close logo

ಮಹಾಭಾರತದ ಸಂವಾದಗಳು – ಪತಿವ್ರತೆ ಹಾಗು ಧರ್ಮವ್ಯಾಧ ಪ್ರಕರಣ- ಭಾಗ ೧

ಮಹರ್ಷಿ ವೇದವ್ಯಾಸರ ಮಹಾಭಾರತ ಧರ್ಮಶಾಸ್ತ್ರವೆಂದೇ ಪ್ರಸಿದ್ಧಿ. ಸನಾತನ ಧರ್ಮದಲ್ಲಿ ಜಿಜ್ಞಾಸುವು ತನ್ನ ಪ್ರಶ್ನೆಗಳ ಉತ್ತರಕ್ಕಾಗಿ ಆತ್ಮಾವಲೋಕನ ಮಾಡುತ್ತಾ, ತಪಸ್ಸಿನಲ್ಲಿ ನಿರತನಾಗಿ, ಗುರುಗಳನ್ನು ಅರಸಿಹೋಗುವುದು ಸಾಮಾನ್ಯ. ನಮ್ಮ ಸಂಕಲ್ಪವು ದೃಡವಾಗಿ ಅದು ನಮ್ಮ ಒಳಧ್ವನಿಯಾದಾಗ, ಭಗವಂತನ ಅನುಗ್ರಹದಿಂದ ಗುರುವಿನ ಪ್ರಾಪ್ತಿಯಾಗುತ್ತದೆ. ಸಂವಾದ ರೂಪದಲ್ಲಿ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ. ಉಪದೇಶದ ಭಾಗ್ಯ ಸಿಗುತ್ತದೆ! ಗುರುಸಾನ್ನಿಧ್ಯದಲ್ಲಿ ದೊರೆತ ಜ್ಞಾನವನ್ನು ಅನುಸಂಧಾನ ಮಾಡಿಕೊಂಡಾಗ ಮೋಕ್ಷ ಸ್ವಯಂ-ಸಿದ್ದವಾಗುತ್ತದೆ. ಕೃಷ್ಣಾರ್ಜುನರ ಸಂವಾದವೇ ಭಗವದ್ಗೀತೆ! ಹಾಗೆಯೇ ಮಹಾಭಾರತದ ಅನೇಕ ಪ್ರಸಂಗಗಳ ಹಾಗು ಉಪಕಥೆಗಳ ಸಂವಾದಗಳು ನಮಗೆ ಜೀವನಧರ್ಮದ ಸೂತ್ರಗಳನ್ನು ತೆರೆದಿಡುತ್ತವೆ.

ಮಹಾಭಾರತದ ಅರಣ್ಯಪರ್ವದಲ್ಲಿ ಒಂದು ಮಾರ್ಮಿಕ ಪ್ರಸಂಗವಿದೆ. ಬ್ರಾಹ್ಮಣತ್ವ, ಶಿಷ್ಟಾಚಾರ, ಕರ್ಮಫಲ – ಹೀಗೆ ಹಲವು ವಿಷಯಗಳಲ್ಲಿ ಇರುವ ಧರ್ಮಸೂಕ್ಷ್ಮತೆಯ ಕುರಿತ ಅತ್ಯದ್ಭುತ ವ್ಯಾಖ್ಯಾನ ಈ ಪ್ರಕರಣದಲ್ಲಿ ದೊರೆಯುತ್ತದೆ. ಧರ್ಮದ ಒಳಗುಟ್ಟು ನಿಜವಾಗಿ ಅದನ್ನು ಕಾಯ-ವಾಚಾ-ಮನಾಸಾ ಪಾಲಿಸುತ್ತಿರುವವರಿಗೆ ಮಾತ್ರ ಸಿಗುವಂತಹುದು. ಕೇವಲ ಧರ್ಮ-ಗ್ರಂಥವನ್ನು ಓದಿದರೇನು ಫಲ? ವೇದ-ಮಂತ್ರಗಳ ಜಪಿಸಿದರೇನು ಫಲ? ಶ್ರೀಕೃಷ್ಣ ಹೇಳಿದ ಹಾಗೆ ಸ್ವಧರ್ಮದಲ್ಲಿ ನಿರತನಾಗಿ ಲೋಕವ್ಯವಹಾರಗಳಲ್ಲಿ ಶಿಷ್ಟಾಚಾರದಿಂದ ವ್ಯವಹರಿಸುವುದರಲ್ಲಿಯೇ ಸಾರ್ಥಕ್ಯವಿದೆ!

ಪಾಂಡವರು ವನವಾಸದಲ್ಲಿ ಬಹುಕಾಲ ಋಷಿ-ಮುನಿಗಳ ಆಶ್ರಮಗಳಲ್ಲಿ ಸತ್ಸಂಗದಲ್ಲಿ ಕಳೆಯುತ್ತಾರೆ. ಅವರು ದರ್ಶನ ಪಡೆದ ಮುನಿಶ್ರೇಷ್ಠರಲ್ಲಿ ಮಾರ್ಕಂಡೇಯ ಮಹರ್ಷಿಗಳು ಒಬ್ಬರು. ವ್ಯಾಸರಿಂಗಿಂತ ಹಿಂದಿನವರಾದ ಇವರು ಸಹ ಚಿರಂಜೀವಿ. ನಾರಾಯಣನ ಕೃಪೆಯಿಂದ ಯುಗ-ಯುಗಾಂತರಗಳನ್ನು ಕಂಡವರು. ಕೃಷ್ಣನ ಸಾನ್ನಿಧ್ಯದಲ್ಲಿ ಧರ್ಮರಾಜ ಹಾಗು ಅವನ ಪರಿವಾರಕ್ಕೆ ಅನೇಕ ಪೌರಾಣಿಕ ಕಥೆಗಳನ್ನು ಹೇಳುವುದರ ಜೊತೆಗೆ ಭವಿಷ್ಯದ ಚಿತ್ರಣವನ್ನು ಸಹ ಕೊಡುತ್ತಾರೆ. ಯುಧಿಷ್ಠಿರನಿಗೆ ಒಂದು ವಿಶೇಷವಾದ ಸಂದೇಹವನ್ನು ಭೃಗುಕುಲಶ್ರೇಷ್ಠರಾದ ಈ ಮಹಾತಪಸ್ವಿಗಳಲ್ಲಿ ಕೇಳುವ ಬಯಕೆ.

ಯುಧಿಷ್ಠಿರ: “ನನಗೆ ಲೋಕದಲ್ಲಿ ಮೂರು ಸ್ವಭಾವಗಳು ದುಷ್ಕರ ಎಂದು ಕಾಣುತ್ತವೆ – ಮೊದಲನೆಯದಾಗಿ ತಂದೆ-ತಾಯಿಯರ ಸೇವೆ ಮಾಡುವ ಮಕ್ಕಳ ಶ್ರದ್ದೆ. ಎರಡನೆಯದು ಪತಿವ್ರತಾಸ್ತ್ರೀಯರ ಗುಣ. ಸದಾ ಪತಿಯಲ್ಲೇ ದೈವವನ್ನು ಕಾಣುತ್ತ, ನಿರಂತರ ಸತ್ಯವನ್ನೇ ಆಶ್ರಯಿಸಿ, ಹತ್ತು ತಿಂಗಳು ತನ್ನ ಹೊಟ್ಟೆಯಲ್ಲಿ ಮಕ್ಕಳನ್ನು ಧರಿಸುವ ತಾಯಂದಿರ ವಾತ್ಸಲ್ಯ. ಅತೀವ ದುಃಖಕರವಾದ ಪ್ರಸವವೇದನೆಯಿಂದ ಮಕ್ಕಳನ್ನು ಪಡೆಯುವ ಮಾತೆಯರು ಈ ಜಗತ್ತಿನ ಒಂದು ಅದ್ಭುತವೇ ಸರಿ! ಮೂರನೆಯದಾಗಿ, ಎಲ್ಲರ ಜುಗುಪ್ಸೆಗೆ ಪಾತ್ರರಾದರೂ, ಜಗತ್ತಿಗೆ ಅಗತ್ಯವಿರುವ ಕ್ರೂರ-ಕರ್ಮಗಳನ್ನು ತಮ್ಮ ಸ್ವಕರ್ಮವೆಂದು ಸ್ವೀಕರಿಸಿ ಶ್ರದ್ದೆಯಿಂದ ನಿರ್ವಹಿಸುವ ಕ್ಷಮತೆ! ಈ ಮೂರು ದುಷ್ಕರ ಕರ್ಮಗಳು ಹೇಗೆ ಸಾಧ್ಯ? ಇವುಗಳಲ್ಲಿ ತೊಡಗಿಸಿಕೊಂಡು ಹೇಗೆ ಮೋಕ್ಷವನ್ನು ಪಡೆಯುವುದು?”

ಮಹರ್ಷಿ: “ರಾಜೇಂದ್ರ! ತುಂಬಾ ಸೊಗಸಾದ ಕಷ್ಟಕರವಾದ ಪ್ರಶ್ನೆ ಕೇಳಿದೆ. ಸಹನೆಯಿಂದ ಕೂಡಿದ ಕಷ್ಟವಾದ ದುಡಿಮೆ, ದೇವತಾ ಪೂಜೆ ಹಾಗು ಮಂತ್ರೋಪಾಸನೆಯಿಂದ ತಂದೆಯು ಮಕ್ಕಳನ್ನು ಪಡೆದರೂ, ಮಕ್ಕಳನ್ನು ಹೆತ್ತು ಬೆಳೆಸುವ ತಾಯಿಯ ಕಾರ್ಯವೇ ದುಷ್ಕರ. ಇಷ್ಟೇ ಅಲ್ಲ, ಹೀಗೆ ಕಷ್ಟಪಟ್ಟು ಪಡೆದ ಮಕ್ಕಳನ್ನು ತಂದೆ-ತಾಯಂದಿರು ಸದಾ ಕೀರ್ತಿವಂತರಾಗಲಿ, ಐಶ್ವರ್ಯವಂತರಾಗಲಿ, ಧರ್ಮದಲ್ಲಿ ನಡೆಯಲಿ ಎಂದು ಬಯಸುತ್ತಾರೆ. ಅವರ ಯಶಸ್ಸಿನ ಬಗ್ಗೆ ಸದಾ ಚಿಂತಿಸುತ್ತಾರೆ. ಅಂತಹ ತಂದೆ-ತಾಯಿಯರ ಆಸೆಯನ್ನು ಪೂರೈಸುವ ಮತ್ತು ನಿತ್ಯವೂ ಅವರನ್ನು ತೃಪ್ತಿಪಡಿಸುವ ಮಕ್ಕಳೇ ಧರ್ಮಿಷ್ಟರು ಎಂದು ನನ್ನ ಮತ.

ಸ್ತ್ರೀಯರಿಗೆ ಯಾಗ, ಹೋಮಗಳ ಅವಶ್ಯಕತೆ ಇಲ್ಲ. ಪತಿಯ ಸೇವೆಯಿಂದಲೇ ಆಕೆ ಸ್ವರ್ಗವನ್ನು ಪಡೆಯುತ್ತಾಳೆ. ಹಾಗೆಯೇ ಕ್ರೂರ-ಕರ್ಮಮಾಡಿಯೂ ಧರ್ಮಾತ್ಮರಾಗಿರುವವರ ಬಗ್ಗೆ ಕೇಳಿದೆಯಲ್ಲ? ಇವೆಲ್ಲಾ ನಿನಗೆ ವಿಶದವಾಗಿ ತಿಳಿಯಬೇಕಾದರೆ ಈ ವೃತ್ತಾಂತವನ್ನು ಕೇಳು.”

ಹೀಗೆ ಋಷಿಗಳು ಕಥೆಯನ್ನು ಆರಂಭಿಸುತ್ತಾರೆ. “ವ್ಯಾಧ-ಗೀತೆ” ಎಂದು ಸಹ ಪ್ರಸಿದ್ಧವಾದ ಧರ್ಮೋಪದೇಶ ಇದು. ಶ್ರೀಕೃಷ್ಣನ ಗೀತೆ ವಿಸ್ತೃತವಾದ ಸಂಪೂರ್ಣವಾದ ಮಹೋಪದೇಶವಾದರೆ ಇದು ಸಂಕ್ಷಿಪ್ತವಾದ ಒಂದು ಶ್ರೇಷ್ಠ ಸಂದೇಶ. ಸ್ವಾಮಿ ವಿವೇಕಾನಂದರು ಕರ್ಮ-ಯೋಗ ವ್ಯಾಖ್ಯಾನದಲ್ಲಿ ಈ ಕಥೆಯನ್ನು ವಿವರಿಸುತ್ತಾರೆ. ವ್ಯಾಸ ಮಹರ್ಷಿಗಳು ಸ್ವಧರ್ಮ-ನಿಷ್ಠನಾದ ಒಬ್ಬ ಕಟುಕನಿಂದ ನಮಗೆ ಈ ಧರ್ಮಬೋಧನೆ ಕೊಡಿಸುತ್ತಾರೆ. ಹಾಗೆಯೇ ಒಬ್ಬ ಪತಿವ್ರತಾ ಸ್ತ್ರೀ ಶಿಷ್ಟಾಚಾರವನ್ನು ವಿವರಿಸುತ್ತಾಳೆ. ಇಬ್ಬರ ಹೆಸರು ಈ ಕಥೆಯಲ್ಲಿ ಎಲ್ಲಿಯೂ ಬರುವುದಿಲ್ಲ. ಲೋಕ-ಪೂಜಿತ ಸ್ವಭಾವ ನಮ್ಮದಾಗಬೇಕು. ಅದೇ ನಮ್ಮ ಗುರುತಾಗಬೇಕು, ಹೆಸರಾಗಬೇಕು!

ಕೌಶಿಕನೆಂಬ ಒಬ್ಬ ಯುವಬ್ರಾಹ್ಮಣ ವೇದಾಧ್ಯಯನ ಮಾಡುತ್ತಿದ್ದನು. ಅವನು ಊರಿನಿಂದ ಹೊರಗೆ ಹೋಗಿ ಒಂದು ಮರದ ಕೆಳಗೆ ಕುಳಿತು ತಪಸ್ಸು ಮಾಡುತ್ತಿದ್ದನು. ಕೇವಲ ಭಿಕ್ಷಾಟನೆಗಾಗಿ ಊರಿನ ಕಡೆ ಹೋಗುವುದು, ಇಲ್ಲವಾದಲ್ಲಿ ಅವನಿಗೆ ಊರಿನ ಸಂಪರ್ಕವಿಲ್ಲ. ಹೀಗಿರುವಾಗ ಒಂದು ದಿನ ಅವನು ಆ ಮರದ ಕೆಳಗೆ ಕುಳಿತು ವೇದ-ಮಂತ್ರಗಳನ್ನು ಪಠಿಸುತ್ತಿದ್ದನು. ಆಗ ಆ ಮರದ ಮೇಲಿದ್ದ ಒಂದು ಬಲಾಕ ಪಕ್ಷಿ ಅವನ ಮೇಲೆ ಹಿಕ್ಕೆ ಹಾಕಿತು. ಇದರಿಂದ ಕೃದ್ಧನಾದ ಆ ಬ್ರಾಹ್ಮಣಯುವಕ ಕೆಂಗಣ್ಣಿನಿಂದ ಆ ಪಕ್ಷಿಯನ್ನು ನೋಡಿದನು. ಆ ರೋಷದ ಬೆಂಕಿಗೆ ಪಕ್ಷಿ ಅಲ್ಲಿಯೇ ಸತ್ತು ಬಿದ್ದಿತು! ಈ ಅನಿರೀಕ್ಷಿತ ಘಟನೆಯಿಂದ ಆಘಾತಗೊಂಡ ಆ ಬ್ರಾಹ್ಮಣನು ರಾಗ-ದ್ವೇಷಗಳಿಂದ ಕೂಡಿದ ತನ್ನ ಆಕಾರ್ಯಕ್ಕೆ ಮರುಗಿದನು.

ಹೀಗೆಯೇ ಪಶ್ಚಾತ್ತಾಪ ಪಡುತ್ತಾ ಅವನು ಅಂದಿನ ಭಿಕ್ಷೆಗೆ ಊರಿನ ಕಡೆಗೆ ನಡೆದನು. “ಭವತೀ ಭಿಕ್ಷಾಂ ದೇಹಿ” ಎಂದು ಒಂದು ಮನೆಯ ಮುಂದೆ ಬಂದು ನಿಂತನು. ಆ ಮನೆಯ ಗೃಹಿಣಿಯು “ಸ್ವಲ್ಪ ನಿಲ್ಲಿ” ಎಂದು ಹೇಳಿ ಒಳಗೆ ಹೋದಳು. ಇದೇ ಸಮಯದಲ್ಲಿ ತುಂಬಾ ಹಸಿವಿನಿಂದ ಬಳಲಿದ ಆಕೆಯ ಪತಿಯು ಮನೆಗೆ ಬಂದನು. ಒಳ್ಳೆಯ ನಡತೆಯ, ಕುಟುಂಬದ ಹಿತೈಷಿಣಿಯಾಗಿದ್ದ ಅವಳು ತನ್ನ ಪತಿಗೆ ಊಟ ಬಡಿಸುತ್ತಾ ಬ್ರಾಹ್ಮಣನನ್ನು ಮರೆತಳು. ಸ್ವಲ್ಪ ಸಮಯದಲ್ಲೇ ಮತ್ತೆ ನೆನಪಿಸಿಕೊಂಡು ಅವನನ್ನು ಕಾಯಿಸಿದ್ದಕ್ಕೆ ಸಂಕೋಚಪಡುತ್ತಾ ಭಿಕ್ಷೆಯನ್ನು ತೆಗೆದುಕೊಂಡು ಹೊರಬಂದಳು. ಬ್ರಾಹ್ಮಣನು ಅತ್ಯಂತ ಕೋಪದಿಂದ ಅವಳನ್ನು ನೋಡುತ್ತಾ “ನನ್ನನು ನಿಲ್ಲಲು ಹೇಳಿ ಇದೇಕೆ ಹೀಗೆ ತಡ ಮಾಡಿದೆ? ಮುಂದೆ ಹೋಗು ಎಂದು ಹೇಳಬಹುದಿತ್ತಲ್ಲ?” ಎಂದು ಪ್ರಶ್ನಿಸಿದನು. ಆ ಸಾಧ್ವಿಯ “ಅಯ್ಯಾ ವಿಪ್ರ! ನನ್ನನ್ನು ಕ್ಷಮಿಸು. ನನಗೆ ಪತಿಯೇ ಮಹಾದೇವತೆ. ಹಸಿದು ಬಂದ ಅವನ ಉಪಚಾರದಲ್ಲಿ ಮಗ್ನಳಾಗಿ ಮರೆತುಬಿಟ್ಟೆ.” ಎಂದು ಸಾಂತ್ವನ ಹೇಳಿದಳು.

ಬ್ರಾಹ್ಮಣ- “ಗೃಹಿಣಿಯಾದ ನಿನಗೆ ಬ್ರಾಹ್ಮಣರಿಗಿಂತ ಪತಿಯೇ ದೊಡ್ಡವನೇ? ಬ್ರಾಹ್ಮಣರ ಹಿರಿಮೆ ನಿನಗೆ ತಿಳಿಯದೆ? ಇಂದ್ರನೇ ಅವರಿಗೆ ತಲೆಬಾಗುವಾಗ ಮನುಷ್ಯರನ್ನು ಕೇಳಬೇಕೆ? ಬ್ರಾಹ್ಮಣರು ಬೆಂಕಿಯ ಹಾಗೆ ಭೂಲೋಕವನ್ನೇ ಸುಡಬಲ್ಲರು; ಎಂದು ಹಿರಿಯರು ಹೇಳಿದ್ದನ್ನು ನೀನು ಕೇಳಿಲ್ಲವೇ?”

ಅತ್ಯಂತ ಸಮಚಿತ್ತದಿಂದ ಬ್ರಾಹ್ಮಣನ ಕೋಪದ ನುಡಿಗಳನ್ನು ಸ್ವೀಕರಿಸಿದ ಆ ಪತಿವ್ರತೆ ಹೇಳಿದಳು –

ಪತಿವ್ರತೆ – “ನಾನು ಬ್ರಾಹ್ಮಣರನ್ನು ಎಂದೂ ಕೀಳಾಗಿ ನೋಡಿಲ್ಲ. ನನ್ನ ಅಪರಾಧವನ್ನು ಕ್ಷಮಿಸಬೇಕು. ಆದರೆ ಪತಿಸೇವೆಯೇ ನನ್ನ ಧರ್ಮವೆಂದು ನನಗನ್ನಿಸುತ್ತದೆ. ಅದರ ಫಲವನ್ನು ನೋಡು – ನಿನ್ನ ರೋಷದಿಂದ ಬಲಾಕ ಪಕ್ಷಿಯೊಂದು ಸುಟ್ಟುಹೋಯಿತೆಂದು ನನಗೆ ತಿಳಿದಿದೆ!”

ಈ ಮಾತುಗಳನ್ನು ಕೇಳಿ ಬ್ರಾಹ್ಮಣ ಅವಾಕ್ಕಾಗಿ ಹೋದ! ಮುಂದುವರೆದು ಆ ಸಾಧ್ವಿ “ಬ್ರಾಹ್ಮಣ”ನೆಂದರೆ ಯಾರು ಎಂದು ಕೊಡುವ ವ್ಯಾಖ್ಯಾನ ಎಲ್ಲ ಕಾಲಕ್ಕೂ ಸಲ್ಲುವಂತಹುದು.

ಪತಿವ್ರತೆ:
ಕ್ರೋಧಃ ಶತ್ರುಃ ಶರೀರಸ್ಥೋ ಮನುಷ್ಯಾಣಾಂ ದ್ವಿಜೋತ್ತಮ।
ಯಃ ಕ್ರೋಧಮೋಹೌ ತ್ಯಜತಿ ತಂ ದೇವಾ ಬ್ರಾಹ್ಮಣಂ ವಿದುಃ॥

“ದ್ವಿಜೋತ್ತಮ! ಕ್ರೋಧವು ಮನುಷ್ಯರ ಶರೀರದಲ್ಲಿರುವ ಶತ್ರು. ಕ್ರೋಧ ಮೋಹಗಳನ್ನು ತ್ಯಜಿಸಿದವನನ್ನು ದೇವತೆಗಳು ಬ್ರಾಹ್ಮಣನೆಂದು ತಿಳಿಯುತ್ತಾರೆ.”

ಗುಣದಿಂದ ಮಾತ್ರ ಒಬ್ಬ ನಿಜವಾದ ಬ್ರಾಹ್ಮಣನಾಗಲು ಸಾಧ್ಯ. ಯಾರು ಸತ್ಯವಂತರೋ, ಗುರುವನ್ನು ಸಂತೋಷಪಡಿಸುತ್ತಾರೋ, ಮತ್ತು ಹಿಂಸೆಯನ್ನು ಹಿಂಸೆಯಿಂದ ಉತ್ತರಿಸುವುದಿಲ್ಲವೋ ಅಂಥವರನ್ನು ದೇವತೆಗಳು ಬ್ರಾಹ್ಮಣರೆಂದು ತಿಳಿಯುತ್ತಾರೆ. ಯಾರು ಜಿತೇಂದ್ರಿಯರೋ, ಧರ್ಮಪರರೋ, ಸ್ವಾಧ್ಯಾಯನಿರತರೋ, ಶುಚಿಯಾಗಿರುವವರೋ, ಮತ್ತು ಕಾಮಕ್ರೋಧಗಳನ್ನು ವಶದಲ್ಲಿಟ್ಟುಕೊಂಡವರೋ, ಅಂಥವರನ್ನು ದೇವತೆಗಳು ಬ್ರಾಹ್ಮಣರೆಂದು ತಿಳಿದಿದ್ದಾರೆ.

ಲೋಕಗಳನ್ನು ತನ್ನಂತಯೇ ಕಾಣುವ, ಮನಸ್ವಿ, ಧರ್ಮಜ್ಞ, ಸರ್ವಧರ್ಮಗಳನ್ನೂ ಪ್ರೀತಿಸುವವನನ್ನು ದೇವತೆಗಳು ಬ್ರಾಹ್ಮಣನೆಂದು ತಿಳಿದಿದ್ದಾರೆ.

ಅಧ್ಯಯನ ಮಾಡುವ ಮತ್ತು ಮಾಡಿಸುವ, ಯಜ್ಞಗಳನ್ನು ಮಾಡುವ ಮತ್ತು ಮಾಡಿಸುವ, ಶಕ್ತಿಯಿದ್ದಷ್ಟು ದಾನಮಾಡುವವನನ್ನು ದೇವತೆಗಳು ಬ್ರಾಹ್ಮಣನೆಂದು ತಿಳಿದಿದ್ದಾರೆ. ಈ ಗುಣಗಳ ರಾಶಿಯೇ ಬ್ರಾಹ್ಮಣ್ಯ. ಆ ಸಂಪತ್ತನ್ನು ಗಳಿಸಿದವನೇ ಬ್ರಾಹ್ಮಣ!”

“ನೀನು ಅಧ್ಯಯನಶೀಲ. ಆದರೂ ನೀನು ಧರ್ಮವನ್ನು ನಿಜವಾಗಿ ತಿಳಿದುಕೊಂಡಿಲ್ಲವೆಂದು ನನಗನ್ನಿಸುತ್ತದೆ. ಮಾತಾಪಿತೃಗಳ ಸೇವಾನಿರತನಾದ, ಸತ್ಯವಾದೀ, ಜಿತೇಂದ್ರಿಯ ವ್ಯಾಧನೊಬ್ಬನು ಮಿಥಿಲೆಯಲ್ಲಿ ವಾಸಿಸುತ್ತಾನೆ. ಅವನು ನಿನಗೆ ಧರ್ಮಗಳನ್ನು ತೋರಿಸಿಕೊಡುತ್ತಾನೆ. ದ್ವಿಜೋತ್ತಮ! ನಿನಗಿಷ್ಟವಾದರೆ ಅಲ್ಲಿಗೆ ಹೋಗು. ನಿನಗೆ ಮಂಗಳವಾಗಲಿ! ನಾನು ಹೆಚ್ಚಾಗಿ ಮಾತನಾಡಿದ್ದರೆ ಅವೆಲ್ಲವನ್ನೂ ಕ್ಷಮಿಸಬೇಕು. ಸ್ತ್ರೀಯರನ್ನು ಕೊಲ್ಲಬಾರದು!”

ಬ್ರಾಹ್ಮಣನಿಗೆ ಆಷ್ಟರಲ್ಲಿಯೇ ತನ್ನ ತಪ್ಪಿನ ಅರಿವಾಯಿತು. ತನ್ನ ಬಗ್ಗೆ ಇದ್ದ ಅಹಂಕಾರ ಕರಗಿತು.

ಬ್ರಾಹ್ಮಣ: “ಶೋಭನೇ! ನಿನಗೆ ಮಂಗಳವಾಗಲಿ. ನಿನ್ನ ಮಾತುಗಳಿಂದ ಸಂತೋಷಗೊಂಡಿದ್ದೇನೆ. ಸಿಟ್ಟು ಹೊರಟುಹೋಗಿದೆ. ನೀನು ನೀಡಿದ ಟೀಕೆಗಳು ನನಗೆ ಪರಮ ಶ್ರೇಯಸ್ಕರವಾದವುಗಳು. ಈಗ ನಾನು ಉತ್ತಮವಾದುದನ್ನು ಸಾಧಿಸುತ್ತೇನೆ.”

ಸಾಧ್ವಿಮಣಿಯ ಮಾತುಗಳಿಂದ ಎಚ್ಚೆತ್ತುಕೊಂಡ ಕೌಶಿಕನು ಧರ್ಮಸ್ವರೂಪವನ್ನು ತಿಳಿಯುವ ಹಂಬಲದಿಂದ ಹಾಗೂ ಕುತೂಹಲದಿಂದ ಮಿಥಿಲಾನಗರದ ಕಡೆ ಹೊರಟನು.

[ಟಿಪ್ಪಣಿ: ಸಾಮಾನ್ಯವಾಗಿ ಮಕ್ಕಳನ್ನು, ಸ್ತ್ರೀಯರನ್ನು ಕೊಲ್ಲುವುದು ನಿಷಿದ್ಧ. ರಾಮಾಯಣದಲ್ಲಿ ಶ್ರೀರಾಮ ತಾಟಕೆಯನ್ನು ಕೊಲ್ಲುವಾಗಲು ಈ ಧರ್ಮ ಸಂದಿಗ್ಧತೆ ಬರುತ್ತದೆ. ಆಗ ವಿಶ್ವಾಮಿತ್ರರು – “ಲೋಕಕಂಟಕವನ್ನು ದೂರ ಮಾಡುವುದು ರಾಜನ ಪರಮ-ಧರ್ಮ. ಆದ್ದರಿಂದ ನೀನು ತಾಟಕೆಯನ್ನು ಕೊಲ್ಲುವುದು ಜಗತ್ತಿಗೆ ಶ್ರೇಯ” ಎಂದು ಹೇಳುತ್ತಾರೆ!”. ಧರ್ಮದ ವಿಷಯದಲ್ಲಿ ವ್ಯಷ್ಟಿಗಿಂತ ಸಮಷ್ಟಿಯ ಹಿತವನ್ನು ಗಮನದಲ್ಲಿಡಬೇಕು.]

ಮಿಥಿಲೆ ಯಜ್ಞ-ಉತ್ಸವಗಳಿಂದ ತುಂಬಿದ ಸಿರಿನಗರ. ಕೌಶಿಕನು ಅಲ್ಲಿಯ ಬ್ರಾಹ್ಮಣರನ್ನು ಧರ್ಮವ್ಯಾಧನ ಬಗ್ಗೆ ವಿಚಾರಿಸುತ್ತಾ ಅವನ ಅಂಗಡಿಯ ಬಳಿಗೆ ಬಂದನು. ಪೇಟೆಯ ಮಧ್ಯದಲ್ಲಿ ತನ್ನ ಅಂಗಡಿಯಲ್ಲಿ ಜಿಂಕೆ-ಕೋಣ ಮೊದಲ ಪ್ರಾಣಿಗಳ ಮಾಂಸವನ್ನು ಮಾರುತ್ತಿದ್ದ ಆ ತಪಸ್ವಿಯನ್ನು ನೋಡಿ ದೂರದಲ್ಲೇ ನಿಂತನು. ಸ್ವಲ್ಪ ಸಮಯದ ಮೇಲೆ ತನ್ನ ಗ್ರಾಹಕರು ಹೋದ ನಂತರ ಆ ಕಟುಕನು ಬ್ರಾಹ್ಮಣನ ಬಳಿಗೆ ಬಂದು, “ನಮಸ್ಕಾರ! ನಿನಗೆ ಸ್ವಾಗತ! ನಾನು ವ್ಯಾಧ! ನಿನಗೆ ಮಂಗಳವಾಗಲಿ. ಓರ್ವ ಪತಿವ್ರತೆಯು ನಿನ್ನನ್ನು ನನ್ನ ಬಳಿ ಕಳುಹಿಸಿದ್ದಾಳೆ. ನೀನು ಬಂದಿರುವ ಕಾರಣವೂ ನನಗೆ ತಿಳಿದಿದೆ!” ಎಂದು ಹೇಳಿದನು. ಬ್ರಾಹ್ಮಣನಿಗೆ ಆಶ್ಚರ್ಯವೂ ಆನಂದವೂ ಸಹ ಆಯಿತು. ಇದು ಎರಡನೇ ಬಾರಿ. ಎಲ್ಲವೂ ಪೂರ್ವ-ನಿರ್ಧರಿತದಂತೆ ಅವನಿಗೆ ಭಾಸವಾಯಿತು. ಮಹಾತ್ಮರ ಲಕ್ಷಣವೇ ಅಷ್ಟು – ಅವರೇ ನಮ್ಮನ್ನು ತಮ್ಮ ಬಳಿ ತಾವೇ ಕರೆಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ನಮ್ಮ ಪೂರ್ವಾಪರಗಳೆಲ್ಲ ಅವರ ದಿವ್ಯದೃಷ್ಟಿಗೆ ಆಗಲೇ ಗೋಚರವಾಗಿರುತ್ತದೆ. ಬಾಯಿಬಿಡುವ ಪ್ರಸಂಗವೇ ನಮಗೆ ಬರುವುದಿಲ್ಲ!

ವ್ಯಾಧನು ಬ್ರಾಹ್ಮಣನನ್ನು ತನ್ನ ಮನೆಗೆ ಕರೆತಂದು ಪಾದ್ಯ ಆಚಮನೀಯಗಳಿಂದ ಸತ್ಕರಿಸಿದನು. ಇದರಿಂದ ಪ್ರೀತನಾದ ಬ್ರಾಹ್ಮಣ ಹೇಳುತ್ತಾನೆ.

ಬ್ರಾಹ್ಮಣ – “ಎಲೈ! ನೀನು ಮಾಡುತ್ತಿರುವ ಉದ್ಯೋಗ ಸರಿಯಾದುದು ಎಂದು ನನಗೆ ತೋರುತ್ತಿಲ್ಲ. ಕಟುಕ-ವೃತ್ತಿಯಲ್ಲಿ ಘೋರ ಕರ್ಮಗಳನ್ನು ಮಾಡುತ್ತಿರುವ ನಿನ್ನ ಬಗ್ಗೆ ನನಗೆ ಕನಿಕರ ಮೂಡುತ್ತಿದೆ.”

ವ್ಯಾಧ – “ಅಯ್ಯಾ! ಇದು ನಮ್ಮ ಕುಲಕಸುಬು. ತಾತ-ಮುತ್ತಾತರಿಂದ ನನಗೆ ಬಂದದ್ದು. ಇದೇ ನನ್ನ ಧರ್ಮ. ಈ ಕುರಿತು ನೀನು ಸಿಟ್ಟಾಗುವ ಅಗತ್ಯವಿಲ್ಲ. ಈ ಕೆಲಸದಿಂದ ನಾನು ನನ್ನ ಸಂಸಾರ ನಿರ್ವಹಿಸುತ್ತಿದ್ದೇನೆ. ಜೊತೆಯಲ್ಲಿ ಹಿರಿಯರ ಹಾಗು ವೃದ್ಧರ ಸೇವೆಯನ್ನೂ ಸಹ ಮಾಡುತ್ತಿದ್ದೇನೆ. ಸತ್ಯವನ್ನು ಮಾತನಾಡುತ್ತೇನೆ. ಅಸೂಯೆ ಪಡುವುದಿಲ್ಲ. ಯಥಾಶಕ್ತಿ ದಾನಮಾಡುತ್ತೇನೆ. ದೇವತೆಗಳು, ಅತಿಥಿಗಳು ಮತ್ತು ನನ್ನನ್ನೇ ಅವಲಂಬಿಸಿರುವವರು ಬಿಟ್ಟಿದ್ದುದನ್ನು ತಿಂದು ಬದುಕುತ್ತೇನೆ. ಮಾಂಸವನ್ನು ನಾನು ತಿನ್ನುವುದಿಲ್ಲ. ಪತ್ನಿಯೊಡನೆ ಸೂಕ್ತಕಾಲದಲ್ಲಿ ಮಾತ್ರ ಸೇರುತ್ತೇನೆ. ದಿನವಿಡೀ ಉಪವಾಸ ಮಾಡಿ ರಾತ್ರಿ ಮಾತ್ರ ಊಟ ಮಾಡುತ್ತೇನೆ.

ಶಕ್ತ್ಯಾನ್ನದಾನಂ ಸತತಂ ತಿತಿಕ್ಷಾ ಧರ್ಮನಿತ್ಯತಾ।
ಯಥಾರ್ಹಂ ಪ್ರತಿಪೂಜಾ ಚ ಸರ್ವಭೂತೇಷು ವೈ ದಯಾ॥
ತ್ಯಾಗಾನ್ನಾನ್ಯತ್ರ ಮರ್ತ್ಯಾನಾಂ ಗುಣಾಸ್ತಿಷ್ಠಂತಿ ಪೂರುಷೇ॥

ಶಕ್ತಿಯಿದ್ದಷ್ಟು ಅನ್ನದಾನ ಮಾಡುವುದು, ಸತತ ತಾಳ್ಮೆಯಲ್ಲಿರುವುದು, ನಿತ್ಯವೂ ಧರ್ಮದಲ್ಲಿರುವುದು, ಯಥಾರ್ಹವಾಗಿ ಪ್ರತಿ-ಗೌರವಿಸುವುದು, ಮತ್ತು ಸರ್ವಭೂತಗಳಲ್ಲಿ ದಯೆ ತೋರುವುದು ಮೊದಲಾದ ಉತ್ತಮ ಮನುಷ್ಯ ಗುಣಗಳು ಪುರುಷನ ತ್ಯಾಗದಿಂದಲ್ಲದೇ ಹೊರತು ಬೇರೆಯದರಿಂದ ಹುಟ್ಟುವುದಲ್ಲ.

ಮೃಷಾವಾದಂ ಪರಿಹರೇತ್ಕುರ್ಯಾತ್ಪ್ರಿಯಮಯಾಚಿತಃ।
ನ ಚ ಕಾಮಾನ್ನ ಸಂರಂಭಾನ್ನ ದ್ವೇಷಾದ್ಧರ್ಮಮುತ್ಸೃಜೇತ್॥

ಸುಳ್ಳನ್ನು ದೂರವಿಡಬೇಕು. ಕೇಳದೆಯೇ ಪ್ರಿಯವಾದುದನ್ನು ಮಾಡಬೇಕು. ನಮ್ಮ ಆಸೆಗಳಿಗಾಗಲೀ, ದುಡುಕುತನಕ್ಕಾಗಲೀ ಅಥವಾ ದ್ವೇಷಕ್ಕಾಗಲೀ ಧರ್ಮವನ್ನು ಬಿಡಬಾರದು.

ಪ್ರಿಯೇ ನಾತಿಭೃಶಂ ಹೃಷ್ಯೇದಪ್ರಿಯೇ ನ ಚ ಸಂಜ್ವರೇತ್।
ನ ಮುಹ್ಯೇದರ್ಥಕೃಚ್ಚ್ರೇಷು ನ ಚ ಧರ್ಮಂ ಪರಿತ್ಯಜೇತ್॥

ನಮಗೆ ಇಷ್ಟವಾದದ್ದು ನಡೆದಾಗ ತುಂಬಾ ಸಂತೋಷ ಪಡಬಾರದು. ಅಪ್ರಿಯವಾದದ್ದು ಜರುಗಿದಾಗ ಕೊರಗಬಾರದು! ಕಷ್ಟಗಳು ಬಂದಾಗಲೂ ಧರ್ಮವನ್ನು ಬಿಡಬಾರದು.

ಯಾರ ನಿಂದನೆಯನ್ನು ಮಾಡದವನು, ಆತ್ಮವರ್ಣನೆಯನ್ನು ಮಾಡಿ ಪೂಜಿಸಿಕೊಳ್ಳದವನು ಗುಣಸಂಪನ್ನನಾಗಿ ಭೂಮಿಯಲ್ಲಿ ಕೀರ್ತಿವಂತನಾಗುತ್ತಾನೆ. ತಪ್ಪುಗಳಿಗೆ ಪಶ್ಚಾತ್ತಾಪ ಪಟ್ಟರೆ ಪಾಪದಿಂದ ಮುಕ್ತರಾಗುತ್ತೇವೆ. ‘ಇದನ್ನು ಮಾಡುವುದಿಲ್ಲ’ ಎಂದು ಸಂಕಲ್ಪ ಮಾಡಿ ತಪ್ಪು ಮರುಕಳಿಸದಂತೆ ನೋಡಿಕೊಳ್ಳಬೇಕು.”

ಶಿಷ್ಟಾಚಾರ ಹಾಗು ಸಜ್ಜನರು

ಕೌಶಿಕನು ಧರ್ಮವ್ಯಾಧನಿಗೆ ಪ್ರಶ್ನಿಸಿದನು – “ಮಹಾಮತಿ! ಶಿಷ್ಟಾಚಾರವೆಂದರೆ ಏನೆಂದು ತಿಳಿಸು. ಇದರ ಕುರಿತು ಯಥಾವತ್ತಾಗಿ ಹೇಳು.”

ವ್ಯಾಧನ ಉತ್ತರದ ಸಾರಾಂಶ ಹೀಗಿದೆ.

* ಯಜ್ಞ (ಕರ್ತವ್ಯ ಸಮರ್ಪಣೆ ಎಂದು ಅರ್ಥೈಸಬಹುದು), ದಾನ, ತಪಸ್ಸು, ವೇದಗಳು (ಅಧ್ಯಯನ) ಮತ್ತು ಸತ್ಯ – ಈ ಐದು ನಿತ್ಯವೂ ಪವಿತ್ರವಾಗಿರುವ ಶಿಷ್ಟಾಚಾರಗಳು.
* ಕಾಮ, ಕ್ರೋಧ, ಮದ, ಲೋಭ ಹಾಗು ಅಪ್ರಾಮಾಣಿಕತೆ – ಇವುಗಳನ್ನು ವಶದಲ್ಲಿಟ್ಟುಕೊಳ್ಳುವುದು ಶಿಷ್ಟಾಚಾರ.
* ಗುರುಸೇವೆ, ಸತ್ಯ, ಶಾಂತ-ಮನೋಭಾವ ಮತ್ತು ದಾನ – ಇವು ನಿತ್ಯವೂ ಶಿಷ್ಟಾಚಾರಗಳು.
* ವೇದಗಳ ಸಾರವೇ ಸತ್ಯ. ಇಂದ್ರಿಯ ನಿಗ್ರಹ (ದಮ)ವೇ ಸತ್ಯದ ರಹಸ್ಯ. ಹಾಗೆಯೇ ದಮದ ಸಾರ ತ್ಯಾಗ.
* ನಾಸ್ತಿಕರನ್ನು, ಮರ್ಯಾದೆಯನ್ನು ಮೀರುವವರನ್ನು, ಕ್ರೂರರನ್ನು ಮತ್ತು ಪಾಪಮತಿಗಳನ್ನು ತ್ಯಜಿಸು. ಜ್ಞಾನವನ್ನು ಅವಲಂಬಿಸಿ, ಧಾರ್ಮಿಕರನ್ನು ಅನುಸರಿಸು.
* ಧೃತಿಯೆನ್ನುವ ನಾವೆಯನ್ನು ಕಟ್ಟಿ ಕಾಮಲೋಭಗಳೆಂಬ ಮೊಸಳೆಗಳನ್ನುಳ್ಳ, ಪಂಚೇಂದ್ರಿಯಗಳೇ ನೀರಾಗಿ ಹರಿಯುವ ನದಿಯನ್ನು ದಾಟಿ ಜನ್ಮದ ಆಚೆ ಹೋಗು.
* ಸಿಟ್ಟಾಗದವರು, ಅಸೂಯೆ ಪಡದವರು, ನಿರಹಂಕಾರಿಗಳು, ಮತ್ಸರಕ್ಕೊಳಗಾಗದವರು, ವಿಧೇಯರಾಗಿರುವವರು ಮತ್ತು ಶಾಂತರಾಗಿರುವವರು ಶಿಷ್ಟಾಚಾರಿಗಳು.
* ವೇದಗಳ ಪಾರಾಯಣ, ತೀರ್ಥಗಳಲ್ಲಿ ಸ್ನಾನ, ಕ್ಷಮೆ, ಸತ್ಯ, ಪ್ರಾಮಾಣಿಕತೆ ಮತ್ತು ಶುಚಿತ್ವ ಇವು ಶಿಷ್ಟಾಚಾರಿಗಳ ನಿದರ್ಶನಗಳು.

ಅಹಿಂಸಾ ಸತ್ಯವಚನಂ ಸರ್ವಭೂತಹಿತಂ ಪರಂ।
ಅಹಿಂಸಾ ಪರಮೋ ಧರ್ಮಃ ಸ ಚ ಸತ್ಯೇ ಪ್ರತಿಷ್ಠಿತಃ।
ಸತ್ಯೇ ಕೃತ್ವಾ ಪ್ರತಿಷ್ಠಾಂ ತು ಪ್ರವರ್ತಂತೇ ಪ್ರವೃತ್ತಯಃ॥

ಅಹಿಂಸೆ ಮತ್ತು ಸತ್ಯವಚನ – ಸರ್ವಭೂತಗಳಿಗೂ ಅತ್ಯಂತ ಉಪಯುಕ್ತವದ ಮೌಲ್ಯಗಳು. ಅಹಿಂಸೆಯು ಅತ್ಯಂತ ಶ್ರೇಷ್ಠ-ಧರ್ಮ. ಅದು ಸತ್ಯದ ಆಧಾರದಲ್ಲಿ ನಿಂತಿದೆ.”

ಕಟುಕನೊಬ್ಬನು ಅಹಿಂಸೆಯ ಬಗ್ಗೆ ಇಲ್ಲಿ ಹೇಳುವುದನ್ನು ನಾವು ಗಮನಿಸಬೇಕು. ಇಲ್ಲಿ ಅಹಿಂಸೆಯೆಂದರೆ ಲೋಕಾರೂಡಿಯಲ್ಲಿರುವ ಅಹಿಂಸೆಯಲ್ಲ. ಧರ್ಮದ ಆಧಾರದ ಮೇಲೆ ಇದು ನಿರ್ಣಯವಾಗಬೇಕು. ಮತ್ತೊಂದು ಜೀವಕ್ಕೆ ಅನಾವಶ್ಯಕ ಹಿಂಸೆ ನೀಡದೆ ಇರುವುದು ಅಹಿಂಸೆ. ಸಮಷ್ಟಿಯ ಒಳಿತಿಗೆ ಮಾಡುವ ಕಾರ್ಯ ಕ್ರೂರವಾದರೂ ಅದು ಹಿಂಸೆಯಲ್ಲ! “ವಿನಾಶಾಯ ಶತ್ರುಣಾಮ್” – ಎಂದು ಕೃಷ್ಣನೇ ಹೇಳಿಲ್ಲವೇ? ಸಮಾಜದಲ್ಲಿ ದುಷ್ಟಶಕ್ತಿಗಳು ತಾಂಡವವಾಡಲು ಬಿಡದೆ ನಿರ್ಮೂಲನೆ ಮಾಡಬೇಕು. ಶಾಂತಿ/ಸಂಧಿಗೆ ಸಹಮತವಿಲ್ಲದಾಗ ಅವುಗಳ ನಾಶ ಮಾಡುವುದು ಜಗತ್ತಿಗೆ ಅಗತ್ಯ ಹಾಗು ಆರೋಗ್ಯಕರ !

ಇನ್ನು ಪ್ರಾಣಿಹಿಂಸೆ – ಆದಷ್ಟು ನಾವು ಪ್ರಾಣಿಹಿಂಸೆಯಾಗದ ಹಾಗೆ ಬದುಕಬೇಕು. “ಜೀವೋ ಜೀವಸ್ಯ ಜೀವನಂ” (ಒಂದು ಜೀವ ಮತ್ತೊಂದು ಜೀವಕ್ಕೆ ಆಹಾರ) ಎಂಬ ಭಾಗವತದ ಸೂಕ್ತಿ ಪ್ರಕೃತಿ-ಧರ್ಮವಷ್ಟೆ? ಪ್ರಕೃತಿಯ ಆಹಾರ-ಸರಪಳಿ ನಮಗೆಲ್ಲ ತಿಳಿದಿರುವುದೇ. ಧರ್ಮರಾಜ ಕಾಮ್ಯಕವನದಲ್ಲಿ ಬಹುದಿನಗಳ ಕಾಲ ಉಳಿದಾಗ ಅಲ್ಲಿಯ ಜಿಂಕೆಗಳು ಅವನಿಗೆ ಕನಸಿನಲ್ಲಿ ಬೇಡಿಕೊಳ್ಳುತ್ತುವೆ – “ನಿಮ್ಮ ಆಹಾರವಾಗಿ ನಮ್ಮ ಸಂತತಿ ಕ್ಷೀಣಿಸುತ್ತಿದೆ. ದಯವಿಟ್ಟು ಸ್ವಲ್ಪ ಕಾಲ ಬೇರೆ ವನಕ್ಕೆ ಹೋಗಿ. ನಮ್ಮ ಸಂತತಿ ಹೆಚ್ಚಾದ ಮೇಲೆ ಮರಳಿ ಬರುವಿರಂತೆ!”. ಪ್ರಕೃತಿಯಲ್ಲಿ ಸಮತೋಲನ ಕಂಡುಕೊಂಡರೆ ಅದು ಹಿಂಸೆಯಾಗುವುದಿಲ್ಲ. ಧರ್ಮವ್ಯಾಧನು ಕೃಷಿಯ ಉದಾಹರಣೆ ಕೊಡುತ್ತಾನೆ. ನೇಗಿಲನ್ನು ಎಳೆದು ಉಳುವಾಗ ನಾವು ಭೂಮಿಯೊಳಗೆ ಜೀವಿಸುವ ಬಹಳ ಜೀವಿಗಳನ್ನು ಕೊಲ್ಲುತ್ತೇವೆ. ಈ ಲೋಕದಲ್ಲಿ ಯಾರು ತಾನೇ ಜೀವವಿರುವ ಯಾವುದನ್ನೂ ಹಿಂಸಿಸದೇ ಇದ್ದಾರೆ? ಅಹಿಂಸೆಯಲ್ಲಿ ನಿರತರಾದ ಯತಿಗಳೂ ಕೂಡ ಜೀವಿಸಲು ಹಿಂಸೆಯನ್ನೆಸಗುತ್ತಾರೆ. ಆದರೆ ಅವರ ಪ್ರಯತ್ನದಿಂದ ಅವು ಕಡಿಮೆಯಾಗಿರುತ್ತವೆ.

ಕಡೆಯದಾಗಿ ಸತ್ಯ. ಮುಂಚೆಯೇ ಹೇಳಿದಂತೆ “ವೇದಸ್ಯೋಪನಿಷತ್ಸತ್ಯಂ”. ವೇದದ ಸಾರ ಸತ್ಯ. ಧರ್ಮವ್ಯಾಧ ಹೇಳುತ್ತಾನೆ:

“ಸಮಷ್ಟಿಗೆ ಒಳಿತು ಮಾಡುವ ಮಾರ್ಗವೇ ಸತ್ಯಮಾರ್ಗ. ಸಜ್ಜನರ ಮಾರ್ಗವೇ ಸತ್ಯ. ಆಚಾರವೇ ಸತ್ಯವಂತರ ಲಕ್ಷಣ. ಸದಾಚಾರವೇ ಧರ್ಮ. ಅನಾಚಾರವೇ ಅಧರ್ಮ. ಜೀವಹೋಗುವ ಸಂಧರ್ಭದಲ್ಲಿ ಮತ್ತು ವಿವಾಹಸಂದರ್ಭದಲ್ಲಿ ಸುಳ್ಳನ್ನು ಹೇಳಬಹುದು (ನೂರು ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬ ಗಾದೆಯೇ ಇದೆಯಲ್ಲ!). ಆಗ ಸುಳ್ಳು ಸತ್ಯವಾಗಬಹುದು ಮತ್ತು ಸತ್ಯವು ಸುಳ್ಳಾಗಬಹುದು.

ಯದ್ಭೂತಹಿತಮತ್ಯಂತಂ ತತ್ಸತ್ಯಮಿತಿ ಧಾರಣಾ।
ವಿಪರ್ಯಯಕೃತೋಽಧರ್ಮಃ ಪಶ್ಯ ಧರ್ಮಸ್ಯ ಸೂಕ್ಷ್ಮತಾಂ॥

ಯಾವುದು ಸಮಸ್ತಜೀವಿಗಳಿಗೆ ಅತ್ಯಂತ ಹಿತವೋ ಅದೇ ಸತ್ಯ. ಇದಕ್ಕೆ ವಿಪರ್ಯಾಸವಾದದ್ದು ಅಧರ್ಮ. ಧರ್ಮದ ಸೂಕ್ಷ್ಮತೆಯನ್ನು ನೋಡು!”

ಧರ್ಮವ್ಯಾಧನು ವಿಪ್ರನಿಗೆ ತನ್ನ ವೃತ್ತಿಯ ಬಗ್ಗೆ ಹೇಳಿದನು:

ವ್ಯಾಧ: “ನಾನು ಆಚರಿಸುತ್ತಿರುವ ಈ ಕಟುಕ-ಕಾರ್ಯವು ಘೋರವಾದದ್ದು ಎಂಬುದರಲ್ಲಿ ಸಂಶಯವಿಲ್ಲ. ಇದು ನಾನು ಹಿಂದೆ ಮಾಡಿದ ಕರ್ಮದೋಷಗಳ ಫಲ. ನಾವು ಆ ಕರ್ಮಗಳ ನಿಮಿತ್ತ ಮಾತ್ರ. ಆ ದೋಷಗಳನ್ನು ಕೊನೆಗಳಿಸಲು ನನಗಾದಷ್ಟು ಪ್ರಯತ್ನಿಸುತ್ತಿದ್ದೇನೆ. ಇದು ನನ್ನ ಧರ್ಮವೆಂದುಕೊಂಡಿರುವೆ. ಇದನ್ನು ಬಿಡುವುದಿಲ್ಲ.

ಸ್ವಕರ್ಮ ತ್ಯಜತೋ ಬ್ರಹ್ಮನ್ನಧರ್ಮ ಇಹ ದೃಶ್ಯತೇ।
ಸ್ವಕರ್ಮನಿರತೋ ಯಸ್ತು ಸ ಧರ್ಮ ಇತಿ ನಿಶ್ಚಯಃ॥

ಸ್ವಕರ್ಮವನ್ನು ಬಿಡುವುದು ಅಧರ್ಮ ಎಂದು ತೋರುತ್ತದೆ. ಸ್ವಕರ್ಮದಲ್ಲಿ ನಿರತನಾಗುವುದೇ ಧರ್ಮ ಎಂದು ನನ್ನ ನಿಶ್ಚಯ.

ಕರ್ಮ ಹಾಗೂ ಕರ್ಮಫಲ

ನಂತರ ವ್ಯಾಧನು ಕರ್ಮಫಲದ ಬಗ್ಗೆ ತಿಳಿಸುತ್ತಾನೆ.

“ಹೇ ಬ್ರಾಹ್ಮಣ! ಮನುಷ್ಯನ ಕರ್ಮಗಳು ಒಳ್ಳೆಯದಿರುತ್ತವೆ ಅಥವಾ ಕೆಟ್ಟದ್ದಿರುತ್ತವೆ ಹಾಗು ನಿಶ್ಚಯವಾಗಿ ಅವನು ಅದರ ಫಲ ಪಡೆಯುತ್ತಾನೆ. ಮೂಡನಾದವನು ತನ್ನ ಕೆಟ್ಟ ಪರಿಸ್ಥಿತಿಗೆ ದೇವರನ್ನು ಹಳಿಯುತ್ತಾನೆ. ಆ ಸ್ಥಿತಿಗೆ ತನ್ನ ದುಷ್ಟಕರ್ಮಗಳೇ ಕಾರಣ ಎಂದು ಅರಿಯುವುದಿಲ್ಲ. ತಿಳುವಳಿಕೆಯಿಂದ, ನೀತಿಪಾಲನೆಯಿಂದ ಅಥವಾ ಪೌರುಷದಿಂದಾಗಲಿ ಹಿಂದಿನ ಕರ್ಮಫಲವನ್ನು ತಪ್ಪಿಸಿಕೊಳ್ಳಲು ಆಗುವುದಿಲ್ಲ. ನಮ್ಮ ಕರ್ಮಫಲವು ನಮ್ಮ ಅಧೀನದಲ್ಲೇ ಇರುವಂತಿದ್ದರೆ ನಾವು ಯಾವುದನ್ನು ಬಯಸುತ್ತೇವೆ ಅದು ನಮಗೆ ಸಿಗುತ್ತಿತ್ತು!

ನಾವು ಎಷ್ಟು ವಿಪರ್ಯಾಸಗಳನ್ನು ನೋಡುವುದಿಲ್ಲ? ಸನ್ಮಾರ್ಗಿಗಳು ಹಾಗು ಸಮರ್ಥರು ದುಸ್ಥಿತಿಯಲ್ಲಿರುವುದನ್ನು ನೋಡುತ್ತೇವೆ. ದುಷ್ಟರು ಮೆರೆಯುತ್ತಿರುತ್ತಾರೆ. ಆಲಸಿಗೆ ಐಶ್ವರ್ಯ ಬಂದಿರುತ್ತದೆ! ಕೆಲವೊಮ್ಮೆ ಕರ್ಮಗಳನ್ನು ಮಾಡುವವನು ತನ್ನ ಗುರಿ ತಲುಪುವುದಿಲ್ಲ! ಕೃಪಣರಾದವರು ದೇವರನ್ನು ಪೂಜಿಸಿ ಮಕ್ಕಳನ್ನು ಪಡೆಯುತ್ತಾರೆ! ಇದೆ ಮಂಗಳವಿಧಿಯಿಂದ ಹುಟ್ಟಿದ ಮಕ್ಕಳು ತಂದೆ-ತಾಯಿಗಳು ಕೂಡಿಟ್ಟ ಧನವನ್ನು ಪಡೆಯಲು ಕಾತುರಾಗಿರುತ್ತಾರೆ!

ಮನುಷ್ಯನ ರೋಗಗಳು ಸಹ ಕರ್ಮಗಳಿಂದಲೇ ಹುಟ್ಟುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ. ಆಗ ಅವನು ಬೇಟೆಗಾರನ ಕೈಗೆ ಸಿಕ್ಕ ಚಿಕ್ಕ ಜಿಂಕೆಯ ಹಾಗೆ ಒದ್ದಾಡುತ್ತಾನೆ!

ಹೇ ಬ್ರಾಹ್ಮಣ! ಭೋಗಿಸಲು ಎಷ್ಟೇ ಇದ್ದರೂ ಅಜೀರ್ಣದಿಂದ ಪೀಡಿತರಾದವರು ಅದನ್ನು ಭೋಗಿಸಲು ಅಶಕ್ತರಾಗಿರುತ್ತಾರೆ. ನೋಡು! ಶಕ್ತಿಶಾಲಿಗಳಾಗಿದ್ದರು ಎರಡು ಹೊತ್ತು ಅನ್ನ ಕಂಡುಕೊಳ್ಳಲು ಆಗುವುದಿಲ್ಲ! (ಹಲ್ಲು ಇದ್ದವನಿಗೆ ಕಡಲೆ ಇಲ್ಲ, ಕಡಲೆ ಇದ್ದವನಿಗೆ ಹಲ್ಲು ಇಲ್ಲ ಎಂಬ ಗಾದೆಯಂತೆ!) ಹೀಗೆ ಮನುಷ್ಯರು ಅಸಹಾಯಕರು, ಅವರ ಕರ್ಮಫಲಗಳು ಅವರನ್ನು ಬಲವಾದ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತವೆ!

ನಾವು ನಮ್ಮ ವಿಧಿಗೆ (ಕರ್ಮಫಲಗಳಿಗೆ) ಒಡೆಯರಲ್ಲ. [ಡಿ.ವಿ.ಜಿ.ಯವರು ಕಗ್ಗದಲ್ಲಿ ಹೇಳಿಲ್ಲವೇ – “ಬದುಕು ಜಟಕಾಬಂಡಿ, ವಿಧಿ ಅದರ ಸಾಹೇಬ!” ಎಂದು. ಇಲ್ಲಿ ವ್ಯಾಧ ವಿಧಿಯನ್ನು ಮಹಾ-ಪ್ರವಾಹಕ್ಕೆ ಹೋಲಿಸುತ್ತಾನೆ!] ಬಹುಮಂದಿ ಒಂದೇ ನಕ್ಷತ್ರ ಮಂಗಳ ಕಾಲಗಳಲ್ಲಿ ಹುಟ್ಟಿದ್ದರೂ ಅವರ ಕರ್ಮಸಂಧಿಗಳಲ್ಲಿ ಪಡೆಯುವ ಫಲಗಳಲ್ಲಿ ಬಹಳಷ್ಟು ವ್ಯತ್ಯಾಸಗಳನ್ನು ನೋಡುತ್ತೇವೆ.

ಆದ್ದರಿಂದ ಶ್ರುತಿಯ ಹೇಳಿರುವುದನ್ನು ಕೇಳು! ಜೀವವೇ ಬ್ರಹ್ಮ, ಸನಾತನ! ಈ ಲೋಕದ ಎಲ್ಲ ಪ್ರಾಣಿಗಳ ಶರೀರ ನಶ್ವರವಾದದ್ದು. ಶರೀರವು ನಾಶವಾದಾಗ ಜೀವವು ಬೇರೆ ಕಡೆ ವರ್ಗಾಯಿಸಲ್ಪಡುತ್ತದೆ.”

ಬ್ರಾಹ್ಮಣ – “ಜೀವವು ಹೇಗೆ ಶಾಶ್ವತವಾದುದು? ಇದರ ತತ್ವವೇನು?”

ವ್ಯಾಧ – “ದೇಹ ನಾಶವಾದಾಗ ಜೀವ ಸಾಯುವುದಿಲ್ಲ. ಅದು ಮುಂದುವರೆದು ಕರ್ಮಸಂಚಯದಿಂದ ಹೊಸದೊಂದು ದೇಹದತ್ತ ಹೋಗುತ್ತದೆ. ಬೇರೆಯಾದ ಶರೀರ ಪಂಚಭೂತಗಳಲ್ಲಿ ವಿಲೀನವಾಗುತ್ತದೆ. ಮಾಡಿದ ಕರ್ಮಗಳನ್ನು ಬೇರೆ ಯಾರು ಪಡೆಯುವಂತಿಲ್ಲ. ಅವನೇ ಅದನ್ನು ಪಡೆಯುತ್ತಾನೆ. ಕೃತನು ನಾಶವಾಗುವುದಿಲ್ಲ. ಶುಭಕಾರ್ಯವನ್ನು ಮಾಡಿದವನು ಶುಭಯೋನಿಗಳಲ್ಲಿ ಮತ್ತು ಪಾಪಕಾರ್ಯಗಳನ್ನು ಮಾಡಿದವನು ಪಾಪಯೋನಿಗಳಲ್ಲಿ ಪುನಃ ಹುಟ್ಟುತ್ತಾನೆ.

ಅನಾರೋಗ್ಯದಲ್ಲಿ ಪಥ್ಯ ಮಾಡಬೇಕು. ಆ ಸಮಯದಲ್ಲಿ ಮತ್ತಷ್ಟು ಹೆಚ್ಚು ಭಕ್ಷ್ಯಗಳನ್ನು ತಿಂದರೆ ಏನು ಪ್ರಯೋಗ? ಹಾಗೆಯೇ, ಮನುಷ್ಯರು ಮತ್ತಷ್ಟು ಪಾಪ-ಕರ್ಮಗಳನ್ನು ಮಾಡಿ ಮತ್ತೆ ಮತ್ತೆ ಜನನ-ಮರಣ ಚಕ್ರದಲ್ಲೇ ಸಿಲುಕಿ ಶೋಕಿಸುತ್ತಾರೆ. ವಿಶುದ್ಧ ಕರ್ಮಗಳ ಮೂಲಕ ಈ ಬಂಧನದಿಂದ ನಿವೃತ್ತನಾದವನು ಮಾತ್ರ ದುಃಖರಹಿತವಾದ ಸುಕೃತ ಲೋಕಗಳನ್ನು ಪಡೆಯುತ್ತಾನೆ. ಸುಸಂಸ್ಕೃತನೂ ಮತ್ತು ಜಿತೇಂದ್ರಿಯನೂ ಆದವನು ಇಹದಲ್ಲಿ ಮತ್ತು ಪರದಲ್ಲಿಯೂ ನಿರಂತರವಾದ ಸುಖವನ್ನು ಪಡೆಯುತ್ತಾನೆ. ಉತ್ತಮವಾದ ಧರ್ಮಾಚರಣೆ, ಸಜ್ಜನರ ನಡುವಳಿಕೆಗಳ ಪಾಲನೆ – ಇವುಗಳ ಆಧಾರದ ಮೇಲೆ ತನ್ನ ವೃತ್ತಿ/ಉದ್ಯೋಗವನ್ನು ಮಾಡಿಕೊಂಡಿದ್ದರೆ ಯಾವುದೇ ಕ್ಲೇಷವಿಲ್ಲ, ಕರ್ಮಸಂಕರವೂ ಇಲ್ಲ! ಜ್ಞಾನಿಯಾದವನು ಲೌಕಿಕ ಸುಖಗಳನ್ನು ಕ್ಷಣಿಕವೆಂದು ಅರಿತು ಎಲ್ಲವನ್ನು ತ್ಯಜಿಸಲು ಪ್ರಯತ್ನಿಸುತ್ತಾನೆ ಹಾಗು ಮೋಕ್ಷಕ್ಕೆ ಹೊಸ ದಾರಿಗಳನ್ನು ಕಂಡುಕೊಳ್ಳುತ್ತಾನೆ. ಧಾರ್ಮಿಕನಾಗಿ ಕಡೆಯಲ್ಲಿ ಮೋಕ್ಷವನ್ನು ಪಡೆಯುತ್ತಾನೆ.

ಇನ್ನು ಲೌಕಿಕ ವಿಷಯಗಳ ಬಗ್ಗೆ ಹೇಳುವುದಾದರೆ, ಮೊದಲು ಮನಸ್ಸಿನಲ್ಲಿ ಮತ್ತೊಂದು ವಿಷಯದ ಬಗ್ಗೆ ಆಸಕ್ತಿಯುಂಟಾಗುತ್ತದೆ. ಅದನ್ನು ಹಿಂಬಾಲಿಸಿದಾಗ ಕಾಮ, ಪ್ರೇಮ, ಕ್ರೋಧಗಳು ಉಂಟಾಗುತ್ತವೆ. ಅದನ್ನು ತೃಪ್ತಗೊಳಿಸಲು ಮಹಾಕರ್ಮಗಳನ್ನು ಮಾಡಲಾಗುತ್ತದೆ. ರಾಗದಿಂದ ದ್ವೇಷ, ನಂತರ ಲೋಭ ಅನಂತರ ಮೋಹ. ಲೋಭವು ವ್ಯಕ್ತಿಯನ್ನು ಆಳುತ್ತದೆ. ರಾಗ-ದ್ವೇಷಗಳಿಂದ ಪೆಟ್ಟು ತಿನ್ನುತ್ತಾನೆ. ಇಷ್ಟೆಲ್ಲಾ ಆದರೂ ಬುದ್ಧಿ ಯು ಧರ್ಮದ ಕಡೆ ಹೋಗುವುದಿಲ್ಲ. ಕಪಟಿಯಾಗಿ ಧರ್ಮದಲ್ಲಿರುವಂತೆ ನಟಿಸುತ್ತಾನೆ. ರಾಗ ದೋಷದಿಂದ ಪಾಪವನ್ನು ಮಾಡಿ ನಾಶ ಹೊಂದುತ್ತಾನೆ.

ಯಾರು ತನ್ನ ಪ್ರಜ್ಞೆಯ ಮೂಲಕ ಈ ದೋಷಗಳನ್ನು ಕಂಡುಕೊಳ್ಳುತ್ತಾರೋ ಮತ್ತು ಸುಖ-ದುಃಖಗಳೇನೆಂದು ತಿಳಿದಿರುತ್ತಾನೋ ಆವನು ಸಜ್ಜನರ ಜೊತೆ ಒಡನಾಡುತ್ತಾನೆ. ಒಳ್ಳೆಯ ಕಾರ್ಯಗಳನ್ನು ಆರಂಭಿಸುವ ಮೂಲಕ ಅವನ ಬುದ್ಧಿಯು ಧರ್ಮದ ಕಡೆ ಸಾಗುತ್ತದೆ.

ತಪಸ್ಸೇ ಮೋಕ್ಷಕ್ಕೆ ಕಾರಣ. ಶಮ ಹಾಗು ದಮ ಅದರ ಮೂಲ. ಇವುಗಳ ಮೂಲಕ ಮನುಷ್ಯ ತನ್ನ ಮನೋಕಾಮನೆಗಳನ್ನು ಪಡೆಯಬಹುದು. ಹೇ ಬ್ರಾಹ್ಮಣ! ತಪಸ್ವಿಯು ಇಂದ್ರಿಯ-ನಿರೋಧ, ಸತ್ಯ ಹಾಗು ದಮಗಳ ಮೂಲಕ ಶ್ರೇಷ್ಠ ಬ್ರಹ್ಮಪದವನ್ನು ಪಡೆಯುತ್ತಾನೆ.”

ಟಿಪ್ಪಣಿ-

ಈ ಲೇಖನ ಬರೆಯಲು ಉಪಯೋಗಿಸಿಕೊಂಡ ಪುಸ್ತಕಗಳು/ಉಪನ್ಯಾಸಗಳು-
೧. ಭಂಡಾರ್ಕರ್ ಓರಿಯೆಂಟಲ್ ಸಂಶೋಧನಾ ಸಂಸ್ಥೆಯ ಪರಿಷ್ಕೃತ ವ್ಯಾಸಭಾರತ – ಇದನ್ನು ನಾನು ಹೆಚ್ಚಾಗಿ vyasaonline.com ಮೂಲಕ ಕನ್ನಡಲಿಪಿಯಲ್ಲಿ ಓದಿದ್ದು. (ಶ್ರೀಯುತ ಬಿ.ಎಂ. ರಮೇಶ್ ಅವರ ಈ ಅಂತರ್ಜಾಲ ಮುದ್ರಣ, ಅನುವಾದ ತುಂಬಾ ಸಹಕಾರಿಯಾದದ್ದು.)
ಅಲ್ಲಲ್ಲಿ ಪರಿಶೀಲನೆಗೆ ಸಂಸ್ಕೃತಪಾಠವನ್ನು https://sanskritdocuments.org/mirrors/mahabharata/mahabharata-bori.html ಜಾಲತಾಣದಲ್ಲಿ ಉಪಯೋಗಿಸಿಕೊಂಡಿರುವೆ.
೨. ಶ್ರೀ ಎ. ಆರ್. ಕೃಷ್ಣಶಾಸ್ತ್ರಿಗಳ ವಚನಭಾರತ ಗ್ರಂಥ. ವ್ಯಾಸಭಾರತದ ಸೊಗಸಾದ ಕನ್ನಡ ಅನುವಾದ.
೩. ಬೆಂಗಳೂರಿನ ಗೋಖಲೆ ಸಂಸ್ಥೆ (GIPA) ಯಲ್ಲಿ ಡಾ. ರಾ. ಗಣೇಶ್ ನಡೆಸಿಕೊಟ್ಟ ಪ್ರೇರಣಾದಾಯಕವಾದ “ಭಗವಾನ್ ಶ್ರೀ ವೇದವ್ಯಾಸ ಮಹರ್ಷಿಗಳ ಮಹಾಭಾರತ ವಿಹಾರ” ಉಪನ್ಯಾಸ ಮಾಲೆ.

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply