ಮಹಾಭಾರತದಲ್ಲಿ ಕುರುವಂಶದ ಅರಸಿ ಗಾಂಧಾರಿ ಮತ್ತವಳ ನೂರು ಮಂದಿ ಗಂಡು ಮಕ್ಕಳ ಕಥೆಯಿದೆ. ಶತ ಕೌರವರು ಎಂದರೆ ನೂರು ಜನ ಕುರುವಂಶದ ಮಕ್ಕಳು, ಪಂಚ ಪಾಂಡವರು ಎಂದರೆ ಐದು ಮಂದಿ ಪಾಂಡು ಪುತ್ರರ ವಿರುದ್ಧ ಕುರುಕ್ಷೇತ್ರ ಯುದ್ಧದಲ್ಲಿ ಪಾಲ್ಗೊಂಡು ಎಲ್ಲರೂ ಮಡಿದರು. ಪಾಂಡವರು ಸಿಂಹಾಸನವನ್ನೇರಿ ಹಸ್ತಿನಾಪುರದ ದೊರೆಗಳಾದರು. ರಾಮಾಯಣದಲ್ಲಿ ಕುಶವಂಶದ ಅರಸಿಯಾಗಿದ್ದ ಅಪ್ಸರೆ ಘೃತಾಚಿ ಮತ್ತವಳ ನೂರು ಮಂದಿ ಹೆಣ್ಣು ಮಕ್ಕಳ ಕಥೆಯಿದೆ.
ಅಪ್ಸರೆ ಘೃತಾಚಿ ಪರಮ ಸುಂದರಿ. ಕಪ್ಪಾದ ಗುಂಗುರು ಕೂದಲಿನ ಆಕರ್ಷಕವಾದ ಸೌಂದರ್ಯವತಿ. ಈ ಮೋಹಕ ರೂಪದ ಆಕಾಶ ಸುಂದರಿಯ ಉಲ್ಲೇಖವಿರುವ ಕಥೆಗಳು ಮಹಾಭಾರತ ಮತ್ತು ರಾಮಾಯಣ, ಈ ಎರಡೂ ಮಹಾಕಾವ್ಯಗಳಲ್ಲಿಯೂ ಸಿಗುತ್ತವೆ. ಕುಶ ವಂಶದಲ್ಲಿ ಇವಳ ಪಾತ್ರ ಪ್ರಮುಖವಾದದ್ದು.
ರಾಮಾಯಣದ ಬಾಲಕಾಂಡದಲ್ಲಿ, ಮಗಧೀ ನದಿಯ ದಡದಲ್ಲಿ ತಂಗಿದ್ದಂತ ಸಂಧರ್ಭದಲ್ಲಿ ವಿಶ್ವಾಮಿತ್ರ ಮಹರ್ಷಿಗಳು ತಮ್ಮ ವಂಶಸ್ಥರಾದ ಕುಶ ರಾಜರ ಕಥೆಗಳನ್ನು ಶ್ರೀ ರಾಮನಿಗೆ ಹೇಳುತ್ತಾರೆ. ಕುಶ ಚಕ್ರವರ್ತಿ ಚಂದ್ರವಂಶದ ರಾಜ. ಅವನಿಗೆ ಕುಶಾಂಭ, ಕುಶನಾಭ, ಅಸೂರ್ತರಜಸಾ ಮತ್ತು ವಸು ಎಂಬ ನಾಲ್ವರು ಪುತ್ರರಿದ್ದರು. ಆ ನಾಲ್ಕೂ ಜನ ರಾಜಪುತ್ರರು ಪ್ರತ್ಯೇಕವಾಗಿ ತಮ್ಮ ತಮ್ಮ ರಾಜ್ಯವನ್ನು ಆಳುತ್ತಿದ್ದರು. ಕುಶನಾಭನು ಮಹೋದಯ ಎಂಬ ರಾಜ್ಯವನ್ನು ಸ್ಥಾಪಿಸಿ ಅಲ್ಲಿನ ಮಹೀಪತಿಯಾಗಿದ್ದನು. ಒಮ್ಮೆ ಅಪ್ಸರೆ ಘೃತಾಚಿಯನ್ನು ನೋಡಿದ ಕುಶನಾಭನು ಅವಳ ಸೌಂದರ್ಯಕ್ಕೆ ಮನಸೋತಿದ್ದನು. ಕಾಲಾಂತರದಲ್ಲಿ ಕುಶನಾಭನ ವಿವಾಹವು ಅಪ್ಸರೆ ಘೃತಾಚಿಯ ಜೊತೆಯೇ ನೆರವೇರಿತು. ಅವರಿಗೆ ಅಲೌಕಿಕ ಸೌಂದರ್ಯವಿದ್ದ ನೂರು ಜನ ಹೆಣ್ಣು ಮಕ್ಕಳು ಜನಿಸಿದರು.
कुशनाभस्तु राजर्षि: कन्याशतमनुत्तमम्।
जनयामास धर्मात्मा घृताच्यां रघुनन्दन।। १-३२-११।।
ಕುಶನಾಭಸ್ತು ರಾಜರ್ಷಿ: ಕನ್ಯಾಶತಮನುತ್ತಮಮ್ ।
ಜನಯಾಮಾಸ ಧರ್ಮಾತ್ಮಾ ಘೃತಾಚ್ಯಾಂ ರಘುನಂದನ ।। 1-32-11
ಅಪ್ಸರೆ ಘೃತಾಚಿ ಮತ್ತು ಅರಸ ಕುಶನಾಭನ ಶತ ಪುತ್ರಿಯರು ಪರಮಸುಂದರಿಯರು, ಜೊತೆಗೆ ಸಕಲ ಕಲಾ ಕೋವಿದೆಯರಾಗಿ ಬೆಳೆದರು. ಒಂದು ದಿನ ಒಂದು ಉದ್ಯಾನವನದಲ್ಲಿ ಆ ಶತ ಕನ್ನಿಕೆಯರು ಸಂಗೀತ-ನೃತ್ಯಗಳಲ್ಲಿ ಮಗ್ನರಾಗಿ ವಿರಮಿಸುತ್ತಿದ್ದಾಗ ಅಲ್ಲಿಗೆ ಬಂದಂತಹ ವಾಯುದೇವನು ಅವರ ಅಮೋಘವಾದ ಸೌಂದರ್ಯ ಮತ್ತು ಅವರ ಕಲಾ ಪ್ರೌಢಿಮೆಯನ್ನು ಕಂಡು ಅವರಲ್ಲಿ ಮನಸೋತನು. ತಕ್ಷಣ ಆ ಎಲ್ಲ ಲಲನಾಮಣಿಗಳನ್ನೂ ವರಿಸುವುದಾಗಿ ನಿರ್ಧರಿಸಿ ಅವರಲ್ಲಿ ತನ್ನ ಮನೋಭಿಲಾಷೆಯನ್ನು ಪ್ರಸ್ತಾಪಿಸಿದನು. ವಾಯು ದೇವನು ಅವರನ್ನು ಕುರಿತು :
चलं हि यौवनं नित्यं मानुषेषु विशेषतः |
अक्षय्यं यौवनं प्राप्ता अमर्यश्च भविष्य्थ || १-३२-१७
ಚಲಂ ಹಿ ಯೌವನಂ ನಿತ್ಯಂ ಮನುಮಾನುಷ್ಯೆೇಷು ವಿಶೇಷತಃ |
ಅಕ್ಷಯ್ಯಂ ಯೌವನಂ ಪ್ರಾಪ್ತಾ ಅಮರ್ಯಶ್ಚ ಭವಿಷ್ಯತ || 1-32-17
“ಎಲೈ ಯುವತಿಯರೇ! ನೀವು ಯೌವನದ ಹೊಸ್ತಿಲಿನಲ್ಲಿ ಇರುವಿರಿ, ನರ ಸಾಮಾನ್ಯರಿಗೆ ಯೌವನವೆನ್ನುವುದು ಅಲ್ಪ ಕಾಲ ಮಾತ್ರ. ಆದರೆ ನೀವೆಲ್ಲ ನನ್ನನ್ನು ವರಿಸಿದ್ದಲ್ಲಿ ದೇವತೆಗಳಂತೆ ಚಿರ ಯೌವನವನ್ನು ಅನುಭವಿಸುವಿರಿ.” ಎಂದು ಆಗ್ರಹ ಮಾಡಿದನು.
ವಾಯುದೇವನ ಮಾತನ್ನು ಕೇಳಿ ಅವಮಾನವೆಂದೆನಿಸಿದ ಲಲನೆಯರು ನಕ್ಕು, ಅವನ ಪ್ರಸ್ತಾಪವನ್ನು ಖಂಡಿಸುತ್ತಾ ಹೀಗೆ ನುಡಿದರು :
मा भूत्सकालो दुर्मेधः पितरं सत्यवादिनम् |
अवमन्य स्वधर्मेण स्वयंवरमुपास्महे || १-३२-२१
ಮಾ ಭೂತ್ಸಕಾಲೋ ದುರ್ಮೇಧಃ ಪಿತರಂ ಸತ್ಯವಾದಿನಮ್ |
ಅವಮನ್ಯ ಸ್ವಧರ್ಮೇಣ ಸ್ವಯಂವರಮುಪಾಸ್ಮಹೇ || 1-32-21
“ ಹೇ ದುರ್ಮತಿಯೇ ! ನಮ್ಮ ತಂದೆಯನ್ನು ಅಲಕ್ಷಿಸಿ ನಾವೇ ಖುದ್ದಾಗಿ ನಮಗೆ ಬೇಕಾದ ವರನನ್ನು ಹುಡುಕಿಕೊಳ್ಳುವಂತ ಸಂಧರ್ಭ ಎಂದಿಗೂ ಬಾರದು.” ಎಂದು ಅವನನ್ನು ನಿರಾಕರಿಸಿಬಿಟ್ಟರು.
ವಾಯುದೇವನು ಈ ರೀತಿಯ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಿರಲಿಲ್ಲ. ಆ ಯುವತಿಯರು ತನ್ನನ್ನು ನಿರಾಕರಿಸಿ ತನಗೆ ಅಪಮಾನ ಮಾಡಿದರೆಂದು ಅವನು ಕ್ರೋಧಗೊಂಡನು. ಆ ಮೋಹಕ ರೂಪದ ಯುವತಿಯರಿಗೆ ಭೂಷಣಪ್ರಾಯವಾದ ಸೌಂದರ್ಯವೇ ಕುಂದುಹೋಗಬೇಕೆಂದು ಅವರ ದೇಹದೊಳಗೆ ಸೇರಿಕೊಂಡು ಅವರ ಸುಂದರವಾದ ಮೈಮಾಟವನ್ನು ಕೆಡವಿ ವಿಕಾರಗೊಳಿಸಿ ಗೂನು ಬೆನ್ನಿನ ಕುಬ್ಜೆಯರನ್ನಾಗಿ ಮಾಡಿಬಿಟ್ಟನು.
तासां तु वचनं श्रुत्वा हरिः परमकोपनः |
प्रविश्य सर्वगात्राणि बभंज भगवान् प्रभुः || १-३२-२३
ತಾಸಾಂ ತು ವಚನಂ ಶ್ರುತ್ವಾ ಹರಿಃ ಪರಮಕೋಪನಃ |
ಪ್ರವಿಶ್ಯ ಸರ್ವಗಾತ್ರಾಣಿ ಬಭಂಜ ಭಗವಾನ್ ಪ್ರಭುಃ || 1-32-23
ಆ ಶತಕನ್ಯೆಯರು ವಿಷಾದಿಸುತ್ತ ಕಣ್ಣೀರಿಡುತ್ತ ತಮ್ಮ ತಂದೆಯ ಬಳಿ ಬಂದು ತಮ್ಮ ದುಃಖವನ್ನು ತೋಡಿಕೊಂಡರು. ತನ್ನ ಶತ ಪುತ್ರಿಯರ ನಡತೆ ಮತ್ತು ವಿಧೇಯತೆಯನ್ನು ತಂದೆ ಕುಶನಾಭ ಹೊಗಳಿ ಮೆಚ್ಚಿಕೊಂಡನು, ಆದರೂ ಮಕ್ಕಳ ದುಃಸ್ಥಿತಿಯನ್ನು ಕಂಡು ಬಹಳ ನೊಂದುಕೊಂಡನು. ಅಂದಿನಿಂದ ಮಹೋದಯ ನಗರಿಯು ಕನ್ಯಾಕುಬ್ಜ ಎಂದರೆ ಕುಬ್ಜ ಕನ್ಯೆಯರ ರಾಜ್ಯ ಎಂಬ ಹೆಸರಿನಿಂದ ಗುರುತಿಸಲ್ಪಟ್ಟಿತು.
ಹೀಗೆ ವಿಶ್ವಾಮಿತ್ರ ಮಹರ್ಷಿಗಳು ಕುಶ ವಂಶದ ಶತಯುವತಿಯರ ಕಥೆಯನ್ನು ಹೇಳುತ್ತಿರುವಾಗ ಬ್ರಹ್ಮರ್ಷಿ ಚೂಲೀ ಮತ್ತು ಅವರ ಸೇವೆಯಲ್ಲಿ ನಿರತಳಾಗಿದ್ದ ಅಪ್ಸರೆ ಸೋಮದಾಳ ಕಥೆಯನ್ನು ಹೇಳತೊಡಗಿದರು.
तपस्यताम् रिषिम् तत्र गन्धर्वैयि पर्युपासते ।
सोमदा नाम भद्रं ते उरुमिला तनया तदा ॥ १-३३-१२
ತಪಸ್ಯತಾಂ ಋಷಿಮ್ ತತ್ರ ಗನ್ಧರ್ವೈಯೀ ಪರ್ಯುಪಾಸತೇ ।
ಸೋಮದಾ ನಾಮ ಭದ್ರಂ ತೇ ಉರುಮಿಲಾ ತನಯಾ ತದಾ ॥ 1-33-12
ತಪಸ್ಸಿನಲ್ಲಿ ನಿರತರಾಗಿದ್ದ ಆ ಋಷಿಯ ಸೇವೆಯಲ್ಲಿ ಸೋಮದಾ ಎಂಬ ಹೆಸರಿನ ದೇವಲೋಕದ ಸ್ತ್ರೀಯೊಬ್ಬಳು ತೊಡಗಿದ್ದಳು. ಆ ಸೋಮದಾಳು ಅಪ್ಸರೆ ಊರ್ಮಿಳೆಯ ಮಗಳು., ಎಂದು ವಿಶ್ವಾಮಿತ್ರರು ಅವರಿಬ್ಬರ ಪರಿಚಯವನ್ನು ನೀಡಿದರು.
ಅಪ್ಸರೆ ಸೋಮದಾಳು ಚೂಲೀ ಮಹರ್ಷಿಗಳ ತಪೋಭಂಗವಾಗದಂತೆ ಸಮರ್ಪಣಾ ಭಾವದಿಂದ ತನ್ನ ಸೇವೆಯನ್ನು ಸಲ್ಲಿಸುತ್ತಿದ್ದಳು. ಅವಳ ಸೇವಾಭಾವ ಮತ್ತು ಕರ್ತವ್ಯ ನಿಷ್ಠೆಯನ್ನು ಮೆಚ್ಚಿದ ಚೂಲೀ ಮಹರ್ಷಿಗಳು ಅವಳಿಗೆ ಬೇಕಾದ ವರವನ್ನು ಕೇಳುವಂತೆ ಅನುಗ್ರಹಿಸಿದರು. ಅಪ್ಸರೆ ಸೋಮದಾಳು ತಾನು ಚೂಲೀ ಮಹರ್ಷಿಗಳ ಮಗನ ತಾಯಿಯಾಗಲು ಬಯಸುವುದಾಗಿ ಕೇಳಿಕೊಂಡಳು.
अपतिह् च अस्मि भद्रम् ते भार्या च अस्मि न कस्यचित् ।
ब्राह्मेन उपगतायाह् च दातुम् अर्हसि मे सुतम् ॥ १-३३-१७
ಅಪತಿಃ ಚ ಅಸ್ಮಿ ಭದ್ರಮ್ ತೇ ಭಾರ್ಯಾ ಚ ಅಸ್ಮಿ ನ ಕಸ್ಯಚಿತ್ ।
ಬ್ರಾಹ್ಮೇನ ಉಪಗತಾಯಾಃ ಚ ದಾತುಮ್ ಅರ್ಹಸಿ ಮೇ ಸುತಮ್ ॥ 1-33-17
ಆದರೆ ತಾನು ಅವಿವಾಹಿತೆಯಾದ ಕಾರಣ ಚೂಲೀ ಮಹರ್ಷಿಗಳು ತಮ್ಮ ತಪಃ ಶಕ್ತಿಯಿಂದ ತನ್ನಲ್ಲಿ ತಮ್ಮ ಪುತ್ರರತ್ನನು ಜನಿಸುವಂತೆ ಅನುಗ್ರಹಿಸಬೇಕಾಗಿ ಕೋರಿಕೊಂಡಳು.
ಚೂಲೀ ಮಹರ್ಷಿಗಳು ಬ್ರಹ್ಮತೇಜಸ್ಸಿನಿಂದ ಹೊಳೆಯುತ್ತಿದ್ದ ಪುತ್ರರತ್ನನನ್ನು ಅಪ್ಸರೆ ಸೋಮದಾಳಿಗೆ ಅನುಗ್ರಹಿಸಿದರು. ಅವನೇ ಕಾಂಪಿಲ್ಯ ರಾಜ್ಯದ ಚಕ್ರವರ್ತಿ ಬ್ರಹ್ಮದತ್ತ.
ಬ್ರಹ್ಮತೇಜಸ್ಸುಳ್ಳ ಮಹೀಪತಿ ಬ್ರಹ್ಮದತ್ತನು ತನ್ನ ಶತಪುತ್ರಿಯರನ್ನೂ ವರಿಸಬೇಕಾಗಿ ಕೇಳಿಕೊಂಡು ಕುಶನಾಭ ಬ್ರಹ್ಮದತ್ತನ ಬಳಿ ಬಂದನು. ಉದಾರಚರಿತನಾದ ಬ್ರಹ್ಮದತ್ತ ಆ ಕುಬ್ಜ ಕನ್ಯೆಯರನ್ನು ಮನಸಾವಾಚಾ ಒಪ್ಪಿ ವರಿಸುವುದಾಗಿ ಮುಂದಾದನು.
स्पृष्टमात्रे तत: पाणौ विकुब्जा विगतज्वरा:।
युक्ता: परमया लक्ष्म्या बभु: कन्याशतं तदा।।१.३३.२३
ಸ್ಪೃಷ್ಟಮಾತ್ರೇ ತತ: ಪಾಣೌ ವಿಕುಬ್ಜ ವಿಗತಜ್ವರ: ।
ಯುಕ್ತ: ಪರಮಯಾ ಲಕ್ಷ್ಮ್ಯಾ ಬಭು: ಕನ್ಯಾಶತಂ ತದಾ।।1.33.23
ಪರಿಣಯ ಮಹೋತ್ಸವದಲ್ಲಿ ಬ್ರಹ್ಮದತ್ತನು ಒಬ್ಬೊಬ್ಬ ಕನ್ಯೆಯ ಕೈಹಿಡಿದು ಪಾಣಿಗ್ರಹಣ ಮಾಡುತ್ತಿದ್ದಂತೆಯೇ ಅವಳು ಶಾಪವಿಮೋಚನೆಯನ್ನು ಪಡೆಯುತ್ತಿದ್ದಳು. ಹೀಗೆ ಆ ಶತ ಕನ್ನಿಕೆಯರೂ ಒಬ್ಬೊಬ್ಬರಾಗಿ ವಾಯುದೇವನ ಶಾಪದಿಂದ ಮುಕ್ತರಾಗ ತೊಡಗಿದರು. ಅವರುಗಳ ಕುಬ್ಜವು ನಾಶವಾಗಿ ಹಿಂದಿದ್ದ ರೂಪ-ಲಾವಣ್ಯವೆಲ್ಲವು ಹಿಂದಿರುಗಿತು.
ತಮ್ಮ ಶತ ಪುತ್ರಿಯರೂ ವಾಯುದೇವನ ಶಾಪದಿಂದ ಮುಕ್ತರಾದದ್ದನ್ನು ಕಂಡು ಅರಸ ಕುಶನಾಭ ಮತ್ತು ಅಪ್ಸರೆ ಘೃತಾಚಿಗೆ ಎಲ್ಲಿಲ್ಲದ ಸಂತೋಷವಾಯಿತು. ಅವರು ಬಹಳ ಸಂತಸದಿಂದ ವಿವಾಹ ಮಹೋತ್ಸವವನ್ನು ನೆರವೇರಿಸಿ ಅಳಿಯ ಬ್ರಹ್ಮದತ್ತನನ್ನು ಮತ್ತು ತಮ್ಮ ಶತ ಪುತ್ರಿಯರನ್ನು ಕಾಂಪಿಲ್ಯಕ್ಕೆ ಬೀಳ್ಕೊಟ್ಟರು. ಇತ್ತ ಅಪ್ಸರೆ ಸೋಮದಾಳು ತನ್ನ ಮಗನ ಉದಾರತೆ ಮತ್ತು ತೇಜೋಬಲವನ್ನು ಕಂಡು ಸಂತೃಪ್ತಳಾದಳು. ಅವಳು ಸಹ ಬಹಳ ಸಂತಸದಿಂದ ತನ್ನ ನೂರು ಜನ ಸೊಸೆಯಂದಿರನ್ನೂ ಸ್ವಾಗತಿಸಿ ಪ್ರೀತಿಯಿಂದ ಬರಮಾಡಿಕೊಂಡಳು. ಅವರೆಲ್ಲರು ಆನಂದದಿಂದ ಸಂಸಾರ ನಡೆಸಿದರು.
ಶತ ಪುತ್ರಿಯರೂ ವಿವಾಹಿತರಾಗಿ ತವರನ್ನು ಬಿಟ್ಟು ಹೋದಮೇಲೆ ಒಬ್ಬ ಪುತ್ರನ ಅಗತ್ಯವಿದೆ ಎಂದೆನಿಸಿ ಕುಶನಾಭ ಮತ್ತು ಘೃತಾಚಿ ಪುತ್ರಕಾಮೇಷ್ಟಿ-ಯಾಗವನ್ನು ಕೈಗೊಂಡರು. ಅವರಿಗೆ ಗಾದಿ ಎಂಬ ಮಗನು ಜನಿಸಿದನು. ಆ ಗಾದಿಯೇ ಮಹರ್ಷಿ ವಿಶ್ವಾಮಿತ್ರರ ತಂದೆ.
(This is a translation of an article written in English by Shalini Mahapatra.)
Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.