close logo

ಹೇರಾತ್ – ಕೊಶುರ್ ಸಂಪ್ರದಾಯದಲ್ಲಿ ಮಹಾಶಿವರಾತ್ರಿ 

ಶಿವರಾತ್ರಿ  – ಮಹಾಶಿವರಾತ್ರಿ ಭಾರತೀಯ ಪಂಚಾಂಗದಲ್ಲಿ ಬಹಳ ಮಹತ್ವಪೂರ್ಣವಾದ ಹಬ್ಬ. ಶಿವೋಪಾಸಕರಿಗೆ ಮಹಾದೇವನು ನಿತ್ಯ-ಸತ್ಯಸ್ವರೂಪ.  ಆತನು ವಿಶ್ವ ಚೈತನ್ಯಮೂರ್ತಿಯೂ , ಪರಮ ಸತ್ಯನೂ , ಅನಂತಾನಂದ ಸ್ವರೂಪನೂ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಕಾಲಾಂತಕನಾಗಿ  ನವಸೃಷ್ಟಿಯ ಕಾರಣೀಭೂತನೂ ಆಗಿದ್ದಾನೆ. ಶಿವಭಕ್ತರು ಎಷ್ಟು ಬಗೆಯೋ ಸದಾಶಿವನ ಮಹಾರಾತ್ರಿಯ ಆಚರಣೆಯೂ ಅಷ್ಟೇ ವೈವಿಧ್ಯಮಯ. ಗೃಹಸ್ಥರಾದ ಶಿವಭಕ್ತರು ಮಹಾಶಿವರಾತ್ರಿಯು ಶಿವನ ಮದುವೆಯ ದಿನವೆಂದು ಆಚರಿಸಿದರೆ, ಲೌಕಿಕ ಆಕಾಂಕ್ಷೆಯಲ್ಲಿ ಮುಳುಗಿರುವವವರು ಶಿವನು ತನ್ನ ಶತ್ರುಗಳನ್ನು ಸದೆಬಡಿದ ದಿನವೆಂದು ಹೇಳುತ್ತಾರೆ. ಋಷಿಗಳು ಮತ್ತು ಯೋಗಿಗಳು ಈ ದಿನವನ್ನು ಪರಮಶಿವನು ಕೈಲಾಸಪರ್ವತದಲ್ಲಿ ಲೀನವಾಗಿ ಸಮಾಧಿಸ್ಥನಾದ  ಮುಹೂರ್ತ ಎಂದು ನಂಬುತ್ತಾರೆ.

ಪ್ರತಿ ಚಾಂದ್ರಮಾಸದ ಹದಿನಾಲ್ಕನೇ ದಿವಸವನ್ನು ಶಿವರಾತ್ರಿ ಎಂದು ಆಚರಿಸಲಾಗುತ್ತದೆ. ಒಂದು ಕ್ಯಾಲೆಂಡರ್ ವರ್ಷದಲ್ಲಿನ ಹನ್ನೆರಡು ಶಿವರಾತ್ರಿಗಳಲ್ಲಿ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಮಧ್ಯ ಬರುವ ಶಿವರಾತ್ರಿ ಅತ್ಯಂತ ಮಹತ್ವಪೂರ್ಣವಾದದ್ದು. ಆ ದಿನವನ್ನು ಎಲ್ಲೆಡೆ ಮಹಾಶಿವರಾತ್ರಿ ಎಂದು ಆಚರಿಸಲಾಗುತ್ತದೆ. ನೈಸರ್ಗಿಕವಾಗಿ ಮನುಷ್ಯನನ್ನು ಧ್ಯಾನಸ್ಥಿತಿ ಕೊಂಡೊಯ್ಯುವ ದಿವಸವಿದು. ದಿವ್ಯಶಕ್ತಿಯ ನೈಸರ್ಗಿಕ ಉತ್ಕರ್ಷವನ್ನು ಬಳಸಿಕೊಳ್ಳಲು ಶಿವಭಕ್ತರು ರಾತ್ರಿಯಿಡೀ ಯೋಗಾಸೀನರಾಗಿ ಜಾಗರಣೆ ಮಾಡುತ್ತಾರೆ.

ಮಹಾಶಿವರಾತ್ರಿಯ ಹಿನ್ನೆಲೆಯ ಬಗ್ಗೆ ಹಲವಾರು ಕಥೆಗಳಿವೆ. ಕೆಲವು ದಂತಕಥೆಗಳ  ಪ್ರಕಾರ ನಟರಾಜನಾದ ಶಿವನು ಸೃಷ್ಟಿ-ಸ್ಥಿತಿ-ಸಂಹಾರದ ತಾಂಡವ ನರ್ತನವಾಡಿದ ರಾತ್ರಿ ಇದು. ಮತ್ತೆ ಕೆಲವರು ಹೇಳುವಂತೆ ಶಿವ-ಪಾರ್ವತಿಯರು ಮದುವೆಯಾದ ರಾತ್ರಿಯಿದು. ನಮ್ಮ ಪುರಾಣ ಗ್ರಂಥಗಳು ಮಹಾಶಿವರಾತ್ರಿಯ ಉತ್ಸವವನ್ನು ಸರ್ವಶಕ್ತನಾದ ಸದಾಶಿವನು ಸಮುದ್ರ ಮಂಥನದಿಂದ ಹೊರಹೊಮ್ಮಿದ ಹಾಲಾಹಲವನ್ನು ಸೇವಿಸಿ ಜಗತ್ತನ್ನು ರಕ್ಷಿಸಿದ ದಿನವೆಂದು ಉಲ್ಲೇಖಿಸುತ್ತವೆ.

ದಿವ್ಯ ಅಮೃತವನ್ನು ಪಡೆಯಲು  ದೇವ-ದಾನವರ ಮದ್ಯೆ ನಡೆದ ಸಮುದ್ರ ಮಥನಕ್ಕೆ  ಒಂದು ಆಧ್ಯಾತ್ಮಿಕ ತಾತ್ಪರ್ಯ  ಹೀಗಿದೆ:  ದೇವರು ಮತ್ತು ದಾನವರು ಮನುಷ್ಯನಲ್ಲಿರುವ ಸದ್ಗುಣ ಮತ್ತು ದುರ್ಗುಣಗಳ ಸಂಕೇತ. ಕ್ಷೀರಸಾಗರವು ಜಗತ್ತಿನಲ್ಲಿ ಆದರ್ಶವಾಗಿರಬೇಕಾದ ನೆಮ್ಮದಿ, ಶಾಂತಿಗಳ ಸ್ವರೂಪ. ಸಮುದ್ರವನ್ನು ಕಡೆಯುವ ಪ್ರಕ್ರಿಯೆ ಮನುಷ್ಯನ ದೈನಂದಿನ ಚಟುವಟಿಕೆಗಳ ಸಂಕೇತ. ಅಮೃತ ಸುಖ-ಸಂತೋಷಗಳಾದರೆ ಹಾಲಾಹಲ(ವಿಷ) ಮಾನವ ಸಹಜವಾದ ಆಸೆ,ಸ್ವಾರ್ಥದ ಪ್ರತೀಕವಾಗುತ್ತದೆ. ಮಹಾಶಿವನು ಪ್ರತಿ ಮನುಷ್ಯನ ಆತ್ಮ ಸ್ವರೂಪ. ಹೀಗೆ ಮಹಾಶಿವರಾತ್ರಿಯ ಬಗ್ಗೆ ಹತ್ತು ಹಲವಾರು ಕಥೆಗಳಿವೆ.

ಕಾಶ್ಮೀರದಲ್ಲಿ ಮಹಾಶಿವರಾತ್ರಿಯನ್ನು ‘ಹೇರಾತ್’ ಎಂದು ಆಚರಿಸಲಾಗುತ್ತದೆ. ಅಲ್ಲಿನ ಪುರಾಣಗಳ ಪ್ರಕಾರ ಹೇರಾತ್  (ತ್ರಯೋದಶಿ) ಎಂದರೆ ಮಹಾಶಿವರಾತ್ರಿಯ ಹಿಂದಿನ ದಿನದಂದು ಜ್ವಾಲಾಲಿಂಗ ಅಥವಾ ಕಾಂತಿ ಸ್ಥಂಭ ಪ್ರಕಟವಾದ ದಿವಸ ಎಂದು ಹೇಳಲಾಗಿದೆ. ಇದರ ಹಿಂದಿನ ಕಥೆ ಹೀಗಿದೆ – ಒಂದು ಬಾರಿ ಪಾರ್ವತಿದೇವಿ ಹಲವು ಯೋಗಿನಿಯರೊಡನೆ ಕಾಡಿನಲ್ಲಿ ತಪಸ್ಸು ಮಾಡುತ್ತಿದ್ದಳು. ಆಗ ಪರಮಶಿವನು ತನ್ನ ದಿವ್ಯಸಂಗಾತಿಯಾದ ಶಕ್ತಿಯನ್ನು ಹುಡುಕುತ್ತಾ ಅಲ್ಲಿಗೆ ಬಂದ. ಪ್ರದೋಷಕಾಲದಲ್ಲಿ ಎಂದರೆ ಮುಸ್ಸಂಜೆಯು ರಾತ್ರಿಯಾಗುವ ಹೊತ್ತಿನಲ್ಲಿ ಸ್ವಚ್ಛಂದ ಭೈರವರೂಪದಲ್ಲಿ ಉರಿಯುತ್ತಿರುವ ಜ್ವಾಲೆಯಾಗಿ ಪ್ರಕಟವಾಗಿದ್ದ ಶಿವನ ಸ್ವರೂಪ ಎಲ್ಲರಲ್ಲೂ ಭಯ ಮೂಡಿಸುವಂತಿತ್ತು. ಗಾಬರಿಗೊಂಡ ಯೋಗಿನಿಯರು ಭಯದಿಂದ ತತ್ತರಿಸಿ ಅಲ್ಲಿಂದಿಲ್ಲಿಗೆ ಓಡತೊಡಗಿದರು. ಪರಿಸ್ಥಿತಿಯನ್ನು ಹತೋಟಿಗೆ ತರಲು ಪಾರ್ವತಿ,  ವಟುಕ ಭೈರವ ಮತ್ತು ರಾಮ (ರಮಣ) ಭೈರವರೆಂಬ ಇಬ್ಬರು ಮಾನಸಪುತ್ರರನ್ನು  ಶಿವನನ್ನು  ಶಾಂತಗೊಳಿಸಲು ಸೃಷ್ಟಿಮಾಡಿದಳು. ಆಗ  ಸ್ವಚ್ಛಂದ ಭೈರವ  ಕೆಲಕ್ಷಣ  ಅಂತರ್ಧಾನನಾಗಿ ಮತ್ತೊಮ್ಮೆ ಜ್ವಾಲಾಲಿಂಗ ಅಥವಾ ಕಾಂತಿ ಸ್ಥಂಭರೂಪದಲ್ಲಿ ಪ್ರತ್ಯಕ್ಷನಾದನು.  ಈ ದಿವ್ಯ ಸ್ಥಂಭದ ಕೊನೆ ಮೊದಲು ಹುಡುಕಲು ಹೋದ  ವಟುಕ ಮತ್ತು ರಮಣರಿಗೆ ಏನೊಂದೂ ತಿಳಿಯಲಿಲ್ಲ. ಅವರಿಬ್ಬರು ಶರಣಾಗಿ    ಶಿವನ ಲೀಲಾ ಮಹಾತ್ಮೆಯನ್ನು ಪಾರ್ವತಿಯ ಮುಂದೆ ಹಾಡಿ ಹೊಗಳಿದರು. ದಿವ್ಯಜ್ವಾಲೆಯ ಶ್ರೇಷ್ಠತೆಯನ್ನು ಗ್ರಹಿಸಲಾಗದೆ ವಟುಕ, ರಮಣ ಮತ್ತು ಯೋಗಿನಿಯರೆಲ್ಲರೂ ಪಾರ್ವತಿಯಲ್ಲಿ ಲೀನವಾದರು. ಅಂತಿಮವಾಗಿ ಪಾರ್ವತಿಯೂ ಜ್ವಾಲಾ ಲಿಂಗದಲ್ಲಿ ಒಂದಾಗಿ ಮುಂದೆ ಈ  ದಿನದಂದು  ವಟುಕ-ರಮಣರಿಬ್ಬರೂ  ಜನರಿಂದ ಪೂಜಿಸಲ್ಪಟ್ಟು ಯಜ್ಞದ ಆಹುತಿಗಳನ್ನು ಪಡೆಯುಲಿ ಎಂದು ಹರಸಿದಳು.  ಯಾರು ವಟುಕ-ರಮಣರನ್ನು ಈ ದಿನದಂದು ಪೂಜಿಸುತ್ತಾರೋ ಅವರ ಎಲ್ಲ ಇಷ್ಟಾರ್ಥಗಳು  ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಕಶ್ಮೀರಿ ಪಂಡಿತರ ಸಂಪ್ರದಾಯದಲಿ ಬಹಳ ಬಲವಾಗಿದೆ.

ಭಾರತದಾದ್ಯಂತ ಮತ್ತು ಹೊರದೇಶದ ನೇಪಾಳದಲ್ಲಿಯೂ ಮಹಾಶಿವರಾತ್ರಿಯನ್ನು ಚತುರ್ದಶಿಯಂದು ಆಚರಿಸಲಾಗುತ್ತದೆ. ಆದರೆ, ಕಾಶ್ಮೀರದಲ್ಲಿ ಇದು ಒಂದು ದಿನ ಮುಂಚೆ ಎಂದರೆ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಹದಿಮೂರನೇ ದಿನದಂದು ಆಚರಿಸಲಾಗುತ್ತದೆ. ವಾಸ್ತವವಾಗಿ ಹದಿನೈದು ದಿನಗಳ ಮಟ್ಟಿಗೆ ನಡೆಯುವ ಸಂಭ್ರಮ ಮತ್ತು ಉತ್ಸವಗಳು ಜ್ವಾಲಾಲಿಂಗವು ಪ್ರಕಟವಾದ ತ್ರಯೋದಶಿಯಂದು ಪರಾಕಾಷ್ಠೆ ತಲುಪುತ್ತದೆ.

ಒಂಬತ್ತನೇ ಶತಮಾನದ ಕಶ್ಮೀರಿ ಸಂತ -ಕವಿ ಉತ್ಪಲದೇವ ಶಿವರಾತ್ರಿಯ ಬಗ್ಗೆ ಹೀಗೆ ಹೇಳಿದ್ದಾನೆ : “ಆಗಸದಲ್ಲಿ ಸೂರ್ಯ, ಚಂದ್ರ,ಮತ್ತು ನಕ್ಷತ್ರಗಳು ಒಟ್ಟಿಗೆ ಅಸ್ತಂಗತವಾದಾಗ ಪ್ರಸರಿಸುವ ಶಿವರಾತ್ರಿ ತನ್ನ ವೈಭವವನ್ನು ಎಲ್ಲೆಡೆ ರಾರಾಜಿಸುತ್ತದೆ. ”

ಕಶ್ಮೀರಿ ಪಂಡಿತ ಸಮುದಾಯದ  ಹಬ್ಬ-ಹರಿದಿನಗಳ ಆಚಾರ, ಸಂಸ್ಕೃತಿ ಮತ್ತು ಸಂಪ್ರದಾಯದ  ವಿಷಯ ಬಂದಾಗಲೆಲ್ಲಾ ಮಹಾಶಿವರಾತ್ರಿಯ ಉಲ್ಲೇಖ ಬಂದೇಬರುತ್ತದೆ. ಮಹಾಶಿವರಾತ್ರಿಗೆ ಕಾಶ್ಮೀರದಲ್ಲಿ ಹೇರಾತ್ – ಹರ(ಶಿವ) ನ ರಾತ್ರಿ – ಎಂದು ಕರೆಯಲಾಗುತ್ತದೆ.  ಹೇರಾತ್ ಈ ಸಮುದಾಯದ ಅತಿ ಪ್ರಮುಖ ಹಬ್ಬವಾಗಿದೆ. ಆರಂಭದಿಂದ ಕೊನೆಯ ರಾತ್ರಿಯವರಿಗೆ ಉತ್ಸವವನ್ನು  ಹಂತ ಹಂತದಲ್ಲಿ ಹೀಗೆ ಆಚರಿಸಲಾಗುತ್ತದೆ :

 • ಹುರ್-ಓಕ್ಡೋಹ್  – ಉತ್ಸವದ ತಯಾರಿ  ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಮೊದಲ ದಿನವಾದ ಹುರ್-ಓಕ್ಡೋಹ್ ನಿಂದ ಆರಂಭವಾಗುತ್ತದೆ. ಮೊದಲ ವಾರ , ಹುರ್-ಓಕ್ಡೋಹ್ ನಿಂದ ಹುರ್-ಶಿಯಾಮ್ (ಮೊದಲ ದಿನದ ಆರು ದಿನಗಳವರೆಗೆ) ಮನೆಯನ್ನು ಸ್ವಚ್ಛಗೊಳಿಸಿ ಹಬ್ಬಕ್ಕೆ ಸಜ್ಜಾಗುವ ಮತ್ತು ಪೂಜಾ ಸಾಮಗ್ರಿಗಳನ್ನು ಅಣಿಮಾಡಿಕೊಳ್ಳುವ ಅವಧಿ.
 • ಹುರ್-ಅಠಮ್ – ಎಂಟನೇ ದಿನ ಅಥವಾ ಹುರ್-ಅಠಮ್ ದೇವಿ ಶಾರಿಕಾ ಮಾತೆಯ ದಿನ.  ದುರ್ಗೆಯ ಅವತಾರವಾದ ಶಾರಿಕಾದೇವಿ ಕಾಶ್ಮೀರ ಕಣಿವೆಯ ಅಧಿದೇವತೆ.
 • ದ್ಯಾರಾ ದಹಮ್ – ಹತ್ತನೇ ದಿನ ಮಹಾಲಕ್ಷ್ಮಿಯ ಆರಾಧನೆ. ಅಂದು ಮದುವೆಯಾದ ಹೆಣ್ಣುಮಕ್ಕಳು ತಮ್ಮ ತವರಿಗೆ ಭೇಟಿ ನೀಡುವ ಸಡಗರವಿರುತ್ತದೆ. ಪ್ರೀತಿ-ಗೌರವಗಳಿಂದ ಹೆಣ್ಣುಮಕ್ಕಳು ತವರಿನಿಂದ ಅತ್ತೆ ಮಾವಂದಿರಿಗೆ ಆಟಗಟ್(ಹಣ),  ಇತರ ಉಡುಗೊರೆಗಳು ಹಾಗು ಬೆಂಕಿ ಕಾಯಿಸುವ ಬೆಳ್ಳಿ ತುಂಡಿನ ಕಂಗ್ರಿ (ಬೆಂಕಿ ಕಾಯಿಸುವ ಮಡಿಕೆ) ಯನ್ನು ಅದೃಷ್ಟ ಮತ್ತು ಸಮೃದ್ಧಿಯ ಸಂಕೇತವಾಗಿ ತರುವ ಪದ್ಧತಿ ಇದೆ.
 • ಗಡಖ್ – ಇದು ಭೈರವನಿಗೆ ಅರ್ಪಿಸಿದ ಮೀನು ಮತ್ತು ಅನ್ನದ ಭೂರಿಭೋಜನವನ್ನು ಮನೆಮಂದಿಯೆಲ್ಲ ಸವಿಯುವ ದಿನ.
 • ವಗರ್ಯೆ ಬಾಹ್ – ಶಿವರಾತ್ರಿಯ ನಾಂದಿ ಪೂಜೆ ಈ ಹನ್ನೆರಡನೆಯ ದಿನ.  ಭಗವಂತನ ಸುದ್ದಿವಾಹಕ (ಪುರೋಹಿತ) ನ ಪ್ರತೀಕವಾಗಿ ವಗರ್ಯೆ ಎಂದು ಕರೆಯಲಾಗುವ  ಮಣ್ಣಿನ ಹೂಜಿಯನ್ನು ಹುಲ್ಲಿನ ಚಾಪೆ ಅಥವಾ ಮಣೆಯ ಮೇಲೆ ಭಕ್ತಿಪೂರ್ವಕವಾಗಿ ಇಡುತ್ತಾರೆ. ಶಿವ-ಪಾರ್ವತಿಯರು ಮಾರನೆಯ ದಿನ ಭೇಟಿ ನೀಡುವರು ಎಂಬ ಶುಭ ಸಂದೇಶವನ್ನು ಪುರೋಹಿತ/ಸುದ್ದಿವಾಹಕರು ನೀಡುತ್ತಾರೆ ಎಂಬ ನಂಬಿಕೆಯಿದೆ.
 • ಹೇರಾತ್ ತ್ರುವಾಹ್ – ಹಬ್ಬದ  ಸಂಭ್ರಮದ ಪರಾಕಾಷ್ಠೆಯಾಗುವುದು ಹದಿಮೂರನೇ ದಿನವಾದ ಹೇರಾತ್ ತ್ರುವಾಹ್ ನಂದು. ಅಂದೇ ಮುಖ್ಯ ಪೂಜೆ. ತೊಂಬತ್ತರ ದಶಕದ  ವಲಸೆಗೆ ಮುನ್ನ ಹೆಚ್ಚಿನ ಕಾಶ್ಮೀರಿ ಪಂಡಿತರು ಅವಿಭಜಿತ ಕುಟುಂಬವಾಗಿ  ವಾಸಿಸುತ್ತಿದ್ದರು. ಒಂದೇ ಕುಟುಂಬದ 20 ರಿಂದ 30 ಕೆಲವೊಮ್ಮೆ ಇನ್ನೂ ಹೆಚ್ಚು ಮಂದಿ ಕೂಡಿ ವಾಸ ಮಾಡುವುದು ವಿಶೇಷವೇನಾಗಿರಲಿಲ್ಲ. ಹೇರಾತ್ ನಂದು ಮನೆಯ ಹಿರಿಯರು ಉಪವಾಸ ಮಾಡುತ್ತಾರೆ. ಅಂದು ಶಿವ ಪಾರ್ವತಿಯರ ವಿವಾಹದ  ದಿನವಾಗಿದ್ದು ಭೈರವರು ಮತ್ತು ಗಣಗಳು ಶಿವನೊಂದಿಗೆ ಇರುತ್ತಾರೆ ಎಂಬ ನಂಬಿಕೆಯಿದೆ. ದಿಬ್ಬಣದವರನ್ನು ಸಂತೋಷಪಡಿಸಲು ಅನೇಕ ಭಕ್ಷ್ಯಭೋಜನಗಳನ್ನು  ತಯಾರಿಸುತ್ತಾರೆ. ಇದಕ್ಕೆ ಸ್ಥಳೀಯರು ವಟುಕ್ ಪೂಜಾ /ವಟುಕ್ಪೂಝಾ  ಎಂದು ಕರೆಯುತ್ತಾರೆ,

  ShivaRatri

  (ಚಿತ್ರ ಕೃಪೆ: ವಿಜಯೇಶ್ವರ್ ಜಂಥ್ರಿ )

ಮೇಲಿನ ಚಿತ್ರದಲ್ಲಿ ವಟುಕ್ಪೂಝಾ ವಿಧಿಯ ವಿನ್ಯಾಸವನ್ನು ತೋರಿಸಲಾಗಿದೆ. ಕಳಶ ಪ್ರತಿಷ್ಠಾಪನೆಯಿಂದ ಪೂಝಾ ಆರಂಭಗೊಳ್ಳುತ್ತದೆ. ಪೂಜಾಸ್ಥಾನವನ್ನು ಸುಣ್ಣ ಹಚ್ಚಿ  ಚೊಕ್ಕಟಗೊಳಿಸಲಾಗುತ್ತದೆ. ನಂತರ ಚಿತ್ರದಲ್ಲಿ ತೋರಿಸಿದಂತೆ ಹೂವಿನ ಸ್ಥಾನದಲ್ಲಿ ಕಳಶವನ್ನು ಇರಿಸಲಾಗುತ್ತದೆ. ಶಿವನ ಪ್ರತೀಕವಾಗಿ ‘ನೋಟ್ ‘ ಮತ್ತು ಮಾತಾ ಪಾರ್ವತಿಯ ಪ್ರತೀಕವಾಗಿ ‘ಚೌಡ್’ ಇರಿಸಲಾಗುತ್ತದೆ. ನಂತರದಲ್ಲಿ ಸನೀವೇರ್ , ದುಲ್ (ಭೈರವರ ಔತಣ) , ಸೊನ್ನಿ ಪೋತುಲ್ , ದೂಫ್-ಜ್ಹುರ್ (ರತ್ನದೀಪ್) ಮತ್ತು ಹೃಷ್-ದುಲ್ (ಹೃಷಿ/ಋಷಿ ಗಳಿಗೆ ಔತಣ) ಗಳನ್ನು ಅವುಗಳ ನಿಗದಿತ ಜಾಗದಲ್ಲಿ ಚಿತ್ರದಲ್ಲಿ ತೋರಿಸಿದಂತೆ ಇಡಲಾಗುತ್ತದೆ. ಎಲ್ಲವಕ್ಕೂ ಹೂವಿನ ಹಾರ ಮತ್ತು ಬಣ್ಣದ ದಾರ (ನರಿವಾನ್) ಗಳಿಂದ ಅಲಂಕರಿಸಲಾಗುತ್ತದೆ.  ಕಳಶ, ನೋಟ್,ಚೌಡ್ ಮತ್ತು ಸನೀವೇರ್ ಗಳಲ್ಲಿ ದೂನ್ (ಅಕ್ರೋಟ್) ಗಳನ್ನು ತುಂಬಿರುತ್ತಾರೆ. ಪ್ರತಿ ಕುಟುಂಬಕ್ಕೆ ನಿರ್ದಿಷ್ಟ ಸಂಖ್ಯೆಯ ಅಕ್ರೋಟ್ ಗಳನ್ನು ತುಂಬುವ ವಾಡಿಕೆಯಿದ್ದು ನೋಟ್ ನಲ್ಲಿ ಕನಿಷ್ಠ ಐವತ್ತೊಂದು ಅಕ್ರೋಟ್ ಗಳಿರಬೇಕು. ಅಕ್ರೋಟ್ ಗಳ ಜೊತೆ ಹಾಲು, ಮೊಸರು , ಲಿಂಗಾಕಾರದ ಕಲ್ಲುಸಕ್ಕರೆ, ಅಕ್ಕಿ, ಹೂವು ಇತ್ಯಾದಿಗಳನ್ನು ಪೂಜೆಗೆ ಇಡಲಾಗುತ್ತದೆ.

ಈ ತಯಾರಿಯ ನಂತರ ಕುಲಪುರೋಹಿತರು ಅಥವಾ ಕುಟುಂಬದ ಅರ್ಚಕರು ಶಾಸ್ತ್ರೋಕ್ತವಾಗಿ ವಟುಕ್ಪೂಝಾದಲ್ಲಿ  ಶಿವ-ಪಾರ್ವತಿಯರ ಪಾಣಿಗ್ರಹಣ  ನೆರವೇರಿಸುತ್ತಾರೆ. ಸಂತೋಷದ ಸಂಗತಿಯೆಂದರೆ ವಲಸೆಯ ನಂತರದಲ್ಲಿಯೂ ಸಂಪ್ರದಾಯಕ್ಕೆ ಅಡ್ಡಿ ಬಾರದಂತೆ ನವ ಯುಗದ ಕಾಶ್ಮೀರಿ ಪಂಡಿತರಿಗಾಗಿ ಹೇರಾತ್ ಪೂಜಾವಿಧಿಗಳ ಕ್ಯಾಸೆಟ್ಟ್  ಮತ್ತು ಇತ್ತೀಚಿಗೆ ಆನ್ಲೈನ್ ಆಡಿಯೋ ಲಿಂಕ್ ಗಳ ಸೌಲಭ್ಯವಿದೆ.

(ವಟುಕ್ಪೂಝಾ ವ್ಯವಸ್ಥೆ )

ಪೂಝಾ ನಂತರ ಭೈರವರಿಬ್ಬರಿಗೂ ಅವರ ಇಷ್ಟದ ಮಾಂಸ, ಮೀನು ಮತ್ತ್ತು ಅನ್ನದ  ತಿನಿಸುಗಳನ್ನು ನೈವೇದ್ಯ ಮಾಡಲಾಗುತ್ತದೆ. ಈ ಪದ್ಧತಿ ಕಾಶ್ಮೀರಿ ಹಿಂದೂಗಳ ವೈಶಿಷ್ಟ್ಯ ಎನ್ನಬಹುದು. ಕೊನೆಗೆ ಕುಟುಂಬದ ಮಂದಿಗಳೆಲ್ಲಾ ಒಟ್ಟಿಗೆ ಕುಳಿತು ಆಹಾರವನ್ನು ಸೇವಿಸುತ್ತಾರೆ.

 • ಹೇರಾತ್ ನಂತರದ ಶಿವ ಚತುರ್ದಶಿಯಂದು ಸಲಾಂ ಆಚರಿಸಲಾಗುತ್ತದೆ. ಅಂದು ಬೆಳಿಗ್ಗೆ ವಟುಕ್-ಭೈರವರಿಗೆ ಪೂಜೆಯಾದ ನಂತರ ತೋಮುಲ್ ತ್ಚೊಟ್ – ಅಕ್ಕಿ-ಅಕ್ರೋಟ್ ಗಳ ದೋಸೆಯ ನೈವೇದ್ಯವನ್ನು ಹಂಚಲಾಗುತ್ತದೆ. ಈ ದಿನವು ಅಬಾಲವಯಸ್ಕರಿಗೆ ಬಹಳ ಪ್ರಿಯವಾದ ದಿನ. ಅಂದಿನ ದಿನ ಹಿರಿಯರು ಕಿರಿಯರಿಗೆ ‘ಹೇರಾತ್ ಖರ್ಚ್’ – ಸ್ವಂತವೆಚ್ಚಕ್ಕಾಗಿ ಪುಡಿಗಾಸು ಕೊಡುವ ವಾಡಿಕೆಯಿದೆ.  ಈ ದಿನಕ್ಕೆ   ‘ಸಲಾಂ’ (ಪಾರ್ಸಿ ಹೇಳಿಕೆ) ಎಂದು ಕರೆಯುವುದು ಸ್ವಲ್ಪ ವಿಚಿತ್ರವೆನ್ನಿಸುತ್ತದೆ.  ಬಹುಶಃ  ಈ  ದಿನದಂದು ನೆರೆಹೊರೆಯ ಮುಸ್ಲಿಂ ಬಾಂಧವರು ಪಂಡಿತರ ಮನೆಗೆ ಭೇಟಿ ನೀಡಿ ಶುಭಾಶಯವನ್ನು ಕೋರುವ ಪದ್ಧತಿಯಿಂದಾಗಿ ಈ ಹೆಸರು ಬಂದಿರಬೇಕು. ಮಾನವ ಧರ್ಮ, ಸಾಮರಸ್ಯ ಒಂದಾನೊಂದು ಕಾಲದಲ್ಲಿ ಕಾಶ್ಮೀರದ ಕಣಿವೆಯಲ್ಲಿ ಪ್ರಚಲಿತವಾಗಿತ್ತು ಎನ್ನುವುದೇ ಒಂದು ವಿಪರ್ಯಾಸದ ಸಂಗಾತಿಯಾಗಿ ತೋರುತ್ತದೆ. ಒಂದು ಕಾಲದಲ್ಲಿ ಹಬ್ಬದ ದಿನ ಸ್ತ್ರೀ-ಪುರುಷರೆಲ್ಲರೂ ಹೊಸ ಬಟ್ಟೆ ಧರಿಸಿ ಕುಟುಂಬದವರೊಂದಿಗೆ ಸಂತೋಷವಾಗಿ ಕಾಲಕಳೆಯುತ್ತಿದ್ದರು. ಕಾರಣವೇ ಬೇಕಾಗದೆ ಸಂತೋಷ ನಗೆ ಎಲ್ಲರ ಮುಖದ ಮೇಲೆ ಮತ್ತು ವಾತಾವರಣದಲ್ಲಿ ಮೂಡಿರುವ ಕಾಲವೊಂದಿತ್ತು.
 • ದೂನಿ(ಆಕ್ರೋಟ್)-ಅಮವಾಸ್ ಹಬ್ಬದ  ಹದಿನೈದನೆಯ ದಿನ. ಈ ದಿನದಂದು ಶಿವ ಮತ್ತು ಪಾರ್ವತಿ ಹಿಮಾಲಯಕ್ಕೆ ಹಿಂದಿರುಗುವ ದಿನ ಎನ್ನುವ ಪ್ರತೀತಿಯಿದೆ. ನೋಟ್ ನಲ್ಲಿನ ಆಕ್ರೋಟ್ ಗಳನ್ನು ತೆಗೆದು ಬಂಧು ಬಾಂಧವರಲ್ಲಿ ಹಂಚಲಾಗುತ್ತದೆ.
 • ತೀಲ್ ಅಷ್ಟಮಿ – ಮಹಾಶಿವರಾತ್ರಿಯ ಉತ್ಸವದ ಸಮಾರೋಪದ ದಿನ.ಕೃಷ್ಣಾಷ್ಟಮಿ ಅಥವಾ ತೀಲ್-ಅಷ್ಟಮಿಯಂದು  ಎಲ್ಲ ಜನರು ಪೂಜಾ ಸಾಮಗ್ರಿಗಳನ್ನು ನದಿ-ಕೆರೆಗಳಲ್ಲಿ ವಿಸರ್ಜಿಸುವ ದಿನ. ಸಂಧ್ಯಾಕಾಲದಲ್ಲಿ ಹೊಸ್ತಿಲ ಬಳಿ ದೀಪವನ್ನು ಹಚ್ಚಿಡುತ್ತಾರೆ. ಇದು ಚಳಿಗಾಲ ಮುಗಿದು ವಸಂತಕಾಲವನ್ನು ಬರಮಾಡಿಕೊಳ್ಳುವ ಸಮಯವಾಗಿದೆ.

ನಮ್ಮ ಹಬ್ಬ-ಹರಿದಿನಗಳು ಮತ್ತು ಅವುಗಳ ಆಚಾರ,ವಿಚಾರ ಮತ್ತು ಸಂಪ್ರದಾಯಗಳು ಋತು-ಕಾಲಗಳ  ಜೊತೆ ಮೇಳೈಸುವ ರೀತಿ ನಿಜಕ್ಕೂ ಸೋಜಿಗವಾದ ವಿಷಯ.

ಹಿಂದೆ ಹೇಳಿದಂತೆ ಕೇವಲ ಹದಿನೈದು ದಿನಕ್ಕೆ ಸೀಮಿತವಾಗದ ಶಿವರಾತ್ರಿಯ ಉತ್ಸವ ಪ್ರಾರಂಭವಾಗಿ ಭಕ್ತಿಯ ಪರಾಕಾಷ್ಠೆಯನ್ನು ತಲುಪಿ ಎಲ್ಲರೂ ಪರಮಶಿವನ ಮಹಾತ್ಮೆಯನ್ನು ಕೊಂಡಾಡುವುದು ಇಪ್ಪತ್ಮೂರು ದಿನಗಳ ಮಟ್ಟಿಗೆ. ಶಿವಭಕ್ತರಾದ ಕಾಶ್ಮೀರಿ ಪಂಡಿತರು ಅತ್ಯುತ್ಸಾಹದಿಂದ ಶಿವನನ್ನು ಇಪ್ಪತ್ಮೂರು ದಿನಗಳ ಕಾಲ ಆರಾಧಿಸಿ ತಮ್ಮ ಇಷ್ಟದ ಮಹಿಮ್ನಾಪಾರ ಸ್ತ್ರೋತ್ರವನ್ನು ದಿನವಿಡೀ ಪಠನ ಮಾಡುವುದನ್ನು  ಕಲ್ಪನೆ ಮಾಡಿಕೊಳ್ಳುವುದೇ ಒಂದು ವಿಸ್ಮಯ.

कर्पूरगौरं करुणावतारं संसारसारं भुजगेन्द्रहारम्।
सदा बसन्तं हृदयारबिन्दे भबं भवानीसहितं नमामि॥

ಕರ್ಪೂರಗೌರಂ ಕರುಣಾವತಾರಂ ಸಂಸಾರಸಾರಂ ಭುಜಗೇಂದ್ರಹಾರಂ ।
ಸದಾವಸಂತಂ ಹೃದಯಾರವಿಂದೇ ಭವಂ ಭವಾನಿ ಸದಾ ನಮಾಮಿ ॥

(ಓ!  ಕರ್ಪೂರದಂತೆ ದಿವ್ಯವಾಗಿ ಮತ್ತು ಭವ್ಯವಾಗಿ ಹೊಳೆಯುವ , ಕರುಣೆಯೇ  ಮೈವೆತ್ತ , ಪ್ರಪಂಚದ ಸಾರವೇ ಆದ  ಹಾವನ್ನೇ ಹಾರಮಾಡಿಕೊಂಡ ಪರಮಶಿವನೇ , ನಿನ್ನ ಮತ್ತು ಮಾತಾ ಭವಾನಿಯ ಚರಣ ಕಮಲಗಳಿಗೆ ನನ್ನ ನಮನ. )

1990ರ ಪ್ರಕ್ಷುಬ್ಧ ಪರಿಸ್ಥಿತಿ ಕಶ್ಮೀರಿ ಪಂಡಿತರನ್ನು ತಮ್ಮ ತಾಯ್ನಾಡಿನಿಂದ ಹೊರತಳ್ಳಿದರೂ ಅವರನ್ನು ಅವರ ಸಂಸ್ಕೃತಿ , ಸಂಪ್ರದಾಯಗಳು ಮತ್ತು ಮುಖ್ಯವಾಗಿ ಜೀವನಶೈಲಿಯಿಂದ  ಬೇರ್ಪಡಿಸಲಾಗಲಿಲ್ಲ. ಈಗಲೂ ಪ್ರಪಂಚದಾದ್ಯಂತ ಹರಡಿರುವ ಕಶ್ಮೀರಿ ಪಂಡಿತರನ್ನು ಸುಲಭವಾಗಿ ಗುರುತಿಸಬಹುದು. ಎಲ್ಲಿ ಹೋದರೂ ಈ ಸಮುದಾಯದ ಜನ ಶಿವನನ್ನು ತಮ್ಮೊಳಗೆ ಕೊಂಡೊಯ್ದಿದ್ದಾರೆ.

ಕೊನೆಯದಾಗಿ ಕಶ್ಮೀರಿ ಪಂಡಿತರ ಮನೆಮನೆಗಳಲ್ಲಿ ಹಿರಿಯರು ಕಿರಿಯರಿಗೆ ಹೇಳುವ ಒಂದು ಕಥೆಯ ಮೂಲಕ ನನ್ನ ಲೇಖನವನ್ನು ಮುಗಿಸುತ್ತೇನೆ.

ಅಫ್ಘಾನೀ ರಾಜನ ಆಡಳಿತಕಾಲದಲ್ಲಿ ಜಬ್ಬಾರ್ ಖಾನ್ ಎಂಬ ರಾಜ್ಯಪಾಲನೊಬ್ಬ,  ಪಂಡಿತರು ಫಾಲ್ಗುಣ ಮಾಸ ಕೃಷ್ಣಪಕ್ಷದ ತ್ರಯೋದಶಿಯಂದು ಹೇರಾತ್ ಆಚರಿಸಬಾರದೆಂದು ಆದೇಶ ಹೊರಡಿಸಿದ.  ಹೇರಾತ್ ನ ರಾತ್ರಿಯಂದು ಹಿಮಪಾತವಾಗುತ್ತದೆ ಎಂದು ಪಂಡಿತರು ಧೃಡವಾಗಿ ನಂಬುತ್ತಾರೆ ಎಂದು  ಜಬ್ಬಾರ್ ಖಾನ್ ಗೆ ಯಾರೋ ಹೇಳಿದರಂತೆ. ಈ ನಂಬಿಕೆಯನ್ನು ಸುಳ್ಳಾಗಿಸಲು ಆತ ಹೇರಾತ್ ಇನ್ನು ಮುಂದೆ ಬೇಸಿಗೆಯಲ್ಲಿ ಆಚರಿಸಬೇಕು ಎಂಬ ಆಜ್ಞೆ ಹೊರಡಿಸಿದ.. ಅಚ್ಚರಿಯೆಂದರೆ ಆ ಬೇಸಿಗೆಯ ಹೆರಾತ್ ರಾತ್ರಿಯಂದು  ಪ್ರಕೃತಿಯ ಅಸಾಧಾರಣ ಶಕ್ತಿಗಳ ಸಂಯೋಜನೆಯಿಂದಾಗಿ ಆಕಾಶದಿಂದ ಹಿಮ ಬಿದ್ದು ಭೂಮಿಯ ತುಂಬಾ ಬೆಳ್ಳನೆಯ ಹಾಸುಹಾಕಿತ್ತಂತೆ.  ಕಾಶ್ಮೀರದ ಹಿಂದುಗಳು ಅಸಾಧ್ಯವನ್ನು ದಿಟವಾಗಿಸಿದ ಈ ಚಮತ್ಕಾರ ಪರಮಶಿವನ (ಹರನ) ದಿವ್ಯ ಲೀಲೆಯೇ ಹೊರತು ಬೇರೇನೂ ಅಲ್ಲ ಎಂದು ಕೊಂಡಾಡಿದರಂತೆ. ಕೆಲವು ಕವಿಗಳು ಪ್ರಾಸಬದ್ಧವಾಗಿ ಹಾಡನ್ನೂ ಕಟ್ಟಿಬಿಟ್ಟಿದ್ದಾರೆ – “ವುಚ್ತೋನ್ ಯಿಹ್ ಜಬ್ಬಾರ್ ಜಂಧಾ , ಹರಸ್ ತಿಹ್ ಕರುನ್ ವಂದಾ”  (ಹಾಳು ಜಬ್ಬಾರ್ ನನ್ನು ನೋಡು!  ಹರ್ ನನ್ನೂ (ಬೇಸಿಗೆಯನ್ನೂ)  ಚಳಿಗಾಲವಾಗಿಸಿದ). ಈ ಚಮತ್ಕಾರದೊಂದಿಗೇ ಕಾಶ್ಮೀರದಲ್ಲಿ  ಅಫ್ಘಾನೀ ರಾಜನ ಆಡಳಿತಕಾಲ ಕೊನೆಗೊಂಡಿತು ಎಂಬುದು ಒಂದು ತಮಾಷೆಯ ಸಂಗತಿ.

ಉಲ್ಲೇಖಗಳು

 1. https://indusscrolls.com/kashmir-the-land-of-lord-shiva-2/
 2. https://www.shehjar.com/blog/Herath:-Shivaratri:-The-Kashmiri-Festival1665
 3. http://www.koausa.org/shivratri.html
 4. http://thekashmironline.blogspot.com/2010/02/today-is-hur-okdoh.html
 5. https://www.ikashmir.net/festivals
 6. https://isha.sadhguru.org/mahashivratri
 7. http://www.koausa.org/Festivals/Shivratri

(ಈ ಲೇಖನ ರೇಖಾ ಧಾರ್ ಅವರ ಆಂಗ್ಲ ಲೇಖನದ ಕನ್ನಡಾನುವಾದವಾಗಿದೆ.)

(This is a Kannada translation of an English article by Rekha Dhar)

(Featured image credit: CitySpidey)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply