ಹಿಂದಿನ ಭಾಗದಲ್ಲಿ ಶ್ರೀರಾಮ-ಭರತರ ಮುಖಾಮುಖಿಯನ್ನು ನೋಡಿದೆವು, ರಾಮ ಯಾವ ರೀತಿಯಲ್ಲಿ ರಾಜನ ಹತ್ತಿರದವರ ಕುರಿತಾಗಿ ವಿಚಾರಿಸುತ್ತಾನೆ ಎನ್ನುವುದನ್ನು ಗಮನಿಸಿದೆವು. ಮೊದಲು ಭರತನೇ ಮಾಡಬೇಕಾದ ಒಂದಿಷ್ಟು ವಿಷಯಗಳ ಚಿಂತನೆ. ನಂತರ ರಾಜ್ಯಾಡಳಿತದ ಪ್ರಮುಖ ಅಧಿಕಾರಿಗಳ ಸ್ವರೂಪದ ಲಹರಿ, ಅತಿ-ಹತ್ತಿರದವರ ಯೋಗಕ್ಷೇಮ – ಹೀಗೆ ಸಾಗುತ್ತದೆ ರಾಮನ ಕುಶಲೋಪರಿ, ರಾಜಮಾರ್ಗದಲ್ಲಿ. ಈ ಮುಂದಿನ ಭಾಗದಲ್ಲಿ ಶ್ರೀರಾಮ ಯಾವ ರೀತಿಯಲ್ಲಿ ಆಡಳಿತ ಪ್ರಮುಖ ಅಂಗಗಳ ಕುರಿತಾಗಿ ವಿಚಾರಿಸುತ್ತಾನೆ ಎನ್ನುವುದನ್ನು ನೋಡೋಣ.
ಶ್ರೀರಾಮ ಮುಂದುವರೆಯುತ್ತಾನೆ. “ಭರತ, ನಿನ್ನ ರಾಜ್ಯದಲ್ಲೇ ಇರುವ, ಕೌಶಲ್ಯವಂತರೂ, ಜ್ಞಾನಿಯೂ, ಸಮಯಸ್ಫೂರ್ತಿಯುಳ್ಳವರೂ, ವಿಷಯಕ್ಕನುಗುಣವಾಗಿ, ಅವಶ್ಯವಿದ್ದಷ್ಟು ಖಚಿತವಾಗಿ ಮಾತನಾಡಬಲ್ಲ ರಾಜದೂತರು ನಿನ್ನ ಬಳಿ ಇದ್ದಾರೆಯಷ್ಟೇ?”. ರಾಜದೂತನ ಬಗ್ಗೆ ರಾಮನಾಡುವ ಮಾತುಗಳನ್ನು ನೋಡಿ. ಎಲ್ಲಾ ಕಾರ್ಯಗಳೂ ಕ್ಷಾತ್ರ-ವೀರ್ಯದಿಂದ ಸಾಧಿತವಾಗುವುದಿಲ್ಲ. ಕ್ಷಾತ್ರಕಾರ್ಯಗಳನ್ನು ಸಾಧಿಸುವುದಕ್ಕೆ ಕ್ಷಾತ್ರದೃಷ್ಟಿ ಮತ್ತು ಸಾಮಾಜಿಕ ಕೌಶಲ್ಯಗಳು ಅನಿವಾರ್ಯ. ಕ್ಷತ್ರಿಯನಿಗೆ ಇದು ಅವಶ್ಯಕ. ಆಧುನಿಕ ಕಾಲದಲ್ಲಂತೂ ಇದರ ಅವಶ್ಯಕತೆ ಇನ್ನಷ್ಟು ಸ್ಪಷ್ಟವಾಗಿ ಎದ್ದುಕಾಣುತ್ತದೆ. ಈ ಬಗೆಯ ದೂತರನ್ನು ನಾವು ಹೆಸರಿಸದೇ ಇದ್ದರೂ, ನಮ್ಮ ಮನಸ್ಸಿನಲ್ಲಿ ಥಟ್ಟನೆ ಈ ಹೊತ್ತಿನ ಅನೇಕರು ಹೊಳೆಯುತ್ತಾರೆ.
ಮುಂದಿನ ಶ್ಲೋಕವಂತೂ ಅತ್ಯಮೋಘ. “ಭರತನೇ, ಒಬ್ಬರಿಗೊಬ್ಬರು ಪರಿಚಯವಿರದ, ಮೂವರು ಅತ್ಯುತ್ತಮ ಗೂಢಚಾರರು ನಿನ್ನ ಬಳಿಯಿದ್ದಾರೆಯಷ್ಟೇ? ಅವರಿಂದ ನಿನ್ನ ಶತ್ರುಗಳ ೧೮ ಅಧಿಕಾರಿಗಳೂ, ನಿನ್ನವರೇ ೧೫ ಅಧಿಕಾರಿಗಳ ಬಗ್ಗೆ ಆಗಾಗ್ಗೆ ಮಾಹಿತಿ ದೊರೆಯುತ್ತಿದೆಯಷ್ಟೆ?”. ಈ ಶ್ಲೋಕ ಘನವಾದ್ದೇ ಸರಿ. ಮೂವರು ಎನ್ನುವಲ್ಲಿ ಒಂದು ಖಚಿತವಾದ ಸಂಖ್ಯೆಯಿದೆ. ಮೂವರಿಗಿಂತ ಹೆಚ್ಚಿದ್ದಿರಬಹುದು. ಆದರೆ ಮೂವರಾದರೂ ಇರಲೇಬೇಕು. ಇಲ್ಲದಿದ್ದರೆ ದೊರಕಬಹುದಾದ ಮಾಹಿತಿ ವೈವಿಧ್ಯತೆಯಿಂದ ಕೂಡಿರುವುದಿಲ್ಲ. ಇಬ್ಬರೇ ಇದ್ದರೆ – ಒಂದು ಮಾಹಿತಿ ಮತ್ತೊಂದಕ್ಕೆ ವಿರುದ್ಧವಾಗಿದ್ದರೆ ಹಿಡಿಯಬೇಕಾದ ದಿಕ್ಕಿನ ಸ್ಪಷ್ಟತೆಯಿರುವುದಿಲ್ಲ. ಪರಿಚಯವಿದ್ದರೆ ಅಪಾಯಕಾರಿಯಾದ ಹೊಂದಾಣಿಕೆಯಿರುವ ಸಾಧ್ಯತೆಯಿದೆ. ಇದು ಇಲ್ಲಿನ ಮರ್ಮ.
ಅದು ಸರಿಯೇ. ಆದರೆ, ಈ ಹದಿನೈದು ಮತ್ತು ಹದಿನೆಂಟರ ಪ್ರಾಮುಖ್ಯತೆಯೇನು ಎಂದರೆ ಅದು ಬೇರೆಯ ಶಾಸ್ತ್ರಗ್ರಂಥಗಳಲ್ಲಿ ದೊರೆಯುತ್ತದೆ. ಪ್ರಧಾನಮಂತ್ರಿ, ರಾಜಪುರೋಹಿತ, ಯುವರಾಜ, ಸೇನಾಪತಿ, ಅಂತಃಪುರದ ಕಾರ್ಯನಿರ್ವಾಹಕ, ಕಾರಾಗಾರದ ಅಧ್ಯಕ್ಷ, ಪ್ರಮುಖ ಕಾವಲುಗಾರ, ಕೋಶಾಧ್ಯಕ್ಷ, ಪ್ರಮುಖ ನ್ಯಾಯಾಧೀಶ, ನ್ಯಾಯವಾದಿ, ಭೂಮಿಯನ್ನು ಅಳೆಯುವವನು, ಸೇನೆಗೆ ಭತ್ಯೆ ವಿತರಿಸುವವನು, ಸಾರ್ವಜನಿಕ ಕಾರ್ಯಗಳ ನಿರ್ವಾಹಕ, ಗಡಿಕಾಯುವ ಸೇನೆಯ ಮುಖ್ಯಸ್ಥ, ಪ್ರಾಂತ್ಯಾಧಿಕಾರಿ ಮತ್ತು ನೀರು, ಬೆಟ್ಟ, ಅರಣ್ಯಗಳ ಸಂರಕ್ಷಕ – ಇವರೇ ಆ ಹದಿನೆಂಟು ಪ್ರಮುಖರು. ರಾಜ್ಯಪರಿಪಾಲನೆಗೆ ಅವರ ಪ್ರಾಮುಖ್ಯತೆಯನ್ನು ವಿವರಿಸಬೇಕಾಗಿಲ್ಲ. ಇವರು ಇಂದಿಗೂ ಪ್ರಮುಖರೆ ಸರಿ.
ಇಲ್ಲಿ ಮತ್ತೊಂದು ಸ್ವಾರಸ್ಯವಿದೆ. ಶತ್ರುಗಳ ಹದಿನೆಂಟು ಮತ್ತು ನಿನ್ನದೇ ರಾಜ್ಯದ ೧೫ ಎನ್ನುತ್ತಾನಲ್ಲ ರಾಮ, ಆ ಮಿಕ್ಕ ಮೂರು ಯಾವುವು ಎನ್ನುವುದರಲ್ಲಿ ಸ್ವಾರಸ್ಯವಡಗಿದೆ. ಆ ಮೂವರೇ – ಪ್ರಧಾನ ಮಂತ್ರಿ, ರಾಜಪುರೋಹಿತ ಮತ್ತು ಯುವರಾಜ. ಇವರ ವಿಷಯ ರಾಜ್ಯದ ಪರಮರಹಸ್ಯ. ಅದು ಕೇವಲ ರಾಜನಿಗಷ್ಟೇ ಗೊತ್ತಿರಬೇಕಾದ ವಿಷಯ. ಸ್ವತಃ ರಾಜನೇ ಅವರ ಮೇಲೆ ಗಮನವಿಡತಕ್ಕದ್ದು. ರಾಜದೂತರೇನಾದರೂ ರಾಜದ್ರೋಹಿಗಳಾದರೆ ಈ ಮೂವರ ವಿಷಯ ಶತ್ರುಗಳಿಗೆ ತಿಳಿದು ರಾಜ್ಯಕ್ಕೆ ಆಪತ್ತುಂಟಾಗಬಲ್ಲದು. ಅಷ್ಟಲ್ಲದೇ ಈ ಮೂವರು ರಾಜನಿಗೆ ಅತ್ಯಂತ ಸನಿಹವಾಗಿದ್ದು, ಅವರ ಮೇಲಿನ ಸಂಪೂರ್ಣ ವಿಶ್ವಾಸ ರಾಜ್ಯಕ್ಕೆ ಅತ್ಯವಶ್ಯಕ. ಅದಿರಲಿ, ಇಷ್ಟಾದ ಮೇಲೆ ಶತ್ರುಗಳ ಬಗ್ಗೆಯೂ ಒಂದಿಷ್ಟು ಬರೆದಿರಬೇಕಲ್ಲ. ಶತ್ರುಗಳ ಕುರಿತಾಗಿಯಂತೂ ಶ್ರೀರಾಮನು ವಿಶೇಷ ಎಚ್ಚರಿಕೆ ಕೊಡುತ್ತಾನೆ. “ಅವರನ್ನು ಹಗುರವಾಗಿ ಕಾಣುತ್ತಿಲ್ಲವಷ್ಟೆ, ಭರತ? ಒಮ್ಮೆ ದುರ್ಬಲರಾಗಿ ತಲೆಮರೆಸಿಕೊಂಡು ಮತ್ತೆ ಹಿಂದಿರಿಗುವವರನ್ನಂತೂ ಹಗುರವಾಗಿ ಕಾಣಲೇ ಕೂಡದು.”
ಇಷ್ಟು ರಾಜಕೀಯ ಪರಿಜ್ಞಾನ ಭಾರತೀಯ ಪರಂಪರೆಗೆ ಬಹಳ ಪ್ರಾಚೀನವಾದುದು. ಇನ್ನೇನಿಲ್ಲದಿದ್ದರೂ ಒಂದಂತೂ ಸ್ಪಷ್ಟವಾಗುತ್ತದೆ. ಆ ಹೊತ್ತಿನ ರಾಜಕೀಯ ಈಗಿನದಷ್ಟೇ ಸಂಕೀರ್ಣವಾದುದಾಗಿತ್ತು. ಮತ್ತು ಅದನ್ನು ನಿರ್ವಹಿಸುವುದಕ್ಕೆ ಬೇಕಾದ ಶಾಸ್ತ್ರೀಯ ತಯಾರಿ ಆ ಕಾಲದಲ್ಲಿತ್ತು. ಈ ಶ್ಲೋಕಗಳಲ್ಲಿ ಶ್ರೀರಾಮ ಕೇವಲ ಒಂದು ಆಡಳಿತ ತತ್ವವನ್ನು ಮಾತ್ರವಲ್ಲದೆ, ರಾಜ್ಯಾಡಳಿತದ ಕ್ರಿಯಾಸೂಚಿಯನ್ನೇ ವಿವರಿಸುತ್ತಿದ್ದಾನೆ. ಇಂತಹ ಕ್ರಿಯಾಸೂಚಿಗಳು ಅನೇಕ ಶತಮಾನಗಳ ಅನುಭವದಿಂದ ಮಾತ್ರವೇ ರೂಪಿತವಾಗಬಲ್ಲುದು ಎನ್ನುವುದು ಗಮನಾರ್ಹವಾದ ವಿಷಯ. ಈ ಅನುಭವ ಒಂದು ತಾತ್ವಿಕ ಪರಿಪೂರ್ಣತೆಯಿಂದ ಕೂಡಿದ ಕಾರ್ಯಸೂಚಿಯಾಗಿರುವುದನ್ನೂ ನೋಡಬಹುದು. ಅಷ್ಟಲ್ಲದೇ, ರಾಮಾಯಣ-ಮಹಾಭಾರತಗಳು ಸಹಸ್ರಾರು ವರ್ಷಗಳ ಕಾಲ ಯಾವ ರೀತಿಯಲ್ಲಿ ಶಿಕ್ಷಣದಲ್ಲಿ ಪ್ರಮುಖಪಾತ್ರ ವಹಿಸಿದ್ದಿರಬಹುದು ಎನ್ನುವುದು ಇಲ್ಲಿ ಸ್ಪಷ್ಟವಾಗುತ್ತದೆ.
ಮುಂದಿನ ಎರಡು ಶ್ಲೋಕಗಳನ್ನಂತೂ ಆಧುನಿಕರು ಎರಡೂ ಕಣ್ಣುಗಳನ್ನು ಅಗಲವಾಗಿ ತೆಗೆದು ನೋಡಬೇಕು. ಬ್ರಾಹ್ಮಣರ ಕುರಿತು ರಾಮನ ದೃಷ್ಟಿಯೇನು ಎನ್ನುವುದು. “ನನ್ನ ಪ್ರಿಯ ಸಹೋದರನೇ, ಪ್ರಾಪಂಚಿಕ ವ್ಯವಹಾರಗಳಿಗೆ (ಲೋಕಾಯತಿಕಾನ್) ಅಂಟಿಕೊಂಡಿರುವ ಬ್ರಾಹ್ಮಣರನ್ನು ನೀನು ಗೌರವಿಸುತ್ತಿಲ್ಲವಷ್ಟೇ? ಅಧ್ಯಯನವಿಲ್ಲವರಾದರೂ, ಹೆಚ್ಚು ತಿಳಿಯದವರಾದರೂ – ಮನಸ್ಸನ್ನು ಕಲುಷಿತಗೊಳಿಸುವುದರಲ್ಲಿ ಇವರು ಸಿದ್ಧಹಸ್ತರು. ಧರ್ಮಗ್ರಂಥಗಳನ್ನೇ ಎದುರಿಟ್ಟುಕೊಂಡು, ತಮ್ಮ ಬುದ್ಧಿಯ ತರ್ಕ-ವಿತರ್ಕಗಳಿಂದ, ಅರ್ಥಹೀನವಾದ್ದನ್ನೇ ಪ್ರತಿಪಾದಿಸುತ್ತಾರೆ ಈ ಬುದ್ಧಿ-ವಿಹೀನರು. ಹೀಗೆ ರಾಮ ಮೊದಲಲ್ಲಿ ಬ್ರಾಹ್ಮಣರನ್ನು ವಿಶೇಷ ಗೌರವದಿಂದ ಕಂಡು, ನಂತರದಲ್ಲಿ ಯಾವ ಬ್ರಾಹ್ಮಣರಿಗೆ ಈ ಗೌರವ ಸಂದಬಾರದೆಂಬ ವಿನಾಯಿತಿ ವಿವರಿಸುತ್ತಾನೆ. ಹೀಗೆ ಬೆಳಕಿನ ಕೆಳಗೆ ಇರುವ ಕತ್ತಲನ್ನು ನಮ್ಮ ಪೂರ್ವಜರು ಇಂದಿಗೂ ಮರೆಯಲಿಲ್ಲ.
ನಂತರ, ಅಯೋಧ್ಯೆಯ ಸಂರಕ್ಷಣೆ, ಅದರ ಪ್ರಾಚೀನತೆ, ಗೌರವ ಇವುಗಳ ಕುರಿತಾಗಿ ಹೃದಯಪೂರ್ಣ ಮಾತುಗಳನ್ನಾಡುತ್ತಾನೆ ರಾಮ. ಈ ಕುರಿತಾಗಿ ಆದಿಕವಿ ವಾಲ್ಮೀಕಿಗಳು ೮-೧೦ ಶ್ಲೋಕಗಳಲ್ಲಿ ಹೃದಯಂಗಮವಾಗಿ ವಿವರಿಸುತ್ತಾರೆ. ತನ್ಮೂಲಕ ಅಯೋಧ್ಯೆಯ ಕೆಲವು ಸ್ವಾರಸ್ಯಕರವಾದ ವಿಷಯಗಳು ನಮಗೆ ತಿಳಿಯುತ್ತದೆ.
- ಅಯೋಧ್ಯೆಯಲ್ಲಿ ದೇವಸ್ಥಾನಗಳಿದ್ದವು ಎನ್ನುವುದು ಸ್ಪಷ್ಟವಾಗುತ್ತದೆ – “ದೇವ ಸ್ಥಾನೈ ಪ್ರಣಾಭಿ:” ಎನ್ನುತ್ತದೆ ಶ್ಲೋಕ.
- ಕೃಷಿ ಕೇವಲ ಮಳೆಯನ್ನಾಧರಿಸಿರಲಿಲ್ಲ (ಪ್ರಾಯಶಃ ನೀರಾವರಿಯಿದ್ದಿರಬಹುದು) ಎನ್ನುತ್ತದೆ ಮತ್ತೊಂದು ಶ್ಲೋಕ.
- ಮತ್ತೊಂದೆಡೆ ಗಣಿಗಳಿದ್ದವು ಎನ್ನುವ ಉಲ್ಲೇಖವಿದೆ – ಯಾವ ಗಣಿಗಳು ಎನ್ನುವ ವಿವರಣೆಯಿಲ್ಲ.
- “ಕೃಷಿ ಮತ್ತು ಪಶುಸಂಗೋಪನೆಯನ್ನು ನಂಬಿರುವ ಜನರನ್ನು ನೀನು ಆದರಿಸುತ್ತಿದ್ದೀಯಲ್ಲವೇ, ಭರತ” – ಪ್ರಪಥಮವಾಗಿ ಉಲ್ಲೇಖವಾಗುವ ವೃತ್ತಿ ಇವುಗಳೇ.
ಎನ್ನುವಲ್ಲಿ ಈ ಎರಡು ವೃತ್ತಿಗಳಿಗಿದ್ದ ಪ್ರಾಥಮಿಕತೆ ಗೋಚರವಾಗುತ್ತದೆ. ಆಶ್ಚರ್ಯವೇನೂ ಇಲ್ಲ. ಸಹಜವೇ. ಆದರೂ, ಆಧುನಿಕ ಕಾಲದಲ್ಲಿ ನಮ್ಮ ಪರಂಪರೆಯ ಕುರಿತು ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವಲ್ಲಿ ಇದು ಮಹತ್ವದ್ದು. ಗಮನಿಸಬೇಕಾದ್ದೆಂದರೆ – ರಾಮ ಆ ವೃತ್ತಿಗಳನ್ನು ಮಾತ್ರ ಗೌರವಿಸುತ್ತಿಲ್ಲ. ಆ ವೃತ್ತಿಯನ್ನು ನಂಬಿರುವ ಜನರ ಗೌರವವನ್ನು ಆಶಿಸುತ್ತಿದ್ದಾನೆ ರಾಮ. ಅದೇ ರಾಮ ರಾಜ್ಯ. ಗಮನಿಸಬೇಕಾದ ಮತ್ತೊಂದು ವಿಷಯ. ಈ ಎರಡೂ ವೃತ್ತಿಗಳನ್ನು ಅವಲಂಬಿಸಿರುವವರು ಸಮೃದ್ಧಿಯನ್ನು ಹೊಂದುತ್ತಾರೆ ಎನ್ನುತ್ತಾನೆ ರಾಮ. “ಈ ವೃತ್ತಿಗಳನ್ನು ಪೋಷಿಸಬೇಕಾದ್ದು, ರಕ್ಷಿಸಬೇಕಾದ್ದು ನಿನ್ನ ಧರ್ಮ, ಭರತ. ಅವರಿಗೆ ಯಾವ ಭಯವೂ ಇರಕೂಡದು. ಎಲ್ಲರನ್ನೂ ಧರ್ಮದಿಂದ ಪೋಷಿಸಬೇಕಾದ್ದು ರಾಜನ ಕರ್ತವ್ಯ”.
ನಂತರ ಮಹಿಳೆಯರ ಸಂರಕ್ಷಣೆಯ ಕುರಿತಾಗಿ ಮಾತನಾಡುತ್ತಾನೆ, ರಾಮ. ಆನೆಗಳ ಕುರಿತಾಗಿ ಒಂದಿಷ್ಟು ಬೋಧಿಸುತ್ತಾನೆ, ರಾಮ. ಈಗಲೂ ಭಾರತದಲ್ಲಿ ಆನೆಗಳು ದೇಶದೆಲ್ಲೆಡೆ ದೊರೆಯುತ್ತದೆ. ಮನುಷ್ಯನ ಪರಮಮಿತ್ರ ಈ ಆನೆ. ಆಗಂತೂ ಸೈನ್ಯಕ್ಕೆ ಅವಶ್ಯಕವಿತ್ತು. ಆನೆಗಳು, ಕುದುರೆಗಳ ಸಂಖ್ಯೆಯ ಕುರಿತು ಎಂದಿಗೂ ತೃಪ್ತಿಹೊಂದಬಾರದು. ಸಂಗ್ರಹಿಸುತ್ತಲೇ ಇರಬೇಕು – ಎನ್ನುತ್ತಾನೆ ರಾಮ.
ಮುಂದಿನ ಶ್ಲೋಕ ಸ್ವಾರಸ್ಯಕರವಾಗಿವೆ. “ಪ್ರತಿ ಮುಂಜಾನೆ, ಜನರೇಳುವ ಮುನ್ನವೇ ರಾಜಬೀದಿಯಲ್ಲಿ ಸುಸಜ್ಜಿತನಾಗಿ ಕಾಣಿಸಿಕೊಳ್ಳುತ್ತಿದ್ದೀಯ ತಾನೇ, ಭರತ”. ರಾಜ ಆಗಾಗ್ಗೆ ಕಾಣಿಸಿಕೊಳ್ಳಬೇಕಾದ್ದು ಪ್ರಜೆಗಳ ಆತ್ಮವಿಶ್ವಾಸಕ್ಕೆ ಅತ್ಯಗತ್ಯವಾದ ವಿಷಯ. ಇಂದಿಗೂ ಇದು ಪ್ರಮುಖವಾದ ವಿಚಾರ. “ಸೇವಕರು ನಿನ್ನ ಮುಂದೆ ಸರಿಯಾಗಿ ನಡೆದುಕೊಳ್ಳುತ್ತಿರುವರಷ್ಟೇ? ಸೇವಕರು ನಿನ್ನನ್ನು ಕಂಡು ಭಯದಿಂದ ದೂರಸರಿಯುತ್ತಿಲ್ಲ ತಾನೇ? ಸರಿಯಾದ ಮಧ್ಯಮಮಾರ್ಗದ ಅವಶ್ಯಕತೆಯಿಲ್ಲಿದೆ, ಭರತ.” ಸಾರ್ವಕಾಲಿಕವಾದ ಮತ್ತು ಮಾರ್ಮಿಕವಾದ ಬೋಧನೆ. ರಾಜನ ಭಯವಿಲ್ಲದಿದ್ದರೆ ರಾಜ್ಯದ ಬಿಗಿ ಸಡಿಲವಾಗಿ, ಅರಾಜಕತೆಯುಂಟಾಗುತ್ತದೆ. ರಾಜನ ಭಯ ಅತಿಯಾದರೆ ರಾಜನಿಗೆ ಸಿಗಬೇಕಾದ ಮಾಹಿತಿ ದೊರೆಯುವುದಿಲ್ಲ, ನಡೆಯಬೇಕಾದ ಕೆಲಸಕ್ಕೆ ಸಹಯೋಗದ ಕೊರತೆಯುಂಟಾಗುತ್ತದೆ. ಆ ನಂತರ ಸಂಪತ್ತು, ಸಮೃದ್ಧಿ ಮತ್ತು ಅದರ ಸದ್ವಿನಿಯೋಗದ ಬಗ್ಗೆ ಒಂದಿಷ್ಟು ಪ್ರಶ್ನೆಗಳನ್ನು ಕೇಳುತ್ತಾನೆ, ರಾಮ.
ಮುಂದಿನ ಶ್ಲೋಕಗಳು ನ್ಯಾಯಪ್ರದಾನ ವಿಷಯದ ಕುರಿತಾಗಿದೆ. “ಸದ್ಗುಣವಂತನಾದವನ ಮೇಲೆ ಅಪವಾದ ಬಂದರೆ, ಸರಿಯಾದ ವಿಚಾರಣೆಯಿಲ್ಲದೆ (ಶಾಸ್ತ್ರ ಕೌಶಲ್ಯವಿರುವವರಿಂದ) – ಅವನನ್ನು ಕೊಲ್ಲಲಾಗುತ್ತಿಲ್ಲವಷ್ಟೆ?”. ಮುಖ್ಯವಾಗಿ ನಮಗೆ ತಿಳಿಯುವುದೇನೆಂದರೆ ನ್ಯಾಯಪ್ರದಾನಕ್ಕೆ ಒಂದು ಎಚ್ಚರಿಕೆಯಿರಬೇಕು. ಎರಡನೆಯದಾಗಿ, ನ್ಯಾಯಪ್ರದಾನ ಮಾಡುವವರಿಗೆ ಶಾಸ್ತ್ರಗಳ ಕೌಶಲ್ಯವಿರಬೇಕು. ಯಾವ ಶಾಸ್ತ್ರಗಳು ಎನ್ನುವ ವಿವರಣೆಯಿಲ್ಲದಿದ್ದರೂ ಊಹಿಸುವುದು ಕಷ್ಟವೇನಲ್ಲ. ಧರ್ಮದ ಜಿಜ್ಞಾಸೆಯಿರುವ ಶಾಸ್ತ್ರಗಳ ಕುರಿತಾಗಿಯೇ ಇರುವ ಮಾತಿದು. ಎರಡು ಮುಖ್ಯ ನ್ಯಾಯ-ತತ್ವಗಳನ್ನು ಮುಂದಿಡುತ್ತಾನೆ ರಾಮ. ಸದ್ಗುಣವಂತನಾದವನ ಮೇಲೆ ಮಿಥ್ಯಾರೋಪ ಬಂದರೆ ನ್ಯಾಯಪ್ರದಾನ ವ್ಯವಸ್ಥೆಗೆ ಅದನ್ನು ಗುರುತಿಸುವ ಶಕ್ತಿಯಿರಬೇಕು. ಅಕಾರ್ಯಮಾಡಿದವನು ಭ್ರಷ್ಟಾಚಾರ ನಡೆಸಿ ತಪ್ಪಿಸಿಕೊಳ್ಳುವಂತಾಗಬಾರದು.
ಇದೇನು ತುಂಬಾ ಸಹಜವಾದ ವಿಚಾರ, ವಿಶೇಷವೇನು ಎನ್ನಬಹುದು. ಆದರೆ ಇದನ್ನ ರಾಜನ ಜವಾಬ್ದಾರಿಯನ್ನಾಗಿ ಮಾಡಿರುವುದೇ ಇಲ್ಲಿನ ವಿಶೇಷ. ಆಧುನಿಕ ಕಾಲದಲ್ಲಿ ರಾಜನ ಮೇಲೆ ಈ ಜವಾಬ್ದಾರಿಯಿಲ್ಲ. ಅದು ಕಾನೂನಿನ ಮೇಲೆ ಅವಲಂಬಿತವಾಗಿದೆ. ತಪ್ಪಾಗಿರುವಂತೆನ್ನಿಸಿದರೂ ರಾಜನೇನು, ಸ್ವತಃ ಸುಪ್ರೀಮ್ ಕೋರ್ಟಿನ ನ್ಯಾಯಾಧೀಶರೂ ಏನೂ ಮಾಡುವಂತಿಲ್ಲ. ವ್ಯವಸ್ಥಿತ ರೂಪದಲ್ಲಿದು ನ್ಯಾಯಾಂಗದ ಕಾರ್ಯನಿರ್ವಹಣೆಯ ಅಳತೆಗೋಳೂ ಆಗಿಲ್ಲ. [ಪ್ರಾಚೀನ ಗ್ರಂಥವಾದ ಸಿಲಪ್ಪದಿಕಾರಂ-ನಲ್ಲಿ ಒಂದು ತಪ್ಪು ತೀರ್ಪಿನಿಂದಾದ ಅನ್ಯಾಯಕ್ಕೆ ಮರುಗಿ ನ್ಯಾಯಕ್ಕೆ ರಾಜನು ತನ್ನ ಪ್ರಾಣವನ್ನೇ ಕೊಡುತ್ತಾನೆ. ಈಗಿನ ನ್ಯಾಯವ್ಯವಸ್ಥೆಯಲ್ಲಿ ಅದನ್ನು ಕಾಣುವಂತಿಲ್ಲ].
ರಾಮನ ಮತ್ತೊಂದು ಎಚ್ಚರಿಕೆ. “ಭರತನೇ, ನಿನ್ನ ಮಂತ್ರಿಗಳು ಶ್ರೀಮಂತ ಮತ್ತು ಬಡವನ ನಡುವಿನ ವಿವಾದದಲ್ಲಿ ಯಾವುದೇ ಭಾವೋದ್ರೇಕವಿಲ್ಲದೆ, ಆಮಿಷಕ್ಕೊಳಗಾಗದೆ ವಿಚಾರಣೆ ನಡೆಸುವುದಕ್ಕೆ ಶಕ್ತರಾಗಿದ್ದಾರಷ್ಟೇ?”. ಇದನ್ನಂತೂ ಆಧುನಿಕ ಕಾಲದಲ್ಲಿ ಅಳೆಯುವ ಅವಕಾಶವೇ ಇಲ್ಲ. ಕಾನೂನಿನ ಶಾಸ್ತ್ರಜ್ಞಾನ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ ಆಧುನಿಕ ಕಾಲದಲ್ಲಿ. ಮುಂದಿನ ಎಚ್ಚರಿಕೆಯಂತೂ ಭಾರತೀಯ ಪರಂಪರೆಯ ನ್ಯಾಯ-ಪ್ರಜ್ಞೆಯನ್ನು ಎತ್ತಿ ತೋರುತ್ತದೆ. “ನಿರಪರಾಧಿಯ ಕಣ್ಣೀರು (ಹೊಣೆಗಾರರಾದ) ಪ್ರಾಪಂಚಿಕ ಭೋಗದಲ್ಲಿ ಮುಳುಗಿ ನ್ಯಾಯಕ್ಕೆ ವಿಮುಖರಾದವರ ಮಕ್ಕಳನ್ನೂ, ಸರ್ವಸ್ವವನ್ನೂ (ನಿನ್ನ ರಾಜ್ಯವನ್ನೇ, ವಂಶವನ್ನೇ) ನಾಶ ಮಾಡೀತು, ಭರತ”. ಈ ಪ್ರಜ್ಞೆಯನ್ನು ಮನದಲ್ಲಿ ಧರಿಸಿರುವ ರಾಜ್ಯ, ರಾಜ, ದೇಶಗಳಷ್ಟೇ ನಿಜವಾಗಿ ನ್ಯಾಯವನ್ನು ಕಾಪಾಡಲು ಸಾಧ್ಯ. ಯಾವುದೇ ಕಾನೂನು ತನ್ನಿಂದಷ್ಟೇ ಇದನ್ನು ಸಾಧ್ಯವಾಗಿಸುವುದಿಲ್ಲ. ಕೆಲವೇ ಶ್ಲೋಕಗಳಲ್ಲಿ ರಾಮ ಒಂದು ನ್ಯಾಯವ್ಯವಸ್ಥೆಯ ಪ್ರಮುಖ ಅಂಶಗಳನ್ನು ಸರಳವಾಗಿ ವಿವರಿಸುತ್ತಾನೆ.
ಈ ೭೬ ಶ್ಲೋಕಗಳಲ್ಲಿ ನಾವು ಕಾಣುವ ಅಂಶವೆಂದರೆ – ಪ್ರತಿಯೊಂದು ವಿಷಯದಲ್ಲೂ ಒಂದು ರಾಜ್ಯಪಾಲನೆಗೆ ಬೇಕಾದ ತಾತ್ವಿಕತೆ-ಸ್ಪಷ್ಟತೆ, ಅದನ್ನು ವ್ಯವಸ್ಥಿತವಾಗಿ ನಡೆಸುವುದಕ್ಕೆ ಬೇಕಾದ ಕಾರ್ಯಸೂಚಿ ಮತ್ತು ಮತ್ತು ಅದರ ಹೊಣೆ ಹೊತ್ತಿರುವವರಿಗೆ ಇರಬೇಕಾದ ಪ್ರಜ್ಞೆ – ಇವುಗಳ ಸಮನ್ವಯವಿದೆ. ರಾಜನಿಗೆ ಮತ್ತು ರಾಜ್ಯಕ್ಕೆ ಅಂದರೆ ಸಮಾಜಕ್ಕೆ ಒಂದು ಪ್ರಜ್ಞೆಯಿಲ್ಲದಿದ್ದರೆ ಅದರ ಮೇಲೆ ಅವಲಂಬಿತವಾಗಿರುವ ಧಾರ್ಮಿಕ ಮಹತ್ತನ್ನು ಸಾಧಿಸುವುದು ಕಷ್ಟ. ಆ ಪ್ರಜ್ಞೆ ತಾತ್ವಿಕ ಪರಿಪೂರ್ಣತೆಯನ್ನೂ ಪಡೆಯಬೇಕು. ಹಾಗಿದ್ದಾಗ ಮಾತ್ರ ಅನೇಕ ವರ್ಷಗಳ ಅನುಭವದಿಂದ ಒಂದು ಕಾರ್ಯಸೂಚಿ ಸಾಧ್ಯವಾಗಿ ಅದು ರಾಜ್ಯಾಡಳಿತದ ಅಂಗವಾಗುತ್ತದೆ. ಧಾರ್ಮಿಕ ಪ್ರಜ್ಞೆಯಿಂದ ರಾಜ್ಯಾಡಳಿತ ರಾಜ್ಯಪಾಲನೆಯಾಗುತ್ತದೆ. ಈ ಸಾಮಾನ್ಯ ಜ್ಞಾನವನು ನಾವು ೭೬ ಶ್ಲೋಕಗಳ ಉದ್ದಕ್ಕೂ ಕಾಣಬಹುದಾಗಿದೆ.
ಹೀಗೆ ಈ ಸಂಭಾಷಣೆಯಲ್ಲಿ ರಾಮ ಧಾರ್ಮಿಕ ರಾಜ್ಯಪರಿಪಾಲನೆಯೆಂದರೇನು ಎನ್ನುವುದನ್ನು ಹೃದಯಸ್ಪರ್ಶಿಯಾಗಿ, ಸೂತ್ರರೂಪಿಯಾದ ಶ್ಲೋಕಗಳಲ್ಲಿ ವಿವರಿಸುತ್ತಾನೆ. ಭರತನಿರಲಿ – ಸಹಸ್ರಾರು ವರ್ಷಗಳ ನಂತರ ಓದುವ ನಮ್ಮಲ್ಲೂ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುತ್ತಾನೆ. ಈ ಭಾಗಗಳನ್ನು ನಮ್ಮ ರಾಷ್ಟ್ರನೇತರರು ಸದಾ ತಮ್ಮ ಹೃದಯಲ್ಲಿ ಧರಿಸಿರಬೇಕಾಗಿದೆ.
ಮುಂದಿನ, ಅಂತಿಮ ಭಾಗದಲ್ಲಿ ಕಡೆಯ ಇಪ್ಪತ್ತು ಶ್ಲೋಕಗಳ ವಿವರಣೆಯನ್ನು ನೋಡೋಣ.
(Image credit: Kangana Vohra, Mojarto)
Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.