close logo

ಗಜೇಂದ್ರ ಮೋಕ್ಷ

ಕನ್ನಡ ಸಾಹಿತ್ಯವು ಅನೇಕ ಶತಮಾನಗಳಿಂದ ಅನೇಕ ಪ್ರತಿಭಾವಂತ ಕವಿಗಳಿಂದ ಆಶೀರ್ವದಿಸಲ್ಪಟ್ಟಿದೆ. ಈ ಕವಿಗಳ ಪೈಕಿ, ಕವಿ ಸೋಮೇಶ್ವರನಿಗೆ ತನ್ನ ಸಂಸ್ಕೃತ, ತೆಲುಗು ಮತ್ತು ಕನ್ನಡ ಭಾಷೆಯಲ್ಲಿನ ಪಾಂಡಿತ್ಯದಿಂದಾಗಿ ಹನ್ನೆರಡನೆಯ ಶತಮಾನದ ಅಂತ್ಯದ ವೇಳೆಗೆ ಪ್ರಖ್ಯಾತಿ  ದೊರೆಯಿತು. ಸೋಮೇಶ್ವರ ಕವಿಯ ಸೋಮೇಶ್ವರ ಶತಕ   ತಾತ್ವಿಕ ಅಂಶಗಳ ಕಾವ್ಯಾತ್ಮಕ ಸಂಗ್ರಹವಾಗಿದೆ. ಈ ಅದ್ಭುತವಾದ ಸಂಗ್ರಹದಲ್ಲಿ ಮೋಕ್ಷವನ್ನು ಕುರಿತಾದ ಅರ್ಥಗರ್ಭಿತ ಪದ್ಯವೊಂದು ಹೀಗಿದೆ –

ರಚನಂಗೆಯ್ಯದೆ ಧರ್ಮಕೀರ್ತಿಯೆರಡಂ ಸದ್ಧರ್ಮಂ ಪಾಪದಾ
ನಿಚಯಕ್ಕಿಕ್ಕದೆ ತತ್ವ ಕೇಳಿ ಜಗವೆಲ್ಲಂ ಬೋಮ್ಮಮೆಂದೆನ್ನದೇ
ಉಚಿತಾಲೋಚನೆಯಿಂದ ತನ್ನ ನಿಜವಂ ತಾಂ ಕಾಣದೇ ವಾದಿಪಾ
ವಚನಬ್ರಹ್ಮದೆ ಮುಕ್ತಿಯೇ ಹರ ಹರಾ ಶ್ರೀ ಚೆನ್ನ ಸೋಮೇಶ್ವರಾ

ಧರ್ಮವನ್ನು, ಕೀರ್ತಿಯನ್ನೂ ಸಂಪಾದಿಸದೆ , ತಾನು ಮಾಡಿದ ಪುಣ್ಯವನ್ನು ಪಾಪಗಳಿಗಾಗಿ ವಿನಿಯೋಗಿಸದೆ, ತತ್ತ್ವಗಳನ್ನು ಕೇಳಿ ಲೋಕವೆಲ್ಲವೂ ಬ್ರಹ್ಮವೇ ಎಂದು ತಿಳಿದ್ದುಕೊಳ್ಳದೇ, ಚೆನ್ನಾಗಿ ತನ್ನಲ್ಲಿ ತಾನೇ ಆಲೋಚಿಸಿ ತನ್ನ ಸ್ವರೂಪವನ್ನು ತಿಳಿದುಕೊಳ್ಳದೆ ಸುಮ್ಮನೆ ಮಾತಿನಿಂದ ಮಾತ್ರ ತಾನು ಬ್ರಹ್ಮನೆಂದು ಹೇಳಿಕೊಳ್ಳುವ ವಚನಬ್ರಹ್ಮದಿಂದ ಮೋಕ್ಷವು ಎಂದಿಗೂ ದೊರೆಯುವದಿಲ್ಲ.

ಮುಕ್ತಿಮಾರ್ಗದ ಗಹನ ತತ್ವಗಳನ್ನು ಕವಿಯು ಬಹಳ ಸೊಗಸಾಗಿ ಸೂಕ್ಷ್ಮವಾಗಿ ವರ್ಣಿಸಿದ್ದಾರೆ.  ಮನುಷ್ಯ ತನ್ನ ಜೀವನದಲ್ಲಿ ಧರ್ಮ ಮಾರ್ಗವನ್ನು ಹಿಡಿದು, ಅಂತರ್ಬಾಹ್ಯಲೋಕವನ್ನೆಲ್ಲ ಅರ್ಥೈಸಿಕೊಂಡು ಮೋಕ್ಷವೆಂಬ ಗುರಿಯನ್ನು ತಲುಪಬೇಕು ಎಂಬುದೇ ತಾತ್ಪರ್ಯ. ಎಲ್ಲ ಜೀವಿಗಳ ಪರಮಗುರಿಯಾದ ಮೋಕ್ಷಸಾಧನೆಗೆ ಶಾಸ್ತ್ರಗಳಲ್ಲಿ, ಇತಿಹಾಸಗಳಲ್ಲಿ ಬಹಳಷ್ಟು ಮಾರ್ಗಗಳನ್ನು ನಿದರ್ಶನಗಳ ಮೂಲಕ ವಿವರಿಸಲಾಗಿದೆ.

ಮಾನವ ಜನ್ಮವು ಮೋಕ್ಷಕ್ಕೆ ಮಾರ್ಗ ಎಂಬುದು ಪುರಾಣಗಳಲ್ಲಿ ವಿದಿತವಾದ ವಿಷಯ. ಹೀಗಿರುವಲ್ಲಿ ಪ್ರಾಣಿಗಳಿಗೂ ಮೋಕ್ಷಕ್ಕೆ ಎಡೆಯುಂಟೆ?  ಈ ಗೊಂದಲಕ್ಕೆ ಉತ್ತರವಾಗಿ ನಮ್ಮ ಪುರಾಣದಲ್ಲಿನ ಒಂದು ಸೊಗಸಾದ ಸನ್ನಿವೇಶವನ್ನು ಉದಾಹರಿಸಬಹುದು.

ಭಕ್ತಿಪ್ರಧಾನ ಕೃತಿಗಳಲ್ಲಿ ಕನ್ನಡದ ದಾಸ ಸಾಹಿತ್ಯದ ಸ್ಥಾನ ಮಹತ್ತರವಾದದ್ದು. ದಾಸ ಪರಂಪರೆಯಲ್ಲಿ ಶ್ರೇಷ್ಠರಾದ ಕನಕದಾಸರು ಶ್ರೀ ಕೃಷ್ಣನನ್ನು ಭಕ್ತಿಪೂರ್ವಕವಾಗಿ ವರ್ಣಿಸಿದ್ದಾರೆ.

ಆನೆಯ ನೋಡಿರಯ್ಯ ನೀವೆಲ್ಲರು ಆನಂದ ಪಡೆಯಿರಯ್ಯ
ತಾನು ತನ್ನವರೆಂಬೊ ಮಾನವರ ಸಲಹಿದ ಆನೆಯ ನೋಡಿರಯ್ಯ

ಎಂಬ ಕೃತಿಯಲ್ಲಿ ದಾಸರು ಶ್ರೀ ಕೃಷ್ಣನನ್ನು ಆನೆಯ ರೂಪದಲ್ಲಿ ವರ್ಣಿಸಿದಾರೆ. ಎಲ್ಲರಿಗೂ ಪ್ರಿಯವಾದ ಪ್ರಾಣಿ ಆನೆ. ಗಜರಾಜ, ಗಜೇಂದ್ರ, ಕುಂಜರ, ಹೀಗೆ ಆನೆಯ ಹಲವು ನಾಮಗಳು ಪುರಾಣಪ್ರಸಿದ್ಧ.

ಆನೆಗೂ ಮುಕ್ತಿಯೇ? ಹೇಗೆ? ಸ್ಥೂಲರೂಪದಲ್ಲಿ ವಿಚಿತ್ರ ಎನಿಸಬಹುದಾದ ಸೂಕ್ಷ್ಮ ತತ್ವಬೋಧವೇ ಗಜೇಂದ್ರ ಮೋಕ್ಷದ ಕಥಾಸಾರ. ಶ್ರೀಮದ್ ಭಾಗವತಪುರಾಣ ೮ನೇ ಸ್ಕಂದದಲ್ಲಿನ ಈ ಸನ್ನಿವೇಶ ಅತ್ಯಂತ ರೋಮಾಂಚಕಾರಿಯಾದುದು.

ಗಜೇಂದ್ರ ಮೋಕ್ಷ ಎಂದಾಕ್ಷಣ ಗರುಡನ ಮೇಲೆ ವಿರಾಜಮಾನನಾದ ಪರಮಾತ್ಮನಾದ ಶ್ರೀ ಹರಿಗೆ ತನ್ನ ಸೊಂಡಿಲಿನಿಂದ  ತಾವರೆ ಹೂವನ್ನು  ಅರ್ಪಿಸುತ್ತಿರುವ ಆನೆ, ಆನೆಯ ಕಾಲನ್ನು ಹಿಡಿದಿರುವ ಮೊಸಳೆಯ ದೃಶ್ಯ ನಮ್ಮ ಕಣ್ಣಮುಂದೆ ಬಂದು ನಿಲ್ಲುತ್ತದೆ. ಈ ಸನ್ನಿವೇಶದಲ್ಲಿನ ಒಂದೊಂದು ಪಾತ್ರಕ್ಕೂ ವಿಶಿಷ್ಟ ಹಿನ್ನೆಲೆ ಇರುವುದು ಗಮನಾರ್ಹ

ಗಜೇಂದ್ರ ಮೋಕ್ಷ  ಯಾವ ಮನ್ವಂತರದಲ್ಲಿ ಘಟಿಸಿತು? ಶ್ರೀಮನ್ನಾರಾಯಣನು ಯಾವ ರೂಪದಲ್ಲಿ ಗಜೇಂದ್ರನಿಗೆ ಮೋಕ್ಷವನ್ನು ಕಲ್ಪಿಸಿದನು? ಗಜೇಂದ್ರ, ಗಜೇಂದ್ರನನ್ನು  ಹಿಡಿದಿದ್ದ ಮೊಸಳೆ – ಈ ಪಾತ್ರಗಳ ಪೂರ್ವಾಪರಗಳನ್ನು ಕುರಿತ ಒಂದಷ್ಟು ಪ್ರಶ್ನೆಗಳಿನ್ನು ಉತ್ತರಿಸುವ ಪ್ರಯತ್ನ ಈ ಬರಹ.

ಅವತಾರ ಪುರುಷ

ಶ್ರೀಮದ್ ಭಾಗವತಪುರಾಣದಲ್ಲಿ ೮ ನೇ ಸ್ಕಂದವು ಶ್ರೀಮನ್ ನಾರಾಯಣನ ವಿವಿಧ ಅವತಾರಗಳ ವಿವರಣೆಯೊಂದಿಗೆ ಪ್ರಾರಂಭವಾಗುತ್ತದೆ. ಅಧ್ಯಾಯವು ವಿವಿಧ ಮನ್ವಂತರಗಳಲ್ಲಿ ನಾರಾಯಣನ ವಿವಿಧ ಅಭಿವ್ಯಕ್ತಿಗಳನ್ನು ವಿವರಿಸುತ್ತದೆ. ಸ್ಕಂದ ೮ರ ಅಧ್ಯಾಯ ೧ ರ ಕೊನೆಯಲ್ಲಿ, ನಾವು ಈ ಕೆಳಗಿನ ಶ್ಲೋಕವನ್ನು ಗಮನಿಸುತ್ತೇವೆ

ತತ್ರಾಪಿ ಜಜ್ಞೇ ಭಗವಾನ್ಹರಿಣ್ಯಾಂ ಹರಿಮೇಧಸಃ
ಹರಿರಿತ್ಯಾಹೃತೋ ಯೇನ ಗಜೇಂದ್ರೋ ಮೋಚಿತೋ ಗ್ರಹಾತ್ ॥ ೮.೧.೩೦ ॥

ತಾಮಸವೆಂಬ ಮನ್ವಂತರದಲ್ಲಿ ಹರಿಮೇಧಾ ಋಷಿಯ ಪತ್ನಿ ಹರಣಿಯಲ್ಲಿ ಶ್ರೀ ಹರಿಯಾಗಿ ಭಗವಂತನು ಅವತರಿಸಿದನು. ಇದೇ ಮನ್ವಂತರದಲ್ಲಿ ಅವನು ಗಜೇಂದ್ರನನ್ನು ಮೊಸಳೆಯಿಂದ ರಕ್ಷಿಸಿದ್ದನು.

ವಿಷ್ಣು ಪುರಾಣ ೩ನೇ ಸ್ಕಂದ ೧ನೇ ಅಧ್ಯಾಯದಲ್ಲಿ, ನಾವು ವಿವಿಧ ಮನ್ವಂತರಗಳ ಹೆಸರುಗಳನ್ನು ಕಾಣಬಹುದು. ಪ್ರಸ್ತುತ ಕಾಲಾವಧಿಯು ವೈವಸ್ವತ ಮನ್ವಂತರ ಎಂಬ ೭ ನೇ ಮನ್ವಂತರದಲ್ಲಿ ಬರುತ್ತದೆ. ಹಿಂದೆ ಈ ಕೆಳಗಿನ ಮನ್ವಂತರಗಳು ಆಗಿಹೋಗಿವೆ

 • ಸ್ವಾಯಂಭುವ ಮನ್ವಂತರ
 • ಸ್ವಾರೋಚಿಷ
 • ಉತ್ತಮ
 • ತಾಮಸ
 • ರೈವತ
 • ಚಾಕ್ಷುಷ

ಹಿಂದಿನ ಮನ್ವಂತರ ಪಟ್ಟಿಯಿಂದ ನಾವು ಗಜೇಂದ್ರ ಮೋಕ್ಷ ಘಟನೆ ೪ ನೇ ಮನ್ವಂತರದಲ್ಲಿ ಸಂಭವಿಸಿದೆ ಎಂದು ಗುರುತಿಸಬಹುದು.

ಗಜೇಂದ್ರ ಮೋಕ್ಷದ ಮುಖ್ಯ ಘಟನೆಯನ್ನು ವಿವರಿಸುವ ಮೊದಲು, ಗಜೇಂದ್ರ ಮತ್ತು ಮೊಸಳೆಯ ಇತಿಹಾಸವನ್ನು ಅರ್ಥಮಾಡಿಕೊಳ್ಳಬೇಕು.

ಗಜೇಂದ್ರ / ಇಂದ್ರದ್ಯುಮ್ನ

ಗಜೇಂದ್ರನ ಹಿಂದಿನ ಕಥೆಯನ್ನು ಶ್ರೀಮದ್ ಭಾಗವತಂ ೮ನೇ ಸ್ಕಂದ ೪ನೇ ಅಧ್ಯಾಯದಲ್ಲಿ ವಿವರಿಸಲಾಗಿದೆ.

ಸ ವೈ ಪೂರ್ವಮಭೂದ್ರಾಜಾ ಪಾಂಡ್ಯೋ ದ್ರವಿಡಸತ್ತಮಃ
ಇಂದ್ರದ್ಯುಮ್ನ ಇತಿ ಖ್ಯಾತೋ ವಿಷ್ಣು ವ್ರತಪರಾಯಣಃ ॥ ೮.೪.೭ ॥

ಹಿಂದಿನ ಜನ್ಮದಲ್ಲಿ ಗಜೇಂದ್ರನು ಪಾಂಡ್ಯವಂಶದಲ್ಲಿ ದ್ರವಿಡ ದೇಶದ ರಾಜನಾಗಿದ್ದನು. ಅವನಿಗೆ ಇಂದ್ರದ್ಯುಮ್ನ ಎಂಬ ಹೆಸರಿದ್ದು, ಭಗವಂತನ ಶ್ರೇಷ್ಠ ಉಪಾಸಕನಾಗಿದ್ದು, ಖ್ಯಾತನಾಗಿದ್ದನು. ಮಹಾರಾಜನು ರಾಜ್ಯವೈಭವಗಳನ್ನು ತೊರೆದು ಜಟೆ ಬೆಳಸಿ, ತಪಸ್ವಿಯಾದನು. ಅವನ ಆಶ್ರಮ ಮಲಯ ಪರ್ವತದಲ್ಲಿತ್ತು. ಒಂದು ದಿನ ಅವನು ಸ್ನಾನ ಮತ್ತು ಬೆಳಗಿನ ಆಚರಣೆಗಳನ್ನು ಮುಗಿಸಿ ಪ್ರಾರ್ಥನೆಗಾಗಿ ಕುಳಿತನು. ಭಗವಂತನ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿ, ಮೌನವ್ರತ ಕೈಗೊಂಡು ಏಕಾಗ್ರಚಿತ್ತದಿಂದ ಭಗವಂತನ ಆರಾಧನೆಯಲ್ಲಿ ತೊಡಗಿದನು.

ಅದೇ ಸಮಯದಲ್ಲಿ ದೈವಸಂಕಲ್ಪದಿಂದ ಪರಮ ತಪಸ್ವಿ ಅಗಸ್ತ್ಯ ಮುನಿ ತನ್ನ ಶಿಷ್ಯರೊಂದಿಗೆ ಅದೇ ಸ್ಥಳಕ್ಕೆ ಬಂದರು. ಇಂದ್ರದ್ಯುಮ್ನನು ತನ್ನ ಪುರಜನರ ಆರೈಕೆಯನ್ನು ಮತ್ತು ಗೃಹಸ್ಥರಿಗೆ ಉಚಿತವಾದ ಅತಿಥಿಸೇವೆ ಮುಂತಾದ ಧರ್ಮಗಳನ್ನು ತ್ಯಜಿಸಿಬಿಟ್ಟಿದ್ದನು.

ರಾಜನು ಏಕಾಂತದಲ್ಲಿ, ಮೌನವಾಗಿ  ಧ್ಯಾನನಿರತನಾಗಿರುವುದನ್ನು ಕಂಡು ಅಗಸ್ತ್ಯ ಮುನಿಗಳು ಕ್ರೋಧಗೊಂಡರು.

ತಸ್ಮಾ ಇಮಂ ಶಾಪಮದಾದಾಧುರಯಂ ದುರಾತ್ಮಾಕೃತಬುದ್ಧಿರದ್ಯ
ವಿಪ್ರಾವಮಂತಾ ವಿಶತಾಂ ತಮೋಂಧಂ ಯಥಾ ಗಜಃ ಸ್ತಬ್ಧಮತಿಃ ಸ ಏವ ॥೮.೪.೧೦॥

“ಈ ರಾಜನು ತನ್ನ ಹಿರಿಯರು ಮತ್ತು ಶಿಕ್ಷಕರು ಕಲಿಸಿದ ಶಿಕ್ಷಣವನ್ನು ಗ್ರಹಿಸಲಿಲ್ಲ. ಅವನು ದುರಹಂಕಾರದಿಂದ ಪ್ರಭಾವಿತನಾಗಿ ಸ್ವೇಚ್ಛೆಯಿಂದ ವರ್ತಿಸುತ್ತಿದ್ದಾನೆ. ಬ್ರಾಹ್ಮಣರನ್ನು ಅವಮಾನಿಸಿದ ಕಾರಣ ಅವನಿಗೆ ಘೋರ ಅಜ್ಞಾನಮಯ ಆನೆಯ ಜನ್ಮವು ದೊರೆಯಲಿ” ಎಂದು ಶಾಪವನ್ನು ಕೊಟ್ಟರು.

ಇದು ತನ್ನ ಪ್ರಾರಬ್ಧವೆಂದೇ ಭಾವಿಸಿ ರಾಜರ್ಷಿಯು ಶಾಪವನ್ನು ಸ್ವೀಕರಿಸಿದನು.

ಪ್ರಸ್ತುತ ಸನ್ನಿವೇಶದಲ್ಲಿ ರಾಜನು  ಜ್ಞಾನಿಯು ಧಾರ್ಮಿಕನೂ ಆಗಿದ್ದನೆಂಬುದನ್ನು ಗಮನಿಸಬೇಕು. ಶಾಪಗ್ರಸ್ತನಾಗಿ ಮುಂದೆ ಆನೆಯ ಜನ್ಮತಾಳಿದಾಗ,  ಅವನ ಜೀವನದಲ್ಲಿ ಈ ಜ್ಞಾನದ ಪಾತ್ರ ಪ್ರಮುಖವೆನಿಸುತ್ತದೆ.

ಮೊಸಳೆ / ಹು ಹೂ

ಗಜೇಂದ್ರನ ಕಾಲನ್ನು ಸೆರೆಹಿಡಿದಿದ್ದ ಮೊಸಳೆಯ ಕಥೆಯೂ ಅಷ್ಟೇ ಸ್ವಾರಸ್ಯಕರ ಹಾಗೂ ಅರ್ಥಗರ್ಭಿತವಾಗಿದೆ. ಶ್ರೀಮದ್ಭಾಗವತದ ೮ನೇ ಸ್ಕಂದ, ೪ನೇ ಅಧ್ಯಾಯದಲ್ಲಿ ಈ ಮೊಸಳೆಯ ಪರಿಚಯವಿದೆ.

ಯೋऽಸೌ ಗ್ರಾಹಃ ಸ ವೈ ಸದ್ಯಃ ಪರಮಾಶ್ಚರ್ಯರೂಪದೃಕ್
ಮುಕ್ತೋ ದೇವಲಾಶಾಪೇನ ಹೂಹೂಗಂಧರ್ವಸತ್ತಮಃ ॥ ೮.೪.೩ ॥

ಋಷಿ ದೇವಲನ ಶಾಪದಿಂದಾಗಿ ಮೊಸಳೆಯ ರೂಪತಾಳಿ,  ಭಗವಂತನ ಸ್ಪರ್ಶಮಾತ್ರದಿಂದ ತನ್ನ   ತೇಜೋಮಯ ನಿಜಸ್ವರೂಪ ಪಡೆದ, ಗಂಧರ್ವರಲ್ಲಿ ಉತ್ತಮನೆನಿಸಿರುವ ಹುಹೂ ಎಂಬುವನು. ಹುಹೂ ಎಂಬ ಗಂಧರ್ವನಿಗೆ ಸಕಲ ಪ್ರಾಣಿಗಳ ಪೈಕಿ ಮೊಸಳೆಯ ಜನ್ಮ ಒದಗಿದ್ದು ಹೇಗೆ? ಇದರಲ್ಲಿ ಮಾನವರು ಅರ್ಥೈಸಿ ಅಳವಡಿಸಿಕೊಳ್ಳಬಹುದಾದಂಥ ಜೀವನಬೋಧವಿದೆಯೇ?

ಒಮ್ಮೆ ಹುಹೂ ತನ್ನ ಪತ್ನಿಯರೊಂದಿಗೆ ಸರೋವರದಲ್ಲಿ ಜಲಕ್ರೀಡೆಯಲ್ಲಿ ಮಗ್ನನಾಗಿದ್ದನು. ಅದೇ ಸಮಯಕ್ಕೆ ಅಲ್ಲಿಗೆ ಸ್ನಾನಕ್ಕಾಗಿ ಬಂದ ಋಷಿ ದೇವಲರನ್ನು ಕಂಡು ಹುಹೂ ಹುಡುಗಾಟಿಕೆಯ ಭಾವದಿಂದ ನೀರಿನೊಳಗಿನಿಂದ ಋಷಿಯ ಕಾಲನ್ನು ಎಳೆದುಬಿಟ್ಟನು. ಕೃದ್ಧರಾದ ಋಷಿ ತಪೋಭಂಗಕ್ಕೆ ಕಾರಣನಾದ ಹುಹೂವಿಗೆ ” ನನ್ನ ಕಾಲನ್ನು ಸೆಳೆದೆಯಲ್ಲವೆ? ಇದೋ, ನೀನು ಮೊಸಳೆಯ ಜನ್ಮವೆತ್ತಿ ಜೀವನವಿಡೀ ಕಾಲನ್ನು ಸೆಳೆಯುತ್ತಲಿರು” ಎಂದು ಶಾಪವಿತ್ತರು. ಹುಹೂವಿಗೆ ತಾನೆಸಗಿದ ಪ್ರಮಾದದ ಅರಿವಾಗಿ ಪ್ರಾಯಶ್ಚಿತ್ತಮಾರ್ಗವನ್ನು ಬೇಡಿದನು. ಋಷಿಯು ಕ್ಷಮೆ ತೋರಿ ಅವನ ಶಾಪವಿಮೋಚನೆಯ ಬಗೆಯನ್ನು ಹೀಗೆ ವಿವರಿಸಿದರು – “ನೀನು ಈ ಸರೋವರದಲ್ಲಿ ಬಹಳ ಕಾಲ ವಾಸವಾಗಿರುವೆ. ಒಮ್ಮೆ ಆನೆಗಳ ಹಿಂಡಿನ ಒಡೆಯ ತನ್ನ ಸಹಚರರೊಂದಿಗೆ ಇಲ್ಲಿಗೆ ಬರುವನು. ನೀನು ಅವನ ಕಾಲನ್ನು ಹಿಡಿಯಬೇಕು ಮತ್ತು ಯಾವ ಕಾರಣಕ್ಕೂ ಬಿಡಬಾರದು. ಆಗ ಸಾಕ್ಷಾತ್ ಶ್ರೀಮನ್ನಾರಾಯಣನೇ ಬಂದು ನಿನ್ನನ್ನು ಶಾಪಮುಕ್ತನಾಗಿ ಮಾಡುವನು”

ಗಂಧರ್ವನು ಋಷಿಗೆ ಸಪ್ರದಕ್ಷಿಣ ನಮಸ್ಕಾರಗಳನ್ನು ಅರ್ಪಿಸುತ್ತಾ ಮೊಸಳೆಯ ರೂಪ ತಾಳಿದನು.

ಹುಡುಗಾಟಿಕೆಯ  ಪ್ರಸಂಗವೂ ಕೆಲವೊಮ್ಮೆ ಅನಾಹುತಕ್ಕೆ ಕಾರಣವಾಗಬಹುದು ಎಂಬ ಎಚ್ಚರಿಕೆ ಘಂಟೆಯಂತಿದೆ ಈ ಘಟನೆ. ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣಸಂಕಟ ಎಂಬ ಗಾದೆ ಮಾತಿನಂತೆ ಒಬ್ಬರ ವಿನೋದ ಇನ್ನೊಬ್ಬರ ನೋವಿಗೆ ಕಾರಣವಾಗಬಹುದು. ವಿನೋದವೇ ಆದರೂ ಮತ್ತೊಂದು ಜೀವಿಗೆ ತೊಂದರೆಯುಂಟಾಗಬಹುದಾದ ಸಂದರ್ಭದಲ್ಲಿ ಸಂಯಮದಿಂದ ವರ್ತಿಸುವುದು ಅತ್ಯಗತ್ಯ.

ಮೋಕ್ಷ

ಕ್ಷೀರಸಾಗರದ ಮಧ್ಯದಲ್ಲಿ ಪ್ರಕೃತಿ ಸೌಂದರ್ಯದ ಗಣಿಯಂತೆ ತ್ರಿಕೂಟ ಪರ್ವತವಿತ್ತು. ಆ ಪರ್ವತದಲ್ಲಿ ಮಂದಾರ, ಪಾರಿಜಾತ, ಪಾಟಲ, ಅಶೋಕ, ಚಂಪಕ ಮುಂತಾದ ಫಲಪುಷ್ಪಸಮೃದ್ಧವಾದ ವೃಕ್ಷಗಳಿಂದ ತುಂಬಿದ್ದ ಋತುಮಾನ ಎಂಬ ಸಸ್ಯೋದ್ಯಾನವೊಂದಿತ್ತು. ವರುಣದೇವನ ಸ್ವತ್ತಾಗಿದ್ದ ಈ ಉದ್ಯಾನದೊಳಗೆ ಬೃಹತ್ ಸ್ಫಟಿಕಜಲಸರೋವರವೊಂದರಲ್ಲಿ ಬಗೆಬಗೆಯ ನೀಲ, ಶ್ವೇತ, ರಕ್ತವರ್ಣದ ಕಮಲಪುಷ್ಪಗಳು ರಾರಾಜಿಸುತ್ತಿದ್ದವು.

ಆ ಪರ್ವತದಲ್ಲಿ ಬೃಹದಾಕಾರದ ಆನೆಯೊಂದು ತನ್ನ ಪರಿವಾರದೊಂದಿಗೆ ವಾಸವಾಗಿತ್ತು, ಇಂದ್ರದ್ಯುಮ್ನನೇ ಆ ಆನೆ. ಸಿಂಹ, ಹುಲಿ, ಕಾಡುಹಂದಿ, ಹೋರಿಗಳು ಹೆದರಿ ಪಲಾಯನ ಮಾಡುವಷ್ಟು ಪ್ರಚಂಡವಾದ ಬಲಶಾಲಿಯಾದ ಪ್ರಾಣಿ ಎನಿಸಿತ್ತು.

ಗ್ರೀಷ್ಮಕಾಲದಲ್ಲಿ ಒಮ್ಮೆ ಬಹುದೂರ ಕ್ರಮಿಸಿ ಬಂದ ಆನೆ ಹಿಂಡು ದಾಹದಿಂದ ಬಳಲುತ್ತಿದ್ದಾಗ  ಗಜರಾಜ ಪುಷ್ಪಗಂಧವನ್ನು ಆಘ್ರಾಣಿಸಿ ಅನತಿದೂರದಲ್ಲಿ ಸರೋವರವಿದೆಯೆಂದು ತಿಳಿದನು. ಸಪರಿವಾರನಾಗಿ ಗಂಧದ ಬೆನ್ನತ್ತಿ  ಕಮಲದ ಹೂಗಳು ತುಂಬಿದ್ದ ದೊಡ್ಡ  ಸರೋವರವನ್ನು ತಲುಪಿದನು.

ಸುದೀರ್ಘ ಪ್ರಯಾಣದಿಂದಾಗಿ ದಣಿವು ಹಸಿವಿನಿಂದ ಬಳಲಿದ್ದ ಆನೆಗಳು ಉತ್ಸಾಹದಿಂದ ಸರೋವರವನ್ನು ಪ್ರವೇಶಿಸಿದುವು. ದಾಹ ನೀಗಿದ ನಂತರವೂ ಹೊರಬರಲು ಇಚ್ಛಿಸದೆ ಸಾವಕಾಶವಾಗಿ ಈಜತೊಡಗಿದವು. ಕಾಲದ ಪರಿವೆಯೇ ಇಲ್ಲದ ಸಂಸಾರಿ ಮುಂಬರುವ ವಿಪತ್ತಿನ ಕಲ್ಪನೆಯೇ ಇಲ್ಲದೆ ಇಹಭೋಗಮತ್ತನಾಗಿರುವಂತೆ ಗಜರಾಜ ತನ್ನ ಒಡನಾಡಿಗಳ ಸಂಗದಲ್ಲಿ ಆನಂದಿಸುತ್ತಿದ್ದನು.

ವಿಧಿಲಿಖಿತದಂತೆ ಅದೇ ಸರೋವರದಲ್ಲಿದ್ದ ಮೊಸಳೆಯೊಂದು ಆ ಮಹಾಗಜದ ಕಾಲನ್ನು ತನ್ನ ಬಲಿಷ್ಠ ದವಡೆಯಿಂದ ಸೆಳೆಯಿತು. ಎಷ್ಟು ಪ್ರಯತ್ನಿಸಿದರೂ ಬಂಧನದಿಂದ ಪಾರಾಗುವುದು ಅಸಾಧ್ಯವಾಯಿತು. ಬಹಳ ಕಾಲ ಸೆಣಸಿದ ನಂತರ ತನ್ನ ಶ್ರಮವೆಲ್ಲವೂ ವ್ಯರ್ಥ ಎಂಬ ಅರಿವು ಮೂಡಿದ್ದು ಅದರ ಬೃಹದಾಕಾರದ ಅಹಂಕಾರಕ್ಕೆ ಧಕ್ಕೆ ತಂದಿತ್ತು.

ಗಜವು  ಆತ್ಮಾವಲೋಕನ ನಡೆಸುತ್ತಾ –

ನ ಮಾಮಿಮೇ ಜ್ಞಾತಾಯ ಆತುರಂ ಗಜಾಃ
ಕುತಃ ಕರಿಣ್ಯಃ ಪ್ರಭವಂತಿ ಮೋಚಿತಮ್
ಗ್ರಾಹೇಣ ಪಾಶೇನ ವಿಧಾತುರಾವೃತೋऽಪ್ಯ
ಹಂ ಚ ತಂ ಯಾಮಿ ಪರಂ ಪರಾಯಣಮ್ ॥ ೮.೨.೩೨ ॥

“ನನ್ನನ್ನೇ ನಾನು ರಕ್ಷಿಸಿಕೊಳ್ಳಲು ಸಾಧ್ಯವಿರದಾಗ ನನ್ನ ಪರಿವಾರದವರು ನನ್ನನ್ನು ಹೇಗೆ ರಕ್ಷಿಸಿಯಾರು? ಈ ಅನಿವಾರ್ಯ ವಿಪತ್ತಿನಿಂದ ನನ್ನನ್ನು ಪಾರುಮಾಡಲು ಯಾರಿಗೂ ಸಾಧ್ಯವಿಲ್ಲ. ನನ್ನ ಮುಂದಿರುವುದು ಈಗ ಒಂದೇ ದಾರಿ. ಯಾವ ಪರಮಾತ್ಮನಿಗೆ ಬ್ರಹ್ಮನೂ ಶರಣಾಗುತ್ತಾನೋ, ಯಮನೂ ಆತನಿಂದಾಗಿ ದೂರವಿರುತ್ತಾನೋ, ಆ ಶ್ರೀಮನ್ನಾರಾಯಣನನ್ನು ಭಕ್ತಿಪೂರ್ವಕವಾಗಿ ತದೇಕಚಿತ್ತದಿಂದ ಪ್ರಾರ್ಥಿಸುತ್ತೇನೆ “

ಹೀಗೆ ದೃಢಚಿತ್ತನಾಗಿ ಆ ಮಹಾಗಜೇಂದ್ರನು  ಭಗವಂತನನ್ನು ಸ್ತುತಿಸಿದ ಸ್ತೋತ್ರವೇ “ಗಜೇಂದ್ರಮೋಕ್ಷ ಸ್ತೋತ್ರ”

 • ನೀನೇ ಸನಾತನನು, ಪುರುಷನು, ಪುರುಷನಿಂದಾದ ಪ್ರಕೃತಿಯು.
 • ಜ್ಯೋತಿಯ ಆಕರಗಳಿಗೆ ಅತೀತನಾಗಿರುವ ಜ್ಯೋತಿಯು.
 • ಪ್ರಳಯದ ಅಂತ್ಯದಲ್ಲುಳಿಯುವ  ತಾಮಸದ ಕಾರ್ಗಡಲ  ಅಂಚಿನಲ್ಲಿಹನು, ಪುರಾತನದಿಂದ ಉದಯಿಸುವ ನವಸೃಷ್ಟಿಗೆ ಜೀವದಾತನು.
 • ಜನ್ಮ ಕರ್ಮಾದಿಗಳಿಂದ ಮುಕ್ತನು, ಗುಣ – ನಾಮ ಪ್ರತ್ಯೇಕತೆಯಿರದವನು.
 • ಮನೋಬುದ್ಧ್ಯಹಂಕಾರ ಚಿತ್ತಾತೀತನು, ಜ್ಞಾನಿಗಳು ಅರಿವಿಗೆ ನಿಲುಕದ ನಿನ್ನಲ್ಲಿ ಒಂದಾಗಿ ನಿನ್ನನ್ನು ಭಾವಿಸಿಹರು.
 • ಇಂದ್ರಿಯಗಳ ಮತ್ತವುಗಳ ಸ್ವಭಾವ ದ್ರಷ್ಟನು.
 • ನೀನೇ ಪುರಾತನ-ಸನಾತನ-ನಿತ್ಯ, ಆದ್ಯಂತವಿರದ, ಭೂತ- ಭವಿಷ್ಯವಿರದ ಅನಂತ.
 • ನೀನೇ ಗುಣಾತೀತ,  ನಿರ್ಗುಣ.
 • ನಿನಗೆ ಶರಣಾದ ಜೀವಿಗಳ ಅವಿದ್ಯೆಯು ಹರಿದು ನಿಸ್ಸಂಶಯವಾಗಿ ನೀನೆಂಬ ಪರಮಸತ್ಯವನ್ನು ಹೊಂದುವರು.

ಗಜರಾಜ ಹೀಗೆ ನಾರಾಯಣನ ಅನುಗ್ರಹವನ್ನು ಬೇಡುತ್ತಾನೆ –

 • ಒಳಗೂ ಹೊರಗೂ ಅವಿದ್ಯೆಯ ಕೂಪದಂತಿರುವ ಈ ಗಜರೂಪದ ಜನ್ಮವು ನನಗೇಕೆ?
 • ಕಾಲವಶವಾಗಿ ನಶಿಸಿಹೋಗದ  ಮೋಕ್ಷವನ್ನು ಬೇಡುತ್ತೇನೆ
 • ಹೇ ಜಗತ್ಕರ್ತೃವೇ! ನಿನಗೆ ಈ ಮುಮುಕ್ಷುವಿನ ನಮಸ್ಕಾರಗಳ

ಆನೆಯೊಂದು ತನ್ನ ಅರ್ಹತೆಯನ್ನು ಮೀರಿ ಪರಮಪುರುಷನ ಕುರಿತು ಈ ರೀತಿಯಾಗಿ ಸವಿಸ್ತಾರ ಸ್ತುತಿಗೈದದ್ದು ಪರಮಾಶ್ಚರ್ಯವೆನಿಸಿತ್ತು!

ಕರುಣಾಮಯನಾದ ಶ್ರೀಮನ್ನಾರಾಯಣನು ಆ ಪ್ರಾಣಿಯ ಪಾಡನ್ನು ಕಂಡು ಮರುಗಿ ಗರುಡವಾಹನ- ಭವ್ಯಮೂರ್ತಿ-ಜಾಜ್ವಲ್ಯಮಾನನಾದ  ಶ್ರೀಹರಿಯಾಗಿ ಆ ಸರೋವರದ ದಡದಲ್ಲಿ ಪ್ರತ್ಯಕ್ಷನಾದನು. ಗಜವು ಶಿರಬಾಗಿ ವಂದಿಸುತ್ತಾ ಕಮಲವನ್ನು ತನ್ನ ಸೊಂಡಿಲಿನಿಂದ ಅರ್ಪಿಸುತ್ತಾ ನಾರಾಯಣನಿಗೆ ನಮಿಸಿತು.

ದಯಾಮಯನಾದ ಶ್ರೀಹರಿಯು  ಮೊಸಳೆಯನ್ನು ಸುದರ್ಶನ ಚಕ್ರದಿಂದ ಸಂಹರಿಸಿ ಗಜನು ಅರ್ಪಿಸಿದ ಕಮಲಪುಷ್ಪವನ್ನು ಅಮಿತಪ್ರೇಮದಿಂದ ಸ್ವೀಕರಿಸಿದನು.

ಮೊಸಳೆಯ ಕಳೇಬರದಿಂದ ದಿವ್ಯ ಗಂಧರ್ವರೂಪವೊಂದು ಹೊಮ್ಮಿತು. ಶಾಪಮುಕ್ತನಾದ ಹುಹೂ ದೇವೋತ್ತಮನನ್ನು ನಮಿಸಿದನು. ಗಜರೂಪನಾದರೂ ಇಂದ್ರದ್ಯುಮ್ನನ ಅಂತಃಸತ್ವವು ಭಗವದ್ಭಕ್ತಿಯಲ್ಲಿ ಮಿಂದಿದ್ದುದರಿಂದ ಪೂರ್ವಜನ್ಮದ ಸ್ಮರಣೆಯಿತ್ತು. ಹೀಗಾಗಿ ಕ್ಷುದ್ರಜೀವಿಯಾಗಿಯೂ ಸಂಕಷ್ಟ ಒದಗಿದಾಗ ಭಗವನ್ನಾಮಸ್ಮರಣೆ ಮಾಡಲು ಸಾಧ್ಯವಾಯಿತು. ಇಂದ್ರದ್ಯುಮ್ನನಿಗೆ ಶಾಪದಿಂದಲೂ ಭವಾಸಾಗರದಿಂದಲೂ ಮುಕ್ತಿ ದೊರೆಯಿತು. ಶ್ರೀಮನ್ನಾರಾಯಣನ ಸೇವಕನಾಗಿ ಅವನೊಂದಿಗೆ ಗರುಡವನ್ನೇರಿ ವೈಕುಂಠಕ್ಕೆ ತೆರಳಿದನು.

ಸಂಕ್ಷೇಪ

ಈ ಕಥಾನಕವು  ಅನೇಕರೀತಿಯಲ್ಲಿ ನಮಗೆ  ಜೀವನಪಾಠವನ್ನು ಬೋಧಿಸುತ್ತದೆ.

 • ಎಷ್ಟೋ ಬಾರಿ ಒದಗುವ ಸಂದರ್ಭಗಳು ನಮ್ಮ ನಿಯಂತ್ರಣವನ್ನು ಮೀರಿರುತ್ತವೆ. ಆಗೆಲ್ಲ ಅಗಸ್ತ್ಯ ಮುನಿಯ ಶಾಪವನ್ನು ಇಂದ್ರದ್ಯುಮ್ನನು ಸ್ವೀಕರಿಸಿದಂತೆ  “ಇದು ಭಗವದಿಚ್ಛೆ” ಎಂಬ ಅಭಿಪ್ರಾಯದಿಂದ  ಸ್ವೀಕರಿಸಬೇಕು.
 • ಗುರುಸ್ಥಾನದಲ್ಲಿರುವ ಜ್ಞಾನಿಗಳನ್ನು ಆದರಿಸದೆ ತೊಂದರೆಯುಂಟು ಮಾಡುವುದು ಹುಹೂವಿಗಾದ ಅನುಭವದಂತೆ ಜೀವನದ ದಿಕ್ಕು ತಪ್ಪಿಸಬಹುದು.
 • ಅತಿಶಯ ಭಗವದ್ಭಕ್ತಿಯ ಫಲವಾಗಿ ಜೀವಿಗೆ ಜನ್ಮಾಂತರದ ಜ್ಞಾನಪ್ರಾಪ್ತಿ ಸಾಧ್ಯ.
 • ಇಡಿಯ ಪ್ರಕರಣದಲ್ಲಿ ಎದ್ದು ಕಾಣುವಂತೆ ಶ್ರೀಮನ್ನಾರಾಯಣನು ಭಕ್ತರ ಪಾಲಿಗೆ ಅಪ್ರತಿಮ ದಯಾಮಯಿ.

ಫಲಶ್ರುತಿ

ಶುಕಮುನಿಯು ಹೇಳಿರುವಂತೆ ಯಾರು ಈ ಕಥೆಯನ್ನು ಕೇಳುತ್ತಾರೋ ಅವರ ದುಃಸ್ವಪ್ನ, ಮನೋವಿಕಾರಗಳು ನಾಶವಾಗಿ ಇಹದಲ್ಲಿ ಭೋಗಭಾಗ್ಯವೂ ಸ್ವರ್ಗಪ್ರಾಪ್ತಿಯೂ ಉಂಟಾಗುತ್ತದೆ.

ಭಗವಾನ್ ಶ್ರೀಹರಿಯೇ ಶ್ರೀಮದ್ಭಾಗವತ ಪುರಾಣದಲ್ಲಿ ಹೀಗೆ ಸೂಚಿಸಿದ್ದಾನೆ –

 • ಬ್ರಾಹ್ಮೀ ಮುಹೂರ್ತದಲ್ಲಿ ಅಂತರ್ಮುಖಿಯಾಗಿ ಯಾರು ಈ ಕಥೆಯಲ್ಲಿನ ಪರ್ವತ- ಸರೋವರ – ವನಾದಿಗಳಲ್ಲಿ ನನ್ನ ಸ್ವರೂಪವನ್ನೇ ಕಾಣುತ್ತಾರೋ ಅವರ ಪಾಪಕ್ಷಯವಾಗುವುದು.
 • ಬ್ರಾಹ್ಮೀ ಮುಹೂರ್ತದಲ್ಲಿ ಗಜೇಂದ್ರಮೋಕ್ಷಸ್ತೋತ್ರ ಪಾರಾಯಣದ ಫಲವಾಗಿ ಅಂತ್ಯಕಾಲದಲ್ಲಿ ನನ್ನ ಸ್ಮರಣೆಯ ಪುಣ್ಯಪ್ರಾಪ್ತಿ ಯಾಗುವುದು.

ಉಲ್ಲೇಖಗಳು

 • ಶ್ರೀಮದ್ ಭಾಗವತ ಮಹಾಪುರಾಣಮ್ – ಗೀತಾ ಪ್ರೆಸ್ (ಕನ್ನಡ)
 • ಶ್ರೀಮದ್ ಭಾಗವತ ಮಹಾಪುರಾಣಮ್ – ಗೀತಾ ಪ್ರೆಸ್ ವಿಶೇಷ ಆವೃತ್ತಿ (ಇಂಗ್ಲಿಷ್)
 • ವಿಷ್ಣು ಪುರಾಣ – ಭಾರತ ದರ್ಶನ ಪಬ್ಲಿಕೇಷನ್ಸ್
 • ಶ್ರೀಮದ್ ಭಾಗವತಮ್ – ಕಮಲಾ ಸುಬ್ರಮಣಿಯಂ
 • ಸೋಮೇಶ್ವರ ಶತಕ – ಕನ್ನಡ ಸಾಹಿತ್ಯ ಪರಿಷತ್ತು
 • ಕನಕೋಪನಿಷತ್ತು – ಡಾ. ಬನ್ನಂಜೆ ಗೋವಿಂದಾಚಾರ್ಯ

(ಈ ಲೇಖನ ಗಣೇಶ್ ವಿಜಯನ್ ಅವರ ಆಂಗ್ಲ ಲೇಖನದ ಕನ್ನಡಾನುವಾದವಾಗಿದೆ.)

(This is a Kannada translation of an English article by Ganesh Vijayan)

(Image credit: Kapoor Galleries)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply