close logo

ಆಯುರ್ವೇದದ ಜನನ – ಪೌರಾಣಿಕ ಕಥನ

ಯಾವ ಶಾಸ್ತ್ರವೇ ಆಗಲಿ!ಯಾವ ಸಿದ್ಧಾಂತವೇ ಆಗಲಿ! ಪುರುಷಾರ್ಥವು ಸಾಧನೆ ಎಂಬ ಮುಖ್ಯ ಗುರಿಯನ್ನು ತೋರಿಸುವುದಕ್ಕೆ ಅವತರಿಸಿರುತ್ತದೆ. ಪುರುಷಾರ್ಥ ಶಬ್ದದಲ್ಲಿ ಪ್ರಪಂಚವೇ ಅಡಕವಾಗಿದೆ. ಪುರುಷಾರ್ಥವೆಂದರೆ ಪುರುಷ ಪ್ರಯೋಜನವೆಂದರ್ಥವಾಗುತ್ತದೆ.

ಪರಂತಿ ಪ್ರಾಣಿನಾಮ ಗಚ್ಛಂತೀತಿ ಪುರುಷಾಃ | ಪುರ ಅಗ್ರಗಮನೇ ಇತಿ ಅಸ್ಯಾತ್ವರ್ಥಸಾಮರ್ಥ್ಯಾತ್ ಪ್ರಾಣಿನಾಮಗ್ರೇಸರಾ: ಪುರುಷಾಃಎಂದರೆ ಸಕಲ ಪ್ರಾಣಿಗಳಿಗಿಂತಲೂ ಬುದ್ಧಿ ಬಲದ ಸಹಾಯದಿಂದ ಪ್ರಗತಿಯ ಮಾರ್ಗದಲ್ಲಿ ಮುಂದುವರೆಯತಕ್ಕ ಜ್ಞಾನ ಪ್ರಧಾನವಾದ ಪ್ರಾಣಿ ವರ್ಗಕ್ಕೆಪುರುಷಎಂಬ ಹೆಸರು ಬಂದಿದೆ. ಇಂತಹ ಪುರುಷರು ಸಂಪಾದಿಸಬೇಕಾಗಿರುವ ಮತ್ತು ಏಕಮಾತ್ರ ಗುರಿ ಎಂದರೆ ಅದು ಅರ್ಥ ಎಂಬ ಶಬ್ದದಿಂದ ಸ್ಪಷ್ಟವಾಗುತ್ತದೆ. ಅರ್ಥದಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷ ಎಂದು ನಾಲ್ಕು ವಿಧಗಳಿವೆ. ನಾಲ್ಕು ಅರ್ಥಗಳ ಆರ್ಜನೆಗಾಗಿಯೇ ಮನುಷ್ಯನು ಮರಣ ಪರ್ಯಂತವಾಗಿ ಅವರವರ ಅನುಕೂಲಕ್ಕೆ ಅನುಗುಣವಾದ ಪ್ರಯತ್ನವನ್ನು ಮಾಡುತ್ತಲೇ ಇರುತ್ತಾನೆ.

ಮನುಷ್ಯ ಯಾವ ಪುರುಷಾರ್ಥವನ್ನೇ ಆಗಲಿ ಸಾಧಿಸಿಕೊಳ್ಳಬೇಕಾದರೆ ಶರೀರವು ಮೂಲ ಸಾಧನವಾಗಿರುತ್ತದೆ. ಜೀವಾತ್ಮನ ಸಕಲ ಭೋಗಗಳಿಗೆ ಶರೀರವು ಅತ್ಯಗತ್ಯವಾಗಿರುತ್ತದೆ. “ಶರೀರಂ ಪಂಚಮಹಾಭೂತವಿಕಾರಾತ್ಮಕಮಾತ್ಮನೋ ಭೋಗಾಯತನಂಅಂದರೆ ಪಂಚಭೂತಗಳ ಮಿಶ್ರಣದಿಂದ ಆಕಾರಗೊಂಡಿರುವ ಶರೀರವು ಪರಮಾತ್ಮನ ಉಪಭೋಗಕ್ಕೆ ಆಧಾರಭೂತವಾಗಿದೆ.ಧರ್ಮ, ಅಧರ್ಮಗಳು,ಸುಖ,ದುಃಖಗಳು, ಪಾಪ,ಪುಣ್ಯಗಳು ಶರೀರಿಯಾದ ಜಿವಾತ್ಮನಿಗೆ ಸಂಬಂಧಿಸಿರುತ್ತದೆ. ಶ್ರವಣ, ಮನನ, ಧ್ಯಾನ, ಧಾರಣ, ಸಮಾಧಿಗಳಾದರೂ ಶರೀರದ ಹೊರತಾಗಿ ಸಾಧ್ಯವೇ ಇಲ್ಲ. ಎಷ್ಟು ದೂರ ವಿಚಾರ ಮಾಡಿದರೂ, ಪಂಚಭೂತಾತ್ಮಕವಾದ ಶರೀರವೇ ಜಗತ್ತಿನ ಪ್ರತಿಯೊಂದು ಕಾರ್ಯಕ್ಕೂ ಸಾಧಕವಾಗಿದೆ. ಆದರೆ ಶರೀರವು ಯಾವಾಗಲೂ ದೃಢವಾಗಿರತಕ್ಕ ಸ್ವಭಾವವುಳ್ಳದಾಗಿಲ್ಲ. ಇಂತಹ ಕ್ಷೀಣ ಸ್ವಭಾವದ ಶರೀರಕ್ಕೆ ಕಾಲಕ್ರಮಗಳ ಅಥವಾ ಆಹಾರ ವಿಹಾರಗಳ ವ್ಯತ್ಯಾಸದಿಂದ ರೋಗಾದಿಗಳಂತೆ, ಏನಾದರೂ ಸಂಭವಿಸಿದರೆ ಶರೀರವು ಮತ್ತಷ್ಟು ಕ್ಷೀಣವಾಗಿ,ಕಡೆಗೆ ಒಂದು ದಿನ ತನ್ನ ಗುರಿಯನ್ನು ಮುಟ್ಟದೆ,ಅಕಾಲದಲ್ಲಿಯೇ ಕಾಲನಿಗೆ ತುತ್ತಾಗಿ ಬಿಡುತ್ತದೆ. ಆದುದರಿಂದ ಇಂತಹ ರೋಗಾದಿಗಳ ಭಾದೆಗಳಿಂದ ಶರೀರವನ್ನು ರಕ್ಷಿಸಿಕೊಳ್ಳಬೇಕಾದದ್ದು ಮನುಷ್ಯನ ಮುಖ್ಯ ಕರ್ತವ್ಯವಾಗಿದೆ. ಇದಕ್ಕನುಗುಣವಾಗಿ ಮನುಷ್ಯ ಎಷ್ಟು ಉಪಾಯಗಳನ್ನು  ಹುಡುಕುತ್ತಾ ಹೋದರೂ ಕಡೆಗೆ ಪುಣ್ಯತಮವಾದ ಆಯುರ್ವೇದದ ಆಶ್ರಯವನ್ನು ಹೊಂದಬೇಕಾಗುತ್ತದೆ.

ಆಯುರ್ಹಿತಾಹಿತಂ ವ್ಯಾಧೇರ್ನಿದಾನಂ ಶಮನಂ ತಥಾ | ವಿದ್ಯತೇ ಯತ್ರ ವಿದ್ವದ್ಧಿ ಆಯುರ್ವೇದ ಉಚ್ಯತೇ ।। ತಸ್ಮಾssಯುಷಃ ಪುಣ್ಯತಮೋ ವೇದೋ ವೇದವಿದಾಂ ಮತಃ ವಕ್ಷತೇ ಯನ್ಮನುಷ್ಯಾಣಾಂ ಲೋಕಯೋರುಭಯೋರ್ಹಿತಃ

ಆಯುಷ್ಯದ ಹಿತ,ಅಹಿತ,ಸುಖ, ದುಃಖಗಳ ವಿವೇಚನೆಯೂ,ರೋಗದ ಕಾರಣ ಮತ್ತು ಶಮನವು ಯಾವುದರಲ್ಲಿ ಹೇಳಲ್ಪಟ್ಟಿದೆಯೋ ಅದನ್ನೇ ವಿದ್ವಾಂಸರು ಆಯುರ್ವೇದವೆಂದು ಹೇಳುತ್ತಾರೆ. ಪುಣ್ಯಶಾಲಿಯಾದ ಆಯುರ್ವೇದವು ಮಾನವರಿಗೆ ಇಹಪರಲೋಕಗಳ ಹಿತ ಸಾಧನೆಯ ಉಪಾಯಗಳನ್ನು ಬೋಧಿಸುವುದೆಂಬುದು ವೇದ ವಿಜ್ಞಾನಿಗಳಾದ ಚರಕ ಸುಶ್ರುತರಂತಹ ಮಹಾಮುನಿಗಳ ಅಭಿಪ್ರಾಯವಾಗಿದೆ.

ಆಯುರ್ವೇದದ ಅವತಾರಕ್ಕೆ ಬ್ರಹ್ಮನೇ ಆದಿಕಾರಣನೆಂದು ಚರಕಾದಿಗಳು ಹೇಳುತ್ತಾರೆ. ಋಗ್ಯಜುಃಸಾಮಾಥರ್ವಾರ್ಖ್ಯಾ ದೃಷ್ಟಾ ವೇರ್ದಾ ಪ್ರಜಾಪತಿಃವಿಚಿಂತ್ಯ ತೇಷಾಮರ್ಥಂಚೈವಾಯುರ್ವೇದಂ ಚಕಾರ ಸಃ ||

ಬ್ರಹ್ಮನು ವೇದಾರ್ಥಗಳ ಪರಿಶೀಲನೆಯಿಂದ ಆಯುರ್ವೇದವನ್ನು ರಚಿಸಿದನು ಎಂದು ತಾತ್ಪರ್ಯವಿದೆ.

ಇಹಖಲ್ವಷ್ಟಾಂಗಮಾಯುರ್ವೇದಮಥರ್ವವೇದಪಾಂಗಮನು ತಾದೈವ ಪ್ರಜಾಃ ಶ್ಲೋಕಶತಸಹಸ್ರಂ ಕೃತರ್ವಾ ಸ್ವಯಂಭೂಃ | ತತೋs ಲ್ಪಾಯುಷ್ಟ ಮಲ್ಲ ಮೇಧಂ ss ಲೋಕ್ಯ ನರಾಣಾಂ ಭೂಯೋಽಷ್ಟಧಾ ಪ್ರಣೀತರ್ವಾ ||

ಬ್ರಹ್ಮದೇವನು ಸೃಷ್ಟಿ ಮಾಡುವುದಕ್ಕಿಂತ ಮೊದಲು ಅಥರ್ವಣ ವೇದದ ಅಂಗಭೂತವಾದ ಆಯುರ್ವೇದವನ್ನು ಒಂದು ಲಕ್ಷ ಸ್ಲೋಕಗಳಿಂದ ಕೂಡಿರುವ, ಒಂದು ಸಾವಿರ ಅಧ್ಯಯನಗಳುಳ್ಳಬ್ರಹ್ಮ ಸಂಹಿತೆಎಂಬ ಹೆಸರಿನಿಂದ ರಚಿಸಿದನು. ಅನಂತರ ಕಾಲಕ್ರಮದಿಂದ ಮನುಷ್ಯರು ಅಲ್ಪ ಆಯುಷ್ಯರು,ಅಲ್ಪ ಮೇಧಾವಿಗಳು ಆಗುವವರೆಂಬುದನ್ನು ದಿವ್ಯದೃಷ್ಟಿಯಿಂದ ಅರಿತು, ಆಯುರ್ವೇದವನ್ನು ಎರಡು ವಿಧವಾಗಿ ವಿಭಾಗಿಸಿದನು. ಅನಂತರ ಬ್ರಹ್ಮನು ದಕ್ಷ ಪ್ರಜಾಪತಿಗೆ  ಆಯುರ್ವೇದದ ಉಪದೇಶವನ್ನು ಮಾಡಿದನು.ಅನಂತರ ದಕ್ಷ ಪ್ರಜಾಪತಿಯು ಅಶ್ವಿನಿ ದೇವತೆಗಳಿಗೂ,ಅಶ್ವಿನಿ ದೇವತೆಗಳು ಇಂದ್ರನಿಗೆ ಉಪದೇಶವನ್ನು ಮಾಡಿದರು.

ತ್ರೇತಾಯುಗದಲ್ಲಿ ದೇಹಾಲಸ್ಯದಿಂದ ಉಂಟಾದ ಕೆಲವು ರೋಗಗಳು ಪ್ರಜೆಗಳನ್ನು ಕಾಡಿಸಲಾರಂಭಿಸಿದವು. ಆಗ ಅಂಗಿರಸ,ಜಮದಗ್ನಿ, ಕಶ್ಯಪ,ಭರದ್ವಾಜ ಮೊದಲಾದ ಮುನಿಗಳು ರೋಗ ನಿವಾರಣೋಪಾಯವನ್ನು ಅರಿಯದೆ, ಹಿಮಾಲಯದ ಸಮೀಪದಲ್ಲಿ ಒಟ್ಟುಗೂಡಿ ಒಂದು ಸಭೆಯನ್ನು ಮಾಡಿದರು. ಸಭೆಯಲ್ಲಿ ಸಕಲ ಮುನಿಗಳು ಅನೇಕ ವಿಧಗಳಾದ ಚರ್ಚೆಗಳನ್ನು ನಡೆಸಿ ಕಡೆಗೆ ನಿರೂಪಾಯರಾಗಿ, ದಿವ್ಯದೃಷ್ಟಿಯ ಬಲದಿಂದ ರೋಗ ನಿವಾರಣೋಪಾಯವನ್ನು ಅಮರ ಪತಿಯಾದ ಇಂದ್ರನಿಂದಲೇ ತಿಳಿಯಬೇಕೆಂದು ನಿರ್ಧರಿಸಿದರು. ಆಗ ಸರ್ವಾನುಮತದಿಂದ ಭಾರಧ್ವಾಜ ಮುನಿಯೇ ಇಂದ್ರನಲ್ಲಿ ಹೋಗಲು ಯೋಗ್ಯನಾದನೆಂದು ನಿರ್ಣಯಿಸಿ, ಮುನಿಯನ್ನು ಇಂದ್ರನಲ್ಲಿಗೆ ಕಳುಹಿಸಿದರು. ಅಮರಾವತಿಗೆ ಹೋಗಿ ಸುರಮುನಿಗಳಿಂದ ಪರಿಸೇವಿತನಾದ ಇಂದ್ರನನ್ನು ಸಂದರ್ಶಿಸಿ,ಆಶೀರ್ವಾದಗಳನ್ನು ಮಾಡಿದ ನಂತರ,ರೋಗ ನಿವಾರಣೋಪಾಯವನ್ನು ಉಪದೇಶ ಮಾಡಬೇಕೆಂದು ಪ್ರಾರ್ಥಿಸಿದನು.ಇಂದ್ರನು ಭಾರಧ್ವಾಜ ಮುನಿಗೆ ಆಯುರ್ವೇದವನ್ನು ಉಪದೇಶ ಮಾಡಿದನು.

ಭಾರಧ್ವಾಜ ಮುನಿಯು ಕ್ರಮವಾಗಿ ಸಮಸ್ತ ಮುನಿಗಳಿಗೆ ಆಯುರ್ವೇದದ ಉಪದೇಶವನ್ನು ಮಾಡಿದನು. ಋಷಿ ಸಮೂಹದಲ್ಲಿ ಒಬ್ಬನಾದ ಪುನರ್ವಸು ಮುನಿಯು ಆಯುರ್ವೇದವನ್ನು ಸಕಲ ಪ್ರಾಣಿಗಳ ಕಲ್ಯಾಣಕ್ಕೋಸ್ಕರವಾಗಿ, ಅಗ್ನಿವೇಶ, ಭೇಲ, ಜತೂಕರ್ಣ, ಪರರ ಹರೀತ, ಕ್ಷಾರಪಾಣಿಗಳೆಂಬ ಆರು ಜನ ಶಿಷ್ಯರಿಗೆ ಉಪದೇಶವನ್ನು ಮಾಡಿದನು.ಅತ್ಯಂತ ಕುಶಲಮತಿಗಳಾದ ಇವರು ತಮ್ಮ ಹೆಸರಿನಿಂದಲೇ ಒಂದೊಂದು ತಂತ್ರಗಳನ್ನು ರಚಿಸಿ ಜಗತ್ ಪ್ರಖ್ಯಾತರಾದರು.

ಅಗ್ನಿವೇಶನು ತನ್ನ ಹೆಸರಿನಿಂದಲೇ ರಚಿಸಿರುವ ಅಗ್ನಿವೇಶ ತಂತ್ರವು ಅತ್ಯಂತ ವಿಸ್ತಾರವಾಗಿಯೂ, ಗಂಭೀರ ವಿಷಯಗಳನ್ನು ಒಳಗೊಂಡಿರುವುದಾಗಿಯೂ ಮತ್ತು ವಿಭಾಗ ರಹಿತವಾಗಿಯೂ ಇದ್ದಿದ್ದರಿಂದ, ಚರಕ ಮಹರ್ಷಿಯು ಲೋಕಕಲ್ಯಾಣಾರ್ಥವಾಗಿ ಅತಿ ವಿಸ್ತಾರವಾಗಿರುವ ವಿಷಯವನ್ನು ಸಂಕ್ಷೇಪಿಸಿ, ಪುರಾತನ ಗ್ರಂಥಗಳನ್ನು ನೂತನವಾದದ್ದನ್ನಾಗಿ ಸಂಸ್ಕರಿಸಿದಾದ್ದರಿಂದ ತಂತ್ರವುಚರಕ ಸಂಹಿತಎಂದು ಹೆಸರುಗೊಂಡಿತು.

ಒಬ್ಬನು ಅತೀ ಪರಿಶ್ರಮದಿಂದ ಹಣವನ್ನು ಅಪಾರವಾಗಿ ಕೂಡಿಟ್ಟು, ಅದನ್ನು ವ್ಯಯ ಮಾಡದೆ ಹೋಗುವನು. ಅವನ ವಂಶದವನಾದ ಮತ್ತೊಬ್ಬನು ಹಣವನ್ನೇ ದೇಶ ಸೇವೆ,ಸಮಾಜ ಸೇವೆ,ವಿದ್ಯಾ ಸೇವೆಗಳಿಗಾಗಿ ವಿನಿಯೋಗಿಸಿ, ಜಗತ್ತಿನಲ್ಲಿ ವಿಶೇಷ ಖ್ಯಾತಿಯನ್ನು ಹೊಂದುವನು. ಅಂತೆಯೇ ತಂತ್ರವು ಗ್ರಂಥ ಕರ್ತನಾದ ಅಗ್ನಿವೇಶ ಹೆಸರಿನಿಂದ ಪ್ರಖ್ಯಾತವಾಗದೆ, ಚರಕಮುನಿಯ ಹೆಸರಿನಿಂದ ಪ್ರಖ್ಯಾತಗೊಂಡಿತು. ಚರಕಮುನಿಯು ಯೋಗ ಶಾಸ್ತ್ರದ ಪ್ರವರ್ತಕನು,ವ್ಯಾಕರಣ ಮಹಾಭಾಷಾಕರ್ತನು ಆದ ಪತಂಜಲಿ ಆಗಿರುವನೆಂಬುದು ಸಂಹಿತೆಯ ಟೀಕಾಕಾರನಾದಚರಕ ಚತುರಾನನಎಂಬ ಬಿರುದನ್ನು ಹೊಂದಿದ ಚಕ್ರಪಾಣಿಯು ಆರಂಭದಲ್ಲಿ ಬರೆದಿರುವ

ಪಾತಂಜಲಮಹಾಭಾಷ್ಯಚರಕ ಪ್ರತಿಸಂಸ್ಕೃತೈಃ ಮನೋವಾಕ್ಕಾಯದೋಷಾಣಾಂ ಹಂತ್ರೇsಹಿಪತಯೇ ನಮಃ

ಎಂಬ ಶ್ಲೋಕದಿಂದ ಸ್ಪಷ್ಟವಾಗುತ್ತದೆ. ಅಲ್ಲದೇ, ಪತಂಜಲಿ ಚರಿತವೆಂಬ ಗ್ರಂಥದ ಐದನೇ ಸ್ವರ್ಗದಲ್ಲಿರುವ

ಸೂತ್ರಾಣಿ ಯೋಗಶಾಸ್ತ್ರ ವೈದ್ಯಕಶಾಸ್ತ್ರ ಸಂಹಿತಾಮ ತುಲಾಂ ಕೃತ್ವಾ ಪತಂಜಲಿ ಮುನಿಃ ಪ್ರಚಾರಯಾಮಾಸ ಜಗದಿದಂ ಸರ್ವಂ||

ಎಂಬ ಶ್ಲೋಕದಿಂದ ಪತಂಜಲಿಗೆ ಚರಕನೆಂಬ ಉಪಮಾನವಿತ್ತೆಂದು ತಿಳಿದು ಬರುತ್ತದೆ. ಚರಕಮುನಿಯು ವೈದ್ಯಶಾಸ್ತ್ರಜ್ಞನಾಗಿದ್ದಕ್ಕೆ  ಶಾರ್ಙ್ಗಧರಸಂಹಿತೆಯ ಟೀಕಾಕಾರರಾದ ಕಾಶಿರಾಮ ಪಂಡಿತರು  ಗೂಢಾರ್ಥದೀಪಿಕೆಯ ಲೌಹಮಾರಣದ ಪ್ರಕರಣದಲ್ಲಿಪಾತ ಜಗದ್ವಿ ಜಲೇ ತಥಾ ತಂತ್ರ ಲೋಹಾ ಬಹುವಿಧಾ ಮತಾಃಎಂದು ಬರೆದಿರುವುದು, ಚಕ್ರದತ್ತನು ತನ್ನ ಗ್ರಂಥದಲ್ಲಿಪಾತಂಜಲೇ ತು ಸ್ಪರ್ಶಾದಿನಾಪಿ ಸಾ ಪಾಶ್ಚಾ ಜ್ಞಾನಮುಕ್ತಂಎಂದು ಬರೆದಿರುವುದೂ ಮತ್ತು ವ್ಯಾಕರಣ ಮಹಾಭಾಷ್ಯದಲ್ಲಿರುವಅನಡ್ವಲೋದಕಂ ಪಾದರೋಗಃ ದಧಿತ್ರ ಪುಷಂ ಪ್ರತ್ಯಕ್ಷೆ ಜ್ವರ ಶ್ರೇಷ್ಠ ಆಯುಷ್ ಧೃತಂಎಂಬ ವಾಕ್ಯಗಳೂ ಪ್ರಮಾಣಗಳಾಗಿರುತ್ತವೆ.

ಚರಕಾಧ್ಯಾಯನವನ್ನು ಮಾಡದಿರುವ ವೈದ್ಯನು ಚಿಕಿತ್ಸೆಯಲ್ಲಿ ಅಪೂರ್ಣನಾಗುತ್ತಾನೆ.ಕಾಯ ಚಿಕಿತ್ಸೆಯಲ್ಲಿ ಚರಕವೂ, ಶಲ್ಯ ಚಿಕಿತ್ಸೆಯಲ್ಲಿ ಶುಶ್ರುತವೂ ಉನ್ನತ ಸ್ಥಾನವನ್ನು ಹೊಂದಿರುವುದೆಂದು ವಿದ್ವಾಂಸರು ಮುಕ್ತ ಕಂಠದಿಂದ ಹೊಗಳುತ್ತಾರೆ. ಆಯುರ್ವೇದ ಶಾಸ್ತ್ರದ ಟಿಕಾಕಾರರಾದ ಡಲ್ಹಣ, ಚಕ್ರಪಾಣಿ, ವಿಜಯರಕ್ಷಿತ, ಶ್ರೀಕಂಠದತ್ತ, ಹೇಮಾದ್ರಿಗಳೇ ಮೊದಲಾದವರು ತಮ್ಮ ತಮ್ಮ ವ್ಯಾಖ್ಯಾನಗಳಲ್ಲಿ ಚರಕ, ಬೇಡ, ಜಾತುಕರ್ಣ, ಹಾರಿತ, ಕ್ಷಾರಪಾಣಿ ಮೊದಲಾದ ತಂತ್ರಗಳು ಸಂಪೂರ್ಣಗಳಾಗಿದ್ದವೆಂದು ಉಲ್ಲೇಖಿಸಿರುವರು. ಬೇಸರದ ಸಂಗತಿ ಎಂದರೆ ಅವೆಲ್ಲವೂ ಪ್ರಸ್ತುತದಲ್ಲಿ ನಾಮಾವಶೇಷವಾಗಿವೆ. ಕೆಲವು ಅಲ್ಲಲ್ಲಿ ದೊರೆತರೂ ಅಪೂರ್ಣವಾಗಿವೆ

ವಾಗ್ಭಟನ ಸಮಯದಲ್ಲಿ ಅನೇಕ ಆಯುರ್ವೇದ ಗ್ರಂಥಗಳಿದ್ದರೂ ಚರಕಸುಶ್ರುತಗಳೇ ಪಟ್ಟಣ ಪಾಠಗಳಲ್ಲಿ ಇದ್ದವು ಎಂಬುದನ್ನು ವಾಗ್ಭಟ್ಟನು ತನ್ನ ಸಂಹಿತೆಯಲ್ಲಿ – “ಋಷಿಪ್ರಣೀತೇ ಪ್ರೀತಿಶ್ಚನ್ಮುಕಾ ಚರಕಸುಶ್ರುತ | ಭೇಡಾದ್ಯಾಃ ಕಿಂ ನು ಪಠ್ಯಂತೇಬರೆದಿರುವನು. ನೈಷದ ಕಾವ್ಯವನ್ನು ರಚಿಸಿದ ಶ್ರೀಹರ್ಷ ಮಹಾಕವಿಯು -“ಕನ್ಯಾ೦ತಃಪುರ ಬಾಧನಾಯ ಯದಧೀಕಾರಾನ್ನ ದೋಷಾ ನೃಪಂ | ಗೌ ಮಂತ್ರಿ ಪ್ರವರತ್ನ ತುಲ್ಬ ಮಗದಂಕಾರಶ್ಚ ತಾವೂಚತುಃ | ದೇವಾ ಕರ್ಣ ಸುಶ್ರುತೇನ ಚರಕಸ್ಕೋನ ಜಾನೇsಖಿಲಂ ಸ್ಯಾದಸ್ಯಾನಲದಂ ವಿನಾ ದಲನೇ ತಾಪಸ್ಯ ಕೋಪಿ ಕ್ಷಮಃ||” ಎಂದು ಚರಕಸುಶ್ರುತಗಳನ್ನು ಅಧ್ಯಯನ ಮಾಡಿದವನೇ ವೈದ್ಯ ಶ್ರೇಷ್ಠನೆಂದು ಹೇಳುತ್ತಾನೆ. ಚರಕ ಸಂಹಿತೆಯ ಅಂತ್ಯದಲ್ಲಿ ದೃಢ ಬಲಾಚಾರ್ಯನುಚಿಕಿತ್ಸಾ ವೇಶಸ್ಯ ಸುಸ್ಥಾತುರಹಿತ ಪ್ರತಿ | ಯಹಾಸ್ತಿ ತದನ್ಯತ್ರ ಯನ್ನೇ ಹಾಸ್ತಿ ತತ್ತ್ವಚಿತ್ಎಂಬ ಶ್ಲೋಕದಿಂದ ಕಾಯ ಚಿಕಿತ್ಸಾ ಪ್ರಧಾನವಾದ ಚರಕದಲ್ಲಿ ಸ್ವಸ್ಥರಿಗೂ,ರೋಗಿಗಳಿಗೂ ಬಹುಲಿತಕರವಾದ ವಿಷಯಗಳಿರುತ್ತವೆ. ಆದರೆ ಇದರಲ್ಲಿರುವ ವಿಷಯಗಳು ಮಾತ್ರ ಮತ್ತಾವ ಗ್ರಂಥಗಳಲ್ಲಿ ಇರುವುದಿಲ್ಲವೆಂದು ಸ್ಪಷ್ಟಪಡಿಸುತ್ತಾರೆ

Feature Image Credit: wikipedia.org

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.