಜಕುಮಾರಿ ಜನಪದಕಲ್ಯಾಣಿಯ ನೆನಪಾಗಿ ಅವಳನ್ನು ಬಿಟ್ಟು ಬಂದುದಕ್ಕೆ ವಿಷಾದಿಸ ತೊಡಗಿದನು. ಕಪಿಲವಸ್ತುವನ್ನು ಬಿಟ್ಟು ಬುದ್ಧನನ್ನು ಅನುಸರಿಸುವುದಾಗಿ ಮುಂದಾದ ಯುವರಾಜ ನಂದನನ್ನು ಬೀಳ್ಕೊಡುವಾಗ, ಜನಪದಕಲ್ಯಾಣಿಯು ಅವನಿಗೆ ಶೀಘ್ರವಾಗಿ ಕಪಿಲವಸ್ತುವಿಗೆ ಮರಳಿ ತನ್ನನ್ನು ವರಿಸುವುದಾಗಿ ಕೇಳಿಕೊಂಡಿದ್ದಳು. ಅವಳ  ಮಾತುಗಳು ಮತ್ತೆ ಮತ್ತೆ ಅವನ ನೆನಪಾಗಿ ಬಂದು ಅವನನ್ನು ಕಾಡತೊಡಗಿತು.  

ನಂದನ ಹತಾಶೆ ಮತ್ತು ವ್ಯಾಮೋಹಗಳು  ಬುದ್ಧನ ಗಮನಕ್ಕೂ  ಬಂದವು.  ಆಗ ಬುದ್ಧ ತನ್ನ ದೈವೀ ಶಕ್ತಿಯಿಂದ ನಂದನನ್ನು ಒಮ್ಮೆಲೆ ಕಾಡಿಗೆ ಕರೆದೊಯ್ದು ಒಂದು ಕುರೂಪವಾದ ಕೋತಿಯನ್ನು ತೋರಿಸಿದನು. ನೋಡಲು ಅಸಹ್ಯವಾದ ಕೋತಿ ಮತ್ತು ಪರಮಸುಂದರಿಯಾದ ಜನಪದಕಲ್ಯಾಣಿ, ಇವರಿಬ್ಬರ ಪೈಕಿ ತಾನು ಯಾರನ್ನು  ಆಯ್ದುಕೊಳ್ಳುವನೆಂದು ನಂದನನ್ನು ಕೇಳಿದನು. ತಕ್ಷಣ  ನಂದನು ಲೋಕಸುಂದರಿಯಾದ ಜನಪದಕಲ್ಯಾಣಿಯನ್ನೇ ಆಯ್ದುಕೊಳ್ಳುವುದಾಗಿ ಉತ್ತರಿಸಿದನು. ಮತ್ತೆ ಬುದ್ಧನು ತನ್ನ ದೈವೀ ಶಕ್ತಿಯನ್ನು ಪ್ರಯೋಗಿಸಿ ನಂದನನ್ನು ಅಪ್ಸರೆಯರು ವಾಸಿಸುವಂತ ಸ್ವರ್ಗಕ್ಕೆ ಕರೆದೊಯ್ದನು. ಸ್ವರ್ಗದಲ್ಲಿ ಲಾವಣ್ಯವತಿಯರಾದ ಅಪ್ಸರೆಯರನ್ನು ಕಂಡ ನಂದನು  ಅವರ ಬಾಹ್ಯ ಸೌಂದರ್ಯಕ್ಕೆ ಮನಸೋತನು. ಅಪ್ಸರೆಯರೋ ಇಲ್ಲವೇ ಜಾನಪದಕಲ್ಯಾಣಿಯೋ, ಈ ಬಾರಿ ಯಾರನ್ನು ಆಯ್ದುಕೊಳ್ಳುವುದಾಗಿ ಬುದ್ಧನು ನಂದನನ್ನು ಮತ್ತೆ ಪ್ರಶ್ನಿಸಿದಾಗ  ಅಪ್ಸರೆಯರನ್ನೇ ಆಯ್ದುಕೊಂಡನು. ಲಾವಣ್ಯವತಿಯರಾದ ಅಪ್ಸರೆಯರಿಗೆ ಹೋಲಿಸಿದರೆ ಜನಪದಕಲ್ಯಾಣಿಯು ಈ ಹಿಂದೆ ಕಂಡುಬಂದ ಕುರೂಪಿಯಾದ ಮಂಗಕ್ಕೆ ಸಮ ಎಂದು ಅವಳ ಬಗ್ಗೆ ತಾತ್ಸಾರ ಭಾವವನ್ನು ವ್ಯಕ್ತಪಡಿಸಿದನು.  

ನಂದನ ಅಭಿಮತವನ್ನು ತಿಳಿದ ಬುದ್ಧನು, ತಾನು  ಶ್ರದ್ಧಾ ಭಕ್ತಿಯಿಂದ ಸನ್ಯಾಸವನ್ನು ಪಾಲಿಸಿ ಸಂಘದ ಕೆಲಸಗಳಲ್ಲಿ ನಿರತನಾಗಿದ್ದರೆ ಅದರ ಪ್ರತಿಫಲವಾಗಿ ಸ್ವರ್ಗ ಪ್ರಾಪ್ತಿಯಾಗುತ್ತದೆ ಮತ್ತು ಅಪ್ಸರೆಯರ ಸಾಂಗತ್ಯವನ್ನು ಅನುಭವಿಸಬಹುದೆಂದು ತಿಳಿಸಿದನು. ಸ್ವಯಂ ಬುದ್ಧನೇ ಹೀಗೆ ಅನುಗ್ರಹಿಸಿದನೆಂದರೆ ತಾನು ಸ್ವರ್ಗವನ್ನು ತಲುಪಿ ಅಪ್ಸರೆಯರ ಒಡನಾಟದಲ್ಲಿ ಸುಖವಾಗಿರಬಹುದು ಎಂಬ ಆಸೆಯು ನಂದನನ್ನು ಹೊಕ್ಕಿತು. ಅವನು ಚಾಚೂ ತಪ್ಪದೆ ಸನ್ಯಾಸವನ್ನು ಪರಿಪಾಲಿಸಿ ಸಂಘದ ಸಕಲ ಕೆಲಸಗಳನ್ನೂ ನಿಷ್ಠೆಯಿಂದ ಮಾಡತೊಡಗಿದನು.  ಸಂಘದ ಉಳಿದ ಬಿಕ್ಕುಗಳು ಕಾಮ ಮತ್ತು ಸ್ವಾರ್ಥ ಸಾಧನೆಗೆ ಏನನ್ನಾದರೂ ಮಾಡುವ ಭೋಗಲೋಲುಪನೆಂದು ನಂದನನ್ನು ಹಿಯ್ಯಾಳಿಸ ತೊಡಗಿದರು. ನಂದ ಪುನಃ ದುಃಖಿತನಾದನು. 

ಇದನ್ನು ಕಂಡ ಬುದ್ಧನು ಮತ್ತೆ ತನ್ನ ದೈವೀ ಶಕ್ತಿಯನ್ನು ಪ್ರಯೋಗಿಸಿ ಅವನನ್ನು ಮತ್ತೊಂದು ಆಧ್ಯಾತ್ಮ ಪ್ರವಾಸಕ್ಕೆ  ಕರೆದುಕೊಂಡು ಹೋದನು. ಈ ಬಾರಿ ನರಕವನ್ನು ತಲುಪಿದ ಬುದ್ಧ ಮತ್ತು ನಂದರು, ಘೋರ ರೂಪಿಗಳಾದ ಮತ್ತು  ನಿಷ್ಕರುಣಿಗಳಾದ ರಾಕ್ಷಸರು ನರಕಕ್ಕೆ ಬರುವ ಶಿಕ್ಷಿತರನ್ನು ಬೇಯಿಸಲು ಒಂದು ದೊಡ್ಡ ಹಂಡೆಯನ್ನು ಸಿದ್ಧಪಡಿಸುತ್ತಿರುವುದನ್ನು ಕಂಡರು. ಅವರನ್ನು ಬುದ್ಧನು, ಯಾರಿಗಾಗಿ ಆ ಹಂಡೆಯನ್ನು ಸಿದ್ಧಪಡುಸುತ್ತಿರುವುದಾಗಿ ಕೇಳಿದಾಗ ನಂದನಿಗೆ ಎಂದು ನೇರವಾಗಿ ಉತ್ತರಿಸಿದರು. 

ಪುಣ್ಯವೆಲ್ಲವೂ ನಶಿಸಿ ಹೋದ ಮೇಲೆ ಸ್ವರ್ಗವನ್ನು ತ್ಯಜಿಸಿ ನರಕವನ್ನು ಸೇರಲೇಬೇಕು ಅಂತೆಯೇ ನಂದನೂ ಸಹ  ಕೊನೆಯದಾಗಿ ನರಕವನ್ನೇ ಸೇರುವನು ಅದರ ಸಿದ್ಧತೆ ನಡೆಯುತ್ತಿದೆ ಎಂದು ಅವರು ಸೂಚಿಸಿದರು. ಅವರ ಮಾತುಗಳನ್ನು ಕೇಳಿದ ನಂದನಿಗೆ ನಾಚಿಕೆಯಾಯಿತು. ಸುಖಭೋಗಗಳಿಗೆ ಮತ್ತು  ಟೊಳ್ಳು ಆಸೆಗಳಿಗೆ ಬಲಿಯಾದ ತನ್ನ ಅಲ್ಪಮತಿಯ  ಬಗ್ಗೆ  ಬೇಸರಗೊಂಡನು. 

ಈ ಅನುಭವವಾದ ಮೇಲೆ ನಂದನು ಸಾಧನಾ ಮಾರ್ಗವನ್ನು ಅನುಸರಿಸಿ ದಿವ್ಯಜ್ಞಾನವನ್ನು ಪಡೆದುಕೊಂಡನು. ಅರಿಹಂತ ನಾದನು  – ಎಂದರೆ ‘ನೋವು-ಬಾಧೆಗಳನ್ನು ಗೆದ್ದವನು’ ಎಂದು. 

ಈ ಕಥೆಯು ಹಲವಾರು ರೀತಿಯ ವ್ಯಾಖ್ಯಾನಗಳಿಗೆ ಒಳಗಾಗಿದೆಯಾದರು ಬೌದ್ಧ ಧರ್ಮದಲ್ಲಿ ಅಪ್ಸರೆಯರು ಕೇವಲ ಸೌಂದರ್ಯ ಮತ್ತು ಅಲಂಕಾರಗಳಿಗೆ ಮಾತ್ರ ಸೀಮಿತವಾಗಿಲ್ಲದೆ, ಆಧ್ಯಾತ್ಮ ಚಿಂತನೆ ಮತ್ತು ಆತ್ಮಜ್ಞಾನದ ಸಾಧನೆಯಲ್ಲೂ ಪಾತ್ರಧಾರಿಗಳಾಗಿದ್ದಾರೆಂಬ ಅಂಶಕ್ಕೂ  ಒತ್ತುಕೊಡುತ್ತದೆ.  

ಜಪಾನ್ ದೇಶದ ಟೆನ್ನಿನ್ 

ರೇಷ್ಮೆ ಮಾರ್ಗವಾಗಿ ಬಾರತಕ್ಕೆ ಬಂದ ಚೀನಾ ಪ್ರವಾಸಿಗಳು ಅದೇ ಮಾರ್ಗವಾಗಿ ಹಿಂದಿರುಗುತ್ತ ಬೌದ್ಧ ಧರ್ಮವನ್ನೂ ತಮ್ಮ ಜೊತೆ ಹೊತ್ತು ಹೋದರು. ಇಂತಹ ಬಿಕ್ಕುಗಳ ನಿರಂತರ ಪ್ರಯತ್ನಗಳಿಂದ ಚೀನಾದಲ್ಲಿ  ಘಾಡವಾಗಿ ಬೇರೂರಿದ ಬೌದ್ಧ ಧರ್ಮವು ಕ್ರಮೇಣ ಕೊರಿಯಾ ಸೇರಿದಂತೆ ಹತ್ತು ಹಲವು ದೇಶಗಳಿಗೆ ಹಬ್ಬಿತು. ಪೂ.ಸಾ.ಶ 585 ರಲ್ಲಿ ಬೌದ್ಧ ಧರ್ಮವು ಸಮುದ್ರ ಮಾರ್ಗವಾಗಿ ಕೊರಿಯಾದಿಂದ ಜಪಾನ್ ದೇಶವನ್ನು ತಲುಪಿತು. ಜಪಾನ್ನಲ್ಲಿ ಬೌದ್ಧ ಧರ್ಮವು ಕೊರಿಯಾ ಮೂಲಕ ತಲುಪಿದೆ ಆದರೂ ಜಪಾನ್ ದೇಶದ  ಬೌದ್ಧ ಸಂಪ್ರದಾಯ, ಚಿತ್ರ ಕಲೆ, ಶಿಲ್ಪ ಕಲೆ ಮತ್ತು ಆಚಾರ ವಿಚಾರಗಳೆಲ್ಲವೂ ಮೂಲತಃ ಚೀನಾದಿಂದಲೇ ಪ್ರಭಾವಿತವಾಗಿತ್ತು. 

ಚೀನಾದ ಮೊಗಾವ್, ಯುಲಿನ್, ಯುಂಗಣ ಮತ್ತು ಲಾಂಗ್ಮೆನ್ ಗುಹೆಗಳಲ್ಲಿನ ಫೆಯಿಟಿಯನ್ ಅಥವಾ ಹಾರುವ ಅಪ್ಸರೆಯರು ಸಾಕ್ಷಾತ್ ಬುದ್ಧ ಮತ್ತು ಅವನ ಅಧ್ಯಾತ್ಮ ವಿಚಾರಗಳ ಜೊತೆಗೂಡಿ ಜಪಾನ್ ದೇಶವನ್ನು ಸೇರಿದರು. ಇಲ್ಲಿ ಪುನಃ ಅವರ ರೂಪ ಪರಿವರ್ತನೆಗೊಳಗಾಯಿತು. ಜಪಾನ್ ದೇಶದವರು ಈ ಅಪ್ಸರೆಯರ ವೈದಿಕ ಸ್ವರೂಪಕ್ಕೆ ದಕ್ಕೆ ತರದೆ ಕೇವಲ ಇವರ ವೇಷ-ಭೂಷಣ, ಹಾವ-ಭಾವ ಮತ್ತು ಮೈಮಾಟವನ್ನು ನಾಜೂಕಾಗಿ ತಮ್ಮ ಸಂಸ್ಕೃತಿಯಂತೆ ತಿದ್ದುಕೊಂಡು ಚಿತ್ರಿಸ ತೊಡಗಿದರು. ಭಾರತದಿಂದ ಹೊರಟು ಹಲವಾರು ದೇಶಗಳಲ್ಲಿ ಸಂಚರಿಸಿದ ಅಪ್ಸರೆಯರ ಪರಿಕಲ್ಪನೆಯು ಆ ಆ ದೇಶಗಳ  ವೈಶಿಷ್ಟ್ಯಗಳನ್ನೂ ಅಪ್ಪಿಕೊಂಡು ವಿಭಿನ್ನವಾದ ಗುಣಲಕ್ಷಣಗಳಿಂದ ಕೂಡಿತು.  

ಜಪಾನಿ ಭಾಷೆಯಲ್ಲಿ ‘ಟೆನ್’ ಎಂದರೆ ದೇವರು ಅಥವಾ ಸಾಕ್ಷಾತ್ ಬುದ್ಧನೇ ಎಂದು. ಆದ್ದರಿಂದ ಬುದ್ಧನ  ಉಪಾಸಕರಾಗಿ  ಚಿತ್ರಿಸಲ್ಪಟ್ಟ ಈ ದಿವ್ಯ ಸ್ತ್ರೀಯರು  ‘ಟೆನ್ನಿನ್’ ಎಂಬ ಹೆಸರನ್ನು ಪಡೆದರು. ಬುದ್ಧನ ಆರಾಧನೆಯಲ್ಲಿ ತೊಡಗಿರುವ ಈ ಆಕಾಶ ಸುಂದರಿಯರು ಸಂಗೀತ-ನಾಟ್ಯ  ಕೋವಿದೆಯರು. ಇಂತಹ ಅಪ್ಸರೆಯರ ಶಿಲ್ಪಕೃತಿಗಳು ಮತ್ತು ವರ್ಣಚಿತ್ರಗಳು ಅದೆಷ್ಟೋ ಬೌದ್ಧ ಮಠಗಳನ್ನು ಅಲಂಕರಿಸಿವೆ.  ಬಹುತೇಕ ಅಪ್ಸರೆಯರು ಕಮಲದ ಮೇಲೆ ನಿಂತಿರುವಂತೆಯೋ, ತೇಲುವ ಮೋಡದ ಮೇಲೆ ನಿಂತುರುವಂತೆಯೋ ಅಥವಾ ಆಸೀನರಾಗಿ ಗಾಳಿಯಲ್ಲಿ ತೇಲುತ್ತಿರುವಂತೆಯೋ ಕಂಡುಬರುತ್ತಾರೆ. ‘ಟೆನ್ನಿನ್’ ಎಂದು ಕರೆಯಲ್ಪಡುವ ಬುದ್ಧರ ಅಥವಾ ಬೋಧಿಸತ್ತ್ವರ ಜೊತೆಗಾರರೆಂದು ಗುರುತಿಸಲ್ಪಡುವ ಈ ಅಪ್ಸರೆಯರು ಬುದ್ಧನ ಜೊತೆ ಅವನ ಪ್ರಪಂಚದಲ್ಲೇ ವಾಸಿಸುವರೆಂಬ ನಂಬಿಕೆಯಿದೆ. ಜಪಾನ್ ನ ಉಜಿ ಎಂಬ ನಗರದಲ್ಲಿರುವ 11ನೇ ಶತಮಾನದ ಬ್ಯೊದೋಯಿನ್ ಎಂಬ ಬೌದ್ಧ ದೇವಾಲಯದಲ್ಲಿ ಟಿನ್ನಿನ್ ನ ಪ್ರಖ್ಯಾತವಾದ ಪ್ರತಿಮೆಗಳನ್ನು ನೋಡಬಹುದು.     

ಜಪಾನ್ ದೇಶದಲ್ಲಿ ರೆಕ್ಕೆ ಬಿಚ್ಚಿ ಹಾರಾಡುವ ಅಪ್ಸರೆಯರನ್ನು  ‘ಹಿಟೆನ್’ ಎಂದು ಕರೆಯುತ್ತಾರೆ.  ಬಹಳ ವೇಗವಾಗಿ ಹಾರಾಡುವ ಈ ಅಪ್ಸರೆಯರು ನರಮಾನವರ ಕಣ್ಣಿಗೆ ಗೋಚರಿಸುವುದಿಲ್ಲವಂತೆ. ಹಿಟೆನ್ ಅಪ್ಸರೆಯರ ಅತ್ಯದ್ಭುತವಾದ ಭಿತ್ತಿಚಿತ್ರಗಳನ್ನು ಹೋರ್ಯುಜಿ ಕೊಂಡೋ (Hōryūji Kondō) ದಲ್ಲಿ ನೋಡಬದು. ಹಿಟೆನ್ ಅಲ್ಲದೆ, ಸಂಗೀತ ವಾದ್ಯಗಳನ್ನು ಹಿತವಾಗಿ ನುಡಿಸುತ್ತ ಬುದ್ಧನ ಸುತ್ತಲು ಹಾರಾಡುತ್ತಿರುವ  ಶುಭಪ್ರದವಾದ ಅಪ್ಸರೆಯರನ್ನು ಹೋರ್ಯುಜಿ ಕೊಂಡೋ ದ ಚಾವಣಿಯಲ್ಲಿ ಮತ್ತು   ಬ್ಯೊದೋಯಿನ್ ಹೂಡೋ ಕ್ಯೋಟೊ ದ ಭಿತ್ತಿಗಳಲ್ಲಿಯೂ ನೋಡಬಹುದು.

ಹಗೊರೊಮೋ – ಗರಿಗಳಿರುವ ನಿಲುವಂಗಿಯ  ಕಥೆ 

ಟೆನ್ನಿನ್ ಗಳು ಹಾರಾಡಲು ಬಣ್ಣ ಬಣ್ಣದ ಗರಿಗಳಿರುವ ಒಂದು ಕಿಮೋನೋವನ್ನು  ಧರಿಸಿರುತ್ತಾರೆ.  ( ಅನುವಾದಕರ ಸೂಚಿ: ಕಿಮೋನೋ ಎಂದರೆ ಜಪಾನ್ ದೇಶದ ನಿಲುವಂಗಿ) ಈ ಕಿಮೋನೋವನ್ನು ಜಪಾನ್ ಭಾಷೆಯಲ್ಲಿ ‘ಹಗೊರೊಮೋ’ ಎಂದು ಕರೆಯುತ್ತಾರೆ. ಇದನ್ನು ಧರಿಸದರೆ ಮಾತ್ರ ಟೆನ್ನಿನ್ ಗಳಿಗೆ ಹಾರಲು ಸಾಧ್ಯ ಇಲ್ಲದಿದ್ದರೆ ಹಾರಲು ಆಗುವುದಿಲ್ಲ ಮತ್ತು  ತಮ್ಮ ವಾಸಸ್ಥಾನವಾದ ಆಕಾಶಪುರಿಯನ್ನು ಸೇರಲೂ ಸಾಧ್ಯವಿಲ್ಲ.  ಈ ಒಂದು ಪ್ರಸಿದ್ಧವಾದ ಕಥೆಯನ್ನು ಹಗೊರೊಮೋ ದ ಸುತ್ತಲೂ ಎಣೆಯಲಾಗಿದೆ.  

ಒಮ್ಮೆ ಅಪ್ಸರೆಯೊಬ್ಬಳು ಗಾಳಿಯಲ್ಲಿ ಹಾರುತ್ತ-ವಿಹರಿಸುತ್ತ  ಮಿಹೋ ನೊ ಮತ್ಸುಬರ ಎಂಬ ಕಡಲ ತೀರಕ್ಕೆ ಬಂದಾಗ, ಅಲ್ಲಿನ ಪ್ರಕೃತಿ ಸೌಂದರ್ಯವು ಅವಳ ಕಣ್ಮನಗಳನ್ನು ಸೆಳೆಯುತ್ತದೆ. ಒಂದು ಕಡೆ ಸೂರ್ಯರಶ್ಮಿಗಳನ್ನು ಪ್ರತಿಬಿಂಬಿಸುತ್ತ ಜಗಮಗಿಸುವ ನೀರು ಮತ್ತೊಂದು ಕಡೆ ಎಲೆ  ಹಸಿರಿನ ದೇವದಾರು ಮರಗಳ ದಟ್ಟ ಕಾನನ, ನಡುವೆ ಬೆಳ್ಳನೆಯ ಮರಳು. ಆ ಆಹ್ಲಾದಕರ ವಾತಾವರಣವನ್ನು ಸವಿಯಲು ತಕ್ಷಣ ತನ್ನ ಹಗೊರೊಮೋ ಅಥವಾ ನಿಲುವಂಗಿಯನ್ನು ಬಿಚ್ಚಿ ಒಂದು ದೇವದಾರು ಮರದ ತೊಗಟೆಗೆ ನೇತಾಕಿ ನೀರಿಗಿಳಿಯುತ್ತಾಳೆ.  ಅದೇ ಸಮಯಕ್ಕೆ ಅಲ್ಲಿಗೆ ಬಂದ ಹಖ್ಯುರೋ ಎಂಬ ಬೆಸ್ತನೊಬ್ಬನು ನೀರಿನಲ್ಲಿ ಆಡುತ್ತಿರುವ ಸುಂದರಿಯನ್ನು ಮತ್ತು ತೊಗಟೆಯ ಮೇಲೆ ನೇತಾಡುತ್ತಿದ್ದ ನಿಲುವಂಗಿಯನ್ನು ನೋಡುತ್ತಾನೆ. ಆಕೆ ಟೆನ್ನಿನ್ ಎಂದು ಅವನಿಗೆ ಮನದಟ್ಟಾಗುತ್ತದೆ. ಹಗೊರೊಮೋವನ್ನು ತೆಗೆದಿಟ್ಟುಕೊಂಡು ಅವಳ ಬಳಿ ಹೋಗಿ ಚೆಂದದ ನೃತ್ಯ ಮಾಡಿ ತೋರಿಸಿದರೆ ಮಾತ್ರ ಅದನ್ನು ಹಿಂದಿರುಗಿಸುವುದಾಗಿ ಹೇಳುತ್ತಾನೆ. ತನ್ನ  ಹಗೊರೊಮೋ ಇಲ್ಲದೆ ತಾನು ಸ್ವರ್ಗಕ್ಕೆ ಹಿಂದಿರುಗಲಾಗುವುದಿಲ್ಲ ಎಂದು ತಿಳಿದ ಆ ಆಕಾಶ ಸುಂದರಿಯು ನರ್ತಿಸಲು ಒಪ್ಪಿಕೊಳ್ಳಲೇಬೇಕಾಗುತ್ತದೆ. ಅವಳ ನಾಟ್ಯವನ್ನು ಆಸ್ವಾದಿಸಿದ ನಂತರ ತನ್ನ ಮಾತಿನಂತೆ ಹಖ್ಯುರೋ ಹಗೊರೊಮೋವನ್ನು ಹಿಂದಿರುಗಿಸುತ್ತಾನೆ , ಟೆನ್ನಿನ್ ಸ್ವರ್ಗಕ್ಕೆ ತೆರಳುತ್ತಾಳೆ. 

ಪೆಸಿಫಿಕ್ ಮಹಾಸಾಗರ ಕೊಲ್ಲಿಯಲ್ಲಿರುವ ಮೌಂಟ್ ಫುಜಿಯ ಕಡೆ ಮುಖ ಮಾಡಿ ನಿಂತಿರುವ  ಶಿಮಿಝು ಪ್ರಾಂತ್ಯದ ಮಿಜೋ ದೇವಾಲಯದಲ್ಲಿ ಈ ಟೆನ್ನಿನ್ ನ ನಿಲುವಂಗಿಯ ಕೆಲವು ಗರಿಗಳನ್ನು ಸಂರಕ್ಷಿಸಲಾಗಿದೆ. ಹಖ್ಯೂರೊ ಅಪ್ಸರೆಯ ನರ್ತನವನ್ನು ನೋಡುತ್ತಿರುವ ಪ್ರಸಂಗವು ಪ್ರತಿಮಾ ರೂಪದಲ್ಲಿ ಈ ದೇವಾಲಯವಿರುವ ಉಪವನದ ಬಾಗಿಲಲ್ಲೇ ಕಾಣಸಿಗುತ್ತದೆ. ಹಗೊರೊಮೋವನ್ನು ಧರಿಸಿದ ಅಪ್ಸರೆ ಸ್ವರ್ಗದಿಂದ ಧರೆಗೆ ಬಂದು ಇಳಿದ ಮರಕ್ಕೀಗ 650 ವರ್ಷಗಳಾಗಿವೆ ಎಂದು ಹೇಳಲಾಗಿದೆ. ಈ ಮರವನ್ನೂ ಇಲ್ಲಿ ನೋಡಬಹುದು.  

ವೇದ ಮೂಲವಾದ ಅಪ್ಸರೆಯರ ಉಪಸ್ಥಿತಿ ಹಿಂದೂ ಮತ್ತು ಬೌದ್ಧ ಧರ್ಮಗಳಲ್ಲಿ ಪ್ರಮುಖವಾದುದು. ಬೌದ್ಧ ಧರ್ಮದಲ್ಲಿ, ಅಪ್ಸರೆಯರು ಲೌಕಿಕ ಮತ್ತು ಪಾರಮಾತ್ಮಿಕತೆಯ ನಡುವಿನ ಅಂತರಾಳದ ಪ್ರತೀಕ. ಅಪ್ಸರೆಯರು ಕರ್ತವ್ಯ ನಿಷ್ಠೆ, ಆತ್ಮಗೌರವ, ಸಿದ್ಧಾಂತ ಮತ್ತು  ಸೌಂದರ್ಯಗಳ ನಡುವಿನ ನಂಟನ್ನು ಬೆಸೆಯುತ್ತಾರೆ. ಬುದ್ಧನ ಸುತ್ತಲೂ ಅವನನ್ನೇ ಆರಾಧಿಸುತ್ತಿರುವ ಅಪ್ಸರೆಯರು ಅವನ ಆಲಯಗಳನ್ನೂ ಅಲಂಕರಿಸುತ್ತಾರೆ. ಮುಖ್ಯವಾಗಿ ಅಪ್ಸರೆಯರು, ಧಾರ್ಮಿಕ ಮತ್ತು ಆಧ್ಯಾತ್ಮಿಕ ಭಾವೋತ್ಕರ್ಷ ಮತ್ತು ದೈವಿಕ ಭಾದ್ಯತೆಗಳ ಪ್ರತೀಕ. 

(This is a translation of  an article written in English by Shalini Mahapatra.)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply