close logo

ಘಟೋತ್ಕಚನೆಂಬ ಮುದ್ದು ರಾಕ್ಷಸ 

ಮಧ್ಯಮವ್ಯಾಯೋಗನಾಟಕದಲ್ಲಿ ಮಹಾಕವಿ ಭಾಸ ಕಂಡಂತೆ ಘಟೋತ್ಕಚ

ಸ್ಮಿತಾ ಹೆಚ್ ಎಸ್ [1]

ಘಟೋತ್ಕಚ,  ಭೀಮಸೇನ ಮತ್ತು ಹಿಡಿಂಬಿಯ ಏಕೈಕ ಪುತ್ರ. ಮಹಾಭಾರತದಲ್ಲಿ ಪಾಂಡವರ ಪರವಾಗಿ  ವೀರಾವೇಶದಿಂದ ರಾತ್ರಿಯುದ್ದದಲ್ಲಿ ಕೌರವರ ಸದೆಬಡೆಯುವ ಘಟೋತ್ಕಚನ ಬಗ್ಗೆ ನಮಗೆಲ್ಲ ತಿಳಿದಿದೆ. ಘಟೋತ್ಕಚನನ್ನು ಕುರಿತು ಹಲವು ಉಪಕಥೆಗಳು ಮತ್ತು ಜಾನಪದ ಕಥೆಗಳು ಸಹ ನಮ್ಮ ಪರಂಪರೆಯಲ್ಲಿ ಕಂಡುಬರುತ್ತದೆ. ಆದರೆ ಈ ಎಲ್ಲ ಕಥೆಗಳಿಗಿಂತ ಮಹಾಕವಿ ಭಾಸನ ಘಟೋತ್ಕಚ ಪಾತ್ರಚಿತ್ರಣ ಅತ್ಯಂತ ಮನಮೋಹಕವಾಗಿದೆ. ಭಾಸ ಕಂಡಂತೆ ಘಟೋತ್ಕಚನ ಬಗ್ಗೆ ತಿಳಿಸುವ ಮುನ್ನ, ಭಾಸನ ಕಥೆಯನ್ನು ನಾನು ನಿಮಗೆ ಹೇಳಲೇಬೇಕು, ಅದು ಅವನ ನಾಟಕಗಳಷ್ಟೇ ರೋಚಕವಾಗಿದೆ.

ಭಾಸನ ಕಥೆ

ನಮ್ಮ ಸಂಸ್ಕೃತ ಸಾಹಿತ್ಯ ಪರಂಪರೆಯಲ್ಲಿ ಒಂದು ವಿಶಿಷ್ಟ ಪದ್ದತಿಯಿದೆ. ಅದೇನೆಂದರೆ ಎಲ್ಲ ಕವಿಗಳು ಅವರ ಸಮಾಕಾಲೀನರಾದ ಅಥವಾ ಪೂರ್ವಿಕರಾದ ಉಳಿದ ಕವಿಗಳನ್ನು ತಮ್ಮ ಕೃತಿಗಳಲ್ಲಿ ಉಲ್ಲೇಖಿಸುವುದು. ಈ ಪದ್ದತಿಯಿಂದಾಗಿ  ನಮಗೆ ಬಹಳ ಮೊದಲಿನಿಂದಲೂ ಭಾಸ ಎಂಬ ಹೆಸರಿನ ಕವಿಯ ಪರಿಚಯವಿದೆ. ತನ್ನ ನಾಟಕಗಳ ಮೂಲಕ ಹಾಸ್ಯದ ಹೊಳೆಯೇ ಹರಿಸುತ್ತಿದ್ದ ಭಾಸನನ್ನು ಮತ್ತು ಕವಿಕುಲಗುರು ಕಾಳಿದಾಸನನ್ನು ಜಯದೇವ ಕವಿ ಪ್ರಸನ್ನರಾಘವಂ ನಾಟಕದಲ್ಲಿ ಹೊಗಳುತ್ತಾನೆ[2]. ಸ್ವತಃ ಕಾಳಿದಾಸ ತನ್ನ ಮಾಳವಿಕಾಗ್ನಿಮಿತ್ರಂ ನಾಟಕದ ಪ್ರಾರಂಭದಲ್ಲಿ ಭಾಸನನ್ನು ಸ್ಮರಿಸುತ್ತಾನೆ[3]. ಭಾಸನ ನಂತರಕಾಲದ ಈ ಇಬ್ಬರು ಮಹಾನ್ ಕವಿಗಳು ಪ್ರಾಯಶಃ ಭಾಸನ ನಾಟಕಗಳನ್ನು ಆಸ್ವಾದಿಸಿರಲೇಬೇಕು ಎಂದು ನಾವು ತಿಳಿದುಕೊಳ್ಳಬಹುದು. ಇವರಿಬ್ಬರಲ್ಲದೆ ಹಲವು ಸಂಸ್ಕೃತ ಕವಿಗಳು ಭಾಸನ ಹೆಸರನ್ನು ಅಲ್ಲಲ್ಲಿ ಉಲ್ಲೇಖಿಸಿದ್ದಾರೆ.

ಆದರೆ ಇತ್ತೀಚಿನವರೆಗೆ ಯಾರಿಗೂ ಭಾಸನ ಹೆಸರು ಮತ್ತು ಅವನ ಒಂದು ನಾಟಕದ  ಶೀರ್ಷಿಕೆಯನ್ನು (ಸ್ವಪ್ನವಾಸವದತ್ತ) ಬಿಟ್ಟು ಹೆಚ್ಚೇನೂ ತಿಳಿದಿರಲಿಲ್ಲ. ಆತ ಎಲ್ಲಿಯವನು? ಯಾವ ಕಾಲದಲ್ಲಿದ್ದನು? ಸ್ವಪ್ನವಾಸವದತ್ತವಲ್ಲದೆ ಬೇರೆ ನಾಟಕಗಳನ್ನು ರಚಿಸಿದ್ದಾನೆಯೇ ? ಇತ್ಯಾದಿ ಪ್ರಶ್ನೆಗಳು ಸಾಹಿತ್ಯಾಸಕ್ತರನ್ನು ಕಾಡಿಸುತ್ತಲೇಯಿತ್ತು. 1900ರ ದಶಕದ ಪ್ರಾರಂಭದಲ್ಲಿ ಮಹಾಮಹೋಪಾಧ್ಯಾಯ ಟಿ. ಗಣಪತಿ ಶಾಸ್ತ್ರಿಯವರಿಗೆ  ತಿರುವನಂತಪುರಂನ ಪ್ರಾಚೀನ ಗ್ರಂಥಾಲಯದ ಮೂಲೆಯಲ್ಲಿ ಆಕಸ್ಮಿಕವಾಗಿ ಒಂದಿಷ್ಟು ತಾಳೆಪ್ರತಿಗಳು ಸಿಕ್ಕಿದವು. ಒಟ್ಟಿಗೆ ಕಟ್ಟಿಟ್ಟ ಈ ಮೂಟೆಯಲ್ಲಿ ಹಳೆಯ ಮಲಯಾಳಂ ಲಿಪಿಯಲ್ಲಿ  ಬರೆದಿಟ್ಟ 13 ನಾಟಕಗಳಿದ್ದವು. ಇವುಗಳಲ್ಲಿ ಒಂದರ ಹೆಸರು ಗಣಪತಿ ಶಾಸ್ತ್ರಿಗಳಿಗೆ ಅಚ್ಚರಿಯನ್ನುಂಟು ಮಾಡಿತು. ಆದರೆ ಮಹದಾಶ್ಚರ್ಯವೇನೆಂದರೆ ಯಾವ ನಾಟಕದಲ್ಲೂ ರಚನಕಾರನ ಹೆಸರು ಕಂಡುಬರಲಿಲ್ಲ.

ಗಣಪತಿ ಶಾಸ್ತ್ರಿಗಳು ಎಲ್ಲ ಹಸ್ತಪ್ರತಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿದರು. ನಂತರ ಶಾಸ್ತ್ರಿಗಳು ಸಾವಿರಾರು ವರ್ಷಗಳ ಅವಧಿಯ ಸಂಸ್ಕೃತ ಸಾಹಿತ್ಯರಾಶಿಯಲ್ಲಿ ಭಾಸನ ಉಲ್ಲೇಖಗಳನ್ನು ಹೆಕ್ಕಿ ತೆಗೆದು ತಾಳೆಹಾಕಿ ಅಂತಿಮವಾಗಿ ಈ ಎಲ್ಲ ಹದಿಮೂರು ನಾಟಕಗಳ ರಚನಕಾರನು ಭಾಸನಲ್ಲದೆ ಬೇರಾರು ಅಲ್ಲ ಎಂದು ಘೋಷಿಸಿಬಿಟ್ಟರು.ಆದರೆ ಕೆಲವರು ಇದನ್ನು ಒಪ್ಪಲಿಲ್ಲ. ಇಂದು ನಾವು ಭಾಸನ ದೇಶ-ಕಾಲ-ಕೃತಿಗಳ ಬಗ್ಗೆ  ಕೇವಲ ಸಂದರ್ಭೋಚಿತವಾಗಿ ತಿಳಿದುಕೊಳ್ಳಬೇಕೇ ವಿನಃ ನಿರ್ಣಾಯದಾಯಕವಾಗಿ ಏನನ್ನೂ ಹೇಳುವಹಾಗಿಲ್ಲ.

ಶಾಸ್ತ್ರಿಗಳ ಈ ಆವಿಷ್ಕಾರ ಸಂಸ್ಕೃತ ಸಾಹಿತ್ಯ ರಸಿಕರ ಜಗತ್ತಿನಲ್ಲಿ ರೋಮಾಂಚನ ಉಂಟುಮಾಡಿತ್ತು. ಇಂದಿಗೂ ಭಾಸನ ನಾಟಕಗಳನ್ನು ಮೊದಲ ಬಾರಿಗೆ ಆಸ್ವಾದಿಸುವವರಿಗೆ ಇದೇ ರೋಮಾಂಚನದ ಅನುಭೂತಿಯಾಗುತ್ತದೆ.

ಭಾಸನಾಟಕಗಳಲ್ಲಿನ  ಪಾತ್ರಚಿತ್ರಣ ಅತ್ಯಂತ ಮನೋಹರವಾಗಿರುತ್ತದೆ. ಆತನ ಹದಿಮೂರು ನಾಟಕಗಳಲ್ಲಿ ಹೆಚ್ಚಿನವು  ಮಹಾಭಾರತವನ್ನು  ಆಧಾರಿಸಿದ್ದಾಗಿವೆ. ಉಳಿದ ನಾಟಕಗಳು ಗುಣಾಢ್ಯನ ಬೃಹತ್ಕಥೆ, ರಾಮಾಯಣ ಮತ್ತು ಭಾಗವತಕ್ಕೆ ಸೇರಿದ್ದು ಮತ್ತು ಕೆಲವು ಕಲ್ಪಿತಕಥೆಗಳು. ವೈವಿಧ್ಯಮಯ ಕಲ್ಪನೆ ಮತ್ತು ವರ್ಣನೆಗಳು  ತುಂಬಿ ತುಳುಕುತ್ತಿರುವ ಈ ನಾಟಕಗಳಲ್ಲಿ ವೀರ, ಕರುಣ ಮತ್ತು ಹಾಸ್ಯರಸಗಳಿಗೆ ಹೆಚ್ಚು ಪ್ರಾಧಾನ್ಯ. ಓದುಗರ ಮತ್ತು ನೋಡುಗರ ಕಣ್ಮನ ಸೆಳೆದು ರೋಮಾಂಚನಗೊಳಿಸುವ ದೃಶ್ಯಗಳು ಮತ್ತು ಸಂಭಾಷಣೆಗಳು ಭಾಸನ ವೈಶಿಷ್ಟ್ಯ. ಇವುಗಳಲ್ಲಿ ಘಟೋತ್ಕಚನ ಪಾತ್ರವಿರುವ ಮಧ್ಯಮವ್ಯಾಯೋಗ ಮಹಾಭಾರತವನ್ನು ಆಧಾರಿಸಿದ ನಾಟಕ.

ಮಧ್ಯಮವ್ಯಾಯೋಗ

ಮಧ್ಯಮವ್ಯಾಯೋಗದಲ್ಲಿ (ಸೂತ್ರಧಾರನನ್ನು ಹೊರತುಪಡಿಸಿ) ಒಟ್ಟು  ಎಂಟು ಪಾತ್ರಗಳಿವೆ – ಮುದಿ ಬ್ರಾಹ್ಮಣ, ಆತನ ಪತ್ನಿ,  ಅವರಿಬ್ಬರ ಮೂರು ಪುತ್ರರು, ಘಟೋತ್ಕಚ, ಭೀಮಸೇನ ಮತ್ತು  ಹಿಡಿಂಬಿ. ಮಧ್ಯಮವ್ಯಾಯೋಗ ಎಂಬ ಶೀರ್ಷಿಕೆ ಕೂಡ  ಭಾಸನಾಟಕಗಳಲ್ಲಿ ಹೇರಳವಾಗಿ ಕಂಡುಬರುವ ಅಣಕಗಳ ಒಂದು ಉದಾಹರಣೆ.  ಮಧ್ಯಮ ಎಂದರೆ ಮಧ್ಯಮ ಪಾಂಡವನಾದ ಭೀಮಸೇನ. ಆದರೆ ನಾಟಕದಲ್ಲಿ ಮತ್ತೊಬ್ಬ (ಮಧ್ಯಮ ಬ್ರಾಹ್ಮಣಪುತ್ರ) ಮಧ್ಯಮನಿದ್ದಾನೆ.  ಹೀಗಿರುವಾಗ ಈ ನಾಟಕದ ನಾಯಕ ಭೀಮಸೇನನೇ ಅಥವಾ ಮಧ್ಯಮ ಪುತ್ರನೇ? ಖಂಡಿತಾ ಅಲ್ಲ. ಭಾಸನ ಮಧ್ಯಮವ್ಯಾಯೋಗ ನಾಟಕದ ನಾಯಕ ಘಟೋತ್ಕಚನೇ  ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ನಾಂದಿಯ ನಂತರದ ದೃಶ್ಯದಿಂದ ಮೊದಲುಗೊಂಡು ಮಂಗಳದವೆರೆಗೆ ಮಂಚದ ಮೇಲೆ ಪ್ರತಿ ಕ್ಷಣವೂ ಕಾಣಿಸಿಕೊಳ್ಳುವ ಘಟೋತ್ಕಚ  ಕಥೆಯ ಹೊಸ ಘಟ್ಟ ಮತ್ತು ತಿರುವುಗಳಿಗೆ ಕಾರಣನಾಗುತ್ತಾನೆ. ಕುರುಕ್ಷೇತ್ರ ಯುದ್ಧದಲ್ಲಿ ಘೋರವಾಗಿ ಹೋರಾಡಿ ವೀರಮರಣವನ್ನಪ್ಪುವ ಘಟೋತ್ಕಚ ಎಲ್ಲರಿಗೂ ಗೊತ್ತು. ಆದರೆ ಈ ಮಹಾವೀರನ ಮನಮೋಹಕ ವ್ಯಕ್ತಿತ್ವವನ್ನು ಎತ್ತಿ ತೋರಿಸುವಲ್ಲಿ ಮಹಾಕವಿ ಭಾಸ ಯಶಸ್ವಿಯಾಗಿದ್ದಾನೆ. ಒಬ್ಬ ರಾಕ್ಷಸನಲ್ಲಿ ದುರ್ಲಭವೆನ್ನಲಾದ ಮಮತೆ, ಕಾರುಣ್ಯ ಮತ್ತು ಹಾಸ್ಯಗುಣಗಳನ್ನು ಭಾಸನ ಘಟೋತ್ಕಚ ಪಾತ್ರಚಿತ್ರಣದಲ್ಲಿ ಕಾಣಬಹುದು.

ಮಧ್ಯಮವ್ಯಾಯೋಗ ನಾಟಕದಲ್ಲಿ ಘಟೋತ್ಕಚನ ಪಾತ್ರಚಿತ್ರಣ

ಮೊದಲಿಗೆ ಸೂತ್ರಧಾರನ ಏಕಾಲಾಪದಲ್ಲಿ,  ಘಟೋತ್ಕಚನನ್ನು ಪಾಪಬುದ್ಧಿಯ (पापचेतसा[4])  ಭಯಂಕರ  ರಾಕ್ಷಸಾಗ್ನಿ (रक्षसाग्निः[5]) ಎಂದು ವರ್ಣಿಸಲಾಗುತ್ತದೆ. ಈ ದೃಶ್ಯದಲ್ಲಿ ಘಟೋತ್ಕಚನು ಬಡ ಬ್ರಾಹ್ಮಣ ಪರಿವಾರವೊಂದನ್ನು ಸೆರೆ ಹಿಡಿದಿದ್ದಾನೆ. ಇಲ್ಲಿ ಮುದಿ ಬ್ರಾಹ್ಮಣ, ಅವನ ಪತ್ನಿ ಮತ್ತು ಮೂವರು ಮಕ್ಕಳು ಭಯಭೀತರಾಗಿ ರಾಕ್ಷಸನ  ಹಿಂದೆ ನಡೆಯುತ್ತಿರುವ ಚಿತ್ರಣವಿದೆ.

ಬ್ರಾಹ್ಮಣ ಮತ್ತು ಅವನ ಮೂವರು ಪುತ್ರರು ಬಂಧಿಗಳಾಗಿದ್ದರೂ ಸಹ ತಮ್ಮನ್ನು  ಸೆರೆಹಿಡಿದ ಈ ಅಸುರನ ಶ್ರೇಷ್ಠ ಲಕ್ಷಣಗಳನ್ನು ಹೊಗಳುತ್ತಾರೆ. ನೋಡುವುದಕ್ಕೆ ಇವನು ಸಾಕ್ಷಾತ್ ಕಾಲಾಂತಕ ಶಿವನನ್ನು ಹೋಲುತ್ತಾನೆ (हरस्य प्रतिमाकृतिः[6],त्रिपुरहन्तक शङ्करः[7])  ಎಂದು ತಮಲ್ಲೇ ಮಾತನಾಡಿಕೊಳ್ಳುತ್ತಾರೆ. ಮೃತ್ಯುವೇ ಮೈವೆತ್ತ (मृत्युः पुरुषविग्रहः[8]) ಪೀತಾಂಬರ (पीताम्बर/ರೇಷ್ಮೆ[9])  ವಸ್ತ್ರಧಾರಿಯಾದ ಈ ವಿಚಿತ್ರವಾದರೂ ಸುಸಂಸ್ಕೃತನಾದ ರಾಕ್ಷಸ ಅವರೆಲ್ಲರಲ್ಲಿ ಭಯ ಮತ್ತು ಕುತೂಹಲವನ್ನುಂಟು ಮಾಡುತ್ತಾನೆ.

ಬೇರೆ ಯಾವ ಬೇಟೆಯೂ ಸಿಗದೇ ಈ ಬ್ರಾಹ್ಮಣ ಪರಿವಾರವನ್ನೇ ತನ್ನ ತಾಯಿಗೆ ಔತಣವಾಗಿ ಬಡಿಸುವ ಆಲೋಚನೆ ಘಟೋತ್ಕಚನದ್ದು. ಆದರೆ ಭಾಸನ ಪಾತ್ರಚಿತ್ರಣದಲ್ಲಿ ಘಟೋತ್ಕಚ ಕ್ರೂರಿಯಲ್ಲ. ಎಲ್ಲ ಬ್ರಾಹ್ಮಣರು  ಗೌರವಾರ್ಹರು ಎಂದು ಇವನು ಚೆನ್ನಾಗಿ ಬಲ್ಲ. ಆದರೆ, ಉಪವಾಸ ಮಾಡುತ್ತಿರುವ ತನ್ನ ತಾಯಿ ಹಿಡಿಂಬಿಗೆ ನೀಡಿದ ವಚನ ಅವನಿಗೆ ಬಹಳ ಮುಖ್ಯವಾಗಿದೆ. ಆಕೆ ವ್ರತವನ್ನು ಮುಗಿಸುವಷ್ಟರಲ್ಲಿ ಘಟೋತ್ಕಚನು ಅವಳ ಆಹಾರವನ್ನು ಸಿದ್ಧಪಡಿಸಬೇಕಾಗಿದೆ! ಈ ದೃಶ್ಯ ಒಂದು ಕ್ಷಣದಲ್ಲಿ ಭಯ ಮತ್ತೊಂದು ಕ್ಷಣದಲ್ಲಿ ವೀಕ್ಷಕರನ್ನು ನಗೆಯಲ್ಲಿ ತೇಲಾಡಿಸುವಂತದ್ದು.

ಘಟೋತ್ಕಚನ ಕೆಲವು ಸಾಲುಗಳಂತೂ ಬಹಳ ಮೋಜು ನೀಡುತ್ತದೆ. ಅವನ ಪ್ರತಿ ಮಾತೂ ಘರ್ಜನೆಯಂತೆ ಮೊಳಗುತ್ತದೆ. ಇದನ್ನು ಕೇಳಿ ಪ್ರತಿಬಾರಿ ನಡುಗುವ ಮುದಿ ಬ್ರಾಹ್ಮಣನಂತೂ ಕೊನೆಗೂ  ಧೈರ್ಯಮಾಡಿ “ಅಬ್ಬಾ! ನಿನ್ನ ಮಾತುಗಳೇ ಎಷ್ಟು ಭಯಭೀತವಾಗಿವೆ” (अतिराक्षसं खलु ते वचनम्)[10] ಎಂದು ಹೇಳಿಬಿಡುತ್ತಾನೆ.  ಇದಕ್ಕೆ ಪ್ರತಿಯಾಗಿ ಘಟೋತ್ಕಚ  “ಅಯ್ಯೋ! ಕ್ಷಮಿಸಬೇಕು. ಮೆತ್ತಗೆ ಮಾತನಾಡಲು ನನಗೆ ಬರುವುದಿಲ್ಲ. ಇದು ನನ್ನ ಪ್ರಕೃತಿದೋಷ (प्रकृतिदोष)[11]” ಎನ್ನುತ್ತಾನೆ !

ಮತ್ತೊಂದೆಡೆ  ಘಟೋತ್ಕಚನು ಬ್ರಾಹ್ಮಣ ಪರಿವಾರದ ಮಧ್ಯಮಪುತ್ರನನ್ನು ಕರೆಯುವ ಸನ್ನಿವೇಶವಿದೆ. ಯಾವುದೋ ಕೆಲಸದ ಮೇರೆಗೆ ಹೋದ ಮಧ್ಯಮಪುತ್ರನು ತಕ್ಷಣ ಹಿಂತಿರುಗಿ ಬರದಿರುವ  ಸನ್ನಿವೇಶ ಅದು. ಅವನನ್ನು ಕುರಿತ ಘಟೋತ್ಕಚನ ಸಾಲುಗಳು ಹೀಗಿವೆ –    “ಅರೆ! ಇವನು ನಿಜಕ್ಕೂ ಹೆಸರಿಗೆ ತಕ್ಕ ಮಧ್ಯಮ (मध्यम इति सदृशमस्य[12])”. ಮಧ್ಯಮ ಎಂದರೆ ಸುಮಾರು, ಅಷ್ಟಕ್ಕಷ್ಟೇ ಎಂಬ ಅರ್ಥಗಳಿವೆ !

ಆದರೆ ನಾಟಕದ ಅತ್ತ್ಯುತ್ತಮ ಸಾಲುಗಳೆಂದರೆ ಭೀಮ-ಘಟೋತ್ಕಚರ ಸಂವಾದ. ಮೊದಲಿಗೆ ಇಬ್ಬರಿಗೂ ಪರಸ್ಪರ ಪರಿಚಯವಿಲ್ಲ. ಮುಖಾಮುಖಿಯಾಗಿ ನಿಂತ ಇಬ್ಬರೂ ಮೊದಲ ನೋಟದಲ್ಲೇ  ಪರಸ್ಪರ ಆಕರ್ಷಣೆಗೊಳಗಾಗುತ್ತಾರೆ.

ಘಟೋತ್ಕಚನನ್ನು ಕಂಡ ಭೀಮಸೇನ ‘ಈ ಚೆಲುವ ಯಾವುದೊ ರಾಕ್ಷಸಿ(रक्षसीजः)  ಮತ್ತು ಲೋಕಪ್ರಸಿದ್ಧ ಮಹಾವೀರನಿಗೆ (लोकवीरस्य पुत्रः) ಹುಟ್ಟಿದವನಿರಬೇಕು’ ಎನ್ನುತ್ತಾನೆ[13]. ಅದೇ ಭೀಮನನ್ನು ಕಂಡ ಘಟೋತ್ಕಚ “ಯಾರಿವನು? ನನ್ನ ಕಣ್ಣುಗಳೇಕೆ ಈತ ನನ್ನ ಹತ್ತಿರದವನೇನೋ ಎಂಬಂತೆ ಸೆಳೆಯುತ್ತಿವೆ” (‘अयम् आगतः मम नेत्रे बन्धुः इव आहरति’) ಎನ್ನುತ್ತಾನೆ[14]. ಎಲ್ಲ ರಸಿಕರ ಮನಮುಟ್ಟುವ ಈ ಸನ್ನಿವೇಶ ಎಷ್ಟು  ಹೃದಯಂಗಮವಾಗಿದೆ ಅಲ್ಲವೇ?

ಎಂದೂ ಕಾಣದ ತಂದೆಯ ಬಗ್ಗೆ ಘಟೋತ್ಕಚನು ತೋರುವ ಪ್ರೀತಿ , ನಿಷ್ಠೆ  ಮತ್ತು ಗೌರವಗಳು ಭಾಸನ ಪಾತ್ರಚಿತ್ರಣದ ಪ್ರಮುಖ ಅಂಶವಾಗಿದೆ. ಹಿಡಿಂಬಿ ಇವನನ್ನು ಚೆನ್ನಾಗಿ ಬೆಳೆಸಿದ್ದಾಳೆ ಎನ್ನುವುದರಲ್ಲಿ ಯಾವುದೇ ಸಂಶಯ ಮೂಡುವುದಿಲ್ಲ. ತಾನು ಪಾಂಡವನ ಸಂತತಿ ಎನ್ನುವ ಬಗ್ಗೆ ಘಟೋತ್ಕಚನಲ್ಲಿ ಬಹಳ ಹೆಮ್ಮೆ ಇರುವುದು ಕಂಡುಬರುತ್ತದೆ. ಒಂದು ಸನ್ನಿವೇಶದಲ್ಲಿ, ತನ್ನ ತಾಯಿ ಕುರುವಂಶದ ಕುಲದೀಪಕನನ್ನು (कौरवकुलदीपः)[15] ವರಿಸಿದ್ದಾಳೆ ಎಂದು ಘಟೋತ್ಕಚ ಗರ್ವದಿಂದ ಹೇಳುತ್ತಾನೆ.

ಭೀಮನು ಬ್ರಾಹ್ಮಣ ಪರಿವಾರವನ್ನು ಬಿಡುಗಡೆ ಮಾಡುವಂತೆ ಆದೇಶಿಸಿದಾಗ ನಾಟಕವು ಹಾಸ್ಯ ಮತ್ತು ಕರುಣಾ  ರಸಗಳಿಂದ ವೀರ ರಸಕ್ಕೆ ತಿರುಗುತ್ತದೆ. ಯಾವುದೇ ಕಾರಣಕ್ಕೂ ತನ್ನ ಬೇಟೆಯನ್ನು ಬಿಡುಗಡೆ ಮಾಡಲು ಕ್ಷತ್ರಿಯನಾದ ಘಟೋತ್ಕಚ ಒಪ್ಪುವುದಿಲ್ಲ. ಬದಲಿಗೆ ಬೇಕಾದರೆ ಬಿಡಿಸಿಕೋ ಎಂದು ಭೀಮನನ್ನು ಕಾಳಗಕ್ಕೆ ಆಹ್ವಾನಿಸುತ್ತಾನೆ.

ಭೀಮ ಮತ್ತು ಘಟೋತ್ಕಚರ ನಡುವೆ  ದ್ವಂದ್ವ ಯುದ್ಧ  ನಡೆಯುವಾಗಲೂ ಸಹ  ಭೀಮಸೇನನು “ಯಾರಿವನು? ನನ್ನ ಸಹೋದರರ ಸದ್ಗುಣಗಳನ್ನು ಕದ್ದಿರುವವನು (गुणतस्करः)? ಇವನನ್ನು ನೋಡುತ್ತಿದ್ದರೆ ನನಗೆ ಸೌಭದ್ರನ (ಅಭಿಮನ್ಯು)  ನೆನಪೇಕೆ ಆಗುತ್ತಿದೆ (सौभद्र)?[16]” ಎಂದು ತನ್ನ ಎದುರಾಳಿಯ ಪ್ರಶಂಸೆ ಮಾಡುತ್ತಾನೆ. ಯುದ್ಧದ ನಡುವಿನಲ್ಲಿ ಎದುರಾಳಿಯು ತನ್ನ ಮಗನೇ  ಎಂದು ಭೀಮನಿಗೆ ಅರಿವಾಗುತ್ತದೆ. ಆದರೂ ಭೀಮ “ಬ್ರಹ್ಮ, ಶಿವ, ಕೃಷ್ಣ, ಇಂದ್ರ, ಕುಮಾರ ಮತ್ತು ಯಮರಲ್ಲಿ ನಿನ್ನ ತಂದೆ ಯಾರಿಗೆ ಹೋಲುತ್ತಾನೆ” ಎಂದು ಘಟೋತ್ಕಚನನ್ನು ಬೇಕೆಂತಲೇ ಕೆಣಕುತ್ತಾನೆ. ಆಗ ಘಟೋತ್ಕಚನು “ಹ್ಞೂ! ನನ್ನ ತಂದೆ ಇವರೆಲ್ಲರನ್ನೂ ಹೋಲುತ್ತಾನೆ” ಎಂದು ಘರ್ಜಿಸುತ್ತಾನೆ. ತನ್ನ  ತಂದೆಯ ಮೇಲಿನ ಅಪಾರ ಶ್ರದ್ಧೆ  ಮತ್ತು ಭಕ್ತಿಯನ್ನು ತೋರಿಸುವ  ಘಟೋತ್ಕಚನು ರಸಿಕರಿಗೆ ಇನ್ನೂ ಹತ್ತಿರವಾಗುತ್ತಾನೆ.

ನಾಟಕದ  ಅಂತ್ಯದಲ್ಲಿ ಘಟೋತ್ಕಚನು ಭೀಮನನ್ನು ಸೆರೆಹಿಡಿದು ತನ್ನ ಮನೆಗೆ ಕರೆದೊಯ್ಯುವ ಸನ್ನಿವೇಶವಿದೆ. ಹಿಡಿಂಬಿ ಭೀಮನನ್ನು ಕಂಡೊಡನೆ “ನಮ್ಮ ದೇವರು ಬಂದಿದ್ದಾನೆ” (अस्माकम् दैवतः)[17] ಎಂದು ಹೇಳಿ ಘಟೋತ್ಕಚನಿಗೆ ಅವನ ತಂದೆಯ ಪರಿಚಯ ನೀಡುತ್ತಾಳೆ. ತನ್ನ ಅನುಚಿತ ವರ್ತನೆಗೆ ತಕ್ಷಣವೇ ಕ್ಷಮೆಕೋರಿದ ಘಟೋತ್ಕಚನು, “ಧೃತರಾಷ್ಟ್ರವನವನ್ನು (ಧೃತರಾಷ್ಟ್ರನ ವಂಶವನ್ನು) ನಾಶಮಾಡಲೆಂದು  ಜನಿಸಿದ  ನಾನು ನಿಮಗೆ ನಮಸ್ಕರಿಸುತ್ತಿದ್ದೇನೆ ” (धृतराष्ट्रवनदवाग्निः[18]) ಎಂದು ಅಭಿವಾದನೆ ಹೇಳುತ್ತಾನೆ. ಘಟೋತ್ಕಚನ ಕಾಳಜಿ, ಪ್ರೀತಿ ಮತ್ತು ನಿಷ್ಠೆಯ ಅದ್ಭುತ ಪ್ರದರ್ಶನ ಇಲ್ಲಿ ಕಾಣಬಹುದಾಗಿದೆ.

ಈ ಮಾತುಗಳನ್ನು ಕೇಳಿದ ಭೀಮ ಹರ್ಷೋಲ್ಲಾಸದಿಂದ ಕೊನೆಯಲ್ಲಿ  “ನಿನ್ನ ಸಣ್ಣ ತಪ್ಪುಗಳೂ ನನಗೆ ಇಷ್ಟವಾಗುತ್ತವೆ” (व्यतिक्रमकृतं कान्तमेव)[19] ಎಂದು ಉದ್ಗರಿಸುತ್ತಾನೆ. ಹೃದಯಸ್ಪರ್ಶಿಯಾಗಿ ವರ್ಣಿಸಿದ ಈ ತಂದೆ-ಮಗನ ಸಮಾಗಮದೊಂದಿಗೆ ನಾಟಕವು ಮುಕ್ತಾಯವಾಗುತ್ತದೆ.

ಭೀಮಸೇನನಿಗೆ ‘व्यतिक्रमकृतं कान्तमेव’ ಎಂಬ ಸಾಲುಗಳನ್ನು ನೀಡಿ ಹೆತ್ತವರಿಗೆ ತಮ್ಮ ಮಕ್ಕಳು ಮಾಡಿದೆಲ್ಲವೂ ಮುದ್ದಾಗಿಯೇ ಕಾಣುತ್ತದೆ ಎಂಬ ಲೋಕಸತ್ಯವನ್ನು ಭಾಸ ಬಹಳ ಚೆನ್ನಾಗಿ ತೋರಿಸಿದ್ದಾನೆ. ನಾಟಕದ ಮುಖ್ಯ ಆಕರ್ಷಣೆಯಾದ ಘಟೋತ್ಕಚನ ಪಾತ್ರ ರಸಿಕರ ಮನ ಕದ್ದು ಕೊನೆಯಲ್ಲಿ ಎಲ್ಲರೂ ಭೀಮನ ಮಾತನ್ನು ಒಪ್ಪಲೇ ಬೇಕಾಗುತ್ತದೆ.

[1] https://www.indictoday.com/author/sarasvati/

[2] यस्याश्चोर: चिकुरमिकुरः कर्णपूरॊ मयूर: | भासो हास: कविकुलगुरु: कालिदासो विलासः | हर्षो हर्षस्त्रिभुवनजयी पंचबाणस्तु बाण:

[3] प्रथितयशसां भास-सौमिल्ल कविपुत्रादीनां प्रबन्धानतिक्रम्य कथं वर्तमानस्य कवे कालिदासस्य कृतौ बहुमानः।

[4] भोः शब्दोच्चारणादस्य ब्राह्मणोऽयं न संशयः | त्रास्यते निर्विशङ्केन || ||

[5] : -, दृढं एष खलु पाण्डवमध्यमस्यात्मजो हिडिम्बारणिसम्भूतो राक्षसाग्निरकृतवैरं ब्राह्मणजनं वित्रासयति | !

[6] तरुणरविकरप्रकीर्णकेशो भ्रुकुटिपुटोज्ज्वलपिङ्गलायताक्षः. घनः सकण्ठसूत्रो युगनिधने प्रतिमाकृतिर्हरस्य 4.

[7] लाङ्गलाकारनासः करिवरकरबाहुर्नीलजीमूतवर्णः यः स्थितो भाति भीम स्त्रिपुरपुरनिहन्तुः शङ्करस्येव 6.

[8] श्येनः सर्वपतत्रिणाम् मृगसंघानां मृत्युः पुरुषविग्रहः 7.

[9] श्येनः सर्वपतत्रिणाम् मृगसंघानां मृत्युः पुरुषविग्रहः 7.

[10]  – आः! ‍ अतिराक्षसं खलु ते

[11] – कथं? भवान् मर्षयतु मे प्रकृतिदोषः

[12] – मध्यम इति सदृशमस्य

[13] सिंहदंष्ट्रो मधुनिभनयनः स्निग्धगम्भीरकण्ठो बभ्रुभ्रूः श्येननासो वज्रमध्यो गजवृषभगतिर्लम्बपीनांसबाहुः सुव्यक्तं राक्षसीजो विपुलबलयुतो लोकवीरस्य 26.

[14] कनकतालसमानबाहुः मध्ये तनुर्गरुडपक्षविलिप्तपक्षः विकसिताम्बुजपत्रनेत्रो नेत्रे ममाहरति 27.

[15] पाण्डवेन महात्मना / द्यौरिवेन्दुना // ३८ //

[16]भ्रातॄणां गुणतस्करः गुणतस्करः / स्मराम्यहम् // ३५ /

[17] हिडिम्बा – अ, [! दैवतं खल्वस्माकम्]

[18]घटोत्कचः- अहं स धार्तराष्ट्रवनदवाग्निर्घटोत्कचो

[19] भीमः – एह्येहि पुत्र! ‍ व्यतिक्रमकृतं

Image Credit: wikimedia commons

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply