ಚರಿತ್ರೆಯಲ್ಲಿ ಕಾಳಿದಾಸನ ಬಗ್ಗೆ ಹುಡುಕುತ್ತಾ ಹೋದರೆ ನಮಗೆ ನಿಖರವಾದ ಮಾಹಿತಿ ದೊರಕುವುದಿಲ್ಲ. ನಮ್ಮಲ್ಲಿರುವ ಪರೋಕ್ಷವಾದ ಸಾಕ್ಷಿ ಪುರಾವೆಗಳ ಮೇರೆಗೆ ಈತನ ಕಾಲಮಾನ ಅಥವ ವಾಸಸ್ಥಾನದ ಬಗ್ಗೆ ಅಂದಾಜು ಮಾಡಬಹುದಷ್ಟೇ.
ಕಾಳಿದಾಸನು ರಚಸಿದಂತಹ ಒಂದು ನಾಟಕದಲ್ಲಿ ಶುಂಗ ವಂಶದ ರಾಜ ಅಗ್ನಿಮಿತ್ರನೇ ನಾಯಕ. ಆದ್ದರಿಂದ ಇವರ ಕಾಲಮಾನವನ್ನು ಕ್ರಿ.ಪೂ ಒಂದನೇ ಶತಮಾನದ ನಂತರವಿರಬಹುದು ಎಂದು ಊಹಿಸಿಕೊಂಡರೆ ತಪ್ಪಾಗದು. ಮತ್ತೊಂದು ಕಡೆ, ರವಿಕೀರ್ತಿಯ ಐಹೊಳೆ ಶಾಸನಗಳಲ್ಲಿ ಬಾಣಭಟ್ಟನು ಕಾಳಿದಾಸನನ್ನು ಹೊಗಳಿರುವ ಮಾಹಿತಿಯ ಪ್ರಕಾರ ಈತ ಕ್ರಿ.ಪೂ ಏಳನೇ ಶತಮಾನದ ಮುಂಚೆಯೇ ಇದ್ದಿರಬೇಕು ಎಂದು ಗುರುತಿಸುವುದು ಸೂಕ್ತ. ಪ್ರಸ್ತುತವಾಗಿ, ಕ್ರಿ.ಪೂ ೪ ಮತ್ತು ೫ನೇ ಶತಮಾನದ ಗುಪ್ತರ ಸ್ವರ್ಣಯುಗವೇ ಈತನ ಕಾಲಮಾನ ಇದ್ದಿರಬಹುದು ಎಂದು ಒಪ್ಪಿಕೊಳ್ಳಲಾಗಿದೆ.
ಕಾಳಿದಾಸನನ್ನು ಸಮುದ್ರಗುಪ್ತ ಅಥವಾ ಚಂದ್ರಗುಪ್ತ-II ಇಲ್ಲವೇ ಇವರಬ್ಬರೂ ಪೋಷಿಸಿರಬಹುದು. ಇವನು ತನ್ನ ಕೃತಿಗಳಲ್ಲಿ, ಗುಪ್ತರ ಕಿರು ರಾಜಧಾನಿಯಾಗಿದ್ದ ಉಜ್ಜೈನಿಯ ಬಗ್ಗೆ ಅಪಾರವಾದ ಅಕ್ಕರೆಯನ್ನು ಪ್ರದರ್ಶಿಸಿದ್ದಾನೆ. ಅನೇಕ ಪಂಡಿತರ ಅಭಿಪ್ರಾಯದ ಪ್ರಕಾರ ಈತ ಉಜ್ಜೈನಿಯವನೇ.
ಕಾಳಿದಾಸನ ಇಷ್ಟದೈವ ಶಿವ. ಋತುಸಂಹಾರಂ ಎಂಬ ಕೃತಿಯನ್ನು ಹೊರತುಪಡಿಸಿ ಈತನ ಸಮಸ್ತ ರಚನೆಯೂ ಶಿವನ ಪ್ರಾರ್ಥನೆಯಿಂದಲೇ ಆರಂಭವಾಗುತ್ತದೆ. ಕುಮಾರಸಂಭವಂ ಎಂಬ ಕೃತಿಯನ್ನು ಸಂಪೂರ್ಣವಾಗಿ ಶಿವನಿಗೇ ಮುಡುಪಾಗಿರಿಸಿದ ಕಾರಣ ಮಂಗಳ ಶ್ಲೋಕದಲ್ಲಿ ಶಿವನಿಲ್ಲ. ಭರತ ಖಂಡದ ನೆಲದರಿಮೆ, ಇಲ್ಲಿನ ಪ್ರಾಣಿ ಸಂಕುಲದ ಅರಿವು ಮತ್ತು ಸಸ್ಯರಾಶಿಯ ಬಗ್ಗೆ ಕಾಳಿದಾಸ ಪ್ರಖರವಾಗಿ ತಿಳಿದುಕೊಂಡಿದ್ದರು ಎಂಬುದಕ್ಕೆ ಇವರ ಕೃತಿಗಳೇ ಸಾಕ್ಷಿಯಾಗಿವೆ. ಜೊತೆಗೆ ವೈದಿಕ ಸಿದ್ದಾಂತ ಮತ್ತು ಲಲಿತಕಲೆಗಳ ಬಗ್ಗೆಯೂ ಚೆನ್ನಾಗಿ ತಿಳಿದುಕೊಂಡಿದ್ದರು ಎಂದು ಕಾಣ ಸಿಗುತ್ತದೆ. ಈ ರೀತಿಯ ಜ್ಞಾನ ಭಂಡಾರ, ಜೊತೆಗೆ ಅವರ ನೈಜ ಪ್ರತಿಭೆ ಅವರನ್ನು ಭಾರತದ ಶಾಸ್ತ್ರೀಯ ಸಾಹಿತ್ಯದ ಶ್ರೇಷ್ಠ ಲೇಖಕರಾಗಲು ಎಡೆ ಮಾಡಿಕೊಟ್ಟಿದೆ. ಅವರ ಕೃತಿಗಳಲ್ಲಿ ತೊಡಗುತ್ತ ಆಳವಾಗಿ ಅಧ್ಯಯನ ಮಾಡಿದ್ದಲ್ಲಿ ನಮಗೆ ಆನಂದದ ಅನುಭೂತಿಯಾಗುತ್ತದೆ.
ಕಾಳಿದಾಸನ ಸಾಹಿತ್ಯಗಳು
ಸಂಸ್ಕೃತದ ಹಲವಾರು ಕೃತಿಗಳ ಕರ್ತೃ ಕಾಳಿದಾಸನೆಂದು ಗುರುತಿಸಲಾಗಿದೆ. ಆದರೂ ಹಲವಾರು ವರ್ಷಗಳ ವಿಮರ್ಶಾತ್ಮಕ ವಿಶ್ಲೇಷಣೆ ಮತ್ತು ಚರ್ಚೆಗಳ ನಂತರ ಪಂಡಿತರು ಏಳು ಕೃತಿಗಳನ್ನು ಕಾಳಿದಾಸನ ರಚನೆಯೇ ಎಂದು ಒಮ್ಮತದಿಂದ ಗುರುತಿಸಿದ್ದಾರೆ. ಅವುಗಳನ್ನು ನಾವು ಸಂಕ್ಷಿಪ್ತವಾಗಿ ಚರ್ಚಿಸೋಣ ಬನ್ನಿ.
ಋತುಸಂಹಾರಂ
ಇದು ಆರು ಋತುಗಳನ್ನೂ ವಿವರಿಸುವ ಒಂದು ಪುಟ್ಟ ರಚನೆ. ಗ್ರೀಷ್ಮ (ಬೇಸಿಗೆ), ವರ್ಷಾ (ಮಳೆ), ಶರತ್ (ಚಳಿಗಾಲದ ಮುನ್ನ ಮರದ ಎಲೆಗಳು ಉದುರುವ ಕಾಲ), ಹೇಮಂತ (ಚಳಿಗಾಲ), ಶಿಶಿರ (ಚಳಿಗಾಲ ಮುಗಿಯುತ್ತಾ ಬಂದು ಮಂದವಾಗಿ ಬಿಸಿಲಿರುವ ಕಾಲ) ಮತ್ತು ವಸಂತ (ವಸಂತ). ಪ್ರತಿಯೊಂದು ಋತುವಿನ ವೈಶಿಷ್ಟ್ಯವನ್ನು ಕಾಳಿದಾಸ ವಿಸ್ತಾರವಾಗಿ ವರ್ಣಿಸಿದ್ದಾನೆ. ಜನರ ಉಡುಗೆ ತೊಡುಗೆಗಳು ಮತ್ತು ಜೀವನಶೈಲಿಯ ಮೇಲೆ ಇವುಗಳ ಪ್ರಭಾವಗಳನ್ನೂ ಸಹ ತಿಳಿಸಿದ್ದಾನೆ. ಅವನ ಮಿಕ್ಕಲ್ಲಾ ಕೃತಿಗಳಿಗಿಂತ ಈ ಕೃತಿಯು ಮುಂಚಿನದು ಎಂಬ ಅಭಿಪ್ರಾಯವಿದೆ
ಮೇಘದೂತಂ
ಈ ರಚನೆಯನ್ನು ಸಾಹಿತ್ಯಲೋಕದ ಉತ್ಕೃಷ್ಟವಾದ ಕೃತಿಯೆಂದು ಪರಿಗಣಿಸಲಾಗಿದೆ. ಒಬ್ಬ ಯಕ್ಷ ಅಥವ ಅತಿಮಾನುಷ ಈ ಕೃತಿಯ ಮುಖ್ಯ ಪಾತ್ರಧಾರಿ. ಈ ಯಕ್ಷನ ಅತಿಮಾನುಷ ಶಕ್ತಿಗಳನ್ನು ಅವನ ಯಜಮಾನ ಕುಬೇರನು ಕಸಿದುಕೊಂಡು, ಅವನನ್ನು ಬಹಿಷ್ಕರಿಸಿ ಒಂದು ವರ್ಷದ ಕಾಲಾವಧಿಗೆ ಭೂಮಿಗೆ ಅಟ್ಟುತ್ತಾನೆ. ಈ ಸಮಯವನ್ನು ಆ ಯಕ್ಷ ರಾಮಗಿರಿಯ ಪರ್ವತ ಪ್ರದೇಶಗಳಲ್ಲಿ ಹಾಗು ಅಲ್ಲಿನ ವಿರಕ್ತ ಮಂದಿರಗಳಲ್ಲಿ ತನ್ನ ಹೆಂಡತಿಯ ಪ್ರೀತಿಯನ್ನು ಹಂಬಲಿಸುತ್ತಾ ಕಳೆಯುತ್ತಾನೆ. ಅಂದು ಆಷಾಢ ಮಾಸದ ಮೊದಲನೆಯ ದಿನ. ಮೋಡಗಳು ಹೆಪ್ಪುಗಟ್ಟಿರುವುದನ್ನು ನೋಡಿ ಅವನ ಮನಸ್ಸಿನಲ್ಲಿ ಒಂದು ಕಲ್ಪನೆಯು ಮೂಡುತ್ತದೆ. ಹಿಮಾಲಯದ ತಪ್ಪಲಲ್ಲಿರುವ ಯಕ್ಷರ ಪಟ್ಟಣವಾದ ಅಲಕಾ ಎಂಬ ಪುರಿಯಲ್ಲಿರುವ ತನ್ನ ಮಡದಿಗೆ ತನ್ನ ಪ್ರೇಮದ ಸಂದೇಶವನ್ನು ಮೋಡಗಳೇ ತಲುಪಿಸ ಬಹುದಲ್ಲವೇ ಎಂದು ಊಹಿಸಿಕೊಳ್ಳುತ್ತಾನೆ.
ತನ್ನ ಪ್ರಿಯತಮೆಗೆ ಯಕ್ಷನ ಸಂದೇಶ ಹಾಗು ಅದನ್ನು ತಲುಪಿಸಲು ಮೋಡಗಳು ಸಂಚರಿಸಬೇಕಾದ ಮಾರ್ಗ ಈ ಕಾವ್ಯದ ಪಮುಖ ವಿಷಯವಾಗಿ ರೂಪಗೊಳ್ಳುತ್ತದೆ.
ಈ ಕಾವ್ಯವು ಸುಮಾರು 115 ಶ್ಲೋಕಗಳನ್ನು ಒಳಗೊಂಡಿದೆ. ಇವುಗಳ ಮೂಲಕ ಕಾಳಿದಾಸ ದೇವಾನುದೇವತೆಗಳಿಗೆ ಸೂಕ್ತವಾದ ವೈವಿಧ್ಯಮಯ ಪ್ರಪಂಚವನ್ನೇ ನಿರ್ಮಿಸಿದ್ದಾನೆ. ಮೋಡದ ಹಾದಿಯಲ್ಲಿರುವ ಪ್ರತಿಯೊಂದು ನದಿ, ಮರ, ಹೂವು, ನಗರ ಮತ್ತು ದೇವಾಲಯ ಪಟ್ಟಣಗಳನ್ನು ವರ್ಣಿಸಿದ್ದಾನೆ. ಮೋಡವು ಸಂಚಿರಿಸುತ್ತ ತಾನೇ ಈ ವರ್ಣರಂಜಕ ವಿವರಣೆಯನ್ನು ಹೇಳುತ್ತಿದೆಯೋ ಎಂಬಂತೆ ಕಣ್ಣಿಗೆ ಕಟ್ಟಿದಂತೆ ಭಾಸವಾಗುತ್ತದೆ.
ನದಿಗಳು ತಮ್ಮ ಪ್ರಿಯತಮನಿಗೆ ಕಾಯುತ್ತಿರುವ ನಾಯಕಿಯರಾದರೆ ಮೋಡವೇ ಅವರನ್ನು ಸಂತೈಸುವ ನಾಯಕನಾಗುತ್ತದೆ. ಧಣಿದ ಮೋಡವನ್ನು ವಿಶ್ರಮಿಸುವಂತೆ ಆಹ್ವಾನಿಸುವ ಪರ್ವತಗಳು ಸ್ನೇಹಿತರಾಗಿ ಮಾರ್ಪಾಡಾಗುತ್ತವೆ. ಎತ್ತರದಲ್ಲಿ ಹಾರಾಡುವ ರಾಜಹಂಸಗಳು ಮೋಡಗಳ ಪ್ರಯಾಣದಲ್ಲಿ ಸಂಗಾತಿಗಳ ಪಾತ್ರವಹಿಸುತ್ತವೆ. ಕತ್ತಲಲ್ಲಿ ತಮ್ಮ ಪ್ರಿಯತಮನನ್ನು ಬೇಟಿಯಾಗಲು ಹೊರಟ ಮಹಿಳೆಯರಿಗೆ ಮಿಂಚುಗಳೇ ದಾರಿದೀಪವಾಗುತ್ತವೆ. ಉಜ್ಜೈನಿಯ ಮಹಾಕಾಳನ ಸಂಜೆಯ ಪೂಜೆಗೆ ಗುಡುಗುಗಳೇ ಢಮರುಗದ ಝೇಂಕಾರವಾಗಿ ಕೇಳಬರುತ್ತದೆ.
ಹಿಮಾಲಯದ ಕೈಲಾಸಕ್ಕೆ ಕಾಲಿಟ್ಟ ಮೋಡವು ಶಿವ ಪಾರ್ವತಿಯರು ಮೆಟ್ಟುವ ಮೆಟ್ಟಿಲಾಗಿ ವಿಧೇಯ ಭಾವವನ್ನು ವ್ಯಕ್ತಪಡಿಸುತ್ತದೆ. ಅಂತಿಮವಾಗಿ ಅಲಕಾ ಪಟ್ಟಣವನ್ನು ತಲುಪಿ, ತಾನು ಅಣ್ಣನಂತೆ ಭಾವಿಸುವ ಯಕ್ಷನ ಸಂದೇಶವನ್ನು ತನ್ನ ಅತ್ತಿಗೆಗೆ ಮುಟ್ಟಿಸುತ್ತದೆ.
ವಾಸ್ತವವಾಗಿ ಒಂದು ಮೋಡವು ಸಂದೇಶವನ್ನು ಹೊತ್ತುಕೊಂಡು ಅಲ್ಲಿಗೆ ಹೋಗುತ್ತದೆಯೆಂದಾಗಲಿ ಅಥವಾ ಅದು ಸಂದೇಶವನ್ನು ಯಶಸ್ವಿಯಾಗಿ ತಲುಪಿಸಿತೆಂದಾಗಲಿ ಈ ಕೃತಿಯಲ್ಲಿ ಹೇಳಿರುವುದಿಲ್ಲ. ಮೂಲಭೂತವಾಗಿ ಈ ಕೃತಿಯು ಓದುಗರ ಆಸೆಗಳಿಗೆ ರೆಕ್ಕೆ ಕಟ್ಟಿ ಒಂದು ಕನಸಿನ ಲೋಕಕ್ಕೆ ಕೊಂಡೊಯ್ಯುವ ಸಂಕೇತವಾಗಿದೆ. ಮಹಾನ್ ವ್ಯಾಖ್ಯಾನಕಾರರಾದ ಮಲ್ಲಿನಾಥಸೂರಿಯವರು ಮೇಘಧೂತಂ ಕಾವ್ಯವನ್ನು ಅರ್ಥ ಮಾಡಿಕೊಂಡು ಪ್ರಶಂಸಿಸುವುದರಲ್ಲಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟಿರುವುದಾಗಿ ಉಧ್ಗರಿಸಿದ್ದಾರೆ.
ರಘುವಂಶಂ
ಭಾರತದ ಸಾಹಿತ್ಯ ಸಂಸ್ಕೃತಿಯು ಈ ರಚನೆಯನ್ನು ಕಾಳಿದಾಸನ ಮೇರು ಕೃತಿಯೆಂದು ಪರಿಗಣಿಸಿದೆ. ಹತ್ತೊಂಬತ್ತು ಸರ್ಗಗಳನ್ನು (ಅಧ್ಯಾಯ) ಹೊಳಗೊಂಡಿರುವ ಕಾಳಿದಾಸನ ಈ ಬೃಹತ್ ಕೃತಿಯು ಸೂರ್ಯ ವಂಶದ ರಾಜರುಗಳ ಜೀವನವನ್ನು ಆಧಾರಿಸಿದೆ. ಈ ವಂಶದ ಅನೇಕಾನೇಕ ರಾಜರುಗಳ ವರ್ಣನೆಯ ಮೂಲಕ ಕಾಳಿದಾಸ ಅತ್ಯುನ್ನತ ವಿಚಾರಗಳನ್ನು ವಿವರಿಸುತ್ತಾನೆ. ಇದರ ಪ್ರಮುಖ ರಾಜರುಗಳಲ್ಲಿ ಪರಮಾತ್ಮನಾದ ಶ್ರೀ ರಾಮ ಮುಖ್ಯವಾದವನು, ಆದ್ದರಿಂದ ರಾಮಾಯಣವು ಈ ಮಹಾಕಾವ್ಯದ ಕೇಂದ್ರವಾಗುತ್ತದೆ.
ಆರಂಭದಲ್ಲಿಯೇ ಈ ವಿಷಯವಾಗಿ ಗೌರವವನ್ನು ವ್ಯಕ್ತಪಡಿಸಿರುವ ಕಾಳಿದಾಸ, ಕೃತಿಯ ಮಧ್ಯದಲ್ಲಿಯೂ ವಾಲ್ಮೀಕಿ ಮಹರ್ಷಿಗಳಿಗೆ ಬಹಳ ಪೂಜ್ಯಭಾವದಿಂದ ವಂದಿಸುತ್ತಾರೆ.
ಕಾಳಿದಾಸನು ತನ್ನ ಸೃಜನಶೀಲತೆಯನ್ನು ರಾಮನ ಪೂರ್ವಜರುಗಳು ಮತ್ತು ಉತ್ತರಾಧಿಕಾರಿಗಳ ಬಗ್ಗೆ ವರ್ಣಿಸಲು ಬಳಸಿಕೊಳ್ಳುತ್ತಾ ಬಹಳ ಚಾತುರ್ಯದಿಂದ ರಾಮಾಯಣದ ಬಗ್ಗೆ ಸಂಕ್ಷಿಪ್ತವಾಗಿ ಹೇಳುತ್ತಾನೆ. ರಾಮನ ಪೂರ್ವಜರಲ್ಲಿ ‘ರಘು’ ಎನ್ನುವ ರಾಜನು ಅಗ್ರಗಣ್ಯನು. ಆದ್ದರಿಂದ ಈ ಪ್ರಖ್ಯಾತವಾದ ವಂಶವನ್ನು ‘ರಘುವಂಶ’ ಎಂದು ಈತನ ಹೆಸರಿನಿಂದಲೇ ಗುರುತಿಸಲಾಗುತ್ತದೆ.
‘ರಘುವಂಶ’ ಎಂಬ ಈ ಮಹಾಕಾವ್ಯವು ರಘುವಿನ ತಂದೆ ದಿಲೀಪ ಮಹಾರಾಜನಿಂದ ಮೊದಲುಗೊಂಡು, ರಘು, ಅಜ, ದಶರಥ, ಸ್ವಯಂ ಶ್ರೀ ರಾಮಚಂದ್ರ, ರಾಮನ ಮಗ ಕುಶ ಮತ್ತು ಆತನ ಮಗ ಅತಿಥಿಯನ್ನು ಒಳಗೊಂಡಿದೆ. ಪ್ರಮುಖರಲ್ಲದ ಹಲವಾರು ರಾಜರುಗಳ ಉಲ್ಲೇಖವೂ ಇದರಲ್ಲಿದೆ. ಅಂತ್ಯದಲ್ಲಿ ಸುದರ್ಶನ ಎಂಬ ಹೆಸರಿನ ಮಹಾನ್ ರಾಜನ ವರ್ಣನೆ ಮಾಡಲಾಗಿದೆ.
ಸುದರ್ಶನನ ಮಗ, ಅನೈತಿಕ ಚರಿತ್ರೆಯುಳ್ಳ ಅಗ್ನಿವರ್ಣ ತನ್ನ ಬೇಜವಾಬ್ದಾರಿಯಿಂದಾಗಿ ಸಂಪೂರ್ಣ ವಂಶದ ವಿನಾಶಕ್ಕೆ ಕಾರಣನಾಗುತ್ತಾನೆ. ರಘು ಮತ್ತು ರಾಮನಂತಹ ಮಹಾನ್ ರಾಜರುಗಳ ವಂಶವು ಇವನೊಂದಿಗೆ ಕೊನೆಗಾಣುತ್ತದೆ.
ಈ ಮಹಾಕಾವ್ಯವು ಒಂದು ಸೂಕ್ಷ್ಮವಾದ ಸಂದೇಶವನ್ನು ಮನದಟ್ಟಾಗುವಂತೆ ತಿಳಿಸಿಕೊಡುತ್ತದೆ. ‘ತಲೆಮಾರುಗಳಿಂದ ನಿರ್ಮಿಸಲ್ಪಟ್ಟ ಮಹೋನ್ನತ ಸಂಸ್ಥೆಗಳನ್ನು ಅಧಿಕಾರದಲ್ಲಿರುವ ಒಬ್ಬ ಬೇಜವಾಬ್ದಾರಿ ವ್ಯಕ್ತಿಯು ನಾಶಮಾಡಬಲ್ಲನು’ ಎಂದು. ಮಹತ್ತರವಾದ ಅಧಿಕಾರವನ್ನು ಅಷ್ಟೇ ಮಹತ್ತರವಾದ ಜವಾಬ್ದಾರಿಯೊಂದಿಗೆ ಸಂಯೋಜಿಸದಿದ್ದರೆ ಅನಾಹುತಗಳಾಗುವುದು ನಿಶ್ಚಿತ. ಈ ರೀತಿಯ ಶ್ರೇಷ್ಠ ರಾಷ್ಟ್ರೋತ್ಥಾನ ವಿಚಾರಗಳನ್ನು ವಿವರಿಸಲೆಂದೇ ಕಾಳಿದಾಸ ಈ ವಂಶಾವಳಿಯ ರಾಜರುಗಳನ್ನು ಆರಿಸಿಕೊಂಡಿದ್ದಾನೆ. ಒಂದು ಸಮಾಜದ ನೈತಿಕತೆ ಮತ್ತು ಹತ್ತು ಹಲವು ಸದ್ವಿಚಾರಗಳು ಅಲ್ಲಿನ ಆಡಳಿತ ವರ್ಗದ ಕೈಯಲ್ಲಿರುತ್ತದೆ. ಆಡಳಿತ ವರ್ಗವು ಉನ್ನತ ಮಾನದಂಡವನ್ನು ಹೊಂದಿದ್ದರೆ ಜನರೂ ಸಹ ಸ್ವಪ್ರೇರಣೆಯಿಂದ ಇವುಗಳ ಅನುಸರಣೆ ಮಾಡುತ್ತಾರೆ. ಈ ಕೃತಿಯು ಮನರಂಜನೆಯ ಜೊತೆಗೆ ಸಾಮಾಜಿಕ ಹಿತಾಹಿತಗಳ ಪಾಠಗಳನ್ನು ಬೆಳಕಿಗೆ ತರುವ ಪಠ್ಯ ಪುಸ್ತಕವೂ ಹೌದು.
ಆದ್ದರಿಂದ ರಘುವಂಶವನ್ನು ಸಂಸ್ಕೃತ ಭಾಷೆಯ ಮೊದಲಿಗರು ಮತ್ತು ಪಂಡಿತರು, ಇವರಿಬ್ಬರೂ ಆಯ್ದುಕೊಳ್ಳುತ್ತಾರೆ.
ಕುಮಾರಸಂಭವಂ
ಸಂಸ್ಕೃತ ಸಾಹಿತ್ಯ ಭಂಡಾರದಲ್ಲಿ ಇದೊಂದು ವೈವಿಧ್ಯಮಯ ಕಾವ್ಯವಾಗಿದೆ. ಇದರ ವೈಶಿಷ್ಟ್ಯವೆಂದರೆ ಕವಿ ಕಥೆಯ ರೂಪದಲ್ಲಿ ಕಣ್ಣಿಗೆ ಕಟ್ಟಿದಂತೆ ಪದ್ಯಗಳನ್ನು ಬರೆದಿದ್ದಾನೆ. ಚಲನಚಿತ್ರದ ಗತಿಯನ್ನು ಹೊಂದಿರುವ ಈ ಕೃತಿಯಲ್ಲಿ ಕಾಳಿದಾಸ ಪ್ರತಿಯೊಂದು ದೃಶ್ಯವನ್ನು ವರ್ಣಚಿತ್ರದಂತೆ ಸೂಕ್ಷ್ಮವಾಗಿ ಚಿತ್ರಿಸಿ ನಿಖರವಾದ ವಿವರಗಳಿಂದ ಅಲಂಕರಿಸಿದ್ದಾನೆ.
ಪ್ರಾಯಶಃ (ಭಾರತೀಯ ಸಾಹಿತ್ಯ ಪ್ರಪಂಚದ) ಪ್ರತಿಯೊಂದು ಸಾಹಿತ್ಯ ರಚನೆಗೂ ಕುಮಾರಸಂಭವಂ ಆದರ್ಶವಾಗಿದೆ. ಅವುಗಳೂ ಸಹ ಈ ಎತ್ತರಕ್ಕೆ ಏರಲು ಆಶಿಸುವುದು ಇದರ ಔನ್ನತ್ಯವನ್ನು ಸೂಚಿಸುತ್ತದೆ. ನಮ್ಮಂತಹ ಸಾಮಾನ್ಯರು ಈ ರಚನೆಯ ಹಿಂದಿರುವ ಪ್ರತಿಭೆಯನ್ನು ಕಲ್ಪನೆ ಮಾಡಿಕೊಂಡು ಅದರ ಉತ್ಕೃಷ್ಟತೆಯ ಅಂದಾಜು ಮಾಡಬಹುದಷ್ಟೆ. ಶಿವ ಮತ್ತು ಪಾರ್ವತಿಯ ವಿವಾಹವನ್ನು ವರ್ಣಿಸಲು ಈ ರೀತಿಯ ಕೌಶಲ್ಯವೇ ಸೂಕ್ತ ಎಂಬ ಅರಿವು ಮೂಡಿದಾಗ ರೋಮಾಂಚನವಾಗುತ್ತದೆ.
ಈ ಕೃತಿಯು ಎಂಟು ಸರ್ಗಗಳನ್ನು (ಅಧ್ಯಾಯಗಳು) ಒಳಗೊಂಡಿದೆ . ಹಿಮಾಲಯದ ವಿವರಣೆಯೊಂದಿಗೆ ಪ್ರಾರಂಭವಾಗುತ್ತ , ಪಾರ್ವತಿಯ ಜನನ ಮತ್ತು ತರುಣಿಯಾಗಿ ಅವಳ ವಿಕಾಸವನ್ನು ವಿವರಿಸುತ್ತಾ ಮುಂದುವರಿಯುತ್ತದೆ. ಅವಳು ತನ್ನ ರೂಪ ಲಾವಣ್ಯಗಳಿಂದ ಶಿವನನ್ನು ಒಲಿಸಲು ಆಶಿಸುತ್ತಾಳೆ. ಆದರೆ ಕೇವಲ ಬಾಹ್ಯ ಸೌಂದರ್ಯಕ್ಕೆ ಮಾರುಹೋಗುವವನಲ್ಲಾ ಶಿವ. ಆಕೆಯ ತಂದೆ ಪರ್ವತರಾಜನಾದ ಹಿಮವಂತನಿಗೂ (ಹಿಮಾಲಯ) ಸಹ ತನ್ನ ಮಗಳು ಪರಮಾತ್ಮನಾದ ಶಿವನನ್ನೇ ವರಿಸಬೇಕೆಂಬ ಬಯಕೆಯಿರುತ್ತದೆ. ಈ ನಿಟ್ಟಿನಲ್ಲಿ ಹಿಮಾಲಯದಲ್ಲಿ ತಪಸ್ಸನ್ನು ಆಚರಿಸುತ್ತಿರುವ ಶಿವನಿಗೆ ಸಹಾಯಕವಾಗಿ ಪಾರ್ವತಿಯನ್ನು ಕಳುಹಿಸಿಕೊಡುತ್ತಾನೆ.
ಹೀಗಿರುವಾಗ ಬ್ರಹ್ಮಾಂಡದ ಮತ್ತೊಂದು ಕಡೆ ತಾರಾಕಾಸುರನು ಬ್ರಹ್ಮ ದೇವನ ವರವನ್ನು ಸಂಪಾದಿಸಿರುತ್ತಾನೆ. ತನ್ನನ್ನು ಕೇವಲ ಶಿವನ ಮಗನಿಂದ ಮಾತ್ರ ನಿಗ್ರಹಿಸಲು ಸಾಧ್ಯ, ಬೇರೆ ಯಾರೂ ತನನ್ನು ಜಯಿಸಲಾರರು ಎಂದು ಅಟ್ಟಹಾಸದಿಂದ ದೇವತೆಗಳನ್ನು ದಬ್ಬಾಳಿಸುತ್ತಿರುತ್ತಾನೆ. ದೇವತೆಗಳ ಅಧಿಪತಿಯಾದ ಇಂದ್ರನು ನಿರಂತರವಾಗಿ ತಪಸ್ಸಿನಲ್ಲಿ ನಿರತನಾದ ಶಿವನನ್ನು ಎಚ್ಚರಿಸಿ ಪಾರ್ವತಿಯ ಕಡೆಗೆ ಅವನ ಗಮನ ಮನಸ್ಸುಗಳನ್ನು ತಿರುಗಿಸಲೆಂದು ಕಾಮ ದೇವನನ್ನು ನೇಮಿಸುತ್ತಾನೆ.
ಕಾಮ ತನ್ನ ಮಿತ್ರನಾದ ವಸಂತನ ಜೊತೆಗೂಡಿ , ಶಿವನ ಮನಸ್ಸು ಪಾರ್ವತಿಯ ಕಡೆ ತಿರುಗುವಂತೆ, ಸೂಕ್ತ ಸಮಯವನ್ನು ಕಾದು, ಆತನನ್ನು ಪ್ರಚೋದಿಸುವ ಪ್ರಯತ್ನಗಳನ್ನು ನಡೆಸುತ್ತಾನೆ. ಕ್ಷಣ ಮಾತ್ರ ವಿಚಲಿತನಾದ ಶಿವನು ತನ್ನ ಮನಸ್ಸನ್ನು ಹಿಡಿತಕ್ಕೆ ತಂದುಕೊಂಡು ಆ ಉದ್ವೇಗದಲ್ಲಿ ಕಾಮನನ್ನು ಸುಟ್ಟು ಬೂದಿ ಮಾಡಿಬಿಡುತ್ತಾನೆ. ನಂತರ, ಅಲ್ಲೇ ಉಪಸ್ಥಿತಳಿದ್ದ ಪಾರ್ವತಿಯನ್ನು ಗಮನಿಸದೆಯೇ ಹಿಮಾಲಯವನ್ನು ತ್ಯಜಿಸಿ ಹೊರಟು ಹೋಗುತ್ತಾನೆ.
ತಳಮಳಗೊಂಡ ಪಾರ್ವತಿಯು ಸಹ ತಪಸ್ಸಿನಿಂದಲೇ ಶಿವನನ್ನು ಒಲಿಸಿಕೊಳ್ಳುವ ಪ್ರಯತ್ನದಲ್ಲಿ ನಿರತಳಾಗುತ್ತಾಳೆ. ಬಹಳ ಕಾಲದ ನಂತರ ಈಕೆಯ ಕಠಿಣ ತಪಸ್ಸಿನಿಂದ ಪುಳಕಿತನಾದ ಶಿವನು ಒಬ್ಬ ವಟುವಿನ (ಬ್ರಹ್ಮಚಾರಿ) ವೇಷ ಧರಿಸಿ ಪಾರ್ವತಿಯ ಆಶ್ರಮಕ್ಕೆ ಬರುತ್ತಾನೆ. ಪಾರ್ವತಿಯನ್ನು ಅನೇಕ ವಿಧವಾಗಿ ಪರೀಕ್ಷಿಸುತ್ತಾನೆ. ಆ ವಟುವು ಶಿವನನ್ನು ನಿಂದಿಸುತ್ತಿರಲು ಅದನ್ನು ಸಹಿಸಲಾರದೆ ಪಾರ್ವತಿಯು ಅಲ್ಲಿಂದ ಹೊರಡಲು ಶಿವನು ಆಕೆಯನ್ನು ತಡೆದು ತನ್ನ ನಿಜ ರೂಪವನ್ನು ತೋರಿಸಿ ಅವಳನ್ನು ವರಿಸಲು ಒಪ್ಪಿಕೊಳ್ಳುತ್ತಾನೆ.
ನಂತರ, ಶಿವನ ಪರಿವಾರವಾಗಿ ಸಪ್ತ ಋಷಿಗಳೂ, ವಸಿಷ್ಠರ ಪತ್ನಿ ಅರುಂಧತಿ ದೇವಿಯೂ ಸಾಂಪ್ರದಾಯಿಕವಾಗಿ ಇವರಿಬ್ಬರ ವಿವಾಹವನ್ನು ನೆರೆವೇರಿಸುತ್ತಾರೆ. ಈ ಮದುವೆಗೆ ಸ್ವಯಂ ಬ್ರಹ್ಮದೇವನೇ ಪುರೋಹಿತರಾಗಿದ್ದರಂತೆ. ಕುಮಾರಸಂಭವಂ ಕೃತಿಯು ಪಾರ್ವತಿಯು ಗರ್ಭವತಿ ಆದುದನ್ನು ತಿಳಿಸಿ ಕೊನೆಗೊಳ್ಳುತ್ತದೆ. ಈ ಕೃತಿಯ ಸಂದೇಶವೆಂದರೆ ನಿಜವಾದ ಪ್ರೀತಿ ದೈಹಿಕ ಸೌಂದರ್ಯವನ್ನು ಮೀರಿಸುತ್ತದೆ. ಈ ಸಂಬಂಧವು ಇಬ್ಬರು ವ್ಯಕ್ತಿಗಳು ತಮ್ಮ ಉದಾತ್ತ ಆದರ್ಶಗಳಲ್ಲಿ ಒಂದಾಗಿ ಅನುಭವಿಸುವ ಅದ್ಭುತವಾದ ಅನುಭೂತಿ. ಶಿವ ಸಕಲ ಬ್ರಹ್ಮಾಂಡದ ಸ್ವಾಮಿ, ಆದರೂ ಸದಾ ಕಾಲ ತಪಸ್ಸಿನಲ್ಲಿ ನಿರತರಾಗಿರುತ್ತಾರೆ (केनापि कामेन तपश्चचार). ಪಾರ್ವತಿಯೂ ತನ್ನ ಸಕಲ ಸಂಪತ್ತುಗಳನ್ನು ತ್ಯಜಿಸಿ, ತಪಸ್ಸಿನಲ್ಲಿ ನಿರತಳಾಗುತ್ತಾಳೆ. ರಾಮಾಯಣದಲ್ಲಿ ವಾಲ್ಮೀಕಿ ರಾಮನನ್ನೂ, ಮಹಾಭಾರತದಲ್ಲಿ ವ್ಯಾಸರು ಕೃಷ್ಣನನ್ನೂ ಹೇಗೆ ಉತ್ತುಂಗಕ್ಕೆ ಕರೆದೊಯ್ಯುತ್ತಾರೋ, ಹಾಗೇ ಕಾಳಿದಾಸನೂ ಕುಮಾರಸಂಭವಂನಲ್ಲಿ ಶಿವನನ್ನು ಉತ್ಕೃಷ್ಟವಾದ ಸ್ಥಾನಕ್ಕೆ ಕರೆದೊಯ್ಯುತ್ತಾನೆ.
ಮಾಳವಿಕಾಗ್ನಿಮಿತ್ರಂ
ಬಹುಶಃ ಇದು ಕಾಳಿದಾಸನ ಮೊದಲ ನಾಟಕ. ಈ ಕೃತಿಯ ಮೊದಲ ಕೆಲವು ಪದ್ಯಗಳಲ್ಲಿ ಕಾಳಿದಾಸ ತನ್ನ ಹಿಂದಿನ ಕವಿಗಳನ್ನು ನಮಸ್ಕರಿಸಿದ ನಂತರ ವಿನಮ್ರವಾಗಿ ಪ್ರೇಕ್ಷಕರ ಗಮನವನ್ನು ತನ್ನ ಕಡೆ ಸೆಳೆಯುತ್ತಾನೆ. ಈ ಪದ್ದತಿಯು ನಾಟಕದ ಸಂಕೇತವು.
ಈ ನಾಟಕವು ಬಹಳ ಸರಳವಾದ ಕಥೆಯನ್ನು ಹೊಂದಿದೆ. ವಿದರ್ಭದ ರಾಜಕುಮಾರಿ, ಮಾಳವಿಕಾ ಅಗ್ನಿಮಿತ್ರ ರಾಜನನ್ನು ಭೇಟಿಯಾಗಲು ಹೋಗುವಾಗ ಅಪಘಾತದಿಂದಾಗಿ ಕಾಡಿನಲ್ಲಿ ಕಳೆದುಹೋಗುತ್ತಾಳೆ. ಅರಣ್ಯದಲ್ಲಿ ಕಾವಲಿಗೆ ನೇಮಕಗೊಂಡ ಅಧಿಕಾರಿಯು ಅವಳನ್ನು ಕಂಡು, ರಾಣಿಯ ಅರಮನೆಯಲ್ಲಿ ಸೇವಕಿಯಾಗಿ ನಿಯೋಜಿಸುತ್ತಾನೆ.
ಒಂದು ವರ್ಣಚಿತ್ರದಲ್ಲಿ ರಾಣಿಯ ಪರಿಜನರ ಪೈಕಿ ಮಾಳವಿಕಾಳನ್ನು ನೋಡಿದ ರಾಜ ಅಗ್ನಿಮಿತ್ರ ಆಕೆಯ ರೂಪ ಲಾವಣ್ಯಗಳನ್ನು ಕಂಡು ಅವಳಲ್ಲಿ ಆಕರ್ಷಿತನಾಗುತ್ತಾನೆ. ಅವನನ್ನು ಈ ಮೋಹಪಾಶದಿಂದ ಮುಕ್ತನನ್ನಾಗಿಸಲು ಅವನ ಪತ್ನಿಯರಾದ ಧಾರಿಣಿ ಮತ್ತು ಇರಾವತಿ ಪಟ್ಟ ಪ್ರಯತ್ನಗಳು ವಿಫಲವಾಗುತ್ತವೆ. ಅಂತಿಮವಾಗಿ, ರಾಣಿ ಧಾರಿಣಿ, ಇನ್ನು ಬೇರೆ ದಾರಿ ಕಾಣದೆ ಮಾಳವಿಕಾಳನ್ನು ಅಗ್ನಿಮಿತ್ರನಿಗೆ ಸಮರ್ಪಿಸಲು ಸಜ್ಜಾಗುತ್ತಾಳೆ. ಅಷ್ಟರಲ್ಲಿ ಮಾಳವಿಕಾಳ ಪಕ್ಷವು ವಿದರ್ಭ ರಾಜ್ಯವನ್ನು ತಲುಪಿ ಅವಳು ವಿದರ್ಭದ ರಾಜಕುಮಾರಿ ಎಂಬ ಸತ್ಯವು ಬೆಳಕಿಗೆ ಬರುತ್ತದೆ. ಮಾಳವಿಕಾ ಮತ್ತು ಅಗ್ನಿಮಿತ್ರರು ಸಾಂಪ್ರದಾಯಿಕವಾಗಿ ವಿವಾಹವಾಗುತ್ತಾರೆ.
ಈ ಕೃತಿಯ ಕಥಾವಸ್ತುವು ಕಾಳಿದಾಸನ ನಂತರದ ಕವಿಗಳನ್ನು ದೀರ್ಘವಾಗಿ ಆಕರ್ಷಿಸಿತ್ತು. ಇದರಿಂದ ಸ್ಪೂರ್ತಿಗೈದ ಹಾಗೂ ಇದನ್ನೇ ಅನುಸರಿಸಿರುವಂತಹ ಹಲವಾರು ರಚನೆಗಳಿವೆ, ರಾಜ ಶ್ರೀ ಹರ್ಷ ನ ಪ್ರಿಯದರ್ಶಿಕಾ ಮತ್ತು ರತ್ನಾವಳಿ ಕೆಲವು ಉದಾಹರಣೆಗಳು. ಹಲವು ಮಟ್ಟಗಳಲ್ಲಿ ಒಂದು ಕಥಾವಸ್ತುವನ್ನು ವಿಕಾಸಗೊಳಿಸುವ ಕೌಶಲ್ಯವನ್ನು ಪ್ರತಿಬಿಂಬಿಸುವ ಕೃತಿಯಿದು, ಜೊತೆಗೆ ಮನೋರಂಜಕವೂ ಹೌದು .
ವಿಕ್ರಮೋರ್ವಶೀಯಂ
ಈ ಕೃತಿಯು ವೇದಗಳಲ್ಲಿ ಕಾಣ ಸಿಗುವ ಚಂದ್ರ ವಂಶದ ರಾಜ ಪುರೂರವಸ್ ಮತ್ತು ಸ್ವರ್ಗ ಲೋಕದ ಅಪ್ಸರೆ ಊರ್ವಶಿಯ ಕಥೆಯನ್ನು ಆಧಾರಿಸಿದೆ. ಒಮ್ಮೆ ಒಬ್ಬ ರಾಕ್ಷಸನು ಊರ್ವಶಿಯನ್ನು ಅಪಹರಿಸುತ್ತಾನೆ. ಆಕೆಯನ್ನು ಕೌರವರು ಮತ್ತು ಪಾಂಡವರ ಪೂರ್ವಜನಾದ ಪುರೂರವಸ್ ರಾಕ್ಷಸನಿಂದ ಕಾಪಾಡುತ್ತಾನೆ. ಆ ಸಂದರ್ಭದಲ್ಲಿ ಅವರಿಬ್ಬರ ನಡುವೆ ಪರಸ್ಪರ ಪ್ರೀತಿ ಚಿಗುರುತ್ತದೆ.
ಅವರಿಬ್ಬರ ವಿವಾಹಕ್ಕೆ ಪುರೂರವಸ್ ನ ಪತ್ನಿ ಔಷಿನಾರಿ ಸಹ ಮನಸಿಲ್ಲದ ಮನಸ್ಸಿನಿಂದ ಒಪ್ಪುತ್ತಾಳೆ. ಈ ಮಧ್ಯೆ ಸ್ವರ್ಗದಲ್ಲಿ ಆಯೋಜಿತವಾದ ನೃತ್ಯ ನಾಟಕದಲ್ಲಿ ಊರ್ವಶಿ ತನ್ನ ಪಾತ್ರದ ಬಗ್ಗೆ ಗಮನವಿಲ್ಲದೆ ತಪ್ಪುಗಳನ್ನು ಮಾಡಿದಾಗ, ಕುಪಿತನಾದ ಭರತಮುನಿಯು ಆಕೆಯನ್ನು ಭೂಮಿಗೆ ಬಹಿಷ್ಕರಿಸುತ್ತಾನೆ.
ಭೂಮಿಗೆ ತೆರಳಿದ ಊರ್ವಶಿ ಪುರೂರವಸ್ ನನ್ನು ಮದುವೆಯಾಗಲು, ಸ್ವರ್ಗದ ಅಧಿಪತಿ, ಇಂದ್ರನ ಒಪ್ಪಿಗೆ ಮತ್ತು ಆಶೀರ್ವಾದಗಳನ್ನು ಪಡೆಯುತ್ತಾಳೆ. ಆದರೆ ಇಂದ್ರನ ಒಂದು ನಿಯಮವಿರುತ್ತದೆ. ಅವರಿಬ್ಬರ ಮಗನ ಮುಖವನ್ನು ತಂದೆಯಾದ ಪುರೂರವಸ್ ನೋಡುವಂತಿಲ್ಲಾ. ಒಂದು ವೇಳೆ ನೋಡಿದ್ದೇ ಆದರೆ ಆ ಕ್ಷಣವೇ ಊರ್ವಶಿ ಸ್ವರ್ಗಕ್ಕೆ ಹಿಂದಿರುಗಬೇಕು, ಎಂದು. ಇದಕ್ಕೆ ಒಪ್ಪಿ ಊರ್ವಶಿ ಪುರೂರವಸ್ ನನ್ನು ವರಿಸುತ್ತಾಳೆ. ಅವರಿಬ್ಬರು ಬಹು ಕಾಲ ಗಂಧಮಾದನ ಎಂಬ ಗಿರಿವಲಯದಲ್ಲಿ ಸಂತೋಷದಿಂದಿರುತ್ತಾರೆ. ಒಮ್ಮೆ, ನದಿ ತೀರದಲ್ಲಿ ಪುರೂರವಸ್ ಒಬ್ಬ ಹುಡುಗಿಯನ್ನು ದಿಟ್ಟಿಸಿ ನೋಡುತ್ತಿರುವುದನ್ನು ಊರ್ವಶಿ ಗಮನಿಸುತ್ತಾಳೆ. ಅವನಲ್ಲಿ ಕೋಪಗೊಂಡು ಅವನಿಂದ ದೂರ ಹೋಗುವ ಸಲುವಾಗಿ ಕುಮಾರವನ ಎಂಬ ಕಾಡನ್ನು ಸೇರುತ್ತಾಳೆ. ಕುಮಾರವನದೊಳಗೆ ಮಹಿಳೆಯರಿಗೆ ಪ್ರವೇಶ ನಿಷೇಧವಾದ ಕಾರಣ ಆಕೆ ಕಾಡಿನಲ್ಲಿ ಕಾಲಿಟ್ಟ ತಕ್ಷಣವೇ ಶಾಪಗ್ರಸ್ಥಳಾಗಿ ಗಿಡದ ಬಳ್ಳಿಯಾಗಿಬಿಡುತ್ತಾಳೆ.
ಪುರೂರವಸ್ ಭಾವೋದ್ರಿಕ್ತನಾಗಿ ಹುಚ್ಚನಂತೆ ಹಲವು ದಿನಗಳ ಕಾಲ ಆಕೆಯನ್ನು ಹುಡುಕುತ್ತಾ ತಿರುಗಾಡುತ್ತಾನೆ. ಹೀಗಿದ್ದಾಗ, ಅವನಿಗೆ ದೈವ ಸಹಾಯ ಪ್ರಾಪ್ತಿಯಾಗುತ್ತದೆ. ಸಂಗಮಾಣೀಯ ಮಣಿ ಅಥವ ಸಾಂಗತ್ಯವನ್ನು ಕಾಪಾಡುವ ಆಭರಣವು ಪುರೂರವಸ್ ನ ಕೈಸೇರುತ್ತದೆ. ಆಗ ಅವನು ಆ ಬಳ್ಳಿಗೆ ಆಕರ್ಷಿತನಾಗಿ ಅದನ್ನೇ ಊರ್ವಶಿ ಎಂದು ಭಾವಿಸಿ ಆಲಿಂಗಿಸುತ್ತಾನೆ. ಸಂಗಮಾಣೀಯ ಮಣಿಯ ಪ್ರಭಾವದಿಂದ ಊರ್ವಶಿ ಶಾಪಮುಕ್ತಳಾಗಿ ಅವರ ಮಿಲನವಾಗುತ್ತದೆ. ಅವರು ತಮ್ಮ ರಾಜ್ಯಕ್ಕೆ ಹಿಂದಿರುಗಿ ಆನಂದ ಪರವಶರಾಗಿರುತ್ತಾರೆ. ಹೀಗಿರುವಾಗ , ಅರಮನೆಯ ಸೇವಕಿಯೊಬ್ಬಳು ಸಂಗಮಾಣೀಯ ಮಣಿಯನ್ನು ತಗೆದುಕೊಂಡು ಹೋಗುವಾಗ ಒಂದು ರಣಹದ್ದು ಅದನ್ನು ಆಕೆಯಿಂದ ಕಸಿದುಕೊಂಡುಬಿಡುತ್ತದೆ. ಪುರುರವಸ್ ತನ್ನ ಸಹಚರರನ್ನು ಸಂಗಮಾಣೀಯ ಮಣಿಯನ್ನು ಹುಡುಕಿ ತರಲು ಕಳುಹಿಸುತ್ತಾನೆ. ಮಣಿಯ ಸಮೇತವಾಗಿ ಹಿಂದಿರುಗಿದ ಸಹಚರರು, ಆ ಹದ್ದನ್ನು ಯಾರೋ ತಮ್ಮ ಬಾಣದಿಂದ ಕೊಂದುಹಾಕಿದ್ದರು, ಆದ್ದರಿಂದ ಸುಲಭವಾಗಿಯೇ ಮಣಿಯನ್ನು ಹಿಂಪಡೆದುದಾಗಿ ಹೇಳುತ್ತಾರೆ.
ಸಾಮಾನ್ಯವಾಗಿ ಬಾಣಗಳ ಹಿಂಭಾಗದಲ್ಲಿ ಅದನ್ನು ಬಿಟ್ಟವರ ಪರಿಚಯವಿರುತ್ತಿತ್ತು. ಹಾಗಾಗಿ ಕುತೂಹಲಗೊಂಡ ರಾಜ ಆ ಬಾಣವನ್ನು ತರೆಸಿ ಪರಿಶೀಲಿಸುತ್ತಾನೆ. ಅದರಲ್ಲಿ ಪುರುರವಸ್ ಮತ್ತು ಊರ್ವಶಿಯ ಪುತ್ರನಾದ ಆಯುಸ್ ಎಂಬ ಹೆಸರಿರುತ್ತದೆ. ಅದೇ ಸಮಯಕ್ಕೆ ಊರ್ವಶಿಯನ್ನು ಕೇಳಿಕೊಂಡು ಸತ್ಯವತಿ ಎಂಬ ತಪಸ್ವಿನಿಯು ಆಯುಸ್ ಎಂಬ ಬಾಲಕನ ಜೊತೆ ಅರಮನೆಗೆ ಬಂದಿರುವುದಾಗಿ ಪುರೂರವಸ್ ಗೆ ಸುದ್ದಿ ಬರುತ್ತದೆ. ಊರ್ವಶಿಯು ತನ್ನ ಮಗನಾದ ಆಯುಸ್ ನ ಜವಾಬ್ದಾರಿಯನ್ನು ಚ್ಯವನ ಮಹರ್ಷಿಗಳಿಗೆ ಒಪ್ಪಿಸಿದ್ದಳು ಎಂದು ಸತ್ಯವತಿ ತಿಳಿಸುತ್ತಾಳೆ. ಆಯುಸ್ ತನ್ನ ಬಾಣದಿಂದ ಪಕ್ಷಿಯನ್ನು ಮೃತಪಡಿಸಿ ಆಶ್ರಮದ ನಿಯಮಗಳನ್ನು ಉಲ್ಲಂಘಿಸಿದ್ದಾನೆ. ಆದ್ದರಿಂದ ಅವನನ್ನು ಅವನ ತಾಯಿಯ ಬಳಿ ಬಿಟ್ಟುಬರುವುದಾಗಿ ಚ್ಯವನ ಮಹರ್ಷಿಗಳು ಆದೇಶಿಸಿದ್ದಾರೆಂದು ಹೇಳುತ್ತಾಳೆ. ಈ ಮಾತುಗಳನ್ನು ಕೇಳಿದ ಪುರೂರವಸ್ ಊರ್ವಶಿಗೆ ಹೇಳಿಕಳುಹಿಸುತ್ತಾನೆ. ಅಲ್ಲಿಗೆ ಬಂದು ತನ್ನ ಮಗನನ್ನು ಕಂಡ ಊರ್ವಶಿ ಅವನನ್ನು ವಾತ್ಸಲ್ಯದಿಂದ ಅಪ್ಪಿಕೊಳ್ಳುತ್ತಾಳೆ. ಅದೇ ಕ್ಷಣದಲ್ಲಿ ಅವಳಿಗೆ ಇಂದ್ರನ ನಿಯಮವು ನೆನೆಪಾಗುತ್ತದೆ. ಪುರೂರವಸ್ ತನ್ನ ಮಗನ ಮುಖವನ್ನು ನೋಡಿದ ಕಾರಣ ಆಕೆ ಇಂದ್ರನ ನಿಯಮಾನುಸಾರ ಸ್ವರ್ಗಕ್ಕೆ ಮರಳಬೇಕೆಂದು ತಿಳಿಸುತ್ತಾಳೆ. ಶೋಕತಪ್ತನಾದ ರಾಜನು, ತನ್ನ ಮಗನಾದ ಆಯುಸ್ ನನ್ನು ತನ್ನ ಉತ್ತರಾಧಿಕಾರಿಯಾಗಿ ನೇಮಿಸಿ ತಾನೂ ಸಹ ರಾಜಕಾರ್ಯಗಳಿಂದ ನಿವೃತ್ತಿ ಪಡೆದು ಕಾಡಿಗೆ ಹೋಗಿಬಿಡುವುದಾಗಿ ಹೇಳುತ್ತಾನೆ. ಆಗ ಇಂದ್ರನ ಸಂದೇಶವನ್ನೊತ್ತ ನಾರದರ ಆಗಮನವಾಗುತ್ತದೆ. ಪುರೂರವಸ್ ನ ಅಂತಿಮಕ್ಷಣಗಳ ವರೆಗೂ ಊರ್ವಶಿ ಅವನೊಂದಿಗೆ ಭೂಮಿಯಲ್ಲೇ ವಾಸವಾಗಿರಲು ತನಗೇನೂ ಅಭ್ಯಂತರವಿಲ್ಲವೆಂದು ಇಂದ್ರನು ನಾರದರ ಮೂಲಕ ಸಂದೇಶವನ್ನು ಕಳುಹಿಸಿರುತ್ತಾನೆ. ಪುರೂರವಸ್ ಮತ್ತು ಊರ್ವಶಿ ಸಂತೋಷದಿಂದ ಬಾಳುತ್ತಾರೆ.
ಈ ರಚನೆಯ ಕಥಾವಸ್ತುವಿನಲ್ಲಿ ಅಂತಹ ಅದ್ಭುತವಾದ ಅಂಶಗಳಿಲ್ಲದಿದ್ದರೂ ಇದರ ಕವನಗಳಲ್ಲಿರುವ ನಯ ನಾಜೂಕು ಓದುಗರಲ್ಲಿ ಆಹ್ಲಾದವನ್ನುಂಟು ಮಾಡುತ್ತದೆ. ಅದರಲ್ಲೂ ಪುರೂರವಸ್ ಕಾಡಿನಲ್ಲಿರುವ ಸಮಸ್ತ ವನ್ಯಜೀವಿಗಳ ಮಧ್ಯೆ ಊರ್ವಶಿಯನ್ನು ಹುಡುಕುವ ಪ್ರಕರಣವನ್ನು ಕಾಳಿದಾಸ ಬಹಳ ರೋಚಕವಾಗಿ ರಚಿಸಿದ್ದಾರೆ.
ಅಭಿಜ್ಞಾನಶಾಕುಂತಲಂ
ಕವಿಕುಲಗುರುವಾದ ಕಾಳಿದಾಸನ ಅತ್ಯಂತ ಪ್ರಖ್ಯಾತವಾದ ರಚನೆಯಿದು. ಮಹಾಭಾರತದಲ್ಲಿನ ಒಂದು ಸಣ್ಣ ಘಟನೆಯನ್ನು ಆಧಾರವಾಗಿಟ್ಟುಕೊಂಡು ಒಂದು ಬೃಹದ್ಗ್ರಂಥದ ರಚನೆ ಮಾಡಿದ್ದಾನೆ.
ರಾಜ ದುಷ್ಯಂತ ವಿಲಾಸಕ್ಕಾಗಿ ಭೇಟೆಯಾಡಲು ಕಾಡಿಗೆ ಬಂದಾಗ, ಅಲ್ಲಿಯೇ ಇದ್ದ ಕಣ್ವ ಋಷಿಗಳ ಆಶ್ರಮಕ್ಕೆ ಬರಬೇಕಾಗುತ್ತದೆ. ಆ ಸಮಯದಲ್ಲಿ ಋಷಿಗಳು ಆಶ್ರಮದಲ್ಲಿ ಉಪಸ್ಥಿತರಿರುವುದಿಲ್ಲ.
ದುಷ್ಯಂತನಿಗೆ ಕಣ್ವರ ಸಾಕು ಮಗಳಾದ ಶಕುಂತಲೆಯ ಭೇಟಿಯಾಗುತ್ತದೆ. ಆಕೆಯನ್ನು ಕಂಡೊಡನೆ ಅವಳಲ್ಲಿ ಅನುರಕ್ತನಾಗುತ್ತಾನೆ. ಶಕುಂತಲೆಗೂ ಅವನಲ್ಲಿ ಆಸಕ್ತಿ ಹುಟ್ಟುತ್ತದೆ. ಅವರಿಬ್ಬರೂ ಪರಸ್ಪರ ಒಪ್ಪಿಕೊಂಡು ಗಂಧರ್ವ ವಿವಾಹವಾಗುತ್ತಾರೆ (ಈ ರೀತಿಯ ಮದುವೆಗಳಲ್ಲಿ ಪೋಷಕರ ಅಥವಾ ಪಾಲಕರ ಉಪಸ್ಥಿತಿ ಇರುವುದಿಲ್ಲ). ದುಷ್ಯಂತ ಶಕುಂತಲೆಗೆ ತನ್ನ ರಾಜಾಭರಣವಾದ ಉಂಗುರವನ್ನು ಅವರ ಮಿಲನದ ಸಂಕೇತವಾಗಿ ನೀಡುತ್ತಾನೆ. ಆಕೆಯನ್ನು ಆದಷ್ಟು ಶೀಘ್ರವಾಗಿ ತನ್ನ ಬಳಿ ಕರೆಸಿಕೊಳ್ಳುವ ಭರವಸೆಯನ್ನು ನೀಡಿ ತನ್ನ ರಾಜ್ಯಕ್ಕೆ ಮರಳುತ್ತಾನೆ.
ಈ ಮಧ್ಯೆ ಕೋಪಿಷ್ಠರಾದ ದೂರ್ವಾಸ ಮುನಿಗಳು ಆಶ್ರಮಕ್ಕೆ ಭೇಟಿ ನೀಡುತ್ತಾರೆ. ದುಷ್ಯಂತನನ್ನೇ ನೆನೆಯುತ್ತಾ ಹಗಲುಗನಸಿನಲ್ಲಿ ಮಗ್ನಳಾದ ಶಕುಂತಲೆಗೆ ಇವರ ಆಗಮನದ ಅರಿವಾಗುವುದಿಲ್ಲ. ಆದ್ದರಿಂದ ಅವರಿಗೆ ಗೌರವ ಸಲ್ಲಿಸುವುದರಲ್ಲಿ ವಿಫಲವಾಗುತ್ತಾಳೆ. ಈ ತಾತ್ಸಾರದಿಂದ ಕುಪಿತರಾದ ದೂರ್ವಾಸ ಮುನಿಗಳು, ಶಕುಂತಲೆ ಯಾರ ಯೋಚನೆಯಲ್ಲಿ ಮುಳುಗಿರುವಳೋ ಅವರೇ ಈಕೆಯನ್ನು ಮರೆತುಹೋಗಲಿ ಎಂದು ಅವಳಿಗೆ ಶಾಪ ಕೊಟ್ಟುಬಿಡುತ್ತಾರೆ. ನಡೆದ್ದದೇನು ಶಕುಂತಲೆಗೆ ತಿಳಿಯುವುದೇ ಇಲ್ಲವಾಗುತ್ತದೆ. ಆದರೆ ದೂರ್ವಾಸರ ಶಾಪವನ್ನು ಕೇಳಿಸಿಕೊಂಡ ಆಕೆಯ ಸ್ನೇಹಿತೆಯರು ಶಕುಂತಲೆಯನ್ನು ಕ್ಷಮಿಸಲು ಬೇಡಿಕೊಳ್ಳುತ್ತಾರೆ. ಆಗ ಅವರು, ಶಕುಂತಲೆಯ ಮನಸ್ಸಿನಲ್ಲಿರುವ ವ್ಯಕ್ತಿಯು ತಾನು ಶಕುಂತಲೆಗೆ ಕೊಟ್ಟಂತಹ ವಸ್ತುವನ್ನು ನೋಡಿದಾಗ ಅವರಿಗೆ ಈಕೆಯ ಜ್ಞಾಪಕವು ಪುನಃ ಮರುಕಳಿಸುತ್ತದೆ ಎಂದು ಶಾಪವಿಮೋಚನೆಯ ಪರಿಹಾರವನ್ನೂ ಸೂಚಿಸುತ್ತಾರೆ.
ಈ ಶಾಪದ ಪರಿಣಾಮವಾಗಿ ದುಷ್ಯಂತ ಶಕುಂತಲೆಯನ್ನು ಸಂಪೂರ್ಣವಾಗಿ ಮರೆತುಹೋಗುತ್ತಾನೆ. ಅವನು ರಾಜ್ಯಕಾರ್ಯಗಳಲ್ಲಿ ನಿರತನಾಗುತ್ತಾನೆ. ಆಶ್ರಮಕ್ಕೆ ಹಿಂದಿರುಗಿದ ಕಣ್ವ ಮಹರ್ಷಿಗಳಿಗೆ ತಮ್ಮ ದಿವ್ಯ ದೃಷ್ಟಿಯ ಮೂಲಕ ಎಲ್ಲವೂ ಜ್ಞಾತವಾಗುತ್ತದೆ. ಬಹಳ ಕಾಲವಾದರೂ ದುಷ್ಯಂತನಿಂದ ಶಕುಂತಲೆಗೆ ಕರೆಯೋಲೆ ಬಾರದ ಕಾರಣ ಸ್ವಯಂ ಕಣ್ವ ಮಹರ್ಷಿಗಳೇ ಶಕುಂತಲೆಯನ್ನು ದುಷ್ಯಂತನ ಬಳಿ ಕಳುಹಿಸಿಕೊಡಲು ನಿರ್ಧರಿಸುತ್ತಾರೆ. ಕೆಲವು ಆಶ್ರಮವಾಸಿಗಳನ್ನು ಜೊತೆಮಾಡಿ ಆಕೆಯನ್ನು ದುಷ್ಯಂತನ ಬಳಿಗೆ ಕಳಿಸುತ್ತಾರೆ.
ದಾರಿಯಲ್ಲಿ ಒಂದು ನದಿಯನ್ನು ದಾಟುವಾಗ, ಶಕುಂತಲೆಗೆ ದುಷ್ಯಂತನು ಕೊಟ್ಟ ರಾಜಾಭರಣವಾದ ಉಂಗುರವು ಕಳೆದುಹೋಗುತ್ತದೆ. ಇದು ಶಕುಂತಲೆಗೆ ತಿಳಿಯದೇ ಹೋಗುತ್ತದೆ. ಅವರು ದುಷ್ಯಂತನ ಅರಮನೆಯನ್ನು ತಲುಪಿದಾಗ ಕಣ್ವರ ಆಶ್ರಮದಿಂದ ಬಂದಿರುವ ಸಿದ್ದ ಪುರುಷರೆಂದು ಇವರನ್ನು ಗೌರವದಿಂದ ಕಾಣಲಾಗುತ್ತದೆ. ನಂತರ ರಾಜ ದುಷ್ಯಂತನನ್ನು ಭೇಟಿ ಮಾಡಿದಾಗ, ಆತನಿಗೆ ದೂರ್ವಾಸರ ಶಾಪದ ಪರಿಣಾಮವಾಗಿ ಶಕುಂತಲೆಯ ಜ್ಞಾಪಕವೇ ಇರದ ಕಾರಣ ಅವಳನ್ನು ಗುರುತು ಹಿಡಿಯಲು ನಿರಾಕರಿಸುತ್ತಾನೆ. ಅವನ ನೆನಪನ್ನು ಮರುಕಳಿಸಲು, ಅವರ ಮಿಲನದ ಸಂಕೇತವಾದ ದುಷ್ಯಂತನ ಉಂಗುರವೂ ಕಳೆದುಹೋದ ಕಾರಣ ಶಕುಂತಲೆಯ ಬಳಿ ಯಾವ ಪುರಾವೆಗಳೂ ಇಲ್ಲವಾಗುತ್ತದೆ.
ಆಶ್ರಮವಾಸಿಗಳು, ಆಕೆ ತನ್ನ ಪತಿಯ ಮನೆಯಲ್ಲಿರುವುದೇ ಉಚಿತ ಎಂದು ಸೂಚಿಸಿ ಅವಳನ್ನು ಅರಮನೆಯಲ್ಲಿಯೇ ಬಿಟ್ಟು ಹೊರಟುಹೋಗುತ್ತಾರೆ. ಆನಂತರ ಶಕುಂತಲೆಯ ತಾಯಿ, ಅಪ್ಸರೆಯಾದ ಮೇನಕೆಯು ಆಕೆಯನ್ನು ತನ್ನ ಲೋಕಕ್ಕೆ ಕರೆದೊಯ್ಯುತ್ತಾಳೆ. ಸ್ವಲ್ಪ ಸಮಯದ ನಂತರ ಒಂದು ಮೀನಿನ ಹೊಟ್ಟೆಯಲ್ಲಿ ರಾಜಾಭರಣವಾದ ಉಂಗುರವನ್ನು ಕಂಡ ಮೀನುಗಾರನೊಬ್ಬನು, ನಿಷ್ಠೆಯಿಂದ ರಾಜನಿಗೆ ಒಪ್ಪಿಸುತ್ತಾನೆ.
ಇದನ್ನು ಕಂಡ ಕೂಡಲೇ ದುಷ್ಯಂತನಿಗೆ ಶಕುಂತಲೆಯ ಜ್ಞಾಪಕವು ಮರುಕಳಿಸುತ್ತದೆ. ಅವಳನ್ನು ತನ್ನ ಪತ್ನಿಯೆಂದು ಒಪ್ಪಿಕೊಳ್ಳಲು ನಿರಾಕರಿಸಿದ್ದನ್ನು ನೆನೆದು ಪಶ್ಚಾತಾಪದಿಂದ ಸಂಕಟ ಪಡುತ್ತಾನೆ. ಅದೇ ಸಮಯಕ್ಕೆ ಸ್ವರ್ಗಾಧಿಪತಿಯಾದ ಇಂದ್ರನು ದುಷ್ಯಂತನನ್ನು ಅಸುರರ ವಿರುದ್ಧ ಯುದ್ಧ ಮಾಡಲು ಸಹಾಯ ಯಾಚಿಸುತ್ತಾನೆ. ಇದಕ್ಕೆ ಒಪ್ಪಿದ ದುಷ್ಯಂತ ವಿಜಯಿಯಾಗುತ್ತಾನೆ. ಇಂದ್ರನು ಇವನನ್ನು ಸತ್ಕರಿಸಿ ಭೂಲೋಕಕ್ಕೆ ತೆರಳಲು ಬೀಳ್ಕೊಡುತ್ತಾನೆ.
ಹಿಂದಿರುಗುವಾಗ ದಾರಿಯಲ್ಲಿ ಹೇಮಕೂಟ ಎಂಬ ಜಾಗಕ್ಕೆ ಬರುತ್ತಾನೆ. ಅಲ್ಲಿ ಮರೀಚಿ ಮಹರ್ಷಿಗಳ ಆಶ್ರಮಕ್ಕೆ ಬಂದಾಗ ಒಬ್ಬ ಪುಟ್ಟ ಬಾಲಕನನ್ನು ಕಂಡು ಬೆರಗಾಗುತ್ತಾನೆ. ಆ ಹುಡುಗನು ತನ್ನ ಪರಾಕ್ರಮದಿಂದ ಒಂದು ಸಿಂಹದ ಮರಿಯ ಬಾಯಿಯಲ್ಲಿನ ಹಲ್ಲುಗಳನ್ನು ಎಣಿಸಲು ಪ್ರಯತ್ನಿಸುತ್ತಿರುತ್ತಾನೆ. ದುಷ್ಯಂತನಿಗೆ ಅರಿವಿಲ್ಲದೆಯೇ ಆ ಬಾಲಕನಲ್ಲಿ ವಾತ್ಸಲ್ಯಭಾವ ಮೂಡುತ್ತದೆ. ಆ ಮಗುವು ಶಕುಂತಲೆಯ ಮಗನೆಂದು ತಿಳಿದುಬರುತ್ತದೆ. ಮರೀಚಿ ಮಹರ್ಷಿಗಳು ಶಕುಂತಲಾಳನ್ನು ಮತ್ತು ಬಾಲಕನಾದ ಭರತನನ್ನು ದುಷ್ಯಂತನಿಗೆ ಒಪ್ಪಿಸುತ್ತಾರೆ. ಈ ಪುನರ್ಮಿಲನದ ದೃಶ್ಯವನ್ನು ಯಾವ ಆಡಂಬರವೂ ಇಲ್ಲದೆ ಕವಿ ಸಾಮಾನ್ಯವಾಗಿ ಪ್ರಸ್ತುತ ಪಡಿಸಿದ್ದಾನೆ. ಏಕೆಂದರೆ, ಈ ಸಮಯದೊತ್ತಿಗೆ ಶಕುಂತಲೆಯಲ್ಲಿ ದುಷ್ಯಂತನ ಕಡೆಯಿಂದ ಯಾವ ಪ್ರೀತಿ ಪ್ರೇಮಗಳ ಅಪೇಕ್ಷೆಯೂ ಉಳಿದಿರುವುದಿಲ್ಲ. ಕೇವಲ ಧಾರ್ಮಿಕ ನಿಷ್ಠೆಯಿಂದ ದುಷ್ಯಂತನ ಜೊತೆಗೆ ಹೊರಡುತ್ತಾಳೆ. ಈ ಕೃತಿಯಲ್ಲಿನ ಮನಮೋಹಕ ಸಂಭಾಷಣೆಗಳು ಹಾಗು ಕಾವ್ಯದ ರಚನಾ ಶೈಲಿಯು ಇದನ್ನು ಶಾಶ್ವತವಾಗಿ ಉತ್ಕೃಷ್ಟವಾದ ಮಹದ್ಗ್ರಂಥವನ್ನಾಗಿಸಿದೆ.
ಮುಂದುವರೆಯುವುದು….
(ಭಾಗ ೧ ಇಲ್ಲಿ ಓದಬಹುದು)
(ಈ ಲೇಖನ H.A.ವಾಸುಕಿರವರ ಆಂಗ್ಲ ಲೇಖನದ ಅನುವಾದವಾಗಿದೆ.)
(This is a translation of an article written in English by Vasuki HA.)
(Featured image credit: Saurabh Bondre, from YouTube)
Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.