close logo

ಕರ್ನಾಟಕ ಸಂಗೀತದಲ್ಲಿ ದೇವೀ ಸ್ತುತಿ: ಒಂದು ಕಿರುನೋಟ

ಇಂಡಿಕ್ ಟುಡೇ ನ ಕನ್ನಡ ಓದುಗರಿಗೆಲ್ಲರಿಗೂ ನವರಾತ್ರಿಯ ಶುಭ ಹಾರೈಕೆಗಳು.

ನಮ್ಮ ಯಾವುದೇ ಪೂಜೆ ವ್ರತಗಳಿರಲಿ, ಸಂಗೀತ ಅದರೊಡನೇ ಬರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಯಾವುದೇ ಪೂಜೆಯ ಅನುಷ್ಠಾನದ ಕೊನೆಯಲ್ಲಿ ಸಂಗೀತಸೇವೆ, ನೃತ್ಯಸೇವೆ, ವಾದ್ಯಸೇವೆಗಳು ಇರುವುದು ತಿಳಿದೇ ಇದೆ. ಊರ ಸುತ್ತ ಹೋಗುವ ಉತ್ಸವಗಳು ಎಂಟೂ ದಿಕ್ಕುಗಳಲ್ಲಿ ನಿಂತು, ಅಲ್ಲಲ್ಲಿ ಮಂಗಳವಾದ್ಯ ( ಓಲಗ)ದ ಸೇವೆ ನಡೆಯುತ್ತಿದ್ದಿದ್ದುದ್ದನ್ನೂ ನಿಮ್ಮಲ್ಲಿ ಹಲವರು ನೋಡಿರಬಹುದು, ಕೇಳಿರಬಹುದು.

ಕರ್ನಾಟಕ ಸಂಗೀತದಲ್ಲಿ ಪ್ರಸಿದ್ಧ ವಾದ್ಯವಾದ ವೀಣೆಗೆ ಸರಸ್ವತೀ ವೀಣೆ ಎಂದೇ ಹೆಸರು. ಈಗಿನ ದಿನಗಳಲ್ಲಿ ನುಡಿಸುವ ಈ ವೀಣೆಯ ಸ್ವರೂಪ ಕೆಲವೇ ಶತಮಾನಗಳದ್ದೆಂಬುದು ನಿಜವಾದರೂ, ಮೂಲಾರ್ಥದಲ್ಲಿ ವೀಣೆ ಎನ್ನುವುದು ಯಾವುದೇ ತಂತೀವಾದ್ಯಕ್ಕೆ ಇರುತ್ತಿದ್ದ ಪಾರಿಭಾಷಿಕ ಪದವಾಗಿತ್ತು. ನಾರದನು ನುಡಿಸುವ ವೀಣೆಗೆ ಮಹತೀ ಎಂಬ ಹೆಸರಿದ್ದನ್ನೂ, ಸರಸ್ವತಿಯು ನುಡಿಸುವ ವೀಣೆಗೆ ಕಚ್ಛಪಿ ಎಂಬ ಹೆಸರಿದ್ದದ್ದನ್ನೂ ತಿಳಿಯಲು ಹಲವು ಉಲ್ಲೇಖಗಳಿವೆ. ಶಿವನು ಡಮರುವನ್ನು ನುಡಿಸುತ್ತಾನೆ. ನಂದಿಯು ಮೃದಂಗವನ್ನು ನುಡಿಸುತ್ತಾನೆ. ಕೃಷ್ಣನು ಕೊಳಲನ್ನು ನುಡಿಸುತ್ತಾನೆ. ಒಟ್ಟಿನಲ್ಲಿ, ನಮ್ಮ ದೇವದೇವಿಯರಿಗೆ ಸಂಗೀತ ಪ್ರಿಯವಾದುದ್ದೆಂದು ನಾವು ನಂಬಿದ್ದೇವೆ.

ಹಾಗಾಗಿ ಮೊದಲಿಗೆ ಈ  ವಾಗ್ದೇವಿಯ ಸ್ತುತಿಯೊಂದರಿಂದಲೇ ಮುಂದುವರಿಯೋಣ.

ಮಂಜು ಚಂದಿರ ಮುತ್ತು ಮಲ್ಲಿಗೆ  ಬೆಳ್ಪು ಬಣ್ಣದ ಸರಸತಿ
ಶುಭ್ರವಸ್ತ್ರವನುಟ್ಟು  ಪೊಳೆಯುವ ವೀಣೆದಂಡಿಯ ಪಿಡಿದೆಯೆ |
ಬೊಮ್ಮ ಹರಿಹರರಿಂದ ಪೂಜೆಯಗೊಳುತ ಬೆಳ್ದಾವರೆಯೊಳು
ಕುಳಿತ ದೇವಿಯೆ! ಕಾಯಬೇಕೌ ಉಳಿಸದೆನ್ನಯ ಅಲಸಿಕೆ   ||

(ಇದು ‘ಯಾ ಕುಂದೇಂದು ತುಷಾರಹಾರಧವಳಾ’ ಎಂಬ ಸರಸ್ವತಿಯ ಸ್ತುತಿಯ ನನ್ನ ಕನ್ನಡ ಅನುವಾದ)

ಶಿಷ್ಟರಿಂದಲೂ, ಗ್ರಾಮ್ಯರಿಂದಲೂ, ಓದು ಬರಹ ಅರಿತವರಿಂದಲೂ ಅರಿಯದವರಿಂದಲೂ ಸರಸ್ವತಿ ಪೂಜಿಸಲ್ಪಡುತ್ತಲೇ ಇದ್ದಾಳೆ. ಏಕೆಂದರೆ, ಅವಳು ಕಲಿಕೆಯ ದೇವಿಯೊಬ್ಬಳೇ ಅಲ್ಲ, ಮಾತಿನ ದೇವತೆ. ಹಾಗಾಗಿಯೇ ಜನಪದ ಗೀತೆಗಳಲ್ಲಿಯೂ ಸರಸ್ವತಿಯ ಸ್ತುತಿಗಳು ನಿಮಗೆ ಕಂಡುಬರುತ್ತವೆ. ಈ ತುಣುಕನ್ನು ನೋಡಿ.

ಆರೆಲೆ ಮಾವಿನ ಬೇರಾಗೆ ಇರುವೋಳೆ
ವಾಲ್ಗದ ಸದ್ದಿಗೆ ಒದಗೋಳೆ
ವಾಲ್ಗದ ಸದ್ದಿಗೆ ಒದಗೋಳೆ ಸರಸೋತಿ
ನಾಲಿಗೆ ತೊಡರ ಬಿಡಿಸವ್ವ

ಎಂಟೆಲೆ ಮಾವಿನ ದಂಟಾಗೆ ಇರುವೋಳೆ
ಗಂಟೆ ಸದ್ಧಿಗೆ ಒದಗೋಳೆ
ಗಂಟೆಯ ಸದ್ಧಿಗೆ ಒದಗೋಳೆ ಸರಸೋತಿ
ಗಂಟಲ ತೊಡರ ಬಿಡಿಸಮ್ಮ

ಎಷ್ಟು ಸೊಗಸಾಗಿ ಇಲ್ಲಿ ಈ ಜಾನಪದ ಕವಿ ಸರಸ್ವತಿಗೂ, ನಾದಕ್ಕೂ, ಸಂಗೀತಕ್ಕೂ, ಮಾತಿಗೂ ಇರುವ ಅವಿನಾ ಭಾವವನ್ನು ತೆರೆದಿಟ್ಟಿದ್ದಾನೆ(ಳೆ), ನೋಡಿ! ಆ ಸರಸ್ವತಿ ಗಂಟೆಯ ನಾದಕ್ಕೆ, ಓಲಗದ ಸಂಗೀತಕ್ಕೆ, ಒದಗುವಂತಹವಳು. ನಮ್ಮ ನಾಲಿಗೆ, ಗಂಟಲಿಗೆ ಇರುವ ತೊಡರನ್ನು ಬಿಡಿಸುವಂಥವಳು. ಎಂದರೆ, ಭಾವನೆಗಳು ಪ್ರತಿಯೊಬ್ಬರಲ್ಲೂ ಉಂಟು, ಆದರೆ ಅದನ್ನು ಹೊರತಂದು ಸುಂದರವಾಗಿ  ಪ್ರಸ್ತುತಿಗೊಳಿಸುವುದಕ್ಕೆ ಬೇಕಾದದ್ದು ಈ ಸರಸ್ವತಿಯ ದಯೆ ಎಂಬ ಭಾವವನ್ನು ನಾವಿಲ್ಲಿ ಕಾಣಬಹುದು.

ಕರ್ನಾಟಕ ಸಂಗೀತದಲ್ಲಿ ಸರಸ್ವತಿಯ ಪರವಾದ ಹಲವಾರು ಪ್ರಖ್ಯಾತ ರಚನೆಗಳು ಇವೆ. ಈ ನವರಾತ್ರಿಯ ಸಮಯದಲ್ಲಿ ಸರಸ್ವತಿಯ ಜೊತೆಯಲ್ಲಿ ಪಾರ್ವತಿಯನ್ನೂ ಆಕೆಯ ಹಲವಾರು ರೂಪಗಳಲ್ಲಿ ಅರ್ಚಿಸುವ ರೂಢಿ ಇರುವುದರಿಂದ, ಇವತ್ತು ಕೆಲವು ದೇವಿಯನ್ನು ಸ್ತುತಿಸುವ ರಚನೆಗಳ ಪಕ್ಷಿನೋಟವನ್ನು ಇಲ್ಲಿ ನೋಡೋಣ. ಇದರಿಂದ ಸಂಗೀತಾಸಕ್ತರಿಗೆ ಇನ್ನಷ್ಟು ಕೇಳುವ ಹುಮ್ಮಸ್ಸು ಹೆಚ್ಚಿದರೆ, ಸಂಗೀತದಲ್ಲಿ ಹೆಚ್ಚು ಪ್ರವೇಶ ಇಲ್ಲದವರಿಗೆ ಸಂಗೀತದ ಬಗ್ಗೆ ಆಸಕ್ತಿ ಮೂಡಿದರೆ ಈ ಬರಹವು ಸಾರ್ಥಕ ಎಂದೆಣಿಸುವೆ.

ಕರ್ನಾಟಕ ಸಂಗೀತದಲ್ಲಿ ರಚನೆ ಮಾಡಿದವರನ್ನು ನಾವು ವಾಗ್ಗೇಯಕಾರರು ಎನ್ನುತ್ತೇವೆ. ಒಂದು ಸಂಗೀತ ರಚನೆಯ ಮಾತು (ಸಾಹಿತ್ಯ) ಮತ್ತು ಧಾತು (ಸಂಗೀತ) ಎರಡನ್ನೂ ಒಬ್ಬರೇ, ಒಟ್ಟೊಟ್ಟಿಗೇ ರಚಿಸುವುದರಿಂದ ಈ ವಿಶಿಷ್ಟ ಪದದ ಪ್ರಯೋಗ. ಇದು ಸಾಮಾನ್ಯ ಸಿನೆಮಾ ಮೊದಲಾದ ಸಂಗೀತದಲ್ಲಿ, ಅಥವಾ ಸುಗಮ ಸಂಗೀತ ಪ್ರಕಾರಗಳಲ್ಲಿ ಇರುವುದಕ್ಕಿಂತ ಬೇರೆ – ಅಲ್ಲಿ ಮೊದಲೇ ತಯಾರಾದ ಸಂಗೀತದ ಮಟ್ಟಿಗೆ, ತಕ್ಕಸಾಲುಗಳನ್ನು ಕವಿಯೊಬ್ಬ ಹೊಂದಿಸುವುದೋ, ಅಥವಾ ಕವಿಯೊಬ್ಬ ಬರೆದ ಕವಿತೆಗೆ  ಸಂಗೀತ ನಿರ್ದೇಶಕ ರಾಗ ಸಂಯೋಜಿಸುವುದೋ ಸಾಮಾನ್ಯವಾಗಿ ಆಗುವ ಸಂಗತಿಗಳು. ವಾಗ್ಗೇಯಕಾರ ಬರೀ ರಾಗ ಹೊಂದಿಸುವವನಲ್ಲ, ಬದಲಾಗಿ, ಸಂಗೀತ ಸಾಹಿತ್ಯ ಎರಡನ್ನೂ ಒಬ್ಬರೇ ಮಾಡುವುದರಿಂದಲೇ ವಾಕ್ = ಮಾತು, ಗೇಯ= ಹಾಡುವುದು ಕಾರ = ಮಾಡುವವನು – ಎಂಬ ಪಾರಿಭಾಷಿಕ ಪದದ ಬಳಕೆ ಇಲ್ಲಿ.

ಭಾರತೀಯ ಸಂಗೀತ ಎರಡು ಕವಲಾಗಲು ಆರಂಭಿಸಿದ್ದು ಸುಮಾರಾಗಿ ಹದಿನಾಲ್ಕನೇ ಶತಮಾನದ ವೇಳೆಗೆ ಎನ್ನೋಣ. ಹದಿನೈದು ಹದಿನಾರನೇ ಶತಮಾನಗಳಲ್ಲಿ ಈ ಉತ್ತರ ದಕ್ಷಿಣ ಭೇದಗಳು ಪ್ರಬಲವಾದವು. ಹೀಗೆ ದಾಕ್ಷಿಣಾತ್ಯ ಸಂಗೀತವು ರೂಪುಗೊಳ್ಳುತ್ತಿದ್ದಾಗ ಅದರಲ್ಲಿ ಪದ ಎಂಬ ರಚನಾ ಪ್ರಕಾರವನ್ನು ರೂಢಿಸಿದವರು ಕರ್ನಾಟಕದ ಹರಿದಾಸರು ಮತ್ತೆ ತೆಲುಗು ನಾಡಿನ ತಾಳ್ಳಪಾಕಂ ವಾಗ್ಗೇಯಕಾರರು. ಇಂದು ಕರ್ನಾಟಕ ಸಂಗೀತದಲ್ಲಿ ಅತಿ ಪ್ರಸಿದ್ಧವಾದ ಕೃತಿ ಎಂಬ ರಚನಾಪ್ರಕಾರಕ್ಕೂ ಈ ಪದ ಎಂಬುದರ ರಚನೆಯೇ ಮೂಲ ಸಾಮಗ್ರಿ.  ದುರದೃಷ್ಟವಶಾತ್, ಹರಿದಾಸರ ಎಲ್ಲ ರಚನೆಗಳ ಮೂಲ ಸಂಗೀತದ ಧಾಟಿಗಳು, ಸ್ವರ ಸಂಚಾರ ಸಮೇತವಾಗಿ ನಮಗೆ ಉಳಿದಿಲ್ಲ. ಹಾಗಾಗಿ ಇಂದು ಹಾಡುವ ಎಲ್ಲಾ ಹರಿದಾಸರ ದೇವರನಾಮಗಳು (ಪದ ಎನ್ನುವುದಕ್ಕೆ ಇದನ್ನು ಸಮಾನಾರ್ಥಕವಾಗಿ ಬಳಸುವುದುಂಟು) ಆಯಾ ದಾಸರು ಹಾಡಿದಂತೆಯೇ ಇವೆ ಎಂದು ಹೇಳುವುದು ಕಷ್ಟ. ಎಷ್ಟೋ ಪ್ರಸಿದ್ಧ ಪದಗಳು ಹತ್ತೊಂಬತ್ತು – ಇಪ್ಪತ್ತನೇ ಶತಮಾನದ ಸಂಗೀತಗಾರರಿಂದ ರೂಪಗೊಂಡವು. ಹಾಗಿದ್ದರೂ ದೇವೀ ಪರ ರಚನೆಗಳನ್ನು ಹೇಳುವಾಗ ಕೆಲವಾದರೂ ಹರಿದಾಸರ ರಚನೆಗಳನ್ನು ಪ್ರಸ್ತಾಪ ಮಾಡದೇ ಇರುವುದು ಖಂಡಿತ ತಪ್ಪಾಗುತ್ತದೆ!

ಹಾಗಾಗಿ ಪುರಂದರ ದಾಸರ ಶರಣೆಂಬೆ ವಾಣಿ, ಕನಕ ದಾಸರ  ವರವ ಕೊಡು ಎನಗೆ ವಾಗ್ದೇವಿ ಎಂಬ ರಚನೆಗಳ ಹೆಸರನ್ನಷ್ಟೇ ಪ್ರಸ್ತಾಪಿಸಿ ಮುಂದಕ್ಕೆ ಹೋಗುವೆ.

ಕರ್ನಾಟಕ ಸಂಗೀತ ತ್ರಿಮೂರ್ತಿಗಳೆನಿಸಿದ ತ್ಯಾಗರಾಜ-ಮುತ್ತುಸ್ವಾಮಿ ದೀಕ್ಷಿತ –  ಶಾಮಾಶಾಸ್ತ್ರಿ ಇವರು ರಚಿಸಿರುವ ಕೃತಿಗಳಲ್ಲಿ ದೇವಿಯ ಹಲ ರೂಪಗಳ ಬಗ್ಗೆ ಇರುವುದನ್ನು ಗಮನಿಸಬಹುದು. ಈ ವಿಷಯವೇ ವಿಸ್ತಾರವಾದದ್ದರಿಂದ ಎಲ್ಲ ವಾಗ್ಗೇಯಕಾರರನ್ನಾಗಲಿ, ಅವರ ಎಲ್ಲ ರಚನೆಗಳನ್ನಾಗಲಿ ಹೆಸರಿಸುವುದು ಆಸಾಧ್ಯ.  ಕೆಲವು ಪ್ರಸಿದ್ಧ, ಮತ್ತೆ ಕೆಲವು ಅಪ್ರಸಿದ್ಧ, ಒಟ್ಟಿನಲ್ಲಿ ಸುಂದರವಾದ ರಚನೆಗಳನ್ನು ತಿಳಿದುಕೊಳ್ಳುವ ಉದ್ದೇಶವಿದ್ದವರಿಗೆ ಈ ಮುಂದಿನ ಭಾಗ ಉಪಯುಕ್ತ.

ತ್ಯಾಗರಾಜರು ರಾಮ ಭಕ್ತರು. ಹಾಗಾಗಿ ಅವರದ್ದಾಗಿ ಸಿಗುವ ಸುಮಾರು ೮೦೦ ಕೃತಿಗಳಲ್ಲಿ ಸಿಂಹ ಪಾಲು ರಾಮನ ಮೇಲೆ ಇರುವುದು ನಿಜವೇ. ಅವರು ದೇವಿಯ ವಿವಿಧ ರೂಪಗಳ ಬಗ್ಗೆ ರಚಿಸಿರುವ ರಚನೆಗಳಲ್ಲಿ, ಅವರ ಊರಾದ ತಿರುವಯ್ಯಾರಿನ ತ್ಯಾಗರಾಜ ಸ್ವಾಮಿ ದೇವಸ್ಥಾನದ ಮುಖ್ಯ ದೇವಿಯಾದ ಧರ್ಮಸಂವರ್ಧನಿಯ ಮೇಲಿನ ರಚನೆಗಳನ್ನು ಮೊದಲು ಗಮನಿಸಬೇಕು. ಈ ದೇವಿಯ ಮೇಲೆ ತ್ಯಾಗರಾಜರ ಎಂಟು ರಚನೆಗಳು ಇವೆ. ಕರುಣ ಜೂಡವಮ್ಮ (ತೋಡಿ), ಪರಾಶಕ್ತಿ ಮನುಪರಾದ (ಸಾವೇರಿ), ಬಾಲೇ ಬಾಲೇಂದು ಭೂಷಣಿ ( ರೀತಿಗೌಳ) , ಶಿವೇ ಪಾಹಿಮಾಂ ಅಂಬಿಕೆ (ಕಲ್ಯಾಣಿ) ಮೊದಲಾದುವು ಈ ಗುಂಪಿನಲ್ಲಿ ಬಹಳ ಜನಪ್ರಿಯ ಕೃತಿಗಳು.

ತಿರುವೈಯ್ಯಾರಿಗೆ ಹತ್ತಿರದಲ್ಲಿಯೇ ಲಾಲ್ಗುಡಿ ಎಂಬ ಕ್ಷೇತ್ರವಿದೆ. ಅಲ್ಲಿಯ ಸಪ್ತರ್ಷೀಶ್ವರ ಮತ್ತು ಮಹಿತ ಪ್ರವೃದ್ಧ ಶ್ರೀಮತಿಯರನ್ನು ಸ್ತುತಿಸುವ ಐದು ಕೃತಿಗಳು ಲಾಲ್ಗುಡಿ ಪಂಚರತ್ನ ಎಂದು ಹೆಸರು ಪಡೆದಿವೆ.  ಈ ಐದರಲ್ಲಿ ಲಲಿತೇ ಶ್ರೀ ಪ್ರವೃದ್ಧೇ ಎಂಬ ಭೈರವಿ ರಾಗದ  ದೇವಿಯ ಪರವಾದ ರಚನೆ ಬಹಳ ಪ್ರಸಿದ್ಧ.

ತ್ಯಾಗರಾಜರು  ಒಮ್ಮೆ ಚೆನ್ನಪಟ್ಟಣಕ್ಕೆ (ಈಗಿನ ಚೆನ್ನೈ) ತಮ್ಮ ಶಿಷ್ಯನ ಮನೆಗೆ ಬಂದಾಗ, ಅಲ್ಲಿಗೆ ಸಮೀಪವಾದ ತಿರುವೊಟ್ರಿಯೂರಿನ ತ್ರಿಪುರಸುಂದರಿಯನ್ನು ದರ್ಶನ ಮಾಡಿದರು.  ಆ ದೇವಿಯ ಬಗ್ಗೆ ಅವರು ರಚಿಸಿರುವ ಐದು ಕೃತಿಗಳು ತಿರುವೊಟ್ರಿಯೂರು ಪಂಚರತ್ನ ಎಂದೇ ಹೆಸರಾಗಿವೆ. ಕನ್ನತಲ್ಲಿ (ಸಾವೇರಿ), ಸುಂದರಿ ನಿನ್ನು (ಆರಭಿ), ಸುಂದರಿ ನಿನ್ನಂದರಿಲೋ (ಬೇಗಡೆ), ಸುಂದರಿ ನೀ ದಿವ್ಯ ರೂಪಮುನು (ಕಲ್ಯಾಣಿ) ಮತ್ತು ದಾರಿನಿ ತೆಲುಸುಕೊಂಟಿ (ಶುದ್ಧಸಾವೇರಿ) – ಇವೇ ಆ ಐದು ರಚನೆಗಳು. ಎಲ್ಲವೂ ಸೊಗಸಾದ ರಚನೆಗಳಾಗಿದ್ದರೂ  ಕೊನೆಯ ಎರಡು ಬಹಳ ಹೆಚ್ಚು ಪ್ರಚಲಿತದಲ್ಲಿವೆ. ಶುದ್ಧಸಾವೇರಿಯ ದಾರಿನಿ ತೆಲುಸುಕೊಂಟಿ  ಕೃತಿಯಲ್ಲಿ ಇರುವ ಸಂಗತಿಗಳಂತೂ ಅತೀವ ಮನಮೋಹಕವಾಗಿದ್ದು ಆ ರಾಗದ ಎಲ್ಲ ಸಾಧ್ಯತೆಗಳನ್ನೂ ಮುಟ್ಟಿ ಒಂದು ಪೂರ್ಣ ಚಿತ್ರವನ್ನು ಮನಸ್ಸಿಗೆ ಮೂಡುವಂತೆ ಮಾಡುತ್ತದೆ.

ಸಂಗೀತ ತ್ರಿಮೂರ್ತಿಗಳಲ್ಲಿ ಎರಡನೆಯವರಾದ ಮುತ್ತುಸ್ವಾಮಿ ದೀಕ್ಷಿತರು ಶ್ರೀವಿದ್ಯಾ ಉಪಾಸಕರು. ಹಾಗಾಗಿ ಇವರ ರಚನೆಗಳಲ್ಲಿ ತಾಂತ್ರಿಕ  ಪೂಜಾ ವಿಧಿಯ ಅಂಶಗಳು ಕಂಡುಬರುತ್ತವೆ. ಹಲವಾರು ತೀರ್ಥ ಕ್ಷೇತ್ರಗಳಿಗೆ ಹೋದಾಗ, ಅಲ್ಲಿಯ ದೇವಿಯರ ಬಗ್ಗೆ, ದೇವಾಲಯಗಳ ಬಗ್ಗೆ, ಮೂರ್ತಿಗಳ ಬಗ್ಗೆ ವಿವರಣೆಗಳನ್ನು ಒಳಗೊಂಡಂತಹ ಕೃತಿಗಳನ್ನು ರಚಿಸಿದ್ದಾರೆ. ಇದರಲ್ಲಿ ವಿಶೇಷವೆಂದರೆ ಇವರ ವಿಭಕ್ತಿ ಸಮುದಾಯ ಕೃತಿಗಳು – ಎಂದರೆ ಒಂದೇ ದೇವ/ದೇವಿಯ ಬಗ್ಗೆ ಎಂಟೂ ವಿಭಕ್ತಿಗಳಲ್ಲಿ ಯೋಜಿತವಾಗಿರುವಂತಹ ಕೃತಿಗಳನ್ನು ಮಾಡಿರುವುದು ಇವರ ಹೆಚ್ಚಾಯ.

ಈ ಸಮುದಾಯ ಕೃತಿಗಳಲ್ಲಿ ಹೆಚ್ಚು ಪ್ರಸಿದ್ಧಿಯಲ್ಲಿರುವುದು ಕಮಲಾಂಬಾ ನವಾವರಣವೆಂದು ಹೆಸರಾದ, ತಿರುವಾರೂರಿನ ಕಮಲಾಂಬಾ ದೇವಿಯ ಮೇಲಿನ ರಚನೆಗಳು. ಒಂದು ಧ್ಯಾನ ಕೃತಿ, ಮತ್ತು ಎಂಟು ವಿಭಕ್ತಿಗಳಲ್ಲೂ ಒಂದೊಂದು ಕೃತಿ, ಮತ್ತು ಎಂಟೂ ವಿಭಕ್ತಿಗಳನ್ನೂ ಒಳಗೊಂಡ ಒಂದು ಕೃತಿ ಮತ್ತು ಒಂದು ಮಂಗಳ – ಹೀಗೆ ಒಟ್ಟು ಹನ್ನೊಂದು ಕೃತಿಗಳನ್ನು ಹೊಂದಿದ ಈ ನವಾವರಣ, ಕರ್ನಾಟಕ ಸಂಗೀತದ ರಕ್ತಿ ರಾಗಗಳಾದ ತೋಡಿ, ಆನಂದಭೈರವಿ, ಕಲ್ಯಾಣಿ, ಶಂಕರಾಭರಣ, ಕಾಂಭೋಜಿ, ಭೈರವಿ, ಪುನ್ನಾಗವರಾಳಿ, ಶಹಾನಾ, ಘಂಟಾ, ಆಹಿರಿ ಮತ್ತು ಶ್ರೀರಾಗ – ಈ ರಾಗಗಳಲ್ಲಿ ರಚಿತವಾಗಿದ್ದು, ಪ್ರತಿಯೊಂದು ಕೃತಿಯೂ ಆ ರಾಗದ ವಿಶ್ವಕೋಶವೇ ಆಗಿದೆ ಎಂದರೆ ಅತಿಶಯವಲ್ಲ. ಅದರಲ್ಲೂ, ಅಪರೂಪವಾದ ಘಂಟಾ ಮತ್ತು ಆಹಿರಿ ರಾಗಗಳ ಕೃತಿಗಳು, ಆಯಾ ರಾಗದ ಸಕಲ ಸ್ವರೂಪವನ್ನೂ ನಮ್ಮ ಮುಂದೆ ತೆರೆದಿಡುವ ಲಕ್ಷ್ಯಗಳಾಗಿ ನಿಂತಿವೆ.

ತಿರುವಾರೂರಿನ ತ್ಯಾಗರಾಜ ಸ್ವಾಮಿ ದೇವಸ್ಥಾನದಲ್ಲೇ ಇರುವ ನೀಲೋತ್ಪಲಾಂಬಾ ಸನ್ನಿಧಿಯ ಬಗ್ಗೆಯೂ ದೀಕ್ಷಿತರು ರಚಿಸಿರುವ ಎಂಟು ಕೃತಿಗಳನ್ನು ನೀಲೋತ್ಪಲಾಂಬಾ ವಿಭಕ್ತಿ ಕೃತಿಗಳು ಎಂದು ಕರೆಯುವುದು ರೂಢಿ. ಈ ಎಲ್ಲ ಕೃತಿಗಳೂ ಗೌಳ ಎಂದು ಕೊನೆಯಾಗುವ ಹೆಸರಿನ ರಾಗಗಳಲ್ಲಿರುವುದು ವಿಶೇಷ. ನಾರಾಯಣಗೌಳ, ರೀತಿಗೌಳ, ಕನ್ನಡಗೌಳ, ಕೇದಾರಗೌಳ, ಗೌಳ, ಮಾಯಾಮಾಳವಗೌಳ, ಪೂರ್ವಗೌಳ ಮತ್ತು ಛಾಯಾಗೌಳ – ಇವು ಈ ಗುಂಪಿನ ಗೃತಿಗಳಲ್ಲಿರುವ ರಾಗಗಳು. ಇದರಲ್ಲಂತೂ ಇರುವ ಪೂರ್ವಗೌಳ ರಾಗದ ರಚನೆ, ಬಹುಶಃ ಈ ರಾಗದಲ್ಲಿರುವ ಏಕೈಕ ರಚನೆ.  ಇದಲ್ಲದೇ ಶ್ರೀ ನೀಲೋತ್ಪಲ ನಾಯಿಕೇ ಎಂಬ, ರೀತಿಗೌಳ ರಾಗದಲ್ಲೇ ಮತ್ತೊಂದು (ಅದೂ ಈ ಗುಂಪಿಗೆ ಸೇರುತ್ತದೆ ಎಂದೂ, ಸೇರದು ಎಂದೂ ಭಿನ್ನಾಭಿಪ್ರಾಯವಿದೆ) ರಚನೆ ಕೂಡ ದೀಕ್ಷಿತರದಿದ್ದು, ಅದೂ ಕೂಡ ಜನಪ್ರಿಯವಾಗಿದೆ.

ಇವಲ್ಲದೇ, ಮಾಯಾವರಂ ನ ಅಭಯಾಂಬಾ ದೇವಿಯ ಮೇಲಿನ ರಚನೆಗಳು ಅಭಯಾಂಬಾ ವಿಭಕ್ತಿ ಕೃತಿಗಳೆಂದೂ, ಮದುರೈನಲ್ಲಿ ರಚಿಸಿರುವ ಮದುರಾಂಬಾ ಕೃತಿಗಳೂ ಇವೆ. ಎಲ್ಲ ವಿಭಕ್ತಿಗಳೂ ಇಲ್ಲದ್ದರಿಂದ, ಮದುರಾಂಬಾ ಕೃತಿಗಳಲ್ಲಿ ಕೆಲವು ಲುಪ್ತವಾಗಿದೆಯೇ, ಅಥವಾ ಇವು ವಿಭಕ್ತಿ ಕೃತಿಯಾಗಿ ರಚಿಸಿದ್ದಲ್ಲವೇ ಎಂಬುದರಲ್ಲೂ ಒಮ್ಮತವಿಲ್ಲ. ಇನ್ನು ಮದುರೈ ಮೀನಾಕ್ಷಿಯ ಮೇಲಿನ ಮಾಮವ ಮೀನಾಕ್ಷಿ ( ವರಾಳಿ) , ಮೀನಾಕ್ಷೀ ಮೇಮುದಂ ( ಗಮಕಕ್ರಿಯ)  ಕಚೇರಿಗಳಲ್ಲಿ ಬಹಳ ಕೇಳಿಬರುವ ರಚನೆಗಳು.

ಒಂದು ವಿಶೇಷವಾದ ಅಂಶ ಇಲ್ಲಿ ಪ್ರಸ್ತಾಪಿಸಲು ಯೋಗ್ಯ. ಮುತ್ತುಸ್ವಾಮಿ ದೀಕ್ಷಿತರು ಎಪ್ಪತ್ತೆರಡು ಮೇಳಗಳನ್ನು ಪ್ರತಿಪಾದಿಸಿದ ವೆಂಕಟಮಖಿಯ ಶಿಷ್ಯ ಪರಂಪರೆಯವರು. ಸುಮಾರು 1650ರಲ್ಲಿ, ವೆಂಕಟಮಖಿಯು, ಹನ್ನೆರಡು ಸ್ವರಸ್ಥಾನಗಳಿರುವ ಸಪ್ತಕದಲ್ಲಿ ಹಾಡಬಲ್ಲಂತಹ ಎಲ್ಲ ರಾಗಗಳನ್ನೂ ಈ ಎಪ್ಪತ್ತೆರಡು ಮೇಳಗಳಲ್ಲಿ ಅಡಕಮಾಡಬಹುದೆಂದೂ ತೋರಿಸಿಕೊಟ್ಟದ್ದು ಆತನ ಚತುರ್ದಂಡಿ ಪ್ರಕಾಶಿಕೆ ಎಂಬ ಗ್ರಂಥದಲ್ಲಿ. ಆದರೆ ಆಗಿನ್ನೂ , ಈ ಎಲ್ಲ ಎಪ್ಪತ್ತೆರಡೂ ಮೇಳಗಳಲ್ಲಿ ರಾಗಗಳು ಪ್ರಚಲಿತವಾಗಿ ಇರಲಿಲ್ಲ. ಈ ಗ್ರಂಥದಿಂದ ಸಂಗೀತಗಾರರಿಗೆ ಹೊಸ ರಾಗಗಳಲ್ಲಿ ಪ್ರಯೋಗವನ್ನು ಮಾಡುವಂತಹ ಅವಕಾಶ ದೊರೆಯಿತು. ಮುತ್ತುಸ್ವಾಮಿ ದೀಕ್ಷಿತರು, ಆ ಮೊದಲು ಬಳಕೆಯಲ್ಲಿ ಇಲ್ಲದ ಹಲವು ರಾಗಗಳಲ್ಲಿ, ಮತ್ತೆ ಬಹಳ ಹಿಂದೆ ಬಳಕೆಯಲ್ಲಿ ಇದ್ದು, ಹದಿನೆಂಟನೇ ಶತಮಾನದಲ್ಲಿ ಲುಪ್ತವಾದ ಹಲವು ರಾಗಗಳಲ್ಲಿ ಹೊಸದಾಗಿ ಲಕ್ಷ್ಯಕ್ಕಾಗಿ ರಚನೆಗಳನ್ನು ಮಾಡಿದರು. ಇವುಗಳಲ್ಲಿ ಹಲವು ರಚನೆಗಳು ತಂಜಾವೂರಿನ ಬೃಹದೀಶ್ವರ, ಮತ್ತು ಬೃಹದಂಬಿಕೆಯ ಮೇಲೆ ಮಾಡಿದಂತಹವು.  ಬೃಹದಂಬಿಕೆಯ ಮೇಲಿನ ಅಪರೂಪ ರಾಗದ ರಚನೆಗಳಾದ ಭೋಗಚ್ಛಾಯಾನಾಟಕಪ್ರಿಯೇ ( ಛಾಯಾನಾಟ), ಬೃಹದಂಬಾ ಮದಂಬಾ (ಭಾನುಮತಿ) ,  ಬೃಹನ್ನಾಯಕಿ ವರದಾಯಕಿ (ಅಂಧಾಳಿ), ಹಿಮಗಿರಿ ಕುಮಾರಿ (ರವಿಕ್ರಿಯಾ) , ಸಂತಾನ ಮಂಜರಿ ಶಂಕರಿ (ಸಂತಾನ ಮಂಜರಿ) ಮೊದಲಾದ ರಚನೆಗಳನ್ನು ಹೆಸರಿಸಬಹುದು.

ಹದಿನೆಂಟನೇ ಶತಮಾನದ ಇಬ್ಬರು ವಾಗ್ಗೇಯಕಾರೋತ್ತಮರ ಬಗ್ಗೆ ಮಾತಾಡಿದ ನಂತರ ಈಗ ಇಪ್ಪತ್ತನೇ ಶತಮಾನದ ಇಬ್ಬರು ವಾಗ್ಗೇಯಕಾರರ ಬಗ್ಗೆ ನೋಡೋಣ. ಅವರಲ್ಲೊಬ್ಬರು ತಮಿಳುನಾಡಿನ ಮೂಲದವರಾಗಿದ್ದರೂ, ಮೈಸೂರು ಒಡೆಯರ ಆಸ್ಥಾನ ವಿದ್ವಾಂಸರಾಗಿದ್ದ ಶ್ರೀ ಮುತ್ತಯ್ಯ ಭಾಗವತರು.

ಮೈಸೂರರಸರು ದಸರೆಯ ಆಚರಣೆಯೊಂದರಲ್ಲೇ ಅಲ್ಲ-  ವಿವಿಧ ಕಲಾಪ್ರಕಾರಗಳಿಗೆ ಕೊಡುತ್ತಿದ್ದ ಪ್ರೋತ್ಸಾಹದಲ್ಲೂ ಆ ಕಾಲದ ರಾಜ್ಯಗಳ ಮುಂಚೂಣಿಯಲ್ಲಿದ್ದರು. ಹದಿನೆಂಟು-ಹತ್ತೊಂಬತ್ತನೇ ಶತಮಾನಗಳಲ್ಲಿ ಮೈಸೂರು ವೀಣೆಯ ಬೆಡಗೆಂದಾಗುವುದಕ್ಕೂ ಇದೇ ಕಾರಣ. ಹಲವಾರು ವಿದ್ವಾಂಸರು ಹಾಗೇ ಮೈಸೂರರಸರ ಆಶ್ರಯ ಅರಸಿ ಬಂದದ್ದೂ ಉಂಟು. ಹಾಗೆ ಬಂದವರಲ್ಲಿ, ಹರಿಕೇಶನಲ್ಲೂರು ಮುತ್ತಯ್ಯ ಭಾಗವತರು ಪ್ರಮುಖರು. ಕೃಷ್ಣರಾಜ ಒಡೆಯರ ಆಸ್ಥಾನ ವಿದ್ವಾಂಸರಾಗಿ ಇವರು ಬಂದದ್ದರ ಬಗ್ಗೆ ಒಂದು ಕುತೂಹಲಕಾರಿ ಸಂಗತಿಯೊಂದಿದೆ.

ಮುತ್ತಯ್ಯ ಭಾಗವತರಿಗೆ ಮಹಾರಾಜರ ಮುಂದೆ ಕಚೇರಿ ಕೊಡುವ ಅವಕಾಶ ಸಿಕ್ಕ ದಿನ ಅವರ ಗಂಟಲಿಗೆ ಏನೋ ತೊಂದರೆಯಾಗಿ ಕಾರ್ಯಕ್ರಮ ಹೆಚ್ಚು ಕಳೆಕಟ್ಟಲಿಲ್ಲ. ಸಾಧಾರಣವಾಗಿ ಅರಮನೆಯಲ್ಲಿ ಹಾಡುವ ವಿದ್ವಾಂಸರಿಗೆ ಅವರಿಗೆ ತಕ್ಕ ಮರ್ಯಾದೆ ಕೊಡಲಾಗುತ್ತಿತ್ತು. ಆ ರೀತಿ ಅವರಿಗೂ ಮರ್ಯಾದೆ ಮಾಡಿ ಕಳಿಸಲಾಯಿತಂತೆ. ಭಾಗವತರಿಗೆ ಸ್ವಲ್ಪ ನಿರಾಸೆಯೇ ಆಯಿತು. ನಂತರ ಕೆಲವು ದಿನಗಳ ನಂತರ, ಅವರು ಚಾಮುಂಡಿ ಬೆಟ್ಟದ ಮೇಲೆ ದೇವಾಲಯದಲ್ಲಿ ತಮ್ಮ ಪಾಡಿಗೆ ಹಾಡಿಕೊಳ್ಳುತ್ತಿದ್ದಾಗ ಆ ದಿನ ದೇವಿಯ ದರ್ಶನಕ್ಕೆ ಬಂದ ಒಡೆಯರಿಗೆ ಅದು ಕೇಳಿ ಅವರ ಮೇಲೆ ಬಂದಿದ್ದ ಅಭಿಪ್ರಾಯ ಬದಲಾಯಿತಂತೆ. ನಂತರ ಅವರನ್ನು ತಮ್ಮ ಆಸ್ಥಾನ ವಿದ್ವಾಂಸರನ್ನಾಗಿ ಮಾಡಿಕೊಂಡರಂತೆ. ಇದು ನಡೆದದ್ದು 1927ರಲ್ಲಿ.

ಮಹಾರಾಜರು ತಮ್ಮ ಇಷ್ಟದೇವಿ ಮೈಸೂರಿನ ನಗರ ದೇವತೆ, ಚಾಮುಂಡಿಯ ಮೇಲೆ ಕನ್ನಡ ಭಾಷೆಯಲ್ಲಿ ಅಷ್ಟೋತ್ತರ ಕೃತಿಗಳನ್ನು ರಚಿಸಲು ಕೇಳಿದರಂತೆ, ಅಂತೆಯೇ ಮುತ್ತಯ್ಯ ಭಾಗವತರು ನೂರ ಎಂಟು ಕೃತಿಗಳನ್ನು ರಚಿಸಿದರು. ಮುತ್ತಯ್ಯ ಭಾಗವತರಿಗೆ ಕನ್ನಡ ಬಾರದಿದ್ದ ಕಾರಣ,  ಕನ್ನಡದಲ್ಲಿರುವ ಈ ಕೃತಿಗಳ ಸಾಹಿತ್ಯವನ್ನು ದೇವೋತ್ತಮ ಜೋಯಿಸರೆಂಬ ಅರಮನೆಯ ವಿದ್ವಾಂಸರು ಬರೆದುಕೊಟ್ಟರು.

ಇವುಗಳಲ್ಲಿ ಭುವನೇಶ್ವರಿಯ ನೆನೆಮಾನಸವೆ ( ಮೋಹನ ಕಲ್ಯಾಣಿ), ಸಾರಸ ಮುಖಿ (ಗೌಡ ಮಲ್ಹಾರ್) , ಜಾಲಂಧರ ಸುಪೀಠಸ್ಥೇ ( ವಲಜಿ), ಸುಧಾಮಯಿ ಸುಧಾನಿಧಿ ( ಅಮೃತವರ್ಷಿಣಿ), ವಿಜಯಾಂಬಿಕೆ ವಿಮಲಾತ್ಮಿಕೆ( ವಿಜಯ ನಾಗರಿ), ರತ್ನಕಂಚುಕಧಾರಿಣಿ (ಕಾಂಭೋಜಿ) – ಮೊದಲಾದ ಕೃತಿಗಳು ಬಹಳ ಜನಪ್ರಿಯವಾಗಿವೆ. ಇವಲ್ಲದೇ, ಇದೇ ಚಾಮುಂಡೇಶ್ವರಿ ದೇವಿಯ ಮೇಲೆಯೇ ಇವರು ರಚಿಸಿರುವ ಮಾತೇ ಮಲಯಧ್ವಜ ಪಾಂಡ್ಯ ಸಂಜಾತೇ ಎಂಬ ಕಮಾಚ್ ರಾಗದ ದರುವರ್ಣವಂತೂ ಸುಂದರವಾದ ಚಿಟ್ಟೆಸ್ವರ, ಎತ್ತುಗಡೆ ಸ್ವರಗಳಿಂದ ಕೂಡಿದ್ದು ಮನಮೋಹಕವಾಗಿದೆ.

ಇನ್ನು ಇಪ್ಪತ್ತನೇ ಶತಮಾನದ ಎರಡನೆ ಭಾಗಕ್ಕೆ ಬಂದರೆ ವಿದ್ವಾನ್ ಬಾಲಮುರಳಿಕೃಷ್ಣರಂತಹ ವಾಗ್ಗೇಯಕಾರರು ಅನುಪಮರೆಂದೇ ಹೇಳಬೇಕು. ತ್ಯಾಗರಾಜರ ಪರಂಪರೆಯಲ್ಲೇ ಬಂದ ಶ್ರೀ ಬಾಲಮುರಳಿಕೃಷ್ಣ, ತ್ಯಾಗರಾಜರಂತೆಯೇ ಪ್ರಯೋಗಶೀಲರು. ತ್ಯಾಗರಾಜರು ತಮ್ಮ ಕಾಲದಲ್ಲಿ ಇಲ್ಲದ ಹಲವು ಹೊಸರಾಗಗಳನ್ನು ಬೆಳಕಿಗೆ ತಂದಂತೆ ಇವರೂ ಕೂಡ ಅನೇಕ ಹೊಸರಾಗಗಳನ್ನು ಬೆಳಕಿಗೆ ತಂದವರು. ತ್ಯಾಗರಾಜರಂತೆ ಕೇವಲ ಕೃತಿ ಎಂಬ ರಚನಾ ಪ್ರಕಾರಕ್ಕೆ ಮಾತ್ರ ಕಟ್ಟುಬೀಳದೆ, ಕೃತಿ, ವರ್ಣ, ತಿಲ್ಲಾನ, ರಾಗಮಾಲಿಕೆ ಮೊದಲಾದ ಎಲ್ಲ ಪ್ರಕಾರ ಗಳಲ್ಲೂ ಅತಿ ಸುಂದರ ರಚನೆಗಳನ್ನು ಮಾಡಿದ್ದಾರೆ.ತ್ಯಾಗರಾಜರ ಪರಂಪರೆಯವರಾದರೂ, ರಾಗಮುದ್ರೆಯನ್ನು ಸೂಚಿಸುವುದರಲ್ಲಿ ಬಾಲಮುರಳಿ ಅವರು ಮುತ್ತುಸ್ವಾಮಿ ದೀಕ್ಷಿತರ ಮೇಲ್ಪಂಕ್ತಿಯನ್ನು ಅನುಸರಿಸಿದ್ದಾರೆ. ಹಾಗಾಗಿ ರಾಗದ ಹೆಸರು ರಚನೆಯಲ್ಲಿ ಅರ್ಥಬದ್ಧವಾಗಿ ಸೇರಿಕೊಳ್ಳುವುದನ್ನು ನಾವು ಕಾಣುತ್ತೇವೆ.

ಬಾಲಮುರಳೀಕೃಷ್ಣ ಅವರ  ರಚನೆಗಳಲ್ಲಿ ಬಹುಪಾಲು ದೇವಿಯ ಪರವಾಗಿರುವುದನ್ನು ನೋಡಬಹುದು. ಕೆಲವನ್ನು ಮಾತ್ರ ಇಲ್ಲಿ ಪ್ರಸ್ತಾಪ ಮಾಡುವೆ. ಪ್ರಣಮಾಮ್ಯಹಂ ಶ್ರೀ ಪಂಕೇರುಹಾಸನಾಂ ( ವಾಗಧೀಶ್ವರಿ), ಶ್ರೀ ವಾಣೀ ಪುಸ್ತಕ ಪಾಣೀ ( ಧವಳಾಂಬರಿ) – ಈ ಎರಡೂ ಸರಸ್ವತೀ ಪರವಾದ ಕೃತಿಗಳಲ್ಲೂ ರಾಗಮುದ್ರೆಯು ‘ವರಕವಿನುತ ಚರಣಾಂ ವಾಗಧೀಶ್ವರೀಂ’ , ‘ಧವಳಾಂಬರಿ ಮುರಳೀರವಹಿತೇ’ ಎಂದೂ ಕಂಡುಬರುತ್ತವೆ. ಇದೇ ರೀತಿಯ ಮತ್ತೆ ಕೆಲವು ಉದಾಹರಣೆಗಳನ್ನು ಕೊಡಬೇಕಾದರೆ, ಈಶ್ವರಿ ಜಗದೀಶ್ವರಿ ಎಂಬ ಕೃತಿಯಲ್ಲಿ ‘ವನಸ್ಪತಿ  ಪ್ರಿಯೇ’ ಎಂದು, ಕುಮಾರುನಿವಲೆನು ಗಾವವೇ ಎಂಬ ರಚನೆಯಲ್ಲಿ ‘ವಿಜಯಪುರಿ ನಿಲಯೆ ವಕುಳಾಭರಣೇ’ ಎಂದು,  ನಳಿನ ನಯನಿ ನಮೋಸ್ತುತೆ ಎಂಬ ರಚನೆಯಲ್ಲಿ ‘ನಠಭೈರವಿ ನಿಗಮನುತೇ’ ಎಂದು, ರಕ್ಷಮಾಂ ದಾಕ್ಷಾಯಿಣೀ ಎಂಬ ರಚನೆಯಲ್ಲಿ ‘ನಾರಾಯಣೀ ನಗಾನಂದಿನೀ’  ಎಂದು,  ಶ್ಯಾಮಲಾಂಗಿ ಜಲಜ ಲೋಚನಿ, ತಾಮ್ರ ಲೋಚನಿ ಲತಾಂಗಿ – ಈ ರಚನೆಗಳು ಆರಂಭವಾಗುವಲ್ಲೇ –  ಹೀಗೆ ಅಳವಡಿಸಿರುವ ಈ ರಾಗಮುದ್ರೆಗಳು ಗಮನಾರ್ಹ.

ಬಾಲಮುರಳಿ ಅವರ ಇನ್ನಷ್ಟು ದೇವಿ  ರಚನೆಗಳನ್ನು ಹೆಸರಿಸಬೇಕಾದರೆ, ಲವಂಗಿ ರಾಗದ ಓಂಕಾರಾಕಾರಿಣಿ, ಪೂರ್ವಿ ಕಲ್ಯಾಣಿ ರಾಗದ  ನೀದಯರಾದಾ, ಗಂಭೀರನಾಟ ರಾಗದ ಅಮ್ಮಾ ಆನಂದದಾಯಿನಿ ಎಂಬ ವರ್ಣ, ಕಮಾಚ್ ರಾಗದ ಅಮ್ಮಾ ನಿನ್ನು ಕೋರಿಕ – ಇವುಗಳನ್ನು ಮರೆಯುವಂತಿಲ್ಲ.

ಸಂಗೀತದ ಬಗ್ಗೆ ಮಾತಾಡುವುದು, ಬರೆಯುವುದು ಕಷ್ಟಸಾಧ್ಯ. ಆದರೆ ಕೇಳಿ ಆನಂದಿಸುವುದು ಸುಲಭ!. ಕರ್ನಾಟಕ ಸಂಗೀತದಲ್ಲಿ ಇರುವ ಎಲ್ಲ ವಾಗ್ಗೇಯಕಾರರ ಕಿರು ಪರಿಚಯವನ್ನು ಒದಗಿಸುವುದೂ  ಇಂತಹ ಒಂದು ಬರಹದಲ್ಲಿ ಆಗದ ಮಾತು. ಉದಾಹರಣೆಗೆ, ಮೈಸೂರಿನ ಕೊನೆಯ ಮಹಾರಾಜರಾದ ಶ್ರೀ ಜಯಚಾಮರಾಜೇಂದ್ರ ಒಡೆಯರು, ಸ್ವತಃ ವಾಗ್ಗೇಯಕಾರರು ಮತ್ತು ಶ್ರೀವಿದ್ಯಾ ಉಪಾಸಕರು. ಸುಮಾರು ನೂರು ಕೃತಿಗಳನ್ನು ಅವರು ರಚಿಸಿದ್ದಾರೆ. ದೀಕ್ಷಿತರ ರಚನೆಗಳಂತೆಯೇ ಇವೂ ಕೂಡ ಉಪಾಸನಾ ಮಾರ್ಗಲಕ್ಷಣಗಳನ್ನು ಅನುಸರಿಸಿ ರಚಿಸಿದ ಕೃತಿಗಳು. ಬಹುಶಃ ಇವಕ್ಕೇ ಒಂದು ಬರಹವನ್ನು ಮೀಸಲಿಡುವುದು ಉಚಿತ ಎನ್ನಿಸುತ್ತೆ.  ಹಾಗಾಗಿಯೇ, ಕೆಲವು ವಾಗ್ಗೇಯಕಾರರು, ಮತ್ತೆ ಅವರ ಕೆಲವು ಕೃತಿಗಳ ಬಗ್ಗೆ ಮಾತ್ರ ಇಲ್ಲಿ ಪ್ರಸ್ತಾಪಿಸುವುದಾಯಿತು.

ಹೀಗೇ ಮತ್ತೆ ಇಲ್ಲಿ ಭೇಟಿಯಾಗುತ್ತಿರೋಣ, ಇಂತಹದ್ದೇ ಸಂಗೀತ-ಸಾಹಿತ್ಯ ವಿಷಯಗಳ ಬಗ್ಗೆ ಮಾತಾಡುತ್ತಿರೋಣ. ಹಿಂದೆ ಇದ್ದಂತೆ ಈಗ ಮಾಹಿತಿಗೆ ಬರವಿಲ್ಲ. ಕೇಳಲು ಕಷ್ಟವಿಲ್ಲ. ಇಲ್ಲಿ ಪ್ರಸ್ತಾಪಿಸಿದ ರಚನೆಗಳೆಲ್ಲ ನಿಮಗೆ ಅಂತರ್ಜಾಲದಲ್ಲಿ ಸುಲಭವಾಗಿ ಕೇಳಲು ಸಿಗುವಂತಹವು. ಇದನ್ನು ಓದಿದ ನೀವು, ಇವುಗಳಲ್ಲಿ ಕೆಲವನ್ನಾದರೂ ಕೇಳಿ ಆನಂದಿಸಿದರೆ, ಈ ಬರಹದ ಉದ್ದೇಶ ಸಾರ್ಥಕ.

 

(Image credit: Vedicfeed.com)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply