close logo

ಚೇತೋಹಾರಿ ಚೈತ್ರ

ಭಾರತದ ಕ್ರಿಸ್ತ ಪೂರ್ವದ ಇತಿಹಾಸವನ್ನು ಬ್ರಾಹ್ಮಣ ಕ್ಷತ್ರಿಯರ ಸಂಘರ್ಷದ ಇತಿಹಾಸ ಎಂದು ಅರ್ಥೈಸುವವರು ಇದ್ದಾರೆ. ಅವರು ಅದಕ್ಕೆ ಪೂರಕವಾಗಿ ಪರಶುರಾಮನ ಕಥಾನಕವನ್ನು ಗಮನಿಸುತ್ತಾರೆ. ಈ ಕಥಾನಕ ವಾಲ್ಮೀಕಿ ರಾಮಾಯಣದಲ್ಲಿ ಶ್ರೀರಾಮನಿಗೆ ಪರಶುರಾಮ ಎದುರಾಗುವ ಸಂದರ್ಭದಲ್ಲಿ ಪ್ರಸ್ತಾಪಿತವಾಗಿದೆ, ಪರಶುರಾಮ ರಾಮನಲ್ಲಿ ಲೀನವಾಗುವುದರೊಂದಿಗೆ ಅದು ಮುಕ್ತಾಯಗೊಳ್ಳುತ್ತದೆ. ಈ ಪ್ರಸಂಗವನ್ನು ಗಜಾನನ ಈಶ್ವರ ಹೆಗಡೆಯವರ “ರಸರಾಮಾಯಣ” ದ ಪದ್ಯವೊಂದು ಚೇತೋಹಾರಿಯಾಗಿ ಚಿತ್ರಿಸುತ್ತದೆ-

ಯುಗದೊಡೆಯ

ಕ್ಷೇತ್ರ ಕ್ಷತ್ರಿಯ ಬೀಜ ಬ್ರಾಹ್ಮಣ। ತಪಸಿ ಪಡೆದದ್ದು ಪರಶುಬಲ।
ಕೊಲೆ ಕಗ್ಗೊಲೆ ಕರಾಳಮುನಿಯಾದ॥

ಕಾಲವುರುಳಿತು ಶ್ರೀರಾಮ ಶಿವಧನುವನೆತ್ತಿ।
ಎತ್ತಾಡಿ ಮುರಿದು ಜಾಹ್ನವಿಮಾಲೆ ಮುಡಿದ।
ವೈಭವದ ದಿಬ್ಬಣಕೆ ಎದುರಾದ ಪರಶು।
ಹರಿ ಧನುವನಿತ್ತು ಮುರಿ ಎಂದ ಮದುಮಗನ॥

ಧನುವೆತ್ತಿ ಮುಗುಳ್ನಕ್ಕು ಹೂಡಿ ವೈಷ್ಣವ ಶರವ।
ಸಿಡಿಲಿನಬ್ಬರ ಮೊರೆದು ಮಸುಕಾಗಿ ನೆಲ ಗಗನ।
ಗುರಿ ಯಾವುದೆಂದು ಭಾರ್ಗವ ಮುನಿಯ ಬೆಸಗೆಯ್ಯೆ।
ಇರಲಿರಲಿ ನಿನಗೆ ಸಂತಸದಿಂದ।
ತನ್ನೆಲ್ಲ ತಪಧಾರೆ ಎರೆದಿತ್ತ ನಿರ್ಲಿಪ್ತ॥

ಪರಶು ಸೋಂಕಿತ್ತು ಪರುಷಮಣಿ ಜಯ ಶ್ರೀರಾಮ।
ಎಣೆಯಿಲ್ಲದಿಹ ಧೀರ ಧೀಮಂತ ಹೃದಯಸಖ।
ಎಂದೊಪ್ಪಿಯಪ್ಪಿ ಮಿಗೆ ತಪಕೆ ತೆರಳಿದ ಮುನಿಪ॥

ಹರಧನುವು ಮುರಿದಿತ್ತು ಹರಿಯ ಧನು ಮೆರೆದಿತ್ತು।
ಸಿರಿಯೊಡೆಯ ಶ್ರೀರಾಮ ಯುಗದೊಡೆಯನೆನಿಸಿದ್ದ।
ಎದೆಯ ಮೊಗ್ಗರಳಿ ಮಧು ದ್ರವಿಸಲಿ॥

ಪರಶುರಾಮನ ಕ್ಷೇತ್ರ ಕ್ಷತ್ರಿಯ, ಬೀಜ ಬ್ರಾಹ್ಮಣ. ಪರಶುರಾಮನ ತಂದೆ ಜಮದಗ್ನಿ ಬ್ರಾಹ್ಮಣ, ಮಹಾ ತಪಸ್ವಿ. ಆತ ಮದುವೆಯಾದದ್ದು ಕ್ಷತ್ರಿಯ ರಾಜಕುಮಾರಿ ರೇಣುಕೆಯನ್ನು. ಕ್ಷತ್ರಿಯ-ಬ್ರಾಹ್ಮಣ್ಯದ ಫಲ ಮಗ ಪರಶುರಾಮ. ತನ್ನ ತಂದೆ ಜಮದಗ್ನಿಗೆ ದೇವತೆಗಳು ನೀಡಿದ ದೇವಧನು ಸುರಭಿಯನ್ನು ರಾಜ ಕಾರ್ತವೀರ್ಯಾರ್ಜುನ ಬಲಾತ್ಕಾರವಾಗಿ ಸೆಳೆದೊಯ್ದು ತನ್ನ ತಂದೆಯನ್ನು ಅವಮಾನಿಸಿದ, ರಾಜ ತನ್ನ ಅಧಿಕಾರದ ದುರುಪಯೋಗ ಮಾಡಿಕೊಂಡ ಎಂದು ರಾಜನ ಮೇಲೆ ಪರಶುರಾಮ ಯುದ್ಧ ಮಾಡಿದ. ರಾಜನನ್ನು ಮತ್ತು ಅವನ ಪರವಾಗಿ ಬಂದ ಕ್ಷತ್ರಿಯರನ್ನೆಲ್ಲ ಕೊಂದುಹಾಕಿದ. ಧೇನುವನ್ನು ಆಶ್ರಮಕ್ಕೆ ಕರೆತಂದ. ಇದರ ಸೇಡು ತೀರಿಸಿಕೊಳ್ಳಲು ಕ್ಷತ್ರಿಯ ಸಮುದಾಯ ಕಾಯುತ್ತಿತ್ತು. ಪರಶುರಾಮ ಆಶ್ರಮದಲ್ಲಿ ಇಲ್ಲದಿದ್ದಾಗ ಬಂದು ಆತನ ತಂದೆಯನ್ನು ಕೊಂದುಹಾಕಿತು. ಇದರಿಂದ ರೊಚ್ಚಿಗೆದ್ದ ಪರಶುರಾಮ ಇಡೀ ಭೂಮಂಡಲವನ್ನು ಸುತ್ತಿ ತನಗೆ ಎದುರಾದ ಕ್ಷತ್ರಿಯ ವೀರರನ್ನೆಲ್ಲ ಸದೆಬಡಿದ.

ಮುನಿ ಪುತ್ರನಾಗಿ, ಮುನಿಯಾಗಿ ತಪಸ್ಸು ಮಾಡಿ ಪರಶುರಾಮ ಪಡೆದದ್ದು ವಿನಾಶಕಾರಿ ಶಸ್ತ್ರಾಸ್ತ್ರ ಬಲವನ್ನು, ಅವನು ಬಳಸಿದ ಹೊಸ ಶಸ್ತ್ರ ಪರಶು. ಅದಕ್ಕೆ ಅವನು ತನ್ನೆಲ್ಲ ಶಕ್ತಿ ಸಾಮರ್ಥ್ಯಗಳನ್ನೆಲ್ಲ ತುಂಬಿದ್ದ. ಒಬ್ಬ ರಾಜ, ಅವನ ಪರವಾಗಿದ್ದ ಒಂದು ಕ್ಷತ್ರಿಯಗುಂಪು ಅನ್ಯಾಯದ ನಡೆ ತೋರಿದುದಕ್ಕೆ ಪರಶುರಾಮ ಇಡೀ ಕ್ಷತ್ರಿಯ ಕುಲವನ್ನೇ ನಿರ್ನಾಮ ಮಾಡುವ ಛಲವನ್ನು ಸಾಧಿಸಿದ. ಕ್ಷತ್ರಿಯರ ಮಾರಣಹೋಮ ಮಾಡಿದ. ಅದರಿಂದ ಆದದ್ದು ಬರಿಯ ಕೊಲೆಯಲ್ಲ, ಕಗ್ಗೊಲೆ. ಅವನಲ್ಲಿ ಇಂಥ ಕ್ಷಾತ್ರ ತೇಜ ಇದ್ದರೂ ಅವನು ಮೂಲಭೂತವಾಗಿ ಋಷಿಕುಮಾರನೇ ಆಗಿದ್ದ. ಸಾಕಷ್ಟು ಪ್ರಮಾಣದಲ್ಲಿ ಕ್ಷತ್ರಿಯರ ಸಂಹಾರ ಮಾಡಿದ ಮೇಲೆ ಶಸ್ತ್ರ ಸನ್ಯಾಸ ಮಾಡಿ ತಪಸ್ಸಿನಲ್ಲಿಯೇ ನಿರತನಾಗಿದ್ದ. ಅವನಿಗೆ ಶ್ರೀರಾಮ ಹರನ ಧನುಸ್ಸಿಗೆ ಹೆದೆಯೇರಿಸಲು ಹೋಗಿ ಅದನ್ನೇ ಮುರಿದು ಹಾಕಿದ ವಿಷಯ ತಿಳಿಯುತ್ತದೆ.

ಇಂತಹ ಕ್ಷತ್ರಿಯ ಇನ್ನೇನು ಹಗರಣವನ್ನು ಮಾಡುತ್ತಾನೆಯೋ ಏನೋ, ಅವನನ್ನು ಈಗಲೇ ತಡೆಯಬೇಕು ಎನ್ನುವಂತೆ ವೀರಾವೇಶದಿಂದ ಮುನ್ನುಗ್ಗಿಬರುತ್ತಾನೆ. ಸೀತೆಯನ್ನು ಮದುವೆಯಾದ ನಂತರ ತಂದೆ ತಾಯಿಯರು, ತಮ್ಮಂದಿರು ಮತ್ತು ಅವರ ಹೆಂಡತಿ, ಸಕಲ ಪರಿವಾರದವರೊಂದಿಗೆ ವಿದೇಹದಿಂದ ಅಯೋಧ್ಯೆಗೆ ಹಿಂತಿರುಗುತ್ತಿದ್ದ ಶ್ರೀರಾಮನಿಗೆ ಎದುರಾಗುತ್ತಾನೆ. ತನ್ನಲ್ಲಿದ್ದ ವೈಷ್ಣವ ಧನುಸ್ಸನ್ನು ಹೆದೆಯೇರಿಸುವ ಪಂಥವನ್ನು ಶ್ರೀರಾಮನಿಗೆ ಒಡ್ಡುತ್ತಾನೆ. ಶ್ರೀರಾಮ ಸುಲಲಿತವಾಗಿ ಹೆದೆಯೇರಿಸಿ ಅದಕ್ಕೆ ಗುರಿ ಯಾವುದು ಎಂದು ಕೇಳುತ್ತಾನೆ. ಪರಶುರಾಮ ತಾನು ಸಂಪಾದಿಸಿದ ಪುಣ್ಯವನ್ನೇ ಧಾರೆಯೆರೆಯುತ್ತಾನೆ. ಹೊಸದಾಗಿ ತಪಸ್ಸು ಮಾಡಲು ಹೊರಟುಹೋಗುತ್ತಾನೆ.

ಪರಶುರಾಮನಿಗೆ ಸಂಬಂಧಿಸಿದ ಈ ಕಥಾನಕವನ್ನು ವ್ಯಾಖ್ಯಾನಿಸುವ “ಯುಗದೊಡೆಯ” ಪದ್ಯ “ಪರಶು ಸೋಂಕಿತ್ತು ಪರುಷಮಣಿ”; ಪರಶುರಾಮ ಶ್ರೀರಾಮನನ್ನು “ಎಣೆಯಿಲ್ಲದಿಹ ಧೀರ ಧೀಮಂತ ಹೃದಯ ಸಖ ಎಂದೊಪ್ಪಿಯಪ್ಪಿ”ದ; ಭೂಜಾತೆ ಸೀತೆಯನ್ನು ಮದುವೆಯಾದ ಶ್ರೀರಾಮ ಕೇವಲ ಸಿರಿಯೊಡೆಯನಾಗಿರದೆ “ಯುಗದೊಡೆಯನೆನಿಸಿದ” ಎನ್ನುತ್ತದೆ.

ಋಷಿಗೆ ಸಲ್ಲದ ಕೋಪ, ಛಲ, ದ್ವೇಷ, ಉದ್ವೇಗ, ಆವೇಷ, ರೋಷಗಳಿಗೆ ಒಳಗಾಗಿ ತನ್ನನ್ನು ಎದುರಿಸಿದ ಕ್ಷತ್ರಿಯರನ್ನೆಲ್ಲಾ ಹುಡುಕಿ ಹುಡುಕಿ ಎನ್ನುವ ಹಾಗೆ ಕೊಂದದ್ದು ಸರಿಯಲ್ಲ ಎಂದು ಪರಶುರಾಮ ಪ್ರಾಯಶ್ಚಿತ್ತದ ಯಜ್ಞ ಮಾಡಿ ತಾನು ಗೆದ್ದ ಭೂಮಿಯನ್ನೆಲ್ಲಾ ಕಶ್ಯಪ ಮುನಿಗೆ ದಕ್ಷಿಣೆಯಾಗಿ ಕೊಟ್ಟಿದ್ದ, ತಪಸ್ಸಿನಲ್ಲಿ ಮಗ್ನನಾಗಿದ್ದ. ಹಾಗಿದ್ದರೂ ಅಸಾಧ್ಯವಾದ ಸಾಹಸವನ್ನು ಒಬ್ಬ ಎಳೆವಯಸ್ಸಿನ ಯುವಕ ತೋರಿದ ಎಂಬುದು ಅವನಿಗೆ ಅವನ ಪ್ರಥಮ ಪ್ರಾಶಸ್ತ್ಯಕ್ಕೆ, ಅವನೊಬ್ಬನೇ ವೀರಾಧಿವೀರ ಎನ್ನುವ ಹೆಗ್ಗಳಿಕೆಗೆ ಭಂಗವುಂಟುಮಾಡಿದ ಹಾಗೆ ಕಾಣುತ್ತದೆ. ಅದನ್ನು ಸಹಿಸದೆ ತಾನು ಮಿಗಿಲು ಎನ್ನುವ ಅಹಂಕಾರವನ್ನು ಪ್ರದರ್ಶಿಸುತ್ತಿರುವನೋ ಎಂಬಂತೆ ಅವನು ಶ್ರೀರಾಮನಿದ್ದಲ್ಲಿಗೆ ಧಾವಿಸಿ ಬರುತ್ತಾನೆ. ಈ ಭಾವವನ್ನು ಪದ್ಯ ಕಪ್ಪು ಕಬ್ಬಿಣಕ್ಕೆ ಹೋಲಿಸಿದೆ.

ಶ್ರೀರಾಮ ಹರಧನುಸ್ಸನ್ನು ಹೆದೆಯೇರಿಸುವ ಪಂಥದ ಸಂದರ್ಭದಲ್ಲಿ ನಿರಾಳವಾಗಿದ್ದಂತೆ ಈಗ ಅತ್ಯಂತ ಪ್ರಬಲ ತಪಸ್ವಿ ಎದುರಾದಾಗಲೂ ನಿರಾಳವಾಗಿದ್ದ. ನಸುನಗುತ್ತಾ ಪರಶುರಾಮನ ವೈಷ್ಣವ ಧನುಸ್ಸನ್ನು ತೆಗೆದುಕೊಂಡು ನಿರಾಯಾಸವಾಗಿ ಹೆದೆಯೇರಿಸಿದ್ದ. ಪಂಥವನ್ನು ಗೆದ್ದಾಗಲೂ ಮಂದಹಾಸದಿಂದಲೇ ಬಾಣಕ್ಕೆ ಗುರಿ ಯಾವುದೆಂದು ಕೇಳಿದ. ಇದರಿಂದ ಪರಶುರಾಮನಿಗೆ ತನಗೆ ಅವಮಾನವಾಯಿತು ಎಂದುಕೊಳ್ಳಲು ಆಗಲೇ ಇಲ್ಲ. ಶ್ರೀರಾಮನ ಮೇಲಾಗಲೀ, ಅವನ ಜೊತೆಯಲ್ಲಿದ್ದವರ ಮೇಲಾಗಲೀ ಬೇರೆ ರೀತಿಯಲ್ಲಿಯೂ ಧಾಳಿ ಮಾಡಲು ಸಹ ಅವಕಾಶವೇ ದೊರೆಯಲಿಲ್ಲ. ಬದಲಿಗೆ ಪರಶುರಾಮ ಸ್ವ ಇಚ್ಛೆಯಿಂದ ಮತ್ತು ಸಂತೋಷದಿಂದ ತನ್ನ ಅಪಾರವಾದ ತಪಸ್ಸನ್ನೇ ಶ್ರೀರಾಮನ ಬಾಣಕ್ಕೆ ಗುರಿಯಾಗಿಸಿದ.  ಇದನ್ನೇ ಪದ್ಯ “ಪರಶು ಸೋಂಕಿತ್ತು ಪರುಷಮಣಿ” ಎನ್ನುತ್ತಿರುವುದು.

ಪದ್ಯ ಶ್ರೀರಾಮನನ್ನು ಕಬ್ಬಿಣವನ್ನು ಚಿನ್ನವಾಗಿಸುವ ಪರುಷಮಣಿಗೆ ಹೋಲಿಸಿದೆ. ಪರಶುರಾಮನದು ಕ್ಷಾತ್ರದ ತಪಸ್ಸು. ಅದನ್ನು ಸ್ವೀಕರಿಸಿದ ಶ್ರೀರಾಮ ಪರಶುರಾಮನನ್ನು ಕ್ಷಾತ್ರಮೂಲದ ಎಲ್ಲಾ ಕಶ್ಮಲಗಳಿಂದಲೂ ಮುಕ್ತ ಮಾಡಿದ. ಪರಶುರಾಮ ತನಗೆ ಎದುರಾದವರನ್ನೆಲ್ಲಾ ಸದೆಬಡಿಯುವ ಸಣ್ಣ ಮನಸ್ಸಿನವನಾದರೆ ನೆಲ ಮತ್ತು ಗಗನದ ನಡುವಿನ ಅಂತರವನ್ನು ಮಸುಕು ಮಾಡುವ ಶ್ರೀರಾಮ ಚಿನ್ನದಂತೆ ಪರಿಶುದ್ಧವಾಗಿಸುವ ಉದಾತ್ತ ವ್ಯಕ್ತಿತ್ವದವನು. ಹರಧನುಸ್ಸನ್ನು ಮುರಿದರೂ ಅವನು ಮುಡಿದದ್ದು ಜಾಹ್ನವಿ ಮಾಲೆ. ಜಾಹ್ನವಿ ಪಾಪಿಗಳನ್ನೂ ಉದ್ಧರಿಸುವ ಗಂಗೆಗೆ ಇರುವ ಒಂದು ಹೆಸರು. ಪರಶುರಾಮ ಮತ್ತು ಶ್ರೀರಾಮ ಇಬ್ಬರ ಸಂದರ್ಭದಲ್ಲೂ ಎದುರಾಳಿ ತನ್ನ ಮೊದಲಿನ ಗುಣಗಳನ್ನು ಕಳೆದುಕೊಳ್ಳುವ, ನಾಶವಾಗುವ ಕ್ರಿಯೆಯಿದೆ. ಆದರೆ ಪರಶುರಾಮನ ಸಂದರ್ಭದಲ್ಲಿ ನಾಶದ ಕ್ರಿಯೆ ಶುದ್ಧೀಕರಿಸುವುದಿಲ್ಲ; ಬದಲಿಗೆ ನಾಶದ ಕ್ರಿಯೆಯು ಸೇಡು, ದ್ವೇಷಗಳ ಭಾವವನ್ನು ಜಾಗೃತವಾಗಿಯೇ ಇರಿಸುತ್ತದೆ. ಶ್ರೀರಾಮನ ಸಂದರ್ಭದಲ್ಲಿ ನಾಶದ ಕ್ರಿಯೆ ಶುದ್ಧೀಕರಣ, ಎದುರಾಳಿಯನ್ನು ಒಳಗೊಳ್ಳುವ ಕ್ರಿಯೆ. ಶ್ರೀರಾಮನದು ಅಂತಹ ವ್ಯಕ್ತಿತ್ವ. ಅದರಿಂದ ಆಕರ್ಷಿತನಾದ ಪರಶುರಾಮ ಸಹಜವಾಗಿ ಶ್ರೀರಾಮನನ್ನು ಧೀಮಂತ ಹೃದಯಸಖ ಎಂದು ಒಪ್ಪಿಕೊಳ್ಳುತ್ತಾನೆ, ಅಪ್ಪಿಕೊಳ್ಳುತ್ತಾನೆ. ಇದೇ ಪರಶುರಾಮ ಚಿನ್ನವಾಗುವ ಪ್ರಕ್ರಿಯೆ, ಶ್ರೀರಾಮನದು ಚಿನ್ನವಾಗಿಸುವ ಪ್ರಕ್ರಿಯೆ. ಅದರ ಪ್ರತೀಕವೇ ಪರಶುರಾಮ ಶುದ್ಧ ಮನಸ್ಸಿನಿಂದ ತಪಸ್ಸು ಮಾಡಲು ಹೊರಟದ್ದು.

ಪದ್ಯ “ಹರಧನುವು ಮುರಿದಿತ್ತು ಹರಿಯ ಧನು ಮೆರೆದಿತ್ತು” ಎನ್ನುತ್ತಿದೆ. ಹರ ಲಯ ತತ್ತ್ವ. ಶ್ರೀರಾಮ ಹರನನ್ನು ತನ್ನಲ್ಲಿ ಆವಾಹಿಸಿಕೊಳ್ಳುವುದು ಹರನ ಬಿಲ್ಲನ್ನು ಮುರಿಯುವ ಒಂದು ಲಯ ಕಾರ್ಯದಿಂದಲೇ. ಆದರೆ ಅದರ ಅಂತ್ಯದಲ್ಲಿ ಶ್ರೀರಾಮ ಸೀತೆಯನ್ನು ವಿವಾಹವಾಗುತ್ತಾನೆ. ಅವನು ಕೇವಲ ಲಯ-ಕಾರ್ಯಕ್ಕಾಗಿ ಬಂದವನಲ್ಲ. ಇರುವ ಸುಸ್ಥಿತಿಯನ್ನು ಸಂರಕ್ಷಿಸುವುದಕ್ಕಾಗಿಯೂ ಅವನ ಜನನವಾಗಿದೆ. ಅದರ ಸೂಚನೆಯಾಗಿ ರಾಮಾಯಣದಲ್ಲಿ ಪರಶುರಾಮ ಅವನಿಗೆ ಮುಖಾಮುಖಿಯಾಗುವ ಪ್ರಸಂಗದ ಚಿತ್ರವಿದೆ.  ಶ್ರೀರಾಮ ಪರಶುರಾಮ ಕೊಟ್ಟ ವೈಷ್ಣವ ಧನುಸ್ಸನ್ನು ಹೆದೆಯೇರಿಸಿದ ಮೇಲೆ ಅದನ್ನು ಪರಶುರಾಮನ ಕ್ಷಾತ್ರ ಮೂಲದ ತಪಸ್ಸಿನ ಮೇಲೆ ಹೂಡಿ ಅದನ್ನು ಆಹುತಿ ತೆಗೆದುಕೊಳ್ಳುತ್ತಾನೆ. ಪರಶುರಾಮ ನಿರಾಳವಾಗಿ, ನಿರ್ಲಿಪ್ತನಾಗಿ ತಪಸ್ಸು ಮಾಡಲು ಹೊರಟುಹೋಗುತ್ತಾನೆ. ಇದೇ “ಹರಧನುವು ಮುರಿದಿತ್ತು, ಹರಿಧನುವು ಮೆರೆದಿತ್ತು” ಎನ್ನುವುದರ ಅರ್ಥ.

ಇಂತಹುದು ಈ ಹಿಂದೆ ಘಟಿಸಿದದ್ದಲ್ಲ. ಇದರಿಂದ ಹೊಸ ಯುಗ ಆರಂಭವಾದದ್ದು ಕಾಣುತ್ತದೆ. ಅದರ ಮುಂಚೂಣಿಯಲ್ಲಿ ಶ್ರೀರಾಮನಿದ್ದು ಸಹಜವಾಗಿ ಅವನು ಯುಗದೊಡೆಯ, ಯುಗವನ್ನು ಮುನ್ನಡೆಸುವ ನೇತಾರ. ಬೃಹದಾರಣ್ಯಕ ಉಪನಿಷತ್ತಿನಲ್ಲಿ ಮಧುಬ್ರಹ್ಮ ಎನ್ನುವ ಪರಿಕಲ್ಪನೆ ಇದೆ. ಉಪನಿಷತ್ತು ಅದನ್ನು ಎಲ್ಲವನ್ನೂ ಪರಸ್ಪರ ಒಳಗೊಳ್ಳುತ್ತಾ ಹೋಗುವುದು ಎಂದು ಅರ್ಥೈಸುತ್ತದೆ. ವಿಷ್ಣು ಎಂಬುದಕ್ಕೂ ಇದೇ ರೀತಿಯ ಅರ್ಥವಿದೆ. ಪದ್ಯದ ಕೊನೆಯಲ್ಲಿರುವ “ಎದೆಯ ಮೊಗ್ಗರಳಿ ಮಧು ದ್ರವಿಸಲಿ” ಎನ್ನುವುದರ ಆಶಯವೂ ಇದೇ.

ಪರಶುರಾಮನಿಗೆ ಮುಖಾಮುಖಿಯಾದಾಗ ತನ್ನ ತ್ರೇತಾಯುಗಕ್ಕೊಂದು ಹೊಸ ಭಾಷ್ಯೆ ಬರೆಯುವ ಯುಗದೊಡೆಯನಾಗಿ ಕಾಣಿಸಿಕೊಂಡ ಶ್ರೀರಾಮ ಒಬ್ಬ ವ್ಯಕ್ತಿಯಾಗಿ ಎಂತಹ ಘನ ವ್ಯಕ್ತಿತ್ವವನ್ನು ಹೊಂದಿದ್ದ ಎಂಬುದನ್ನು ಚಿತ್ರಿಸುವ “ಯುಗದೊಡೆಯ” ಪದ್ಯ ಶ್ರೀರಾಮನನ್ನು ಭಗವಂತನ ಅವತಾರವೆಂದು ಪರಿಗಣಿಸದಿದ್ದರೂ ಅವನು ಮರ್ಯಾದಾ ಪುರುಷೋತ್ತಮನೇ ಎಂದು ಹೇಳುತ್ತಿದೆ; ಜೊತೆಗೆ ಶ್ರೀರಾಮನ ಮಂದಿರ ಭವ್ಯವಾದ ಆದರ್ಶದ ಮೂರ್ತರೂಪ ಎನ್ನುವುದನ್ನು ಸೂಚಿಸುತ್ತಿದೆ; ಮತ್ತು ಶ್ರೀರಾಮ ಮಂದಿರದ ನಿರ್ಮಾಣದ ಸೂಕ್ತತೆಯನ್ನೂ, ಪ್ರಸ್ತುತತೆಯನ್ನೂ ಸಮರ್ಥಿಸುತ್ತಿದೆ.

ಆಧಾರ- ವಾಲ್ಮೀಕಿ ರಾಮಾಯಣದ ಬಾಲಕಾಂಡದ 74, 75, 76ನೇ ಸರ್ಗಗಳ ಶ್ಲೋಕಗಳು

74ನೇ ಸರ್ಗ: “ಕಂಪಯನ್ ಮೇದಿನೀಂ ಸರ್ವಂ ಪಾತಯಂ ಶ್ಚ ಮಹಾನ್ ದ್ರುಮಾನ್॥ 1-74-12 ತಮಸಾ ಸಂವೃತಃ ಸೂರ್ಯಃ ಸರ್ವೇ ನ ಪ್ರಬಭುರ್ದಿಶಃ। ಭಸ್ಮನಾ ಚ ಆವೃತಂ ಸರ್ವಂ ಸಮ್ಮೂಢಂ ಇವ ತದ್ಬಲಮ್”॥ 1-74-14॥ ಭೂಮಿಯನ್ನೇ ನಡುಗಿಸುವಂತಹ, ಬಲವಾದ ಮರಗಳನ್ನೇ ಉರುಳಿಸುವಂತಹ ಸುಂಟರಗಾಳಿ ಎದ್ದಿತು. ಸೂರ್ಯನನ್ನು ತಮಸ್ಸು ಆವರಿಸಿತು. ಎಲ್ಲವೂ ಬೂದಿಯೇ ಆಗಿಬಿಟ್ಟಂತಾಯಿತು. “ದದರ್ಶ ಭೀಮ ಸಂಕಾಶಂ ಜಟಾ ಮಂಡಲ ಧಾರಿಣಂ। ಭಾರ್ಗವಂ ಜಾಮದಗ್ನ್ಯಂ ತಂ ರಾಜಾ ರಾಜ ವಿಮರ್ದಿನಮ್॥ 1-74-15॥ (ಆ ಘೋರ ಕತ್ತಲೆಯ ನಡುವೆ) ರಾಜಾಧಿರಾಜರನ್ನು ಮರ್ದಿಸಿದ ಜಮದಗ್ನಿಯ ಮಗ ಜಟಾಮಂಡಲಧಾರಿ ಭಾರ್ಗವನು ಭಯಂಕರವಾಗಿ ಕಾಣಿಸಿಕೊಂಡನು. “ಕೈಲಾಸಮಿವ ದುರ್ಧರ್ಶಂ ಕಾಲಾಗ್ನಿಮಿವ ದುಸ್ಸಹಂ। ಜ್ವಲಂತಮಿವ ತೇಜೋಭಿರ್ದುರ್ನಿರೀಕ್ಷ್ಯಂ ಪೃಥಕ್ ಜನೈಃ”॥ 1-74-16॥ ಕಣ್ಣು ಹಾಯಿಸಲೂ ಸಾಧ್ಯವಾಗದ ದುರ್ದರ್ಶ ಕೈಲಾಸದಂತೆ, ದುಶ್ಶಹವಾದ ಕಾಲಾಗ್ನಿಯಂತೆ, ನೋಡಲು ಅಶಕ್ಯವಾದ ತೇಜಸ್ಸಿನಿಂದ ಪ್ರಜ್ವಲಿಸುತ್ತ, ಇದ್ದನು. “ಸ್ಕಂಧೇ ಚಾಸಾದ್ಯ ಪರಶುಂ ಧನುರ್ವಿದ್ಯುದ್ಗಣೋಪಮಮ್। ಪ್ರಗೃಹ್ಯ ಶರಮುಖ್ಯಂ ಚ ತ್ರಿಪುರಘ್ನಂ ಯಥಾ ಶಿವಮ್”॥ 1-74-17॥ “ತಂ ದೃಷ್ಟ್ವಾ ಭೀಮಸಂಕಾಶಂ ಜ್ವಲಂತಮಿವ ಪಾವಕಮ್॥1-74-॥8॥ ಹೆಗಲಿನ ಮೇಲೆ ಸಜ್ಜುಗೊಂಡಿದ್ದ ಕೊಡಲಿಯನ್ನೂ, ವಿದ್ಯುತ್ತಿನಂತೆ ಪ್ರಕಾಶಿಸುತ್ತಿರುವ ಧನುಸ್ಸನ್ನೂ, ಉಗ್ರವಾದ ಬಾಣವನ್ನೂ ಹೊಂದಿದ್ದ, ತೇಜೋಗ್ನಿಯಂತೆ ಉರಿಯುತ್ತಿರುವ, ತ್ರಿಪುರವನ್ನು ನಾಶ ಮಾಡಿದ ಶಿವನಂತಿದ್ದ ಭಾರ್ಗವನು ಹೇಳಿದನು:

75ನೇ ಸರ್ಗ: “ರಾಮ ದಾಶರಥೇ ವೀರ ವೀರ್ಯಂ ತೇ ಶ್ರೂಯತೇ ಅದ್ಭುತಂ।” 1-75-1। ರಾಮ ನಿನ್ನ ಅದ್ಭುತವಾದ ವೀರ್ಯ ಶೌರ್ಯದ ಬಗ್ಗೆ ಕೇಳಿದೆ. “ತತ್ ಅದ್ಭುತಂ ಅಚಿಂತ್ಯಂ ಚ ಭೇದನಂ ಧನುಷಸ್ತ್ವಯಾ। ತತ್ ಶ್ರುತ್ವಾಹಮನುಪ್ರಾಪ್ತೋ ಧನುರ್ ಗೃಹ್ಯ ಅಪರಂ ಶುಭಂ”॥1-75-2॥ ಹರ ಧನುಸ್ಸಿನ ಭೇದನವೂ ಅದ್ಭುತವಾದದ್ದು, ಅಚಿಂತ್ಯವಾದದ್ದು. ಅದನ್ನು ಕೇಳಿ ಇನ್ನೊಂದು ಶ್ರೇಷ್ಠವಾದ ಧನುಸ್ಸನ್ನು ತಂದಿದ್ದೇನೆ. “ತದಹಂ ತೇ ಬಲಂ ದೃಷ್ಟ್ವಾ ಧನುಷೋऽಸ್ಯ ಪ್ರಪೂರಣೇ। ದ್ವಂದ್ವ ಯುದ್ಧಂ ಪ್ರದಾಸ್ಯಾಮಿ ವೀರ್ಯಶ್ಲಾಘ್ಯಮಹಂ ತವ॥1-75-4॥ ಈ ಬಿಲ್ಲಿಗೆ ಹೆದೆಯೇರಿಸುವ ನಿನ್ನ ಬಲವನ್ನು ನೋಡಿ ಶ್ಲಾಘ್ಯಾರ್ಹನೆಂದು ನಿನಗೆ ನನ್ನೊಂದಿಗೆ ದ್ವಂದ್ವ ಯುದ್ಧದ ಅವಕಾಶ ಕೊಡುತ್ತೇನೆ. “ತದಾ ತು ಜೃಂಭಿತಂ ಶೈವಂ ಧನುರ್ಭೀಮಪರಾಕ್ರಮಮ್। ಹುಂಕಾರೇಣ ಮಹಾದೇವಃ ಸ್ತಂಭಿತೋ ಅಥ ತ್ರಿಲೋಚನಃ”॥ 1-75-17॥ (ಒಮ್ಮೆ ವಿಷ್ಣುವಿಗೂ ಹರನಿಗೂ ಭಯಂಕರ ಯುದ್ಧ ನಡೆಯಿತು ಆಗ) ವಿಷ್ಣುವಿನ ಹುಂಕಾರದಿಂದ ತ್ರಿಲೋಚನನಾದ ಮಹಾದೇವ ಮತ್ತು ಹರಧನುಸ್ಸು ಎರಡೂ ಸ್ತಂಭಿತಗೊಂಡವು. (ಅಂತಹ ಧನುವನ್ನು ನೀನು ತುಂಡರಿಸಿದ್ದೀಯ). “ತದಿದಂ ವೈಷ್ಣವಂ ರಾಮ ಪಿತೃ ಪೈತಾಮಹಂ ಮಹತ್”। ಕ್ಷತ್ರ ಧರ್ಮಂ ಪುರಸ್ಕೃತ್ಯ ಗೃಹ್ಣೀಶ್ವ ಧನುರುತ್ತಮಮ್”॥ 1-75-28॥ ಪಿತೃ ಪೈತಾಮಹರಿಂದ ನನಗೆ ದೊರೆತಿರುವ ಈ ವೈಷ್ಣವ ಧನುಸ್ಸು (ಶಿವನನ್ನು ಮತ್ತು ಅವನ ಧನುಸ್ಸನ್ನು ಸ್ತಂಭಿತಗೊಳಿಸಿದ) ವಿಷ್ಣುವಿನದು. ಕ್ಷತ್ರಧರ್ಮವನ್ನು ಪುರಸ್ಕರಿಸಿ ಇದಕ್ಕೆ ಹೆದೆಯೇರಿಸು (ನೋಡೋಣ).

76ನೇ ಸರ್ಗ: ಶ್ರುತವಾನಸ್ಮಿ ಯತ್ಕರ್ಮ ಕೃತವಾನಸಿ ಭಾರ್ಗವ। ಅನುರುನ್ಧ್ಯಾಮಹೇ ಬ್ರಹ್ಮನ್ಪಿತುರಾನೃಣ್ಯಮಾಸ್ಥಿತಃ॥ 1-76-2॥ ತಂದೆಯ ಋಣವನ್ನು ಸಂದಾಯಮಾಡಲು ನೀನು ಮಾಡಿದ ಹೋರಾಟವನ್ನೆಲ್ಲಾ ಮೆಚ್ಚಿಕೊಳ್ಳುತ್ತೇನೆ. “ವೀರ್ಯಹೀನಮಿವಾಶಕ್ತಂ ಕ್ಷತ್ರಧರ್ಮೇಣ ಭಾರ್ಗವ। ಅವಜಾನಾಸಿ ಮೇ ತೇಜಃ ಪಶ್ಯ ಮೇऽದ್ಯ ಪರಾಕ್ರಮಮ್॥ 1-76-3॥ (ಆದರೆ ನಾನು) ವೀರ್ಯಹೀನ, ಕ್ಷತ್ರಧರ್ಮಪಾಲಿಸಲು ಅಶಕ್ತ ಎನ್ನುವುದು ನನ್ನನ್ನು ಕೀಳಾಗಿ ನೋಡಿದಂತೆ. ನನ್ನ ತೇಜವನ್ನೂ ಪರಾಕ್ರಮವನ್ನೂ ನೋಡು. “ನ ಹಿ ಅಯಂ ವೈಷ್ಣವೋ ದಿವ್ಯಃ ಶರಃ ಪರಪುರಂಜಯಃ। ಮೋಘಃ ಪತತಿ ವೀರ್ಯೇಣ ಬಲ ದರ್ಪ ವಿನಾಶನಃ”॥ 1-76-8॥। ವೀರ್ಯ ಶೌರ್ಯಗಳಿಂದ ಪುರಗಳನ್ನು ಜಯಿಸಿದ, ಬಲ ದರ್ಪಗಳನ್ನು ಮರ್ದಿಸಿದ ಈ ದಿವ್ಯವಾದ ವೈಷ್ಣವ ಶರವನ್ನು ವ್ಯರ್ಥವಾಗಿಸಲಾಗದು. (ಇದಕ್ಕೆ ಗುರಿ ಯಾವುದು? ನಿನ್ನ ಮನೋವೇಗದ ಚಲನ ಗತಿಯೋ ಅಥವಾ ನಿನಗೆ ಅಪ್ರತಿಮವಾದ ಲೋಕಗಳನ್ನು ದೊರಕಿಸಿಕೊಡುವ ನಿನ್ನ ಅಪಾರವಾದ ತಪೋಬಲವೋ?) “ಜಡೀಕೃತೇ ತದಾ ಲೋಕೇ ರಾಮೇ ವರಧನುರ್ಧರೇ। ನಿರ್ವೀರ್ಯೋ ಜಾಮದಗ್ನ್ಯೋऽಥ ರಾಮೋ ರಾಮಮುದೈಕ್ಷತ”॥ 1-76-11॥ ಪರಶುರಾಮನು ಆಗ ವರಧನುರ್ಧಾರಿಯಾದ ರಾಮನನ್ನು ದಿಟ್ಟಿಸಿ ನೋಡಿದನು; ನಿರ್ವೀರ್ಯನೂ ಜಡೀಕೃತನೂ ಆದನು. “ಲೋಕಾಃ ತು ಅಪ್ರತಿಮಾ ರಾಮ ನಿರ್ಜಿತಾಸ್ತಪಸಾ ಮಯಾ। ಜಹಿ ತಾನ್ ಶರ ಮುಖ್ಯೇನ ಮಾ ಭೂತ್ಕಾಲಸ್ಯ ಪರ್ಯಯಃ”॥ 1-76-16॥ ತಪೋಬಲದಿಂದ ಸಂಪಾದಿಸಿದ ನನ್ನ ಎಲ್ಲಾ ಅಪ್ರತಿಮ ಲೋಕಗಳನ್ನು ಗುರಿಯಿಟ್ಟ ಮೇಲೆ ಹಿಂತೆಗೆದುಕೊಳ್ಳಲಾಗದ ಈ ಶರದಿಂದ ನಾಶಮಾಡಿಬಿಡು. “ನ ಚೇಯಂ ಮಮ ಕಾಕುತ್ಸ್ಥ ವ್ರೀಡಾ ಭವಿತುಮರ್ಹತಿ। ತ್ವಯಾ ತ್ರೈಲೋಕ್ಯನಾಥೇನ ಯದಹಂ ವಿಮುಖೀ ಕೃತಃ”॥ 1-76-19॥ ತ್ರಿಲೋಕನಾಥನಾದ ನಿನ್ನಿಂದ ನನ್ನ ಮುಖ ಕೆಳಗಾಗುವುದು ನನಗೆ ಅವಮಾನವಲ್ಲ. “ಶರಮಪ್ರತಿಮಂ ರಾಮ ಮೋಕ್ತುಮರ್ಹಸಿ ಸುವ್ರತ॥ 1-76-20॥ ಅಪ್ರತಿಮವಾದ ಬಾಣವನ್ನು (ನನ್ನ ತಪೋಬಲದ ಮೇಲೆ ಹೂಡುವುದು) ಸೂಕ್ತವಾದದ್ದು. “ತತೋ ವಿತಿಮಿರಾಃ ಸರ್ವಾ ದಿಶಶ್ಷೋಪದಿಶಸ್ತಥಾ”॥ 1-76-23॥ (ರಾಮ ಬಾಣವನ್ನು ಬಿಟ್ಟೊಡನೆಯೇ ಪರಶುರಾಮನ ತಪೋಬಲವು ವಿಸ್ಫೋಟಗೊಂಡಿತು.) ಅದರೊಂದಿಗೆ ಎಲ್ಲಾ ದಿಕ್ಕುಗಳಲ್ಲಿ ಆವರಿಸಿದ್ದ ಕತ್ತಲೂ ಕರಗಿಹೋಯಿತು. ರಾಮನಿಗೆ ಪ್ರದಕ್ಷಿಣೆ ಹಾಕಿ ಪರಶುರಾಮ ತಪಸ್ಸು ಮಾಡಲು ಹೊರಟುಹೋದ.॥ 1-76-24॥

(Image credit: Wikimedia Commons)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply