close logo

ಅಪ್ಸರೆಯರು ಭಾಗ ೫ : ಭಾರತದಿಂದ ಚೀನಾ ತಲುಪಿದ ಅಪ್ಸರೆಯರ ಭವ್ಯ ಪರಿಕಲ್ಪನೆ

ಭರತವರ್ಷದ ಅದೆಷ್ಟೋ ಕೃತಿಗಳಲ್ಲಿ  ದೇವಲೋಕದ ಅಲೌಕಿಕ ಸ್ತ್ರೀಯರೆಂದು ವರ್ಣಿಸಲ್ಪಟ್ಟ ಅಪ್ಸರೆಯರ ಪರಿಕಲ್ಪನೆಯು ಇಲ್ಲಿಗೆ ಬಂದ ಚೀನಾ ಪ್ರವಾಸಿಗರ ಕಣ್ಮನಗಳಲ್ಲಿ ಮನೆ ಮಾಡಿ ಚೀನಾ ದೇಶವನ್ನೂ ತಲುಪಿತು. ರೇಷ್ಮೆ ಮಾರ್ಗವಾಗಿ ಭಾರತಕ್ಕೆ ಭೇಟಿ ನೀಡಿದ ಬೋಧಿಸತ್ತ್ವನ ದೂತರನ್ನು ಹಿಂಬಾಲಿಸಿ ಹೋದ ಈ  ಆಕಾಶ ಸುಂದರಿಯರನ್ನು  ಚೀನಾದಲ್ಲಿ ಹಾರುವ ಚೆಲುವೆಯರೆಂದೇ ಗುರುತಿಸಲಾಯಿತು.   

ಚೀನಾದ ಬೌದ್ಧ ಗುಹೆಗಳಲ್ಲಿನ ಶಿಲ್ಪಗಳು ಮತ್ತು ಫ್ರಿಯೆಜ್(frieze) ವರ್ಣಚಿತ್ರಗಳಲ್ಲಿ ಹಾಡುತ್ತ, ಕುಣಿಯುತ್ತ, ಹಾರಾಡುತ್ತಿರುವ ಈ ಮೋಹಕ ಸುಂದರಿಯರನ್ನು ಚೀನೀ ಭಾಷೆಯಲ್ಲಿ ಫೇಟಿಎನ್ (Feitian) ಎಂದು ಕರೆಯುತ್ತಾರೆ. ನಭೆಯಲ್ಲಿ ನಿರ್ಲಿಪ್ತವಾಗಿ  ತೇಲಾಡುವ ಅಪ್ಸರೆಯರನ್ನು  ಚೀನಾದ ಹೆಸರಾಂತ ನೈಸರ್ಗಿಕ  ಗುಹೆಗಳಾದ ಮೊಗಾವ್ ಮತ್ತು ಯುಲಿನ್ ಹಾಗು ಕೃತಕ ಗುಹೆಗಳಾದ ಯುಂಗಣ ಮತ್ತು ಲಾಂಗ್ಮೆನ್ ನಲ್ಲೂ  ಕಾಣಬಹುದು.  

ಚೀನಾದ ಫೇಟಿಎನ್ ಎಂಬ ಅಪ್ಸರೆಯು ಭಾರತದ ಅಪ್ಸರೆಯರಂತೆಯೇ ನೀರಿನ ಕೊಳಗಳಳ್ಳಿ ವಾಸಿಸುವ ಜಲಕನ್ಯೆ, ಮೋಡಗಳ ದೇವಿ. ಜಿಲೇಟಿಯನ್ ಎಂಬ ದೈವದ ಪ್ರೇಯಸಿ. ಬೌದ್ಧ ಗ್ರಂಥಗಳ ಪ್ರಕಾರ  ಜಿಲೇಟಿಯನ್ ಸಂಗೀತದ ಅಧಿದೇವತೆ, ಇವನು ಸೊಗಸಾದ ಸಂಗೀತದ ಜೊತೆ ಎಲ್ಲೆಡೆ ಸುಗಂಧವನ್ನೂ  ಪಸರಿಸುತ್ತಾನಂತೆ. ಆದ್ದರಿಂದ ಫೇಟಿಎನ್-ಳನ್ನು ಸುವಾಸಿನಿ ಮತ್ತು ರಾಗರಂಜಿನಿ ಎಂಬ ವಿಶೇಷಣಗಳಿಂದಲೂ ಗುರುತಿಸುತ್ತಾರೆ. ಬೋಧಿ ವೃಕ್ಷದ ಅಡಿಯಲ್ಲಿ ಇಂತಹ ಜಲ ಕನ್ನಿಕೆಯರು ಆಪ್ಯಾಯಮಾನವಾಗಿ ಸದಾ ತೇಲಾಡುತ್ತಿರುತ್ತಾರೆ ಎಂದು ಹೇಳಲಾಗುತ್ತದೆ. ಹೀಗೆ ಬೌದ್ಧ ಧರ್ಮದ ಜೊತೆ ಜೊತೆಗೆ ಚೀನಾ ಸೇರಿದ ಅಪ್ಸರೆಯರಿಗೆ  ಬೌದ್ಧ ಧರ್ಮದ ದೇವಕನ್ಯೆಯರೆಂಬ ವಿಶೇಷವಾದ ಗೌರವವಿದೆ. 

ಒಂದನೇ ಶತಮಾನ ಅಥವಾ ಇನ್ನೂ ಮುಂಚಿತವಾಗಿಯೇ ಹಾನ್ ರಾಜರ ಮೂಲಕ ಬೌದ್ಧ ಧರ್ಮವು  ರೇಷ್ಮೆ ಮಾರ್ಗವಾಗಿ, ಕುಶನ ಸಾಮ್ರಾಜ್ಯವನ್ನು ಹಾದು ತರಿಮ್ ಬೇಸಿನ್ ಎಂಬ ಚೀನಾದ ಗಡಿ ಪ್ರದೇಶವನ್ನು ತಲುಪಿತು. ಮೌಝಿ ಲಿಹುಓಲುನ್ (Mouzi Lihuolun) ಎಂಬ ಚೀನಾದ ಶಾಸ್ತ್ರೀಯ ಬೌದ್ಧ ಗ್ರಂಥವು ಹಾನ್ ವಂಶದ ರಾಜನಾದ ಮಿಂಗ್ ಟಿ ನ  ಸಲುವಾಗಿಯೇ ಬೌದ್ಧ ಧರ್ಮವು  ಚೀನಾ ದೇಶವನ್ನು ತಲುಪಿತೆಂದು ಸೂಚಿಸುತ್ತದೆ. 

ಈ ಗ್ರಂಥದ ಪ್ರಕಾರ, ಮಿಂಗ್ ರಾಜನಿಗೊಮ್ಮೆ  ಕನಸಿನಲ್ಲಿ  ಸೂರ್ಯ ಸದೃಶನಾದ ದಿವ್ಯ ಪುರುಷನ ದರ್ಶನವಾಗುತ್ತದೆ.  ಆ ದೇವಪುರುಷನು ತನ್ನ ಅರಮನೆಯನ್ನು ಸುತ್ತುತ್ತಿರುವಂತೆ ರಾಜನಿಗೆ ಭಾಸವಾಗುತ್ತದೆಯಂತೆ.  ಮರುದಿನ ಸೋಜಿಗಗೊಂಡ ರಾಜ ತನ್ನ ಸ್ವಪ್ನ ವೃತ್ತಾಂತವನ್ನು ಮಂತ್ರಿಗಳಲ್ಲಿ ಹಂಚಿಕೊಳ್ಳುತ್ತ ಆ ದೈವದ ಬಗ್ಗೆ ವಿಚಾರಿಸುತ್ತಾನೆ. ಭಾರತ ದೇಶದಲ್ಲಿ (ದಾವೋ) ದಿವ್ಯಜ್ಞಾನವನ್ನು ಸಾಧಿಸಿದ ಒಬ್ಬ ವ್ಯಕ್ತಿಯನ್ನು ಜನರು ಬುದ್ಧ ಎಂಬ ಹೆಸರಿನಿಂದ ಕರೆಯುತ್ತಾರೆ ಎಂಬ ಸಂಗತಿಯನ್ನು  ಫು ಯೀ ಎಂಬ ಪಂಡಿತನೊಬ್ಬನು ರಾಜನನ್ನು ಸಮಾಧಾನ ಪಡಿಸುತ್ತಾ ತಿಳಿಸುತ್ತಾನೆ. ಬುದ್ಧನ ತೇಜಸ್ಸು ಸೂರ್ಯ ಸಮಾನವಾದುದು ಮತ್ತು ಅವನು ಗಾಳಿಯಲ್ಲಿ ತೇಲಾಡಬಲ್ಲನು ಎಂದು ತಾನು  ಕೇಳ್ಪಟ್ಟಿರುವುದಾಗಿ ತಿಳಿಸುತ್ತಾನೆ.  ಪ್ರಾಯಶಃ ರಾಜನಿಗೆ ಕನಸಿನಲ್ಲಿ ಬುದ್ಧನ ಸಾಕ್ಷಾತ್ಕಾರ ಆಗಿರಬಹುದಾಗಿ ಅಭಿಪ್ರಾಯ ಪಡುತ್ತಾನೆ. ಇದಾದ ನಂತರ ಮಿಂಗ್ ಟಿ ತನ್ನ ದೂತರನ್ನು ಭಾರತಕ್ಕೆ ಕಳುಹಿಸುತ್ತಾನೆ. ಹೀಗೆ, ಬೌದ್ಧ ಧರ್ಮ ಚೀನಾ ತಲುಪುತ್ತದೆ.  

ಸಂಸ್ಕೃತದಲ್ಲಿ ರಚಿತವಾದ ಮಹಾಯಾನ ಎಂಬ ಗ್ರಂಥಾಧಾರಿತ ಬೋಧಿಸತ್ತ್ವನ ವಿಚಾರಗಳನ್ನು ಬೌದ್ಧ ಧರ್ಮವು ಬೆಂಬಲಿಸಿತು. ಭಾರತದ ಹಲವಾರು ಭಾಷೆಗಳಲ್ಲಿ ಲಿಖಿತವಾದ ಬೌದ್ಧ ಗ್ರಂಥಗಳನ್ನು ಬೌದ್ಧ ಬಿಕ್ಕುವಾಗಿ ದೀಕ್ಷೆ ಪಡೆದ ಪಾರ್ಥಿಯನ್ ರಾಜಕುಮಾರನೊಬ್ಬನು ಸಾ.ಶ 148ರಲ್ಲಿ  ಚೀನಾ ಭಾಷೆಗೆ ಅನುವಾದ ಮಾಡಿದವರಲ್ಲಿ ಮೊದಲಿಗನೆಂದು ತಿಳಿದು ಬಂದಿದೆ. 

ಮಹಾಯಾನದ ಬೌದ್ಧ ತತ್ವಗಳ ಪರಿಚಯವಾದ ನಂತರ ಭಾರತದ ಹಲವಾರು ವಿಷಯಗಳು ಚೀನಾದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಮೇಲೆ ಪರಿಣಾಮ ಬೀರಿದವು. ಬೌದ್ಧ ಧರ್ಮದ ಪೌರಾಣಿಕ ಕಥೆಗಳಲ್ಲಿ ಬುದ್ಧನ ಕಥೆಗಳ ಜೊತೆಗೆ  ಭಾರತದ ಜಾನಪದ ಕಥೆಗಳು  ಮತ್ತು ವೇದ ಸಾಹಿತ್ಯದಿಂದ ಆಯ್ದುಕೊಳ್ಳಲಾದ ಮಾಹಿತಿಗಳೂ ಸೇರಿಕೊಂಡವು. 

ಬೌದ್ಧ ಧರ್ಮದ ನೆರಳಿನಂತೆ ಅದನ್ನೇ ಹಿಂಬಾಲಿಸುತ್ತ ಭಾರತದ ಸಂಸ್ಕೃತ ಭಾಷೆ, ಪೌರಾಣಿಕ ಕಥೆಗಳು, ದಂತ ಕಥೆಗಳು, ಮಹಾಕಾವ್ಯಗಳು, ದೇವ-ದೇವತೆಗಳು, ಯಕ್ಷರು, ಅಪ್ಸರೆಯರು, ಗಂಧರ್ವರು ಮತ್ತು ರಾಕ್ಷಸರು ಸಹ ಚೀನಾ ತಲುಪಿದವು.  

ಮೊಗಾವ್ ಗುಹಾಂತರ ದೇವಾಲಯ 

ಬೌದ್ಧ ಧರ್ಮದ ವಿಕಾಸದ ಪುರಾವೆಯಾಗಿ ಡನ್ಹಅಂಗ್ ನಂತಹ ಹಲವಾರು ಗುಹಾಂತರ ದೇವಾಲಯಗಳು ಎದ್ದು ನಿಂತವು.  ಸುಮಾರು 1500 ವರ್ಷಗಳ ಹಿಂದೆ ಚೀನಾದ ವಾಯುವ್ಯ ದಿಕ್ಕಿನಲ್ಲಿರುವ ಮರಳುಗಾಡು ಪ್ರದೇಶದ ಮೊಗಾವ್ ಗುಹೆಗಳಲ್ಲಿ ಬೌದ್ಧ ಧರ್ಮ ಮತ್ತು ಕಲೆಯ ಆಖ್ಯಾನವನ್ನು ನೋಡಬಹುದು. ಯುನೆಸ್ಕೋದ ವಿಶ್ವಪರಂಪರೆಗಳ ಪಟ್ಟಿಯನ್ನು ಸೇರಿರುವ ಈ ಮೊಗಾವ್ ಗುಹಾ ಸಂಕೀರ್ಣದಲ್ಲಿ ಸುಮಾರು 500 ಗುಹೆಗಳಿವೆ. ಗಾನ್ಸು ಪ್ರಾಂತ್ಯದ ಡನ್ಹುಅಂಗ್ ಎಂಬ ನಗರದ ಬಂಡೆಗಳಲ್ಲಿ ಕೆತ್ತಲ್ಪಟ್ಟಿರುವ ಈ ಗುಹಾ ಸಮೂಹ 15 ಮೈಲಿಗಳನ್ನು ಆವರಸಿಕೊಂಡಿವೆ. ಇಲ್ಲಿ 4ನೇ ಶತಮಾನದಿಂದ 14ನೇ ಶತಮಾನದ ವರೆಗಿನ  ಶಿಲ್ಪನಿಧಿ, ಹಸ್ತಪ್ರತಿಗಳು, ವರ್ಣಾತ್ಮಕವಾದ ಸುತ್ತೋಲೆಗಳು ಮತ್ತು ಬಿತ್ತಿ ಚಿತ್ರಗಳ ಶ್ರೀಮಂತಿಕೆಯಿದೆ.  ಸಾ.ಶ 366 ರಲ್ಲಿ ಮೊಗಾವ್ ಗುಹೆಯ ನಿರ್ಮಾಣ ಪ್ರಾರಂಭಗೊಂಡಿತು. ಅನಂತರ ಸುಮಾರು 1000 ವರ್ಷಗಳ ಕಾಲ ಎಂದರೆ ರೇಷ್ಮೆ ಮಾರ್ಗದ ಅವನತಿಯವರೆಗೂ ಡನ್ಹಅಂಗ್  ಕಂಡ ಹಲವಾರು ವಂಶದ ರಾಜರುಗಳು ಮೊಗಾವ್ ಗುಹಾ ಸಂಕೀರ್ಣವನ್ನು ಸಂವೃದ್ಧವಾಗಿ ಬೆಳೆಸಿದರು. 

ಭಾರತದ ಬೌದ್ಧ ಧರ್ಮದ ಪರಿಣಾಮವನ್ನು ಚೀನಾದ ಸಾಹಿತ್ಯ, ಸಂಗೀತ, ಕಲೆ, ಕಾವ್ಯ ಮತ್ತು ನೃತ್ಯ-ನಾಟಕಗಳಲ್ಲಿಯೂ ನೋಡಬಹುದು. ಎರಡು ಸಹಸ್ರಮಾನಗಳ ಕಾಲಾವಧಿಯಲ್ಲಿ ಚೀನಾದ ರಾಜ ನರ್ತನ ಮತ್ತು ಜಾನಪದ ನೃತ್ಯಗಳಲ್ಲಿ ಭಾರತದ ಛಾಪು ಎದ್ದುಕಾಣಿಸಲು ತೊಡಗಿದವು ಮತ್ತು ಚೀನಾದ ಇನ್ನು ಹತ್ತು ಹಲವು ಬೌದ್ಧ ನಾಟ್ಯಪ್ರಕಾರಗಳಿಗೆ ಎಡೆ ಮಾಡಿಕೊಟ್ಟವು. ಟಿಬೆಟ್ ನ ಬೌದ್ಧ ನರ್ತನ, ದಕ್ಷಿಣದ ಬೌದ್ಧ ನಾಟ್ಯ ಪ್ರಕಾರ ಮತ್ತು ಇನ್ನು ಹಲವು ರೀತಿಯ ಬೌದ್ಧ ಜಾನಪದ ನೃತ್ಯಗಳು ಅದರಲ್ಲೂ  ಡನ್ಹಅಂಗ್ ನ ಬೌದ್ಧ ನರ್ತನಗಳು ಮೊಗಾವ್ ಗುಹೆಗಳ ಭಿತ್ತಿ ಚಿತ್ರಗಳಿಂದ ಪ್ರಭಾವಿತವಾಗಿವೆ. ಬೌದ್ಧ ಮಠಗಳ ವಿಶೇಷ ಆಚರಣೆಗಳಂದು ಮತ್ತು ಹಬ್ಬಗಳಂದು ನಡೆಯುವ ವರ್ಣ ರಂಜಿತವಾದ ಈ ಬೌದ್ಧ ನರ್ತನಗಳು ನೋಡುಗರ ಕಣ್ಣಿಗೆ ಹಬ್ಬ.  

ಡನ್ಹಅಂಗ್ ನ ಹಸಿಚಿತ್ರಗಳಲ್ಲಿ (ಫ್ರೆಸ್ಕೋ) ಉತ್ತರ ಚೀನಾದ ಲಿಅನ್ಗ್  ರಾಜವಂಶದಿಂದ ಮೊದಲುಗೊಂಡು ಟ್ಯಾಂಗ್ ರಾಜವಂಶದ ಕಾಲಾವಧಿಯವರೆಗೂ ವಿಪುಲವಾಗಿ ವಿಕಾಸವಾದ ಅಪ್ಸರೆಯರ ಚಿತ್ರಗಳ ಕಥೆ ಎಣೆಯುವುದು ಕಷ್ಟವಾಗದು. ಈ ಗುಹೆಗಳ ಅಪ್ಸರೆಯರ ಚಿತ್ರಗಳು  ಸುಮಾರು ವರ್ಷಗಳ ಕಾಲ ಸಾಟಿಯಿಲ್ಲದ ಪ್ರಸಿದ್ಧಿಯನ್ನು ಅನುಭವಿಸಿದ್ದವು. ಈ  ಚಿತ್ರಗಳೇ  ಡನ್ಹಅಂಗ್ ಗುಹೆಗಳ ವೈಶಿಷ್ಟ್ಯತೆ.  ಇಲ್ಲಿನ ಭಿತ್ತಿಚಿತ್ರಗಳಲ್ಲಿ  ಸುಮಾರು ಐದು ಸಾವಿರ ಅಪ್ಸರೆಯರ ಚಿತ್ರವನ್ನು ನೋಡಬಹುದು. 

ಇಲ್ಲಿ ಕೆತ್ತಲ್ಪಟ್ಟ ಇನ್ನೂರು ನಲವತ್ತು ಗುಹೆಗಳಲ್ಲಿ ಸಂಗೀತ ಮತ್ತು ನೃತ್ಯದ  ಸವಿಸ್ತಾರವಾದ ನಿರೂಪಣೆಯಿದೆ. ಇಲ್ಲಿನ ಗುಹೆಗಳಲ್ಲಿನ ಫ್ರೆಸ್ಕೋ ಚಿತ್ರಗಳಲ್ಲಿ ನಾಲ್ಕು ಸಾವಿರ ವಾದ್ಯಗಳು, ನಲವತ್ನಾಲ್ಕು ಸಾವಿರ ಪ್ರದರ್ಶಕರ ತಂಡಗಳು, ಮೂರು ಸಾವಿರ ಸಂಗೀತ ಮತ್ತು ನೃತ್ಯ ಪ್ರದರ್ಶಕರು ಮತ್ತು ಸಕಲ ಕಲೆಗಳಲ್ಲೂ ನಿಪುಣರಾದ  ಐನೂರು ತಂಡಗಳನ್ನು ಗುರುತಿಸಲಾಗಿದೆ.    

ಡನ್ಹಅಂಗ್ ನೃತ್ಯ ಶೈಲಿಯು ಇಲ್ಲಿನ ಫ್ರೆಸ್ಕೋ ಚಿತ್ರಗಳಿಂದಲೇ ಸ್ಫೂರ್ತಿ ಪಡೆದಿದೆ. ಹಿಂದೂ ಧರ್ಮವು ದೇವಕನ್ಯೆಯರು, ಗಂಧರ್ವ ಸ್ತ್ರೀಯರು, ಸುರಲೋಕದ ರಾಗರತಿಯರೆಂದು ಚಿತ್ರಿಸಿದ ಅಪ್ಸರೆಯರನ್ನು ಈ ಫ್ರೆಸ್ಕೋಗಳ ಮೂಲಕ ಬೌದ್ಧ ಧರ್ಮಕ್ಕೆ ಪರಿಚಯಿಸಿದವರು ಬೌದ್ಧ ಬಿಕ್ಕುಗಳು. 

ಡನ್ಹಅಂಗ್ ನ ಹಾರುವ ಅಪ್ಸರೆಯರು 

ಚೀನಾದ ಫ್ರೆಸ್ಕೋ ಚಿತ್ರಗಳಲ್ಲಿ ಕಾಣುವ ಅಪ್ಸರೆಯರು ತ್ರಿಭಂಗಿ ಎಂಬ ಭಾರತದ ಶಾಸ್ತ್ರೀಯ ನರ್ತನಗಳಲ್ಲಿ ಕಾಣ ಸಿಗುವ ಒಂದು ಭಂಗಿಯಲ್ಲಿ ನಿಂತಿರುತ್ತಾರೆ.  ಅದರಲ್ಲೂ S ಆಕಾರದಲ್ಲಿ ಮೈಯನ್ನು ಕೊಂಚ ತೀವ್ರವಾಗಿಯೇ ಬಾಗಿಸಬೇಕಾದ  ಒಡಿಸ್ಸಾ ನಾಟ್ಯಪ್ರಕಾರದ ಇವರ ಭಂಗಿ ಮೋಹಕವಾದುದು. ಆರಂಭದಲ್ಲಿ ರಚಿಸಲ್ಪಟ್ಟ ಫ್ರೆಸ್ಕೋ ಚಿತ್ರಗಳಲ್ಲಿನ ಚೀನೀ ಅಪ್ಸರೆಯರು ಭಾರತದ ವೇಷ ಭೂಷಣಗಳನ್ನೇ ಧರಿಸಿರುತ್ತಾರೆ. ಇವರು ನೀಳವೇಣಿಯರು. ಬರಿಗಾಲಲ್ಲಿ ನಿಂತ ಈ ಸುಂದರಿಯರು ಮೊಣಕಾಲಿನವರೆಗು ಲಂಗಗಳನ್ನು ಹಾಕಿಕೊಂಡಿರುತ್ತಾರೆ. ಅದರ ಮೇಲೆ ನಡುವಿಗೆ ಬಣ್ಣ ಬಣ್ಣದ ಬಟ್ಟೆಯನ್ನು ಸುತ್ತಿಕೊಂಡಿರುತ್ತಾರೆ ಅದರ ಮೇಲೆ ಗಾಳಿಯಲ್ಲಿ ತೇಲಾಡುತ್ತಿರುವಂತೆ ರಿಬ್ಬನ್ ಗಳನ್ನೂ ಸಿಕ್ಕಿಸಿಕೊಂಡಿರುತ್ತಾರೆ. ದೇಹದ ಮೇಲ್ಭಾಗವು ನಿರ್ವಸ್ತ್ರವಾಗಿರುವುದರಿಂದ ಒಡವೆಗಳಿಂದ ಅಲಂಕರಿಸಿಕೊಂಡಿರುತ್ತಾರೆ. ಒಂಕಿ, ಕಾಲ್ಗೆಜ್ಜೆ, ಬಳೆಗಳಂತ ಅನೇಕ ಆಭರಣಗಳನ್ನು ಹಾಕಿಕೊಂಡಿರುತ್ತಾರೆ.   

ಈ ಗುಹೆಗಳ ಚಿತ್ರಗಳಲ್ಲಿನ ಅಪ್ಸರೆಯರು  ಗ್ರೀಸ್, ರೋಮ್, ಗಾಂಧಾರ, ಪರ್ಷಿಯಾ, ಮಧ್ಯ ಏಷ್ಯಾ ಮತ್ತು ಭಾರತೀಯ ಸಂಸ್ಕೃತಿಗಳ ಪ್ರಭಾವಕ್ಕೆ ಒಳಗಾಗಿರುವ ಕಾರಣ ಇವುಗಳ ವೈಶಿಷ್ಟ್ಯತೆ ಹೆಚ್ಚು. ಮೊದಮೊದಲು ರಚಿತವಾದ ಚಿತ್ರಗಳಲ್ಲಿ  V ಆಕಾರದ ಭಂಗಿಯಲ್ಲಿ ನಿಂತಿರುವ ಅಪ್ಸರೆಯರಲ್ಲಿ ಸ್ತ್ರೀ ಗುಣ ಪ್ರಧಾನವಾದ ಲಾವಣ್ಯಕ್ಕಿಂತ ಹೆಚ್ಚಾಗಿ ಪುರುಷ ಲಕ್ಷಣವಾದ ದೇಹಧಾಡ್ಯತೆ ಕಂಡು ಬರುತ್ತದೆ. ಭಾರತದ ಅಪ್ಸರೆಯರಿಗೆ ಹೋಲಿಸಿದರೆ ಇವರು ಕೊಂಚ ಭಿನ್ನವಾಗಿ ಕಾಣುತ್ತಾರೆ.

ಟ್ಯಾಂಗ್ ವಂಶದ ರಾಜರ  (ಸಾ.ಶ 618-904) ಕಾಲದಲ್ಲಿ ರಚಿತವಾದ ಅಪ್ಸರೆಯರ ಚಿತ್ರಗಳಲ್ಲಿ ಇವರ ಸಹಜವಾದ ಸೌಂದರ್ಯ ಮತ್ತು ಲವಲವಿಕೆಯ ಜೊತೆ ಚೀನಾ ದೇಶದ ಸೌಂದರ್ಯದ ಪರಿಕಲ್ಪನೆಯ ದೃಷ್ಟಿಕೋನವೂ ಸಿಗುತ್ತದೆ. ಚೀನಾ ಸಂಸ್ಕೃತಿಯ ಮಹೋನ್ನತವಾದ ಕಾಲಮಾನವೆನಿಸಿಕೊಂಡಿದ್ದ ಆ ಸಮಯವನ್ನು ವಿಶ್ವಸಂಸ್ಕೃತಿಯು ನೆಲೆಗಟ್ಟಿದ ಸುವರ್ಣಯುಗವೆಂದೇ ಭಾವಿಸಲಾಗುತ್ತದೆ. ಆ ಸಮಯದಲ್ಲಿ ಉತ್ತುಂಗಕ್ಕೇರಿದ ಅಪ್ಸರೆಯರ ಚಿತ್ರಣಗಳು ಡನ್ಹಅಂಗ್ ಶೈಲಿಯನ್ನು  ಅತ್ಯತ್ತಮವಾಗಿ ಪ್ರದರ್ಶಿಸುತ್ತವೆ.    

ಮೊಗಾವ್ ಗುಹೆಗಳ ಸುಮಾರು 500 ಗುಹೆಗಳ ಪೈಕಿ ಇನ್ನೂರಕ್ಕೂ ಹೆಚ್ಚಿನ ಗುಹೆಗಳಲ್ಲಿ ಹಾರುವ ಆಕಾಶ ಸುಂದರಿಯರಾದ ಅಪ್ಸರೆಯರ ಚಿತ್ರಗಳಿವೆ. ವಿಭಿನ್ನವಾದ ಹಾವ-ಭಾವಗಳನ್ನು ಪ್ರದರ್ಶಿಸುತ್ತಿರುವ ಅಪ್ಸರೆಯರಲ್ಲಿ ಎದ್ದು ಕಾಣುವ  ಚೈತನ್ಯ, ಹುರುಪು ಮತ್ತು ಉನ್ಮಾದ ಗಮನಾರ್ಹವಾದದ್ದು. ಈ ಚಿತ್ರಗಳಲ್ಲಿ ಕೆಲವು ಅಪ್ಸರೆಯರು ಸುತ್ತುಗೋಡೆಯನ್ನು ಒರಗಿ ನಿಂತು ಎತ್ತಲೋ ನೋಡುತ್ತಿದ್ದರೆ ಕೆಲವರು ಮುಕ್ತವಾಗಿ ಹಾರಾಡುತಿದ್ದಾರೆ.

ಇಲ್ಲಿನ ಮತ್ತೊಂದ ವಿಶೇಷ, ಕಿಂಗ್ ಕಾಂಗ್ ಎಂಬ ವೀರನ ಚಿತ್ರಣದ ಜೊತೆ ಭೋಧಿಸತ್ತ್ವನ ಶಾಂತ ಮತ್ತು ಗಾಂಭೀರ್ಯದ ಚಿತ್ರಣ. ಸಾವಿರ ವರ್ಷಗಳ ಕಾಲ ಸತತವಾಗಿ ನಡೆದುಬಂದ ಅಪ್ಸರೆಯರ ಚಿತ್ರಣದ ಪರಿಕಲ್ಪನೆಯು ಪ್ರತಿಯೊಬ್ಬ ರಾಜನ ಕಾಲದಲ್ಲೂ ಬದಲಾವಣೆಗಳನ್ನು ಕಂಡಿತು. ಚರಿತ್ರೆಯ ಪುಟ ಬದಲಾಗುತ್ತಿದ್ದಂತೆ ಸಮಯಕ್ಕೆ ತಕ್ಕ ವೈಶಿಷ್ಟ್ಯತೆಯೂ ಅಪ್ಸರೆಯರನ್ನು ಹರಸಿ ಬಂದವು. 

ರೇಷ್ಮೆ ಮಾರ್ಗವು ಬೆಲೆ ಬಾಳುವ ರೇಷ್ಮೆ, ಮಸಾಲೆ, ಮುತ್ತು-ರತ್ನಗಳ ಜೊತೆ ಜೊತೆಗೆ , ನೀಲಿ ಮತ್ತು ಪೇಪರ್ ನಂತಹ ಸಾಮಾನ್ಯ ವಸ್ತುಗಳ ವಿನಿಮಯಕ್ಕೂ ಬಹಳ ಮುಖ್ಯವಾದ ದಾರಿಯಾಗಿತ್ತು.  ಇದೇ ಮಾರ್ಗವಾಗಿ ಬೌದ್ಧ ಧರ್ಮ ಮಧ್ಯ ಏಷ್ಯಾದ ಹಲವಾರು ದೇಶಗಳನ್ನು ತಲುಪಿತು. 

ಬೌದ್ಧ ಧರ್ಮವು ಚೀನಾದ ಚಹರೆಯನ್ನೇ ಬದಲಾಯಿಸಿತು. ಚೀನಾ ದೇಶದ ಮೂಲೆ ಮೂಲೆಗಳನ್ನು  ಬೌದ್ಧ ಮಠಗಳು ಮತ್ತು  ಪಗೋಡಾಗಳು ಅಲಂಕರಿಸಿದರೆ ಈ ಮಠಗಳ ಅಲಂಕಾರಕ್ಕೆ ನಭೆಯಲ್ಲಿ ನಿರ್ಲಿಪ್ತವಾಗಿ ತೇಲಾಡುವ ಆಕಾಶ ಸುಂದರಿಯರಾದ ಅಪ್ಸರೆಯರೇ ಮುಂದಾದರು. ಹೀಗೆ ಭಾರತದ ಅಪ್ಸರೆಯರು  ಚೀನಾ ದೇಶದ ಸಂಸ್ಕೃತಿಯ ಭಾಗವಾಗಿಬಿಟ್ಟರು.     

(This is a translation of  an article written in English by Shalini Mahapatra.)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply