close logo

ಶ್ರೀ ರಾಮ ಮಂದಿರವೇ ರಾಮರಾಜ್ಯಕ್ಕೆ ಬುನಾದಿ

ಶಾಂತಂ ಶಾಶ್ವತಮಪ್ರಮೇಯಮನಘಂ ನಿರ್ವಾಣಶಾಂತಿಪ್ರದಂ
ಬ್ರಹ್ಮಾಶಂಭುಫಣೀಂದ್ರಸೇವ್ಯಮನಿಶಂ ವೇದಾಂತವೇದ್ಯಂ ವಿಭುಮ್
ರಾಮಾಖ್ಯಂ ಜಗದೀಶ್ವರಂ ಸುರಗುರುಂ ಮಾಯಾಮನುಷ್ಯಂ
ಹರಿಂ ವಂದೇಽಹಂ ಕರುಣಾಕರಂ ರಘುವರಂ ಭೂಪಾಲಚೂಡಾಮಣಿಮ್

ಅರ್ಥಾತ್,ಶಾಂತನೂ, ಸನಾತನನೂ, ಅಪ್ರಮೇಯನೂ, ನಿಷ್ಪಾಪನೂ, ನಿರ್ವಾಣವೆಂಬ ಪರಮಶಾಂತಿಯನ್ನು ಕರುಣಿಸುವವನೂ, ಬ್ರಹ್ಮ, ಶಂಭು, ಫಣೀಂದ್ರರಿಂದ ನಿರಂತರವೂ ಸೇವಿಸಲ್ಪಡುವವನೂ, ವೇದಾಂತವೇದ್ಯನೂ, ಸರ್ವವ್ಯಾಪಕನೂ, ಜಗದೀಶ್ವರನೂ, ಮಾಯಾಮಾನುಷವಿಗ್ರಹನೂ, ಕರುಣಾಕರನೂ ಆದ ರಘುವಂಶಪುಂಗವ ಭೂಪಾಲಚೂಡಾಮಣಿ ರಾಮನೆಂಬ ಶ್ರೀಹರಿಯನ್ನು ನಮಿಸುತ್ತೇನೆ.

ರಾಮ ಎಂಬೆರಡಕ್ಷರ ಸಾಕೇ ಭಾರತೀಯರ ಮನ ತಣಿಸಲು ರಾಮ ಎಂಬೆರಡಕ್ಷರ ಸಾಕೇ ಭಾರತೀಯರ ಮನವೊಲಿಸಲು. ಶ್ರೀರಾಮನೆಂಬ ವ್ಯಕ್ತಿಯು ಹಾಗೇ ಸುಮ್ಮನೆ ಜನಸಾಮಾನ್ಯರ ಹೃದಯಾಂತರ್ಯದಲ್ಲಿ ಸ್ಥಾಪಿತನಾದನೇ? ಖಂಡಿತ ಇಲ್ಲ. ಅವತಾರ ಪುರುಷೋತ್ತಮನಾದರೂ ಸಾಮಾನ್ಯನಂತೆ ಬದುಕಿದವನು. ವಿದ್ಯೆ ಕಲಿಸಿದ ಗುರುವಿಗೆ ವಿಧೇಯಕನಾಗಿ, ಪಿತೃವಾಕ್ಯ ಪರಿಪಾಲಕನಾಗಿ, ಪ್ರಜಾನುರಾಗಿಯಾಗಿ, ಏಕ ಪತ್ನಿ ವ್ರತಸ್ಥನಾಗಿ, ಧರ್ಮವನ್ನೇ ಧರಿಸಿಕೊಂಡು ನಡೆದವನೀತ ಮರ್ಯಾದ ಪುರುಷೋತ್ತಮ. ಜನಮಾನಸದಲ್ಲಿ ಎಷ್ಟರ ಮಟ್ಟಿಗೆ  ಬೆರೆತು ಹೋಗಿದ್ದಾನೆಂದರೆ.ನೋವಲ್ಲೂ ರಾಮ,ನಲಿವಿನಲ್ಲೂ ರಾಮ, ಸುಖದಲ್ಲೂ ರಾಮ,ದುಃಖದಲ್ಲೂ ರಾಮ. ಒಂದು ವೇಳೆ ಕಾಪಿ ಅಥವಾ ಟೀ ಬಿಟ್ಟರೂ ಪರವಾಗಿಲ್ಲ ಆದರೆ ನೈಜ ಭಾರತೀಯರಿಗೆ ರಾಮ ನಾಮ ಜಪಿಸದೆ  ದಿನವೇ ಶುರುವಾಗದು.

ರಾಮಭಕ್ತರ ಶತಮಾನಗಳ ಕಾಯುವಿಕೆಗೆ ಫಲ ದೊರಕಿದೆ. ಜ.22, 2024 ರಂದು ಶ್ರೀರಾಮಲಲ್ಲಾ  ತನ್ನ ತವರಿನಲ್ಲಿ ವಿರಾಜಮಾನವಾಗಿ,  ಜನ್ಮ ಭೂಮಿಯಾದ ಅಯೋಧ್ಯೆಯಲ್ಲಿ ಸ್ಥಾಪಿತಗೊಂಡಿದ್ದಾನೆ. ಶ್ರೀರಾಮ ಮಂದಿರದ ನಿರ್ಮಾಣಕ್ಕೆ ಸತತ 500 ವರ್ಷಗಳ ಕಾಲ ಸುಧೀರ್ಘ ಯುದ್ಧ ಜರುಗಿದೆ. ಈ ಯುದ್ಧದಲ್ಲಿ ಅದೆಷ್ಟೋ ಕರಸೇವಕರು ಪ್ರಾಣಾರ್ಪಣೆಗೈದಿದ್ದಾರೆ. ಒಂದಲ್ಲ ಒಂದು ದಿನ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗುತ್ತದೆ ಎಂಬ ನಿರೀಕ್ಷೆಯಲ್ಲಿಯೇ ಕೋಟ್ಯಾನು ಕೋಟಿ ಭಾರತೀಯರು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಅಪಾರ ತ್ಯಾಗ ಮತ್ತು ಕಠಿಣ  ತಪಸ್ಸನ್ನು ಆಚರಿಸಿದ್ದಾರೆ. ಆ ತಪಸ್ಸಿನ ಅಭೂತಪೂರ್ವ ಫಲವನ್ನು 21 ನೇಯ ಶತಮಾನದ ಭಾರತೀಯರೆಲ್ಲ ಅನುಭವಿಸುವಂತಾಗಿದೆ.

ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತು ಕಾಯುತ್ತಿರುವ ಮಂದಿ ಒಂದು ಕಡೆಯಾದರೆ, ಅಷ್ಟೇ ಇದನ್ನು ವಿರೋಧಿಸುವ ಮಂದಿ ಮತ್ತೊಂದು ಕಡೆ. ಅವರ ಕಳವಳ ಏನೆಂದರೆ ಕೋಟಿಗಟ್ಟಲೆ ಹಣ ಸುರಿದು ಭವ್ಯ ಮಂದಿರ ನಿರ್ಮಿಸುವ ಬದಲು ಬಡಬಗ್ಗರಿಗೆ ಒಂದು ಆಸ್ಪತ್ರೆಯನ್ನು ನಿರ್ಮಿಸಬಹುದಿತ್ತಲ್ಲ ಎಂದು. ಅಂತ ಮಹಾಶಯರಿಗೆ ನೀಡಬಹುದಾದ ಒಂದು ಸಲಹೆ ಏನೆಂದರೆ, ತಮ್ಮ ತಮ್ಮ ಮನೆಗಳನ್ನೇ ದಾನವಾಗಿ ನೀಡಿ,  ಅಲ್ಲಿಯೇ  ಒಂದು ಆಸ್ಪತ್ರೆಯನ್ನು ಕಟ್ಟಬಹುದಲ್ಲ? ಆಗ ಇವರೇ ಕಂಡ ಕನಸಿನಂತೆ ಆಸ್ಪತ್ರೆಯೂ ನಿರ್ಮಾಣವಾಗುತ್ತದೆ, ಅವರದೇ ಮನಸ್ಸಿನ ಅತೃಪ್ತ ಭಾಗಕ್ಕೆ ಸಮಾಧಾನವೂ ಆಗುತ್ತದೆ. ಜೊತೆಗೆ ಅದೆಷ್ಟೋ ಬಡವರಿಗೆ ಉಪಯೋಗವಾಗುತ್ತದೆ,ಅಲ್ಲವೇ? ಆದರೆ ದಿಟದಲ್ಲಿ ಅದು ಸಾಧ್ಯವಾಗದ ಮಾತು. ಇಲ್ಲಿಯೂ ಅಷ್ಟೇ ಶ್ರೀ ರಾಮಲಲ್ಲಾ ವಿರಾಜಮಾನ್ ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ಮೊಕದ್ದಮ್ಮೆ ಹೂಡಿ ತನ್ನ ಪಾಲಿಗೆ ಬರಬೇಕಾದ ಭೂಮಿಯನ್ನು ಪಡೆದುಕೊಂಡು,ತನ್ನ ಮನೆಯನ್ನು ನಿರ್ಮಿಸುತ್ತಿದ್ದಾನೆ. ಸಂವಿಧಾನವು ಎಲ್ಲರಿಗೂ ಸಮನಾದ ಹಕ್ಕನ್ನು ನೀಡಿದೆ ಎಂದ ಮೇಲೆ ಅದನ್ನು ಗೌರವಿಸಬೇಕು.

ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿ,ಇನ್ನು ಅವನಿಗೆ ಸಂಬಂಧ ಪಟ್ಟ ಭೂಮಿ ಎಲ್ಲಿಂದ ಬರಬೇಕು ಎಂದು ಹೇಳುವ ಬುದ್ಧಿವಂತರು, ಈ ನೆಲದ ಆಡಳಿತ ಯಂತ್ರಕ್ಕೆ ಮಾರ್ಗದರ್ಶಿಯಾದ ಸಂವಿಧಾನವನ್ನು ಗೌರವಯುತವಾಗಿ ಕಾಣುತ್ತ ನ್ಯಾಯಾಲಯದ ತೀರ್ಪನ್ನು ಸ್ವತಃ ಅವಲೋಕಿಸಬೇಕು.

ವಾಲ್ಮೀಕಿ ರಾಮಾಯಣ,ಸ್ಕಂದ ಪುರಾಣ,ರಾಮಚರಿತ ಮಾನಸ, ಗರುಡ ಪುರಾಣ ಮತ್ತು ಮುಂತಾದ ಹಿಂದೂ ಧಾರ್ಮಿಕ ಗ್ರಂಥಗಳನ್ನು ಆಧರಿಸಿಕೊಂಡು  ಸೂಕ್ಷ್ಮ ರೀತಿಯಾಗಿ ಅವಲೋಕಿಸಿಯೇ ತೀರ್ಪು ನೀಡಲಾಗಿದೆ. ಶ್ರೀರಾಮಚಂದ್ರನ ಜನ್ಮಸ್ಥಾನ,ಅಯೋಧ್ಯೆಯ ಶ್ರೇಷ್ಠತೆ ಹಾಗೂ ವೈಭವವನ್ನು ಸಂಪೂರ್ಣವಾಗಿ ಸ್ಕಂದ ಪುರಾಣದ ಅಯೋಧ್ಯ ಮಹಾತ್ಮೆಯಲ್ಲಿ ವರ್ಣಿಸಲಾಗಿದೆ.

ಅಯೋಧ್ಯ ನಗರಿಯ ಉಲ್ಲೇಖಗಳು :

ಅಕಾರೋ ಬ್ರಹ್ಮ ಪ್ರೋಕ್ತಂ ಯಕಾರೋ ವಿಷ್ಣುರುಚ್ಯತೇ
 ಧಕಾರೋ ರುದ್ರರೂಪಶ್ಚ ಅಯೋಧ್ಯಾನಾಮ ರಾಜತೇ (ಸ್ಕಂದ ಪುರಾಣ, ಅಯೋಧ್ಯ ಮಹಾತ್ಮೆ)

ಅರ್ಥಾತ್, ಅ ಅಕ್ಷರವು ಬ್ರಹ್ಮನನ್ನು, ಯ ಅಕ್ಷರವು ವಿಷ್ಣುವನ್ನು,ದ ಅಕ್ಷರವು ರುದ್ರನನ್ನು ಸೂಚಿಸುತ್ತದೆ. ಅಯೋಧ್ಯೆಯು ತ್ರಿಮೂರ್ತಿಗಳ ಸಾಕಾರವಾಗಿದೆ.

ಅಯೋಧ್ಯೆಯು ಇಕ್ಷ್ವಾಕು ರಾಜ ವಂಶದ ರಾಜಧಾನಿಯಾಗಿದೆ. ಈ ವಂಶದ ರಾಜರು ಮಹಾಪರಾಕ್ರಮಿಗಳು, ದೈವೀ ಭಕ್ತರು, ಜನಾನುರಾಗಿಗಳು ಹಾಗೂ ಧರ್ಮ ನಿಷ್ಠರಾಗಿದ್ದರು. ಅವರೆಲ್ಲರ ಹಿರಿಮೆಯಿಂದಾಗಿ ಅಯೋಧ್ಯಾನಗರವೂ ಮುಕ್ತಿಧಾಮವಾಯಿತು.

ಅಯೋಧ್ಯಾ ಮಥುರಾ ಮಾಯಾ ಕಾಶೀ ಕಾಞ್ಚೀ ಅವನ್ತಿಕಾ
ಪುರೀ ದ್ವಾರಾವತೀ ಚೈವ ಸಪ್ತೈತೇ ಮೋಕ್ಷದಾಯಕಾಃ
                                                      (ಗರುಡ ಪುರಾಣ)

ಅರ್ಥಾತ್,ಮೋಕ್ಷವನ್ನು ನೀಡುವ  ಏಳು ಭಾರತೀಯ ನಗರಗಳ ಪಟ್ಟಿಯಲ್ಲಿ ಅಯೋಧ್ಯೆಯು ಅಗ್ರಸ್ಥಾನದಲ್ಲಿದೆ, ಅಂತಹ ಇತರ ನಗರಗಳೆಂದರೆ ಮಥುರಾ, ಮಾಯಾ (ಹರಿದ್ವಾರ), ಕಾಶಿ, ಕಾಂಚಿ, ಅವಂತಿ ( ಉಜ್ಜಯಿನಿ ), ಪುರಿ( ಜಗನ್ನಾಥ), ದ್ವಾರಕಾ.

ಷಷ್ಟಿವರ್ಷಸಹಸ್ರಾಣಿ ಕಾಶೀವಾಸೇಷು ಯತ್ಫಲಮ್
ತತ್ಫಲಂ ನಿಮಿಷಾರ್ದ್ಧನ ಕಲೌ ದಾಶರಥೀಂ ಪುರೀಮ್
                    ( ಸ್ಕಂದ ಪುರಾಣ,ಅಯೋಧ್ಯ ಮಹಾತ್ಮೆ )

 ಅರ್ಥಾತ್,ಕಲಿಯುಗದಲ್ಲಿ ಯಾರಾದರೂ ದಾಸರಥಿ ನಗರದಲ್ಲಿ (ಅಯೋಧ್ಯೆ) ತಂಗಿದರೆ ಆ ವ್ಯಕ್ತಿ 60,000 ವರ್ಷಗಳ ಕಾಲ ಕಾಶಿಯಲ್ಲಿ ನೆಲೆಸಿದ ಪುಣ್ಯವನ್ನು ಸಾಧಿಸುತ್ತಾನೆ.

ಸ್ಕಂದ ಪುರಾಣದಲ್ಲಿ ವರ್ಣಿತವಾಗಿರುವಂತೆ ಅಯೋಧ್ಯೆಯು ತನ್ನ ಶ್ರೀಮಂತಿಕೆಯಿಂದ ಸಮೃದ್ಧವಾಗಿದ್ದು,ವಿಶಾಲವಾದ ರಸ್ತೆಗಳು,ಅಡ್ಡರಸ್ತೆಗಳು, ಆನೆಗಳು, ಕುದುರೆಗಳು,ರಥಗಳು ಮತ್ತು ಅನೇಕ ಅಂತಸ್ತಿನ ಅರಮನೆಗಳಿಂದ ಕೂಡಿದೆ. ದೈವಿಕ ಪ್ರಭೆಯಿಂದ ನಿರ್ಮಿಸಿರುವ  ದೇವಾಲಯಗಳಿಂದ  ಚೆನ್ನಾಗಿ ಅಲಂಕೃತಗೊಂಡಿದ್ದು,ವೇದ ಮಂತ್ರಗಳ ಪಠಣದಿಂದ ಪ್ರತಿಧ್ವನಿಸುತ್ತಿದೆ. ಈ ಭವ್ಯವಾದ ನಗರವು ಸರಯೂ ನದಿಯ ದಡದಲ್ಲಿದ್ದು, ತಪಸ್ವಿಗಳ ಆಶ್ರಯ ತಾಣವಾಗಿದೆ. ದೇವೇಂದ್ರನ ರಾಜಧಾನಿಯಾದ ಅಮರಾವತಿಗೆ ಸಮನಾಗಿದೆ.

ಗಯಾಶ್ರಾದ್ಧಂ ಯೇ ಕೃತ್ವಾ ಪುರುಷೋತ್ತಮದರ್ಶನಮ್
ಕುರ್ವಂತಿ ತತ್ಫಲಂ ಪ್ರೋಕ್ತಂ ಕಲೌ ದಾಶರಥೀಂ ಪುರೀಮ್
ಜಲರೂಪೇಣ ಬ್ರಹ್ಮೈವ ಸರಯೂರ್ಮೋಕ್ಷದಾ ಸದಾ
ನೈವಾತ್ರ ಕರ್ಮಣೋ ಭೋಗೋ ರಾಮರೂಪೋಭವೇನ್ನರಃ
 (ಸ್ಕಂದ ಪುರಾಣ,ಅಯೋಧ್ಯ ಮಹಾತ್ಮೆ )

 ಅರ್ಥಾತ್, ಗಯಾದಲ್ಲಿ ನಡೆಸುವ ಶ್ರಾದ್ಧ ಕಾರ್ಯಗಳಿಗೆ ಯಾವ ರೀತಿಯ ಫಲ ದೊರಕುತ್ತದೋ,ಅದೇ ಫಲ ಶ್ರೀಮನ್ನಾರಾಯಣನ ದರ್ಶನ ಮಾತ್ರದಿಂದ ಲಭಿಸುತ್ತದೆ. ಅದೇ ರೀತಿಯಾಗಿ ಸರಯು ನದಿಯಲ್ಲಿ ಮಿಂದು ದಶರಥನ ಕುಲದಲ್ಲಿ ಜನಿಸಿರುವ ಶ್ರೀ ರಾಮನ ದರ್ಶನವನ್ನು ಮಾಡಿದರೆ ಗಯಾದಲ್ಲಿ ದೊರಕುವ ಫಲಕ್ಕಿಂತ  ಹೆಚ್ಚಿನ ಫಲ ಪ್ರಾಪ್ತಿಯಾಗುತ್ತದೆ.

 ರಾಮಜನ್ಮಭೂಮಿಯ ಹಿನ್ನೆಲೆ

ಹಿಂದೆ ಶ್ರೀ ವಿಷ್ಣುಶರ್ಮ ಎಂಬ ಶ್ರೇಷ್ಠ ಬ್ರಾಹ್ಮಣನಿದ್ದನು. ಇವನು ವೇದ ವೇದಾಂಗಗಳ ಸಾರವನ್ನು ಅರಿತಿದ್ದವನು. ಯೋಗ ಮತ್ತು ಧ್ಯಾನಗಳಿಂದ ವಿಷ್ಣುವನ್ನು ಪೂಜಿಸುತ್ತಿದನು.ಒಮ್ಮೆ ಅವನು ತೀರ್ಥಯಾತ್ರೆಯನ್ನು ಕೈಗೊಂಡು ಅಯೋಧ್ಯೆಗೆ ಹೋಗುತ್ತಾನೆ. ಅಲ್ಲಿ ವಿಷ್ಣುವಿನ ಕುರಿತು ಗಾಳಿ,ಮಳೆ, ಚಳಿಯನ್ನು ಲೆಕ್ಕಿಸದೆ  ಬಹು ಕ್ಲಿಷ್ಟಕರವಾದ ತಪಸ್ಸನು ಆಚರಿಸುತ್ತಾನೆ.

ಅವನ ತಪಸ್ಸಿಗೆ ಮೆಚ್ಚಿದ ಭಗವಂತನಾದ ಶ್ರೀ ವಿಷ್ಣುವು ಪ್ರತ್ಯಕ್ಷನಾಗಿ, ” ಓ ಬ್ರಾಹ್ಮಣನೇ, ನಿನ್ನ ತಪಸ್ಸಿಗೆ ಮೆಚ್ಚಿ ಸಂತೃಪ್ತನಾಗಿದ್ದೇನೆ. ಇಲ್ಲಿಗೆ ನಿನ್ನ ಪಾಪಗಳೆಲ್ಲ ನಾಶವಾಗಿವೆ. ನಿನಗೇನು ವರ ಬೇಕು”ಎಂದು ಕೇಳಲು,

ಭಕ್ತ ವಿಷ್ಣು ಶರ್ಮ,”ಪ್ರಭು,ಬ್ರಹ್ಮಾಂಡದ ಒಡೆಯ ನೀನು, ನಿನ್ನ ದರ್ಶನ ಮಾತ್ರದಿಂದ ನಾನು ಧನ್ಯನಾದೆ. ನಿನ್ನಲ್ಲಿ ನನಗೆ ಅಚಲವಾದ ಭಕ್ತಿಯನ್ನು ನೀಡು ತಂದೆ “ಎಂದು ಬೇಡುತ್ತಾನೆ.

ಭಗವಂತನು,” ವಿಷ್ಣು ಶರ್ಮಾ, ಇನ್ನು ಮುಂದೆ ಈ ಪವಿತ್ರ ಸ್ಥಳವು ನಿನ್ನ ಹೆಸರಿನಿಂದಲೇ ಪ್ರಸಿದ್ಧಿಯನ್ನು ಹೊಂದಲಿ.ನನ್ನ ಈ ವಿಗ್ರಹವನ್ನು ಇಲ್ಲಿ ಸ್ಥಾಪಿಸು. ಈ ಕ್ಷೇತ್ರವು ಮುಕ್ತಿಧಾಮವಾಗಿ ಸರ್ವರಿಗೂ ಮೋಕ್ಷವನ್ನು ದಯಪಾಲಿಸಲಿದೆ ” ಎಂದು ಆಶೀರ್ವದಿಸುತ್ತಾರೆ.

ತ್ವನ್ನಾಮಪೂರ್ವಿಕಾ ವಿಪ್ರ ಮನ್ಮೂರ್ತಿರಿಹ ತಿಷ್ಠತು
ವಿಷ್ಣುಹರೀತಿ ವಿಖ್ಯಾತಾ ಭಕ್ತಾನಾಂ ಮುಕ್ತಿದಾಯಿನೀ
                        (ಸ್ಕಂದಪುರಾಣ,ಅಯೋಧ್ಯ ಮಹಾತ್ಮೆ)

ಅರ್ಥಾತ್,ಅಯೋಧ್ಯೆಯಲ್ಲಿ ಶ್ರೀ ರಾಮನ ಜನ್ಮಸ್ಥಳದಲ್ಲಿ ವಿಷ್ಣುವಿನ ಮೂರ್ತಿಯನ್ನು ಪ್ರತಿಷ್ಠಾಪಿಸುವಂತೆ ಶ್ರೀ ಮಹಾ ವಿಷ್ಣು ತನ್ನ ಭಕ್ತನಾದ ವಿಷ್ಣುಶರ್ಮನಿಗೆ ಸೂಚಿಸುತ್ತಾನೆ. ಅದನ್ನು ವಿಷ್ಣುಹರಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ.

ಸ್ಕಂದ ಪುರಾಣದ ಅಯೋಧ್ಯ ಖಂಡದಲ್ಲಿ ಬರುವ ಒಂದೊಂದು ಶ್ಲೋಕವು ಅಯೋಧ್ಯೆಯಲ್ಲಿನ ರಾಮಜನ್ಮ ಭೂಮಿಯ ಬಗ್ಗೆ ಅಚ್ಚುಕಟ್ಟಾಗಿ ದಾಖಲೆಗಳ ಸಮೇತ  ಸಾಬೀತುಪಡಿಸುತ್ತದೆ. ಇಷ್ಟು ಸಾಕ್ಷ್ಯಾಧಾರಗಳನ್ನು ನೀಡಿದ ಮೇಲೂ ಕೆಲವರಿಗೆ ಮತ್ತೊಂದು ಪ್ರಶ್ನೆ ಕಾಡಬಹುದು. ಅಯೋಧ್ಯೆಯ ಬೇರೆ ಕಡೆಯ ವಿಶಾಲವಾದ ಜಾಗದಲ್ಲಿ ಮಂದಿರ ನಿರ್ಮಿಸಬಹುದಿತ್ತಲ್ಲ,ಆ ಸ್ಥಳವೇ ಯಾಕೆ?ಎಂದು. ಇದಕ್ಕೆ ಉತ್ತರವಾಗಿ ಇದೇ ಅಯೋಧ್ಯ ಮಹಾತ್ಮೆಯಲ್ಲಿ  ರಾಮ ಜನ್ಮಭೂಮಿಯ ಬಗ್ಗೆ ನಿರ್ದಿಷ್ಟವಾಗಿ ತಿಳಿಸಲಾಗಿದೆ.

ತಸ್ಮಾತ್ಸ್ಥಾನತ ಐಶಾನೇ ರಾಮಜನ್ಮ ಪ್ರವರ್ತ್ತತೇ
ಜನ್ಮಸ್ಥಾನಮಿದಂ ಪ್ರೋಕ್ತಂ ಮೋಕ್ಷಾದಿಫಲಸಾಧನಮ್
ವಿಘ್ನೇಶ್ವರಾತ್ಪೂರ್ವಭಾಗೇ ವಾಸಿಷ್ಠಾದುತ್ತರೇ ತಥಾ
ಲೌಮಶಾತ್ಪಶ್ಚಿಮೇ ಭಾಗೇ ಜನ್ಮಸ್ಥಾನಂ ತತಃ ಸ್ಮೃತಮ್
(ಸ್ಕಂದಪುರಾಣ,ಅಯೋಧ್ಯ ಮಹಾತ್ಮೆ)

ಅರ್ಥಾತ್, ಸರಯು ಮತ್ತು ಥಾಮಸ ನದಿಗಳ ನಡುವೆ, ಪಶ್ಚಿಮದಲ್ಲಿ ವಿಘ್ನೇಶ್ವರ,ದಕ್ಷಿಣದಲ್ಲಿ ವಶಿಷ್ಠ ಮಹರ್ಷಿ,ಪೂರ್ವದಲ್ಲಿ ಲೋಮಸ ಮಹರ್ಷಿ ಇರುವ ಈ ಸ್ಥಳದಲ್ಲಿ ರಾಮಜನ್ಮಭೂಮಿ ಇದ್ದು, ಮೋಕ್ಷವನ್ನು ಪಡೆಯುವ ಕೇಂದ್ರ ಬಿಂದುವಾಗಿದೆ.

ಶ್ರೀರಾಮನು ಹುಟ್ಟಿನಿಂದಲೇ ದೈವಿಕ ಗುಣಗಳನ್ನು ಹೊಂದಿದ್ದನೆಂದು ತಿಳಿಸುತ್ತಲೇ ನ್ಯಾಯಾಲಯವು ರಾಮಾಯಣದಲ್ಲಿ ಬರುವ ಬಾಲಕಾಂಡವನ್ನು ಉಲ್ಲೇಖಿಸಿದೆ.

ಪ್ರೋದಯಮಾನೇ ಜಗನ್ನಾಥಂ ಸರ್ವಲೋಕನಮಸ್ಕೃತಮ್
 ಕೌಸಲ್ಯಾಜನಯದ್ ರಾಮಂ ದಿವ್ಯಲಕ್ಷಣಸಂಯುತಮ್

ಅರ್ಥಾತ್,ಕೌಸಲ್ಯೆಯು ಸಮಸ್ತ ಲೋಕದ ಪ್ರಭುವಾದ ಒಬ್ಬ ಮಗನಿಗೆ ಜನ್ಮ ನೀಡಿದಳು. ಅವನು ಎಲ್ಲ ಜನರಿಂದ ಆರಾಧಿಸಲ್ಪಟ್ಟ ವ್ಯಕ್ತಿಯಾಗಿ,ದೈವಿಕ ಲಕ್ಷಣಗಳನ್ನು ಹೊಂದಿದ್ದನು.

ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇದಸೇ 
ರಘುನಾಥಾಯ ನಾಥಾಯ ಸೀತಾಯ ಪತಯೇ ನಮಃ 

ಅರ್ಥಾತ್,

ರಾಮ: ಶ್ರೀರಾಮಚಂದ್ರನನ್ನು ದಶರಥ ಚಕ್ರವರ್ತಿ ಮಾತ್ರ “ರಾಮಾ” ಎಂದು ಕರೆಯುತ್ತಿದ್ದನಂತೆ.ಆ ರೀತಿಯ ಅಧಿಕಾರ ತಂದೆಯಾದವನಿಗೆ ಮಾತ್ರ.

ರಾಮಭದ್ರ:ಇನ್ನು ತಾಯಿಯಾದ ಕೌಸಲ್ಯ ಮಗನನ್ನು “ರಾಮಭದ್ರ” ಎನ್ನುತ್ತಿದ್ದಳಂತೆ. ಅದು ವಾತ್ಸಲ್ಯಭರಿತವಾದ ಸಂಬೋಧನೆ. ತಾಯಿ ಮತ್ತು ಪುತ್ರನ ನಡುವಿನ ಸಹಜ ಪ್ರೇಮವನ್ನು ಇದು ವರ್ಣಿಸುತ್ತದೆ.

ರಾಮಚಂದ್ರ:ಚಿಕ್ಕಮ್ಮ ಕೈಕೇಯಿ ರಾಮಚಂದ್ರ ಎನ್ನುತ್ತಿದ್ದಳು. ಬಾಲ್ಯದಲ್ಲಿ ಬಾನಿನಲ್ಲಿರುವ ಚಂದ್ರ ಬೇಕೆಂದು ಅಳುತ್ತಿದ್ದ ಶ್ರೀರಾಮನಿಗೆ ಕೈಕೇಯಿ-ಮಂಥರೆಯರು ಕನ್ನಡಿಯೊಳಗೆ ಚಂದ್ರಬಿಂಬ ತೋರಿಸಿ ಸಮಾಧಾನಪಡಿಸಿದ್ದರು. ಆ ಕಾರಣದಿಂದ “ರಾಮಚಂದ್ರ” ಎಂಬ ಅನ್ವರ್ಥನಾಮ.

ವೇದಸೇ:ಬ್ರಹ್ಮರ್ಷಿಗಳಾದ ವಶಿಷ್ಠರು ಶ್ರೀರಾಮನನ್ನು ಪರತತ್ತ್ವವೆಂದು ತಿಳಿದು “ವೇಧಸೇ” ಎಂದು ಕರೆಯುತ್ತಿದ್ದರು.

ರಘುನಾಥ:ಆದರೆ ಅಯೋಧ್ಯೆಯ ಪುರಜನರೆಲ್ಲಾ ‘ನಮ್ಮ ರಘುವಂಶದ ಅರಸು’ ಎಂಬರ್ಥದಲ್ಲಿ “ರಘುನಾಥ” ಎಂದು ಕರೆಯುತ್ತಿದ್ದರು.

ನಾಥ:ಇನ್ನು “ನಾಥ” ಎಂದಷ್ಟೆ ಕರೆಯುತ್ತಿದ್ದವಳು ಸೀತಾದೇವಿ ಮಾತ್ರ.ಹಾಗೆ ಕರೆಯುವುದು ಅವಳೊಬ್ಬಳ ಹಕ್ಕು.!

ಸೀತಾಯ ಪತಯೇ:ಆದರೆ ಮಿಥಿಲೆಯ ಜನರೆಲ್ಲರೂ ‘ನಮ್ಮ ಸೀತೆಯ ಗಂಡ’ ಎಂಬ ಅಭಿಮಾನದಿಂದ “ಸೀತಾಯ ಪತಯೇ” ಎನ್ನುತ್ತಿದ್ದರು. ಇಂದಿಗೂ ಕೂಡ ಬಿಹಾರ ರಾಜ್ಯದ ಮಿಥೆಲೆ ತನ್ನ ಭಿನ್ನ ಭಾಷಾ ಸೊಗಡಿನಿಂದ ಮತ್ತು ಸೀತಾ ಮಾತೆಯ ಕುರಿತಾದ ಹಲವು ಜಾನಪದ ಕಥೆಗಳಿಂದ ವಿಶಿಷ್ಟವಾಗಿ ಭಕ್ತಗಣವನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.  (ಈ ಶ್ಲೋಕದ ಅರ್ಥವನ್ನು raocollections.blogspot ನಿಂದ ಆರಿಸಿಕೊಳ್ಳಲಾಗಿದೆ.)

ಈ ಎಲ್ಲಾ ಪುರಾವೆಗಳು ಶ್ರೀರಾಮಚಂದ್ರ ಪ್ರಭು ಭಾರತೀಯರ ಪೂರ್ವಜನೆಂದು ಸಾರಿ ಸಾರಿ ಹೇಳುತ್ತದೆ. ರಾಮಾಯಣವೋ ದೇಶದ ಪ್ರತಿ ಮೂಲೆ ಮೂಲೆಗಳಲ್ಲೂ ಹಾಸು ಹೊಕ್ಕಾಗಿದೆ. ಶ್ರೀರಾಮ ಎಲ್ಲಾ ರೀತಿಯ ಜನರ ಬದುಕಿನಲ್ಲೂ ಬೆರೆತು ಹೋಗಿದ್ದಾನೆ. ಹಿಮಾಲಯದಿಂದ ಹಿಡಿದು ಕನ್ಯಾಕುಮಾರಿವರೆಗೂ ರಾಮನ ಕಥೆಯಿಲ್ಲದ ಹಳ್ಳಿ ಇಲ್ಲ ರಾಮನ ಗುಡಿಗಳಿಲ್ಲದ ಊರಿಲ್ಲ. ರಾಮ ಆ ಬಂಡೆಯ ಮೇಲೆ ಕೂತಿದ್ದನಂತೆ,ಸೀತೆಯು ಅಲ್ಲಿ ಜಳಕ ಮಾಡಿದ್ದಳಂತೆ, ರಾಮ ನನ್ನ ನಾಮ ಧರಿಸಲು ಈ ಸ್ಥಳದಲ್ಲಿ ಬಾಣ ಬಿಟ್ಟಿದ್ದನಂತೆ, ರಾಮ ಪ್ರತಿಷ್ಠಾಪಿಸಿದ ಶಿವಾಲಯಗಳೆಷ್ಟೋ,ಹೀಗೆ ಅದೆಷ್ಟೋ ಕಥೆಗಳನ್ನು ಒಳಗೊಂಡ  ಯಕ್ಷಗಾನ, ಬಯಲಾಟ,ಜಾನಪದ ಮುಂತಾದ ಕಲೆಗಳಲ್ಲಿ ರಾಮ ಇನ್ನೂ ಜೀವಂತವಾಗಿದ್ದಾನೆ. ನೂರಕ್ಕೆ ತೊಂಬತ್ತು ಭಾಗದಷ್ಟು ನಮ್ಮ  ಹಳ್ಳಿಗಳ ಹೆಸರು  ರಾಮನಾಮದ ಮೂಲವೆ ಆಗಿರುತ್ತದೆ. ಭರತ ಖಂಡದಲ್ಲಿ ಅದೆಷ್ಟೋ ಮಹಾಪುರುಷರ ಅವತಾರವಾಗಿರಬಹುದು,ಆದರೆ ಭಾರತೀಯರಿಗೆಲ್ಲ ಆದರ್ಶ ಪುರುಷೋತ್ತಮನೊಬ್ಬನೇ, ಅವನೇ ಶ್ರೀರಾಮಚಂದ್ರ ಪ್ರಭು. ನಾವೆಲ್ಲಾ ಪ್ರಭು ಶ್ರೀ ರಾಮನ ಆದರ್ಶ ಜೀವನವನ್ನು ಪ್ರೇರಣೆಯನ್ನಾಗಿಸಿಕೊಂಡು ನಮ್ಮ ಬದುಕನ್ನೂ ಮತ್ತು ನಮ್ಮ ಭಾರತವನ್ನು ಕಟ್ಟೋಣ

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

IndicA Today - Website Survey

Namaste,

We are on a mission to enhance the reader experience on IndicA Today, and your insights are invaluable. Participating in this short survey is your chance to shape the next version of this platform for Shastraas, Indic Knowledge Systems & Indology. Your thoughts will guide us in creating a more enriching and culturally resonant experience. Thank you for being part of this exciting journey!


Please enable JavaScript in your browser to complete this form.
1. How often do you visit IndicA Today ?
2. Are you an author or have you ever been part of any IndicA Workshop or IndicA Community in general, at present or in the past?
3. Do you find our website visually appealing and comfortable to read?
4. Pick Top 3 words that come to your mind when you think of IndicA Today.
5. Please mention topics that you would like to see featured on IndicA Today.
6. Is it easy for you to find information on our website?
7. How would you rate the overall quality of the content on our website, considering factors such as relevance, clarity, and depth of information?
Name

This will close in 10000 seconds