close logo

ಸರ್ವ ಮಾನ್ಯ ಭಗವದ್ಗೀತೆ

ಮೂಲಾಧಾರ

ಭಾರತೀಯ ಚಿಂತನೆಯ ಮೂಲಾಧಾರ ವೇದ, ಉಪನಿಷತ್ತು, ಭಗವದ್ಗೀತೆಗಳು. ಇವುಗಳ ಪಾರಮ್ಯವನ್ನು ಒಪ್ಪಿಕೊಳ್ಳಲೀ ಒಪ್ಪಿಕೊಳ್ಳದಿರಲೀ ಅವು ಪ್ರತಿಪಾದಿಸುವ ಚಿಂತನೆಯ ಸಾರವನ್ನು ತಮ್ಮದೇ ಆದ ರೀತಿಯಲ್ಲಿ ಅಳವಡಿಸಿಕೊಳ್ಳದಿರುವ ಭಾರತೀಯ ಚಿಂತನಾ ಪ್ರಕಾರ ಇಲ್ಲವೆಂದೇ ಹೇಳಬೇಕು. ಭಾರತದಲ್ಲಿ ತತ್ತ್ವಶಾಸ್ತ್ರವನ್ನು ಎತ್ತಿ ಹಿಡಿದುದು ಜ್ಞಾನಕ್ಕಾಗಿ ಅಲ್ಲ. ಮನುಷ್ಯ ಈ ಬದುಕಿನಲ್ಲಿ ಸಾಧಿಸಬಹುದಾದ ಅತ್ಯುನ್ನತ ಗುರಿಯನ್ನು ತಲುಪುವುದಕ್ಕಾಗಿ. ಇಲ್ಲಿ ತತ್ತ್ವಶಾಸ್ತ್ರವು ಆಶ್ಚರ್ಯ, ಕುತೂಹಲಗಳಿಂದಾಗಿ ರೂಪುಗೊಂಡಿಲ್ಲ, ಬದಲಿಗೆ ಅದು ರೂಪುಗೊಂಡಿರುವುದು ಬದುಕನ್ನು ಸುಂದರಗೊಳಿಸಿಕೊಳ್ಳುವುದಕ್ಕಾಗಿ. ಇಲ್ಲಿ ತತ್ತ್ವಾನುಸಂಧಾನವು ಕೇವಲ ಬೌದ್ಧಿಕ ಜಿಜ್ಞಾಸೆ ಅಲ್ಲ. ಅದು ಕೇವಲ ಆಚರಣೆ ಪ್ರಧಾನವಾದ ನೈತಿಕತೆಯೂ ಅಲ್ಲ. ಭಾರತೀಯ ಚಿಂತಕರ ಮನಸ್ಸನ್ನು ಕಲಕಿದುದು ಬದುಕಿನ ಇತಿಮಿತಿಗಳೇ. ಇವುಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದೇ ಅವರ ಮುಖ್ಯ ಕಾಳಜಿ.

ಆಧ್ಯಾತ್ಮಿಕತೆ

ವಿಚಾರವಂತರ ಒಂದು ಮುಖ್ಯ ಸಂದೇಹ ತಾತ್ತ್ವಿಕತೆ, ಆಧ್ಯಾತ್ಮಿಕತೆ ಎಂಬುದು ಬರಿಯ ಶಬ್ದಜಾಲ, ಮೋಸದ ಮಾಯಾಜಾಲ ಯಾಕಾಗಿರಬಾರದು?! ಈ ಪ್ರಶ್ನೆ ಭಗವದ್ಗೀತೆಯದೂ ಹೌದು. ಅಧ್ಯಾತ್ಮದ ಒಂದು ಪರಿಕಲ್ಪನೆ ಆತ್ಮ. ಇದರ ಬಗೆಗಿನ ಜಿಜ್ಞಾಸೆ ತಾತ್ತ್ವಿಕತೆ. ಆತ್ಮ ಎಂಬುದು ದೇಹದ ಸಂಗಡ ಇರುವಂತಹುದು. ಆತ್ಮವನ್ನು ಗ್ರಹಿಸುವವನು ದೇಹಭಾವ ಮತ್ತು ದೇಹಭಾವ ಪ್ರಕಟಿಸುವ ಪ್ರಾಪಂಚಿಕತೆ ಇವೆರಡನ್ನು ಕೈಬಿಟ್ಟು ಆತ್ಮದ ಬಗ್ಗೆ ಏನನ್ನೂ ಗ್ರಹಿಸಲಾರ. ಗ್ರಹಿಸುವ ವಾಸ್ತವಿಕತೆಗೆ ಜೈವಿಕ, ಅಜೈವಿಕ ಇತ್ಯಾದಿ ದ್ವೈತಾತ್ಮಕ ಅಥವಾ ಬಹುತ್ವಸೂಚಕ ಸಂಜ್ಞೆಗಳಿಲ್ಲ; ಅದಕ್ಕೆ ಇರುವುದು ಎಲ್ಲವನ್ನೂ ಅವು ಇರುವಂತೆ ಮೊದಲು ಸ್ವೀಕರಿಸು; ನಂತರ ಅದಕ್ಕೆ ಅನುಗುಣವಾಗಿ ಕೆಲಸ ಮಾಡು ಎನ್ನುವ ಸೂಚನಾತ್ಮಕ ಲಕ್ಷಣ ಮಾತ್ರ. ಇಂಥ ಆಧ್ಯಾತ್ಮಿಕತೆ ಅನುಭವಾತ್ಮಕವೇ ಆಗಿರುವಾಗ ಅದು ಹೇಗೆ ಬರಿಯ ಶಬ್ದಜಾಲ ಆದೀತು? ಮೋಸಮಾಡುವ ತಂತ್ರಗಾರಿಕೆ, ವ್ಯೂಹಜಾಲ ಹೇಗೆ ಆದೀತು ಎಂದು ಭಗವದ್ಗೀತೆ ಮರುಪ್ರಶ್ನಿಸುತ್ತದೆ. ಅಣು ತತ್ತ್ವವಾಗಿ ವ್ಯಕ್ತಿಯನ್ನು, ಬೃಹತ್ ತತ್ತ್ವವನ್ನಾಗಿ ವಿಶ್ವವನ್ನೊಳಗೊಂಡ ಬ್ರಹ್ಮಾಂಡವನ್ನು ಕಲ್ಪಿಸಿಕೊಳ್ಳದ ಹೊರತೂ ಯಾವುದೇ ಕಾರ್ಯಯೋಜನೆ ಅರ್ಥಪೂರ್ಣವಾಗದು ಎಂದು ವೈಜ್ಞಾನಿಕವಾಗಿ ಯೋಚಿಸುವವರೂ ತಿಳಿಯುತ್ತಿರುವ ಕಾಲವಿದು. ಹೀಗಿರುವಾಗ ದೇಹಆತ್ಮಗಳುಳ್ಳ ವ್ಯಕ್ತಿ ಅಣುತತ್ತ್ವ, ಬ್ರಹ್ಮಾಂಡ ವಿಶ್ವವನ್ನೊಳಗೊಂಡ ಪರಮಾತ್ಮ ಬೃಹತ್ ತತ್ತ್ವ ಎಂದು ವಾಸ್ತವಿಕತೆಯನ್ನು ಪರಿಕಲ್ಪಿಸುತ್ತಿರುವ ಅಧ್ಯಾತ್ಮವನ್ನು ಬರಿಯ ಶಬ್ದಜಾಲ, ಕುತಂತ್ರಕುತರ್ಕಗಳ ವ್ಯೂಹ ಜಾಲ ಎಂದು ಹೇಗೆ ತಿರಸ್ಕರಿಸಲು ಸಾಧ್ಯ? ಎಂದು ಕೇಳುತ್ತದೆ.

ದೈನಂದಿನ ಬದುಕು

ಭಗವದ್ಗೀತೆಗೆ ವೈಯಕ್ತಿಕ ಬದುಕು ಮತ್ತು ಸಾಮುದಾಯಿಕ ಬದುಕುಗಳ ಮಧ್ಯೆ ಸಾಮರಸ್ಯತೆ ಇರುವುದು, ವ್ಯಕ್ತಿ ಮತ್ತು ಸಮಾಜ ಆರೋಗ್ಯದಿಂದಿರಲು ಮತ್ತು ಬದುಕಿನ ಇತಿಮಿತಿಗಳನ್ನು ಮೀರಲು ಸಾಧ್ಯವಾಗುವುದು ಅತ್ಯಂತ ಮುಖ್ಯವಾದದ್ದು. ವ್ಯಕ್ತಿಯನ್ನು ಸಮಾಜದಿಂದ ಪ್ರತ್ಯೇಕಿಸಿ ಅಥವಾ ಸಮಾಜವನ್ನು ವ್ಯಕ್ತಿಯಿಂದ ಪ್ರತ್ಯೇಕಿಸಿ ವ್ಯಕ್ತಿಯ ಮತ್ತು ಸಮಾಜದ ಅಗತ್ಯಗಳನ್ನಾಗಲೀ, ಕೆಲಸಕಾರ್ಯಗಳನ್ನಾಗಲೀ ಅರ್ಥಮಾಡಿಕೊಳ್ಳ ಬಯಸಿದರೆ ಅದಕ್ಕೆ ಯಾವ ಬೆಲೆಯೂ ಇಲ್ಲ. ವ್ಯಕ್ತಿಯ ಮತ್ತು ಸಮಾಜದ ಆರೋಗ್ಯವು ದಿನನಿತ್ಯದ ಬದುಕನ್ನು ವ್ಯಕ್ತಿ ಹೇಗೆ ನಡೆಸುತ್ತಾನೆ ಎಂಬುದನ್ನು ಅವಲಂಬಿಸಿರುತ್ತದೆ ಎನ್ನುತ್ತದೆ ಭಗವದ್ಗೀತೆ. ಭಾರತೀಯರಿಗೆ ತಾತ್ತ್ವಿಕ ಬದುಕು ಮತ್ತು ದೈನಂದಿನ ಧಾರ್ಮಿಕ ನೈತಿಕ ಬದುಕು ಎಂಬುದು ಬೇರೆ ಬೇರೆ ಅಲ್ಲ, ಅವೆರಡೂ ಒಂದೇ. ಅವು ಪ್ರವೃತ್ತಿ ಮತ್ತು ನಿವೃತ್ತಿ ಮಾರ್ಗಗಳ ಸಮನ್ವಯತೆಯೇ ಆಗಿವೆ ಎನ್ನುತ್ತದೆ ಭಗವದ್ಗೀತೆ.

) ಪ್ರವೃತ್ತಿ ಮಾರ್ಗ

ನಮಗೆ ಸಾಮಾನ್ಯವಾಗಿ ಬೇಕಾಗುವ ವಿಷಯಗಳಿಗೆ ಪ್ರಥಮ ಪ್ರಾಶಸ್ತ್ಯ ಕೊಟ್ಟು ಅವುಗಳನ್ನು ಸಂಪಾದಿಸಲು ಸಮಾಜ ಒಪ್ಪಿಕೊಂಡ ರೀತಿಯಲ್ಲಿ ಕೆಲಸ ಮಾಡುವುದು ಪ್ರವೃತ್ತಿಮಾರ್ಗ. ಈ ಮಾರ್ಗದಲ್ಲಿ ನಾವು ಏನು ಕೆಲಸ ಮಾಡಬೇಕು, ಹೇಗೆ ಕೆಲಸ ಮಾಡಬೇಕು ಎನ್ನುವುದನ್ನು ಯೋಚಿಸಿ ಕೆಲಸ ಮಾಡುತ್ತೇವೆ. ಬೇಕಾಬಿಟ್ಟಿಯಾಗಿ ಏನನ್ನೂ ಮಾಡುವುದಿಲ್ಲ. ನಮ್ಮ ಆಸೆಗಳ ಮೇಲೆ, ಅವುಗಳನ್ನು ಪೂರೈಸಿಕೊಳ್ಳುವುದರ ಮೇಲೆ ಸಹಜವಾಗಿ ಹಿಡಿತ ಇರುತ್ತದೆ. ನಾವು ಸಂಯಮಿಗಳಾಗಿರಬೇಕು ಎಂದೇನೂ ಪ್ರತ್ಯೇಕವಾಗಿ ಯೋಚಿಸುವುದಿಲ್ಲ.

ಇಲ್ಲಿ ವ್ಯಕ್ತಿ ಸಂಪೂರ್ಣವಾಗಿ ನಿಸ್ವಾರ್ಥಿ ಆಗಿರುವುದಿಲ್ಲ. ಸಮಷ್ಟಿಯ ಹಿತಕ್ಕಾಗಿ ತನ್ನ ಹಿತವನ್ನು ತ್ಯಾಗ ಮಾಡುವ ಮನಸ್ಸು ಇರಬೇಕು ಎಂದುಕೊಂಡಿರುವುದಿಲ್ಲ. ತನ್ನ ಸುಖ ಸಂತೋಷ ಎನ್ನುವ ಚೌಕಟ್ಟನ್ನು ಬಿಟ್ಟುಕೊಡುವುದಕ್ಕೆ ಸಿದ್ಧ ಇರುವುದಿಲ್ಲ. ಆದರೂ ಅವನು ಸಮಾಜಮುಖಿ. ತನ್ನ ಜೊತೆಗೆ ಮನೆಯಲ್ಲಿ ಇರುವವರನ್ನು ನಿರ್ಲಕ್ಷಿಸಲಾರ. ಸಮಾಜವನ್ನು ಮೀರಿ ತನ್ನ ಸುಖ ಸಂತೋಷ ಸಂತೃಪ್ತಿ ಸಮಾಧಾನಗಳಿಗೆ ಅವನು ಸ್ಥಾನ ಕೊಡಲಾರ.

) ನಿವೃತ್ತಿ ಮಾರ್ಗ

ನಿವೃತ್ತಿ ಮಾರ್ಗದಲ್ಲಿ ವ್ಯಕ್ತಿ ತನ್ನ ದೇಹ, ಕುಟುಂಬ, ಊರು, ರಾಜ್ಯ, ದೇಶ ಕೋಶ ಇತ್ಯಾದಿ ಎಲ್ಲ ಪ್ರಾಪಂಚಿಕ ಚೌಕಟ್ಟುಗಳನ್ನು ಮೀರುವುದಕ್ಕೆ ಸಿದ್ಧ ಇರುತ್ತಾನೆ. ಕಾಯಾ ವಾಚಾ ಮನಸಾ ಸಂಯಮವನ್ನು ಸಾಧಿಸಬೇಕು ಎಂದುಕೊಳ್ಳುತ್ತಾನೆ. ಸಮಷ್ಟಿಗಾಗಿ ವ್ಯಷ್ಟಿಯನ್ನು ಪಕ್ಕಕ್ಕೆ ಸರಿಸುತ್ತಾನೆ. ಮೊದಲಿಗೆ ತನ್ನ ಅಂತಸ್ಸತ್ವವನ್ನು ವಿಕಾಸ ಪಡಿಸಿಕೊಳ್ಳುತ್ತಾನೆ. ಆನಂತರ ಇದೇ ದಿಕ್ಕಿನಲ್ಲಿ ಇರುವ ಇತರ ಸಾಮಾಜಿಕರಿಗೆ ಮಾರ್ಗದರ್ಶನ ನೀಡಬಯಸುತ್ತಾನೆ. ಇದು ನಿವೃತ್ತಿಮಾರ್ಗದ ಒಂದು ಮುಖ್ಯ ಆಶಯ. ಈ ಮಾರ್ಗವೂ ಸಮಾಜಮುಖಿಯೇ. ನಿವೃತ್ತಿ ಮಾರ್ಗದಲ್ಲಿ ಇರುವವರೂ ಸಮಾಜದ ಸದಸ್ಯರೇ. ಸಮಾಜದಲ್ಲಿ ಎಲ್ಲರೊಂದಿಗೆ ಇದ್ದೂ ಎಲ್ಲಾ ಚೌಕಟ್ಟುಗಳನ್ನು ಮೀರುವುದು ಮತ್ತು ಹಾಗೆ ಮೀರುವುದರಲ್ಲೇ ಸಂತೃಪ್ತನಾಗುವುದು ನಿವೃತ್ತಮಾರ್ಗಿಯ ಸಲ್ಲಕ್ಷಣ.

) ಪ್ರವೃತ್ತಿ ನಿವೃತ್ತಿಗಳ ಸಮನ್ವಯತೆ

ಪ್ರವೃತ್ತರಾಗಿರಲೀ, ನಿವೃತ್ತರಾಗಿರಲೀ ಎಲ್ಲರಿಗೂ ಪ್ರಾಪಂಚಿಕವಾದ ಆವರಣವೊಂದು ಸಹಜವಾಗಿ ಇರುತ್ತದೆ. ಅದಕ್ಕೆ ಅನುಗುಣವಾಗಿ ಕೆಲಸ ಕಾರ್ಯ, ಕರ್ತವ್ಯ ಜವಾಬ್ದಾರಿಗಳ ನಿರ್ವಹಣೆಯೂ ಇರುತ್ತದೆ. ಅದರಿಂದ ಉಂಟಾಗುವ ಫಲಗಳ ಪರಿಣಾಮಗಳನ್ನು ಮಾತ್ರ ಮಾನಸಿಕವಾಗಿ ತ್ಯಾಗ ಮಾಡಿದರೆ ಅವರು ತಮ್ಮನ್ನು ನಿರ್ಬಂಧಿಸುವ ಎಲ್ಲ ರೀತಿಯ ಚೌಕಟ್ಟುಗಳನ್ನು ನಿರಾಕರಿಸಿದಂತೆಯೇ. ಪ್ರವೃತ್ತರಾದರೂ ನಿವೃತ್ತರಾದಂತೆಯೇ. ನಿವೃತ್ತರಾದರೂ ಪ್ರವೃತ್ತರಾದಂತೆಯೇ. ಪ್ರವೃತ್ತಿ ಮತ್ತು ನಿವೃತ್ತಿ ಮಾರ್ಗಗಳೆರಡನ್ನೂ ಸಮನ್ವಯಗೊಳಿಸಿದಂತೆಯೇ. ವ್ಯಕ್ತಿಯ ಈ ರೀತಿಯ ಬದುಕು ಅವನ ಬದುಕಿಗೆ, ಪ್ರಪಂಚದಲ್ಲಿಯ ಅವನ ಅಸ್ತಿತ್ವಕ್ಕೆ ಪ್ರಾಮುಖ್ಯತೆಯನ್ನು ಒದಗಿಸಿಕೊಡುತ್ತದೆ, ಅದನ್ನು ಅರ್ಥಪೂರ್ಣವಾಗಿಸುತ್ತದೆ ಎಂದು ಭಗವದ್ಗೀತೆ ಪ್ರವೃತ್ತಿ ನಿವೃತ್ತಿಗಳ ಪರಿಕಲ್ಪನೆಗೆ ಹೊಸ ಆಯಾಮವನ್ನು ಕೊಡುತ್ತದೆ.

) ಪರಮ ಪುರುಷಾರ್ಥಗಳು

ಜೊತೆಗಾರರನ್ನು ಭಾವಿಸದೆ ಒಬ್ಬ ತಾನೊಬ್ಬನೇ ಊಟ ಮಾಡಿದರೆ ಪಾಪವನ್ನು ಊಟ ಮಾಡಿದವನು ಆಗುತ್ತಾನೆ ಎನ್ನುವ ಭಗವದ್ಗೀತೆಗೆ ದಿನನಿತ್ಯದ ಬದುಕಿನಲ್ಲಿ ವ್ಯಕ್ತಿ ಮತ್ತು ಅವನ ಸಮುದಾಯದ ಆಸೆ ಆಕಾಂಕ್ಷೆಗಳ ನಡುವೆ ಸಾಮರಸ್ಯತೆ ಇರಬೇಕು. ಅವು ಸಮನ್ವಯಗೊಂಡಿರಬೇಕು. ಇಂಥ ಬದುಕನ್ನು ನಮ್ಮದನ್ನಾಗಿಸಿಕೊಳ್ಳಲು ಪರಮ ಪುರುಷಾರ್ಥಗಳು ಅಥವಾ ಪರಮ ಮೌಲ್ಯಗಳು, ಮಾನದಂಡ ಅಥವಾ ಮಾರ್ಗೋಪಾಯಗಳು ಯಾವುವು ಎಂಬ ಪ್ರಶ್ನೆಗೆ ಭಾರತೀಯ ಚಿಂತಕರು ಧರ್ಮಾರ್ಥಕಾಮಮೋಕ್ಷಗಳು ಎಂದು ಉತ್ತರಿಸಿದ್ದಾರೆ. ಇದನ್ನೂ ಭಗವದ್ಗೀತೆ ತನ್ನದೇ ಆದ ರೀತಿಯಲ್ಲಿ ವಿವರಿಸುತ್ತದೆ.

ಪ್ರತಿಯೊಬ್ಬರಿಗೂ ಅವರವರದೇ ಆದ ಸ್ವಭಾವ ಅಂದರೆ ಸ್ವಧರ್ಮ ಇದೆ; ಅದಕ್ಕೆ ಅನುಗುಣವಾಗಿ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಯೋಗ್ಯರೀತಿಯಿಂದ ವೃತ್ತಿ ನಿರ್ವಹಣೆ ಮತ್ತು ಜೀವನ ನಿರ್ವಹಣೆ ಮಾಡಿದರೆ ಧರ್ಮ ಮತ್ತು ಅರ್ಥಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಂತೆಯೇ. ವೈಯಕ್ತಿಕ ಮತ್ತು ಸಾಮುದಾಯಿಕ ಹಿತಕ್ಕೆ ಧಕ್ಕೆ ಬಾರದಂತೆ ಕಾಮನೆಗಳನ್ನು ಭಾವಿಸಿ ಈಡೇರಿಸಿಕೊಂಡರೆ ಕಾಮ ಮೌಲ್ಯವನ್ನು ಬದುಕಿನಲ್ಲಿ ಅಳವಡಿಸಿಕೊಂಡಂತೆಯೇ, ಮೋಕ್ಷ ಮೌಲ್ಯವನ್ನು ಬದುಕಿನ ಅವಿಭಾಜ್ಯ ಅಂಗವಾಗಿಸಿಕೊಳ್ಳುವ ಹಾದಿಯಲ್ಲಿ ನಡೆಯಲಾರಂಭಿಸಿದಂತೆಯೇ ಎಂದು ಭಗವದ್ಗೀತೆ ಪುರುಷಾರ್ಥಗಳನ್ನು ಸರಳವಾಗಿ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ರೀತಿಯನ್ನು ಗಮನಕ್ಕೆ ತರುತ್ತದೆ.

ಅರ್ಥಪೂರ್ಣ ಬದುಕು

) ಆತ್ಮ ಕಲ್ಯಾಣ

ಭಗವದ್ಗೀತೆಗೆ ವರ್ತಮಾನದಲ್ಲಿ ನಾವು ಹೇಗೆ ಬದುಕುತ್ತೇವೆ ಎಂಬುದನ್ನು ಅವಲಂಬಿಸಿ ನಮಗೆ ಮೋಕ್ಷ ದೊರೆಯುತ್ತದೆಯೋ ಇಲ್ಲವೋ ಎಂಬುದು ನಿರ್ಧಾರವಾಗುತ್ತದೆ. ಮೋಕ್ಷ ಎಂದರೆ ಅರ್ಥಪೂರ್ಣ ಬದುಕು ಎಂದು ಅರ್ಥೈಸುವ ಭಗವದ್ಗೀತೆ ಬದುಕಿರುವಾಗಲೇ ಪಡೆಯಬಹುದಾದ ಜೀವನ್ಮುಕ್ತಿಯನ್ನು ಎತ್ತಿಹಿಡಿಯುತ್ತದೆ. ಬಹುಪಾಲು ಉಪನಿಷತ್ತುಗಳು, ಮೂರೂ ವೇದಾಂತ ಶಾಖೆಗಳೂ, ಬೌದ್ಧ ಹಾಗೂ ಜೈನ ಸಿದ್ದಾಂತಗಳೂ ಮರಣೋತ್ತರ ಮೋಕ್ಷದ ಸಾಧ್ಯತೆಯನ್ನೇ ನಮ್ಮ ಅರ್ಥಪೂರ್ಣ ಬದುಕಿನ ಸಾಧ್ಯತೆಯನ್ನಾಗಿ ನಮ್ಮ ಮುಂದಿಡುವುದು. ಇವುಗಳಿಗಿಂತ ವಿಭಿನ್ನವಾಗಿ ವಸ್ತುಸ್ಥಿತಿಯನ್ನು ಪರಿಶೀಲಿಸುತ್ತದೆ ಭಗವದ್ಗೀತೆ.

ಅದು ಸಾವು ಎಂಬುದೇ ಇಲ್ಲ; ಎಲ್ಲರೂ ಅನಾದಿ ಕಾಲದಿಂದಲೂ ಇದ್ದಾರೆ; ಸಾಯುವುದು ಕೇವಲ ಭೌತಿಕ ಶರೀರ ಮಾತ್ರ ಎಲ್ಲರಲ್ಲೂ ಇರುವ ಆತ್ಮ ಶಾಶ್ವತವಾದದ್ದು; ಮಾನವ ಜೀವನ ಅಖಂಡವಾದದ್ದು. ಅವನ ಇಂದಿನ ಮತ್ತು ಮುಂದಿನ ಜೀವನಗಳ ನಡುವೆ (ಬದುಕು ಮತ್ತು ಸಾವಿನ ನಡುವೆ) ಘರ್ಷಣೆ ಇಲ್ಲ. ಈ ಐಹಿಕ ಜೀವನವು ತಾತ್ಕಾಲಿಕ ವಸತಿ ತಾಣವಾಗಿ, ಮಾಯಾತ್ಮಕವಾಗಿ ಕಂಡುಬಂದರೂ ಉದಾರಿ ದೇವತೆಗಳ ರಕ್ಷಣೆಯಲ್ಲಿ ಒಳ್ಳೆಯ ಬದುಕನ್ನು ನಡೆಸಲು ಆಶಿಸುವ ಸಜ್ಜನರಿಗೆ ಈ ಲೌಕಿಕ ಬದುಕು ಆತ್ಮಕಲ್ಯಾಣದ ಹಾದಿಯಲ್ಲಿ ಒಂದು ಮುಖ್ಯವಾದ ಘಟ್ಟವೇ ಎನ್ನುತ್ತದೆ.

) ಲೋಕ ಕಲ್ಯಾಣ

ವಾಸ್ತವಿಕವಾಗಿ ಪ್ರಪಂಚವನ್ನಾಗಲೀ, ಪ್ರಪಂಚದಲ್ಲಿ ದೊರಕುವ ಸುಖ ದುಃಖಗಳನ್ನಾಗಲೀ, ಪ್ರಾಪಂಚಿಕ ಇತಿಮಿತಿ ಚೌಕಟ್ಟು ಬಂಧ ವನ್ನಾಗಲೀ ಒಪ್ಪಿಕೊಳ್ಳದೇ ಇರಲು ಸಾಧ್ಯವಿಲ್ಲ. ಪ್ರಪಂಚದಲ್ಲಿ ಬಾಳನ್ನು ಸಾಗಿಸಲೇ ಬೇಕು, ಜವಾಬ್ದಾರಿಗಳನ್ನು ನಿರ್ವಹಿಸಲೇ ಬೇಕು; ಅದೇ ಸಹಜವಾದದ್ದು. ವ್ಯಕ್ತಿ ತನಗಾಗಿ, ತನ್ನ ಕುಟುಂಬ ಸಮಾಜ ರಾಜ್ಯ ಸುತ್ತಲಿನ ಪರಿಸರಕ್ಕಾಗಿ ಅತ್ಯಾವಶ್ಯಕವಾಗಿ ಮಾಡಬೇಕಾದ ಕರ್ಮ, ಕರ್ತವ್ಯಗಳನ್ನು ನಿರ್ವಹಿಸುತ್ತಾ ಕರ್ಮಾನುಷ್ಠಾನಿ ಆಗಲೇಬೇಕು. ವ್ಯಕ್ತಿಯ ಕರ್ತವ್ಯಗಳು ಮಾನವ ಸಮಾಜಕ್ಕೆ ಮಾತ್ರ ಸೀಮಿತವಾದದ್ದು ಅಲ್ಲ, ಸಮಸ್ತ ಚರಾಚರ ಜಗತ್ತನ್ನು ಅವು ವ್ಯಾಪಿಸುತ್ತವೆ. ನೈತಿಕ ಪ್ರಜ್ಞೆ ಇಲ್ಲದಿರುವವುಗಳಿಗೆ ತಾವೇ ಭಾವಿಸಿ ಮಾಡಬೇಕಾದ ಕರ್ತವ್ಯಗಳು ಇಲ್ಲದಿರಬಹುದು. ಆದರೆ ಅವುಗಳಿಗೆ ಸಲ್ಲಿಸ ಬೇಕಾದ ಯಾವ ಕರ್ತವ್ಯಗಳೂ ಮನುಷ್ಯನಿಗೆ ಇಲ್ಲ ಎನ್ನಲಾಗುವುದಿಲ್ಲ. ಲೋಕಕಲ್ಯಾಣಕ್ಕಾಗಿ ಕರ್ಮ ಕರ್ತವ್ಯವನ್ನು ಮಾಡಲೇಬೇಕು ಎಂದು ಭಗವದ್ಗೀತೆ ಒತ್ತಾಯಿಸುತ್ತದೆ.

) ವ್ಯಕ್ತಿತ್ವ

ಸಾಮಾಜಿಕ ಜೀವನದ ಬಗ್ಗೆ ಜಿಗುಪ್ಸೆ ಇರಬಾರದು; ಅದರ ಬಗ್ಗೆ ಉದಾಸೀನತೆ ತೋರಬಾರದು; ಕರ್ಮಾನುಷ್ಠಾನದಲ್ಲಿ ಸೂಚ್ಯವಾಗಿರುವ ನಿರ್ಲಿಪ್ತತೆಯನ್ನು, ಸ್ವಾರ್ಥತ್ಯಾಗವನ್ನು ರೂಢಿಸಿಕೊಳ್ಳಬೇಕು; ಜೊತೆಗಾರರ ಬಗೆಗೆ ಪ್ರೀತಿ ದಯೆ ಅನುಕಂಪೆ ಹೊಂದಿರಬೇಕು; ಸಮಸ್ತ ಜೀವ ಅಜೀವರಾಶಿಯನ್ನು ಒಳಗೊಳ್ಳುವ ವಿಸ್ತಾರವಾದ ಸಮಷ್ಟಿಯ ಬಗೆಗೆ ಮೈತ್ರಿಭಾವ ಇರಬೇಕು; ಅಹಿಂಸೆ, ಕರ್ಮಾನುಷ್ಠಾನ ಮತ್ತು ದೇವೋಪಾಸನೆಗಳಿಂದ ಆಸುರೀ ಗುಣಗಳಿಂದ ದೂರ ಸರಿಯುತ್ತಾ ಹೋಗಬೇಕು; ದೈವೀಗುಣಗಳನ್ನು ಸಂಪಾದಿಸುತ್ತ ದೇವಯಾನಿಯಾಗಬೇಕು; ತಾಮಸಿಕ ಗುಣದ ಜಡತ್ವವನ್ನು ಕೊಡವಿಕೊಳ್ಳಬೇಕು; ರಾಜಸಿಕ ಗುಣದ ಕ್ರಿಯಾಶೀಲತೆಗೆ ತನು ಮನ ಧನಗಳನ್ನು ಒಡ್ಡಿಕೊಳ್ಳಬೇಕು; ಶ್ರದ್ಧೆ ರೂಢಿ ಅಭ್ಯಾಸಗಳನ್ನು ತರ್ಕ ಅನುಭವ ಅನುಭಾವಗಳ ಒರೆಗಲ್ಲಿಗೆ ಹಚ್ಚಿ ಅರಿವು ಪಡೆದು ಸಾತ್ವಿಕ ಗುಣದ ಔದಾರ್ಯ, ಶಾಂತಿ, ನಿರಾಳತೆಗಳ ಪರಮಶಾಂತಿಯುತ ವ್ಯಕ್ತಿತ್ವವನ್ನು ತನ್ನದಾಗಿಸಿಕೊಳ್ಳಬೇಕು ಎನ್ನುವ ಗುರಿಯನ್ನು ಭಗವದ್ಗೀತೆ ಮುಂದಿಡುತ್ತದೆ. ಇದೇ ಲೋಕಕಲ್ಯಾಣಕ್ಕಾಗಿ ರೂಪಿಸಿಕೊಂಡ ಮತ್ತು ಮೋಕ್ಷ ಮೌಲ್ಯವನ್ನು ಸಿದ್ಧಿಸಿಕೊಂಡ ಪರಮ ಸಾರ್ಥಕ ಬದುಕು ಎಂದು ಭಗವದ್ಗೀತೆ ಸ್ಪಷ್ಟಪಡಿಸುತ್ತದೆ.

ವ್ಯಕ್ತಿ ಸ್ವಾತಂತ್ರ್ಯ

) ಜೀವನಗತಿ

ಒಂದು ಮುಖ್ಯವಾದ ಪ್ರಶ್ನೆ ನಮಗೆ ಬೇಕಾದಂತೆ ನಮ್ಮ ಜೀವನವನ್ನು ಅರ್ಥಪೂರ್ಣ ಆಗಿಸಿಕೊಳ್ಳುವ, ಶಾಂತತೆಯ ಆನಂದದ ಅನುಭವವನ್ನು ಪಡೆಯುವ ಸ್ವಾತಂತ್ರ್ಯ ನಮಗೆ ಇದೆಯೇ ಎಂಬುದು. ಇದಕ್ಕೆ ಕೊಡುವ ಉತ್ತರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯನ್ನು ಗಮನಿಸಿ ಭಗವದ್ಗೀತೆ ವ್ಯಕ್ತಿ ಎಂಬುವವನು ದೇಹ, ಮನಸ್ಸು ಮತ್ತು ಅವುಗಳ ಕ್ರಿಯೆಗಳ ಒಂದು ಸಂಕೀರ್ಣತೆ; ವ್ಯಕ್ತಿಯು ಸತ್ತಾಗ ಅವನ ಸೂಕ್ಷ್ಮ ಶರೀರದ ಜೊತೆಗೆ ಅವನ ವಿದ್ಯಾ (ಜ್ಞಾನ) ಮತ್ತು ಕರ್ಮ (ಆಸೆ) ಗಳೂ ಅವನ ಸ್ಥೂಲ ಶರೀರದಿಂದ ಹೊರಬೀಳುತ್ತವೆ; ಅವು ಅವನ ಮುಂದಿನ ಜೀವನಗತಿಯನ್ನು ನಿರ್ಧರಿಸುತ್ತವೆ; ವ್ಯಕ್ತಿಯ ಜೀವನಗತಿ ಬಂಧನಕಾರಿಯೋ ಅಥವಾ ವಿಮೋಚನಕಾರಿಯೋ ಎಂಬುದು ವ್ಯಕ್ತಿಯನ್ನೇ ಅವಲಂಬಿಸಿರುತ್ತದೆ ಎನ್ನುತ್ತದೆ.

) ಬಂಧನ

ವ್ಯಕ್ತಿ ಮೂಲಭೂತವಾಗಿ ಕರ್ತೃ ಭೋಕ್ತ ಜ್ಞಾತೃ. ಒಬ್ಬನ ವಿಚಾರಕ್ಕೆ, ನಡೆವಳಿಕೆಗೆ, ಭಾವನೆಗಳಿಗೆ ಅವನೇ ಕಾರಣ. ಅವನ ತಪ್ಪು ಗ್ರಹಿಕೆಯಾಧಾರಿತ ಕರ್ಮ, ಅವನ ಕರ್ಮವು ಉಂಟುಮಾಡುವ ಸೀಮಿತ ಜ್ಞಾನ ಎರಡೂ ಅವನನ್ನು ಬಂಧಿಸುತ್ತವೆ. ಅವನು ಎಲ್ಲಿಯವರೆಗೆ ತನ್ನ ಆಸೆ ಆಕಾಂಕ್ಷೆ, ಲಾಭ ನಷ್ಟ, ಸುಖ ದುಃಖ ಇವುಗಳ ದೃಷ್ಟಿಕೋನದಿಂದ ಕರ್ಮವನ್ನು ಮಾಡುತ್ತಿರುತ್ತಾನೆಯೋ ಅಲ್ಲಿಯವರೆಗೂ ಅವನ ಗ್ರಹಿಕೆ ಮತ್ತು ಕರ್ಮಗಳೆರಡೂ ಸೀಮಿತ ವ್ಯಾಪ್ತಿಯನ್ನು ಹೊಂದಿರುತ್ತವೆ. ಆ ಸೀಮಿತತೆಯೇ ಅವನ ಬಂಧನ. ಅವನೇ ನಿರ್ಮಿಸಿಕೊಂಡದ್ದು.

) ಬಿಡುಗಡೆ

ವ್ಯಕ್ತಿಗೆ ಅವನ ಬಂಧನವೇ ಸುಖಕಾರಿ ಆಗಿರಬಹುದು. ಅವನು ಹೇಗೆ ಯೋಚಿಸಿದರೆ ಹಾಗೆ, ಅವನು ಹೇಗೆ ಭಾವಿಸಿದರೆ ಹಾಗೆ. ಅವನ ಸುಖ ದುಃಖ, ಸಂತೋಷ ಅಸಂತೋಷ, ಸಮಾಧಾನ ಅಸಮಾಧಾನಗಳಿಗೆ ಅವನ ಮನಸ್ಸೇ ಕಾರಣ. ಅವನು ಸ್ವದೃಷ್ಟಿಕೋನವನ್ನು ಕೈ ಬಿಟ್ಟರೆ ಎಲ್ಲವನ್ನು ಅವು ಇರುವಂತೆಯೇ ಒಪ್ಪಿಕೊಂಡರೆ ಅವನ ಗ್ರಹಿಕೆ ಕರ್ಮಗಳು ವ್ಯಾಪಕತೆಯನ್ನು ಪಡೆಯುತ್ತಾ ಹೋಗುತ್ತವೆ. ಅವನ ಬಂಧನದ ವ್ಯಾಪ್ತಿ ಕಡಿಮೆಯಾಗುತ್ತಾ ಹೋಗುತ್ತದೆ. ಇದೂ ಅವನೇ ನಿರ್ಮಿಸಿಕೊಂಡದ್ದು.

) ಪ್ರಪಂಚ, ಪ್ರಾಪಂಚಿಕ ವ್ಯಕ್ತಿ

ವ್ಯಕ್ತಿ ಅಲ್ಲ್ಲದ, ಅವನು ಇಲ್ಲದ ಜಗತ್ತು ಯಾವಾಗಲೂ ಇದ್ದೇ ಇರುತ್ತದೆ. ಅದು ಅವನನ್ನು ಕಟ್ಟಿಹಾಕುವುದೂ ಇಲ್ಲ, ಅವನು ಅದರಿಂದ ಬಿಡಿಸಿಕೊಳ್ಳುವುದೂ ಇಲ್ಲ. ಅವನು ಸ್ವೇಚ್ಛೆಯಾಗಿರಲೂ ಅದು ಬಿಡುವುದಿಲ್ಲ, ಅದರ ಪಾಡಿಗೆ ಅದು, ನನ್ನ ಪಾಡಿಗೆ ನಾನು ಎಂದು ಅದರಿಂದ ಪ್ರತ್ಯೇಕಿತನಾಗಿ ಇರಲೂ ಅದು ಬಿಡುವುದಿಲ್ಲ. ಅವನು ಅದನ್ನು ಕುರಿತು ಭಾವಿಸಿ ಅರಿವನ್ನು ಪಡೆಯುತ್ತಲೇ ಇರುತ್ತಾನೆ, ಆ ಅರಿವಿಗೆ ಅನುಗುಣವಾಗಿ ಪ್ರಪಂಚದಲ್ಲಿ ಕೆಲಸ, ಕರ್ಮ ಮಾಡುತ್ತಲೇ ಇರುತ್ತಾನೆ, ಆ ಕರ್ಮಫಲವನ್ನು ಅನುಭವಿಸುತ್ತಲೇ ಇರುತ್ತಾನೆ.

ಕಾರ್ಯ ಕಾರಣಾತ್ಮಕವಾದ ವಿಶ್ವದ ಸಂಗತಿಗಳನ್ನು ಪರಿಶೀಲಿಸಿದಾಗ ಅವೆಲ್ಲವೂ ಅತ್ಯುಚ್ಚ ಮೌಲ್ಯವೂ, ಸಕಲ ಚರಾಚರಗಳ ಸೃಷ್ಟಿ ಸ್ಥಿತಿ ಲಯ ಕರ್ತೃವೂ, ಎಲ್ಲದರ ಕ್ರಿಯಾತ್ಮಕ ತತ್ತ್ವವೂ ಮತ್ತು ಅವೆಲ್ಲವುಗಳಿಗಿಂತ ಮಿಗಿಲಾದ, ಅವೆಲ್ಲವುಗಳಿಗೆ ಅತೀತವಾಗಿ ಇರುವ ಭಗವಂತನ, ಪರಮ ವಾಸ್ತವಿಕತೆಯ ಕಡೆಗೆ ನಿರ್ದೇಶಿತವಾಗಿವೆ ಎಂಬ ಅರಿವು ಹೃದಯವನ್ನು ತುಂಬುತ್ತದೆ. ವಿಶ್ವವನ್ನು ಕುರಿತು ಒಂದು ವಿಲಕ್ಷಣವಾದ ಭರವಸೆ ಉಂಟಾಗುತ್ತದೆ. ಜೀವನವನ್ನು ಅದರ ಎಲ್ಲಾ ಸಂಕೀರ್ಣತೆ, ವ್ಯಾಪಕತೆಯೊಂದಿಗೆ ಶಾಂತಿಯುತವಾಗಿ ಒಪ್ಪಿಕೊಳ್ಳುವ ಮನಸ್ಥಿತಿ ಉಂಟಾಗುತ್ತದೆ ಮತ್ತು ಮೋಕ್ಷಸಾಧನೆಯ ಪಥದಲ್ಲಿ ವ್ಯಕ್ತಿ ಸದೃಢ ಹೆಜ್ಜೆ ಇರಿಸುತ್ತಾನೆ, ಮಾನವೀಯವಾಗಿರುತ್ತಾನೆ ಎಂದು ಭಗವದ್ಗೀತೆ ಭರವಸೆ ನೀಡುತ್ತದೆ.

ಮಾನವ ಹಕ್ಕುಗಳು

) ಸ್ವಾಭಾವಿಕ ಮಾನವ ಹಕ್ಕುಗಳು

ಮಾನವೀಯವಾಗಿ ಬದುಕಲು ಬಯಸುವ ವ್ಯಕ್ತಿಗೆ ಯಾವ ಮಾನವ ಹಕ್ಕುಗಳಿವೆ ಎಂಬುದನ್ನು ಭಾರತೀಯ ಜಗತ್ತಿನಲ್ಲಿ ಒಂದು ಸಿದ್ಧಾಂತದಂತೆ ಮೊಟ್ಟ ಮೊದಲಿಗೆ ಪ್ರತಿಪಾದಿಸಿದುದು ಭಗವದ್ಗೀತೆಯೇ. ಅದು ವ್ಯಕ್ತಿಯನ್ನು ಹಲವು ಮಗ್ಗುಲುಗಳಲ್ಲಿ ಗಮನಿಸಿದೆ. ಅವನನ್ನು ದೇಹ ಭಾವದಿಂದ ಗಮನಿಸಿ ದೇಹ ಆರೋಗ್ಯದಿಂದ ಇರುವಂತೆ ನೋಡಿಕೊಳ್ಳುವುದು ವ್ಯಕ್ತಿಯ ಜವಾಬ್ದಾರಿ ಎಂದು ಹೇಳಿ ಆರೋಗ್ಯಯುತ ದೇಹವನ್ನು ಹೊಂದುವುದು ವ್ಯಕ್ತಿಯ ಮೂಲಭೂತ ಹಕ್ಕು ಎಂದು ಗೀತೆ ಗಮನಿಸುತ್ತದೆ. ಆರೋಗ್ಯಯುತ ದೇಹವನ್ನು ಹೇಗೆ ಹೊಂದಬಹುದು ಎಂಬುದರ ಸೂತ್ರವಾಗಿ ಯುಕ್ತವಾದ ಮತ್ತು ಮಿತವಾದ ಆಹಾರ, ವಿಹಾರಗಳ ಕಡೆಗೆ ಗಮನ ಸೆಳೆಯುತ್ತದೆ.

) ಗಮನಾರ್ಹ ಮಾನವ ಹಕ್ಕು

ದೇಹದ ಇಂದ್ರಿಯಗಳ ಸ್ವಭಾವವೇ ಬಾಹ್ಯಮುಖಿ ಆಗಿರುವುದು. ಅವು ತಮ್ಮ ವ್ಯಾಪ್ತಿಗೆ ಬಂದದ್ದನ್ನೆಲ್ಲಾ ಸುಮ್ಮನೆ ಸ್ವೀಕರಿಸಿ ಬಿಡುತ್ತವೆ. ಈ ಸ್ವಭಾವವನ್ನು ಹಿಡಿತದಲ್ಲಿ ಇಟ್ಟುಕೊಳ್ಳದಿದ್ದರೆ ದೇಹದ ಆರೋಗ್ಯಕ್ಕೂ ಹಾನಿ, ಮನಸ್ಸಿನ ಆರೋಗ್ಯಕ್ಕೂ ಹಾನಿ ಎಂದೆನ್ನುವ ಭಗವದ್ಗೀತೆ ಮನುಷ್ಯನನ್ನು ಅವನ ಮನೋಭಾವದ ದೃಷ್ಟಿಯಿಂದ ಗಮನಿಸುವುದಕ್ಕೂ ಆದ್ಯತೆ ಕೊಡುತ್ತದೆ, ಮನಸ್ಸು ಆರೋಗ್ಯದಿಂದ ಇದ್ದರೆ ದೇಹವೂ ಆರೋಗ್ಯದಿಂದ ಇರುತ್ತದೆ ಎಂಬುದನ್ನು ಒಪ್ಪಿಕೊಳ್ಳುವ ಭಗವದ್ಗೀತೆ ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳುವುದಕ್ಕೆ ಪೂರಕವಾದದ್ದು ಯಾವುದು ಎಂಬುದನ್ನು ಪರಿಶೀಲಿಸುತ್ತದೆ. ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳುವುದೇ ಗಮನಾರ್ಹ ಮಾನವ ಹಕ್ಕು ಎನ್ನುತ್ತದೆ.

) ಮಾನಸಿಕ ಆರೋಗ್ಯ

ಸುಂದರ ಬದುಕಿಗೆ ಸಂಬಂಧಿಸಿದಂತೆ ಭಾರತೀಯ ತಾತ್ತ್ವಿಕ ಚಿಂತನೆಯಲ್ಲಿ ಮನಸ್ಸಿನ ಆರೋಗ್ಯಕ್ಕೆ ಪ್ರಥಮ ಪ್ರಾಶಸ್ತ್ಯ. ಭಗವದ್ಗೀತೆಯ ಮೊದಲ ಪ್ರಶ್ನೆಯೇ ಮನೋವಿಕಾರವನ್ನು ತಡೆಯುವುದು ಹೇಗೆ ಎಂಬುದು. ಸತ್ಯ ಅಸತ್ಯಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವ, ಗುರುತಿಸಿದ ಸತ್ಯಕ್ಕೆ ಅನುಗುಣವಾಗಿ ನಡೆವಳಿಕೆಯನ್ನು ರೂಪಿಸಿಕೊಳ್ಳುವ ಮನಃಸ್ಥಿತಿ ಮನೋವಿಕಾರವನ್ನು ತಡೆಯುವುದರಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎನ್ನುತ್ತದೆ ಭಗವವ್ಗೀತೆ. ಸುಖವೇ ಬರಬೇಕು, ದುಃಖ ಇರಲೇ ಬಾರದು; ಲಾಭವೇ ಆಗುತ್ತಿರಬೇಕು, ನಷ್ಟ ಆಗಲೇ ಬಾರದು; ಜಯವೇ ದೊರೆಯುತ್ತಿರಬೇಕು, ಅಪಜಯ ಉಂಟಾಗಲೇ ಬಾರದು ಎನ್ನುವ ಮನಃಸ್ಥಿತಿಯು ಮನಸ್ಸಿನ ಸ್ವಾಸ್ಥ್ಯವನ್ನು ಖಂಡಿತವಾಗಿ ಕೆಡಿಸುತ್ತದೆ ಎನ್ನುತ್ತದೆ ಭಗವದ್ಗೀತೆ.

ಕಾಮ ಕ್ರೋಧ ಲೋಭ ಮೋಹ ಮದ ಮಾತ್ಸರ್ಯಗಳೂ ಮನಸ್ಸಿನ ಆರೋಗ್ಯವನ್ನು ಕೆಡಿಸುತ್ತವೆ, ಅವುಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಎಂದು ಭಗವದ್ಗೀತೆ ಸೂಚಿಸುತ್ತದೆ. ತಾಮಸ ಗುಣವು ಸೋಮಾರಿತನವನ್ನೂ, ರಜೋಗುಣವು ಮೂಗು ಮುಖ ಇಲ್ಲದ ಕ್ರಿಯಾಶೀಲತೆಯನ್ನೂ, ಸಾತ್ವಿಕ ಗುಣವು ಸುಮ್ಮ ಸುಮ್ಮನೆ ದೊಡ್ಡಸ್ಥಿಕೆಯನ್ನೂ ಮುಂದು ಮಾಡುತ್ತವೆ ಎಂದು ಎಚ್ಚರಿಸುತ್ತದೆ. ಬಹಿರ್ಮುಖ ಆಗಿರುವ ಇಂದ್ರಿಯ ಸಂವೇದನಾತ್ಮಕ ಅರಿವು ಮತ್ತು ಮನಸ್ಸಿನ ಕ್ರಿಯಾಶೀಲತೆಯನ್ನು ಮನಸ್ಸಿನ ಆರೋಗ್ಯದ ದೃಷ್ಟಿಯಿಂದ ಅಂತರ್ಮುಖಿ ಆಗಿಸಿಕೊಂಡು ವಿವೇಚನೆಯ ಒರೆಗಲ್ಲಿಗೆ ಹಚ್ಚುವ ಅವಶ್ಯಕತೆಯ ಕಡೆಗೆ ಗಮನ ಸೆಳೆಯುತ್ತದೆ.

ವ್ಯಕ್ತಿ ಅಂತರ್ಮುಖಿ ಆದಾಗ ಸತ್ಯಾಸತ್ಯತೆಯ ಅರಿವು ಉಂಟಾಗುತ್ತದೆ; ಆ ಅರಿವಿನ ಮೂಲಕ ಮಾನಸಿಕ ಸಮಚಿತ್ತತೆ ಸಾಧ್ಯವಾಗುತ್ತದೆ, ಮನಸ್ಸೂ ನಿರೋಗಿಯಾಗುತ್ತದೆ, ವ್ಯಕ್ತಿಯು ವೈಯಕ್ತಿಕವಾಗಿ ಮಾತ್ರವಲ್ಲದೆ ಸಾಮಾಜಿಕವಾಗಿಯೂ ಆರೋಗ್ಯವಾಗಿರುತ್ತಾನೆ ಎಂದೆನ್ನುವ ಭಗವದ್ಗೀತೆಯು ವೈಯಕ್ತಿಕ ಮಾನಸಿಕ ಆರೋಗ್ಯದ ಜೊತೆ ಜೊತೆಗೆ ಸಾಮಾಜಿಕ ಆರೋಗ್ಯದ ಕಡೆಗೂ ಗಮನ ಸೆಳೆಯುತ್ತದೆ.

) ಮಾನವ ಹಕ್ಕಿನ ಉಲ್ಲಂಘನೆ

ದೈಹಿಕ ಆಸೆ ಆಕಾಂಕ್ಷೆಗಳಿಗೆ ಪ್ರಾಧಾನ್ಯತೆ ಇದ್ದಾಗ ಸದಾ ಅವುಗಳ ಈಡೇರಿಕೆಯ ಕಡೆಗೇ ಗಮನವೆಲ್ಲಾ ಇರುತ್ತದೆ. ಅವುಗಳಲ್ಲಿ ಒಂದಷ್ಟು ಪೂರೈಕೆಯಾದರೆ ಮತ್ತಷ್ಟು ಆಸೆ ಆಕಾಂಕ್ಷೆಗಳ ಬೆನ್ನು ಹತ್ತುವಂತಾಗುತ್ತದೆ. ನಿಧಾನವಾಗಿ ಸರಿ ತಪ್ಪುಗಳ, ಒಳಿತು ಕೆಡುಕುಗಳ, ನ್ಯಾಯ ಅನ್ಯಾಯಗಳ ಪ್ರಶ್ನೆ ಹಿಂದಕ್ಕೆ ಸರಿಯುತ್ತದೆ. ಇನ್ನೊಬ್ಬರ ಅಗತ್ಯಗಳಿಗೆ ಕಿಂಚಿತ್ತೂ ಸ್ಪಂದಿಸದಂತೆ ಆಗುತ್ತದೆ ಎಂದೆನ್ನುತ್ತದೆ ಭಗವದ್ಗೀತೆ.

ಒಂದೊಮ್ಮೆ ಆಸೆ ಆಕಾಂಕ್ಷೆಗಳು ಈಡೇರದಿದ್ದರೆ ಕೋಪ ಬರುತ್ತದೆ. ಕೋಪದಿಂದ ಬುದ್ಧಿನಾಶ ಉಂಟಾಗುತ್ತದೆ. ವಿವೇಚನಾತ್ಮಕ ಪರಿಜ್ಞಾನ ಇಲ್ಲದಂತಾಗಿ ಸರಿಯಾದ ದಾರಿಯನ್ನು ಅನುಸರಿಸುವ ಮನೋಮಾರ್ಗ ಮುಚ್ಚಿ ಹೋಗುತ್ತದೆ. ಇದರ ಒಟ್ಟಾರೆ ಪರಿಣಾಮ ವ್ಯಕ್ತಿಯ ಘನತೆಯುತ ಅಸ್ತಿತ್ವಕ್ಕೆ ಕೊಡಲಿ ಪೆಟ್ಟು ಎನ್ನುವ ಭಗವದ್ಗೀತೆ ದೈಹಿಕ ಮತ್ತು ಮಾನಸಿಕ ಆರೋಗ್ಯಗಳ ಕಡೆಗೆ ಗಮನ ಕೊಡದಿದ್ದರೆ ಹೇಗೆ ಮಾನವ ಹಕ್ಕಿನ ಉಲ್ಲಂಘನೆ ಉಂಟಾಗುತ್ತದೆ ಎಂಬುದನ್ನು ವಿವರಿಸುತ್ತದೆ.

ಪಕ್ಷಪಾತ ಮನಃಸ್ಥಿತಿ

ಮಾನವ ಹಕ್ಕುಗಳ ಪ್ರತಿಪಾದನೆ ಮತ್ತು ಅವುಗಳ ಉಲ್ಲಂಘನೆಯನ್ನು ಮನುಷ್ಯನ ವ್ಯಾವಹಾರಿಕ ಪ್ರಪಂಚದ ದೃಷ್ಟಿಯಿಂದಲೂ ಗೀತೆ ಪರಿಶೀಲಿಸುತ್ತದೆ. ವ್ಯಕ್ತಿಯ ದೈಹಿಕ ಭೌತಿಕ ಅಸ್ತಿತ್ವದ ನೆಲೆಗಟ್ಟು ಅವನ ಭೌತಿಕ ವ್ಯಾವಹಾರಿಕ ಪ್ರಪಂಚ; ಅವನು ಅದರ ಬಗ್ಗೆ ಹೊಂದಿರುವ ದೃಷ್ಟಿಕೋನವು ಭಾವಾತ್ಮಕ ಅಭಾವಾತ್ಮಕ, ಸೃಷ್ಟ್ಯಾತ್ಮಕ ವಿನಾಶಾತ್ಮಕ, ಸುಂದರ ಅಸುಂದರ, ವ್ಯಕ್ತಿ ನಿಷ್ಟ ವಸ್ತು ನಿಷ್ಟ, ಸ್ನೇಹ ಗೌರವ ಪೂಜ್ಯಭಾವ ನಿಕೃಷ್ಟ ತಿರಸ್ಕಾರ ಜಿಗುಪ್ಸಾತ್ಮಕ ಎಂದೆಲ್ಲ ಬಗೆ ಬಗೆಯಾಗಿ ಇಮ್ಮುಖ; ಈ ಇಮ್ಮುಖ ಭಾವಗಳಲ್ಲಿ ಯಾವುದೋ ಒಂದು ಭಾವಕ್ಕೆ ಅತಿಯಾಗಿ ಪ್ರಾಮುಖ್ಯತೆ ಕೊಟ್ಟಾಗ ಮಾನವ ಅಸ್ತಿತ್ವದ ಘನತೆಗೆ ಭಂಗ ಉಂಟು ಮಾಡುವ ಅತಿಯಾದ ದುಃಖ, ವ್ಯಾಮೋಹ, ಮದ, ಮಾತ್ಸರ್ಯ ಮುಂತಾದವುಗಳು ವಿಜೃಂಭಿಸುತ್ತವೆ ಎಂದೆನ್ನುತ್ತದೆ ಗೀತೆ.

ಅಶಾಂತಿ

ನಾವು ನಮ್ಮ ಜೊತೆಗಾರರನ್ನು ಅವರವರ ಸ್ವಭಾವ, ಅವರು ಸಮಾಜದಲ್ಲಿ ಪಡೆದಿರುವ ಸೌಲಭ್ಯ, ಸವಲತ್ತುಗಳೇ ಮುಂತಾದ ನೆಲೆಗಳಲ್ಲಿ ಗಮನಿಸಿ ಅವರು ನಮ್ಮಂತೆ ಇಲ್ಲ ಅಥವಾ ನಾವು ಅವರಂತೆ ಇಲ್ಲ ಎನ್ನುವ ಪ್ರತ್ಯೇಕತಾ ದೃಷ್ಟಿಯಿಂದಲೇ ಅವರನ್ನು ನೋಡುತ್ತಾ ಹೋದಾಗ ಬಗೆ ಬಗೆಯ ಭೇದಭಾವಗಳನ್ನು, ಜಿಗುಪ್ಸೆ ತಿರಸ್ಕಾರ ನಿಕೃಷ್ಟತೆ, ಅದೇನು ಮಹಾ ಎನ್ನುವ ಉಡಾಫೆಯೇ ಮೊದಲಾದ ಅಗೌರವಯುತ ಅಥವಾ ದ್ವೇಷದ ಭಾವನೆಗಳನ್ನು ಜೊತೆಗಾರರ ಬಗ್ಗೆ ನಮ್ಮಲ್ಲಿ ತುಂಬಿಕೊಳ್ಳುತ್ತಾ ಹೋಗುತ್ತೇವೆ. ಎಲ್ಲದರ ಬಗ್ಗೆ, ಎಲ್ಲರ ಬಗ್ಗೆ ಸೂಕ್ತ ಆದರ ಭಾವ ಇದ್ದ ಹೊರತೂ ಅಗೌರವಯುತವಾದ ಭಾವಗಳಿಂದ ನಮಗೆ ಹೊರ ಬರಲು ಆಗುವುದಿಲ್ಲ. ಸಮಗ್ರವಾದ ದೃಷ್ಟಿಕೋನವನ್ನು ವಾಸ್ತವತೆಗೆ ಸಂಬಂಧಿಸಿದಂತೆ ರೂಪಿಸಿಕೊಳ್ಳಲೂ ಆಗುವುದಿಲ್ಲ. ಸಮತೋಲನದ ಸಮಗ್ರ ದೃಷ್ಟಿಕೋನದ ಅಭಾವದಿಂದ ವ್ಯಕ್ತಿಯ ಮತ್ತು ಅವನ ಸಮುದಾಯದ ಹಾಗೂ ಒಟ್ಟಾರೆ ಮಾನವ ಸಮಾಜದ ಘನತೆಯುತ ಅಸ್ತಿತ್ವಕ್ಕೆ ಆಘಾತಕಾರಿ ಪೆಟ್ಟು ಉಂಟಾಗುತ್ತದೆ ಎನ್ನುತ್ತದೆ ಭಗವದ್ಗೀತೆ.

ಅಸಮತೋಲನದ ಮನಃಸ್ಥಿತಿ ಮತ್ತು ಪ್ರತ್ಯೇಕತಾ ನೀತಿಗಳ ಒಟ್ಟಾರೆ ಪರಿಣಾಮ ಮಾನಸಿಕ ಅಶಾಂತಿ, ವೈಯಕ್ತಿಕ ಮತ್ತು ಸಾಮುದಾಯಿಕ ಜೀವನರೀತಿಯಲ್ಲಿ ಅಶಾಂತಿ. ಮನುಷ್ಯನ ಘನತೆಯುತ ಅಸ್ತಿತ್ವ ಎನ್ನುವ ಮೂಲಭೂತ ಮಾನವ ಹಕ್ಕಿನ ಪ್ರತಿಪಾದನೆಗೆ ಅತ್ಯಂತ ಪ್ರಮುಖವಾದ ಅಡ್ಡಿ ಅಶಾಂತಿಯೇ ಎನ್ನುತ್ತದೆ ಗೀತೆ. ಪರಮಶಾಂತಿಯ ಪ್ರತಿಪಾದನೆಯೇ ಅದಕ್ಕೆ ರಾಮಬಾಣ ಎಂದೂ ಗುರುತಿಸುತ್ತದೆ.

) ಮಾನವ ಹಕ್ಕಿನ ಪ್ರತಿಪಾದನೆ ಸ್ಥಿತಪ್ರಜ್ಞೆ

ಸಾಕ್ರಟೀಸನಂತೆ ಭಗವದ್ಗೀತೆಗೂ ಎಚ್ಚರದ ಸಮತೋಲನದ ಸಮತೂಕದ ಸ್ಥಿತಪ್ರಜ್ಞೆಯೇ ಮಾನವ ಹಕ್ಕುಗಳ ಪ್ರತಿಪಾದನೆಯನ್ನು ಸಾಧ್ಯಗೊಳಿಸುವ ಮತ್ತು ಮಾನವ ಹಕ್ಕಿನ ಉಲ್ಲಂಘನೆಯ ಸಂದರ್ಭವನ್ನು ನಿರ್ಧರಿಸುವ ಮತ್ತು ನಿವಾರಿಸುವ ಅಂತಿಮ ಸಾಧನೋಪಾಯ ಮತ್ತು ಮಾನದಂಡ. ಗೀತೆಯು ಎಲ್ಲಾ ಸಂದರ್ಭಗಳಲ್ಲೂ ಸಮತೋಲನ ತಪ್ಪದ ಜಾಗೃತ ಪ್ರಜ್ಞೆ, ಎಚ್ಚರದ ಅರಿವು ಅತ್ಯಗತ್ಯ ಎಂಬುದನ್ನು ಗಮನಿಸುವುದು ಒಟ್ಟಾರೆ ವ್ಯಕ್ತಿ ಮತ್ತು ಸಮುದಾಯದ ಘನತೆಯುತ ಅಸ್ತಿತ್ವದ ದೃಷ್ಟಿಯಿಂದಲೇ. ನಾವು ನಮ್ಮನ್ನು ಕೇವಲ ದೇಹಭಾವದಿಂದ ಗಮನಿಸಿ ನಮ್ಮ ವೈಯಕ್ತಿಕ ಆಸೆ ಆಕಾಂಕ್ಷೆ ನಿಲುವು ಅಭಿಪ್ರಾಯ ಧೋರಣೆಗಳನ್ನು ರೂಪಿಸಿಕೊಳ್ಳುವುದರಿಂದ ನಮಗೆ ನಾವು ಮಾತ್ರ ಪ್ರಧಾನ ಆಗುತ್ತೇವೆ, ಇತರರು ಗೌಣ ಆಗುತ್ತಾರೆ, ಅದರಿಂದ ಅವರ ಘನತೆಯುತ ಅಸ್ತಿತ್ವಕ್ಕೆ ಧಕ್ಕೆಯುಂಟಾಗುತ್ತದೆ ಮತ್ತು ನಮ್ಮ ಘನತೆಯುತ ಅಸ್ತಿತ್ವಕ್ಕೆ ಭಂಗ ಉಂಟಾಗಬಹುದಾದ ಸಂದರ್ಭವನ್ನು ನಾವೇ ಸೃಷ್ಟಿ ಮಾಡಿ ಕೊಟ್ಟಂತೆ ಆಗುತ್ತದೆ ಎಂದೆನ್ನುತ್ತದೆ ಭಗವದ್ಗೀತೆ.

ಅದ್ವೈತ ಭಾವ

ಸೃಷ್ಟಿ, ಹಗಲು, ಉತ್ತರಾಯಣ, ಶುಕ್ಲಪಕ್ಷ, ದೇವಯಾನ ಇತ್ಯಾದಿಗಳು ಇವೆ ಎಂದರೆ ಅವುಗಳಿಗೆ ಅನುಕ್ರಮವಾಗಿ ನಾಶ, ರಾತ್ರಿ, ದಕ್ಷಿಣಾಯನ, ಕೃಷ್ಣಪಕ್ಷ, ಪಿತೃಯಾನ ಮುಂತಾದವುಗಳು ಇವೆ ಎಂದೇ ಅರ್ಥ; ಈ ರೀತಿಯ ಇಮ್ಮುಖಗಳು ಪರಸ್ಪರ ಸಾಪೇಕ್ಷವಾದ ದ್ವೈತಗಳು; ಈ ಎಲ್ಲ ಇಮ್ಮುಖಗಳಿಗೂ ಅದರದರದೇ ಆದ ಮಹತ್ವ ಇದೆ, ಅವು ಪರಸ್ಪರ ಒಂದಕ್ಕೊಂದು ಪೂರಕ ಎನ್ನುತ್ತದೆ ಭಗವದ್ಗೀತೆ. ಇವುಗಳನ್ನು ಯಾವ ಮನೋವಿಕಾರಕ್ಕೂ ಒಳಪಡದೆ, ಯಾವ ಅತಿರೇಕತೆಗೂ ಒಳಗಾಗದೆ ಸಮಭಾವದಿಂದ ಗಮನಕ್ಕೆ ತಂದುಕೊಂಡು ಸೂಕ್ತವಾದ ಚಟುವಟಿಕೆಗಳನ್ನು ರೂಪಿಸಿಕೊಳ್ಳಬೇಕು; ಇದೇ ಇವುಗಳನ್ನು ದ್ವೈತಭಾವದಿಂದ ಗ್ರಹಿಸುವುದರಿಂದ ಉಂಟಾಗಬಹುದಾದ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಯಲು ಇರುವ ಏಕೈಕ ಪರಿಹಾರೋಪಾಯ ಎಂದು ಗೀತೆ ಹೇಳುತ್ತದೆ.

ವ್ಯಾಪಕ ಆಯಾಮಗಳು

ದೈಹಿಕ, ಪ್ರಾಪಂಚಿಕ, ಭೌತಿಕ, ಮಾನಸಿಕ, ವೈಯಕ್ತಿಕ, ಸಾಮುದಾಯಿಕ, ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ಸ್ಥಿತಪ್ರಜ್ಞೆಯನ್ನು ಸಿದ್ಧಿಸಿಕೊಳ್ಳುವುದು ಮತ್ತು ಅದನ್ನು ರೂಢಿಗತ ಆಗಿಸಿಕೊಳ್ಳುವುದೇ ಮಾನವ ಹಕ್ಕಿನ ಪ್ರತಿಪಾದನೆಯ ಅತ್ಯಂತ ಗಮನಾರ್ಹವಾದ ಮಾರ್ಗ ಎಂಬ ಭಗವದ್ಗೀತೆಯ ನಿಲುವಿಗೆ ವ್ಯಾಪಕವಾದ ಆಯಾಮಗಳು ಇವೆ. ಈ ಆಯಾಮಗಳನ್ನು ಪರಮ ಶಾಂತಿ, ಪರಮ ಸಮಾನತೆ, ಪರಮ ಸ್ವಾತಂತ್ರ್ಯ, ಪರಮಗತಿ ಎಂದೆಲ್ಲಾ ಗೀತೆ ಗುರುತಿಸುತ್ತದೆ.

ಪರಮಶಾಂತಿ

ದೇಹಭಾವಗಳ ಮೇಲೆ ಹಿಡಿತ ಸಾಧಿಸಿದರೆ ಸುಖ ದುಃಖ, ಲಾಭ ಅಲಾಭ, ಜಯ ಅಪಜಯಗಳನ್ನು ಸಮಾನವಾಗಿ ಸ್ವೀಕರಿಸಲು ಸಾಧ್ಯ ಆಗುತ್ತದೆ. ವೈಯಕ್ತಿಕವಾಗಿ ಮನಶ್ಶಾಂತಿ ಲಭಿಸುತ್ತದೆ. ಮನೋಭಾವದಲ್ಲಿ ಕಾಣಿಸಿಕೊಳ್ಳುವ ಸಮಾನತೆ ಲೌಕಿಕ ವ್ಯವಹಾರಗಳಲ್ಲಿ ರೂಢಿಗತ ಆದಾಗ ನಾಯಿ ಆನೆ, ಮಣ್ಣು ಚಿನ್ನ, ಶ್ವಪಚ ಬ್ರಾಹ್ಮಣ ಎಂಬಿತ್ಯಾದಿ ಪ್ರತ್ಯೇಕತಾ ಗ್ರಹಿಕೆ ಇಲ್ಲದ ಜ್ಞಾನ ಸಂಹಿತೆ, ಆಚಾರ ಸಂಹಿತೆಗಳು ರೂಪುಗೊಳ್ಳುತ್ತವೆ. ಅದರಿಂದ ಸಾಮಾಜಿಕವಾಗಿ ಸಾಮುದಾಯಿಕವಾಗಿ ಮನಶ್ಶಾಂತಿ ನೆಲೆಗೊಳ್ಳುತ್ತದೆ. ಈ ಎರಡೂ ರೀತಿಯ ಮನಃಶಾಂತಿಯ ಒಟ್ಟಾರೆ ಫಲಿತವೇ ಪರಮಶಾಂತಿ ಎಂದು ಗೀತೆ ತಿಳಿಯುತ್ತದೆ.

ಪರಮ ಸಮಾನತೆ, ಪರಮ ಸ್ವಾತಂತ್ರ್ಯ

ಸಮಾಜದ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ರೂಪುಗೊಳ್ಳುವ ಮನಶ್ಶಾಂತಿಯು ಸಹಜವಾಗಿ ಪ್ರಾಕೃತಿಕ ಸಮತೋಲನ ಮತ್ತು ಸುವ್ಯವಸ್ಥೆಯ ಪ್ರತಿಪಾದನೆಯಲ್ಲಿ ವ್ಯಕ್ತ ಆಗುತ್ತದೆ. ಅದು ಬಾಹ್ಯ ಮತ್ತು ಆಂತರಂಗಿಕ ವ್ಯಕ್ತಿನಿಷ್ಠ ವಸ್ತುನಿಷ್ಠ ಸಮಾನತೆಯಾಗಿ ನೆಲೆಯೂರುತ್ತದೆ, ಇದೇ ಪರಮ ಸಮಾನತೆ ಎಂದು ಪರಮ ಸಮಾನತೆಯನ್ನು ಗೀತೆ ಅರ್ಥೈಸುತ್ತದೆ. ಈ ರೀತಿಯ ಸಮಾನತೆಯ ಅಂತಿಮ ಪರಿಣಾಮ ವೈಯಕ್ತಿಕ ಮತ್ತು ಸಾಮುದಾಯಿಕ ನೆಲೆಗಳಲ್ಲಿ ಮುಕ್ತತೆ, ಪಾರದರ್ಶಕತೆ, ಅನಿರ್ಬಂಧತೆ; ಇದೇ ಪರಮ ಸ್ವಾತಂತ್ರ್ಯ ಎಂದೆನ್ನುತ್ತದೆ ಗೀತೆ. ಇಂಥ ಪರಮ ಸ್ವಾತಂತ್ರ್ಯ ಇದ್ದಾಗ ವ್ಯಕ್ತಿಗೆ ಎಲ್ಲೆಲ್ಲೂ ಹಿತದ ಅನುಭವ ಆಗುತ್ತದೆ, ಎಲ್ಲವೂ ಸುಖಕಾರಿ ಆಗಿರುತ್ತದೆ, ಎಲ್ಲದರ ಬಗ್ಗೆ ಪೂಜ್ಯಭಾವ ಮೂಡುತ್ತದೆ. ಇದೇ ಪರಮ ಗತಿ, ಪರಂಧಾಮ, ನಿಜವಾದ ಘನತೆಯುತ ಅಸ್ಥಿತ್ವ ಎಂದೆನ್ನುತ್ತದೆ ಭಗವದ್ಗೀತೆ.

ಭಗವದ್ಗೀತೆ ಮತ್ತು ಅಹಿಂಸೆ

ಅಹಿಂಸಾತ್ಮಕ ಬದುಕು

ಯುದ್ಧ ಬೇಡ, ಯುದ್ಧದಿಂದ ಆಗಬಾರದ ಅನರ್ಥಗಳ ಸರಮಾಲೆಯೇ ಹುಟ್ಟಿಕೊಳ್ಳುತ್ತದೆ ಎನ್ನುವ ವಾದದಿಂದ ಆರಂಭ ಆಗುವ ಭಗವದ್ಗೀತೆಯು ವ್ಯವಸ್ಥಿತವಾದ ಶಾಂತಿಯುತವಾದ ಬದುಕಿಗೂ, ಯುದ್ಧ ರಹಿತ ರಾಜಕೀಯ ವ್ಯವಸ್ಥೆಗೂ ಇರುವ ಸಂಬಂಧವನ್ನು ಮುಂದಿಟ್ಟು ಪ್ರತ್ಯೇಕತಾ ಮನೋಭಾವಗಳಿಂದ ಉಂಟಾಗುವ ರಾಜಕೀಯ ಹಾಗೂ ವೈಯಕ್ತಿಕ ನೆಲೆಯ ಮಾನಸಿಕ ಯುದ್ಧಗಳಿಂದ ಪಾರಾಗಿ ವ್ಯಕ್ತಿಯೇ ಅಂತಿಮವಾಗಿ ಪರಮಶಾಂತಿ ಆಗಿಬಿಡುವ ಗುರಿಯನ್ನು ವೈಭವೀಕರಿಸುತ್ತದೆ. ಪರಮಶಾಂತಿ ಎಂಬುದು ಕೇವಲ ಯುದ್ಧದ ನಿರಾಕರಣೆ ಮತ್ತು ಇರುವ ವ್ಯವಸ್ಥೆಯ ಮುಂದುವರಿಯುವಿಕೆ ಇವುಗಳ ಮೂಲಕ ಸಾಧಿತವಾಗುವಂತಹುದಲ್ಲ ಎಂಬುದನ್ನು ಗಂಭೀರವಾಗಿ ವಿವರಿಸುತ್ತದೆ. ಅಹಿಂಸೆಯನ್ನು ಹಲವು ಮಜಲುಗಳಲ್ಲಿ ಗಮನಿಸುತ್ತದೆ.

ಅಹಿಂಸಾತ್ಮಕ ಪರಮ ವಾಸ್ತವತೆ

ಭಗವದ್ಗೀತೆಗೆ ಶಾಂತಿ ಎನ್ನುವುದು ವ್ಯಕ್ತಿತ್ವದ ಹಾಗೂ ಇಡೀ ವಾಸ್ತವಿಕತೆಯ ಒಂದು ಸ್ವರೂಪ ಲಕ್ಷಣ. ಯಾವುದೇ ರೀತಿಯ ಪ್ರತ್ಯೇಕತೆಯನ್ನು ವ್ಯಕ್ತಿ ಭಾವಿಸಿದರೂ ಅದು ಅಶಾಂತಿಯ ರೂಪವೇ. ವಾಸ್ತವವಾಗಿ ಪ್ರತ್ಯೇಕತೆಗಳು ಪರಸ್ಪರ ಸಾಮರಸ್ಯತೆ, ಹೊಂದಾಣಿಕೆಯ ವ್ಯವಸ್ಥೆಗೆ ಒಳ ಪಟ್ಟಿರುವುದರಿಂದ ಹೊಂದಾಣಿಕೆ ಸಾಮರಸ್ಯತೆಗಳಿಗೆ ಭಂಗ ಬಾರದಂತೆ ನೋಡಿಕೊಂಡರೆ ನಮ್ಮ ಅನುಭವ ಶಾಂತಿಯ ಅನುಭವವೇ ಆಗಿರುತ್ತದೆ; ವೈಯಕ್ತಿಕ ನೆಲೆಯಲ್ಲಿ ಲಾಭ ಅಲಾಭ, ಸುಖ ದುಃಖ, ಜಯ ಅಪಜಯ ಇತ್ಯಾದಿ ಪ್ರತ್ಯೇಕತಾ ಮನೋಭಾವಗಳಿಂದ ವ್ಯಕ್ತಿ ಬಿಡುಗಡೆ ಪಡೆದರೆ ವೈಯಕ್ತಿಕ ಅನುಭವ ಆಗುವ ಶಾಂತಿಯು ಇಡೀ ವಾಸ್ತವಿಕತೆಯಲ್ಲಿ ಗಮನಕ್ಕೆ ಬರುವುದೆಲ್ಲದರ ಸ್ವರೂಪಾತ್ಮಕತೆಯೇ ಆಗಿದೆ ಎಂಬುದರ ಅರಿವು ಕ್ರಮಾಗತವಾಗಿ ಉಂಟಾಗುತ್ತದೆ. ಹೀಗೆ ಭಗವದ್ಗೀತೆ ಶಾಂತ, ಅಹಿಂಸಾತ್ಮಕ ವಾಸ್ತವಿಕತೆಯ ಪರಿಕಲ್ಪನೆಯನ್ನು ವಿವರಿಸುತ್ತದೆ.

ಅಹಿಂಸಾತ್ಮಕ ಮನಃಸ್ಥಿತಿ

ಶಾಂತಿ ಎನ್ನುವುದು ಹೊರಗೆ ದೈಹಿಕವಾಗಿ ಶಸ್ತ್ರಾಸ್ತ್ರಗಳಿಂದ ಮಾಡುವ ಯುದ್ಧವನ್ನು ತಡೆಗಟ್ಟುವುದರಿಂದ ಉಂಟಾಗುವಂತಹುದಲ್ಲ; ಬದಲಿಗೆ ಮನಸ್ಸಿನ ಒಳಗೆ ನಡೆಯುವ ಯುದ್ಧದಿಂದ ಪಾರಾಗುವುದರಿಂದ ದೊರಕುವ ಸ್ಥಿತಿ; ದೈಹಿಕ ತುಡಿತ ಮಾನಸಿಕ ಒಲವುಗಳ ನಡುವಿನ ತಾಕಲಾಟ, ನಿಜ ವಾಸ್ತವತೆಯ ಬಗೆಗಿನ ನಿರ್ಲಕ್ಷ್ಯ, ತಾತ್ಕಾಲಿಕ ಸುಖ ಭೋಗಗಳ ಆಮಿಷಗಳಿಂದ ಉಂಟಾಗುವ ಒದ್ದಾಟ, ನಿರೀಕ್ಷೆಗಳು ಮತ್ತು ವಾಸ್ತವಿಕತೆಯ ಬಗೆಗಿನ ವಾಸ್ತವ ಅರಿವು ಇವುಗಳ ನಡುವೆ ನಡೆಯುವ ಯುದ್ಧವೇ ಮಾನಸಿಕ ಯುದ್ಧ; ಈ ರೀತಿಯ ಯುದ್ಧವನ್ನು ನಿವಾರಿಸುವುದರಿಂದ ಅಂತಿಮವಾಗಿ ಉಂಟಾಗುವುದು ವ್ಯಕ್ತಿತ್ವದ ಮೆಟ ಮಾರ್ಫಸಿಸ್, ಅಹಿಂಸಾತ್ಮಕ ಮನಃಸ್ಥಿತಿಯ ವ್ಯಕ್ತಿತ್ವ; ಇದೇ ಪರಮ ಶಾಂತಿ, ನಿತ್ಯ ಸತ್ಯ ಎಂದು ಭಗವದ್ಗೀತೆ ವಿವರಿಸುತ್ತದೆ.

ಅಮರತ್ವ

) ಮುಖ್ಯ ಪ್ರಶ್ನೆಗಳು

ಪಾಂಡವರು ಕೌರವರು ರಾಜ್ಯದ ಮೇಲಿನ ತಮ್ಮ ಹಕ್ಕುದಾರಿಕೆಯನ್ನು ಯುದ್ಧದಲ್ಲಿ ಉಂಟಾಗುವ ಸೋಲು ಗೆಲುವುಗಳ ಮೂಲಕ ನಿರ್ಧರಿಸಲು ಮುಂದಾಗಿದ್ದಾರೆ. ರಣರಂಗದಲ್ಲಿ ಪಾಂಡವರು ಕೌರವರು ತಂತಮ್ಮ ಸೈನ್ಯದ ಸಮೇತ ಪರಸ್ಪರ ಮುಖಾಮುಖಿಯಾಗಿದ್ದಾರೆ. ಅರ್ಜುನನಿಗೆ ತನ್ನ ಎದುರಾಳಿಗಳ ಬಲಾಬಲಗಳನ್ನು ನೇರವಾಗಿ ತಿಳಿಯುವ ಕುತೂಹಲ, ಉತ್ಸುಕತೆ. ಎರಡು ಸೈನ್ಯಗಳ ಮಧ್ಯೆ ರಥದಲ್ಲಿ ನಿಂತು ಕೌರವರನ್ನು ಅವರ ಜೊತೆಯಲ್ಲಿ ಇರುವವರನ್ನೂ ಒಬ್ಬೊಬ್ಬರನ್ನಾಗಿ ನೋಡುತ್ತಾ ಇದ್ದಾನೆ.

ಅವನಿಗೆ ಈಗ ಯಾರೂ ಶತ್ರುವಾಗಿಯೂ ಕಾಣುತ್ತಿಲ್ಲ, ಎದುರಾಳಿಯಾಗಿಯೂ ಕಾಣುತ್ತಿಲ್ಲ. ಬದಲಿಗೆ ಮನುಷ್ಯ ಮಾತ್ರದವರು ಹೊಂದುವ ರಕ್ತಸಂಬಂಧಿಗಳಾಗಿ, ಕುಲಬಾಂಧವರಾಗಿ, ಸ್ನೇಹಿತರು, ಪ್ರಿಯಜನರೇ ಮೊದಲಾದವರಾಗಿ ಕಾಣುತ್ತಿದ್ದಾರೆ. ಹೀಗೆ ಕಾಣುತ್ತಿದ್ದಾಗ ಅವನಿಗೆ ಯುದ್ಧದ ಅಡ್ಡ ಪರಿಣಾಮ ಎಂದು ಪ್ರಮುಖವಾಗಿ ತೋರಿದ್ದು ಸಾವು ಮತ್ತು ವೈಯಕ್ತಿಕ ಹಾಗೂ ಸಾಮುದಾಯಿಕ ಜೀವನದಲ್ಲಿ ಸಾವಿನ ಕಾರಣದಿಂದಾಗಿ ಉಂಟಾಗುವ ಘೋರ ಅವ್ಯವಸ್ಥೆ. ಅವನನ್ನು ಕಾಡಿದ ಎರಡು ಮುಖ್ಯ ಪ್ರಶ್ನೆಗಳು ಎದುರಿಗೆ ಇರುವವರನ್ನು ಕೊಂದು ತಾನು ಸಾಧಿಸುವುದೇನು? ಅವರನ್ನು ಕೊಂದು ತಾನು ಬದುಕಿ ಉಳಿಯುವ ಅಗತ್ಯವೇನು?

ಕುರುಕ್ಷೇತ್ರದ ರಣರಂಗದಲ್ಲಿ ಅರ್ಜುನನಿಗೆ ಕಾಣುತ್ತಿರುವುದು ದುರ್ಯೋಧನನನ್ನೂ ಒಳಗೊಂಡಂತೆ ಎಲ್ಲಾ ಸೋದರರೂ ಮತ್ತು ಭೀಷ್ಮ, ದ್ರೋಣರನ್ನೂ ಒಳಗೊಂಡಂತೆ ಎಲ್ಲಾ ಆಚಾರ್ಯರೂ ಹಾಗೂ ಎಲ್ಲಾ ರೀತಿಯ ಬಂಧು ಬಾಂಧವರೂ ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಯುದ್ಧಕ್ಕೆ ನಿಂತಿರುವುದು. ಇವರನ್ನೆಲ್ಲಾ ಎದುರಿಸಲು ನಿಂತಿದ್ದ ಅರ್ಜುನನಲ್ಲಿ ಸಾವಿಗೆ ಸಂಬಂಧಿಸಿದಂತೆ ವಾಸ್ತವಿಕವಾಗಿ ಮತ್ತು ಸಹಜವಾಗಿ ಇರುವ ಆತಂಕ, ಕಳವಳ, ಗಾಬರಿ, ಜಿಗುಪ್ಸೆ, ಭಯ, ದಿಗ್ಭ್ರಮೆ ಇತ್ಯಾದಿಗಳು ಬಗೆ ಬಗೆಯಾದ ಪ್ರಶ್ನಾವಳಿಗಳನ್ನು ಹುಟ್ಟಿಸಿವೆ.

ಈ ಹಿನ್ನೆಲೆಯಲ್ಲಿ ಭಗವದ್ಗೀತೆ ವ್ಯಕ್ತಿ ನೇರವಾಗಿ ಯುದ್ಧದಂತಹ ಸಂದರ್ಭದಲ್ಲಿ ಸಾವಿಗೆ ಮುಖಾಮುಖಿ ಆಗುವುದರ ಆಗುಹೋಗುಗಳನ್ನು ಪರಿಶೀಲಿಸುತ್ತದೆ, ವ್ಯಕ್ತಿಯ ಬದುಕು ಹೇಗೆ ಅಮರ ಆಗಬಲ್ಲುದು ಎಂಬುದನ್ನು ವಿವರಿಸುತ್ತದೆ. ಅಮರವಾಗುವ ಬದುಕಿನ ಚಿತ್ರವನ್ನು ಕಣ್ಮುಂದೆ ನಿಲ್ಲಿಸುತ್ತದೆ.

) ನಿರಪೇಕ್ಷ ಕ್ರಿಯಾಶೀಲ ವಾಸ್ತವಿಕತೆ

ಸಾವಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲು ಭಗವದ್ಗೀತೆಯು ವಾಸ್ತವಿಕತೆಯು ವೈಯಕ್ತಿಕ ಮತ್ತು ಸಾರ್ವತ್ರಿಕ ಗುಣ, ಸ್ವರೂಪ, ಸ್ವಭಾವಗಳೆರಡನ್ನೂ ಹೊಂದಿರುವುದನ್ನು ಗಮನಿಸುತ್ತದೆ. ಅವೆರೆಡರ ನಡುವಿನ ಸಂಬಂಧವನ್ನು ಪರಿಶೀಲಿಸುತ್ತದೆ. ವೈಯಕ್ತಿಕತೆಯ ಮುಖ್ಯ ಲಕ್ಷಣವು ಕರ್ತೃತ್ವವಾದರೆ ಸಾರ್ವತ್ರಿಕತೆಯ ಮುಖ್ಯ ಲಕ್ಷಣವು ಜಟಿಲತೆ, ನಿನ್ನೆ ಇಂದು ನಾಳೆಗಳನ್ನು ಒಳಗೊಳ್ಳುವ ಜಾಲರೂಪಿ ವ್ಯವಸ್ಥೆ ಎನ್ನುತ್ತದೆ. ವೈಯಕ್ತಿಕ ವಿಚಾರ ಭಾವನೆ ಕ್ರಿಯೆಗಳು ಲಾಭ ನಷ್ಟ, ಸುಖ ದುಃಖ ಇತ್ಯಾದಿ ವ್ಯಾವಹಾರಿಕ, ದೈಹಿಕ, ಮಾನಸಿಕ ನಿಲುವುಗಳ ತಕ್ಕಡಿಯಲ್ಲಿ ತೂಗುವಂತಹವು. ಸಾರ್ವತ್ರಿಕತೆಯಾದರೋ ಸಾಕ್ಷಿಪ್ರಜ್ಞೆ, ಕರ್ತವ್ಯಪರತೆ, ನಿರಪೇಕ್ಷತೆಗಳನ್ನು ಒಳಗೊಳ್ಳುವಂತಹುದು. ಹೀಗೆ ವೈಯಕ್ತಿಕತೆ ಮತ್ತು ಸಾರ್ವತ್ರಿಕತೆಗಳ ನಡುವೆ ಅಂತರ ಇದ್ದರೂ ವಾಸ್ತವಿಕತೆಯ ವೈಯಕ್ತಿಕ ಮತ್ತು ಸಾರ್ವತ್ರಿಕ ಮುಖಗಳೆರಡಕ್ಕೂ ಸಾಮಾನ್ಯವಾದ ಅಂಶವಿದೆ. ಅದೇ ಚಲನಶೀಲತೆ. ಒಟ್ಟಾರೆ ವಾಸ್ತವಿಕತೆಯ ನಿಯಮಬದ್ಧತೆಯಲ್ಲಿ ಅಡಕಗೊಳ್ಳುವ ಚಲನಶೀಲತೆಯು ಕಾರಣಾತ್ಮಕ ಪ್ರಕ್ರಿಯೆ ಮತ್ತು ವೈವಿಧ್ಯತೆಗಳೆರಡನ್ನೂ ಒಳಗೊಳ್ಳುವುದರಿಂದ ಸಾರ್ವತ್ರಿಕತೆಯನ್ನು ವೈಯಕ್ತಿಕತೆಯಿಂದ ಪ್ರತ್ಯೇಕಿಸಲು ಬರುವುದಿಲ್ಲ ಎಂದೆನ್ನುತ್ತದೆ ಭಗವದ್ಗೀತೆ.

ನಿರಂತರವಾದ ಕ್ರಿಯಾಶೀಲತೆಯುಳ್ಳ ಅಥವಾ ಸದಾ ಮುಂದುವರೆಯುತ್ತಾ ಇರುವ ವಾಸ್ತವಿಕತೆಯು ನಿರಪೇಕ್ಷವಾದದ್ದು, ಸಾಕ್ಷಿಪ್ರಜ್ಞೆಯುಳ್ಳದ್ದು, ಈ ಕ್ರಿಯಾಶೀಲತೆ ಅಥವಾ ಮುಂದುವರಿಯುವಿಕೆಯಲ್ಲಿ ಇಂದು ಎಂಬುದು ನಿನ್ನೆಯದು ಆಗುತ್ತದೆ, ನಾಳೆ ಎಂಬುದು ಇಂದಿನದು ಆಗಿಬಿಡುತ್ತದೆ. ಹೀಗಾಗಿ ನಾವು ಹಿಂದೆ ಇರಲಿಲ್ಲ, ಮುಂದೆ ಇರುವುದಿಲ್ಲ ಎಂದೆನ್ನಲೂ ಆಗುವುದಿಲ್ಲ. ಅಸ್ತಿತ್ವರಹಿತತೆ ಎಂಬರ್ಥದಲ್ಲಿ ಸಾವು ಇದೆ ಎನ್ನಲೂ ಆಗುವುದಿಲ್ಲ. ವ್ಯಕ್ತಿಯ ಹಾಗೂ ಎಲ್ಲ ಜೀವ ಅಜೀವಗಳ ಪ್ರತಿಯೊಂದು ಕ್ರಿಯೆಯೂ ವಾಸ್ತವಿಕತೆಯ ಸ್ವರೂಪದಲ್ಲಿ ದಾಖಲಾಗುವಂತಹುದೇ ಆಗಿರುತ್ತದೆ. ಈ ಅರ್ಥದಲ್ಲೂ ಸಾವು ಎಂಬುದು ಇಲ್ಲವೇ ಇಲ್ಲ. ಇರುವುದು ಕೇವಲ ನಿರಂತರವಾಗಿ ನಡೆಯುವ ಕ್ರಿಯೆ ಅಥವಾ ಕರ್ಮ ಎಂದು ಭಗವದ್ಗೀತೆಯು ಸಾವನ್ನು ಅರ್ಥ ಮಾಡಿಕೊಳ್ಳಬೇಕಾದ ರೀತಿಯನ್ನು ವಿವರಿಸುತ್ತದೆ.

) ಸಾಯುವ, ಸಾಯಿಸುವ ಸಂದರ್ಭ

ಸಾಯುವ ಮತ್ತು ಸಾಯಿಸುವ ಸಂದರ್ಭಗಳೆರೆಡರಲ್ಲೂ ಕರ್ತೃತ್ವವು ಪ್ರಧಾನ. ವಾಸ್ತವಿಕತೆಯು ಬೃಹತ್ಜಾಲವಾಗಿರುವುದರಿಂದ ಯಾವನಾದರೊಬ್ಬ ತನ್ನನ್ನು ಪ್ರತ್ಯೇಕವಾಗಿ ಕರ್ತೃ ಎಂದು ಪ್ರತಿಷ್ಠಾಪಿಸಿಕೊಂಡರೆ ಅದಕ್ಕೆ ಯಾವ ಅರ್ಥವೂ ಇರುವುದಿಲ್ಲ. ಹಾಗೆ ಪ್ರತಿಷ್ಠಾಪಿಸಿಕೊಳ್ಳುವುದು ತಿಳುವಳಿಕೆಯ ಮಿತಿ ಅಥವಾ ತಪ್ಪುಗ್ರಹಿಕೆ ಅಷ್ಟೆ. ಕರ್ತೃತ್ವದ ಕಲ್ಪನೆಯನ್ನು ಬದಿಗಿರಿಸಿದರೆ ನಾನು ಸಾಯುವವನು ಅಥವಾ ಸಾಯಿಸುವವನು ಎಂಬುದೂ ಬದಿಗೆ ಸರಿಯುತ್ತದೆ ಎನ್ನುತ್ತದೆ ಗೀತೆ.

ಸಾಯುವ ಮತ್ತು ಸಾಯಿಸುವ ಸಂದರ್ಭಗಳೆರೆಡರಲ್ಲೂ ಪ್ರಧಾನವಾಗುವ ಇನ್ನೊಂದು ಅಂಶವು ವೈಯಕ್ತಿಕ ಅಥವಾ ಪ್ರತ್ಯೇಕವಾದ ಅಸ್ತಿತ್ವ. ವಾಸ್ತವಿಕತೆಯು ವೈಯಕ್ತಿಕ ಅಥವಾ ಪ್ರತ್ಯೇಕವಾದ ಅಸ್ತಿತ್ವವುಳ್ಳ ಜೀವ ಅಜೀವಗಳ ಅಪಾರ ವೈವಿಧ್ಯತೆಗಳನ್ನು ನಿನ್ನೆ ಇಂದು ನಾಳೆಗಳಲ್ಲಿ ಮತ್ತು ಕಾರ್ಯಕಾರಣ ಬದ್ಧತೆಯಲ್ಲಿ ಪರಸ್ಪರ ಬೆಸೆದಿರುವ ಸಂಕೀರ್ಣಜಾಲ. ವಾಸ್ತವಿಕತೆಯು ಒಳಗೊಳ್ಳುವ ಪ್ರಕ್ರಿಯೆಗಳು ಚಲನಶೀಲವಾಗಿರುವುದರಿಂದ ಶ್ರೇಣ್ಯಾತ್ಮಕವಾಗಿ ಕಾರ್ಯ ಕಾರಣಗಳು ವಿಪರ್ಯಯಗೊಳ್ಳುತ್ತವೆ. ಹೀಗಿರುವಾಗ ಯಾವುದು ಯಾವುದಕ್ಕೆ ಕರ್ತೃ ಎಂಬುದನ್ನಾಗಲೀ, ಯಾವುದರಿಂದ ಯಾವುದು ಅತ್ಯಾವಶ್ಯಕವಾಗಿ, ಅನಿವಾರ್ಯವಾಗಿ ಉಂಟಾಯಿತು ಎಂಬುದನ್ನಾಗಲೀ, ಯಾವುದು ಯಾವುದರಿಂದ ಭಿನ್ನ, ಯಾವುದಕ್ಕಿಂತ ವಿಶಿಷ್ಟ ಎಂಬುದನ್ನಾಗಲೀ ಹೇಗೆ ಹೇಳಲು ಸಾಧ್ಯ? ಕತೃತ್ವವನ್ನೇ ನಿರ್ಧರಿಸಲು ಸಾಧ್ಯವಿಲ್ಲದಿದ್ದಾಗ ಸಾಯುವವನು ಯಾರು, ಸಾಯಿಸುವವನು ಯಾರು? ಎಂದು ಗೀತೆ ಪ್ರಶ್ನಿಸುತ್ತದೆ.

) ಸಾವು ಪ್ರಾಕೃತಿಕ ನಿಯಮ

ಸಾರ್ವತ್ರಿಕತೆಯಿಂದ ಸ್ವತಂತ್ರವಾದ ಯಾರ ಅಥವಾ ಯಾವುದರ ವೈಯಕ್ತಿಕತೆ, ಪ್ರತ್ಯೇಕತೆಯನ್ನೂ ಪ್ರತ್ಯೇಕವಾಗಿ ಪ್ರಸ್ತಾಪಿಸಲು ಆಗುವುದಿಲ್ಲ. ಆದ್ದರಿಂದ ವೈಯಕ್ತಿಕತೆ ಅಥವಾ ಪ್ರತ್ಯೇಕತೆಯ ಪರಿಕಲ್ಪನೆಯನ್ನೇ ಬದಿಗಿಡಬೇಕು ಎನ್ನುತ್ತದೆ ಭಗವದ್ಗೀತೆ. ಹೀಗೆ ಬದಿಗಿರಿಸಿದ ಮಾತ್ರಕ್ಕೆ ಸಾವು ಎಂಬುದು ಇರುವುದಿಲ್ಲವೆ ಎಂಬ ಪ್ರಶ್ನೆಗೆ ಸಾವು ಇದ್ದೇ ಇರುತ್ತದೆ; ಅದು ಪ್ರಕೃತಿ ನಿಯಮ. ನಾವು ತಿಳಿದ ಹಾಗೆ ಈ ನಿಯಮವು ಮನುಷ್ಯರಿಗೆ ಮಾತ್ರ ಅನ್ವಯ ಆಗಿರುವಂತಹುದು ಆಗಿರದೆ ಜೀವ ಅಜೀವ ವರ್ಗಗಳೆರಡಕ್ಕೂ ಅನ್ವಯವಾಗುವಂತಹುದು. ಇದನ್ನು ತಿಳಿದಾಗ ನಾನು ಮಾತ್ರ ಸಾಯುವವನು ಎಂಬ ಆತಂಕ, ಗಾಬರಿ ಇತ್ಯಾದಿಗಳಿಗೆ ಜಾಗವೇ ಇರುವುದಿಲ್ಲ. ಹಾಗೆಯೇ ನಾನು ಸಾಯಿಸುವವನು ಎಂಬ ಪ್ರತಿಷ್ಠೆ, ಅಹಂಕಾರ ಮುಂತಾದವುಗಳ ವಿಜೃಂಭಣೆ, ಅಟಾಟೋಪ, ಅಬ್ಬರ, ಕೂಗಾಟ, ಸೆಣಸಾಟಗಳಿಗೂ ಜಾಗ ಇರುವುದಿಲ್ಲ. ಬದಲಿಗೆ ಸಾವು ಸಹಜ ಸಂಗತಿ ಆಗಿಬಿಡುತ್ತದೆ; ಪ್ರತ್ಯೇಕ ಮಹತ್ವ ಕೊಡುವ ಸಂಗತಿಯಾಗುವುದೇ ಇಲ್ಲ ಎಂದು ಭಗವದ್ಗೀತೆಯು ಉತ್ತರಿಸುತ್ತದೆ.

) ಸಾವು ಮೌಲ್ಯರಹಿತವೇ?

ಹಾಗಾದರೆ ಸಾವಿಗೆ ಬೆಲೆಯೇ ಇಲ್ಲವೆ? ದೇಶದ ರಕ್ಷಣೆಗೆಂದೋ, ಕಳ್ಳಕಾಕರನ್ನು ಹಣಿಯಲು ಎಂದೋ, ನೀರು ಬೆಂಕಿ ಅಥವಾ ಇನ್ನಾವುದೇ ನೈಸರ್ಗಿಕ ಆಪತ್ತಿಗೆ ಸಿಲುಕಿದವರನ್ನು ಕಾಪಾಡಲು ಎಂದೋ, ಪರಂಪರೆ ಧರ್ಮ ಆದರ್ಶ ಇತ್ಯಾದಿಗಳ ಉಳಿವಿಗಾಗಿ, ಬೆಳವಣಿಗೆಗಾಗಿ ಎಂದೋ ಸಾಯುವುದು ಧೀರೋದಾತ್ತವಾದದ್ದು ಅಲ್ಲವೆ? ಅದೇ ರೀತಿ ಸೂಕ್ತ ಆಧಾರ, ಕಾರಣವೇ ಇಲ್ಲದೆ ಒಬ್ಬ ಇನ್ನೊಬ್ಬನ\ರ ಕೊಲೆ ಮಾಡುವುದನ್ನು ತಡೆಯುವುದಕ್ಕಾಗಿ ಸಾಯುವುದು ಯೋಗ್ಯವಾದದ್ದು ಅಲ್ಲವೆ? ಇದ್ದಷ್ಟು ದಿನವೂ ಈ ವ್ಯಕ್ತಿ ತುಂಬು ಬದುಕನ್ನು ನಡೆಸಲಿ ಎಂದು ಸುತ್ತಲಿನವರು ಆಶಿಸುವಂತೆ ಬದುಕಿದವನ ಸಾವು ಮೌಲ್ಯಯುತವಾದದ್ದು ಅಲ್ಲವೆ? ಈ ಪ್ರಶ್ನೆಗಳನ್ನೂ ಭಗವದ್ಗೀತೆಯು ಪರಿಶೀಲಿಸುತ್ತದೆ.

ಉದಾತ್ತ ಸಾವಿನ ಪರಿಕಲ್ಪನೆಯು ಒಬ್ಬನ ನಡೆವಳಿಕೆಯನ್ನು ವ್ಯಾವಹಾರಿಕ ಲಾಭ ನಷ್ಟ, ಸುಖ ದುಃಖಗಳ ಅಳತೆಗೋಲುಗಳ ವಿಮರ್ಶೆಗೆ ಒಳಪಡಿಸುವುದನ್ನು ಒಳಗೊಳ್ಳುತ್ತದೆ; ಉದಾತ್ತ ಸಾವು ಒಬ್ಬನದು ಎನ್ನುವಾಗ ಸತ್ತವನು ತನ್ನ ವ್ಯಾವಹಾರಿಕ ಲಾಭ, ವೈಯಕ್ತಿಕ ಸುಖಗಳನ್ನು ಭಾವಿಸಲಿಲ್ಲ ಎಂಬ ಮೌಲ್ಯನಿರ್ಣಯವನ್ನು ಒಳಗೊಳ್ಳುತ್ತದೆ. ಆದರೆ ವಾಸ್ತವಿಕತೆಯು ಇಂಥ ಮೌಲ್ಯಮಾಪನಕ್ಕೆ ಒಳಗಾಗುವಂತಹುದು ಅಲ್ಲ. ವಾಸ್ತವಿಕತೆಯು ಒಳಗೊಳ್ಳುವ ಪ್ರತಿಯೊಂದು ಜೀವ ಅಜೀವವು ತಂತಮ್ಮ ಗುಣ ಸ್ವಭಾವಗಳಿಗನುಗುಣವಾಗಿ ವರ್ತಿಸುತ್ತದೆ; ಅಲ್ಲಿ ಉದಾತ್ತವಾದದ್ದು ಅಥವಾ ಉದಾತ್ತವಲ್ಲದ್ದು ಎಂಬ ಸಾವಿನ ಪರಿಕಲ್ಪನೆಗೆ ಅರ್ಥವೇ ಇರುವುದಿಲ್ಲ ಎಂದೆನ್ನುತ್ತದೆ ಗೀತೆ.

) ಪೀಡಕ ಬದುಕಲು ಅರ್ಹನೆ?

ಹಾಗಾದರೆ ಸ್ವಾರ್ಥಿಗಳಾಗಿ, ಹಿಂಸಾಚಾರಿಗಳಾಗಿ, ದುರಾಶಾ ಪೀಡಿತರಾಗಿ, ಸರ್ವಾಧಿಕಾರಿಯೋ ಮತ್ತೇನೋ ಅಂತಹುದೇ ಪೀಡಕರಾಗಿ ಬದುಕುವುದರಲ್ಲಿ ಯಾವ ದೋಷವೂ ಇಲ್ಲವೆ? ಆ ರೀತಿಯ ವ್ಯಕ್ತಿತ್ವವನ್ನು ಬುದ್ಧಿಪೂರ್ವಕವಾಗಿ ತಿರಸ್ಕರಿಸಬೇಕಾಗಿಲ್ಲವೆ? ಎಂಬ ಪ್ರಶ್ನೆಗಳಿಗೆ ಅಫರ್ಮಿಟಿವ್ ಆಗಿಯೇ ಗೀತೆ ಉತ್ತರಿಸುತ್ತದೆ. ಆದರೆ ಕರ್ತೃತ್ವವನ್ನು, ವ್ಯಕ್ತಿ ವಿಶಿಷ್ಟತೆಯನ್ನು, ಅಹಂಕಾರ ಸ್ವಪ್ರತಿಷ್ಠೆ ಎನ್ನುವುದನ್ನು ಮುಂದುಮಾಡಿ ಈ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಂಡರೆ ಅದು ಶರತ್ತುಬದ್ಧ ಉತ್ತರ ಆಗಿರುತ್ತದೆ, ಯಾರನ್ನೋ ಬಲಿಪಶು ಮಾಡುವ ಹುನ್ನಾರದಂತಹುದು ಏನೋ ಒಂದು ಇರುತ್ತದೆ. ಇಂಥ ಉತ್ತರ ಸಹಜವಾಗಿ ಅರ್ಥಪೂರ್ಣವಾದದ್ದೇನೂ ಆಗಿರುವುದಿಲ್ಲ; ಆ ಉತ್ತರದೊಂದಿಗೆ ಇರುವ ನಾನು ಸಾಯಿಸುವವನು, ನೀನು ಸಾಯುವವನು ಎಂಬ ನಿರ್ಣಯವೂ ಅರ್ಥಪೂರ್ಣವಾದದ್ದು ಆಗಿರುವುದಿಲ್ಲ ಎಂದು ಗೀತೆಯು ಸ್ಪಷ್ಟವಾಗಿ ಸಾರುತ್ತದೆ.

) ಸಾವು ಇರುವಿಕೆಯ ರೂಪಾಂತರ

ಹಾಗಾದರೆ ಅನುಭವಕ್ಕೆ ಬರುವ ಸಾವು ಎಂಬುದು ಏನು ಎಂಬ ಪ್ರಶ್ನೆಗೆ ಇರುವಿಕೆಯ ರೂಪಾಂತರ ಎಂದು ಗೀತೆ ಉತ್ತರಿಸುತ್ತದೆ. ಅನುಭವಾತ್ಮಕವಾದ ಬದುಕು, ಸಾವುಗಳೆರಡೂ ನಿರ್ದಿಷ್ಟವಾದದ್ದು. ಬದುಕು ಎಂಬುದು ಏನು ಎಂದರೆ ನಿರ್ದಿಷ್ಟ ಅವಧಿಯಲ್ಲಿ ಇರುವಿಕೆಯ ರೂಪವೊಂದು ಕಾಣಿಸಿಕೊಳ್ಳುವುದು ಮತ್ತು ಸಾವು ಎಂದರೆ ಆ ಇರುವಿಕೆಯ ರೀತಿಯು ಕೊನೆಗೊಳ್ಳುವುದು. ಇದೇ ಜನನ, ಮರಣ; ಈ ಅರ್ಥದಲ್ಲಿ ಹುಟ್ಟುವುದಕ್ಕೆ ಮುಂಚೆ ನಾವು ಏನಾಗಿದ್ದೆವೋ ನಮಗೆ ಗೊತ್ತಿಲ್ಲ. ಹಾಗೆಯೇ ಸತ್ತನಂತರ ಏನಾಗುತ್ತೇವೆಯೋ ಅದೂ ಗೊತ್ತಿಲ್ಲ. ಗೊತ್ತಿರುವುದು ಹುಟ್ಟು ಸಾವುಗಳ ನಡುವಿನ ಅವಧಿಯಲ್ಲಿ ನಾವು ನಿರಂತರವಾಗಿ ಮಾಡುವ ಕ್ರಿಯೆ, ಕರ್ಮ; ಆ ಕ್ರಿಯೆ, ಕರ್ಮಕ್ಕೆ ಅನುಗುಣವಾಗಿ ಫಲ ಇದೆ ಎಂಬುದು. ನಮಗೆ ನಾವೇ ದೈಹಿಕ ಮಾನಸಿಕ ತಡೆಗೋಡೆಗಳನ್ನು ನಿರ್ಮಿಸಿಕೊಳ್ಳದಿರುವ ಹಾಗೆ ನಮ್ಮ ಕರ್ಮ ಮತ್ತು ಕರ್ಮದ ಉದ್ದೇಶ ಇದ್ದರೆ ಹುಟ್ಟು ಸಾವುಗಳ ನಡುವಿನ ಅವಧಿಯಲ್ಲಿ ನಾವು ನಮ್ಮನ್ನು ತೊಡಗಿಸಿಕೊಂಡ ರೀತಿಯ (ಕರ್ಮದ) ಫಲವು ಉಚಿತ ಕರ್ಮ, ಕ್ರಿಯೆಗಳೇ ಆಗಿರುತ್ತವೆ; ಅವು ಸಾವಿನ ಬಗೆಗಿನ ನಿರ್ಲಿಪ್ತತೆಯ ಸೂಚಕವೇ ಆಗಿರುತ್ತವೆ.

) ಸಾವು, ಬದುಕು ಅಧೃವ ವಿರೋಧಿಗಳು

ನಿರ್ದಿಷ್ಟ ಕಾಲದ ಅವಧಿಯಲ್ಲಿಯ ನಿರ್ದಿಷ್ಟ ರೂಪದಲ್ಲಿಯ ಅಸ್ತಿತ್ವಕ್ಕೆ ಸಾವು ಅನಿವಾರ್ಯ, ಸಹಜ. ಅನುಭವಕ್ಕೆ ಬರುವ ಈ ಸಾವು ನಿರ್ದಿಷ್ಟರೂಪ ಕೊನೆಗೊಳ್ಳವುದಕ್ಕೆ ಮಾತ್ರ ಸಂಬಂಧಿಸಿದುದು. ಸಾವು ಬದುಕಿನ ಎಲ್ಲಾ ಅರ್ಥವಂತಿಕೆಗಳಿಗೆ ಮುಕ್ತಾಯ ಹಾಡುವಂತಹುದು ಅಲ್ಲ. ಅದು ಬದುಕಿಗೆ ಧೃವವಿರೋಧಿಯೂ ಅಲ್ಲ. ಅಂತಿಮವಾಗಿ ಸಾವು ಎಂಬುದು ಇಲ್ಲವೇ ಇಲ್ಲ. ಇರುವುದು ಬದುಕೇ. ಬದುಕುವುದರಲ್ಲಿ ಪ್ರತಿಯೊಬ್ಬನ ಪ್ರತಿಯೊಂದು ಕ್ರಿಯೆಯೂ ದಾಖಲಾಗುತ್ತದೆ. ಹೀಗೆ ದಾಖಲಾದದ್ದ್ದು ಒಟ್ಟಾರೆ ವಾಸ್ತವಿಕತೆಯ ಮೇಲೆ ತನ್ನ ಮುದ್ರೆಯನ್ನು ಒತ್ತುತ್ತದೆ. ಹೀಗೆ ಒತ್ತಿದ ಮುದ್ರೆಯು ಯಾಂತ್ರಿಕ ನಿಯಮಗಳು ಕಾರ್ಯಪ್ರವೃತ್ತ ಆಗುವ ರೀತಿಯನ್ನು ನಿರ್ಧರಿಸುತ್ತದೆ ಎಂದೆನ್ನುತ್ತದೆ ಭಗವದ್ಗೀತೆ.

) ಕಾರ್ಯಪ್ರವೃತ್ತ ಸಮಚಿತ್ತ

ಸಾವು ಘಟಿಸುತ್ತದೆಯಲ್ಲ ಎಂದು ಚಿಂತಾಕ್ರಾಂತರಾಗುವುದರ ಬದಲಿಗೆ ಪ್ರತಿಯೊಬ್ಬನೂ ತಾನು ತನ್ನ ಸಂದರ್ಭದಲ್ಲಿ ಅತ್ಯಾವಶ್ಯಕವಾಗಿ ಮಾಡಬೇಕಾದದ್ದು ಏನು ಎಂಬುದನ್ನು ವಿವೇಚಿಸಬೇಕು. ಅಂಥ ವಿವೇಚನೆಗೆ ಬೇಕಾದದ್ದು ತಾನೇನು ಮಾಡಬಲ್ಲೆ ಎಂಬ ತಿಳುವಳಿಕೆ ಮತ್ತು ಆ ತಿಳುವಳಿಕೆಯ ಕ್ಷೇತ್ರದ ಬಗೆಗಿನ ಸಾಧ್ಯವಾದಷ್ಟೂ ವಿಸ್ತಾರವಾದ, ಸೂಕ್ಷ್ಮವಾದ, ವೈವಿಧ್ಯಮಯವಾದ ತಿಳುವಳಿಕೆ; ಹಾಗೂ ವಿಷಯವು ತಾನು ತಿಳಿದುದಕ್ಕಿಂತ ಹೆಚ್ಚು ವಿಸ್ತಾರ, ಸೂಕ್ಷ್ಮ, ವಿವಿಧ ಆಗಿರಬಹುದು ಎಂಬ ಜಾಗೃತಿ ಮತ್ತು ಸಮಚಿತ್ತತೆ ಎನ್ನುತ್ತದೆ ಗೀತೆ.

ಪರಮ ವಾಸ್ತವತೆ

) ಅದ್ವೈತ

ಭಗವದ್ಗೀತೆಗೆ ಅದ್ವೈತ ಭಾವವೇ ಪರಮ ವಾಸ್ತವತೆ. ದೇಹದ ದೃಷ್ಟಿಯಿಂದ ನಮ್ಮನ್ನು ಗಮನಿಸಿದಾಗ ದೇಹಕ್ಕೆ ಬರುವ ದುಃಖ, ವೇದನೆ, ರೋಗ ಇತ್ಯಾದಿಗಳಿಂದಾಗಿ ಈ ಪ್ರಾಪಂಚಿಕ ಜೀವನ ಬೇಡವೇ ಬೇಡ ಎಂದೆನ್ನಿಸಿಬಿಡುತ್ತದೆ. ಅದೇ ಸುಖ, ಸಂತೋಷ, ಸಂತೃಪ್ತಿ ಇತ್ಯಾದಿ ಅನುಭವಗಳಿದ್ದಾಗ ಈ ಪ್ರಾಪಂಚಿಕ ಜೀವನ ಕೊನೆಗಾಣದೇ ಇರಲಿ ಎಂದೆನ್ನಿಸುತ್ತದೆ. ದೇಹಕ್ಕೆ ಉಂಟಾದುದೆಲ್ಲ ನನಗೇ ಉಂಟಾದದ್ದು ಎಂಬ ಗ್ರಹಿಕೆಯಿಂದಾಗಿ ಹೀಗೆಲ್ಲಾ ಅನ್ನಿಸುತ್ತದೆ, ಅಷ್ಟೇ. ವಾಸ್ತವದಲ್ಲಿ ನಾನು ಈ ದೇಹ ಅಲ್ಲವೇ ಅಲ್ಲ; ದೇಹಭಾವದಿಂದಾಗಿ ಗಮನಕ್ಕೆ ಬರುವ ಸುಖ ದುಃಖ, ಲಾಭ ನಷ್ಟ, ಶೀತ ಉಷ್ಣ, ಜಯ ಅಪಜಯ ಇತ್ಯಾದಿ ಧೃವ ವಿರೋಧಿ ದ್ವೈತಗಳು ವಾಸ್ತವ ಅಲ್ಲವೇ ಅಲ್ಲ; ಅವು ಕ್ಷಣಿಕ ಅನುಭವ ಅಷ್ಟೇ. ನಾನು ನೀನು, ಅದು ಇದು, ಆನೆ ನಾಯಿ, ಶ್ವಪಚ ಬ್ರಾಹ್ಮಣ ಇತ್ಯಾದಿಯಾಗಿ ನಾವು ಭಾವಿಸುವ ಧೃವ ವಿರೋಧಿ ದ್ವೈತ ದೇಹಭಾವದಿಂದಾಗಿಯೇ ವಾಸ್ತವ ಎಂದು ತೋರಿಬರುತ್ತದೆ, ಅಷ್ಟೇ; ಅದ್ವೈತವೇ ವಾಸ್ತವತೆ ಎನ್ನುತ್ತದೆ ಭಗವದ್ಗೀತೆ.

) ಬಹುತ್ವದ ಸಮಸ್ಯೆ

ಒಂದು ಮುಖ್ಯ ಪ್ರಶ್ನೆ ಬಹುತ್ವವನ್ನು ನಿರಾಕರಿಸಲು ಸಾಧ್ಯವೆ? ಎಂಬುದು. ಇದಕ್ಕೆ ಹೊಂದಿಕೊಂಡಂತೆ ಇರುವ ಒಂದು ಮುಖ್ಯ ಸಮಸ್ಯೆ ಬಹುತ್ವದ ಪ್ರತಿಪಾದನೆಯ ಕೇಂದ್ರವಾದ ಮನುಷ್ಯನನ್ನು ಏಕತ್ವವನ್ನು ಪ್ರತಿಪಾದಿಸುವವನನ್ನಾಗಿ ಆಗಿಸುವುದು ಹೇಗೆ ಎಂಬುದು. ಬಹುತ್ವವು ಪ್ರಧಾನವಾಗಿ ನಾನು ನೀನು, ಜೀವ ಅಜೀವ, ಭೌತಿಕ ಮಾನಸಿಕ, ಮನುಷ್ಯ ಪ್ರಪಂಚ ಹೀಗೆ ದ್ವೈತವನ್ನು ಮೂಲಭೂತವಾಗಿ ಒಳಗೊಳ್ಳುತ್ತದೆ. ಈ ದ್ವೈತವು ಪರಸ್ಪರ ಪರಕೀಯ ಎಂಬ ಸಂಬಂಧವನ್ನು ಸೂಚಿಸುವುದರ ಜೊತೆಗೆ ತಾನು ಮಿಗಿಲು ಎಂಬ ಅಹಂಕಾರ, ಪ್ರತಿಷ್ಠೆ, ವೈಭವಗಳ ಅಟ್ಟಹಾಸದ ಪ್ರದರ್ಶನದ ಸಾಧ್ಯತೆಯನ್ನೂ ಸೂಚಿಸುತ್ತದೆ. ಬಹುತ್ವದ ಒಂದು ಮುಖ್ಯ ಭಾವವಾದ ಇಂಥ ದ್ವೈತದಿಂದ ಬದುಕು ಜೀವನೋತ್ಸಾಹಿ, ಸೃಜನಶೀಲ ಆಗುವುದರ ಬದಲಿಗೆ ಸುಂದರವಾಗಿ ರೂಪುಗೊಳ್ಳಬಹುದಾದ ಬದುಕನ್ನು ಎಷ್ಟು ವಿಕೃತಗೊಳಿಸಬಹುದೋ ಅಷ್ಟೂ ವಿಕೃತಗೊಳಿಸುತ್ತದೆ.

ಬಗೆ ಬಗೆಯ ವಿಕಾರಗಳಿಗೆ ಅವಕಾಶ ಕೊಡಬಹುದಾದ ದ್ವೈತವನ್ನೂ ಮತ್ತು ಬಹುತ್ವವನ್ನೂ ನಿರಾಕರಿಸಬೇಕಾದರೆ ಏಕತೆಯ ಸತ್ಯದ ಬಗ್ಗೆ ಬೌದ್ಧಿಕ ಮತ್ತು ಮಾನಸಿಕ ವಿಶ್ವಾಸ ಇರಬೇಕು; ಮನಸ್ಸಿನ ಚಾಂಚಲ್ಯಕ್ಕೆ, ಅಶಾಂತಿಗೆ ಕಾರಣ ಆಗಬಹುದಾದ ದ್ವೈತಭಾವದಿಂದ ಬಿಡುಗಡೆ ಮಾಡುವ ಅದ್ವೈತಾನುಭೂತಿಯು ವ್ಯಕ್ತಿಯನ್ನು ಸ್ವನಿಯಂತ್ರಿತನನ್ನಾಗಿಸುತ್ತದೆ ಎಂದೆನ್ನುತ್ತದೆ ಭಗವದ್ಗೀತೆ. ತಾನೇ ಸಾಯುವುದಾದರೂ ಆಗಿರಲಿ ಅಥವಾ ಇನ್ನೊಬ್ಬನನ್ನು ಸಾಯಿಸುವುದಾದರೂ ಆಗಿರಲಿ, ಹಾಗೆಯೇ ಪ್ರಾಣಾರ್ಪಣೆ ಮಾಡುವುದರ ಬದಲಿಗೆ ತಾನು ಬದುಕಿರಬೇಕು ಎಂದುಕೊಳ್ಳುವುದಾಗಲೀ ಅಥವಾ ಇನ್ನೊಬ್ಬನನ್ನು ಬದುಕಿಸಲು ಪ್ರಾಣಾರ್ಪಣೆ ಮಾಡಬೇಕು ಎಂದುಕೊಳ್ಳುವುದಾಗಲೀ ಅಥವಾ ಮತ್ತಾವುದೇ ಮನೋಭಾವ ಇರಲೀ ಅದು ವಿವೇಚನಾಯುತ ನಿರ್ಣಯವಾಗಿರುತ್ತದೆ ಎಂದು ಸ್ವನಿಯಂತ್ರಣದ ಸ್ವರೂಪವನ್ನು ಸ್ಪಷ್ಟಪಡಿಸುವ ಭಗವದ್ಗೀತೆಯು ಅದ್ವೈತಾನುಭೂತಿಯು ವಿವೇಚನಾಯುತ ಬದುಕಿಗೆ ಕಾರಕವಾಗಿ ಒಬ್ಬನ ಬದುಕಿನಲ್ಲಿ ಅರ್ಥಪೂರ್ಣವಾಗುತ್ತದೆ ಎಂದೆನ್ನುತ್ತದೆ.

) ನಿಷ್ಕಾಮ ಕರ್ಮಯೋಗ

ಅದ್ವೈತಾನುಭೂತಿಯ ಮಹತ್ವವನ್ನೂ, ಸ್ವರೂಪವನ್ನೂ ವಿಶದ ಪಡಿಸುತ್ತಾ ಭಗವದ್ಗೀತೆ ವ್ಯಕ್ತಿಯ ಆಂತರ್ಯದಲ್ಲಿರುವುದು ಜೀವಾತ್ಮ, ವ್ಯಕ್ತಿಯ ಆಚೆಗೆ ಇರುವುದು ಪರಮಾತ್ಮ. ಜೀವಾತ್ಮ ಪರಮಾತ್ಮಗಳೆರಡೂ ಮೂಲಭೂತವಾಗಿ ಒಂದೇ. ಎರಡರ ಸಾರಲಕ್ಷಣ ಶಾಂತಿ, ನಿಷ್ಕಾಮ ಕರ್ಮ ಎನ್ನುತ್ತದೆ. ಎಲ್ಲಿಯವರೆಗೆ ನಾನು ಈ ರೀತಿಯ ಕರ್ಮವನ್ನು ಮಾಡುತ್ತಿದ್ದೇನೆ, ನನಗೆ ಈ ಫಲಗಳು ದೊರಕಲಿ, ಇದೇ ಫಲಗಳು ದೊರೆಯಲೇ ಬೇಕು ಎಂಬ ಭಾವನೆ, ನಿರೀಕ್ಷೆ, ಒತ್ತಾಯಗಳು ಇರುತ್ತವೆಯೋ ಅಲ್ಲಿಯವರೆಗೆ ನಮಗೆ ದೊರೆಯಬಹುದಾದದ್ದು ಆ ಭಾವನೆ, ನಿರೀಕ್ಷೆ, ಒತ್ತಾಯಗಳ ಇತಿಮಿತಿಗಳಿಗೆ ಒಳಪಟ್ಟ ಫಲಗಳೇ. ಅವು ಸಹಜವಾಗಿ ಸುಖ ದುಃಖಗಳ ಸಮ್ಮಿಶ್ರಣ ಮತ್ತು ಅಶಾಂತಿಯ ನೆಲೆ ಎಂದು ಭಗವದ್ಗೀತೆ ಸ್ಪಷ್ಟಪಡಿಸುತ್ತದೆ. ಅಶಾಂತಿಗಿಂತ ಮಿಗಿಲಾದ ಬಂಧನ ಇನ್ನೊಂದಿಲ್ಲ ಎನ್ನುತ್ತದೆ ಭಗವದ್ಗೀತೆ.

ಮನುಷ್ಯನ ಪ್ರಾಪಂಚಿಕ ಜೀವನದ ಗುರಿ ಸ್ವಕೇಂದ್ರಿತ ಫಲದ ನಿರೀಕ್ಷೆ ಇಲ್ಲದೆ ಒಂದು ನಿರ್ದಿಷ್ಟ ಸಂದರ್ಭ ಸನ್ನಿವೇಶದಲ್ಲಿ ಅತ್ಯಾವಶ್ಯಕವಾಗಿ ಮಾಡಬೇಕಾದುದನ್ನು ಸಾಧ್ಯವಾದಷ್ಟೂ ವಿಸ್ತೃತ ತಿಳುವಳಿಕೆಯಿಂದ ಮಾಡುತ್ತಾ ನಿಷ್ಕಾಮ ಕರ್ಮಿಯಾಗುವುದು. ಹಾಗೆ ಆದಾಗ ಅವನು ಸಾವು ಬದುಕು ಎಂಬ ದ್ವೈತಗಳನ್ನೂ ಒಳಗೊಂಡಂತೆ ಎಲ್ಲಾ ದ್ವೈತಗಳಿಗೆ ಅತೀತನಾಗಿ ಅತ್ಯಾವಶ್ಯಕವಾಗಿ ಪರಮ ಶಾಂತಿಯನ್ನು ಅನುಭವಿಸುತ್ತಾನೆ, ಇದೇ ಜೀವನ್ಮುಕ್ತಿ, ನಿಷ್ಕಾಮಕರ್ಮಯೋಗ ಎಂದು ವಿವರಿಸುತ್ತದೆ.

) ಭಕ್ತಿ ಮತ್ತು ಜೀವನ್ಮುಕ್ತಿ

ಭಗವಂತ, ಪರಮಾತ್ಮನ ಉದ್ದೇಶ ಸಾಧನೆಯಲ್ಲಿ ತಾನು ಒಂದು ಉಪಕರಣ ಎಂಬ ಅರಿವಿನಿಂದ ದೇವರಿಗೆ ಸರ್ವದಾ ಶರಣಾಗತನಾಗಿ ಸಂಕೇತದ ಮೂಲಕ ಪೂಜೆ ಮಾಡಿ ದೈವದೊಡನೆ ವ್ಯಕ್ತಿ ಆತ್ಮೀಯವಾದ ಖಾಸಗಿಯಾದ ಆಧ್ಯಾತ್ಮಿಕವಾದ ಸಂಬಂಧವನ್ನು ಅದರೊಂದಿಗಿನ ಏಕತೆ, ಐಕ್ಯತೆ, ತಾದಾತ್ಮ್ಯತೆಗಳ ಮೂಲಕ ಹೊಂದುವುದೇ ಭಕ್ತಿ. ಇದರ ಅಂತಿಮ ಪರಿಣಾಮ ಜ್ಯೋತಿರ್ಮಯ ಜ್ಞಾನಬೋಧೆ ಮತ್ತು ದೈವಸಾಕ್ಷಾತ್ಕಾರ, ಮೋಕ್ಷ.

ಜ್ಯೋತಿರ್ಮಯ ಜ್ಞಾನಬೋಧೆಯು ವ್ಯಕ್ತಿಯ ಜ್ಞಾನ ಕರ್ಮಗಳನ್ನು ಶುದ್ಧೀಕರಿಸುತ್ತದೆ. ಅವನ ಕಾಮ ಕ್ರೋಧ ಲೋಭ ಮೋಹ ಮದ ಮಾತ್ಸರ್ಯಗಳನ್ನು ಪಳಗಿಸುತ್ತದೆ. ಎಲ್ಲೆಲ್ಲೂ ದೈವವನ್ನು ಕಾಣುವ ಔದಾರ್ಯ ಮೂಡಿಸುತ್ತದೆ. ವಿಸ್ತೃತವಾಗುತ್ತಾ ಹೋಗುವ ಜ್ಞಾನಕ್ಕೆ ಅನುಗುಣವಾಗಿ ಕರ್ಮಗಳು ನಿಷ್ಕಾಮವಾಗುತ್ತಾ ಹೋಗುತ್ತವೆ. ಅಂತಿಮವಾಗಿ ಎಲ್ಲ ಆವರಣಗಳೂ ಕಳಚಿ ಬೀಳುತ್ತವೆ. ವ್ಯಕ್ತಿ ಜೀವನ್ಮುಕ್ತನಾಗುತ್ತಾನೆ ಎನ್ನುವ ಭಗವದ್ಗೀತೆಯೊಂದಿಗೆ ಇತರ ಭಾರತೀಯ ಚಿಂತಕರು ಮೋಕ್ಷಾರ್ಹ ಆಗುತ್ತಾನೆ ಎಂದು ಧ್ವನಿ ಕೂಡಿಸಿದ್ದಾರೆ.

ಭಗವದ್ಗೀತೆಯ 18 ಅಧ್ಯಾಯಗಳಲ್ಲಿ ಹೇಳಿರುವುದರ ಎಲ್ಲ ವಿವರಗಳಿಂದ ನಾವು ಅತ್ಯಾವಶ್ಯಕವಾಗಿ ಮನನ ಮಾಡಿಕೊಳ್ಳಬೇಕಾದದ್ದು

ನಾವು ಸ್ವಾಭಾವಿಕವಾಗಿ ಕರ್ಮನಿರತರು; ನಮ್ಮ ಕರ್ಮಕ್ಕೆ ಬೇಕಾದದ್ದು ಕರ್ತವ್ಯಪಾಲನೆ, ಕರ್ಮಫಲಗಳ ತ್ಯಾಗ, ಹಿತಾಕಾಂಕ್ಷೆ, ಸಮಯಾಸಮಯ ವಿವೇಕಗಳ ಓರಿಯಂಟೇಷನ್; ಮತ್ತು

ಉದ್ಧರೇತ್ ಆತ್ಮನಾ ಆತ್ಮಾನಮ್

ನ ಆತ್ಮಾನಂ ಅವಸಾದಯೇತ್

ಆತ್ಮಾ ಏವ ಹಿ ಆತ್ಮನಃ ಬಂಧುಃ

ಆತ್ಮಾ ಏವ ಹಿ ರಿಪುಃ ಆತ್ಮನಃ

(ನಾವೇ ನಮ್ಮನ್ನು ಉದ್ಧರಿಸಕೊಳ್ಳಬೇಕು. ನಮ್ಮನ್ನು ನಾವೇ ನಾಶಮಾಡಿಕೊಳ್ಳಬಾರದು. ನಮಗೆ ನಾವೇ ಬಂಧುಗಳು. ನಮಗೆ ನಾವೇ ಶತ್ರುಗಳು!) ಎಂಬ ಅರಿವು.

(Image credit: dollsofindia.com)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply