close logo

ಕಥಾಮಾಲಿಕೆ- ಇಂದ್ರದ್ಯುಮ್ನ ಸರೋವರ

ದಿವಂ ಸ್ಪೃಶತಿ ಭೂಮಿಂ ಚ ಶಬ್ದಃ ಪುಣ್ಯಸ್ಯ ಕರ್ಮಣಃ।
ಯಾವತ್ಸ ಶಬ್ಧೋ ಭವತಿ ತಾವತ್ಪುರುಷ ಉಚ್ಯತೇ॥
(ಮಹಾಭಾರತ-ಆರಣ್ಯಕ ಪರ್ವ)

ವಿಶಾಲವಾದ ಆಕಾಶ. ಅಲ್ಲಲ್ಲಿ ಹಿಮಗಟ್ಟಿದ ಮೋಡಗಳ ರಾಶಿ. ಅವುಗಳ ಮಧ್ಯೆ ದಿವ್ಯತೇಜವೊಂದು ವೇಗದಲ್ಲಿ ಧರೆಯಡೆಗೆ ಜಾರುತ್ತಿತ್ತು!

“ಇಂದಿಗೆ ನನ್ನ ಪುಣ್ಯಸಂಚಯ ಮುಗಿಯಿತೆಂದು ತೋರುತ್ತದೆ. ಹಾಗಾಗಿ ಈ ಅಧ:ಪತನ! ಇರಲಿ, ಇಷ್ಟು ಕಾಲ ದೇವಲೋಕದಲ್ಲಿ ಕಳೆಯುವ ಭಾಗ್ಯ ನನಗೆ ದೊರೆಯಿತು. ಜೊತೆಯಲ್ಲಿ ಒಂದು ದಿನದ ವಿಶೇಷ ಸಮಯವನ್ನೂ ಸಹ ಅನುಗ್ರಹಿಸಿದ್ದಾರೆ. ನನ್ನ ಪುಣ್ಯಕರ್ಮಗಳ ಕಾರಣ ನನ್ನನ್ನು ಸ್ಮರಿಸುವ ಯಾವ ಜೀವಿಯಾದರು ಇಂದು ಭೂಮಂಡಲದಲ್ಲಿ ಕಂಡರೆ ನನಗೆ ಪುನಃ ಸ್ವರ್ಗಪ್ರಾಪ್ತಿಯಾಗುವ ಅವಕಾಶ ದೊರೆಯುವುದು”. ಹೀಗೆ ಆಲೋಚಿಸುತ್ತಿದ್ದ ಇಂದ್ರದ್ಯುಮ್ನ  ಮಹಾರಾಜ ಸ್ವರ್ಗದಿಂದ ದೂರವಾಗುತ್ತ ಭೂಮಂಡಲದ ಸಮೀಪ ಬರತೊಡಗಿದ.

ಮಹಾರಾಜ ತನ್ನ ಭುವಿಯ ಜೀವನವನ್ನು ನೆನಪುಮಾಡಿಕೊಳ್ಳಲು ಪ್ರಯತ್ನಿಸಿದ. “ಲೋಕಕಲ್ಯಾಣಕ್ಕಾಗಿ ನಾನು ಯಾಗಗಳನ್ನು ಮಾಡಿ ದೇವತೆಗಳಿಗೆ ಹವಿಸ್ಸನ್ನು ಕೊಟ್ಟು ಸಂತೃಪ್ತನಾಗಿಸಿದ್ದೆ. ರಾಜ್ಯ ಸುಭಿಕ್ಷವಾಗಿ ಪ್ರಜೆಗಳೆಲ್ಲ ಸುಖ-ಶಾಂತಿಯಿಂದ ಬಾಳುತ್ತಿದ್ದರು. ಆ ಕಾರಣದಿಂದಲೇ ತಾನೇ ನನಗೆ ಸಶರೀರವಾಗಿ ಸ್ವರ್ಗ ಪ್ರಾಪ್ತಿಯಾಗಿದ್ದು. ಆದರೆ ಯಾವ ಯಾಗದ ವಿವರವು ಪೂರ್ಣವಾಗಿ ನೆನಪಿಲ್ಲ. ಎಲ್ಲವು ಮಸುಕು ಮಸುಕು. ನಾನು ಭೂಮಿಯನ್ನು ಬಿಟ್ಟು ಸಾವಿರಾರು ವರ್ಷಗಳೇ ಕಳೆದು ಹೋಗಿವೆ. ನನ್ನ ನೆನಪು ಇರುವವರು ಇನ್ನೂ ಬದುಕಿರಲು ಸಾಧ್ಯವಿಲ್ಲ.” ಹೀಗೆ ಯೋಚಿಸುತ್ತಿರುವಾಗ ರಾಜನಿಗೆ ಥಟ್ಟನೆ ಮಾರ್ಕಂಡೇಯ ಮಹರ್ಷಿಗಳ ನೆನಪಾಯಿತು. “ಸ್ವರ್ಗದಲ್ಲಿ ಅವರ ಹೆಸರನ್ನು ಅನೇಕ ಬಾರಿ ಕೇಳಿದ್ದುಂಟು. ಭಗವಂತನ ಕೃಪೆಯಿಂದ ಯುಗಯುಗಾಂತರಗಳನ್ನು ಕಂಡ ದಿವ್ಯಚೇತನ ಮಾರ್ಕಂಡೇಯ ಮುನಿ. ತಮ್ಮ ತಪ:ಶಕ್ತಿಯಿಂದ ದೇಹವನ್ನು ಇನ್ನು ಗಟ್ಟಿಯಾಗಿಟ್ಟುಕೊಂಡು, ಭೂಮಿಯಲ್ಲಿ ಧರ್ಮಕಾರ್ಯಗಳಲ್ಲಿ ನಿರತನಾಗಿರುವ ತಪೋವೃದ್ಧ. ಅವರ ಬಳಿ ಹೋದರೆ ನನಗೆ ಸರಿಯಾದ ಮಾರ್ಗದರ್ಶನ ದೊರೆಯಬಹುದು. ನನ್ನ ಬಳಿಕ ಭೂಮಿಯಲ್ಲಿ ಹುಟ್ಟಿದ್ದರೂ ಅವರಿಗೆ ನನ್ನ ಬಗ್ಗೆ ಅಥವಾ ನನ್ನ ಕಾಲದ ಜೀವ-ಜಂತುಗಳ  ಪರಿಚಯ ಇರಬಹುದು.”

ಹೀಗೆ ತನ್ನ ಸಂಕಲ್ಪಶಕ್ತಿಯಿಂದ ಇಂದ್ರದ್ಯುಮ್ನ ರಾಜ ನೇರವಾಗಿ ಮಾರ್ಕಂಡೇಯ ಮುನಿಗಳ ಆಶ್ರಮದಲ್ಲಿ ಬಂದಿಳಿದ. ಬೆಳಗಿನ ಅಗ್ನಿಹೋತ್ರವನ್ನು ಮುಗಿಸಿ ತಮ್ಮ ಶಿಷ್ಯರನ್ನು ನೋಡಲು ಆಗಷ್ಟೇ ಹೊರಗೆ ಬಂದ ಋಷಿಗಳ ದರ್ಶನವಾಯಿತು. ನಮಸ್ಕರಿಸಿದ ರಾಜ ಮಹರ್ಷಿಗಳಲ್ಲಿ ಅರಿಕೆ ಮಾಡಿದನು – “ತಾವು ಚಿರಂಜೀವಿ. ಜಗತ್ತಿನ ಶ್ರೇಷ್ಠರ ಬಗ್ಗೆ ತಿಳಿದಿರುವಿರಿ. ನಿಮಗೆ ಈ ಇಂದ್ರದ್ಯುಮ್ನನ ಪರಿಚಯವಿದೆಯೇ?”. ಮಹರ್ಷಿಗಳು ಒಮ್ಮೆ ಆ ನೃಪನನ್ನು ಕುತೂಹಲದಿಂದ ನೋಡಿ, “ಹೇ ಮಹಾರಾಜ! ನಾನು ಅನುಷ್ಠಾನದ ಮೂಲಕ ಈ ದೇಹವನ್ನು ಬಹಳ ಕಾಲ ಕಾದಿಟ್ಟುಕೊಂಡಿರುವ ಯೋಗಿ. ಆದರೂ ವಯಸ್ಸಿನಲ್ಲಿ ನಿನ್ನಷ್ಟು ಹಿರಿಯನಲ್ಲ. ನಿನ್ನ ಬಗ್ಗೆ ಎಲ್ಲಿಯೂ ಕೇಳಿಲ್ಲ. ನಿನಗೆ ಸಹಾಯ ಮಾಡಬೇಕೆಂದು ಸ್ಪುರಣೆಯಾಗುತ್ತಿದೆ. ನನಗೆ ತಿಳಿದಿರುವ ಹಾಗೆ ಹಿಮಾಲಯದ ಬಳಿ ಪ್ರಾಕಾರಕರ್ಣ ಎಂಬ ಹಿರಿಗೂಬೆಯೊಂದಿದೆ. ವಯಸ್ಸಿನಲ್ಲಿ ಅವನು ನನಗಿಂತ ಹಿರಿಯ. ಅವನು ಬಹುಶಃ ನಿನ್ನ ಕಾಲದವನಿರಬಹುದು, ನಿನ್ನನ್ನು ಗುರುತಿಸಲೂಬಹುದು. ಆದರೆ ಹಿಮಾಲಯ ಇಲ್ಲಿಂದ ತುಂಬಾ ದೂರದಲ್ಲಿದೆ. ನಾವು ಅಲ್ಲಿಗೆ ಹೋಗಲು ಬಹಳ ಸಮಯ ಬೇಕು” ಎಂದು ಹೇಳಿದರು.

ಇಂದ್ರದ್ಯುಮ್ನನ ಬಳಿ ಹೆಚ್ಚು ಕಾಲಾವಕಾಶವಿರಲಿಲ್ಲ. ದೇವತೆಗಳ ಅನುಗ್ರಹದಿಂದ ಪಡೆದ ದಿವ್ಯಶಕ್ತಿಯಿಂದ ಅವನು ಕೂಡಲೇ ಅಶ್ವರೂಪವನ್ನು ಧರಿಸಿದನು. ಮಹರ್ಷಿಗಳನ್ನು ತನ್ನ ಹೆಗಲ ಮೇಲೆ ಕೂರಿಸಿಕೊಂಡು ಶರವೇಗದಲ್ಲಿ ಒಂದೇ ಜಾವದಲ್ಲಿ ಹಿಮಾಲಯದ ತಪ್ಪಲನ್ನು ತಲುಪಿದನು. ಅಲ್ಲಿ ದೊಡ್ಡ ಮರದ ಪೊಟರೆಯಲ್ಲಿ ಪ್ರಾಕಾರಕರ್ಣ ಕುಳಿತಿದ್ದನು. ಅತ್ಯಂತ ವೃದ್ಧನಾದ ಆ ಗೂಬೆಗಳ ರಾಜ, ತನ್ನ ಉದ್ದವಾದ ಕಿವಿಗಳನ್ನು ಮೇಲಕ್ಕೆತ್ತಿ, ಅರೆತೆರೆದ ಕಣ್ಣುಗಳಿಂದ ನೋಡುತ್ತಾ, ಅಳಿದುಳಿದ ಕೆಲವೇ ರೆಕ್ಕೆಪುಕ್ಕಗಳಿದ್ದರೂ ಚಳಿಗೆ ಸ್ವಲ್ಪವೂ ನಡುಗದೇ ಗಟ್ಟಿಯಾಗಿ ಕುಳಿತಿದ್ದನು. “ಖಂಡಿತ ಈ ಉಲೂಕಮಹಾಶಯನಿಗೆ ನನ್ನ ನೆನಪಿರಬಹುದು”, ರಾಜನ ಮನಸ್ಸಿನಲ್ಲಿ ಆಶಾಕಿರಣ ಮೂಡಿತು. “ಓ ಮಹಾನುಭಾವ! ನಾನು, ಇಂದ್ರದ್ಯುಮ್ನ ಮಹಾರಾಜ, ನಿನ್ನಲ್ಲಿಗೆ ಬಂದಿರುವೆ. ನನ್ನನ್ನು ಗುರುತಿಸಬಲ್ಲೆಯಾ?” ಎಂದು ನಿರೀಕ್ಷೆಯ ಕಣ್ಣುಗಳಿಂದ ರಾಜ ಪ್ರಾಕಾರಕರ್ಣನನ್ನು ಕೇಳಿದನು.

ರಾಜನನ್ನು ಅಡಿಯಿಂದ ಮುಡಿಯವರೆಗೆ ನೋಡಿದ ಗೂಬೆ, “ಊಹುಂ. ಎಷ್ಟು ಯೋಚಿಸಿದರೂ ನನಗೆ ನಿನ್ನ ನೆನಪು ಸಿಗುತ್ತಿಲ್ಲ. ಕ್ಷಮಿಸು ಪ್ರಭು! ನಾನು ನಿನ್ನನ್ನು ಗುರುತಿಸಲಾರೆ.” ಎಂದು ಹೇಳಿತು. “ಈ ಭೂಮಿಯಲ್ಲಿ ಕಾಲ ಬಹುದೂರ ಸಾಗಿದೆ. ನನ್ನ ನಂತರ  ನೂರಾರು ರಾಜರು ಬಂದು ಹೋಗಿದ್ದಾರೆ. ಎಷ್ಟು ಕಾಲದವರೆಗೆ, ಎಷ್ಟು ತಲೆಮಾರಿನವರೆಗೆ, ಬಂಧುಗಳನ್ನು ಲೆಕ್ಕವಿಡಲು ಸಾಧ್ಯ? ನಾನು ವೃಥಾ ಪ್ರಯತ್ನಪಡುತ್ತಿದ್ದೇನೆ. ಇರಲಿ, ಈ ಪ್ರಾಕಾರಕರ್ಣನನ್ನೇ  ಕೇಳೋಣ” ಎಂದುಕೊಂಡ ಇಂದ್ರದ್ಯುಮ್ನ – “ಎಲೈ ಶ್ರೇಷ್ಠ! ನಿನಗಿಂತಲೂ ದೀರ್ಘಾಯುಷಿಗಳಾದವರು ಬೇರೆ ಯಾರಾದರೂ ಇದ್ದಾರೆಯೇ? ದಯವಿಟ್ಟು ತಿಳಿಸು” ಎಂದು ಪ್ರಾರ್ಥಿಸಿದನು.

“ನನ್ನ ಗೆಳೆಯನೊಬ್ಬನಿದ್ದಾನೆ. ಬಕರಾಜನಾದ ಅವನ ಹೆಸರು ನಾಡೀಜಂಘ. ಅವನು ನನಗಿಂತ ಹಿಂದಿನವನು. ಅವನು ನಿನ್ನನ್ನು ಗುರುತಿಸಬಹುದು. ಅವನಿರುವುದು ಇಲ್ಲಿಂದ ಪೂರ್ವದಿಕ್ಕಿನಲ್ಲಿರುವ ಸುಂದರ ಸರೋವರದ ಬಳಿ. ನಾವು ಅಲ್ಲಿಗೆ ಹೋದರೆ ಉಪಯೋಗವಾಗಬಹುದು.” ಎಂದನು ಪ್ರಾಕಾರಕರ್ಣ. ಮತ್ತೆ ಕುದುರೆಯ ರೂಪತಳೆದ ರಾಜ ಅವರೆಲ್ಲರನ್ನು ಕರೆದುಕೊಂಡು ಗೂಬೆಯು ಹೇಳಿದ ಆ ಸರೋವರನ್ನು ಶೀಘ್ರದಲ್ಲೇ ತಲುಪಿದನು.

ವಿಶಾಲವಾದ, ಪ್ರಶಾಂತವಾದ ಆ ಸರೋವರವನ್ನು ನೋಡುತ್ತಲೇ ಇಂದ್ರದ್ಯುಮ್ನನ ಮನದಲ್ಲಿ ಸಮಾಧಾನದ ಆಹ್ಲಾದಕರ ಗಾಳಿ ಬೀಸಲಾರಂಭಿಸಿತು. ಹಿಂದೆ ತನ್ನ ರಾಜ್ಯ ಇಲ್ಲಿಯೇ ಸಮೀಪದಲ್ಲಿ ಇತ್ತೇನೋ ಎಂದು ಅನಿಸತೊಡಗಿತು. ಮತ್ತೆ ತನ್ನ ನಗರಕ್ಕೆ ಬಂದಂತೆ ಭಾಸವಾಯಿತು.  ಯಾಗ-ಹೋಮಗಳು, ಪೂರ್ಣಾಹುತಿ ದೃಶ್ಯಗಳು, ಋತ್ವಿಕರ ವೇದಘೋಷಗಳು, ಮಹಾಜನತೆಯ ಜಯಜಯಕಾರವು – ಎಲ್ಲವೂ ಅಸ್ಪಷ್ಟವಾಗಿ ಅವನ ಸ್ಮೃತಿಪಟಲದ ಮೇಲೆ ಮೂಡಲಾರಂಭಿಸಿತು. “ಆಗೋ ಅಲ್ಲಿದ್ದಾನೆ, ನನ್ನ ಗೆಳೆಯ, ನಾಡೀಜಂಘ! ನಿಲ್ಲು. ಇಲ್ಲಿಯೇ ಇಳಿಯೋಣ”, ಪ್ರಾಕಾರಕರ್ಣನ ದ್ವನಿ ರಾಜನನ್ನು ಎಚ್ಚರಿಸಿತು.

ಖಂಡಿತ ಇಲ್ಲಿ ಸಕಾರಾತ್ಮಕ ಉತ್ತರ ಸಿಗಬಹುದೆಂದು ಎಲ್ಲರೂ ಎಣಿಸಿದರು. ನೀಳವಾದ ಕಾಲುಗಳ ಮೇಲೆ ಸರೋವರದ ತಟದಲ್ಲಿ ಧ್ಯಾನಾಸಕ್ತನಾಗಿದ್ದ ಬಕರಾಜನು ರಾಜನನ್ನು ಸ್ವಲ್ಪ ಸಮಯ ನೋಡಿ ಆತ ಯಾರು ಎಂದು ತನಗೆ ತಿಳಿದಿಲ್ಲವೆಂದು ತಲೆಯಾಡಿಸಿದನು. ತನ್ನ ಪ್ರಯತ್ನವೆಲ್ಲ ವ್ಯರ್ಥವಾಯಿತೆಂದು ರಾಜ ನಿಟ್ಟುಸಿರುಬಿಟ್ಟನು. ಆದರೆ ನಾಡೀಜಂಘನೇ, “ಓ ದೇವ! ನನಗಿಂತ ಹಿರಿಯ ಇನ್ನೂ ಒಬ್ಬನಿದ್ದಾನೆ. ಇದೇ ಸರೋವರದ ಆ ಅಂಚಿನಲ್ಲಿ ವಾಸಿಸುತ್ತಾನೆ. ಅವನೇ ನನ್ನ ಪ್ರಾಣಮಿತ್ರ, ಆಮೆಗಳಲ್ಲಿ ಶ್ರೇಷ್ಠ – ‘ಅಕೂಪಾರ’. ನೀನು ಬಯಸಿದಲ್ಲಿ ನಾವು ಅವನ ಬಳಿಗೆ ಹೋಗಿ ವಿಚಾರಿಸೋಣ.” ಎಂದು ರಾಜನಿಗೆ ಸಲಹೆ ಕೊಟ್ಟನು.

ಈ ಪ್ರಯತ್ನವೂ ಸಾಗಲಿ ಎಂದು ರಾಜನ ಜೊತೆಯಲ್ಲಿ ಎಲ್ಲರು ಹತ್ತಿರದಲ್ಲೇ ಇದ್ದ ಅಕೂಪಾರನ ಬಳಿ ಬಂದು ನಿಂತರು. ಆಗ ತಾನೇ ಸರೋವರದ ನೀರಿನಲ್ಲಿ ತಂಪಾಗಿ ಮಿಂದು ಆಯಾಸದಿಂದ ಮೈಚಾಚಿ ನಿದ್ದೆಗೆ ಜಾರುತ್ತಿದ್ದ ಆಮೆಗೆ ಇವರ ಆಗಮನದಿಂದ ಥಟ್ಟನೆ ಎಚ್ಚರವಾಯಿತು. ಹಾಗೆಯೇ ಸ್ವಲ್ಪ ಕಣ್ಣಗಲಿಸಿದ ಆ ಕೂರ್ಮರಾಜ ಅಕೂಪಾರ ಬಂದವರನ್ನು ನೋಡಿದನು. ತನ್ನ ಗೆಳೆಯನ ಪಕ್ಕದಲ್ಲಿ ನಿಂತಿದ್ದ ರಾಜನ ಚಿತ್ರ ಮಸುಕಾಗಿ ಮೂಡಿತು. ತಾನು ನೋಡುತ್ತಿರುವುದು ನಿಜವೇ ಅಥವಾ ಇದು ನಿದ್ದೆಗಣ್ಣಿನ ಕನಸೇ ಎಂದು ಆಮೆಗೆ ಗೊತ್ತಾಗಲಿಲ್ಲ. ಮೈಕೊಡವಿಕೊಂಡು, ಕಣ್ಣುಗಳನ್ನು ಉಜ್ಜಿಕೊಂಡು, ಅಗಲವಾಗಿ ರೆಪ್ಪೆ ತೆರೆದು ತಲೆಯೆತ್ತಿ ಮತ್ತೊಮ್ಮೆ ನೋಡಿತು. “ಅಹುದು, ಸಂಶಯವೇ ಇಲ್ಲ, ಇವನೇ ಆ ದೇವಾ! ನನ್ನ ಮಹಾಪ್ರಭು, ಇಂದ್ರದ್ಯುಮ್ನ ಮಹಾರಾಜ!”, ಅಕೂಪಾರನ ಕಂಗಳಲ್ಲಿ ಧಾರಾಕಾರವಾಗಿ ಅಶ್ರುಧಾರೆ! ಆನಂದದ ಭರದಿಂದ ಮೂರ್ಛೆಹೋಗುವ ಸ್ಥಿತಿಯಲ್ಲಿ, ಗದ್ಗದ ಕಂಠದಲ್ಲಿ ಅವನು, “ಓ ಇಂದ್ರದ್ಯುಮ್ನ ಮಹಾರಾಜ! ಇಂದು ನನ್ನ ಜೀವನ ಸಾರ್ಥಕವಾಯಿತು. ಯಾವ ದೇವನ ಗುಣಗಾನ ನಾನು ಆಜೀವಪರ್ಯಂತ ಮಾಡುತ್ತಿದ್ದೇನೋ ಅವನ ದರ್ಶನದ ಭಾಗ್ಯ ಇಂದು ನನ್ನದಾಯಿತು.” ಎಂದು ತನ್ನೆರಡು ಕೈಗಳನ್ನೂ ಜೋಡಿಸಿ ರಾಜನಿಗೆ ನಮಸ್ಕರಿಸಿದನು.

ಅಕೂಪಾರನು ತನ್ನನ್ನು ಗುರುತಿಸಿದ್ದನ್ನು ನೋಡಿ ರಾಜ ದಿಗ್ಮೂಢನಾದ! ಧನ್ಯತೆಯ ಭಾವ ಅವನದಾಯಿತು. ಆ ದಿವ್ಯದೃಶ್ಯದಿಂದ ಸ್ವಲ್ಪ ಚೇತರಿಸಿಕೊಂಡ ಇಂದ್ರದ್ಯುಮ್ನ, “ಓ ಮಹಾಜೀವಿ! ನೀನು ನನ್ನನು ಹೇಗೆ ಗುರುತಿಸಿದೆ? ಹಿಂದೆ ನೀನು ನನ್ನನ್ನು ಕಂಡಿದ್ದೆಯಾ? ಸ್ವಲ್ಪ ವಿವರವಾಗಿ ತಿಳಿಸು.” ಎಂದು ಮೃದುವಾಗಿ ನುಡಿದನು. “ಮಹಾರಾಜ! ನೀನು ಬಹಳ ಹಿಂದೆ ಇದೇ ಜಾಗದಲ್ಲಿ ಸಾವಿರ ಬಾರಿ ಯಾಗಗಳನ್ನು ಮಾಡಿದ್ದೆ. ನಾನು ಆಗಿನ್ನೂ ಬಾಲಕ. ಆದರೂ ನೆನಪಿದೆ. ಇಗೋ, ಇಲ್ಲಿಯೇ ಆ ಯಜ್ಞವೇದಿಕೆಯನ್ನು ಕಟ್ಟಿದ್ದೆ. ಸಕಲ ದಿಕ್ಕುಗಳಿಂದಲೂ ಬಂದ ಬ್ರಾಹ್ಮಣರಿಗೆ ಗೋದಾನ ಮಾಡಲೆಂದು ಲಕ್ಷಾಂತರ ಹಸುಗಳನ್ನು ಇಲ್ಲಿಯೇ ಕೂಡಿಹಾಕಿದ್ದೆ. ಆ ಪ್ರಮಾಣದಲ್ಲಿ ಸೇರಿದ ಹಸುಗಳ ಗೊರಸೆಯಿಂದಲೇ ಇಲ್ಲಿ ದೊಡ್ಡ ಕಂದಕವು ಉಂಟಾಯಿತು. ನಿನ್ನ ಯಾಗದ ಫಲವಾಗಿ ದೇವತೆಗಳು ಅಮೃತಧಾರೆಯಂತೆ ಮಳೆಯನ್ನು ಸುರಿಸಿದರು. ಆಗಲೇ ಹುಟ್ಟಿದ್ದು ಈ ಇಂದ್ರದ್ಯುಮ್ನ ಸರೋವರ! ಆಗ ನಿನ್ನನ್ನು ನೋಡಿದ್ದೆ. ನಿನ್ನ ಪುಣ್ಯಕರ್ಮಗಳ ವಿಸ್ಮಯಕ್ಕೆ ಬೆರಗಾಗಿದ್ದೆ. ಅಂದಿನಿಂದಲೂ ಇಲ್ಲಿಯೇ ವಾಸವಾಗಿದ್ದು, ನಿತ್ಯವೂ ನಿನ್ನ ನಾಮ-ಸ್ಮರಣೆ ಮಾಡುತ್ತಿದ್ದೇನೆ. ಅಮೃತಸದೃಶವಾದ ಈ ಸರೋವರ ಇಲ್ಲಿಯ ಪ್ರಾಣಿಗಳಿಗೆ ಆಶ್ರಯವಾಗಿದೆ. ಇಂದಿಗೂ ನಮಗೆಲ್ಲ ಜೀವಧಾರೆಯಾಗಿದೆ. ನಿನಗೆ ನಮೋ ನಮೋ” ಎಂದು ಮತ್ತೆ ತಲೆಬಾಗಿ ವಂದಿಸಿದನು ಅಕೂಪಾರ.

ರಾಜನು ಅಕೂಪಾರನನ್ನು ಪ್ರೀತಿಯಿಂದ ಆಲಂಗಿಸಿಕೊಂಡನು. ಅಷ್ಟರಲ್ಲೇ ದೇವಲೋಕದಿಂದ ದಿವ್ಯರಥವು ಅಲ್ಲಿಗೆ ಬಂದಿಳಿಯಿತು. “ಓ ಕೀರ್ತಿವಂತ! ಇನ್ನೂ ಭೂಮಿಯಲ್ಲಿ ನಿನ್ನ ಗುಣಗಾನವಾಗುತ್ತಿದೆ. ಅದನ್ನು ನಾವು ಕೇಳಿದೆವು. ಸ್ವರ್ಗವು ನಿನಗಾಗಿ ಮತ್ತೆ ತೆರೆದಿದೆ. ಬಂದು ಯಥೋಚಿತವಾದ ಸ್ಥಾನವನ್ನು ಸ್ವೀಕರಿಸು” ಎಂಬ ದೇವವಾಣಿಯು ಅಲ್ಲಿ ಆಗ ಕೇಳಿಸಿತು.  “ಮನುಷ್ಯರ ಪುಣ್ಯಕರ್ಮಗಳ ಧ್ವನಿ ಭುವಿಯಲ್ಲಿ ಹಾಗೂ ಸ್ವರ್ಗದಲ್ಲಿ ಮೊಳಗುತ್ತಿರುತ್ತದೆ. ಎಲ್ಲಿಯವರೆಗೆ ಈ ಶಬ್ದ ಕೇಳಿಬರುತ್ತದೆಯೋ, ಅಲ್ಲಿಯವರೆಗೆ ಮಾತ್ರ ಮನುಷ್ಯ ಇರುತ್ತಾನೆ. ಆದ್ದರಿಂದ ನರನು ಅಂತ್ಯದವರೆಗೂ ಕಲ್ಯಾಣಕರವಾಗಿ ನಡೆದುಕೊಳ್ಳಬೇಕು. ಪಾಪಿಷ್ಠ ನಡವಳಿಕೆಗಳನ್ನು ತೊರೆಯಬೇಕು. ಧರ್ಮವನ್ನೇ ಒಟ್ಟುಮಾಡಿಕೊಳ್ಳಬೇಕು.” – ಅಶರೀರವಾಣಿಯು ಧರ್ಮಸೂಕ್ಷ್ಮವನ್ನು ಉದ್ಘೋಷಿಸಿತು.

ರಾಜನಾದರೋ ವಿನಮ್ರನಾಗಿ ರಥಕ್ಕೆ ನಮಸ್ಕರಿಸಿ, “ದೇವತೆಗಳ ಇಚ್ಛೆಯಂತೆ ಆಗಲಿ. ಆದರೆ ಇವರೆಲ್ಲ ನನಗಾಗಿ ಬಹುದೂರದಿಂದ ಬಂದಿದ್ದಾರೆ. ಅವರನ್ನೆಲ್ಲ ನಾನು ಮೊದಲು ಎಲ್ಲಿಂದ ಕರೆದುಕೊಂಡು ಬಂದಿದ್ದೆನೋ ಅಲ್ಲಿಗೆ ತಲುಪಿಸಿ ಬರುತ್ತೇನೆ. ಅಲ್ಲಿವರೆಗೆ ನಿಲ್ಲು!” ಎಂದು ಹೇಳಿದನು. ಮಾರ್ಕಂಡೇಯ ಮುನಿಗಳನ್ನು, ಉಲೂಕ-ಮಹಾಶಯ ಪ್ರಾಕಾರಕರ್ಣನನ್ನು ಹಾಗೂ ಬಕರಾಜ ನಾಡಿಜಂಘನನ್ನು ಅವರವರ ಸ್ವಕ್ಷೇತ್ರಕ್ಕೆ ಶ್ರದ್ಧೆಯಿಂದ ತಲುಪಿಸಿ ಹಿಂದಿರುಗಿ ಬಂದ ಇಂದ್ರದ್ಯುಮ್ನನು ರಥದಲ್ಲಿ ಕುಳಿತನು. ಕ್ಷಣಮಾತ್ರದಲ್ಲೇ ಸ್ವರ್ಗದೆಡೆ ಅವನ ಊರ್ಧ್ವಗಮನ ಮತ್ತೆ ಆರಂಭವಾಯಿತು.

[ಮಹಾಭಾರತದ ಉಪಾಖ್ಯಾನಗಳಲ್ಲಿ ಅತ್ಯಮೋಘವಾದ ಕಥೆಗಳಿವೆ. ಭಾರತೀಯ ಸಂಸ್ಕೃತಿಯ ಪರಮೋದ್ದೇಶಗಳು, ತತ್ವ-ದರ್ಶನಗಳು ಈ ಉಪಾಖ್ಯಾನಗಳಲ್ಲಿ ದೊರೆಯುತ್ತವೆ. ಆದಿಪರ್ವ, ಆರಣ್ಯಕಪರ್ವ ಮತ್ತು ಉದ್ಯೋಗಪರ್ವದ ಕಥೆಗಳು ಪಾಂಡವರ ಕುರಿತಾಗಿಲ್ಲದಿರಬಹುದು. ಆದರೆ ಅವುಗಳು ಪ್ರಾಚೀನ ಸಂಸ್ಕೃತಿಯ ರಸವೇ ಸರಿ. ಅವುಗಳನ್ನು ಪಾಂಡವರಿಗೆ ಹೇಳುವ ಋಷಿಗಳು ಪಾಂಡವರು ಸಂಸ್ಕೃತಿಯ ನಿಜಪ್ರತಿನಿಧಿಗಳಾಗುವುದಕ್ಕೂ, ಸಂಸ್ಕೃತಿಯ ಹರಿಕಾರರಾಗುವುದಕ್ಕೂ ಕಾರಣರಾಗುತ್ತಾರೆ. ಅಂತಹ ಒಂದು ಕಥೆ ಅರಣ್ಯಕಪರ್ವದಲ್ಲಿ ಬರುವ ಇಂದ್ರದ್ಯುಮ್ನ ರಾಜನ ಕಥೆ – ಸಂಪಾದಕರು]

(Image credit: Trip Tap Toe)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply