close logo

ಸರಸ್ವತೀ ಸೂಕ್ತ: ಒಂದು ವಿಚಾರ ಲಹರಿ – ಭಾಗ-೧ 

ಋಗ್ವೇದದ ಆರನೆಯ ಮಂಡಲ ಮಹತ್ವಪೂರ್ಣವಾದ ಮಂತ್ರ-ಸೂಕ್ತಗಳಿಂದ ಕೂಡಿದೆ. ಹಲವರ ಪ್ರಕಾರ ಇದೆ ಅತ್ಯಂತ ಹಳೆಯದಾದ ಮಂಡಲ. ಭಾರದ್ವಾಜ ಕುಲಕ್ಕೆ ಸೇರಿದ ಋಷಿಗಳೆ ಇದರ ಎಲ್ಲ ಮಂತ್ರಗಳ ದ್ರಷ್ಟಾರರು. ಇದರಲ್ಲಿ ೭೫ ಸೂಕ್ತಗಳಿದ್ದು, ಒಟ್ಟು ೭೬೫ ಮಂತ್ರಗಳಿವೆ. ಅದರಲ್ಲಿ ಪ್ರಸಿದ್ಧವಾಗಿರುವ ಸೂಕ್ತಗಳಲ್ಲಿ ಸರಸ್ವತೀ ಸೂಕ್ತವೂ ಒಂದು. ಋಗ್ವೇದದಲ್ಲಿ ಸರಸ್ವತೀ ದೇವಿಗೆ ವಿಶೇಷವಾದ ಪ್ರಾಮುಖ್ಯತೆಯಿದೆ. ಋಗ್ವೇದದಲ್ಲಿ ಸರಸ್ವತೀ ನದಿಯೇ ಸರಸ್ವತೀ ದೇವಿ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಋಗ್ವೇದದಲ್ಲಿ ೭೨ ಬಾರಿ ಸರಸ್ವತೀ ನದಿಯ ಉಲ್ಲೇಖವಿದ್ದು, ೩ ಸೂಕ್ತಗಳು ಸರಸ್ವತೀ ನದಿಯ ಕುರಿತೇ ಆಗಿದೆ – ಅದರಲ್ಲಿ ಸರಸ್ವತೀ ಸೂಕ್ತವು ಒಂದು.  ಅದರ ಕುರಿತಾದ ವಿಚಾರಲಹರಿಯೇ ಈ ಲೇಖನದ ವಸ್ತು. ಮುಖ್ಯವಾಗಿ ಈ ಸೂಕ್ತದ ಕಾವ್ಯಾತ್ಮಕ ಅಭಿವ್ಯಕ್ತಿಗೂ ನದಿಗೂ ಇರುವ ಸಂಬಂಧವೇನು? ನದಿಗಳೇಕೆ ವೇದದಲ್ಲಿ ಅಷ್ಟೊಂದು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ? ಎನ್ನುವುದನ್ನು ಶೋಧಿಸುವುದೇ ಈ ಲೇಖನದ ಪ್ರಮುಖ ಕಾಳಜಿ. ಹದಿನಾಲ್ಕು ಮಂತ್ರಗಳುಳ್ಳ ಈ ಸೂಕ್ತದ ದ್ರಷ್ಟಾರ ಭಾರದ್ವಾಜ ಬಾರ್ಹಸ್ಪತ್ಯ.

ವಧ್ಯ್ರಶ್ವವನಿಗೂ, ದಿವೋದಾಸನಿಗೂ ವಿಶೇಷವಾಗಿ ಪ್ರಸಾದ ನೀಡಿದಳು

ಸೂಕ್ತದ ಮೊದಲ ಮಂತ್ರದಲ್ಲಿ ಸರಸ್ವತೀ ದೇವಿ ವಧ್ಯ್ರಶ್ವವನಿಗೂ, ದಿವೋದಾಸನಿಗೂ ವಿಶೇಷವಾಗಿ ಪ್ರಸಾದ ನೀಡಿದಳು ಎನ್ನುವ ಉಲ್ಲೇಖವಿದೆ. ಇದರಲ್ಲಿ ಗಮನಾರ್ಹವಾದ ವಿಷಯ ದಿವೋದಾಸನಿಗೆ ಸಂಬಂಧಿಸಿದ್ದು. ಭರತ ಕುಲ ಸಂಜಾತನಾದ ದಿವೋದಾಸ ರಾಜ ವೇದದಲ್ಲಿ ವಿಶೇಷವಾಗಿ ಆರ್ಯನೆಂದು ಸ್ತುತಿಸಲ್ಪಡುವ ಒಬ್ಬ ರಾಜ. ದ್ರೌಪದಿಯ ವಂಶವಾದ ಪಾಂಚಾಲ ಕುಲದ ಪ್ರಮುಖನಾದ ರಾಜ. ಋಗ್ವೇದದಲ್ಲಿ ದಿವೋದಾಸ ವಧ್ಯ್ರಶ್ವನ ಮಗ. ಭರತವಂಶದ ಒಂದು ಧಾರೆಯಾದ ಪಾಂಚಾಲ ಕುಲದ ರಾಜರೆಲ್ಲ ಆರ್ಯರೆಂದು ಋಗ್ವೇದದಲ್ಲಿ ವಿಶೇಷವಾಗಿ ಗೌರವಿಸಲ್ಪಟ್ಟಿದ್ದಾರೆ.

ಗಮನಿಸಬೇಕಾದ ವಿಷಯವೆಂದರೆ, ದಿವೋದಾಸನನ್ನು ವರ್ಣಿಸುವಾಗ ‘ಋಣದಲ್ಲಿ ಬಿದ್ದ’ ಅಂದರೆ ಅಧೋಮುಖನಾದ, ಸೋಲನನ್ನುಭವಿಸಿದ ಎನ್ನುವ ಉಲ್ಲೇಖವಿದೆ ಸೂಕ್ತದಲ್ಲಿ. ಆದರೆ ವಧ್ಯ್ರಶ್ವನನ್ನ ವಿವರಿಸುವಾಗ ಅವನನ್ನು ಮಹದಾತೃ ಎಂದಿದೆ. ದಿವೋದಾಸನ ಕುರಿತು ಈ ಮಾತುಗಳೇಕೆ ಎನ್ನುವುದಕ್ಕೆ ವಿವರಣೆ ಬೇಕಾದರೆ ಮಹಾಭಾರತಕ್ಕೆ ಹೋಗಬೇಕಾದೀತು. ಋಗ್ವೇದದಲ್ಲಿ ವಿಶೇಷವಾದ ಗೌರವಕ್ಕೆ ಅದೇ ಕುಲದ ರಾಜ ಸುದಾಸ ಪಾತ್ರನಾದರೆ, ಮಹಾಭಾರತದಲ್ಲಿ ದಿವೋದಾಸ-ಪ್ರತರ್ದನರ ಕುರಿತು ವಿಶೇಷವಾದ ಉಲ್ಲೇಖವಿದೆ. ಹೈಹಯ ರಾಜರಿಗೂ ಪ್ರತರ್ದನನ ಪೂರ್ವಜರಿಗೂ ಘೋರ ಯುದ್ಧಗಳು ನಡೆದು ಹೈಹಯರೇ ಸದಾ ಗೆಲ್ಲುತ್ತಿದ್ದು, ಕಡೆಗೆ ದಿವೋದಾಸನೂ ಘನಘೋರವಾದ ಸೋಲನ್ನನುಭವಿಸುತ್ತಾನೆ. ಕಡೆಗೆ ಭರದ್ವಾಜ ಋಷಿಗಳಿಗೆ ಶರಣಾಗುತ್ತಾನೆ. ಅವರ ನೇತೃತ್ವದಲ್ಲಿ ಸರಸ್ವತೀ ನದಿಯ ದಡದಲ್ಲಿ ಒಂದು ಯಜ್ಞ ಮಾಡಿ ಅವರ ಕೃಪೆಯಿಂದ ಪ್ರತರ್ದನನನ್ನು ಪಡೆದುಕೊಳ್ಳುತ್ತಾನೆ. ಅದೇ ಮಹಾಭಾರತದ ಮತ್ತೊಂದು ಕಥೆಯಲ್ಲಿ ದಿವೋದಾಸನು ಯಯಾತಿ-ರಾಜನ ಮಗಳಾದ ಮಾಧವಿಯಿಂದ ಪ್ರತರ್ದನನನ್ನು ಪಡೆದುಕೊಂಡನು ಎನ್ನುವ ಉಲ್ಲೇಖವಿದೆ. ಪ್ರತರ್ದನ ಹೈಹಯರನ್ನು ಸೋಲಿಸುತ್ತಾನೆ. ಅಷ್ಟಲ್ಲದೇ ಸ್ವರ್ಗದಿಂದ ಬಿದ್ದ ಯಯಾತಿ ಮತ್ತೆ ಊರ್ಧ್ವಮುಖಿಯಾಗುವುದಕ್ಕೆ ಸಹಾಯಮಾಡುತ್ತಾನೆ. ಒಟ್ಟಿನಲ್ಲಿ ಸರಸ್ವತೀ ಸೂಕ್ತದಲ್ಲಿ ಬರುವ  ವಧ್ಯ್ರಶ್ವ-ಪ್ರತರ್ದನರು ವೇದ ಸಂಸ್ಕೃತಿಯಲ್ಲಿ ಪ್ರಮುಖ ರಾಜರಾಗಿದ್ದು ಇದ್ದು ಅವರು ಸರಸ್ವತೀ ನದಿಯ ಉಪಾಸನೆ ಮತ್ತು ಯಜ್ಞಕಾರ್ಯಗಳನ್ನು ನಡೆಸಿದ ಉಲ್ಲೇಖವಿದು. ವೇದಕಾಲದಲ್ಲಿ ಋಷಿಸಂಕುಲವು ಸರಸ್ವತೀ ನದಿಯ ದಡವನ್ನೇ ಹೆಚ್ಚಾಗಿ ಆಶ್ರಯಿಸಿದ್ದು ವಿಶೇಷವಾದ ಯಜ್ಞಕಾರ್ಯ ಮತ್ತು ತಪಸ್ಸಿಗೆ ಸರಸ್ವತೀ ನದಿಯೇ ಆಧಾರವಾಗಿದ್ದಳು. ಅವಳ ಸುತ್ತಮುತ್ತಲಿನ ಪ್ರದೇಶವೇ ಬ್ರಹ್ಮಾವರ್ತವೆಂದು ಪ್ರಸಿದ್ಧವಾಗಿದ್ದು, ಅನೇಕಾನೇಕ ಬ್ರಹ್ಮರ್ಷಿಗಳ ನೆಲೆಯೂರಿ ವೇದಸಂಸ್ಕೃತಿಯನ್ನು ಸೃಷ್ಟಿಸಿದ ಪುಣ್ಯಕ್ಷೇತ್ರವಾಗಿತ್ತು. ಗಮನಿಸಬೇಕಾದ ಮತ್ತೊಂದು ವಿಷಯವೆಂದರೆ ಋಗ್ವೇದದಲ್ಲಿ ಬರುವ ಪುರಾಣೇತಿಸ ವಿವರಗಳನ್ನು ಮಹಾಭಾರತದ ಬೆಳಕಿನಲ್ಲಿ ನೋಡಿದಾಗ ನಮ್ಮ ಪರಂಪರೆಯ ಬಗ್ಗೆ ಮಹತ್ವಪೂರ್ಣವಾದ ಒಳನೋಟಗಳು ಸಿಗುತ್ತವೆ. ಆದರೆ ಈ ಲೇಖನದ ವಸ್ತು ಇದಲ್ಲ.

ಗತಿಶೀಲತೆ: ಪರ್ವತಗಳಿಂದ ಇಳಿದು ಅತೀತತೆಡೆಗೆ ಹರಿಯುತ್ತಾ…   

ಎರಡನೆಯ ಮಂತ್ರದಲ್ಲಿ ನದಿಯ ಭೌತಿಕ ಉಲ್ಲೇಖವಿದೆ. ಸರಸ್ವತೀ ತನ್ನ ಶಕ್ತಿಯಿಂದ ಪರ್ವತಗಳನ್ನು ತುಂಡರಿಸಿ, ತನ್ನ ಪ್ರಬಲವಾದ ಅಲೆಗಳಿಂದ ಅತೀತವಾದ ಪ್ರದೇಶವನ್ನು ಚಾಚಿ ಮುತ್ತುತ್ತಾಳೆ ಎನ್ನುವ ಭವ್ಯವಾದ ವಿವರಣೆಯಿದೆ. ಈ ಒಂದು ಸಾಲಿನಲ್ಲಿ ಹಿಮಾಲಯ ಪರ್ವತದ ನಡುವೆ ಹುಟ್ಟಿ ಹರ್ಯಾಣ-ರಾಜಾಸ್ಥಾನಲ್ಲಿ ಹರಿದು ಕಡೆಗೆ ಗುಜರಾತಿನ ಕಚ್ ಪ್ರದೇಶದಲ್ಲಿ ಸಮುದ್ರವನ್ನು ಸೇರುವ ಭವ್ಯವಾದ ಸರಸ್ವತೀ ನದಿಯನ್ನು ನಾವು ಊಹಿಸಿಕೊಳ್ಳಬಹುದು. ಸುಮಾರು ೨೦೦೦ ಕ್ರಿ.ಪೂ. ವರೆಗೆ ಹೀಗೆ ಹರಿದ ಸರಸ್ವತೀ ನದಿ, ನಂತರ ಕ್ರಮೇಣವಾಗಿ ತನ್ನ ಹರಿವನ್ನು ಕಳೆದುಕೊಳ್ಳುತ್ತಾ ಈಗ ಅದೃಶ್ಯಳಾಗಿದ್ದಾಳೆ. ಅವಳ ಆ ಸುದೀರ್ಘವಾದ ಕಥೆಯನ್ನು ಓದಬೇಕಾದರೆ ಡಾ|| ಮಿಶೆಲ್ ಡಾನಿನೋ-ರ “The Lost River – Trail of the River Saraswati” ಪುಸ್ತಕವನ್ನು ನೋಡಬೇಕು. ಚಿಕ್ಕದಾಗಿ ಹೇಳುವುದಾದರೆ ಇಂದಿನ ಸಟ್ಲೆಜ್ ನದಿ ಮತ್ತು ಯಮುನಾ ನದಿಗಳು ಅಂದು ಸರಸ್ವತೀ ನದಿಯನ್ನು ಸೇರುತ್ತಿದ್ದು, ಸರಸ್ವತೀ ಇಂದು ಯಾವ ನದಿಯೂ ಇಲ್ಲದಷ್ಟು ಗಾತ್ರದಲ್ಲಿ ಹರಿಯುತ್ತಿದ್ದಳು. ಆದರೆ ಘನಘೋರವಾದ ಭೂಕಂಪವೊಂದು ಯಮುನಾ ನದಿಯನ್ನು ಗಂಗೆಯ ಕಡೆಗೂ, ಸಟ್ಲೆಜ್ ನದಿಯನ್ನು ಬಿಯಾಸ್ ಕಡೆಗೂ ಹರಿಸಿ, ಸರಸ್ವತೀ ನದಿ ಕೇವಲ ಈಗಿನ ‘ಘಗ್ಗರ್’-ನದಿಯಾಗಿ ಕುಗ್ಗಿಸಿತು. ಈಗ ಘಗ್ಗರ್ ವರ್ಷದಲ್ಲಿ ಹರ್ಯಾಣ-ರಾಜಸ್ಥಾನಗಳಲ್ಲಿ ಕೆಲವೇ ತಿಂಗಳು ಹರಿದು ಪಾಕಿಸ್ತಾನದ ಚೋಲಿಸ್ತಾನ್ ಮರುಭೂಮಿಯಲ್ಲಿ ಕಳೆದುಹೋಗುತ್ತಾಳೆ.

ಗಮನಾರ್ಹವಾದ ವಿಷಯವೆಂದರೆ ಸೂಕ್ತದ ಇದೊಂದೇ ಸಾಲು ನದಿಯ ಭೌತಿಕ ಚಿತ್ರಣವಲ್ಲದೆ ಅದರ ತಾತ್ವಿಕ ಮಹತ್ತನ್ನು ಕಾವ್ಯಾತ್ಮಕವಾಗಿ ನಮಗೆ ದರ್ಶನ ಮಾಡಿಸುತ್ತದೆ. ಪರ್ವತಗಳನ್ನು ಒಡೆದು ಬರುತ್ತಾಳೆ ಎನ್ನುವುದರಲ್ಲಿ ಅಚಲವಾದ, ಬೃಹತ್ತಾದ ತಡೆಗಳನ್ನು ಮೀರುವ ಪ್ರತಿಮೆಯಿದೆ. ಅತೀತವಾದ ಪ್ರದೇಶಗಳನ್ನು ಚಾಚಿ ಮುಟ್ಟುತ್ತಾಳೆ ಎನ್ನುವುದರಲ್ಲಿ ಎತ್ತರವಾದ ಪಾರಮಾರ್ಥಿಕವಾದ ಲೋಕಗಳನ್ನು ಸಾಕ್ಷಾತ್ಕರಿಸಿಕೊಳ್ಳುವ ವೈದಿಕ ಸಂಸ್ಕೃತಿಯ ಆಶಯಕ್ಕೆ ಪ್ರತಿಮೆಯಾಗಿದೆ. ನದಿಗೆ ಭಾರತೀಯ ಸಂಸ್ಕೃತಿಯಲ್ಲಿರುವ ಪ್ರಾಮುಖ್ಯತೆ ಈ ಸಾಲಿನಲ್ಲಿ ನಮಗೆ ಕಾಣಿಸುತ್ತದೆ. ನದಿಗೆ ಒಂದು ಹರಿವಿದೆ. ಹರಿವೆಂದರೆ ಚಲನೆ, ಗತಿ. ಅದರಲ್ಲೂ ನದಿಯ ಹರಿವು ಅತಿ ಸುಂದರವಾದ ಗತಿ. ಅದೆಷ್ಟೇ ಸುಂದರವಾಗಿದ್ದರೂ, ನಯನ-ಮನೋಹರವಾಗಿದ್ದರೂ  ಈ  ಹರಿವಿನ ಹಿಂದೆ ಅಲೆಗಳಿಂದ ಕೂಡಿದ ಬಲಿಷ್ಠವಾದ ಶಕ್ತಿಯಿದೆ. ಹೀಗೆ ನಮ್ಮ ಭೌತಿಕ ಮತ್ತು ಪಾರಮಾರ್ಥಿಕ ಜೀವನದ ಅವಿಭಾಜ್ಯ ಅಂಗವಾದ ಗತಿಶೀಲತೆ, ಸೌಂದರ್ಯ, ಮುಂದಣ ಲೋಕ – ಇವುಗಳನ್ನು ನದಿಯ ಹರಿವು ಧ್ವನಿಸುವುದರಿಂದ ವೇದಸಂಸ್ಕೃತಿಯಲ್ಲಿ ನದಿಗೆ ಅಂತಹ ಪ್ರಾಮುಖ್ಯತೆ. ಇಹ-ಪರಗಳು ಒಂದೇ ಎಂದು ಸಾರುವ ವೇದಸಂಸ್ಕೃತಿಗೆ ನದಿ ಹೀಗೆ ನಮ್ಮೆದಿರುಗೇ   ಕಾಣುವ ಪ್ರತಿಮೆಯಾಗಿ ದೊರೆಯಿತು. ವೈದಿಕ ಸಂಸ್ಕೃತಿ ನದಿಗಳ ಸುತ್ತಲೇ ಬೆಳೆದುಬರುವುದಕ್ಕೆ ಕಾರಣವಾಯಿತು.

ಹರಿವೇ ಜೀವನ, ಅರಿವೇ ಜೀವನ: ಪ್ರಾಣ ಶಕ್ತಿ ಮತ್ತು ವಿಚಾರ ಶಕ್ತಿ

ಸೂಕ್ತದ ನಾಲ್ಕನೆಯ ಸಾಲಿನಲ್ಲಿ ದೇವಿಯನ್ನು ಸಮೃದ್ಧಿಯುತಳು, ಅಶ್ವಶಕ್ತಿ (ಪ್ರಾಣಶಕ್ತಿ)ಯುಳ್ಳವಳೂ ಮತ್ತು ವಿಚಾರಶಕ್ತಿಯ ಪಾಲಕಳು ಎಂದು ಸ್ತುತಿಸಲ್ಪಟ್ಟಿದ್ದಾಳೆ. ಹರಿವು ಎಂದರೆ ಚಲನೆಯನ್ನು ವೈದಿಕ ಋಷಿಗಳು ದೃಷ್ಟಿಸಿಕೊಂಡ ಬಗೆಯನ್ನು ಈ ಸಾಲು ವಿವರಿಸುತ್ತದೆ. ನೀರಿರುವ ಪ್ರದೇಶದಲ್ಲೇ ಸಂಸ್ಕೃತಿಗಳು ಉಳಿದುಬೆಳೆಯುವುದು ಮತ್ತು ಸಮೃದ್ಧಿ ಸಾಧ್ಯವಾಗುವುದು ಎನ್ನುವುದು ತಿಳಿದ ವಿಷಯವೇ. ನದಿ ತನ್ನ ಭೌತಿಕ ಹರಿವಿನಿಂದ ಅದನ್ನು ಸಾಧ್ಯವಾಗಿಸುತ್ತಾಳೆ. ಆದರೆ ನದಿಯ ಹರಿವಿಗೂ ಪ್ರಾಣಶಕ್ತಿ, ವಿಚಾರ-ಶಕ್ತಿಗಳಿಗೂ ಇರುವ ಸಂಬಂಧವಾದರೂ ಏನು? ಭಾರತೀಯ ಸಂಸ್ಕೃತಿಯ ಒಂದು ವಿಶಿಷ್ಟವಾದ ಒಳನೋಟ ಇಲ್ಲಿ ನಮಗೆ ಕಾಣಸಿಗುತ್ತದೆ. ಚಲನೆ, ಗತಿ ಎನ್ನುವುದೇ ಜೀವನದ ಅತ್ಯಂತ ಮೂಲಭೂತವಾದ ಅಂಶ ಎನ್ನುವುದು ಇಲ್ಲಿನ ಒಳನೋಟ. ಪ್ರಾಣಶಕ್ತಿ ಎಂದರೆ ಚಲನೆಯನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ. ವಿಚಾರಶಕ್ತಿ  ಚಲನೆಯಿಂದ ಪ್ರಾರಂಭವಾಗಿ, ಅದರ ಕುರಿತಾಗಿಯೇ ಇದ್ದು, ಚಲನೆಯನ್ನು ನಡೆಸುವ ವ್ಯಾಪಾರವಾಗಿ ವೈದೀಕ ಋಷಿಗಳು ಚಿತ್ರಿಸಿಕೊಂಡಿದ್ದಾರೆ. ಈ ಚಲನೆಗೆ ನದಿಯೇ ಏಕೆ ಪ್ರತಿಮೆಯೆನ್ನುವುದನ್ನು ಹಿಂದಿನ ಭಾಗದಲ್ಲಿ ನೋಡಿದ್ದೇವೆ. ಹೀಗೆ ವಿಚಾರಶಕ್ತಿ ಎನ್ನುವುದನ್ನು ಚಲನೆಯ ಅವಿಭಾಜ್ಯ ಅಂಗವಾಗಿ ನೋಡಿದ ವಿಶಿಷ್ಟವಾದ ಸಂಸ್ಕೃತಿ ವೈದಿಕ ಪರಂಪರೆ.

ನೇರ, ತೇಜಸ್ವಿ, ಅನಂತವಾದ ಹರಿವು

೮ನೆಯ ಸಾಲಿನಲ್ಲಿ ಮತ್ತೆ ನದಿಯ ಭೌತಿಕ ಚಿತ್ರಣ ತಾತ್ವಿಕವಾಗಿ ಪ್ರಸ್ತುತಿಯಾಗಿದೆ. ಸರಸ್ವತೀ ದೇವಿಯನ್ನು ಅನಂತವಾಗಿಯೂ, ನೇರವಾದ ಚಲನೆಯುಳ್ಳವಳಾಗಿಯೂ, ಸಮುದ್ರಕ್ಕೆ ಸಮನಾಗಿಯೂ ಮತ್ತು ಅವಳ ಪ್ರವಾಹ ತೇಜಸ್ಸಿನಿಂದ ಕೂಡಿದ್ದಾಗಿಯೂ ವರ್ಣಿಸಲಾಗಿದೆ. ಮಿಶೆಲ್ ಧನಿನೋ-ರ ಪುಸ್ತಕವನ್ನು ಓದಿದರೆ ನದಿಯ ಹರಿವನ್ನು ಸಮುದ್ರಕ್ಕೇಕೆ ಹೋಲಿಸಲಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಸ್ಯಾಟಲ್ಲೈಟ್ ಮುಖಾಂತರ ದೊರೆತಿರುವ ನದಿಯ ಹರಿವಿನ ಭಾಗ (ಪ್ಯಾಲಿಯೋ ಚ್ಯಾನಲ್)-ನನ್ನ ಗಮನಿಸಿದರೆ ಅನೇಕ ಕಡೆಗಳಲ್ಲಿ ೩-೪ ಕ್ಮ ಅಗಲವಾದ ಹರಿವುಳ್ಳ ನದಿಯಾಗಿದ್ದಳು ಸರಸ್ವತಿ ಎನ್ನುವುದು ಸ್ಪಷ್ಟವಾಗುತ್ತದೆ. ಅದಲ್ಲದೆ ಕಚ್ ಪ್ರಾಂತ್ಯದಲ್ಲಿ ಸಮುದ್ರಕ್ಕೆ ಸೇರುವಾಗ ಸಮುದ್ರದಷ್ಟೇ ಅಗಲವಾದ ಪಾತ್ರವುಳ್ಳವಳಾಗುತ್ತಿದ್ದಳು. ಆದ್ದರಿಂದ ಅನಂತಳೂ ಹೌದು. ನೇರವಾದ ಚಲನೆಯೇನೆಂದರೆ ಅವಳ ಹರಿವಿಗೆ ಎಲ್ಲೂ ತಡೆಯಿಲ್ಲದಾಗಿದ್ದಳು. ಆದರೆ ಅವಳ ಅನಂತತೆಗೆ ಮತ್ತೊಂದು ಆಯಾಮವಿದೆ. ಅದು ವಿಶ್ವದಲ್ಲಿ ಚಲನೆ, ಗತಿಶೀಲತೆಯ ಅನಂತತೆಯನ್ನೂ, ಆ ಅನಂತತೆಯ ಸಾಕ್ಷಾತ್ಕಾರದ ಅವಶ್ಯಕತೆಯನ್ನು ಧ್ವನಿಸುತ್ತಿದೆ. ಹರಿವೆ ನದಿಯನ್ನು ಮೂಲಭೂತವಾಗಿ ಪ್ರತಿನಿಧಿಸುವ ಅಂಶ. ನೇರವಾಗಿ ಎಂದರೆ ಸರಿಯಾದ ದಾರಿಯಲ್ಲಿ, ವಕ್ರಗತಿಯಿಲ್ಲದೆ ಎಂದರೆ ಬದುಕನ್ನು ಕ್ಷಯಿಸುವಂತಹ ದಾರಿಯಲ್ಲಲ್ಲದೆ, ನಿರಂತರವಾಗಿ ಹರಿಯುವ ಜೀವನ ಧಾರೆಯನ್ನು ಸಾಧ್ಯವಾಗಿಸುವ ಚಲನೆಯನ್ನು ಸರಸ್ವತಿ ದೇವಿ ಪ್ರತಿನಿಧಿಸುತ್ತಿದ್ದಾಳೆ. ಹೀಗೆ ಸರಿಯಾದ ಚಲನೆಯನ್ನು ಸಾಕ್ಷಾತ್ಕರಿಸಿಕೊಳ್ಳಬೇಕಾದ ಅವಶ್ಯಕತೆಯನ್ನು ವೈದಿಕ ಋಷಿಗಳು ಮನಗಂಡಿದ್ದಾರೆ. ಗತಿಯೆನ್ನುವುದು ಜೀವನದ, ವಿಶ್ವದ ಅವಿಭಾಜ್ಯ ಅಂಗ. ಆದರೆ ಆ ಗತಿ ಧನಾತ್ಮಕವಾಗಿರಬೇಕಾದರೆ ಅದಕ್ಕೆ ತಪಸ್ಸಿನ ಅವಶ್ಯಕತೆಯಿದೆ. ಆ ತಪಸ್ಸಿಗೆ ಸರಸ್ವತೀ ದೇವಿ ಮಂತ್ರದೇವತೆಯಾಗಿದ್ದಾಳೆ. ಆ ಗತಿ ವಿಶಾಲವಾಗಿದ್ದು, ನೇರವಾಗಿ ತಡೆಯಿಲ್ಲದೆ ಸಾಗುತ್ತಾ, ತೇಜಸ್ಸಿನಿಂದ ಕೂಡಿರಬೇಕಿದ್ದರೆ, ಶಕ್ತಿಯುತವಾಗಿರಬೇಕಿದ್ದರೆ, ನಮ್ಮನ್ನು ಊರ್ಧ್ವಲೋಕಗಳಿಗೆ ಕೊಂಡೊಯ್ಯಬೇಕಿದ್ದರೆ ಸರಸ್ವತೀ ದೇವಿಯ ಕೃಪೆ ಅವಶ್ಯವಾಗಿದೆ.

ಸರಸ್ವತಿ ಋತಪೂರ್ಣಳು

೯-ತ್ತನೆಯ ಮಂತ್ರದ ಒಂದು ಪದವನ್ನು ಉಲ್ಲೇಖಿಸಿ ಈ ಲೇಖನವನ್ನು ಮುಗಿಸುತ್ತೇನೆ. ಮುಂದಿನ ಲೇಖನದಲ್ಲಿ ಈ ಸೂಕ್ತದ ಇತರ ಆಯಾಮಗಳನ್ನು ನೋಡೋಣ. ಈ ಮಂತ್ರದಲ್ಲಿ ಸರಸ್ವತಿಯನ್ನು ಋತಪೂರ್ಣಳು (‘ಋತಾವರೀ’) ಎಂದು ವರ್ಣಿಸಲಾಗಿದೆ. ಋತ ಎನ್ನುವುದು ಭಾರತೀಯ ಪರಂಪರೆಯಲ್ಲಿ ಮಹೋನ್ನತವಾದ – ಸ್ಥಿತಿ ಮತ್ತು ಧರ್ಮಕ್ಕೆ ಸಮಾನವಾದ ಘನತೆಯುಳ್ಳ – ಒಂದು ಪರಿಕಲ್ಪನೆ. ಋತವೆಂದರೆ ವಿಶ್ವನಿಯಾಮಕ ತತ್ವಗಳು. ಅಂದರೆ ಈ ವಿಶ್ವವನ್ನು ಒಂದು ಭವ್ಯವಾದ ಚಲನೆಯಲ್ಲಿ ಇಟ್ಟಿರತಕ್ಕ ಒಂದು ಮೂಲಭೂತವಾದ ವಸ್ತು. ಸದಾ ಸ್ಥಿತಿಯಲ್ಲಿರುವುದೇ ಪ್ರಪಂಚಕ್ಕಿರಬೇಕಾದ ಗುರಿ. ಆದರೆ ಸ್ಥಿತಿಯೆಂದರೆ ಗತಿಹೀನತೆಯಲ್ಲ. ಒಂದು ಸುಂದರವಾದ ಗತಿಯಲ್ಲಿರುವುದೇ ಸ್ಥಿತಿ. ಆ ಸುಂದರವಾದ ಗತಿಯನ್ನು ಸಾಧ್ಯವಾಗಿಸುವುದು ಋತ. ಹೀಗೆ ಗತಿಶೀಲತೆಯನ್ನೇ ವಿಶ್ವದ ಮೂಲಭೂತ ಗುಣವನ್ನಾಗಿ ಭಾರತೀಯ ಪರಂಪರೆ ಕಂಡಿತು. ಈ ಗತಿ ಹೆಚ್ಚಾದರೂ ತೊಂದರೆ, ಕಡಿಮೆಯಾದರೂ ತೊಂದರೆ. ಸರಸ್ವತೀ ದೇವಿ ಋತಪೂರ್ಣಳು ಎನ್ನುವುದರಲ್ಲಿ ನದಿಯ ಹರಿವು ವಿಶ್ವದ ಋತಕ್ಕೆ ಸಮನಾದುದು ಎನ್ನುವುದರ ಒಳನೋಟವಿದೆ.

ಹೀಗೆ ಸರಸ್ವತೀ ದೇವಿ ಋತವನ್ನು ಸಾಧ್ಯವಾಗಿಸುವ ಗತಿಶೀಲತೆಯ ದೇವತೆಯಾಗಿದ್ದಾಳೆ. ವೈದಿಕ ಋಷಿಗಳು ಭೌತಿಕವಾದ ವಸ್ತುಗಳ ಸೌಂದರ್ಯದಿಂದ ಪ್ರೇರಿತರಾದರು. ಆ ಸಹಜವಾದ ಸೌಂದರ್ಯದಿಂದಲೇ  ಪಾರಮಾರ್ಥಿಕ ವಿಚಾರಗಳಿಗೆ ಧ್ವನಿ ಕೊಟ್ಟರು. ಅದರ ಭೌತಿಕ ಉಪಯೋಗ, ಪ್ರಾಪಂಚಿಕ ಸೌಂದರ್ಯದಿಂದಲೇ ವಿಶ್ವದ ಮೂಲಭೂತವಾದ ತತ್ವವೊಂದನ್ನು ದರ್ಶಿಸಿಕೊಂಡರು. ಅನಂತವಾದ ಹರಿವುಳ್ಳ ಜೀವನಕ್ಕೆ ಬೇಕಾದ ದೃಷ್ಟಿಯನ್ನು ಸಾಧ್ಯವಾಗಿಸಿದರು.

ನದಿಯೆನ್ನುವುದು ಋಗ್ವೇದದಲ್ಲಿ ಮಹತ್ವವನ್ನು ಪಡೆದಿರುವುದು ಹೀಗೆ. ಮುಂದಿನ ಲೇಖನದಲ್ಲಿ ಈ ಗತಿಶೀಲತೆಯ ಇನ್ನಿತರ ಆಯಾಮಗಳನ್ನು ನೋಡೋಣ.

(Image credit: shwetankspad.com)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply