close logo

ಶ್ರೀರಾಮ ಉಭಯಕುಶಲೋಪರಿ, ಭರತನಿಗೆ ರಾಜಧರ್ಮ – ಭಾಗ 1

ಶ್ರೀರಾಮನವಮಿ ಮತ್ತೆ ಬಂದಿದೆ. ಯುಗಯುಗಾದಿಯಂತೆ ರಾಮನವಮಿಯೂ ಮರಳಿ ಮರಳಿ ಬರುತ್ತಲೇ ಇರುತ್ತದೆ. ನಮಗೆ ಬೇಕಾದಷ್ಟು ದಿನ ಮಾತ್ರವಲ್ಲ. ಧರ್ಮಸಂಸ್ಥಾಪನೆಯ ನಿರಂತರ ಕಾರ್ಯಕ್ಕೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಶುರುವಾದ ನಂತರ ಇದು ಮೊದಲ ರಾಮನವಮಿ. ಇಷ್ಟೊಂದು ಮೌನವಾದ ಶ್ರೀರಾಮ ನವಮಿ ಹಿಂದೆಂದೂ ಆಗಿರಲಾರದು. ಧಾಳಿಕೋರರ ಕಾಲದಲ್ಲೂ ನವಮಿಯ ಹಬ್ಬವನ್ನು ನಮ್ಮ ಪೂರ್ವಜರು ಬಿಟ್ಟಿರಲಾರರು.  ಭಗವಂತ ನಮ್ಮಿಂದ ತಪಸ್ಸನ್ನು ಬಯಸುತ್ತಿದ್ದಾನೆ.

“ಹುತ್ತಗಟ್ಟದೆ ಚಿತ್ತ ಕೆತ್ತೀತೇ ಪುರುಷೋತ್ತಮನ ಆ ಅಂತ ರೂಪ ರೇಖೆ?” ಗೋಪಾಲಕೃಷ್ಣ ಪದ್ಯ. ಆ ತಪಸ್ಸಾದರೂ ಯಾವುದು. ರಾಮನ ಸಮಗ್ರರೂಪದ ಕುರಿತಾದ ಧ್ಯಾನ.

  • ಅಳಿಲಿಗೋಸ್ಕರ ತನ್ನ ಬತ್ತಳಿಕೆಯನ್ನೇ ಪಕ್ಕಕ್ಕಿಟ್ಟ ರಾಮನೇ ತಾಟಕಿಯ ಸಂಹಾರ ಮಾಡಿದ್ದು.
  • ತನ್ನ ಇರವಿನಿಂದಲೇ ಅಹಲ್ಯೆಗೆ ಶಾಪವಿಮೋಚನೆ ಮಾಡಿದ ರಾಮನೇ ಶೂರ್ಪನಖಿಯ ಮೂಗು ಕೊಯ್ದದ್ದು.
  • ರಾವಣನಿಗೆ ಅನೇಕ ಅವಕಾಶಗಳನ್ನು ಕೊಟ್ಟ ರಾಮನೇ ವಾಲಿಗೆ ಮರದ ಮರೆಯಿಂದ ಬಾಣ ಬಿಟ್ಟದ್ದು.
  • ಸೀತೆಯ ಮುಂದೆ ಅಷ್ಟು ಮೃದುವಾಗುತ್ತಿದ್ದ ರಾಮನೇ ಸಾಗರನ ಮೇಲೆ ಭಯಂಕರ ಕೋಪ ತಳೆದದ್ದು.

ಶಾಂತಮೂರ್ತಿಯಾದ ರಾಮ ಅವಶ್ಯವಿದ್ದಾಗಲೆಲ್ಲ ಕಠೋರನಾಗುವುದಕ್ಕೆ ಹೇಸುತ್ತಿರಲಿಲ್ಲ. ಧರ್ಮಸಂಸ್ಥಾಪನೆಗೆ ಏನು ಅಗತ್ಯವಿತ್ತೋ ಶ್ರೀರಾಮ ಅದೇ ಆಗುತ್ತಿದ್ದನು. ಆದ್ದರಿಂದಲೇ “ರಾಮೋ ವಿಗ್ರಹವಾನ್ ಧರ್ಮ”.

ಅಯೋಧ್ಯಾ ಕಾಂಡದ ೧೦೦ನೆ ಸರ್ಗದಲ್ಲಿ ಭರತ-ರಾಮರ ಸಂವಾದವಿದೆ. ದುಃಖತಪ್ತನಾದ ಭರತ ಶ್ರೀರಾಮನನ್ನು ಮತ್ತೆ ಅಯೋಧ್ಯೆಗೆ ಕರೆದೊಯ್ಯುವ ಅಭಿಲಾಷೆಯಿಂದ ರಾಮನಿದ್ದಲ್ಲಿಗೆ ಸೇನಾಸಮೇತ, ತಾಯಂದಿರು-ಆಪ್ತರೊಡಗೂಡಿ ಬರುತ್ತಾನೆ.  ರಾಮನಾದರೋ ಭರತನ ಉದ್ದೇಶದ ಅರಿವೇ ಇಲ್ಲದವನಂತೆ ಭರತನಿಗೆ ರಾಜನ ಕರ್ತವ್ಯಗಳನ್ನು ಜ್ಞಾಪಿಸುವ ರೀತಿಯಲ್ಲಿ ಉಭಯಕುಶಲೋಪರಿ ನಡೆಸುತ್ತಾನೆ. ಆ ಸಂವಾದ ಶ್ರೀರಾಮನ ದೃಷ್ಟಿಕೋನ ಯಾವ ರೀತಿಯದ್ದು ಎಂದು ತಿಳಿದುಕೊಳ್ಳುವುದಕ್ಕೆ ಸಹಾಯಕವಾಗುತ್ತದೆ. ರಾಮರಾಜ್ಯವೆಂದರೇನು ಎನ್ನುವ ಒಂದು ಚಿಕ್ಕ ಹೊಳಹು ಅಲ್ಲಿ ಸಿಗುತ್ತದೆ.

ಶ್ರೀರಾಮನ ಮೊದಲಪ್ರಶ್ನೆಯೇ ದಶರಥನ ಕುಶಲ-ಕ್ಷೇಮ ಮತ್ತು ಭರತ ತಂದೆಯನ್ನು ಸರಿಯಾಗಿ ನೋಡಿಕೊಳ್ಳುತ್ತಿದ್ದಾನೆಯೋ ಇಲ್ಲವೋ ಎನ್ನುವುದು. ನಂತರ ಇಕ್ಷ್ವಾಕು ಕುಲದ ಉಪಾಧ್ಯಾಯರ ಕ್ಷೇಮ. ಅವರು ಕ್ಷೇಮವಿದ್ದರೆ ಕುಲವು, ರಾಜ್ಯವು ಕ್ಷೇಮವೆಂಬ ಅಭಿಮತ. ನಂತರ ತಾಯಂದಿರ ಕ್ಷೇಮ. ಮುಂದುವರೆದ ರಾಮ ಅಚ್ಚರಿಯೆನ್ನಿಸುವಂತೆ ವಸಿಷ್ಠರ ಮಗನಾದ ಸುಯಜ್ಞರನ್ನು ಗೌರವದಿಂದ ಕಾಣುತ್ತಿದ್ದೀಯೆ ತಾನೇ ಎನ್ನುತ್ತಾನೆ. ಸುಯಜ್ಞರನ್ನು ಗೌರವದಿಂದ ಕಾಣುವುದಾದರೆ ವಸಿಷ್ಠರ ಗೌರವಕ್ಕೆ ಏನು ಚ್ಯುತಿಯಿಲ್ಲವೆನ್ನುವ ದೃಷ್ಟಿ.  ನಂತರ ಬ್ರಾಹ್ಮಣರ ಯೋಗಕ್ಷೇಮ ಮತ್ತು ಗೌರವ. ತದನಂತರ ದೇವತೆಗಳು, ಗುರುಹಿರಿಯರು, ಬಂಧುವರ್ಗ, ಪೂರ್ವಿಕರು ಮತ್ತು ವೈದ್ಯರ ಕುರಿತಾಗಿ ಭಾರತ ಗೌರವದಿಂದಿದ್ದಾನೆಯೇ ಎನ್ನುವ ಕುಶಲ-ಪ್ರಶ್ನೆ. ಒಟ್ಟಿನಲ್ಲಿ ರಾಜನ ಹಿತ, ಒಳಿತು ಮತ್ತು ಧಾರ್ಮಿಕತೆಯನ್ನು ಕಾಪಾಡುವ ಎಲ್ಲ ಅಂಶಗಳು ಮೊದಲಲ್ಲಿಯೇ ಬರುತ್ತವೆ. ರಾಜ ತನ್ನ ಕರ್ತವ್ಯವನ್ನು ಯಾವ ಧಕ್ಕೆಯೂ ಇರದಂತೆ ನಡೆಸುವುದಕ್ಕೆ ಬೇಕಾದ ಜನರ ಗೌರವ ಮತ್ತು ಯೋಗಕ್ಷೇಮ ಮೊತ್ತ ಮೊದಲಿನ ಕಳಕಳಿ. ಧಾರ್ಮಿಕತೆಯ ತಳಹದಿ ಧಾರ್ಮಿಕತೆಗಿಂತ ಮುಖ್ಯ. ಸಂಭಾಷಣೆಯ ಮೊದಲ ಭಾಗ ಇದನ್ನು ಸಾರುತ್ತದೆ.

ನಂತರ ಶುರುವಾಗುತ್ತದೆ ನಿಜವಾದ ರಾಜಧರ್ಮದ ಕುಶಲೋಪರಿ. ನಿನ್ನ ಬಿಲ್ವಿದ್ಯೆಯ ಗುರುವಾದ ಸುಧನ್ವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೀಯೆ ತಾನೇ? ನಿನ್ನ ಮಂತ್ರಿಗಳನ್ನು ಗೌರವದಿಂದ ನೋಡಿಕೊಳ್ಳುತ್ತಿದ್ದೀಯೋ? ನಂತರ ಮಂತ್ರಿಗಳಿಗಿರಬೇಕಾದ ಗುಣ-ವಿಶೇಷಣಗಳ ಕುರಿತಾಗಿ ಒಂದಿಷ್ಟು ವಿವರಣೆ. ಮಂತ್ರಿಗಳು ಸೂಕ್ಷ್ಮಜ್ಞರಾಗಿರಬೇಕು. ಸಂಜ್ಞೆ, ಸಂಕೇತಗಳಿಂದಲೇ ವಾಸ್ತವವನ್ನು ಗ್ರಹಿಸಬೇಕಾದ ಗುಣವಿರಬೇಕು. ಅತ್ಯುತ್ತಮವಾದ ಮಂತ್ರಿಗಳಿಂದಲೇ ರಾಜನ ಗೆಲುವು. ಮನಸ್ಸಿನ ಮೇಲೆ ಹಿಡಿತವಿದ್ದು, ತಮ್ಮ ಆಲೋಚನೆಗಳನ್ನು ತಮ್ಮೊಳಗೆ ಹಿಡಿದಿಟ್ಟುಕೊಳ್ಳುವ ಶಕ್ತಿಯಿರಬೇಕಾದವರು. ನಂತರ ಒಂದು ಮಾರ್ಮಿಕವಾದ ಎಚ್ಚರಿಕೆ. ಅಗತ್ಯವಿದ್ದಷ್ಟು ನಿದ್ದೆ ಮಾಡಲೇಬೇಕು ಆದರೆ ಏಳುವ ಹೊತ್ತಿಗೆ ಏಳಲೇಬೇಕು. ಆದರೆ, ದಿನಪೂರ್ತಿ ಮಾಡಿದ ಕಾರ್ಯಗಳನ್ನು, ರಾತ್ರಿಯ ಕಡೆಯ ಜಾವದಲ್ಲಿ ವಿಮರ್ಶಿಸಿಕೊಳ್ಳುತ್ತಿದ್ದೀಯ ಭರತ ಎನ್ನುತ್ತಾನೆ ರಾಮ. ವಿಮರ್ಶೆಯಾದರೂ ಯಾವ ದಿಕ್ಕಿನಲ್ಲಿ? ಮಾಡಿದ ಕೆಲಸ ನೈಪುಣ್ಯತೆಯಿಂದ ಕೂಡಿದುದಾಗಿತ್ತೇ – ಎನ್ನುವುದು. ಆಧುನಿಕ ರಾಜಕೀಯದಲ್ಲಿ ಇದಕ್ಕೆ ಅವಕಾಶವಿದೆಯೋ ಇಲ್ಲವೋ ಎನ್ನಿಸುತ್ತದೆ. ಆದರೆ, ನಮ್ಮ ಕ್ರಿಯೆಗಳು ಸುಧಾರಿಸಿಕೊಳ್ಳಬೇಕಾದರೆ ಪ್ರತಿದಿನವೂ ಅವುಗಳ ಅವಲೋಕನ ಮತ್ತು ವಿಮರ್ಶೆ ಅಗತ್ಯ. ರಾಜನಿಗಂತೂ ಇದು ಅತ್ಯವಶ್ಯವೇಕೆಂದರೆ ರಾಜ ಅಷ್ಟೊಂದು ಕೆಲಸಕಾರ್ಯಗಳಲ್ಲಿ ಮಗ್ನನಾಗಿರುತ್ತಾನೆ. ಕಾರ್ಯಸಾಧನೆಯಾಗಬೇಕಾದರೆ ನಮ್ಮ ಆಚರಣೆಯ ದಿಕ್ಕನ್ನು ಸದಾ ಧೇನಿಸುತ್ತಿರಬೇಕಾಗುತ್ತದೆ. ಇದರ ನಂತರ ಮಂತ್ರಾಲೋಚನೆಯ ಕುರಿತು ಮಹತ್ವಪೂರ್ಣವಾದ ಮತ್ತೊಂದನ್ನು ಹೇಳುತ್ತಾನೆ ರಾಮ. ‘ನೀನೊಬ್ಬನೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲವಷ್ಟೆ, ಭರತ? ಅಗತ್ಯಕ್ಕಿಂತ ಹೆಚ್ಚು ಜನರೊಡನೆ ಮಂತ್ರಾಲೋಚನೆ ನಡೆಸಿಯೂ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲವಷ್ಟೇ, ಭರತ?’. ಸಾರ್ವಕಾಲಿಕ ಸತ್ಯವಾದ ಈ ಎಚ್ಚರಿಕೆ ಪ್ರತಿಯೊಬ್ಬ ನಾಯಕನನ್ನು ಸದಾ ಕಾಡುವಂಥದ್ದು. ಇವೆರಡರ ನಡುವಣ ರೇಖೆ ಅತಿಸೂಕ್ಷ್ಮವಾದುದು, ಪ್ರತಿಯೊಬ್ಬ ನಾಯಕನು ದೇಶ-ಕಾಲ-ಪರಿಸ್ಥಿತಿಗಳನ್ನು ತೂಗಿ ಇವೆರಡರ ನಡುವಣ ವ್ಯತ್ಯಾಸವನ್ನು ಸಾಕ್ಷಾತ್ಕರಿಸಿಕೊಳ್ಳಬೇಕಾಗುತ್ತದೆ.

ನಂತರ ರಾಮ ಕಾರ್ಯಾಚರಣೆಯ ಗುಣದ ಕುರಿತು ಅನೇಕ ಪ್ರಶ್ನೆಗಳನ್ನು ಕೇಳುತ್ತಾನೆ? ಪ್ರತಿ ಕಾರ್ಯವು ಕಡಿಮೆ ವೆಚ್ಚದ್ದು ಹೆಚ್ಚು ಲಾಭಕರವಾದ್ದೂ ಆಗಿದೆಯಷ್ಟೆ? ಯಾವುದನ್ನೂ ತಡಮಾಡುತ್ತಿಲ್ಲವಷ್ಟೇ? ನೀನು ಉದ್ದೇಶಿಸಿದ ಕಾರ್ಯ ಸಂಪೂರ್ಣವಾಗುವ ಮೊದಲೇ ಇತರ ರಾಜರಿಗೆ ತಿಳಿಯುತ್ತಿಲ್ಲವಷ್ಟೇ (ಬರಿ ಶತ್ರುಗಳಿಗಷ್ಟೇ ಅಲ್ಲ)? ನಿನ್ನ ಮಂತ್ರಿಗಳೊಡಗೂಡಿ ತೆಗೆದುಕೊಂಡ ನಿರ್ಧಾರಗಳು ಯಾರಿಗೂ ಯಾವ ಮಾರ್ಗದಲ್ಲೂ ತಿಳಿಯುತ್ತಿಲ್ಲವಷ್ಟೇ (ಗೌಪ್ಯತೆಯನ್ನು ಯಾವ ರೀತಿಯಲ್ಲಿ ಸಾಧಿಸುತ್ತಿದ್ದೀಯೆ)? ಒಬ್ಬ ಬುದ್ಧಿವಂತ ಸಾವಿರ ಮೂರ್ಖರಿಗಿಂತ ಹೆಚ್ಚು, ಅಂತಹವರನ್ನೇ ನೀನು ಬಯಸುತ್ತಿದ್ದೀಯಷ್ಟೇ? ಅಂತಹವರಿಂದ ನಿನಗೆ ಸಕಾಲದಲ್ಲಿ ಬಹಳ ಉಪಯೋಗವಾಗುತ್ತದೆ. ಈ ಮಾತನ್ನಂತೂ ಮೂರು ಶ್ಲೋಕಗಳಲ್ಲಿ ವಿವರವಾಗಿ ಹೇಳುತ್ತಾನೆ ರಾಮ. ಆಶ್ಚರ್ಯವೇನು ಅಲ್ಲ. ಅದೆಷ್ಟೇ ವೈಯಕ್ತಿಕ ವಿಚಕ್ಷಣೆಯುಳ್ಳವರಾದರು ನಮ್ಮ ಸುತ್ತಲಿನವರು ಸರಿಯಿಲ್ಲದಿದ್ದರೆ ಯಾವ ರಾಜನಾದರೂ ಸೋಲನುಭವಿಸುವುದು ನಿಶ್ಚಿತ. ರಾಮ ಮತ್ತೊಂದು ಮಾರ್ಮಿಕವಾದ ಮಾತನ್ನು ಹೇಳುತ್ತಾನೆ. ಉತ್ತಮರಾದ ಸೇವಕರಿಗೆ ಉತ್ತಮವಾದ ಕೆಲಸವೂ, “ಮಧ್ಯಮರಾದವರಿಗೆ ಮಾಧ್ಯಮವು, ಕನಿಷ್ಠರಾದವರಿಗೆ ಕನಿಷ್ಠವೂ ಆದ ಕೆಲಸಗಳನ್ನು ಆಯೋಜಿಸುತ್ತಿದ್ದೀಯಷ್ಟೆ, ಭರತ?”. ಒಂದು ಸರಳ, ಚಿಕ್ಕದಾದ ಸೂತ್ರ. ಆದರೆ ಮೋಹಗಳನ್ನು ತೊರೆದಂತಹ ರಾಜನಿಗೆ ಮಾತ್ರ ಇದು ಸಾಧ್ಯ. ನಂತರ ರಾಮ ಮಂತ್ರಿಗಳ ಅನೇಕ ಗುಣಗಳನ್ನು ವಿವರಿಸುತ್ತಾನೆ. ಲಂಚಕೋರರಲ್ಲದ, ಸುಶಿಕ್ಷಿತ, ಉತ್ತಮ ಮನೆತನಗಳಿಂದ ಬಂದಿರುವ, ಪ್ರಾಮಾಣಿಕರಾದ, ಧೈರ್ಯಸ್ಥರಾದ (ವಸ್ತುಸ್ಥಿತಿಯನ್ನು ನಿನ್ನ ಮುಂದೆ ಇಡುವುದಕ್ಕೆ ಬೇಕಾದ ಧೈರ್ಯವಿರುವ), ಮಂತ್ರಿಗಳೇ ಬೇಕು ಎನ್ನುತ್ತಾನೆ ರಾಮ.

ನಂತರ ವೈದ್ಯರ ವಿಶೇಷಣಗಳು ಮತ್ತು ಸೇನಾಪತಿಯ ಗುಣಗಳು. ಇವೆರಡನ್ನೂ ರಾಜ್ಯದ ಅರ್ಥದ ಮತ್ತು ಯೋಗಕ್ಷೇಮದ ಅಡಿಯಲ್ಲಿ ಪರಿಗಣಿಸಿದಂತಿದೆ. ಸೇನೆಗೆ ಕೊಡಬೇಕಾದ ಭತ್ಯೆ ಮತ್ತು ದಿನ-ನಿತ್ಯದ ಧಾನ್ಯ ಒಮ್ಮೆಯೂ ತಪ್ಪುತ್ತಿಲ್ಲವಷ್ಟೆ ಎನ್ನುವುದರಲ್ಲಿ ಅವುಗಳ ಪ್ರಾಥಮಿಕತೆಗೆ ಒಟ್ಟು ಕಾಣುತ್ತದೆ. ಮುಂದಿನ ವಿವರಣೆ ಮಾತ್ರ ಸಾರ್ವಕಾಲಿಕ ಸತ್ಯ ಮತ್ತು ಅದನ್ನು ನಾವು ಮರೆತಿದ್ದೇವೆ. ಒಮ್ಮೆ ಸೇವಕರಿಗೆ ಸಿಗಬೇಕಾದ, ಅಗತ್ಯವಾದ ಭತ್ಯೆ ಸಿಗದಿದ್ದಲ್ಲಿ ಅವರು ಭ್ರಷ್ಟರೂ, ರಾಜದ್ರೋಹಿಗಳು ಆಗುತ್ತಾರೆ, ಅದು ಅಪಾಯಕಾರಿ ಮತ್ತು ದುರದೃಷ್ಟಕರ ಎನ್ನುತ್ತಾನೆ ರಾಮ. ಭ್ರಷ್ಟತೆಯ ನಿಜವಾದ ಮೂಲ ಇಲ್ಲಿದೆ. ಲೋಭ ಎಷ್ಟು ಭ್ರಷ್ಟತೆಗೆ ಕರಣವಾಗುತ್ತದೆಯೋ, ಅಸ್ಥಿರತೆ ಅದಕ್ಕಿಂತಲೂ ಹೆಚ್ಚು ಎನ್ನುವ ಒಳನೋಟವಿದೆ ಇಲ್ಲಿ. ‘ಭರತ, ಕ್ಷತ್ರಿಯಕುಲದಲ್ಲಿ ಹುಟ್ಟಿದವರೆಲ್ಲ ನಿನಗೆ ವಿಧೇಯರೂ, ನಿನಗೋಸ್ಕರ ಪ್ರಾಣ-ತ್ಯಾಗ ಮಾಡುವುದಕ್ಕೆ ಹೇಸದವರೂಆಗಿದ್ದರೆಯಷ್ಟೇ?’. ಇದರ ಅರ್ಥವಿಷ್ಟೆ. ರಾಜ್ಯದೊಳಗಿರುವ ಕ್ಷತ್ರಿಯರು ನಿನಗೆ ಅವಿಧೇಯರಾಗಿದ್ದರೆ ರಾಜ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಆಧುನಿಕ ಕಾಲದ ಪ್ರಜಾಪ್ರಭುತ್ವದಲ್ಲಿ ಪ್ರತಿ ರಾಜನು ಈ ಅಸ್ಥಿರತೆಯಲ್ಲಿ ಬಹಳ ನಲಗುತ್ತಾನೆ. ಸೇವಕರಲ್ಲಿ ಅಸ್ಥಿರತೆಯಿರಲಿ, ರಾಜನಲ್ಲೇ ಅಸ್ಥಿರತೆ ಜಾಸ್ತಿಯಾಗಿರುವಾಗ ರಾಜಕೀಯ ಅಸ್ಥಿರತೆ ಕಠಿಣವೇ ಹೌದು.

ಮುಂದಿನ ಭಾಗದಲ್ಲಿ ಮತ್ತಷ್ಟು ನೋಡೋಣ. ಈ ಸರ್ಗದಲ್ಲಿ ೭೬ ಶ್ಲೋಕಗಳಿವೆ. ಒಂದೊಂದರಲ್ಲೂ ಶ್ರೀರಾಮ ಅತ್ಯಂತ ಮಧುರವಾದ ಧ್ವನಿಯಲ್ಲಿ ಅತಿಮಹತ್ವಪೂರ್ಣವಾದ ರಾಜಧರ್ಮ ವಿಷಯವನ್ನು ಕುಶಲೋಪರಿಯ ಮುಖೇನ ವಿವರಿಸುದನ್ನು ಓದುವುದೇ ಒಂದು ಅನುಭವ. ರಾಮನಿಗೆ ಧರ್ಮವೇ ಮುಖ್ಯ. ಧರ್ಮಕ್ಕಾಗಿ ಯಾವುದೇ ಕಠಿಣವಾದ ನಿರ್ಧಾರ ತೆಗೆದುಕೊಳ್ಳುವುದು ರಾಮನಿಗೆ ಅತ್ಯಂತ ಸುಲಭವಾದ ವಿಚಾರ. ಏಕೆಂದರೆ ರಾಮನ ದೃಷ್ಟಿ ಅಷ್ಟು ಸ್ಪಷ್ಟ. ಆ ದೃಷ್ಟಿಗಾದರೋ ಕಠಿಣವಾದ ತಪಸ್ಸಿನ ಅಗತ್ಯವಿದೆ. ನಮಗೀಗ ಬೇಕಾಗಿರುವುದು ಇದೇ, ಧರ್ಮಸಂಸ್ಥಾಪನೆಗೆ ಯಾವ ನಿಲುವು, ಭಾವ ಅಗತ್ಯವೋ ಆ ನಿಲುವನ್ನು ತೆಗೆದುಕೊಳ್ಳುವ ಧೈರ್ಯ, ಮನೋಸ್ಥೈರ್ಯ. ಅದೇ ನಮ್ಮ ತಪಸ್ಸು. ಕೇವಲ ಧಾರ್ಮಿಕ ಸಮುದಾಯದ್ದು ಮಾತ್ರವಲ್ಲ. ರಾಷ್ಟ್ರದ ಗುಣವೂ, ಮಂತ್ರವೂ, ಸ್ವರೂಪವು ಇದೆ ಆಗಬೇಕು.

ಅದೇ ನಮ್ಮ ರಾಮರಾಜ್ಯ.

(Image credit: templepurohit.com)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply