ಹಿಂದೂ ದೇವಾಲಯಗಳ ಪರಿಕಲ್ಪನೆ, ಚರಿತ್ರೆ ಮತ್ತು ಪರಂಪರೆಯನ್ನು ಅಧ್ಯಯನ ಮಾಡುವ ಸಮಗ್ರ ಸರಣಿಯಲ್ಲಿ ಇದು ಮೊದಲನೆಯ ಲೇಖನ. ಈ ಸರಣಿಯು ಮೊದಲ ಬಾರಿಗೆ Indiafacts ನಲ್ಲಿ ಪ್ರಕಟಿಸಲಾಗಿತ್ತು.
ಪರಿಚಯ
ಭಾರತ ದೇವಾಲಯಗಳ ನಾಡು. ಇಡೀ ಸೃಷ್ಟಿಯೇ ಪರಮಾತ್ಮನ ಅಭಿವ್ಯಕ್ತಿಯೆಂದು ಗ್ರಹಿಸುವ ನಾಗರೀಕತೆ ನಮ್ಮದು. ನಮ್ಮಲ್ಲಿ ಸರ್ವಾಂತರ್ಯಾಮಿ ಪರಮಾತ್ಮನು ಪ್ರತಿ ಯುಗದಲ್ಲೂ ಧರ್ಮ ಸಂಸ್ಥಾಪನೆಗೆಂದು ಅವತಾರ ತಳೆಯಬಹುದೆಂಬ ಪ್ರಜ್ಞೆಯಿದೆ. ಈ ಅವತಾರ ರೂಪಗಳನ್ನು ನಾವು ನಮ್ಮ ದೇಶದ ಪುಣ್ಯ ನದಿಗಳು, ಪರ್ವತಗಳು , ಅರಣ್ಯಗಳು ಮತ್ತು ಮಹಾ ಋಷಿಗಳು, ಭಕ್ತರು ಮತ್ತು ಆಚಾರ್ಯರರು ನಡೆದಾಡಿದ ನೆಲದಲ್ಲಿ ಕಾಣುತ್ತೇವೆ. ಎಲ್ಲರಲ್ಲಿ ಪವಿತ್ರ ಭಕ್ತಿ ಮೂಡಿಸುವ ಈ ಪ್ರದೇಶಗಳಿಗೆ ತೀರ್ಥಕ್ಷೇತ್ರಗಳೆನ್ನುತ್ತಾರೆ. ತನ್ನ ಅಪರಿಮಿತ ಕಾರುಣ್ಯದಿಂದ ಪರಮಾತ್ಮನು ಅರ್ಚಾ ವಿಗ್ರಹಗಳ ಮೂಲಕ ಮೂರ್ತಿರೂಪದಲ್ಲಿ ದೇವಾಲಯಗಳಲ್ಲಿಯೂ ತನ್ನ ಭಕ್ತಾದಿಗಳಿಗೆ ಕಾಣಸಿಗುತ್ತಾನೆ. ಈ ಅರ್ಚಾ ವಿಗ್ರಹವು ಒಂದೇ ಸ್ವಯಂಭೂ ಆಗಿರುತ್ತದೆ ಇಲ್ಲವೇ ಅದನ್ನು ಮಹಾನ್ ಸಂತರು, ಭಕ್ತರು ಅಥವಾ ಆಚಾರ್ಯರು ಪ್ರತಿಷ್ಠಾಪಿಸಿರುತ್ತಾರೆ.
ಚರ್ಚ್ ಅಥವಾ ಮಸೀದಿಗಳಂತೆ ಇವು ಕೇವಲ ಎಲ್ಲರೂ ಸಭೆ ಸೇರುವ ಮತ್ತು ಒಟ್ಟಿಗೆ ಪ್ರಾರ್ಥನೆ ಮಾಡುವ ಜಾಗವಲ್ಲ. ಸನಾತನ ಧರ್ಮದಲ್ಲಿ ದೇವಾಲಯ, ದೇವಸ್ಥಾನ, ದೇವಯಾತನ ಅಥವಾ ಕೋವಿಲ್ ಎಂಬ ಜಾಗಕ್ಕೆ ಬಹಳ ವಿಶೇಷ ಪ್ರಾಧಾನ್ಯವಿದೆ. ದೇವಾಲಯವು ಮೂರ್ತಿಸ್ವರೂಪನಾದ ಪರಮಾತ್ಮನ ದಿವ್ಯಸೌಧ.
ಭಾರತೀಯ ನಾಗರಿಕತೆಯಲ್ಲಿ ದೇವಾಲಯಗಳ ಪಾತ್ರವನ್ನು ಕಂಚಿ ಕಾಮಕೋಟಿ ಪೀಠದ ಪರಮಾಚಾರ್ಯರಾದ ಶ್ರೀ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮಿಗಳು 1959 ನೇ ಇಸವಿಯ ಒಂದು ಸಂದರ್ಶನದಲ್ಲಿ ಬಹಳ ಚೆನ್ನಾಗಿ ವಿವರಿಸಿದ್ದಾರೆ : [1]
“ನಮ್ಮ ದೇವಾಲಯಗಳು ಧ್ಯಾನ ಮಾಡುವುದಕ್ಕಾಗಿಯೋ ಅಥವಾ ಸಾಮೂಹಿಕ ಪ್ರಾರ್ಥನೆ-ಪೂಜೆ ಮಾಡುವುದಕ್ಕಾಗಿಯೋ ಕಟ್ಟಿಸಿರುವ ಜಾಗಗಳಲ್ಲ. ದೇವಾಲಯಗಳ ಉದ್ದೇಶವೇ ಬೇರೆ. ನಾವು ಪ್ರತಿನಿತ್ಯ ಜೀವನದ ಸರಕುಗಳಾದ ಊಟ-ತಿಂಡಿ, ಬಟ್ಟೆ-ಬರೆ, ಚಿನ್ನ-ಬೆಳ್ಳಿ, ಸಂಗೀತ-ನೃತ್ಯಗಳನ್ನು ಭೋಗಿಸುತ್ತೇವೆ. ಈ ಸೌಲಭ್ಯಗಳನ್ನು ನಮಗೆ ಒದಗಿಸಿ ಕಾಪಾಡುವ ರಾಜನಿಗೆ -ಈಗ ಸರ್ಕಾರಕ್ಕೆ – ಗೌರವವಾಗಿ ಕಾಣಿಕೆಯ ರೂಪದಲ್ಲಿ ತೆರಿಗೆ ಕಟ್ಟುತ್ತೇವೆ. ನಮ್ಮನ್ನು ಕಾಪಾಡುವ ರಾಜನಿಗೆ ಅರಮನೆ ಮತ್ತು ಇತರ ರಾಜ ವೈಭೋಗದ ಸೌಲಭ್ಯವಿರುತ್ತದೆ. ನಾವು ರಾಜನಿಗೆ ಗೌರವಾದರಗಳನ್ನು ತೋರಿಸುವುದು ಸರಿ. ಜೊತೆಗೆ ಈ ಎಲ್ಲ ಸೌಲಭ್ಯಗಳನ್ನು ಮೂಲತಃ ಒದಗಿಸಿದ ಪರಮಾತ್ಮನಿಗೂ ಕೃತಜ್ಞತೆಯನ್ನು ಕೋರಬೇಕಾಗುತ್ತದೆ. ನಮಲ್ಲಿರುವ ಸರಕುಗಳಲ್ಲಿ ಕೆಲವೊಂದಿಷ್ಟನ್ನು ನಾವು ದೇವಾಲಯಗಳಲ್ಲಿ ಭಗವಂತನಿಗೆ ಈ ಕೃತಜ್ಞತೆಯ ಸಂಕೇತವಾಗಿ ಅರ್ಪಿಸುತ್ತೇವೆ. ಭಗವಂತನು ನಮಗೆ ಕರುಣಿಸಿದ ಆಹಾರ, ಬಟ್ಟೆ, ಒಡವೆಗಳು, ಸಂಗೀತ, ದೀಪ, ಸುವಾಸನೆ ಬತ್ತಿ ಇತ್ಯಾದಿಗಳನ್ನು ಮೊದಲು ಅವನಿಗೆ ಅರ್ಚಿಸಿ ನೈವೇದ್ಯ ಮಾಡಿ ನಂತರ ಅದನ್ನೇ ‘ಪ್ರಸಾದ’ ಎಂದು ಸ್ವೀಕರಿಸುತ್ತೇವೆ. ದೇವಾಲಯಗಳಲ್ಲಿ ಈ ಪ್ರಕಾರದ ಅರ್ಚನೆಯು ಅಲ್ಲಿನ ಸಮುದಾಯದ ಪರವಾಗಿ ಮಾಡಲಾಗುತ್ತದೆ. ಸಮುದಾಯದ ಜನರೆಲ್ಲರೂ ದೇವಾಲಯಕ್ಕೆ ಹೋಗಬೇಕೆಂದಿಲ್ಲ. ಆದರೆ, ಇಡೀ ಸಮುದಾಯದ ಪರವಾಗಿ ಭಗವಂತನಿಗೆ ಅರ್ಚನೆ ಮಾತ್ರ ಸದಾ ನಡೆಯುತ್ತಿರಬೇಕು. ಈ ಕೆಲಸವು ಶಾಸ್ತ್ರೋಕ್ತವಾಗಿ ನಡೆಯುವಂತೆ ನೋಡಿಕೊಳ್ಳುವುದು ಅಲ್ಲಿನ ಜನರ ಕರ್ತವ್ಯ. ದೇವರಿಗೆ ನೈವೇದ್ಯ ಮುಗಿದು ಘಂಟೆ ಬಾರಿಸಿದ ನಂತರವೇ ಆಹಾರ ಸೇವಿಸುವ ಹಲವಾರು ನಮ್ಮಲ್ಲಿದ್ದಾರೆ. ಅವರು ಆಹಾರವನ್ನು ಭಗವಂತನ ಪ್ರಸಾದವೆಂದೇ ಸ್ವೀಕರಿಸುತ್ತಾರೆ.”
ಬೇರೊಂದು ಸಂದರ್ಭದಲ್ಲಿಯೂ ಪರಮಾಚಾರ್ಯ ಹೀಗೆ ಸೂಚಿಸಿದ್ದಾರೆ[2]
“ನಮ್ಮ ಹಿಂದೂ ಧರ್ಮವು ಇಷ್ಟು ವರ್ಷಗಳ ಕಾಲ ಬದುಕುಳಿದಿದೆ ಎಂದರೆ, ಅದರ ಹಿಂದೆ ಅದನ್ನು ಪೊರೆದು ಕಾಪಾಡುವ ಯಾವುದೋ ಒಂದು ಅನನ್ಯ ಶಕ್ತಿಯಿರಲೇಬೇಕು. ಬೇರಾವ ಮತ/ಜೀವನರೀತಿಯೂ ಇಷ್ಟು ಧೀರ್ಘಕಾಲ ಉಳಿದು ನಿಂತಿಲ್ಲ. ನಮ್ಮ ಧರ್ಮವೆಂದರೆ ನನಗೆ ನೆನಪಾಗುವುದು ನಮ್ಮ ದೇವಾಲಯಗಳು. ಇವು ಚರ್ಚ್ ಮತ್ತು ಮಸೀದಿಗಳಷ್ಟು ಸ್ವಚ್ಛವಾಗಿಲ್ಲದೆ ಇರಬಹುದು…..ಇವು ಭಿನ್ನ ಏಕೆಂದರೆ ನಮ್ಮ ಗರ್ಭಗುಡಿಗಳು ಕಲ್ಲಿನಿಂದ ಕಟ್ಟಿದ್ದು. ಸಾವಿರ ವರ್ಷಗಳ ಹಿಂದೆ ಹಾಕಿದ ಅಡಿಪಾಯ ಇಂದಿಗೂ ಭದ್ರವಾಗಿದೆ. ನಮ್ಮ ಅಲಕ್ಷ್ಯ ಮತ್ತು ಉದಾಸೀನತೆಗಳನ್ನು ಸಹಿಸಿಯೂ ಕೂಡ ದೇವಾಲಯಗಳು ನಮ್ಮ ನಾಗರೀಕತೆಯ ಭವ್ಯ ಸ್ಮಾರಕಗಳಾಗಿ ನಿಂತಿವೆ. ಇವುಗಳನ್ನು ನೆಲ ಕಚ್ಚಿಸುವುದು ಅಷ್ಟು ಸುಲಭವಲ್ಲ. ಪ್ರಾಯಶಃ ಇವನ್ನು ಕೆಡವಲು ಹೋದರೆ ಕಟ್ಟಿಸಿದ್ದಕ್ಕಿಂತ ಹೆಚ್ಚು ಶ್ರಮ ಬೇಕಾಗಬಹುದು. ನಮ್ಮ ಧರ್ಮವೂ ಮತ್ತೆ ಹೇಳುವುದಾದರೆ, ಈ ದೇವಾಲಯಗಳಂತೆಯೇ. ಯಾವುದೋ ಒಂದು ಅಪೂರ್ವ ಶಕ್ತಿ ಇದಕ್ಕೆ ಆಸರೆ ನೀಡಿ ರಕ್ಷಿಸುತ್ತಿದೆ. ಅದರ ಅರಿವು ನಮಗಿಲ್ಲ. ಆದರೆ ಅದು ಖಂಡಿತವಾಗಿಯೂ ಬೇರೆ ಮತಗಳಲ್ಲಿ ಇಲ್ಲ. .. ಇದೇ ವರ್ಣಾಶ್ರಮ ಧರ್ಮ.”
ಭಾರತದ ಅಸಂಖ್ಯಾತ ದೇವಾಲಯಗಳು
1820 ರ ಸುಮಾರಿನಲ್ಲಿ ಅಂದಿನ ಬ್ರಿಟಿಷ್ ಸರ್ಕಾರ, ತನ್ನ ಅಧಿಕಾರಿಗಳಿಗೆ ಮದ್ರಾಸ್ ಪ್ರಾಂತದ ವಿವಿಧ ಜಿಲ್ಲೆಗಳಲ್ಲಿರುವ ಧಾರ್ಮಿಕ ಸಂಸ್ಥೆಗಳು ಮತ್ತು ಅವುಗಳ ಸ್ಥಿತಿಗತಿಗಳ ಬಗ್ಗೆ ಒಂದು ವರದಿ ತಯಾರು ಮಾಡಲು ಹೇಳಿತು. ಆ ವರದಿಯ ಪ್ರಕಾರ ಪ್ರಾಂತದ ಇಪ್ಪತ್ತು ಜಿಲ್ಲೆಗಳಲ್ಲಿ ಒಟ್ಟು ಸೇರಿ ಒಂದು ಲಕ್ಷಕ್ಕೂ ಹೆಚ್ಚು ದೇವಾಲಯಗಳು, ಛತ್ರಗಳು, ಮತ್ತು ಮಠಗಳಿದ್ದವಂತೆ.[3] ಹೆಚ್ಚಿನ ಜಿಲ್ಲೆಗಳಲ್ಲಿ 300 ರಿಂದ 400 ದೂಡ್ಡ ದೇವಾಲಯಗಳಿದ್ದವು.
ಒಟ್ಟು 7,600 ದೇವಾಲಗಳನ್ನು ಸರ್ಕಾರ ನೇರವಾಗಿ ನಿರ್ವಹಿಸುತ್ತಿತ್ತು ಎಂದು ಮದ್ರಾಸ್ ಸರ್ಕಾರ 1833 ರಲ್ಲಿ ವರದಿ ಮಾಡಿದೆ. ಈ ಸಂಖ್ಯೆಯನ್ನು ಅಂದಿನ ಮದ್ರಾಸ್ ಪ್ರಾಂತ್ಯದ ಪ್ರಮುಖ ದೇವಾಲಯಗಳ ಸಂಖ್ಯೆಯೆಂದು ನಾವು ಪರಿಗಣಿಸಬಹುದು. ಬೇರೆ ರಾಜ್ಯಗಳ ಸಮಕಾಲೀನ ವರದಿಗಳಿಂದ ಇದೇ ರೀತಿಯ ಅಂದಾಜು ಮಾಡಬಹುದು. ತಮಿಳುನಾಡು ಸರ್ಕಾರದ 2005-06ರ ಬಜೆಟ್ ವರದಿಯ ಪ್ರಕಾರ ಅದರ ನೇರ ನಿರ್ವಹಣೆಯಲ್ಲಿ ಒಟ್ಟು 38,409 ಹಿಂದೂ ಮತ್ತು ಜೈನ ಧಾರ್ಮಿಕ ಸಂಸ್ಥೆಗಳಿವೆ. ಆಂಧ್ರಪ್ರದೇಶದ ಧಾರ್ಮಿಕ ದತ್ತಿ ವಿಭಾಗದ ಅಡಿಯಲ್ಲಿ 33,575 ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳಿವೆ. ಹೀಗೆ ಹಲವು ರಾಜ್ಯಗಳಲ್ಲಿ ಭಾರಿ ಸಂಖ್ಯೆಯ ದೇವಾಲಗಳು ಅಲ್ಲಿನ ಸರ್ಕಾರಗಳ ಆಡಳಿತಕ್ಕೆ ಒಳಪಟ್ಟಿವೆ.
ಒಂದು ಪ್ರದೇಶದ ಬಡಾವಣೆಗಳ ಆಧಾರದ ಮೇಲೆ ಅಲ್ಲಿನ ದೇವಾಲಯಗಳ ಸಂಖ್ಯೆಯನ್ನು ಅಂದಾಜು ಮಾಡುವುದು ಇನ್ನೊಂದು ಮಾರ್ಗ. ಭಾರತದ ಪ್ರತಿ ಬಡಾವಣೆಯಲ್ಲಿ ಕನಿಷ್ಠ ಒಂದು ದೇವಾಲಯವಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಭಾರತದ ಪುರಾತನ ಗ್ರಂಥಗಳಲ್ಲಿ ‘ವಿಗ್ರಹವಿಲ್ಲದೇ ಇರುವ ಅಪವಿತ್ರ ಜಾಗಗಳಲ್ಲಿ ಯಾರೂ ನೆಲೆಸಬಾರದು’ ಎಂಬ ಮಾತಿದೆ.
ಪ್ರಾಚೀನ ನಗರಗಳಾದ ಅಯೋಧ್ಯಾ, ಮಥುರಾ, ಹರಿದ್ವಾರ , ಕಾಶಿ, ಕಂಚಿ ಮತ್ತು ಉಜ್ಜಯಿನಿಯಲ್ಲಿ ಇಂದಿಗೂ ಸಾವಿರಾರು ದೇವಾಲಯಗಳಿವೆ.
ಹದಿನೆಂಟನೇ ಶತಮಾನದ ಒಂದು ಸಾಮಾನ್ಯ ಭಾರತೀಯ ಬಡಾವಣೆಯಲ್ಲಿ ಎಷ್ಟು ದೇವಾಲಯಗಳಿದ್ದಿರಬಹುದು ಎಂದು ನಮಗೆ 1767-1774 ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬರುತ್ತದೆ. ಬ್ರಿಟಿಷ್ ಸರ್ಕಾರ ಮದ್ರಾಸ್ ಸುತ್ತಮುತ್ತಲಿನ ಚೆಂಗಲ್ಪಟ್ಟು ಪ್ರದೇಶದ 2000 ಗ್ರಾಮಗಳಲ್ಲಿ ನಡೆದ ಸಮೀಕ್ಷೆಯಿದು. ಇದರ ಮೂಲ ತಮಿಳು ದಾಖಲೆಗಳಲ್ಲಿ ದೇವಾಲಯದ ಹೆಸರು, ಸ್ಥಳ ಮತ್ತು ಪ್ರದೇಶವನ್ನು ಪಟ್ಟಿ ಮಾಡಲಾಗಿದೆ.
ದುರದೃಷ್ಟವಶಾತ್, ಈ ಮಾಹಿತಿಯಲ್ಲಿ ಎಲ್ಲಾ ಗ್ರಾಮಗಳು ಸೇರಿಲ್ಲ. ಲಭ್ಯವಿರುವ ದಾಖಲೆಗಳಲ್ಲಿ ಕಾಂಚಿಪುರಂ ಬಳಿಯ ಪೆರುನಗರ ಎಂಬ ಪ್ರದೇಶದಲ್ಲಿ 33 ದೇವಾಲಗಳಿದ್ದವು ಎಂದು ತಿಳಿದು ಬರುತ್ತದೆ. ಪ್ರತಿ ಪ್ರದೇಶದಲ್ಲೂ ಸರಾಸರಿ ನಾಲ್ಕರಿಂದ ಐದು ದೇವಾಲಗಳಿದ್ದವು ಎಂದು ಕಾಣಸಿಗುತ್ತದೆ.[4]
ಪ್ರಾದೇಶಿಕ ಮತ್ತು ಉಪಪ್ರಾದೇಶಿಕ ಮಟ್ಟದಲ್ಲಿ ಸಾಕಷ್ಟು ವ್ಯತ್ಯಾಸಗಳು ಕಂಡುಬಂದರೂ , ಒಟ್ಟಾರೆ ಭಾರತದ ಪ್ರತಿ ಬಡಾವಣೆಯಲ್ಲಿ ನಾಲ್ಕರಿಂದ ಐದು ದೇವಾಲಗಳಿದ್ದಾವೆ ಎಂದು ಅಂದಾಜು ಮಾಡಿದರೆ ತಪ್ಪಾಗಲಾರದು.ಹೀಗಾದರೆ ನಮ್ಮ ದೇಶದ ಒಟ್ಟು ದೇವಾಲಗಳ ಸಂಖ್ಯೆ ಇಪ್ಪತ್ತು ಲಕ್ಷಕ್ಕೂ ಹೆಚ್ಚು!
2001ರ [5] ಜನಗಣತಿಯ ಪ್ರಕಾರ ಪೂಜಾಸ್ಥಳವೆಂದು ಪರಿಗಣಿಸಲಾದ ಜನಗಣತಿ ಮನೆಗಳ ಸಂಖ್ಯೆ ಇಪ್ಪತ್ತು ಲಕ್ಷದ ನಲವತ್ತು ಸಾವಿರ (2.40 ಮಿಲಿಯನ್). 1991 ಇಸವಿಯಲ್ಲಿ ಈ ಸಂಖ್ಯೆ ಕೇವಲ ಹತ್ತು ಲಕ್ಷದ ಎಪ್ಪತೆಂಟು ಸಾವಿರವಾಗಿದ್ದು (1.78 million), ಈ ಪ್ರದೇಶಗಳಲ್ಲಿ ಶೇಕಡಾ 34.5% ರಷ್ಟು ಅಭಿವೃದ್ಧಿ ಕಂಡುಬರುತ್ತದೆ. ಈ ಅಭಿವೃದ್ಧಿ ಯಾವುದರ ಸಂಕೇತ ಎಂದು ಇನ್ನೂ ಸ್ಪಷ್ಟವಾಗಿಲ್ಲ. ದೇವಾಲಯ, ಚರ್ಚ್, ಮಸೀದಿ ಇತ್ಯಾದಿ ಎಂದು ಜನಗಣತಿಯಲ್ಲಿ ಪ್ರತ್ಯೇಕ ಸಂಖ್ಯೆಗಳಿಲ್ಲ. [6]
[ಮುಂದುವರಿಸಲಾಗುವುದು…]
ಉಲ್ಲೇಖಗಳು
[1] ರಾಘವನ್ , The Jagadguru, Madras 1965 , ಪು 48-9 – ರಾಘವನ್ ಈ ಸಂದರ್ಶನದ ಉಲ್ಲೇಖವನ್ನು ಆರ್ಥರ್ ಕೀಸ್ಟ್ಲರ್ ನ The Lotus and the Robot, ಲಂಡನ್ , 1960,ಪು .54-63 ಎಂಬಲ್ಲಿನಿಂದ ಹೇಳಿದ್ದಾರೆ. ‘ಭಾರತ ದೇವಾಲಯಗಳ ಗೌಜು ಗದ್ದಲದ’ ವಿಷಯವನ್ನು ಎತ್ತುತ್ತಾ ಕೀಸ್ಟ್ಲರ್ “ಧ್ಯಾನ ಪ್ರವೃತ್ತಿಯ ಭಾರತೀಯರು ಎತ್ತರದ ಬೆಟ್ಟ-ಗುಹೆಗಳಲ್ಲಿ ಏಕಾಂತ ಬಯಸುವ ಕಾರಣ” ಎಂದು ಕೇಳುತ್ತಾನೆ. ಇದಕ್ಕೆ ಪ್ರತ್ಯುತ್ತರವಾಗಿ ಪರಮಾಚಾರ್ಯರು ಹೀಗೆ ಹೇಳುತ್ತಾರೆ “ನೀವು ಹೇಳುವುದಕ್ಕಿಂತ ವಿರುದ್ಧವಾಗಿದೆ. ಏಕಾಂತ ಮತ್ತು ಜನರಹಿತ ಪ್ರದೇಶಗಳು ಯಾವಾಗಲೂ ಧ್ಯಾನ ಮತ್ತು ಚಿಂತನೆಗೆ ಸೂಕ್ತ ಎಂದು ನಮ್ಮಲ್ಲಿ ಹೇಳಲಾಗಿದೆ. ದೇವಾಲಯಗಳ ಉದ್ದೇಶ ಇದಲ್ಲ. ” ನಂತರ ಆಚಾರ್ಯರು ಭಾರತೀಯ ನಾಗರಿಕತೆಯಲ್ಲಿ ದೇವಾಲಯಗಳ ಪಾತ್ರವನ್ನು ವಿವರಿಸುತ್ತಾರೆ.
[2] ಹಿಂದೂ ಧರ್ಮ : ಎ ಯೂನಿವರ್ಸಲ್ ವೇ ಆಫ್ ಲೈಫ್ , ಭಾರತೀಯ ವಿದ್ಯಾಭವನ , ಮುಂಬೈ , 1995, p.660
[3] 1842 ರ ಮದ್ರಾಸ್ ಪ್ರಾಂತದಲ್ಲಿ ಒಟ್ಟು 847 ರೋಮನ್ ಕ್ಯಾಥೊಲಿಕ್ ಚರ್ಚ್ ಗಳಿದ್ದವು. ಇದರಲ್ಲಿ 204 ಮದ್ರಾಸ್ ಪಟ್ಟಣದಲ್ಲಿ , 253 ಮಧುರೈ ಜಿಲ್ಲೆಯಲ್ಲಿ ಹಾಗು 190 ತಂಜಾವೂರಿನಲ್ಲಿದ್ದವು.
[4] ಸೆಂಟರ್ ಫಾರ್ ಪಾಲಿಸಿ ಸ್ಟಡೀಸ್ ಸಂಸ್ಥೆ ನಡೆಸಿದ 1995 ರ ಸಮೀಕ್ಷೆಯಲ್ಲಿ , ಚೆಂಗಲ್ಪಟ್ಟು ಜಿಲ್ಲೆಯ ಸುಮಾರು ನೂರು ಬಡಾವಣೆಗಳ ಒಟ್ಟು ದೇವಾಲಯಗಳ ಸಂಖ್ಯೆ 1770ರ ಸಮೀಕ್ಷೆಗಿಂತ ಶೇಕಡಾ 30% ಹೆಚ್ಚಿತ್ತು.
[5] ಭಾರತ ಜನಗಣತಿ 2001, ಮನೆಗಳ ಪಟ್ಟಿ . ಗೃಹ ಸೌಕರ್ಯಗಳು ಮತ್ತು ಸ್ವತ್ತುಗಳು, ಹೆಚ್ -1: ಜನಗಣತಿ ಮನೆಗಳು ಮತ್ತು ಅವುಗಳ ಬಳಕೆ
[6] ಕ್ರಿಶ್ಚಿಯನ್ ಮಿಷನರಿ ಮೂಲಗಳ ಪ್ರಕಾರ ಭಾರತದಲ್ಲಿ 1987 ಇಸವಿಯಲ್ಲಿ ಒಟ್ಟು 100,000 ಚರ್ಚ್ ಗಳಿದ್ದವು. ಈ ಸಂಖ್ಯೆ 2002ಯ ವರೆಗೆ ಹೆಚ್ಚಿ 350,000 ಆಗಿತ್ತು. (http://www.mnnonline.org/article/5282) . ಮತ್ತೊಂದು ಮೂಲ ಹೀಗೆ ಹೇಳುತ್ತದೆ : “ಇಂದು ಭಾರತದಲ್ಲಿ ಚರ್ಚ್ ಗಳ ಸಂಖ್ಯೆ ಕಳೆದ ಇಪ್ಪತ್ತು ವರ್ಷಗಳಲ್ಲಿ 150,000 ರಿಂದ 400,000 ಕ್ಕೆ ಏರಿದೆ. ಇಷ್ಟು ವ್ಯಾಪಕವಾಗಿ ಬೆಳೆದುದ್ದರಿಂದ ಇಂದು ಅಮೇರಿಕಾ ರಾಷ್ಟ್ರಕ್ಕಿಂತ ಹೆಚ್ಚಿನ ಸಂಖ್ಯೆಯ ಚರ್ಚ್ ಗಳು ಭಾರತದಲ್ಲಿವೆ. (Martin Robinson & Dwight Smith, Invading Secular Space: Strategies for Tomorrow’s Church , Monarch 2003, p.204).
ಅಮೆರಿಕಾದಲ್ಲಿ ಒಟ್ಟು 350,000 ಚರ್ಚ್ ಗಳಿವೆ. ಇಸ್ಲಾಮ್ ಮೂಲಗಳ ಪ್ರಕಾರ ಭಾರದಲ್ಲಿ ಸುಮಾರು 300,000 ವಕ್ಫ್ ಸ್ವತ್ತುಗಳಿವೆ. (Awkaf Experiences in South Asia, , Khalid Rashid, Indian Institute of Objective Studies 2002, page 124). ಆದರೆ ಇದರಿಂದ ಮಸೀದಿ ಮತ್ತು ದರ್ಗಾಗಳ ಸಂಖ್ಯೆಯನ್ನು ಹೇಗೆ ಅಂದಾಜು ಮಾಡಬಹುದು ಎನ್ನುವುದು ಸ್ಪಷ್ಟವಾಗಿಲ್ಲ.
(The original article by MD Srinivas was published first by IndiaFacts in English and was reproduced here with permission)
Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.