close logo

ರಾಮ, ರಾಮಾಯಣ: ಮಧುರಂ ಮಧುರಾಕ್ಷರಂ!

 ಅಕ್ಷರಕಾವ್ಯ

ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಂ ಆರುಹ್ಯ ಕವಿತಾಶಾಖಾಂ| ವಂದೇ ವಾಲ್ಮೀಕಿ ಕೋಕಿಲಂ

 ಬುಧ ಕೌಶಿಕರ ಈ ಶ್ಲೋಕವು ಕವಿತೆ ಎಂಬ ಶಾಖೆಯನ್ನು ಏರಿ ಕುಳಿತ ವಾಲ್ಮೀಕಿ ಎಂಬ ಕೋಗಿಲೆ “ರಾಮ ರಾಮ” ಎಂದು ಮಧುರವಾದ ಅಕ್ಷರವನ್ನು ಉಲಿಯುತ್ತಿದೆ ಎಂದು ಹೇಳುವುದರ ಅರ್ಥ ಹೀಗಿದೆ.

“ಸಾಹಿತ್ಯದ ಒಂದು ಮುಖವಾದ ಕಾವ್ಯ ಸಮೃದ್ಧವಾಗಿ ಬೆಳೆದಿದೆ, ಭದ್ರವಾದ ಬುನಾದಿಯನ್ನು ಹೊಂದಿದೆ, ಒಂದು ಪರಂಪರೆಯನ್ನು ನಿರ್ಮಿಸಿದೆ; ಭಾಷೆಯ ದೃಷ್ಟಿಯಿಂದ ರಾಮ ಒಂದು ನಾಮಪದವೇ  ಆಗಿದ್ದರೂ ಅದು ಭಾವನೆ, ಚಿಂತನೆ ಮತ್ತು ಆತ್ಯಂತಿಕ ಜ್ಞಾನದ ದೃಷ್ಟಿಯಿಂದ ಮಧುರವಾದ ಅಕ್ಷರ; ಯಾವ ಪದವು ಎಂದೂ ತನ್ನ ಸ್ಥಾನ-ಮಹತ್ವವನ್ನು ಕಳೆದುಕೊಳ್ಳುವುದಿಲ್ಲವೋ ಅದು ಕ್ಷರ (ನಾಶ) ರಹಿತವಾದದ್ದು . ಹಾಗಾಗಿ  ಕ್ಷರ;  ವ್ಯಕ್ತಿಯೊಬ್ಬ ರಾಮ ಎಂಬುದು ನಾಶರಹಿತವಾದದ್ದು, ಮಧುರವಾದದ್ದು, ಅನುಭವಾತ್ಮಕ ಅಗುವಂತಹುದು ಎನ್ನುತ್ತಾನೆ ಎಂದರೆ ರಾಮ ಎಂಬುದು ಬರಿಯ ಪದ ಅಲ್ಲ, ವಾಸ್ತವವಾದ ಒಂದು ಇರುವಿಕೆ”.

ಯಾವುದು (ಕಾವ್ಯ)ಕವಿತೆಯೊಂದರ ಮೂಲಭಾವವೋ ಅದು ಅದರ ಅಕ್ಷರ, ಕೇಂದ್ರಬಿಂದು. ಮೂಲಭಾವವು ಹಿತವಾದ ಮನಸ್ಥಿತಿಯನ್ನು ಮೂಡಿಸಿದರೆ ಅದು ಮಧುರ. ಆದಿಕವಿ ವಾಲ್ಮೀಕಿಯ ರಾಮಾಯಣವು ರಾಮನ ವ್ಯಕ್ತಿತ್ವವನ್ನು ಮೂಲಭಾವವನ್ನಾಗಿ ಇರಿಸಿಕೊಂಡ ಆದಿಕಾವ್ಯ, ಇದು ಒಳಗೊಳ್ಳುವ ಪ್ರತಿಯೊಂದು ಪ್ರಸಂಗವೂ ರಾಮನ ಘನ ವ್ಯಕ್ತಿತ್ವದ ಪರಿಚಯ ಮಾಡಿಕೊಡುವಂತಹುದು. ರಾಮಾಯಣ ಕೃತಿಯ ಸ್ಥಾಯೀಭಾವವಾಗಿ ರಾಮ “ಅಕ್ಷರ”.

ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು ಪಾಮರರು ತಾವೇನು ಬಲ್ಲಿರಯ್ಯ
ರಾಮಮಂತ್ರವ ಜಪಿಸೋ ಹೇ ಮನುಜ ಮಂತ್ರ ಮಂತ್ರ ನೆಚ್ಚಿ ಕೆಡಲಿ ಬೇಡ

 (ರಾಮ ಎಂಬುದು ಮಹಿಮಾನ್ವಿತವಾದ ಅಕ್ಷರ; ಅದು ಬದುಕನ್ನು ಉದ್ಧರಿಸುವ ಮಂತ್ರ ಆಗುವ ಅಕ್ಷರ; ಬೇರೆ ಯಾವುದನ್ನೋ ಜಪಿಸಿ ಕೆಡಬೇಡ; ರಾಮಮಂತ್ರವನ್ನು ಜಪಿಸಿ ಸರಿಯಾದ ದಾರಿಯಲ್ಲಿ ಇರು) ಎಂದು ಹರಿದಾಸರು ಮತ್ತು

ರಾಮನಾಮಮು ಜನ್ಮ ರಕ್ಷಕ ಮಂತ್ರಮು ತಾಮಸಮು ಸೇಯಗಾ ಭಜಿಂಪವೇ ಮನಸಾ
ಸೋಮಾರುಣ ತೇಜು(ನೇತ್ರು)ಡೈನ ರಾಮಚಂದ್ರುನಿಕಿ ಸರಿ ಎವ್ವರೇ
ಕಾಮ ಕೋಟಿ ರೂಪ ರಾಮಚಂದ್ರ ಕಾಮಿತ ಫಲದಾ ರಾಮಚಂದ್ರ ಜ್ಞಾನಸ್ವರೂಪ ರಾಮಚಂದ್ರ ತ್ಯಾಗರಾಜಾರ್ಚಿತ ರಾಮಚಂದ್ರ

(ಜನ್ಮ ರಕ್ಷಕ ಮಂತ್ರ ಆಗಿರುವ, ಕೋಟಿ ಚಂದ್ರ ಮತ್ತು ಸೂರ್ಯರ ತೇಜಸ್ಸನ್ನು ಉಳ್ಳ ಪರಮ ಜ್ಞಾನಸ್ವರೂಪಿ ಆಗಿರುವ ಅಸಮಾನ ಉಪಮಾತೀತ ರಾಮನನ್ನು ತಾಮಸ ಮಾಡದೆ ಭಜಿಸು) ಎಂದು ತ್ಯಾಗರಾಜರು ಮಾರ್ಗದರ್ಶನ ಮಾಡಲು ಪ್ರೇರಕ ಆದ ರಾಮ ಸತ್ ಚಿತ್‌ ಆನಂದ ಆದ ರಸಸ್ವರೂಪಿ ಪರಬ್ರಹ್ಮ; “ಎದೆಯ ಮೊಗ್ಗರಳಿ ಮದು ದ್ರವಿಸಲಿ” ಎನ್ನುವ ಹಿತವಾದ ಮನಸ್ಥಿತಿಯ ಅಭಿವ್ಯಕ್ತಿ.

ಕವಿಹೃದಯ ಕರಗಿದಾಗ, ಮರುಗಿದಾಗ ಸಹಜವಾಗಿ ಗೇಯ-ಕಾವ್ಯ ಮೂಡುತ್ತದೆ. ಗಾನ ಪಶುವಿನ ಮತ್ತು ಶಿಶುವಿನ ಮನಸ್ಸನ್ನೂ ಸಹ ತಣಿಸುತ್ತದೆ ಎನ್ನುವುದೊಂದು ಸುಭಾಷಿತೋಕ್ತಿ. ಜಗತ್ತಿನಾದ್ಯಂತ ಪ್ರಾರಂಭದ ಕಾವ್ಯರಚನೆಗಳು ಮೌಖಿಕವೇ ಆಗಿದ್ದವು ಮತ್ತು ಅವು ಹಾಡುಗಬ್ಬಗಳೇ ಆಗಿದ್ದವು. ಇವುಗಳನ್ನು ಭಾವಿಸಿದ ಕಾವ್ಯಮೀಮಾಂಸಕರು ರಸಾತ್ಮಕಂ ಕಾವ್ಯಂ; ರಸಾನುಭೂತಿಯನ್ನು ಉಂಟುಮಾಡುವ ಶೃಂಗಾರ, ಹಾಸ್ಯ, ರೌದ್ರ, ವೀರ, ಅದ್ಭುತ, ಭಯಾನಕ, ಕರುಣೆ, ಶಾಂತ ಎಂದು ಒಂಬತ್ತು ವಿಧ ಆಗಿರುವ ರಸಗಳು ಉತ್ತಮ ಕಾವ್ಯದಲ್ಲಿ ಔಚಿತ್ಯಪೂರ್ಣವಾಗಿ ಇರುತ್ತವೆ; ಕಾವ್ಯದ ಜೀವಾಳ ರಸವೆಂದು ಒಂದೇ ರಸಕ್ಕೆ ಮಹತ್ವ ಕೊಡುವುದು ಮರದ ನೆರಳಲ್ಲಿ ಕುಳಿತು ರೆಂಬೆಕೊಂಬೆಗಳನ್ನು ಕತ್ತರಿಸುವ ದೃಷ್ಟಿಕೋನ; ಯಾವುದೇ ಕಾವ್ಯ ರಚನೆಯ ಮೂಲ ಸ್ರೋತ ಸಹೃದಯ ಕವಿ ಸ್ಪಂದನೆಯೇ; ಎಲ್ಲರಲ್ಲೂ ಮನುಷ್ಯ-ಸಹಜ ಕರುಣೆ, ಅನುಕಂಪ, ಸ್ನೇಹ ಇತ್ಯಾದಿ ಭಾವುಕ ಸ್ಪಂದನೆಗಳು ಇರುತ್ತವೆ; ಆದರೆ ಆ ಸ್ಪಂದನೆಯನ್ನು ಮಾನವೀಯ ಮೌಲ್ಯ ಪ್ರತಿಪಾದಕ ಕಾವ್ಯವನ್ನಾಗಿಸುವ ಪ್ರತಿಭೆ ಎಲ್ಲರಲ್ಲೂ ಇರುವುದಿಲ್ಲ; ಕಾವ್ಯವು ಮೂಡಿಸುವ ಸಹೃದಯ ಸ್ಪಂದನೆಯಾಗಿ ರಸವು ಹೊರಹೊಮ್ಮುವುದಕ್ಕೆ; ಅಲಂಕಾರ, ಧ್ವನಿ, ವಕ್ರೋಕ್ತಿ ಮೊದಲಾದವುಗಳು ರಸೋತ್ಪಾದನೆಯ ಕರಣಗಳು; ಜೀವೋತ್ಕರ್ಷಕಾರಕ ಮತ್ತು ಜೀವೋದ್ಧರಣ ಸಾಮರ್ಥ್ಯವೇ ಕಾವ್ಯದ ಗುರುತ್ವ; ಕಾವ್ಯವೊಂದು ಯಾವ ರಸವನ್ನು ಉಕ್ಕಿಸಿದರೂ ಅದು ಓದುಗನಲ್ಲಿ ಸಹೃದಯ-ಸ್ಪಂದನೆಯನ್ನು ಉಂಟುಮಾಡುವುದರಿಂದ ಮಧುರವಾದದ್ದು ” ಎನ್ನುವುದು ಕಾವ್ಯಮೀಮಾಂಸೆಯ ಮಾತು. ಇಂಥ ಅತಿಶಯ ಸಾಮರ್ಥ್ಯಕ್ಕೆ ಮೂರ್ತರೂಪ ಆದ ರಾಮಾಯಣದ ಪ್ರತಿಯೊಂದು ಸಂದರ್ಭವೂ ವಿವಿಧಮುಖಿ ಮಾನವೀಯ ಆರ್ದ್ರತೆಯ ಪ್ರತ್ಯೇಕ ಅಭಿವ್ಯಕ್ತಿಗಳು. ಈ ಎಲ್ಲ ಅರ್ಥಗಳಲ್ಲಿ ರಾಮ ಮತ್ತು ರಾಮಾಯಣ ಎರಡೂ ಮಧುರ, ಅತಿಮಧುರ!

ರಸಸ್ಯಂದಿರಾಮಾಯಣ

ವಾಲ್ಮೀಕಿ ರಾಮಾಯಣದ ಬಾಲಕಾಂಡದ ಆರಂಭದಲ್ಲಿ ತಪಸ್ವಿಯಾದ ವಾಲ್ಮೀಕಿ ಮುನಿಯನ್ನು ನೋಡಲು ತಪಸ್ವಿಯೂ ಸ್ವಾಧ್ಯಾಯನಿರತನೂ ವಾಗ್ವಿದರಲ್ಲಿ ಶ್ರೇಷ್ಠನೂ ಆದ ನಾರದ ಆಗಮಿಸಿದ ವಿಷಯ ಇದೆ. ಆತನನ್ನು ವಾಲ್ಮೀಕಿ ಅರ್ಘ್ಯ ಪಾದ್ಯಾದಿಗಳಿಂದ ಸತ್ಕರಿಸಿದರು. ಆನಂತರ “ಸಕಲ ಕಲ್ಯಾಣ ಗುಣಗಳುಳ್ಳವನು, ವೀರ್ಯವಂತ, ಧರ್ಮಜ್ಞ, ಕೃತಜ್ಞ, ಸತ್ಯಭಾಷಿ, ದೃಢವಾದ ವ್ರತನಿಷ್ಠೆಯುಳ್ಳವನು, ಕುಲಾಚಾರವನ್ನು ಉಲ್ಲಂಘಿಸದಿರುವವನು, ಅನೂಚಾನವಾಗಿ ನಡೆದುಕೊಂಡು ಬಂದಿರುವ ಆಚಾರ ವ್ಯವಹಾರಗಳನ್ನು ಅನುಸರಿಸಿಕೊಂಡು ಹೋಗುತ್ತಿರುವವನು, ಸಕಲ ಪ್ರಾಣಿಗಳಲ್ಲಿಯೂ ದಯೆಯುಳ್ಳವನು, ಚತುರ್ದಶ ವಿದ್ಯೆಗಳಲ್ಲಿ ಪಾರಂಗತ ಆಗಿರುವವನು, ಸರ್ವಕಾರ್ಯ ದುರಂಧರನು, ಸರ್ವರಿಗೂ ಸರ್ವಕಾಲದಲ್ಲಿಯೂ ಮೋಹನರೂಪಿ ಆಗಿರುವವನು, ಅತ್ಯಂತ ಧೈರ್ಯಶಾಲಿ, ಕೋಪವನ್ನು ಗೆದ್ದಿರುವವನು, ಎಣೆಯಿಲ್ಲದ ಕಾಂತಿವಂತ, ಕುಪಿತನಾಗಿ ಯುದ್ಧಕ್ಕೆ ನಿಂತರೆ ದೇವತೆಗಳೇ ಮೊದಲಾಗಿ ಎಲ್ಲರನ್ನೂ ಭಯಭೀತರನ್ನಾಗಿಸುವವನು – ಅಂಥವರು ಈ ಲೋಕದಲ್ಲಿ ಯಾರಿದ್ದಾರೆ” ಎಂದು ಕೇಳಿದರು.

ಅದಕ್ಕೆ ನಾರದ “ಅಂಥವನು ಒಬ್ಬ ಇದ್ದಾನೆ. ಅವನ ಹೆಸರು ರಾಮ. ಅವನು ವಿಕಾರ ರಹಿತ ಆತ್ಮವುಳ್ಳವನು, ಸ್ವಯಂ ಪ್ರಕಾಶಿತ, ಜಿತೇಂದ್ರಿಯ, ನಿತ್ಯ ಸಂತುಷ್ಟ, ಸರ್ವಜ್ಞ, ನೀತಿಶಾಸ್ತ್ರ ವಿಶಾರದ, ಸರ್ವವೇದ ಪ್ರವರ್ತಕ, ಶತ್ರುವಿನಾಶಕ, ಸತ್ಯಪ್ರತಿಜ್ಞ, ಪ್ರಪಂಚವನ್ನೆಲ್ಲಾ ತನ್ನ ವಶದಲ್ಲಿ ಇಟ್ಟುಕೊಂಡಿರುವವನು, ಸದಾ ಪ್ರಜೆಗಳ ಹಿತದಲ್ಲಿ, ಆಶ್ರಿತರ ಹಿತರಕ್ಷಣೆಯಲ್ಲಿ ನಿರತನಾದವನು, ಸಕಲ ಪ್ರಾಣಿಗಳ ಮತ್ತು ಪ್ರಜೆಗಳ ಪೋಷಕ” ಎಂದು ಉತ್ತರಿಸಿದರು. ನಾರದರ ಪರಿಕಲ್ಪನೆಯಲ್ಲಿ “ರಾಮ ಚರಾಚರ ಜೀವಿಗಳ ಪೋಷಕ, ರಕ್ಷಕ, ಹಿತೈಷಿ. ಅವನಿಗೆ ಸ್ವಧರ್ಮವನ್ನೂ, ಸ್ವಜನರ ಧರ್ಮವನ್ನೂ ಸಮಾನವಾಗಿ ರಕ್ಷಿಸುವುದಕ್ಕೆ, ಶತ್ರುಗಳನ್ನು ಮರ್ದಿಸುವುದಕ್ಕೆ ಆಧಾರ ವೇದ ವೇದಾಂಗಗಳ, ಸರ್ವಶಾಸ್ತ್ರಗಳ ತಾತ್ತ್ವಿಕ ಜ್ಞಾನ. ಅವನ ಕ್ಷಮಾಗುಣ ಪೃಥ್ವಿಯಂತೆ, ಧೈರ್ಯ ಹಿಮವತ್‌ ಪರ್ವತದಂತೆ. ಸತ್ಯಪಾಲನೆಯೇ ಅವನಿಗೆ ಪರಾಕ್ರಮ”. ರಾಮಾಯಣದಲ್ಲಿ ಪ್ರಧಾನವಾಗಿ ರಸಸ್ಯಂದಿಯಾಗಿರುವುದು ಈ ಚಿತ್ರವೇ.

ಬುದ್ಧನಿನ್ನೂ ಸಿದ್ಧಾರ್ಥ ಆಗಿದ್ದಾಗಿನ ಕಥೆ ಇದು. ಸಿದ್ಧಾರ್ಥ ಅರಮನೆಯ ಉದ್ಯಾನವನದಲ್ಲಿ ವಿಹರಿಸುತ್ತಿದ್ದ. ಆಗ ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಿದ್ದ ಹಕ್ಕಿಗೆ ಒಮ್ಮೆಗೇ ಬಾಣವೊಂದು ಇದ್ದಕ್ಕಿದ್ದಂತೆ ತಾಗಿತು. ಹಕ್ಕಿ ಧೊಪ್ಪನೆ ಬಿದ್ದಿತು. ಕೆಳಗೆ ಬಿದ್ದ ಹಕ್ಕಿಯನ್ನು ಸಿದ್ಧಾರ್ಥ ಕೈಗೆತ್ತಿಕೊಂಡ. ಅದಕ್ಕೆ ತಾಗಿದ್ದ ಬಾಣವನ್ನು ತೆಗೆದು. ಉಪಚರಿಸಿದ. ಅದು ಬದುಕುಳಿಯಿತು. ಬಾಣ ಬಿಟ್ಟವನು ಹಕ್ಕಿ ತನ್ನದು, ಅದನ್ನು ಕೊಡಬೇಕೆಂದು ಆಗ್ರಹಿಸಿದ. ಬದುಕಿಸುವವನಿಗೆ ಮಾತ್ರ ಯಾವುದರ ಮೇಲಾದರೂ ಅಧಿಕಾರ ಹೆಚ್ಚು ಎಂದ ಸಿದ್ಧಾರ್ಥ ಹಕ್ಕಿಯನ್ನು ಕೊಡಲು ನಿರಾಕರಿಸಿದ. ಇದೊಂದು ವಿಶಿಷ್ಟ ಮಾನವೀಯ ಸ್ಪಂದನೆ. ಇದಕ್ಕಿಂತ ಭಿನ್ನವಾದದ್ದು ಮತ್ತು ಹೆಚ್ಚು ವ್ಯಾಪ್ತವಾದದ್ದು ವಾಲ್ಮೀಕಿಯ ಸ್ಪಂದನೆ.

ರಾಮಾಯಣ ಕಾವ್ಯ ಮೂಡಿಬಂದ ಸಂದರ್ಭ ಬಹುಮಟ್ಟಿಗೆ ಎಲ್ಲರಿಗೂ ಗೊತ್ತಿರುವ ವಿಷಯ. ಆಕಾಶದಲ್ಲಿ ಹಾರಾಡುತ್ತಿರುವ ಜೋಡಿ ಹಕ್ಕಿಗಳಲ್ಲಿ ಒಂದಕ್ಕೆ ಯಾರೋ ಒಬ್ಬ ಗುರಿ ಇಟ್ಟ ಬಾಣ ತಾಗಿತು, ಅದು ನೆಲಕ್ಕೆ ಬಿದ್ದು ಮರಣ ಹೊಂದಿತು. ಇದರಿಂದ ಬದುಕುಳಿದ ಅದರ ಜೋಡಿ ಹಕ್ಕಿಗೆ ಅತಿಯಾಗಿ ದುಃಖವಾಯಿತು. ಅದು ಚೀರಾಡಿತು. ಇವೆಲ್ಲಾ ನಿರೀಕ್ಷಿತ ಮಾಮೂಲಿ ಘಟನೆಗಳು. ಆ ಹಕ್ಕಿಯ ದುಃಖಕ್ಕೆ ವಾಲ್ಮೀಕಿ ಮುನಿ ಸ್ಪಂದಿಸಿದ ಮನಸ್ಥಿತಿ ಮಾತ್ರ ಮಾಮೂಲಿಯಾದದ್ದು ಅಲ್ಲ. ತಪಸ್ವಿಯಾಗಿದ್ದರೂ ವಾಲ್ಮೀಕಿ ಮನಸ್ಸಿನ ಸಮತೋಲನವನ್ನು ಕೂಡಲೇ ಕಳೆದುಕೊಂಡದ್ದು, ಹಕ್ಕಿಯನ್ನು ಬೇಟೆಯಾಡುವ ವೃತ್ತಿ ಬೇಡನಿಗೆ ಸಹಜವಾದದ್ದು ಎಂಬುದು ಗೊತ್ತಿದ್ದರೂ ಅವನಿಗೆ ಶಾಪ ಕೊಟ್ಟದ್ದು, ಆನಂತರ ತಾನು ಹಾಗೆ ಮಾಡಬಾರದಿತ್ತು ಎಂಬ ಒದ್ದಾಟಕ್ಕೆ ಸಿಕ್ಕಿಕೊಂಡದ್ದು, ನಾರದರು ಬಂದು ರಾಮನ ಕಥೆ ಹೇಳಿ ಸಮಾಧಾನ ಪಡಿಸಿದುದು, ಬ್ರಹ್ಮನು ಬಂದು ರಾಮಕಥೆಯನ್ನು ಕಾವ್ಯವಾಗಿಸಲು ಪ್ರೇರೇಪಿಸಿದುದು – ಇವೆಲ್ಲ ಬೇಟೆಗಾರನೊಬ್ಬ ಜೋಡಿ ಹಕ್ಕಿಗಳಲ್ಲಿ ಗಂಡು ಹಕ್ಕಿಯನ್ನು ಕೊಂದು ಹೆಣ್ಣು ಹಕ್ಕಿಗೆ ವಿರಹವನ್ನು ಉಂಟುಮಾಡಿದ ವಿಷಾದದ ಘಟನೆಗೆ ಸ್ಪಂದಿಸಿದ ವಾಲ್ಮೀಕಿಯ ಕವಿಹೃದಯ  ಮಾಮೂಲಿಯಾದದ್ದು ಆಗಿರದೆ ವಿಶೇಷವಾದದ್ದು ಆಗಿತ್ತು ಎಂಬುದರ ಸೂಚಕ; ಅವು ವಾಲ್ಮೀಕಿಯ ತಪಶ್ಚರ್ಯೆಯ ಜೀವನರೀತಿಗೆ ದೊರೆತ ಅನಿರೀಕ್ಷಿತ ತಿರುವುಗಳು ಮತ್ತು ವ್ಯಕ್ತಿಯ ಮನಸ್ಸು ಹಿಂದಿನದನ್ನು ಬದಿಗೆ ಸರಿಸಿ ಪುನಃ ಪುನಃ ಚಿಗುರುತ್ತಾ ಹೊಸ ಹೊಸ ಹೂ ಹಣ್ಣುಗಳನ್ನು ಪಡೆಯುವಂತೆ ಪ್ರೇರಣೆಯನ್ನು ಉಂಟುಮಾಡುವ ರಾಮಾಯಣ ಕಾವ್ಯದ ಸಾಹಿತ್ಯಕ ಪರಿಕರಗಳು ಆಗಿ ವಿಶಿಷ್ಟ.

ಮನಸ್ಸನ್ನು ಹಿಗ್ಗಿಸಿ, ಹೊಸತನಕ್ಕೆ ತೆರೆದುಕೊಳ್ಳಲು ವ್ಯಕ್ತಿಗೆ ಅವಕಾಶ ಕೊಟ್ಟು, ಮಧುರವಾದ ಭಾವನೆಗಳಿಗೆ ಸ್ಪಂದಿಸುವ ಪ್ರೇರಣೆ ಉಂಟುಮಾಡಿ ಎದೆಯ ಮೊಗ್ಗರಳಿಸಿ ಮಧು ದ್ರವಿಸುವುದಕ್ಕೆ ಪೂರಕ ಆಗುವ ವಾಲ್ಮೀಕಿಯ ಮನಸ್ಸು ಯಾವುದೋ ಒಂದು ಸಂದರ್ಭದಲ್ಲಿ ಯಾವುದೋ ಒಂದು ಮೂಕ ಜೀವದ ಅಸ್ತಿತ್ವದ ಮೌಲ್ಯಕ್ಕೆ ಸ್ಪಂದಿಸುವುದಕ್ಕೆ ಸೀಮಿತ ಆಗಿರದೆ ಬದುಕುವ ಜೀವಿಗಳ ಅಸ್ತಿತ್ವಕ್ಕ ಧಕ್ಕೆ ಒದಗಿದ ಸಂದರ್ಭಗಳಲ್ಲೆಲ್ಲಾ ಸೂಕ್ತವಾಗಿ ಸ್ಪಂದಿಸುವ ಭಾವವನ್ನು, ವಿಚಾರವನ್ನು, ಮೌಲ್ಯದ ಗ್ರಹಿಕೆಯನ್ನು ಒಳಗೊಳ್ಳುವ ಆವರಣವನ್ನು ರಾಮಾಯಣ ಕಾವ್ಯ ಮಾಧ್ಯಮದಲ್ಲಿ ರೂಪಿಸಿಕೊಟ್ಟಿದೆ. ಎಲ್ಲರಲ್ಲೂ ಕೋಮಲ-ಭಾವಗಳನ್ನು ಮೂಡಿಸುವ ರಾಮಕಥೆಯನ್ನು ಹೇಳುವ ಮತ್ತು ಮೂಕ ಹಕ್ಕಿಯ ರೋದನಕ್ಕೆ ದೊರೆತ ಮಹಾಕಾವ್ಯದ ವ್ಯಾಪ್ತಿಯ ಸಹೃದಯ ಸ್ಪಂದನೆ ಆಗಿರುವ ರಾಮಾಯಣದ ಆಶಯ ಸಹಜವಾಗಿ ಎದೆಯ ಮೊಗ್ಗರಳಿ ಮಧು ದ್ರವಿಸುವ ಆನಂದಾನುಭೂತಿಯೇ ಆಗಿದೆ.

ಅಪರಿಗ್ರಹ

ರಾಮಾಯಣ ಮೂಡಿಬಂದ ಸಂದರ್ಭ ಸುಪರಿಚಿತವಾದಂತೆ ವ್ಯಕ್ತಿಯೊಬ್ಬ ವಾಲ್ಮೀಕಿ ಎಂದು ಸುಪ್ರಸಿದ್ಧ ಆದದ್ದೂ ಸುಪರಿಚಿತವೇ. ಅವನು ಕಂಡ ದರ್ಶನ ಯಾವುದು ಎಂಬುದು ಅಪರಿಚಿತ. ವಾಲ್ಮೀಕಿ ಎನ್ನಿಸಿಕೊಂಡವನ ಮೊದಲಿನ ಹೆಸರು ರತ್ನಾಕರ. ಅವನು ಜೀವನೋಪಾಯಕ್ಕಾಗಿ ದಾರಿಹೋಕರನ್ನು ಸುಲಿಗೆಮಾಡುವ ಬೇಡ ಆಗಿದ್ದ. ಅವನಿದ್ದಲ್ಲಿಗೆ ದಾರಿಹೋಕರಾಗಿ ಬಂದ ನಾರದರನ್ನೂ ಅವನು ಸುಲಿಗೆ ಮಾಡಲು ಪ್ರಯತ್ನಿಸಿದ. ಅವರು ಇದು ಪಾಪ, ಇದರ ಭಾರವನ್ನು ಅವನ ಮಡದಿ, ಮಕ್ಕಳು ಹೊರುತ್ತಾರೆಯೇ ಎಂದು ಕೇಳಿದರು. ಹೆಂಡತಿ, ಮಕ್ಕಳೊಂದಿಗೆ ಪರಾಮರ್ಶಿಸಿದಾಗ ಅವನಿಗೆ ಎಲ್ಲಕ್ಕೂ ತಾನೇ ಹೊಣೆಗಾರ ಎಂಬುದರ ಅರಿವಾಯಿತು. ಪಾಪಕಾರಕ ಆಗುವ ತನ್ನದಲ್ಲದ್ದು ಬೇಡ ಎನ್ನುವ ಅಪರಿಗ್ರಹದ ದೀಕ್ಷೆಯನ್ನು ನಾರದರಿಂದ ಸ್ವೀಕರಿಸಿದ. ಮೈಮೇಲೆ ಹುತ್ತ ಬೆಳೆದರೂ ಅದರ ಅರಿವಿಲ್ಲದೆ ತಪಸ್ಸು ಮಾಡಿದ. ಅದರಿಂದ ಅವನಿಗೆ ವಾಲ್ಮೀಕಿ ಎಂದು ಹೆಸರಾಯಿತು. ಹೀಗೆ ತಪಸ್ಸು ಮಾಡುತ್ತಿದ್ದ ಅವನಲ್ಲಿಗೆ ಬಂದ ಸಪ್ತರ್ಷಿಗಳು ಸಿದ್ಧಪುರುಷ ಆಗಿದ್ದೀಯ ಎಂದು ಅವನ ತಪಸ್ಸಿಗೆ ಫಲವನ್ನು ಕರುಣಿಸಿದರು. ಆತನೇ ನಾರದ ಮಹರ್ಷಿ‌ಗಳ ಮತ್ತು ಬ್ರಹ್ಮನ ಪ್ರೇರಣೆಯಿಂದ ರಾಮಾಯಣ ಕಾವ್ಯ ಬರೆದವನು ಎನ್ನುವುದು ಒಂದು ಆಕರ್ಷಕವಾದ ಕಥೆ.

ವಾಲ್ಮೀಕಿ ತಪಸ್ಸು ಮಾಡಿ ಕಂಡುಕೊಂಡದ್ದು ಸರ್ವರಭ್ಯುದಯದ ಮಾರ್ಗ; ಇದನ್ನು ತೋರುವ ಕೈಮರಗಳು “ಸತ್ಯ, ಅಹಿಂಸೆ, ಕರುಣೆ, ಬ್ರಹ್ಮಚರ್ಯ, ಸತಿಪತಿನಿಷ್ಠೆ, ಸಾಹೋದರ್ಯ, ಸ್ನೇಹ, ವಿವೇಕ”ಗಳು. ಈ ದರ್ಶನವು ಅಪರಿಗ್ರಹದ ಬೀಜ ಅವನ ಎದೆಯಲ್ಲಿ ಮೊಳೆತದ್ದರಿಂದ ಸಾಧ್ಯವಾಗಿದೆ. ಆ ದರ್ಶನ ಮಾನವ ಜಗತ್ತಿನ ಉದ್ದಗಲ ಹೆಮ್ಮರದಂತೆ ನೆಲದಲ್ಲಿ ಭದ್ರವಾಗಿ ಬೇರುಬಿಟ್ಟಿದೆ, ಮೇಲೆ ರೆಂಬೆಕೊಂಬೆಗಳೊಂದಿಗೆ ವಿಸ್ತಾರವಾಗಿ ಹಬ್ಬಿದೆ; ಭಾವಿಸಿದವರಿಗೆ ತನಿ ಹೂ-ಹಣ್ಣುಗಳನ್ನು ಕೊಟ್ಟಿದೆ, ಆಶ್ರಯಿಸಿದವರಿಗೆ ತಂಪು ನೆರಳನ್ನು ನೀಡಿದೆ. ವಾಲ್ಮೀಕಿಯು ಹೆಪ್ಪಿಟ್ಟ ಕೆನೆ ಮೊಸರು ಆದ ರಾಮಾಯಣವನ್ನು ವಾಲ್ಮೀಕಿಯಿಂದಾಗಲೀ, ವಾಲ್ಮೀಕಿಯನ್ನು ಆತನ ರಾಮಾಯಣದಿಂದಾಗಲೀ ಪ್ರತ್ಯೇಕಿಸಲಾಗದು. ವಾಲ್ಮೀಕಿಯ ಗ್ರಹಿಕೆಯನ್ನೆಲ್ಲ ಕಡೆದರೆ ದೊರೆಯುವುದು, ಪಡೆಯುವುದು ನವನೀತದಂಥ ಅನುಭೂತಿ. ಇದು ಬೇಡನೊಬ್ಬ ರಾಮಾಯಣದ ಕರ್ತೃ ವಾಲ್ಮೀಕಿಯಾಗಿ ರೂಪುಗೊಂಡ ಕಥೆಗೆ ಇರುವ ವಿಶೇಷ ಆಯಾಮ.

ನಾರದರಿಂದ ಪ್ರೇರಿತರಾಗಿ ಅಪರಿಗ್ರಹದ ದೀಕ್ಷೆ ಪಡೆದು ತಪಸ್ಸು ಮಾಡಿ ವಾಲ್ಮೀಕಿ ಯಾವ ಉನ್ಮುಖೀ ಅರಿವನ್ನು ಪಡೆದರೋ ಅದನ್ನೇ ಅವರು ಮುಂದೆ ನಾರದರಿಂದ ಕೇಳಿದ ರಾಮನ ಕಥೆಯಲ್ಲಿ ಸಾರ್ವಕಾಲಿಕ ಸಂದೇಶವನ್ನಾಗಿ ಕಾವ್ಯಮಾಧ್ಯಮದಲ್ಲಿ ಕಡೆದಿಟ್ಟಿದ್ದಾರೆ; ಅಪರಿಗ್ರಹವು ಬದುಕನ್ನು ನಿಯಂತ್ರಿಸುವ, ನಿರ್ದೇಶಿಸುವ, ಮುನ್ನಡೆಸುವ ತತ್ತ್ವ ಮಾತ್ರ ಅಲ್ಲ. ಅದೊಂದು ಸಣ್ಣಬೀಜವೊಂದು ಚಿಗುರಿ, ರೆಂಬೆಕೊಂಬೆಗಳನ್ನು ಹಬ್ಬಿಸಿ, ಹೂಬಿಟ್ಟು, ಫಲಗಳನ್ನು ತೂಗಾಡಿಸಿ, ನೆರಳನ್ನು ಕೊಡುತ್ತಾ, ನೆಲದಾಳದಲ್ಲಿ ಬೇರುಗಳನ್ನು ಹರಡುತ್ತಾ ವಿಸ್ತಾರಗೊಳ್ಳುತ್ತಾ ಹೋಗುವ ವಟವೃಕ್ಷ! ವಟವೃಕ್ಷ ಅಂದರೆ ಆಲದ ಮರ. ಅದು ತನ್ನ ರೆಂಬೆಕೊಂಬೆಗಳ ಮೇಲೆ ಮೂಡುವ ಬಿಳಲುಗಳನ್ನು ನೆಲಕ್ಕೆ ತಾಗಿಸಿ, ಬೇರಿಳಿಸಿ ಮತ್ತಷ್ಟು ಆಲದ ಮರಗಳು ಬೆಳೆಯುವಂತೆ ಮಾಡುತ್ತದೆ. ಆ ಮರಗಳೆಲ್ಲಾ ಮತ್ತೆ ಬಿಳಲುಗಳನ್ನು ನೆಲದಲ್ಲೂರಿ ಹೊಸ ಹೊಸ ಮರಗಳು ಮೂಡುವಂತೆ ಮಾಡುತ್ತವೆ. ಹೀಗೆ ಹಬ್ಬುತ್ತಾ ಹೋಗುವ ಆಲದ ಮರದ ಮೂಲ ಮರ ಯಾವುದು ಎಂಬುದೇ ಗೊತ್ತಾಗುವುದಿಲ್ಲ. ಅನೇಕವಾಗಿ ಇರುವ ಆಲದ ಮರಗಳ ಗುಚ್ಛದ ಯಾವ ಮರವನ್ನೂ ಆ ಗುಚ್ಛದಿಂದ ಪ್ರತ್ಯೇಕಿಸಲು ಆಗುವುದಿಲ್ಲ. ಇಂಥ ವಟವೃಕ್ಷ ಒಂದೂ ಹೌದು, ಅನೇಕವೂ ಹೌದು. ಇಂಥ ಹೆಮ್ಮರ ಎಲ್ಲರನ್ನೂ ತನ್ನೊಂದಿಗೆ ಒಳಗೊಳ್ಳುವ ಸರ್ವರಭ್ಯುದಯದ ಆದರ್ಶಕ್ಕೆ ಮತ್ತು ಎದೆಯ ಮೊಗ್ಗರಳಿ ಮಧು ದ್ರವಿಸುತ್ತಾ ಹೋಗುವುದಕ್ಕೆ ಒಂದು ರೂಪಕ. ಸಹಜವಾಗಿ ಇದನ್ನು ಅರ್ಥೈಸುವ ಪರಿಕಲ್ಪನೆಗಳು ಸತ್ಯ, ಅಹಿಂಸೆ, ಕರುಣೆ, ಬ್ರಹ್ಮಚರ್ಯ, ಸತಿಪತಿ ನಿಷ್ಠೆ, ಭ್ರಾತೃತ್ವ, ಸ್ನೇಹ, ವಿವೇಕ ಮೊದಲಾದವುಗಳು. ಇದು ರಾಮ, ಇದು ರಾಮಾಯಣದ ಆದರ್ಶ(ದರ್ಶನದ) ಪ್ರತಿಪಾದನೆಯ ಪರಿಕರ.

ರಸದ ಒರತೆ

ರಾಮ-ಕಥೆ ಕೋಗಿಲೆಯ ಧ್ವನಿಯಂತೆ ಇಂಪು, ಇಂಪು. ಸುಡುಬೇಸಿಗೆಯಲ್ಲಿ ಸುಳಿದುಬರುವ ತಂಗಾಳಿಯಂತೆ ತಂಪುತಂಪು. ರಾಮ-ಕಥೆ ಚಿತ್ರಿಸುವ ರಾಮನ ವ್ಯಕ್ತಿತ್ವವನ್ನು ಭಾವಿಸುತ್ತಾ ಚಿಂತನ-ಮಂಥನ ನಡೆಸಿದಾಗ ದೊರೆಯುವುದು ವರ್ತಮಾನ, ಭವಿಷ್ಯತ್ತುಗಳೆರಡರಲ್ಲೂ ಹಿತವನ್ನುಂಟುಮಾಡುವ ಮಧು (ಜೇನುತುಪ್ಪ). ಅದೊಂದು ರಸದ ಒರತೆ. ಒರತೆ ಸದಾ ಜಿನುಗುತ್ತಿರುತ್ತದೆ, ಚಿಮ್ಮುತ್ತಿರುತ್ತದೆ, ಕೊರತೆಯನ್ನು ಸಮದೂಗಿಸುತ್ತಲೇ ಇರುತ್ತದೆ. ಅದು ಸಹಜವಾಗಿ ಆನಂದವೂ ಹೌದು, ಅತ್ಯಂತ ಮೌಲ್ಯಯುತವಾದದ್ದು ಎನ್ನುವ ಅರ್ಥದಲ್ಲಿ ತೀರ್ಥವೂ ಹೌದು. ಎದೆಯ ಮೊಗ್ಗರಳುವುದು ಎನ್ನುವುದರ ಅರ್ಥವೂ ಇದೇ. ರಾಮ, ರಾಮಾಯಣ ಅತ್ಯಂತ ಹಿರಿದಾದ ಮೌಲ್ಯವನ್ನು ಮೈಮನಗಳಲ್ಲಿ ನೆಲೆಯೂರಿಸುವ, ನಿತ್ಯವಾದ “ಮಧುರಂ ಮಧುರಾಕ್ಷರಂ” ಆದ ರಸದ ಒರತೆ!

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.