close logo

ಕಥಾಮಾಲಿಕೆ: ರುರು ಮತ್ತು ಪ್ರಮದ್ವರೆ

ಭೃಗು ಮಹರ್ಷಿಗಳಿಗೆ ಚ್ಯವನ ಎಂಬ ಮಗನಿದ್ದನು. ಚ್ಯವನ ಒಬ್ಬ ಹೆಸರಾಂತ ಋಷಿಯಾಗಿದ್ದನು. ಸುಕನ್ಯೆಯನ್ನು ಮದುವೆಯಾಗಿ ಪ್ರಮತಿ ಎಂಬ ಸಾತ್ವಿಕ ಋಷಿಯನ್ನು ಮಗನಾಗಿ ಪಡೆದನು. ಪ್ರಮತಿ ಒಂದು ಆಶ್ರಮದಲ್ಲಿ ವಿದ್ಯಾದಾನ ಮಾಡುತ್ತಿದ್ದನು. ಪ್ರಮತಿಗೆ ಘೃತಾಚಿ ಎಂಬ ಅಪ್ಸರೆಯಲ್ಲಿ ರುರು ಎಂಬ ಸ್ಫುರದ್ರೂಪಿಯಾದ ಮಗನಿದ್ದನು.

ಒಂದು ದಿನ ರುರು ಮತ್ತು ಅವನ ಸ್ನೇಹಿತರು ಅರಣ್ಯದಲ್ಲಿ ವಿಹರಿಸುತ್ತಿದ್ದರು. ಒಂದಿಷ್ಟು ಕಾಲದ ನಂತರ ಬಾಯಾರಿಕೆಯಿಂದ ನೀರನ್ನು ಹುಡುಕುತ್ತ ಆಶ್ರಮವೊಂದನ್ನು ತಲುಪಿದರು. ಬಾಗಿಲ ಬಳಿ ಸ್ವಲ್ಪ ಏರು ಧ್ವನಿಯಲ್ಲಿ “ನಾನು ಮತ್ತು ನನ್ನ ಸ್ನೇಹಿತರು ಬಾಯಾರಿಕೆಯಿಂದ ಬಳಲುತ್ತಿದ್ದೇವೆ. ಯಾರಾದರೂ ನೀರು ಕೊಡುವಿರಾ” ಎಂದು  ಒಳಗಿರುವವರಿಗೆ ಕೇಳುವ ಹಾಗೆ ಕೇಳಿಕೊಂಡನು. ಒಳಗಿನಿಂದ ಸಿಹಿಯಾದ ಯುವತಿಯ ಧ್ವನಿಯೊಂದು ಹೊರಟಿತು. “ಒಂದು ನಿಮಿಷ ಕಾದು ಕುಳಿತಿರಿ. ಮೂಕಪ್ರಾಣಿಯಾದ ಈ ಗಿಳಿಯನ್ನು ಸ್ವಲ್ಪ ಆರೈಕೆ ಮಾಡಿ ನಂತರ ನೀರು ತರುತ್ತೇನೆ” ಎಂದಿತು ಆ ಧ್ವನಿ.  ಸ್ವಲ್ಪ ಹೊತ್ತಿನ ನಂತರ ಆ ಯುವತಿ ಹೊರಬಂದಳು. ಯುವತಿಯ  ಆರೈಕೆಯಿಂದ ಚೇತರಿಸಿಕೊಂಡ ಒಂದು ಗಿಳಿ ಅದೇ ಸಮಯಕ್ಕೆ ಕಿಟಕಿಯಿಂದ ಹೊರಬಂದು ಹಾರುತ್ತ ಕಾಡಿನೊಳಗೆ ಕಣ್ಮರೆಯಾಯಿತು. ಯುವತಿಯ ಮುಖ ಸಂತೃಪ್ತಿಯ ಸೌಂದರ್ಯದ ಕಾಂತಿಯಿಂದ ತುಂಬಿತ್ತು  .

ರುರು ಆ ಸುಂದರ ಯುವತಿಯ ಮುಖವನ್ನು ದಿಟ್ಟಿಸುತ್ತಾ ತನ್ನನ್ನು ತಾನೇ ಮರೆತನು. “ನೀವು ನೀರು ಕೇಳಿದಿರಲ್ಲವೇ?” ಎಂದು ನೆನಪಿಸಿದಳು ಯುವತಿ. ಎಚ್ಚೆತ್ತ ರುರು “ಆಮ್….ಹೌದು” ಎನ್ನುತ್ತಾ ಸ್ನೇಹಿತರೊಡಗೂಡಿ  ನೀರು ಸೇವಿಸಿದನು. ಯುವತಿಯನ್ನುದ್ದೇಶಿಸಿ “ಇಷ್ಟು ಸಿಹಿಯಾದ ನೀರನ್ನು ನಾನು ಹಿಂದೆಂದೂ ಸೇವಿಸಿರಲಿಲ್ಲ” ಎಂದನು. ನಸುನಕ್ಕ ಯುವತಿ “ನಿಮ್ಮ ಬಾಯಾರಿಕೆ ಅಷ್ಟು ಮಿಗಿಲಾದದ್ದು” ಎಂದು ಹೇಳಿ ಕಣ್ಮರೆಯಾದಳು. ಅವಳಿಗೆ ಕೃತಜ್ಞತೆಗಳನ್ನರ್ಪಿಸಿ ಯುವಕರು ಆಶ್ರಮದತ್ತ ವಾಪಸಾದರು.

ರುರುವಿಗೆ ಮಾತ್ರ ಆ ಯುವತಿಯನ್ನು ಮರೆಯಲಾಗಲಿಲ್ಲ. ಇದನ್ನು ಗಮನಿಸಿ ಅರ್ಥಮಾಡಿಕೊಂಡ ಅವನ ಸ್ನೇಹಿತರು ಮಾರ್ಗಮಧ್ಯದಲ್ಲೆ ರುರುವನ್ನು ಒಂದಿಷ್ಟು ಕೀಟಲೆ ಮಾಡಿದರು. ವಾಪಸಾದ ನಂತ ರುರು ಆಲೋಚಿಸಿದನು. ಆ ಯುವತಿಯನ್ನು ಮದುವೆಯಾಗಬೇಕಾದರೆ ತಂದೆಗೆ ಈ ವಿಚಾರ ತಿಳಿಸಬೇಕು. ನಾನೇ ನೇರವಾಗಿ ತಿಳಿಸುವುದೆಂತು? ಸ್ನೇಹಿತರ ಸಹಾಯ ಪಡೆಯೋಣವೆಂದುಕೊಂಡನು. ತಕ್ಷಣವೇ ಅವರ ಬಳಿ ತೆರಳಿ ‘ನನಗೆ ಆ ಯುವತಿಯ ಮುಖವನ್ನು ಮರೆಯಲಾಗುತ್ತಿಲ್ಲ’ ಎಂದು ಹಿಂಜರೆಯುತ್ತ ತಿಳಿಸಿದನು. ಮತ್ತಷ್ಟು ಕೀಟಲೆ ಮಾಡಿದ ಸ್ನೇಹಿತರು ನಂತರ ಗುರುವಾದ ಪ್ರಮತಿಗೆ ಇದನ್ನು ತಿಳಿಸುವುದಕ್ಕೆ ಒಪ್ಪಿಕೊಂಡರು.

ಮಾರನೆಯ ಪ್ರಮತಿಯ ಬಳಿಬಂದ ಅವನ ಸ್ನೇಹಿತರು ಸಕಲವನ್ನೂ ತಿಳಿಸಿದರು. “ನನ್ನ ಮಗ ತನ್ನ ವಧುವನ್ನು ತಾನೇ ಆಯ್ಕೆ ಮಾಡಿಕೊಂಡದ್ದು ಸಂತೋಷವೇ ಸರಿ. ತಕ್ಷಣವೇ ಹೊರಡೋಣ, ಆ ಯುವತಿಯಿರುವ ಆಶ್ರಮವನ್ನು ತೋರಿಸಿ” ಎಂದನು. ಪ್ರಮತಿ, ರುರು ಮತ್ತು ಅವನ ಸ್ನೇಹಿತರು ಮತ್ತೆ ಆ ಯುವತಿಯಿರುವ ಆಶ್ರಮಕ್ಕೆ ಬಂದರು. ಆಶ್ರಮದ ಮುಂದಿನ ಉದ್ಯಾವನವನ್ನು ಉಪಚರಿಸುತ್ತಿದ್ದ ಯುವತಿ ರುರುವನ್ನು ನೋಡಿ ಮರುಕ್ಷಣವೇ ಒಳಗೋಡಿದಳು.

ಯುವತಿಯ ತಂದೆಯಾದ ಸ್ಥೂಲಕೇಶಯನ್ನು ನೋಡಿದ ತಕ್ಷಣವೇ ಪ್ರಮತಿ ಹರ್ಷಿಸಿದನು. ಸ್ಥೂಲಕೇಶ ಪ್ರಮತಿಯ ಬಹಳ ಕಾಲದ ಸ್ನೇಹಿತ. ಸ್ಥೂಲಕೇಶಗೂ ಪ್ರಮತಿಯ ಸಂಬಂಧ, ರುರುವಿನಂತಹ ಅಳಿಯನನ್ನು ಪಡೆಯುತ್ತಿರುವುದಕ್ಕೆ ಹರ್ಷ. ಅವನ ಮಗಳಾದ ಆ ಯುವತಿಯ ಹೆಸರು ಪ್ರಮದ್ವರೆ. ಮನದಲ್ಲಿ ಏನನ್ನೋ ನೆನೆದು, ಪ್ರಮತಿಯನ್ನುದ್ದೇಶಿಸಿ ಸ್ಥೂಲಕೇಶ ನುಡಿದನು. “ಸಂತೋಷದಾಯಕವಾದ ಈ ಸಂದರ್ಭದಲ್ಲಿ ನಾನೊಂದು ವಿಚಾರವನ್ನು ತಿಳಿಸಬೇಕು. ಪ್ರಮದ್ವರೆ ನನಗೆ ಹುಟ್ಟಿದ ಮಗಳಲ್ಲ. ನನ್ನ ಸಾಕುಮಗಳು. ಬಹಳ ವರ್ಷಗಳ ಹಿಂದೆ ನದಿಯ ತೀರವೊಂದರಲ್ಲಿ ವಿಹರಿಸುತ್ತಿದ್ದಾಗ ಪೊದೆಯೊಂದರ ಬಳಿ ಒಂದು ಹೆಣ್ಣುಮಗುವನ್ನು ಕಂಡೆ. ಯಾವ ಅಪ್ಸರೆಯೋ ಗಂಧರ್ವರೋ ಹೃದಯಶೂನ್ಯರು ಇಲ್ಲಿ ಬಿಟ್ಟಿರಬೇಕೆಂದು ತಿಳಿದು ಮಗುವನ್ನು ಮನೆಗೆ ಕರೆತಂದು ನನ್ನ ಮಗಳಾಗಿ ಸ್ವೀಕರಿಸಿದೆ. ಶಾಸ್ತ್ರಾನುಸಾರ ಸಕಲ ಕರ್ಮಗಳನ್ನು, ಸಂಸ್ಕಾರಗಳನ್ನು ನಡೆಸಿ ಮಗಳಿಗೆ ಪ್ರಮದ್ವರೆ ಎಂದು ಹೆಸರನ್ನಿಟ್ಟೆ. ಮುದ್ದಿನಿಂದ, ಅತಿಸೂಕ್ಷ್ಮದಲ್ಲಿ ಇವಳನ್ನು ಬೆಳೆಸಿದೆ. ಇಂದು ನಾನು ಹೆಮ್ಮೆಪಡುವಂತಹ ಮಗಳಾಗಿ ಬೆಳೆದಿದ್ದಾಳೆ” ಎಂದನು. ಗಮನವಿಟ್ಟು ಕೇಳುತ್ತಿದ್ದ ರುರು “ಋಷಿಗಳೇ, ಅವಳ ಜನ್ಮ ರಹಸ್ಯ ಯಾವುದೇ ಇರಲಿ ನಾನು ಪ್ರಮದ್ವರೆಯನ್ನೇ ಮದುವೆಯಾಗಬಯಸುತ್ತೇನೆ” ಎಂದನು. ಹಿರಿಯರೆಲ್ಲ ಆ ಕ್ಷಣವೇ ಮದುವೆಯನ್ನು ನಿಶ್ಚಯಿಸಿದರು. ಸ್ಥೂಲಕೇಶ “ವರ್ಗದೈವತ ನಕ್ಷತ್ರ ಮುಂದಡಿಯಿಡುವ ದಿನ ನಿಮ್ಮಿಬ್ಬರ ಮದುವೆ” ಎಂದು ಮುಹೂರ್ತವನ್ನು ತಿಳಿಸಿದನು. ಆ ದಿನ ರುರು ಮತ್ತು ಪ್ರಮದ್ವರೆಯರು ಸಂತೋಷದಿಂದ ಕಾಡಿನಲ್ಲಿ ವಿಹರಿಸಿದರು.

ಆದರೆ ವಿಧಿಯ ಸಂಕಲ್ಪವೇ ಬೇರೆಯಿತ್ತು. ಕೆಲ ದಿನಗಳ ನಂತರ ಪ್ರಮದ್ವರೆ ತನ್ನ ಸ್ನೇಹಿತರ ಜೊತೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕಾಡಿನಲ್ಲಿ ಆಟವಾಡುತ್ತಿದ್ದಳು. ಹುಡುಗಾಟದ ಸಂತೋಷದಲ್ಲಿ ಅಪಾಯ ಹತ್ತಿರವೇ ಇದ್ದುದು ಅವರ ಗಮನಕ್ಕೆ ಬರಲಿಲ್ಲ. ಅವರು ಆಟವಾಡುತ್ತಿದ್ದ ಸುತ್ತಮುತ್ತಿನಲ್ಲೇ ಘಟಸರ್ಪವೊಂದಿತ್ತು. ಕಣ್ಣಿಗೆ ಬಟ್ಟೆಯಿತ್ತಾಗಿ ತಿಳಿಯದೆ ಪ್ರಮದ್ವರೆ ಪೊದೆಯ ಬಳಿ ಆ ಸರ್ಪವನ್ನು ತುಳಿದುಬಿಟ್ಟಳು. ಕುಪಿತಗೊಂಡ ಸರ್ಪ ಪ್ರಮದ್ವರೆಯನ್ನು ಕಚ್ಚಿಬಿಟ್ಟಿತು. ‘ಹ’ ಎಂದು ಕೂಗುತ್ತಾ ಪ್ರಮದ್ವರೆ ನೆಲಕ್ಕುರುಳಿದಳು. ಸ್ನೇಹಿತರು ಮತ್ತು ತಂದೆಯಾದ ಸ್ಥೂಲಕೇಶ ಆತಂಕದಿಂದ ಓಡಿ ಬರುವಷ್ಟರಲ್ಲಿ ವಿಷವೇರಿ ಪ್ರಮದ್ವರೆಯ ಪ್ರಾಣ ಹಾರಿಹೋಗಿತ್ತು. ದೇಹ ನಿಶ್ಚಲವಾಗಿತ್ತು. ಆದರೆ ಅವಳ ಮುಖದ ಕಾಂತಿ, ದೈವೀಕ ಸೌಮದರ್ಯಕ್ಕೆ ಮಾತ್ರ ಒಂದಿಷ್ಟೂ  ಚ್ಯುತಿ ಬಂದಿರಲಿಲ್ಲ.

ವಿಷಯ ಎಲ್ಲೆಡೆ ಹಬ್ಬಿತು. ಕುಶಿಕ, ಭಾರದ್ವಾಜ. ಉದ್ಧಾಲಕ, ಗೌತಮರೇ ಮುಂತಾದ ಎಲ್ಲ ಆಶ್ರಮಗಳ ಋಷಿಗಳು  ಮತ್ತು ನಿವಾಸಿಗಳು  ಸ್ಥೂಲಕೇಶಗಳ ಆಶ್ರಮಕ್ಕೆ ಧಾವಿಸಿದರು. ಸ್ಥೂಲಕೇಶಗಳ ದುಃಖ ಹೇಳತೀರದ್ದಾಗಿತ್ತು. ಆದರೆ ರುರುವಿನ ದುಃಖ ಅದನ್ನು ಮೀರಿದುದಾಗಿತ್ತು. ಕೋಪ ಮತ್ತು ದುಃಖವನ್ನು ತಡೆಯಲಾರದೆ ರುರು ತಕ್ಷಣ ದಟ್ಟ ಕಾಡಿನ ಮಧ್ಯಕ್ಕೆ ಓಡಿದನು. “ಅಯ್ಯೋ, ನನ್ನೀ ಕಣ್ಣುಗಳಿಂದ ಪ್ರಮದ್ವರೆಯ ಪ್ರಾಣವಿಲ್ಲದ ದೇಹವನ್ನು ನೋಡುವಂತಾಯಿತಲ್ಲ? ತನ್ನ ಸುತ್ತಲಿನ ಪ್ರತಿ ಜೀವವನ್ನು ಆರೈಕೆ ಮಾಡುತ್ತಿದ್ದ ಪ್ರಮದ್ವರೆಗೆ ಈಗ ಆರೈಕೆಯೇ ಸಾಧ್ಯವಿಲ್ಲದಂತಾಯ್ತೆ?” ಎಂದು ವಿಹ್ವಲನಾದನು. ಕಡೆಗೊಮ್ಮೆ ದುಃಖ ಮಿತಿಮೀರಿ “ನಾನು ನಿಜಕ್ಕೂ ಧರ್ಮದಿಂದ ನಡೆದುಕೊಂಡಿದ್ದರೆ, ನನ್ನ ತಪಸ್ಸು ನಿಜವಾದುದಾಗಿದ್ದರೆ, ಗುರುಹಿರಿಯನ್ನು ನಾನು ಸದಾಕಾಲ ಗೌರವಿಸಿದ್ದರೆ – ಈ ತಕ್ಷಣ ನನ್ನ ಪ್ರಾಣಕ್ಕಿಂತಲೂ ಮಿಗಿಲಾದ ಪ್ರಮದ್ವರೆ ಜೀವ ತಳೆದು ಮತ್ತೆ ಬರಲಿ” ಎಂದು ಪ್ರತಿಜ್ಞೆ ಮಾಡಿದನು.

ಆಗ ಒಂದು ಅಶರೀರವಾಣಿ ಮೊಳಗಿತು. “ರುರು, ಒಮ್ಮೆ ಸತ್ತವರು ತಮ್ಮಿಂದ ತಾವೇ ಮತ್ತೆ ಜೀವತಳೆದು ಬರುವುದು ಸಾಧ್ಯವಿಲ್ಲದ ಮಾತು.” ನೋಡನೋಡುತ್ತಿದ್ದಂತೆ ದೇವದೂತನೊಬ್ಬ ರುರುವಿನ ಮುಂದೆ ನಿಂತಿದ್ದ. “ಆದರೆ ನಿನಗೋಸ್ಕರ ದೇವತೆಗಳು ಒಂದು ಉಪಾಯವನ್ನು ತೋರಿಸಿದ್ದಾರೆ. ನೀನು ನಿನ್ನ ಅರ್ಧ ಆಯುಷ್ಯವನ್ನು ಪ್ರಮದ್ವರೆಗೆ ಧಾರೆ ಎರೆಯುವುದಾದರೆ ಅವಳು ಮತ್ತೆ ಜೀವಂತಳಾಗುತ್ತಾಳೆ” ಎಂದನು ದೇವದೂತ. ರುರು ಹರ್ಷದಿಂದ “ದೇವದೂತನೇ, ಅರ್ಧ ಆಯುಷ್ಯವೇಕೆ? ಪ್ರಮದ್ವರೆಗೆ ಜೀವಬರುವುದಾದರೆ ನನ್ನ ಪೂರ್ತಿಜೀವವನ್ನೇ ಧಾರೆಯೆರೆದೇನು” ಎಂದು ಉದ್ಗರಿಸಿದನು.

ಮರುಕ್ಷಣವೇ ಪ್ರಮದ್ವರೆಯ ದೇಹ ಜೀವದಿಂದ ಮಿಸುಕಾಡಿತು. ಸ್ಥೂಲಕೇಶಗಳ ಧ್ವನಿಕೇಳಿ ಪ್ರಮದ್ವರೆ ಎದ್ದಳು. ವಿಷಯವೆಲ್ಲವನ್ನು ತಿಳಿದು ಕಾಡಿಗೆ ಓಡಿದಳು. ಒಂದು ಕಡೆಯಿಂದ ರುರು ಮತ್ತೊಂದು ಕಡೆಯಿಂದ ಪ್ರಮದ್ವರೆ ಒಬ್ಬರನ್ನೊಬ್ಬರು ಉದ್ದೇಶಿಸಿ ಕೂಗುತ್ತ ಓಡಿಬಂದರು. ಅವರಿಬ್ಬರ ಮಿಲನಕ್ಕೆ ಸಕಲಲೋಕಗಳು ಸಾಕ್ಷಿಯಾದವು. ನಿಗದಿತವಾದ ಮುಹೂರ್ತದಲ್ಲೇ ರುರು ಮತ್ತು ಪ್ರಮದ್ವರೆಯರ ವಿವಾಹ ಶಾಸ್ತ್ರೋಕ್ತವಾಗಿ ನೆರೆವೇರಿತು. ಸ್ಥೂಲಕೇಶ ಮತ್ತು ಪ್ರಮತಿ ನೆಮ್ಮದಿಯ ಉಸಿರಿಟ್ಟರು.

ಪತಿಪತ್ನಿಯರಾದ ರುರು ಮತ್ತು ಪ್ರಮದ್ವರೆಯ ದಾಂಪತ್ಯಜೀವನ ಸಂತಸದಿಂದ ಕೂಡಿತ್ತು. ಆಶ್ರಮದ ನಿರ್ವಹಣೆಯಲ್ಲಿ, ಗುರುಹಿರಿಯರ ಸೇವೆಯಲ್ಲಿ, ಜೀವಜಂತುಗಳ ಆರೈಕೆಯಲ್ಲಿ ಸಾಗಿತ್ತು. ಆದರೆ ರುರುವಿಗೆ ಮಾತ್ರ ಸರ್ಪಗಳ ಕುಲದ ಮೇಲೆಯೇ ಕ್ರೋಧವುಂಟಾಗಿತ್ತು, ತನ್ನ ಪ್ರಾಣಪ್ರಿಯೆಯಾದ ಪ್ರಮದ್ವರೆಯ ಜೀವಕ್ಕೆ ಘಾತಿ ಮಾಡಿದ್ದ ಸರ್ಪಗಳ ಮೇಲೆ ಕೋಪದಲ್ಲಿ ಕುರುಡನಾಗಿದ್ದ. ಎದುರಿಗೆ ಸಿಕ್ಕ ಯಾವ ಸರ್ಪವನ್ನು ಬಿಡದೆ ತನ್ನ ದಂಡದಿಂದ ಬೀಸಿ ಕೊಲ್ಲುತ್ತಿದ್ದ.  ಹೀಗಿರುತ್ತ, ಒಮ್ಮೆ ವಿಷವಿಲ್ಲದ ಒಂದು ಕೇರೆ ಹಾವು ಎದುರಿಗೆ ಸಿಕ್ಕಿತು. ಅದನ್ನು ಇನ್ನೇನು ಕೊಲ್ಲಬೇಕೆನ್ನುವಷ್ಟರಲ್ಲಿ ಸರ್ಪ “ಮಹರ್ಷಿಯೇ, ನನ್ನಿಂದ ನಿಮಗೆ ಯಾವುದೇ ತೊಂದರೆಯಾಗಿಲ್ಲದಿದ್ದರೂ ನೀವು ನನ್ನನ್ನು ಕೊಲ್ಲಲು ಉದ್ದೇಶಿಸಿರುವುದು ತರವಲ್ಲ” ಎಂದು ಪ್ರಾಣಭಯದಿಂದ ದೂರಿತು. “ಸರ್ಪವೇ, ನನ್ನ ಪ್ರಿಯ ಪತ್ನಿಯನ್ನು ಸರ್ಪವೊಂದು ಒಮ್ಮೆ ಕೊಂದಿತ್ತು. ಸುದೈವದಿಂದ ಅವಳು ಬದುಕಿ ಉಳಿದಳು. ಆದ್ದರಿಂದ ನಾನು ಯಾವ ಸರ್ಪವನ್ನೂ ಬಿಡುವುದಿಲ್ಲ. ಪ್ರಾಣತ್ಯಾಗಕ್ಕೆ ಸಿದ್ಧನಾಗು” ಎಂದು ಗರ್ಜಿಸಿದನು. “ಮಹಾಮಹಿಮರೇ, ನಿಮ್ಮ ಪತ್ನಿಯನ್ನು ಕೊಂದದ್ದು ಒಂದು ವಿಷಸರ್ಪವಲ್ಲವೇ? ನಾನಾದರೋ ವಿಷವಿಲ್ಲದ ಒಂದು ಕೇರೆ ಹಾವು. ನನ್ನ ಮೇಲೇಕೆ ಕೋಪ? ಇದು ತರವಲ್ಲ” ಎಂದು ಬೇಡಿಕೊಂಡಿತು. ಅದರ ಮಾತಿನಲ್ಲಿ ತಥ್ಯವಿರುವುದನ್ನು ಮನಗಂಡ ರುರು ತನ್ನ ದಂಡವನ್ನು ಕೆಳಗಿಳಿಸಿದನು. “ಸರ್ಪವೇ ನೀನಾರು? ಮನುಷ್ಯರ ರೀತಿಯಲ್ಲಿ ನನ್ನೊಡನೆ ಮಾತನಾಡುತ್ತಿರುವೆಯಲ್ಲ” ಎಂದು ವಿಚಾರಿಸಿದನು ರುರು.

ಸರ್ಪವು ತನ್ನ ಕಥೆಯನ್ನು ಹೇಳುವುದಕ್ಕೆ ಮೊದಲಾಯಿತು. ಹಿಂದಿನ ಜನ್ಮದಲ್ಲಿ ಸರ್ಪ ಸಹಸ್ರಪಾದನೆಂಬ ಬ್ರಾಹ್ಮಣನಾಗಿತ್ತು. ಸಹಸ್ರಪಾದನಿಗೆ ಖಗಮ ಎಂಬ ಸ್ನೇಹಿತನಿದ್ದನು. ಖಗಮ ಶಾಸ್ತ್ರಾಧ್ಯಯನದಲ್ಲಿ ನಿಪುಣನಾಗಿದ್ದನು. ಆದರೆ ಸಹಸ್ರಪಾದ ಮೋಜಿನಲ್ಲಿ ನಿರತನಾಗಿದ್ದನು. ಒಂದು ದಿನ ಸಹಸ್ರಪಾದ ಅಭ್ಯಾಸದಲ್ಲಿ ನಿರತನಾಗಿದ್ದ ಖಗಮನ ಕತ್ತಿನ ಮೇಲೆ ಸರ್ಪದಂತೆ ತೋರುವ ಹುಲ್ಲನ್ನು ಹಾಸ್ಯಕ್ಕೋಸ್ಕರ ಎಸೆದಿದ್ದನು. ಅದನ್ನು ಸರ್ಪವೆಂದೇ ತಿಳಿದ ಖಗಮ ಭಯವಿಹ್ವಲನಾದನು. ಕಡೆಗೆ ಸಹಸ್ರಪಾದನ ಹಾಸ್ಯವನ್ನು ಅರಿತು ಕೋಪಾವಿಷ್ಟನಾದನು. ಸ್ನೇಹಿತನೆನ್ನುವುದನ್ನೂ ಮರೆತು ಸಹಸ್ರಪಾದನನ್ನು ಸರ್ಪವಾಗುವಂತೆ ಶಪಿಸಿದನು. ಧರೆಗಿಳಿದ ಸಹಸ್ರಪಾದ ಪಶ್ಚಾತ್ತಾಪ ಪಟ್ಟನು. ಅವನ ನಿಜವಾದ ಪಶ್ಚಾತ್ತಾಪವನ್ನು ಕಂಡ ಖಗಮ ಅವನ ಉದ್ದಿಶ್ಯ ಕೆಟ್ಟದ್ದಾಗಿಲ್ಲದ ಕಾರಣ ವಿಷವಿಲ್ಲದ ಸರ್ಪವಾಗುವಂತೆ ಶಾಪವನ್ನು ಮಾರ್ಪಡಿಸಿದನು. ಅಷ್ಟೇ ಅಲ್ಲದೆ ಮುಂದೆ ಚ್ಯವನ ಮಹರ್ಷಿಗಳ ಕುಲದಲ್ಲಿ ಹುಟ್ಟಿದ ಋಷಿಯಿಂದ ಅವನಿಗೆ ಶಾಪವಿಮೋಚನೆಯಾಗುವುದು ಎಂದು ತಿಳಿಸಿದನು.

ರುರು ನೋಡನೋಡುತ್ತಿದ್ದಂತೆಯೇ ಸಹಸ್ರಪಾದ ಮತ್ತೆ ಮನುಷ್ಯನಾದನು. ರುರುವಿಗೆ ತನ್ನ ಅರ್ಥಹೀನ ಕೋಪಕ್ಕೆ ನಾಚಿಕೆಯಾಯಿತು. ಋಷಿಯಾದವನಿಗೆ ಕೋಪ, ದ್ವೇಷ ತರವಲ್ಲ ಎಂದು ರುರು ಅರಿತನು. ಅವನ ಕೋಪ ಅಲ್ಲಿಗೆ ಅಳಿಯಿತು. ನಂತರ, ಪ್ರಮದ್ವರೆಯ ಜೊತೆಯಲ್ಲಿ ರುರು ಅನೇಕ ವರ್ಷಗಳ ಕಾಲದ ಸುಖೀ ದಾಂಪತ್ಯವನ್ನು ನಡೆಸಿ ರುರು ಮುಕ್ತಿಪಡೆದನು.

Image Source: https://archive.org/details/mahabharata01ramauoft/page/n98/mode/1up

 

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply