ಶ್ವೇತಕೇತು, ಮಹರ್ಷಿ ಉದ್ದಾಲಕರ ಏಕೈಕ ಪುತ್ರ. ಪಾಠಕ್ಕಿಂತ ಆಟವೇ ಹೆಚ್ಚು ಮುಖ್ಯ ಅವನಿಗೆ. ಉದ್ದಾಲಕರಿಗೆ ಇವನ ಭವಿಷ್ಯದ ಚಿಂತೆ ಯಾವಾಗಲೂ ಕಾಡುತ್ತಿತ್ತು. ಸ್ವತಃ ಸರ್ವಶಾಸ್ತ್ರಕೋವಿದರಾದ ಅವರ ಆಶ್ರಮದಲ್ಲಿ ಬಹಳ ವಿದ್ಯಾರ್ಥಿಗಳಿದ್ದರೂ ತಮ್ಮ ಹನ್ನೆರಡು ವರ್ಷದ ಮಗನನ್ನು ದೂರದ ಗುರುಕುಲವೊಂದಕ್ಕೆ ಕಳಿಸಿ ಕೊಟ್ಟರು. ಗುರುಕುಲದಲ್ಲಿ ಹನ್ನೆರಡು ವರ್ಷಗಳ ಕಠಿಣ ಅಭ್ಯಾಸ ನಡೆಸಿ, ಎಲ್ಲ ಶಾಸ್ತ್ರಗಳ ಪಾಂಡಿತ್ಯ ಪಡೆದ ಶ್ವೇತಕೇತು ಸ್ವಗೃಹಕ್ಕೆ ಮರಳಿದ.
ಬೆಳೆದು ನಿಂತ ಮಗನನ್ನು ತಬ್ಬಿ ಹಿಡಿದ ಉದ್ದಾಲಕರು “ಏನೆಲ್ಲಾ ಕಲಿತೆ ಮಗನೆ?” ಎಂದು ಪ್ರೀತಿಯಿಂದ ಕೇಳಿದರು. ಯೌವ್ವನ ಸಹಜ ಮನೋಭಾವದಿಂದ ಶ್ವೇತಕೇತು “ಏನೆಲ್ಲಾ ಅಂದರೆ…..ಇರುವುದೆಲ್ಲಾ ಕಲಿತುಬಿಟ್ಟೆ” ಎಂದು ಬೀಗಿದ. ಮಗನ ಈ ಅಹಂಕಾರದ ಮಾತು ಕೇಳಿ ಉದ್ದಾಲಕರಿಗೆ ನಿರಾಸೆಯಾಯಿತು.
ಆದರೂ ಧೃತಿಗೆಡದೆ “ಹಾಗೇನು? ನನ್ನದೊಂದು ಪ್ರಶ್ನೆಯಿದೆ – ಯಾವ ವಿದ್ಯೆಯನ್ನು ಪಡೆದರೆ ಕೇಳಿಸದಿದ್ದನ್ನೂ ಆಲಿಸಬಹುದು? ಕಾಣದಿದ್ದನ್ನೂ ನೋಡಬಹುದು ಮತ್ತು ಅಜ್ಞಾತವನ್ನೂ ಅರಿತುಕೊಳ್ಳಬಹುದು?” (1)
ತಂದೆಯ ಒಗಟಿನ ಮಾತು ಕೇಳಿ ಶ್ವೇತಕೇತು ಒಂದು ಕ್ಷಣ ತಬ್ಬಿಬ್ಬಾದ. ಅವರ ಪ್ರಶ್ನೆಗಳಿಗೆ ಉತ್ತರವಿರಲಿ ಅವರು ಪ್ರಶ್ನೆಗಳೇ ಅರ್ಥವಾಗದೆ ತಲೆತಗ್ಗಿಸಿ ನಿಂತ. ವಿನಯದಿಂದ ಅವರ ಕಾಲುಗಳನ್ನು ಮುಟ್ಟಿ, ಈ ಪ್ರಶ್ನೆಗಳನ್ನು ಉತ್ತರಿಸುವ ಜ್ಞಾನವನ್ನು ಕರುಣಿಸಬೇಕಾಗಿ ಕೇಳಿಕೊಂಡ.
“ಮಗು, ಚಿಕ್ಕಂದಿನಲ್ಲಿ ಮಣ್ಣಿನ ಆಟಸಾಮಾನುಗಳೊಂದಿಗೆ ಆಡಿದ ನೆನಪುಂಟೆ? ಅದೇ ಮಣ್ಣಿನ ಮಡಿಕೆ ಮತ್ತು ಇತರ ಪರಿಕರಗಳನ್ನು ಸಹ ನೀನು ಚೆನ್ನಾಗಿ ಬಲ್ಲೆ. ಎಲ್ಲವಕ್ಕೂ ಬೇರೆ ಬೇರೆ ಹೆಸರಿದ್ದರೂ ಎಲ್ಲವೂ ಬರಿ ಮಣ್ಣೆ ಎನ್ನುವುದೇ ಸತ್ಯ. ಅದೇ ರೀತಿಯಲ್ಲಿ ಹೊನ್ನು ಕೂಡ. ವಿವಿಧ ಬಗೆಯ ಚಿನ್ನದ ವಸ್ತುಗಳ ಮೂಲಕ ಚಿನ್ನದ ಬಗ್ಗೆ ತಿಳಿದುಕೊಳ್ಳಬಹುದು. ಅವುಗಳ ನಡುವಿನ ವ್ಯತ್ಯಾಸ ಮಾತಿಗಾಗಿ ನಾವು ಕರೆಯುವ ಹೆಸರು ಮಾತ್ರ. ಮೂಲವಾಗಿ ಎಲ್ಲವೊ ಬರಿ ಚಿನ್ನವೇ ಅಲ್ಲವೇ. ಹೀಗೆಯೆ ಕಬ್ಬಿಣವೂ ಸಹ. ಹೀಗೆ ಒಂದರ ಜ್ಞಾನದಿಂದ ಎಲ್ಲದರ ಜ್ಞಾನವನ್ನು ತಿಳಿದುಕೊಳ್ಳಬಹುದು. ಇದೇ ಪ್ರಶ್ನೆಯನ್ನು ನಾನು ನಿನಗೆ ಕೇಳಿದ್ದು.” (2)(3)
ಶ್ವೇತಕೇತು ಮೈಯೆಲ್ಲಾ ಕಿವಿಯಾಗಿ ತಂದೆಯ ಮಾತುಗಳನ್ನು ಕೇಳುತ್ತಿದ್ದ. ತಾನು ಕಲಿತ ವಿದ್ಯೆಗಳಲ್ಲವೂ ಅವನಿಗೆ ಈಗ ಹೊಸ ಬೆಳಕಿನಲ್ಲಿ ಗೋಚರಿಸುತ್ತಿತ್ತು.
ಉದ್ದಾಲಕರು ಮುಂದುವರೆಸಿದರು , ” ಮಗು, ಜಗತ್ತಿನ ಪ್ರಾರಂಭದಲ್ಲಿ ಕೇವಲ ಒಂದು ಏಕಮೇವ ಅದ್ವಿತೀಯ ರೂಪವಿತ್ತು. ಈ ರೂಪವು ಹಲವು ರೂಪಗಳಾಗ ಬಯಸಿತು. ಮೊದಲಿಗೆ ಅದು ಅಗ್ನಿಯ ರೂಪ ತಳೆಯಿತು. ಅಗ್ನಿಯ ನಂತರ ಜಲರೂಪ ತಳೆದು ತದನಂತರ ಆಹಾರದ ರೂಪ ತಳೆಯಿತು. ಹೀಗೆ ಒಂದರ ನಂತರ ಮತ್ತೊಂದು ರೂಪದಲ್ಲಿ ವಿವಿಧ ಬಗೆಯ ಆಕಾರ, ಗುಣಗಳನ್ನು ಈ ಜಗತ್ತಿನಲ್ಲಿ ವೈವಿಧ್ಯಮಯವಾಗಿ ಮೈದಾಳಿದವು. ಇದೆಲ್ಲದರ ನಂತರ ಜೀವದ ಸೃಷ್ಟಿಯಾಯಿತು ಮತ್ತು ಜೀವಿಗಳಲ್ಲಿ ಅತ್ಯಂತ ಶಕ್ತಿಶಾಲಿಯೂ ಮತ್ತು ಕ್ರಿಯಾಶೀಲನಾದ ಮಾನವನ ಜನ್ಮವಾಯಿತು.” (4)
ಗುರುಕುಲದಲ್ಲಿ ಈ ವಿಷಯಗಳನ್ನು ಅಧ್ಯಯನ ಮಾಡಿದ್ದ ಶ್ವೇತಕೇತುವಿನ ಮನಸ್ಸಿನಲ್ಲಿ ಒಂದು ಪ್ರಶ್ನೆ ಎದ್ದಿತ್ತು. ಉದ್ದಾಲಕರ ಮಾತಿಗೆ ಅಡ್ಡಹಾಕಿ “ತಂದೆ, ನೀವು ಮುಂದೆ ಹೇಳುವ ಮೊದಲು ನನ್ನ ಪ್ರಶ್ನೆಗೆ ಉತ್ತರಿಸಬೇಕು – ಕ್ರಿಯಾಶೀಲನಲ್ಲದ ಮನುಷ್ಯನು ಮನುಷ್ಯನಲ್ಲವೇ? ಮನುಷ್ಯ ಮಲಗಿದ್ದಾಗ ಅವನಿಗೂ ಬೇರೆ ಮಲಗಿರುವ ಪ್ರಾಣಿಗಳಿಗೂ ಏನು ವ್ಯತ್ಯಾಸ? ” ಎಂದು ಕೇಳಿದ.
ಮನುಷ್ಯನು ಮಲಗಿದಾಗ ಅವನ ಚೇತನವು ಪರಮಾತ್ಮನಲ್ಲಿ ಒಂದಾಗುತ್ತದೆ. ಮನುಷ್ಯನ ಮನಸ್ಸು ಗೂಟಕ್ಕೆ ಕಟ್ಟಿದ ಪಶುವಿನಂತೆ. ಎಷ್ಟು ಓಡಾಡಿದರೂ ಗೂಟದ ಸುತ್ತವೇ ತಿರುಗುತ್ತಿರುತ್ತಾನೆ. ಅವನು ಮೃತ್ಯುವಿನ ಬಳಿಕ ಮೊದಲು ಅವನ ವಾಕ್ ಶಕ್ತಿ ಅವನ ಮನಸ್ಸಿನಲ್ಲಿ ಲೀನವಾಗಿ, ಅವನ ಮನಸ್ಸು ಪ್ರಾಣದಲ್ಲಿ ಲೀನವಾಗಿ, ಪ್ರಾಣವು ಪರಂಜ್ಯೋತಿಯಲ್ಲಿ ಮತ್ತು ಪರಂಜ್ಯೋತಿ ದೈವಿಕ ಶಕ್ತಿಯಲ್ಲಿ ಶಾಶ್ವತವಾಗಿ ಲೀನವಾಗುತ್ತದೆ. ಸರ್ವವ್ಯಾಪಿಯಾದ ಈ ದೈವಿಕ ಶಕ್ತಿಯು ಬಹಳ ಸೂಕ್ಷ್ಮವಾದದ್ದು. ಅದೇ ಸತ್ಯ. ಅದೇ ಚೇತನ. ಅದೇ ಆತ್ಮದ ನಿಜಸ್ವರೂಪ. ಓ ಶ್ವೇತಕೇತು, ಅದೇ ನೀನು (ತತ್ತ್ವಮಸಿ)” (5) (6)
ಈ ಮಾತುಗಳನ್ನು ಕೇಳಿದ ಶ್ವೇತಕೇತುವಿಗೆ ಮತ್ತೂ ತಿಳಿದುಕೊಳ್ಳುವ ತವಕ. ಉದ್ದಾಲಕ ಹಲವು ಉದಾಹರಣೆಗಳ ಮೂಲಕ ಈ ಸರ್ವವ್ಯಾಪಿಯಾದ ದೈವಿಕ ಶಕ್ತಿಯ ಬಗ್ಗೆ ವಿವರಿಸುತ್ತಾರೆ.
“ಮಗನೆ, ದುಂಬಿಯು ಬೇರೆ ಬೇರೆ ಹೂವುಗಳಿಂದ ಮಕರಂದವನ್ನು ಹೀರಿ ತಂದು ಜೇನುಗೂಡಿನಲ್ಲಿ ಶೇಖರಿಸುತ್ತದೆ ಅಲ್ಲವೇ. ಗೂಡಿನಲ್ಲಿ ಸೇರಿದ ಮಕರಂದದ ಬಿಂಧುಗಳಿಗೆ ತಾವು ಯಾವ ಹೂವಿನಿಂದ ಬಂದೆವು ಎಂಬ ಅರಿವಿದೆಯೇ? ಅದನ್ನು ಅರಿಯುವ ಅವಶ್ಯಕತೆಯಾದರೂ ಇದೆಯೇ? ಹಾಗೆಯೇ ಎಲ್ಲ ಜೀವಿಗಳೂ ಆ ಸರ್ವವ್ಯಾಪಿಯಾದ ದಿವ್ಯ ಶಕ್ತಿಯಲ್ಲಿಯೇ ಅಂತಿಮವಾಗಿ ಲೀನವಾಗುತ್ತವೆ. ಅದೇ ಸತ್ಯ. ಅದೇ ಚೇತನ. ಅದೇ ಆತ್ಮದ ನಿಜಸ್ವರೂಪ. ಓ ಶ್ವೇತಕೇತು, ಅದೇ ನೀನು (ತತ್ತ್ವಮಸಿ)” (7)(6)
ಉದ್ದಾಲಕರು ಮುಂದುವರೆದು ಹಲವು ನದಿಗಳು ತಮ್ಮ ಗುರುತನ್ನು ತೊರೆದು ಸಾಗರವನ್ನು ಸೇರುವ ಉದಾಹರಣೆ ನೀಡುತ್ತಾರೆ.
“ಹೇಗೆ ಒಂದು ವೃಕ್ಷದ ರೆಂಬೆಯನ್ನು ಕಡಿದ ಮಾತ್ರಕ್ಕೆ ಇಡೀ ವೃಕ್ಷವು ಜೀವಂತವಾಗಿರುತ್ತದೆ? ವೃಕ್ಷದ ಕಡಿದ ಭಾಗವಷ್ಟೇ ಜೀವ ಕಳೆದುಕೊಳ್ಳುತ್ತದೆ. ಹಾಗೆಯೆ ಯಾವುದು ಜೀವ ಕಳೆದುಕೊಳ್ಳುತ್ತದೆಯೋ ಅದಕ್ಕೆ ಸಾವು ನಿಶ್ಚಯವೇ ಆದರೂ ಜೀವಕ್ಕೆ ಸಾವಿಲ್ಲ. ಈ ಸಾವು ಅರಿಯದ ಜೀವವೇ ಆತ್ಮ.ಅದೇ ಸತ್ಯ. ಅದೇ ಚೇತನ. ಅದೇ ಆತ್ಮದ ನಿಜಸ್ವರೂಪ. ಓ ಶ್ವೇತಕೇತು, ಅದೇ ನೀನು (ತತ್ತ್ವಮಸಿ)”. (8)(6)
ತಂದೆಯ ಮಾತುಗಳನ್ನು ಸೂಕ್ಷ್ಮವಾಗಿ ಗ್ರಹಿಸಿದ ಶ್ವೇತಕೇತು, ಹೀಗೆ ಕೇಳುತ್ತಾನೆ : “ನನ್ನ ಪೂಜನೀಯ ಗುರುಗಳಿಗೆ ಈ ವಿಷಯಗಳು ತಿಳಿದಿಲ್ಲ ಎಂದು ನನಗೆ ಈಗ ಅನ್ನಿಸುತ್ತಿದೆ. ಅವರಿಗೆ ತಿಳಿದಿದ್ದರೆ ನನಗೆ ಖಂಡಿತವಾಗಿಯೂ ಕಲಿಸುತ್ತಿದ್ದರು. ನೀವು ನನಗೆ ಇನ್ನೂ ಹೆಚ್ಚಿನ ಜ್ಞಾನವನ್ನು ತಿಳಿಹೇಳಬೇಕು, ಅಪ್ಪಾ ”
ಅಹಂಕಾರದ ಪ್ರವೃತ್ತಿಯನ್ನು ಕಳಚಿ ವಿನಯಪೂರ್ವಕನಾಗಿ ಬೇಡುತ್ತಿರುವ ಮಗನ ಕೋರಿಕೆಗೆ ಉದ್ದಾಲಕರು ಸಂತೋಷವಾಗಿ ಒಪ್ಪುತ್ತಾರೆ. ತಂದೆ ಮಗನ ಸಂವಾದ ಹೀಗೆ ಮುಂದುವರೆಯುತ್ತದೆ.
ಉದ್ದಾಲಕರು : “ಆಲದ ಮರದಿಂದ ಒಂದು ಹಣ್ಣನ್ನು ತಾ ”
ಶ್ವೇತಕೇತು : “ಇಗೋ ಇಲ್ಲಿದೆ”
ಉದ್ದಾಲಕರು : “ಇದನ್ನು ಕತ್ತರಿಸಿ ಒಳಗೇನಿದೆ ನೋಡು ”
ಶ್ವೇತಕೇತು : ” ಸಣ್ಣ ಸಣ್ಣ ಬೀಜಗಳು ”
ಉದ್ದಾಲಕರು : “ಒಂದು ಬೀಜವನ್ನು ಕತ್ತರಿಸಿ ಅದರ ಒಳಗೇನಿದೆ ನೋಡಿ ಹೇಳು”
ಶ್ವೇತಕೇತು : “ಏನೂ ಕಾಣುತ್ತಿಲ್ಲ , ತಂದೆ”
ಉದ್ದಾಲಕರು : “ಮಗನೆ, ನೀನು ಹೇಳುವುದು ಸರಿ. ನಿನ್ನ ಕಣ್ಣುಗಳಿಗೆ ಗೋಚರಿಸದ ಅಣುಗಾತ್ರದ ಸೂಕ್ಷ್ಮ ಅಂಶವು ಈ ಬೀಜದ ಒಳಗಿದೆ. ಇದೇ ಅಗೋಚರವಸ್ತುವಿನ ಕಾರಣದಿಂದಲೇ ಈ ಸ್ಥೂಲವಾದ ಆಲದ ಮರ ಬೆಳೆದು ನಿಂತಿದೆ. ಹಾಗೆಯೇ ಸೂಕ್ಷ್ಮವಾದ ಅಂಶದಿಂದಲೇ ನಾಮರೂಪಾದಿಗಳುಳ್ಳ ಜಗತ್ತು ಹುಟ್ಟಿದೆ. ಅದೇ ಸತ್ಯ. ಅದೇ ನಾನು. ಶ್ವೇತಕೇತು, ಅದೇ ನೀನು (ತತ್ತ್ವಮಸಿ) (9)(6)
ಶ್ವೇತಕೇತು : ಈ ಸೂಕ್ಷ್ಮ ಅಂಶದ ಬಗ್ಗೆ ನನಗೆ ಇನ್ನೂ ತಿಳಿಯುವ ಆಸೆ. ಹೇಳುವಿರೇ?
ಉದ್ದಾಲಕ : “ಹಾಗೆಯೇ ಆಗಲಿ. ಈಗ ಒಂದು ಚಿಟಿಕೆ ಉಪ್ಪನ್ನು ತಾ.”
ಶ್ವೇತಕೇತು : “ಇಗೋ ಇಲ್ಲಿದೆ ”
ಉದ್ದಾಲಕ : “ಇದನ್ನು ಒಂದು ನೀರಿರುವ ಬಟ್ಟಲಿನಲ್ಲಿ ಹಾಕಿಟ್ಟು ನಾಳೆ ಬಂದು ನನ್ನನ್ನು ಕಾಣು”
ತಂದೆಯ ಮಾತನ್ನು ಪಾಲಿಸಿದ ಶ್ವೇತಕೇತು ಮಾರನೆಯ ದಿನ ಅವರ ಮುಂದೆ ಬಂದು ನಿಂತ.
ಉದ್ದಾಲಕ : “ನೆನ್ನೆ ನನಗೆ ತೋರಿಸಿದ ಚಿಟಿಕೆ ಉಪ್ಪು ಕೊಡು”
ಶ್ವೇತಕೇತು : “ಅರೆ! ಅದು ಈಗ ಇಲ್ಲ ”
ಉದ್ದಾಲಕ : “ಹೌದು. ನೀರಿನಲ್ಲಿ ಕರಗಿಬಿಟ್ಟಿದೆಯಲ್ಲವೆ. ತೊಂದರೆಯಿಲ್ಲ. ಈಗ ಬಟ್ಟಲಿನ ಮೇಲ್ಭಾಗ ನೀರಿನ ರುಚಿಯೇನು ಎಂದು ಹೇಳು”
ಶ್ವೇತಕೇತು : “ಉಪ್ಪು ನೀರು”
ಉದ್ದಾಲಕ : “ನೀರಿನಲ್ಲಿ ಕೈ ಅದ್ದಿ ಮಧ್ಯಭಾಗದ ನೀರಿನ ರುಚಿಯೇನು ಎಂದು ಹೇಳು.”
ಶ್ವೇತಕೇತು : “ಅದೂ ಉಪ್ಪುನೀರು.”
ಉದ್ದಾಲಕ : “ಈಗ ಬಟ್ಟಲಿನ ತಳಭಾಗದ ನೀರಿನ ರುಚಿಯೇನು?”
ಶ್ವೇತಕೇತು : “ಉಪ್ಪುನೀರು”
ಉದ್ದಾಲಕ : “ಈಗ ನೀರನ್ನು ಚೆಲ್ಲಿ ಬಾ ”
ನೀರನ್ನು ಚೆಲ್ಲಿ ಬಂದ ಶ್ವೇತಕೇತುವಿನ ಮನ್ನಸ್ಸಿನಲ್ಲಿ ಒಂದು ವಿಷಯ ಹೊಳೆಯಿತು. ತಟ್ಟನೆ ಹೀಗೆ ಹೇಳಿದ –
“ಅಪ್ಪಾ! ನೆನ್ನೆಯ ಚಿಟಿಕೆ ಉಪ್ಪು ಇಂದು ಇಲ್ಲ ಎಂದು ಹೇಳುವುದು ತಪ್ಪಾಗುತ್ತದೆ. ನಾನು ಉಪ್ಪಿನ ನೀರು ಚೆಲ್ಲಿದರೂ ಉಪ್ಪು ಇದ್ದೇ ಇದೆ, ಅಲ್ಲವೇ?”
ಮಗನ ಮಾತಿನಿಂದ ಹರ್ಷಿತರಾದ ಉದ್ದಾಲಕರು ಅವನ್ನು ತಬ್ಬಿ ಹೀಗೆ ಹೇಳಿದರು, “ಹೌದು ಮಗನೆ , ನಮಗೆ ಕಾಣದ, ಕೇಳಿಸದ ಅಥವಾ ಅರ್ಥವಾಗದ ಮಾತ್ರಕ್ಕೆ ಏನೂ ಇಲ್ಲ ಎಂದು ಹೇಳುವುದು ದಡ್ಡತನವಾದೀತು. ಅಗೋಚರವಾದರೂ, ನಾವು ಅದನ್ನು ಆಲಿಸದಿದ್ದರೂ, ಜಗತ್ತಿನಲ್ಲಿ ನಮಗೆ ಅರ್ಥವಾಗದ ಸೂಕ್ಷ್ಮ ಅಂಶವೊಂದಿದೆ. ಅದು ಸರ್ವವ್ಯಾಪಿಯಾಗಿ ಇಲ್ಲೇ ಇದೆ. ಇರುವ ಎಲ್ಲ ಜೀವಿಗಳ ಆತ್ಮವೂ ಅದೇ ಆಗಿದೆ. ಅದೇ ಸತ್ಯ. ಅದೇ ಚೇತನ. ಅದೇ ಆತ್ಮದ ನಿಜಸ್ವರೂಪ. ಓ ಶ್ವೇತಕೇತು, ಅದೇ ನೀನು (ತತ್ತ್ವಮಸಿ)” . (10)(6)
(ವೇದಗಳ ಬ್ರಹ್ಮಾತ್ಮೈಕ್ಯವನ್ನು ಪ್ರತಿಪಾದಿಸುವ ಅದ್ವೈತ ವೇದಾಂತದ ನಾಲ್ಕು ಮಹಾವಾಕ್ಯಗಳಲ್ಲಿ “ತತ್ತ್ವಮಸಿ” ಒಂದು. ಇದು ಛಾಂದೋಗ್ಯೋಪನಿಷತ್ತಿನ ಆರನೇ ಅಧ್ಯಾಯದಲ್ಲಿ ಕಂಡುಬರುತ್ತದೆ. ಛಾಂದೋಗ್ಯೋಪನಿಷತ್ತು ಸಾಮವೇದಕ್ಕೆ ಸೇರಿದ್ದು. ಉಪನಿಷತ್ತಿನಲ್ಲಿ ಮುಖ್ಯವಾಗಿ ಕಂಡುಬರುವ ಉದ್ದಾಲಕ–ಶ್ವೇತಕೇತುವಿನ ಸಂವಾದದ ಇಣುಕುನೋಟ ಈ ಕಥೆ .)
1. “ಯೇನಾಶ್ರುತ ಶ್ರುತಂ ಭವತ್ಯಮತಂ ಮತಮವಿಜ್ಞಾತಂ ವಿಜ್ಞಾತಮಿತಿ” – ಛಾಂದೋಗ್ಯೋಪನಿಷತ್ (6-1-3)
2. ಯಥಾ ಸೋಮ್ಯೈಕೇನ ಮೃತ್ಪಿಂಡೇನ ಸರ್ವಂ ಮೃನ್ಮಯಂ ವಿಜ್ಞಾತ ಸ್ಯಾದ್ವಾಚಾರಂಭಣಂ ವಿಕಾರೋ ನಾಮಧೇಯಂ ಮೃತ್ತಿಕೇತ್ಯೇವ ಸತ್ಯಂ – ಛಾಂದೋಗ್ಯೋಪನಿಷತ್ (6-1-4 )
3. ಯಥಾ ಸೋಮ್ಯೈಕೇನ ಲೋಹಮಣಿನಾ ಸರ್ವಂ ಲೋಹಮಯಂ ವಿಜ್ಞಾತ ಸ್ಯಾದ್ವಾಚಾರಂಭಣಂ ವಿಕಾರೋ ನಾಮಧೇಯಂ ಲೋಹಮಿತ್ಯೇವ ಸತ್ಯಂ — ಛಾಂದೋಗ್ಯೋಪನಿಷತ್ (6-1-5)
4. ಸದೇವ ಸೋಮ್ಯೇದಮಗ್ರ ಆಸೀದೇಕಮೇವಾದ್ವಿತೀಯಂ ತದ್ಧೈಕ ಆಹುರಸದೇವೇದಮಗ್ರ ಆಸೀದೇಕಮೇವಾದ್ವಿತೀಯಂ ತಸ್ಮಾದಸತಃ ಸಜ್ಜಾಯತ (6-2-1)
ತದೈಕ್ಷತ ಬಹು ಸ್ಯಾಂ ಪ್ರಜಾಯೇಯೇತಿ ತತ್ತೇಜೋಽಸೃಜತ ತತ್ತೇಜ ಐಕ್ಷತ ಬಹು ಸ್ಯಾಂ ಪ್ರಜಾಯೇಯೇತಿ ತದಪೋಽಸೃಜತ . ತಸ್ಮಾದ್ಯತ್ರ ಕ್ವಚ ಶೋಚತಿ ಸ್ವೇದತೇ ವಾ ಪುರುಷಸ್ತೇಜಸ ಏವ ತದಧ್ಯಾಪೋ ಜಾಯಂತೇ (6-2-3)
ತಾ ಆಪ ಐಕ್ಷಂತ ಬಹ್ವ್ಯಃ ಸ್ಯಾಮ ಪ್ರಜಾಯೇಮಹೀತಿ ತಾ ಅನ್ನಮಸೃಜಂತ ತಸ್ಮಾದ್ಯತ್ರ ಕ್ವ ಚ ವರ್ಷತಿ ತದೇವ ಭೂಯಿಷ್ಠಮನ್ನಂ ಭವತ್ಯದ್ಭ್ಯ ಏವ ತದಧ್ಯನ್ನಾದ್ಯಂ ಜಾಯತೇ (6-2-4)
5. ..”ಸೋಮ್ಯ ಪುರುಷಸ್ಯ ಪ್ರಯತೋ ವಾಙ್ಮನಸಿ ಸಂಪದ್ಯತೇ ಮನಃ ಪ್ರಾಣೇ ಪ್ರಾಣಸ್ತೇಜಸಿ ತೇಜಃ ಪರಸ್ಯಾಂ ದೇವತಾಯಾಂ” (6-8-6)
6. “ ಸರ್ವಂ ತತ್ಸತ್ಯ ಸ ಆತ್ಮಾ ತತ್ತ್ವಮಸಿ ಶ್ವೇತಕೇತೋ “ (6-8-7/6-9-4/6-11-3/6-12-3/6-13-3)
7. “ಯಥಾ ಸೋಮ್ಯ ಮಧು ಮಧುಕೃತೋ ನಿಸ್ತಿಷ್ಠಂತಿ ನಾನಾತ್ಯಯಾನಾಂ ವೃಕ್ಷಾಣಾ ರಸಾನ್ಸಮವಹಾರಮೇಕತಾ ರಸಂ ಗಮಯಂತಿ (6-9-1)
8. ಅಸ್ಯ ಸೋಮ್ಯ ಮಹತೋ ವೃಕ್ಷಸ್ಯ ಯೋ ಮೂಲೇಽಭ್ಯಾಹನ್ಯಾಜ್ಜೀವನ್ಸ್ರವೇದ್ಯೋ ಮಧ್ಯೇಽಭ್ಯಾಹನ್ಯಾಜ್ಜೀವನ್ಸ್ರವೇದ್ಯೋಽಗ್ರೇಽಭ್ಯಾಹನ್ಯಾಜ್ಜೀವನ್ಸ್ರವೇತ್ಸ
ಏಷ ಜೀವೇನಾತ್ಮನಾನುಪ್ರಭೂತಃ ಪೇಪೀಯಮಾನೋ ಮೋದಮಾನಸ್ತಿಷ್ಠತಿ (6-11-1)
ಅಸ್ಯ ಯದೇಕಾꣳ ಶಾಖಾಂ ಜೀವೋ ಜಹಾತ್ಯಥ ಸಾ ಶುಷ್ಯತಿ ದ್ವಿತೀಯಾಂ ಜಹಾತ್ಯಥ ಸಾ ಶುಷ್ಯತಿ ತೃತೀಯಾಂ ಜಹಾತ್ಯಥ ಸಾ ಶುಷ್ಯತಿ ಸರ್ವಂ ಜಹಾತಿ ಸರ್ವಃ ಶುಷ್ಯತಿ (6-11-2)
9. ನ್ಯಗ್ರೋಧಫಲಮತ ಆಹರೇತೀದಂ ಭಗವ ಇತಿ ಭಿಂದ್ಧೀತಿ ಭಿನ್ನಂ ಭಗವ ಇತಿ ಕಿಮತ್ರ ಪಶ್ಯಸೀತ್ಯಣ್ವ್ಯ ಇವೇಮಾ ಧಾನಾ ಭಗವ ಇತ್ಯಾಸಾಮಂಗೈಕಾಂ ಭಿಂದ್ಧೀತಿ ಭಿನ್ನಾ ಭಗವ ಇತಿ ಕಿಮತ್ರ ಪಶ್ಯಸೀತಿ ನ ಕಿಂಚನ ಭಗವ ಇತಿ (6-12-1)
ತ ಹೋವಾಚ ಯಂ ವೈ ಸೋಮ್ಯೈತಮಣಿಮಾನಂ ನ ನಿಭಾಲಯಸ ಏತಸ್ಯ ವೈ ಸೋಮ್ಯೈಷೋಽಣಿಮ್ನ ಏವಂ ಮಹಾನ್ಯಗ್ರೋಧಸ್ತಿಷ್ಠತಿ ಶ್ರದ್ಧತ್ಸ್ವ ಸೋಮ್ಯೇತಿ (6-12-2)
10. ಯಥಾ ವಿಲೀನಮೇವಾಂಗಾಸ್ಯಾಂತಾದಾಚಾಮೇತಿ ಕಥಮಿತಿ ಲವಣಮಿತಿ ಮಧ್ಯಾದಾಚಾಮೇತಿ ಕಥಮಿತಿ ಲವಣಮಿತ್ಯಂತಾದಾಚಾಮೇತಿ ಕಥಮಿತಿ ಲವಣಮಿತ್ಯಭಿಪ್ರಾಸ್ಯೈತದಥ ಮೋಪಸೀದಥಾ ಇತಿ ತದ್ಧ ತಥಾ ಚಕಾರ ತಚ್ಛಶ್ವತ್ಸಂವರ್ತತೇ ತ ಹೋವಾಚಾತ್ರ ವಾವ ಕಿಲ ತತ್ಸೋಮ್ಯ ನ ನಿಭಾಲಯಸೇಽತ್ರೈವ ಕಿಲೇತಿ (6-13-2)
(ಈ ಕಥೆಯನ್ನು ಸಂಸ್ಕೃತ ಮತ್ತು ಆಂಗ್ಲಭಾಷೆಯಲ್ಲಿ ಡಾ. ಸಂಪದಾನಂದ ಮಿಶ್ರ ಬರೆದಿದ್ದಾರೆ ಹಾಗು ಅವರ ಅನುಮತಿಯಿಂದ ಕನ್ನಡಕ್ಕೆ ಭಾಷಾಂತರಿಸಲಾಗಿದೆ. https://upanishads.org.in/stories/shvetaketu )
Image Credit: AdhyatmaSagar
Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.