close logo

ರಾಮನಡಿಯಿಟ್ಟ ಪಥವೇ ರಾಮಾಯಣ

ಹಿಂದಿನ ಭಾಗದ ಲೇಖನವನ್ನು ಇಲ್ಲಿ ಓದಬಹುದು.

ನಿರ್ವೈರವಾಗಿಸುವ ಗೆಲುವಿನ ಪಥ:

ರಾಮನ ಅಯನ ರಾಮಾಯಣ ಎನ್ನುವುದು ಸಾಮಾನ್ಯವಾಗಿ ರಾಮಾಯಣ ಪದವನ್ನು ಅರ್ಥೈಸುವ ರೀತಿ.  ರಾಮನ ಮಾರ್ಗ ಗೆಲುವಿನ ಪಥ ಎನ್ನುವುದು ವಿಶೇಷಾರ್ಥವುಳ್ಳದ್ದು. ರಾಮನ ಗೆಲುವಿನ ಪಥದ ಆರಂಭದ ಹೆಜ್ಜೆ ರಾಮ ಕೌಶಿಕನನ್ನು ಗುರುವಾಗಿ ಪಡೆದದ್ದು. ಸಕಲ ಅಸ್ತ್ರ ಶಸ್ತ್ರವಿದ್ಯಾ ಪಾರಂಗತನಾದ ಬ್ರಹ್ಮರ್ಷಿ ವಸಿಷ್ಠ ರಾಮನ ಕುಲಗುರು ಮತ್ತು ವಿದ್ಯಾಗುರು. ಬ್ರಹ್ಮರ್ಷಿ ಎನ್ನಿಸಿಕೊಳ್ಳುವ ವರೆಗೆ ಕೌಶಿಕ ಆಗಿದ್ದ ವಿಶ್ವಾಮಿತ್ರರಿಗೆ ವಸಿಷ್ಠ ಒಂದು ಕಾಲದಲ್ಲಿ ಬದ್ಧವೈರಿ. ತಾನು ಬಯಸಿದ ನಂದಿನಿ ಧೇನುವನ್ನು ಕೊಡದಿದ್ದುದನ್ನು ವಿರೋಧಿಸಿ ಬಲಪ್ರಯೋಗದಿಂದ ನಂದಿನಿಯನ್ನು ಪಡೆಯಲು ತಾನು ಬಳಸಿದ ಎಲ್ಲಾ ಅಸ್ತ್ರ ಶಸ್ತ್ರಗಳನ್ನೆಲ್ಲಾ ಕೇವಲ ತಮ್ಮ ದಂಡದಿಂದಲೇ ನಿರರ್ಥಕಗೊಳಿಸಿ ತನ್ನನ್ನು ವಸಿಷ್ಠರು ಅವಮರ್ಯಾದಿಸಿದರು ಎನ್ನುವುದು ಕೌಶಿಕನಿಗೆ ವಸಿಷ್ಠರ ಮೇಲೆ ದ್ವೇಷ ಸಾಧಿಸಲು ಕಾರಣ ಆಗಿತ್ತು. ವಸಿಷ್ಠನ ಶಿಷ್ಯನಾಗಿ ರಾಮನೂ ಕೌಶಿಕನಿಗೆ ಬದ್ಧವೈರಿಯೇ. ಬದ್ಧವೈರ ಬದುಕಿರುವ ವರೆಗೂ ಆತಂಕಕಾರಿಯೇ. ಕೌಶಿಕ ರಾಮನನ್ನು ಹುಡುಕಿಕೊಂಡು ವಸಿಷ್ಠ ಇದ್ದಲ್ಲಿಗೆ ಯಾವ ಅನ್ಯ ಭಾವವೂ ಇಲ್ಲದೆ ಬಂದದ್ದು, ತಾನು ಸಿದ್ಧಿಸಿಕೊಂಡ ಅಸ್ತ್ರಶಸ್ತ್ರಬಲಗಳನ್ನೆಲ್ಲ ಒಳಿತಿನ ಸಾಧನೆಗಾಗಿ ರಾಮನಿಗೆ ಧಾರೆಯೆರೆದದ್ದು ರಾಮನ ಗೆಲುವೇ. ಇದು ರಾಮನ ಗೆಲುವಿನ ಪಥದ ಪ್ರಥಮ ಹೆಜ್ಜೆ. ವೈರಭಾವವನ್ನು ನಿರ್ವೈರವಾಗಿಸುವ ರಾಮನ ವ್ಯಕ್ತಿತ್ವವೂ ಅತಿಶಯವಾದದ್ದು ಮತ್ತು ಅವನ ಗೆಲುವಿನ ಪಥವೂ ಅತಿಶಯವಾದದ್ದು.

ವಿಶ್ವಾಮಿತ್ರ ನಡೆಸಬೇಕೆಂದಿದ್ದ ಯಜ್ಞದ ರಕ್ಷಣೆಗೆ ಲಕ್ಷ್ಮಣನೊಂದಿಗೆ ಹೊರಟ ರಾಮ ಆ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ ನಂತರದ ಘಟನೆ ಅವನು ಶಿಲೆಯು ಉಸಿರಾಡುವಂತೆ ಮಾಡಿದ್ದು. ಜಡವಾಗಿರುವುದನ್ನು ಚೇತನವಾಗಿಸುವುದು ಒಂದು ಯೌಗಿಕ ಸಿದ್ಧಿ. ಆದರೆ ರಾಮ ಸಾಧಿಸಿದುದು ಅಂತಹುದಲ್ಲ. ಗೌತಮನ ಹೆಂಡತಿ ಅಹಲ್ಯೆ ಗೌತಮನ ಶಾಪಕ್ಕೆ ಗುರಿಯಾಗಿ ಏನೂ ಚಿಗುರದ ಬಂಡೆಯಂತೆ ಇದ್ದಳು. ಅವಳು ಸ್ಪಂದನೆ, ಸಹಸ್ಪಂದನೆ ಇರುವ ಮಾನವ ಜೀವಿ ಎಂಬುದನ್ನು ಮನಗಾಣುವಂತೆ ರಾಮ ಮಾಡಿದ. ಇದು ಶಿಲೆ ಉಸಿರಾಡಿತ್ತು ಎನ್ನುವುದರ ಅರ್ಥ. ಇಂಥ ಒಂದು ಬದಲಾವಣೆ ರಾಮ ಅವಳ ಬಳಿಗೆ ತಾಯೇ ಎಂದು ಹೋದಾಗ ಸ್ಪಷ್ಟರೂಪವನ್ನು ಪಡೆಯಿತು. ಪುರುಷನಿಂದಾಗಿ ಹೀನಾಯ ಸ್ಥಿತಿಯನ್ನು ಹೊಂದಿದ್ದ ಅಹಲ್ಯೆಯನ್ನು ಜಾಗೃತಗೊಳಿಸಿದುದು ರಾಮ ಆಕೆಯಲ್ಲಿ ಕಂಡ ಮಾತೃತ್ವ. ಇದು ಪುರುಷಪ್ರಧಾನ ಜಗತ್ತಿಗೆ ಜಡವಾಗಿದ್ದ‌ ಅಹಲ್ಯೆಯನ್ನು ಚೈತನ್ಯಭರಿತ ಆಗಿಸಿತು. ಅವಳ ಬದುಕಿಗೆ ಹೊಸ ಆಯಾಮವನ್ನು ಕೊಟ್ಟಿತು. ನಿಶ್ಚಯವಾಗಿ ಇದೊಂದು ನಿರ್ವೈರದ ನಿರ್ವ್ಯಾಜ‌ ಪ್ರೀತಿಯ ಗೆಲುವಿನ ಪ್ರಸಂಗ.

ರಾಮ, ಲಕ್ಷ್ಮಣರು ವಿಶ್ವಾಮಿತ್ರರೊಂದಿಗೆ ಮಿಥಿಲೆಗೆ ಹೋದದ್ದು, ಶಿವಧನುಸ್ಸನ್ನು ಹೆದೆಯೇರಿಸುವ ಪಂಥವನ್ನು ಗೆಲ್ಲುವಾಗ ಬಿಲ್ಲು ಮುರಿದರೂ ಸೀತೆಯನ್ನು ಮದುವೆಯಾಗಲು ಸಾಧ್ಯವಾದದ್ದು, ಅವನೊಂದಿಗೆ ಅವನ ಉಳಿದ ತಮ್ಮಂದಿರರಿಗೂ ಮಿಥಿಲೆಯ ರಾಜಕುಮಾರಿಯರೊಂದಿಗೆ ವಿವಾಹವಾದದ್ದು ರಾಮಾಯಣದ ಮತ್ತು ರಾಮನ ಬದುಕಿನ ಮುಖ್ಯ ಘಟನೆಗಳು. ಇವುಗಳೊಂದಿಗೆ ಸೇರಿಕೊಂಡು ಮುಖ್ಯವಾದದ್ದು ಪರಶುರಾಮನಿಗೆ ರಾಮ ಮುಖಾಮುಖಿ ಆದದ್ದು. ತಾವೇ ಮಿಗಿಲು ಎಂದೆನ್ನಿಸಿಕೊಂಡ ಎಲ್ಲಾ ಕ್ಷತ್ರಿಯರನ್ನೂ ಸದೆಬಡಿದವನು ಹರಿಯ ಅವತಾರವೂ ಆದ ಪರಶುರಾಮ. ಅವನು ಕಠಿಣ ತಪಸ್ಸಿನಿಂದ ಅತಿಯಾಗಿ ಶಕ್ತ ಆದ ಪರಶುವನ್ನು ಆಯುಧವನ್ನಾಗಿ ಹರನಿಂದ ಪಡೆದಿದ್ದ. ಸೀತೆಯನ್ನು ವಿವಾಹವಾಗಿ ತಂದೆ, ತಾಯಿ, ತಮ್ಮಂದಿರು, ಅವರ ಪತ್ನಿಯರು ಮತ್ತು ಸಕಲ ಪರಿವಾರದೊಂದಿಗೆ ಸಂತೋಷದಿಂದ ಅಯೋಧ್ಯೆಗೆ ಹಿಂತಿರುಗುತ್ತಿದ್ದ ರಾಮನಿಗೆ ಕಠಿಣಹೃದಯಿ ಪರಶುರಾಮ ಎದುರಾಗಿದ್ದ. ಹರಿ-ಆಯುಧವಾದ ವೈಷ್ಣವ ಬಿಲ್ಲನ್ನು ಕೊಟ್ಟು ಹೆದೆಯೇರಿಸು ಎಂದ. ಶಿವನ ಬಿಲ್ಲನ್ನೇ ಮುರಿದು ಹಾಕಿದ ಅಹಂಕಾರಿ ರಾಮ ಎಂಬುದು ಪರಶುರಾಮನ ಗ್ರಹಿಕೆ. ಪರಶುರಾಮನ ಅಹಂಕಾರದ ನಡೆಗೆ ಸ್ವಲ್ಪವೂ ಬೇಸರಿಸದೆ ರಾಮ ಹಸನ್ಮುಖಿಯಾಗಿ ಸುಲಭವಾಗಿ ವೈಷ್ಣವ ಬಿಲ್ಲಿಗೆ ಹೆದೆಯೇರಿಸಿದ, ಬಾಣಕ್ಕೆ ಪರಶುರಾಮನ ಇಚ್ಛೆಯಂತೆ ಅವನ ತಪೋಪುಣ್ಯವನ್ನು ಗುರಿಯಾಗಿಸಿ ಅವನನ್ನು ನಿರಹಂಕಾರಿಯಾಗಿಸಿದ, ಪರಶುರಾಮನಲ್ಲಿದ್ದ ಕ್ಷತ್ರಿಯ-ವೈರದ ವ್ಯಕ್ತಿತ್ವವನ್ನು ಅಳಿಸಿಹಾಕಿದ, ನಿರ್ವೈರದ ವ್ಯಾಪ್ತಿಯನ್ನು ಹಿಗ್ಗಿಸಿದ. ಇದು ರಾಮನ ಅಪ್ರತಿಮವಾದ ಗೆಲುವು.

ದಶರಥ ತರಾತುರಿಯಲ್ಲಿ ರಾಮನಿಗೆ ಪಟ್ಟಾಭಿಷೇಕ ಮಾಡುವ ವ್ಯವಸ್ಥೆ ಮಾಡಿದ್ದು, ಅದರಲ್ಲಿ ಕೈಕೇಯಿಗೆ, ಮಂಥರೆಗೆ ಭರತನ ಭದ್ರ ಭವಿಷ್ಯತ್ತಿಗೆ ಆಪತ್ತಿನ ಸೂಚನೆ ಕಂಡಿದ್ದು, ಕೈಕೇಯಿಗೆ ಅನಿವಾರ್ಯವಾಗಿ ದಶರಥ ರಾಮನಿಗೆ 14 ವರ್ಷ ವನವಾಸ, ಭರತನಿಗೆ ರಾಜ್ಯಾಭಿಷೇಕ ಎನ್ನುವ ವರಗಳನ್ನು ಕೊಡಬೇಕಾಗಿ ಬಂದದ್ದು, ರಾಮ ಸ್ವಲ್ಪವೂ ತಡಮಾಡದೆ ತನ್ನೊಂದಿಗೆ ಬಂದೇ ತೀರುತ್ತೇವೆ ಎಂದು ದೃಢವಾಗಿ ನಿಶ್ಚಯಿಸಿದ ಸೀತೆ, ಲಕ್ಷ್ಮಣರೊಂದಿಗೆ ವನವಾಸಕ್ಕೆ ಹೊರಟುಹೋದದ್ದು, ಅವರ ವಿರಹವನ್ನು ತಾಳಲಾಗದೆ ದಶರಥ ಮರಣ ಹೊಂದಿದ್ದು ರಾಮನ ಬದುಕಿಗೆ ದೊರೆತ ಗಂಭೀರ ತಿರುವುಗಳು. ಈ ಸಂದರ್ಭಗಳಲ್ಲಿ ಭರತ ತಮ್ಮ ಶತ್ರುಘ್ಞನೊಡನೆ ತನ್ನ ಅಜ್ಜನ ಮನೆಗೆ ಹೋಗಿದ್ದ. ತನಗೆ ಪಟ್ಟಾಭಿಷೇಕ, ರಾಮನಿಗೆ ವನವಾಸ ಎನ್ನುವ ಹಕ್ಕೊತ್ತಾಯವನ್ನು ತಾಯಿ ಕೈಕೆ ಮಂಥರೆಯ ಪ್ರೇರಣೆಯ ನೆವದಲ್ಲಿ ಮುಂದು ಮಾಡಿದುದು ಭರತನಿಗೆ ಅವಮಾನದ ವಿಷಯ ಆಯಿತು. ಅವನು ತನಗೆ ಅನ್ಯಾಯದ ಪಟ್ಟಾಧಿಕಾರ ಬೇಡವೇ ಬೇಡ ಎಂದು ನಿರಾಕರಿಸಿದ, ವನವಾಸದಲ್ಲಿದ್ದ ರಾಮನ ಬಳಿಗೆ ಹೋಗಿ ಅವನಿಗೆ ಸಲ್ಲಬೇಕಾಗಿದ್ದ ಪಟ್ಟಾಧಿಕಾರವನ್ನು ಪಡೆಯಲೇಬೇಕೆಂದು ಒತ್ತಾಯಿಸಿದ. ತಂದೆಯ ಆದೇಶವನ್ನು ಇಬ್ಬರೂ ಪಾಲಿಸಬೇಕು ಎಂದು ರಾಮ ಖಡಾಖಂಡಿತವಾಗಿ ಹೇಳಿದುದರಿಂದ. ಕೊನೆಗೆ ಭರತ ರಾಮನ ಪಾದುಕೆಗಳನ್ನೇ ರಾಮ ಎಂದು ತಿಳಿದು ಆಡಳಿತವನ್ನು ನಡೆಸುತ್ತೇನೆ ಎನ್ನುವ ರಾಜಿ ಸೂತ್ರವನ್ನು ಇಟ್ಟ. ರಾಮ ಒಪ್ಪಿದ. ಭರತನ ರಾಜಿ ಸೂತ್ರ ರಾಮನ ಪಟ್ಟಾಧಿಕಾರವನ್ನು ಸ್ಥಿರಗೊಳಿಸಿತು, ಪಟ್ಟಾಧಿಕಾರವನ್ನು ಭರತ ಸ್ವಸಂತೋಷದಿಂದ ಹಿಂತಿರುಗಿಸಲು ಬಯಸಿದುದು ಮರ್ಯಾದಿತ ಆಯಿತು, ಅಣ್ಣತಮ್ಮಂದಿರನ್ನು ಒಟ್ಟಾಗಿಯೇ ಇರಿಸಿತು. ಇದು ರಾಮನ ಅಪೂರ್ವ ಗೆಲುವು.

ಭರತ, ಶತ್ರುಜ್ಞರು ಎಲ್ಲಾ ತಾಯಿಯರೊಂದಿಗೆ ಅರಮನೆಯ ಎಲ್ಲಾ ಪರಿವಾರದೊಂದಿಗೆ ರಾಮನ ಬಳಿಗೆ ಬಂದಿದ್ದರು. ತಂದೆಯ ಮರಣದ ದುಃಖ ವಾರ್ತೆಯನ್ನೂ ತಂದಿದ್ದರು. ಅವರು ಅಯೋಧ್ಯೆಗೆ ಹಿಂತಿರುಗಿದ ನಂತರ ಅವರ ಆಗಮನದ ಹಿಂದಿದ್ದ ಕಹಿ ನೆನಪುಗಳಿಂದ ರಾಮನಿಗೆ ಅವರೆಲ್ಲರೂ ಬಂದಾಗ ಇದ್ದ ಜಾಗದಲ್ಲಿ ಉಳಿಯಲು ಕಷ್ಟವಾಯಿತು. ಅವನು ಪಂಚವಟಿಗೆ ಹೋದ. ಅಲ್ಲಿ ಆತ್ಮೀಯವಾಗಿದ್ದದ್ದು ಜಟಾಯು. ಜಟಾಯು ಒಂದು ಪಕ್ಷಿ. ಕ್ಷತ್ರಿಯರಿಗೆ ಪಕ್ಷಿ ಮಾಂಸವೇನೂ ವರ್ಜ್ಯ ಅಲ್ಲ. ತನ್ನ ತಂದೆಯ ಸ್ನೇಹಿತ ಆದ ಜಟಾಯು ತನ್ನ ತಂದೆಗೆ ಸಮಾನ ಎಂದು ಜಟಾಯುವನ್ನು ಗೌರವಿಸಿದ. ರಾವಣ ಸೀತೆಯನ್ನು ಕದ್ದೊಯ್ದಾಗ ಮುದಿಯಾಗಿದ್ದ ಜಟಾಯು ತನ್ನ ಶಕ್ತಿ ಮೀರಿ ಸೀತೆಯನ್ನು ರಕ್ಷಿಸಲು ಪ್ರಯತ್ನಿಸಿ ಪ್ರಾಣ ತ್ಯಾಗ ಮಾಡಿತು. ಇದನ್ನು ಭಾವಿಸಿದ ರಾಮ ತನ್ನ ತಂದೆಗೆ ಮಾಡಿದಂತೆ ಜಟಾಯುವಿಗೂ ಅಂತ್ಯಸಂಸ್ಕಾರ ಮಾಡಿದ. ಇಡೀ ಪಕ್ಷಿಜಗತ್ತು ಅವನನ್ನು ಪ್ರೀತಿಯಿಂದ ಭಾವಿಸುವಂತಾಯಿತು. ನಿರ್ವೈರದ ಮಹತ್ವದ ರೂಪ ಆತ್ಮೀಯತೆಯ ಅನುಬಂಧ. ಅದನ್ನು ರಾಮ ಕುಟುಂಬ-ವಲಯದ ಗಡಿಯಿಂದಾಚೆಗೆ ದಾಟಿಸುವುದರಲ್ಲಿ ಯಶಸ್ವಿಯಾಗಿದ್ದ. ಇದು ಅವನು ಪಡೆದ ಗಮನಾರ್ಹ ಗೆಲುವು.

ಕಳೆದುಕೊಂಡ ಸೀತೆಯನ್ನು ಹುಡುಕುತ್ತಾ ಬಂದ ರಾಮ, ಲಕ್ಷ್ಮಣರಿಗೆ ಭೇಟಿಯಾದದ್ದು ವಾನರ ಮಂತ್ರಿ ಹನುಮಂತ. ಅವನ ಮೂಲಕ ಸ್ನೇಹದ ಬಂಧ ಬೆಳೆದದ್ದು ಗುಡ್ಡಗಾಡಿನ ಕಿಷ್ಕಿಂದೆಯ ವಾನರ ಸಮುದಾಯದ ರಾಜ್ಯದೊಂದಿಗೆ. ಇದು ಸುತ್ತಲಿನ ಜೀವ ಜಗತ್ತಿನೊಂದಿಗಿನ ರಾಮನ ಅನುಬಂಧದ ವ್ಯಾಪ್ತಿಯನ್ನು ವಿಸ್ತರಿಸಿತು. ವಾನರ ರಾಜ್ಯಾಧಿಕಾರಿ ವಾಲಿಯು ತನ್ನ ತಮ್ಮ ಸುಗ್ರೀವನೊಂದಿಗೆ ತಪ್ಪಿನಡೆದಿದ್ದಾನೆ ಎಂದು ರಾಮ ವಾಲಿಯನ್ನು ಕೊಂದು ಸುಗ್ರೀವನಿಗೆ ಪಟ್ಟಾಭಿಷೇಕ ಮಾಡಿಸಿದ. ಇದಕ್ಕೆ ಮೂಲ ಪ್ರೇರಣೆ ಹನುಮಂತ ವಾಸ್ತವ ಸ್ಥಿತಿಯ ಬಗ್ಗೆ ಮೂಡಿಸಿದ ನಂಬಲರ್ಹ ಅರಿವು. ರಾಮನಿಗೆ ಸುಗ್ರೀವನ ಸಖ್ಯ ಅತ್ಯಗತ್ಯ ಆಗಿರಲಿಲ್ಲ. ಎರಡು ವಿಭಿನ್ನ ಸಮುದಾಯಗಳ ನಡುವೆ ಸ್ನೇಹ ಸಂಬಂಧ ಇರುವುದು, ಬೆಳೆಸುವುದು ಉತ್ತಮ ರಾಜಕೀಯ ನಡೆಯೂ ಹೌದು. ಇದನ್ನು ಸಾಬೀತು ಪಡಿಸಿದ ವಿವೇಕಿ ಹನುಮಂತ ರಾಮನ ದಾಸನಾದದ್ದು ಖಂಡಿತವಾಗಿ ರಾಮನ ಗೆಲುವಿನ ಪಥದ ಗಂಭೀರ ಹೆಜ್ಜೆ.

