close logo

ಸಮಕಾಲೀನ ಚಿಂತನೆಯ ಆಕರ- ಪುರಾಣ- ಭಾಗ-೨

ಬದುಕು ಮತ್ತು ತಾತ್ತ್ವಿಕತೆ-

ಸದ್ಗತಿ- ಬದುಕುವುದಕ್ಕಾಗಿ ತಾತ್ತ್ವಿಕತೆಯೋ, ನಡೆಸುತ್ತಿರುವ ಬದುಕನ್ನು ಅರ್ಥೈಸುವುದಕ್ಕಾಗಿ ತಾತ್ತ್ವಿಕತೆಯೋ ಎನ್ನುವುದೊಂದು ಜಿಜ್ಞಾಸೆ. ಇದು ಬೀಜದಿಂದ ವೃಕ್ಷವೋ, ವೃಕ್ಷದಿಂದ ಬೀಜವೋ ಎನ್ನುವ ಜಿಜ್ಞಾಸೆಯ ರೀತಿಯದು. ವ್ಯಾಸ ನೋಡುವುದು ಹಕ್ಕಿಗಳು ತಮ್ಮ ಮರಿಯನ್ನು ಆಹಾರ ಕೊಟ್ಟು ಪೋಷಿಸುವುದನ್ನು ಮತ್ತು ಅದನ್ನು ತಮ್ನದೇ ಆದ ರೀತಿಯಲ್ಲಿ ಮುದ್ದಿಸಿ ಸಂತೋಷ ಪಡುವುದನ್ನು. ಈ ಕ್ರಿಯೆಗಳು ಅವುಗಳಿಗೆ ಪ್ರಾವೃತ್ತಿಕ (ಇನ್ ಸ್ಟಿನ್ ಕ್ಟ್). ವ್ಯಾಸ ಇದನ್ನು ಅರ್ಥೈಸುವುದು ವಂಶ ವೃದ್ಧಿಯಿಂದ ಸದ್ಗತಿ ಉಂಟಾಗುತ್ತದೆ. ಯಾವುದು ಸದ್ಗತಿ ಎನ್ನುವ ಪ್ರಶ್ನೆಗೆ ಉತ್ತರ ಎಂಬಂತೆ ಅವನು ತನ್ನ ಮಗ ಶುಕನಿಗೆ ಮದುವೆಯಾಗು, ಮಕ್ಕಳನ್ನು ಪಡೆದು ಪಿತೃಋಣ, ದೇವಋಣಗಳನ್ನು ಸಲ್ಲಿಸು; ಮಾಧ್ಯಾಹ್ನಿಕಕ್ಕಾಗಿ ಬರುವ ಬ್ರಹ್ಮಚಾರಿಗಳು, ವಾನಪ್ರಸ್ಥಿಗಳು, ಸನ್ಯಾಸಿಗಳನ್ನು ಮಧುರವಾದ ಮಾತುಗಳಿಂದ, ತಕ್ಕ ಊಟೋಪಚಾರದಿಂದ ಸತ್ಕರಿಸು; ಇಂಥ ಸದವಕಾಶವನ್ನು ಒದಗಿಸುವ ಗೃಹಸ್ಥಾಶ್ರಮ ಸರ್ವಶ್ರೇಷ್ಠ ಎಂದೇ ವಸಿಷ್ಠಾದಿ ಆಚಾರ್ಯರು ಗೃಹಸ್ಥರಾಗಿದ್ದರು ಎನ್ನುತ್ತಾನೆ.

ನಾವು ಹುಟ್ಟಿದ್ದೇವೆ. ನಮಗೊಂದು ತನ್ನದೇ ಆದ ಗುಣಧರ್ಮವಿರುವ ದೇಹ ಇದೆ. ಅದು ಸಹಜವಾದದ್ದು. ಅದನ್ನು ಅದರ ಗುಣಧರ್ಮದಿಂದ ಹೊರತುಪಡಿಸಲು ಆಗುವುದಿಲ್ಲ. ಗಂಡಿಗೆ ಹೆಣ್ಣು, ಹೆಣ್ಣಗೆ ಗಂಡು ಆಕರ್ಷಿತ ಆಗುವುದು, ಪರಸ್ಪರರ ದೈಹಿಕ ಸಂಗಮದಿಂದ ಸಂತೋಷ ಪಡುವುದು ದೇಹಧರ್ಮದ ಒಂದು ಮುಖ್ಯ ರೂಪ. ಅದನ್ನು ನಿರಾಕರಿಸಲು ಆಗುವುದಿಲ್ಲ. ಆದರೆ ಅದನ್ನು ನಿರ್ದಿಷ್ಟ ದಾರಿಯಲ್ಲಿ ಗಮಿಸುವಂತೆ, ಕ್ರಮಿಸುವಂತೆ ಮಾಡಬಹುದು. ತಾನೂ ಸುಖಿಸುತ್ತಾ, ತನ್ನ ಜೊತೆಯವರಿಗೂ

“ಗೃಹ್ಣಾತಿ ಪುರುಷಂ ಯಸ್ಮಾದ್ ಗೃಹಂ ತೇನ ಪ್ರಕೀರ್ತಿತಮ್” ॥53.14.1॥  “ಕಿಂ ವೃಥಾ$ಧ್ಯಯನೇನಾತ್ರ ದೃಢಬಂಧಕರೇಣ ಚ। ಪಠಿತವ್ಯಂ ತದೇವಾಶು ಮೋಚಯೇತ್‍ದ್ಭಾವಬಂಧನಾತ್॥52.14.1॥ (10) “ಯೇ ಬುಧಾ ಮಂದಮತಯೋ ವಿಧಿನಾ ಮುಶಿತಾಶ್ಚ ಯೇ। ತೇ ಪ್ರಾಪ್ಯಂ ಮÁನುಷಂ ಪುನರ್ಜನ್ಮ ವಿಧಂ ವಿಶಂತ್ಯುತ॥54.14.1॥

ಸುಖದಿಂದ ಇರುವ ಅವಕಾಶವನ್ನು ಒದಗಿಸುತ್ತ ಬದುಕಿನ ಒಂದು ಮಾದರಿಯನ್ನು ರೂಪಿಸಿಕೊಳ್ಳಬಹುದು, ಅದೇ ತರಹದಲ್ಲಿ ತನ್ನ ಸಂತಾನವೂ ರೂಪುಗೊಳ್ಳುವ ಆವರಣವನ್ನು ಕಲ್ಪಿಸಿಕೊಡಬಹುದು. ಇದೇ ವ್ಯಾಸ ಸೂಚಿಸುತ್ತಿರುವ ಸದ್ಗತಿ.

ವ್ಯಾಸನ ಮಗ ಶುಕ ಎಲ್ಲರಂತೆ ಹುಟ್ಟಿಲ್ಲ. ಬೆಂಕಿಯ ಪ್ರತಿರೂಪ ಅವನು. ಎಲ್ಲರಂತೆ ಕ್ರಮವಾಗಿ ಬೆಳವಣ ಗೆ ಪಡೆದವನಲ್ಲ. ಹುಟ್ಟುತ್ತಿದ್ದಂತೆಯೇ ಬೆಳೆದು ವಿದ್ಯಾಭ್ಯಾಸ ಮಾಡುವುದಕ್ಕಾಗಿ ಗುರುಕುಲಕ್ಕೆ ಹೋಗುವಷ್ಟು ದೊಡ್ಡವನಾದವನು. ಅವನ ಗ್ರಹಿಕೆ ಮತ್ತು ನಿಲುವು ಇಡೀ ವಾಸ್ತವಿಕತೆಯ ರಹಸ್ಯವನ್ನು ಅಂಗೈಯಲ್ಲಿ ಇರಿಸಿಕೊಳ್ಳುವುದು ಆಗಿದ್ದರೆ, ಸನ್ಯಾಸಿಯಾಗಿ ತಪಸ್ಸು ಮಾಡಿ ಬ್ರಹ್ಮಜ್ಞಾನಿ (ಆತ್ಮಜ್ಞಾನಿ) ಆಗಬೇಕು ಎನ್ನುವುದಾದರೆ ಅವನ ಹುಟ್ಟು ಮತ್ತು ಬೆಳವಣಿಗೆಯ ದೃಷ್ಟಿಯಿಂದ ಅದು ಅವನಿಗೆ ಸಹಜ. ಆದರೆ ಅದು ಅಕಾಲದ ಮಾವು, ಅದು ಅಚ್ಚರಿಗೆ ಕಾರಣವಾದೀತೇ ವಿನಾ ರಸಭರಿತ ತಿರುಳು ಉಳ್ಳ ಮಾವಿನಹಣ್ಣು ಆಗುವುದಿಲ್ಲ ಎನ್ನುವುದು ವ್ಯಾಸನ ತಿಳುವಳಿಕೆ. ಇದು ವ್ಯಾಸ ಗಮನಿಸಿದ ಬದುಕಿನ ತಾತ್ತ್ವಿಕತೆ.

ಶುಕನ ನೇತ್ಯರ್ಥಕ ತಾತ್ತ್ವಿಕತೆ- ಬದುಕನ್ನು ಕುರಿತ ಶುಕನ ತಾತ್ತ್ವಿಕತೆ ನೇತ್ಯರ್ಥಕವಾದದ್ದು- “ಹುಟ್ಟಿನೊಂದಿಗೆಯೇ ಒಬ್ಬನ ಬದುಕಿನೊಂದಿಗೆ ನೋವು ಥಳುಕು ಹಾಕಿಕೊಳ್ಳುತ್ತದೆ. ಅದು ಒಂದು ರೀತಿಯ ಬಂಧನ. ಆಮಿಷಗಳ ಮಾಯಾಜಾಲವಾದ ಕರ್ಮಾಚರಣೆಗಳು ಅನುಭವಿಸಬಹುದಾದ ನೋವಿನ ಸ್ವರೂಪವನ್ನು ವಿಸ್ತರಿಸುತ್ತವೆ. ಗೃಹಸ್ಥಾಶ್ರಮ ಗಂಡು ಹೆಣ್ಣಿನೊಂದಿಗೆ ವಿವಾಹ ಎನ್ನುವ ಬದ್ಧತೆಯೊಂದಿಗಿನ ಬದುಕೇ ಆಗಿದೆ. ಗೃಹಸ್ಥಾಶ್ರಮಿಯಾಗುವುದು ಎಂದರೆ ಗಂಡು ಹೆಣ್ಣಿನ ವಶವರ್ತಿಯಾಗುವುದು, ಸ್ವಾತಂತ್ರ್ಯ ಕಳೆದುಕೊಳ್ಳುವುದು, ಧನಕ್ಕಾಗಿ ಎಡತಾಕುವುದು, ಬಡತನದ ಬಂಧವನ್ನೆಲ್ಲ ಅನುಭವಿಸುವುದು. ಇವೆಲ್ಲಾ ನೋವುಗಳು – ಕುಟುಂಬ ನಿರ್ವಹಣೆಗಾಗಿ ಮಾಡುವ ಕರ್ಮಗಳ ಫಲವನ್ನು ಅನುಭವಿಸಲು ಪುನರ್ಜನ್ಮಗಳ ಜಂಜಾಟ ಮತ್ತು ಬದುಕಿ ಉಳಿಯುವುದಕ್ಕಾಗಿಯೇ ಮಾಡಬೇಕಾಗಿ ಬರುವ ಹೋರಾಟ ಇತ್ಯಾದಿಗಳ ರೂಪವನ್ನು ನಿರಂತರವಾಗಿ ಹೊಂದುತ್ತಲೇ ಇರುತ್ತವೆ. ನೋವಿನಿಂದ ಸಂಪೂರ್ಣವಾಗಿ ಬಿಡುಗಡೆ ಪಡೆಯುವುದೇ ನಿಜವಾದ ಸುಖ ಸಂತೋಷ, ಮೋಕ್ಷ”.

ಶುಕನ ಚಿಂತನೆಯ ಎರಡು ಮೂಲಭೂತಾಂಶಗಳು (ಅ) ಕುಟುಂಬ ಜೀವನದ ಕಾರಣಕ್ಕಾಗಿ ನಿರ್ವಹಿಸಬೇಕಾದ ಜವಾಬ್ದಾರಿ ಮತ್ತು ಒಪ್ಪಿಕೊಳ್ಳಬೇಕಾದ ಬದ್ಧತೆ; (ಆ) ಅದರ ಮೂಲಕ ಉಂಟಾಗುವ ವ್ಯಕ್ತಿ ತಾನೇ ಇಚ್ಛಿಸಿ ಪಡೆದುಕೊಂಡ ಬಂಧನ. ಇಂಥ ಗೃಹಸ್ಥಾಶ್ರಮ ಜೀವನವನ್ನು ನಿರಾಕರಿಸಿ ದೈಹಿಕವಾದ ಸುಖ ಸಂತೋಷ, ಆಸೆ ನಿರೀಕ್ಷೆಗಳನ್ನು ತ್ಯಾಗ ಮಾಡಿದರೆ, ಅಂಟು-ನಂಟಿನ ಲೇಪವಿಲ್ಲದ ಸನ್ಯಾಸಾಶ್ರಮ ಜೀವನದಿಂದ ಮೋಕ್ಷವನ್ನು ಪಡೆಯಬಹುದು. ಇದು ಶುಕ ರೂಪಿಸಿಕೊಂಡ ಬದುಕಿನ ಬಗೆಗಿನ ತಾತ್ತ್ವಿಕತೆ.

ಮಿಥಿಲಾ-ಗಮನ- ಸನ್ಯಾಸಾಶ್ರಮಿಯಾಗುವುದು ಸರ್ವ ರೀತಿಯಿಂದಲೂ ಯೋಗ್ಯ ಎಂಬ ನಿರ್ಧಾರದಿಂದ ಶುಕ ಹಿಂದೆ ಸರಿಯಲಿಲ್ಲ. ಇದರಿಂದ ವ್ಯಾಸನಿಗೆ ದುಃಖವಾಯಿತು. ಅದನ್ನು ಕಂಡ ಶುಕ ವ್ಯಾಸನನ್ನು ಬಿಟ್ಟು ಎಲ್ಲಿಗೂ ಹೋಗಲಿಲ್ಲ. ಆಗ ವ್ಯಾಸ ಅವನಿಗೆ ತಾನು ರಚಿಸಿದ ದೇವೀ ಭಾಗವತವನ್ನು ಅಧ್ಯಯನ ಮಾಡು ಎಂದ. ಅವನು ಹಾಗೆ ಮಾಡಿದರೂ ಶೂನ್ಯಮನಸ್ಕನಾಗಿಯೇ ಇರುವುದನ್ನು ನೋಡಿದ ವ್ಯಾಸ ತನ್ನ ಶಿಷ್ಯನೂ ಜೀವನ್ಮುಕ್ತನೂ ಆದ ಜನಕನನ್ನು ನೋಡಲು ಮಿಥಿಲೆಗೆ ಹೋಗಬೇಕೆಂದು ಮತ್ತು ಅಲ್ಲಿಂದ ಮತ್ತೆ ತನ್ನಲ್ಲಿಗೇ ಹಿಂತಿರುಗಬೇಕೆಂದು ಹೇಳಿದ. ಶುಕನ ಚಿಂತನೆ, ಗ್ರಹಿಕೆ ಸರಿಯಾದದ್ದೇ ಎನ್ನುವ ವಿವೇಚನೆಯನ್ನು ಮಾಡುವ ಕಥಾಭಾಗ ಶುಕ ಜನಕನನ್ನು ಮಿಥಿಲೆಯಲ್ಲಿ ಸಂದರ್ಶಿಸಿದುದು.

ಎಷ್ಟೆಷ್ಟೋ ದೂರವನ್ನು ಕಾಲ್ನಡಿಗೆಯಲ್ಲಿಯೇ ಕ್ರಮಿಸಿ ಶುಕ ಮಿಥಿಲೆಗೆ ಬರುತ್ತಾನೆ. ಅವನಿಗೆ ಜನಕನನ್ನು ನೋಡುವುದಕ್ಕಿಂತ ಮುಂಚೆ ವೈಭವೋಪೇತವಾದ ಸುಖ ಸಂತೋಷವನ್ನು ಕೊಡುವ ಸ್ವಾಗತ ದೊರೆಯುತ್ತದೆ. ಅವನು ಅದಕ್ಕೆ ಮರುಳಾಗದೆ ಮಿಥಿಲೆಯವರು ಸುಖ ಸಂತೋಷ ಶಾಶ್ವತ ಎಂಬ ಭ್ರಮೆಯಲ್ಲಿ ಮುಳುಗಿಹೋಗಿರುವುದನ್ನು ನೋಡುತ್ತಾನೆ, ಧ್ಯಾನದಲ್ಲಿಯೇ ಮಗ್ನನಾಗುತ್ತಾನೆ. ಇದನ್ನು ಕಂಡ ಜನಕನು ತಾನೇ ಅವನ ಬಳಿಗೆ ಬಂದು ನಿಮ್ಮಂಥವರಿಗೆ ರಾಜನ ಪದನಿಮಿತ್ತವಾದ ಯಾವ ಅಪೇಕ್ಷೆಯೂ ಇರಲು ಸಾಧ್ಯವಿಲ್ಲ, ಆದರೂ ನೀವು ನನ್ನಲ್ಲಿಗೆ ಬಂದಿದ್ದೀರಿ, ನನ್ನಿಂದ ಏನಾಗಬೇಕು ಎಂದು ವಿನಯದಿಂದ ಕೇಳಿದ. ಶುಕ ಮೋಕ್ಷಮಾರ್ಗದ ಹೊರತಾಗಿ ನನಗೇನೂ ಬೇಡ, ನನ್ನ ಅಪ್ಪ ಜನಕ ಮಹಾರಾಜ ಜೀವನ್ಮುಕ್ತ ಎಂದು ಹೇಳಿದ, ಅದಕ್ಕಾಗಿ ನಿನ್ನ ಬಳಿಗೆ ಬಂದಿದ್ದೇನೆ ಎಂದ.

ಜನಕನ ನಿಲುವು: ದೃಷ್ಟಿಯಂತೆ ಸೃಷ್ಟಿ-  ಆತ್ಮ (ಬ್ರಹ್ಮ)ವೇ ಪರಮ ವಾಸ್ತವಿಕತೆ, ಆತ್ಮಜ್ಞಾನ (ಬ್ರಹ್ಮಜ್ಞಾನ) ಪಡೆಯುವುದು ಎಂದರೆ ಪರಮ ಸ್ವತಂತ್ರ ಆಗುವುದು ಎಂದರ್ಥ; ಸ್ವಾತಂತ್ರ್ಯ ಎಂದರೆ ಯಾವುದೇ ರೀತಿಯ ಬದ್ಧತೆಗಳು (=ಬಂಧನಗಳು) ಇಲ್ಲದಿರುವುದು ಮತ್ತು ಯಾವುದೇ ರೀತಿಯ ನೋವು ಇಲ್ಲದ ಪರಮ ಸುಖ ಎಂದರ್ಥ – ಇದು ಶುಕ ಗ್ರಹಿಸಿದ ಪರಮ ವಾಸ್ತವತೆಯ ಪರಿಕಲ್ಪನೆ. ಇದನ್ನು ಭಂಜಿಸುವ ಜನಕ ಆತ್ಮ (ಬ್ರಹ್ಮ) ಪರಮ ವಾಸ್ತವತೆ; ದೇಹ ಬೇರೆ ಆತ್ಮ ಬೇರೆ ಎನ್ನುವುದನ್ನು ಒಪ್ಪಿಕೊಂಡರೂ ದೇಹ ಸಂಬಂಧಿತವಾದವು ಏನೇ ಇದ್ದರೂ ಅವು ಆತ್ಮಕ್ಕೆ ಸಂಬಂಧಪಟ್ಟದ್ದು ಅಲ್ಲದಿರುವುದರಿಂದ ಅವು ಆತ್ಮವನ್ನು ಬಂಧಿಸಲು ಸಾಧ್ಯವೇ ಇಲ್ಲ; ಬಂಧಿತವಾದುದರ ಅನುಭವ, ವಿಚಾರ, ತಿಳುವಳಿಕೆ ಇತ್ಯಾದಿಗಳೆಲ್ಲ ದೇಹಕ್ಕೆ ಸಂಬಂಧಪಟ್ಟದ್ದು; ಅನುಭವ, ವಿಚಾರ, ತಿಳುವಳಿಕೆಗಳು ಮನಸ್ಸಿನಿಂದ ಉಂಟಾಗುವಂತಹುದು ಎನ್ನುತ್ತಾನೆ. ಬದುಕಿನ ಬಗೆಗೆ “ದೃಷ್ಟಿಯಂತೆ ಸೃಷ್ಟಿ” ಎನ್ನುವ ತಾತ್ತ್ವಿಕತೆ ಜನಕನದು.

ಜನಕನ ವಿಭಿನ್ನ ಗ್ರಹಿಕೆ- ಜನಕನ ಗ್ರಹಿಕೆ ವ್ಯಾಸ ಮತ್ತು ಶುಕನಿಗಿಂತ ವಿಭಿನ್ನವಾದದ್ದು: “ದೇಹವೇ ಬೇರೆ, ಆತ್ಮವೇ ಬೇರೆ. ದೇಹ ಆತ್ಮವನ್ನು ಬಂಧಿಸಲಾರದು. ವಾಸ್ತವವಾಗಿ ಆತ್ಮ ಬಂಧಿತವೂ ಅಲ್ಲ, ಬಿಡುಗಡೆಗೊಳ್ಳುವಂತಹುದೂ ಅಲ್ಲ. ದೇಹದೊಂದಿಗೆ ಆತ್ಮ ಇರುವುದು ಮನುಷ್ಯನ ಸೃಷ್ಟಿಯ ವಿಶೇಷ. ದೇಹದ ಧರ್ಮ ಬೇರೆ, ಆತ್ಮದ ಸ್ವರೂಪವೇ ಬೇರೆ ಎಂದು ತಿಳಿಯಲು ಮನುಷ್ಯನಿಗೆ ಪ್ರಪಂಚದೊಳಗಿನ ಬದುಕು ಪೂರಕ, ಪ್ರೇರಕ. ದೇಹದೊಂದಿಗಿನ ಮನಸ್ಸು ದೇಹದ ಕರ್ಮೇಂದ್ರಿಯ, ಜ್ಞಾನೇಂದ್ರಿಯಗಳ ಮೂಲಕ ಪ್ರಪಂಚದ ಚರಾಚರಗಳೊಂದಿಗೆ ಸಂಬಂಧವನ್ನು ಕಲ್ಪಿಸಿಕೊಳ್ಳುತ್ತದೆ, ಅವುಗಳು ಉಂಟುಮಾಡುವ ಸುಖ ಸಂತೋಷ ಆಮೋದ ಪ್ರಮೋದ ನಲಿವುಗಳನ್ನು ಗುರುತಿಸುತ್ತದೆ; ಅವುಗಳ ಬಗೆಗೆ ನಿರೀಕ್ಷೆಗಳನ್ನು, ಕನಸುಗಳನ್ನು ಕಟ್ಟಿಕೊಳ್ಳುತ್ತದೆ. ಆಶಿಸಿದಂತೆ ಸಂಗತಿಗಳು ಘಟಿಸದಿದ್ದಾಗ ನೋವು, ದುಃಖ, ಕಷ್ಟ ಇತ್ಯಾದಿಗಳು ಉಂಟಾಯಿತು ಎಂದು ಗ್ರಹಿಸುತ್ತದೆ. ಇವುಗಳಿಗೂ ಆತ್ಮಕ್ಕೂ ಸಂಬಂಧ ಇಲ್ಲ. ಮನಸ್ಸೇ ಬಂಧನ ಮತ್ತು ಮೋಕ್ಷ ಎರಡಕ್ಕೂ ಮೂಲಕಾರಣ. ಇದನ್ನು ತೀವ್ರವಾದ, ವೈವಿಧ್ಯಮಯವಾದ ಅನುಭವಗಳಿಂದಲೇ ಮನನ ಮಾಡಿಕೊಳ್ಳಬೇಕು. ಹೀಗೆ ಸಂಗತಿ ಇದೆ ಎಂಬ ಅರಿವು, ಜ್ಞಾನ ಸಾಕಾಗುವುದಿಲ್ಲ. ಆತ್ಮದ ಸ್ವರೂಪವನ್ನು ಮನನ ಮಾಡಿಕೊಳ್ಳಲು ಗೃಹಸ್ಥಾಶ್ರಮ ಜೀವನವೇ ಸರ್ವ ಶ್ರೇಷ್ಠ ಮಾರ್ಗೋಪಾಯ.

ಸನ್ಯಾಸಿಯಾಗಿ ಕಾಡಿನಲ್ಲಿ ಗೆಡ್ಡೆ ಗೆಣಸುಗಳನ್ನು ತಿಂದು ತಪಸ್ಸು ಮಾಡಿಕೊಂಡು ಇದ್ದರೂ ಗಾಳಿ, ನೀರು, ಬೆಂಕಿ, ಭೂಮಿ, ಆಕಾಶಗಳೆಂಬ ಪಂಚಭೂತಗಳ ಚೌಕಟ್ಟಿನಿಂದ, ದೇಹಧರ್ಮವಾದ ಹಸಿವಿನಿಂದ, ಪ್ರಾಣ ಸಮಾಜದ ಸಹವಾಸದಿಂದ ಪಾರಾಗಲಾಗುವುದಿಲ್ಲ, ಮನಸ್ಸು ನಿರ್ಮಿಸುವ ಕಾಮ-ಕೇಂದ್ರಿತ ಕಟ್ಟಡವನ್ನು, ಕೋಟೆಯನ್ನು ಗೆದ್ದಲುಹುಳಗಳಂತೆ ಕ್ರಮಾಗತವಾಗಿಯೇ ಕೆಡವಬೇಕು. ಗೆದ್ದಲುಹುಳಗಳು ಮೊದಲು ಬೇರುಗಳನ್ನು ಆಕ್ರಮಿಸುತ್ತದೆ, ಆನಂತರ ಕ್ರಮಾಗತವಾಗಿ ಕಾಂಡವನ್ನು ಮರದ ಎತ್ತರದವರೆಗೂ ಆಕ್ರಮಿಸುತ್ತಾಹೋಗುತ್ತವೆ, ಕೊನೆಗೆ ಮರವನ್ನು ಬೇರು ಸಮೇತ ಉರುಳಿಸಿಬಿಡುತ್ತವೆ. ನೇರವಾಗಿ ಸನ್ಯಾಸಾಶ್ರಮಿಯಾಗುವುದು ಎಂದರೆ ರೆಂಬೆ ಕೊಂಬೆಗಳನ್ನು ಕಡಿಯುತ್ತಾ ಮರವನ್ನು ಉರುಳಿಸುವ ರೀತಿ. ಮರ ಉರುಳಿದರೂ ಅದನ್ನು ಮತ್ತೆ ಚಿಗುರಿಸುವ ಬೇರು ಹಾಗೆಯೇ ಉಳಿದಿರುತ್ತವೆ.”

ಮನುಷ್ಯನ ಬದುಕು- ಬದುಕು ಅಂತರಂಗ ಮತ್ತು ಬಹಿರಂಗಗಳೆರಡನ್ನೂ ಸಾಕ್ಷಿಪ್ರಜ್ಞೆಯಿಂದ ಅವಲೋಕಿಸಬಹುದಾದ ವ್ಯಕ್ತಿಕೇಂದ್ರಿತವಾದದ್ದು. ವ್ಯಕ್ತಿಯ ಬಾಲ್ಯ, ಯೌವನ, ಪ್ರೌಢತೆ, ಸನ್ಯಾಸಭಾವಗಳಿಗೆಲ್ಲಾ ವ್ಯಕ್ತಿಯೇ ಅಂತರಂಗ ಮತ್ತು ಬಹಿರಂಗಗಳಲ್ಲಿ ಅರ್ಥ ಮಹತ್ವವನ್ನು ದೊರಕಿಸಿಕೊಡಬೇಕಾದವನು. ಅವನು ಸುಖಕ್ಕೊಂದೇ ಅಲ್ಲ, ನೋವಿಗೂ ಅರ್ಥಮಹತ್ವವನ್ನು ಕಲ್ಪಿಸಬಲ್ಲ. ಆ ಮೂಲಕ ಬದುಕನ್ನು ನೋಡಬಹುದಾದ ನೇತ್ಯರ್ಥಕ ಮನೋಭಾವದಿಂದ ಪಾರಾಗಬಲ್ಲ; ಅದರಿಂದ ಉಂಟಾಗಬಹುದಾದ ದೌಷ್ಟ್ಯದಿಂದ ಪಾರಾಗಬಲ್ಲ. ದೌಷ್ಟ್ಯದಿಂದ ವೈಯಕ್ತಿಕವಾಗಿ ಲಾಭ ದೊರೆಯಬಹುದು, ಆದರೆ ಶಾಂತಿ ಸಮಾಧಾನ ದೊರೆಯುವುದಿಲ್ಲ, ಅದು ಯಾವಾಗಲೂ ಬಂಧನಕಾರಿಯೇ. ದೃಷ್ಟಿ ನೇತ್ಯರ್ಥಕವಾಗಿದ್ದರೆ ಬಂಧನ, ಅಸ್ತ್ಯರ್ಥಕವಾಗಿದ್ದರೆ ಮೋಕ್ಷ.

“ಆತ್ಮಾ ಗಮ್ಯಾನುಮಾನೇನ ಪ್ರತ್ಯಕ್ಷೋ ನ ಕದಾಚನ। ಸ ಕಥಂ ಬಧ್ಯತೇ ಬ್ರಹ್ಮಾನ್ನಿರ್ವಿಕಾರೋ ನಿರಂಜನಃ”॥36.17.1॥; “ಮನಸ್ತು ಸುಖದುಃಖಾನಾಂ ಮಹತಾಂ ಕಾರಣಂ ದ್ವಿಜ। ಜಾತೇ ತು ನಿರ್ಮಲೇ ಹ್ಯಾಸ್ಮಿನ್ಸರ್ವಂ ಭವತಿ ನಿರ್ಮಲಂ।”॥37.17.1॥; “ನ ದೇಹೋ ನ ಚ ಜೀವಾತ್ಮ ನೇಂದ್ರಿಯಾಣ  ಪರಂತಪ। ಮನ ಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋ”॥39.17.1॥ “ಯಥಾ ಪಿಪೀಲಿಕಾ ಮೂಲಚ್ಚಾಖಾಯವi ಧಿರೋಹತಿ। ಶನೈ ಶನೈ ಫಲಂ ಯಾತಿ ಸುಖೇನ ಪದಗಾಮಿನೀ”॥28.18.1॥

ಮನುಷ್ಯನ ಅಸ್ತಿತ್ವಕ್ಕೆ ಸಂಬಂಧಿಸಿದಂತೆ ಅಂತಿಮ ವಾಸ್ತವತೆ ಸೃಷ್ಟಿಯೇ. ಪರಮ ವಾಸ್ತವತೆಯಾದ ಮಾತೃತ್ವದ ಮೂಲಭೂತ ಸ್ವರೂಪ ಸೃಷ್ಟಿಸುವಿಕೆಯೇ. ಮನುಷ್ಯನ ಸಂದರ್ಭದಲ್ಲಿ ಸೃಷ್ಟಿಸುವಿಕೆ ಎನ್ನುವುದಕ್ಕೆ ಅರ್ಥ ವಿವಾಹ ಮಾಡಿಕೊಂಡು ಮಕ್ಕಳನ್ನು ಪಡೆಯುವುದು, ಯೋಗ್ಯ ವೃತ್ತಿಯ ನಿರ್ವಹಣೆಯ ಮೂಲಕ ಹಣ ಸಂಪಾದಿಸಿ ಮಕ್ಕಳನ್ನು ಸುತ್ತಲಿನ ಚರಾಚರಗಳಿಗೆ ಸ್ನೇಹಿತರಾಗುವಂತೆ ಬೆಳೆಸುವುದು, ಅತಿಥಿ ಅಭ್ಯಾಗತರನ್ನು ಸತ್ಕರಿಸುವುದು, ಅಗತ್ಯವಿದ್ದವರಿಗೆ ಕೈಲಾದ ಸೇವೆ, ಸಹಾಯ, ಸೌಕರ್ಯಗಳನ್ನು ಒದಗಿಸುವುದು, ಮನುಷ್ಯ-ಸಮಾಜ ಸ್ವಸ್ಥವಾಗಿರುವಂತೆ ನೋಡಿಕೊಳ್ಳುತ್ತಾಹೋಗುವುದು ಎಂದರ್ಥ. ಹೀಗೆ ಜೀವನ ನಡೆಸುವಾಗ ತನಗೆ ತಾನೇ ಸನ್ಯಾಸ-ಜೀವನದ ಅವಿಭಾಜ್ಯ ಅಂಗಗಳಾದ ತ್ಯಾಗ, ಸಂಯಮ, ಸಹಿಷ್ಣುತೆ, ಔದಾರ್ಯ, ಸ್ನೇಹ ಮುಂತಾದ ನಡೆಗಳು ವ್ಯಕ್ತಿಯದಾಗುತ್ತವೆ. ಅವು ಕಷ್ಟ, ದುಃಖ, ತೊಂದರೆ, ಆಪತ್ತು ಎಂದೆಲ್ಲಾ ತೋರಿಬರುವವುಗಳನ್ನು ಕೇವಲ ಸಂಗತಿಗಳು, ವಿಶೇಷವಾದ ಮಹತ್ವವನ್ನು ಕೊಡಬೇಕಾದವುಗಳು ಅಲ್ಲ ಎಂದಾಗಿಸಿಬಿಡುತ್ತವೆ. ಆಗ ಯಾವುದೂ ಬಂಧನಕಾರಿ ಎಂದಾಗುವುದೇ ಇಲ್ಲ. ಅದರ ಅಂತಿಮ ಫಲಿತ ಬದುಕಿಗೆ ಸುಖ ದುಃಖ, ನೋವು ನಲಿವು, ಕಷ್ಟ ಸೌಖ್ಯ ಇತ್ಯಾದಿ ಯಾವ ಭಾವಗಳೂ ಇಲ್ಲ ಎನ್ನುವ ಮುಕ್ತತೆ; ಇರುವುದು ಕೇವಲ ಔಚಿತ್ಯಪ್ರಜ್ಞೆ (ಕರ್ತವ್ಯ ಪ್ರಜ್ಞೆ); ಇದೇ ಜೀವನ್ಮುಕ್ತಿ.  ಇದು ಜನಕ ಬದುಕನ್ನು ಅರ್ಥೈಸುವ ತಾತ್ತ್ವಿಕತೆ.

ಆಲದೆಲೆಯ ಮೇಲೆ ಮಲಗಿದ ಹರಿಯ ರೂಪಕ- ಬದುಕಿನ ಬಗೆಗಿನ ಜನಕನ ಈ ವ್ಯಾಖ್ಯಾನವನ್ನು ಸ್ಪಷ್ಟ ಪಡಿಸುವ ರೂಪಕವೂ ಸೃಷ್ಟಿಕರ್ತ ಮತ್ತು ಸ್ಥಿತಿಕರ್ತ ಎರಡೂ ಆದ ವಿಷ್ಣು ಏನೂ ಅರಿಯದ ಮಗುವಿನಂತೆ ಎಲೆಯ ಮೇಲೆ ಮಲಗಿ ನೀರಿನ ಮೇಲೆ ತೇಲುತ್ತಿರುವುದು. ಈ ಕಥೆಯಲ್ಲಿ ಮಾಯೆ ಅಂದರೆ ಶಕ್ತಿ, ಅದರ ಮೂಲಭೂತ ಸ್ವರೂಪ ಮಾತೃತ್ವ ಅಂದರೆ ಸೃಷ್ಟಿತ್ವವೇ= ಸೃಷ್ಟಿಸುವಿಕೆಯೇ. ಸೃಷ್ಟಿ ಬೀಜರೂಪದಲ್ಲಿದ್ದಾಗ=ಮಗುವಿನ ರೂಪದಲ್ಲಿದ್ದಾಗ ಸೃಷ್ಟಿಸುವ ಶಕ್ತಿ, ಸಾಮರ್ಥ್ಯ ಅಗೋಚರ. ಗೋಚರ ಆದುದಕ್ಕೆ ಗುರುತು ಕರುಳುಬಳ್ಳಿ ಸಂಬಂಧವೇ ಅಂದರೆ ನಾಭಿಯಿಂದ ಬ್ರಹ್ಮ ಕಾಣ ಸಿಕೊಳ್ಳುವುದೇ. ಕಾಣ ಸಿಕೊಂಡದ್ದು ಸಂಬಂಧಿತವೂ ಹೌದು, ಸಂಬಂಧರಹಿತವೂ ಹೌದು. ಅದಕ್ಕೆ ರೂಪಕ ಕಮಲದ ಮೇಲೆ ಬ್ರಹ್ಮ ಇರುವುದು. ಕಮಲ ಕೆಸರಿನೊಂದಿಗಿನ ನೀರಿನಲ್ಲಿ ಮೂಡಿಬರುವ ಹೂವು. ಅದರ ನಾಳದಿಂದ(=ದೇಟು=ದಂಟಿನಿಂದ) ನೀರು, ಎಲೆ, ಹೂವು ಎಲ್ಲಾ ಪರಸ್ಪರ ಸಂಬಂಧಿತ. ಆದರೆ ಎಲೆಗಳು ನೀರಿಗೂ ಅಂಟಿಕೊಂಡಿರುವುದಿಲ್ಲ, ಹೂವಿಗೂ ಅಂಟಿಕೊಂಡಿರುವುದಿಲ್ಲ. ಕಮಲ ಯಾವ ಅರಿವೂ ಇಲ್ಲದೆ ಸಂಬಂಧಿತ ಮತ್ತು ಸಂಬಂಧರಹಿತ.

ಕಮಲದಂತೆ ಒಂದು ಸೃಷ್ಟಿ ಮನುಷ್ಯ. ಮನುಷ್ಯನ ಹುಟ್ಟೂ ಕಮಲದಂತೆಯೇ. ತಾಯಿಗೂ ಮಗುವಿಗೂ ನಾಳವೊಂದರಿಂದ ನೇರ ಸಂಬಂಧ. ಮಗು ಹುಟ್ಟಿದೊಡನೆಯೇ ಆ ಸಂಬಂಧ ಕಳಚಬೇಕು. ಇಲ್ಲದಿದ್ದರೆ ಮಗುವೂ ಉಳಿಯುವುದಿಲ್ಲ, ತಾಯಿಯೂ ಉಳಿಯುವುದಿಲ್ಲ. ಬೇರೆ ಪ್ರಾಣ ಗಳಲ್ಲಿ ಈ ಕ್ರಿಯೆ ತಾನೇ ತಾನಾಗಿ ಆಗುತ್ತದೆ. ಆದರೆ ಮನುಷ್ಯನ ಸಂದರ್ಭದಲ್ಲಿ ಅದು ಮನುಷ್ಯನಿಂದ ಬುದ್ಧಿಪೂರ್ವಕವಾಗಿ ನಡೆಯುತ್ತದೆ. ನಿರ್ದಿಷ್ಟ ಅವಧಿಯವರೆಗೆ ತಾಯಿ ಮಗುವಿನ ಸಂಬಂಧ ಹೊರಗಿನಿಂದ ತಾಯಿ ಮಗುವಿಗೆ ಹಾಲಿನ ರೂಪದಲ್ಲಿ ಆಹಾರ ಒದಗಿಸುವುದರ ಮೂಲಕ ಮುಂದುವರೆಯುತ್ತದೆ. ಆನಂತರ ಅದು ಕಳಚಿಕೊಂಡರೂ ಡಿ.ಎನ್.ಎ. ರೂಪದಲ್ಲಿ ಆ ಸಂಬಂಧ ಆಂತರಿಕವಾಗಿ ಸುಪ್ತವಾಗಿದ್ದು, ಪ್ರಾಸಂಗಿಕವಾಗಿ ಟಿಸಿಲೊಡೆಯುತ್ತಾ ಮುಂದುವರೆಯುತ್ತದೆ. ಕಳಚಿಕೊಳ್ಳುವಿಕೆ, ಸೇರಿಕೊಳ್ಳುವಿಕೆ ಮುಂದುವರೆಯುತ್ತಲೇ ಇರುತ್ತದೆ. ಕಳಚಿಕೊಳ್ಳುವುದು ಮತ್ತು ಸೇರ್ಪಡೆಯಾಗುವುದು ಎರಡರ ಅರ್ಥವೂ ಇರುವಿಕೆಯೇ ಮೂಲಭೂತ ಸತ್ಯ ಎಂದು. ಇರುವಿಕೆಯು ಶಕ್ತಿ, ಸಾಮಥ್ರ್ಯ, ಕ್ರಿಯೆಗಳ ಮೂಲಕವೇ ಪ್ರಕಟಗೊಳ್ಳುತ್ತದೆ. ಕಳಚಿಕೊಳ್ಳುವಿಕೆಯೂ ಸ್ವಾಭಾವಿಕ, ಸೇರ್ಪಡೆಯೂ ಸ್ವಾಭಾವಿಕ; ಅವೆರಡೂ ಕ್ರಮಾಗತ; ಒಮ್ಮೆಗೇ ಯಾವುದೂ ಸಂಭವಿಸುವುದಿಲ್ಲ. ಆದ್ದರಿಂದ ಆಶ್ರಮ ಧರ್ಮಗಳ ಪಾಲನೆ ಕ್ರಮಾಗತವಾಗಿಯೇ ಇರಬೇಕು. ಸಂಬಂಧಿತ ಮತ್ತು ಸಂಬಂಧರಹಿತ ಎರಡೂ ಸ್ವಾಭಾವಿಕ; ಆದ್ದರಿಂದ ಒಬ್ಬ ಸಂಬಂಧಿತನಾಗಿಯೂ ಸಂಬಂಧರಹಿತ ಆಗಿರಬಲ್ಲ, ಜೀವನ್ಮುಕ್ತ ಆಗಿರಬಲ್ಲ.

ಅಶರೀರ ವಾಣಿ– ದೇವೀ ಭಾಗವತದ ಪ್ರಾರಂಭದ ಕಥಾಭಾಗದಲ್ಲಿ ಅಶರೀರ ವಾಣಿ ಯೊಂದು ನಾನೇ ಪರಮ ಸತ್ಯ ಎಂದು ಘೋಷಿಸಿಕೊಳ್ಳುತ್ತಿದೆ. ಇದಕ್ಕೆ ಹಲವು ಆಯಾಮದ ಅರ್ಥಗಳಿವೆ: ಇದು ಕಲೆಗೆ ಸಂಬಂಧಿಸಿದುದು ಎನ್ನುವುದಕ್ಕೆ ಒಂದು ಸೂಚಕ. ಆಕಾಶ(=ಅವಕಾಶ)ದ ಮೂಲಭೂತ ಗುಣ ಶಬ್ದ ಎನ್ನುತ್ತದೆ ಸಾಂಖ್ಯ ಸಿದ್ಧಾಂತ. ಅವಕಾಶದಲ್ಲಿ ಮಾತ್ರ ಕಂಪನಗಳು ಸಾಧ್ಯ, ಆಕಾಶ (ಅವಕಾಶ)ದಲ್ಲಿಯ ಕಂಪನಗಳೇ ನಮ್ಮ ಶ್ರವಣೇಂದ್ರಿಯಕ್ಕೆ ಕೇಳಿ ಬರುವ ಮತ್ತು ಕೇಳಲಾಗದ ಶಬ್ದ ಎನ್ನುತ್ತದೆ ವಿಜ್ಞಾನ. ಬರವಣಿಗೆಯ ಅವಕಾಶದಲ್ಲಿ ಶಬ್ದ ಸಾಹಿತ್ಯಪ್ರಕಾರದ ಕಲೆ ಆಗುತ್ತದೆ. ಅದೇ ಶಬ್ದ ನಾಮ-ರೂಪದ ಅವಕಾಶದಲ್ಲಿ ಕ್ಯಾನ್ವಾಸ್ ನ ಮೇಲೆ ಮೂಡಿ ಬರುವ ಚಿತ್ರಕಲಾ-ಪ್ರಕಾರ ಆಗುತ್ತದೆ. ಮತ್ತದೇ ಶಬ್ದ ನಾದದ ಸ ರಿ ಗ ಮ ಪ ದ ನಿ ಸಪ್ತ ಸ್ವರಗಳ ಮಾಧ್ಯಮದಲ್ಲಿ ಸಂಗೀತವಾಗಿ ಹೊರಹೊಮ್ಮುತ್ತದೆ. ಹೀಗೆ ಶಬ್ದದ ಸಾಧ್ಯತೆಗಳು ವಿಪುಲ. ನಮ್ಮ ವ್ಯಾವಹಾರಿಕವಾದ ಇಡೀ ಜಗತ್ತನ್ನು ಬುದ್ಧ ನಾಮ-ರೂಪ ಎಂದು ಅರ್ಥೈಸುತ್ತಾನೆ. ನಮ್ಮ ಸುತ್ತಲಿನ ಸಂಗತಿಗಳಿಗೆ ನಾವು ಯಾವ ಅರ್ಥವನ್ನು, ಮಹತ್ವವನ್ನು ಕೊಡುತ್ತೇವೆಯೋ ಅದನ್ನೇ ಬುದ್ಧ ನಾಮ-ರೂಪ ಎನ್ನುತ್ತಿರುವುದು. ಇಂದಿನದು ಕಂಪ್ಯೂಟರ್ ಯುಗ. ಅದು 0, 1 ಇವೆರಡೇ ಸಂಖ್ಯೆಗಳ ಮೂಲಕ ನಮ್ಮ ತಿಳುವಳಿಕೆಯ ಎಲ್ಲಾ ಸಾಧ್ಯತೆ, ಸಾಮಥ್ರ್ಯಗಳನ್ನು ಹಿಡಿದಿಟ್ಟುಕೊಳ್ಳುತ್ತದೆ. ಇಡೀ ವಾಸ್ತವತೆ ತರಂಗಗಳ ರೂಪದಲ್ಲಿದೆ, ಅವುಗಳ ಫ್ರೀಕ್ಕ್ವೆನ್ಸಿಯಿಂದ ಒಂದು ಸಂಗತಿ ಅದೇ ಸಂಗತಿ ಆಗಿದೆ ಎಂದು ಹೇಳಬಹುದು ಎನ್ನುತ್ತದೆ ವಿಜ್ಞಾನ.

ಈ ಎಲ್ಲ ಸಂಗತಿಗಳು ಪುರಾಣ ಎನ್ನುವುದು ಹಳೆಯದಾಗಿದ್ದರೂ ಸಮಕಾಲೀನ ಮಹತ್ವವುಳ್ಳದ್ದು ಎನ್ನುವುದಕ್ಕೆ ಆಕರವನ್ನು ಒದಗಿಸಿಕೊಡುತ್ತವೆ.

(ಮೊದಲ ಲೇಖನವನ್ನು ಇಲ್ಲಿ ಓದಬಹುದು.)

(Image credit: hridayaravinde.wordpress.com)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply