close logo

ದೇವಾಲಯ ಎಂದರೇನು?

ಭಾರತೀಯ ದೇವಾಲಯಗಳ ವಾಸ್ತುಶಿಲ್ಪದ ಮಹಾನ್ ವಿದ್ವಾಂಸರಾದ ಡಾ. ಆರ್. ನಾಗಸ್ವಾಮಿಯವರನ್ನು ಕಳೆದ ವರ್ಷ ನಾನು ಸಂದರ್ಶಿಸುತ್ತಿರುವಾಗ ಅವರ ಅಸಾಧಾರಣವಾದ ಬುದ್ಧಿಮತ್ತೆಯ ಮುಂದೆ ಬಹಳ ಸಾಮಾನ್ಯವೆನಿಸುವ ಒಂದು ಮುಗ್ಧವಾದ ಪ್ರಶ್ನೆಯನ್ನು ಕೇಳುವ ಸಾಹಸ ಮಾಡಿದೆ : “ಹಿಂದೂ ದೇವಾಲಯ  ಎಷ್ಟು ಹಳೆಯದು? ” ಎಂದು.  

ದೇವಾಲಯಗಳ ಪ್ರಾಚೀನತೆಯ ಬಗೆಗಿನ ಪ್ರಶ್ನೆಗಳು ನನ್ನನ್ನು ನಿರಂತರವಾಗಿ ಕಾಡಿವೆ. ಹೆಚ್ಚಿನ ಪಾಶ್ಚಿಮಾತ್ಯ ವಿದ್ವಾಂಸರ ಅಭಿಪ್ರಾಯದ ಪ್ರಕಾರ ಹಿಂದೂ ದೇವಾಲಯಗಳ ಅಸ್ತಿತ್ವಕ್ಕೆ ಬೌದ್ಧ ಧರ್ಮವೇ ಮೂಲಭೂತ ಕಾರಣ. ಬೌದ್ಧ ದೇವಾಲಯಗಳು ಪ್ರಗತಿ ಪಡೆದು, ಕಾಲಾಂತರದಲ್ಲಿ ಹಿಂದೂ ದೇವಾಲಯಗಳ ನಿರ್ಮಾಣಕ್ಕೆ ದಾರಿ ಮಾಡಿ ಕೊಟ್ಟವು.  ಹೀಗೆ ನಿರ್ಮಾಣವಾದ ಹಿಂದೂ ದೇವಾಲಯಗಳು ಗ್ರೆಕೋ-ರೋಮನ್ ವಾಸ್ತುಶಿಲ್ಪದಿಂದ ಪ್ರೇರಿತವಾಗಿದೆ ಎನ್ನುವುದು ಪಾಶ್ಚಾತ್ಯರ ಅಭಿಪ್ರಾಯ. ಈ ಅಭಿಪ್ರಾಯದ  ಸಮರ್ಥನೆಯಲ್ಲಿ ಅವರು ಬೌದ್ಧ ಧರ್ಮದ ಗುಹಾಂತರ ದೇವಾಲಯಗಳು ಮತ್ತು ಚೈತ್ಯ ಗೃಹಗಳು ಕ್ರಿಸ್ತ ಪೂರ್ವದ ಸಮಯಕ್ಕೆ ಸೇರಿದ್ದು  ಅತಿ ಪ್ರಾಚೀನವಾದ ಹಿಂದೂ ದೇವಾಲಯಗಳು ಸಹ ಸಾ.ಶ 3 ಅಥವಾ 4 ನೇ ಶತಮಾನಕ್ಕೆ ಸೇರಿವೆ ಎಂಬ ವಾದವನ್ನು ಮಂಡಿಸುತ್ತಾರೆ. ಈ ವಾದಕ್ಕೆ ಪೂರಕವೋ ಎನ್ನುವಂತೆ ಕಾಶ್ಮೀರ, ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನಗಳಲ್ಲಿ ಇರುವ ಹಿಂದೂ ದೇವಾಲಯಗಳು ಗ್ರೀಕ್ ಶೈಲಿಯನ್ನೇ ಹೋಲುತ್ತವೆ. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಂಡೇ ನಾನು ನಾಗಸ್ವಾಮಿಯವರನ್ನು  ಈ ಪ್ರಶ್ನೆ  ಕೇಳಿದ್ದು. (1)

ನಾಗಸ್ವಾಮಿಯವರು ಒಂದು ಸರಳವಾದ ಮರು ಪ್ರಶ್ನೆಯೊಂದಿಗೆ ನನಗೆ ಉತ್ತರವಿತ್ತರು. “ನಿಮ್ಮ ದೃಷ್ಟಿಯಲ್ಲಿ ಹಿಂದೂ ದೇವಾಲಯ ಎಂದರೇನು?” ಎಂದು. 

ನಾನು ಹಿಂದೆಂದೋ ಓದಿದನ್ನು ನೆನಪು ಮಾಡಿಕೊಳ್ಳುತ್ತ, ದೇವಾಲಯವೆಂದರೆ ಒಂದು ಗರ್ಭಗೃಹವಿರುತ್ತದೆ (ಕೋಶ ಅಥವಾ ಗರ್ಭ ಗುಡಿ), ಅದನ್ನು ಆವರಿಸಿ ಹೊರಗಿನ ಕಟ್ಟಡ ನಿರ್ಮಾಣವಾಗಿರುತ್ತದೆ,  ಆ ಬಾಹ್ಯ ನಿರ್ಮಾಣಕ್ಕೆ ಒಂದು ಶಿಖರ ಅಥವಾ ವಿಮಾನವಿರುತ್ತದೆ ಮತ್ತು ಈ ಕಟ್ಟಡದ ಮುಂದೆ ಒಂದು ಬಲಿ-ಪೀಠ  ಇರುತ್ತದೆ ಎಂದು ತಟ್ಟನೆ ಉತ್ತರಿಸಿದೆ. 

ಅವರು ನನ್ನ ಉತ್ತರವನ್ನು ಆಲಿಸುತ್ತ ಉತ್ತೇಜಕಪೂರ್ವಕವಾಗಿ ತಲೆಯನ್ನಾಡಿಸಿ , “ನಾಲ್ಕು ಗೋಡೆಗಳಿರುವ ಕೋಣೆಯಲ್ಲಿ ಒಂದು ಮೂರ್ತಿ ಇರುತ್ತದೆ, ಆ ನಿರ್ಮಾಣಕ್ಕೆ  ಶಿಖರವಿರುವುದಿಲ್ಲ.  ಅದನ್ನು ನೀವು ಏನೆಂದು ಭಾವಿಸುತ್ತೀರಿ?” ಎಂದು ಕೇಳಿದರು. 

ನಾನು ಕೊಂಚ ಹಿಂಜರಿಯುತ್ತ “ದೇವಾಲಯ” ಎಂದು ಉತ್ತರಿಸಿದೆ. 

“ಒಂದು ಬಿದಿರಿನ ಗುಡಿಸಲಿನಲ್ಲಿ ಒಂದು ಮೂರ್ತಿಯನ್ನು ಇರಿಸಿ ಜನರು ಅದನ್ನು ಆರಾಧಿಸುತ್ತಾರೆ; ಆಗ?”

ಈ ಬಾರಿ ಸ್ವಲ್ಪ ಆತ್ಮವಿಶ್ವಾಸದಿಂದ, “ದೇವಾಲಯ” ಎಂದು ಉತ್ತರಿಸಿದೆ. 

“ಒಂದು ಮೂರ್ತಿಯು ರಸ್ತೆ ಬದಿಯ ಮರದ ಕೆಳಗಿದೆ. ಪ್ರಯಾಣಿಕರು ಅಲ್ಲಿಯೇ ಆ ಮೂರ್ತಿಯನ್ನು ಪೂಜಿಸುತ್ತಾರೆ ; ಆ ಜಾಗವನ್ನು ಏನೆಂದು ಪರಿಗಣಿಸುತ್ತೀರಾ?”

ನನಗೆ ಈ ಚರ್ಚೆಯ ಹರಿವು ಗ್ರಹಿಕೆಗೆ ಬಂದಿತ್ತು , “ದೇವಾಲಯ” ಎಂದು ಉತ್ತರಿಸದೆ. 

“ಮರದಡಿಯಲ್ಲಿ ಒಂದು ಕಲ್ಲನ್ನು ಸ್ಥಾಪಿಸಿ ಅದನ್ನೇ ದೇವರೆಂದು ಆರಾಧಿಸಲಾಗುತ್ತದೆ; ಆಗ ?

“ಅದೂ ದೇವಾಲಯವೇ” ಎಂದು ಖಚಿತವಾಗಿ ಉತ್ತರಿಸಿದೆ. 

“ಒಂದು ಪ್ರತಿಮೆಯನ್ನು ನಿಮ್ಮ ಮನೆಯ ಗೋಡೆಯ ಮೇಲಿರಿಸಿ ಅದನ್ನು ನಿತ್ಯ ಆರಾಧಿಸುತ್ತೀರಿ; ಆಗ ಏನೆಂದು ಕರೆಯುವಿರಿ?”

ನಾಗಸ್ವಾಮಿಯವರ ವಿಚಾರ ಲಹರಿಯು ಸಂಪೂರ್ಣವಾಗಿ ನನಗೆ ಅರ್ಥವಾಗ ತೊಡಗಿತು, “ದೇವಾಲಯ” ಎಂದು ಉತ್ತರಿಸಿದೆ. 

ನಾಗಸ್ವಾಮಿಯವರು ಹೀಗೇ ಮುಂದುವರೆಯುತ್ತ ಹಿಂದೂ ದೇವಾಲಯದ ಬಗ್ಗೆ  ವಿಸ್ತಾರವಾಗಿ ವಿವರಿಸ ತೊಡಗಿದರು. ದೇವಾಲಯವೆಂದರೆ ಕೇವಲ ಕಲ್ಲು-ಗಾರೆಗಳಿಂದ ನಿರ್ಮಿತವಾದ ಕಟ್ಟಡವಲ್ಲ; ಮುಖ್ಯವಾಗಿ ಅದೊಂದು ಪವಿತ್ರವಾದ ರಚನೆ. ಅದು ಬೃಹತ್ ಪ್ರಮಾಣದಲ್ಲಿದ್ದರೂ ಸರಿ ಇಲ್ಲವೇ ಮರದಡಿಯಲ್ಲಿ ಒಂದು ಕಲ್ಲಿನ ರೂಪದಲ್ಲಿದ್ದರೂ ಸರಿ. ಮೂಲಭೂತವಾಗಿ ಹಿಂದೂ ದೇವಾಲಯವೆಂದರೆ ಆರಾಧಿಸಲಾದ ದೈವದ ಮೂರ್ತ ರೂಪ. ಉಳಿದೆಲ್ಲಾ ಅಂಶಗಳು ದೇಶ-ಕಾಲಕ್ಕೆ ತಕ್ಕಂತೆ ಬದಲಾವಣೆಗಳಿಗೆ ಒಳಗಾಗಿರುತ್ತವೆ. 

ಈ ಅರ್ಥದಲ್ಲಿ ನೋಡಿದಾಗ, ಹಿಂದೂ ದೇವಾಲಯಗಳ ಪ್ರಾಚೀನತೆಯನ್ನು  ವೈದಿಕ ಕಾಲಕ್ಕೆ ಹೊಂದಿಸಬಹುದು. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ, ಭಾರತೀಯ ಸಂಸ್ಕೃತಿಯು ಸಮಯದ ಆವರ್ತಕ ಪ್ರವೃತ್ತಿಗೆ  ಪ್ರಾಮುಖ್ಯತೆಯನ್ನು ಕೊಡುತ್ತದೆಯೇ ಹೊರತು ಪಾಶ್ಚಾತ್ಯ ದೇಶಗಳಂತೆ ಕಾಲಾನುಕ್ರಮಕ್ಕಲ್ಲಾ. 

ಪಾಶ್ಚಾತ್ಯ ವಿದ್ವಾಂಸರು ಸಮಯದ ರೇಖಾತ್ಮಕ ಲೆಕ್ಕಾಚಾರಕ್ಕೆ ಎಂದರೆ ಕಾಲಾನುಕ್ರಮಕ್ಕೆ ಹೆಚ್ಚು ಒತ್ತಡ ನೀಡುತ್ತಾರೆ. ಅವರ ಪುಸ್ತಕಗಳಲ್ಲಿ ಹಿಂದೂ ದೇವಾಲಯಗಳ ಕಾಲಕ್ರಮದ ಚರ್ಚೆಯೇ ಹೆಚ್ಚು. ಒಂದು ನಿಗಧಿತ ಶೈಲಿಯ ದೇವಾಲಯಗಳ ನಿರ್ಮಾಣ ಯಾವಾಗ ಶುರುವಾದದ್ದು, ಅದರ ಹಿಂದಿನದು ಯಾವ ಶೈಲಿಯದು, ಅದರ ನಂತರ ಯಾವುದು ಎಂಬ ಕಾಲಮಾನದ ಗೀಳು ಅವರಲ್ಲಿ, ‘ದೇವಲಾಯ’ ಎಂಬ ಒಂದು ಪರಿಕಲ್ಪನೆಯ ಸಾರ ಸತ್ವವನ್ನು ಅರ್ಥಮಾಡಿಕೊಳ್ಳುವ ಅವಕಾಶವನ್ನು ಕಲ್ಪಿಸಿಕೊಡುವಲ್ಲಿ ಸೋತಿದೆ. 

ಹಿಂದೂ ದೇವಾಲಯ ಎಂದರೆ ಮೂಲಭೂತವಾಗಿ, ಒಂದು ಪವಿತ್ರವಾದ ರಚನೆ. ಈ ದೃಷ್ಟಿಕೋನದಲ್ಲಿ ನೋಡಿದಾಗ, ಬಹಳ ಅಸ್ತವ್ಯಸ್ತವಾಗಿರುವ ದೇವಾಲಯವೂ ಸಹ ಮನೋಹರವಾದ ಬೃಹತ್  ದೇವಾಲಯದಷ್ಟೇ ಪರಮ ಪಾವನ. 

“ಭಾರತದ ದೇವಾಲಯಗಳ ಪಾವಿತ್ರ್ಯತೆಯು ಅದರ ಕಲೆ ಅಥವಾ ಉಪಯುಕ್ತತೆಗಳನ್ನು  ಆಧರಿಸಿಲ್ಲ, ಬದಲಿಗೆ ಅದರ ಗೂಢತತ್ವಕ್ಕಿರುವ ಪ್ರಾಮುಖ್ಯತೆಯನ್ನು ಅವಲಂಭಿಸಿದೆ. ಭಾರತೀಯ ವಾಸ್ತುಶಾಸ್ತ್ರದ ಪುಸ್ತಕಗಳು ನಿಸ್ಸಂದೇಹವಾಗಿ ಬಹಳ ವಿಸ್ತೃತವಾಗಿರುವುದರ ಜೊತೆಗೆ ಸಾಕಷ್ಟು ತಾಂತ್ರಿಕ ಮಾಹಿತಿಯನ್ನು ಹೊಂದಿದೆ. ಆದರೂ ದೇವಾಲಯಗಳು ಆಧ್ಯಾತ್ಮಿಕ ಸಾಧನೆಯ ಸಾಕ್ಷಾತ್ಕಾರಕ್ಕೆ ಪೂರಕವಾದ ನಿರ್ಮಾಣವೆಂಬ ಅಂಶವನ್ನು ಮುಂದಿಟ್ಟುಕೊಂಡೇ ಈ ಗ್ರಂಥಗಳು ರಚಿತವಾಗಿವೆ. ಭಕ್ತನು ತನ್ನ ಹೃದಯದಲ್ಲಿ ನಂಬಿಕೆಯನ್ನು ಹೊತ್ತು ದೇವರ ಅನುಗ್ರಹವನ್ನು ಪಡೆಯುವ ಆಸ್ಥೆಯಿಂದ  ದೇವಾಲಯಕ್ಕೆ ಭೇಟಿ ನೀಡುತ್ತಾನೆ. ಮನುಷ್ಯನ ಮನಸ್ಸಿನಲ್ಲಿ ಆಸ್ಥೆ ಎಂಬುದು ಅಚಲವಾಗಿದ್ದರೆ ಮಾತ್ರ ದೇವರ ಕೃಪೆಯನ್ನು ಅಧಿಕಾರಪೂರ್ವಕವಾಗಿ ಕೇಳಲು ಸಾಧ್ಯ. ಈ ನಂಬಿಕೆಗೆ ದೇವಾಲಯ ರಚನೆಯ ಜ್ಞಾನ ಅಥವಾ ಅದರ ಸಾಂಕೇತಿಕ ಮಾಹಿತಿಗಳು ಅನಗತ್ಯ, ಬದಲಿಗೆ ಸೂಕ್ತವಾದ ಮನಸ್ಥಿತಿಯೇ ಆಧಾರ”. (2) 

ಕಲಾತ್ಮಕ ಶಿಲ್ಪಕೃತಿಗಳಾಗಲಿ ಅಥವಾ ರೂಪ ಸೌಂದರ್ಯವಾಗಲಿ ಒಬ್ಬ ಭಕ್ತನಿಗೆ ಪ್ರಚೋದಕಗಳಲ್ಲ. ಈ ಅಂಶಗಳು ಒಬ್ಬ ಸಾಂಸ್ಕೃತಿಕ ಪ್ರವಾಸಿಗೆ ಅಥವಾ ವಿದ್ವಾಂಸರಿಗೆ ಆಸಕ್ತಿದಾಯಕವೇ ಹೊರತು ಭಕ್ತನಿಗೆ ಇವು ಪ್ರಮುಖವಲ್ಲ. ಅವನಿಗೆ ಗರ್ಭ-ಗೃಹದಲ್ಲಿ ವಿರಾಜಮಾನವಾದ ದೈವದ ದರ್ಶನವೇ ಪ್ರಧಾನವಾದದ್ದು. ಉಳಿದೆಲ್ಲವೂ ಅವನಿಗೆ ಗೌಣ.  

“ದೇವಾಲಯಗಳಲ್ಲಿನ ಕಲಾತ್ಮಕತೆ ಒಬ್ಬ ಕಲಾಭಿಮಾನಿಯನ್ನು ವಿಚಲಿತಗೊಳಿಸುವಂತೆ ಒಬ್ಬ ಭಕ್ತನನ್ನು ಪ್ರಭಾವಿಸುವುದಿಲ್ಲ, ಅಂತೆಯೇ ದೇವಾಲಯದ ತಾಂತ್ರಿಕ ಕೌಶಲ್ಯತೆಯು ಒಬ್ಬ ಪ್ರವಾಸಿಯ ಗಮನವನ್ನು ಸೆಳೆಯುವಂತೆ ಭಕ್ತನನ್ನು  ಸೆಳೆಯುವುದಿಲ್ಲ, ಅವನು ಇವೆಲ್ಲದರಿಂದ ಮುಕ್ತನಾಗಿ ಕೇವಲ ದೇವರ ಕೃಪೆಯನ್ನು ಅಪೇಕ್ಷಿಸುತ್ತ ದೇವಮಂದಿರಕೆ ಬರುತ್ತಾನೆ.”(3)

ವಾಸ್ತುಶಾಸ್ತ್ರ ಮತ್ತು ಶಿಲ್ಪಶಾಸ್ತ್ರಗಳ ಬಗ್ಗೆ ರಚಿತವಾದ ಹಿಂದೂ ಗ್ರಂಥಗಳಲ್ಲಿ ಪರಸ್ಪರ ಭಿನ್ನಾಭಿಪ್ರಾಯಗಳು ಕಂಡು ಬರುವುದಿಲ್ಲ. ಒಂದು ಬೃಹತ್ ದೇವಾಲಯದ ನಿರ್ಮಾಣವಾಗುವ ಸಂದರ್ಭದಲ್ಲೂ ಸಣ್ಣ ಸಣ್ಣ ಭಾಗಗಳ ನಿರ್ಮಾಣಕ್ಕೆ ಸಂಬಂದಿಸಿದ ಸೂಕ್ಷ್ಮವಾದ ವಿಷಯಗಳನ್ನು ಕೂಲಂಕಷವಾಗಿ ವಿವರಿಸುವುದರ ಜೊತೆಗೆ ದೇವಾಲಯದ ದಿವ್ಯವಾದ ಅಂಶಗಳಿಗೂ ಈ ಗ್ರಂಥಗಳು ಅಷ್ಟೇ ಪ್ರಾಮುಖ್ಯತೆಯನ್ನು ಒದಗಿಸುತ್ತವೆ . ಅನೇಕ ಗ್ರಂಥಗಳಲ್ಲಿ ಹಿಂದೂ ದೇವಾಲಯಗಳ ವರ್ಗೀಕರಣಗಳನ್ನು ಕಾಣಬಹುದು. ಈ ಬಗ್ಗೆ ಸುಮಾರು ಗ್ರಂಥಗಳ ನಡುವೆ  ಇರುವ ಸಾಮ್ಯದಿಂದ ದೇವಾಲಯದ ವಾಸ್ತು ಶಾಸ್ತ್ರ ಮತ್ತು ದೈವಾಂಶದ ಅನುಭೂತಿ ಪ್ರಧಾನವಾದ ಪವಿತ್ರ-ವಾತಾವರಣದ ನಿರ್ಮಾಣ, ಈ  ಎರಡೂ ವಿಷಯಗಳ ನಡುವಿನ ಸಂಬಂಧ ಮತ್ತು ಪ್ರಾಧಾನ್ಯ ಸ್ಪಷ್ಟವಾಗಿ ತಿಳಿಯುತ್ತದೆ. ಅವುಗಳ ಸಂಕ್ಷಿಪ್ತ ಪರಿಚಯ ಹೀಗಿವೆ : ಮೊದಲಿಗೆ ದೇವಾಲಯಗಳನ್ನು ಖಾಸಗಿ ಮತ್ತು ಸಾರ್ವಜನಿಕ ಎಂದು ಎರಡು ವಿಧವಾಗಿ ವಿಭಜಿಸಲಾಗುತ್ತದೆ. 

 1. ಆತ್ಮಾರ್ಥ ದೇಗುಲ – ಇದು ಒಂದು ‘ಖಾಸಗಿ ದೇಗುಲ’. ಇದು ಭಕ್ತನ ವೈಯಕ್ತಿಕ ಮತ್ತು ಅವನ ಕುಟುಂಬಕ್ಕೆ ಮೀಸಲಾಗಿದೆ.
 2. ಪರಾರ್ಥ ದೇಗುಲ – ಇದು ಸಮುದಾಯದ ಎಲ್ಲಾ ಜನರಿಗೂ ಮೀಸಲಾದ ಸಾರ್ವಜನಿಕ ದೇವಾಲಯ. (4)

ಖಾಸಗಿ ದೇಗುಲಗಳಲ್ಲಿ , ಮನೆಯ ಯಾವ ಸದಸ್ಯರಾದರೂ ದೇವರ ಪೂಜೆಯನ್ನು ನಡೆಸಬಹುದು, ಆದರೆ ಸಾರ್ವಜನಿಕ ದೇಗುಲಗಳಲ್ಲಿ, ಒಬ್ಬ ನಿರ್ದಿಷ್ಟವಾದ ಪೂಜಾರಿಯು ಮಾತ್ರ ಪೂಜೆಯನ್ನು  ಸಲ್ಲಿಸುವ ಹಕ್ಕನ್ನು ಹೊಂದಿರುತ್ತಾರೆ. ಎಸ್.ಕೆ.ರಾಮಚಂದ್ರರಾವ್ ರವರು ಹೇಳುವಂತೆ :

“ ಮೊದಲ ರೀತಿಯ ದೇಗುಲಗಳಲ್ಲಿ (ದೇವರ ಆರಾಧನೆಯಲ್ಲಿ ) ನಿರ್ವಾಹಕನೇ ಮತ್ತು ಪಾಲ್ಗೊಳ್ಳುವವನೂ ಆಗಿರಲು ಸಾಧ್ಯ. ಎರಡನೇ ರೀತಿಯ ದೇಗುಲಗಳಲ್ಲಿ ಪೂಜಾರಿಗಳು ನಿರ್ವಾಹಕರ ಪಾತ್ರವಹಿಸುತ್ತಾರೆ ಮತ್ತು ಜನರು ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ದೇಗುಲದ ಗರ್ಭಗುಡಿಯು ಪೂಜಾ ವಿಧಾನಗಳ ನಿರ್ವಹಣೆಗಾಗಿ ಮಾತ್ರ ಮೀಸಲಾಗಿರುತ್ತದೆ. ಕಾರ್ಯಕ್ರಮಗಳಲ್ಲಿ ಭಾಗವಹಿಸುವವರಿಗೆ ಮತ್ತು ಸಭೀಕರಿಗೆ ಮಂಟಪಗಳು ಇರುತ್ತವೆ. ದೊಡ್ಡ ಗುಂಪುಗಳಲ್ಲಿ ಜನರು  ಒಟ್ಟುಗೂಡುವ ನಿರೀಕ್ಷೆಯಿರುವಾಗ ತಾತ್ಕಾಲಿಕ ವ್ಯವಸ್ಥೆಗಳನ್ನು ಮಾಡಲಾಗುತ್ತದೆ.” (5)

ಖಾಸಗಿ ದೇಗುಲಗಳು ಬಹಳ ಹಿಂದಿನಿಂದಲೂ ಪ್ರಸಿದ್ಧವಾಗಿದ್ದವು. ಸಾರ್ವಜನಿಕ ದೇವಾಲಯಗಳು ನಂತರದ ದಿನಗಳಲ್ಲಿ ರಚನೆಯಾದವು. ಸರಸ್ವತಿ-ಸಿಂಧೂ ಸಂಸ್ಕೃತಿಯ ಅನೇಕ ನಗರಗಳಲ್ಲಿ ಹಲವಾರು ಖಾಸಗಿ ದೇವಮಂದಿರಗಳಿದ್ದವು ಎಂಬ ಸುಳಿವು ಸಿಕ್ಕಿವೆ. ಖಾಸಗಿ ದೇವಮಂದಿರಗಳನ್ನೂ  ದೇವಾಲಯವೇ ಎಂದು ಭಾವಿಸಿದ್ದಲ್ಲಿ ಹಿಂದೂ ದೇವಾಲಯಕ್ಕೆ ಬಹಳ ದೀರ್ಘವಾದ ಚರಿತ್ರೆ ಇದೆ. 

ಪದ್ಮ ಸಂಹಿತೆ ಮತ್ತು ಶ್ರೀ ಪ್ರಶ್ನ ಸಂಹಿತೆಯಂತಹ ಗ್ರಂಥಗಳಲ್ಲಿ, ದೇವಾಲಯದ ನಿರ್ಮಾತೃ ಮತ್ತು ದೇವಾಲಯವಿರುವ ಸ್ಥಳದ ನಿರ್ದೇಶನವನ್ನು ಆಧರಿಸಿ ದೇವಾಲಯಗಳ ವಿಭಜನೆ ಮಾಡಲಾಗಿದೆ. 

 1. ಸಿದ್ಧ್ಯಾತನ – ಈ ದೇವಾಲಯಗಳನ್ನು ಮಹಾನ್ ಋಷಿಗಳು ನಿರ್ಮಿಸಿರುತ್ತಾರೆ. ಇವುಗಳನ್ನು ಪರ್ವತ-ಶಿಖರಗಳಲ್ಲಿ, ನದಿ-ತಳಗಳಲ್ಲಿ, ನದಿಗಳು ಸಂಧಿಸುವ ಸ್ಥಳಗಳಲ್ಲಿ, ಸಮುದ್ರ ತೀರಗಳಲ್ಲಿ ಮತ್ತು ಅಡವಿಯ ನಡುವೆ ಪ್ರಶಾಂತವಾದ ಸ್ಥಳಗಳಲ್ಲಿ ನಿರ್ಮಿಸಲಾಗಿದೆ. ಈ ರೀತಿಯ ಶ್ರೇಷ್ಠ ದೇವಾಲಯಗಳು, ಭಕ್ತರ ಧ್ಯಾನಕ್ಕೆ ನೆರವಾಗುತ್ತವೆ.
 2. ಅಸ್ಸಿದ್ಧ್ಯಾತನ – ಈ ದೇವಾಲಯಗಳನ್ನು ರಾಜರು ಮತ್ತು ಶ್ರೀಮಂತ ವ್ಯಾಪಾರಸ್ಥರು ಪಟ್ಟಣಗಳಲ್ಲಿ ಮತ್ತು ಜನನಿಬಿಡ ಸ್ಥಳಗಳಲ್ಲಿ ನಿರ್ಮಿಸಿರುತ್ತಾರೆ. ಜನರು ಈ ರೀತಿಯ ದೇವಾಲಯಗಳನ್ನು ಪೂಜಾರಾಧನೆಗಳಿಗೂ ಮತ್ತು ಸಾಮಾಜಿಕ ಕೆಲಸಗಳಿಗೂ ಬಳಸಿಕೊಳ್ಳುತ್ತಿದ್ದರು. 

ಪದ್ಮ ಪುರಾಣ ಮತ್ತು ಪರಮೇಶ್ವರ ಸಂಹಿತೆ ಗಳು ದೇವಸ್ಥಾನದ ದೇವತೆಯ ಮೂಲವನ್ನು ಆಧರಿಸಿ ಹಿಂದೂ ದೇವಾಲಯವನ್ನು ಐದು ವಿಧಗಳಾಗಿ ವರ್ಗೀಕರಿಸಿವೆ. ಹಿಂದೂ ದೇವಾಲಯವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವವರಿಗೆ  ಈ ವರ್ಗೀಕರಣವು ಅತ್ಯಂತ ಮುಖ್ಯ. 

 1. ಸ್ವಯಂ ವ್ಯಕ್ತ – ಇಲ್ಲಿ  ದೇವರ ಪ್ರತಿಮೆ ಸ್ವಯಂಭು ಆಗಿರುತ್ತದೆ.
 2. ದೈವಿಕ – ಪವಿತ್ರವಾದ ಸ್ಥಳಗಳಲ್ಲಿ ಸಾಕ್ಷಾತ್ ದೇವತೆಗಳೇ ದೇವರ ಮೂರ್ತಿಯನ್ನು  ಸ್ಥಾಪಿಸಿರುತ್ತಾರೆ  .
 3. ಆರ್ಷ – ಮಹಾನ್ ಋಷಿಗಳು ತಮ್ಮ ತಪಸ್ಸಿನ ಬಲದಿಂದ ಅರಣ್ಯ-ಹಿಮ್ಮೆಟ್ಟುಗಳಲ್ಲಿ ನಿರ್ಮಿಸಿದ ದೇವ ಮಂದಿರಗಳು.
 4. ಪೌರಾಣ – ಪುರಾಣಗಳ ಯುಗದಲ್ಲಿ ನಿರ್ಮಿಸಲಾದ ದೇವಾಲಯಗಳು ಮತ್ತು ಪುರಾಣಗಳಲ್ಲಿ ಹೇಳಲ್ಪಟ್ಟಿರುವ ದೇವಾಲಯಗಳು.
 5. ಮಾನುಷ – ಮನುಷ್ಯರಿಂದ ನಿರ್ಮಿಸಲ್ಪಟ್ಟ ದೇವಾಲಯಗಳು. ರಾಜರು, ನಾಯಕರು, ಭಕ್ತರು ನಿರ್ಮಾಣಿಸಿ ಪೂಜಾರಿಗಳಿಂದ ಪವಿತ್ರೀಕರಣ ಮಾಡಿಸಲ್ಪಟ್ಟವು. (6), (7)

ಅಮರನಾಥ್, ಸ್ವಯಂ ವ್ಯಕ್ತ ವಿಭಾಗಕ್ಕೆ  ಸೇರಿದೆ. ಇಲ್ಲಿ ದೇವರ ಪ್ರತಿಮೆ ಸ್ವಯಂಭು ಆದ ಕಾರಣ ಮಾನುಷ ದೇವಾಲಯದಂತೆ ಪವಿತ್ರೀಕರಣದಂತಹ ವಿಧಿ-ವಿಧಾನಗಳ ಅಗತ್ಯವಿರುವುದಿಲ್ಲಾ. ರಾಮೇಶ್ವರಂ ದೇವಾಲಯವು ದೈವಿಕ ಮತ್ತು ಪೌರಾಣ ವಿಭಾಗಕ್ಕೆ ಉದಾಹರಣೆ. ಇಲ್ಲಿನ ಶಿವಲಿಂಗವನ್ನು ಸಾಕ್ಷಾತ್ ಶ್ರೀರಾಮನೇ ಸ್ಥಾಪಿಸಿದನೆಂದು ಹೇಳಲಾಗುತ್ತದೆ. ಸಂತನಿಂದ ನಿರ್ಮಿತವಾದ ಪಂಢರಪುರದ ಪುರಂದರ ವಿಠ್ಠಲ ಮಂದಿರವು ಆರ್ಷ ವರ್ಗಕ್ಕೆ ಸೇರುತ್ತದೆ.  ಪುರಾಣಗಳಲ್ಲಿ ಉಲ್ಲೇಖವಿರುವ ತಿರುಪತಿ ದೇವಾಲಯವು ಪೌರಾಣಕ್ಕೆ ಸೇರಿದೆ. ಹಲವಾರು ಜನಜನಿತ  ದೇವಾಲಯಗಳು ಮಾನುಷಕ್ಕೆ ಸೇರುತ್ತದೆ. 

“ಈ ವಿಭಾಗದಲ್ಲಿನ ಮೊದಲ ನಾಲ್ಕು ರೀತಿಯ ದೇವಾಲಯಗಳು ಸ್ವಾಭಾವಿಕವಾಗಿಯೇ  ಪವಿತ್ರವಾದ ಸ್ಥಳಗಳು ಆದರೆ ಐದನೆಯ ರೀತಿಯ ದೇವಾಲಯವನ್ನು ವಿಶೇಷವಾಗಿ ಪವಿತ್ರೀಕರಿಸಬೇಕಾಗುತ್ತದೆ. ದೇವಾಲಯದ ವಿಮಾನದ ಸಂವೀಕ್ಷಣೆಯಲ್ಲಿನ ಸಮಸ್ತ ಪ್ರದೇಶವೂ ಪವಿತ್ರವಾಗುತ್ತದೆ ಎಂಬ ನಂಬಿಕೆಯು ದೇವಾಲಯದ ವಿಮಾನ ನಿರ್ಮಾಣದ ಹಿಂದಿರುವ ಉದ್ದೇಶ. ಹೀಗೆ ವಿಮಾನ ನಿರ್ಮಾಣವು ಸಾಮಾನ್ಯವಾದ ಸ್ಥಳವನ್ನು ಪವಿತ್ರೀಕರಿಸುವಲ್ಲಿ ನೆರವಾಯಿತು”. (8)

ಇಲ್ಲೊಂದು ಮುಖ್ಯವಾದ ವಿಷಯವನ್ನು ಗಮನಿಸಬೇಕು. ದೇವಾಲಯ ನಿರ್ಮಾಣವನ್ನು ನಿರ್ದೇಶಿಸುವ ವಾಸ್ತುಶಾಸ್ತ್ರದ ಎಲ್ಲ ನಿರ್ದೇಶನಗಳು ಮಾನವರು ನಿರ್ಮಿಸುವ ಮಾನುಷ  ದೇವಾಲಯಗಳಿಗೆ ಮಾತ್ರ ಅನ್ವಯಿಸುತ್ತವೆ. ಈ ಗ್ರಂಥಗಳು ದೇವಾಲಯವೆಂದರೆ ಪ್ರಾಥಮಿಕವಾಗಿ ಪವಿತ್ರ ಸ್ಥಾನ ಎಂಬ ಮೂಲಭೂತ ಅಂಶವನ್ನು ಕೇಂದ್ರೀಕರಿಸುತ್ತಲೇ ಸೂಕ್ಷ್ಮಾತಿ ಸೂಕ್ಷ್ಮ ವಿಷಯಗಳನ್ನು ವಿಸ್ತಾರವಾಗಿ ತಿಳಿಸುತ್ತವೆ.  ಆದ್ದರಿಂದ ಬಹಳ ಸರಳವಾಗಿ ನಿರ್ಮಿತವಾದ ದೇವಾಲಯವು ವೈಭವೋಪೇತವಾಗಿ ರಚಿತವಾದ ದೇವಾಲಯದಷ್ಟೇ ಮಹತ್ವಪೂರ್ಣವಾದದ್ದು ಎಂದು ಒತ್ತು ಕೊಡುತ್ತಾ ಎಸ್.ಕೆ. ರಾಮಚಂದ್ರ ರಾವ್ ರವರು ಹೀಗೆ ವಿವರಿಸುತ್ತಾರೆ :

“ ಒಂದು ದೇವಾಲಯದ ನಿರ್ಮಾಣವಾಗುವ ಮುನ್ನ ಹಲವಾರು ವಿಧಿವತ್ತಾದ ಆಚಾರಣೆಗಳನ್ನು ಮಾಡಬೇಕಾಗುತ್ತದೆ, ಉದಾಹರಣೆಗೆ, ನೆಲವನ್ನು ಶುದ್ಧಗೊಳಿಸುವುದು (ಭೂಮಿ ಶುದ್ಧನ), ನೆಲ ಅಥವಾ ಭೂಮಿಗೆ ಮೀಸಲಾಗಿರುವ ದೇವತೆಗಳಿಗೆ ಪೂಜೆ ಸಲ್ಲಿಸುವುದು (ವಾಸ್ತು ಪೂಜಾ), ಪಾರಿಚಾರಿಕ ಚೇತನಗಳಿಗೆ ಸೇವೆ ಸಲ್ಲಿಸುವುದು (ಬಲಿ-ದಾನ), ಅಗ್ನಿ ಕಾರ್ಯಗಳು (ಹೋಮ), ಪ್ರಪ್ರಥಮ ಇಟ್ಟಿಗೆಯ ಸ್ಥಾಪನೆ (ಪ್ರಥಮೇಷ್ಟಿಕಾ-ನ್ಯಾಸ), ಗರ್ಭದ ಪವಿತ್ರೀಕರಣ (ಗರ್ಭ-ನ್ಯಾಸ), ಹೀಗೆ. ವಿಧಿವತ್ತಾದ ಆಚರಣೆಗಳನ್ನು ಕೈಗೊಳ್ಳದೆಯೇ ಮಾನವ ನಿರ್ಮಿತ ದೇವಾಲಯಗಳಲ್ಲಿ ದಿವ್ಯ ಚೇತನದ ಅನುಭೂತಿಯ ನಿರ್ಮಾಣವಾಗುವುದು ಸಾಧ್ಯವಿಲ್ಲ. ಆದರೆ, ಮಹಾನ್ ಋಷಿಗಳು ಮತ್ತು ದೇವಸಂಭೂತರಾದ ವ್ಯಕ್ತಿಗಳಿಂದ ನಿರ್ಮಾಣವಾದ ದೇವಾಲಯಗಳಿಗೆ ಈ ಆಚರಣೆಗಳ ಅಗತ್ಯವಿರುವುದಿಲ್ಲಾ.” (9)

 ಈ ಕಾರಣದಿಂದಾಗಿಯೇ, ದೇವಾಲಯಗಳನ್ನು ಹಾಳುಗೆಡಹುವ ವಿಧ್ವಂಸಕ ಕೃತ್ಯಗಳು ಶತಮಾನಗಳ ಕಾಲ ನಡೆದರು ಭಾರತದಲ್ಲಿ ದೇವಾಲಯ ನಿರ್ಮಾಣ ಕಾರ್ಯಕ್ಕೆ  ಧಕ್ಕೆ ಬರಲಿಲ್ಲ. ಕೇವಲ ಮಾನುಷ ದೇವಾಲಯ ಗಳು ಮಾತ್ರ ಪೂಜಾರ್ಹ ಎಂದು ಗ್ರಂಥಗಳಲ್ಲಿ ಹೇಳಿದ್ದರೇ, ಇಸ್ಲಾಮ್ ಧಾಳಿಯಿಂದಾಗಿ ಭಾರತದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿ ದೇವಾಲಯ ನಿರ್ಮಾಣದ ಸಂಪ್ರದಾಯವು ಸಂಪೂರ್ಣವಾಗಿ ಕಳೆದು ಹೋಗುತ್ತಿತ್ತು.  ಉತ್ತರ ಭಾರತದಲ್ಲಂತೂ ಮೂರ್ತಿ ಪೂಜೆ ವಿರೋಧಿಗಳಾದ ಪಾಷಂಡಿ ಧಾಳಿಕೋರರು ಅದೆಷ್ಟೋ ಪುರಾತನ ದೇವಸ್ಥಾನಗಳನ್ನು ನಾಶ ಮಾಡಿದರು, ಆಗ ದೇವಾಲಯಗಳ ಸ್ಥಪತಿಗಳು, ವಾಸ್ತು ಶಾಸ್ತ್ರ ಪಂಡಿತರು, ಕರಕುಶಲಗಾರರು ಸಹ ಸಾವನ್ನಪ್ಪಿದರು. ಇದಾಗ್ಯೂ ದೇವಾಲಯ ನಿರ್ಮಾಣ ಸಾಂಪ್ರದಾಯವು ಜೀವಂತವಾಗಿಯೇ ಉಳಿದುಕೊಂಡಿದೆ ಎಂದರೆ ಅದಕ್ಕೆ  ಹಿಂದೂ ಶಾಸ್ತ್ರಗಳಲ್ಲಿ ದೇಶ ಕಾಲಕ್ಕೆ-ತಕ್ಕಂತೆ ತುರ್ತು ಪರಿಸ್ಥಿಗಳನ್ನು ನಿಭಾಯಿಸುವ ಆಪತ್ಧರ್ಮ ಮತ್ತು ಹಲವು ನಿರ್ದೇಶನಗಳೇ ಕಾರಣ. 

ಪ್ರಸ್ತುತ ಕಾಲದಲ್ಲಿ, ಉತ್ತರ ಭಾರತದಲ್ಲಿ ಇತ್ತೀಚಿಗೆ ನಿರ್ಮಿಸಲಾದ ದೇವಾಲಯಗಳು ಶಾಸ್ತ್ರಬದ್ಧವಾಗಿಲ್ಲದಿದ್ದರೂ ಅದ್ಭುತವಾದ ರಚನೆಗಳಾಗಿವೆ. ಇಂದಿಗೂ ಇಲ್ಲಿಯ ದೇವಾಲಯಗಳಿಗೆ ಬರುವ ಜನರಲ್ಲಿನ ಭಕ್ತಿ ಮತ್ತು ಶ್ರದ್ಧೆ ಆಕ್ರಮಣದ ಮುಂಚಿನಂತೆಯೇ ಹಾಗು ದಕ್ಷಿಣ ಭಾರತದಲ್ಲಿನಂತೆಯೇ ಅಚಲವಾಗಿದೆ.  

ಕೆಲವು ದಶಕಗಳ ಹಿಂದೆ ಒಬ್ಬ ಗೋಪಾಲಕನು ‘ದಿವ್ಯವಾದ’ ಲಿಂಗ ವನ್ನು ಕಂಡುಹಿಡಿದ. ಅದು  ಸ್ವಯಂ ವ್ಯಕ್ತ ದೇವಾಲಯವಾದ ಅಮರ್ ನಾಥ್  ಮಂದಿರವಾಯಿತು. ಅಂತೆಯೇ ಶಾಸ್ತ್ರ ಗ್ರಂಥಗಳ ಅಂಗೀಕಾರವಿಲ್ಲದೆ ಸ್ಥಾಪಿತವಾದ ವೈಷ್ಣವ್ ದೇವಿ ಮಂದಿರವೂ ಇಲ್ಲಿನ ಪ್ರಮುಖ ದೇವಾಲಯಗಳಲ್ಲೊಂದು. ಈ ಎರಡೂ ಸಹ ಬಹಳ ಶಕ್ತಿಶಾಲಿಯಾದ ದೇವಾಲಯಗಳು. 

ನನ್ನ ಸ್ವಂತ ನಗರವಾದ ಗ್ವಾಲಿಯರ್‌ನಲ್ಲಿ ‘ಗರ್ಗಜ್ ಕೆ ಹನುಮಾನ್‘ (ಗುಡುಗು ಮತ್ತು ಮಿಂಚಿನಿಂದ ಹೊರಬಂದ ಹನುಮಾನ್) ಅತ್ಯಂತ ಪ್ರಸಿದ್ಧವಾದ ದೇವಾಲಯಗಳಲ್ಲಿ ಒಂದಾಗಿದೆ. ಒಂದು ರಾತ್ರಿ ಬಿರುಗಾಳಿ ಎದ್ದು ಜೋರಾಗಿ ಮಿಂಚು-ಗುಡುಗು ಸಂಭವಿಸಿತು ಆಗ ಭಯಾನಕ ಶಬ್ದದೊಂದಿಗೆ ಪರ್ವತವು ಸೀಳಿಕೊಂಡು ಹನುಮಂತನ ರೂಪದಲ್ಲಿ ಒಂದು ಕಲ್ಲು ಬೆಟ್ಟದ ಮೇಲೆ ಹೊರಹೊಮ್ಮಿದ ಕಥೆ, ಈ ದೇವಸ್ಥಾನದ ಪ್ರಸಿದ್ಧವಾದ ಹಿನ್ನೆಲೆ. ಕೆಲವೇ ದಿನಗಳಲ್ಲಿ ಇದೊಂದು ಧಾರ್ಮಿಕ ಕೇಂದ್ರವಾಯಿತು. ಈ ದೇವಾಲಯವು ನಿಯಮಗಳ ಪ್ರತಿಪಾದಕವಲ್ಲ ಬದಲಿಗೆ ನಂಬಿಕೆಯ ಪವಿತ್ರ ಕೇಂದ್ರವಾಗಿದೆ.

ಹೀಗೆ ಒಂದು ಹಿಂದೂ ದೇವಾಲಯವು ಏಕಕಾಲದಲ್ಲಿ ಅನೇಕಾನೇಕ ರೂಪದಾಳಿದರು ಮುಖ್ಯವಾಗಿ ಅದೊಂದು ಪವಿತ್ರವಾದ ರಚನೆ. ಮೂಲಭೂತವಾಗಿ ಒಂದು ಮರದ ಕೆಳಗಿರುವ ವಿಗ್ರಹವೇ ದೇವಾಲಯ. ಒಂದು ಚಿತ್ರ ಅಥವಾ ಮೂರ್ತಿಯನ್ನು ಧ್ಯಾನಕ್ಕೆ ಅಗತ್ಯವಾದ ಮಾಧ್ಯಮ ಎಂದು ಪರಿಗಣಿಸಲಾಗುತ್ತದೆ. ಅದು ಅನುಕೂಲಕ್ಕೆ ತಕ್ಕಂತೆ ಮೂರ್ತ ರೂಪವಾದರೂ ಸರಿ ಇಲ್ಲವೇ ಅಮೂರ್ತವಾದರೂ ಸರಿಯೇ. ಧ್ಯಾನ ಮಾಧ್ಯಮವಾಗಿ ಆತ್ಮ ಜ್ಞಾನದ ಸಾಧನೆಯೇ  ಹಿಂದೂ ಗ್ರಂಥಗಳ ಮೂಲಭೂತ ಉದ್ದೇಶವಾಗಿದ್ದು, ಅತಿ ಚಿಕ್ಕದಾದ ಮತ್ತು ಸರಳವಾದ ದೇವಾಲಯಗಳೂ ಕೂಡ ಈ ಉದ್ದೇಶ ಸಾಧನೆಯಲ್ಲಿ ನೆರವಾಗುತ್ತವೆ. ಈ ಒಂದು ಪ್ರಮುಖವಾದ ಅಂಶವನ್ನು ಗಮನದಲ್ಲಿ ಇಟ್ಟುಕೊಳ್ಳುತ್ತ ದೇವಾಲಯವೆಂಬ ಅದ್ಭುತದ ಅಧ್ಯಯನ ಮಾಡುವುದು ಸೂಕ್ತ. 

ಲೇಖಕರ (ಪಂಕಜ್ ಸಕ್ಸೆನಾ)  ಟಿಪ್ಪಣಿಗಳು ಮತ್ತು ಉಲ್ಲೇಖಗಳು 

 1. ನಾನು ಬೇರೆಡೆ ಹಿಂದೂ ದೇವಾಲಯದ ಪ್ರಾಚೀನತೆಯ ಬಗ್ಗೆ ಬರೆದಿದ್ದೇನೆ. ಈ ಲೇಖನವು ಹಿಂದೂ ದೇವಾಲಯ ಎಂದರೇನು ಎಂಬುದರ ಸಾರವನ್ನು ಚರ್ಚಿಸುತ್ತದೆ.
 2. ರಾಮಚಂದ್ರ ರಾವ್ ಎಸ್. ಕೆ.,  ದಿ ವಾಸ್ತು-ಶಿಲ್ಪ-ಕೋಶ : ಎನ್‌ಸೈಕ್ಲೋಪೀಡಿಯಾ ಆಫ್ ಹಿಂದೂ ಟೆಂಪಲ್ ಆರ್ಕಿಟೆಕ್ಚರ್ ಮತ್ತು ವಾಸ್ತು. ನವದೆಹಲಿ: ಡಿವೈನ್ ಬುಕ್ಸ್, 2012. ಸಂಪುಟ. I ಪು. 3.
 3. ಐಬಿಡ್.
 4. ರಾಮಚಂದ್ರ ರಾವ್ ಎಸ್. ಕೆ.,  ದಿ ವಾಸ್ತು-ಶಿಲ್ಪ-ಕೋಶ : ಎನ್‌ಸೈಕ್ಲೋಪೀಡಿಯಾ ಆಫ್ ಹಿಂದೂ ಟೆಂಪಲ್ ಆರ್ಕಿಟೆಕ್ಚರ್ ಮತ್ತು ವಾಸ್ತು. ನವದೆಹಲಿ: ಡಿವೈನ್ ಬುಕ್ಸ್, 2012. ಸಂಪುಟ. I ಪು. 50.
 5. ಐಬಿಡ್.
 6. ಗೋಪಿನಾಥ ರಾವ್ ಟಿ. ಎ., ಎಲಿಮೆಂಟ್ಸ್ ಆಫ್ ಹಿಂದೂ ಐಕಾನೋಗ್ರಫಿ. ನವದೆಹಲಿ: ಮೋತಿಲಾಲ್ ಬನಾರಸಿದಾಸ್, 1997. ಪು 1.
 7. ರಾಮಚಂದ್ರ ರಾವ್ ಎಸ್. ಕೆ.,  ದಿ ವಾಸ್ತು-ಶಿಲ್ಪ-ಕೋಶ : ಎನ್‌ಸೈಕ್ಲೋಪೀಡಿಯಾ ಆಫ್ ಹಿಂದೂ ಟೆಂಪಲ್ ಆರ್ಕಿಟೆಕ್ಚರ್ ಮತ್ತು ವಾಸ್ತು. ನವದೆಹಲಿ: ಡಿವೈನ್ ಬುಕ್ಸ್, 2012. ಸಂಪುಟ. II ಪು. 60.
 8. ರಾಮಚಂದ್ರ ರಾವ್ ಎಸ್. ಕೆ.,  ದಿ ವಾಸ್ತು-ಶಿಲ್ಪ-ಕೋಶ :  ಎನ್‌ಸೈಕ್ಲೋಪೀಡಿಯಾ ಆಫ್ ಹಿಂದೂ ಟೆಂಪಲ್ ಆರ್ಕಿಟೆಕ್ಚರ್ ಮತ್ತು ವಾಸ್ತು. ನವದೆಹಲಿ: ಡಿವೈನ್ ಬುಕ್ಸ್, 2012. ಸಂಪುಟ. I ಪು. 61.
 9. ರಾಮಚಂದ್ರ ರಾವ್ ಎಸ್. ಕೆ.,  ದಿ ವಾಸ್ತು-ಶಿಲ್ಪ-ಕೋಶ :  ಎನ್‌ಸೈಕ್ಲೋಪೀಡಿಯಾ ಆಫ್ ಹಿಂದೂ ಟೆಂಪಲ್ ಆರ್ಕಿಟೆಕ್ಚರ್ ಮತ್ತು ವಾಸ್ತು. ನವದೆಹಲಿ: ಡಿವೈನ್ ಬುಕ್ಸ್, 2012. ಸಂಪುಟ. II ಪು. 97.

(This is a translation of  an article written in English by Pankaj Saxena.)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.