ಸಾಯುವ ಘಳಿಗೆಯಲ್ಲಿ ವಾಲಿ ತಮ್ಮನನ್ನು ಪ್ರೀತಿಯಿಂದ ಅಪ್ಪಿಕೊಂಡ. ವಾಲಿಯ ಮಗ ಅಂಗದ ಮುಂದೆ ರಾವಣನೊಂದಿಗಿನ ಯುದ್ಧದಲ್ಲಿ ರಾಮನ ಬಲಗೈಯಂತೆ ಹೋರಾಡಿದ. ಇದು ಬಹುಮುಖ್ಯವಾದ ಗೆಲುವು. ವಾಲಿ ಸತ್ತುಹೋದನೆಂದು ಭಾವಿಸಿ ಅವನು ಶತ್ರುವನ್ನು ಹಿಂಬಾಲಿಸಿ ಹೊಕ್ಕಿದ್ದ ಗುಹೆಯ ಬಾಯಿಗೆ ದೊಡ್ಡ ಬಂಡೆಗಲ್ಲನ್ನು ಅಡ್ಡವಿರಿಸಿ ರಾಜ್ಯಕ್ಕೆ ಹಿಂತಿರುಗಿದ್ದು, ವಾಲಿಯ ಪಟ್ಟದ ಮೇಲೆ ತಾನು ಕುಳಿತದ್ದು ತಪ್ಪಾಯಿತು ಎಂದು ಸುಗ್ರೀವ ಎಷ್ಟು ಕೇಳಿಕೊಂಡರೂ ವಾಲಿ ಮಾತ್ರ ತಾನು ಸಾಯುವ ವರೆಗೂ ಅವನನ್ನು ತನ್ನ ಪರಮ ಶತ್ರುವೆಂದೇ ತಿಳಿದಿದ್ದ. ವಾಲಿ ಕೊನೆಗೆ ರಾಮನಿಂದ ತನ್ನ ತಪ್ಪಿನ ಅರಿವನ್ನು ಪಡೆದ, ಪಶ್ಚಾತ್ತಾಪ ಪಟ್ಟ. ತಮ್ಮ ಎಂದು ಸುಗ್ರೀವನನ್ನು ಪ್ರೀತಿಯಿಂದ ಭಾವಿಸಿದ. ಇಂಥ ಮನಃಪರಿವರ್ತನೆ ರಾಮನಿಂದ ಸಾಧ್ಯವಾದದ್ದು ಅದ್ಭುತವಾದದ್ದು. ತನ್ನ ತಂದೆಯ ಪ್ರಾಣಹರಣ ಮಾಡಿದ ರಾಮನೊಂದಿಗೆ ಹೊಂದಿಕೊಳ್ಳಬೇಕಾದ ಮತ್ತು ರಾವಣನ ಮೇಲೆ ಯುದ್ಧಕ್ಕೆ ಹೋಗಬೇಕಾದ ಅವಶ್ಯಕತೆಯೇನೂ ಅಂಗದನಿಗೆ ಇರಲಿಲ್ಲ. ವಾನರನಾದ ಅಂಗದನಿಗೆ ಸಾಕಷ್ಟು ದೊಡ್ಡದಾಗಿದ್ದ ಕಾಡಿನ ಬೇರೆ ಇನ್ನಾವುದೇ ಜಾಗದಲ್ಲಿ ರಾಮನಿಂದ ದೂರವಾಗಿ ಇರಲು, ಅವನೊಂದಿಗೆ ದ್ವೇಷಸಾಧನೆ ಮಾಡಲು ಅವಕಾಶವಿತ್ತು. ಆದರೆ ಅವನು ರಾಮನ ನಡೆಯನ್ನು ಅರ್ಥಮಾಡಿಕೊಂಡ, ರಾಮನಿಗೆ ಬಲಗೈ ಆದ, ಇದು ರಾಮ ಪಡೆದ ಅಂತಿಂಥ ಗೆಲುವು ಅಲ್ಲ.

ರಾವಣನಲ್ಲಿ ಬಂಧಿತಳಾಗಿದ್ದ ಸೀತೆಯನ್ನು ಬಂಧಮುಕ್ತ ಆಗಿಸಲು ಸುಗ್ರೀವಾದಿ ಎಲ್ಲಾ ವಾನರ ವೀರರೊಂದಿಗೆ ರಾಮ ಲಂಕೆಯ ಬಳಿಗೆ ಬಂದಿದ್ದಾನೆ. ಸಮುದ್ರ ಅಡ್ಡವಾಗಿ, ಉದ್ದವಾಗಿ ವಿಸ್ತಾರವಾಗಿ, ಆಳವಾಗಿ ಹರಡಿದೆ. ಎಲ್ಲರೂ ಹನುಮಂತನಂತೆ ಸಮುದ್ರ ಹಾರಲಾರರು. ಸಮುದ್ರವೇ ದಾರಿ ಕೊಡಬೇಕು. ದಾರಿ ಕೊಡು ಎಂದು ರಾಮ ಸಮುದ್ರರಾಜನನ್ನು ಪ್ರಾರ್ಥಿಸಿದ. ಫಲ ದೊರೆತಿಲ್ಲ. ಸಮುದ್ರವನ್ನೇ ಶೋಷಿಸಿ ದಾರಿಯನ್ನು ನಿರ್ಮಿಸಿಕೊಳ್ಳುತ್ತೇನೆ ಎಂದು ರಾಮ ಬಾಣವನ್ನು ಹೂಡಿದ. ಅದಕ್ಕೆ ಹೆದರಿದ ಸಮುದ್ರರಾಜ ಥಟ್ಟನೆ ಪ್ರತ್ಯಕ್ಷನಾದ. ತಾನು ಪ್ರಾಕೃತಿಕ ನಿಯಮಗಳಿಗೆ ಬದ್ಧ, ಅವುಗಳನ್ನು ಮೀರಲು ತನಗೆ ಸಾಧ್ಯವಿಲ್ಲ, ಆದರೆ ಸಮುದ್ರದ ಮೇಲೆ ಸೇತುವೆ ಕಟ್ಟಲು ಸಹಕರಿಸಬಲ್ಲೆ‌ ಎಂದು ವಿನಯದಿಂದ ಹೇಳಿದ.

ಸಮುದ್ರದ ಶೋಷಣೆಯಿಂದ ಸಮುದ್ರದ ಜೀವಿಗಳಿಗೆ ಮಾತ್ರವಲ್ಲದೆ ಸಮುದ್ರವನ್ನು ಆಶ್ರಯಿಸಿದವುಗಳ ಅಸ್ತಿತ್ವಕ್ಕೆಲ್ಲ ಭಂಗ ಉಂಟಾಗುತ್ತದೆ, ಹೂಡಿದ ಬಾಣವನ್ನು ಉಪಸಂಹರಿಸು ಎಂದು ಸಮುದ್ರರಾಜ ವಿನಂತಿಸಿಕೊಂಡ. ಅದು ಸಾಧ್ಯವಾಗದ್ದು ಆಗಿತ್ತು. ಅದರಿಂದಾಗಿ ಕೆಡುಕನ್ನು ಮಾಡಿ ಸಂತೋಷಪಡುವ ಅಭೀರರೆಂಬ ದಸ್ಯಗಳು ಉತ್ತರಕ್ಕಿರುವ ಪವಿತ್ರವಾದ ಧ್ರುಮಕುಲ್ಯದಲ್ಲಿ ಇದ್ದಾರೆ, ಅವರನ್ನು ನಾಶಪಡಿಸು ಎಂದು ಸಮುದ್ರರಾಜ ಕೇಳಿಕೊಂಡ. ರಾಮಬಾಣ ಸಾರ್ವತ್ರಿಕ ಒಳಿತಿಗಾಗಿ ಬಳಕೆಯಾಯಿತು, ಇದು ರಾಮಾಯಣದಲ್ಲಿಯ ಇಂಥ ಪ್ರಪ್ರಥಮ ಘಟನೆ. ಇದು ಅಕಾರಣವಾಗಿ ತಪಸ್ಸಿಗೆ ಭಂಗ ತಂದು ಸಂತೋಷ ಪಡುತ್ತಿರುವ ರಾಕ್ಷಸರನ್ನು ಕೊಲ್ಲುತ್ತೇನೆ ಎಂದು ಋಷಿಮುನಿಗಳಿಗೆ ಕೊಟ್ಟ ವಚನವನ್ನು ಪಾಲಿಸಿದ ರಾಮನ ವ್ಯಕ್ತಿತ್ವವನ್ನು ಪ್ರಕಾಶಪಡಿಸಿದ ಗೆಲುವಿನ ಘಟನೆ.

ವಾನರರೆಲ್ಲರೂ ಸೇರಿ ಸಮುದ್ರದ ಮೇಲೆ ಸೇತುವೆ ನಿರ್ಮಿಸಿದರು. ಅದರ ಮೇಲೆ ಸುಖವಾಗಿ ನಡೆದುಕೊಂಡು ಹೋಗಿ ರಾವಣನ ಲಂಕೆಯ ಬಾಗಿಲಲ್ಲಿ ನಿಂತರು. ಈ ಘಟನೆ ಸಮುದ್ರದ ಮೇಲೆ ಪಡೆದ ವಿಜಯ ಆಯಿತು. ಸಮುದ್ರದ ಶೋಷಣೆಯಿಂದ ಆಗುವ ಪ್ರಾಕೃತಿಕ ಅಸಮತೋಲನ ಸಲ್ಲ ಎಂಬುದನ್ನು ಎತ್ತಿಹಿಡಿಯಿತು. ಕೆಡುಕನ್ನು ಮೆಚ್ಚಿಕೊಂಡು ಸಂತೋಷಪಡುವ ಒಂದು ಜನಾಂಗೀಯ ಪರಂಪರೆಯನ್ನು ಮುರಿಯಿತು. ಮುಂದೆ ಎರಡು ವಿಭಿನ್ನ ದೇಶಗಳ ನಡುವೆ ಬಾಂಧವ್ಯವನ್ನು ಬೆಸೆಯಲು ದಾರಿಯಾಯಿತು. ಇವೆಲ್ಲ ಸಮುದ್ರದ ಮೇಲೆ ರಾಮ ಪಡೆದ ಗೆಲುವಿಗೆ ದೊರೆತ ವಿವಿಧ ಆಯಾಮಗಳು.

ಸೀತೆಯನ್ನು ಅಪಹರಿಸಿ ರಾಮನೊಂದಿಗೆ ದ್ವೇ಼ಷ ಸಾಧಿಸಿದ ರಾವಣನ ತಮ್ಮ ವಿಭೀಷಣ. ಬ್ರಹ್ಮನನ್ನು ಕುರಿತು ತಪಸ್ಸು ಮಾಡಿದ್ದ ಅವನು ಯಾವಾಗಲೂ ತನ್ನ ಮನಸ್ಸು ಭಗವಂತನಲ್ಲಿ ನೆಲೆಸಿರಲಿ, ತನಗೆ ವಿಷ್ಣುವಿನ ಪ್ರತ್ಯಕ್ಷ ದರ್ಶನವಾಗಲಿ ಎನ್ನುವ ವರವನ್ನು ಪಡೆದಿದ್ದ. ರಾಮ ಭಗವಂತನ ಅವತಾರ ಎಂಬುದು ಗೊತ್ತಿದ್ದರೂ, ಯುದ್ಧಕ್ಕೆ ಸಿದ್ಧನಾಗಿ ರಾಮ ಲಂಕೆಯ ಬಳಿಗೆ ಬಂದಾಗಲೂ, ಲಂಕೆಯ ಮತ್ತು ರಾವಣನ ಹಿತೈಷಿಯಾಗಿ ವಿಭೀಷಣ ಲಂಕೆಯಲ್ಲಿಯೇ ಉಳಿದಿದ್ದ. ಸೀತೆಯನ್ನು ರಾಮನಿಗೆ ಒಪ್ಪಿಸಿ ನೆಮ್ಮದಿಯಿಂದ ಬದುಕು, ಲಂಕೆಯನ್ನು ಉಳಿಸು ಎಂದು ರಾವಣನಿಗೆ ಆಪ್ತ-ಸಲಹೆಯನ್ನು ನೀಡಿದ್ದ, ರಾವಣ ಅದನ್ನು ನಿರ್ಲಕ್ಷಿಸಿದರೂ ರಾವಣನೊಂದಿಗೇ ಉಳಿದಿದ್ದ. ಕೊನೆಗೆ ರಾವಣ ಅವನ ಮಾರ್ಗದರ್ಶನವನ್ನು ಮರ್ಯಾದಿಸುವುದರ ಬದಲಿಗೆ ಅವನ ಮೇಲೆ ಅರ್ಧಚಂದ್ರ ಪ್ರಯೋಗ ಮಾಡಿದ.

ವಿಭೀಷಣ ಈಗ ಒಳಿತಿನ ಪಕ್ಷಪಾತಿಯಾಗಿ ರಾಮನಿಗೆ ಶರಣಾಗತನಾದ. ರಾಕ್ಷಸರ ಎಲ್ಲಾ ನಡೆಗಳನ್ನೂ ಚೆನ್ನಾಗಿ ಬಲ್ಲ ವಿಭೀಷಣ ಅಂತಿಮವಾಗಿ ರಾಮನಿಗೆ ಗೆಲುವು ದೊರೆಯಲು ಎಲ್ಲಾ ರೀತಿಯಲ್ಲೂ ಸಹಕರಿಸಿದ. ಅವನ ಸ್ವತಂತ್ರ ರೀತಿನೀತಿಗೆ ರಾವಣನಿಂದ ಯಾವುದೇ ರೀತಿಯಲ್ಲಿ ಅದುವರೆವಿಗೆ ಅಡ್ಡಿ ಉಂಟಾಗಿರಲಿಲ್ಲ ಎಂಬುದು ನಿಜ. ಆದರೆ ರಾವಣನ ಅನ್ಯಾಯದ ನಡೆ ಮಿತಿಮೀರಿದಾಗ ಅಣ್ಣ ತಮ್ಮ ಇತ್ಯಾದಿ ಎಲ್ಲಾ ಮುಖದ ಬಾಂಧವ್ಯದ ಮೋಹವನ್ನು ಕಳಚಿಕೊಂಡಿದ್ದ. ಇದಕ್ಕೆ ಪ್ರೇರಣೆ ಅಯೋಧ್ಯೆಯ ಎಲ್ಲಾ ಅನುಬಂಧಗಳನ್ನು ಬದಿಗಿರಿಸಿ ವನವಾಸಕ್ಕೆ ಬಂದ ರಾಮನೇ. ಇದು ವಿಭೀಷಣನ ಅಂತರಂಗದ ವಿಕಾಸವನ್ನು ಎದೆಯ ಮೊಗ್ಗರಳುವ ದಿಕ್ಕಿಗೆ ಹೊರಳಿಸಿತು. ಇದು ಅಣ್ಣ ತಮ್ಮಂದಿರು ಆದ ವಾಲಿ ಸುಗ್ರೀವರ ಸಂದರ್ಭದಲ್ಲಿ ಪಡೆದಂಥ ರಾಮನ ಗೆಲುವಿಗೆ ದೊರೆತ ಹೊಸ ಆಯಾಮ.

ತನ್ನ ಆಹಾರವಾಗಿ ಯಾವ ಜೀವಿಯನ್ನಾದರೂ ತಿಂದುಬಿಡುವ ಪರಪೀಡಕ ಕುಂಭಕರ್ಣ ರಾವಣನ ಇನ್ನೊಬ್ಬ ತಮ್ಮ. ಇವನೂ ತಪಸ್ಸು ಮಾಡಿದ್ದ. ಸರಸ್ವತಿಯ ಕಾರಣದಿಂದಾಗಿ ಇಂದ್ರಾಸನದ ಬದಲಿಗೆ ನಿದ್ರಾಸನದ ಸುಖವನ್ನು ವರವಾಗಿ ಪಡೆದಿದ್ದ. ಅತಿ ಬೃಹದ್‌ ಕಾಯದ ಕುಂಭಕರ್ಣ ಅತಿಯಾದ ಹಸಿವಿಗೆ, ಗಾಢವಾದ ನಿದ್ದೆಗೆ ಒಂದು ಹೆಸರು. ಅವನ ಕಾಲಿನ ಅಡಿಯಲ್ಲಿ, ಬಾಯಿಯ ಹಲ್ಲಿನಲ್ಲಿ ಅವರಿವರೆನ್ನದೆ ಎಲ್ಲ ಜೀವಿಗಳೂ ನುಚ್ಚುನೂರೇ. ರಾವಣ ಇಂಥ ತಮ್ಮನಿಂದ ಯುದ್ಧದಲ್ಲಿ ಸುಲಭ ವಿಜಯವನ್ನು ನಿರೀಕ್ಷಿಸಿದ. ಮಲಗಿದ್ದ ಕುಂಭಕರ್ಣನನ್ನು ಎಬ್ಬಿಸಿದ. ಕುಂಭಕರ್ಣ ರಾವಣನ ನಡೆಯ ಸರಿ, ತಪ್ಪುಗಳ ಪರಾಮರ್ಶೆಗಿಂತ ಯುದ್ಧ ಮಾಡುವುದೇ ತನ್ನ ಕರ್ತವ್ಯ ಎಂದು ರಣರಂಗಕ್ಕೆ ಬಂದ. ರಾಮನ ಬ್ರಹ್ಮಾಸ್ತ್ರಕ್ಕೆ ಬಲಿಯಾದ. ಆದರೆ ರಾವಣನಿಗೆ ಜೈಕಾರ ಹಾಕುವುದರ ಬದಲಿಗೆ ಜೈ ಶ್ರೀರಾಮ ಎನ್ನುತ್ತಾ ಮರಣ ಹೊಂದಿದ. ಈ ಗೆಲುವು ಬದುಕಿನ ಸಾಧ್ಯತೆಯನ್ನು ರಾಮಮುಖವಾಗಿಸಿ ಕುಂಭಕರ್ಣನಂತಹ ಅತ್ಯಂತ ಕೆಳ ಮಟ್ಟದ ಜೀವನ ರೀತಿಯನ್ನು ಅಂತ್ಯಗೊಳಿಸಿದ ರಾಮನ ಅತ್ಯದ್ಭುತ ಗೆಲುವಿನ ಘಟನೆ.

ಕುಂಭಕರ್ಣನ ಮರಣದ ನಂತರ ರಾವಣನಿಂದ ರಣವೀಳ್ಯವನ್ನು ಪಡೆದದ್ದು ರಾವಣ ತನ್ನ ಇನ್ನೊಬ್ಬ ಹೆಂಡತಿ ಧಾನ್ಯಮಾಲಿನಿಯಲ್ಲಿ ಪಡೆದ ಮಗ ಅತಿಕಾಯ. ಪತಿವ್ರತೆಯಾದ ಸೀತೆಯನ್ನು ಕದ್ದು ತಂದ ರಾವಣನ ಕುಕೃತ್ಯದಿಂದ ದುಃಖಿತಳಾದ ಧಾನ್ಯಮಾಲಿನಿಗೆ ರಾವಣನೂ ಬೇಕಾಗಿರಲಿಲ್ಲ, ರಾವಣನಿಂದ ಹುಟ್ಟಿದ ಅತಿಕಾಯನೂ ಬೇಕಾಗಿರಲಿಲ್ಲ. ಇದರಿಂದ ರಾವಣನಿಗೆ ಅತಿಕಾಯನಲ್ಲಿ ವಿಶೇಷವಾದ ಕಕ್ಕುಲಾತಿಯೇನೂ ಇರಲಿಲ್ಲ. ಅತಿಕಾಯನಿಗೆ ತನ್ನ ದುಃಖಸಂತಪ್ತ ತಾಯಿಯ ಈ ವಿಶಿಷ್ಟ ರೂಪದ ಹದಿಬದೆ-ಧರ್ಮದ ಆದರ್ಶದ, ಸದಾಶಯದ ಅರಿವಿತ್ತು. ನಿರ್ಮಮತೆಯ ರಾವಣನೊಂದಿಗೆ ಬದುಕುವುದಕ್ಕಿಂತ ರಾಮನೊಂದಿಗಿನ ರಣದೊಳಗೆ ಮರಣವೇ ಸದ್ಗತಿ ಎಂದು ತಿಳಿದ. ಲಕ್ಷ್ಮಣನೊಂದಿಗೆ ಅವನು ರಾಮನೆಂದೇ ತಿಳಿದು ಹೋರಾಡಿ ಸಾವನ್ನು ಪಡೆದ. ರಾಕ್ಷಸ ಆವರಣದಲ್ಲಿ ಅತ್ಯಂತ ವೀರನೂ, ಶಸ್ತ್ರಾಸ್ತ್ರ ಪರಿಣತನೂ, ಪ್ರಯೋಗಿಸಬಹುದಾದ ಬ್ರಹ್ಮಾಸ್ತ್ರ ಉಳ್ಳವನೂ ಆದ ಅತಿಕಾಯನಲ್ಲಿ ಸನ್ನಡತೆಯ ವಿವೇಚನಾ ಅರಿವನ್ನು ಸೀತಾರಾಮನ ನಡೆ ಮೂಡಿಸಿದುದು ರಾಮನ ಗೆಲುವಿನ ಒಂದು ವಿಶೇಷತೆ.

ಇದು “ವೈರಿಸುತ ಸಾವೊಲಿಯುವಂತೆ ಮಾಡಿದ” ರಾಮನ ಗೆಲುವು. “ವೈರಿಸುತ ಸಾವೊಲಿಯುವಂತೆ ಮಾಡಿದ” ಎನ್ನುವುದು ಅತಿಕಾಯನಂತೆ ಇಂದ್ರಜಿತುವಿಗೂ ಅನ್ವಯವಾಗುತ್ತದೆ. ಯಾವುದೇ ರೀತಿಯ ಶಸ್ತ್ರ-ಅಸ್ತ್ರ, ಮಂತ್ರ-ತಂತ್ರಗಳಿಂದಲೂ ರಾಮ ಲಕ್ಷ್ಮಣರನ್ನು ಗೆಲ್ಲಲು ಮತ್ತು ಸೀತೆಯನ್ನು ಬಿಟ್ಟುಕೊಡುವಂತೆ ರಾವಣನ ಮನ ಒಲಿಸಲು ಇಂದ್ರಜಿತ್‌ ಅಸಮರ್ಥನಾದಾಗ ನಿಕುಂಬಿಲ ಯಾಗವನ್ನು ಮಾಡಿ ಅಜೇಯನಾಗಲು ಪ್ರಯತ್ನಿಸಿದ. ರಾಮನ ಆದೇಶದಂತೆ ವಿಭೀಷಣನ ಸಹಾಯದಿಂದ ಲಕ್ಷ್ಮಣ ಮತ್ತು ಹನುಮಂತ ಇಂದ್ರಜಿತ್ ಯಾಗ ಮಾಡುತ್ತಿದ್ದ ಸ್ಥಳವನ್ನು ತಲುಪಿದರು. ಯಾಗದ ಅಧಿದೇವತೆ, ಸಪ್ತ ಮಾತೃಕೆಯರಲ್ಲಿ ಒಬ್ಬಳು ಆದ ಪ್ರತ್ಯಂಗಿರಾ ದೇವಿಯನ್ನು ತಮ್ಮ ಪರ ಆಗಿಸಿಕೊಂಡರು. ಇದರಿಂದ ಲಕ್ಷ್ಮಣನಿಗೆ ಅಂಜಲಿಕಾ ಅಸ್ತ್ರದಿಂದ ಇಂದ್ರಜಿತುವನ್ನು ಕೊಲ್ಲಲು ಸಾಧ್ಯವಾಯಿತು. ಲಂಕೆಯಲ್ಲಿ ರಾವಣನನ್ನು ಹೊರತುಪಡಿಸಿ ಯಂತ್ರ-ತಂತ್ರ-ಮಂತ್ರ ವಿದ್ಯೆಗಳಲ್ಲೆಲ್ಲಾ ಪರಿಣತನಾದವನು ಇಂದ್ರಜಿತು ಒಬ್ಬನೇ ಆಗಿದ್ದ. ಅವನನ್ನು ಮಣಿಸಿದುದು ಇಂಥ ತೀವ್ರವಾದ ತಾಮಸೀ ಶಕ್ತಿಯನ್ನು ಮಣಿಸಿದುದೇ ಆಗಿತ್ತು. ಇದು ರಾಮನ ಗೆಲುವಿಗೆ ದೊರೆತ ಅತ್ಯಂತ ರೋಚಕ ಹೊಸ ಆಯಾಮ.

ರಾವಣ ಸದಾ ಚಿಗುರುವ ಹತ್ತು ತಲೆಯವನು. ಎಲ್ಲಾ ರೀತಿಯ ಶಸ್ತ್ರಾಸ್ತ್ರ ಪರಿಣತ ಇವನನ್ನು ಶಸ್ತ್ರಾಸ್ತ್ರಗಳಿಂದ ಮಣಿಸಿ, ತಲೆಯನ್ನು ಕತ್ತರಿಸಿ ಕೊಂದುಹಾಕುವುದು ಅಸಾಧ್ಯ ಸಂಗತಿ. ಏಳು ದಿನಗಳ ಘೋರ ಯುದ್ಧಾಂತ್ಯದಲ್ಲಿ ರಾಮ ಅಗಸ್ತ್ಯರು ಉಪದೇಶಿಸಿದ ಆದಿತ್ಯಹೃದಯ ಮಂತ್ರ-ಧ್ಯಾನದೊಂದಿಗೆ ಬ್ರಹ್ಮಾಸ್ತ್ರವನ್ನು ರಾವಣನ ಎದೆಗೆ ಪ್ರಯೋಗಿಸಿ ರಾವಣನನ್ನು ಕೊಲ್ಲಲು ಸಮರ್ಥನಾದ. ರಾವಣ ಪರಶಿವನಿದ್ದ ಕೈಲಾಸ ಪರ್ವತವನ್ನೇ ಎತ್ತಿದವನು. ದೇವಾನುದೇವತೆಗಳನ್ನು ಅಡಿಯಾಳುಗಳನ್ನಾಗಿ ಮಾಡಿಕೊಂಡವನು. ವೇದ-ವೇದಾಂಗಗಳನ್ನು ಅಧ್ಯಯನ ಮಾಡಿದವನು. ಶಿವ, ಬ್ರಹ್ಮ ಇಬ್ಬರನ್ನೂ ತೃಪ್ತಿಪಡಿಸಿದ ಮಹಾ ತಪಸ್ವಿ. ಇಂಥ ರಾವಣನ ಮೇಲಿನ ವಿಜಯ ರಾವಣನ ಎದೆಯಲ್ಲಿದ್ದ ಅಮೃತ-ಕಲಶದ ಮೇಲೆ ಪಡೆದ ವಿಜಯ ಆಗಿತ್ತು ಇದು ಒಂದರ್ಥದಲ್ಲಿ ಇಡೀ ಬ್ರಹ್ಮಾಂಡದ ಮೇಲೆ ಪಡೆದ ಅಭೂತ ಪೂರ್ವ ವಿಜಯ.

ಈ ಎಲ್ಲ ಗೆಲುವುಗಳಿಗಿಂತ ಅಗ್ನಿದಿವ್ಯವನ್ನು ಗೆದ್ದ ಸೀತೆ ಲಜ್ಜೆಯಿಂದ ರಾಮನ ಬಳಿ ನಿಂತದ್ದು ಅತ್ಯಂತ ವಿಶಿಷ್ಟವಾದದ್ದು ಮತ್ತು ಅತ್ಯಂತ ಮಿಗಿಲಾದದ್ದು ಆದ ರಾಮನ ಗೆಲುವು. ಸುಳಿದ ಸ್ವರ್ಣಜಿಂಕೆ ರಾಕ್ಷಸರ ಮಾಯಾಜಿಂಕೆ ಎಂದು ರಾಮ ಹೇಳಿದುದನ್ನು ಸೀತೆ ಒಪ್ಪದೆ ಅದು ಬೇಕೇಬೇಕೆಂದು ಹಠ ಹಿಡಿದಿದ್ದಳು. ಮಾರೀಚ ರಾಮನ ಧ್ವನಿಯನ್ನು ಅನುಕರಿಸಿ ಹೊರಡಿಸಿದ ಕರುಣಾರ್ದ್ರ ಧ್ವನಿಯನ್ನು ರಾಕ್ಷಸರ ಮಾಯೆ ಎಂದ ಲಕ್ಷ್ಮಣನನ್ನು ಆಶ್ರಮದಿಂದ ಹೊರದಬ್ಬಿದ್ದಳು. ಬಂದ ರಾವಣನನ್ನು ನಿಜ ಸನ್ಯಾಸಿ ಎಂದು ತಿಳಿದು ಅವನ ಕುತಂತ್ರಕ್ಕೆ ಬಲಿಯಾದಳು. ಈ ಎಲ್ಲಾ ಮಾಯೆಯಿಂದ ಪಾರಾದರೂ ರಾಮ ಅವಳಿಗೆ ನೀನು ಸರ್ವತಂತ್ರ ಸ್ವತಂತ್ರಳು ಎಂದಿದ್ದ. ಆದರೂ ಅವಳು ತಾನು ರಾಮನವಳೇ ಎಂದು ಅಗ್ನಿದಿವ್ಯದಿಂದ ಸಾಬೀತು ಪಡಿಸಿ, ರಾಮನ ಬಳಿಗೆ ಮದುವಣಗಿತ್ತಿಯಂತೆ ಬಂದದ್ದು ರಾಮನಿಗೆ ದೊರೆತ ಅಂತಿಂಥ ವಿಜಯ ಅಲ್ಲ. ಅದು ಎದೆಯ ಮೊಗ್ಗರಳಿ ಮಧು ದ್ರವಿಸುವ, ಎಲ್ಲ ಪಕ್ಷಪಾತ ಪ್ರತ್ಯೇಕತೆ ಸಂಕುಚಿತತೆಗಳನ್ನು ಸ್ನೇಹರೂಪೀ ನಿರ್ವೈರವಾಗಿಸುವ ಸಮರಸ ಪ್ರೀತಿಯ ರಸಾನುಭೂತಿ!

 

ರಾಜಮಾರ್ಗ: ಶಿವಧನುಸ್ಸಿಗೆ ಹೆದೆಯೇರಿಸಿಸುವ ಪಂಥವನ್ನು ಗೆದ್ದು ರಾಮ ಸೀತೆಯನ್ನು ಮದುವೆಯಾಗಿದ್ದಾನೆ. ಅನಿವಾರ್ಯದ ವನವಾಸದಲ್ಲಿ ರಾವಣನಿಂದ ಅಪಹೃತಳಾದ ಸೀತೆಯನ್ನು ರಾವಣನನ್ನು ಮರ್ದಿಸಿ ಗೆದ್ದುಕೊಂಡಿದ್ದಾನೆ. ಅಗ್ನಿದಿವ್ಯದ ಪರೀಕ್ಷೆಯನ್ನು ಸೀತೆಯೊಂದಿಗೆ ರಾಮನೂ ಗೆದ್ದು ಸೀತೆಯನ್ನು ಪಡೆದಿದ್ದಾನೆ. ಅಯೋಧ್ಯೆಗೆ ಹಿಂತಿರುಗಿ ಯಾವ ಅಡಚಣೆಯೂ ಇಲ್ಲದೆ ಪಟ್ಟಾಭಿಷಿಕ್ತನಾಗಿದ್ದಾನೆ. ಕುಂದಿಲ್ಲದ ಸಂತೋಷದಿಂದ ಸೀತೆಯನ್ನು ಕೂಡಿದ್ದಾನೆ. ಸೀತೆ ಗರ್ಭಿಣಿಯಾಗಿದ್ದಾಳೆ. ಈ ಹಂತದಲ್ಲಿ ಅಗಸನೊಬ್ಬ ತನ್ನ ಒಪ್ಪಿಗೆಯಿಲ್ಲದೆ ಮನೆಯಿಂದ ಹೊರಬಿದ್ದ ಹೆಂಡತಿ ಹಿಂತಿರುಗಿದಾಗ ಮನೆಗೆ ಸೇರಿಸಿಕೊಳ್ಳಲು, ತನ್ನ ಹೆಂಡತಿಯೆಂದು ಒಪ್ಪಿಕೊಳ್ಳಲು ನಿರಾಕರಿಸಿದ್ದಾನೆ. ರಾಜನಾದ ರಾಮನು ತನ್ನ ಹೆಂಡತಿಯನ್ನು ಒಪ್ಪಿಟ್ಟುಕೊಳ್ಳಬಹುದು. ತನಗದು ಸಾಧ್ಯವಿಲ್ಲವೆಂದು ಸ್ಪಷ್ಟವಾಗಿ ಹೇಳಿದ್ದಾನೆ.

ಸಾಮಾನ್ಯ-ಪ್ರಜೆಗೆ ರಾಜನನ್ನು ತನ್ನ ತೂಗು-ತಕ್ಕಡಿಯಲ್ಲಿ ತೂಗಲು ರಾಮನ ಆಡಳಿತದಲ್ಲಿ ಸ್ವಾತಂತ್ರ್ಯವಿದೆ. ರಾಮ ಯಾವ ವಿಷಯದಲ್ಲಿ ತನಗೆ ಆದರ್ಶನಾಗಲಾರ ಎಂದು ನಿರ್ಣಯಿಸುವ ಅಧಿಕಾರವೂ ಅವನಿಗಿದೆ. ಆದರೆ ಸ್ವಾತಂತ್ರ್ಯ, ಅಧಿಕಾರ ಸ್ವಚ್ಛಂದ ಆಗಬಾರದೆಂದಾದರೆ ರಾಜ ಅಂಥ ಸಂದರ್ಭವೆಂದಿಗೂ ಬಾರದಂತೆ ರಾಜಮುದ್ರೆಯೊಂದಿಗೆ ನೋಡಿಕೊಳ್ಳಬೇಕಾಗುತ್ತದೆ. ನಾಡು ಎಂದರೆ ಹೀಗೇ: ಅಲ್ಲಿ ಬದುಕಿಗೆ ನಿರ್ದಿಷ್ಟ ಚೌಕಟ್ಟಿರುತ್ತದೆ. ಅದರೊಳಗೆ ಎಷ್ಟು ಒಳಿತನ್ನು ಸಾಧಿಸಬಹುದೋ ಅಷ್ಟನ್ನು ಮಾತ್ರ ಸಾಧಿಸಬಹುದು. ನಾಡಿನಲ್ಲಿ ಕ್ರೌರ್ಯವೂ ಚೌಕಟ್ಟಿನೊಳಗಿರುತ್ತದೆ. ಕಾಡಿನಲ್ಲಾದರೋ ಹಿಂಸೆ (ಕ್ರೌರ್ಯ), ಅಹಿಂಸೆಗಳೆರಡೂ ಸ್ವಚ್ಛಂದ. ಯಾಕೆ ಎಂಬ ಪ್ರಶ್ನೆಯಿಲ್ಲ. ಹುಲಿ ಪ್ರಾಣಿಯೊಂದರ ಕುತ್ತಿಗೆ ಕಚ್ಚಿಹಿಡಿದು ರಕ್ತ ಹೀರಿ ಮಾಂಸ ತಿನ್ನುತ್ತದೆ. ಹುಲಿಯೊಂದಿಗಿನ ಜಿಂಕೆಯಾದರೋ ಹುಲ್ಲು ತಿನ್ನುತ್ತದೆ. ಯಾಕೆ ಎಂದು ಕೇಳಿದರೆ “ತಿನ್ನುತ್ತವೆ” ಎಂಬುದರ ಹೊರತಾಗಿ ಬೇರೆ ಉತ್ತರವಿಲ್ಲ. ಇವೆರೆಡರ ಮಧ್ಯವರ್ತಿ ವಾಲ್ಮೀಕಿ ರೂಢಿಸಿದ ಲವಕುಶರ ಜೀವನರೀತಿ.

ರಾಮನ ಆಜ್ಞೆಯಂತೆ ಲಕ್ಷ್ಮಣ ಕಾಡಿನಲ್ಲಿ ಬಿಟ್ಟು ಬಂದ ತುಂಬು ಗರ್ಭಿಣಿ ಸೀತೆಯನ್ನು ವಾಲ್ಮೀಕಿ ತಮ್ಮ ಆಶ್ರಮಕ್ಕೆ ಕರೆದೊಯ್ದರು. ಸೀತೆ ಪಡೆದ ಲವ ಕುಶ ಅವಳಿ ಮಕ್ಕಳನ್ನು ಎಲ್ಲಾ ರೀತಿಯಲ್ಲೂ ಸುಶಿಕ್ಷಿತರಾಗುವಂತೆ ತರಪೇತುಗೊಳಿಸಿದರು. ಅವರಿಗೆ ರಾಮನ ಹುಟ್ಟಿನಿಂದ ಹಿಡಿದು ಲವಕುಶರ ಸೂಕ್ತ ಅಭಿವೃದ್ಧಿಯ ವರೆಗಿನ ಕಥೆಯನ್ನು ಹಾಡಲೂ ಕಲಿಸಿದರು. ಅದನ್ನು ಎಲ್ಲರಿಗೂ ತಲುಪಿಸಲು ಬೀದಿಗಾಯಕರಂತೆ ಅವರನ್ನು ಕಳುಹಿಸಿಕೊಟ್ಟರು. ರಾಮನ ಮಕ್ಕಳಾಗಿ ಸಿಂಹಾಸನಕ್ಕೆ ಅಧಿಕೃತ ಹಕ್ಕುದಾರರಾದ ಲವಕುಶರು ರಾಜಶಾಹಿಯನ್ನು ಜನಸಾಮಾನ್ಯರ ಮನೆಬಾಗಿಲಿಗೆ ಒಯ್ದರು. ಸರಿ-ತಪ್ಪುಗಳನ್ನು ರೂಢಿಗತವಾಗಿ ಅಥವಾ ಭಾವುಕವಾಗಿ ನಿರ್ಧರಿಸದೆ ಸಂದರ್ಭಗಳನ್ನು ವಿವೇಚಿಸಿ ನಿರ್ಧರಿಸಬೇಕೆಂಬುದನ್ನು ಎಲ್ಲಾ ಕಡೆಯೂ ಓಡಾಡುತ್ತಾ ಕಥನ-ಗಾಯನದ ಮೂಲಕ ಮನಗಾಣಿಸುತ್ತಾ ಬಂದರು. ಅವರು ಹೀಗೆ ಹಾಡಿದುದನ್ನು ರಾಮನೂ ಆಸ್ಥಾನದಲ್ಲಿ ಕುಳಿತು ಕೇಳಿದ. ಇದು ರಾಮ, ಇದು ಅವನು ನಡೆದ ಮಾರ್ಗ, ಇದು ಅವನ ಗೆಲುವಿನ ಪಥ!

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.