close logo

ಮಂದಾನಿಲ ಗಂಧವಿದನು ತಂದಿಹೆ ನೀನೆಲ್ಲಿಂದ

ಸ್ವಾತಂತ್ರ್ಯ ಪೂರ್ವದಲ್ಲಿ ಜನಿಸಿ ಎರಡು ದಶಕಗಳ ಹಿಂದೆ (13-10-1998) ನಮ್ಮನ್ನು ಅಗಲಿದ ಪು.ತಿ.ನ. ಭಾರತೀಯ ಸಂಸ್ಕೃತಿಯನ್ನು ವಿಶಿಷ್ಟ ರೀತಿಯಲ್ಲಿ ಎತ್ತಿ ಹಿಡಿಯುವ ಕವಿ. ಭಾರತೀಯ ಸಂಸ್ಕೃತಿ ಮೃದು ಮಧುರವಾದದ್ದು. ಅದು ಆರ್ದ್ರ ಮನಸ್ಸುಳ್ಳದ್ದು. ಅದರ ಸಾಂಸ್ಕೃತಿಕ ಮಾಧುರ್ಯವನ್ನು ಬಿಂಬಿಸುವ ಪು.ತಿ.ನ.ರವರ ಒಂದು ಕವನ “ಮಂದಾನಿಲ ಗಂಧವಿದನು ತಂದಿಹೆ ನೀನೆಲ್ಲಿಂದ”. ನಾರಾಯಣೋಪನಿಷತ್ತು, ಸೌಭಾಗ್ಯಲಕ್ಷ್ಮಿ ಉಪನಿಷತ್ತುಗಳ ಹಿನ್ನೆಲೆಯಲ್ಲಿ ಪು.ತಿ.ನ. ಕಂಡ ಚೈತ್ರದ ಸೊಗಸು “ಮಂದಾನಿಲ ಗಂಧವಿದನು ತಂದಿಹೆ ನೀನೆಲ್ಲಿಂದ” :-

“ಮಂದಾನಿಲ ಗಂಧವಿದನು। ತಂದಿಹೆ ನೀನೆಲ್ಲಿಂದ। ಇಂದೀವರ ಬಂಧು ವದನೆಯ। ಸಂದೇಶವ ತಳೆದಂತಿಹ॥

ಮಾಗಿಯ ಗವಿಯೊಳು ಹೊಗಿಸಿ। ಕೋಗಿಲೆ ಸರ ಬಿಡಿಸಿ। ಬಾಗುಳ ಕಳೆದಡವಿಗೆ ಕಮ್ಮಲರ್ಗಳ ಕವಿಸಿ। ನೀಗುತ ನಿನ್ನಾ ಬಿರುಸನು।

ಸಾಗುತ ಮೆಲುನಡೆಗಲಿತು ವಿ। ಯೋಗಿಗೆ ಒಲುಮೆಯ ಸೊಗಡಿದ ಹರಿಸುತಿರುವ ಉಸಿರ ಗೆಳೆಯ॥

ಬರಿಗಂಪಲ್ಲಿದು ಆಕೆಯೆ। ಪರಿಮಳದೀ ರೂವಾನುತ। ಸರಿದೆನ್ನೆದೆಯಪ್ಪಿಹಳೈ। ಸವಿಗಳ ಮರುಕೊಳಿಸಿ। ಮರು ಅಪ್ಪುಗೆ ಸಲ್ಲಿಪ ತೆರ।

ಸುರಭಿಯಗೈದೆನ್ನನು ನೀ। ಹರಿಯಿಸು ಆಕೆಯ ಬಳಿಗೆಯೆ। ಕರುಣ ಸಿ ತೆಂಕಣ ಗಾಳಿಯೆ।”

ಮಂದವಾಗಿ ಗಾಳಿ ಬೀಸುತ್ತಿದೆ. ಅದು ಗಂಧವನ್ನು ತನ್ನೊಂದಿಗೆ ತಂದಿದೆ. ಆ ಗಂಧ ಇಂದೀವರ ಬಂಧು ವದನೆಯ ಸಂದೇಶದ ಸಾಕಾರದಂತೆ ಇದೆ. ಆ ಗಂಧದ ಮೂಲಸ್ಥಾನ ಯಾವುದು? ಮಂದಾನಿಲ ಆ ಗಂಧವನ್ನು ಎಲ್ಲಿಂದ ತಂದಿದೆ? ಎಂಬುದು ಕವಿ ಪುತಿನರವರ ಪ್ರಶ್ನೆ. ಅದಕ್ಕೆ ಉತ್ತರ ಎಂಬಂತೆ ಮಂದಾನಿಲದ ಸ್ವರೂಪವನ್ನು ಕವಿ ವರ್ಣಿಸುತ್ತಾರೆ. ಅದು ಮಾಗಿಯ ಎಲ್ಲಾ ಗುಣಗಳನ್ನೂ, ಸಾಧ್ಯತೆಗಳನ್ನೂ ಗವಿಯೊಳಗೆ ಬಚ್ಚಿಟ್ಟುಬಿಟ್ಟಿದೆ. ಅದುವರೆಗೂ ಸುಮ್ಮನಿದ್ದ ಕೋಗಿಲೆಯ ಸ್ವರವನ್ನು ಅದರ ಕಂಠದಿಂದ ಹೊರಹಾಕಿ ವಾತಾವರಣವನ್ನು ಸುಮಧುರ ನಾದಮಯವನ್ನಾಗಿಸಿದೆ. ಬಾಗುಳವನ್ನು ಅಂದರೆ ಮನಸ್ಸಿನ ಗೊಂದಲ, ಕಳವಳ, ಚಿಂತೆಗಳನ್ನೆಲ್ಲಾ ಕಳೆದಿದೆ. ಬಿರುಸಾದ ಮತ್ತು ತೀವ್ರವಾದ ಅಪೇಕ್ಷೆಯನ್ನೂ, ಉತ್ಕಟವಾದ ಬಯಕೆಗಳನ್ನೂ ಬದಿಗೆ ಸರಿಸಿದೆ. ಇಡೀ ಅಡವಿಯನ್ನು ಅರಳಿದ ಹೂಗಳ ಪರಿಮಳದಿಂದ ಆಚ್ಛಾದಿಸಿರುವ ಗಂಧ-ಮಂದಾನಿಲ ವಿಯೋಗಿಗಳಿಗೆ ಮಾತ್ರವಲ್ಲ ಯೋಗಿಗಳ ಹೃದಯಕ್ಕೂ ಒಲುಮೆಯ ಸೊಗಡನ್ನು ಧಾರೆಯೆರೆಯುತ್ತಿದೆ. ಇಂಥ ಮಂದಾನಿಲವು ಸಹಜವಾಗಿ ಉಸಿರಿನ ಗೆಳೆಯ(ಪ್ರಾಣ ಸಖ), ಜೀವದಾಯಿ, ಚೈತನ್ಯದಾಯಿ. ಇದು ಕವನದ ಮೊದಲನೆಯ ಚರಣ.

ಮಂದಾನಿಲ ತಂದಿರುವ ಗಂಧ ಬರಿಯ ಗಂಧ ಅಲ್ಲ. ಅದು ಇಂದೀರವ ಬಂಧುವದನೆಯ ಸಂದೇಶದ ರೂಪವನ್ನು ತಳೆದ(ಹೊಂದಿದ) ಗಂಧ. ಇಂದೀರವ ಎಂದರೆ ಕಮಲ ಪುಷ್ಪ. ಅದಕ್ಕೆ ಬಂಧು ಸೂರ್ಯನೇ. ಕಮಲ ಅರಳುವುದು ಸೂರ್ಯೋದಯವಾದರೆ ಮಾತ್ರ. ಸೂರ್ಯ ಪರಮಜ್ಞಾನಕ್ಕೆ ಒಂದು ಸಂಕೇತ. ಪರಮಜ್ಞಾನದ ವದನೆ ಎಂದರೆ ಪರದೈವವೂ, ಸಚ್ಚಿದಾನಂದ ಸ್ವರೂಪಿಯೂ ಆದ ವಿಷ್ಣುವಿನ ಪರಾಶಕ್ತಿಯಾದ ಲಕ್ಷ್ಮಿಯೇ. ಮಂದಾನಿಲ ಸುಮ್ಮನೆ ಬಂದಿಲ್ಲ. ಲಕ್ಷ್ಮಿಯ ಸಂದೇಶವನ್ನು ಹೊತ್ತು ತಂದಿದೆ. ಈ ಮಂದಾನಿಲ ತನ್ನೊಂದಿಗೆ ತಂದಿರುವ ಗಂಧ-ಸಂದೇಶ ಇಂದೀವರಬಂಧು ವದನೆಯ ಪರಿಮಳಭರಿತ ಸಾಕಾರ ರೂಪ. ಇದು ಕವನದ ಪಲ್ಲವಿ ಮತ್ತು ಮೊದಲನೆಯ ಚರಣದ ಸೂಚಕತೆ.

ಭೂಮಿಯನ್ನು ಸ್ತ್ರೀವಾಚಕವಾಗಿ, ಸೂರ್ಯನನ್ನು ಪುರುಷವಾಚಕವಾಗಿ ಪರಿಗಣಿಸುತ್ತೇವೆ. ಸೂರ್ಯ ಆಕಾಶದಲ್ಲಿರುವವನಾಗಿ ಸೂರ್ಯನಿಗೆ ಅಭಿಮುಖಿಯಾಗಿರುವವಳು ಭೂಮಿಯೇ. ಈ ಅರ್ಥದಲ್ಲಿ ಭೂಮಿ ಇಂದೀವರ ಬಂಧುವದನೆ. ಆಕೆಯ ಸ್ಪರ್ಶದಿಂದ ಹಿಂದೆ ಅನುಭವಿಸಿದ ಸವಿಗಳು ಮರುಕಳಿಸಿವೆ ಎನ್ನುತ್ತಿದ್ದಾರೆ ಕವಿ. ಇದರ ಸೂಚಿತ ಅರ್ಥ ಭೂಮಿ ಅಂದರೆ ಪ್ರಪಂಚ; ಇಲ್ಲಿಯ ಅನುಭವಗಳು ವ್ಯಕ್ತಿಯ ಮೂಲಭೂತ ಅಸ್ತಿತ್ವ ಆನಂದಸ್ವರೂಪಿ ಎಂಬ ಮರೆತುಹೋಗಿದ್ದ ತಿಳುವಳಿಕೆಯನ್ನು ನೆನಪಿಗೆ ತಂದವು ಎಂದು. ಈ ಅರ್ಥದಲ್ಲಿ ಇಡೀ ವ್ಯಕ್ತಿತ್ವವನ್ನೇ ಸುರಭಿಯನ್ನಾಗಿಸಿ (=ಪರಿಮಳ ಭರಿತವಾಗಿಸಿ)  ಇಂದೀವರಬಂಧುವಿನ ಸಾನ್ನಿಧ್ಯದಲ್ಲಿ ವ್ಯಕ್ತಿ ನೆಲೆಗೊಳ್ಳುವಂತೆ ಮಾಡುವ ಸಾಮರ್ಥ್ಯ ಮತ್ತು ಸಾಧ್ಯತೆ ಗಂಧ-ಮಂದಾನಿಲಕ್ಕೆ ಇದೆ ಎಂದು ಕವಿ ನಂಬಿದ್ದಾರೆ; ಇದೇ ಅವರು ಮಂದಾನಿಲದಿಂದ ಪಡೆದ ಸಂದೇಶ. ಅದನ್ನು ಸಾಧ್ಯಮಾಡಿಸು ಎಂದು ಕವಿ ಗಂಧವತಿಯಾದ ಮಂದಾನಿಲವನ್ನು ಪ್ರಾರ್ಥಿಸುತ್ತಿದ್ದಾರೆ ಕೊನೆಯ ಚರಣದಲ್ಲಿ.

ಈ ಕವಿತೆಯಲ್ಲಿರುವ ಪ್ರಕೃತಿಯ ವರ್ಣನೆ ಚೈತ್ರಮಾಸದ ವರ್ಣನೆಯೇ. ಚೈತ್ರ ಮಾಸ ಭಾರತೀಯರಿಗೆ ಹೊಸವರ್ಷಾರಂಭದ ಸೂಚಕ. ಪ್ರಾಕೃತಿಕ ಪರಿಸರ ಎಲ್ಲಾ ರೀತಿಯಲ್ಲೂ ನಳನಳಿಸುವ, ಲಕ ಲಕ ಹೊಳೆಯುವ, ಪಂಚೇಂದ್ರಿಯಗಳಿಗೂ ಸಂತಸ ಉಲ್ಲಾಸವನ್ನು ನೀಡುವ ಮಾಸ ಚೈತ್ರಮಾಸ. ಇದನ್ನು ಯುಗಾದಿ ಎಂದೂ ತಿಳಿಯುತ್ತೇವೆ. ಯುಗಾದಿಯನ್ನು ಪ್ರಾಕೃತಿಕ ಪರಿಸರಕ್ಕೆ ಹೊಸ ಜನ್ಮ, ಹೊಸ ನೆಲೆಗಳನ್ನು ಒದಗಿಸಿಕೊಡುವ ರೀತಿ ಎಂದು ತಮ್ಮ ‘ಯುಗಾದಿ’ ಪದ್ಯದಲ್ಲಿ ಬೇಂದ್ರೆ ಅರ್ಥೈಸುತ್ತಾರೆ. ಪು.ತಿ.ನ.ರವರಾದರೋ ಚೈತ್ರಮಾಸವನ್ನು ನಾದ ಮತ್ತು ಗಂಧಗಳ ಸಾಕಾರರೂಪ ಎಂದು ಭಾವಿಸುತ್ತಿದ್ದಾರೆ. ಒಂದು ಕೋಗಿಲೆಯ ಕುಹೂ ಎನ್ನುವ ಕುಕಿಲು ಇನ್ನೊಂದು ಕೋಗಿಲೆಯ ಕುಕಿಲಿಗೆ, ಆ ಕೋಗಿಲೆಯ ಕುಕಿಲು ಮತ್ತೊಂದು ಕೋಗಿಲೆಯ ಕುಕಿಲಿಗೆ ಆಕರವಾಗಿ ಕುಹೂ ಕುಹೂ ನಾದಮಯವಾಗಿಬಿಡುತ್ತದೆ ಚೈತ್ರಮಾಸ. ಹಾಗೆಯೇ ಎಲ್ಲಿ ನೋಡಿದರಲ್ಲಿ ಬಗೆ ಬಗೆಯ ವರ್ಣ ವಿನ್ಯಾಸದ, ಬಗೆ ಬಗೆಯ ಸೊಬಗಿನಾಕೃತಿಗಳ ಹೂಗಳು ಅರಳಿ ಸುಗಂಧಭರಿತವಾಗಿಬಿಡುತ್ತದೆ ಚೈತ್ರಮಾಸ. ನವನವೋನ್ಮೇಶದ ಚೈತ್ರಮಾಸ ವ್ಯಕ್ತಿಯ ಬದುಕಿಗೆ ಏಕೆ ಬರುವುದಿಲ್ಲ ಎಂದು ಯುಗಾದಿ ಪದ್ಯದಲ್ಲಿ ಬೇಂದ್ರೆ ಒದ್ದಾಡಿಕೊಂಡರೆ ಪು.ತಿ.ನ. ಹೊರಗಿನ ಚೈತ್ರಮಾಸದ ಮಂದಾನಿಲ ನಮ್ಮ ಒಳಗಿನ ಉಸಿರಿನ ಗೆಳೆಯನಾದರೆ ಇದು ಸಾಧ್ಯ ಎನ್ನುವ ಭರವಸೆಯ ಮಾತನ್ನಾಡುತ್ತಿದ್ದಾರೆ ಈ ಕವಿತೆಯಲ್ಲಿ.

ನಮ್ಮ ದೇಹದಲ್ಲಿಯ ಪ್ರಾಣಶಕ್ತಿ(ಪ್ರಾಣಾನಲ) ದೇಹದಲ್ಲಿ ಅಂತಃಸ್ಥಿತ ಆಗಿರುವ ಮೂಲಾಧಾರ ಚಕ್ರದಿಂದ ಮುಂದಕ್ಕೆ ಕ್ರಮಾಗತವಾಗಿ ಸಾಗುತ್ತಾ (=ಮೆಲುನಡೆಗಲಿತು) ತನ್ನ ಶಕ್ತಿಯನ್ನು ವಿಸ್ತರಿಸಿಕೊಳ್ಳುತ್ತಾ ಸಹಸ್ರಾರವಾಗಿ ವ್ಯಾಪ್ತವಾದಾಗ ನಾವು ನಾದಮಯಿಗಳೂ ಹೌದು, ಗಂಧವತಿಯರೂ ಹೌದು ಎನ್ನುವುದು ತಂತ್ರಶಾಸ್ತ್ರದ ಪ್ರಾಯೋಗಿಕ ಅರಿವು. ಇದೇ ನಮ್ಮ ಉಸಿರೇ ಗೆಳೆಯ ಆಗುವುದು ಎನ್ನುವುದರ ಅರ್ಥ. ಲಕ್ಷ್ಮಿಯ ಪ್ರತೀಕವಾದ ಶ್ರೀವಿದ್ಯಾ ಉಪಾಸನೆ ಇದಕ್ಕೆ ಪೂರಕ ಎನ್ನುತ್ತದೆ ತಂತ್ರಶಾಸ್ತ್ರ. ಇದು ನಮ್ಮದಾಗುವಂತೆ ನೋಡಿಕೊಳ್ಳುವವನು ಅಗ್ನಿ, ಸೂರ್ಯ, ಆದಿತ್ಯನೇ ಎನ್ನುತ್ತವೆ ವೇದೋಪನಿಷತ್ತುಗಳು. ಚೈತ್ರಮಾಸ ಪುರುಷೋತ್ತಮನಾದ ರಾಮನ ಅವತಾರ ಆದ ಮಾಸ. ಚೈತ್ರಮಾಸದ ಎಲ್ಲಾ ಸಾಧ್ಯತೆ ಸಾಮಥ್ರ್ಯಗಳಿಂದಲೇ ಶಿವ ಪಾರ್ವತಿಯರ ಸಂಗಮ ಆಗಿ ಲೋಕೋದ್ಧಾರಕ ಕುಮಾರಸಂಭವ ಆದದ್ದು. ಹೀಗೆ ವ್ಯಕ್ತಿತ್ವ ಸುರಭಿ (ಅಂದರೆ) ಸೌರಭವುಳ್ಳದ್ದು, ಉಸಿರು ಗೆಳೆಯ ಆಗುವುದು.

ಕವಿ ಮಂದಾನಿಲವನ್ನು ತೆಂಕಣಗಾಳಿ ಎಂದಿದ್ದಾರೆ. ಪಂಪ ತನ್ನ ಬನವಾಸಿಯನ್ನು ವರ್ಣಿಸುವಾಗ ‘ತೆಂಕಣಗಾಳಿ ಸೋಂಕಿದೊಡಂ’ ಎಂದು ಆರಂಭಿಸಿ ‘ನೆನೆವುದೆನ್ನ ಮನಂ ಬನವಾಸಿ ದೇಶಮಂ’ ಎನ್ನುತ್ತಾನೆ. ತೆಂಕಣಗಾಳಿಯನ್ನು ಬನವಾಸಿಯನ್ನು ಸಾಕಾರಗೊಳಿಸುವ ಗಾಳಿ ಎಂದು ಪಂಪ ಭಾವಿಸಿದ್ದಾನೆ ಇಲ್ಲಿ. ಬನವಾಸಿ ಕೇವಲ ಒಂದು ಪ್ರದೇಶ ಅಲ್ಲ. ಬನದವಾಸಿ ಬನವಾಸಿ. ಶಂಕರಿ(=ಪಾರ್ವತಿ) ಬನವಾಸಿಯೇ. ಬನಶಂಕರಿಯನ್ನು ಬನದಮ್ಮ ಎನ್ನುತ್ತಾರೆ ಜನಪದೀಯರು. ಬನದಮ್ಮ ಎಂದರೆ ಪ್ರಕೃತಿಯೂ ಹೌದು. ಪ್ರಕೃತಿಯನ್ನು “ಲಕ್ಷ್ಮೀ-ತತ್ತ್ವ” ಎನ್ನುತ್ತಾರೆ ವಿಶಿಷ್ಟಾದ್ವೈತಿಗಳು. ಬನವಾಸಿ ಹೀಗೆ ಶಂಕರಿಯ ಮತ್ತು ಲಕ್ಷ್ಮಿಯ ತತ್ತ್ವ. ಇದೇ ಮಂದಾನಿಲದ ಗಂಧದ ಮೂಲಸ್ಥಾನ.

ಪ್ರಕೃತಿಯ ಪ್ರತಿರೂಪವಾದ ಪೃಥ್ವಿಯ ಮೂಲಭೂತ ಗುಣ ಗಂಧ ಎನ್ನುತ್ತದೆ ಸಾಂಖ್ಯಸಿದ್ಧಾಂತ. ಕವನದಲ್ಲಿ ಕವಿ ತನ್ನನ್ನು ಪೃಥ್ವಿ ತಾನೇ ತಾನಾಗಿ ಅಪ್ಪಿಕೊಳ್ಳಬೇಕು, ಅದಕ್ಕೆ ಪ್ರತಿಯಾಗಿ ತಾನೂ ಪೃಥ್ವಿಯನ್ನು ಅಪ್ಪಿಕೊಳ್ಳುವಂತೆ ಗಂಧವತಿಯಾಗಬೇಕು ಎಂದು ಆಶಿಸುತ್ತಿದ್ದಾರೆ. ಇದನ್ನು ಸಾಧ್ಯಗೊಳಿಸುವಂತೆ ಮಂದಾನಿಲ ಬೀಸಿಬಂದು ಪ್ರಕೃತಿಯ ಗಂಧವನ್ನೆಲ್ಲ ಬಳಿದು ತಂದು ತನ್ನನ್ನು ಗಂಧಭರಿತವಾಗಿಸಬೇಕು ಮತ್ತು ತನ್ನನ್ನು ಗಂಧವತಿಯಲ್ಲಿ ಬೆರೆತುಹೋಗುವಂತೆ ಸೆಳೆದುಕೊಂಡು ಹೋಗುವಂತೆ ಹರಿಯಬೇಕು ಎಂದು ಪ್ರಾರ್ಥಿಸುತ್ತಿದ್ದಾರೆ.

ಪ್ರಕೃತಿ=ಪೃಥ್ವಿ=ಜಗತ್ತು; ಜಗತ್ತಿನ ಅಪಾರ ವೈವಿಧ್ಯತೆ, ಸೌಂದರ್ಯ, ಸೃಜನಶೀಲತೆ, ಜೀವದಾಯಿತ್ವಗಳಿಗೆ ಪ್ರತೀಕ ಲಕ್ಷ್ಮೀ ತತ್ತ್ವ. ಜಗತ್ತಿನ ಮಾಧ್ಯಮದಲ್ಲೇ ವ್ಯಕ್ತಿ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳಬೇಕು; ಲಕ್ಷ್ಮೀದೇವಿ ಮೊದಲು ಒಲಿಯಬೇಕು (ಅಪ್ಪಿಕೊಳ್ಳಬೇಕು), ಆನಂತರ ಪರದೈವವಾದ ನಾರಾಯಣನ ಸಾಕ್ಷಾತ್ಕಾರವಾಗುತ್ತದೆ ಎಂದು ಲಕ್ಷ್ಮೀದೇವಿಯ ಪ್ರಾಮುಖ್ಯತೆಯನ್ನು ವಿಶಿಷ್ಟಾದ್ವೈತಿಗಳು ವಿವರಿಸುತ್ತಾರೆ. ಲಕ್ಷ್ಮಿ ಶ್ರೀಮನ್ನಾರಾಯಣನ ಹೃದಯನಿವಾಸಿ. ಲಕ್ಷ್ಮೀ ದೇವಿ(=ಪೃಥ್ವಿ) ತನ್ನನ್ನು ಅಪ್ಪಿಕೊಳ್ಳಬೇಕು, ತಾನು ಆಕೆಯನ್ನು ಅಪ್ಪಿಕೊಳ್ಳುವಂತಾಗಬೇಕು ಎನ್ನುವುದರ ಅರ್ಥ ತಾನೂ ಶ್ರೀಮನ್ನಾರಾಯಣನ ಹೃದಯದಲ್ಲಿ ವಾಸಿಸುವಂತಾಗಬೇಕು ಎಂದು. ಇದರ ಸೂಚಕತೆ ವ್ಯಕ್ತಿ ಗಂಧಭರಿತ ಆಗುವುದು, ಗಂಧಭರಿತೆಯ ಸಖನ(=ಶ್ರೀಮನ್ನಾರಾಯಣನ) ಸಾಮೀಪ್ಯ, ಸಹವಾಸವನ್ನು ತನ್ನದನ್ನಾಗಿಸಿಕೊಳ್ಳುವುದು. ಇದು ಕವಿಯ, ಕವಿತೆಯ ಆಶಯ.

ಪು.ತಿ.ನ.ರವರ ಈ ಕವಿತೆ ಹೀಗೆ ಬಹುಮುಖಿಯಾಗಿ ಅರ್ಥಕೊಡುವಂತಹುದು.

ವ್ಯಕ್ತಿ ಪರಮ ವಾಸ್ತವತೆಯಾದ ಶ್ರೀಮನ್ನಾರಾಯಣನಲ್ಲಿ ಒಂದಾಗಬೇಕು; ಅದಕ್ಕೆ ಪೂರಕವಾದದ್ದು ವ್ಯಕ್ತಿಯ ದೇಹದಲ್ಲಿ ಹರಿಯುವ ಪಂಚ ಪ್ರಾಣಗಳು ಏಕಾಗ್ರವಾಗಿ ಸುಷುಮ್ನಾ ನಾಡಿಯಲ್ಲಿ ಮುನ್ನಡೆಯುವುದು; ಇದಕ್ಕೆ ಸಾಧನೋಪಾಯ ಲಕ್ಷ್ಮಿಯನ್ನು ಅಂದರೆ ಸಮಸ್ತ ವೈಭವದ ಪರಿಕರಗಳನ್ನು = ಮಂದಾನಿಲವನ್ನು = ಚೈತ್ರಮಾಸವನ್ನು ನಮ್ಮ ಇರುವಿಕೆಯ ಗೆಳೆಯ ಆಗುವಂತೆ ಒಲಿಸಿಕೊಳ್ಳುವುದು ಎನ್ನುವ ಅಂಶಗಳನ್ನು ಪುತಿನ ಕಾವ್ಯಮಯವಾಗಿ ಹೇಳುತ್ತಿದ್ದಾರೆ. ಈ ರೀತಿಯ ಚಿಂತನೆ ಮತ್ತು ಕಾವ್ಯದ ಗತಿ ಭಾರತೀಯರಿಗೇ ವಿಶೇಷವಾದದ್ದು.

(Picture credits: srikanta-sastri.org/)

 

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply

More about: