close logo

ಕಥಾಮಾಲಿಕೆ – ಸುವರ್ಚಲೆ ಮತ್ತು ಶ್ವೇತಕೇತು

ಕಣ್ಣಿಲ್ಲದವನಾಗಿರಬೇಕು ಆದರೆ ಕುರುಡನಾಗಿರಬಾರದು

ಹಿಂದಿನ ದಿನ ಮಗಳು ಹೇಳಿದ ಈ ಮಾತುಗಳು ಮಹರ್ಷಿ ದೇವಲರ ನಿದ್ದೆ ಕೆಡಿಸಿಬಿಟ್ಟಿತ್ತು.  ಮುದ್ದಿನ ಮಗಳು ಕೇಳುವುದನ್ನೆಲ್ಲ ಕೊಡುವುದು ತಂದೆಯ ಕರ್ತವ್ಯ ಎಂದು ಧೃಡವಾಗಿ ನಂಬಿದ್ದ ಕೋಮಲ ಹೃದಯ ಅವರದ್ದು. ಆದರೆ ವಯಸ್ಸಿಗೆ ಬಂದ ಮಗಳು ಕೇಳಿದ ಇಂತಹ ವರನನ್ನು ಎಲ್ಲಿ ಹುಡುಕುವುದು ಎಂಬ ಗೊಂದಲದಲ್ಲಿ  ಇಡೀ ರಾತ್ರಿ ಕಳೆದಿದ್ದರು. ಗುರುಕುಲದ ವಿದ್ಯಾರ್ಥಿಗಳು ಆಗಲೇ ಅಗ್ನಿಹೋತ್ರಕ್ಕೆ ತಯಾರಿ ನಡೆಸುವ ಗದ್ದಲ ಕಿಟಕಿಯಿಂದಾಚೆ ಕೇಳಿಬರುತ್ತಿತ್ತು. ನಿದ್ದೆಗೆಟ್ಟರೂ ನಿತ್ಯಕರ್ಮಗಳು ನಡೆಯಲೇ ಬೇಕು. ಅನ್ಯಮನಸ್ಕರಾಗಿ ದೇವಲರು ತಮ್ಮ  ದಿನಚರಿಯನ್ನು ಪ್ರಾರಂಭಿಸಿದರು. ಸ್ನಾನ, ಆಹ್ನಿಕಗಳನ್ನು ಮುಗಿಸಿ ಮನೆಗೆ ಬಂದರೆ, ಎಂದಿನಂತೆ ಮುದ್ದಿನ ಸುವರ್ಚಲೆ ಆಗಲೇ ಅವರ ಪೂಜೆಗೆ ಎಲ್ಲ ಪರಿಕರಗಳನ್ನು ಜೋಡಿಸಿಬಿಟ್ಟಿದ್ದಾಳೆ. ಅಪ್ಪನ ಪ್ರತಿ ಚಲನವನ್ನು ಗಮನಿಸುವ ಅವಳ ಬೊಗಸೆ ಕಂಗಳು ಎಂದಿನಂತೆ ಹೊಳೆಯುತ್ತಿದೆ. ಮಂದಸ್ಮಿತ ಎಂದಿಗಿಂತ ಇಂದು ಹೆಚ್ಚು ಮಿನುಗುತ್ತಿದೆ.

ಅರೆ! ನನ್ನ ನಿದ್ದೆ ಕೆಡಿಸಿ ತಾನು ಆನಂದದಿಂದ ಇದ್ದಾಳೆ! ಇವಳು ಯಾವಾಗಲೂ ಹೀಗೆ. ಅಪ್ಪ ಎಂದೂ ತನ್ನ ಕೈ ಬಿಡುವುದಿಲ್ಲ ಎಂದು ಗೊತ್ತು.”  ಎಂದು ಮನಸ್ಸಿನಲ್ಲೇ ಅಂದುಕೊಂಡರು.

ಯಾವ ವಿಷಯಕ್ಕೂ ಉದ್ವೇಗಗೊಳ್ಳದೆ, ತಾಳ್ಮೆ ಮತ್ತು ವಿವೇಕದಿಂದ ವಿಚಾರ ಮಾಡುವ ಸ್ವಭಾವ ಅವಳದ್ದು ಎಂದು ದೇವಲರಿಗೆ ಚೆನ್ನಾಗಿ ಗೊತ್ತು. ತಂದೆಯ ಆಶ್ರಮದಲ್ಲಿ ಅವರ ಶಿಷ್ಯವೃಂದದ ಮಧ್ಯೆ ಬೆಳೆದ ಸುವರ್ಚಲೆ ವೇದಪಾಠಗಳನ್ನು ಕಲಿತು, ತನ್ನ ಹದಿನಾರನೇ ವಯಸ್ಸಿಗೆ ಸಕಲಶಾಸ್ತ್ರಪಾರಂಗತಳಾಗಿದ್ದಳು. ಆಶ್ರಮದ ಕಿರಿಯ ವಿದ್ಯಾರ್ಥಿಗಳಿಗೆ ಪಾಠ ಹೇಳುವುದರ ಜೊತೆಗೆ ಸ್ವಾಧ್ಯಾಯದಲ್ಲಿ ಮಗ್ನಳಾಗಿರುತ್ತಿದ್ದಳು.

ಹೀಗೊಂದು ದಿನ,  ಪ್ರಾಪ್ತ ವಯಸ್ಸಿಗೆ ಬಂದ ಮಗಳನ್ನು ತಮ್ಮ ಬಳಿಗೆ ಕರೆದು ದೇವಲರು ಹೀಗೆ ಕೇಳಿದ್ದರು,  “ಮಗಳೇ , ನೀನೇ  ನನಗೆ  ಕನ್ಯಾದಾನದ ಪುಣ್ಯ ಕರುಣಿಸಬೇಕು. ಹೇಳು ! ಯಾವ ರೀತಿಯ ವರ ನಿನಗೆ ಬೇಕು?” 

ಈ ಪ್ರಶ್ನೆಯ ಉತ್ತರವಾಗಿಯೇ ಸುವರ್ಚಲೆ ಆ ಒಗಟು ಹೇಳಿದ್ದು,

 “ನಾನು ವರಿಸುವವನು ಕಣ್ಣಿಲ್ಲದವನಾಗಿರಬೇಕು ಆದರೆ ಕುರುಡನಾಗಿರಬಾರದು. ಅಂತವನನ್ನು ನನಗೆ ನೀಡು

ಆ ಕ್ಷಣದಿಂದ ದೇವಲರು ಮಗಳ ಭವಿಷ್ಯದ ಆಲೋಚನೆಯಲ್ಲಿ ಮುಳುಗಿಬಿಟ್ಟರು. ವೇದವಾಕ್ಯಗಳನ್ನು ಬಹಳ ಶ್ರದ್ಧೆ ಮತ್ತು ಗೌರವಗಳಿಂದ ಪಾಲಿಸುವ ವ್ಯಕ್ತಿತ್ವ ಅವರದ್ದು. ಯಜುರ್ವೇದದಲ್ಲಿ ಸೂಚಿಸಿದಂತೆ, ‘ಬ್ರಹ್ಮಚರ್ಯವನ್ನು ಪಾಲಿಸಿದ  ಯೋಗ್ಯ ವಯಸ್ಸಿನ ಪುತ್ರಿಯು ಅವಳ ಆಯ್ಕೆಯಂತೆ  ಅವಳಷ್ಟೇ ವಿದ್ಯಾವಂತನಾದವನನ್ನು ಮದುವೆಯಾಗಬೇಕು(1)’  ಎಂದು ಅವರು ಚೆನ್ನಾಗಿ ಬಲ್ಲರು. ಸುವರ್ಚಲೆಯ ಆಯ್ಕೆಯ ಬಗ್ಗೆ ಅವರಿಗೆ ಯಾವ ಅನುಮಾನವೂ ಇಲ್ಲ. ಆದರೆ ಅವಳ ಒಗಟಿನ ಮಾತುಗಳು ಮಾತ್ರ  ಅವರನ್ನು ಆವರಿಸಿಬಿಟ್ಟಿತ್ತು.

ಅಪ್ಪಾ ! ಹೊತ್ತಾಯಿತಲ್ಲವೇ ನಿಮ್ಮ ಶಿಷ್ಯರು ಕಾಯುತ್ತಿರಬೇಕು

ಸುವರ್ಚಲೆ ಭುಜ ಮುಟ್ಟಿ ಹೇಳಿದಾಗ  ದೇವಲರು ಎಚ್ಚೆತ್ತರು. ಪೂಜೆಯನ್ನು ಮುಗಿಸಿ ಸರಸರನೆ  ಆಶ್ರಮದ ತರಗತಿಗಳ ಕಡೆ ಹೊರಟರು. ಸ್ವಲ್ಪ ದೂರ ನಡೆದು ಹಿಂದೆ ನೋಡುತ್ತಾರೆ, ಮುದ್ದಿನ ಸುವರ್ಚಲೆ ಬಾಗಿಲ ಬಳಿ ನಿಂತು ತಮ್ಮನ್ನೇ ನೋಡುತ್ತಿದ್ದಾಳೆ. ಅದೇ ಮುದ್ದಿನ ಕಂಗಳು. ಅದೇ ಮುಗುಳ್ನಗೆ !

ಪ್ರಕಾಂಡ ಪಂಡಿತರಾದ  ದೇವಲರಿಗೆ ಬೃಹತ್ ಶಿಷ್ಯ ವೃಂದವಿತ್ತು. ಅವರ ಆಶ್ರಮಕ್ಕೆ ದೇಶದ ಎಲ್ಲ ಕಡೆಯಿಂದ ಋಷಿಕುಮಾರರು, ರಾಜಕುಮಾರರು ಮತ್ತು ಇತರ ವಿದ್ಯಾರ್ಥಿಗಳು ಪ್ರತಿ ವರ್ಷವೂ ಬಂದು ಸೇರುತ್ತಿದ್ದರು. ಆ ದಿನ ಎಲ್ಲರನ್ನೂ ಒಟ್ಟು ಸೇರಿಸಿ ದೇವಲರು ಹೀಗೆ ಹೇಳಿದರು :

ಸಕಲಗುಣಸಂಪನ್ನೆಯೂ, ರೂಪವತಿಯೂ ಮತ್ತು ಸಕಲಶಾಸ್ತ್ರಕೋವಿದೆಯೂ ಆದ ಸುವರ್ಚಲೆಗೆ ಸೂಕ್ತ ವರನನ್ನು ಹುಡುಕುತ್ತಿದ್ದೇನೆ. ಈಗಲೇ ನೀವು ಸುತ್ತಮುತ್ತಲಿನ  ಮತ್ತು  ದೂರದ ಆಶ್ರಮಗಳಿಗೆ ಪ್ರಯಾಣ ಬೆಳೆಸಿ. ಮುಂದಿನ ಶುಭ ಮಹೂರ್ತದಲ್ಲಿ ಸುವರ್ಚಲೆಯು ತನಗೆ ಯೋಗ್ಯವಾದ ವರನನ್ನು ಆರಿಸುತ್ತಾಳೆ ಎಂಬ ಸುದ್ದಿ ಮುಟ್ಟಿಸಿ. ಪ್ರಾಪ್ತ ವಯಸ್ಸಿನ ವಿದ್ಯಾವಂತರಾದ ಋಷಿಕುಮಾರರಿಗೆ ಅಂದು ನಮ್ಮ ಆಶ್ರಮಕ್ಕೆ ಬರುವಂತೆ ಆಹ್ವಾನಿಸಿ” .

ತಮ್ಮ ಗುರುಗಳ ಅಪ್ಪಣೆಯಂತೆ ಶಿಷ್ಯರು ಎಲ್ಲ  ಆಶ್ರಮಗಳಿಗೆ  ಗುರುಗಳ ಸಂದೇಶವನ್ನು ತಲುಪಿಸಿ ಬಂದರು.

ಕೊನೆಗೊ ಆ ಶುಭ ಮಹೂರ್ತ ಬಂದೇಬಿಟ್ಟಿತು. ದೇವಲರು ತಮ್ಮ ಮನೆ ಬಾಗಿಲಿಗೆ ಬಂದ ನೂರಾರು ಋಷಿಕುಮಾರರನ್ನು ವಿಧಿವತ್ತಾಗಿ ಪೂಜಿಸಿ ಸ್ವಾಗತಿಸಿದರು. ಅವರನ್ನೆಲ್ಲ ಸೂಕ್ತ  ಆಸನಗಳಲ್ಲಿ ಕೂರುವಂತೆ ಹೇಳಿ  ತಮ್ಮ ಮುದ್ದಿನ ಮಗಳಾದ ಸುವರ್ಚಲೆಯನ್ನು ಕರೆದು  ಹೀಗೆಂದರು –

ಮಗಳೇ, ಇವರೆಲ್ಲರೂ ವಿದ್ಯಾವಂತರು ಮತ್ತು ಶಾಸ್ತ್ರಗಳನ್ನು ಬಲ್ಲವರು. ಇವರಲ್ಲಿ ನಿನಗೆ ಬೇಕಾದವನನ್ನು ಆರಿಸಿಕೊ . ನಾನು ನಿನ್ನ ಕನ್ಯಾದಾನ ಮಾಡುತ್ತೇನೆ

ಆಶ್ರಮಕ್ಕೆ ಬಂದ ಅತಿಥಿಗಳಿಗೆ ನಮಸ್ಕರಿಸಿದ ಸುವರ್ಚಲೆ ಶಾಂತಮನಸ್ಕಳಾಗಿ ಎಲ್ಲರಿಗೂ ಕೇಳುವಂತೆ ಉಚ್ಚ ಕಂಠದಿಂದ ನುಡಿದಳು

ನಮಸ್ಕಾರಗಳು. ಮಹರ್ಷಿ ದೇವಲರ ಆಶ್ರಮಕ್ಕೆ ನಿಮಗೆ ಸ್ವಾಗತ. ನಿಮ್ಮಲಿ ಯಾವ ಋಷಿಕುಮಾರನು  ಕಣ್ಣಿಲ್ಲದವನಾಗಿಯೂ ಕುರುಡನಲ್ಲವೊ  ಅಂತಹ ಋಷಿಕುಮಾರನು ದಯವಿಟ್ಟು  ಮುಂದೆ ಬರಬೇಕು. ”

ಈ ವಿಚಿತ್ರ ಮಾತನ್ನು ಕೇಳಿದ ಋಷಿಕುಮಾರರು ಒಂದು ಕ್ಷಣ ಅವಾಕ್ಕಾದರು.  ಯಾರೂ ಮುಂದೆ ಬರಲಿಲ್ಲ. ಕೆಲವರಿಗೆ ಕೋಪವೂ ಬಂತು. “ಇದೊಂದು ಮಂಕುಹೆಣ್ಣು” “ಭಾರಿ ಜಂಭ” “ಇವಳು ಯಾವ ಸೀಮೆ ಅಪ್ಸರೆ”  ಹೀಗೆಲ್ಲಾ  ಬಾಯಿಗೆ ಬಂದಂತೆ ತೆಗಳಿ ಹೊರಟು ಹೋದರು.

ಮಾಸಗಳು ಕಳೆಯಿತು. ದೇವಲರ ಆತಂಕ ಹೆಚ್ಚುತ್ತಲೇಯಿತ್ತು . ಆದರೆ ಸುವರ್ಚಲೆ ಮಾತ್ರ  ನಡೆದ ಯಾವ ವಿಷಯಕ್ಕೂ ಕಿಂಚಿತ್ತೂ ಬೇಸರಗೊಳ್ಳದೆ ತಂದೆಯ ಆಶ್ರಯದಲ್ಲೇ ತನ್ನ  ಪಾಠ ಮತ್ತು ಸ್ವಾಧ್ಯಾಯಗಳ ಕಡೆಗೆ ಗಮನಹರಿಸಿದಳು.

ಹೀಗಿರುವಾಗ ಒಂದು ದಿನ ಬ್ರಹ್ಮತೇಜಸ್ಸು ಕಂಗೊಳಿಸುತ್ತಿದ್ದ  ಋಷಿಕುಮಾರನೊಬ್ಬನು  ದೇವಲರ ಆಶ್ರಮಕ್ಕೆ ಬಂದು ತನ್ನ ಪರಿಚಯ ಹೇಳಿಕೊಂಡನು. ಗೌತಮಋಷಿಗಳ  ವಂಶದವನಾದ ಇವನ  ಹೆಸರು ಶ್ವೇತಕೇತು. ತಂದೆಯ ಹೆಸರು ಉದ್ದಾಲಕ ಋಷಿ. ಈಗಾಗಲೇ ಶ್ವೇತಕೇತು ಸಾಕಷ್ಟು ಹೆಸರುಗಳಿಸಿದ್ದ. ನ್ಯಾಯವಿಶಾರದನೂ ಸರ್ವಶಾಸ್ತ್ರಪಾರಂಗತನೂ ಆದ ಶ್ವೇತಕೇತುವಿಗೆ ಒಗಟುಗಳೆಂದರೆ ಬಹಳ ಇಷ್ಟ. ತನ್ನ ತಂದೆಯವರಿಂದ ತತ್ತ್ವಮಸಿ ಜ್ಞಾನದ ಬೋಧನೆ ಪಡೆದಿದ್ದ ಶ್ವೇತಕೇತುವಿನ ಬಗ್ಗೆ ಮುನ್ನವೇ ಅರಿತಿದ್ದ ದೇವಲರಿಗೆ ಅತ್ಯಂತ ಸಂತೋಷವಾಯಿತು. [ಶ್ವೇತಕೇತು-ಉದ್ದಾಲಕರ ಕಥೆಯನ್ನು ಇಲ್ಲಿ ಓದಬಹುದು]

ವಿಧಿಪೂರ್ವಕವಾಗಿ ಅವನನ್ನು ಸ್ವಾಗತಿಸಿ  ತಮ್ಮ ಮುದ್ದಿನ ಮಗಳನ್ನು ಕರೆದು ಹೀಗೆಂದರು –

ಮಗಳೇ! ಇವನೇ  ಶ್ವೇತಕೇತು. ಮಹಾಪ್ರಾಜ್ಞನಾದ ಇವನನ್ನು ನೀನು ವರಿಸಬಹುದು

ತಂದೆಯ ಅತಿ ಉತ್ಸಾಹದ ಮಾತುಗಳನ್ನು ಕೇಳಿದ ಸುವರ್ಚಲೆಗೆ ನಗುವಿನ ಜೊತೆ ಸ್ವಲ್ಪ ಕೋಪವೂ ಬಂತು. ಶ್ವೇತಕೇತುವಿನ ಬಗ್ಗೆ ಅವಳಿಗೆ ತಿಳಿದಿಲ್ಲವೆಂದೇನಿಲ್ಲ. ಆದರೆ ತನ್ನ ಒಗಟಿನ ವಿಷಯವೇ ಎತ್ತದೆ ಇವನನ್ನೇ  ತಾನು ವರಿಸಬಹುದು ಎಂದು ತಂದೆಯವರು ಹೇಗೆ ನಿರ್ಧರಿಸಿದರು ಎಂಬ ಸಿಟ್ಟು ಅವಳಿಗೆ.

ಸುವರ್ಚಲೆಯ ಗಂಟಿಕ್ಕಿದ ಹುಬ್ಬುಗಳನ್ನು ಗಮನಿಸಿದ ಶ್ವೇತಕೇತು,  “ಸುಂದರಿ, ನನಗೆ ಕಣ್ಣುಗಳಿಲ್ಲ ಆದರೆ ನಾನು ಕುರುಡನಲ್ಲ ಎಂದುಬಿಟ್ಟ.

ಈ ಮಾತುಗಳನ್ನು ಕೇಳಿದ ಸುವರ್ಚಲೆಗೆ  ನಾಚಿಕೆಯ ಜೊತೆಗೆ ಸಂತೋಷವೂ ಆಯಿತು. ಆದರೂ ತನ್ನ ಭಾವನೆಗಳನ್ನು ತೋರಗೊಡದೆ, ಸುಂದರ ವಿಶಾಲನೇತ್ರನಾದ ನೀನು ನನ್ನನು ಸುಂದರಿ ಎಂದು ಕರೆಯುತ್ತಿದ್ದೀಯ .ಅದು ಹೇಗೆ ನೀನು ಕಣ್ಣಿಲ್ಲದವನು ಎಂದು ಹೇಳಿಬಿಟ್ಟೆ? ವಿವರವಾಗಿ ತಿಳಿಸುವೆಯಾ?”  ಎಂದು ಕೇಳಿದಳು (2).

ಆಗ ಶ್ವೇತಕೇತು ಮುಗುಳ್ನಕ್ಕು  ಹೀಗೆ ಹೇಳಿದ –

ಶಬ್ದ, ಸ್ಪರ್ಶ, ರೂಪ, ರಸ, ಗಂಧ ವೆಂಬ ಪಂಚತನ್ಮಾತ್ರಗಳಿಂದ ಕೂಡಿದ ಜೀವಾತ್ಮವು ಪರಮಾತ್ಮನ ಕಾರಣದಿಂದಲೇ ಅಸ್ತಿತ್ವದಲ್ಲಿದೆ. ಪರಮಾತ್ಮನ ಕಾರಣದಿಂದಲೇ ನನಗೆ ಎಲ್ಲವೂ ಕಾಣಿಸುತ್ತದೆ, ಕೇಳಿಸುತ್ತದೆ. ಆದರೆ ನನ್ನ ಕಣ್ಣುಗಳು (ಚಕ್ಷು) ನನ್ನವಲ್ಲ. ವಸ್ತುತಃ ಎಲ್ಲವನ್ನೂ ಅವನೇ ನೋಡುತ್ತಾನೆ. ನಾನಲ್ಲ. ಹಾಗಾಗಿ ಕಣ್ಣುಗಳು ನನ್ನವಲ್ಲ. ಹೀಗಾಗಿಯೇ ನನಗೆ ಕಣ್ಣುಗಳಿಲ್ಲ ಎಂದು ಹೇಳಿದೆ “. (3)

ಇವನ ಮಾತುಗಳನ್ನು ಕೇಳಿ ಸುವರ್ಚಲೆ ಮತ್ತು ದೇವಲರು  ಬೆರಗಾದರು. ಶಾಂತಚಿತ್ತನಾಗಿ ಶ್ವೇತಕೇತು ತನ್ನ ವಿವರಣೆಯನ್ನು ಮುಂದುವರೆಸಿದ.

ಭದ್ರೆ! ಪರಮಾತ್ಮನ ಕಾರಣದಿಂದಲೇ ನನ್ನ ಸುತ್ತಲಿನ ಜಗತ್ತಿನ ಅನುಭೂತಿ ನನಗೆ ಸಾಧ್ಯ ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ. ವಿಷಯವು ನನಗೆ ಸ್ಫುಟವಾಗಿ ಕಾಣುತ್ತದೆ. ಹಾಗಾಗಿ ನಾನು ಕುರುಡನಲ್ಲ”  (3)

ಶ್ವೇತಕೇತುವಿನ ಮಾತುಗಳನ್ನು ಕೇಳಿದ ಸುವರ್ಚಲೆ ಅತ್ಯಂತ ಸಂತುಷ್ಟಳಾದಳು. ಬಹಳ ಕಾಲದಿಂದ ಮಾಯವಾಗಿದ್ದ ದೇವಲರ  ಮುಗುಳ್ನಗೆ ಅವರ  ವದನಕ್ಕೆ ಮರಳಿ ಬಂತು.

ಹೀಗೆ ಸುವರ್ಚಲೆ ಶ್ವೇತಕೇತುವಿನ ಸಹಧರ್ಮಿಣಿಯಾಗಿ ದೀರ್ಘಕಾಲ ಸುಖಸಂತೋಷಗಳಿಂದ  ಗೃಹಸ್ಥಾಶ್ರಮದಲ್ಲಿ ಬಾಳಿ ಬದುಕಿದಳು.

ಉಲ್ಲೇಖಗಳು

1. ಉಪಾಯಾಮಗೃಹೀತೋಸ್ಯಾದಿತ್ಯೇಭ್ಯಸ್ತ್ವಾ ವಿಷ್ಣೋಉರುಗಾಯೈಷ ತೆ ಸೋಮಸ್ತ ರಕ್ಷಸ್ವ  ಮಾ ತ್ವಾ ದಬನ್  ॥१॥  

 उ॒प॒या॒मगृ॑हीतोऽस्यादि॒त्येभ्य॑स्त्वा। विष्ण॑ऽउरुगायै॒ष ते॒ सोम॒स्तꣳ र॑क्षस्व॒ मा त्वा॑ दभन्॥१ [ಯಜುರ್ವೇದ (8.1)]

2. ಕಥಂ ವಿಶಾಲನೇತ್ರೋಽಸಿ ಕಥಂ ವಾ ತ್ವಮಲೋಚನಃ

ಬ್ರೂಹಿ ಪಶ್ಚಾದಹಂ ವಿದ್ವನ್ಪರೀಕ್ಷೇ ತ್ವಾಂ ದ್ವಿಜೋತ್ತಮ 12-228-29 (ಮಹಾಭಾರತ, ಶಾಂತಿಪರ್ವ)

 3. ಶಬ್ದೇ ಸ್ಪರ್ಶೇ ತಥಾ ರೂಪೇ ರಸೇ ಗಂಧೇ ಸಹೇತುಕಂ।

ನ ಮೇ ಪ್ರವರ್ತತೇ ಚೇತೋ ನ ಪ್ರತ್ಯಕ್ಷಂ ಹಿ ತೇಷು ಮೇ।

ಅಲೋಚನೋಽಹಂ ತಸ್ಮಾದ್ಧಿ ನ ಗತಿರ್ವಿದ್ಯತೇ ಯತಃ॥ 12-228-30(ಮಹಾಭಾರತ, ಶಾಂತಿಪರ್ವ)

ಯೇನ ಪಶ್ಯತಿ ಸುಶ್ರೋಣಿ ಭಾಷತೇ ಸ್ಪೃಶತೇ ಪುನಃ।

ಭುಜ್ಯತೇ ಘ್ರಾಯತೇ ನಿತ್ಯಂ ಶೃಣೋತಿ ಮನುತೇ ತಥಾ॥ 12-228-31(ಮಹಾಭಾರತ, ಶಾಂತಿಪರ್ವ)

ತಚ್ಚಕ್ಷುರ್ವಿದ್ಯತೇ ಮಹ್ಯಂ ಯೇನ ಪಶ್ಯತಿ ವೈ ಸ್ಫುಟಂ।

ಸುಲೋಚನೋಽಹಂ ಭದ್ರೇ ವೈ ಪೃಚ್ಛ ವಾ ಕಿಂ ವದಾಮಿ ತೇ।

ಸರ್ವಮಸ್ಮಿನ್ನ ಮೇ ವಿದ್ಯಾ ವಿದ್ವಾನ್ಹಿ ಪರಮಾರ್ಥತಃ॥ 12-228-32(ಮಹಾಭಾರತ, ಶಾಂತಿಪರ್ವ)

ವರ್ಣಚಿತ್ರ : ವಿದ್ಯಾ ಓಂಪ್ರಕಾಶ್

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply