close logo

ಮಹಾಭಾರತದಲ್ಲಿ ಸಾವಿತ್ರಿ-ಯಮರ ಸಂಭಾಷಣೆ

ಸತಿಸಾವಿತ್ರಿ ಪ್ರಪಂಚದ ಶ್ರೇಷ್ಠ ಸಾಧ್ವಿಮಣಿಯರಲ್ಲಿ ಪ್ರಸಿದ್ದಳು. ತನ್ನ ತಪಃಶಕ್ತಿಯಿಂದ ಹಾಗೂ ಸ್ವಸಾಮರ್ಥ್ಯದಿಂದ ಮೃತ್ಯುದೇವತೆಯ ಅನುಗ್ರಹಕ್ಕೆ ಪ್ರಾರ್ಥಳಾದವಳು. ಯಮನಿಂದ ವರಪಡೆದು ತನ್ನ ಪತಿಯನ್ನು ಪುನಃ ಬದುಕಿಸಿದ ಅವಳ ವೃತ್ತಾಂತ ಜನಜನಿತವಾಗಿದೆ. ಆದರೆ ಧೀರೆ ಯಮನೊಡನೆ ಏನು ಮಾತನಾಡಿದಳು? ಹೇಗೆ ಅವನ ಕೃಪೆಗೆ ಪಾತ್ರಳಾದಳು ಎಂಬುದು ವರಗಳಷ್ಟೇ ರೋಚಕವಾಗಿದೆ. ಸನಾತನದ ಧರ್ಮವನ್ನು ಕಾಯಾವಾಚಾಮನಸಾ ಸದಾ ಅನುಸರಿಸಿದ ಮಹನೀಯೆ ತನ್ನ ಅಮೃತಸದೃಶ ವಾಣಿಯಿಂದಲೇ ಯಮನಿಂದಲೇ ಅಭಯ ಪಡೆದು ಧನ್ಯಳಾದಳು.

ಸಾವಿತ್ರಿದೇವಿಯ ವರಪ್ರಸಾದದಿಂದ ಜನಿಸಿದ ಅಶ್ವಸೇನನ ಮಗಳು ಸದ್ಗುಣಸಂಪನ್ನೆಯಾಗಿ ಬೆಳೆದಳು. ಸವಿತೃವಿನಂತಹ ಇವಳ ವ್ಯಕ್ತಿತ್ವದ ತೇಜಸ್ಸಿನ ತೀಕ್ಷ್ಣತೆ ನಾವು ತಾಳಲಾರೆವು ಎಂದು ಹೆದರಿ ಯಾರೊಬ್ಬರು ಇವಳನ್ನು ಮದುವೆ ಆಗಲು ಮುಂದೆಬರಲಿಲ್ಲ. ಸಾವಿತ್ರಿಗೆ ಇದರಿಂದ ಯಾವ ಬೇಸರವೂ ಇಲ್ಲದಿದ್ದರೂ ತಂದೆಗೆ ಕರ್ತವ್ಯನಿರ್ವಹಣೆಯ ಚಿಂತೆ. ಬೆಳೆದು ನಿಂತ ಮಗಳನ್ನು ಸಮಯಕ್ಕೆ ಸರಿಯಾಗಿ ಮಾಡುವೆ ಮಾಡಲಿಲ್ಲವೆಂದರೆ ತನ್ನನ್ನು ದೇವತೆಗಳು ನಿಂದಿಸುತ್ತಾರೆಂದು ಅವನ ಯೋಚನೆ. ತಂದೆಯ ಮನಸ್ಸನ್ನರಿತ ಮಗಳು ಆತನ ಸಲಹೆಯಂತೆ ತಾನೇ ತನಗೊಬ್ಬ ಅನುರೂಪ ವರನನ್ನು ಹುಡುಕಿಕೊಂಡು ಬರುತ್ತಾಳೆ. ಸಮಯದಲ್ಲಿ ರಾಜ ಅಶ್ವಸೇನನ ಬಳಿಯಿದ್ದ ನಾರದರರು ಸತ್ಯವಾನ್ ಅಲ್ಪಾಯುಷಿ. ಇನ್ನೊಂದು ವರ್ಷದಲ್ಲೇ ಗುಣವಂತ ದೇಹವನ್ನು ತೊರೆಯಲಿದ್ದಾನೆಎಂಬ ಕರ್ಣಕಠೋರ ಸತ್ಯವನ್ನು ತಿಳಿಸುತ್ತಾರೆ. ತಂದೆ ದಿಕ್ಕೆಟ್ಟು – “ಅಮ್ಮ! ದಯವಿಟ್ಟು ಮರಳಿ ಪ್ರವಾಸ ಮಾಡು. ಬೇರೊಬ್ಬ ಸೂಕ್ತ ವರನನ್ನು ಹುಡುಕಿಕೊಂಡು ಬಾಎಂದು ಸೂಚಿಸುತ್ತಾನೆ. ಆದರೆ ಸ್ವಲ್ಪವೂ ದೃತಿಗೆಡದ ಸಾವಿತ್ರಿ ತನ್ನ ನಿರ್ಧಾರಕ್ಕೆ ಬದ್ಧಳಾಗಿ ಸ್ಥೈರ್ಯದಿಂದ ಹೇಳುವ ಮಾತುಗಳು ಅದ್ಭುತವಾಗಿವೆ:

ಸಕೃದಂಶೋ ನಿಪತತಿ ಸಕೃತ್ಕನ್ಯಾ ಪ್ರದೀಯತೇ
ಸಕೃದಾಹ ದದಾನೀತಿ ತ್ರೀಣ್ಯೇತಾನಿ ಸಕೃತ್ಸಕೃತ್

ಸೂರ್ಯನು ಒಂದು ಬಾರಿ ಮಾತ್ರ ಮುಳುಗುತ್ತಾನೆ (ಮತ್ತೆ ಉದಯವಷ್ಟೇ!). ಕನ್ಯಾದಾನವನ್ನು ಒಮ್ಮೆ ಮಾತ್ರ ಮಾಡಲಾಗುತ್ತದೆ. “ದಾನ ಕೊಟ್ಟೆನೆಂದರೆಆಯಿತು, ಮತ್ತೆ ಅದರ ಬಗ್ಗೆ ಮತ್ತೆ ಯೋಚಿಸುವ ಹಾಗಿಲ್ಲ! ಇವೆಲ್ಲವೂ ಒಂದು ಬಾರಿ ಮಾತ್ರ. ಹಾಗೆಯೇ ನಾನು ಮನಸ್ಸಿನಿಂದ ಅವನನ್ನು ಒಮ್ಮೆ ಆಯ್ಕೆ ಮಾಡಿಯಾಗಿದೆ. ನಿಮ್ಮ ಬಳಿ ಹೇಳಿಯೂ ಆಯಿತು. ಇನ್ನು ಹಿಂದಿರುಗಿ ನೋಡುವ ಪ್ರಶ್ನೆಯೇ ಇಲ್ಲ!

ತನ್ನ ನಿಲುವಿಗೆ ಅಚಲವಾದ ಬದ್ಧತೆ! ಸಂಶಯದ ಲವಲೇಶವೂ ಇಲ್ಲ. ಅನುಭವಿಯಾದ ತಂದೆ ಹಾಗೂ ಗುರುವರ್ಯ ನಾರದ ಇಬ್ಬರನ್ನು ತನ್ನ ವಿವೇಕಯುಕ್ತ ತರ್ಕದಿಂದ ತಲೆದೂಗುವಂತೆ ಮಾಡುತ್ತಾಳೆ ಸಾವಿತ್ರಿ. ಇಂತಹ ಸಾವಿತ್ರಿ ಯಮನು ಬಂದಾಗ ಅವನನ್ನು ಅದೇ ದಿಟ್ಟತನದಿಂದ ಹಿಂಬಾಲಿಸಿದಳು. ಯಮನು-“ನೀನು ಇಷ್ಟು ದಿನ ಅತ್ಯಂತ ಪ್ರೀತಿಯಿಂದ ನಿನ್ನ ಪತಿಯನ್ನು ನೋಡಿಕೊಂಡಿರುವೆ. ಇಲ್ಲಿಗೆ ಅವನ ಪರವಾಗಿ ನಿನ್ನ ಋಣ ತೀರಿತು. ಹಿಂದಿರುಗಿ ಅವನ ಅಂತ್ಯಕ್ರಿಯೆಗಳನ್ನು ನಡೆಸು.” ಎಂದು ಹೇಳಿದಾಗ ಅವಳು ಸುಮ್ಮನೆ ಹಿಂದಿರುಗಬಹುದಿತ್ತು. ಆದರೆ ತನ್ನ ಅಪರಿಮಿತ ನಂಬಿಕೆ, ಅಗಾಧ ತಪಶಕ್ತಿಯ ಬಲದಿಂದ ಸಾವಿತ್ರಿ ತನ್ನ ಸ್ವಧರ್ಮವನ್ನು ಯಮನಿಗೆ ವಿವರಿಸಿದಳು – “ನನ್ನ ಪತಿಯು ಸ್ವತಃ ಎಲ್ಲಿಗೇ ಹೋಗಲಿ, ಅಥವಾ ಬೇರೊಬ್ಬರು ಅವನನ್ನು ಕರೆದೊಯಲ್ಲಿ, ನಾನು ಅವನ ಜೊತೆಯಲ್ಲೇ ಸಾಗುವುದು ನನ್ನ ಧರ್ಮ. ಅಷ್ಟೇ ಅಲ್ಲ, ಇದೇ ಸನಾತನ ಧರ್ಮ. ವಿನಯಪೂರ್ವಕವಾಗಿ ಹೇಳುತ್ತೇನೆ, ತಪಸ್ಸಿನಿಂದ, ಗುರುಹಿರಿಯರ ಭಕ್ತಿಯಿಂದ, ಪತಿಯ ಸ್ನೇಹದ ಬಲದಿಂದ ಹಾಗು ದೇವ, ನಿನ್ನ ಪ್ರಸಾದದಿಂದ, ಜಗತ್ತಿನ ಯಾವ ಶಕ್ತಿಯು ನನ್ನ ನಡೆಯನ್ನು ತಡೆಯಲಾಗದು!”

ಮಹಾಭಾರತದಲ್ಲಿ ಮತ್ತೆ ಮತ್ತೆ ಬರುವುದು ಸ್ವಧರ್ಮಪಾಲನೆ. ಹಲವು ಉಪಾಖ್ಯಾನಗಳಲ್ಲಿ ನಂತರ ಶ್ರೀಕೃಷ್ಣ ಗೀತೆಯಲ್ಲಿ ಸಹ ಇದುವೇ ಶ್ರೇಷ್ಠವೆಂದು ಸಾರಿದ್ದಾನೆ. ಸಾವಿತ್ರಿಯ ಅಚ್ಚುಕಟ್ಟಾದ ಮಾತುಗಳಿಂದ ಪ್ರೀತನಾದ ಯಮನು ಮೊದಲ ವರವನ್ನು ಕರುಣಿಸುತ್ತಾನೆ. ಸತ್ಯವಾನನ ಜೀವವನ್ನು ಬಿಟ್ಟು ಬೇರಾವುದಾದರೂ ವರವನ್ನು ಕೇಳಲು ಹೇಳುತ್ತಾನೆ. ಸಾವಿತ್ರಿ ಮೊಟ್ಟ ಮೊದಲು ತನ್ನ ಮಾವನ ದೃಷ್ಟಿಶಕ್ತಿ ಮರಳಿಬರುವಂತೆ ಬೇಡುತ್ತಾಳೆ.

ತನ್ನೊಡನೆ ಇರುವ ದೇವ ಮಹಾದಯಾಳು, ಸತ್ಯವಂತ ಅಂತಹವನ ಜೊತೆಯಲ್ಲಿ ಮತ್ತಷ್ಟು ಮಾತನಾಡಲು ಬಯಸುತ್ತಾಳೆ. ಸಾತ್ವಿಕರ ಕುರಿತೇ ಹೇಳುವ ಆಕೆಯ ಬಂಗಾರದ ಮಾತುಗಳನ್ನು ಕೇಳಬೇಕು!

ಸತಾಂ ಸಕೃತ್ಸಂಗತಮೀಪ್ಸಿತಂ ಪರಂ
ತತಃ ಪರಂ ಮಿತ್ರಮಿತಿ ಪ್ರಚಕ್ಷತೇ
ಚಾಫಲಂ ಸತ್ಪುರುಷೇಣ ಸಂಗತಂ
ತತಃ ಸತಾಂ ಸಂನಿವಸೇತ್ಸಮಾಗಮೇ

ಒಮ್ಮೆಯಾದರೂ ಸಜ್ಜನರ ಸಂಗ ಸಿಗುವುದು ಪರಮ ಅದೃಷ್ಟ. ಅಂತವರ ಸ್ನೇಹ ಸಿಗುವುದು ಇನ್ನು ಶ್ರೇಷ್ಠ. ಸಜ್ಜನರ ಸಹವಾಸ ಎಂದು ನಿಷ್ಪಲವಾಗುವುದಿಲ್ಲ. ಆದ್ದರಿಂದ ಸದಾ ಸಂತರ ಜೊತೆಯಲ್ಲೇ ಸಾಗಬೇಕು.”

ಯಮನು ಸಂತುಷ್ಟನಾಗಿ ಎರಡನೆಯ ವರವನ್ನು ಅನುಗ್ರಹಿಸುತ್ತಾನೆ. “ತನ್ನ ಧೀಮಂತ ಮಾವನವರು ಪುನಃ ರಾಜ್ಯ ಪಡೆದು ತಮ್ಮ ಸ್ವಧರ್ಮವನ್ನು ಪಾಲಿಸುವಂತಾಗಲಿಎಂದು ಆಕೆ ತನ್ನ ಗಂಡನ ಮನೆಯ ಯಶಸ್ಸು ಬೆಳಗಲಿ ಎಂದು ಪ್ರಾರ್ಥಿಸುತ್ತಾಳೆ.

ವರಗಳನ್ನು ಕರುಣಿಸಿದ ಯಮದೇವನನ್ನು ಸಾವಿತ್ರಿ ಸ್ತುತಿಸುತ್ತಾಳೆ.

ಸಾವಿತ್ರಿ – “ಮಹಾದೇವ, ನೀನು ಜಗತ್ತನ್ನು ನಿಯಮಗಳಿಂದ ನಡೆಸುತ್ತಿರುವೆ. ನೀನು ಕೂಡ ನಿಯಮಗಳಿಗೆ ಒಳಪಟ್ಟಿರುವೆ. ಆದ್ದರಿಂದಲೇ ಲೋಕ ನಿನ್ನನ್ನು ಯಮಎಂದು ಕೊಂಡಾಡುತ್ತದೆ. ಸರ್ವಭೂತಗಳಿಗೂ ಕರ್ಮ, ಮನಸ್ಸು ಮತ್ತು ಮಾತುಗಳಿಂದ ದ್ರೋಹವನ್ನು ಬಯಸದೇ ಇರುವುದು, ಅನುಗ್ರಹ ಮತ್ತು ದಾನಗಳು ಸಾತ್ವಿಕರ ಲಕ್ಷಣ. ಇದುವೇ ಸನಾತನ ಧರ್ಮ. ಪ್ರಾಯಶ: ಲೋಕ ನಿಂತಿರುವುದೇ ಇದರಿಂದ. ಏಕೆಂದರೆ ಮನುಷ್ಯರು ದುರ್ಬಲರು. ಅದಷ್ಟೇ ಅಲ್ಲ, ಸಜ್ಜನರು ಶರಣಾಗತರಾದ ಶತ್ರುಗಳಲ್ಲಿ ಸಹ ದಯೆ ತೋರುತ್ತಾರೆ.”

ಮಾತುಗಳಿಂದ ಸಾವಿತ್ರಿ ಜಗತ್ತಿಗೆ ಯಮನನ್ನು ವ್ಯಾಖ್ಯಾನಿಸಿದ್ದಾಳೆ. ನಿನ್ನಲ್ಲಿ ಶರಣು ಬಂದಿರುವ ನನ್ನನ್ನು ಪೊರೆ ಎಂಬ ಧ್ವನಿಯು ಅಡಗಿದೆ.

ಯಮನು ಮತ್ತೆ ಸಹರ್ಷದಿಂದ ಮೂರನೆಯ ವರವನ್ನು ಅನುಗ್ರಹಿಸುತ್ತಾನೆ. “ತನ್ನ ತಂದೆಗೆ ನೂರು ಮಕ್ಕಳು ಜನಿಸಲಿಎಂದು ತನ್ನ ತವರಿನ ಕುಲ ಬೆಳಗಿಸುವ ಪ್ರಾರ್ಥನೆ ಸಲ್ಲಿಸುತ್ತಾಳೆ ಸಾವಿತ್ರಿ.

ಸಾವಿತ್ರಿ ಯಮನ ಸ್ತುತಿ ಮುಂದುವರೆಸುತ್ತಾಳೆ

ದೇವ, ನೀನು ವಿವಸ್ವತ (ಸೂರ್ಯ) ಮಗಅವನಂತೆ ತೇಜೋಮಯನಾದ ನೀನು ಲೋಕದಲ್ಲಿ ವೈವಸ್ವತನೆಂದು ಪ್ರಸಿದ್ಧನಾಗಿರುವೆ. ಶಮ ಹಾಗೂ ಧರ್ಮದ ಪಾಲನೆಯಿಂದ ಜನಗಳು ನಿನ್ನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ. ನೀನು ಧರ್ಮರಾಜನು ಆಗಿರುವೆ. ನಿನ್ನಂತಹ ಪರಮಸಾತ್ವಿಕನಲ್ಲಿ ನನಗೆ ಅತಿಶಯವಾದ ನಂಬಿಕೆ. ಏಕೆಂದರೆ ನಮಗೆ ನಮಗಿಂತಲೂ ಸಜ್ಜನರ ಮೇಲೆ ಹೆಚ್ಚು ವಿಶ್ವಾಸವಿರುತ್ತದೆ.”

ಸಾವಿತ್ರಿಯ ಮಾತುಗಳು ಸಜ್ಜನರ ಹಿರಿಮೆಯನ್ನು ಸಾರುವುದಲ್ಲದೆ ಆಕೆಗೆ ಯಮನ ಮೇಲಿರುವ ವಿಶ್ವಾಸವನ್ನು ಸ್ಪಷ್ಟವಾಗಿ ಸಾರುತ್ತದೆ. ನಾಲ್ಕನೆಯ ವರವಾಗಿ ಸತ್ಯವಾನ್ಸಾವಿತ್ರಿಯರಲ್ಲಿ ನೂರು ಬಲಶಾಲಿಗಳಾದ ಔರಸಪುತ್ರರು ಜನಿಸಲಿ ಎಂಬ ಅವಳ ಕೋರಿಕೆಗೆ ಭಗವಂತನು ಸಂತೋಷದಿಂದ ತಥಾಸ್ತುಎಂದು ಹೇಳುತ್ತಾನೆ ಹಾಗೂ ಅವಳಿಗೆ ಹಿಂತಿರುಗಲು ಮತ್ತೆ ಸಲಹೆ ಕೊಡುತ್ತಾನೆ.

ಆದರೆ ಭಗವಂತನು ಕರುಣಾಳು, ನಂಬಿದವರ ಕೈ ಬಿಡುವುದಿಲ್ಲ ಎಂಬ ನಿಲುವನ್ನು ತಾಳಿದವಳು ಸಾವಿತ್ರಿ. ಯಮನ ಸಜ್ಜನಿಕೆಯನ್ನು ಮತ್ತಷ್ಟು ವಿವರಿಸುತ್ತಾ ಬರುತ್ತಾಳೆ.

ಸತಾಂ ಸದಾ ಶಾಶ್ವತೀ ಧರ್ಮವೃತ್ತಿಃ
ಸಂತೋ ಸೀದಂತಿ ವ್ಯಥಂತಿ
ಸತಾಂ ಸದ್ಭಿರ್ನಾಫಲಃ ಸಂಗಮೋಽಸ್ತಿ
ಸದ್ಭ್ಯೋ ಭಯಂ ನಾನುವರ್ತಂತಿ ಸಂತಃ

ಸಂತೋ ಹಿ ಸತ್ಯೇನ ನಯಂತಿ ಸೂರ್ಯಂ
ಸಂತೋ ಭೂಮಿಂ ತಪಸಾ ಧಾರಯಂತಿ
ಸಂತೋ ಗತಿರ್ಭೂತಭವ್ಯಸ್ಯ ರಾಜನ್
ಸತಾಂ ಮಧ್ಯೇ ನಾವಸೀದಂತಿ ಸಂತಃ

ಧರ್ಮಪಾಲನೆಯೇ ನಿರಂತರ ಕಾರ್ಯವಾಗಿರುವ ಸಂತರು ಸಮಚಿತ್ತರು. ಅವರ ಸಂಗ ಸದಾ ಶುಭಫಲವನ್ನು ನೀಡುತ್ತದೆ. ಒಳ್ಳೆಯವರಿಗೆ ಅವರಿಂದ ಎಂದು ಭಯವಿಲ್ಲ. ಸೂರ್ಯನು ಭೂಮಿಯ ಸುತ್ತ ತಿರುಗಲು ಸಂತರೇ ಕಾರಣ. ಭೂಮಿಯನ್ನು ಅವರು ತಪಸ್ಸಿನಿಂದ ಎತ್ತಿಹಿಡಿದಿದ್ದಾರೆ. ಭೂತಭವಿಷ್ಯಗಳಿಗೆ ಅವರೇ ಕಾರಣ. ಅವರ ಜೊತೆಯಿರುವ ಒಳ್ಳೆಯವರು ಎಂದು ನಶಿಸುವುದಿಲ್ಲ.

ಇದು ಸಂತರ ಸಹಜ ಸ್ವಭಾವ. ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ಸತ್ಪುರುಷರು ಒಳ್ಳೆಯವರನ್ನು ರಕ್ಷಿಸುತ್ತಾರೆ. ಇದು ಸಂತರ ನಿತ್ಯಸತ್ಯ. ಸಜ್ಜನರೆ ಲೋಕಪಾಲಕರು.

ಸಾವಿತ್ರಿಯ ಲೋಕೋತ್ತರವಾದ ಮಾತುಗಳಿಂದ ಹಾಗು ಶೃದ್ಧೆಯಿಂದ ಸಂಪೂರ್ಣ ತೃಪ್ತನಾದ ಯಮದೇವನು ಆಕೆಗೆ ಯಾವ ನಿಬಂಧನೆಯೂ ಇಲ್ಲದ ಅತ್ಯುತ್ಕೃಷ್ಟ ವರವನ್ನು ಕೇಳಿಕೊಳ್ಳಲು ಹೇಳುತ್ತಾನೆ. ಸಾವಿತ್ರಿಯು ಆನಂದದಿಂದ ತನ್ನ ಅಂತಿಮ ಕೋರಿಕೆಯನ್ನು ಸಲ್ಲಿಸುತ್ತಾಳೆ

ಕಾಮಯೇ ಭರ್ತೃವಿನಾಕೃತಾ ಸುಖಂ
ಕಾಮಯೇ ಭರ್ತೃವಿನಾಕೃತಾ ದಿವಂ
ಕಾಮಯೇ ಭರ್ತೃವಿನಾಕೃತಾ ಶ್ರಿಯಂ
ಭರ್ತೃಹೀನಾ ವ್ಯವಸಾಮಿ ಜೀವಿತುಂ

ಪತಿಯ ವಿನಾ ನನಗೆ ಸುಖವೆಲ್ಲಿ? ಅವನಿಲ್ಲದ ಸಿರಿಯಾಗಲಿ ಸ್ವರ್ಗವಾಗಲಿ ನನಗೆ ಬೇಡ. ಅವನಿಲ್ಲದೆ ನಾನು ಬದುಕಿರುವುದೂ ಇಲ್ಲ! ನೀನಾಗಲೇ ನಮಗೆ ನೂರು ಮಕ್ಕಳಾಗಲಿ ಎಂದು ವಾರವಿಟ್ಟಿರುವೆ. ನಿನ್ನ ಮಾತು ಸತ್ಯವಾಗಲಿ. ನನ್ನ ಪತಿ ಸತ್ಯವಾನನು ಜೀವಿಸಲಿ. ನನ್ನ ಪರಮಕೋರಿಕೆಯನ್ನು ಅನುಗ್ರಹಿಸು.

ಹೀಗೆ ಸಾವಿತ್ರಿ ಭಗವಂತನನ್ನು ಸ್ತುತಿಸುತ್ತ ಜೊತೆಯಲ್ಲೇ ಸತ್ಪುರುಷರ ಮಹಾತ್ಮೆಯನ್ನು ಜಗತ್ತಿಗೆ ತಿಳಿಹೇಳಿರುವುದನ್ನು ವ್ಯಾಸರು ಸುಂದರವಾಗಿ ಚಿತ್ರಿಸಿದ್ದಾರೆ.

ಇಲ್ಲಿ ಮತ್ತೊಂದು ವಿಶೇಷವನ್ನು ಗಮನಿಸಬೇಕು. ಸಾವಿತ್ರಿ ತನಗೆ ತನ್ನ ಪತಿಯ ಜೀವದ ವಿನಾ ಬೇರಾವ ವರವು ಬೇಡವೆಂದು ಮೊದಲಿಗೇ ನಿರಾಕರಿಸಬಹುದಿತ್ತು. ಆದರೂ ದೇವರ ವರವನ್ನು ಉಪಯೋಗಿಸಿಕೊಂಡು ತನ್ನ ಮನೆಗೆ, ತವರು ಮನೆಗೆ ಕ್ಷೇಮ ತರುವ ಎಲ್ಲವನ್ನೂ ಬೇಡಿದಳಷ್ಟೇ, ಜೊತೆಯಲ್ಲಿ ತನ್ನ ಪರಮ ಗುರಿಯ ತನಕ ತನ್ನ ಪಯಣವನ್ನು ನಿಲ್ಲಿಸಲಿಲ್ಲ!

ಮಹಾರಾಣಿಯಾಗಿ ಅರಮನೆಯಲ್ಲಿ ಐಷಾರಾಮದಿಂದ ಇರಬಹುದಾಗಿದ್ದ ಸಾವಿತ್ರಿ ಗುಣವಂತನ ಸತ್ಯವಂತನ ಕೈಹಿಡಿದಳು. ಸಂತೋಷದಿಂದ ತಪೋವನದಲ್ಲಿ ಜೀವಿಸಿದಳು. ನಚಿಕೇತನ ಹಾಗೆ ಯಮನೊಡನೆ ಚರ್ಚಿಸಿ ತನ್ನ ಧೀಶಕ್ತಿಯಿಂದ ಬದುಕಿನ ಅತ್ಯಂತ ದುಷ್ಕರ ಪರೀಕ್ಷೆಯನ್ನು ಸಮರ್ಪಕವಾಗಿ ಎದುರಿಸಿದಳು. ಜಗತ್ತಿಗೆ ಸ್ತ್ರೀಶಕ್ತಿಯನ್ನು ಸಜ್ಜನರ ಮಹಿಮೆಯನ್ನು ಸಹ ಪರಿಚಯ ಮಾಡಿಕೊಟ್ಟ ಸಾವಿತ್ರಿಗೆ ನಮೋ ನಮಃ.

(Featured image: original by Raja Ravi Varma)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply