close logo

ಅಮರುಕ ಶತಕ: ಸಾಮಾನ್ಯರ ಬದುಕಿನ ಮುಕ್ತಕಗಳು – ಇತಿಹಾಸದ ಒಂದು ಇಣುಕು

ಸಿಂಧೂ-ಸರಸ್ವತಿ ಸಂಸ್ಕೃತಿಯ ನಗರಗಳಲ್ಲಿ, ಮತ್ತು ಮಧ್ಯಪೂರ್ವ ದೇಶಗಳಲ್ಲಿ ನಡೆದ ಉತ್ಖನನಗಳಲ್ಲಿ ದೊರೆತ ಆಧಾರಗಳಿಂದ ೪೦೦೦ ವರ್ಷಗಳಿಗಿಂತ ಹಿಂದೆಯೇ ಈ ಎರಡೂ ಭಾಗಗಳ ನಡುವೆ ವ್ಯಾಪಾರ ವ್ಯವಹಾರಗಳಿದ್ದದ್ದು ತಿಳಿದು ಬಂದಿದೆ. ಇದೇ ರೀತಿ, ಸುಮಾರು ೧೮೦೦ ವರ್ಷಗಳ ಹಿಂದಿನ ಒಂದು ಗ್ರೀಕ್ ನಾಟಕದದಲ್ಲಿ ಕನ್ನಡ ಅಥವಾ ಕನ್ನಡದಂತಹ ಭಾಷೆಯ ಕೆಲವು ಪದಗಳು ಕಂಡು ಬಂದಿರುವುದನ್ನು ನೋಡಿ ವಿದ್ವಾಂಸರು ಭಾರತದ ಪಶ್ಚಿಮ ಕರಾವಳಿಗೂ, ಗ್ರೀಸ್, ರೋಮ್ ಮೊದಲಾದ ರಾಷ್ಟ್ರಗಳ ನಡುವೆಯೂ ವ್ಯಾಪಾರ ಸಂಬಂಧಗಳು ಇದ್ದಿರಬೇಕೆಂದು ಊಹಿಸಿದ್ದಾರೆ. ಸಿಂಧೂ-ಸರಸ್ವತಿ ನಾಗರಿಕತೆಯ ಸಮಯದಲ್ಲಿನ ವ್ಯಾಪಾರದ ಕುರುಹು ಸಾಹಿತ್ಯದ ಆಕರಗಳಲ್ಲಿ ಸಿಗಲು ಕಷ್ಟವಾದರೂ, ಸುಮಾರು ೨೩೦೦ ವರ್ಷಗಳ ಹಿಂದಿನ ಕೌಟಲ್ಯನ ಅರ್ಥಶಾಸ್ತ್ರದಲ್ಲಿ ವ್ಯಾಪಾರ, ವ್ಯಾಪಾರಿಗಳಿಗೆ ಹಾಕಬೇಕಾದ ಸುಂಕ, ಊರಿನಲ್ಲಿ ಎಂತಹ ಸ್ಥಳದಲ್ಲಿ ಮಾರುಕಟ್ಟೆ ಇರಬೇಕು ಮೊದಲಾದ ವಿಷಯಗಳ ಬಗ್ಗೆ ಪ್ರಸ್ತಾಪವಿದೆ. ಇದಕ್ಕೆ ೨೦೦-೩೦೦ ವರ್ಷ ನಂತರದ, ಅಂದರೆ ಸಾಮಾನ್ಯ ಶಕ ಒಂದನೇ ಶತಮಾನದಲ್ಲಿ ಆಳಿದ ಸಾತವಾಹನ ವಂಶದ ಹಾಲ ಮಹಾರಾಜ ಬರೆದ ಗಾಹಾ ಸತ್ತಸಯಿಯಲ್ಲಿ (ಇದು ಮಹಾರಾಷ್ಟ್ರೀ ಪ್ರಾಕೃತದ ೭೦೦ ಬಿಡಿಪದ್ಯಗಳ ಸಂಕಲನ) ವ್ಯಾಪಾರಕ್ಕೆಂದು ದೂರ ದೇಶಕ್ಕೆ ಹೋಗುವ ವ್ಯಾಪಾರಿಗಳು, ಮತ್ತು ಅವರ ಅಗಲಿಕೆಯಲ್ಲಿ ಕೊರಗುವ ಈ ವ್ಯಾಪಾರಿಗಳ ಹೆಂಡಿರ ವಿಷಯವು ಹಲವಾರು ಪದ್ಯಗಳಲ್ಲಿ ಪ್ರಸ್ತಾಪವಾಗಿವೆ.   ಈಗಿನ ಮಹಾರಾಷ್ಟ್ರದ ನಾಣೇಘಾಟ್ ನಲ್ಲಿರುವ ಶಿಲಾಶಾಸನ, ಅಲ್ಲಿರುವ ಹೆದ್ದಾರಿಯ ಸುಂಕದ ಕಲ್ಲಿನ ಗಡಿಗೆ ಮೊದಲಾದವು  ಸಾತವಾಹನರ ಕಾಲದ್ದೇ ಆದ್ದರಿಂದ, ಗಾಹಾಸತ್ತಸಯಿ-ಯಲ್ಲಿ ಇರುವ ಪದ್ಯಗಳಿಗೂ ಆ ಕಾಲದ ಜನಜೀವನಕ್ಕೂ ಸುಲಭವಾಗಿ ಸಂಬಂಧ ಕಲ್ಪಿಸಬಹುದಾಗಿದೆ. ಚರಿತ್ರೆಯನ್ನು ತಿಳಿದುಕೊಳ್ಳಲಿಕ್ಕೆ ಶಾಸನಗಳ ಜೊತೆಗೆ ಹೇಗೆ ಸಾಹಿತ್ಯ ಕೃತಿಗಳನ್ನೂ ಬಳಸಬಹುದು ಎಂಬುದಕ್ಕೆ ಒಂದು ಒಳ್ಳೇ ಉದಾಹರಣೆ ಗಾಹಾಸತ್ತಸಯಿ.

ಗಾಹಾಸತ್ತಸಯಿಯ ನಂತರ ಮುಕ್ತಕಗಳನ್ನು ಬರೆಯುವ ಪರಂಪರೆ ಸಂಸ್ಕೃತದಲ್ಲೂ ಬೆಳೆದು ಬಂತು. ಮುಕ್ತಕವೆಂದರೆ ಬಿಡಿಪದ್ಯವೆಂದು ಅರ್ಥ.  ಒಂದು ಮುಕ್ತಕ ಸಂಕಲನದಲ್ಲಿ ಇರುವ ಪ್ರತಿ ಪದ್ಯವೂ ಸ್ವಯಂಪೂರ್ಣ. ಪದ್ಯಗಳನ್ನು ಬಿಡಿಬಿಡಿಯಾಗಿ ಓದಿ ಆನಂದಿಸಬಹುದು. ಪ್ರತಿ ಪದ್ಯಕ್ಕೂ ಹಿಂದಿನ ಪದ್ಯದ ಅಥವಾ  ಮುಂದಿನ ಪದ್ಯದ ಜೊತೆ ಸಂಬಂಧ ಇರದು. ಭರ್ತೃಹರಿಯ ನೀತಿಶತಕ, ಶೃಂಗಾರಶತಕ, ವೈರಾಗ್ಯಶತಕಗಳು ಇಂತಹದ್ದೇ  ಬಿಡಿಪದ್ಯಗಳ ಸಂಕಲನಗಳು.

ಇಂತಹ ಮುಕ್ತಕ ಸಂಕಲನಗಳಲ್ಲಿ ಗಾಹಾಸತ್ತಸಯಿಯಲ್ಲಿ ಕಂಡು ಬರುವ ಪ್ರೀತಿ-ಪ್ರೇಮಗಳ   ಭಾವನೆಯನ್ನೇ ಕೇಂದ್ರವಾಗಿಟ್ಟುಕೊಂಡು ಬಂದ ಒಂದು ಅತೀ ಸುಂದರ ಸಂಕಲನ ಅಮರುಶತಕ ಅಥವಾ ಅಮರುಕಶತಕ. ಅಮರುಕನ ಒಂದೊಂದು ಬಿಡಿಪದ್ಯವೇ ಒಂದೊಂದು ಕಾವ್ಯದಷ್ಟು ರಸವತ್ತಾಗಿರುತ್ತದೆಂದು ನಂತರದ ಕವಿಗಳು, ವಿಮರ್ಶಕರು ಹೊಗಳಿದ್ದಾರೆ. ಅಮರುಕನ ಪದ್ಯಗಳು ಅವುಗಳ ಲಾಲಿತ್ಯಕ್ಕೆ ಹೆಸರುವಾಸಿ.

ಈಗ ದೊರಕಿರುವ ಅಮರುಶತಕದ ಬೇರೆ ಬೇರೆ ಪಾಠಾಂತರಗಳಲ್ಲಿ, ಅಮರುಕಶತಕದ ಟೀಕೆಗಳಲ್ಲಿ, ಮತ್ತೆ ಇತರ ಗ್ರಂಥಗಳಲ್ಲಿ ಅಮರುಕನದ್ದೆಂದು ಹೆಸರಿಸಿ ಕೊಟ್ಟಿರುವ ಪದ್ಯಗಳನ್ನೂ ಸೇರಿಸಿದರೆ, ಸುಮಾರು ೧೭೦ಕ್ಕೂ ಹೆಚ್ಚು  ಪದ್ಯಗಳು ಅಮರುಕನದ್ದೆಂದು ಬಳಕೆಯಲ್ಲಿದ್ದರೂ ನಾವು ಇದಕ್ಕೆ ಅಮರುಶತಕವೆಂದು ಕರೆಯುವುದೇ ರೂಢಿ.

ದುರದೃಷ್ಟವಶಾತ್, ಸಂಸ್ಕೃತದ ಹಲವು ಕವಿಗಳಂತೆಯೇ ಅಮರುಕನ ವೈಯಕ್ತಿಕ ಜೀವನದ ಬಗ್ಗೆ ವಿವರಗಳು ನಮಗೆ ತಿಳಿದಿರುವುದು ಕಡಿಮೆಯೇ. ಸುಮಾರು ೮೦೦ ನೇ ವರ್ಷದಲ್ಲಿ ವಾಮನನೆಂಬ ಲಾಕ್ಷಣಿಕ ಇವನ ಪದ್ಯಗಳನ್ನು ತನ್ನ ಪುಸ್ತಕದಲ್ಲಿ ಉದಾಹರಣೆಯಾಗಿ ಕೊಡುವುದರಿಂದ ಎಂಟನೇ  ಶತಮಾನದಲ್ಲಿ, ಅಥವಾ ಅದಕ್ಕೆ ಸ್ವಲ್ಪ ಮುಂಚೆ ಇವನು ಇದ್ದಿರಬೇಕು ಎಂಬುದು ಖಚಿತವಾಗಿ ಹೇಳಬಹುದಾದ ವಿಷಯ.

ಈಗ ಕಾಶ್ಮೀರದ ರಾಜನಾಗಿದ್ದನೆಂದೂ, ಮಾಹಿಷ್ಮತಿಯ ರಾಜನೆಂದೂ ದಂತ ಕಥೆಗಳಿವೆ. ಇದಲ್ಲದೆ, ಈತನ ಬಗ್ಗೆ ಇನ್ನೊಂದು ಕೌತುಕಮಯವಾದ ಕಥೆಯೂ ಇದೆ. ಮಂಡನಮಿಶ್ರರ ಹೆಂಡತಿ ಉಭಯಭಾರತಿಯ ಜೊತೆ ಆದಿಶಂಕರರ ವಾದ ನಡೆಯುತ್ತಿದ್ದಾಗ ಆಕೆ ಸಾಂಸಾರಿಕ ಜೀವನದ ಬಗ್ಗೆ ಪ್ರಶ್ನೆ ಮಾಡಲು, ಬಾಲ ಸನ್ಯಾಸಿಯಾಗಿದ್ದ ಶಂಕರರು ತಮ್ಮ ಅನುಭವದಿಂದಲೇ ಆ ಪ್ರಶ್ನೆಗೆ ಉತ್ತರಿಸಬೇಕೆಂದು, ಅಕಾಲದಲ್ಲಿ ಸತ್ತು ಹೋಗಿದ್ದ ಅಮರುಕ ರಾಜನ ದೇಹದಲ್ಲಿ ಪರಕಾಯ ಪ್ರವೇಶಮಾಡಿದ್ದರೆಂದೂ, ಆ ಸಮಯದಲ್ಲಿ ಅವರು ಬರೆದ ಪದ್ಯಗಳೇ ಈ ಅಮರುಶತಕವೆಂದೂ ಕೆಲವು ಶಂಕರ ವಿಜಯ ಕಾವ್ಯಗಳು ಹೇಳುತ್ತವೆ.

ಈ ಕಥೆಗಳೆಲ್ಲ ಏನೇ ಇರಲಿ, ರಾಜ-ಮಹಾರಾಜರಲ್ಲದ ಸಾಮಾನ್ಯ ಜನಗಳ, ಮನೆ-ಮನೆಯ  ಗಂಡ ಹೆಂಡಿರ, ಪ್ರಣಯಿಗಳ ನಡುವಿನ ಪ್ರೀತಿ-ಪ್ರೇಮ, ಮುನಿಸು, ದುಗುಡ, ವಿರಸ ಮೊದಲಾದ ಹಲವು ಭಾವಗಳನ್ನು ಚಿತ್ರಿಸುವ ಒಂದು ಸುಂದರ ಕಾವ್ಯ ಅಮರುಕಶತಕ. ಇಂತಾ ಭಾವನೆಗಳನ್ನು ಚಿತ್ರಿಸುವುದರಲ್ಲಿ ಅಮರುಕನಿಗೆ ಅವನೇ ಸಾಟಿ. ಈ ಮೊದಲು ಹೇಳಿದ ಗಾಹಾಸತ್ತಸಯಿಯ ಹಲವು ಪದ್ಯಗಳು ಅಮರುಕನಿಗೆ ಸ್ಫೂರ್ತಿ ಕೊಟ್ಟಿವೆ ಎಂದು ತಿಳಿದು ಬರುತ್ತದೆ. ಕಾವ್ಯಗುಣಕ್ಕೊಂದೇ ಅಲ್ಲದೇ, ಅಮರುಕನ ಪದ್ಯಗಳಿಂದ ಸುಮಾರು ಏಳೆಂಟನೇ ಶತಮಾನದ ಭಾರತದ ಜೀವನ ಶೈಲಿ ಹೇಗಿತ್ತು ಎಂಬುದನ್ನೂ ತಿಳಿಯಬಹುದು ಎಂಬುದು ಒಂದು ವಿಶೇಷವಾದ ಸಂಗತಿ.

ಗಾಹಾಸತ್ತಸಯಿಯಲ್ಲಿ ಬರುವ ಹೆಣ್ಣುಗಳು ಹೆಚ್ಚಾಗಿ ಹಳ್ಳಿಯವರಾಗಿದ್ದರೆ, ಅಮರುಕನ ಪದ್ಯಗಳಲ್ಲಿ ಕಂಡು ಬರುವ ನಾಯಕಿಯರು, ಬಹುಶಃ ಪಟ್ಟಣಗಳಲ್ಲಿದ್ದು, ಹೆಚ್ಚು ಸ್ಥಿತಿವಂತ ಕುಟುಂಬಗಳಿಗೆ ಸೇರಿದವರಂತೆ ತೋರುತ್ತಾರೆ. ಬಡವರೇ ಇರಲಿ ಸಿರಿವಂತರೇ ಇರಲಿ, ಪ್ರೀತಿ ಪ್ರೀತಿಯೇ, ವಿರಹ ವಿರಹವೇ ಅಲ್ಲವೇ? ಇಲ್ಲಿಯೂ ಹಲ ಗಂಡ ಹೆಂಡಿರು ತಿಂಗಳು ಗಟ್ಟಲೆ ಒಬ್ಬರಿಂದೊಬ್ಬರು ದೂರವಿರುವ ಪ್ರಸಂಗಗಳು ಬರುತ್ತವೆ. ಎಲ್ಲ ಪದ್ಯಗಳಲ್ಲೂ, ಪತಿಯು ಊರಿಗೆ ತೆರಳಿದ್ದು ವ್ಯಾಪಾರಕ್ಕೇ ಎಂದು ನೇರವಾಗಿ ಹೇಳಿರದಿದ್ದರೂ, ಹಾಗೆಂದು ಊಹಿಸಲು ಅವಕಾಶವಿದೆ. ಒಂದು ಪದ್ಯದಲ್ಲಂತೂ ವ್ಯಾಪಾರಿಗಳು ಊರಿಂದೂರಿಗೆ ಹೋಗುವಾಗ ಅವರು ಸೇರಿಕೊಳ್ಳುತ್ತಿದ್ದ ‘ಸಾರ್ಥ’ ದ ಬಗ್ಗೆಯೂ ಪ್ರಸ್ತಾಪ ಇರುವುದರಿಂದ ಈ ಅಮರುಶತಕವು ಹೇಳುವ ಎಷ್ಟೋ ವಿರಹಿ ಸ್ತ್ರೀಯರಲ್ಲಿ, (ಪಾಂಥವನಿತೆ, ಪಯಣಿಗರ ಮಡದಿಯರು) ಹಲವರಾದರೂ ವ್ಯಾಪಾರಿ ಕುಟುಂಬಗಳಿಗೆ ಸೇರಿದವರೆಂದು ತಿಳಿದುಕೊಳ್ಳಲು ಅಡ್ಡಿಯೇನಿಲ್ಲ.

ಇಲ್ಲಿ ಬರುವ ಸ್ತ್ರೀಯರು ಸಾಮಾನ್ಯವಾಗಿ ಸ್ಥಿತಿವಂತರಾಗಿದ್ದುದ್ದರಿಂದಲೇ ಇರಬೇಕು, ಅವರೊಡನೆ ಹಲವಾರು ಸಖಿಯರಿರುವುದನ್ನೂ ನೋಡುತ್ತೇವೆ. ಮನೆಯಲ್ಲಿ ಸಾಕುವ ಗಿಳಿಗಳ ಪ್ರಸ್ತಾಪ ಕೆಲವೆಡೆ ಬರುತ್ತದೆ. ಮುತ್ತು ರತ್ನಗಳ ಪ್ರಸ್ತಾಪವೂ ಪರುತ್ತದೆ.  ಕೆಲವು ಪದ್ಯಗಳಲ್ಲಿ ಕೂಡುಕುಟುಂಬಗಳ ವರ್ಣನೆಯೂ ಬರುತ್ತದೆ. ಅತ್ತ ಕಡೆ, ವ್ಯಾಪಾರಕ್ಕೆ ಹೋದ ಗಂಡಂದಿರು, ಪರವೂರುಗಳಲ್ಲಿ ತಂಗುವ ವಿವರಗಳು ಕಂಡೂ ಬರುತ್ತವೆ.  ಕೆಲವು ಪದ್ಯಗಳಲ್ಲಿ ಬರುವ ಮನೆಯ  ಕೈತೋಟ, ಅಲ್ಲಿ ನೀರಿನ ಕಾರಂಜಿ – ಇಂತಹ ಚಿಕ್ಕ ಪುಟ್ಟದೆನಿಸುವ ವಿವರಗಳೆಲ್ಲಾ  ಇದೆಲ್ಲಾ ಆಗಿನ ಜನಜೀವನವನ್ನು ಸೊಗಸಾಗಿ ಬಿಂಬಿಸುತ್ತವೆ.

ಅಮರುಕ ಶತಕದಿಂದ ಆಯ್ದ ಕೆಲವು ಪದ್ಯಗಳನ್ನೂ, ಅವುಗಳ ಕನ್ನಡ  ಅನುವಾದಗಳನ್ನೂ ಈಗ ನೋಡೋಣ. ಅನುವಾದಗಳೆಲ್ಲ ನನ್ನ ಮುಂಬರುವ ಪುಸ್ತಕಕ್ಕಾಗಿ ಮಾಡಿದ ಅನುವಾದಗಳು.  ಅಮರುಕಶತಕದ ಪದ್ಯಗಳೆಲ್ಲ ಮುಕ್ತಕಗಳಾದದ್ದರಿಂದ,  ಒಂದು ಪದ್ಯಕ್ಕೂ ಮತ್ತೊಂದಕ್ಕೂ ಯಾವುದೇ ಸಂಬಂಧವಿಲ್ಲದೇ ಹೋದರೂ,  ಈ ಲೇಖನಕ್ಕಾಗಿ, ಅಮರುಕಶತಕದಲ್ಲಿ  “ಪಯಣಿಗರ ಪತ್ನಿಯರ” ಬಗ್ಗೆ ಇರುವ ಹಲವಾರು ಪದ್ಯಗಳನ್ನು ಒಂದು ಸೂತ್ರದಲ್ಲಿ ಒಗ್ಗೂಡಿಸಲು, ಪದ್ಯಗಳ ನಡುವೆ ಒಂದಷ್ಟು ನನ್ನದೇ ವ್ಯಾಖ್ಯಾನ ಬರೆದಿದ್ದೇನೆ.  ಈ ಪ್ರಯತ್ನ ಆಸಕ್ತರಿಗೆಂದು ಇಷ್ಟವಾಗುವುದೆಂದು ಭಾವಿಸುವೆ.

****

ಮೊದಲು ಒಂದು ಗಂಡ ಹೆಂಡಿರು ಒಬ್ಬರನ್ನೊಬ್ಬರು ಬೀಳ್ಕೊಡುವ ಸಂದರ್ಭ. ಒಬ್ಬ ವ್ಯಾಪಾರಿ ದೂರದೂರಿಗೆ ಪ್ರಯಾಣಕ್ಕೆ ಹೊರಟಿದ್ದಾನೆ. ಅವನ ಹೆಂಡತಿಯೋ, ಬಹಳ ಮುಗ್ಧೆ. ಬಹುಶಃ ಹೊಸದಾಗಿ ಮದುವೆಯಾದವಳೇ ಇರಬಹುದೋ ಏನೋ. ಪ್ರಯಾಣಕ್ಕೆ ಹೊರಟವನನ್ನು ನೀನು ಬರುವುದು ಗಂಟೆ ಹೊಡೆಯುವ ಹೊತ್ತಿಗೋ, ಇಲ್ಲ ನಡುಹಗಲಿಗೋ, ಅಥವಾ ತುಸು ತಡವಾಗಿಯೋ, ಅಂತೂ ಸಂಜೆಯ ಒಳಗೇ ಬಂದೇ ಬರುತ್ತೀ ತಾನೇ ಎಂದು ಅವಳ ಪ್ರಶ್ನೆ. ಆದರೆ, ಆತ ವ್ಯಾಪಾರಕ್ಕೆ ಹೋಗುತ್ತಿರುವ ದೇಶವನ್ನು ತಲುಪುವುದಕ್ಕೇ ನೂರುದಿನಗಳ ಮೇಲೆ ಆಗುವಾಗ, ಅವನು ಅವಳಿಗೆ ಹೇಗೆ ತಾನೇ ಸಮಾಧಾನವನ್ನು ಹೇಳಿಯಾನು?

प्रहरविरतौ मध्ये वाह्नस्ततोऽपि परेऽतथा
किमुत सकले जाते वाह्निप्रिय त्वमिषैह्यसि ।
इति दिनशतप्राप्यं देशं प्रियस्य यियासतो
हरति गमनं बालालापैः सबाष्पगलज्जलैः ॥

ಮೊದಲ ಜಾವಕು ಮುನ್ನವೋ ನಡುಹಗಲಲೋ ತುಸುಬಳಿಕವೋ
ಅಲ್ಲದಿರಲಿಳಿಹೊತ್ತಿಗಲ್ಲವೆ ಇನಿಯ ನೀ ಬರುವುದೆನುತ
ನೂರು ದಿನಗಳ ದೂರ ಪಯಣಕೆ ಹೊರಟುನಿಂತಿಹ ನಲ್ಲನ
ಗಮನ ತಪ್ಪಿಸುತಿಹಳು ಹುಡುಗಿಯು ಬಿಕ್ಕುತಲಿ ಕಂಬನಿಯಲಿ

ಅಂತೂ ಹೇಗೋ ತಾನು ಊರಿಗೆ ಹೊರಡಲೇ ಬೇಕೆಂದು ಅವನು ಆಕೆಗೆ ಒಪ್ಪಿಸಿರಬೇಕು. ಆದರೆ ನಂತರ ಆಗಿದ್ದೇನು? ಆ ಕ್ಷಣದಲ್ಲಿ ಕಣ್ಣು ಮುಚ್ಚಿದ ಅವಳಿಗೆ, ಅವನನ್ನು ಬಿಟ್ಟ ವಿರಹದ ಬೇಗುದಿ ಅಲ್ಲೇ ತಟ್ಟಿದೆ! ಕಣ್ಣು ಬಿಟ್ಟೊಡನೆಯೇ, ಗಂಡ ಅಲ್ಲೇ ಇದ್ದುದನ್ನು ನೋಡಿ, ಅವನು ಊರಿಗೆ ಹೋಗಿ , ಮರಳಿ ಬಂದಾಯಿತೆಂದು ಬಹಳ ಸಂತೋಷಗೊಂಡು, ನೀನು ಯಾವಾಗ ಮರಳಿದೆಯೆಂದು ಅವನನ್ನೇ ಕೇಳುತ್ತಾಳೆ! ಅವನಿಂದ ದೂರವಿರುವುದು ಅವಳಿಗೆ ಎಷ್ಟು ಕಷ್ಟ ಎಂಬುದು ಇಲ್ಲೇ ತಿಳಿಯುತ್ತದೆ!

कान्ते कथञ्चित्गदितप्रयाणे
क्षणं विनम्रा विरहार्दिताङ्गी ।
ततस्तमालोक्य कदाऽगतोऽसी
त्यालिङ्ग्य मुग्धा मुदमाससाद ॥

ಇನಿಯನೂರಿಗೆ ಹೊರಡುವೆನೆನೆ ತ-
ರುಣಿಯು ಮೊಗವನು ನೆಟ್ಟು ಕೆಳಗಡೆ
ಮಣಿಯೆ ವಿರಹದುರಿಯಲಿ ಬೆಂದಳು ಮುಗುದೆಯಾಕ್ಷಣವೆ
ಚಣದ ನಂತರ ನೋಡೆ ನಲ್ಲನು
ಕಾಣಲಾತನ ನೋಡಿಯಚ್ಚರಿ
ಯೆನಿಸಿ ಹರುಷದಿ ತಬ್ಬಿ ನುಡಿದಳು ಬಂದುದೆಂದೆಂದು!

ತಾನಿನ್ನೂ ಪ್ರಯಾಣಕ್ಕೆ ಹೋಗಿಲ್ಲವೆಂದೂ, ಈಗಿನ್ನು ಹೊರಡಲೇಬೇಕೆಂದೂ, ಊರಿಗೆ ಹೋದವರು ಬಂದೇಬರುವರು ಅಲ್ಲವೇ ಎಂದೂ, ತಿಳಿಸುವ ಭಾರ ಇವನಿಗೆ!ಈತ ಸಮಾಧಾನ ಪಡಿಸಬಹುದು. ಕೇಳುವುದು ಅವಳಿಗೆ ಬಿಟ್ಟದ್ದು! ಅವಳು ನಕ್ಕಳಂತೆ, ಆದರೆ ಬದುಕುವಾಸೆಯೇ ಅವಳಲ್ಲಿಲ್ಲ!

याताः किं न मिलन्ति सुन्दरि पुनश्चिन्ता त्वया मत्कृते
नो कार्या नितरां कृशामि कथयत्येवं सबाष्पे मयि ।
लज्जामन्थरतारकेण निपतद्धाराश्रुणा चक्षुषा
दृष्ट्वा मां हसितेन भाविमरणोत्साहस्तया सूचितः ॥

ಪಯಣ ಹೋದರೆ ಮತ್ತೆ ಬಾರದೆ ಇರುವುದುಂಟೇ ಸುಂದರಿ?
ಎನ್ನ ಸಲುವಿಗೆ ಚಿಂತೆಯೇತಕೆ? ಏತಕೀಪರಿ ಸೊರಗಿಹೆ?
ಒದ್ದೆಗಣ್ಣಲಿ ನಾನು ಕೇಳಲು ನಾಚಿ ತುಂಬಿದ ಕಣ್ಗಳ
ನೀರ ತಡೆದಳು! ನೋಡಿ ನಕ್ಕಳು! ತೋರಿ ಸಾವಿಗೆ ಕಾತರ!

ಅವಳು ನಕ್ಕಿದ್ದರಲ್ಲಿ, ಪ್ರಾಣವೇ ಹೋಗಿಬಿಡುವುದೇನೋ ಎಂಬ ದುಃಖ ಅವನಿಗೆ ಕಂಡಿತು. ಆದರೇನಂತೆ? ಜೀವನ ವ್ಯಾಪಾರ ನಡೆಯಬೇಕಲ್ಲ! ಹೇಗೋ ದಿನಗಳು ಕಳೆದುಬಿಡುತ್ತವೆ! ಅವಳಿಗೆ,  ಯೋಚಿಸದಿರು ಎಂದು ಸಮಾಧಾನ ಮಾಡಿದ. ಹೋಗಿ ಬರುವ ದಿನಗಳು ಕಣ್ಣು ಮುಚ್ಚಿ ತೆಗೆದಂತೆ ಕಳೆದು ಹೋಗುವುದೋ ಇಲ್ಲವೋ, ಆದರೆ, ದಿಕ್ಕೇ ತೋಚದೆ ಇರುವುದರಿಂದ ಕಣ್ಣು ತೆರೆದರೇನು, ಮುಚ್ಚಿದರೇನು ಎಂಬ ಭಾವನೆ ಇರಬೇಕು ಅವಳಿಗೆ. ಏನಾದರೂ ಹೇಳು, ಹೊರಡುವ ಮೊದಲು ಎಂದು ಆಕೆಯನ್ನು ಕೇಳಿದರೆ,  ತನ್ನ ಸಾವಿನ ಸುದ್ದಿ ಕೇಳಿದಾಗ, ನನಗೆ ಪುಣ್ಯಕ್ಷೇತ್ರವೊಂದರಲ್ಲಿ ತರ್ಪಣ ಕೊಡು ಎಂದು ಹೇಳುತ್ತ, ಅವನು ಇಲ್ಲದೇ, ತಾನು ಬದುಕಲಾರೆ ಎಂಬುದನ್ನು ಸೂಚಿಸುತ್ತಿದ್ದಾಳೆ!

“कान्ते कत्यपि वासराणि गमय त्वं मीलयित्वा दृशौ
स्वस्ति स्वस्ति निमीलयामि नयने यावन्न शून्या दिशः ।
आयाता वयमागमिष्यति सुहृद्वर्गस्य भाग्योदयैः
सन्देशो वद कस्तवाभिलषितस्तीर्थेषु तोयाञ्जलिः ॥

“ಇನಿಯೆ ದಿನಗಳ ಮುಚ್ಚಿ ಕಣ್ಣನು ಹೇಗೊ ಎಂತೋ ಕಳೆಯೆ, ನೀ”
“ಒಳಿತು! ಕಂಗಳ ಮುಚ್ಚಿ ಬಿಡುವೆನು ದಿಕ್ಕು ತೋಚದ ಮುನ್ನವೇ”
“ಬಂದೆ ಬಿಟ್ಟೆನು ” “ಒಳ್ಳೆ ಗೆಳೆಯರ ಭಾಗ್ಯ ಹೆಚ್ಚಿರೆ ನಿಚ್ಚಳ”
“ನಿನ್ನೊಸಗೆಯೇನಿಹುದು?” “ತರ್ಪಣ ನೀಡು ಪುಣ್ಯಕ್ಷೇತ್ರದಿ”

ಏನೇ ಆಗಲಿ, ಹೊರಡುವುದನ್ನು ತಪ್ಪಿಸಲಾಗದು. ಅಂತೂ ಹೆಂಡತಿಯನ್ನು ಸಮಾಧಾನ ಪಡಿಸಿ ಆತ  ಹೊರಟಿದ್ದಾನೆ. ಹಲ ದಿನಗಳು ಕಳೆದಿವೆ. ಗಂಡನನ್ನು ಬಿಟ್ಟಿರುವ ವಿರಹ ಹೆಂಡತಿಗೆಷ್ಟೋ, ಇವನಿಗೂ ಅಷ್ಟೇ ಇದೆ. ನೂರಾರು ಯೋಜನಗಳ ದಾರಿಯನ್ನು ದಾಟಿದರೂ, ಹೊಳೆ ತೊರೆ ಕಾಡುಗಳನ್ನು ದಾಟಿದ್ದರೂ, ಊರಿನ ದಿಕ್ಕಿಗೆ ನೋಡಿದಾಗ, ಅವಳ ಮೊಗವೇ ಅವನಿಗೆ ಕಾಣುತ್ತಿರುತ್ತದೇನೋ ಎನ್ನಿಸುತ್ತೆ! ಹಾಗೆಂದೇ ಅವನು ಆ ಕಡೆಗೇ ಬಗ್ಗಿ ಬಗ್ಗಿ ನೋಡುತ್ತಿರುತ್ತಾನಂತೆ!

देशैरन्तरिता शतैश्चसरिताम् उर्वीभृतां काननैर्
यत्नेनापि न याति लोचनपथं कान्तेति जानन्नपि ।
उद्ग्रीवश् चरणार्धरुद्धवसुधः कृत्वाश्रुपूर्णां दृशं
ताम् आशां पथिकस् तथापि किमपि ध्यायंश्चिरं वीक्षते ॥

ದೂರದೇಶದಿ ಕಾಡುಮಲೆಹೊಳೆನೂರು ದಾಟಿಹ ಹಾದಿಗ
ತನ್ನ ದಿಟ್ಟಿಗೆ ನಲ್ಲೆ ನಿಲುಕಳು ಎಂಬುದನು ತಾನರಿತರೂ
ಕೊರಳ ನಿಲುಕಿಸಿ ಮೆಟ್ಟುಗಾಲಲಿ ನೀರು ತುಂಬಿದ ಕಣ್ಣಲಿ
ಏನನೋ ನೆನೆಯುತ್ತಲಾಕಡೆಯಲ್ಲೆ ನೋಡುತಲಿರುವನು!

ಅವನ ನೂರು ದಿನಗಳ ಪ್ರಯಾಣದಲ್ಲಿ, ಈ ವ್ಯಾಪಾರಿ ಪ್ರತಿ ರಾತ್ರಿಯೂ ಒಂದಲ್ಲ ಒಂದು ಹಳ್ಳಿಯಲ್ಲಿ ತಂಗಬೇಕು. ಹೀಗೊಮ್ಮೆ ಎಲ್ಲೋ ತಂಗಿದ್ದಾಗ, ತನ್ನ ಪ್ರಿಯೆಯಿಂದ ದೂರವಾಗಿರುವ ದುಃಖವನ್ನೇ ಹಾಡಾಗಿ ಹಾಡುತ್ತಿದ್ದನಂತೆ. ಆ ಹಾಡಿಗೆ, ಮೋಡಗಳೇ ದುಃಖಪೂರಿತರಾಗಿ, ಅವನ ವಿರಹಕ್ಕೆ ಕಣ್ಣೀರು ಸುರಿಸುವಂತೆ ಮಳೆಸುರಿಸಿದವಂತೆ.

रात्रौ वारिभरालसाम्बुदरवोद्विग्नेन जाताश्रुणा
पान्थेनात्मवियोगदुःखपिशुनं गीतं तथोत्कण्ठया ।
आस्तां जीवितहारिणः प्रवसनालापस्य संकीर्तनं
मानस्यापि जलाञ्जलिः सरभसं लोकेन दत्तो यथा ॥

ರಾತ್ರಿ ಹೊತ್ತಿನಲಿ ಮೋಡಮೊರೆವಾಗ ತಳಮಳಿಸಿ ಕಣ್ಣಲಿ
ನೀರ ಸುರಿಸುತ್ತ ತನ್ನ ವಿರಹವನೆ ಹಾಡುತಿರೆ ಹಾದಿಗ
ನೋವ ತುಂಬಿರುವ ಜೀವ ಹಿಂಡುತಿಹ ದನಿಯ ಕೇಳಿ ಲೋಕ
ಪಯಣವಿರಲಿ ಬಿಂಕಕ್ಕು ಕೂಡ ತರ್ಪಣವ ಕೊಟ್ಟಿತಲ್ಲ!

ಇವನ ಈ ದುಃಖವನ್ನು ಕಂಡಮೇಲೆ, ಆ ರಾತ್ರಿಗೆ ಇವನಿಗೆ ಆಸರೆ ಕೊಟ್ಟ ಹಳ್ಳಿಗರು ಏನು ತಾನೇ ಮಾಡಿಯಾರು? ಆದರೇ ರಾತ್ರಿ ಇಡೀ ಇವನು ವಿರಹದಲ್ಲಿ ಹಾಡುವುದನ್ನು , ಆ ಗೋಳಿನ ನೋವನ್ನು ಕೇಳಿದ ಹಳ್ಳಿಗರು, ಇನ್ನು ಮುಂದೆ ಇಂಥ ವ್ಯಾಪಾರಿಗಳಿಗೆ ರಾತ್ರಿ ತಂಗಲು ಅವಕಾಶ ಕೊಡುವುದೇ ಬೇಡ ಎಂದು ನಿರ್ಧಾರ ಮಾಡಿಬಿಟ್ಟರಂತೆ. ಹೇಗಿದ್ದಿರಬಹುದು ನೋಡಿ ಇವನ ವಿರಹದ ತೀವ್ರತೆ!

धीरं वारिधरस्य वारि किरतः श्रुत्वा निशीथे ध्वनिं
दीर्घोच्छ्वासमुदश्रुणा विरहिणीं बालां चिरं ध्यायता ।
अध्वन्येन विमुक्तकण्ठमखिलां रात्रिं तथा क्रन्दितं
ग्रामीणैर्व्रजतो जनस्य वसतिर्ग्रामे निषिद्धा यथा ॥

ಇರುಳಿನಲಿ ಸುರಿವಮಳೆ ಕಾರ್ಮುಗಿಲ ಗುಡುಗುಗಳ ಕೇಳಿ ಕಂಗೆಟ್ಟಾತನು ಊರಿನಲ್ಲೊಬ್ಬಳೇ ನಿಟ್ಟುಸಿರಿನಲಿ ನವೆಯುತಿರುವ ಹುಡುಗಿಯನೆ ನೆನೆದು ಪಯಣಿಗನು ರಾತ್ರಿಯಿಡಿ ಬಿರಿದ ಕೊರಲಲ್ಲಿ ತಾ ಗೋಳಾಡುತಿರುವ ದನಿಯ ಕೇಳಿ ಹಳ್ಳಿಗರಂದೆ ಮುಡಿವು ಮಾಡಿದರೆಡೆಯ ಕೊಡೆವೆಂದು ಪಯಣಿಗರಿಗೆ

ಇವನು ಹೀಗಿದ್ದರೆ, ಅವಳಿನ್ನೂ ಕೋಮಲೆ! ಮಳೆ ಹೀಗೆ ಸುರಿದಿದ್ದಾಗ, ಊರಿನಲ್ಲಿ ಇದ್ದ ಅವಳಿಗೆ ಏನಾಯ್ತೋ!

श्रुत्वा तन्व्या निशीथे नवघनरसितं विश्लथाङ्कं पतित्वा
शय्यायां भूमिपृष्ठे करतलधृतया दुःखितालीजनेन ।
सोत्कण्ठं मुक्तकण्ठं कठिनकुचतटाघातशीर्णाश्रुबिन्दु
स्मृत्वा स्मृत्वा प्रियस्य स्खलितमृदुवचो रुद्यते पान्थबध्वा ॥

ರಾತ್ರಿಯಲಿ ಗುಡುಗೊಂದು ಮೊರೆಯೆ ಸೊರಗಿಹ ಬೆಡಗಿ
ಬೆಚ್ಚಿಬಿದ್ದಿರಲೊಡನೆ ಮೂರ್ಛೆಯಲ್ಲೆ
ಹಾಸಿಗೆಯ ಬಳಿ ಕುಳಿತ ಗೆಳತಿಯರು ಕೊರಗುತ್ತ
ಕೈಗೆ ಮೊಗವಿತ್ತಿರಲು ದುಃಖದಲ್ಲೆ

ಜೋರಾಗಿ ಅಳುತಿರಲು ಸುರಿಸುತಿಹ ಕಣ್ಣೀರು
ಹರಿದು ಹೋಗಿರಲವಳ ಎದೆಯ ಮೇಲೆ
ನೆನೆಯುತ್ತ ನೆನೆಯುತ್ತಲಿನಿಯನಾ ಮೆದುಮಾತ
ಗೋಳಾಡುತಿಹಳು ಪಯಣಿಗನ ನಲ್ಲೆ

ಇಲ್ಲಿ ನೋಡಿ, ಅವಳು ಒಬ್ಬಳೇ ಇಲ್ಲ. ಅವಳ ದುಃಖದಲ್ಲಿ, ವಿರಹದಲ್ಲಿ, ಅವಳ ಸಖಿಯರೂ ಕೂಡ ಪಾಲ್ಗೊಂಡಿದ್ದಾರೆ! ಅವಳು ತನ್ನ ಪ್ರಿಯನನ್ನು ನೆನೆನೆನೆದು , ಗುಡುಗಿನ ಸದ್ದಿಗೆ ಬೆದರಿ, ಮೂರ್ಛೆಯೇ ಹೋದಳಂತೆ. ಅವಳ ಗೋಳಂತೂ ಹೇಳತೀರದಾಗಿದೆ. ಇತ್ತಕಡೆ ಇವನ ಪ್ರಯಾಣ ಮುಂದುವರೆದಿದೆ. ಬಹುಶಃ ಅವನ ಜೊತೆಯಿದ್ದ ಇನ್ನೊಬ್ಬ ವ್ಯಾಪಾರಿಯೊಡನೆ, ಪತ್ನಿಯ ನೆನಪು ಮಾಡಿಕೊಳ್ಳುತ್ತಾ, ತಾನು ಹೊರಡುವಾಗ ತನ್ನ ಮಡದಿಯೊಂದಿಗೆ ನಡೆದ ಸಂಭಾಷಣೆಯನ್ನು ಅವನು ತನ್ನ ಸಹ ಪ್ರಯಾಣಿಕನೊಂದಿಗೆ ಹೀಗೆ ವಿವರಿಸಿದ್ದಿರಬಹುದು:

नभसि जलदलक्ष्मीं सम्भृतां वीक्ष्य दृष्ट्या प्
रवससि यदि कान्तेत्यर्धमुक्त्वा कथञ्चित् ।
मम पटमवलम्ब्य प्रोल्लिखन्ती धरित्रीं
तदनुकृतवती सा यत्र वाचो निवृत्ताः ॥

ಆಗಸದಿ ಮಳೆ ಮೋಡ ಮೊರೆದಿರೆ ಕಣ್ಣು ತುಂಬಿಸಿ ಕೋಮಲೆ
“ನಲ್ಲ ಪಯಣಕೆ ನೀನು ಹೋದರೆ” ಎನಲು ಮಾತೇ ಕಟ್ಟಿರೆ
ನನ್ನ ಬಟ್ಟೆಯ ಹಿಡಿದದೆಂತೋ ನೆಲವ ಕೆರೆಯುತ ಸುಮ್ಮನೆ
ನಿಂತು ಬಿಟ್ಟುದ ಮಾತಿನಲಿ ನಾನಿಂದು ಹೇಳಲು ಸಾಧ್ಯವೆ?

ಇವನು ಹೊರಟು ಹಲವಾರು ತಿಂಗಳೇ ಆಗಿಹೋಗಿದೆಯೋನೋ! ಇವನಿಲ್ಲದ ಅವನ ಹೆಂಡತಿ ಸೊರಗಿ ಹೋದಳು. ಎಷ್ಟೆಂದರೆ ಅವಳ ಕೈಗಳಿಂದ ಬಳೆಗಳು ಜಾರಿ ಹೋಗುವಷ್ಟು, ಅವಳು ಒಣಗಿ ಬಡವಾಗಿಹೋದಳು. ಅವಳ ಸ್ಥಿತಿಯನ್ನು ಕವಿ ವಿವರಿಸುವುದು ಈ ಮುಂದಿನ ಪದ್ಯದಿಂದ.

प्रस्थानं वलयैः कृतं प्रियसखैरस्रैरजस्रं गतं
धृत्या न क्षणमासितं व्यवसितं चित्तेन गन्तुं पुरः ।
गन्तुं निश्चितचेतसि प्रियतमे सर्वे समं प्रस्थिता
गन्तव्ये सति जीवितप्रियसुहृत्सार्थः किमुत्यज्यते ॥

ತೊಟ್ಟ ಬಳೆಗಳು ಕೈಯ ತೊರೆದಿವೆ ಕಣ್ಣ ನೀರದು ಸುರಿದಿದೆ
ಧೈರ್ಯ ಚಣದಲೆ ಮಾಯವಾಗಿದೆ ಮನಸು ದೂರಕೆ ಓಡಿದೆ
ಗಟ್ಟಿ ಮನದಲೆ ನಲ್ಲ ತೆರಳಿರೆ ಜೊತೆಯಲೇ ಇವರೆಲ್ಲರೂ
ಹೊರಟು ಹೋದರೆ ಜೀವ ಸಾರ್ಥವ ತೊರೆದು ಉಳಿದಿಹೆಯೇತಕೆ?

ನೂರಾರು ವ್ಯಾಪಾರಿಗಳು ದೇಶದಿಂದ ದೇಶಕ್ಕೆ ಪ್ರಯಾಣ ಹೋಗುವ ಗುಂಪಿಗೆ ಸಾರ್ಥ ಎಂದು ಹೆಸರು. ಎಸ್.ಎಲ್. ಭೈರಪ್ಪ ಅವರ ‘ಸಾರ್ಥ’ ಕಾದಂಬರಿ ಓದಿದ್ದವರಿಗೆ, ಅಲ್ಲಿಯ ವಿವರಗಳು ನೆನಪಿಗೆ ಬಂದರೂ  ಬರಬಹುದು. ಸಾರ್ಥಗಳಲ್ಲಿ ವ್ಯಾಪಾರಿಗಳಷ್ಟೇ ಅಲ್ಲದೆ, ಸರಕು ಸಾಗಿಸುವ ಗಾಡಿಗಳು, ಅವುಗಳನ್ನು ಎಳೆಯುವ ಎತ್ತುಗಳು, ಕತ್ತೆಗಳು; ಇನ್ನು ಪ್ರಯಾಣದ ಸಮಯದಲ್ಲಿ ಹಾಲು ಮೊಸರಿಗೆ ಬೇಕಾಗುವ ಹಸುಗಳು, ಬಂಡಿಗಳನ್ನು ದುರಸ್ತಿ ಮಾಡುವ ಬಡಗಿ, ಕಮ್ಮಾರರು, ಇನ್ನು ತೀರ್ಥ ಸ್ಥಳಗಳಿಗೆ ಹೋಗ ಬಯಸುವ ವಯಸ್ಸಾದ ಯಾತ್ರಿಗಳು, ಹೀಗೆ ಒಬ್ಬರ ಹಿಂದೆ ಒಬ್ಬರು ಹೋಗುತ್ತಿದ್ದರು. ಇವರನ್ನೆಲ್ಲ ಸುರಕ್ಷಿತವಾಗಿ ಕಾಯುವುದು ಸಾರ್ಥವನ್ನು ನಡೆಸುವ ಸಾರ್ಥವಾಹನ ಜವಾಬ್ದಾರಿ. ಹಾಗಾಗಿ ಚಿಕ್ಕ ಸೈನಿಕ ಪಡೆ – ಕೂಡ ಸಾರ್ಥಗಳ ಜೊತೆ ಹೋಗುತ್ತದ್ದವಂತೆ.

ಅದಿರಲಿ,  ಈ ಪದ್ಯದಲ್ಲಿ ನಾಯಕಿ, ತನ್ನ ಕೈಯಿಂದ ಜಾರಿ ಹೋದ ಬಳೆಗಳನ್ನು, ಕಣ್ಣಿಂದ ಸುರಿದ ನೀರನ್ನು, ಮಾಯವಾದ ಧೈರ್ಯವನ್ನು, ತನ್ನತನವನ್ನೇ ಕಳೆದುಕೊಂಡ ಮನಸ್ಸನ್ನು, ತನ್ನ ಪ್ರಿಯನು ಹೋದ ಸಾರ್ಥದಲ್ಲಿ ಒಬ್ಬರೊಡನೆ ಒಬ್ಬರು ಹೋದಂತೆ ಇಲ್ಲೂ, ತನ್ನ ಬಿಟ್ಟು ಇವರೆಲ್ಲ ಹೊರಟು ಹೋದರು ಎಂದು ಸಮೀಕರಿಸುತ್ತಿದ್ದಾಳೆ. ತನ್ನ ಜೀವವನ್ನು, ನೀನಾದರೂ ಏಕಿದ್ದೀಯೆ? ನೀನೂ ಸಾರ್ಥದೊಡನೆಯೇ ಹೊರಟು ಹೋಗಬೇಕಿತ್ತು ಎಂದು, ತಾನು ಬದುಕುವುದೇ ಕಷ್ಟವಾಗಿದೆ ಎಂಬುದನ್ನು ಸೂಚಿಸುವಂತೆ ಹೇಳುತ್ತಿದ್ದಾಳೆ. ಪ್ರಯಾಣದ ಬಗ್ಗೆ ಹಲವಾರು ಪದ್ಯಗಳು ಅಮರುಕಶತಕದಲ್ಲಿ ಇದ್ದರೂ, ಸಾರ್ಥದ ಹೆಸರು ನೇರವಾಗಿ ಬರುವುದು ಇದೊಂದೇ ಪದ್ಯದಲ್ಲಿ.

ಹಲವು ತಿಂಗಳಾಗಿವೆ. ಬಹುಶಃ ಅವನು ತಲುಪಬೇಕಾದೆಡೆಗೆ ತಲುಪಿದ್ದಾನೆ. ವ್ಯಾಪಾರದ ಕೆಲಸಗಳನ್ನೂ ಮುಗಿಸಿದ್ದಾನೆ. ಊರಿನೆಡೆಗೆ ಮರಳುತ್ತಿದ್ದಾನೆ. ಒಂದು ಹಳ್ಳಿಯಲ್ಲಿ ತಂಗಲು ಹೊರಟಿದ್ದಾನೆ. ಆದರೆ ಅವನಿಗೆ ಅಲ್ಲಿ ರಾತ್ರಿ ಮಲಗಲು ಎಡೆ ಸಿಕ್ಕಿತೇ? ಇಲ್ಲವೇ?

ग्रामेऽस्मिन् पथिकाय पान्थ वसतिर्नैवाधुना दीयते
पश्‍यात्रैव विवाहमण्डपतले पान्थः प्रसुप्‍तो युवा ।
तेनोत्थाय खलेन गर्जति घने स्मृत्वा प्रियां तत्कृतं
येनाद्यापि करङ्कदण्डपतनाशङ्की जनस्तिष्ठति ॥

ಆ ಹಳ್ಳಿಗರೆಂದರಂತೆ — ನಿನಗಿಲ್ಲಿ ರಾತ್ರಿ ತಂಗಲು ಬಿಡಲಾರೆವು ! ಏಕೆ ಗೊತ್ತೇ? ಹಿಂದೊಮ್ಮೆ, ನಿನ್ನಂಥ ಯುವಕನೊಬ್ಬ ಮದುವೆ ಮಂಟಪದಲ್ಲಿ ರಾತ್ರಿ ತಂಗಿದ್ದ, ಅವನು ಅವನ ಹೆಂಡತಿಯನ್ನು ನೆನೆದು ಅತ್ತ ಗೋಳಿಗೆ, ಮಂಟಪದ ಚಪ್ಪರವೇ ಕುಸಿದು ಹೋಗಿ, ಮದುವೆಯೇ ನಿಂತಿತ್ತು!

ಇಲ್ಲಿ ನೀಡೆವು ಹಾದಿಗನೆ ವಸತಿಯನು ತಂಗಲು ಇರುಳಲಿ
ಒಮ್ಮೆ ಹಳ್ಳಿಯ ಮದುವೆ ಮಂಟಪದಲ್ಲಿ ಹರೆಯದ ಪಯಣಿಗ
ನಿದ್ದೆ ಮಾಡಿರೆ ಮೋಡ ಗುಡುಗಿರೆ ಬೆಚ್ಚಿ ನಲ್ಲೆಯ ನೆನೆದವ
ಚಪ್ಪರವೆ ಕುಸಿವಂತೆ ಮಾಡಿದುದಿಂದು ಜನರಿಗೆ ನೆನಪಿದೆ

ಆ ಕಾರಣಕ್ಕೆ ನಿನ್ನಂತಹ, ಹೆಂಡತಿಯನ್ನು ದೂರದೂರಿನಲ್ಲಿ ಬಿಟ್ಟು ಬಂದಿರುವ ಯುವಕರಿಗೆ, ನಾವಿಲ್ಲಿ ತಂಗಲು ಅವಕಾಶ ಕೊಡಲಾರೆವು ಎಂದರಂತೆ ಹಳ್ಳಿಗರು. ಪಾಪ, ಇವನೇನು ಮಾಡಿದನೋ? ಊರಿಗೆ ಕಡೆಗೆ ನಿಧಾನವಾಗಿ ಹೆಜ್ಜೆ ಹಾಕಿರಬೇಕು. ಅಂತೂ ಅವನು ಊರನ್ನು ತಲುಪುವ ದಿನ ಸಮೀಪಿಸಿದೆ. ಮಡದಿ ಇಂದು ಬರುವನು ನಾಳೆ ಬರುವನು ಎಂದು ಕಾದಿಹಳು!

आदृष्टिप्रसरात्प्रियस्य पदवीमुद्वीक्ष्य निर्विण्णया
विच्छिन्नेषु पथिष्वहःपरिणतौ ध्वान्ते समुत्सर्पति ।
दत्तैकं सशुचा गृहं प्रति पदं पान्थस्त्रियास्मिन्क्षणे
मा भूदागत इत्यमन्दवलितग्रीवं पुनर्वीक्षितम् ॥

ಕಣ್ಣು ತೋರುವವರೆಗು ನಲ್ಲನಾ ಹಾದಿಯನೆ ಕಾಯ್ದು ಬೇಸತ್ತಾಗಲೆ
ದಾರಿಗರ ಸಪ್ಪಳವು ನಿಲ್ಲುತಿರೆ ಹೊರಗೆಲ್ಲ ಹಬ್ಬುತಿರೆ ಕಗ್ಗತ್ತಲೆ
ಹೆಣ್ಣಿವಳು ಮನೆಯೆಡೆಗೆ ತಿರುಗುತ್ತ ಹಾಕಿರಲು ಹೆಜ್ಜೆಯೊಂದನ್ನಾಕಡೆ
ಕೂಡಲೆಯೆ ಬಂದನೇನೋಯೆನುತ ಕತ್ತನ್ನು ಮೆಲ್ಲ ಹೊರಳಿಸಿ ನೋಳ್ಪಳೆ

ದಿನವೆಲ್ಲ ಊರ ಬಾಗಿಲಲ್ಲೇ ಕಾದಿದ್ದಾಳೇನೋ.. ಸಂಜೆಯಾಗಿದೆ. ಇನ್ನು ಮನೆಗೆ ತೆರಳಬೇಕೆಂದು ಹೋಗುತ್ತಿರುವಾಗ, ಸದ್ದಾಯಿತಂತೆ, ಕೂಡಲೆ ಇವನು ಬಂದೇ ಬಿಟ್ಟನೋ ಏನೋ ಎಂಬ ಆಸೆಯಿಂದ ತಿರುಗಿ ನೋಡಿದಳವಳು.

ಅವನು ಊರಿಗೆ ತಲುಪಲು ಇನ್ನು ಕೆಲವೇ ದಿನಗಳು ಉಳಿದಿವೆ. ತನ್ನ ಹಾದಿ ಕಾಯುವ ನಲ್ಲೆಯು ಏನು ಮಾಡುತ್ತಿರಬಹುದೆಂಬ ಯೋಚನೆ ಆತನಿಗೆ.

तप्तेमहाविरहवह्निशिखावलीभिः
आपाण्डुरस्तनतटे हृदये प्रियायाः ।
मन्मार्गवीक्षणनिवेषितदीनदृष्टेः
नूनं छमच्छमिति बाष्पकणाः पतन्ति ॥

ನಾ ಬರುವ ದಾರಿಯನೆ ಕಾಯುತಿರೆ ಕೊರಗಿನಲಿ
ಅಗಲಿಕೆಯ ಉರಿನಾಲಗೆಯೊಳು ಬೆಂದು
ಮನದಿನಿಯೆ ದಳದಳನೆ ಸುರಿಸುತಿಹ ಕಣ್ಣೀರು
ಬಿಳಿಚಿದೊಡಲೆದೆಯಲ್ಲಿ ಸುರಿವುದಯ್ಯೋ!

ಅಂತೂ ಇಂತೂ ಅವಳನ್ನುನೆನೆಯುತ್ತ ನೆನೆಯುತ್ತ ಒಮ್ಮೆ ಊರಿಗೆ ಸೇರಿದ್ದಾನೆ. ಇಬ್ಬರಿಗೂ ಸಂಭ್ರಮವೋ ಸಂಭ್ರಮ. ಆದರೆ ಮನೆಯಲ್ಲಿರುವ ಜನದಿಂದ ಏಕಾಂತ ದೊರೆಯದೇ ಹೋಗಿದೆ.

आयाते दयिते मनोरथशतैर्नीत्वा कथंचिद्दिनं
वैदग्ध्यापगमाज्जडे परिजने दीर्घां कथां कुर्वति ।
दष्टास्मीत्यभिधाय सत्वरपदं व्याधूय चीनांशुकं
तन्वङ्ग्या रतिकातरेण मनसा नीतः प्रदीपः शमम् ||

ತಿಂಗಳುಗಳ ನಂತರ ಮನೆಗೆ ಗಂಡ ಬಂದರೂ, ಅವಳು ಇಡೀ ದಿನವನ್ನು ಅವಳು ಹೀಗೆ ನಿರೀಕ್ಷೆಯಲ್ಲೇ ಕಳೆಯಬೇಕಾಯಿತು ಸಂಜೆಯಾದರೂ, ಸಖಿಯರ ಹರಟೆ ನಿಲ್ಲದೇ ಹೋಗಿರಲು ಜಾಣೆ ಮಾಡಿದ್ದೇನು?

ಊರಿನಿಂದಲಿಯಿನಿಯ ಮರಳಿಬಂದಿರುವಂದು ನೂರಾಸೆಗಳಲಿ ದಿನವ
-ನ್ನೆಂತೊ ಕಳೆಯುತ ಸಂಜೆ ಕೋಣೆಯನು ಸೇರಿದರೆ ಗೆಳತಿಯರ ಹರಟೆನಿಲದೇ
ಹೋಗಿರಲು ತವಕದಲಿ ಏನೊ ಕಚ್ಚಿತುಯೆನುತ ರೇಸಿಮೆಯ ಮೇಲುಡುಗೆಯ
ಎಸೆದಳೀ ಬೆಡಗಿ ನಲ್ಲನ ಸೇರುವಾಸೆಯಲಿ ದೀಪವನು ನಂದಿಸುತಲಿ!

****

ಹೀಗೆ, ಅಮರುಕ ಶತಕವು ಕಾವ್ಯ ಸೌಂದರ್ಯಕ್ಕೆ ಒಂದು ಮಾದರಿಯಾಗಿದ್ದರೆ, ನಮ್ಮ  ಚರಿತ್ರೆಯನ್ನು ಅರಿಯಲು ಇನ್ನೊಂದು ಕೈಗನ್ನಡಿಯಾಗಿದೆ. ಎಷ್ಟೋ ಬಾರಿ, ನಮ್ಮ ಹಿಂದಿನ ಇತಿಹಾಸಕ್ಕೆ ಆಧಾರಗಳು ಕಡಿಮೆಯೆಂಬ ದೂರು ನೀವು ಕೇಳಿರಬಹುದು. ಆದರೆ, ಇಂತಹ ಕಾವ್ಯಗ್ರಂಥಗಳನ್ನೂ ಒಳಹೊಕ್ಕು ನೋಡಿದಾಗ, ಸಂಸ್ಕೃತಿಯ ಒಳಸೆಲೆ ತಿಳಿಯುವುದು ನಿಚ್ಚಳ. ಇದಕ್ಕೆ ಹಲವು ಭಾರತೀಯ  ಭಾಷೆಗಳನ್ನು ಬಲ್ಲ ಇತಿಹಾಸಕಾರರು ಬೇಕು. ಕಾವ್ಯನಾಟಕಾದಿಗಳನ್ನು ಓದುವವರೂ ಬೇಕು. ಅದಿಲ್ಲದೇ,  ಹೋದರೆ, ತಿಳಿಯಬೇಕಾದ ಹಲವು ವಿಷಯಗಳು ಜನದ ಕಣ್ಣಿಗೆ ತಿಳಿಯದೇ ಹೋಗುತ್ತವೆ. ಇನ್ನು ಮುಂದೆ ಪಠ್ಯಪುಸ್ತಕಗಳನ್ನು ರಚಿಸುವಾಗ ಇಂತಹ ವಿಷಯಗಳನ್ನು ಗಮನಿಸುವರೆಂದು ಆಶಿಸುವೆ.

(Image credit: nityamsingharoy.in)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply