close logo

ಪುಸ್ತಕ ಪರಿಚಯ – How to Love in Sanskrit

 ಸಂಸ್ಕೃತ ಭಾಷೆಯಲ್ಲಿ ಸಾವಿರಾರು ವರ್ಷಗಳಿಂದ ಪದ್ಯಕಾವ್ಯಗಳು ಬೆಳೆದುಬಂದಿವೆ. ಇಂದು, ಹಲವರು ಸಂಸ್ಕೃತವೆಂದರೆ ಕೇವಲ ಧಾರ್ಮಿಕ, ಪೌರಾಣಿಕ ವಿಷಯಗಳ ಬಗ್ಗೆ ಮಾತ್ರ ಎಂದು ತಪ್ಪಾಗಿ ಭಾವಿಸುವುದಿದೆ. ಆದರೆ, ಸಂಸ್ಕೃತ ಭಾಷೆಯ ಹರಹು ಬಹಳ ದೊಡ್ಡದು . ಅದರಲ್ಲೂ ಪ್ರೀತಿ-ಪ್ರೇಮದ ವಿಷಯಗಳು ಸಂಸೃತ ಕಾವ್ಯಪರಂಪರೆಯಲ್ಲಿ ಹಾಸುಹೊಕ್ಕಾಗಿವೆ . ನವರಸಗಳಲ್ಲಿ ಶೃಂಗಾರ ರಸಕ್ಕೆ ರಸರಾಜನೆಂಬ ಹೆಸರನ್ನು ಲಾಕ್ಷಣಿಕರು ಕೊಟ್ಟಿರುವಾಗ ಅದರ ಪ್ರಾಮುಖ್ಯತೆ ಅರಿವಾಗದಿರದು.

ಈ ವರ್ಷದ ವ್ಯಾಲೆಂಟೈನ್ ದಿನದಂದು  ( ಈಚೆಗೆ ಭಾರತದಲ್ಲೂ ಅದು ‘ಜೋಡಿಗಳ ದಿನ’ ‘ಪ್ರೇಮಿಗಳ ದಿನ’ ಎಂದೆಲ್ಲ ಪ್ರಸಿದ್ಧವಾಗುತ್ತಿರುವುದುಂಟು) ಹಾರ್ಪರ್ ಕಾಲಿನ್ಸ್ ನಿಂದ ಪ್ರಕಟವಾಗುತ್ತಿರುವ ಹೊಸ ಪುಸ್ತಕ  ಅನೂಷಾ ರಾವ್ ಮತ್ತು ಸುಹಾಸ್ ಮಹೇಶ್ ಅವರು ಬರೆದಿರುವ ಇಂಗ್ಲಿಷ್ ಪುಸ್ತಕ  “How to Love in Sanskrit ‘ ವು ಸಂಸ್ಕೃತದಿಂದ ಇಂಗ್ಲಿಷ್ ಗೆ ಅನುವಾದಿಸಿರುವ ಪದ್ಯಗಳ ಸಂಕಲನ ಹಲವು ಕಾರಣಗಳಿಂದ ಮನಸೆಳೆಯುತ್ತದೆ.

‘ಅನುವಾದಕರ ಕಾರ್ಯಾಗಾರ’ (Translator’s Workshop) ಎಂಬ ಹೆಸರಿನ ಮುನ್ನುಡಿಯಲ್ಲಿ ಅನುವಾದಕರು ಹೇಳಿರುವಂತೆ , ‘ಅನುವಾದ ಎನ್ನುವುದು ಒಂದು ಮಟ್ಟಕ್ಕೆ ರಾಜಿ ಮಾಡಿಕೊಳ್ಳುವುದು’ – ಏಕೆಂದರೆ ಭಾಷೆಗಳು ಕೆಲಸ ಮಾಡುವುದೇ ಹಾಗೆ. ಒಂದು ಭಾಷೆಯಲ್ಲಿ ಸುಂದರವೆನ್ನಿಸುವುದನ್ನು ಅದೇ ರೀತಿ ಹೇಳಿದರೆ ಇನ್ನೊಂದು ಭಾಷೆಯಲ್ಲಿ ಅಷ್ಟೇ ಸುಂದರವೆನಿಸಬೇಕೆಂದಿಲ್ಲ. . ಆದರೆ, ಅನೂಷಾ ಮತ್ತು ಸುಹಾಸ್ ಅವರು ಈ ಪುಸ್ತಕದಲ್ಲಿ  ಬಹಳ ಹೆಚ್ಚು ರಾಜಿ ಮಾಡಿಕೊಳ್ಳದೆ ಉತ್ತಮವಾಗಿ ನಿಭಾಯಿಸಿರುವುದು, ನಾವು ಮುಖ್ಯವಾಗಿ ಗಮನಿಸಬೇಕಾಗಿದೆ. ಅವರ ಮಾತುಗಳನ್ನೇ ನೋಡುವುದಾದರೆ, “ಸಂಸ್ಕೃತದಲ್ಲಿ ಸಾಗರದಷ್ಟು ಸಾಹಿತ್ಯವಿದ್ದರೂ, ಅದರಲ್ಲಿ ಇನ್ನೊಂದು ಭಾಷೆಗ ಚೆನ್ನಾಗಿ ಅನುವಾದ ಮಾಡಲಿಕ್ಕಾಗುವುದು ಒಂದು ಡಬರಿಯಷ್ಟೇ”. ಹಾಗಾಗಿ ಎಂಬತ್ತಕ್ಕೂ ಹೆಚ್ಚು ಮೂಲ ಗ್ರಂಥಗಳಿಂದ ಇಲ್ಲಿರುವ ಪದ್ಯಗಳನ್ನು ಆಯ್ದುಕೊಳ್ಳಲಾಗಿದೆ. ಈ ಎಂಭತ್ತು ಮೂಲಗ್ರಂಥಗಳನ್ನು ಆಯ್ಕೆ ಮಾಡಲು ಲೇಖಕ ದಂಪತಿ ನೂರಾರು ಗ್ರಂಥಗಳನ್ನು  ಶೋಧಿಸಿದ್ದಾರೆ ಎಂದು ತಿಳಿದುಕೊಳ್ಳಬಹುದು. ಸಂಸ್ಕೃತವಷ್ಟೇ ಅಲ್ಲದೇ ಪ್ರಾಕೃತ, ಪಾಲಿ ಮತ್ತು ಅಪಭ್ರಂಶಗಳಿಂದ ಅನುವಾದಿಸಿದ ಪದ್ಯಗಳೂ ಈ ಪುಸ್ತಕದಲ್ಲಿವೆ.

ಇನ್ನು, ಸಂಸ್ಕೃತದಿಂದ ಆಂಗ್ಲಭಾಷೆಗೆ ಅನುವಾದಿಸುವುದು ಒಂದು ಕಷ್ಟವಾದ ಕೆಲಸವೇ . ಸಂಸ್ಕೃತದಿಂದ ಬೇರೆ ಭಾರತೀಯ ಭಾಷೆಗಳಿಗೆ ಅನುವಾದ ಮಾಡುವಾಗ ಇಲ್ಲದ ಹೆಚ್ಚು ಮಟ್ಟದ ತಡೆಗೋಡೆಯನ್ನ ಇಂಗ್ಲಿಷ್ ಗೆ ಅನುವಾದಿಸುವಾಗ ದಾಟಬೇಕಾಗುತ್ತದೆ. ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿರುವ ಒಬ್ಬ ಅನುವಾದಕನಾಗಿ** ಈ ಮಾತನ್ನು ನಾನು ನನ್ನ ಸ್ವಂತ ಅನುಭವದಿಂದಲೇ ಹೇಳುತ್ತಿದ್ದೇನೆ. ಯಾವುದನ್ನು ಅನುವಾದ ಮಾಡಿದರೆ ಅದು ಚೆನ್ನಾಗಿ ಬರುತ್ತದೆ ಎಂದು ಹುಡುಕುವುದೇ ಒಂದು ದೊಡ್ಡ  ಪರಿಶ್ರಮ. ಈ ವಿಷಯದಲ್ಲಿ  ಅನೂಷಾ ಮತ್ತೆ ಸುಹಾಸ್ ಜಯಶಾಲಿಗಳಾಗಿದ್ದಾರೆ. . ಅವರ  “ಅನುವಾದಕರ ಕಾರ್ಯಾಗಾರ” ದಲ್ಲಿ ನೂರಾರೇಕೆ ಸಾವಿರಾರು ಅತ್ಯುತ್ತಮ ಪದ್ಯಗಳನ್ನು ಕೂಲಂಕಶವಾಗಿ ಪರಿಶೀಲಿಸಿ, ಅದರಲ್ಲಿ ಅನುವಾದಕ್ಕೆ ಅತಿ ಚೆನ್ನಾಗಿ ಹೊಂದಾಣಿಕೆ ಆಗುವುದನ್ನು ಮಾತ್ರ  ಹೆಕ್ಕಿ, ಬಹಳಷ್ಟನ್ನು ಅವು ಅನುವಾದದಲ್ಲಿ ಮೆಚ್ಚಿಗೆಯಾಗುವಂತೆ ಬರೆಯಲಾಗದ ಕಾರಣಕ್ಕಾಗಿ ಕೈಬಿಟ್ಟಿರುವುದು  ಪುಸ್ತಕದ ಕೊನೆಯಲ್ಲಿ ಕೊಟ್ಟಿರುವ ಆಧಾರಗ್ರಂಥಗಳ ಪಟ್ಟಿಯಿಂದ ಅರಿಯಬಹುದು.

“How to Love in Sanskrit” ನಲ್ಲಿ ಅನುವಾದಕರ ಗುರಿ ಅತಿ ಕಡಿಮೆ ಪದಗಳಲ್ಲಿ ಆದಷ್ಟೂ ಹೆಚ್ಚು ಹೇಳುವುದಾಗಿದೆ. ಅದರ ಜೊತೆಗೆ ಎರಡು ಸಾವಿರ ವರ್ಷಗಳ ಹಿಂದೆ ಬರೆದಿರುವ ಪದ್ಯಗಳನ್ನು ಇವತ್ತಿನ ಓದುಗರಿಗೆ ಸುಲಭವಾಗಿ ಅರ್ಥ ಮಾಡಿಸಲು ಎಷ್ಟೋ  ಪದ್ಯಗಳ ಸಂದರ್ಭವನ್ನು ಆಧುನಿಕ ಕಾಲಕ್ಕೆ ತಂದಿರುವುದು. ಇದರಲ್ಲಿ ಸಾಧಕಗಳಿದ್ದಂತೆ ಬಾಧಕಗಳೂ ಇವೆ. ಆದರೂ, ಹೆಚ್ಚಾಗಿ ಇಂಗ್ಲಿಷ್ ನ್ನು ತಾಯಿನುಡಿ ಅಲ್ಲದಿದ್ದರೂ, ಮೊದಲ ಭಾಷೆಯಾಗಿ ಕಲಿಯುತ್ತಿರುವ ಇಂದಿನ ಪೀಳಿಗೆಯ ಓದುಗರಿಗೆ ಈ ಬದಲಾವಣೆಗಳು ಮೆಚ್ಚುಗೆ ಆಗುವುದೆಂದು ನನ್ನ ಅನಿಸಿಕೆ. ಈ ಕಾರಣಕ್ಕೆ, ಸಂಸ್ಕೃತ ಮೂಲದಲ್ಲಿ ಕಾಣುವ ಪದಗಳ ವಿಜೃಂಭಣೆಯನ್ನು ಇಲ್ಲಿನ ಅನುವಾದಗಳಲ್ಲಿ ನೀವು ಕಾಣಲಾರಿರಿ. ಅಲ್ಲದೆ ಸಂಸ್ಕೃತದಲ್ಲಿ ಕಾಣುವ ಅದೇ ಪದ್ಯಾಲಂಕಾರಗಳೂ ಕಾಣದೇ ಹೋಗಬಹುದು.

ಆದರೆ , ಈ ಮೊದಲು ಭಾರತದ ಸಂಸ್ಕೃತಿಯ ಪರಿಚಯವಿಲ್ಲದ ಸಮಯದಲ್ಲಿ,  ಎಷ್ಟೋ ಅನುವಾದಕರು ಸಂಸ್ಕೃತದಿಂದ ಇಂಗ್ಲಿಷ್ ಗೆ ಅನುವಾದಿಸುವಾಗ ಮಾಡಿರುವ ತಪ್ಪುಗಳು ಇಲ್ಲಿ ಕಂಡು ಬಂದಿಲ್ಲ. ಅದಕ್ಕಾಗಿ ನಾನು ಅನೂಷಾ ಮತ್ತು ಸುಹಾಸ್ ಅವರನ್ನ ಅಭಿನಂದಿಸಬಯಸುವೆ. ನಂತರ ಇಂತಹ ಕೆಲವು ಪದ್ಯಗಳ ಅನುವಾದಗಳ ಉದಾಹರಣೆಯನ್ನು ಕೊಡಲಾಗುವುದು.

ಸಂಸ್ಕೃತ ಪದ್ಯಗಳಲ್ಲಿ ಇರುವ ಪ್ರಮುಖ ಅಂಶಗಳಾದ ಛಂದಸ್ಸು ಮತ್ತು ಶಬ್ದಾಲಂಕಾರಗಳ ಗೊಡವೆಗೆ ಬೇಕೆಂದೇ ಹೋಗುವುದಿಲ್ಲ ಎಂದು ಅನುವಾದಕರು ಇಲ್ಲಿ ಮೊದಲೇ ಹೇಳಿಬಿಟ್ಟಿದ್ದಾರೆ. ಇದು ಬಹುಪಾಲು ಅನುಕೂಲವಾಗಿಯೇ ಪರಿಣಮಿಸಿದ್ದರೂ, ಸಂಸ್ಕೃತ ಪದ್ಯಗಳ ಓದುಗನಾಗಿ, ಮತ್ತು ಅನುವಾದಕನಾಗಿ ನನಗೆ, ಕೆಲವು ಪದ್ಯಗಳಲ್ಲಾದರೂ, ಇಂಗ್ಲಿಷ್ ಭಾಷೆಗೆ ಹೊಂದಿಕೊಳ್ಳಲಾಗುವ ಪದಲಾಲಿತ್ಯವುಳ್ಳ ಛಂದೋಬಂಧವನ್ನು ಬಳಸಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು, ಜೊತೆಗೆ ಓದುಗರಿಗೂ ಅಂಥ ಪದ್ಯಗಳಲ್ಲಿ ಇರುವ ಸೊಗಸಿನ ಪರಿಚಯ ಆಗುತ್ತಿತ್ತು ಎಂದೆನಿಸಿತು.

ಇವತ್ತಿನ ಓದುಗರ ಮನಸೆಳೆಯುವಂತೆ ಈ ಪುಸ್ತಕದಲ್ಲಿರುವ 218 ಅನುವಾದಗಳನ್ನು “How to Flirt”, “How to Keep it a Secret”, “How to Daydream”, “How to Yearn”,“How to Quarrel”, “How to Make Love” , “How to Make it Work” “How to Break up” and “How to Let Go” ಎಂಬ ತಕ್ಕ ಹೆಸರುಗಳಲ್ಲಿ ವಿಭಜಿಸಲಾಗಿದೆ. . ಮೂಲವು  ಬಹುಪಾಲು ಪದ್ಯಗಳೇ ಆಗಿದ್ದರೂ ಕೆಲಗದ್ಯಭಾಗಗಳ ಅನುವಾದವೂ ಇವೆ ( ಸಂಸ್ಕೃತ ಕಾವ್ಯವು ಗದ್ಯವೂ ಆಗಿರಬಹುದು ಎನ್ನುವ ದೃಷ್ಟಿಯಲ್ಲಿ ಇದು ಸರಿಯೂ ಕೂಡ). ವೇದ, ರಾಮಾಯಣ, ಪುರಾತನ ಕವಿಗಳಾದ ಕಾಳಿದಾಸ, ಶೂದ್ರಕ, ಭವಭೂತಿಯಿಂದ ಹಿಡಿದು ಇಂದಿನ ಕವಿಗಳಾದ ಶತಾವಧಾನಿ ಗಣೇಶ್, ಡಾ.ಬಲರಾಮ್ ಶುಕ್ಲ ವರೆಗೂ, ಸಂಕಲನ ಗ್ರಂಥಗಳಾದ ಸದುಕ್ತಿ ಕರ್ಣಾಮೃತ, ಸೂಕ್ತಿ ಮುಕ್ತಾವಳಿ, ಸುಭಾಷಿತರತ್ನಭಾಂಡಾಗಾರ ಮೊದಲಾದುವುಗಳಿಂದ, ಮತ್ತು  ಗಾಹಾ ಸತ್ತಸಯಿ (ಗಾಥಾ ಸಪ್ತಶತಿ) ಮೊದಲಾದ ಪ್ರಾಕೃತ ಗ್ರಂಥಗಳಿಂದ ಈ ಮೂಲ ಭಾಗಗಳನ್ನು ತೆಗೆದುಕೊಳ್ಳಲಾಗಿದೆ. ಮೂಲ ಪದ್ಯಗಳನ್ನು ಪುಸ್ತಕದ ಕೊನೆಯಲ್ಲಿ ಕೊಡಲಾಗಿದೆ. ನನಗೇನೋ ಇವು ಆಯಾ ಪುಟಗಳಲ್ಲೇ ಕೊಟ್ಟಿದ್ದಿದ್ದರೆ, ಅದರಲ್ಲೂ ಸಂಸ್ಕೃತ ಓದುಗರಿಗೆ ಪರಿಚಯವಾಗಿರುವ ಲಿಪಿಯಲ್ಲೇ ಕೊಟ್ಟಿದ್ದರೆ ಇನ್ನೂ ಹೆಚ್ಚಾಗಿ ಚೆನ್ನಾಗಿರುತ್ತಿತ್ತು ಎನ್ನಿಸಿತು.

ಮೂಲ ಗ್ರಂಥಗಳ ಹೆಸರನ್ನು ಕೊಡುವಾಗ ಪುಸ್ತಕಗಳ ಹೆಸರುಗಳನ್ನು ಇಂಗ್ಲಿಷ್ ಗೆ ಅನುವಾದಿಸದೇ ಹೋಗಿದ್ದರೆ ಮತ್ತೂ ಒಪ್ಪುತ್ತಿತ್ತು. .  ಬುದ್ಧ ಚರಿತವನ್ನು The Story of Buddha   ಎಂದು ಹೇಳಿದರೆ, ಅಥವಾ ಅಮರುಶತಕವನ್ನು “Amaru’s Hundred   ಎಂದು ಹೇಳಿದರೆ, ಅಷ್ಟಾಗಿ ತಪ್ಪೆನಿಸದಿದ್ದರೂ ನಾಗಾನಂದವನ್ನು “Joy of Serpents  “ ಎನ್ನುವುದೂ, ಮಾನಸೋಲ್ಲಾಸವನ್ನು “Hearts Delight  “ ಎಂದೂ  ಹೇಳುವ  ಅಗತ್ಯವಿರಲಿಲ್ಲ ಎಂದು ನನ್ನೆಣಿಕೆ. ಇದರ ಜೊತೆಗೆ ಈಗ ಕೊಟ್ಟಿರುವುದಕ್ಕಿಂತ ತುಸು ಹೆಚ್ಚುವರಿ ಟಿಪ್ಪಣಿಗಳನ್ನು ಕೊಟ್ಟಿದ್ದರೆ, ಪದ್ಯಗಳ ಹಿನ್ನಲೆ ತಿಳಿಯಲು ಬಯಸಿದವರಿಗೆ ಇನ್ನೂ ಹೆಚ್ಚು ಅನುಕೂಲವಾಗಿರುತ್ತಿತ್ತು ಎಂದು ನಾನು ಭಾವಿಸುವೆ.

ಈ ಚಿಕ್ಕಪುಟ್ಟ ಕೊರತೆಗಳನ್ನು ಒತ್ತಿಗಿಟ್ಟು ನೋಡಿದರೆ, ಈ ಪುಸ್ತಕದ ಓದು ಆನಂದದಾಯಕವಾಗಿತ್ತು. ಇಂತಹ ಅನುವಾದಗಳ ಅನುಕೂಲವೆಂದರೆ, ನೀವು ಅವನ್ನು ಮೊದಲಿಂದ ಕೊನೆಯವರೆಗೆ ಒಂದೇ ಗುಕ್ಕಿನಲ್ಲಿ ಓದಬೇಕಿಲ್ಲ. ನಿಮಗೆ ಅನುಕೂಲವಾದಾಗ ಯಾವುದೋ ಒಂದು ಪುಟ ತೆಗೆದು ಓದಿದರೂ ಅದು ಮನಸ್ಸಿನಲ್ಲಿ ಒಂದು ಮಿನುಗನ್ನು ತರುತ್ತವೆ!

ಪುಸ್ತಕದಲ್ಲಿ  ನನಗೆ ಮೆಚ್ಚಿಗೆಯಾದ ಕೆಲವು ಇಂಗ್ಲಿಷ್ ಅನುವಾದಗಳು, ಮತ್ತು ಅವೇ ಪದ್ಯಗಳ ನನ್ನ ಕನ್ನಡ ಅನುವಾದಗಳನ್ನು ಇಲ್ಲಿ ಆಸಕ್ತರಿಗೆಂದು ಹಂಚಿಕೊಳ್ಳುತ್ತಿದ್ದೇನೆ.

HLS, #3

Why I am an atheist

When the creator made her

if he had his eyes open

could he have let her leave heaven

Surely not.

If he had his eyes shut
could he have achieved such perfection?

No chance.

Therefore it is proved

that the Buddha was right:
There is no creator.

ಸಂಸ್ಕೃತ ಮೂಲ

ಯಾತಾ ಲೋಚನಗೋಚರಂ ಯದಿ ವಿಧೇರ್ ಏಣೇಕ್ಷಣಾ ಸುಂದರೀ ನೇಯಂ ಕುಂಕುಮಪಂಕಪಿಂಜರಮುಖೀ ತೇನೋಜ್ಝಿತಾ ಸ್ಯಾತ್ ಕ್ಷಣಮ್

ನಾಪ್ಯ್ ಆಮೀಲಿತಲೋಚನಸ್ಯ ರಚನಾದ್ ರೂಪಂ ಭವೇದ್ ಈದೃಶಂ ತಸ್ಮಾತ್ ಸರ್ವಮ್ ಅಕರ್ತೃಕಂ ಜಗದ್ ಇದಂ ಶ್ರೇಯೋ ಮತಂ ಸೌಗತಮ್

[ಮೂಲ: ಧರ್ಮಕೀರ್ತಿಯ ಸುಭಾಷಿತರತ್ನಕೋಶ 440]

ನನ್ನ ಕನ್ನಡ ಅನುವಾದ

ಬೊಮ್ಮ ಹೊಂಬಣ್ಣದಲಿ ಕಂಗೊಳಿಸುವೀ ಚೆಲುವ

ಮೊಗವ ನೋಡಿರೆ ಚಣವು ಬಿಡುತಿದ್ದನೇ?

ಕಣ್ಣನ್ನು ತೆರೆಯದೆಲೆ ಈ ರೂಪ ನೋಡದೆಯೆ

ಸೃಷ್ಟಿಸಿದನೆಂದರದ ನಂಬಬಹುದೇ?

ಅದಕೇ ಹೇಳುವೆ ಕೇಳು ಈ ನಿಖಿಳ ಜಗವನ್ನು

ಸೃಷ್ಟಿಸುವನೊಬ್ಬನೂ ಇಲ್ಲವೆಂದು

ನಿಜವ ಹೇಳಿದನೊಬ್ಬ! ಆ ಬುದ್ಧನಾ ಮತವ

ಹಿಡಿವುದೊಂದೇ ಈಗ ಸರಿದಾರಿಯು!

ಇಲ್ಲಿ ಇಂಗ್ಲಿಷ್ ಅನುವಾದವು ಕುಂಕುಮಪಂಕಪಿಂಜರಮುಖೀ  (ಕೇಸರಿ ಹೂವಿನ ಕೆಂಬಣ್ಣದಂತೆ ಹೊಳೆವ ಮುಖದವಳು) , ಏಣೇಕ್ಷಣಾ ಸುಂದರೀ  (ಜಿಂಕೆಕಣ್ಣಿನ ಚೆಲುವೆ)  ಮೊದಲಾದ ವಿವರಗಳನ್ನು ಪೂರ್ಣ ಕೈಬಿಟ್ಟಿದೆ. ಕನ್ನಡ ಅನುವಾದದಲ್ಲಿಯೂ ಕೂಡ ಇವು ಭಾಗಶಃ ಮಾತ್ರ ಕಾಣಬಂದಿವೆ ಎನ್ನುವುದನ್ನು ನೀವು ನೋಡಬಹುದು.

HLS #8

When Looks can Kill

The doctors say that only poison

can counteract poison.

Save my life-

look into my eyes again.

ಸಂಸ್ಕೃತ ಮೂಲ

ದೃಷ್ಟಿಂ ದೇಹಿ ಪುರ್ನರ್ಬಾಲೇ ಕಮಲಾಯತಲೋಚನೇ

ಶ್ರೂಯತೇ ಹಿ ಪುರಾ ಲೋಕೇ ವಿಷಾಯವಿಷಮೌಷಧಮ್

[ಮೂಲ: ಶೃಂಗಾರತಿಲಕಂ 15]

ನನ್ನ ಕನ್ನಡ ಅನುವಾದ

ಇತ್ತಕಡೆ ನೋಡಿಬಿಡು ತಾವರೆಯ ಕಣ್ಣವಳೆ

ಮತ್ತೊಮ್ಮೆ! ಲೋಕದಲಿ ಕೇಳಿಲ್ಲವೇನು?

ಹತ್ತಿದರೆ ಮೈಗೆ ವಿಷ ಅದಕೆ ಮದ್ದಾಗಿ ವಿಷ

-ವಿತ್ತೆ ಇಳಿಸಲುಬೇಕು; ಅಲ್ಲವೇನು?
(ಕನ್ನಡ ಅನುವಾದ ನನ್ನದು)

ಈ ಪದ್ಯದಲ್ಲಿ ಕೂಡ ನೀವು ಇಂಗ್ಲಿಷ್ ಅನುವಾದದಲ್ಲಿ “कमलायतलोचने” – ಕಮಲದಂತಿರುವ ಕಣ್ಣ ವಳು- ಮೊದಲಾದ ವಿವರಗಳನ್ನು ಬಿಟ್ಟು ಅವಳ ಕಣ್ಣಿನ ನೋಟದ ಪ್ರಭಾವದ ಮೇಲೆ ಗಮನವಿರಿಸಿದ್ದಾರೆ. ಕನ್ನಡದ ಪದ್ಯ ಶೈಲಿಯು ಸಂಸ್ಕೃತ ಶೈಲಿಗೆ ಹತ್ತಿರವಾದದ್ದರಿಂದ ಆ ಕೆಲವು ವಿವರಗಳನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು.

(HLS #17)

Why won’t you like me back?

How skillfully

The Love God launches his arrows!

He strikes me

squarely in the chest

But doesn’t

So much as touch you

though you’re right there

in my heart.

ಪಶ್ಯಾಯತಾಕ್ಷಿ! ಭುವನ-ತ್ರಿತಯೈಕ-ಜಿಷ್ಣೋಃ ಶಿಕ್ಷಾ-ಬಲಂ ಧನುಷಿ ಶಂಬರ-ಶಾಸನಸ್ಯ ।

ಭಿತ್ತ್ವಾ ಮಮೈವ ಹೃದಯಂ ಹೃದಯೇ ನಿವಿಷ್ಟಾ ಬಾಣಾ ಯದ್ ಅತ್ರಭವತೀಂ ನ ಖಲು ಸ್ಪೃಶಂತಿ ॥

[ಮೂಲ: ಸಾಯಣಾಚಾರ್ಯರ ಸುಭಾಷಿತಸುಧಾನಿಧಿ 32.7]

ನನ್ನ ಕನ್ನಡ ಅನುವಾದ

ಅರಳುಗಣ್ಗಳ ಚೆಲುವೆ!  ಮೂಜಗವ ಗೆಲುವ ಆ

ಮಾರನಾ ಬಿಲ್ಗಾರಿಕೆಯನೆಂತು ವರ್ಣಿಸಲಿ?

ಇರಿದು ನನ್ನೆದೆ ಸೀಳಿದರು ತನ್ನ ಬಾಣದಲಿ

ಅರರೆ! ಅಲ್ಲೇ ಇರುವ ನಿನ್ನ ಮುಟ್ಟಿರದೇ!

ಇಲ್ಲಿಕೂಡ ನೀವು ಇಂಗ್ಲಿಷ್ ಅನುವಾದ ಮತ್ತು ಕನ್ನಡ ಅನುವಾದಗಳಲ್ಲಿರುವ ವ್ಯತ್ಯಾಸಗಳನ್ನು ಗಮನಿಸಬಹುದು.

(HLS #196)

Who understands men?

‘Isn’t this black?’
‘Yes, seems like it.’

‘Actually, it’s white.’

‘Oh yes, I see it now.’

‘We should get going’

‘I’ll get the keys.’

‘Or we could stay awhile longer.’

‘ I’ll grab another drink.’

The man who so tangoed

in perfect sync with me
has now turned a perfect stranger.

Does anyone really know men?

ಸಂಸ್ಕೃತ ಮೂಲ

“ಇದಂ ಕೃಷ್ಣಂ” “ಕೃಷ್ಣಂ” “ಪ್ರಿಯತಮ! ನನು ಶ್ವೇತಮ್” “ಅಥ ಕಿಂ”
“ಗಮಿಷ್ಯಾಮೋ “ಯಾಮೋ” “ಭವತು ಗಮನೇನ್”“ಆಥ ಭವತು” ।
ಪುರಾ ಯೇನೈವಂ ಮೇ ಚಿರಮ್ ಅನುಸೃತಾ ಚಿತ್ತ-ಪದವೀ
ಸ ಏವಾನ್ಯೋ ಜಾತಃ ಸಖಿ! ಪರಿಚಿತಾಃ ಕಸ್ಯ ಪುರುಷಾಃ ॥

[ ಸುಭಾಷಿತಾವಲೀ 1138/   ಅಮರುಶತಕದ ಕೆಲವು ಪಾಠಾಂತರದಲ್ಲೂ ಈ ಶ್ಲೋಕವು ಕಂಡುಬರುತ್ತದೆ. ]

ನನ್ನ ಕನ್ನಡ ಅನುವಾದ

ಇದು ಕಪ್ಪು! ಅಹುದಹುದು! ಬಿಳುಪೇನೊ? ಹೌದಲ್ಲ!

ಹೋಗೋಣ; ನಡೆಮತ್ತೆ!  ಈ ಕಡೆಗೆ ; ಓಹೊ ಸರಿ!

ಇಂತು ಬೆಂಬಿಡದಿದ್ದವನೆ ಗೆಳತಿ ಕಂಡವರ

ಹಾಗಾದ! ಗಂಡಸರ ಕಂಡವರು ಯಾರೆ?

ಪದ್ಯದ ಸಂದರ್ಭವು  ಇಂಗ್ಲಿಷ್ ಅನುವಾದದಲ್ಲಿ ಹೇಗೆ ಬದಲಾಗಿ, ಇಂದಿನ ಕಾಲಕ್ಕೆ ಹೊಂದಿಕೊಳ್ಳುವಂತೆ ಇದೆಯೆಂಬುದರ ಬಗ್ಗೆ ನಾನು ನಿಮ್ಮ ಗಮನಸೆಳೆಯಬಯಸುವೆ. ಹೀಗೆ ಕಾಲಾತೀತವಾದ ಹಲವು ಪದ್ಯಗಳನ್ನು ಓದಬಯಸುವವರಿಗೆ,  How to Love in Sanskrit   ಪುಸ್ತಕವು ಹಾರ್ಪರ್ ಕಾಲಿನ್ಸ್ ನವರಿಂದ ಪ್ರಕಟವಾಗಿದ್ದು ಫೆಬ್ರವರಿ 15 ,2024 ರಂದು ಬಿಡುಗಡೆಯಾಗಿದೆ. . ಇದನ್ನು ನೀವು ಈ ಕೊಂಡಿಯಲ್ಲಿ  ಕೊಳ್ಳಬಹುದಾಗಿದೆ)

ಸಂಪಾದಕರ ಮಾತು.

ಇಂಗ್ಲಿಷ್ ಪುಸ್ತಕಗಳನ್ನು ಕನ್ನಡದಲ್ಲಿ ಪರಿಚಯ ಮಾಡಿಕೊಡುವುದು ಇಂಡಿಕಾ ಟುಡೇಗೆ  ಹೊಸತಲ್ಲ. ಆದರೂ ಈ ಪರಿಚಯ ಲೇಖನ ಅಪೂರ್ವವಾದದ್ದು. ಪುಸ್ತಕದ ಲೇಖಕರು ಕನ್ನಡಿಗರು. ಇದನ್ನು ಇಂಗ್ಲಿಷ್ ನಲ್ಲಿ ಈಗಾಗಲೇ ಪರಿಚಯ ಮಾಡಿಟ್ಟವರೂ ಕನ್ನಡಿಗರೆ. ಇನ್ನು  ಪುಸ್ತಕದ ವಸ್ತುವಿಷಯವಾದ ಪ್ರೀತಿ-ಪ್ರಣಯವಂತೂ ಭಾಷಾತೀತವಾದ್ದದ್ದು. ಅನೂಷಾ-ಸುಹಾಸ್  ಕವಿದಂಪತಿಗಳ ಈ ಹೊಸ ಪ್ರಯತ್ನವನ್ನು ಸ್ವತಃ ಕವಿಗಳಾದ ಹಂಸಾನಂದಿ ಇಂಡಿಕಾ ಟುಡೇ ಕನ್ನಡ ಬಳಗಕ್ಕೆ ಪರಿಚಯ ಮಾಡಿಕೊಟ್ಟಿದ್ದಾರೆ. ಸಂಸ್ಕೃತ ಪದ್ಯಗಳನ್ನು ನೂತನ ರೀತಿಯಲ್ಲಿ ಜನಪ್ರಿಯಗೊಳಿಸುವ ಈ ಪ್ರಯತ್ನ ನಿಜಕ್ಕೊ ಶ್ಲಾಘನೀಯ

** ಶ್ರೀಯುತ  (ಹಂಸಾನಂದಿ) ರಾಮಪ್ರಸಾದರ ಅಮರುಶತಕದ ಅನುವಾದಕ್ಕಾಗಿ ಇಲ್ಲಿ ನೋಡಿ.

 

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.