close logo

ಕರ್ನಾಟಕ ಸಂಗೀತದಲ್ಲಿ ಬೆಳೆದು ಬಂದಿರುವ ಬತ್ತೀಸ ರಾಗಗಳ ಪರಂಪರೆ

ಭಾರತೀಯ ಸಂಗೀತದಲ್ಲಿ ರಾಗಗಳನ್ನು ಹಲವು ರೀತಿಯಲ್ಲಿ ವಿಂಗಡಿಸಿರುವುದು ತಿಳಿದ ವಿಷಯವೇ. ಅದರಲ್ಲಿ ಮೂವತ್ತೆರಡು ರಾಗಗಳ ಒಂದು ವರ್ಗೀಕರಣವು ಕೂಡ ಒಂದು ಪ್ರಸಿದ್ಧವಾದದ್ದು. “ಬತ್ತೀಸ್” ರಾಗಗಳು ಎಂಬ ಹಿಂದೀ ಭಾಷೆಯ ಹೆಸರಿನಲ್ಲಿಯೇ ಇವು ಕನ್ನಡದಲ್ಲಿಯೂ ಇರುವುದು ಕಂಡುಬರುತ್ತದೆ. ಇವು ಸಂಗೀತ ಶಾಸ್ತ್ರಗ್ರಂಥಗಳಲ್ಲಷ್ಟೇ ಅಲ್ಲದೆ ಬೇರೆ ಸಾಹಿತ್ಯ ಕೃತಿಗಳಲ್ಲೂ ಈ ಹೆಸರನ್ನು ನಾವು ನೋಡಬಹುದು.

ಮೊದಲ ಉದಾಹರಣೆಯಾಗಿ ಭಕ್ತಿ ಭಾಂಡಾರಿ ಬಸವಣ್ಣನವರ (ಕ್ರಿ.ಶ.೧೧೩೪-೧೧೯೬) ಒಂದು ಬಹುಪ್ರಸಿದ್ಧ ವಚನವನ್ನು ನೋಡೋಣ :

ಎನ್ನ ಕಾಯವ ದಂಡಿಗೆಯ ಮಾಡಯ್ಯ

ಎನ್ನ ಶಿರವ ಸೋರೆಯ ಮಾಡಯ್ಯ

ಎನ್ನ ನರಗಳ ತಂತಿಯ ಮಾಡಯ್ಯ

ಎನ್ನ ಬೆರಳ ಕಡ್ಡಿಯ ಮಾಡಯ್ಯ

ಬತ್ತೀಸ ರಾಗವ ಹಾಡಯ್ಯ

ಉರದಲೊತ್ತಿ ಬಾರಿಸು ಕೂಡಲಸಂಗಮದೇವ!

ವೀಣೆಯ ಬೇರೆ ಬೇರೆ ಅಂಗಗಳಾದ ದಂಡಿಗೆ (ವೀಣಾದಂಡ), ಸೋರೆ, ತಂತಿಗಳು, ನುಡಿಸುವ ಕಡ್ಡಿಗಳು ಮೊದಲಾದ ಸಂಗೀತ ಸಂಬಂಧೀ ವಿಷಯಗಳನ್ನೂ ಪ್ರಸ್ತಾಪಿಸುವ ಬಸವಣ್ಣನವರು ಈ ವಚನದಲ್ಲಿ ‘ಬತ್ತೀಸ ರಾಗವ ಹಾಡಯ್ಯ’ ಎಂದು ನುಡಿದರೂ ಕೂಡ ಯಾವ ರಾಗಗಳನ್ನೂ ಹೆಸರಿಸುವುದಿಲ್ಲ. ಇದಲ್ಲದೇ ಇನ್ನು ಬೇರೆ ಯಾವ ವಚನಗಳಲ್ಲೂ ರಾಗಗಳ ಹೆಸರಿನ ಪ್ರಸ್ತಾಪ ಮಾಡಿರುವಂತೆ ನನಗೆ ತಿಳಿದಿಲ್ಲ. ಶಿವಶರಣರು ತಮ್ಮ ವಚನಗಳನ್ನು ಆಗಾಗ ಹಾಡುತ್ತಿದ್ದಿರುಬಹು ಎಂಬುದಕ್ಕೂ ಕೂಡ ನಮಗೆ ವಚನಗಳಲ್ಲೆ ಆಧಾರ ದೊರೆಯುತ್ತದೆ (ಉದಾ: ಆನು ಒಲಿದಂತೆ ಪಾಡುವೆ). ಆದರೂ ಹಾಡುವುದಕ್ಕಿಂತ ಹೆಚ್ಚಾಗಿ ಮಾತಿನಂತೆಯೇ ಹೇಳುವುದೇ ಪದ್ಧತಿ ಆಗಿದ್ದಿರಬೇಕು. ವಚನ ಎಂಬ ಪದದ ಅರ್ಥವು ಕೂಡ ಮಾತು, ಗದ್ಯ ಎಂಬುದಾಗಿ ಇರುವುದನ್ನು ನೆನೆಯಬಹುದು. ಹಾಗಾಗಿ, ಸಂಗೀತದ ಬಗ್ಗೆ ಹೆಚ್ಚಿನ ವಿವರಗಳು ವಚನಗಳಲ್ಲಿ ಕಾಣದಿದ್ದರೆ ಅದರಲ್ಲಿ ಅಚ್ಚರಿಯಿಲ್ಲ. ಹಾಗಿದ್ದರೂ, ಸಕಲೇಶ ಮಾದರಸನೆಂಬ ವಚನಕಾರರು ಸಂಗೀತಗಾರರಾಗಿದ್ದರೆಂದೂ, ವೀಣಾವಾದನ ಚತುರರಾಗಿದ್ದರೆಂದೂ ತಿಳಿಯಲು ಆಧಾರಗಳು ಇವೆ ಎಂಬ ವಿಷಯವನ್ನು ಇಲ್ಲಿ ಹೇಳಬಯಸುವೆ.

ಬಸವಣ್ಣನವರ ನಂತರ ಸುಮಾರು ಇನ್ನೂರೈವತ್ತು ವರ್ಷಗಳ ಕಾಲ ಕಳೆದು, ಎಂದರೆ ಸಾಮಾನ್ಯ ಶಕ ೧೪೫೦ರ ಸುಮಾರಿನಲ್ಲಿ, ಕೊಳ್ಳೇಗಾಲ ಪ್ರದೇಶದಲ್ಲಿ ಬಾಳಿದ ಶ್ರೀ ನಿಜಗುಣ ಶಿವಯೋಗಿಗಳ ವಿವೇಕ ಚಿಂತಾಮಣಿ ಎಂಬ ಗ್ರಂಥದಲ್ಲಿ ಈ ಬತ್ತೀಸ ರಾಗಗಳು “ಮೂವತ್ತೆರಡು ರಾಗಗಳು” ಎಂಬ ಹೆಸರಿನಲ್ಲಿ ಕಂಡುಬರುತ್ತದೆ. ಪುರಾಣಗಳಂತೆ ವಿಶ್ವಕೋಶಾತ್ಮಕವಾದ ವಿವೇಕ ಚಿಂತಾಮಣಿಯಲ್ಲಿ ಹಲವಾರು ವಿಷಯಗಳ ಬಗ್ಗೆ ವಿವರಗಳುಂಟು. ಅದರಲ್ಲಿ ಸಂಗೀತ ನೃತ್ಯಗಳ ಬಗ್ಗೆ ಇರುವ ಅಧ್ಯಾಯದಲ್ಲಿ ಈ ಕೆಳಗಿನ ವಿವರ ನಮಗೆ ಸಿಗುತ್ತದೆ. ಮೊದಲಿಗೆ ನೂರೈವತ್ತೇಳು ರಾಗಗಳನ್ನು ಹೆಸರಿಸಿದ ನಂತರ ನಿಜಗುಣ ಶಿವಯೋಗಿಗಳು ಹೀಗೆ ಹೇಳುತ್ತಾರೆ:

“ಬಳಿಕ ಈ ಸಮಸ್ತ ರಾಗಂಗಳೊಳಗೆ ರಾಮಕ್ರಿ, ಭೂಪಾಳಿ, ವಸಂತ , ನಾಟಿ, ಸಾಳಗ, ಭೌಳಿ, ಕಾಂಬೋದಿ, ಗುಜ್ಜರಿ, ಭೈರವಿ , ಗುಂಡಕ್ರಿ, ಮಲಹರಿ , ಧನ್ಯಾಸಿ, ಲಲಿತೆ, ಫಲಮಂಜರಿ, ಬಂಗಾಳ, ದೇಶಿ, ಮೇಘರಂಜಿ, ಕುರಂಜಿ, ಆಹರಿ, ಶ್ರೀರಾಗ, ದೇವಗಾಂಧಾರಿ, ಪಹಡಿ, ಗೌಳ, ಶಂಕರಾಭರಣ, ಭುಲ್ಲರಿ, ದೇಶಾಕ್ಷಿ, ವರಾಳಿ, ಸಿಂಧುರಾಮಕ್ರಿ, ದೇವಗುಪ್ತಿ, ಆರಭಿ, ನಾರಾಯಣಿ, ಮಂಗಳಕೌಶಿ ಎಂಬ ಮೂವತ್ತೆರಡು ರಾಗಂಗಳೇ ಪ್ರಸಿದ್ಧಮಾಗಿಹುದು”.

ಇಂದಿಗೂ ಈ ಪಟ್ಟಿಯಲ್ಲಿರುವ ಹಲವು ರಾಗಗಳು ಸುಪರಿಚಿತವಾಗಿರುವುದನ್ನು ಗಮನಿಸಬಹುದು. ರಾಗಗಳು ಕಾಲಕಾಲಕ್ಕೆ ಪ್ರಸಿದ್ಧವಾಗುವುದೂ , ಹಾಗೇ ಕಣ್ಮರೆಯಾಗುವುದೂ ನಡೆದುಕೊಂಡೇ ಬಂದಿರುವ ವಿಷಯವಾದ್ದರಿಂದ, ಈ ಪಟ್ಟಿಯಲ್ಲಿ ಒಂದೆರಡು ರಾಗಗಳನ್ನು ಗುರುತಿಸಲು ಮೇಲ್ನೋಟಕ್ಕೇ ಸಾಧ್ಯವಾಗದೇ ಇತರೆ ಶಾಸ್ತ್ರ ಗ್ರಂಥಗಳ ಸಹಾಯ ಪಡೆಯಬೇಕಾಗಬಹುದಷ್ಟೇ.

ನಿಜಗುಣ ಶಿವಯೋಗಿಗಳ ನಂತರ ಸುಮಾರು ಐದಾರು ದಶಕಗಳ ನಂತರ ಬಂದ (~ಸಾ.ಶ.೧೫೦೦) ಸಿಂಗಿರಾಜ (ಶೃಂಗಿರಾಜ) ಎಂಬ ಕವಿ ತನ್ನ ಸಿಂಗಿರಾಜಪುರಾಣದ ೩೮ನೇ ಸಂಧಿಯಲ್ಲಿ ನಾಟಕ ಶಾಲೆಯ ವೃತ್ತಾಂತವೊಂದನ್ನು ವರ್ಣಿಸುವಲ್ಲಿ ಈ ಕೆಳಗಿನ ಷಟ್ಪದಿಗಳು ಕಂಡುಬರುತ್ತವೆ:

ಸಾರನಾದದ ಜನನ ತಾಣಮಂ ನೆರೆಯರಿದು

ತಾರಮಂದ್ರದ ಮಧ್ಯ ಸಪ್ತಸ್ವರಂಗಳಂ

ತೋರಿ ಇಪ್ಪತ್ತೆರಡು ಶ್ರುತಿ ಷಾಡವಾದಿ ಶ್ರುತಿಪೂರ್ಣ ದೇಸೀ ಮಾರ್ಗದ

ಸಾರಮಂ ತಿಳಿದವನಿಬದ್ಧಂ ವಿಬದ್ಧಗಳ

ಸೇರುವೆಯೊಳತಿ ಶುದ್ಧ ಮಿರ್ಶ್ರ ಸಂಕೀರ್ಣಗಳ

ನಾರೈದು ನವರಸದಿ ಪಾಡುವ ವಿದಗ್ಧ ಗಾನಾಂಗನೆಯರೊಪ್ಪಿರ್ದರು

(ಸಂಧಿ ೩೮, ಪದ್ಯ ೧೦)

ಮಾಳವ ಶ್ರೀ ತೋಡಿ ಧನ್ಯಾಸಿ ನಾಟಿ ಬಂ

ಗಾಳ ಭೈರವಿ ಸಿಂಧು ದೇಶಿ ಹಿಂದೋಳ ನಾ

ರಣಿ ಗೌಳ ಸೌರಾಷ್ಟ್ರ ಗುರ್ಜರಿ ವಸಂತ ಸಾವೇರಿ ಛಾಯಾ — — — –

ಗೌಳ ಮಲಹರಿ ಲಳಿತೆ ಬಹುಳಿ ಗುರ್ಜರಿ ಲಲಿತೆ

ಗೌಳ ಮಂಗಳಕೌಸಿ ಮೇಘರಂಜನಿಯು ಭೂ

ಪಾಳಿ ಮೊದಲಾದ ಬತ್ತೀಸ ರಾಗಂಗಳಂ ಪಾಡುತಿರ್ದರು ಸತಿಯರು

(ಸಂಧಿ ೩೮ ಪದ್ಯ ೧೧)

ಈ ಎರಡನೆಯ ಪದ್ಯದಲ್ಲಿ ಬತ್ತೀಸ ರಾಗವೆಂದೇ ಹೇಳಿ ಹಲವು ರಾಗಗಳನ್ನು ಹೆಸರಿಸಲಾಗಿದೆ. ಆದರೂ ಷಟ್ಪದಿಯ ಮೂರನೇ ಸಾನಲ್ಲಿ ಕಂಡುಬರುವ ಛಂದೋದೋಷದಿಂದ, ಒಂದೆರಡು ಹೆಸರು ಬಿಟ್ಟು ಹೋಗಿರಬಹುದೆಂದು ಊಹಿಸಿ, ಇಲ್ಲಿ ಮೂವತ್ತೆರಡೂ ರಾಗಗಳನ್ನು ಹೆಸರಿಸಿಲ್ಲ ಎಂದಷ್ಟೇ ಹೇಳಬಹುದು. ಮಾಳವ, ಮತ್ತು ಶ್ರೀ ಎರಡು ರಾಗಗಳೋ ಅಥವಾ ಮಾಳವಶ್ರೀ ಎಂಬುದೊಂದೇ ರಾಗವೋ, ದೇಶಿ ಮತ್ತೆ ಹಿಂದೋಳಗಳೆಂಬ ಎರಡು ರಾಗಗಳೋ ಅಥವಾ ದೇಶಿ ಹಿಂದೋಳವೋ, ಮತ್ತೆ ಲಲಿತೆ ಹಾಗೂ ಲಳಿತೆ ಬೇರೆ ಬೇರೆ ರಾಗಗಳೇ? ಲಲಿತೆ ಮತ್ತು ಲಲಿತೆಗೌಳ ಎಂಬ ರಾಗಗಳಿದ್ದವೇ?- ಈ ಪ್ರಶ್ನೆಗಳೂ ಮೂಡುತ್ತದೆ. ಹಾಗಿದ್ದರೂ, ಬತ್ತೀಸ ರಾಗಗಳ ಪರಂಪರೆ ಮುಂದುವರೆದುಕೊಂಡು ಬಂದಿದೆ ಎಂಬುದು ಸಿದ್ಧವಾಗುತ್ತದೆ.

ಇನ್ನು ಹರಿದಾಸರ ಕಡೆಗೆ ಹೋಗೋಣ. ಕರ್ನಾಟಕ ಸಂಗೀತಕ್ಕೆ ಹರಿದಾಸರ ಕೊಡುಗೆ ಎಲ್ಲರಿಗೂ ತಿಳಿದದ್ದೇ. ನಿಜಗುಣಶಿವಯೋಗಿ-ಸಿಂಗಿರಾಜರ ಸಮಕಾಲೀನರೇ ಆದ ಶ್ರೀಪಾದರಾಜರು (ಜನನ — ಸಾ.ಶ. ~೧೪೦೦) ತಮ್ಮ ‘ಲಾಲಿ ಗೋವಿಂದ ಲಾಲಿ’ ಎಂಬ ರಚನೆಯಲ್ಲಿ ಕಲ್ಯಾಣಿ, ಆನಂದ ಭೈರವಿ ಮತ್ತು ದೇವಗಾಂಧಾರ ರಾಗಗಳನ್ನು ಹೆಸರಿಸುತ್ತಾರೆ. ಇನ್ನು ಹದಿನೈದನೇ ಶತಮಾನದ ಕೊನೆಯ ಭಾಗಕ್ಕೆ ಹೋದರೆ ಸಾ.ಶ. ೧೪೮೪ರಲ್ಲಿ ಜನಿಸಿದ ಪುರಂದರ ದಾಸರು ತಮಗೆ ಮೂವತ್ತೈದು ನಲವತ್ತು ವರ್ಷಗಳಾಗುವ ಸಮಯದಲ್ಲಿ ಹರಿದಾಸರಾಗಿ ಹಂಪೆಗೆ ಬಂದದ್ದೂ, ವ್ಯಾಸರಾಯರ ಶಿಷ್ಯರಾಗಿದ್ದೂ, ನಂತರ ಹರಿದಾಸರ ಪರಂಪರೆಯ ಹಾಗೂ ಕರ್ನಾಟಕ ಸಂಗೀತಕ್ಕೆ ಅತಿ ಪ್ರಮುಖರಾಗಿ ಗುರುತಿಸಲ್ಪಟ್ಟಿರುವುದೂ ಜಗದ್ಪ್ರಸಿದ್ಧ.

ಪುರಂದರದಾಸರು ನಾಲ್ಕುಲಕ್ಷದ ಎಪ್ಪತ್ತೈದು ಸಾವಿರ ರಚನೆಗಳನ್ನು ಮಾಡಿದ್ದಾರೆಂದು ಪ್ರತೀತಿ. ಆದರೆ, ಈಗ ನಮಗೆ ದೊರಕುವುದು ಒಂದೆರಡು ಸಾವಿರಗಳಷ್ಟು ಮಾತ್ರ. ಪುರಂದರದಾಸರನ್ನು ನಾವು ’ಕರ್ನಾಟಕ ಸಂಗೀತ ಪಿತಾಮಹ’ ಎಂದು ಕರೆಯುವುದು ನಿಜವಾದರೂ, ಅವರು ತಮ್ಮ ರಚನೆಗಳನ್ನು ಹಾಡುತ್ತಿದ್ದ ಮೂಲ ಮಟ್ಟು, ಬಹುಪಾಲು ರಚನೆಗಳಿಗೆ ನಮ್ಮ ಕಾಲದವರೆಗೆ ಉಳಿದಿಲ್ಲದಿರುವುದು ದುರ್ದೈವವೇ ಸರಿ. ಹೀಗಿದ್ದರೂ, ಒಂದೆರಡು ಸಾವಿರ ರಚನೆಗಳ ಸಾಹಿತ್ಯವಾದರೂ ಉಳಿದಿದೆಯಲ್ಲ ಎಂಬುದು ಸಮಾಧಾನದ ವಿಚಾರ. ಅವರ ಹಾಡುಗಳಲ್ಲಿರುವ ಒಳಗಿನ ಕುರುಹುಗಳಿಂದ, ಅವರ ಕಾಲದ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಗತಿಗಳ ಬಗ್ಗೆ ನಾವು ಅರಿತು ಕೊಳ್ಳಬಹುದು. ಈ ಮೊದಲು ನೋಡಿದ ಸಿಂಗಿರಾಜ, ಅಥವಾ ಬಸವಣ್ಣನವರು ಸಂಗೀತಗಾರರಲ್ಲ. ಆದರೆ ಪುರಂದರದಾಸರು ಸಂಗೀತಗಾರರಾದ್ದರಿಂದ ಅವರ ರಚನೆಗಳಲ್ಲಿ ನಮಗೆ ತಿಳಿಯಬೇಕಾದ ಸಂಗೀತದ ವಿಚಾರಗಳು ವಿಪುಲವಾಗಿವೆ.

ಪುರಂದರದಾಸರ ಕಾಲದ ರಾಗ-ತಾಳಗಳು, ವಾದ್ಯಗಳು ಹಾಡುವ ಬಗೆ ಈ ಮೊದಲಾದುವುಗಳನ್ನು ಅವರ ರಚನೆಗಳೊಳಗಿರುವ ಅಂತರಿಕ ಆಧಾರಗಳಿಂದ ನಾವು ಪಡೆಯಬಹುದು. ಉದಾಹರಣೆಗೆ, ‘ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ ಕೇಳನೋ ಹರಿ ತಾಳನೋ’, ‘ತಾಳ ಬೇಕು ತಕ್ಕ ಮೇಳ ಬೇಕು’, ‘ಯತಿ ಪ್ರಾಸವಿರಬೇಕು ಗತಿಗೆ ನಿಲ್ಲಿಸಬೇಕು’ ಎನ್ನುವಂತಹ ಸಾಲುಗಳನ್ನು ನಾವು ಅವರ ರಚನೆಗಳಲ್ಲಿ ನೋಡುತ್ತೇವೆ. ಅಂತಹ ಸಂಗೀತ ಅಂಶಗಳನ್ನು ಹೊಂದಿದ ಪುರಂದರದಾಸರ ರಚನೆಗಳಲ್ಲಿ , ‘ತುತ್ತುರು ತೂರೆಂದು ಬತ್ತೀಸ ರಾಗಗಳನ್ನು ’ ಎಂದು ಮೊದಲಾಗುವ ಹಾಡೂ ಒಂದು. ಅದನ್ನೀಗ ಇಲ್ಲಿ ನೋಡೋಣ. ಆ ಹಾಡಿನ ಪಲ್ಲವಿ ಮತ್ತು ಮೊದಲ ಚರಣ ಇಲ್ಲಿದೆ :

ತುತ್ತುರು ತೂರೆಂದು ಬತ್ತೀಸ ರಾಗಗಳನು

ಚಿತ್ತಜ ಜನಕ ತನ್ನ ಕೊಳಲನೂದಿದನು ||ಪ||

ಗೌಳ ನಾಟಿ ಆಹೇರಿ ಗುರ್ಜರಿ ಮಾಳವಿ ಸಾರಂಗರಾಗ

ಕೇಳಿ ರಮಣಿಯರತಿ ದೂರದಿಂದ

ಫಲಮಂಜರಿ ಗೌಳಿ ದೇಶಾಕ್ಷಿ ರಾಗಂಗಳನು

ನಳಿನನಾಭನು ತನ್ನ ಕೊಳಲಲ್ಲೂದಿದನು ||

ಕೊಳಲನ್ನು ನುಡಿಸುವಾದ ತುರ್-ತುರ್ ಎಂಬ ಸದ್ದಿನೊಡನೆ ಬರುವಂತಹ ರಂಜಕ ಪ್ರಯೋಗಗಳನ್ನು ಮಾಡುವ ಹಲವು ಕೊಳಲು ವಾದಕರನ್ನು ಇಂದು ನಾವು ನೋಡಿದ್ದೇವೆ. ಪಾಶ್ಚಾತ್ಯ ಸಂಗೀತದಲ್ಲಿ ಇಂತಹ ನುಡಿಸಾಣಿಕೆಗೆ staccato ಎಂದು ಕರೆಯುತ್ತಾರೆ. ಕೃಷ್ಣನು ಒಬ್ಬ ಚತುರ ಕೊಳಲು ನುಡಿಸುವ ಸಂಗೀತಗಾರನಾಗಿದ್ದ ಎನ್ನುವುದು ಪರಂಪರೆಯಿಂದ ಬಂದ ನಂಬಿಕೆ. ಆದರೆ, ಕೃಷ್ಣನು ಕೊಳಲು ನುಡಿಸಿದ್ದನ್ನು ನಾವಾರೂ ಕಂಡಿಲ್ಲ. ೧೫-೧೬ನೇ ಶತಮಾನದಲ್ಲಿ ಕೃಷ್ಣನ ಬಗ್ಗೆ ಹಾಡುವ ಪುರಂದರದಾಸರು, ಕೊಳಲು ನುಡಿಸುವಲ್ಲಿ ಇಂತಹ ಪ್ರಯೋಗಗಳ ಬಗ್ಗೆ ಬರೆದಿದ್ದಾರೆಂದರೆ, ಅಂತಹ ಪ್ರಯೋಗಗಳನ್ನು ಕೊಳಲುವಾದಕರು ಸುಮಾರು ಐದುನೂರು ವರ್ಷಗಳಿಂದಲಾದರೂ ಮಾಡಿಕೊಂಡೇ ಬಂದಿದ್ದಾರೆ ಎನ್ನುವುದು ಮನದಟ್ಟಾಗುತ್ತದೆ. ಅಂದರೆ, ಪುರಂದರರು ತಾವು ಕಂಡ ಕೊಳಲು ನುಡಿಸುವ ವಿಧಾನವೊಂದನ್ನು ಕೃಷ್ಣನ ಕೊಳಲಲ್ಲಿ ತೋರಿಸಿದ್ದಾರೆಂದು ಹೇಳಬಹುದು. ಈ ಕಾರಣಕ್ಕಾಗಿಯೇ ದಾಸ ಸಾಹಿತ್ಯವನ್ನು ನಾವು ಆ ಕಾಲಕ್ಕೊಂದು ಕನ್ನಡಿ ಎಂದು ಹೇಳುವುದು ಸರಿಯಾದ ಮಾತು.

ಅದರ ಜೊತೆಗೆ ಪುರಂದರ ದಾಸರು ಈ ರಚನೆಯಲ್ಲಿ ಬತ್ತೀಸರಾಗಗಳ ಪ್ರಸ್ತಾಪ ಮಾಡಿದ್ದಾರೆ. ಮತ್ತೆ ಆ ಮೂವತ್ತೆರಡೂ ರಾಗಗಳನ್ನು ಅವರು ಈ ಹಾಡಿನಲ್ಲಿ ಹೆಸರಿಸುವುದಿಲ್ಲವಾದರೂ ಮೊದಲನೆಯ ಚರಣದಲ್ಲಿ ಈ ಒಂಬತ್ತು ರಾಗಗಳನ್ನು ನಾವು ಈ ಹಾಡಿನಲ್ಲಿ ಕಾಣುತ್ತೇವೆ ( ೧. ಗೌಳ ೨. ನಾಟಿ ೩. ಆಹೇರಿ ೪. ಗುರ್ಜರಿ ೫. ಮಾಳವಿ ೬. ಸಾರಂಗ ೭. ಫಲಮಂಜರಿ ೮. ಗೌಳಿ ೯. ದೇಶಾಕ್ಷಿ).

ಪುರಂದರ ದಾಸರು ಇನ್ನೂ ಕೆಲವು ರಚನೆಗಳಲ್ಲಿ ರಾಗಗಳನ್ನು ಹೆಸರಿಸಿರುವುದು ನಮಗೆ ಅದೃಷ್ಟದ ಸಂಗತಿ. ಉದಾಹರಣೆಗೆ, ‘ನಳಿನಜಾಂಡ ತಲೆಯ ತೂಗಿ’ ಎಂಬ ರಚನೆಯ ಒಂದು ಚರಣದಲ್ಲಿ ಹೀಗೆ ಹೇಳುತ್ತಾರೆ :

ಮಾರವಿ ದೇಸಿ ಗುರ್ಜರಿ ಭೈರವಿ ಗೌರಿ ನಾಟಿಸಾವೇರಿ ಆಹೇರಿ

ಪೂರವಿ ಕಾಂಬೋದಿ ಪಾಡಿ ದೇಶಾಕ್ಷಿ ಶಂಕರಾಭರಣ ಮಾಳವ |

ವರಾಳಿ ಕಲ್ಯಾಣಿ ತೋಡಿ ಮುಖಾರಿ ಯರಳಿ ವಸಂತ ಬೌಳಿ ಧನ್ಯಾಸಿ

ಸೌರಾಷ್ಟ್ರ ಗುಂಡಕ್ರಿಯ ರಾಮಕ್ರಿಯ ಮೇಘ ಕುರಂಜಿಯ ಪಾಡಲು ನೋಡಿ ||

ಮೊದಲ ಹಾಡಿನಲ್ಲಿಯೇ ಹೇಳಿದ್ದ ರಾಗಗಳನ್ನು ಬಿಟ್ಟು ಹೊಸ ರಾಗಗಳನ್ನು ಪಟ್ಟಿ ಮಾಡುತ್ತಾ ಹೋಗೋಣ: ೧೦. ಮಾರವಿ ೧೧. ದೇಶಿ (* ಗುರ್ಜರಿ ಮೊದಲೇ ಹೇಳಿದೆ) ೧೨. ಭೈರವಿ ( * ಗೌಳಿ * ನಾಟಿ ಮೊದಲೇ ಹೇಳಿದೆ) ೧೩. ಸಾವೇರಿ (* ಆಹೇರಿ ಮೊದಲೇ ಹೇಳಿದೆ) ೧೪. ಪೂರವಿ ೧೫. ಕಾಂಭೋಜಿ ೧೬. ಪಾಡಿ ( * ದೇಶಾಕ್ಷಿ ಮೊದಲೇ ಹೇಳಿದೆ) ೧೭. ಶಂಕರಾಭರಣ ೧೮. ಮಾಳವ ೧೯. ವರಾಳಿ ೨೦. ಕಲ್ಯಾಣಿ ೨೧. ತೋಡಿ ೨೨. ಮುಖಾರಿ ೨೩. ವಸಂತ ೨೪. ಬೌಳಿ ೨೫. ಧನ್ಯಾಸಿ ೨೬. ಸೌರಾಷ್ಟ್ರ ೨೭. ಗುಂಡಕ್ರಿಯ ೨೮. ರಾಮಕ್ರಿಯ ೨೯. ಮೇಘ ೩೦. ಕುರಂಜಿ ಈ ಎರಡು ಹಾಡುಗಳಿಂದಲೇ ಮೂವತ್ತು ರಾಗಗಳ ಪಟ್ಟಿ ನಮಗೆ ಸಿಕ್ಕಿದೆ.

ಈ ಮೇಲಿನ ಚರಣದಲ್ಲಿ ಇರುವ ಯರಳಿ ಎಂಬುದೂ ಒಂದು ರಾಗದ ಹೆಸರೇ, ಅಥವಾ ಪಾಠದೋಷವೇ, ಅದು ರಾಗವೇ ಆಗಿದ್ದರೆ ಅದರ ಈಗಿನ ಹೆಸರೇನಿದ್ದಿರಬಹುದು ಎಂದು ಸುಲಭವಾಗಿ ಪತ್ತೆ ಆಗುವಂತಿಲ್ಲ. ಇನ್ನು ಮಾಳವವೂ ಮಾಳವಿಯೂ ಒಂದೇ ರಾಗವೋ, ಬೇರೆ ರಾಗಗಳೋ ಎಂದು ತಿಳಿಯುವುದೂ ಕಷ್ಟ. ಆದರೆ, ತುಸುವೇ ಬೇರೆ ಬೇರೆ ಹೆಸರಿನ ರಾಗಗಳು ನಮ್ಮ ಸಂಗೀತದಲ್ಲಿ ಇರುವುದಂತೂ ಉಂಟಲ್ಲ! ಉದಾಹರಣೆಗೆ, ಈಗಾಗಲೇ ನೋಡಿದ ‘ತುತ್ತುರು ತೂರೆಂದು’ ಎನ್ನುವ ರಚನೆಯಲ್ಲೇ, ಒಂದೇ ಚರಣದಲ್ಲೇ ಪುರಂದರ ದಾಸರು ಗೌಳ ಮತ್ತು ಗೌಳಿ ಎಂಬ ಎರಡು ರಾಗಗಳನ್ನು ಹೇಳಿದ್ದಾರೆ. ಇಲ್ಲಿ ಮೂಲ ಪ್ರತಿಗಳನ್ನು ನೋಡದೇ, ಗೌಳಿಯು ಬೌಳಿಯೇ ಎಂಬ ಅನುಮಾನವನ್ನು ಮಾಡಲು ಸಾಧ್ಯವಾಗುವುದಿಲ್ಲ.

ಇನ್ನು ‘ಅಂಗನೆಯರೆಲ್ಲರು ನೆರೆದು’ ಎಂದು ಮೊದಲಾಗುವ ರಚನೆಯನ್ನು ನೋಡೋಣ:

ಅಂಗನೆಯರೆಲ್ಲ ನೆರೆದು ಚಪ್ಪಾಳಿಕ್ಕುತ ದಿವ್ಯ

ಮಂಗಳ ನಾಮವ ಪಾಡಿ ರಂಗನ ಕುಣಿಸುವರು

ಪಾಡಿ ಮಲ್ಹಾರಿ ಭೈರವಿ ಸಾರಂಗಿ ದೇಶಿ

ಗುಂಡಕ್ರಿಯೆ ಗುರ್ಜರಿ ಕಲ್ಯಾಣಿ ರಾಗದಿ

ತಂಡ ತಂಡದಲಿ ನೆರೆದು ರಂಗನ ಉಡಿಯ ಘಂಟೆ

ಘಣ್ ಘಣ್ ಘಣ್ ಘಣಿರೆಂದು ಹಿಡಿದು ಕುಣಿಸುವರು

ತಿತ್ತಿರಿ ಮೌಳಿ ತಾಳದಂಡಿಗೆ ಮದ್ದಲೆ
ಉತ್ತಮದ ಶಂಖ ಶಬ್ದ ನಾದಗಳಿಂದ

ಸುತ್ತ ಮುತ್ತಿ ನಾರಿಯರು ತಥೈ ತಥೈ ಥೈಯೆಂದು

ಅರ್ತಿಯಿಂದ ಕುಣಿಸುವರು ಪರವಸ್ತುವ ಹಿಡಿದು

ಸಾರಂಗಿ ಎಂಬುದು ಸಾರಂಗ ಎಂಬ ರಾಗವೇ ಎಂದು ಭಾವಿಸಿದರೆ, ಈ ರಚನೆಯಲ್ಲಿ ಬಂದಿರುವ ಮಲ್ಹಾರಿ ಎಂಬ ರಾಗವೊಂದನ್ನು ಬಿಟ್ಟು ಉಳಿದವೆಲ್ಲ ಮೊದಲಿನ ಎರಡು ರಚನೆಗಳಲ್ಲೇ ಕಂಡುಬಂದಿವೆಂದು ತಿಳಿಯುವುದು. ಹಾಗಾಗಿ, ೩೧. ಮಲಹರಿ ಎಂದು ಇಟ್ಟುಕೊಳ್ಳಬಹುದು. ಇದಲ್ಲದೇ ಈ ರಚನೆಯಲ್ಲಿ ಬೇರೆ ಬೇರೆ ಸಂಗೀತ ವಾದ್ಯಗಳ ಹೆಸರುಗಳು ಕೂಡ ಬಂದಿರುವುದನ್ನು ವಿಶೇಷವಾಗಿ ಗಮನಿಸಬಹುದು.

ಪುರಂದರ ದಾಸರು ‘ರಂಗ ಕೊಳಲಲೂದಲಾಗಿ’ ಎನ್ನುವ ಇನ್ನೊಂದು ಪದದಲ್ಲಿಯೂ, ಅವನ ಕೊಳಲ ನಾದಕ್ಕೆ ಹೇಗೆ ಪ್ರಾಣಿ ಪಕ್ಷಿಗಳೂ, ನಿರ್ಜೀವ ವಸ್ತುಗಳೂ ಮರುಳಾದವು ಎಂದು ವಿವರಿಸುತ್ತಾರೆ. ಅದರ ಕಡೆಯಲ್ಲಿ, ಅಂಕಿತ ಬರುವ ಚರಣದ ಎರಡು ಸಾಲುಗಳು ಹೀಗಿವೆ:

ಧಾಮ ವನಮಾಲೆ ಬಹಿರ್ಭೂಷಿತ ಸ್ವಾಮಿ ಪುರಂದರ ವಿಟ್ಠಲರಾಯನು

ರಾಮಕ್ರಿಯ ಮೇಘರಂಜನಿ ಪಾಡೆ ಸಾಮವೇದ ನಮೋ ನಮೋ ಎನ್ನೆ

ಇಲ್ಲಿ ಹೇಳಿದ ರಾಮಕ್ರಿಯ ಎನ್ನುವ ರಾಗವನ್ನು ಆಗಲೇ ಪಟ್ಟಿ ಮಾಡಿದ್ದೇವೆ. ಉಳಿದದ್ದೆಂದರೆ ೩೨: ಮೇಘರಂಜನಿ. ಇದು ಈ ಮೊದಲೇ ಹೇಳಿದ ಮೇಘ ಎಂಬ ಹೆಸರಿನ ರಾಗವೇ ಅಲ್ಲವೇ ಎಂಬುದನ್ನು ಇದಮಿತ್ಥಂ ಎಂದು ಹೇಳಲು ಬರುತ್ತಿಲ್ಲ. ಆದರೂ ಪುರಂದರದಾಸರ ರಚನೆಗಳಿಂದಲೇ ಹೆಕ್ಕಿ ತೆಗೆದ ಈ ಮೂವತ್ತೆರಡು ರಾಗಗಳು ಪೂರ್ವ ಪ್ರಸಿದ್ಧ ಬತ್ತೀಸ ರಾಗಗಳಿಗೂ ಬಹುಪಾಲು ಹೊಂದಿಕೊಳ್ಳುತ್ತಿದ್ದರೂ, ಹಿಂದಿನ ಪಟ್ಟಿಗಳಿಗಿಂತ ಬೇರೆ ಆಗಿರುವುದರಿಂಬ ಬಹುಶಃ ಇದು ಹದಿನಾರನೇ ಶತಮಾನದ ಮೊದಲ ಭಾಗದಲ್ಲಿ ಪ್ರಸಿದ್ಧವಾದ ಬತ್ತೀಸರಾಗಗಳಾಗಿದ್ದಿರಬಹುದು ಎನ್ನುವುದು ನನ್ನ ಊಹೆ.

ಕಾಲ-ಕಾಲಕ್ಕೆ ಜನರ ಮೆಚ್ಚಿಗೆ ಪಡೆಯುವ ರಾಗಗಳು ಬದಲಾಗುವುದು ಸಹಜವೂ ಆಗಿದೆ. ಹಾಗಾಗಿ ಬಸವಣ್ಣನವರು ಹೇಳಿದ ಬತ್ತೀಸ ರಾಗಗಳೂ, ನಂತರದ ನಿಜಗುಣಶಿವಯೋಗಿಗಳ — ಸಿಂಗಿರಾಜನ ಕಾಲದ ಬತ್ತೀಸ ರಾಗಗಳೂ, ಪುರಂದರ ದಾಸರ ಕಾಲದ ಬತ್ತೀಸ ರಾಗಗಳೂ ಒಂದೇ ಆಗಿರಬೇಕಿಲ್ಲ.

ಪುರಂದರ ದಾಸರ ರಚನೆಗಳಲ್ಲಿ ಕಂಡು ಬರುವ ಈ ಸಾಕ್ಷಿಗಳಿಂದ, ಅವರ ಕಾಲದಲ್ಲಿದ್ದ ಬತ್ತೀಸರಾಗಗಳು ಈ ಬರಹದಲ್ಲಿರುವ ಪಟ್ಟಿಯಂತೆ ಇದ್ದಿರಬಹುದು ಎಂದು ಊಹಿಸಬಹುದು. ಅದು ಸರಿಯಲ್ಲ ಎಂದು ಹೇಳುವುದಕ್ಕೆ ಸಾಕ್ಷಿ-ಆಧಾರಗಳು ಸಿಗುವವರೆಗೂ, ಪುರಂದರದಾಸರ ರಚನೆಗಳಿಂದ ಹೆಕ್ಕಿದ ಈ ಪಟ್ಟಿಯನ್ನು ಸುಮಾರು ಸಾ.ಶ. ೧೫೫೦ ನೇ ವರ್ಷದ ಸುಮಾರಿನಲ್ಲಿ ಬತ್ತೀಸ ರಾಗಗಳೆಂದು ಕರೆಯಲ್ಪಡುತ್ತಿದ್ದ ಮೂವತ್ತೆರಡು ಪ್ರಸಿದ್ಧ ರಾಗಗಳು ಎಂದು ಲೆಕ್ಕಿಸುವುದರಲ್ಲಿ ತಪ್ಪೇನಿಲ್ಲ ಎಂದು ನನ್ನ ಭಾವನೆ.

ಈ ಕೆಳಗಿನ ಪಟ್ಟಿಯಲ್ಲಿ ಈ ಬರಹದಲ್ಲಿ ನೋಡಿದ ಎಲ್ಲ ರಾಗಗಳ ಹೆಸರುಗಳನ್ನೂ ಹೋಲಿಸಲಾಗಿದೆ. ಆಸಕ್ತರಿಗೆ ರಾಗಗಳ ಬೆಳವಣಿಗೆಯ ಒಂದು ಕುರುಹಾಗಿ ಕಾಣಬಹುದೆಂದು ಭಾವಿಸಿದ್ದೇನೆ. ಎಲ್ಲಿ ರಾಗದ ಹೆಸರು ಅನುಮಾನಾಸ್ಪದವಾಗಿದೆಯೋ ಅಲ್ಲಿ ಪ್ರಶ್ನಾರ್ಥಕ ಚಿಹ್ನೆಯಿಂದ (?) ಸೂಚಿಸಿದ್ದೇನೆ. ಒಟ್ಟು ‘ಬತ್ತೀಸ ರಾಗ’ ದ ಯಾದಿಯಲ್ಲಿ ಸುಮಾರು ೪೫ ರಾಗಗಳಿವೆ. ಇಂದಿಗೂ ಇವುಗಳಲ್ಲಿ ಬಹುಪಾಲು ಪ್ರಸಿದ್ಧ ರಾಗಗಳೇ ಆಗಿದ್ದು,ಇದರಿಂದ ನಮ್ಮ ಸಂಗೀತ ಪರಂಪರೆ ಹೇಗೆ ‘ಹೊಸ ಚಿಗುರು- ಹಳೆ ಬೇರು ಕೂಡಿದರೆ ಮರ ಸೊಬಗು’ ಎಂಬ ಸಾಧುವಾಕ್ಯಕ್ಕೆ ಅನುಗುಣವಾಗಿಯೇ ಇದೆ ಎಂದು ನಾವಿಲ್ಲಿ ಮನಗಾಣಬಹುದು.

ಹಂಸಾನಂದಿ

(ಹಿಂದೆ ಬರೆದಿದ್ದ ಬರಹವೊಂದರ ಪರಿಷ್ಕೃತ ಮತ್ತು ಹಿಗ್ಗಿಸಿದ ರೂಪ. ಸ್ಮರಣಸಂಚಿಕೆಯೊಂದರಲ್ಲಿ ಪ್ರಕಟವಾಗಿದೆ)

(Editor’s Note: This article was originally published in hamsanandi.medium.com and has been republished here with the authors’ permission. Here is the link to the original article link)

Feature Image Credit: wikipedia.org

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply