ಉತ್ತರ ಮತ್ತು ಮಧ್ಯ ಭಾರತದಲ್ಲಿ ನಾಗರ ಹಾಗು ದಕ್ಷಿಣದಲ್ಲಿ ದ್ರಾವಿಡ ಪದ್ಧತಿಯ ದೇವಾಲಯಗಳನ್ನು ಕಟ್ಟುವ ರೂಡಿಯಿದ್ದ ಕಾಲ. ಅದೇ ಸಮಯದಲ್ಲಿ ದಖ್ಖನ್ ಪ್ರಸ್ಥಭೂಮಿಯಲ್ಲಿ ಬೇರೊಂದು ವಾಸ್ತುಶೈಲಿಯ ಪ್ರಯೋಗ ನಡೆಯುತ್ತಿತ್ತು. ಅಲ್ಲಿ ನಾಗರ ಮತ್ತು ದ್ರಾವಿಡ ವಾಸ್ತುಶೈಲಿಗಳ ಸಂಯೋಜನೆ ನಡೆದು ಹೊಸದೊಂದು ಮಿಳಿತ ಪದ್ಧತಿ ಮೂಡಿ ಬಂತು. ಎರಡರ ಮಿಶ್ರಣವಾದ ಕಾರಣದಿಂದ ಈ ನೂತನ ದೇವಾಲಯ ಕಟ್ಟಡ ಶೈಲಿಗೆ ವೇಸರ ಅಥವಾ ವ್ಯಮಿಶ್ರ ಎಂದು ಕರೆಯಲಾಯಿತು
ಈ ನವೀನ ಶೈಲಿಯನ್ನು ದ್ವಾರಸಮುದ್ರದ ಹೊಯ್ಸಳ ವಂಶದವರು ತಮ್ಮ ಆಡಳಿತ ಪ್ರದೇಶಗಳಲ್ಲಿ (ಅಂದರೆ ಇಂದಿನ ಒಳನಾಡು ಕರ್ನಾಟಕ) ಅತ್ಯುತ್ಸಾಹದಿಂದ ಪ್ರೋತ್ಸಾಹಿಸಿದರು. ಇಂದು ನಾವು ಕಾಣುವ ದಖ್ಖನ್ ಪ್ರದೇಶದಲ್ಲಿನ ವೇಸರ ವಾಸ್ತುಶೈಲಿಯ ದೇವಾಲಯಗಳನ್ನು ಹೆಚ್ಚಾಗಿ ಕ್ರಿ.ಶ 1100 ರಿಂದ 1300ರ ಅವಧಿಯಲ್ಲಿ ನಿರ್ಮಿಸಲಾಗಿದೆ.
ಎರಡು ಪದ್ಧತಿಗಳ ಮಿಶ್ರಣವಾದ ಕಾರಣದಿಂದ ವೇಸರ ವಾಸ್ತುಶೈಲಿಯ ದೇವಾಲಯಗಳ ತಲವಿನ್ಯಾಸಕ್ಕಾಗಲಿ ಅಥವಾ ಕಟ್ಟಡ ರಚನೆಗಾಗಲಿ ಕಟ್ಟು ನಿಟ್ಟಾದ ನಿಯಮಗಳಿಲ್ಲ. ಹೀಗಾಗಿಯೇ ಈ ಪ್ರದೇಶದ ದೇವಾಲಯಗಳ ರಚನೆ ಮತ್ತು ವಾಸ್ತುಶೈಲಿಯಲ್ಲಿ ಸಾಕಷ್ಟು ವ್ಯತ್ಯಾಸಗಳು ಕಂಡು ಬರುತ್ತದೆ. ಕೆಲವು ವೇಸರ ದೇವಾಲಯಗಳಲ್ಲಿ ಚತುರಸ್ರ (ಚೌಕ) ಪ್ರಾಸಾದ (ಕಟ್ಟಡ /ಮಹಲು ) ಕಂಡು ಬಂದರೆ ಮತ್ತೆ ಕೆಲವಲ್ಲಿ ನಕ್ಷತ್ರಾಕಾರದ ಪ್ರಾಸಾದ ಕಂಡುಬರುತ್ತದೆ.
ದ್ರಾವಿಡ ಶಿಲ್ಪಶಾಸ್ತ್ರದ ಪ್ರಮುಖ ಗ್ರಂಥವಾದ ಈಶನಾಗುರುದೇವಪದ್ಧತಿಯಲ್ಲಿ ಉಲ್ಲೇಖಿಸಿದಂತೆ “ದೇವಾಲಯದ ಗೋಪುರ ರಚನೆಯಿಂದ ವಾಸ್ತುಶೈಲಿಯನ್ನು ಗುರುತಿಸಬಹುದು.” ವೇಸರ ದೇವಾಲಯಗಳ ಗೋಪುರಗಳು ತಮ್ಮ ಸುಂದರ ಆಕಾರ ಮತ್ತು ಸೂಕ್ಷ್ಮ ಶಿಲ್ಪಕಲೆಗಳಿಂದ ಎದ್ದುಕಾಣುತ್ತವೆ.
ವೇಸರ ಶೈಲಿಯಲ್ಲಿ ಗೋಡೆಗಳ ರಚನೆ ದ್ರಾವಿಡ ಶೈಲಿಯದ್ದಾದರೂ ಗೋಪುರಗಳಲ್ಲಿ ಭಾರತೀಯ ದೇವಾಲಯ ವಾಸ್ತುಶಿಲ್ಪವೆಂದೇ ಪ್ರಖ್ಯಾತವಾದ ನಾಗರ ಶೈಲಿಯ ವೈಶಿಷ್ಟ್ಯತೆ ಕಂಡು ಬರುತ್ತದೆ. ಒಮ್ಮೊಮ್ಮೆ ನಾಗರ ಮತ್ತು ದ್ರಾವಿಡ ಎರಡರ ಹಿತಮಿತ ಮಿಶ್ರಣವನ್ನು ಗೋಡೆ ಮತ್ತು ಗೋಪುರ ರಚನೆಯಲ್ಲೂ ಕಾಣಬಹದು.
ಉದಾಹರಣೆಗೆ , ಕ್ರಿ.ಶ 1258 ರಲ್ಲಿ ಕಟ್ಟಿದ ಸೋಮನಾಥಪುರದ ಚೆನ್ನಕೇಶವ ದೇವಾಲಯಕ್ಕೆ ಮೂರು ಗರ್ಭಗೃಹಗಳಿದ್ದು , ಮೂರೂ ಗರ್ಭಗುಡಿಗಳು ನಕ್ಷತ್ರಾಕಾರದ ವೇದಿಕೆಯ ಮೇಲೆ ನಿಂತಿದೆ. ಹೊರಭಾಗದ ಗೋಡೆಗಳು ಸುಂದರ ಕುಸುರಿ ಕೆತ್ತನೆಯ ಕಂಬಗಳಿಂದ ಕೂಡಿದ್ದು ನಾಗರ ಶೈಲಿಯನ್ನು ಹೋಲುತ್ತದೆ. ಗೋಡೆಗಳು ನಕ್ಷತ್ರಾಕಾರದ ವೇದಿಕೆಯ ಮೇಲೆ ನಿಂತಿರುವುದರಿಂದ ಮೇಲ್ಭಾಗದ ರಚನೆಯೂ ಗೋಪುರದವರೆಗೆ ನಕ್ಷತ್ರಾಕಾರದಲ್ಲಿದೆ.
ಚತುರಸ್ರಪ್ರಾಸಾದವಾದರೂ ಹೊರಭಾಗದ ಗೋಡೆಗಳು ಸರಳವಾಗಿದ್ದು ಕೇವಲ ಕಂಬಗಳ ಮೇಲೆ ದ್ರಾವಿಡ ಶೈಲಿಯ ಕುಸುರಿ ಕೆತ್ತನೆಗಳಿರುವ ಉದಾಹರಣೆಗಳೂ ಇವೆ. ಹೊಯ್ಸಳ ವಿಷ್ಣುವರ್ಧನನ ರಾಣಿ ಶಾಂತಲಾದೇವಿ ಕ್ರಿ.ಶ 1100 ರಲ್ಲಿ ಕಟ್ಟಿಸಿದ ಶಾಂತಿಗ್ರಾಮದ ಭೋಗಾ ನರಸಿಂಹ ದೇವಾಲಯದಲ್ಲಿ ದ್ರಾವಿಡ ಶೈಲಿಯ ಜೋಡಿ ಕಂಬಗಳನ್ನು ಕಾಣಬಹುದು. ಸರಳ ಗೋಡೆಗಳುಳ್ಳ ಚೌಕಾಕೃತಿಯ ಈ ದೇವಾಲಯಕ್ಕೆ ವೇಸರ ಪದ್ಧತಿಯಂತೆ ಗೋಪುರದಲ್ಲಿ ಕೆತ್ತಿದ ಗುಮ್ಮಟ (ಅಮಲಕ) ಮತ್ತು ಕಳಶವಿದೆ. ಹೊಯ್ಸಳರು ವೇಸರ ಪದ್ದತಿಯನ್ನು ಎಷ್ಟರ ಮಟ್ಟಿಗೆ ಪ್ರೋತ್ಸಾಹಿಸಿದರೆಂದರೆ ಈ ದೇವಾಲಯಗಳನ್ನು ಇಂದು ಸಾಮಾನ್ಯವಾಗಿ ‘ಹೊಯ್ಸಳ ಶೈಲಿ‘ ಎಂದೆ ಗುರುತಿಸುತ್ತಾರೆ.
ವೇಸರ ವಾಸ್ತುಶೈಲಿಯ ಗೋಪುರ ರಚನೆಯು ನಾಗರ ಶೈಲಿಯ ಅಕಾರ ಮತ್ತು ದ್ರಾವಿಡ ಶೈಲಿಯ ಅಂಶಗಳಿಂದ ಕೂಡಿದೆ ಎಂದೂ ಹೇಳಬಹದು. ವೇಸರದ ಗೋಪುರಗಳಲ್ಲಿ ನಾಗರ ಶೈಲಿಯ ಕೆತ್ತಿದ ಗುಮ್ಮಟ (ಅಮಲಕ) ಕಂಡು ಬಂದರೂ ಗೋಪುರದ ಉಳಿದೆಲ್ಲ ಅಂಶಗಳು ದ್ರಾವಿಡ ಶೈಲಿಯನ್ನು ಹೋಲುತ್ತದೆ. ವೇಸರ ಗೋಪುರಗಳ ಪ್ರಮುಖ ವೈಶಿಷ್ಟ್ಯತೆಯೆಂದರೆ ಅಲಂಕೃತ ಶಿಲ್ಪಕಲೆ ಮತ್ತು ಕುಸುರಿ ಕೆತ್ತನೆಗಳು. ವೇಸರ ಗೋಪುರಗಳ ಇನ್ನೊಂದು ವಿಶೇಷತೆಯೆಂದರೆ ಗೋಪುರದ ಮೇಲೆ ಕೆತ್ತಿರುವ ದೇವ–ದೇವತೆಗಳ ಚಿಕ್ಕ ಚಿಕ್ಕ ಮೂರ್ತಿಗಳು. ಕ್ರಿ,ಶ 1100 ರಲ್ಲಿ ಕಟ್ಟಿರುವ ನೀಲಗುಂದದ ಭೀಮೇಶ್ವರ ದೇವಸ್ಥಾನದಲ್ಲಿ ಸುಂದರವಾದ ಗೋಪುರದ ಮೇಲೆ ಅಲ್ಲಲ್ಲಿ ವಿಷ್ಣು, ಶಿವ ಮತ್ತು ಭೈರವರ ಮೂರ್ತಿಗಳನ್ನು ಕಾಣಬಹುದು.
ನಾಲ್ಕು ಗರ್ಭಗುಡಿಗಳಿರುವ ಈ ದೇವಾಲಯ ಚೌಕಾಕಾರದ ವೇದಿಕೆಯ ಮೇಲೆ ನಿಂತಿದೆ. ದ್ರಾವಿಡ ಶೈಲಿಯ ಜೋಡಿ ಕಂಬಗಳುಳ್ಳ ಸರಳವಾದ ಗೋಡೆಯ ಮೇಲೆ ನಾಗರ ಶೈಲಿಯಲ್ಲಿ ಕಾಣಸಿಗುವಂತೆ ದೇವ–ದೇವತೆಗಳ ಮೂರ್ತಿಗಳುಳ್ಳ ಚಿಕ್ಕ ಚಿಕ್ಕ ಗುಡಿಗಳನ್ನು ಕೆತ್ತಲಾಗಿದೆ. ವೇಸರ ಶೈಲಿಯ ದೇವಾಲಯಗಳು ಹೆಚ್ಚಾಗಿ ಎತ್ತರದ ವೇದಿಕೆಯ ಮೇಲೆ ನಿರ್ಮಿತವಾಗಿದ್ದು, ಈ ವೇದಿಕೆಯನ್ನು ಪ್ರದಕ್ಷಿಣೆಯ ಮಾರ್ಗವಾಗಿ ಬಳಸಲಾಗುತ್ತದೆ. ವೇದಿಕೆಗೆ ಜಗತಿ /ಅಧಿಷ್ಠಾನ ಎಂದೂ ಕರೆಯಲಾಗುತ್ತದೆ. ಸೋಮನಾಥಪುರದ ಚೆನ್ನಕೇಶವ ದೇವಾಲಯ ಮೂರಡಿ ಎತ್ತರದ ಜಗತಿಯ ಮೇಲಿದೆ. ಜಗತಿಯು ದೇವಾಲಯದ ವಿನ್ಯಾಸವನ್ನೇ ಹೋಲುತ್ತಾ ವಿಶಾಲವಾದ ಪ್ರದಕ್ಷಿಣಾ ಪಥಕ್ಕೆ ಎಡೆಮಾಡಿಕೊಡುತ್ತದೆ ಮತ್ತು ಜಗತಿಯ ಮೇಲೆ ಅಲ್ಲಲ್ಲಿ ಕಲ್ಲಿನ ಆನೆಗಳನ್ನು ಸ್ಥಾಪಿಸಲಾಗಿದೆ.
ಕ್ರಿ.ಶ 1258 ರಲ್ಲಿ ಹೊಯ್ಸಳರ ದೊರೆ ಮುಮ್ಮಡಿ ನರಸಿಂಹನ ಆದೇಶದಂತೆ ಅವನ ದಂಡನಾಯಕನಾಗಿದ್ದ ಸೋಮನಾಥ ನಿರ್ಮಿಸಿದ ಸೋಮನಾಥಪುರದ ಚೆನ್ನಕೇಶವ ದೇವಾಲಯವು ವಿಷ್ಣುವಿನ ಮೂರು (ಕೇಶವ, ವೇಣುಗೋಪಾಲ ಮತ್ತು ಜನಾರ್ಧನ) ರೂಪಗಳಿಗೆ ಸಮರ್ಪಿಸಲಾಗಿದೆ.
ಸೋಮನಾಥಪುರದ ಚೆನ್ನಕೇಶವ ದೇವಾಲಯಕ್ಕೆ ಮೂರು ಗರ್ಭಗೃಹಗಳಿದ್ದರೆ , ಬೇಲೂರು ಚೆನ್ನಕೇಶವ ದೇವಾಲಯದಲ್ಲಿ ಕೇವಲ ಒಂದೇ ಗರ್ಭಗುಡಿಯಿದೆ. ಬೇಲೂರಿನ ದೇವಾಲಯವು ಉತ್ಕೃಷ್ಟ ಶಿಲ್ಪಕಲೆಗೆ ಪ್ರಸಿದ್ಧ. ಸೋಮನಾಥಪುರದ ದೇವಾಲಯಕ್ಕೆ ಮೂರು ಗರ್ಭಗುಡಿಗಳಿರುವ ಕಾರಣ ಅದಕ್ಕೆ ಮೂರು ಗೋಪುರ (ಶಿಖರ)ಗಳಿವೆ. ಇದಕ್ಕೆ ತ್ರಿಕುಟಾಚಲ ಎಂದೂ ಕರೆಯುತ್ತಾರೆ. ಗೋಪುರಗಳ ಮೇಲೆ ಅಧೋಮುಖ (ತಲೆಕೆಳಗಾದ) ಪದ್ಮ ಮತ್ತು ಕಳಶವಿದೆ.
ಈ ದೇವಾಲಯದ ಮೇಲ್ಭಾಗದ ಗೋಡೆಗಳು ನಕ್ಷತ್ರಾಕಾರದಲ್ಲಿ ನಿರ್ಮಿತವಾಗಿದ್ದು ನಾಗರ ಶೈಲಿಯ ಹೊರಗೋಡೆಗಳನ್ನು ಹೋಲುತ್ತವೆ. ಗೋಡೆಯ ಮೇಲಿನ ಕೆತ್ತನೆಗಳನ್ನು ಎರಡು ಭಾಗವಾಗಿ ವಿಂಗಡಿಸಬಹುದು : ಕೆಳಭಾಗದ ಆರುಶಿಲ್ಪ ಪಟ್ಟಿಕೆಗಳು ಮತ್ತು ಮೇಲ್ಭಾಗದ ಶಿಲ್ಪಗಳು. ಆರು ಪಟ್ಟಿಕೆಗಳಲ್ಲಿ ಕೆಳಗಿನಿಂದ ಮೇಲ್ಭಾಗಕ್ಕೆ ಗಜ ಪಟ್ಟಿ , ಅಶ್ವ ಪಟ್ಟಿ, ಪುಷ್ಪ ಪಟ್ಟಿ , ಮಹಾಭಾರತ, ರಾಮಾಯಣ , ಭಾಗವತದ ಕಥೆಗನ್ನು ವರ್ಣಿಸುವ ಪೌರಾಣಿಕ ಪಟ್ಟಿ , ಮಕರ ಪಟ್ಟಿ ಮತ್ತು ಕೊನೆಯದಾಗಿ ಹಂಸ ಪಟ್ಟಿ. ಮೇಲ್ಭಾಗದ ಕೆತ್ತನೆಗಳಲ್ಲಿ ಅತ್ಯಂತ ಮನೋಹರವಾದ ಮತ್ತು ಅಲಂಕೃತರೂಪದ ವಿಷ್ಣುವಿನ ಅವತಾರ, ಗಣೇಶ, ಸರಸ್ವತಿ ಇತ್ಯಾದಿ ದೇವ–ದೇವತೆಗಳ ಶಿಲ್ಪಕಲಾಕೃತಿಗಳನ್ನು ಕಾಣಬಹದು.
ದೇವಾಲಯದ ಗೋಪುರದಲ್ಲಿ ಅತಿಮನೋಹರವಾದ ನೃತ್ಯಗಾರ್ತಿಯರು, ಗಂಧರ್ವ, ಯಕ್ಷ, ಕೀರ್ತಿಮುಖ, ಮತ್ತು ಮಕರಗಳ ಸೂಕ್ಷ್ಮಕೆತ್ತನೆಗಳಿವೆ. ದ್ರಾವಿಡ ಶೈಲಿಯ ಗೋಪುರಗಳಲ್ಲಿ ಕಾಣಸಿಗುವಂತೆ ಬಹುಶ್ರೇಣಿಯ ಗೋಪುರರಚನೆಯಾದರೂ , ನಾಗರಶೈಲಿಯ ಗೋಪುರಗಳಂತೆ ಶ್ರೇಣಿಗಳು ಮೇಲೆ ಮೇಲೆ ಹೋಗುವಂತೆ ಸಪೂರ ಆಕಾರತಾಳಿ ಕಳಶದಲ್ಲಿ ಮುಕ್ತಾಯವಾಗುತ್ತದೆ. ಹೀಗಾಗಿ ಮೇಲಿನ ಗೋಪುರ ಶ್ರೇಣಿಗಳು ಅಷ್ಟು ಸ್ಪಷ್ಟವಾಗಿ ಕಾಣುವುದಿಲ್ಲ. ಒಟ್ಟಿನಲ್ಲಿ ದೂರದಿಂದ ಕಾಣಲು ಚೆನ್ನಕೇಶವ ದೇವಾಲಯದ ಗೋಪುರಗಳು ಕಮಲದ ಮೊಗ್ಗುಗಳಂತೆ ಕಂಡುಬರುತ್ತದೆ.
ಈ ಎಲ್ಲಾ ಕಾರಣಗಳಿಂದ ವೇಸರ ವಾಸ್ತುಶೈಲಿಯು ನಮ್ಮ ದೇಶದ ಪ್ರಚಲಿತ ದೇವಾಲಯಗಳ ವಾಸ್ತುಶಿಲ್ಪಶೈಲಿಯಲ್ಲಿ ಅತ್ಯಂತ ವೈವಿಧ್ಯಮಯ ಹಾಗು ದಖ್ಖನ್ ಪ್ರದೇಶ ಅದರಲ್ಲೂ ಕರ್ನಾಟಕದ ವೈಶಿಷ್ಟ್ಯತೆ ಎಂದು ಹೇಳಬಹದು. ವೇಸರ ವಾಸ್ತುಶಿಲ್ಪಶೈಲಿ ಅನೇಕ ದಶಕಗಳಿಂದ ವಿಶೇಷ ಅಧ್ಯಯನ ಕ್ಷೇತ್ರವಾಗಿದ್ದು ಹಲವು ವಿದ್ವಾಂಸರು ಇದನ್ನು ಒಂದೇ ನಾಗರ ಶೈಲಿಯಾಗಿ ಅಥವಾ ದ್ರಾವಿಡ ಶೈಲಿಯಾಗಿ ವಿಂಗಡಿಸಲು ಹರಸಾಹಸ ನಡೆಸಿದರೂ ಇದುವರೆಗೂ ಯಶಸ್ವಿಯಾಗಿಲ್ಲ.
ಹೊಯ್ಸಳರ ದೇವಾಲಯಗಳೆಲ್ಲವೂ ವೇಸರ ಶೈಲಿಯದಾಗಿದ್ದು ಅತ್ಯಂತ ನೈಪುಣ್ಯಶೀಲವಾದ ಸೂಕ್ಷ್ಮ ಕುಸುರಿ ಕೆತ್ತನೆಗಳಿಂದ ಕೂಡಿವೆ. ಇದುವರೆಗೂ ಬೇರೆ ಯಾವ ಭಾರತೀಯ ವಾಸ್ತುಶೈಲಿಯೂ ಇದನ್ನು ನಕಲುಮಾಡಲಾಗದ ನಿಗೂಢ ನೈಪುಣ್ಯತೆ ಇಲ್ಲಿ ಕಂಡುಬರುತ್ತದೆ.
ವೇಸರವಾಸ್ತುಶೈಲಿಯು ಭಾರತೀಯ ದೇವಾಲಯಗಳ ವಾಸ್ತುಶಿಲ್ಪದ ಹೆಮ್ಮೆಯ ಅನರ್ಘ್ಯ ರತ್ನ ಮತ್ತು ಭಾರತೀಯರೆಲ್ಲರೂ ಹೆಮ್ಮೆಪಡಬೇಕಾದ ವಾಸ್ತುಶಿಲ್ಪ, ಕಲೆ, ಗಣಿತಶಾಸ್ತ್ರ, ತತ್ತ್ವಜ್ಞಾನ ಮತ್ತು ತಂತ್ರಜ್ಞಶಾಸ್ತ್ರ ಮಹತ್ಸಾಧನೆ.
(ಈ ಲೇಖನ ಸುಶಾಂತ್ ‘ಚೈತನ್ಯ’ ಭಾರತಿ ಅವರ ಆಂಗ್ಲ ಲೇಖನದ ಕನ್ನಡಾನುವಾದವಾಗಿದೆ.)
(This is a Kannada translation of an article in English by Sushant ‘Chaitanya’ Bharati)
(Featured Image credit: goibibo.com)
Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.